೨೪೫
ಸತತಂ ಮಧ್ಯಮಪುರುಷ
ಪ್ರತಿಷೇಧದ ವಿಧಿಯೊಳಂ,
ಪ್ರಯೋಜನ ವಸ್ತು
ಆಶ್ರಿತ, ಹೇತು ಕ್ರಿಯೆಯೊಳಂ
ಅನ್ವಿತಂ ಅಲ್ ಕ್ರಿಯೆ ತಾಂ,
ಕ್ರಿಯಾರ್ಥಂ ಅಪ್ಪು ಎಡೆಗಳೊಳಂ

ಮಧ್ಯಮ ಪುರುಷ ಪ್ರತಿಷೇಧದ ಕ್ರಿಯೆಯು ವಿಧ್ಯರ್ಥವಾಗುವಾಗ ‘ಅಲ್’ ಎಂಬ ಪ್ರತ್ಯಯ ಬರುತ್ತದೆ. ಪ್ರಯೋಜನ ವಸ್ತುವಿಗೆ ಕಾರಣವಾದ ಕ್ರಿಯೆಯಲ್ಲಿಯೂ ಅಲ್ ಪ್ರತ್ಯಯ ಹತ್ತುತ್ತದೆ. ಕ್ರಿಯೆಯ ಕ್ರಿಯಾರ್ಥವನ್ನು ಹೇಳುವಲ್ಲಿಯೂ ಅಲ್ ಪ್ರತ್ಯಯ ಹತ್ತುತ್ತದೆ.

ವಿಧ್ಯರ್ಥಕ್ಕೆ :
ಮೀಱ್ + ಅಲ್ + ಇಂ = ಮೀಱಲಿಂ
ಬಿಲ್ಲೆಱಿಯನೆಂದುದೆಮಾತು ಮೀಱಲಿಂ…
ಇದೇ ರೀತಿ ಉಸಿರಲಿಂ, ಸಾರಲಿಂ

ಪ್ರಯೋಜನ ವಸ್ತು ಕ್ರಿಯೆಗೆ :
ಇಱೆ + ಅಲ್ = ಇಱೆಯಲ್
ಇಱೆಯಲ್ ತಕ್ಕಳವರ್ಥಿಗಳ್ಗೆ ಬಿಡದೀಯಲ್‌ತಕ್ಕ
ಸಂಪತ್ತಿ…
ಇದೇ ರೀತಿ ತಱೆ + ಅಲ್ = ತಱಯಲ್

ಕ್ರಿಯಾರ್ಥದ ಕ್ರಿಯೆಗೆ :
ಈ + ಅಲ್ = ಈಯಲ್
ಈಯಲ್ಬಂದತ್ತುಕಲ್ಪಾಂಘ್ರಿಪಮಭಿಮತಮಂ
ಇದೇ ರೀತಿ ಪುಗು + ಅಲ್ = ಪುಗಲ್

೨೪೬
ಸಂದಿಪುದು ಅಲ್,ವಿನ
ಪರದೊಳ್ ಬಂದು ಕೆ, ಕಾರಮುಂ
ಅದು ಒರ್ಮೆ ವೈಕಲ್ಪಿಕದಿಂ
ಸಂದಿಪುದು ಅಲ್ಗಂ
ಲೋಪಂ ಬಂದು,
ಪ್ರತಿಷೇಧ ವಿಧಿಯಂ
ಒದವದ ಪಕ್ಷಂ

ಮಧ್ಯಮ ಪುರುಷ ಪ್ರತಿಷೇಧದ ವಿಧ್ಯರ್ಥ ಬಾರದಿದ್ದ ಪಕ್ಷದಲ್ಲಿ ‘ಅಲ್’ ಪ್ರತ್ಯಯದ ಮುಂದೆ ‘ಕೆ’ ಕಾರ ಬರುತ್ತದೆ ಕೆಲವೆಡೆ ವಿಕಲ್ಪದಿಂದ ‘ಅಲ್’ ಪ್ರತ್ಯಯ ಲೋಪವಾಗುವುದುಂಟು.

ಕೆ ಕಾರಕ್ಕೆ :
ಬಿತ್ತರಿಸು + ಅಲ್ + ಕೆ = ಬಿತ್ತರಿಸಲ್ಕೆ
…ಬಿತ್ತರಿಸಲ್ಕೆವೇೞು
ಸುವ ರ್ಣೋತ್ಕರಮಂ…
ಇದೇ ರೀತಿ ನುಡಿಯಲ್ಕೆ, ಪೇೞಲ್ಕೆ ಬೇಡಲ್ಕೆ

ಅಲುವಿನವಿಕಲ್ಪ ಲೋಪಕ್ಕೆ :
ತರಲ್ವೇೞ್, ತರವೇೞ್
ತರವೇೞ್ ಸನ್ನದ್ಧವಾಜಿ ಸಾಧನಮಂ

೨೪೭
ಪ್ರತಿಪಾದ್ಯಂ ಇತ್ವಂ,
ಉತ್ವಂ, ಮತಿವಂತರಿಂ
ಎಯ್ದೆ ಪೂರ್ವಕಾಲ ಕ್ರಿಯೆಗೆ,
ಉತುಂ, ಉತ್ತುಂ, ಉತ್ತೆ,
ಉತೆ, ಎಂದು ತಗುಳ್ಗುಂ
ವರ್ತಮಾನ ವಿಹಿತ ಕ್ರಿಯೆಯೊಳ್

ವಿದ್ವಾಂಸರಿಂದ ಭೂತಕಾಲ ಕ್ರಿಯೆಗೆ ‘ಇ’ ಕಾರ ಮತ್ತು ‘ಉ’ ಕಾರಗಳು ಪ್ರಯೋಗಿಸಲ್ಪಡುತ್ತವೆ. ವರ್ತಮಾನ ಕಾಲ ಕ್ರಿಯೆಯಲ್ಲಿ ಉತುಂ, ಉತ್ತುಂ, ಉತ್ತೆ, ಉತೆ ಗಳು ಹತ್ತುತ್ತವೆ.

ಭೂತಕಾಲದ ಇ ಕಾರಕ್ಕೆ :
ತಿರ್ದು + ಇ = ತಿರ್ದಿ
ತಿರ್ದಿನರನುದ್ದಮಿಸೆ ಜೀ
ಱಿೞ್ದಂ…
ಇದೇ ರೀತಿ ನಚ್ಚಿ, ಮೆಚ್ಚಿ

ಭೂತಕಾಲದ ಉ ಕಾರಕ್ಕೆ :
ಕುಡಿ + ದ + ಉ = ಕುಡಿದು
ಮಿಂದುಂಡು ಕುಡಿದು ಮುಗುೞ್ದುಂ
ಬಂದಿರ್ದೊಡಮಿರ್ಪಂ…
ಇದೇ ರೀತಿ ಒಸೆದು, ಕುಸಿದು, ನಡೆದು

ವರ್ತಮಾನದ ಉತುಗೆ :
ಸೂಸು + ಉತುಂ = ಸೂಸುತುಂ
ಸೂಸುತುಂ ನದನದ್ಯ ಚ್ಛಜಲಂಗಳಂ
ಇದೇ ರೀತಿ ನಗುತಂ, ಕರೆಯುತಂ

ವರ್ತಮಾನದ ಉತ್ತುಗೆ :
ಕೆದಱ್ + ಉತ್ತುಂ = ಕೆದಱುತ್ತುಂ
ಕೆದಱುತ್ತುಂ ಮಣಲಂ…
ಇದೇ ರೀತಿ ಕುಡುತ್ತುಂ, ಜಡಿಯುತ್ತುಂ

ವರ್ತಮಾನದ ಉತ್ತೆಗೆ :
ಕಾಡು + ಉತ್ತೆ = ಕಾಡುತ್ತೆ
ಪೋ ಪೋಗು ಕಾಡುತ್ತೆ
ಕಣ್ಗುತ್ತಲ್ ಬಂದಪೆ
ಸಲ್ಲವೆಮ್ಮೊಳಿವು…
ಇದೇ ರೀತಿ ಕೆತ್ತುತ್ತೆ, ಪರಸುತ್ತೆ

ವರ್ತಮಾನದ ಉತೆಗೆ :
ತಿಱು + ಉತೆ = ತಿಱುತೆ
…..ತನ್ನಂಬೆಗೆ ಪೇೞ್ದುದಂ ತಿಱುತಿರ್ಪರ್
ಮಿಱುಗುತೆ

೨೪೮
, ದಪಂಗಳ್ ಪರದೊಳ್
ತಾಂ ಒದವಿರೆ,
ಮೀ, ಎಂಬುದರ್ಕೆ
ತರ್, ಬರ್ ಗಳ್ಗೆ ಒಂದಿದ
ಕೊಲ್, ಸಲ್
ಅಮರ್ದಿರ್ಪುದು ನತ್ವಂ ನಿಲ್ಗೆ,
ಬಲ್ಲರಿಂದೆ ವಿಕಲ್ಪಂ

ಪರದಲ್ಲಿ ಭೂತಕಾಲ ಮತ್ತು ವರ್ತಮಾನಕಾಲದ ‘ದ’, ‘ದಪ’ಗಳು ಇರಲು ಮೀ (ಧಾತುವಿನ ದೀರ್ಘ) ತರ್, ಬರ್ (ಧಾತುಗಳ ರೇಫ), ಕೊಲ್, ಸಲ್ (ಧಾತುಗಳ ಲ ಕಾರ)ಗಳಿಗೆ ‘ನ’ಕಾರಾದೇಶವಾಗುತ್ತದೆ.

ನಕಾರಾದೇಶಕ್ಕೆ :
ಮೀ + ದ + ಅಂ = ಮಿಂದಂ
ಅಲರಮೞಿಯೊಳ್‌ಮಿಂದಂ ಭೂಪಾಲಮನ್ಮಥನಾಜಿಯೊಳ್…
ತರ್ + ದಂ + ಅಂ = ತಂದಂ
ನಡೆತಂದಂ ಮೇರೆದಪ್ಪಿ
ಕವಿವಂಬುಧರಂಬೊಲ್
ಬರ್ + ದ + ಅಂ = ಬಂದಂ
ಬಂದಂ ಘಲ್ಗುವಿನಲ್ಲಿ ಸಂದೆಯಮಣಂತಾನಿಲ್ಲ

ನ ಕಾರಾದೇಶಕ್ಕೆ :
ಕೊಲ್ > ಕೊನ್ + ದ + ಅಂ = ಕೊಂದಂ
ಕೊಂದಂ ಕೊಲ್ವಂತೆ ರಸಮನಂಜನಸಿದ್ದಂ
ಸಲ್ > ಸನ್ + ದಂ + ಅಂ = ಸಂದಂ
ಬೇಡರವೋಲ್ ಮಸಗಿ ತುಱುಗೊಳಲ್ ತಱಸಂದಂ
ಇದೇ ರೀತಿ ಮಿಂದಪಂ, ತಂದಂಪಂ

ವಿಕಲ್ಪ :
ನಿಲ್ + ದಂ > ನಿನ್ + ದಂ = ನಿಂದಂ
ನಿಲ್ + ದಂ > ತಂ = ನಿಲ್ತಂ
ಮಂಡಲವ್ಯೂಹವನೊಡ್ಡಿನಿಂದನಿಱಿಯಿಲ್ ನಿಂದಂ….
ನಿಲ್ತ ಬೆನ್ನೊಳ್‌ಗಾಂಡೀವಿ
ಇದೇ ರೀತಿ ನಿದಂಪಂ, ನಿಲ್ತಪಂ

೨೪೯
ಪ್ರಕೃತಿಯ ಪೂರ್ವದ
ಕಾರದೊಳ್, ಕಾರದೊಳ್,
ಹ್ರಸ್ವದ ಏತ್ವಂ, ಓತ್ವಂ
ಬಹುಲಂ ಪ್ರಕಟಂ
ತರ್, ಬರ್ ಗಳ ಮೊದಲ
ಕಾರದೊಳ್ ದೀರ್ಘವಿಧಿ
ವಿಲೋಮ ಕ್ರಿಯೆಯೊಳ್

ಇ ಕಾರಾದಿ ಉ ಕಾರಾದಿ ಧಾತುಗಳ ಮುಂದೆ ದ, ದಪ ಗಳು ಪರವಾದಾಗ ಆದಿ ಧಾತುಗಳ ‘ಇ’ ಕಾರ, ‘ಉ’ ಕಾರಗಳಿಗೆ ಕ್ರಮವಾಗಿ ‘ಎ’ ಕಾರ ‘ಒ’ ಕಾರಗಳು ಆದೇಶವಾಗುತ್ತವೆ. ತರ್, ಬರ್ ಧಾತುಗಳನ್ನು ನಿಷೇಧಾರ್ಥದಲ್ಲಿ (ವಿಲೋಮ ಕ್ರಿಯೆ) ರೂಪಿಸುವಾಗ ಧಾತುಗಳ ಆದಿಯ ‘ಅ’ ಕಾರಕ್ಕೆ ದೀರ್ಘ ಉಂಟಾಗುತ್ತದೆ.

ಇ ಕಾರದ ಎ ಕಾರಕ್ಕೆ :
ಗಿಱು + ದ + ಅಂ = ಗೆತ್ತಂ
ಮುಗಿಲಂ ಮಾಱುನೆ ಗೆತ್ತಂ….
ಇದೇ ರೀತಿ ಬಿಸು ‑ ಬೆಚ್ಚಂ, ತಿಱು ‑ ತೆತ್ತಂ
ಕಿಡು ‑ ಕೆಟ್ಟಂ, ಕಿಱು ‑ ಕೆತ್ತಂ, ಇಸು ‑ ಎಚ್ಚಂ

ಉ ಕಾರದ ಒ ಕಾರಕ್ಕೆ :
ಕುಡು + ದ + ಅಂ = ಕೊಟ್ಟಂ
…ಎನಿತುಮನಿತುಮಂ
ಧರ್ಮಜಂ ಸೊಱಗೊಟ್ಟಂ
ಇದೇ ರೀತಿ ಉಗು ‑ ಉಕ್ಕಂ, ಪುಗು ‑ ಪೊಕ್ಕಂ,
ತುಡು ‑ ತೊಟ್ಟಂ

ವಿಕಲ್ಪಕ್ಕೆ :
ಇರ್ + ದ + ಅಂ = ಇರ್ದಂ
ಉಡು + ದ + ಅಂ = ಉಟ್ಟಂ
ಪಸೆಯಿರ್ದಂ ಗರುಡವೇಗನೃಪನಂದನೆಯೊಳ್…

ಪ್ರತಿಷೇಧ ಕ್ರಿಯೆಯ ದೀರ್ಘಕ್ಕೆ :
ತರ್ + ಅಂ > ತಾರಂ, ಇದೇ ರೀತಿ ಬಾರಂ
ಪತಿಗೆಂದುಂ ಯುದ್ಧದೊಳ್ ಬನ್ನಮಂ ತಾರಂ

೨೫೦
ಧಾತುಗಳ್ ಅಂತ್ಯದ ವರ್ಗ
ಉಪೇತ ತೃತೀಯ ಅಕ್ಷರಕ್ಕೆ
ತಾಂ ಪ್ರಥಮತ್ವಂ;
ಮಾತೇಂ ವ್ಯಂಜನರೂಪದಿಂ,
ಏತೆಱದಿಂ ಸ್ವಂತ ಧಾತುಗೆ
ಅಕ್ಕು ಚತ್ವಂ

ಆದಿ ಹ್ರಸ್ವ, ಉ ಕಾರಾಂತ ಧಾತುಗಳ ಮುಂದೆ ದ, ದಪ ಗಳು ಪರವಾದಾಗ, ಧಾತುಗಳ ಅಂತ್ಯ ವರ್ಗದ ತೃತೀಯಾಕ್ಷರಗಳಿಗೆ, ಅವುಗಳ ಪ್ರಥಮಾಕ್ಷರಗಳು ವ್ಯಂಜನ ರೂಪದಲ್ಲಿ ಆದೇಶವಾಗುತ್ತವೆ. ‘ಸು’ ಕಾರಾಂತ ಧಾತುವಿನ ಮುಂದೆ ದ, ದಪ ಗಳು ಬಂದಾಗ ಧಾತುವಿನ ಅಂತ್ಯ ‘ಸು’ ಕಾರಕ್ಕೆ ‘ಚ’ ಕಾರ ಆದೇಶವಾಗುತ್ತದೆ.

ಗ ಕಾರದ ಕ ಕಾರಕ್ಕೆ :
ಪುಗು + ದ + ಅಂ = ಪೊಕ್ಕಂ
ಪೊಕ್ಕನಂದುನಿಜಮಂದಿರಮಂ ಪರಸೈನ್ಯಭೈರಮಂ
ಇದೇ ರೀತಿ ಉಗು ‑ ಒಕ್ಕಂ, ನಗು ‑ ನಕ್ಕಂ,
ಮಿಗು ‑ ಮಿಕ್ಕಂ

ಡ ಕಾರದ ಟ ಕಾರಕ್ಕೆ :
ಕುಡು + ದ + ಅಂ = ಕೊಟ್ಟಂ
ಪಿಡಿಯಿಂದಸಿತಾಳ ಪತ್ರವುಂಯತಿಕೊಟ್ಟಂ
ಇದೇ ರೀತಿ ನಡು ‑ ನಟ್ಟಂ, ಮಡು ‑ ಮಟ್ಟಂ,
ಕಿಡು ‑ ಕೆಟ್ಟಂ

ದ ಕಾರದ ತ ಕಾರಕ್ಕೆ :
ಮುದು + ದ + ಅಂ = ಮುತ್ತಂ
ಮುತ್ತುದು ನೇಸಱತೇಜಂ
ಸತ್ತುದುದಾವಾಗ್ನಿ…

ಸು ಕಾರದ ಚ ಕಾರಕ್ಕೆ :
ಬಿಸು + ದ + ಅಂ = ಬೆಚ್ಚಂ
ಕಳ್ಳವೆಳ್ಳಿವಟ್ಟಲ್
ಬಾಯೊಳ್‌ಬೆಚ್ಚಂತಿರೆಸತಿ…
ಇದೇ ರೀತಿ ಪಸು ‑ ಪಚ್ಚಂ, ಇಸು ‑ ಎಚ್ಚಂ

೨೫೧
ಱಕಾರಾಂತದೊಳಂ, ಮೃತಿ
ದಾನ ಅರ್ಥದೊಳಂ
ವ್ಯಂಜನದ ಕಾರಂ ದೀರ್ಘಂ,
ಪಿಂತೆ ಇರೆ ಬರ್ಕುಂ
ಹ್ರಸ್ವತೆ, ಱಾಂತಕ್ಕಂ
ರೇಫೆಯಂ ಒರ್ಮೆ, ತವುಗೆ ಕಾರಂ

ಱ ಕಾರಾಂತ ಧಾತುಗಳ ಮುಂದೆ ಮೃತಿ ಅರ್ಥದ ‘ಸಾ’ಹಾಗೂ ದಾನ ಅರ್ಥದ ‘ಈ’ ಎಂಬ ಧಾತುಗಳ ಮುಂದೆ ದ, ದಪಗಳು ಪರವಾದಾಗ ಱ ಕಾರಾಂತ ಧಾತುವಿನ ಅಂತ್ಯ ‘ಱ’ ಕಾರಕ್ಕೆ ಮತ್ತು ಸಾ. ಈ ಧಾತುಗಳ ಮುಂದೆ ವ್ಯಂಜನ ರೂಪದ ‘ತ’ ಕಾರ ಬರುತ್ತದೆ. ಸಾ.ಈ ಧಾತುಗಳಿಗೆ ಹ್ರಸ್ವ ಉಂಟಾಗುತ್ತದೆ. (ಏಕಾಕ್ಷರ ಧಾತುಗಳಾದ ಇವು ಸ.ಇ ಎಂದಾಗುತ್ತವೆ). ಱ ಕಾರಾಂತ ಧಾತುವಿನ ಱ ಕಾರಕ್ಕೆ ಕೆಲವು ಸಲ ರೇಫೆ ಬರುತ್ತದೆ. ತವು ಧಾತುವಿನ ಮುಂದೆ ದ,ದಪ ಗಳು ಬಂದಾಗ ಆ ಧಾತುವಿನ ‘ವ’ ಕಾರಕ್ಕೆ ‘ಪ’ ಕಾರಾದೇಶವಾಗುತ್ತದೆ.

ಱ ಕಾರದ ತ ಕಾರಕ್ಕೆ :
ಗಿಱು + ದ + ಅಂ = ಗೆತ್ತಂ
ಸಾಳಭಂಜಿಕೆಗೆತ್ತು ನೋಡಿದಂ ಲತಾಕೋಮಲೆಯಂ
ಕಿಱು ‑ ಕೆತ್ತಂ, ಪೆಱು ‑ ಪೆತ್ತಂ

ಸಾ ಧಾತುವಿಗೆ :
ಸಾ + ದ + ಅರ್ = ಸತ್ತರ್
ಸತ್ತರ್ ಕಾದಿ ನಿನ್ನೊಳ್ಳರೆಲ್ಲರುಂ ಬೆನ್ನಿತ್ತರ್‌ಕೆಲರ್

ಈ ಧಾತುವಿಗೆ :
ಈ + ದ + ಅಂ = ಇತ್ತಂ
…ನಗೆಮೊಗ
ದೊಳುಗಿದು ಕವಚಮಿನಿಂದ್ರಂಗಿತ್ತಂ ಕರ್ಣಂ

ಱ ಕಾರದ ರೇಫೆಗೆ :
ಅಱು + ದ + ಅಂ = ಅರ್ತಂ
ಅರ್ತಕದಂಪು ಬತ್ತಿದಕಾಲುಂ….

ತವುಗೆ :
ತವು + ದ + ಅಂ = ತಪ್ಪಂ
ತಪ್ಪಂತನ್ನೊಳ್ ಪಳಂಚಿ
ಕಿಡಿಗುಟ್ಟಿ ತಪ್ಪುವುಂಬುಗಳನವಂ

೨೫೨
ನಿರುತಂ , , , ಪಂ,ಗಳ್
ಪರದ ಕಾರಕ್ಕೆ
ಪೂರ್ವರೂಪಂ
ಅಕ್ಕುಂ, ಪರವರ್ಣಂ
ಧಾತು ಅಂತ್ಯದೊಳ್ ಇರೆ
ಡತ್ವಂ, ಮೇಣ್ ತಕಾರಂ
ಒರ್ಮೆ ಕಾರಂ

ಪೂರ್ವ ಪದದ ಧಾತುವಿನ ಅಂತ್ಯದಲ್ಲಿ ಕ, ಚ, ಟ, ತ, ಪ, ಗಳಲ್ಲಿ ವರ್ಗ ಪ್ರಥಮಾಕ್ಷರ ಯಾವುದಾದರೊಂದು ಇದ್ದು, ಅದರ ಮುಂದೆ ಭೂತ ಕಾಲದ ‘ದ’ ಪ್ರತ್ಯಯ ಪರವಾದಾಗ ಆ ಪ್ರತ್ಯಯವೂ ಧಾತುವಿನ ಅಂತ್ಯವರ್ಣದ ರೂಪವನ್ನೇ ಪಡೆದುಕೊಳ್ಳುತ್ತದೆ. ‘ಕ’ ‘ಚ’ ‘ಟ’ ‘ತ’ ‘ಪ’ಗಳನ್ನು ಹೊರತುಪಡಿಸಿ ಉಳಿದ ವರ್ಣಗಳು ಧಾತುಗಳ ಅಂತ್ಯದಲ್ಲಿದ್ದು ಮುಂದೆ ಭೂತ ಕಾಲದ ‘ದ’ ಕಾರ ಪರವಾಗಿದ್ದರೆ ಆ ‘ದ’ ಕಾರಕ್ಕೆ ಕೆಲವು ಸಲ ‘ಡ’ ಕಾರ, ‘ತ’ ಕಾರ ಇಲ್ಲವೆ ‘ಟ’ ಕಾರ ಆದೇಶವಾಗುತ್ತದೆ.

ಕ ಕಾರಕ್ಕೆ :
ಮಿಗು + ದ + ಅರ್ = ಮಿಕ್ಕರ್
…ತಕ್ಕರ್
ಮಿಕ್ಕರದೇಕೆ ಮನ್ನಿಸುವರಕ್ಕರವೋದದ ಕಲ್ಲಪಾಪೆಗಳ್
ಇದೇ ರೀತಿ ಒಕ್ಕಂ-ಒಕ್ಕರ್, ಪೊಕ್ಕಂ-ಪೊಕ್ಕರ್, ನಕ್ಕಂ-ನಕ್ಕರ್

ಚ ಕಾರಕ್ಕೆ :
ಇಸು + ದ + ಅರ್ = ಎಚ್ಚರ್
ಮಣಿಯದೆ ಕುಣಿದಿದಿರನದಿರೆ ಕೂಕಿಱದೆಚ್ಚರ್
ಇದೇ ರೀತಿ ಪೆಚ್ಚಂ, ಬೆಚ್ಚರ್, ಪಚ್ಚಂ, ಪಚ್ಚರ್

ಟ ಕಾರಕ್ಕೆ :
ಬಿಡು + ದ + ಅರ್ = ಬಿಟ್ಟರ್
ಬೆಕ್ಕ ಸಂಬಟ್ಟುಬಾಯಂ ಬಿಟ್ಟರ್ ಭೀಷ್ಮರ್
ತೊಟ್ಟಂ, ತೊಟ್ಟರ್, ಕೊಟ್ಟಂ, ಕೊಟ್ಟರ್

ತ ಕಾರಕ್ಕೆ :
ಗಿಱು + ದ + ಅರ್ = ಗೆತ್ತರ್
ಮುಗಿಲಂ ಮಾಱಾ ನೆಗೆತ್ತರ್
ಇದೇ ರೀತಿ ಪೆತ್ತಂ-ಪೆತ್ತರ್ ತೆತ್ತಂ-ತೆತ್ತರ್ ಪೊತ್ತಂ-ಪೊತ್ತರ್

ಪ ಕಾರಕ್ಕೆ :
ತವು + ದ + ಅಂ = ತಪ್ಪಂ
ತಪ್ಪಂ ತನ್ನೊಳ್ ಪಳಂಚಿ ಕಿಡಿಗುಟ್ಟಿ ತಪ್ಪುವಂಬು ಗಳನವಂ
ತಪ್ಪಂ, ತಪ್ಪರ್

ಡ ಕಾರಕ್ಕೆ :
ಕೊಳ್ + ದ + ಅಂ = ಕೊಂಡಂ
ಭುವನತಿ ಣೇತ್ರರುಚಿಯಂ ಕೈಕೊಂಡನಾ ಪಾಂಡವಂ
ಇದೇ ರೀತಿ ಉಣ್ಡಂ, ಕಣ್ಡಂ

ತ ಕಾರಕ್ಕೆ :
ಪೋಲ್ + ದ + ಅಂ = ಪೋಲ್ತಂ
ಮಱ ಸೊಂದಿದ ಪುಲಿಯನಾಗಳಿನಿಸಂ ಪೋಲ್ತಂ
ಇದೇ ರೀತಿ ಸೋಲ್ತಂ, ನಿಲ್ತಂ, ಕಿೞ್ತಂ, ಉೞ್ತಂ

ಟ ಕಾರಕ್ಕೆ :
ಅಣ್ + ದ + ಅಂ = ಅಂಟಂ
ಅಂಟಂ ಬೆರಲಂಟವು ಪೊಕ್ಕುೞನುಗುರಿಸಿದುವು ತುಱುಂಬಂ

೨೫೩
ನೆಗೞ್ಗುಂ ಲೋಪಂ, ಪೋಗು
ಆಗು ಗಳ್, ಕಾರಕ್ಕೆ
ದಪಂ ಇರೆಯುಂ,
ದತ್ವಕ್ಕೆ ಒಗೆದು ಅಸ್ವರಯತ್ವಂ
ಪತ್ತುಗೆ ಗೊಂಡು ಉದುವಿಗೆ
ಆದ ತತ್ವದೊಳ್ ನೆಲಸಿರೆಯುಂ

ಪೋಗು, ಆಗು ಧಾತುಗಳ ಮುಂದೆ ದ, ದಪ ಪ್ರತ್ಯಯಗಳು ಬಂದಾಗ ಧಾತುಗಳ ಅಂತ್ಯವರ್ಣ ‘ಗ’ ಕಾರಕ್ಕೆ ಲೋಪವುಂಟಾಗುತ್ತದೆ. ಭೂತ ಕಾಲದಲ್ಲಿ ಪೋಯ್ತು, ಆಯ್ತು ರೂಪಗಳಾಗುತ್ತವೆ.

ಪೋಗು > ಪೋ + ದ + ಅಂ = ಪೋದಂ
ಪೋಗು > ಪೋ + ದಪಂ = ಪೋದಪಂ
ಆಗು > ಆ + ದ + ಅಂ = ಆದಂ
ಆಗು > ಆ + ದಪ + ಅಂ = ಆದಪಂ
(ಪೋಗು>) ಪೋ + (ದ>) ಯ್ + (ಉದು>)ತ = ಪೋಯ್ತು
(ಆಗು>)ಆ + (ದ>)ಯ್ + (ಉದು>)ತ = ಆಯ್ತು
ಪೊಮ್ಮಱಿವೊಲ್ ಪೊಳೆದು ಪಾಱ ಪೋದಂ ಶ್ವೇತಂ.
ಕೊಂಬಿೞಿಪಿದ ಮರದಿಂದಗ್ಗಳಂ ತಿಣ್ಣಮಾದಂ.
ಇದೇ ರೀತಿ ಪೋದಪಂ, ಆದಪಂ.
ಪುಂಸ್ಕೋಕಿಲಧ್ವನಿ ತಾನೀರೆಲೆವೋಯ್ತು.
ಭೀಷಣಮಾಯ್ತು ಸೈನ್ಯಮಹಾರ್ಣಮಂ.

೨೫೪
ಪರದೊಳ್ ವಿಧಿಯ
ಕೆಕಾರಂ ಬರೆ, ಕುಂ ಬರೆ
ಪೋಗು ಎನಿಪ್ಪ
ಧಾತುವಿನ ಅಂತ್ಯಾಕ್ಷರ ಲೋಪಂ;
ಚರಮಂ ವಿಸ್ವರಂ ಆದ್ಯಂ
ಹ್ರಸ್ವಂ ಅಕ್ಕುಂ,
ಆಗು ಎಂಬುದಱಳ್

ಪೋಗು, ಆಗು ಎಂಬ ಧಾತುಗಳ ಮುಂದೆ ವಿಧ್ಯರ್ಥದ ‘ಕೆ’ ಪ್ರತ್ಯಯ ಪರವಾದಾಗ (ವರ್ತಮಾನ, ಭವಿಷ್ಯತ್ಕಾಲಗಳ ‘ಕುಂ’ ಪರವಾಗಲು) ‘ಪೋಗು’ ಧಾತುವಿನ ಅಂತ್ಯಾಕ್ಷರ ಲೋಪವಾಗುತ್ತದೆ. ಆಗು ಧಾತುವಿನ ಅಂತ್ಯಸ್ವರ ಲೋಪವಾಗಿ ಆದಿಯ ಅಕ್ಷರ ಹ್ರಸ್ವ ಉಂಟಾಗುತ್ತದೆ.

ಪೋಗು ಧಾತುವಿಗೆ :
(ಪೋಗು>) ಪೋ + ಕೆ = ಪೋಕೆ
ಪೋಕೆ ಬರ್ಕೆ ಮುಳಿಸಿಲ್ಲೆಮಗಾತನೊಳಾವ ಪಾಂಗಿನಿಂ
(ಪೋಗು>) ಪೋ + ಕುಂ = ಪೋಕುಂ
ಷೊಱಮಾಱದೆ ಸೈತು ಪೋಕುಮೇ ಪರಸೈನ್ಯಂ

ಆಗು ಧಾತುವಿಗೆ :
ಆಗು > ಅಕ್ + ಕೆ = ಅಕ್ಕೆ
ವೇದದೊಳೋದಿದಾಯು ನಿನಗಕ್ಕೆ ಚಿರಂ ಕಲಿಕಾಲಸೂದನಾ
ಆಗು > ಅಕ್ + ಕುಂ = ಅಕ್ಕುಂ
ಪ್ರಾಯಂ ಕೂಸಾದೊಡಭಿ
ಪ್ರಾಯಂ ಕೂಸುಕ್ಕುಮೆ…

೨೫೫
ಅವತರಿಸಿರ್ಕುಂ, ಉಳ್
ಧಾತುವಿನ ಕಾರಕ್ಕೆ ಣತ್ವಂ,
ಉದುವಿಗೆ ಕಾರಂ
ಪ್ರವಿಲೋಮ ಕ್ರಿಯೆಗೆ ಅದುವೆಂದು
ಅವೆಂದು ಬಂದಿರ್ಕುಂ,
ಉದುಗೆ, ಉವುಗಂ ಪ್ರಚುರಂ

‘ಉಳ್’ ಎಂಬ ಧಾತುವಿನ ‘ಳ’ ಕಾರಕ್ಕೆ ‘ಣ’ ಕಾರಾದೇಶವಾಗುತ್ತದೆ. ಅದಕ್ಕೆ ‘ಉದು’ ಪರವಾದಾಗ ಉದು ಪ್ರತ್ಯಯಕ್ಕೆ ‘ಟು’ಎಂಬುದು ಆದೇಶವಾಗುತ್ತದೆ : ನಪುಂಸಕಲಿಂಗದ ಉದು, ಉವು ಎಂಬಿವುಗಳಿಗೆ ಪ್ರತಿಷೇಧಾರ್ಥದಲ್ಲಿ ಅದು, ಅವು ಎಂಬಿವುಗಳು ಆದೇಶವಾಗುತ್ತವೆ.

ಉಳ್ ಧಾತುವಿಗೆ :
(ಉಳ್>) ಉಣ್ + (ಉದು>) ಟು = ಉಣ್ಟು
ಉಣ್ಟು ಭುಜಬಲಂ ಪಿರಿದುಜಗದ ಮೈಸಿರಿ…

ಪ್ರತಿಷೇಧ ನಿಷೇಧ ಕ್ರಿಯೆಗೆ :
ಪುಟ್ಟು + (ಉದು>) ಅದು = ಪುಟ್ಟದು
ವಿಪುಲಕಲಾಪಕೋಪ ಶಿಖಿಪುಟ್ಟದು
ಸಲ್ + (ಉದು>) ಅದು = ಸಲ್ಲದು
ನೆಱೆ + (ಉವು>) ಅವು = ನೆಱಯವು
ನಿಲ್ + (ಉವು>) ಅವು = ನಿಲ್ಲವು

೨೫೬
ಣತ್ವಂ ಕೊಳ್, ಧಾತು
ಅಂತ್ಯಕ್ಕೆ ಉಳ್ ಧಾತು ಪೂರ್ವದೊಳ್
ನೆಗೞ್ಗುಂ, ಹ್ರಸ್ವ ಒತ್ವಂ
ಪುರುಷತ್ರಯದೊಳ್
ದತ್ವನಿಷೇಧಂ
ಬಹುತ್ವದ ಉವುಗೆ, ಅವುಂ ಅಕ್ಕುಂ

‘ಕೊಳ್’ ಎಂಬ ಧಾತುವಿನ ಮುಂದೆ ದ,ದಪ ಗಳು ಪರವಾದಾಗ ಕೊಳ್ ಧಾತುವಿನ ಅಂತ್ಯ ‘ಳ’ ಕಾರಕ್ಕೆ ‘ಣ’ ಕಾರಾದೇಶವಾಗುತ್ತದೆ. ಪುರುಷತ್ರಯಗಳಲ್ಲಿ ‘ಉಳ್’ ಧಾತುವಿನ ಮುಂದೆ ಪರವಾದ ಭೂತಕಾಲದ ವರ್ತಮಾನಕಾಲದ ದ, ದಪ, ಭವಿಷ್ಯತ್ಕಾಲದ ‘ವ’ ಪ್ರತ್ಯಯಗಳು ಲೋಪ ಹೊಂದುತ್ತವೆ. ಆಗ ಉಳ್ ಧಾತುವಿನ ಆದಿ ‘ಉ’ ಕಾರಕ್ಕೆ ‘ಒ’ ಕಾರಾದೇಶವಾಗುತ್ತದೆ. ಉಳ್ ಧಾತುವಿನ ಮುಂದೆ, ನಪುಂಸಕ ಲಿಂಗದ ಉವು ಆಖ್ಯಾತ ಪ್ರತ್ಯಯ ಪರವಾದಾಗ ಅದು ‘ಅವು’ ಎಂದಾಗುತ್ತದೆ.

ಕೊಳ್ ಧಾತುವಿಗೆ :
(ಕೊಳ್>) ಕೊಣ್ + ದ + ಅಂ = ಕೊಣ್ಡಂ
ಭುವನತ್ರಿಣೇತ್ರ ರುಚಿಯಂ ಕೈಕೊಣ್ದನಾ ಪಾಂಡವಂ

ಉಳ್ ಧಾತುವಿಗೆ :
(ಉಳ್>) ಒಳ್ + ದ + ಅಂ = ಒಳಂ
ಪೇೞನಿತರ್ಕಮೊಳಂ ಮುರಾಂತಕಂ
ಇದೇ ರೀತಿ ಒಳರ್, ಒಳಯ್, ಒಳಿರ್, ಒಳೆನ್, ಒಳೆವು

ನಪುಂಸಕ ಲಿಂಗಕ್ಕೆ :
(ಉಳ್>) ಒಳ್ + (ಉವು>) + ಅವು = ಒಳವು
ನೀನಿಲ್ಲದಿವೆಲ್ಲ ಮೊಳವೆ ಭಾನುತನೂಜ