೨೩೫
ತಿಳಿ ತಾಂ, ನೀಂ, ಆಂ,
ಎಂಬ ಅರ್ಥ ಳಂಬಿಗಳ್
ಪ್ರಥಮ, ಮಧ್ಯಮ
ಉತ್ತಮಪುರುಷಂಗಳ್
ಏಕವಚನಂ ಒರ್ವನ ಬಳಕೆಗೆ,
ಬಹುವಚನ
ಎಲ್ಲರಂ ಪೇೞಡೆಯೊಳ್

ತಾನ್ (ತಾಂ), ನೀನ್ (ನೀಂ), ಆನ್ (ಆಂ), ಎಂಬಿವು ಕ್ರಮವಾಗಿ ಪ್ರಥಮ, ಮಧ್ಯಮ ಮತ್ತು ಉತ್ತಮಪುರುಷಗಳನ್ನು ಹೇಳುತ್ತವೆ. (ಅವು) ಒಬ್ಬನನ್ನು ಕುರಿತು ಹೇಳುವಾಗ ಏಕವಚನ ಎಲ್ಲರನ್ನು ಕುರಿತು ಹೇಳುವಾಗ ಬಹುವಚನವನ್ನು ನಿರ್ದೇಶಿಸುತ್ತವೆ.

ಪ್ರಥಮ ಪುರುಷಕ್ಕೆ :
ತಾಂ + ಎಚ್ಚಂ = ತಾನೆಚ್ಚಂ (ಏವ)
——-ತಾನೆಚ್ಚಂ ಪೊಚ್ಚಮಲ್ಲದರಿವಾಹಿನಿಯಂ
ತಾಂ + ಆಂ = ತಾವಾ (ಬ.ವ)
——–ತಾವಾ ಸವ್ಯಸಾಚಿಯೊಳ್ ತೊಡರ್ದಿಱಿಯರ್

ಮಧ್ಯಮಪುರುಷಕ್ಕೆ :
ನೀಂ (ಏ.ವ)
—–ಮರಣಕ್ಕೆನ್ನಿಂದೆ ನೀಂ ಮುಂಚಿದಯ್
ಮೊನೆಯೊಳ್ ಸೂೞ್ತಡವಾಯ್ತು‑——
ನೀಂ + ಇರೆ = ನೀಮಿರೆ (ಬ.ವ)
ನೀಮಿರೆ ಮತ್ತ ವಾರಣಮುಮಂ ತಾರಕ ಚಕ್ರವರ್ತಿಗೆ—–

ಉತ್ತಮ ಪುರುಷಕ್ಕೆ :
ಆಂ + ಅಱಿವೆಂ = ಅನಱಿವೆಂ (ಏ.ವ)
ಅನಱಿವೆಂ ಪೃಥೆಯಱಿವಳ್
ದಾನವರಿಪು ವಱ ವನರ್ಕನಱವಂ ದಿವ್ಯ |
ಜ್ಞಾನಿ ಸಹದೇವಱವಂ
ನೀನಾರ್ಗೆಂದಾರು ಮಱಿಯರಂಗಾಧಿಪತೀ ||
ಆಂ + ಅಱಿವೊಡೆ = ಆಮಱಿವೊಡೆ (ಬ.ವ)
ಆಮಱಿವೊಡ ಮುಸಿರಲಮ್ಮೆ ವಾಳ್ದನ ಗತಿಯಂ

 

೨೩೬
ಉದು, ಉವು, ಎಂಬಾದೇಶಂ
ಪುದಿದು ಇರ್ಕುಂ
ಪ್ರಥಮ ಪುರುಷ
ಏಕ, ಬಹುತ್ವಕ್ಕೆ ಒದವಿರ್ದ
ನಪುಂಸಲಿಂಗದೊಳ್
ಉದು ಭಾವಾರ್ಥದಲ್ಲಿಯುಂ
ಸಂಗಳಿಕುಂ

ಪ್ರಥಮ ಪುರುಷದ ಏಕವಚನ ಮತ್ತು ಬಹುವಚನದ ಪ್ರತ್ಯಯಗಳಾದ ಅಮ್, ಅರ್ ಗಳಿಗೆ ನಪುಂಸಕಲಿಂಗದಲ್ಲಿ ಉದು, ಉವು ಎಂಬಿವುಗಳು ಆದೇಶವಾಗುತ್ತವೆ; ಭಾವಾರ್ಥ ದಲ್ಲಿಯೂ ಉದು ಬರುತ್ತದೆ.

ಏಕವಚನಕ್ಕೆ :
ಕರೆ + ದ + ಉದು = ಕರೆದುದು
ಕರೆದುದು ಕಣ್ಣ ಬೆಳ್ಪನಧರಂ ಕುರುಳೋಳಿಗೆ ಸುರ್ಕಿ
ನೋಲಗಂ ಪರೆದುದು ‑—–
ಇದರಂತೆ ಬರೆದುದು, ನೆರೆದುದು

ಬಹುವಚನಕ್ಕೆ :
ನಿಮಿರ್ + ದ + ಉವು = ನಿಮಿರ್ದುವು
ನಿಮಿರ್ದುವು ಪೊಳೆದುವಳುಂಕಿದು
ವಮರ್ದುವು ಚುಂಬಿಸಿದುವಷ್ಟಿದುವು ಸಂಭ್ರಮದಿಂ |

ಭಾವಕ್ಕೆ :
ಈ + ಉದು = ಈವುದು
ಈವುದು ಕರ್ಣಗೆ ಸಹಜಮಾರೋಪಿತಮೇ

೨೩೭
ನೆಗೞ್ದ ನಪುಂಸಕ ಏಕೋಕ್ತಿಗೆ
ಕೆಲರ್,
ಇತು, ಇತ್ತು, ಅತ್ತು, ಎಂದು
ಉಸಿರ್ವರ್ ನೆಟ್ಟಗೆ
ಪುಗಿಸುವರ್, ಅಂತು
ಏಕೋಕ್ತಿಗೆ ತಾಂ ಸ್ತ್ರೀ ವಿಷಯಂ
ಆಗೆ ಅಳಂತಸ್ಥಿತಿಯಂ

ನಪುಂಸಕ ಲಿಂಗ ಪ್ರಥಮ ಪುರುಷ ಏಕವಚನ ‘ಉದು’ ಎಂಬುದಕ್ಕೆ ‘ಇತು’, ‘ಇತ್ತು’, ‘ಅತ್ತು’ ಎಂಬಿವುಗಳು ಆದೇಶವಾಗುತ್ತವೆ. ಪ್ರಥಮ ಪುರುಷ ಏಕವಚನ ಪ್ರತ್ಯಯ ‘ಅಮ್’ ಎಂಬುದಕ್ಕೆ ಸ್ತ್ರೀಲಿಂಗದಲ್ಲಿ ‘ಅಳ್’ ಎಂಬುದು ಆದೇಶವಾಗುತ್ತದೆ.

ಇತುಗೆ :
ಮುಟ್ಟು + ಇತು = ಮುಟ್ಟಿತು
ಮುಟ್ಟಿತು ಮುಟ್ಟದು ದಿವಮಂ
ಮೆಟ್ಟಿತು ಮೆಟ್ಟದು ರಸಾತಳಾಗ್ರಮಂ…

ಇತ್ತುಗೆ :
ಓಡು + ಇತ್ತು = ಓಡಿತ್ತು
ಈಶ್ವರನ ಮನಮಲ್ಲಾಡಿ ತೋಡಿತ್ತು ಕಿನ್ನರ ಸೈನ್ಯಂ

ಅತ್ತುಗೆ :
ಇರ್ + ದ + ಅತ್ತು = ಇರ್ದತ್ತು
ಈಶ್ವರ  ಶಿರಃಕರೋಟಿ ನಗುವಂತಿರ್ದತ್ತು ರಾಗಾಧರಂ

ಅಳ್ಗೆ :
ತಡೆ + ದ + ಅಳ್ = ತಡೆದಳ್
ತಡೆದಳ್ ಬಾಸಿಗವಿಕ್ಕುವಾಕೆ…

೨೩೮
ಸವನಾಗಿ ಭೂತದೊಳ್,
ಲಿಂಗ ವಚನದೊಳ್, ತಳ್ತು
ವರ್ತಮಾನ, ಭವಿಷ್ಯತ್
ವ್ಯವಹೃತಿಗಳ್ ಗುಂ ಕುಂ
ಸಲ್ವುವು, ತಾಂ ಅನ್ಯ
ಏಕವಚನದೊಳ್ ನೆಲಸಿರ್ದುಂ

ವರ್ತಮಾನಕಾಲ, ಭವಿಷ್ಯತ್ಕಾಲಗಳಲ್ಲಿ ವ್ಯವಹರಿಸುವ ‘ಗುಂ’, ‘ಕುಂ’ ಪ್ರತ್ಯಯಗಳು ಮೂಲತಃ ಪ್ರಥಮ ಪುರುಷ ಏಕವಚನಕ್ಕೆ ಸಂಬಂಧಿಸಿದ್ದರೂ ಭೂತಕಾಲ, ಲಿಂಗತ್ರಯ, ವಚನತ್ರಯಗಳಲ್ಲಿ ವ್ಯತ್ಯಾಸಗೊಳ್ಳದೇ ಸಲ್ಲುತ್ತವೆ.

ವರ್ತಮಾನಕಾಲ ಭವಿಷ್ಯಂತಿಗಳಿಗೆ :
ಎಮಗೀಗಳೆ ಸೂಚಿಸುಗುಮವರ್ ನಾಳೆ ಕಾಣ್ಗುಂ
ಕೇಳ್ವಾತನ ಕಿವಿಯುಂ ಕನಲ್ದುಕರಿಮುರಿ ವೋಕುಂ

ಭೂತಕಾಲಕ್ಕೆ :
ಅಂದು ಮಾಡುಗುಂ, ಅಂದು ಮಾೞ್ಕುಂ

ಲಿಂಗತ್ರಯಕ್ಕೆ :
ಭೂವಳಯಾಧಿಪಂ ನುಡಿಗುಮಾ ದೂತಂಗೆ
ಸ್ವಚಿತ್ತಗತಾರ್ಥಮುಂ
ಸಸಿಯಂ ನೋಡಿ ತಳೋದರಿ
ಬಿಸುಸುಯ್ಗುಂ ಬಯ್ಗುಮಂತೆ ಮಾಡಿದ ಬಿದಿಯಂ
ಕೋಗಿಲೆಯುಲಿಗಂ ಬೀಸುಗುಂ ಗಂಧವಾಹಂ
ವಚನತ್ರಯಕ್ಕೆ  ಒರ್ವನೆಗೆಲ್ಗುಂ ಕಿರೀಟ ಕೌರವಬಲಮಂ
ಬಲನಾರಾಯಣರಿರ್ವರುಂ ನುಡಿಗುಮಾ ದೂತಂಗೆ
ಮೂದೇವರುಮಂ ಮೂಱು
ಕೋಣೆವುಗಿಸುಗುಮಸುರರ್

೨೩೯
ಇಸುವಿನ ಸುಕಾರಮಂ
ಲೋಪಿಸುವರ್ ಕುಂ
ಪರದೊಳ್ ಆಗೆ, ಕುಂಗೆ
ಕೆಲಂಬರ್ ಪೊಸಯಿಸುವರ್
ದ್ವಿರ್ಭಾವಮಂ,
ಎಸಗಲ್ ಅದಂ ಬೇಡ
ಕಿವಿಗೆ ಸೊಗಯಿಸದ ಎಡೆಯೊಳ್

ಧಾತುವಿಗೆ ‘ಕುಂ’ ಪರವಾದರೆ ‘ಇಸು’ವಿನ ಸುಕಾರವನ್ನು ಲೋಪಿಸುತ್ತಾರೆ. ಕೆಲವರು ಕುಂಗೆ ದ್ವಿತ್ವವನ್ನು ಹೇಳುತ್ತಾರೆ. ಈ ದ್ವಿತ್ವವನ್ನು ಕೇಳಲು ಹಿತವಾಗಿದ್ದರೆ ಮಾತ್ರ ಮಾಡಬೇಕು. ಇಲ್ಲವಾದರೆ ದ್ವಿತ್ವವನ್ನು ಮಾಡಬಾರದು.

ಸುಕಾರಲೋಪಕ್ಕೆ :
ಕೇಳಿಸು + ಕುಂ = ಕೇಳಿಕುಂ
ಮಾಣಿಸು + ಕುಂ = ಮಾಣಿಕುಂ
ಭಾವಿಸು + ಕುಂ = ಭಾವಿಕುಂ

ದ್ವಿತ್ವಕ್ಕೆ :
ಪಾಲಿಸು + ಕುಂ = ಪಾಲಿಕ್ಕುಂ
ರಂಜಿಸು + ಕುಂ = ರಂಜಿಕ್ಕುಂ
ಪುರುಡಿಸು + ಕುಂ = ಪುರುಡುಕ್ಕುಂ

ಕಿವಿಗೆ ಸೊಗಯಿಸದೆಡೆಗೆ :
ಒಂದಿಸು + ಕುಂ = ಒಂದಿಕ್ಕುಂ
ಬಿಡಿಸು + ಕುಂ = ಬಿಡಿಕ್ಕುಂ
ಕೆಡಿಸು + ಕುಂ = ಕೆಡಿಕ್ಕುಂ

೨೪೦
ಸೊಗಯಿಪುವು ಗೆ, ಕೆ ಗಳ್
ಅನ್ಯ ಉಕ್ತಿಗೆ ವಿದ್ಯರ್ಥಕ್ಕೆ

ಮಧ್ಯಮ, ಉತ್ತಮಪುರುಷ
ಪ್ರಗತ ಬಹೂಕ್ತಿಯೊಳ್
ಇಂ, ಅಂ ಎಂದು ಒಗೆತರ್ಕುಂ
ಯುಗ ಪದುಕ್ತಿಯೊಳ್ ಕ್ರಮದಿಂ

ವಿಧಿ ಅಂದರೆ ಆಜ್ಞೆ, ಅಪ್ಪಣೆ ಎಂಬರ್ಥ. ಈ ಅರ್ಥದಲ್ಲಿ ಬಳಸುವ ಕ್ರಿಯೆಗೆ ‘ವಿಧ್ಯರ್ಥ’ ಎಂದು ಹೆಸರು. ಇಂತಹ ಆಖ್ಯಾತ ಪ್ರತ್ಯಯಗಳನ್ನು ಕೇಶಿರಾಜ ಕೊಟ್ಟಿದ್ದಾನೆ. ಪ್ರಥಮ ಪುರುಷ ಏಕವಚನ, ಬಹುವಚನಗಳಲ್ಲಿ ‘ಗೆ’, ‘ಕೆ’ ಎಂಬ ಆಖ್ಯಾತ ಪ್ರತ್ಯಯಗಳು ವಿಧ್ಯರ್ಥದಲ್ಲಿ ಸೇರಿಕೊಳ್ಳುತ್ತವೆ. ಕೂಡಿನುಡಿಯುವಲ್ಲಿ, ಮಧ್ಯಮಪುರುಷ ಬಹುವಚನದಲ್ಲಿ ‘ಇಂ’ ಪ್ರತ್ಯಯವೂ ಉತ್ತಮಪುರುಷ ಬಹುವಚನದಲ್ಲಿ ‘ಅಂ’ ಪ್ರತ್ಯಯವೂ ಸೇರುತ್ತವೆ.

ಪ್ರಥಮ ಪುರುಷ ಏಕವಚನದ ಗೆ ಕಾರಕೆ :
ಅವಂಕುಡುಗೆ

ಕಾರಗಳಿಗೆ :
ಪಾಳಿಸುತಿರ್ಕೆ ವಿಷ್ಣು
ಪರಿಪಾಳಿಕೆ ಜಿಷ್ಣುವಲಂಕರಿಷ್ಣು

ಪ್ರಥಮ ಪುರುಷ ಬಹುವಚನದ ಗೆಕಾರ :
ಕೆ ಕಾರಗಳಿಗೆ :
ಅತಿರಥ ಮಹಾರಥರ್ಕಳ್
ಪ್ರತಿಮುಖಮಾಗೊಡ್ಡಿ ನಿಲ್ಕೆ…..

ಕೆ ಕಾರಕ್ಕೆ ದ್ವಿತ್ವ ವಿಕಲ್ಪಂ :
ರಕ್ಷಿಕೆ – ರಕ್ಷಿಕ್ಕೆ, ಪೂಜಿಕೆ – ಪೂಜಿಕ್ಕೆ
ಯುಗಪದುಕ್ತಿಯ ಮಧ್ಯಮ
ಪುರುಷ ಬಹುವಚನದ ಇಂಗೆ :
ಸಮಕಟ್ಟು + ಇಂ = ಸಮಕಟ್ಟಿಂ
ವ್ಯಾಳದಂತಿಕುಲಮಂ ಸಮಕಟ್ಟಿಂ

ಯುಗ ಪದುಕ್ತಿಯ ಉತ್ತಮ
ಪುರುಷ ಬಹುವಚನದ ಅಂಗೆ :
ತಾಗು + ಅಂ = ತಾಗುವಂ
ಅನಿಬರುವೊಂದಾಗಿ ತಾಗುವಂ
ಫಲ್ಗುಣನೊಳ್

೨೪೧
ಪರಿಣಮಿಸಿರ್ಕುಂ
ಪ್ರಕೃತಿಸ್ವರೂಪದಿಂ,
ಮಧ್ಯ ಏಕವಚನಂ ವಿಧಿಯೊಳ್,
ದೊರೆಕೊಳ್ಗಂ ಉತ್ವಂ,
ಇರ್ಗೆ, ಅಂಕುರಿಪುದು ವಿಧಿ
ಕ್ರಿಯಾ ಸಮಭಿಹಾರ ದೊಳಂ

ವಿಧ್ಯರ್ಥ ಮಧ್ಯಮಪುರುಷ ಏಕವಚನದಲ್ಲಿ ಧಾತು ಮೂಲ ಸ್ವರೂಪದಲ್ಲಿಯೆ ಉಳಿಯುತ್ತದೆ (ಯಾವ ಪ್ರತ್ಯಯವೂ ಸೇರುವುದಿಲ್ಲ). ಇರ್ ಎಂಬ ಧಾತುವಿಗೆ ವಿಧ್ಯರ್ಥ ಮಧ್ಯಮ ಪುರುಷ ಏಕವಚನದಲ್ಲಿ ‘ಉ’ ಕಾರ ಸೇರುತ್ತದೆ. ಕ್ರಿಯೆಯನ್ನು ಪುನರುಕ್ತಿಗೊಳಿಸಿ ಹೇಳುವಲ್ಲಿ ವಿಧ್ಯರ್ಥ ಪ್ರಯೋಗವಾಗುತ್ತದೆ.

ಧಾತು ಸ್ವರೂಪಕೆ :
ಪಾಡೆಲೆ ದುಂಬಿ ಬಗ್ಗಿಸಲೆ ಕೋಗಿಲೆ ತೀಡೆಲೆ ಗಂಧವಾಹ
ವಾಯಸದಂತೆ ನೋಡು ಬಂಕದಂತಿರೆ ಮೆಲ್ಲನೆ ಮೆಟ್ಟು

ಇರ್ ಧಾತುವಿನ
ಉ ಕಾರಕ್ಕೆ :
ಇರುಮರುಳೆ ಶುಷ್ಕ ವೈಯಾಕರಣಂಗಂ——-

ಕ್ರಿಯಾಸಮಭಿಹಾರದ
ವಿಧ್ಯರ್ಥಕ್ಕೆ :
ನಡೆನಡೆಯೆಂದೇಂ ನಡೆದುದೊ
ಪಡೆಪಡೆದಚ್ಚರಿಯನಾ ಸುರಾಪಗೆ ವರೆಗಂ ||

೨೪೨
ಧಾತುಗೆ ಇಸು ಕನ್ನಡಕ್ಕೆ
ಹೇತುವಿನೊಳ್,
ಸ್ವ ಪರ ಕರ್ತೃವೊಳ್,
ಸಂಸ್ಕೃತದ ಧಾತು ಅನೇಕಾಕ್ಷರಕ್ಕೆ
ಇಸುಜತಂ
ನಿಜ ಕರ್ತೃವೊಳ್,
ಪ್ರಯೋಜನದ ಎಡೆಯೊಳ್

ಕನ್ನಡ ಧಾತುಗಳಿಗೆ ಹೇತುವಿನಲ್ಲಿ (ಕಾರಣಾರ್ಥದಲ್ಲಿ), ಸ್ವಕರ್ತೃವಿನಲ್ಲಿ ಮತ್ತು ಅನ್ಯಕರ್ತೃವಿನಲ್ಲಿ ‘ಇಸು’ ಪ್ರತ್ಯಯ ಬರುತ್ತದೆ. ಸಂಸ್ಕೃತದ ಅನೇಕಾಕ್ಷರ ಧಾತುಗಳ ಮೇಲೆ ಮತ್ತು ಪ್ರಯೋಜನದೆಡೆಯಲ್ಲಿ ‘ಇಸು’ ಪ್ರತ್ಯಯ ಉಂಟು.

ಕನ್ನಡ ಧಾತುವಿಗೆ ಹೇತುವಿಗೆ :
ಕಾಣ್ + ಇಸು + ದಂ = ಕಾಣಿಸಿದಂ
ಮೃಗಗಣಮಂ ಪೋದ ಪಜ್ಜೆಯಿಂ ಕಾಣಿಸಿದಂ
ನಗು + ಇಸು + ದಂ = ನಗಿಸಿದಂ

ಕನ್ನಡ ಧಾತುವಿನ ಸ್ವಕರ್ತೃವಿಗೆ :
ದಳ್ + ಇಸು + ದಂ = ದಳ್ಳಿಸಿದಂ
ಘೃತಾಹುತಿವಡೆದನಲನಂತೆ ಮಿಗೆ ದಳ್ಳಿಸಿದಂ
ಕಟ್ಟು + ಇಸು + ದಂ = ಕಟ್ಟಿಸಿದಂ

ಕನ್ನಡ ಧಾತುವಿನ ಅನ್ಯಕರ್ತೃವಿಗೆ :
ಖಂಡ + ಇಸು + ದಂ = ಖಂಡಿಸಿದಂ
ಬರ್ಪಂಬಂನಿಶಿತವಿಶಖದಿಂ ಖಂಡಿಸಿದಂ

ಸಂಸ್ಕೃತ ಧಾತುವಿನ ಪ್ರಯೋಜನ
ವಸ್ತುವಿಗೆ :
ಚಿತ್ರ + ಇಸು + ದಂ = ಚಿತ್ರಿಸಿದಂ
ಮುದ್ರಣ + ಇಸು + ದಂ = ಮುದ್ರಿಸಿದಂ

೨೪೩
ನೆಗೞ್ದು ಇರ್ದ ರೇಫ
ನಾಂತ, ಗಾಂತ, ಸಾಂತ,
ಓತ್ವದ ಇದಿರ ವತ್ವಂ ಪತ್ವಂ
ಪುಗುಗುಂ,
ದ್ವಿತ್ವಂ ಮೇಣ್;
ಸು ಗು ಯುಗಕ್ಕೆ ಲೋಪ ಉಕ್ತಿ
ನಾಂತ ಣಾಂತಂ ಬತ್ವಂ

ರೇಫೆ, ಱಕಾರ, ೞಕಾರ, ನಕಾರ, ಗಕಾರ, ಸಕಾರ ಮತ್ತು ಓಕಾರಾಂತ ಧಾತುಗಳಿಗೆ ಪರವಾದ ಭವಿಷ್ಯತ್ಕಾಲದ ಪ್ರತ್ಯಯ ‘ವ’ ಕಾರಕ್ಕೆ ‘ಪ’ಕಾರಾದೇಶವಾಗುತ್ತದೆ. ಕೆಲವು ಕಡೆ ಆ ‘ಪ’ ಕಾರಕ್ಕೆ ದ್ವಿತ್ವ ಬರುತ್ತದೆ. ‘ಗ’ ಕಾರ ಮತ್ತು ‘ಸ’ ಕಾರಾಂತ ಧಾತುಗಳಿಗೆ ‘ವ’ ಕಾರ ಪರವಾದಾಗ ಧಾತುಗಳ ಅಂತ್ಯ ‘ಗ’ ಕಾರ ‘ಸ’ ಕಾರಗಳಿಗೆ ಲೋಪ ಬರುತ್ತದೆ. ‘ನ’ ಕಾರ ಮತ್ತು ‘ಣ’ ಕಾರಾಂತಗಳಿಗೆ ಪರವಾದ ‘ವ’ಕಾರಕ್ಕೆ ‘ಬ’ ಕಾರಾದೇಶವಾಗುತ್ತದೆ.

ರೇಫಕ್ಕೆ :
ಇರ್ + ವ > ಪ + ಅಂ = ಇರ್ಪಂ
ಆ ಪುರದೊಳಿರ್ಪನಿನಕುಲ
ದೀಪಂ ವಿಪುಲ ಪ್ರತಾಪಂ
ಇದೇ ರೀತಿ ಕೂರ್ಪಂ, ತರ್ಪಂ, ಬರ್ಪಂ

ಱ ಕಾರಕ್ಕೆ :
ತೋಱ್ > ತೋರ್ + ವ > ಪ + ಅಂ = ತೋರ್ಪಂ
ಮಾರ್ಪಡೆಗೆ ತೋಳಬಾಳ ಕೂರ್ಪಂ ತೋರ್ಪಂ
ಇದೇ ರೀತಿ ಆರ್ಪಂ

ೞ ಕಾರಕ್ಕೆ :
ಬಿಸುಡು > ಬಿಸುೞು + ವ > ಪ + ಅಂ = ಬಿಸುೞ್ವಂ
…ಏಳಿದಿಕೆಗಂಡು ಬಿಸುೞನೆಂಬಿನಿತು….
ಇದೇ ರೀತಿ ಮಾೞ್ಪಂ, ನೋೞ್ಪಂ, ಬೇೞ್ಪಂ

ನ ಕಾರಕ್ಕೆ :
ಆನ್ + ವ > ಪ + ಅಂ = ಆಂಪಂ
…ಮಲೆದು ನರನೊಳಾಂಪಂ ಗಾಂಪಂ
ಇದೇ ರೀತಿ ನೋಂಪಂ, ಸೀಂಪಂ

ಗ ಕಾರಕ್ಕೆ :
ಮಿಱುಗು > ವ + ಪ + ಅಂ = ಮಿಱುಪಂ
ಲಲಾಟದೊಳ್ ಮಿಱುಪ ಕಣ್ಣುರಿಯಂತೆ…
ಇದೇ ರೀತಿ ಪೋಪಂ, ತಾಪಂ, ತೂಪಂ

ಸ ಕಾರಕ್ಕೆ :
ಬರಿಸು + ವ > ಪ + ಉದು = ಬರಿಪುದು
ನಿನ್ನೊಡನೊಂದು ಭಾಗಮಂ
ಬರಿಪುದು ಕಾಪು ಮಾಡುವುದು
ಇದೇ ರೀತಿ ಇರಿಪಂ, ತರಿಪಂ, ಬೆಸಪಂ

ಓ ಕಾರಕ್ಕೆ :
ಓ + ವ > ಪ + ಅಂ = ಓಪಂ

ದ್ವಿತ್ವಕ್ಕೆ :
ಉದಯಿಸು + ವ > ಪ + ಅಂ = ಉದಯಿಪ್ಪಂ
ಉದಯಿಪ್ಪಂ ಗಂಡ ಮಾರ್ತಾಂಡನಲರ್ಚು ಗೆಮ್ಮ…
ಸಕಾರ, ಗಕಾರಾಂತ ಧಾತುಗಳ ಅಂತ್ಯಲೋಪಕ್ಕೆ
ಮೇಲಿನ ಪ್ರಯೋಗಗಳನ್ನು ನೋಡಬಹುದು.

ನ ಕಾರಕ್ಕೆ :
ತಿನ್ + ವ > ಬ + ಅಂ = ತಿಂಬಂ
…ಅಡು ಪಣ್ಣುಡು ಪೋಗು
ನೀನುಮಾನುಂ ತಿಂಬಂ…
ಇದೇ ರೀತಿ ಎಂಬಂ, ವಾಂಬಂ

ಣ ಕಾರಕ್ಕೆ :
ಉಣ್ + ವ > ಬ + ಅಂ = ಉಣ್ಬಂ
ತಿರಿದುಣ್ಬಂ ಹರನಗ್ನಿ
ಕಾಡಕಸವಂ ತಿಂದಿರ್ಪಂ…
ಇದೇ ರೀತಿ ಕಾಣ್ಬಂ, ಮಾಣ್ಬಂ, ಉಣ್ಬಂ, ಪೊಣ್ಬಂ

೨೪೪
ದಪ, ಪಕಾರಕ್ಕುಂ ಸಂಧಿಪುದು
ವಿಕಲ್ಪದೆ ಬುಧರ್ಕಳಿಂ
ದ್ವಿತ್ವಂ ಸಂಧಿಪುದು,
ನಕಾರಂ ನೋ ಧಾತು ಪರದೊಳ್,
ಆದ ದಪಂ
ಒದವೆ, ನೋಗಂ ಹ್ರಸ್ವಂ

‘ದಪ’ ಪ್ರತ್ಯಯದ ‘ಪ’ ಕಾರಕ್ಕೆ ವಿದ್ವಾಂಸರಿಂದ ವಿಕಲ್ಪವಾಗಿ ದ್ವಿತ್ವವುಂಟಾಗುತ್ತದೆ. ‘ನೋ’ ಧಾತುವಿನ ಪರದಲ್ಲಿ ‘ದ’, ‘ದಪ’ ಗಳಿರಲು ‘ನ’ ಕಾರ ಆದೇಶವಾಗುತ್ತದೆ (ಧಾತು ಮತ್ತು ಪ್ರತ್ಯಗಳ ನಡುವೆ) ಮತ್ತು ನೋ ಧಾತುವಿನಲ್ಲಿರುವ ದೀರ್ಘವು ಹ್ರಸ್ವವಾಗುತ್ತದೆ.

ದ್ವಿತ್ವ ವಿಕಲ್ಪಕ್ಕೆ :
ನಿಲಿಸಿದಂ, ನಿಲಿಸಿದಪ್ಪಂ
ಇದೇ ರೀತಿ ಕರೆದಪಂ ಕರೆದಪ್ಪಂ
ಇಱೆದಪ್ಪಂ ಮಗಧೇಶನಂ ನಿಲಿಸಿದಪ್ಪಂ ಚೋೞನಂ
ಭಾಷೆಯಂ ಹರಿಕೇಳ್…
ಇದೇ ರೀತಿ ಬರೆದಪಂ ಬರೆದಪ್ಪಂ ಇರಿಸಿದಪಂ, ಇರಿಸಿದಪ್ಪಂ

ನೋ ಧಾತುವಿಗೆ :
ನೋ > ನೊ + ನ್ + ದ + ಅಂ = ನೊಂದಂ
ನೋ > ನೊ + ನ್ + ದಪ + ಅಂ = ನೋದಪಂ