೨೯೩
ನೆಲೆಗೊಂಡ ಉತ್ವಕ್ಕೆ ಇತ್ವಂ,
ಕೆಲವೆಡೆ ಇತ್ವಕ್ಕಂ ಉತ್ವಮುಂ,
ಹ್ರಸ್ವತೆಯ ಅಗ್ಗಲಿಸಿದ ಎತ್ವಮುಂ,
ಅಂತ್ಯಸ್ಥಲ ಸ್ವರಕ್ಕೆ ಒರ್ಮೆ,
ಲೋಪಮುಂ ಸಂಭವಿಕುಂ

ಪದದ ಕೊನೆಯಲ್ಲಿರುವ ಉ ಕಾರಕ್ಕೆ ಇ ಕಾರವೂ ಕೆಲವು ಕಡೆ ಇ ಕಾರಕ್ಕೆ ಉ ಕಾರವೂ ಎ ಕಾರವೂ ಆದೇಶವಾಗುತ್ತದೆ. ಪದದ ಕೊನೆಯ ಸ್ವರಕ್ಕೆ ಲೋಪವು ಸಂಭವಿಸುತ್ತದೆ.

ಪದಾಂತ್ಯದ ಉ ಕಾರಕ್ಕೆ ಇ ಕಾರ :
ಖರ್ಜು ‑ ಕಜ್ಜಿ, ಕುಸ್ತುಂಬುರು ‑ ಕೊತ್ತುಂಬರಿ

ಪದಾಂತ್ಯದ ಇ ಕಾರಕ್ಕೆ ಉ ಕಾರ :
ಗ್ರಂಥಿ ‑ ಗಂಟು, ಸಂಧಿ ‑ ಸಂದು,
ಮಂತ್ರಿ ‑ ಮಂತು

ಪದಾಂತ್ಯದ ಇ ಕಾರಕ್ಕೆ ಎ ಕಾರ :
ಪುಷ್ಕರಿಣಿ ‑ ಹೊಕ್ಕರಣೆ, ಪಂಚಮಿ ‑ ಪಂಚಮೆ,
ಸಪ್ತಮಿ ‑ ಸತ್ತವೆ

ಅಂತ್ಯಸ್ವರ ‑ ಲೋಪಕ್ಕೆ :
ಮೀನಂ ‑ ಮೀನ್, ಮುಕುಲಂ ‑ ಮುಗುಳ್,
ಕೀಲಂ ‑ ಕೀಲ್, ಶೀಲಂ ‑ ಶೀಲ್,
ಕೋಣಂ ‑ ಕೋಣ್

೨೯೪
ಮಹಿ ಪೊಗೞ್ವ ಆಶ್ಚರ್ಯ,
ಪ್ರಗ್ರಹ, ವಿಜ್ಞಾಪನ,
ಕಪಿಂಜಲ, ಆಂಗಿರಸ,
ಅಂತ್ಯಕ್ಕೆ ಹಿತಂ
ಲೋಪ ವಿಧಾನಂ
ಗ್ರಹಣಕ್ಕಂ ಗರಣಂ
ಆಯ್ತು ಶಬ್ಧಾದೇಶಂ

ಆಶ್ಚರ್ಯ, ಪ್ರಗ್ರಹ, ವಿಜ್ಞಾಪನ, ಕಪಂಜಲ, ಆಂಗಿರಸ ಈ ಶಬ್ಧಗಳ ಅಂತ್ಯಕ್ಕೆ ಲೋಪಬರುತ್ತದೆ. ಗ್ರಹಣ ಶಬ್ಧಕ್ಕೆ ಗರಣ ಆದೇಶವಾಗುತ್ತದೆ.

ಆಶ್ಚರ್ಯಂ ‑ ಅಚ್ಚರಿ ಕಪಿಂಜಲಂ ‑ ಕವಿಂಜು
ಪ್ರಗ್ರಹಂ ‑ ಹಗ್ಗ ಆಂಗಿರಸಂ ‑ ಆಂಗಿರಂ
ವಿಜ್ಞಾಪನಂ ‑ ಬಿನ್ನಪಂ ಗ್ರಹಣಂ ‑ ಗರಣಂ

೨೯೫
ಕೂರ, ಪ್ರಾಕಾರಂಗಳ,
ಮೇರೆಯ ರೇಫಕ್ಕೆ ತರದೆ
ಱೞಲತ್ವಂಗಳ್ ಪೂರಿಪುವು;
ಅಸ್ವರ ವಿಧಿಯಿಂ ಸಾರಂ
ಗ್ರಾಮೀಣ ಣತ್ವದ ಎಡೆಗೆ
ಕಾರಂ

ಕೂರ, ಪ್ರಾಕಾರ ಪದಗಳ ಅಂತ್ಯ ರೇಫಕ್ಕೆ ಕ್ರಮವಾಗಿ ವ್ಯಂಜನ ರೂಪದ ೞ ಕಾರ, ಲ ಕಾರಗಳು ಉಂಟಾಗುತ್ತವೆ. ಗ್ರಾಮೀಣ ಶಬ್ಧದ ಣ ಕಾರಕ್ಕೆ ಲ ಕಾರವು ಯೋಗ್ಯವಾದುದು.

 

ಕೂರಾಂತ್ಯಕ್ಕೆ ೞ ಕಾರ : ಕೂರಂ ‑ ಕೂೞು
ಪ್ರಾಕಾರಾಂತ್ಯಕ್ಕೆ ಲ ಕಾರ : ಪ್ರಾಕಾರಂ ‑ ಪಾಗಲ್
ಗ್ರಾಮೀಣದ ಣ ಕಾರಕ್ಕೆ ಲ ಕಾರ : ಗ್ರಾಮೀಣಂ ‑ ಗಾವಿಲಂ

೨೯೬
ದಿಂ
ಕೆಳಗೆ ಸ್ವಲ್ಪ ವತ್ವಂ,
ಸ್ನುಕಾರ ನತ್ವಂ ಮತ್ತಂ;
ಯತ್ವಂ
ಪ್ರಸನ್ನ ಭಾವದೊಳೆ
ತಳ್ತು ಲೋಪಮಂ ಆಳ್ಗುಂ

ದ್ವಿತ್ವಾಕ್ಷರಗಳಲ್ಲಿ ಶ ಕಾರ, ಸ ಕಾರ, ದ ಕಾರ, ಧ ಕಾರ, ಲ ಕಾರ, ಜ ಕಾರ, ಳ ಕಾರ ಹಾಗೂ ತ ಕಾರದ ಕೆಳಗಿರುವ ವ ಕಾರಕ್ಕೆ ಲೋಪ ಬರುತ್ತದೆ. ಸ್ನು ಕಾರದ ನ ಕಾರಕ್ಕೆ ಲೋಪ ಬರುತ್ತದೆ. ಜ ಕಾರ, ಸ ಕಾರ, ಕ ಕಾರ, ನ ಕಾರ, ವ ಕಾರ, ಶ ಕಾರ ಷ ಕಾರಗಳ ಕೆಳಗಿರುವ ಯ ಕಾರಕ್ಕೆ ಲೋಪವಾಗುತ್ತದೆ.

ಶ ಕಾರಾದಿಗಳ ಕೆಳಗಿನ ವ ಕಾರ ಲೋಪಕ್ಕೆ :
ಈಶ್ವರಂ ‑ ಈಸರಂ, ಶಾಶ್ವತಂ ‑ ಸಾಸತಂ, ಶ್ವಾನಂ ‑ ಸಾನಂ,
ಸ್ವಾಮಿ ‑ ಸಾಮಿ, ಸ್ವರಂ ‑ ಸರಂ, ದ್ವೀಪಂ ‑ ದೀವಂ,
ಧ್ವನಿ ‑ ದನಿ, ಜ್ವರಂ ‑ ಜರಂ, ಸರಸ್ವತಿ ‑ ಸರಸತಿ,
ಸುಲ್ವಂ ‑ ಸುಲು, ಖಿಳ್ವಂ ‑ ಕೀಳ್, ತ್ವರಿತಂ ‑ ತುರಿಹಂ

ಸ್ನು ಕಾರದ ಕೆಳಗಿನ ನ ಕಾರಕ್ಕೆ ಲೋಪಕ್ಕೆ :
ಸ್ನುಷಾ ‑ ಸೊಸೆ

ಜ ಕಾರಾದಿಗಳ ಕೆಳಗಿನ ಯ ಕಾರ ಲೋಪಕ್ಕೆ :
ಜ್ಯೋತಿ ‑ ಜೋತಿ, ಜೋತಿಷಂ ‑ ಜೋಯಿಸಂ, ಸಸ್ಯಂ ‑ ಸಸಿ,
ಅಮವಾಸ್ಯೆ ‑ ಅಮವಾಸೆ, ಮಾಣಿಕ್ಯಂ ‑ ಮಾಣಿಕಂ,
ನ್ಯೂನಂ ‑ ನೂನಂ, ನ್ಯಾಯಂ ‑ ನಾಯಂ,
ವ್ಯಥೆ ‑ ಬೆತೆ, ವ್ಯವಹಾರಂ ‑ ಬೆವಹಾರಂ,
ಶ್ಯಾಮವರ್ಣಂ ‑ ಸಾಮವರ್ಣಂ, ಆಯುಷ್ಯಂ ‑ ಆಯಿಸಂ

೨೯೭
ಯತ್ವದ ಸತ್ವದ ಚತ್ವದ
ದತ್ವದ ವಿಧಿ ಜತ್ವದಲ್ಲಿ
ಸಂಭವಿಸಿರ್ಕುಂ;
ಭತ್ವಕ್ಕೆ ವಂ ಅಕ್ಕುಂ,
ರತ್ವಕ್ಕಂ ಮುಂ
ಅಕ್ಕುಂ ಓರೊಂದೆಡೆಯೊಳ್

ಜ ಕಾರಕ್ಕೆ ಯ ಕಾರ, ಸ ಕಾರ, ಚ ಕಾರ ಹಾಗೂ ದ ಕಾರ ಆದೇಶವಾಗುತ್ತವೆ. ಭ ಕಾರಕ್ಕೆ ಹ, ಪ, ವ ಕಾರಗಳು ಆದೇಶವಾಗುತ್ತವೆ. ಕೆಲವು ಕಡೆ ರ ಕಾರಕ್ಕೆ ಲ, ಳ ಕಾರಗಳು ಆದೇಶವಾಗುತ್ತವೆ.

ಜ ಕಾರಕ್ಕೆ ಯ ಕಾರ : ರಾಜಂ ‑ ರಾಯಂ
”    ಸ ಕಾರ : ಕುಟಜಕಂ ‑ ಕೊಡಸಿಗೆ
”    ಚ ಕಾರ : ಲಾಮಜ್ಜಂ ‑ ಲಾಮಂಚಂ
”    ದ ಕಾರ : ಮುಂಜಂ ‑ ಮೊದೆ
ಭ ಕಾರಕ್ಕೆ ಹ ಕಾರ : ವಲ್ಲಭಂ ‑ ಬಲ್ಲಹಂ
”      ಪ ಕಾರ : ಭಿಂಡಿವಾಲಂ ‑ ಪಿಂಡಿವಾಳಂ
”      ವ ಕಾರ : ವೃಷಭಂ ‑ ಬಸವಂ
ರೇಫೆ ಗೆ ಲಕಾರ : ಕುಠಾರಂ ‑ ಕೊಡಲಿ
”     ಳ ಕಾರ : ಮರೀಚಂ ‑ ಮೆಳಸು

೨೯೮
ಡತ್ವಂ ಜತ್ವಂ ದ್ವಿತ್ವದ
ಅದ್ವಿತ್ವದ ಕಾರಕ್ಕೆ
ಯೋಗವಾಹಮಂ;
ಆಳ್ದಾ ಷತ್ವಕ್ಕೆ ಡತ್ವ ಟತ್ವಂ,
ದ್ವಿತ್ವದಿಂ ಅಕ್ಕುಂ ಕಾರಂ
ಒರ್ಮೆ ಅದ್ವಿತ್ವಂ

ದ್ವಿತ್ವ ಮತ್ತು ಅದ್ವಿತ್ವ ‘ಧ’ ಕಾರಕ್ಕೆ ಡ ಕಾರ ಮತ್ತು ‘ಜ’ ಕಾರಗಳು ಆದೇಶವಾಗುತ್ತವೆ. ಯೋಗವಾಹವನ್ನುಳ್ಳ ‘ಷ’ ಕಾರಕ್ಕೆ ದ್ವಿತ್ವದ ‘ದ’ ಕಾರ ಮತ್ತು ‘ಟ’ ಕಾರಗಳು ಬರುತ್ತವೆ. ಕೆಲವು ಕಡೆ ದ್ವಿತ್ವವಿಲ್ಲದ ‘ಟ’ ಕಾರವು ಬರುತ್ತದೆ.

ದ್ವಿತ್ವದ ಧ ಕಾರಕ್ಕೆ ದ್ವಿತ್ವ ಡ ಕಾರ :
ವರ್ದ್ಧಕಿ ‑ ಬಡ್ಡಗಿ

ದ್ವಿತ್ವದ ಧ ಕಾರಕ್ಕೆ ದ್ವಿತ್ವ ಜ ಕಾರ :
ಪದ್ಧತಿ ‑ ಪಜ್ಜೆ

ಅ ದ್ವಿತ್ವ ಧ ಕಾರಕ್ಕೆ ಅದ್ವಿತ್ವ ಡ ಕಾರ :
ವರ್ಧಕಿ ‑ ಬಡಗಿ

ಅದ್ವಿತ್ವ  ಧ ಕಾರಕೆ ಅದ್ವಿತ್ವ  ಜ ಕಾರ :
ಧಾತು ‑ ಜದು

ಯೋಗವಾಹದ ಷ ಕಾರಕ್ಕೆ ದ್ವಿತ್ವದ ಡ ಕಾರ :
ಕಾಷ್ಟಂ ‑ ಕಡ್ಡಿ

ಯೋಗವಾಹದ ಷ ಕಾರಕ್ಕೆ ದ್ವಿತ್ವದ  ಟ ಕಾರ :
ಷಷ್ಠೀ ‑ ಚಟ್ಟಿ,
ನಿಷ್ಟುರಂ ‑ ನಿಟ್ಟುರಂ,
ಗೋಷ್ಟಿ ‑ ಗೊಟ್ಟಿ,
ಸೃಷ್ಟಿ ‑ ಸಿಟ್ಟಿ,
ಮುಷ್ಟಿಕಾ ‑ ಮುಟ್ಟಿಗೆ

ಯೋಗವಾಹದ ಷ ಕಾರಕ್ಕೆ ಅದ್ವಿತ್ವದ ಟ ಕಾರ :
ಸೌರಾಷ್ಟ್ರಂ ‑ ಸೊರಟಂ,
ಪ್ರತಿಷ್ಠಾ ‑ ಹರಟೆ

೨೯೯
ವಿದಿತಂ ದಾಡಿಮ,
ಕೂಷ್ಮಾಂಡದ,
ಮತ್ವ ಸ್ಥಾನದಲ್ಲಿ ಬತ್ವಂ
ಕೂಷ್ಮಾಂಡದ ಷತ್ವಕ್ಕಂ
ಬಿಂದುಗಂ ಉದಯಿಸುಗುಂ;
ಲೋಪವೃತ್ತಿ
ಲಕ್ಷಣ ವಿಧಿಯಿಂ

ದಾಡಿಮ, ಕೂಷ್ಮಾಂಡಗಳ ‘ಮ’ ಕಾರದ ಸ್ಥಾನದಲ್ಲಿ ‘ಬ’ ಕಾರ ಬರುತ್ತದೆ. ಕೂಷ್ಮಾಂಡದ ‘ಷ’ ಕಾರಕ್ಕೂ ಬಿಂದುವಿಗೂ ಲೋಪವುಂಟಾಗುತ್ತದೆ.

 

ದಾಡಿಮದ ಮ ಕಾರಕ್ಕೆ ಬ ಕಾರ : ದಾಡಿಮಂ ‑ ದಾಳಿಂಬಂ
ಕೂಷ್ಮಾಂಡದ ಮ ಕಾರಕ್ಕೆ ಬ ಕಾರ : ಕೂಷ್ಮಾಂಡಂ ‑ ಕುಂಬಳಂ
ಕೂಷ್ಮಾಂಡದ ಷ ಕಾರಕ್ಕೆ ಬಿಂದುಗಳಿಗೆ ಲೋಪಂ : ಕೂಷ್ಮಾಂಡಂ ‑ ಕುಂಬಳಂ

೩೦೦
ಸಮನಿಸುಗುಂ
ಆದಿ ವರ್ಣಾಂತಿಮದೊಳಂ,
ಎರಡನೆಯ ವರ್ಣದ
ಅಂತಿಮದೊಳಂ, ಸಮುಚಿತ
ಬಿಂದುಸ್ಥಿತಿ
ಬಿಂದು ಅಂತ ಶಬ್ಧಕ್ಕೆ
ಬಿಂದು ಲೋಪಂ ಬಹುಳಂ

ಪದದ ಪ್ರಥಮಾಕ್ಷರದ ಕೊನೆಗೂ ಮತ್ತು ಎರಡನೆಯ ಅಕ್ಷರದ ಕೊನೆಗೂ ಬಿಂದು ಬರುತ್ತದೆ. ಬಿಂದುವಿರುವ ಶಬ್ಧಗಳಿಗೆ ವಿಕಲ್ಪದಿಂದು ಬಿಂದು ಲೋಪವಾಗುತ್ತದೆ.

ಪ್ರಥಮಾಕ್ಷರದ ಕೊನೆಯ ಬಿಂದುವಿಗೆ :
ಮೇಥಿ ‑ ಮೇಂಟಿ, ತಾತಂ ‑ ತಂದೆ,
ಕೂಷ್ಮಾಂಡಂ ‑ ಕುಂಬಳಂ,
ಮರ್ಕಟಂ ‑ ಮಂಕಡ

ದ್ವಿತೀಯಾಕ್ಷರದ ಕೊನೆಯ ಬಿಂದುವಿಗೆ :
ಕ್ರಮಕಂ ‑ ಕವುಂಗ,
ದಾಡಿಮಂ ‑ ದಾಳಿಂಬಂ

ಬಿಂದುವುಳ್ಳ ಶಬ್ಧಗಳ ಬಿಂದು ಲೋಪಕ್ಕೆ :
ವಾಂಶ್ಯಂ ‑ ವಾಸಂ, ಮುಂಜಂ ‑ ಮೊದೆ,
ಸಂಸ್ಕೃತಂ ‑ ಸಕ್ಕದಂ,
ಲಾಂಛನಂ ‑ ಲಚ್ಚಣಂ

ವಿಕಲ್ಪಕ್ಕೆ :
ಮಂಥನಿ ‑ ಮಂತಣಿ,
ಸಂಘಾತಂ ‑ ಸಂಗಡ,
ಅಂಕುಶಂ ‑ ಅಂಕುಸಂ

೩೦೧
ಪದದ ಎರಡನೆಯ ಅಕ್ಕರದ
ಅತ್ವದೊಳ್ ಎತ್ವಂ
ಹ್ರಸ್ವದ ಎತ್ವಂ ಆತ್ವ ಊತ್ವಕ್ಕೆ
ಉದಯಿಕುಂ, ಅತ್ವ ಸ್ಥಿತಿ
ಬಹುಳದೆ ದೀಘಂ ಹ್ರಸ್ವಂ
ತೃತೀಯ ಅಕ್ಷರಕಂ

ಪದದ ಎರಡನೆಯ ಅಕ್ಷರದ ಅ ಕಾರಕ್ಕೆ ಎ ಕಾರ ಆದೇಶವೂ ಆ ಕಾರಕ್ಕೆ ಎ ಕಾರ ಆದೇಶವೂ ಊ ಕಾರಕ್ಕೆ ಅ ಕಾರಾದೇಶವೂ ಉಂಟಾಗುತ್ತದೆ. ವಿಕಲ್ಪದಿಂದ ಮೂರನೆಯ ಅಕ್ಷರದ ದೀರ್ಘಕ್ಕೆ ಹ್ರಸ್ವ ಉಂಟಾಗುತ್ತದೆ.

ಎರಡನೆಯಕ್ಷರದ ಅ ಕಾರಕ್ಕೆ ಎ ಕಾರ :
ಉಜ್ಜಯನಿ ‑ ಉಜ್ಜೆಣಿ

ಎರಡನೆಯಕ್ಷರದ ಆ ಕಾರಕ್ಕೆ ಎ ಕಾರ :
ರಸಾಯನಂ ‑ ರಸೆಯನಂ

ಎರಡನೆಯಕ್ಷರದ ಊ ಕಾರಕ್ಕೆ ಅ ಕಾರ :
ನಿರೂಪಿಸಿದಂ ‑ ನಿರವಿಸಿದಂ

ದ್ವಿತೀಯಾಕ್ಷರ ದೀರ್ಘಕ್ಕೆ ಹ್ರಸ್ವ :
ಹಿಗೂಲಕಂ ‑ ಇಂಗುಲಿಕೆ,
ಅಮವಾಸ್ಯೆ ‑ ಅವಸೆ

ಮೂರನೆಯ ಅಕ್ಷರದ ದೀರ್ಘಕ್ಕೆ ಹ್ರಸ್ವ :
ಉತ್ತರೀಯಕಂ ‑ ಉತ್ತರಿಗೆ,
ವರ್ಧಮಾನಂ ‑ ಬದ್ದವಣಂ

೩೦೨
ವ್ಯವಹರಿಸುಗುಂ
ಅತ್ವಕ್ಕೆ ಇತ್ವವಿಧಾನಂ,
ಹ್ರಸ್ವದ ಓತ್ವಂ
ಉತ್ವಂ ಶಬ್ಧ ಪ್ರವಿದಿತಂ,
ಆದ ಉತ್ವಕ್ಕೆ ಅತ್ವವೃತ್ತಿ
ಮೂಱನೆಯ ವರ್ಣದೊಳ್
ನೆಲೆಗೊಳ್ಗುಂ

ಪದಗಳ ತೃತೀಯಾಕ್ಷರದ ಅ ಕಾರಕ್ಕೆ ಇ ಕಾರವೂ ಒ ಕಾರವೂ ಉ ಕಾರವೂ ಬಳಕೆಯಾಗುತ್ತವೆ. ಉ ಕಾರಕ್ಕೆ ಅ ಕಾರವೂ ಆದೇಶವಾಗುತ್ತದೆ.

ತೃತೀಯಾಕ್ಷರದ ಅ ಕಾರಕ್ಕೆ   ಇ ಕಾರ : ಹಿಂಗೂಲಕಂ ‑ ಇಂಗುಲಿಕಂ
”             ”      ಒ ಕಾರ : ಸುರಪರ್ಣಿ ‑ ಸುರಹೊನ್ನೆ
”             ”      ಉ ಕಾರ : ಆಲಸ್ಯಕಂ ‑ ಆಲಸುಗೆ
”          ಉ ಕಾರಕ್ಕೆ ಅ ಕಾರ : ಕುಸ್ತುಂಬುರು ‑ ಕೊತ್ತುಂಬರಿ

೩೦೩
ದೊರೆಕೊಳ್ಗುಂ ನಾಲ್ಕನೆಯ
ಅಕ್ಕರದ ಅತ್ವಕ್ಕೆ
ಓತ್ವ ವೃತ್ತಿ ಶಬ್ಧಂಗಳೊಳ್,
ಇರ್ದ ಎರಡನೆಯ
ಮೂಱನೆಯ ಸಂಚರಿಸುವ
ನಾಲ್ಕನೆಯ ವರ್ಣಂ,
ಅಕ್ಕು ಅಭಾವಂ

ಪದದ ನಾಲ್ಕನೆಯ ಅಕ್ಷರದ ‘ಅ’ ಕಾರಕ್ಕೆ ‘ಓ’ ಕಾರವೂ ಆದೇಶವಾಗುತ್ತದೆ. ಶಬ್ದಗಳಲ್ಲಿರುವ ಎರಡು, ಮೂರು ಮತ್ತು ನಾಲ್ಕನೆಯ ಅಕ್ಷರಗಳು ಲೋಪ ಹೊಂದುತ್ತವೆ.

ನಾಲ್ಕನೆಯ ಅಕ್ಷರದ ಅ ಕಾರಕ್ಕೆ ಓ ಕಾರ :
ಆಟರೂಷಕಂ ‑ ಆಡಸೋಗೆ

ಎರಡನೆಯ ಅಕ್ಷರದ ಲೋಪಕ್ಕೆ :
ವ್ಯವಹಾರಂ ‑ ಬೇಹಾರಂ

ಮೂರನೆಯ ಅಕ್ಷರ ಲೋಪಕ್ಕೆ :
ಅಮವಾಸ್ಯೆ ‑ ಅವಸೆ,
ಪಲ್ಯಯನಂ ‑ ಪಲ್ಲಣಂ,
ವಿನಾಯಕಂ ‑ ಬೆನಕಂ

ನಾಲ್ಕನೆಯ ಅಕ್ಷರ ಲೋಪಕ್ಕೆ :
ಉತ್ತರೀಯಕಂ ‑ ಉತ್ತರಿಗೆ

೩೦೪
ಪದ ಎರಡುಂ ತದ್ಭವದೊಳ್
ಪುದಿದಿರೆ ಮಾೞ್ಪುದು
ಸಮಾಸಮಂ,
ಪದಯುಗದೊಳ್
ಪದ ಒಂದು ಏಗೆಯ್ದುಂ,
ವಿಧಿಗೆ ಒದವದೆ ನಿಲೆಯುಂ
ಸಮಾಸಂ ಉಂಟು
ಅರೆ ಎಡೆಯೊಳ್

(ಸಂಸ್ಕೃತದ) ಎರಡು ಪದಗಳು ತದ್ಭವವಾದರೆ ಮಾತ್ರ ಸಮಾಸವನ್ನು ಮಾಡಬೇಕು. ಎರಡು ಪದಗಳಲ್ಲಿ ಯಾವುದಾದರೊಂದು ಪದ ತದ್ಭವವಾಗಿರದಿದ್ದರೂ ಕೆಲವೆಡೆ ಸಮಾಸವಾಗುವುದುಂಟು; ಇದು ದೋಷವೆನಿಸುವುದಿಲ್ಲ.

ಎರಡು ತದ್ಭವಗಳ ಸಮಾಸಕ್ಕೆ :
ಸರ್ವಲಕ್ಷಣಂ ‑ ಸಬ್ಬಲಕ್ಷಣಂ, ಸರ್ವಸನ್ನಾಹಂ ‑ ಸಬ್ಬಸನ್ನಣಂ,
ಅಂಕುಶಚಾರಣಂ ‑ ಅಂಕುಸಚಾರಣೆ, ದಶಶಿರಂ ‑ ದಸಸಿರಂ,
ವರ್ಣಸ್ವರಂ ‑ ಬಣ್ಣಸರಂ, ದೃಷ್ಟಿವಿಷಂ ‑ ದಿಟ್ಟಿವಿಸಂ,
ಸ್ಥಾನದೀಪಿಕೆ ‑ ತಾಣದೀವಿಗೆ, ಖರಶಾರಣಂ ‑ ಕಾರಸಾಣೆ

ಉತ್ತರ ಪದ ಮಾತ್ರ ತದ್ಭವವಾದ ಸಮಾಸಕ್ಕೆ :
ಮಂಗಳ ಪ್ರಸಾಧನಂ ‑ ಮಂಗಳವಸದನಂ,
ವಿಜಯ ಶೇಷೆ ‑ ವಿಜಯ ಸೇಸೆ, ಪರಮಶ್ರೀ ‑ ಪರಮಸಿರಿ,
ಪಂಚಶರಂ ‑ ಪಂಚಸರಂ, ಪಾದರಕ್ಷೆ ‑ ಪಾದರಕ್ಕೆ,
ಪರಬ್ರಹ್ಮಂ ‑ ಪರಬೊಮ್ಮಂ

ಪೂರ್ವಪದ ಮಾತ್ರ ತದ್ಭವವಾದ ಸಮಾಸಕ್ಕೆ :
ಶನಿವಾರಂ ‑ ಸಣಿವಾರಂ, ಶ್ರೀರಾಮಂ – ಸಿರಿರಾಮಂ,
ತ್ರಿಗುಣಂ ‑ ತಿಗುಣಂ, ತ್ರಿವಲಿ ‑ ತಿವಳಿ, ದ್ವಿಗುಣಂ ‑ ದುಗುಣಂ,
ಗ್ರಾಮರಸಂ ‑ ಗಾವರಸಂ, ಪಶುಪತಿ ‑ ಪಸುಪತಿ, ದಿಶಾಬಲಿ ‑ ದೆಸೆಬಲಿ,
ಶೂಲಪಾಣಿ ‑ ಸೂಳಪಾಣಿ

೩೦೫
ಏಕ, ದ್ವಿ, ತ್ರಿ, ಚತುಃ
ಶಬ್ದಾಕೃತಿಗೆ ಎಕ್ಕ ದು ತಿ ಚೌ ಗಳ್
ಆದೇಶಂಗಳ್
ಸ್ವೀಕೃತ ಸಮಾಸ ಪೂರ್ವದೊಳ್
ಆಕರಿಪರ್ ಪ್ರತ್ಯಯಾಂತದೊಳ್
ವಿಧಿಯಂ

ಸಮಾಸ ಪೂರ್ವದಲ್ಲಿರುವ ಏಕ, ದ್ವಿ, ತ್ರಿ, ಚತುಃ ಶಬ್ಧಗಳಿಗೆ ಕ್ರಮವಾಗಿ ಎಕ್ಕ, ದು, ತಿ, ಚೌ ಎಂಬಿವು ಆದೇಶಗಳಾಗುತ್ತವೆ. ಏಕ, ದ್ವಿ, ತ್ರಿ, ಚತುಃ ಇವು ಪ್ರತ್ಯಯಾಂತವಾಗಿದ್ದರೂ ಈ ನಿಯಮ ಅನ್ವಯವಾಗುತ್ತದೆ.

ಪೂರ್ವದ ಏಕ ಕ್ಕೆ ಎಕ್ಕ :
ಏಕಶರಂ ‑ ಎಕ್ಕಸರಂ, ಏಕಪತ್ರಂ ‑ ಎಕ್ಕವತ್ತಂ,
ಏಕಸ್ಥಲಂ ‑ ಎಕ್ಕತಳಂ, ಏಕಸ್ಥೂಲಂ ‑ ಎಕ್ಕತುಳಂ

ಪೂರ್ವದ ದ್ವಿಗೆ ದು :
ದ್ವಿಗುಣಂ ‑ ದುಗುಣಂ, ದ್ವಿಶರಂ ‑ ದುಸರಂ,
ದ್ವಿಪಟ್ಟಿಕಾ ‑ ದುವಟ್ಟಿಗೆ, ದ್ವಹಸ್ತಂ ‑ ದುಹತ್ತಂ

ಪೂರ್ವದ ತ್ರಿಗೆ ತಿ :
ತ್ರಿಪದಿ ‑ ತಿವದಿ, ತ್ರಿಗುಣಂ ‑ ತಿಗುಣಂ,
ತ್ರಿಶರಂ ‑ ತಿಸರಂ, ತ್ರಿವಳಿ ‑ ತಿವಳಿ

ಪೂರ್ವಪದ ಚತುಃಗೆ ಚೌ :
ಚತುಃ ಪಟ್ಟಂ ‑ ಚೌವಟ್ಟಂ,
ಚತುಃಖಂಡಂ ‑ ಚೌಕಂಡಂ

ಪ್ರತ್ಯಾಯಾಂತ ಶಬ್ಧಗಳಿಗೆ :
ಏಕಕಂ ‑ ಎಕ್ಕಕಂ, ದ್ವಿಕಂ ‑ ದುಗಂ, ತ್ರಿಕಂ ‑ ತಿಗಂ,
ಚತುಷ್ಕಂ ‑ ಚೌಕಂ