೩೦೬
ಸಮಸಂದ ಸಹ ಮಹತ್
ಶಬ್ದಮೆ, ಸಾಂ ಆದೇಶದಿಂ
ಸಮಾಸ ಆದಿಯೊಳಂ;
ಅಮರ್ದಿರ್ಕ್ಕುಂ
ಪರಪದಪೂರ್ವಂ
ಅದುಂ ವ್ಯಂಜನದೊಳ್,
ಒಂದೆ ಬಹುಳತೆಯಿಂದಂ

‘ಸಹ’ ಮತ್ತು ‘ಮಹತ್’ ಶಬ್ದಗಳಿಗೆ ವ್ಯಂಜನಗಳು ಪರವಾದಾಗ ಅವುಗಳಿಗೆ ಕ್ರಮವಾಗಿ ಸಾ ಮತ್ತು ಮಾ ಎಂಬ ಶಬ್ದಗಳು ಆದೇಶವಾಗಿ ಬರುತ್ತವೆ.

ಸಹಕ್ಕೆ :
ಸಹದೇವಂ ‑ ಸಾದೇವಂ, ಸಹವಾಸಿ ‑ ಸಾವಾಸಿ

ಮಹತ್ ಗೆ :
ಮಹಾದೇವಂ ‑ ಮಾದೇವಂ, ಮಹಾಕಾಳಿ ‑ ಮಾಕಾಳಿ,
ಮಹಾಜನಂ ‑ ಮಾಜನಂ, ಮಹಾದಾನಿ ‑ ಮಾದಾನಿ,
ಮಹಾಪುರುಸಂ ‑ ಮಾಪುರುಷಂ

ವಿಕಲ್ಪಕ್ಕೆ :
ಸಹಜತಂ ‑ ಸಹಜತಂ, ಮಹಾಗಜಂ ‑ ಮಹಾಗಜಂ

೩೦೭
ಪರದೊಳ್ ಮಂ ಗಳ್
ನೆಲಸಿರೆ ವತ್ವಂ
ಪೀನಂ ಪಕಾರಂ
ಅದು ಊತ್ವಂ,
ಬೆರಸಿರೆ ತಾಂ ಹ್ರಸ್ವತೆಯ
ಅಂತರ್ ಎಂಬ ಶಬ್ದಾಂತರೇಫೆಗೆ
ಅಕ್ಕುಂ ಲೋಪಂ

ಉತ್ತರ ಪದದ ಮೊದಲಲ್ಲಿ ಪ ಕಾರ, ಬ ಕಾರ, ಮ ಕಾರಗಳು, ವ ಕಾರಗಳಾಗುತ್ತವೆ. ಉತ್ತರ ಪದದ ‘ಪ’ ಕಾರದಲ್ಲಿರುವ ಊ ಕಾರಕ್ಕೆ ಹ್ರಸ್ವ ಬರುತ್ತದೆ. ಅಂತರ್ ಎಂಬ ಶಬ್ಧದ ಅಂತ್ಯ ರೇಫೆಗೆ (ರ ಕಾರಕ್ಕೆ) ಲೋಪ ಬರುತ್ತದೆ.

ಉತ್ತರ ಪದದ ಮೊದಲ ಪ ಕಾರಕ್ಕೆ ವ ಕಾರ :
ಚಂದ್ರ + ಪುರಂ = ಚಂದ್ರಪುರಂ,
ಪಂಜರ + ಪಕ್ಷಿ = ಪಂಜರವಕ್ಕಿ,
ಪಾದ + ಪಚ್ಚಿಂ = ಪಾದವಟ್ಟಂ,
ರತ್ನ + ಪಟ್ಟಿಕೆ = ರನ್ನವಟ್ಟಿಗೆ

ಉತ್ತರ ಪದದ ಮೊದಲ ಬ ಕಾರಕ್ಕೆ ವ ಕಾರ :
ದಿಶಾ + ಬಲಿ = ದೆಸೆವಲಿ,
ಶರ + ಬಂಧಂ = ಶರವಂದಂ
ಶೃಂಖಂ + ಬಂಧಂ = ಸಂಕಲೆವಂದಂ

ಉತ್ತರ ಪದದ ಮೊದಲ ಮ ಕಾರಕ್ಕೆ ವ ಕಾರ :
ರತ್ನ + ಮಣಿ = ರನ್ನವಣಿ,
ದೇಶ + ಮಾನುಷಂ = ದೇಸವಾನಸಂ

ಉತ್ತರ ಪದದ ಪ ಕಾರದ ಊ ಕಾರಕ್ಕೆ ಹ್ರಸ್ವ :
ಕರ್ಣ + ಪೂರಂ = ಕನ್ನವುರಂ,
ವರ್ಣ + ಪೂರಂ = ಬಣ್ಣವುರಂ

ಅಂತರ್ ಶಬ್ಧದ ಅಂತ್ಯ ರೇಫ ಲೋಪಕ್ಕೆ :
ಅಂತರ್ + ಪುರಂ = ಅಂತಃಪುರಂ

ಪೀನ ಗ್ರಹಣದಿನಾ ಪಬ ಮಂಗಳ್ಗೆ ವತ್ವಮಿಲ್ಲ :
ಕಾಂಡಪಟಂ ‑ ಕಂಡಪಟಂ

ಬ ಕಾರಕ್ಕೆ :
ಪತಿವ್ರತೆ ‑ ಹದಿಬದೆ

ಮ ಕಾರಕ್ಕೆ :
ಅಚ್ಚಮಲ್ಲಿಕಾ ‑ ಅಚ್ಚಮಲ್ಲಗೆ

೩೦೮
ಉದಯಿಪುದು ತೃತೀಯತೆ
ಪೂರ್ವದ ಸೂತ್ರವಿಧಾನದಿಂದೆ
ಕ್ಕೆ ತಗುಳ್ಪುದು
ದೀರ್ಘಂ;
ಪೂರ್ವಪದಾಂತ್ಯದೊಳ್
ಉತ್ತರಪದದ ಮೊದಲೊಳ್
ಒದವಿರೆ ಲೋಪಂ

ಹಿಂದಿನ ಸೂತ್ರದ ನಿಯಮದಂತೆ ಉತ್ತರ ಪದದ ಕ, ತ, ಪ ಕಾರಗಳಿಗೆ ತೃತೀಯಾಕ್ಷರ ಗ, ದ, ಬ ಗಳು ಆದೇಶವಾಗುತ್ತವೆ. ಉತ್ತರ ಪದದ ಮೊದಲಲ್ಲಿ ಲೋಪವುಂಟಾದರೆ ಪೂರ್ವಪದದ ಅಂತ್ಯಕ್ಕೆ ದೀರ್ಘವುಂಟಾಗುತ್ತದೆ.

ಪರದ ಕ ಕಾರಕ್ಕೆ ತೃತೀಯಾಕ್ಷರ :
ಮಾನುಷ್ಯಕಾವ್ಯಂ ‑ ಮಾನಸಗಬ್ಬಂ,
ಕರ್ಪೂರಕರಂಡಂ ‑ ಕಪ್ಪುರಗರಡಗೆ,
ರತ್ನಕಂಬಳಂ ‑ ರನ್ನಗಂಬಳಂ

ಪರದ ತ ಕಾರಕ್ಕೆ ತೃತೀಯಾಕ್ಷರ :
ಖದಿರತಾಂಬೂಲಂ ‑ ಕೈರದಂಬುಲಂ,
ಮಾಲಾತೋರಣಂ ‑ ಮಾಲೆದೋರಣಂ,
ಸಂಘಾತತಾಳಂ ‑ ಸಂಗಡದಾಳಂ

ಉತ್ತರ ಪದಾದಿಗೆ ಲೋಪ ಮತ್ತು ಪೂರ್ವ ಪದಾಂತ್ಯಕ್ಕೆ ದೀರ್ಘ :
ಕಾಂಸ್ಯತಾಳಂ ‑ ಕಂಸಾಳಂ, ಧರ್ಮಪಾನಿ ‑ ದಮ್ಮಾಣಿ

೩೦೯
ಪರ ಪದದ ಆದಿಗೆ ಲೋಪಂ,
ದೊರೆಕೊಳ್ಗುಂ ಕೆಲವಱಲ್ಲಿ
ಪೂರ್ವ ಪದಾಂತ್ಯಕ್ಕೆ
ಇರದೆ ಅಕ್ಕುಂ ಲೋಪಂ;
ವ್ಯವಹರಿಪ ಸಮಾಸಂಗಳಲ್ಲಿ
ಕೆಲಕೆಲವೆಡೆಯೊಳ್

ಕೆಲವು ಸಮಾಸಗಳಲ್ಲಿ ಉತ್ತರ ಪದದ ಆದಿಯ ವರ್ಣಕ್ಕೆ ಲೋಪವುಂಟಾಗುತ್ತದೆ. ಇನ್ನು ಕೆಲವು ಸಮಾಸಗಳಲ್ಲಿ ಪೂರ್ವಪದದ ಅಂತ್ಯಕ್ಕೆ ಲೋಪಬರುತ್ತದೆ.

ಉತ್ತರ ಪದಾದಿಯ ಲೋಪಕ್ಕೆ :
ಚರ್ಮ + ಪಟ್ಟಿಕೆ = ಚಮ್ಮಟಿಗೆ,
ಕಾಸ್ಯ + ತಾಳಂ = ಕಂಸಾಳಂ

ಪೂರ್ವ ಪದಾಂತ್ಯ ಲೋಪಕ್ಕೆ :
ದೇವ + ಕುಲಂ = ದೇಗುಲಂ,
ದೇಶ + ಶಾಖೆ = ದೇಸಾಕೆ

೩೧೦
ಆವಗಂ ಆಕಾರ, ಆಗಾರ,
ಆವಳಿಕೆ,ಗಳ್ ಇವು
ಸಮಾಸದ ಉತ್ತರ ಪದ
ಆಗಿ ಆವರಿಸಿರ್ಕುಂ ಲೋಪಂ;
ಭಾವಿಪೊಡೆ ಎರಡನೆಯ
ವರ್ಣದೊಳಂ ಆದಿಯೊಳಂ

ಆಕಾರ, ಆಗಾರ, ಆವಳಿಕೆ ‑ ಈ ಶಬ್ಧಗಳು ಪರವಾಗಿದ್ದಾಗ ಅವುಗಳ ಎರಡನೆಯ ಅಕ್ಷರಕ್ಕೆ ಲೋಪ ಬರುತ್ತದೆ. ಕೆಲವೆಡೆಯಲ್ಲಿ ಅವುಗಳ ಆದಿಯ ಅಕ್ಷರಕ್ಕೂ ಲೋಪ ಬರುತ್ತದೆ.

ಆ ಕಾರಕ್ಕೆ :
ಚಿತ್ರಾಕಾರಂ (ಚಿತ್ರ + ಆಕಾರ) ‑ ಚಿತ್ತಾರ
ರೂಪಾಕಾರಂ (ರೂಪ + ಆಕಾರ) ‑ ರೂವಾರಂ

ಆ ಗಾರಕ್ಕೆ :
ದೇವಾಗಾರಂ (ದೇವ + ಆಗಾರಂ) ‑ ದೇವಾರಂ
ಭಂಡಾಗಾರಂ (ಭಂಡಾರ + ಆಗಾರಂ) ‑ ಭಂಡಾರಂ
ಧವಲಾಗಾರಂ (ಧವಲ + ಆಗಾರಂ) ‑ ಧವಳಾರಂ

ಆವಳಿಕೆಗೆ :
ದೀಪಾವಳಿಕೆ (ದೀಪ + ಆವಳಿಕೆ) ‑ ದೀಪಾಳಿಗೆ

ಉತ್ತರ ಪದದ ಮೊದಲನೆಯ ಅಕ್ಷರದ ಲೋಪಕ್ಕೆ :
(ದೀಪ + ಆವಳಿಕೆ) ‑ ದೀವಳಿಗೆ

೩೧೧
ದರ, ದಾರ, ಬಾರ, ಅಕ್ಕುಂ
ಪರದ ದ್ವಾರಕ್ಕೆ ಪೂರ್ವದೊಳ್
ತದ್ಭವ ಆಗಿರೆ ಸಿರಿಯ
ವಂಕ ಪಾಣಿಯ ಇರೆ
ಕಂಟಿಯಂ, ಉಚಿತ ವಿಧಿ
ವಿಕಲ್ಪ ವಿಧಾನಂ

ಪೂರ್ವ ಸ್ಥಾನದಲ್ಲಿ ತದ್ಭವದಿಂದ (ಶ್ರೀ>) ಸಿರಿಯ, (ವಕ್ರಂ>) ವಂಕ, (ಪಾನೀಯಂ>) ಪಾಣಿಯ ಶಬ್ದಗಳಿದ್ದರೆ ಪರದ ದ್ವಾರ ಶಬ್ಧಕ್ಕೆ ದರ, ದಾರ, ಬಾರ ರೂಪಗಳುಂಟಾಗುತ್ತವೆ. (ಕಂಟಕ>) ಕಂಟಿಯ ಶಬ್ಧವಿದ್ದರೆ ಔಚಿತ್ಯದ ವಿಕಲ್ಪತೆಯುಂಟು

ಪೂರ್ವದ ಸಿರಿಯಕ್ಕೆ :
ಶ್ರೀ + ದ್ವಾರಂ > ಸಿರಿಯದರಂ, ಸಿರಿಯದಾರಂ, ಸಿರಿಯಬಾರಂ

ಪೂರ್ವದ ವಂಕಕ್ಕೆ :
ವಕ್ರ + ದ್ವಾರಂ > ವಂಕದರಂ, ವಂಕದಾರಂ, ವಂಕಬಾರಂ

ಪೂರ್ವದ ಪಾಣಿಯಕ್ಕೆ :
ಪಾನೀಯ + ದ್ವಾರಂ > ಪಾಣಿಯದರಂ,
ಪಾಣಿಯ ದಾರಂ, ಪಾಣಿಯಬಾರಂ

ಪೂರ್ವದ ಕಂಟಿಯಕ್ಕೆ :
ಕಂಟಕ + ದ್ವಾರಂ > ಕಂಟಿಯಬಾರಂ

೩೧೨
ಮಣಿ, ಮಂಚಂ, ಪಟ್ಟಂ,
ತೋರಣಂ, ಅಟ್ಟಂ,
ಗೋಣಿ, ಸಬಳ, ಅಂಕಂ
ಲತೆ, ಕಂಕಣ, ಎಸೆವ
ಕೋಂಟೆ, ಬಲಂ
ಅಂಗಣ ಬಿಲಂ ಬಂದಿ
ಮಾಲೆ ಗಾಳಂ ಗಂಡಂ

 

೩೧೩
ಗಲ್ಲಂ, ಮಲ್ಲಂ, ತಳಂ,
ಇಂತು ಎಲ್ಲಂ
ತತ್ವಮಮುಂ ಇವಱ
ಉದಾಹರಣೆ ಗಳಂ
ಸೊಲ್ಲಿಸುವೆಂ ಎರಡು ಮೆಯ್ಗಂ;
ಬಲ್ಲರ್ಗಳ್
ಮೆಚ್ಚುತಿರೆ ಸಮಾಸೋಕ್ತಿಗಳಿಂ

ಮಣಿ, ಮಂಚಂ, ಪಟ್ಟಂ, ತೋರಣಂ, ಅಟ್ಟಂ, ಗೋಣಿ, ಸಬಳ,ಅಂಕ, ಲತೆ, ಕಂಕಣ, ಕೋಂಟೆ, ಬಲ, ಅಂಗಣ, ಬಿಲ, ಬಂದಿ, ಮಾಲೆ, ಗಾಳ, ಗಂಡ, ಗಲ್ಲ, ಮಲ್ಲ, ತಳ ಇವುಗಳು ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡರಲ್ಲಿಯೂ ಒಂದೇ ರೀತಿಯಲ್ಲಿರುತ್ತವೆ. ಇವುಗಳ ಉದಾಹರಣೆಗಳನ್ನು ಬಲ್ಲವರು ಮೆಚ್ಚುವಂತೆ ಸಮಾಸೋಕ್ತಿಯಿಂದ ಎರಡರಲ್ಲಿ (ಸಂಸ್ಕೃತ ಮತ್ತು ಕನ್ನಡದಲ್ಲಿ)ಯೂ ಹೇಳುತ್ತೇನೆ.

ಮಣಿಗೆ :
ಮಕುಟಮಣಿ, ದಿನಮಣಿ (ಸಂ) ಕೆಲವಣಿ, ಉಡೆವಣಿ (ಕ)

ಮಂಟಕ್ಕೆ :
ಕಾಂಚನಮಂಚಂ, ರತ್ನಮಂಚಂ (ಸಂ) ಸೆಳೆಮಂಚಂ,
ತೂಗುಮಂಚಂ (ಕ)

ಪಟ್ಟಕ್ಕೆ :
ಪಟ್ಟಮಂಚಂ, ಪಟ್ಟಮಹಿಷಿ (ಸಂ) ಪಟ್ಟಿವಣಿ, ಉಟ್ಟಗೊಱ (ಕ)

ತೋರಣಕ್ಕೆ :
ಕಾಂಸ್ಯತೋರಣಂ, ಮಕರತೋರಣಂ (ಸಂ) ಪಚ್ಚೆದೋರಣಂ,
ತಳಿರ್ದೋರಣಂ (ಕ)

ಅಟ್ಟಕ್ಕೆ :
ಅಟ್ಟಹಾಸಂ (ಸಂ), ಅಟ್ಟವಡಿ, ಅಟ್ಟಗವಲ್ (ಕ)

ಗೋಣಿಗೆ :
ಗೋಣಿಕಾಪುತ್ರಂ (ಸಂ), ಗೋಣಿ, ಪೆರ್ಗೋಣಿ (ಕ)

ಸಬಳಕ್ಕೆ :
ಸಬಳ ತ್ರಿಣೇತ್ರಂ, ಸಬಳ ಸಹಸ್ರಬಾಹು (ಸಂ) ಸಬಳದೆಱ,
ಸಬಳಗದ್ಯಾಣಂ (ಕ)

ಅಂಕಕ್ಕೆ :
ಮೃಗಾಂಕಂ, ವೃಷಾಂಕಂ (ಸಂ) ಕಟ್ಟಂಕಂ, ಮಾಱಂಕಂ (ಕ)

ಲತೆಗೆ :
ವನಲತೆ (ಸಂ) ಎಳಲತೆ (ಕ)

ಕಂಕಣಕ್ಕೆ :
ಮಣಿಕಂಕಣಂ, ಹಸ್ತಕಂಕಣಂ (ಸಂ) ಗುಬ್ಬಿಗಂಕಣಂ,
ಪಿಂಡುಗಂಕಣಂ

ಕೋಂಟೆಗೆ :
ಧೂಳಿಕೋಂಟೆ, (ಸಂ) ಹತ್ತುಗೋಂಟೆ

ಬಲಕ್ಕೆ :
ಭೂಬಲಂ, ಭುಜಬಲಂ (ಸಂ) ಆಳ್ವಲಂ, ನೆಲವಲಂ (ಕ)

ಅಂಗಣಕ್ಕೆ :
ಅಂಗಣವಲಯಂ (ಸಂ) ಅಂಗಣವಾವಿ, ಅಂಗಣವೆಟ್ಟು (ಕ)

ಬಿಲಕ್ಕೆ :
ಬಿಲದ್ವಾರಂ, ಬಿಲಸ್ವರ್ಗಂ (ಸಂ) ಪೆರ್ಬಿಲಂ (ಕ)

ಬಂದಿಗೆ :
ಬಂದಿಗ್ರಹಣಂ (ಸಂ) ಬಲ್ಬಂದಿಕಾಱಂ (ಕ)

ಮಾಲೆಗೆ :
ವನಮಾಲೆ, ಕಂಠಮಾಲೆ (ಸಂ) ಪೂಮಾಲೆ, ಪಚ್ಚೆಮಾಲೆ (ಕ)

ಗಾಳಕ್ಕೆ :
ಗಳಗಾಳಂ (ಸಂ), ಸಣ್ಣಗಾಳಂ, ಎಡೆಗಾಳಂ (ಕ)

ಗಂಡಕ್ಕೆ :
ಗಂಡಗರ್ವಂ (ಸಂ) ಗಂಡಗಲಿ (ಕ)

ಗಲ್ಲಕ್ಕೆ :
ಗಲ್ಲಸ್ಥಳಂ (ಸಂ) ಗಲ್ಲಗಿವಿ, ಗಲ್ಲಗುಗ್ಗರಿ (ಕ)

ಮಲ್ಲಕ್ಕೆ :
ಮಲ್ಲಮುರಾಂತಕಂ (ಸಂ) ಮಲ್ಲಗಾಳಗಂ, ಮಲ್ಲವಾತು (ಕ)

ತಳಕ್ಕೆ :
ಕರತಳಂ, ಧರಣಿತಳಂ (ಸಂ), ಕೆಂದಳಂ, ತಟ್ಟುತಳಂ (ಕ)

೩೧೪
ಸಕ್ಕದಮಂ ಮಱಿಗೊಳ್ಳದೆ
ಚೊಕ್ಕಳಿಕೆಯಿಂ
ಅಚ್ಚಕನ್ನಡಂ;
ಬೇೞ್ಪರ ಕೈವೊಕ್ಕ ನಿಧಿ
ಎನಿಪ ಅಪಭ್ರಂಶಕ್ಕಂ,
ದೇಶೀಯ ಪದಕಂ
ಉಂಟು ಸಮಾಸಂ

ಸಂಸ್ಕೃತ ಪದಗಳನ್ನು ಬಯಸದೆ ಅಚ್ಚಕನ್ನಡದ ಶಬ್ದಗಳನ್ನೇ ಸೇರಿಸಿ ಸಮಾಸ ಮಾಡಲು ಬಯಸುವವರು ಅಪಭ್ರಂಶ ಪದಗಳನ್ನು ಮತ್ತು ದೇಶಿಯ ಪದಗಳನ್ನು ಸೇರಿಸಿ ಆಪಭ್ರಂಶ ಸಮಾಸ ಪದ ಮತ್ತು ದೇಶಿಯ ಪದಗಳನ್ನು ಸೇರಿಸಿ ಮತ್ತು ತತ್ಸಮ ಸಮಾಸ ಮತ್ತು ದೇಶೀಯ ಶಬ್ದಗಳನ್ನು ಸೇರಿಸಿ ಸಮಾಸ ಮಾಡಿಕೊಳ್ಳಬುಹುದು.

ಅಪಭ್ರಂಶಕ್ಕೂ ದೇಶೀಯ ಪದಕ್ಕೂ ಸಮಾಸ :
ಶಯ್ಯಾ > ಸಜ್ಜೆ + ಮನೆ = ಸಜ್ಜೆಮನೆ
ರಾಜ > ರಾಯ + ಗೋಂಟೆ = ರಾಯಗೋಂಟೆ

ಅಪಭ್ರಂಶ ಸಮಾಸಕ್ಕೆ ದೇಶೀಯ ಪದಕ್ಕೂ ಸಮಾಸ :
ಸ್ಥಾನ + ದೀಪಿಕಾ > ತಾಣದೀವಿಗೆ + ಬೆಳಗು = ತಾಣದೀವಿಗೆ ವೆಳಗು

ತತ್ಸಮ ಸಮಾಸಕ್ಕೂ ದೇಶೀಯ ಪದಕ್ಕೂ ಸಮಾಸ :
ಸಬಳ + ಗದ್ಯಾಣ > ಸಬಳಗದ್ಯಾಣ + ತೆಱಿ = ಸಬಳಗದ್ಯಾಣದೆಱ

ಇದು ಶಬ್ದ ಪಂಡಿತ, ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯನಾದ ಸುಕವಿ ಕೇಶಿರಾಜನಿಂದ ವಿರಚಿತವಾದ ಶಬ್ದಮಣಿ ದರ್ಪಣದ ಎಂಟನೆಯ ಪ್ರಕರಣವಾದಅಪಭ್ರಂಶ ಪ್ರಕರಣಮುಗಿಯಿತು.