೩೩೪
ಮತ್ತೆ, ಎಂಬರ್ಥದೊಳ್
ಉಸಿರ್ವರ್ ಬಿತ್ತೆಗರ್
ಬಲ್ಲೆ, ಬೞಿಗಳಂ, ಕಾಲಾರ್ಥಂ
ಪತ್ತುವುದು
ಅಂದು, ಇಂದು, ಉಂದು,
ಎಂದು ಎತ್ತಂ
ನುಡಿವ ಅವ್ಯಯಂಗಳೊಳ್
ವಾಗ್ವಿದರಿಂ

‘ಬಲ್ಲೆ’ ‘ಬೞ’ ಎಂಬ ಅವ್ಯಯಗಳು ಮತ್ತೆ ಎಂಬರ್ಥದಲ್ಲಿ ಬಳಕೆಯಾಗುತ್ತವೆ. ‘ಅಂದು’ ‘ಇಂದು’, ‘ಉಂದು’, ‘ಎಂದು’ ಎಂಬ ಅವ್ಯಯಗಳು ಕಾಲಾರ್ಥ ಸೂಚಕದಲ್ಲಿ ಬಳಕೆಯಾಗುತ್ತವೆ. ಸಂಭಾಷಣೆಯ ಸಂದರ್ಭದಲ್ಲಿ ಮತ್ತೇನು ಎಂದು ಪ್ರಶ್ನಿಸುವಾಗ ‘ಬಲ್ಲೆ’ ಮತ್ತು ‘ಬೞ’ ಎಂದು ಬಳಕೆಯಾಗುವುದೆಂದು ವಿದ್ವಾಂಸರು ಹೇಳುತ್ತಾರೆ.

೩೩೫
ಭ್ರಾಂತಿಯಂ ಉೞದು
ಅಂತು, ಇಂತು,
ಉಂತು, ಎಂತು,
ಎಂಬಿವು ತಾಂ ಪ್ರಕಾರ
ಕಾಲ್ಯಾರ್ಥಂಗಳ್
ಮುಂತೆ ಚತುರ್ಥೀ ಷಷ್ಠೀ
ಕಾಂತಂಗಳ್ ಎಂದು ತಿಳಿವಿಗೆ
ಪೇೞ್ವ ಅವ್ಯಯಮಂ

‘ಅಂತು’, ‘ಇಂತು’, ‘ಉಂತು’, ‘ಎಂತು’ ಈ ನಾಲ್ಕು ಅವ್ಯಯಗಳು ಆ ಪ್ರಕಾರ, ಈ ಪ್ರಕಾರ ಎಂಬ ಅರ್ಥ ಹೇಳುವವು (ಕಾಲ್ಯಾರ್ಥ). ಮುಂದಿನ ಎರಡು ಸೂತ್ರಗಳಲ್ಲಿ ಕಾಲಭೇದವನ್ನು ಹೇಳುವ ಅವ್ಯಯಗಳನ್ನು ಪಟ್ಟಿ ಮಾಡಲಾಗಿದೆ. ಅವು ಚತುರ್ಥೀ ಮತ್ತು ಷಷ್ಠೀ ವಿಭಕ್ತಿಗಳಲ್ಲಿ ಬಳಕೆಯಾಗುವವಾದರೂ ಅವು ಅವ್ಯಯಗಳೇ.

೩೩೬
ತಳೆಗುಂ ಕಾಲಾರ್ಥಮಂ
ಆಗಳ್, ಈಗಳ್, ಎಂಬ
ಆಗಡು, ಈಗಡು, ಎಂಬಿವು
ಬಿಂದು ಉಜ್ಜಳಮಂ
ಇವು ಉದಯಮಂ;
ಉಸಿರ್ವುವು ತಿಳಿ ಸವಳದೆ
ಪೂೞ್ತಡೆನೆ ಸವಳ್ತಡೆಯೆನೆಯುಂ

೩೩೭
ಸಮಸಂದ ಕಾಲವಾಚಕಮಂ
ಇವು ನಾಡಿದು, ನಾಳೆ, ನಿನ್ನೆ, ಮೊನ್ನೆಗಳ್;
ಆದಂ ಬವರಿಪುವು,
ಈವಱು, ಮೊನೆಯೇಡು, ಇವು
ಕಿಂಚಿದ್ಫೂತ ಭೂತಕಾಲದ್ವಯದೊಳ್

೧. ಆಗಳ್, ಈಗಳ್, ಆಗಡು, ಈಗಡು ಎಂಬ ಅವ್ಯಯಗಳು ವಿಕಲ್ಪವಾಗಿ ಆಗಳುಂ, ಈಗಳುಂ, ಆಗಡುಂ, ಈಗಡುಂ ಎಂದು ಬಿಂದು ಸಹಿತವಾಗಿಯೂ ಬಳಕೆಯಾಗುವವು. ಇವು ಕಾಲಾರ್ಥದಲ್ಲಿ ಪ್ರಯೋಗವಾಗುತ್ತವೆ.

೨. ಸವಳ್ತಡೆ, ಪೊೞ್ತಡೆ, ಸವಳದೆ ಎಂಬ ಅವ್ಯಯಗಳು ಉದಯ ಕಾಲ ಅಥವಾ ಪ್ರಾತಃಕಾಲದ ಅರ್ಥವನ್ನು ಹೇಳುತ್ತವೆ. ಅವುಗಳಲ್ಲಿ ‘ಸವಳದೆ’ಎಂಬುದು ಮಾತ್ರ ಸವಳದೆಗೆ ‑ ಸವಳದಿರೆ ಎಂಬ ಚತುರ್ಥೀ ಷಷ್ಠೀ ರೂಪಗಳಲ್ಲಿ ಬಳಕೆಯಾಗುವುದಿಲ್ಲ.

೩.‘ನಾಡಿದು’, ‘ನಾಳೆ’, ‘ನಿನ್ನೆ’, ‘ಮೊನ್ನೆ’ಎಂಬ ಅವ್ಯಯಗಳು ಕಾಲವಾಚಕದಲ್ಲಿ ಪ್ರಯೋಗವಾಗುತ್ತವೆ.

೪. ‘ಈವಱು’, ‘ಮೊನೆಯೇಡು’ಎಂಬ ರೂಪಗಳು (ಕ್ರಮವಾಗಿ)ಈವರೆಗಿನಕಾಲ ಅಥವಾ ವರ್ತಮಾನ (ಅಥವಾ ಕಳೆದ) ವರ್ಷದಲ್ಲಿ ಕಳೆದು ಹೋಗಿರುವ ಕಾಲ (ಕಿಂಚಿದ್ಭೂತಕಾಲ), ಹಿಂದಿನ ವರ್ಷ ಅದರ ಹಿಂದಿನ ವರ್ಷ ಎಂಬರ್ಥದಲ್ಲಿ ಪ್ರಯೋಗವಾಗುತ್ತವೆ.

ಮೇಲೆ ಹೇಳಿದ ಅವ್ಯಯಗಳ ಚತುರ್ಥೀ ಮತ್ತು ಷಷ್ಠೀರೂಪಗಳು.

ಅವ್ಯಯಗಳು : ಚತುರ್ಥಿಗೆ ಷಷ್ಠಿಗೆ ವಿಕಲ್ಪಬಿಂದು
ಆಗಳ್ : ಆಗಳಿಂಗೆ ಆಗಳಿನ ಆಗಳಂ
ಈಗಳ್ : ಈಗಳಿಂಗೆ ಈಗಳಿನ ಈಗಳಂ
ಆಗಡು : ಆಗಡಿಂಗೆ ಆಗಡಿನ ಆಗಡಂ
ಈಗಡು : ಈಗಡಿಂಗೆ ಈಗಡಿನ ಈಗಡಂ
ಸವಳದೆ :
ಪೊೞ್ತಡೆ : ಪೊೞ್ತಡಿಂಗೆ ಪೊೞ್ತಡಿನ —
ಸವಳ್ತಡೆ : ಸವಳ್ತಡಿಂಗೆ ಸವಳ್ತಡಿನ
ನಾಡಿದು : ನಾಡಿದಿಂಗೆ ನಾಡಿದಿನ
ನಾಳೆ : ನಾಳಿಂಗೆ ನಾಳಿನ
ನಿನ್ನೆ : ನಿನ್ನಿಂಗೆ ನಿನ್ನಿನ
ಮೊನ್ನೆ : ಮೊನ್ನಿಂಗೆ ಮೊನ್ನಿನ
ಈವಱು : ಈವಱಂಗೆ ಈವಱನ
ಮೊನೆಯೇಡು : ಮೊನೆಯೇಡಿಂಗೆ ಮೊನೆಯೇಡಿನ

 

ಸಮಾಪ್ತಿ ವಾಕ್ಯಗಳು

೩೩೮
ನಡೆದುದೆ ಮಾರ್ಗಂ,
ಪದವಿಡಲೊಡರಿಸಿದುದೆ ಭಂಗಿ
ಕೇಶವಂಗೆ ಇದಿರುಂಟೇ;
ತೊಡಗಿದ ಕೃತಿಗಳೊಳ್ ಆನೆಯ
ನಡು ಬಡವೇ,
ತಾನೆ, ಲೋಕದೊಳ್ ಲಾಕ್ಷಣಿಕಂ

ನಡೆದುದೇ ಮಾರ್ಗ, ಪದವಿಡ ತೊಡಗಿದುದೇ ರೀತಿ, ತೊಡಗಿದ ಕೃತಿಗಳಲ್ಲಿ ಕೇಶಿರಾಜನಿಗೆ ಇದಿರುಂಟೇ? ಆನೆಯ ನಡು ಬಡವೇ? ಲೋಕದಲ್ಲಿ ತಾನೊಬ್ಬನೇ ಲಾಕ್ಷಣಿಕ. ಕೇಶಿರಾಜನು ಪ್ರೌಢ ವೈಯಾಕರಣೆಯೂ ಪಂಡಿತನೂ ಆಗಿದ್ದನು ತನ್ನ ಕೃತಿಯ ಬಗ್ಗೆ ಆತ್ಮ ಪ್ರತ್ಯಯದ ಮಾತುಗಳನ್ನು ಆಡಿಕೊಂಡಿದ್ದಾನೆ. ಅವು ಉತ್ಪ್ರೇಕ್ಷೆಯಲ್ಲ ದರ್ಪಣವನ್ನು ಇಡೀಯಾಗಿ ಓದಿ, ಅವನ ನಿಯಮಗಳನ್ನು ಗ್ರಹಿಸಿಕೊಂಡರೆ ಅವನಾಡುವ ಮಾತುಗಳು ಸ್ವಭಾವೋಕ್ತಿಗಳಾಗಿವೆ. ಕೇಶಿರಾಜನ ಶಾಸ್ತ್ರಜ್ಞತೆ ನಿಷ್ಕಳಂಕವಾದುದು. ಪೀಠಿಕಾ ಭಾಗದ ‘ಅವಧರಿಪುದು ವಿಬುಧರ್’ ಎಂಬ ಪದ್ಯದಲ್ಲಿ ವಿನಯವನ್ನು ಮೆರೆದಿದ್ದಾನೆ.

೩೩೯
ದೊರೆವಡೆದ
ಚೋೞಪಾಲಕ ಚರಿತಂ,
ಶ್ರೀ ಚಿತ್ರಮಾಲೆ, ಅಂತೆ
ಸುಭದ್ರಾಹರಣಂ,
ಪ್ರಭೋದ್ರಚಂದ್ರಂ,
ಕಿರಾತಂ ಇವು
ಕೇಶಿರಾಜ ಕವಿ ರಚಿತಂಗಳ್

(ಕೇಶಿರಾಜ ಶಬ್ದಮಣಿದರ್ಪಣನ್ನಲ್ಲದೆ) ಪ್ರಸಿದ್ಧವಾದ ಚೋೞಪಾಲಕ ಚರಿತಂ, ಶ್ರೀ ಚಿತ್ರಮಾಲೆ, ಸುಭದ್ರಾ ಹರಣಂ, ಪ್ರಬೋಧ ಚಂದ್ರಂ, ಕಿರಾತಂ ಎಂಬ ಕೃತಿಗಳನ್ನು ರಚಿಸಿದ್ದಾನೆ. ಆದರೆ ಈ ಕೃತಿಗಳಾವವೂ ಉಪಲಬ್ಧವಿಲ್ಲ. ಇವು ಉಪಲಬ್ದವಾದರೆ ಕೇಶಿರಾಜನ ಕವಿಮನ ಹಾಗೂ ಆ ಕಾಲದ ಸಾಹಿತ್ಯಿಕ ಸ್ವರೂಪ ಸ್ಪಷ್ಟವಾಗುತ್ತದೆ.

೩೪೦
ಸಿರಿಗೀಕ್ಷಿಪ ರಸಚಿತ್ರಂ
ಸರಸತಿ ಎರಡನೆಯ ಬೀಣೆಯೆನೆ
ಸೌಭಾಗ್ಯಂ;
ಕರಂ ಆದುದೆಂದು ಬುಧರ್
ಆದರಿಪರ್ ಮೆಚ್ಚೆಂದೆ
ಶಬ್ದಮಣಿದರ್ಪಣಮಂ

ಹಳಗನ್ನಡದ ಸೂಕ್ಷ್ಮಸಂವೇದನೆಯನ್ನು ಪ್ರತಿನಿಧಿಸುವ ಶಬ್ದಮಣಿ ದರ್ಪಣ ಕನ್ನಡ ವ್ಯಾಕರಣಗಳಲ್ಲಿ ಅಪೂರ್ವವಾದುದು; ಅಧಿಕೃತವಾದುದು. ಅದರ ಅಗ್ಗಳಿಕೆಯನ್ನು ಸ್ವತಃ ಕೇಶಿರಾಜನೇ ಹೇಳಿಕೊಂಡಿದ್ದಾನೆ. ಈ ಕೃತಿಯು ಲಕ್ಷ್ಮಿಗೆ ಅವಲೋಕನ ಯೋಗ್ಯವಾದ ರಸಚಿತ್ರ. ಸರಸ್ವತಿಗೆ ಎರಡನೆಯ ವೀಣೆ ಎನ್ನುವಂತೆ ಈ ಶಬ್ಧಶಾಸ್ತ್ರದ ಸೌಂದರ್ಯ ಮಿಗಿಲಾದುದು ಎಂದು ವಿದ್ವಾಂಸರು ಶಬ್ದಮಣಿದರ್ಪಣವನ್ನು ಮೆಚ್ಚುಗೆಯಿಂದ ಆದರಿಸುತ್ತಾರೆ.

೩೪೧
ಆರ್ಯನ, ಯಾದವ
ಕಟಕಾಚಾರ್ಯನ,
ಕೇಶವನ
ಶಬ್ದಮಣಿದರ್ಪಣಮಂ;
ಸುರ್ಯೇಂದು ಮೇರುವಾರಿಧಿ
ಪರ್ಯಂತಂ ಪರೆದು
ನಿಲ್ಕುಂ ಅನಾಕುಳದಿಂದಂ

ಕೇಶಿರಾಜ ಈ ಪದ್ಯದಲ್ಲಿಯೂ ತನ್ನ ಕೃತಿಯ ಅಗ್ಗಳಿಕೆಯನ್ನು ಹೇಳಿಕೊಂಡಿದ್ದಾನೆ. ಮಾನ್ಯನಾದ ಯಾದವಕಟಕಾಚಾರ್ಯನಾದ ಕೇಶಿರಾಜನ ಶಬ್ದಮಣಿದರ್ಪಣ “ಸುರ್ಯೋಂದು ಮೇರುವಾರಿಧಿ ಪರ್ಯತಂ” ನಿರ್ವಿಘ್ನವಾಗಿ ವ್ಯಾಪಿಸಿ ನಿಲ್ಲಲಿ ಎಂದು ಹಾರೈಸುತ್ತಾನೆ. ಕೇಶಿರಾಜನ ವಾಣಿ ಹುಸಿಯಾಗಿಲ್ಲ ಇಂದಿಗೂ ಕನ್ನಡ ಭಾಷಾಧ್ಯಯನಕಾರರು ಹಳಗನ್ನಡ ಅವಸ್ಥೆಯನ್ನು ಅರಿಯಬೇಕಾದರೆ ಶಬ್ದಮಣಿದರ್ಪಣವನ್ನು ಅಧ್ಯಯನ ಮಾಡಬೇಕಾಗಿದೆ.

೩೪೨
ಗಮಕ ಸಮಾಸದಿಂ,
ಱೞ ಕುಳಕ್ಷಳದಿಂ,
ಶ್ರುತಿಸಹ್ಯ ಸಂಧಿಯಿಂ,
ಸಮುಚಿತಮಾಗಿ ಬರ್ಪ ಸತಿಸಪ್ತಮಿಯಿಂ,
ಸಮ ಸಂಸ್ಕೃತೋಕ್ತಿಯಿಂ,
ವಮಹಪ ಭೇದದಿಂ,
ವಿರಹಿತ ಅವ್ಯಯ,
ಸಂಸ್ಕೃತ ಲಿಂಗದಿಂ,
ಪದೋತ್ತಮ ಶಿಥಿಲತ್ವದಿಂ,
ಯತಿವಿಲಂಘನದಿಂದ
ಅರಿದಲ್ತೆ ಕನ್ನಡಂ

೧. ಗಮಕ ಸಮಾಸ, ೨. ಱೞಕುಳಕ್ಷಳ, ೩. ಶ್ರುತಿಸಹ್ಯಸಂಧಿ ೪. ಸಮುಚಿತಮಾಗಿಬರ್ಪಸತಿಸಪ್ತಮಿ, ೫. ಸಮಸಂಸ್ಕೃತ, ೬. ವ.ಮ.ಹ.ಪ ಭೇದ  ೭.ವಿರಹಿತ ಆವ್ಯಯ ಸಂಸ್ಕೃತಲಿಂಗ ೮. ಪದೋತ್ತಮ ಶಿಥಿಲತ್ವ (ಶಿಥಿಲದ್ವಿತ್ವ), ೯. ಯತಿವಿಲಂಘನ  ಇವು ಕೇಶಿರಾಜ ಹೇಳುವ ಅಸಾಧಾರಣ ಲಕ್ಷಣಗಳಾಗಿವೆ.

ಇದು ಶಬ್ದ ಪಂಡಿತ, ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯನಾದ ಸುಕವಿ ಕೇಶಿರಾಜನಿಂದ ವಿರಚಿತವಾದ ಶಬ್ದಮಣಿ ದರ್ಪಣದ ಒಂಬತ್ತನೆಯ ಪ್ರಕರಣವಾದಅವ್ಯಯ ಪ್ರಕರಣಮುಗಿಯಿತು.