ಓ ತಾಯಿ ಸರಸ್ವತೀ
ನಿನ್ನ ವೀಣೆ ತಂತಿಗಳಲಿ
ಜೇಡ ಬಲೆಯ ನೂತಿದೆ
ನಿನ್ನ ಪಾದಪೀಠದ ಕೆಳ-
ಗಿಲಿ ಹೆಗ್ಗಣ ಸೇರಿವೆ
ನಿನ್ನ ಕೈಯ ಪುಸ್ತಕವನು
ಗೆದ್ದಲರ್ಧ ತಿಂದಿದೆ
ನಿನ್ನ ಗುಡಿಯ ಗಂಟೆಗಳಿಗೆ
ತುಕ್ಕು ಹಿಡಿಯತೊಡಗಿದೆ
ಓ ತಾಯಿ ಸರಸ್ವತೀ
ಏನಿದೆಂಥ ದುರ್ಗತಿ !

ಓ ತಾಯಿ ಸರಸ್ವತೀ
ನಿನ್ನ ಬೆನ್ನ ನೆರಳಿನಲ್ಲಿ
ವ್ಯಾಪಾರವೆ ಸಾಗಿದೆ
ನಿನ್ನ ಹೆಸರಿನಲ್ಲಿ ಇಗೋ
ಹಂಸಯಜ್ಞ ನಡೆದಿದೆ
ಕರಿಯ ಶಾಲು ಹೊದ್ದ ಪುರೋ-
ಹಿತರ ತಂಡ ಮೆರೆದಿದೆ
ತೈಲವೆರೆವ ನೆವದೊಳಿವರು
ಎಳೆದು ಉರಿವ ಬತ್ತಿಯ
ಚಿವುಟಿಹಾಕಿ ಮಾಡುವರಿದೊ
ನಿನಗೇ ನೈವೇದ್ಯವ.

ಓ ತಾಯಿ ಸರಸ್ವತೀ
ಏನಿದೆಂಥ ದುರ್ಗತಿ !
ಕಾಳಿಯಾಗಿ ಏಳುತಾಯಿ
ಶೂಲವನ್ನು ತಾಳುತಾಯಿ
ಕಲ್ಲಾದರೆ ನೀನೆ ಹೀಗೆ
ಹೇಳಿಕೊಳುವುದಾರಿಗೆ?