ಸುಮಾರು ಒಂದು ಶತಮಾನಕ್ಕೂ ಹಿಂದೆ ಕ್ರಾಂತಿಕಾರೀ ಸಂತರಾದ ಸ್ವಾಮಿ ವಿವೇಕಾನಂದರು ಉದ್‌ಘೋಷಿಸಿದರು: ‘ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನವನ್ನು ನೀಡಲಾಗದ, ವಿಧವೆಯರ ಕಣ್ಣೀರನ್ನು ಒರೆಸಲಾಗದ, ದೇವರಲ್ಲಾಗಲೀ ಧರ್ಮದಲ್ಲಾಗಲೀ ನನಗೆ ನಂಬಿಕೆಯಿಲ್ಲ”. ಆದರೆ ಯಾವುದೇ ದೇವರಲ್ಲಾಗಲೀ, ಧರ್ಮದಲ್ಲಾಗಲಿ ನಂಬಿಕೆಯಿಲ್ಲದ ನಾಸ್ತಿಕ ಕೇಂದ್ರವೊಂದು, ಇಪ್ಪತ್ತನೆಯ ಶತಮಾನದ ನಮ್ಮ ಕಾಲದಲ್ಲಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಸ್ಥಾಪಿತವಾಗಿ ಮಾನವಕೇಂದ್ರಿತ ಕಾಳಜಿಗಳಿಂದ, ದೀನ-ದಲಿತರ ಸೇವೆಗೆ ಕಂಕಣಬದ್ಧವಾಗಿ ಅಪೂರ್ವವಾದ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತೆಂಬುದು ಅತ್ಯಂತ ಹರ್ಷದಾಯಕವಾದ ಸಂಗತಿಯಾಗಿದೆ. ಈ ನಾಸ್ತಿಕ ಕೇಂದ್ರದ ಪ್ರೀತಿಯ ಬೆಳಕಾಗಿರುವವರು ಶ್ರೀಮತಿ ಸರಸ್ವತಿಗೋರಾ ಅವರು.

ಶ್ರೀಮತಿ ಸರಸ್ವತೀ ಗೋರಾ (೧೯೧೨) ಅವರ ಬದುಕು ಅದ್ಭುತವಾದ ಸಾಮಾಜಿಕ ಪರಿವರ್ತನೆಗಾಗಿ ನಡೆಯಿಸಿದ ನಿರಂತರ ಹೋರಾಟದ ಒಂದು  ಅಪೂರ್ವ ಸಾಹಸದ ಸಂಕೇತವಾಗಿದೆ. ಜಗತ್ ಪ್ರಸಿದ್ಧವಾದ ಮೊಟ್ಟಮೊದಲ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದ, ಪ್ರೊ. ಗೋಪರಾಜು ರಾಮಚಂದ್ರ ರಾವ್ (ಗೋರಾ) ಅವರ ಪತ್ನಿಯಾಗಿ, ವಿಜಯವಾಡದಲ್ಲಿರುವ ಈ ನಾಸ್ತಿಕ ಕೇಂದ್ರವನ್ನು ಸಾಮಾಜಿಕ ಯೋಗಕ್ಷೇಮದ ಹಾಗೂ ವೈಚಾರಿಕ ಜಾಗೃತಿಯ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಶ್ರೀಮತಿ ಸರಸ್ವತೀ ಗೋರಾ ಅವರು ಈವರೆಗೆ ಸಾಕಾರಗೊಳಿಸಿದ ಬಹುಮುಖೀ ಸಾಧನೆಗಳು ಈ ದೇಶದ ಅನೇಕ ಸಮಾಜ ಸೇವಾ ಕಾರ್ಯಕರ್ತರಿಗೆ ಮಾರ್ಗದರ್ಶಕವಾಗಿವೆ.

ನಾಸ್ತಿಕತೆ ಭಾರತೀಯ ಪರಿಸರಕ್ಕೆ ಹಾಗೂ ತತ್ವಶಾಸ್ತ್ರ ಪರಂಪರೆಗೆ ಹೊಸತಾದುದೇನೊ ಅಲ್ಲ. ದೇವರಿದ್ದಾನೆ ಎನ್ನುವುದು ಹೇಗೆ ಆಸ್ತಿಕನ ವೈಯಕ್ತಿಕ ಶ್ರದ್ಧೆಯ ಬುನಾದಿಯೋ ಹಾಗೆ, ದೇವರಿಲ್ಲ ಎನ್ನುವುದು, ದೇವರು  ಬೇಕಾಗಿಲ್ಲ ಎನ್ನುವುದು ನಾಸ್ತಿಕನಾದವನ ವೈಯಕ್ತಿಕ ಶ್ರದ್ಧೆಯ ಬುನಾದಿಯಾಗಿದೆ. ಪ್ರೊ. ಗೋರಾ ಮೊದಲಿನಿಂದಲೂ ನಾಸ್ತಿಕವಾದದ ಪರವಾಗಿ ನಿಂತವರು. ದೇವರು ಮತ್ತು ಧರ್ಮವನ್ನು ಕುರಿತ ಕಲ್ಪನೆಗಳು ಮನುಷ್ಯರನ್ನು ತಮ್ಮ ನಿಜವಾದ ಸಾಮಾಜಿಕ ವಾಸ್ತವಗಳಿಗೆ ವಿಮುಖರನ್ನಾಗಿ ಮಾಡುವುದರ ಜತೆಗೆ, ಅವರನ್ನು ಅನೇಕ ಬಗೆಯ ಅವೈಚಾರಿಕವಾದ ಮೂಢ ನಂಬಿಕೆಗಳಿಗೆ ಒಳಗು ಪಡಿಸುವುದರಿಂದ, ದೇವರು- ಧರ್ಮಗಳ ಹಂಗಿಲ್ಲದ ಹಾಗೂ ಸ್ವತಂತ್ರವಾದ ಒಂದು ಸ್ವಾವಲಂಬಿಯೂ ವೈಚಾರಿಕವೂ ಆದ ಮನೋಧರ್ಮವನ್ನು ಪ್ರತಿಪಾದಿಸುತ್ತ, ಆ ಮೂಲಕ ಬಡತನ, ಅನಕ್ಷರತೆ, ಜಾತಿಪದ್ಧತಿ, ಅಸಮಾನತೆ, ಅಸ್ಪ ಶ್ಯತೆ -ಇತ್ಯಾದಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವ, ನಿಜವಾದ ಮಾನವೀಯ ಕಾಳಜಿಗಳನ್ನುಳ್ಳ ಮನುಷ್ಯರನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಗೋರಾ ಅವರು ೧೯೪೦ರಲ್ಲಿ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರು. ಪ್ರೊ. ಗೋರಾ ಮತ್ತು ಸರಸ್ವತಿಗೋರಾ ಇಬ್ಬರೂ ನಾಸ್ತಿಕ ಕೇಂದ್ರದ ಈ ನಿಲುವಿಗೆ ತಮ್ಮನ್ನು ತಾವು ಒಪ್ಪಿಸಿಕೊಂಡು ಬದುಕುವ ಸಂಕಲ್ಪವನ್ನು ಮಾಡಿದ್ದಲ್ಲದೆ, ಮಹಾತ್ಮಾಗಾಂಧಿಯವರ ಜತೆಗೆ ಭಾರತೀಯ ಸ್ವಾತಂತ್ರ  ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಗೋರಾ ಅವರ ತಾತ್ವಿಕ ನಿಲುವುಗಳು ಬೇರೆಯಾದರೂ ಮಹಾತ್ಮಾಗಾಂಧಿಯವರು ಗೋರಾ ಅವರನ್ನು ತುಂಬ ಇಷ್ಟಪಡುತ್ತಿದ್ದರು. ಅಪ್ಪಟ ಆಸ್ತಿಕರಾದ ಗಾಂಧಿಯವರು ಒಮ್ಮೆ ಗೋರಾ ಅವರಿಗೆ ಹೇಳಿದರು. “ನನ್ನ ಆಸ್ತಿಕತೆಯೆ ಸರಿಯಾದುದೆಂದಾಗಲಿ, ನಿಮ್ಮನಾಸ್ತಿಕತೆ ತಪ್ಪಾದುದೆಂದಾಗಲೀ ನಾನು ಹೇಳಲಾರೆ. ನಾವು ಮೂಲತಃ ಸತ್ಯದ ಅನ್ವೇಷಕರು. ಯಾವುದೇ ಒಂದು ವಿಧಾನ ತಪ್ಪೆಂದು ಮನವರಿಕೆಯಾದಾಗ ಖಂಡಿತವಾಗಿಯೂ ನಾವು ಅದನ್ನು ತಿದ್ದಿಕೊಳ್ಳುವಂಥವರು. ಎಲ್ಲಿಯವರೆಗೆ ನಮ್ಮದೇ ಸರಿ ಎಂದು ನಾವು ಪಟ್ಟುಹಿಡಿದು ಸಾಧಿಸುವುದಿಲ್ಲವೋ ಅಲ್ಲಿಯವರೆಗೆ ಏನೂ ತೊಂದರೆಯಿಲ್ಲ. ನನ್ನದು ಸರಿಯೋ ನಿಮ್ಮದು ಸರಿಯೋ ಎನ್ನುವುದು ನಾವು ಮಾಡುವ ಕೆಲಸಗಳ ಪರಿಣಾಮದಿಂದ ತಾನೇ ಸ್ವಯಂ ಸ್ಪಷ್ಟವಾಗುತ್ತದೆ. ಆದ ಕಾರಣ ನೀವು ನಿಮ್ಮ ದಾರಿಯಲ್ಲಿ ಮುಂದೆ ನಡೆಯಿರಿ; ನಾನೂ ನಿಮ್ಮ ಜತೆಗೆ ಇದ್ದೇನೆ-ನನ್ನ ಮಾರ್ಗಕ್ಕೆ ನಿಮ್ಮದು ಸಂಪೂರ್ಣ ವಿರುದ್ಧವಾದರೂ”. ಗೋರಾ ದಂಪತಿಗಳು ಗಾಂಧಿಯವರ ಆದೇಶದಂತೆ ತಮ್ಮ ದಾರಿಯಲ್ಲಿ ತಾವು ಮುಂದೆ ನಡೆದರು. ಗೋರಾ ಅವರ ಜಗತ್ತು ನಾಸ್ತಿಕ ಜಗತ್ತು, ದೇವರಿಲ್ಲದ ಜಗತ್ತು. ಆದರೆ ಅದು ನೋವು, ಶೋಷಣೆ, ಅವೈಚಾರಿಕತೆಗಳಿಂದ ತುಂಬಿದ, ಮನುಷ್ಯರ ಜಗತ್ತು. ಈ ನಿಲುವಿಗೆ ದೇವರ ಪರವಾದ ಕಾಳಜಿಗಳಿಗಿಂತ, ಮನುಷ್ಯರ ಯೋಗ ಕ್ಷೇಮಪರವಾದ ಕಾಳಜಿಗಳು ಮುಖ್ಯ. ಅದಕ್ಕಾಗಿ ಅವರು ನಾಸ್ತಿಕತೆಯನ್ನು ಸಮಾಜ ಮುಖೀ ಮಾನವೀಯ ತುಡಿತವನ್ನಾಗಿ ಮಾರ್ಪಡಿಸಿದರು. ದೈವದ ಹಾಗೂ ಧರ್ಮಗಳ ಹಂಗಿಲ್ಲದೆ, ವಿಧಿ-ಕರ್ಮ-ಪುನರ್‌ಜನ್ಮಗಳ ಗೊಡವೆಯಿಲ್ಲದೆ ನಿಶ್ಚಿತವಾದ ವಾಸ್ತವ ಪ್ರಜ್ಞೆಯ ಬೆಳಕಿನಲ್ಲಿ, ಮನುಷ್ಯರ ಬದುಕನ್ನು ಸ್ಥಗಿತಗೊಳಿಸುವ ಎಲ್ಲ ಅವೈಚಾರಿಕತೆಗಳ ವಿರುದ್ಧ, ಬಡತನ-ಅಸಮಾನತೆ, ಶೋಷಣೆಗಳ ವಿರುದ್ಧ ಹೋರಾಡಬಲ್ಲ ಮನಃಸ್ಥಿತಿಯೊಂದನ್ನು ಸಾಮೂಹಿಕವಾಗಿ ಜಾಗ್ರತಗೊಳಿಸುವ ಸಲುವಾಗಿ, ಜಗತ್ತಿನ ಮೊಟ್ಟಮೊದಲು ನಾಸ್ತಿಕ ಕೇಂದ್ರವನ್ನು ಗೋರಾ ಅವರು ಸ್ಥಾಪಿಸಿದರು. ೧೯೭೫ರಲ್ಲಿ ಗೋರಾ ಅವರು ನಿಧನರಾದ ಮೇಲೆ, ಅವರ ಪತ್ನಿಯಾದ ಶ್ರೀಮತಿ ಸರಸ್ವತಿಯವರು, ಈ ಕೇಂದ್ರ ಯಾವ ಘನವಾದ ಉದ್ದೇಶಗಳಿಗಾಗಿ ಕಳೆದ  ಮೂರುವರೆದಶಕಗಳ ಕಾಲಮಾನದಲ್ಲಿ ಕ್ರಿಯಾಶೀಲವಾಗಿತ್ತೋ, ಆ ಉದ್ದೇಶಗಳಿಗನುಗುಣವಾಗಿ, ಈ ಕೇಂದ್ರದ ಕಾರ್ಯಗಳನ್ನು ಹೊಸ ಆಯಾಮಗಳಲ್ಲಿ ವಿಸ್ತರಿಸುತ್ತ ಅನೇಕ ರಾಷ್ಟ್ರೀಯ ಪ್ರಶಸ್ತಿ ಗೌರವಗಳು ಈ ಕೇಂದ್ರಕ್ಕೆ ಸಲ್ಲುವಂತೆ ಶ್ರಮಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ: ೧೯೯೯ರಂದು ಸಂದ ಜಮುನಾಲಾಲ್ ಬಜಾಜ್ ಪ್ರಶಸ್ತಿ. ೨೦೦೦ದಂದು ಸಂದ ಜೆ.ಡಿ.ಬಿರ‍್ಲಾ ಅಂತರರಾಷ್ಟ್ರೀಯ ಮಾನವೀಯ ಪ್ರಶಸ್ತಿ.

ಶ್ರೀಮತಿ ಸರಸ್ವತೀ ಗೋರಾ ಭಾರತೀಯ ಸ್ವಾತಂತ್ರ  ಚಳುವಳಿಯ ಕ್ವಿಟ್ ಇಂಡಿಯಾ ಮೂವ್‌ಮೆಂಟಿನಲ್ಲಿ ಮಾತ್ರವಲ್ಲದೆ, ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳುವಳಿಯಲ್ಲಿ ಮತ್ತು ಸ್ವಾತಂತ್ರೋತ್ತರ ಕಾಲದ ಹಲವು ಜನಪರ ಹೋರಾಟಗಳಲ್ಲಿ, ಮುಖ್ಯವಾಗಿ ಬಾನಾಮತಿಯಂಥ ಕಣ್ ಕಟ್ಟುಗಳ ವಿರುದ್ಧ, ಪವಾಡ ಹಾಗೂ ಪವಾಡ ಪುರುಷರ ವಿರುದ್ಧ ಏರ್ಪಟ್ಟ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಅಷ್ಟೆ ಅಲ್ಲ. ಹಲವು ಸಲ ಸೆರೆಮನೆಯ ವಾಸವನ್ನೂ ಅನುಭವಿಸಿದವರು. ಭಾರತೀಯ ಸ್ವಾತಂತ್ರ  ಹೋರಾಟಗಾರರಿಗೆ ಸರ್ಕಾರವು ಸಲ್ಲಿಸಲು ಮುಂದಾದ ಯಾವುದೇ ಗೌರವ ಮಾಸಿಕ ಸಂಭಾವನೆ ಇತ್ಯಾದಿ ಯಾವ ಸವಲತ್ತುಗಳನ್ನೂ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿ, ಸಮಾಜಸೇವೆಗೆ ಗಾಂಧೀಮಾರ್ಗದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಗಾಂಧಿಯವರಿಗೆ ಪ್ರಿಯವಾದ ಮಹಿಳಾ ವಿಮೋಚನೆ, ಜಾತಿವಿನಾಶ, ಮತ್ತು ಗ್ರಾಮಾಭಿವೃದ್ದಿ ಮೂಲವಾದ ಸರ್ವೋದಯದ ಕನಸುಗಳನ್ನು ಸಾಧ್ಯವಾದ ಮಟ್ಟಿಗೆ ಕಾರ್ಯರೂಪಕ್ಕೆ ಇಳಿಸಲು ಪ್ರಯತ್ನಿಸಿದವರು. ಅಂತರ್ ಜಾತೀಯ ವಿವಾಹಗಳಿಂದ ಮಾತ್ರ ಈ ದೇಶದ ಜಾತಿಭೇದದ ಕಟ್ಟುಪಾಡುಗಳನ್ನು ಮುರಿಯಬಹುದೆಂಬ ನಂಬಿಕೆಯನ್ನು ನಿಜಮಾಡಲು, ಗಾಂಧಿಯವರ ಸೇವಾಗ್ರಾಮದಲ್ಲಿ, ಸಮಾಜದ ಮೇಲು ವರ್ಗದ, ಸಂಪ್ರದಾಯ ನಿಷ್ಠ ಮನೆತನಕ್ಕೆ ಸೇರಿದ ಗೋರಾದಂಪತಿಗಳು ತಮ್ಮ ಹಿರಿಯಮಗಳು ಮನೋರಮಾಳನ್ನು ಅರ್ಜುನರಾವ್ ಎಂಬ ಹರಿಜನ ಯುವಕನಿಗೆ ಕೊಟ್ಟು ೧೯೪೮ನೆ ಮಾರ್ಚ್ ೧೩ನೆಯ ತಾರೀಖು ಮದುವೆ ಮಾಡಿದರು. ಅಂದಿನ ಭಾರತದ ಮಹಾಪ್ರಧಾನಿ ಪಂಡಿತ ಜವಾಹರಲಾಲ್ ಅವರು ಮದುಮಕ್ಕಳನ್ನು ಹರಸಿದರು. ಹಾಗೆಯೆ ಗೋರಾ, ತೆಲುಗು ಸಾಹಿತ್ಯದ ಮೊಟ್ಟಮೊದಲ ದಲಿತ ಕವಿಯಾದ ಗುರ್ರಂ ಜೋಷುವಾ ಅವರ ಮಗಳು ಹೇಮಲತಾಳನ್ನು ತಮ್ಮ ಮಗನಾದ ಲವಣಂ-ಎಂಬಾತನಿಗೆ ತಂದುಕೊಂಡು ಮದುವೆ ಮಾಡಿದರು. ಅಷ್ಟೆ ಅಲ್ಲ ಗೋರಾದಂಪತಿಗಳ ಇನ್ನುಳಿದ ಎಲ್ಲಮಕ್ಕಳ (ಅವರಿಗೆ ಒಟ್ಟು ಒಂಬತ್ತು ಮಕ್ಕಳು!) ಮದುವೆಗಳೂ ಅಂತರ್ ಜಾತೀಯ ವಿವಾಹಗಳೆ ಆಗಿವೆ ಎನ್ನುವುದು ವಿಶೇಷದ ಸಂಗತಿಯಾಗಿದೆ. ಇದರ ಜತೆಗೆ ಸರಸ್ವತೀಗೋರಾ ಅವರು ೧೯೩೦ರಷ್ಟು ಹಿಂದಿನಿಂದಲೆ ವಿಧವಾ ವಿವಾಹಗಳನ್ನು, ದೇವದಾಸಿಯರ ವಿವಾಹಗಳನ್ನೂ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ವರದಕ್ಷಿಣೆಯ ಪಿಡುಗುಗಳಿಗೆ ಬಲಿಯಾದ ಮತ್ತು ಪುರುಷರ ದಬ್ಬಾಳಿಕೆಯಿಂದ ಅಸಹಾಯಕರಾದ ಮಹಿಳೆಯರಿಗಾಗಿ ಈ ನಾಸ್ತಿಕ ಕೇಂದ್ರವು ‘ಅಭಯನಿವಾಸ’ ಎಂಬ ಮಹಿಳಾಕೇಂದ್ರವೊಂದನ್ನು ನಡೆಯಿಸಿಕೊಂಡು ಬರುತ್ತಿದೆ. ನಾಸ್ತಿಕ ಕೇಂದ್ರದ ಮಹಿಳಾ ವಿಮೋಚನೆಯ ಬಹುಮುಖ್ಯವಾದ ಕಾರ್ಯವೆಂದರೆ, ದೇವದಾಸೀ ಪದ್ಧತಿಯಮೂಲಕ, ಶತಶತಮಾನಗಳಿಂದ ಶೋಷಣೆ ಹಾಗೂ ಹೀನಾಯಕ್ಕೆ ಒಳಗಾದ ಮಹಿಳೆಯರನ್ನು, ಆ ಪದ್ಧತಿಯಿಂದ ಪಾರುಮಾಡಿ, ಅವರು ವಿವಾಹಿತರಾಗಿ, ಗೌರವಾನ್ವಿತ  ಗೃಹಸ್ಥರಂತೆ ಸಮಾಜದಲ್ಲಿ ಬದುಕುವಂತೆ ಅವಕಾಶಗಳನ್ನು ಕಲ್ಪಿಸುವುದು. ಇದು ಸುಲಭವಾದ ಕೆಲಸವಲ್ಲ. ಮೊದಲು ದೇವದಾಸಿಯರನ್ನೂ, ಅವರನ್ನು ಒಳಗೊಂಡ ಸಮಾಜದ ಮನಸ್ಸನ್ನೂ ಬದಲಾಯಿಸಬೇಕು. ಈಬಗೆಯ ಮಾನಸಿಕ ಪರಿವರ್ತನೆಯನ್ನು ತರಲು ಈ ನಾಸ್ತಿಕ ಕೇಂದ್ರದ ವಿಚಾರವಾದೀ ತರುಣರ ತಂಡವೊಂದು ಕ್ರಿಯಾಶೀಲವಾಗಿದೆ. ತತ್ಪರಿಣಾಮವಾಗಿ ೧೯೮೭ನೆ ನವೆಂಬರ್ ಒಂದನೆಯ ತಾರೀಖು, ಹೈದರಾಬಾದ್ ನಗರದ ರಾಜ ಭವನದಲ್ಲಿ ಮಾನ್ಯರಾಜ್ಯಪಾಲರಾದ ಶ್ರೀಮತಿ ಕುಮುದ ಬೆನ್ ಜೋಷಿಯವರ ಸಮುಖದಲ್ಲಿ ಇಪ್ಪತ್ತೇಳು ಮಂದಿ ಜೋಗಿತಿಯರು ಮದುವೆಮಾಡಿಕೊಂಡು ಗೃಹಸ್ಥರಾದರೆಂಬ ಸಂಗತಿ ಉಲ್ಲೇಖನಾರ್ಹವಾಗಿದೆ. ಶ್ರೀಮತಿ ಸರಸ್ವತೀ ಗೋರಾ ಅವರ ನಾಸ್ತಿಕ ಕೇಂದ್ರದ ಮತ್ತೊಂದು ಸಾಧನೆ ಎಂದರೆ, ಬಹುಕಾಲ ಸೆರೆಮನೆಯೊಳಗೆ ಇದ್ದು, ಸಮಾಜದ ಕಣ್ಣಿನಲ್ಲಿ ಅಪರಾಧಿಗಳೆಂದು ಪರಿಗಣಿತರಾದ ವ್ಯಕ್ತಿಗಳನ್ನು, ಸಮಕಾಲೀನ ಸಾಮಾಜಿಕ ಸಂದರ್ಭದಲ್ಲಿ, ಅವರೂ ಗೌರವಾನ್ವಿತ ನಾಗರಿಕರಂತೆ ಬದುಕುವ  ಅವಕಾಶಗಳನ್ನೂ ವಾತಾವರಣವನ್ನೂ ಕಲ್ಪಿಸಿ ಕೊಡುವ ಪ್ರಯತ್ನ ಹಾಗೆಯೆ ಬುಡಕಟ್ಟು ಜನಾಂಗದ ನಿರ್ಲಕ್ಷಿತ ಸಮುದಾಯವನ್ನು, ಹೊಸ ಸಾಮಾಜಿಕ ಪರಿವರ್ತನೆಯ ಕಕ್ಷೆಯೊಳಗೆ ತರುವ ಯೋಜನೆಗಳೂ ಕ್ರಿಯಾಶೀಲವಾಗಿವೆ,

ಸರಸ್ವತೀ ಗೋರಾ ಅವರ ನಾಸ್ತಿಕ ಕೇಂದ್ರವು ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ನಿರ್ದಿಷ್ಟವಾದ ಹಲವು ಯೋಜನೆಗಳನ್ನು ಹಾಕಿಕೊಂಡು ಶಿಕ್ಷಣ, ಆರೋಗ್ಯ, ಗೃಹಕೈಗಾರಿಕೆಗಳ ವಿಸ್ತರಣೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತ, ಇರುವ ಬದುಕನ್ನು ಇನ್ನಷ್ಟು ಸುಖವಾಗಿ, ಇನ್ನಷ್ಟು ಸುಂದರವಾಗಿ, ಇನ್ನಷ್ಟು ವೈಚಾರಿಕವಾಗಿ ರೂಪಿಸಲು ಪ್ರಯತ್ನ ಪಡುತ್ತಿದೆ. ಈ ನಾಸ್ತಿಕ ಕೇಂದ್ರದ ಒಂದು ಶಾಖೆಯಾಗಿರುವ ‘ಗೋರಾ ವೈಜ್ಞಾನಿಕ ಕೇಂದ್ರ’ವು ಗ್ರಾಮಾಂತರ ಪರಿಸರದ ಜನರಲ್ಲಿ ರೂಢಮೂಲವಾಗಿರುವ ಅನೇಕ ಅರ್ಥಹೀನವಾದ ಆಚಾರ-ವಿಚಾರ ಮೂಢನಂಬಿಕೆಗಳನ್ನು ಕುರಿತು ಸರಿಯಾದ ತಿಳಿವಳಿಕೆಯನ್ನು ನೀಡಿ, ಅವರಲ್ಲಿ ಧೈರ್ಯವನ್ನೂ ಆತ್ಮವಿಶ್ವಾಸವನ್ನೂ ಪ್ರಚೋದಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.

ಸಾಮಾನ್ಯವಾಗಿ ನಮಗೆ ತಿಳಿದಂತೆ, ಇರುವ ವಿವಿಧ ಸಮಾಜ ಸೇವಾಸಂಸ್ಥೆಗಳು, ಬಹುಮಟ್ಟಿಗೆ ಒಂದಲ್ಲ ಒಂದು ನಿರ್ದಿಷ್ಟ ಮತ ಧರ್ಮದ, ಪಂಥದ, ಪಕ್ಷದ, ದೈವದ, ಸಂತನ, ಸಿದ್ಧನ, ಪ್ರವಾದಿಯ ಇಲ್ಲವೆ ಪ್ರತಿಷ್ಠಿತ ವ್ಯಕ್ತಿಯ ಹೆಸರಿನಲ್ಲಿ ಸ್ಥಾಪಿತವಾದವುಗಳಾಗಿವೆ. ಆದರೆ ವಿಜಯವಾಡದ ಈ ನಾಸ್ತಿಕ ಕೇಂದ್ರವು ಜಾತಿ-ಮತ-ಧರ್ಮ-ದೈವನಿರಪೇಕ್ಷಕವಾದ, ಕೇವಲ ಮನುಷ್ಯರ ಅಸ್ತಿತ್ವವನ್ನೂ ಮತ್ತು ಅವರ ಯೋಗ ಕ್ಷೇಮವನ್ನೂ ತನ್ನ ಗುರಿಯಾಗಿರಿಸಿಕೊಂಡ ಒಂದು ಅಪರೂಪದ ಸೇವಾ ಸಂಸ್ಥೆಯಾಗಿದೆ.[1]

ಯಾವುದೂ ಸಣ್ಣದಲ್ಲ : ೨೦೦೪


[1] ಶ್ರೀಮತಿ ಸರಸ್ವತಿ ಗೋರಾ ಅವರಿಗೆ ಕರ್ನಾಟಕ ಸರ್ಕಾರವು ೨೦೦೨ನೆ ಸಾಲಿನ ರಾಷ್ಟ್ರೀಯ ಪ್ರಶಸ್ತಿಯಾದ ‘ಬಸವಪುರಸ್ಕಾರ’ವನ್ನು ನೀಡಿ ಗೌರವಿಸಿದೆ.