ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

“ವರಗಳನ್ನು ಕೊಡುವ ಮಹಾಮತೆಯಾದ ಸರಸ್ವತಿಯೇ, ನಿನಗೆ ನಮಸ್ಕಾರ. ವಿದ್ಯೆಯನ್ನು ಕಲಿಯಲು ಪ್ರಾರಂಭಿಸಿದ್ದೇನೆ. ಅದು ನನಗೆ ಸಿದ್ಧಿಸುವಂತೆ ಮಾಡು”- ಎಂದು ಭಕ್ತಿಯಿಂದ ಶಾರದಾ ಪೂಜೆ ಮಾಡಿ, ಕೈಮುಗಿದು ಬೇಡಿಕೊಳ್ಳುತ್ತೇವೆ. ಶಾರದೆ ಎಂಬುದು ಸರಸ್ವತಿಯ ಇನ್ನೊಂದು ಹೆಸರು.

ಸರಸ್ವತಿಯು ವಿದ್ಯಾದೇವತೆ ಮಾತ್ರವೇ ಅಲ್ಲ, ಮಾತಿಗೂ ಮತ್ತು ಸಂಗೀತಕ್ಕೂ ಆಕೆಯೇ ದೇವತೆ. ಅಂತೆಯೇ ವಾಗ್ದೇವಿ, ವಾಣಿ, ಭಾರತಿ, ಭಾಷಾದೇವಿ, ಬ್ರಾಹ್ಮೀ – ಈ ಎಲ್ಲವೂ ಸರಸ್ವತಿಯ ಹೆಸರುಗಳೇ.

ಬ್ರಹ್ಮನ ರಾಣಿ

ಸರಸ್ವತಿಯು ಬ್ರಹ್ಮನ ರಾಣಿಯಾದುದು ಹೇಗೆ? ಇದಕ್ಕೆ ‘ದುರ್ಗಾ ಸಪ್ತಶತಿ’ ಎಂಬ ಪುರಾಣ ಗ್ರಂಥದಲ್ಲಿ ಒಂದು ಕಥೆ ಇದೆ.

ಸೃಷ್ಟಿಗಿಂತಲೂ ಮೊದಲು ಎಲ್ಲೆಲ್ಲೂ ನೀರು ಮಾತ್ರವೇ ತುಂಬಿಕೊಂಡಿತ್ತು. ಭೂಮಿ – ಸ್ವರ್ಗವೇ ಮೊದಲಾದ ಲೋಕಗಳಾಗಲಿ, ದೇವತೆಗಳು – ಮನುಷ್ಯರು ಮೊದಲಾದ ಜೀವಿಗಳಾಗಲಿ, ಪ್ರಾಣಿಗಳಾಗಲಿ ಇರಲಿಲ್ಲ. ಜಗದೊಡೆಯನಾದ ಭಗವಂತನು ನಿದ್ರಿಸುತ್ತಿದ್ದನು. ಅವನಲ್ಲಿ ಒಂದು ಶಕ್ತಿ ಅಡಗಿತ್ತು. ಅದು ಸೃಷ್ಟಿ ಶಕ್ತಿ, ಅದನ್ನು ದೇವೀಶಕ್ತಿ ಎಂದು ಕರೆಯುತ್ತಾರೆ. ಭಗವಂತನ ಈ ದೇವೀಶಕ್ತಿಯನ್ನೇ ಭಗವತೀ ಮಹಾಲಕ್ಷ್ಮಿಯೆನ್ನುತ್ತೇವೆ. ಭಗವತಿಯು ಪ್ರಪಂಚವನ್ನು ಸೃಷ್ಟಿಸಬೇಕೆಂದು ನಿರ್ಧರಿಸಿಕೊಂಡಳು.

ಭಗವತೀದೇವಿಯು ತನ್ನ ಅಂಶಗಳಿಂದ ಮೂರು ರೂಪಗಳನ್ನು ರಚಿಸಿಕೊಂಡಳು. ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ – ಇವರೇ ಆ ಮೂವರು ದೇವಿಯರು. ಮಹಾಸರಸ್ವತಿಯು ಸತ್ವಗುಣದಿಂದ ಮೂಡಿದ ಮಾತೆ. ಆಕೆಯು ಚಂದ್ರನಂತೆ ಬಿಳಿಯ ಬಣ್ಣವುಳ್ಳವಳು. ತನ್ನ ನಾಲ್ಕು ಕೈಗಳಲ್ಲೂ ಕ್ರಮವಾಗಿ ಜಪಮಾಲೆ, ಅಂಕುಶ, ವೀಣೆ ಮತ್ತು ಪುಸ್ತಕಗಳನ್ನು ಹಿಡಿದಳು. ಮಹಾಲಕ್ಷ್ಮಿಯು ಆಕೆಗೆ ಮಹಾವಿದ್ಯಾ, ಮಹಾವಾಣಿ, ಭಾರತಿ, ವಾಕ್‌, ಸರಸ್ವತಿ, ಆರ್ಯಾ, ಬ್ರಾಹ್ಮೀ, ಕಾಮಧೇನು, ವೇದಗರ್ಭಾಧೀಶ್ವರಿ ಎಂಬ ಹೆಸರುಗಳನ್ನು ಕೊಟ್ಟಳು.

ಈ ಮೂವರು ಮಾತೆಯರೂ ಒಂದೊಂದು ಸ್ತ್ರೀ ಪುರುಷರ ಜೋಡಿಯನ್ನು ಸೃಷ್ಟಿಸಿದರು. ಅಂದರೆ ಮಹಾಲಕ್ಷ್ಮಿಯು ತನ್ನ ಎರಡು ಅಂಶಗಳಾಗಿ ಬ್ರಹ್ಮಲಕ್ಷ್ಮಿಯರನ್ನೂ, ಮಹಾಕಾಳಿಯು ಶಂಕರ-ಸರಸ್ವತಿಯರನ್ನೂ, ಮಹಾಸರಸ್ವತಿಯು ವಿಷ್ಣು-ಗೌರಿಯರನ್ನೂ ಸೃಷ್ಟಿಸಿದರು. ಆಗ ಭಗವತೀ ಮಹಾಲಕ್ಷ್ಮಿಯು ಹೀಗೆ ಆಜ್ಞೆ ಮಾಡಿದಳು.

-“ಪುರುಷ ದೇವತೆಗಳೇ, ನೀವು ತ್ರಿಮೂರ್ತಿಗಳು. ಬ್ರಹ್ಮನು ಈ ಸರಸ್ವತಿಯನ್ನು ಪತ್ನಿಯನ್ನಾಗಿ ಪಡೆದು, ಆಕೆಯ ಸಹಾಯದಿಂದ ಬ್ರಹ್ಮಾಂಡ ಲೋಕಗಳನ್ನೂ ಜೀವಿಗಳನ್ನೂ ರಚಿಸಿ ಸೃಷ್ಟಿಕರ್ತನಾಗಲಿ. ವಿಷ್ಣು ತನ್ನ ಪತ್ನಿಯಾದ ಲಕ್ಷ್ಮಿಯೊಡಗೂಡಿ ಲೋಕಗಳನ್ನು ಪಾಲಿಸಲಿ. ಶಂಕರನು ಗೌರಿಯನ್ನು ಪತ್ನಿಯನ್ನಾಗಿ ಪಡೆದುಕೊಂಡು ಅಧರ್ಮಿಗಳನ್ನು ನಾಶ ಮಾಡುತ್ತ ಲಯಕರ್ತನಾಗಿರಲಿ.”

ಹೀಗೆ ಸರಸ್ವತಿಯು ಬ್ರಹ್ಮನ ರಾಣಿಯಾದಳು. ಆಕೆಯ ಸಹಾಯದಿಂದ ಬ್ರಹ್ಮನು ಲೋಕಗಳನ್ನೂ ಜೀವಿಗಳನ್ನೂ ಸೃಷ್ಟಿಸುತ್ತಾನೆ. ಬ್ರಹ್ಮನ ಸೃಷ್ಟಿಗೆ ಆಕೆಯೇ ಶಕ್ತಿಯಾದುದರಿಂದ ಆಕೆಗೆ ಬ್ರಾಹ್ಮೀ ಎಂದು ಹೆಸರು. ದೇವತೆಗಳಿಂದ ಮೊದಲುಗೊಂಡು ಮನುಷ್ಯರವರೆಗೆ ಎಲ್ಲರಿಗೂ ಮಾತು, ವಿದ್ಯೆ ಮತ್ತು ಬುದ್ಧಿಯನ್ನು ಕೊಡುವ ದೇವತೆಯಾಗಿರುವುದರಿಂದಲೇ ಈಕೆಯನ್ನು  ವಾಣೀ, ವಾಗ್ವೇವಿ; ಮಹಾವಿದ್ಯಾಧೀಶ್ವರಿ ಎನ್ನುತ್ತೇವೆ. ತನ್ನನ್ನು ಆರಾಧಿಸಿದವರಿಗೆ ಜಗದಂಬೆಯಾದ ಸರಸ್ವತಿಯು ಸರ್ವಜ್ಞತ್ವವನ್ನು, ಅಂದರೆ ಜ್ಞಾನವನ್ನು ಅನುಗ್ರಹಿಸುತ್ತಾಳೆ.

ಯುಗಾಂತರಗಳಲ್ಲಿ ಪ್ರಳಯವಾಗಿ ಲೋಕಗಳೆಲ್ಲ ಕಣ್ಮರೆಯಾದಾಗ ಈಕೆಯು ಬ್ರಹ್ಮನಲ್ಲಿ ಅಡಗಿರುತ್ತಾಳೆ. ಪುನಃ ಬ್ರಹ್ಮನು ಸೃಷ್ಟಿಸಲು ಪ್ರಾರಂಭಿಸುವಾಗ ಈಕೆಯು ಆತನ ಬಾಯಿಂದ ಹೊರಬರುತ್ತಾಳೆ.

ವಾಗ್ದೇವಿ

ಬ್ರಹ್ಮನ ಕೆಲಸವೆಂದರೆ ಲೋಕಗಳನ್ನೂ ಜೀವಿಗಳನ್ನೂ ಸೃಷ್ಟಿಸುವುದು. ಆತನು ಸ್ವರ್ಗಲೋಕದಲ್ಲಿ ದೇವತೆಗಳನ್ನು ಸೃಷ್ಟಿಸಿದನು. ಅಂತರಿಕ್ಷಲೋಕದಲ್ಲಿ ಯಕ್ಷರು, ಕಿನ್ನರರು, ವಿದ್ಯಾಧರರೇ ಮೊದಲಾದವರನ್ನು ಸೃಷ್ಟಿಸಿದನು. ಅಂತೆಯೇ ಭೂಲೋಕದಲ್ಲಿ ಮಾನವರನ್ನು ಸೃಷ್ಟಿಸಿದನು. ಆದರೆ ಮಾತನಾಡುವ ಶಕ್ತಿಯಿಲ್ಲದೆ ಮೂಕರಾಗಿ ಬಾಳುವುದು ಸಾಧ್ಯವೆ? ಲೋಕಗಳಲ್ಲಿ ಸುಖವಾಗಲಿ ಸಂತೋಷವಾಗಲಿ ನೆಲಸದೆ ಹಾಹಾಕಾರವೆದ್ದಿತು. ದೇವತೆಗಳೆಲ್ಲರೂ ಒಟ್ಟುಗೂಡಿ ದೇವೇಂದ್ರನನ್ನು ಮುಂದಿಟ್ಟುಕೊಂಡು ಬ್ರಹ್ಮನಲ್ಲಿಗೆ ಬಂದು ಮೊರೆಯಿಟ್ಟರು.

ಬ್ರಹ್ಮನಿಗೆ ಅವರು ಬಂದಿರುವ ಕಾರಣವೇನೆಂದು ಅರ್ಥವಾಯಿತು. ಆತನು ಕಣ್ಮುಚ್ಚಿ ಸರಸ್ವತಿಯನ್ನು ನೆನೆದನು. ಕೂಡಲೆ ದೇವತೆಗಳ ಎದುರಿನಲ್ಲಿ ಕಣ್ಣು ಕೋರೈಸುವಂತಹ ಅದ್ಭುತವಾದ ಪ್ರಕಾಶವೊಂದು ಮೂಡಿ ಜಗನ್ಮಾತೆಯು ಕಾಣಿಸಿಕೊಂಡಳು. ಎಲ್ಲರೂ ಭಕ್ತಿಯಿಂದ ಆಕೆಗೆ ಕೈ ಮುಗಿದರು. ದಿವ್ಯಸ್ವರೂಪಿಯಾದ ಮಾತೆಯ ಮುಖದಲ್ಲಿ ಪ್ರೀತಿಯ ಕಿರುನಗೆ ತುಳುಕುತ್ತಿತ್ತು.  ಅಭಯ ಹಸ್ತವನ್ನು ತೋರುತ್ತ “ನಿಮಗೇನು ಬೇಕೋ ಹೇಳಿರಿ” ಎಂದು ಮಾತನಾಡಿಸಿದಳು.

ದೇವತೆಗಳಿಗೆ ಬಿಗಿದಿದ್ದ ಗಂಟಲು ಸಡಿಲವಾದಂತಾಗಿ ಆಶ್ಚರ್ಯವೆನಿಸಿತು. ಎಲ್ಲರೂ ಒಮ್ಮೆಲೇ ನುಡಿದರು, “ತಾಯೇ, ನೀನು ಯಾರೆಂದು ತಿಳಿಸಿ ನಮ್ಮನ್ನು ಅನುಗ್ರಹಿಸು”. “ಪುತ್ರರೇ, ನಾನು ಈ ಲೋಕಗಳ ಸೃಷ್ಟಿಗೆ ಕಾರಣಳಾದ ಬ್ರಹ್ಮಶಕ್ತಿಯಾಗಿದ್ದೇನೆ. ಎಲ್ಲ ಜೀವಿಗಳ ವಿದ್ಯೆ, ಬುದ್ಧಿ ಮತ್ತು ಕಲೆಗಳು ನನ್ನ ಸ್ವರೂಪಗಳೇ ಆಗಿವೆ. ನನ್ನ ಅನುಗ್ರಹದಿಂದಲೇ ನೀವು ಮಾತನಾಡುತ್ತಿರುವಿರಿ.”

“ವರಗಳನ್ನು ಕೊಡುವ ದೇವಿಯೇ, ಜೀವಿಗಳೆಲ್ಲರ ಬಾಯಲ್ಲಿ ನೀನು ವಾಗ್ದೇವಿಯಾಗಿ ನೆಲೆಸಬೇಕು. ಮಾತಿನಿಂದ ಲೋಕಗಳಲ್ಲಿ ಸುಖಶಾಂತಿಗಳು ನೆಲೆಸುವಂತೆ ಅನುಗ್ರಹಿಸಬೇಕು.”

“ಅಂತೆಯೇ ಆಗಲಿ. ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದೇನೆ. ಭಾರತಿ ಎಂಬ ಹೆಸರಿನಿಂದ ನಾನು ಸ್ವರ್ಗದ ವಾಗ್ದೇವಿಯಾಗಿಯೂ, ಇಳಾ ಎಂಬ ಹೆಸರಿನಿಂದ ಭೂಮಿಯ ವಾಗ್ದೇವಿಯಾಗಿಯೂ, ಸರಸ್ವತಿ ಎಂಬ ಹೆಸರಿನಿಂದ ಅಂತರಿಕ್ಷದ ವಾಗ್ದೇವಿಯಾಗಿಯೂ ಜೀವಿಗಳ ಬಾಯಲ್ಲಿ ನೆಲಸುತ್ತೇನೆ. ನನ್ನನ್ನು ಆರಾಧಿಸುವವರಿಗೆ ರಕ್ಷಣೆಯನ್ನೂ ಕೀರ್ತಿಜ್ಞಾನಗಳನ್ನೂ ಕೊಟ್ಟು ಲೋಕಗಳಿಗೆ ಮಂಗಳವನ್ನುಂಟು ಮಾಡುತ್ತೇನೆ!”

ಸರಸ್ವತಿಯು ಹೀಗೆ ಅನುಗ್ರಹಿಸುತ್ತಲೇ ಬ್ರಹ್ಮನ ಬಾಯಿಂದ ವೇದಘೋಷವಾಯಿತು. ಲೋಕಗಳಲ್ಲಿ ಆಕೆಯ ಸ್ತೋತ್ರಗಳು ಪ್ರತಿಧ್ವನಿಸಿದುವು.

ಸರಸ್ವತಿಯು ಸಂಗೀತದ ಸ್ವರ, ತಾಳ, ಲಯ, ರಾಗಗಳನ್ನು ನಿರ್ಮಿಸಿದಳು. ಅಂತರಿಕ್ಷದಲ್ಲಿ ಗಂಧರ್ವರೂ ಕಿನ್ನರರೇ ಮೊದಲಾದವರು ವೀಣಾ ಮೃದಂಗ ವಾದ್ಯಗಳೊಡನೆ ಹಾಡುತ್ತ ನರ್ತಿಸಿದರು.

ಭೂಲೋಕದ ರಮ್ಯವಾದ ತಪೋವನಗಳಲ್ಲಿ ಋಷಿಗಳ ಕಂಠಗಳಿಂದ ವೇದಮಂತ್ರಗಳು ಮೊಳಗಿದುವು. ಆಕೆಯ ಅನುಗ್ರಹದಿಂದಲೇ ಮಂತ್ರದ್ರಷ್ಟಾರರಾದ ಋಷಿಗಳು ವೇದಗಳನ್ನು ರಚಿಸಿದರು.

ಕಾಮರೂಪಿಣಿ: ದುಷ್ಟ ಸಂಹಾರಿಣಿ

ಒಮ್ಮೆ ಭೂಲೋಕದಲ್ಲಿ ರಾಕ್ಷಸರ ಹಾವಳಿ ಹೆಚ್ಚಾಯಿತು. ಇವರಲ್ಲಿ ಶುಂಭ ಮತ್ತು ನಿಶುಂಭ ಎಂಬ ಅಣ್ಣ ತಮ್ಮಂದಿರು ಬಹಳ ಪ್ರಸಿದ್ಧರು. ಧೂಮ್ರಲೋಚನ, ರಕ್ತಬೀಜ, ಚಂಡ, ಮುಂಡ- ಮೊದಲಾದ ಭಯಂಕರ ಪರಾಕ್ರಮಿಗಳಾದ ರಾಕ್ಷಸರೆಲ್ಲರೂ ಇವರಿಗೆ ಮಂತ್ರಿಗಳಾಗಿದ್ದರು.

ರಾಕ್ಷಸಸೈನ್ಯಗಳೊಡನೆ ಶುಂಭ ನಿಶುಂಭರು ಲೋಕಗಳನ್ನೇ ಧ್ವಂಸ ಮಾಡತೊಡಗಿದರು. ಅವರು ಪ್ರಜೆಗಳ ಮನೆ ಮಠಗಳನ್ನೂ ಊರುಗಳನ್ನೂ ಹಾಳುಗೆಡವಿ ಅನೇಕರನ್ನು ಕೊಂದರು. ತಪೋವನಗಳಿಗೆ ನುಗ್ಗಿ ಮುನಿಗಳನ್ನು ಹಿಂಸಿಸಿದರು. ಭೂಲೋಕವನ್ನು ಸ್ವಾಧೀನಪಡಿಸಿಕೊಂಡು ಇಂದ್ರನೇ ಮೊದಲಾದ ದೇವತೆಗಳನ್ನು ಹೊಡೆದೋಡಿಸಿದರು.

ದೇವತೆಗಳೆಲ್ಲರೂ ಹಿಮವತ್ಪರ್ವದಲ್ಲಿ ಸೇರಿ ಆಲೋಚಿಸಿದರು. ಅನೇಕ ವರಗಳನ್ನು ಪಡೆದುಕೊಂಡು ಬಲಗರ್ವಿಗಳಾಗಿರುವ ಶುಂಭ ನಿಶುಂಬರನ್ನು ಕೊಲ್ಲುವ ಉಪಾಯವೇನೆಂದು ಚಿಂತಿಸಿದರು. ಕೊನೆಗೆ ಅವರೆಲ್ಲರೂ ಜಗನ್ಮಾತೆಯಾದ ದುರ್ಗಿಯನ್ನು ಸ್ತುತಿಸಿದರು. ದುಷ್ಟರಾಕ್ಷಸರನ್ನು ಸಂಹರಿಸಲು ದುರ್ಗಿಯು ಸಿಂಹವನ್ನೇರಿ ಹೊರಟಳು. ಆಕೆಯ ಸಹಾಯಕ್ಕೆ ಕಾಳಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ಇಂದ್ರಾಣಿ ಮೊದಲಾದ ದೇವಿಯರೆಲ್ಲರೂ ಹರಿತವಾದ ಆಯುಧಗಳನ್ನು ಹಿಡಿದು ತಮ್ಮ ತಮ್ಮ ವಾಹನಗಳನ್ನೇರಿ ಹೊರಟರು. ಆದರೆ ಯುದ್ಧದಲ್ಲಿ ರಾಕ್ಷಸರು ತೇಜಸ್ವಿಗಳಾಗಿ ನುಗ್ಗುತ್ತಲೇ ಇದ್ದರು. ಮಾತೆಯರಿಗೆ ಯೋಚನೆಗಿಟ್ಟುಕೊಂಡಿತು. ಇದನ್ನು ಕಂಡ ಬ್ರಹ್ಮಾಣಿಯಾದ ಸರಸ್ವತಿಯು ಕೂಡಲೆ ಹಂಸವಿಮಾನವನ್ನೇರಿದಳು. ಕೈಯಲ್ಲಿ ಕಮಂಡಲವನ್ನು ಹಿಡಿದು ರಾಕ್ಷಸ ಸೈನ್ಯಗಳ ಮೇಲೆ ಮಂತ್ರಜಲವನ್ನು ಸಿಂಪಡಿಸುತ್ತ ಸಂಚರಿಸಿದಳು. ಅದರ ತುಂತುರುಗಳು ಬಿದ್ದೊಡನೆ ರಾಕ್ಷಸರ ಶಕ್ತಿ ಪರಾಕ್ರಮಗಳು ಕುಗ್ಗಿ ಹೋದವು. ಯುದ್ಧದಲ್ಲಿ ಚಂಡ, ಮುಂಡ, ಧೂಮ್ರಲೋಚನ, ರಕ್ತಬೀಜ, ನಿಶುಂಭ ಮೊದಲಾದ ರಾಕ್ಷಸರೆಲ್ಲರೂ ಸತ್ತುಬಿದ್ದರು.

ಸಾಕ್ಷಾತ್‌ ಸರಸ್ವತಿಯೇ ಅಂಬಿಕೆಯಾಗಿ ಮೈದಾಳಿ ಶುಂಭನನ್ನು ಸಂಹರಿಸಿದಳು. ಆ ಯುದ್ಧದಲ್ಲಿ ಆಕೆ ಸಿಂಹವನ್ನೇರಿದ್ದಳು. ಎಂಟು ಭುಜಗಳಿದ್ದುವು. ಎಡದ ನಾಲ್ಕು ಕೈಗಳಲ್ಲಿ ಬಾಣ, ಒನಕೆ, ಶೂಲ, ಚಕ್ರಗಳನ್ನು ಹಿಡಿದಿದ್ದಳು. ಬಲದ ನಾಲ್ಕು ಕೈಗಳಲ್ಲಿ ಶಂಖ, ಘಂಟೆ, ನೇಗಿಲು, ಬಿಲ್ಲುಗಳನ್ನು ಹಿಡಿದಿದ್ದಳು. ಹೀಗೆ ಮಾತೆಯಾದ ಸರಸ್ವತಿಯು ಸನ್ನಿವೇಶಕ್ಕೆ ತಕ್ಕಂತೆ ಬೇಕಾದ ರೂಪವನ್ನು ಧರಿಸುವುದರಿಂದಲೇ ಆಕೆಯನ್ನು ‘ಕಾಮರೂಪಿಣಿ’ ಎನ್ನುವುದು. ಸರಸ್ವತಿಯ ಅನುಗ್ರಹದಿಂದ ಲೋಕಕ್ಕೆ ರಾಕ್ಷಸರ ಬಾಧೆ ತಪ್ಪಿತು. ದೇವತೆಗಳಿಗೆ ರಾಜ್ಯ ಲಭಿಸಿತು. ಪ್ರಜೆಗಳಿಗೆ ಸುಖಶಾಂತಿಗಳು ಲಭಿಸಿದುವು.

ಸರಸ್ವತಿಯು ಶುಂಭನನ್ನು ಸಂಹಾರ ಮಾಡಿದಳು.

 ಕುಂಭಕರ್ಣನಿಗೆ ಮಾತಿನ ಪೆಟ್ಟು

 

ತ್ರೇತಾಯುಗದಲ್ಲಿ ಲಂಕಾಪಟ್ಟಣವು ರಾಕ್ಷಸರ ರಾಜಧಾನಿಯಾಗಿತ್ತು. ರಾವಣ ಮತ್ತು ಕುಂಭಕರ್ಣರು ಜನಿಸಿದ್ದು ಇಲ್ಲಿಯೇ. ಅವರು ಬಹಳ ದುಷ್ಟರು, ಕ್ರೂರಸ್ವಭಾವದವರು. ಇವರು ಅಪಾರ ಸಂಖ್ಯೆಯಲ್ಲಿ ರಾಕ್ಷಸಸೈನ್ಯವನ್ನು ಕೂಡಿಸಿಕೊಂಡು ಪ್ರಜೆಗಳ ಮೇಲೆ ಧಾಳಿ ಮಾಡುತ್ತಿದ್ದರು. ಮನುಷ್ಯ ಲೋಕದಲ್ಲಿ ಇವರನ್ನು ಎದುರಿಸುವವರೇ ಇರಲಿಲ್ಲ.

ರಾವಣ ಕುಂಭಕರ್ಣರಿಗೆ ಒಂದು ದುರಾಸೆ ಹುಟ್ಟಿತು. ತಮಗೆ ವೈರಿಗಳಾಗಿರುವ ದೇವತೆಗಳನ್ನೂ ಗೆದ್ದು, ಎಲ್ಲ ಲೋಕಗಳಿಗೂ ತಾವೇ ಒಡೆಯರಾಗಬೆಕೆಂದು ಅವರು ಬಯಸಿದರು. ದೇವತೆಗಳು ರಾಕ್ಷಸರಿಗಿಂತ ಹೆಚ್ಚು ಪರಾಕ್ರಮಿಗಳು, ಮರಣವಿಲ್ಲದ ಅಮರರು. ಅವರನ್ನು ಸೋಲಿಸಬೇಕಾದರೆ ಅವರಿಗಿಂತಲೂ ಶೂರರಾಗಬೇಕು, ಮರಣವಿಲ್ಲದಂತೆ ವರಗಳನ್ನು ಪಡೆಯಬೇಕು. ಇದಕ್ಕೆ ತಪಸ್ಸು ಮಾಡಬೇಕು. ರಾವಣ-ಕುಂಭಕರ್ಣರು ಗೋಕರ್ಣ ಕ್ಷೇತ್ರಕ್ಕೆ ಬಂದರು. ವರಗಳನ್ನು  ಪಡೆಯುವುದಕ್ಕಾಗಿ ಬ್ರಹ್ಮನನ್ನು ಧ್ಯಾನಿಸುತ್ತ ತಪಸ್ಸಿಗೆ ಕುಳಿತರು.

ಮಳೆ-ಗಾಳಿ ಬಿಸಿಲುಗಳಿಗೆ ಹಿಂಜರಿಯದೆ ರಾವಣ ಕುಂಭಕರ್ಣರು ಅನೇಕ ವರ್ಷಗಳವರೆಗೆ ತಪಸ್ಸು ಮಾಡಿದರು. ಅವರ ತಪೋಜ್ವಾಲೆಗೆ ದೇವತೆಗಳೂ ಸಹ ಹೆದರಿದರು. ತಪಸ್ಸನ್ನು ಭಂಗಪಡಿಸಲು ಅವರು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದುವು. ತಪಸ್ಸಿನ ಪ್ರಭಾವದಿಂದ ಮಳೆ ಬೆಳೆಗಳಿಲ್ಲದೆ ಲೋಕಕ್ಕೆ ಬರಗಾಲ ಬಂದಿತು . ಇದನ್ನು ನಿವಾರಣೆ ಮಾಡಬೇಕಾದರೆ ಅವರು ಕೇಳುವ ವರಗಳನ್ನು ಕೊಡದೆ ಬೇರೆ ದಾರಿಯಿಲ್ಲವೆಂದು ಬ್ರಹ್ಮನು ನಿರ್ಧರಿಸಿದನು.

ಸೃಷ್ಟಿಕರ್ತನಾದ ಬ್ರಹ್ಮನು ಮೊದಲು ರಾವಣನ ಮುಂದೆ ಕಾಣಿಸಿಕೊಂಡು, “ರಾವಣೇಶ್ವರ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಎಂದೂ ಸಾಯಬಾರದು ಎಂಬ ವರವನ್ನು ಕೇಳಬೇಡ, ಬೇರೆ ನಿನಗೆ ಬೇಕಾದ ಯಾವ ವರವನ್ನಾದರೂ ಬೇಡಿಕೋ,” ಎಂದನು. ರಾವಣನು ಕೈ ಜೋಡಿಸಿ, “ಬ್ರಹ್ಮನೇ, ನನಗೆ ಮನುಷ್ಯರ ಭಯವಿಲ್ಲ. ಆದುದರಿಂದ ದೇವತೆಗಳೇ ಮೊದಲಾದ ಉಳಿದವರಿಂದ ಮರಣವಿಲ್ಲದ ಹಾಗೆ ವರವನ್ನು ಕೊಡು,” ಎಂದನು. ಹಾಗೆಯೇ ಆಗಲಿ ಎಂದು ಬ್ರಹ್ಮನು ರಾವಣನಿಗೆ ವರವನ್ನು ಕೊಟ್ಟು ಲಂಕೆಗೆ ಕಳಿಸಿಕೊಟ್ಟನು.

ಇನ್ನು ಬ್ರಹ್ಮನು ಕುಂಭಕರ್ಣನ ಬಳಿಗೆ ಹೊರಡಲು ಸಿದ್ಧನಾದನು. ಅಷ್ಟರಲ್ಲಿ ದೇವತೆಗಳಿಗೆ ಕಳವಳವಾಯಿತು. ಕುಂಭಕರ್ಣನು ಸಾಮಾನ್ಯನಲ್ಲ, ಪರ್ವತಾಕಾರದ ರಾಕ್ಷಸ. ಅವನ ರೂಪವನ್ನು ನೋಡಿದ ಮಾತ್ರದಿಂದಲೇ ಎಷ್ಟೋ ಜನ ಎದೆಯೊಡೆದು ಸಾಯುತ್ತಿದ್ದರು. ಅವನು ಬಾಯಿ ತೆರೆದನೆಂದರೆ ಆನೆಗಾತ್ರದ ಪ್ರಾಣಿಗಳನ್ನು ಅಗಿಯದೆ ನುಂಗುವಂತಹವನು. ಇಂತಹವನಿಗೆ ವರಗಳನ್ನೂ ಕೊಟ್ಟುಬಿಟ್ಟರೆ ಏನು ಗತಿ!

ದೇವತೆಗಳೆಲ್ಲರೂ ಒಟ್ಟುಗೂಡಿ ಬ್ರಹ್ಮನಲ್ಲಿಗೆ ಬಂದರು. ಅವರ ಪರವಾಗಿ ದೇವೇಂದ್ರನು ಬ್ರಹ್ಮನಿಗೆ ಕೈಮುಗಿದು ಹೀಗೆಂದನು – “ಬ್ರಹ್ಮದೇವನೇ, ಈ ದುಷ್ಟನು ಲೋಕಗಳಿಗೆ ಕೊಡುತ್ತಿರುವ ಹಿಂಸೆ ನಿಮಗೆ ಗೊತ್ತಿದೆ. ಇವನು ಸ್ವರ್ಗದ ನಂದವನದಲ್ಲಿದ್ದ ಏಳು ಲಲಮಂದಿ ಅಪ್ಸರೆಯರನ್ನೂ ಹತ್ತು ಮಂದಿ ಕಾವಲುಗಾರರನ್ನೂ ಗುಟಕ್ಕನೆ ನುಂಗಿದನು. ಎಷ್ಟೋ ಮಂದಿ ಋಷಿಗಳನ್ನೂ ಮನುಷ್ಯರನ್ನೂ ಭಕ್ಷಿಸಿದ್ದಾನೆ. ವರಗಳನ್ನು ಪಡೆದುಕೊಳ್ಳದೆಯೇ ಇವನ ಹಿಂಸೆ ಅಪಾರವಾಗಿದೆ. ಇನ್ನು ವರಗಳನ್ನು ಪಡೆದುಕೊಂಡರೆ ಮೂರು ಲೋಕಗಳನ್ನೇ ತಿಂದುಬಿಡುತ್ತಾನೆ. ರಾವಣನಿಗೆ ಕೊಟ್ಟ ಹಾಗೆ ಇವನಿಗೆ ವರವನ್ನು ಕೊಡಬೇಡರಿ.”

ಬ್ರಹ್ಮನಿಗೆ ಯೋಚನೆಗಿಟ್ಟುಕೊಂಡಿತು. ದೇವತೆಗಳ ಮಾತೇನೋ ನಿಜ. ವರಗಳನ್ನು ಕೊಟ್ಟರೆ ಅವನಿಂದ ಲೋಕಗಳೇ ಹಾಳಾಗುತ್ತವೆ; ಕೊಡದಿದ್ದರೆ ಅವನು ತಪಸ್ಸು ಬಿಡಲಾರ. ಅವನಿಗೆ ಕೇಳಿದ್ದನ್ನು ಕೊಡಲೂ ಬೇಕು, ಲೋಕಗಳಿಗೆ ಹಿಂಸೆಯೂ ಆಗಬಾರದು. ಇದಕ್ಕೆ ಉಪಾಯವೇನು?

ಬ್ರಹ್ಮನಿಗೆ ಉಪಾಯ ಹೊಳೆಯಿತು. ಈಗ ವಾಗ್ದೇವಿಯಾದ ಸರಸ್ವತಿಯೇ ದಾರಿ ತೋರಬೇಕು. ಬ್ರಹ್ಮನು ಶುದ್ಧ ಮನಸ್ಸಿನಿಂದ ಸರಸ್ವತೀ ದೇವಿಯನ್ನು ಸ್ಮರಿಸಿದನು. ಕೂಡಲೆ ವೀಣಾ ಪುಸ್ತಕ ಧಾರಿಣಿಯಾದ ಸರಸ್ವತಿಯು ಪ್ರತ್ಯಕ್ಷಳಾಗಿ ನುಡಿದಳು,

“ಇದೋ ಬಂದಿದ್ದೇನೆ, ನನ್ನಿಂದ ಏನಾಗಬೇಕು?”

“ವಾಣಿಯೇ, ನಾನು ಕುಂಬಕರ್ಣನಿಗೆ ಮರವನ್ನು ಕೊಡಲು ಹೊರಟಿದ್ದೇನೆ. ಅವನು ಕ್ರೂರಸ್ವಭಾವದ ರಾಕ್ಷಸ. ಅವನು ಕೇಳಲುವ ವರದಿಂದ ಲೋಕಕ್ಕೆ ಹಿಂಸೆಯಾಗಬಾರದು. ಈ ಉಪಕಾರಕ್ಕಾಗಿ ನಿನ್ನ ಸಹಾಯಬೇಕಾಗಿದೆ. ವಾಗ್ದೇವಿಯಾದ ನೀನು ಅವನ ಬಾಯಲ್ಲಿ ನಿಂತು, ಯಾರಿಗೂ ಅಪಕಾರವಾಗದಂತಹ ವರವನ್ನು ಕೇಳುವ ಹಾಗೆ ಮಾತು ಹೊರಡಿಸು”

ಸರಸ್ವತೀದೇವಿಯು ಒಪ್ಪಿಕೊಂಡಳು. ಹಾಗೆಯೇ ಬ್ರಹ್ಮನು ಬರುವುದಕ್ಕಿಂತ ಮುಂಚೆಯೇ ಹೊರಟು ಕುಂಭಕರ್ಣನ ನಾಲಗೆಯಲ್ಲಿ ಅವನಿಗೆ ತಿಳಿಯದ ಹಾಗೆ ಸೇರಿಕೊಂಡಳು. ಬ್ರಹ್ಮನು ಪ್ರತ್ಯಕ್ಷನಾಗಿ “ವೀರನಾದ ಕುಂಭಕಿರ್ಣನೇ, ನಿನಗೆ ಬೇಕಾದ ವರವನ್ನು ಬೇಡಿಕೋ” ಎಂದನು. ಕೇಳಿದ್ದೇ ತಡ. ಕುಂಭಕರ್ಣನು ಒಂದೇ ಉಸಿರಿನಿಂದ, “ದೇವದೇವನೇ, ವರ್ಷಗಟ್ಟಲೆ ನಿದ್ದೆ ಮಾಡಬೇಕೆಂಬ ಬಯಕೆ ನನಗಿದೆ. ಈ ವರವನ್ನು ಅನುಗ್ರಹಿಸು” ಎಂದುಬಿಟ್ಟನು. ಬ್ರಹ್ಮನು “ತಥಾಸ್ತು” ಎಂದು ಅವನು ಕೇಳಿದಂತೆಯೇ ವರವನ್ನು ಕೊಟ್ಟು ಹೊರಟು ಹೋದನು. ಬಂದ ಕೆಲಸವಾಯಿತೆಂದು ಸರಸ್ವತಿಯೂ ಸಹ ಕುಂಭಕರ್ಣನನ್ನು ಬಿಟ್ಟುಹೋದಳು.

“ಅರರೆ, ಇದೇನು ನನ್ನ ಭ್ರಾಂತಿಯೋ ಅಥವಾ ದೇವತೆಗಳ ಮಾಯೆಯಿಂದ ನನ್ನ ಬುದ್ಧಿಗೆ ಮಂಕು ಬಡಿಯಿತೋ? ಏನೋ ಕೇಳಬೇಕೆಂದಿದ್ದವನು ಬೇರೇನೋ ಕೇಳಿಬಿಟ್ಟೆನಲ್ಲ. ಮಾಡಿದ ತಪಸ್ಸೆಲ್ಲ ವ್ಯರ್ಥವಾಯಿತೆ!” ಎಂದು ಕುಂಭಕರ್ಣನು ಪ್ರಜ್ಞೆ ಬಂದಮೇಲೆ ಕೈ ಕೈ ಹಿಸುಕಿಕೊಂಡು ಪರದಾಡಿದನು. ವ್ಯಸನಪಡುತ್ತ ಲಂಕೆಗೆ ಹಿಂತಿರುಗಿದನು.

ದೇವತೆಗಳಿಗೆ ಸಂತೋಷವಾಯಿತು. “ವಾಗ್ದೇವಿಯೇ, ಸಜ್ಜನರ ಬಾಯಲ್ಲಿ ಒಳ್ಳೆಯ ಮಾತುಗಳನ್ನಾಡಿಸುವವಳು ನೀನು. ದುಷ್ಟರು ತಮ್ಮ ಮಾತಿನಿಂದ ತಾವೇ ಹಾಳಾಗುವಂತೆ ಮಾಡುವವಳೂ ನೀನೇ” ಎಂದು ಕೊಂಡಾಡಿದರು.

ಯಾಜ್ಞವಲ್ಕ್ಯವೇದಮಾತೆ

ಹಿಂದೆ ವೈಶಂಪಾಯನರೆಂಬ ಮುನಿಗಳ ಬಳಿ ಅನೇಕ ಶಿಷ್ಯರು ವೇದಗಳನ್ನು ಕಲಿಯುತ್ತಿದ್ದರು. ಅವರೊಳಗೆ ಯಾಜ್ಞವಲ್ಕ್ಯನೆಂಬ ಶಿಷ್ಯನು ಬಹಳ ಜ್ಞಾನವಂತನಾಗಿದ್ದವನು. ಕಲಿಯುವುದರಲ್ಲಿ ಎಲ್ಲರಿಗಿಂತಲೂ ಜಾಣನಗಿದ್ದುದರಿಂದ ಇತರ ಶಿಷ್ಯರಿಗೆ ಆತನಮೇಲೆ ಅಸೂಯೆ ಹುಟ್ಟಿತು. ಒಂದು ದಿನ ಅವರೆಲ್ಲರೂ ಸಂಚು ಮಾಡಿ ಯಾಜ್ಞವಲ್ಕ್ಯನ ಮೇಲೆ ಇಲ್ಲದ ಸಲ್ಲದ ತಪ್ಪುಗಳನ್ನು ಹೊರಿಸಿ ಗುರುಗಳಿಗೆ ದೂರು ಹೇಳಿದರು. ಸಿಟ್ಟುಗೊಂಡ ಗುರುಗಳು, “ಯಾಜ್ಞವಲ್ಕ್ಯ, ನೀನು ನಮ್ಮಲ್ಲಿರಬೇಡ. ನಮ್ಮ ವೇದವಿದ್ಯೆಯನ್ನು ನಮಗೇ ಬಿಟ್ಟುಕೊಟ್ಟು ಹೊರಟು ಹೋಗು” ಎಂದರು.

ಯಾಜ್ಞವಲ್ಕ್ಯನಿಗೆ ತುಂಬ ದುಃಖವಾಯಿತು. ಆದರೆ ಆತನು ನಿರಾಶನಾಗಲಿಲ್ಲ. ‘ದೇವರನ್ನು ಒಲಿಸಿ  ನಾನೇ ಬೇರೊಂದು ವೇದವನ್ನು ರಚಿಸಬೇಕು’ ಎಂದು ನಿರ್ಧರಿಸಿಕೊಂಡನು. ಆತನು ಅನ್ನಪಾನೀಯಗಳನ್ನು ಬಿಟ್ಟು ಸೂರ್ಯನನ್ನು ಆರಾಧಿಸುತ್ತ ಬಹುಕಾಲ ತಪಸ್ಸು ಮಾಡಿದನು. ತಪಸ್ಸಿನಲ್ಲೇ ಆತನ ಶರೀರವೆಲ್ಲ ಒಣಗಿ ಸಣಕಲಾಯಿತು. ಕೊನೆಗೆ ಆತನ ಸಾಧನೆ ಫಲಿಸಿತು. ಸೂರ್ಯನು ಪ್ರತ್ಯಕ್ಷನಾಗಿ ಆತನಲ್ಲಿಗೆ ಬಂದು, “ಮಗೂ ಯಾಜ್ಞವಲ್ಕ್ಯ , ನಿನಗೇನು ಬೇಕಕು?” ಎಂದನು.

ಯಾಜ್ಞವಲ್ಕ್ಯನು “ಸ್ವಾಮಿಯೇ, ನನಗೆ ಯಜುರ್ವೇದ ಜ್ಞಾನವನ್ನು ಕೊಡು” ಎಂದನು.

“ಆಗಲಿ.  ಈಗ ಸರಸ್ವತಿಯು ವಾಗ್ದೇವತೆಯಾಗಿ ನಿನ್ನ ಶರೀರವನ್ನು ಪ್ರವೇಶಿಸುವಳು. ಬಾಯಿ ತೆರೆ” ಎಂದನು ಸೂರ್ಯ.

ನೋಡುತ್ತಿರುವಂತೆಯೇ ಕಣ್ಣು ಕೊರೆಯುವಂತಹ ಬಿಳಿಯ ಪ್ರಕಾಶವೊಂದು ಕಾಣಿಸಿಕೊಂಡಿತು . ಯಾಜ್ಞವಲ್ಕ್ಯನು ಬಾಯಿ ತೆರೆದನು. ಪ್ರಕಾಶವು ಬಾಯಿಯ ಮೂಲಕ ದೇಹದೊಳಕ್ಕೆ ಪ್ರವೇಶಿಸಿದ ಕೂಡಲೆ ಯಾಜ್ಞವಲ್ಕ್ಯನಿಗೆ ಬಹಳ ತಾಪವಾಯಿತು. ಅದನ್ನು ತಾಳಲಾರದೆ ಆತನು ಹತ್ತಿರದಲ್ಲಿದ್ದ ಸರೋವರದ ತಣ್ಣೀರಿನಲ್ಲಿ ನಿಂತನು. ಸೂರ್ಯನು ಆತನನ್ನು ಕುರಿತು,; “ಯಾಜ್ಞವಲ್ಕ್ಯ, ವೇದಗಳು ನಿನ್ನಲ್ಲಿ ನೆಲೆಸುತ್ತವೆ. ಶೀಘ್ರದಲ್ಲೇ ನೀನು ಶತಪಥವನ್ನು ರಚಿಸಿ ಮುಕ್ತಿಯನ್ನು ಪಡೆ” ಎಂದು ಆಶೀರ್ವದಿಸಿ ಹೊರಟುಹೋದನು.

‘ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದೇನೆ’

ಯಾಜ್ಞವಲ್ಕ್ಯನ ಮನಸ್ಸು ಈಗ ಶಾಂತವಾಗಿತ್ತು. ಆತನ ಮುಖದಲ್ಲಿ ದಿವ್ಯವಾದ ತೇಜಸ್ಸು ಮೂಡಿತ್ತು. ಸ್ನಾನವನ್ನು ಮುಗಿಸಿ ತಪೋವನದಲ್ಲಿರುವ ತನ್ನ ಆಶ್ರಮಕ್ಕೆ ಬಂದನು. ದೃಢನಿರ್ಧಾರದಿಂದ ಕುಳಿತು ಸರಸ್ವತಿಯನ್ನು ಪೂಜಿಸಿ, “ವಿದ್ಯಾದೇವಿಯೇ, ನೀನು ಲೋಕಕ್ಕೆ ಸಮೃದ್ಧಿಯನ್ನೂ ಬಲವನ್ನೂ ಕೊಡುವ ಮಾತೆ. ಮಾನವರಿಗೆ ನೀನೇ ಆರಾಧ್ಯದೇವತೆ.  ವೇದಮಾತೆಯಾದ ನಿನ್ನ ಉತ್ತಮ ಗುಣಗಳನ್ನು ಸ್ತುತಿಸುತ್ತೇನೆ. ನನಗೆ ಪ್ರಸನ್ನಳಾಗು” ಎಂದನು.

ಕೆಲವು ಕ್ಷಣಗಳು ಮೌನದಲ್ಲಿ ಉರುಳಿದುವು. ಯಾಜ್ಞವಲ್ಕ್ಯನು ಅಲುಗಾಡದೆ ಧ್ಯಾನದಲ್ಲಿ ಮಗ್ನನಾಗಿದ್ದನು. ಒಮ್ಮೆಲೇ ಆಕಾಶಮಂಡಲದಿಂದ ಇಳಿದು ಬಂದಂತೆ ‘ಓಂ’ ಎಂದು ಧ್ವನಿಯಾಯಿತು. ಆ ಶಬ್ದವು ಪ್ರಶಾಂತವಾದ ತಪೋವನದ ದಿಕ್ಕು ದಿಕ್ಕಿನಲ್ಲೂ ಪ್ರತಿ ಧ್ವನಿಯಾಗಿ ಮೊಳಗಿತು. ಯಾಜ್ಞವಲ್ಕ್ಯನು ಕಣ್ತೆರೆದು ನೋಡಿದನು. ಜಗದಂಬೆಯಾದ ಭಗವತಿ ಸರಸ್ವತಿಯು ಎದುರಿನಲ್ಲಿ ನಿಂತಿದ್ದಳು. ಆತನ ಕಣ್ಣುಗಳಿಂದ ಆನಂದದ ಹನಿಗಳುದುರಿದವು. ದೇವಿಯ ಪಾದಗಳಲ್ಲಿ ಆತನು ತಲೆಬಾಗಿ ನಮಸ್ಕರಿಸಿದನು. ಸರಸ್ವತಿಯು ಆತನನ್ನು ಆಶೀರ್ವದಿಸಿ – “ಮಾನ್ಯನೇ ನಿನ್ನ ಸಾಧನೆ ಮತ್ತು ಶ್ರದ್ಧೆಗಳು ಲೋಕಕ್ಕೆ ಆದರ್ಶವಾಗಿವೆ. ನೀನು ಬ್ರಹ್ಮಜ್ಞಾನಿಯಾಗುವೆ; ಸ್ವರವ್ಯಂಜನಗಳಿಂದ ಕೂಡಿದ ವೇದಾರ್ಥಗಳನ್ನು ನಾನು ನಿನ್ನ ಬಾಯಿಂದ ನುಡಿಸುತ್ತೇನೆ . ವೇದವನ್ನು ರಚಿಸಿ ನೀನು ಮಹರ್ಷಿಯಾಗು” ಎಂದಳು.

ಆಕಾರವೇ ಮೊದಲಾದುವು ಸ್ವರಗಳು. ಕಕಾರವೇ ಮೊದಲಾದುವು ವ್ಯಂಜನಗಳು. ಶಬ್ದಗಳಲ್ಲಿ ಇವನ್ನು ಸರಿಯಾಗಿ ಉಚ್ಚರಿಸದಿದ್ದರೆ ವಾಕ್ಯದ ಅರ್ಥವೇ ಕೆಡುತ್ತದೆ. ಆಗ ಭಾಷೆಯೂ ಕೆಟ್ಟಂತೆಯೇ . ಭಾಷೆಯೇ ಸರಸ್ವತಿ ಶಬ್ದಾರ್ಥಗಳು ಆಕೆಯ ಅಂಗಗಳು.

ಸರಸ್ವತಿಯ ಯಾಜ್ಞವಲ್ಕ್ಯ ಮಹರ್ಷಿಗಳ ನಾಲಗೆಯಿಂದ ಭಾಷೆಯಾಗಿ ಹರಿದಳು. ಯಾಜ್ಞವಲ್ಕ್ಯ ಮಹರ್ಷಿಗಳು ರಚಿಸಿದ ವೇದವೇ ಶುಕ್ಲಯಜುರ್ವೇದ.

ಸುದರ್ಶನನಿಗೆ ಸಾಕ್ಷಾತ್ಕಾರ

ಅಯೋಧ್ಯೆಯಲ್ಲಿ ಧ್ರುವಸಿಂಧು ಎಂಬ ರಾಜನು ಆಳುತ್ತಿದ್ದನು. ಆತನಿಗೆ ಇಬ್ಬರು ರಾಣಿಯರಿದ್ದರು. ರಾಜನಿಗೆ ಕಿರಿಯ ರಾಣಿಯ ಮೇಲೆ ಬಹಳ ಪ್ರೀತಿ . ಹೀಗಾಗಿ ಹಿರಿಯ ರಾಣಿಯನ್ನು ಉದಾಸೀನ ಮಾಡಿದ್ದನು. ಕಾಲಕ್ರಮದಲ್ಲಿ ಕಿರಿಯ ರಾಣಿಗೆ ಒಬ್ಬ ಮಗನಾದನು. ಇದರಿಂದ ರಾಜನ ಪ್ರೀತಿ ಇನ್ನೂ ಹೆಚ್ಚಿತು. ಸ್ವಲ್ಪ ಕಾಲವಾದ ಮೇಲೆ ಹಿರಿಯ ರಾಣಿಗೂ ಒಬ್ಬ ಮಗನಾದನು. ಅವನ ಹೆಸರು ಸುದರ್ಶನ.

ಸುದರ್ಶನನು ಬಹಳ ಬುದ್ಧಿವಂತನೂ ಒಳ್ಳೆಯವನೂ ಆಗಿದ್ದನು. ಕಿರಯ ರಾಣಿಗೆ ಅವನ ಮೇಲೆ ಅಸೂಯೆ ಹುಟ್ಟಿತು. ಇವನು ದೊಡ್ಡವನಾದ ಮೇಲೆ ರಾಜ್ಯದ ದೊರೆಯಾಗುತ್ತಾನೆ, ಇದನ್ನು ಹೇಗಾದರೂ ತಪ್ಪಿಸಿ ರಾಜ್ಯವನ್ನು ತನ್ನ ಮಗನಿಗೆ ದೊರಕಿಸಬೇಕೆಂದು ಅವಳು ದುರಾಲೋಚನೆ ಮಾಡಿದಳು. ಅವರ ಚಾಡಿಯ ಮಾತುಗಳನ್ನು ನಂಬಿದ ರಾಜನು ಕೋಪಗೊಂಡು ಹಿರಿಯ ರಾಣಿಯನ್ನೂ ಸುದರ್ಶನನನ್ನೂ ಕಾಡಿಗೆ ಅಟ್ಟಿಬಿಟ್ಟನು.

ಸುದರ್ಶನನು ತಾಯಿಯೊಡನೆ ದುಃಖದಿಂದ ಕಾಡಿನಲ್ಲಿ ಅಲೆಯುತ್ತಿದ್ದ. ಅವರು ಒಬ್ಬ ಋಷಿಯನ್ನು ಕಂಡರು. ಋಷಿಯು ಕನಿಕರದಿಂದ ಅವರನ್ನು ತನ್ನ ಆಶ್ರಮದಲ್ಲೇ ಇರಿಸಿಕೊಂಡನು. ಸುದರ್ಶನನು ಋಷಿಯಿಂದಲೇ ವಿದ್ಯೆಗಳನ್ನು ಕಲಿತು ಬೆಳೆಯತೊಡಗಿದನು. ಋಷಿಯು ಒಂದು ದಿನ ಅವನಿಗೆ “ಕ್ಲೀಂ” ಎಂಬುದು ಜಗನ್ಮಾತೆಯಾದ ಸರಸ್ವತಿಯ ಬೀಜ ಮಂತ್ರ. ಭಕ್ತಿಯಿಂದ ಕ್ಲೀಂ ಎಂದು ಸರಸ್ವತಿಯ ಧ್ಯಾನಮಾಡಿದರೆ, ಆ ಮಾತೆಯು ಒಲಿದು ಎಲ್ಲ ವಿದ್ಯೆಗಳನ್ನು ಅನುಗ್ರಹಿಸುತ್ತಾಳೆ” ಎಂದನು.

ಸುದರ್ಶನನಿಗೆ ಆಶ್ಚರ್ಯವಾಯಿತು. ಅಂದಿನಿಂದ ಅವನು ಭಕ್ತಿಯಿಂದ ಶಾರದಾ ಮಾತೆಯನ್ನು ಆರಾಧಿಸತೊಡಗಿದನು. ದಿನಗಳು ಕಳೆದಂತೆಲ್ಲ ಅವನು ಮಾಡಿದ ಜಪದ ಪ್ರಭಾವ ಹೆಚ್ಚಿತು. ಆ ಪುಟ್ಟ ಕಂದನಮೇಲೆ ಮಾತೆಯಾದ ಸರಸ್ವತಿದೇವಿಗೆ ವಾತ್ಸಲ್ಯವುಂಟಾಯಿತು. ಅವನಿಗೆ ಆಕೆಯು ಅಪಾರವಾದ ದೇಹಬಲವನ್ನೂ ಬುದ್ಧಿಯನ್ನೂ ಅನುಗ್ರಹಿಸಿದಳು. ಅವನು ತೇಜಸ್ವಿಯಾಗಿ ಬೆಳೆದು ರಾಜಯೋಗ್ಯವಾದ ಎಲ್ಲ ವಿದ್ಯೆಗಳಲ್ಲೂ ಪಾರಂಗತನಾದನು. ಸರಸ್ವತಿಯ ಅನುಗ್ರಹಕ್ಕೆ ಪಾತ್ರನಾದ ಸುದರ್ಶನನಿಗೆ ಇಂದ್ರನೇ ಮೊದಲಾದ ದೇವತೆಗಳೆಲ್ಲರೂ ದರ್ಶನವಿತ್ತು ಹೊಗಳಿದರು.

ಈಗ ಸುದರ್ಶನನು ಬೆಳೆದು ವೀರನೂ ಆಗಿದ್ದನು. ಅವನ ಕೀರ್ತಿ ಎಲ್ಲೆಲ್ಲೂ ಹರಡಿತು. ಅದನ್ನು ಕೇಳಿ ಕಾಶಿರಾಜನು ತಾನಾಗಿಯೇ ಹುಡುಕಿಕೊಂಡು ಬಂದು ತನ್ನ ಮಗಳಾದ ಶಶಿಕಲೆಯನ್ನು ಸುದರ್ಶನನಿಗೆ ಮದುವೆ ಮಾಡಿಕೊಟ್ಟನು. ಧೀರನಾದ ಸುದರ್ಶನನು ಈಗ ತನ್ನ ರಾಜ್ಯಕ್ಕೆ ಹೊರಡುವ ಯೋಚನೆ ಮಾಡಿದನು.

ಈ ವೇಳೆಗೆ ಅಯೋಧ್ಯೆಯು ಶತ್ರುರಾಜರ ವಶವಾಗಿತ್ತು. ಧ್ರುವಸಿಂಧುರಾಜನು ತನ್ನ ಕಿರಿಯ ರಾಣಿ ಮತ್ತು ಆಕೆಯ ಮಗನ ಕಾರಣದಿಂದ ರಾಜ್ಯ ಕಳೆದುಕೊಂಡು ಸುದರ್ಶನನಿಗಾಗಿ ಹುಡುಕುತ್ತಿದ್ದನು.

ಇತ್ತ ಸುದರ್ಶನನು ಅಪಾರ ಸೈನ್ಯಗಳನ್ನು ಕೂಡಿಸಿಕೊಂಡು ಶತ್ರುಗಳ ಮೇಲೆ ದಾಳಿ ಮಾಡಿದನು. ಸರಸ್ವತೀಮಾತೆಯ ಭಕ್ತನಾದ ಅವನ ಸಹಾಯಕ್ಕೆ ದೇವತೆಗಳೂ ಸಹ ಜತೆಗೂಡಿದರು. ಕೊನೆಗೆ ಶತ್ರುಗಳನ್ನು ಸಂಹರಿಸಿ ಅಯೋಧ್ಯೆಯ ಸಿಂಹಾಸನದಲ್ಲಿ ದೇವತೆಗಳು ಸುದರ್ಶನನನ್ನು ಕೂರಿಸಿ ಅಭಿಷೇಕ ಮಾಡಿ ಹೋದರು. ಸುದರ್ಶನನು ತನ್ನ ತಂದೆ ತಾಯಿಗಳನ್ನೂ ಕಿರಿಯ ರಾಣಿ ಮತ್ತು ಮಗನನ್ನೂ ಸಹ ಮನ್ನಿಸಿ ಆದರಿಸಿದನು. ತನ್ನ ರಾಜ್ಯದಲ್ಲಿ ಎಲ್ಲರೂ ಸರದ್ವತೀದೇವಿಯನ್ನು ಪೂಜಿಸುವಂತೆ ಮಾಡಿದನು.

ಕವಿತಾಭಾರತಿ

ಒಮ್ಮೆ ಇಂದ್ರನೇ ಮೊದಲಾದ ದೇವತೆಗಳೆಲ್ಲರೂ ಬ್ರಹ್ಮನ ಸಭೆಗೆ ಬಂದರು . ಪದ್ಮಾಸನದಲ್ಲಿ ಕುಳಿತಿರುವ ಚತುರ್ಮುಖನಾದ ಬ್ರಹ್ಮನ ಪಕ್ಕದಲ್ಲೇ ಆತನ ರಾಣಿಯಾದ ಸರಸ್ವತೀ ಮಾತೆಯೂ ಕುಳಿತಿದ್ದಳು. ಆಕೆಯು ತನ್ನ ನಾಲ್ಕು ಕೈಗಳಲ್ಲೂ ಕ್ರಮವಾಗಿ ಜಪಮಾಲೆ, ಅಂಕುಶ, ವೀಣೆ ಮತ್ತು ಪುಸ್ತಕಗಳನ್ನು ಹಿಡಿದಿದ್ದಳು. ಅಚ್ಚ ಬಿಳುಪಾದ ವಸ್ತ್ರಗಳನ್ನು ತೊಟ್ಟು ಶ್ವೇತಪದ್ಯದ ಅಂದರೆ ಬಿಳಿಯ ತಾವರೆಯ ವೇದಿಕೆಯಲ್ಲಿ ಕುಳಿತಿರುವ ಮಾತೆಗೆ ದೇವತೆಗಳೆಲ್ಲರೂ ಕೈ ಮುಗಿದರು. ಅವರನ್ನು ಕಂಡ ಸರಸ್ವತಿಯು, “ಮಕ್ಕಳೇ, ನಿಮ್ಮ ಕೋರಿಕೆಯೇನು?” ಎಂದು ಪ್ರಶ್ನಿಸಿದಳು.

“ಮಹಾಮಾತೆಯೇ, ನಿನ್ನ ಕೃಪೆಯಿಂದ ಅನೇಕ ಭಾಷೆಗಳು ನಿರ್ಮಾಣವಾಗಿವೆ. ಲೋಕಗಳಲ್ಲಿನ ಅನೇಕ ಪ್ರಜೆಗಳು ಆ ಭಾಷೆಗಳನ್ನು ಬಳಸುತ್ತಿದ್ದಾರೆ. ನೀನು ಅನುಗ್ರಹಿಸಿದ ಬುದ್ಧಿಶಕ್ತಿಯಿಂದ ಪ್ರಜೆಗಳು ಬದುಕಿನ ವ್ಯವಹಾರವನ್ನು ನಡೆಸುತ್ತಿದ್ದಾರೆ. ಆದರೆ ನಮಗೆ ಇಷ್ಟೇ ಸಾಲದು. ಹೃದಯದ ಭಾವನೆಗಳ ಪರಿಶುದ್ಧಿಗಾಗಿ ನಮಗೆ ಕಾವ್ಯ, ಸಂಗೀತ, ನೃತ್ಯ ಮೊದಲಾದ ಕಲೆಗಳು ಬೇಕು” ಎಂದರು ದೇವತೆಗಳು.

ಸರಸ್ವತಿಯು ನಕ್ಕಳು. ಬ್ರಹ್ಮನು ಆಕೆಯನ್ನು ಕುರಿತು, “ದೇವಿ,  ಅವರ ಕೋರಿಕೆ ನ್ಯಾಯವಾಗಿದೆ. ಹೃದಯಗಳನ್ನು ಸ್ವಚ್ಛಗೊಳಿಸಿ ಜಲದಂತೆ ಸರಸವಾಗಿಡುವವಳಾದುದರಿಂದಲೇ ನಿನಗೆ ಸರಸ್ವತಿಯೆಂಬ ಹೆಸರಿದೆ. ನೀನು ಯೋಗ್ಯನಾದ ವ್ಯಕ್ತಿಯೊಬ್ಬನ ಬಾಯಲ್ಲಿ ಕವಿತಾ ಶಕ್ತಿಯಾಗಿ ಅನುಗ್ರಹಿಸು” ಎಂದನು “ಹಾಗೆಯೇ ಆಗಲಿ” ಎಂದಳು ಶಾರದೆ.

ಕೃತಯುಗವೆಲ್ಲ ಕಳೆದರೂ ಸರಸ್ವತಿಗೆ ಯೋಗ್ಯನಾದ ವ್ಯಕ್ತಿಯೇ ಕಂಡು ಬರಲಿಲ್ಲ. ತ್ರೇತಾಯುಗ ಬಂದಿತು. ಸ್ವರ್ಗ ಲೋಕಗಳನ್ನು ಪಾತಾಳ ಲೋಕಗಳನ್ನೂ ಹುಡುಕಿಯಾದ ಮೇಲೆ ಸರಸ್ವತಿಯು ಭೂಲೋಕದ ತಪೋವನಗಳಿಗೆ ಬಂದಳು.

ವಾಲ್ಮೀಕಿಯ ಕರುಣೆಯನ್ನು ಸರಸ್ವತಿ ಮೆಚ್ಚಿದಳು.

ಅದೊಂದು ಅರಣ್ಯದ ದಾರಿ . ಒಂದು ದೊಡ್ಡ ಆಲದ ಮರದಲ್ಲಿ ಹೆಣ್ಣು-ಗಂಡು ಕ್ರೌಂಚ ಪಕ್ಷಿಗಳು ಮುದ್ದಾಗಿ ಶಬ್ದ ಮಾಡುತ್ತಿದ್ದವು. ದುಷ್ಟನಾದ ಒಬ್ಬ ಬೇಡನು ಬಾಣವನ್ನು ಬಿಟ್ಟು ಹೆಣ್ಣು ಪಕ್ಷಿಯನ್ನು ಉರುಳಿಸಿದನು. ಆಗ ಗಂಡು ಪಕ್ಷಿಯು ದುಃಖದಿಂದ ಕೆಳಗೆ ಬಿದ್ದಿರುವ ಹೆಣ್ಣು ಪಕ್ಷಿಯ ಬಳಿ ಗೋಳಾಡತೊಡಗಿತು. ಅದೇ ಸಮಯಕ್ಕೆ ಒಬ್ಬ ಮಹತ್ಮನಾದ ತಪಸ್ವಿಯು ನದಿಯಲ್ಲಿ ಸ್ನಾನಮಾಡಿ ಶಿಷ್ಯರೊಡನೆ ಬರುತ್ತ ಪಕ್ಷಿಗಳ ವ್ಯಥೆಯನ್ನು ನೋಡಿದನು. ಆತನಿಗೂ ಕರುಳು ಕರಗಿ ದುಃಖವಾಯಿತು. ಆ ಬೇಡನ ಬಗೆಗೆ ಛೀ ಅನ್ನಿಸಿತು. “ಎಲೈ ಬೇಡನೇ, ಪ್ರೀತಿಯಿಂದ ಜತೆಯಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಹೆಣ್ಣು ಪಕ್ಷಿಯನ್ನು ಕೊಂದಿದ್ದೀಯೆ. ಇದರಿಂದ ಯುಗಾಂತರಗಳು ಕಳೆದರೂ ನಿನಗೆ ಒಳ್ಳೆಯದಾಗುವುದಿಲ್ಲ” ಎನ್ನೋಣವೆಂದು ಬಾಯಿ ತೆರೆದನು ತಪಸ್ವಿ! ಇದನ್ನು ನೋಡಿದ ಸರಸ್ವತಿಯು ಮೆಚ್ಚಿದಳು. ಕೂಡಲೆ ಕವಿತಾ ಶಕ್ತಿಯಾಗಿ ಆತನ ಬಾಯೊಳಕ್ಕೆ ಪ್ರವೇಶಿಸಿದಳು. ತಪಸ್ವಿಯ ಬಾಯಿಂದ ಮಾತಿಗೆ ಬದಲಾಗಿ ಅದೇ ಅರ್ಥದ ಕವಿತೆಯು ಹೀಗೆ ಶ್ಲೋಕ ರೂಪದಲ್ಲಿ ಹೊರ ಬಂದಿತು.

ಮಾ ನಿಷಾದ ಪ್ರತಿಷ್ಠಾಂ ತ್ವ ಮಗಮಃ ಶಾಶ್ವತೀ ಸ್ಸಮಾಃ |
ಯತ್‌ ಕ್ರೌಂಚ ಮಿಥುನಾದೇಕಮವಧೀಃ ಕಾಮ ಮೋಹಿತಃ ||

(ಎಂದರೆ, ‘ಎಲೈ ಬೇಡನೆ, ಒಟ್ಟಿಗೆ ಸಂತೋಷವಾಗಿದ್ದ ಈ ಗಂಡು ಹೆಣ್ಣುಗಳಲ್ಲಿ ಒಂದನ್ನು ನೀನು ಕೊಂದೆ. ನಿನಗೆ ಬೇಗ ಸಾವು ಬರಲಿ.)

ಈ ಶ್ರೇಷ್ಠ ತಪಸ್ವಿ ಯಾರು ಗೊತ್ತೇ? ಆತನೇ ವಾಲ್ಮೀಕಿ. ಸರಸ್ವತಿಯ ಅನುಗ್ರಹದಿಂದ ಈತನು ರಾಮಾಯಣ ಕಾವ್ಯವನ್ನು ಬರೆದನು. ಸಂಸ್ಕೃತದಲ್ಲಿ ಮೊದಲಿಗೆ ಕಾವ್ಯವನ್ನು ಬರೆದು ಆದಿಕವಿಯೆನಿಸಿಕೊಂಡನು. ಆತನು ಕುಶಲವರೆಂಬ ತನ್ನ ಶಿಷ್ಯರಿಗೆ ರಾಮಾಯಣ ಹಾಡುವುದನ್ನೂ ಕಲಿಸಿದನು. ಅದರೊಡನೆ ನೃತ್ಯವನ್ನೂ ಕಲಿಸಿದನು.

ಹೀಗೆ ಭಾರತದಲ್ಲಿ ಭಾರತೀದೇವಿಯು ಕವಿತಾಶಕ್ತಿಯಾಗಿ ಅವತರಿಸಿದಳು. ವ್ಯಾಸ, ಕಾಳಿದಾಸನೇ ಮೊದಲಾದ ಲಕ್ಷಾಂತರ ಕವಿಗಳು ನಾನಾ ಭಾಷೆಗಳಲ್ಲಿ ಕಾವ್ಯಗಳನ್ನು ಬರೆದರು. ಎಲ್ಲ ಲೋಕದಲ್ಲೂ ಸಂಗೀತ, ನೃತ್ಯ, ಚಿತ್ರ, ಶಿಲ್ಪ ಮೊದಲಾದ ಕಲೆಗಳು ಅಭಿವೃದ್ಧಿಯಾದವು.

ಹೌದು, ಸಂಗೀತ, ಸಾಹಿತ್ಯಗಳು ಸರಸ್ವತೀ ಮಾತೆಯ ಎರಡು ಕಣ್ಣುಗಳಿದ್ದ ಹಾಗೆ. ಅವು ಮಾನವನು ಒಳ್ಳೆಯವನಾಗಲು ಅಗತ್ಯವಾಗಿ ಬೇಕು. “ಸಂಗೀತ ಸಾಹಿತ್ಯ ಕಲಾವಿಹೀನಃ ಸಾಕ್ಷಾತ್‌ ಪಶಃ ಪುಚ್ಛ ವಿಷಾಣ ಹೀನಃ” ಎಂಬ ಸೂಕ್ತಿಯುಂಟು. ಸಂಗೀತ ಸಾಹಿತ್ಯ ಕಲೆಗಳನ್ನರಿಯದವನು ಬಾಲ ಕೊಂಬುಗಳಿಲ್ಲದ ಪಶುವಿಗೆ ಸಮಾನನೆಂದು ಇದರ ಅರ್ಥ. ಭಕ್ತಿಗೂ ಮುಕ್ತಿಗೂ ಸಂಗೀತ ಸಾಹಿತ್ಯಗಳು ಸಹಾಯವಾಗುತ್ತವೆ. ಎಲ್ಲ ಕಲೆಗಳೂ ಸರಸ್ವತೀ ಮಾತೆಯ ರೂಪಗಳಾಗಿವೆ.

ಜ್ಞಾನದೇವತೆ

ಸರಸ್ವತಿಯು ಸತ್ವಗುಣದ ದೇವತೆ. ಆಕೆಯನ್ನು ಯಾರು ತಾನೆ ಪೂಜಿಸುವುದಿಲ್ಲ? ಕುಬೇರ, ಇಂದ್ರ, ವಿಷ್ಣು, ಶಂಕರರು ಮಾತ್ರವೆ ಅಲ್ಲ, ಬ್ರಹ್ಮನೂ ಸಹ ಜ್ಞಾನ ದೇವತೆಯಾದ ಆಕೆಯನ್ನು ಪೂಜಿಸಿದನು. ತಂಬೂರಿ ನಾರದರೇ ಮೊದಲಾದವರು ವೀಣೆ ಹಿಡಿದು ಆ ಸಂಗೀತ ದೇವತೆಯನ್ನು ಹೊಗಳಿ ಹಾಡಿದರು. ಇದು ಆಕೆಯ ಪ್ರಸಿದ್ಧವಾದ ಸ್ತೋತ್ರ.

ಯಾ ಕುಂದೇಂದು ತುಷಾರ ಹಾರ ಧವಳಾ ಯಾ ಶುಭ್ರವಸ್ತ್ರಾನ್ವಿತಾ |
ಯಾ ವೀಣಾ ವರ ದಂಡ ಮಂಡಿತ ಕರಾ ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿ ಭಿರ್ದೇವೈಸ್ಸದಾ ಪೂಜಿತಾ |
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಯೇಷ ಜಾಡ್ಯಾಪಹಾ ||

ಈ ಸ್ತೋತ್ರದಲ್ಲಿ ಸರಸ್ವತಿಯ ಸ್ವರೂಪ ಮಹತ್ವಗಳನ್ನು ಸ್ತುತಿಸಿದೆ. ಸರಸ್ವತಿಯ ಮೈ ಬಣ್ಣ ಶರತ್ಕಾಲದ ರಾತ್ರಿಯ ಚಂದ್ರನಂತೆ ಬಿಳುಪು. ಆದ್ದರಿಂದಲೇ ಆಕೆಯ ಹೆಸರು ಶಾರದೆ. ಆಕೆಯ ಕೊರಳ ಹಾರವೂ ಮಂಜಿನಂತೆ ಬಿಳುಪು. ಬಿಳಿಯ ಬಣ್ಣ ಪರಿಶುದ್ಧತೆಯ ಸಂಕೇತ ‘ಎಲ್ಲರೂ ಪರಿಶುದ್ಧವಾದ ಹೃದಯವುಳ್ಳರಾಗಿರಿ ಎಂದು ಆಕೆಯೂ ಉಪದೇಶಿಸುತ್ತಾಳೆ. ಅಂತೆಯೇ ಆಕೆಯು ತೊಟ್ಟಿರುವ ವಸ್ತ್ರಗಳೂ ಬಿಳಿಯವು. ಆಕೆಯು ಬಿಳಿಯ ತಾವರೆಯಲ್ಲಿ ಕುಳಿತಿದ್ದಾಳೆ. ತಾವರೆಯು ನೀರಿನಲ್ಲಿದ್ದರೂ ಅಂಟಿ ಮುಳುಗದೇ ತೇಲುತ್ತದೆಯಲ್ಲವೆ? ನಾವು ಹಾಗೆಯೇ ಪ್ರಪಂಚದಲ್ಲಿ ದುರಾಸೆಗಳಿಗೆ ಅಂಟಿಕೊಳ್ಳದೇ ಶುದ್ಧಮನಸ್ಸಿನವರಾಗಿರಬೇಕು. ಆಕೆಯ ಕೈಯಲ್ಲಿರುವ ವೀಣೆಯು ಸಂಗೀತದ ಸಂಕೇತ. ಮತ್ತೊಂದು ಕೈಯಲ್ಲಿ ಹಿಡಿದಿರುವ ಪುಸ್ತಕವು ವಿದ್ಯೆಯ ಸಂಕೇತ. ಪುಸ್ತಕಗಳು ಸರಸ್ವತಿಯ ಪ್ರತಿರೂಪಗಳಾದುದರಿಂದಲೇ ಅವನ್ನು ಕೊಳಕುಮಾಡದೆ ಒಪ್ಪ-ಓರಣವಾಗಿಡಬೇಕು. ಆಕೆಯ ಮೂರನೆಯ ಕೈಯಲ್ಲಿ ಜಪಸರ ಎಂದರೆ ಅಕ್ಷಮಾಲೆ ಹಿಡಿದಿದ್ದಾಳೆ. ಇದು ಸಾಧನೆಯ ಸಂಕೇತ. ಯಾರು ವಿದ್ಯೆಯನ್ನು ತಪಸ್ಸಿನಂತೆ ಭಾವಿಸಿ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾರೋ ಅವರಿಗೆ ಜ್ಞಾನ ಲಭಿಸುತ್ತದೆಂದು ಇದರ ಅಭಿಪ್ರಾಯ. ಸರಸ್ವತಿಯು ನಾಲ್ಕನೆಯ ಕೈಯಿಂದ ಅಭಯವನ್ನು ತೋರುತ್ತಾಳೆ. ಜ್ಞಾನವಂತರನ್ನು ಸದಾ ಕಾಪಾಡುವಳೆಂದು ಇದರ ಅಭಿಪ್ರಾಯ.

ಸರಸ್ವತೀದೇವಿಯ ವಾಹಸ ಹಂಸ ಹಾಗೂ ನವಿಲು. ಹಂಸವು ಹಾಲು ನೀರುಗಳ ಬೆರಕೆಯಲ್ಲಿ ಹಾಲನ್ನು ಕುಡಿದು ನೀರನ್ನು ಬಿಡುತ್ತದೆಯಂತೆ. ನಾವೂ ಹಾಗೆ ಒಳ್ಳೆಯ ಗುಣಗಳನ್ನು ಸ್ವೀಕರಿಸಿ, ಕೆಟ್ಟ ಅಭ್ಯಾಸಗಳನ್ನು ಬಿಡಬೇಕು. ಬಣ್ಣಬಣ್ಣದ ಮಯ-ಗರಿಗಳುಳ್ಳ ನವಿಲನ್ನು ನೋಡಿದ್ದೀರಲ್ಲವೇ? ಲೋಕದಲ್ಲಿ ಅನೇಕ ವಿಚಿತ್ರಗಳಿವೆ, ಬಗೆಬಗೆಯ ವೇಷ ಭಾಷೆಗಳ ಜನರಿದ್ದಾರೆ. ಎಲ್ಲವನ್ನೂ ಕಾಣುತ್ತ ಎಲ್ಲರೊಡನೆ ಸೋದರಭಾವದಿಂದ ನಡೆದುಕೊಳ್ಳಬೇಕೆಂದು ಇದರ ಅಭಿಪ್ರಾಯ.

ನವರಾತ್ರಿಸರಸ್ವತೀ ಪೂಜೆ

ಅಶ್ವಯುಜ ಶುದ್ಧ ಮೌನೌಮಿ ಬರಲೆಂದು
ಪ್ರೀತಿಯಂ ಹರಸಿದೆವು ಬಾಲಕರು ಬಂದು!

ಹೀಗೆಂದು ಬಾಲಕರೆಲ್ಲರೂ ಮನೆಮನೆಗೆ ಹೋಗಿ ಹಾಡಿ ಕುಣಿಯುವ ಹಬ್ಬ ಯಾವುದು ಗೊತ್ತೇ? ಅದು ನವರಾತ್ರಿ ಹಬ್ಬ! ದಸರಾ ಎಂದು ಅದರ ಇನ್ನೊಂದು ಹೆಸರು. ಬೊಂಬೆಗಳಿಟ್ಟು ಅಲಂಕರಿಸಿ ಪೂಜೆ ಮಾಡಿ ಪಣಿಯಾರವನ್ನು ಹಂಚುವ ಹಬ್ಬ. ಪ್ರತಿ ವರ್ಷವೂ ಅಶ್ವಯುಜ ಮಾಸದ ಪಾಡ್ಯಮಿಯಿಂದ ಮೊದಲುಗೊಂಡು ಹತ್ತು ದಿನಗಳ ಕಾಲ ವಿಜಯದಶಮಿಯವರೆಗೆ ಎಲ್ಲರೂ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದಲ್ಲಿ ಎಲ್ಲ ದೇವತೆಗಳನ್ನೂ ಪೂಜಿಸುತ್ತೇವೆ. ಈ ಹಬ್ಬಗಳ ನಡುವೆ ಸರಸ್ವತೀ ಪೂಜೆಗಾಗಿಯೇ ಒಂದು ದಿನ ಮೀಸಲಾಗಿದೆ. ಆ ದಿನ ಮನೆಯಲ್ಲಿರುವ ಪುಸ್ತಕಗಳೆಲ್ಲವನ್ನೂ ಜೋಡಿಸಿ ಸರಸ್ವತಿಯ ಚಿತ್ರವನ್ನೋ ವಿಗ್ರಹವನ್ನೋ ಇಟ್ಟು ಪೂಜಿಸುತ್ತೇವೆ. ಧೂಪದೀಪಗಳಿಂದ ಪೂಜೆ ಮಾಡಿ, “ವಿದ್ಯಾದೇವತೆಯಾದ ಸರಸ್ವತೀ ಮಾತೆಯೇ, ನಮಗೆ ವಿದ್ಯಾಬುದ್ಧಿಗಳನ್ನು ದಯಪಾಲಿಸು” ಎಂದು ಬೇಡುತ್ತೇವೆ. ವಾರದ ಪ್ರತಿ ಶುಕ್ರವಾರದಲ್ಲೂ ಸರಸ್ವತೀ ಪೂಜೆಯನ್ನು ಮಾಡುವವರುಂಟು. ಇದಿಷ್ಟೇ ಸಾಲದು, ಪ್ರತಿದಿನವೂ ವಿದ್ಯಾರ್ಥಿಗಳು ಓದುವ ಮೊದಲು “ಸರಸ್ವತೀ ನಮಸ್ತುಭ್ಯಂ” ಎಂದು ಪುಸ್ತಕಕ್ಕೆ ನಮಸ್ಕರಿಸಬೇಕು. ಸರಸ್ವತಿಯನ್ನು  ಸ್ಮರಿಸಿ ವಿದ್ಯೆಯನ್ನು ಕಲಿಯಬೇಕು. ವಿದ್ಯೆಯನ್ನು  ಕಲಿತು ಬುದ್ಧಿವಂತರಾಗುವುದೇ ಸರಸ್ವತಿಯ ನಿಜವಾದ ಪೂಜೆ.

ಸರಸ್ವತಿಯ ಪೂಜೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬೌದ್ಧರೂ ಜೈನರೂ ಸಹ ಆ ದೇವಿಯನ್ನು ಪೂಜಿಸುತ್ತಾರೆ. ವೇದಗಳಲ್ಲೂ ಪುರಾಣಗಳಲ್ಲೂ ಮಾತ್ರವಲ್ಲದೆ ಜೈನರ ಮತ್ತು ಬೌದ್ಧರ ಅನೇಕ ಗ್ರಂಥಗಳಲ್ಲಿ ಸರಸ್ವತಿಯ ಸ್ತೋತ್ರಗಳಿವೆ. ಜಪಾನ್‌, ಜಾವಾ, ಟಿಬೆಟ್‌ ದೇಶಗಳಲ್ಲೂ ಸರಸ್ವತಿಯ ಅನೇಕ ವಿಗ್ರಹಗಳು ಕಂಡು ಬಂದಿವೆ. ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ಇಡೀ ಭಾರತದ ಎಷ್ಟೋ ದೇವಾಲಯಗಳಲ್ಲಿ ಸರಸ್ವತಿಯ ಬಗೆಬಗೆಯ ವಿಗ್ರಹಗಳಿವೆ. ವೀಣಾಪಾಣಿ, ವಿದ್ಯಾದೇವಿ ,ನೃತ್ಯಸರಸ್ವತಿ ಮುಂತಾದ ಸರಸ್ವತಿಯ ಶಿಲ್ಪಗಳು ನಮ್ಮ ಕಣ್ಣುಗಳನ್ನು ಸೆಳೆಯುತ್ತವೆ.

ನದಿಯಾಗಿ ಹರಿದಳು

ದೇವತೆಗಳಿಗೂ ರಾಕ್ಷಸರಿಗೂ ಸದಾ ವೈರವಿತ್ತು. ಅವರೊಳಗೆ ಆಗಾಗ ಯುದ್ಧಗಳಾಗುತ್ತಲೇ ಇದ್ದುವು. ಇಂತಹ ಒಂದು ಯುದ್ಧದಲ್ಲಿ ರಾಕ್ಷಸರ ಕೈ ಮೇಲಾಯಿತು. ದೇವತೆಗಳು ಸೋತು ಆಯುಧಗಳೊಡನೆ ಓಡಿಹೋದರು. ರಾಕ್ಷಸರಿಗೆ ತಮ್ಮ ಆಯುಧಗಳು ಸಿಕ್ಕದಂತೆ ಮಾಡಬೇಕೆಂದು ದೇವತೆಗಳು ಅವನ್ನು ಭೂಲೋಕದಲ್ಲಿ ದಧೀಚಿಯೆಂಬ ಋಷಿಯ ಆಶ್ರಮದಲ್ಲಿಟ್ಟು ಹೊರಟುಹೋದರು.

ಎಷ್ಟು ಕಾಲ ಕಳೆದರೂ ದೇವತೆಗಳು ಹಿಂತಿರುಗಿ ಬರಲಿಲ್ಲ. ದಧೀಚಿಯು ತನ್ನ ಆಶ್ರಮವನ್ನು ಬಿಟ್ಟು ಬೇರೊಂದು ಕಡೆ ನೆಲೆಸಲು ಹೋಗಬೇಕಾಯಿತು. ಆಯುಧಗಳನ್ನು ಹೊತ್ತುಕೊಂಡು ಹೋಗಲು ಸಾಧ್ಯವೆ? ದಧೀಚಿಯು ಆಯುಧಗಳನ್ನು ತೊಳೆದು ಅದರ ಸಾರವನ್ನೆಲ್ಲ ಕುಡಿದುಬಿಟ್ಟನು.

ಹೀಗಾದ ಕೆಲವು ಕಾಲಕ್ಕೆ ಇಂದ್ರನು ದೇವತೆಗಳೊಡನೆ ದಧೀಚಿಯಲ್ಲಿಗೆ ಬಂದು ಆಯುಧಗಳನ್ನು ಕೊಡುವಂತೆ ಕೇಳಿದನು. ದಧೀಚಿ ಮುನಿಯು, “ಆಯುಧಗಳ ಸಾರವೆಲ್ಲ ನನ್ನ ಶರೀರದಲ್ಲಿ ಸೇರಿದೆ. ನಾನು ಸಾಯುವವರೆಗೆ ತಾಳಿಕೋ. ನನ್ನ ಮೂಳೆಗಳೇ ಆಯುಧಗಳಾಗುತ್ತವೆ” ಎಂದನು. ಆದರೆ ಇಂದ್ರನು ಒಪ್ಪದೆ, “ನನಗೆ ಈ ಕೂಡಲೆ ಆಯುಧಗಳು ಬೇಕು” ಎಂದನು. ಬೇರೆ ದಾರಿಯಿಲ್ಲದೆ ದಧೀಚಿಯ ಪ್ರಾಣತ್ಯಾಗ ಮಾಡಿದನು. ಆತನ ದೇಹದ ಮೂಳೆಗಳಿಂದ ಇಂದ್ರನೇ ಮೊದಲಾದವರು ಆಯುಧಗಳನ್ನು ಮಾಡಿಕೊಂಡು ರಾಕ್ಷಸರನ್ನು ಗೆದ್ದರು.

ಪಿಪ್ಪಲಾದನು ದಧೀಚಿಯ ಮಗ. ಆತನು ಬದರಿಕಾಶ್ರಮದಲ್ಲಿ ತಪಸ್ಸು ಮಾಡುತ್ತಿದ್ದನು. ಇಂದ್ರನ ಹಟದಿಂದ ತನ್ನ ತಂದೆ ಪ್ರಾಣತ್ಯಾಗ ಮಾಡಿದನೆಂದು ತಿಳಿದೊಡನೆ ಆತನಿಗೆ ದೇವತೆಗಳ ಮೇಲೆ ಬಹಳ ಕೋಪ ಬಂದಿತು. ಆತನು ಒಡನೆಯೇ ತನ್ನ ತಪಸ್ಸಿನ ಪ್ರಭಾವದಿಂದ ವಡಬಾನಲವನ್ನು ಸೃಷ್ಟಿಸಿದನು. ವಡಬಾನಲವೆಂದರೆ ನೀರಿನೊಳಗಡೆಯಲ್ಲೂ ಉರಿಯುವ ಶಕ್ತಿಯುಳ್ಳ ಬೆಂಕಿ. ಈ ಬೆಂಕಿಯ ಭಯಂಕರವಾಗಿ ಬೆಳೆದು ದೇವಲೋಕಕ್ಕೆ ನುಗ್ಗಿತು. ಅದು ದೇವತೆಗಳನ್ನೆಲ್ಲ ಸುಡತೊಡಗಿತು. ಅವರೆಲ್ಲರೂ ಭಯಗೊಂಡು ವಿಷ್ಣುವಿನೊಡನೆ ಬ್ರಹ್ಮನ ಬಳಿಗೆ ಓಡಿಬಂದರು. ಬ್ರಹ್ಮನು ವಡಬಾನಲವನ್ನೇ ಕುರಿತು, “ವಡಬಾನಲನೇ, ನೀನು ದೇವಗತೆಗಳನ್ನು ಅನುಗ್ರಹಿಸಿ ಶಾಂತನಾಗು’ ’ ಎಂದನು. ವಡಬಾನಲವು ಮನುಷ್ಯನಂತೆ ಮಾತನಾಡುತ್ತ “ನನಗೆ ಬಹಳ ಹಸಿವು ಬಾಯಾರಿಕೆಗಳಾಗಿವೆ. ಸಮುದ್ರದಲ್ಲಿ ನನ್ನನ್ನು ಬಿಟ್ಟರೆ ಅಲ್ಲಿನ ನೀರು ಕುಡಿದು ಶಾಂತವಾಗುತ್ತೇನೆ. ಆದರೆ ನನ್ನನ್ನು ಯಾರೂ ಮುಟ್ಟಲರರು. ಮುಟ್ಟಿದವರನ್ನು ಸುಟ್ಟುಬಿಡುವೆನು. ಆದುದರಿಂದ ಚಿರಕುಮಾರಿಯಾಗಿರುವ ಹೆಂಗಸು ನನ್ನನ್ನು ಸಮುದ್ರಕ್ಕೆ ಹೊತ್ತುಕೊಂಡು ಹೋಗಬೇಕಾಗುತ್ತದೆ. ಆಕೆಯನ್ನು ಮಾತ್ರ ನಾನು ಸುಡುವುದಿಲ್ಲ” ಎಂದಿತು.

ಅಂತಹ ಚಿರಕುಮಾರಿ ಯಾರು? ಚಿರಕುಮಾರಿಯೆಂದರೆ ಎಲ್ಲ ಸದ್ಗುಣಗಳಿಂದ ಕೂಡಿ ನಿಯಮ ನಿಷ್ಠಗಳಿಂದಿರುವ ಜ್ಞಾನಿಯಾದ ಹೆಣ್ಣು. ಒಬ್ಬ ಸರಸ್ವತೀ ಮಾತೆಯನ್ನು ಬಿಟ್ಟರೆ ಅಂತಹ ದೇವತೆ ಮತ್ತೊಬ್ಬರಿಲ್ಲ. ಬ್ರಹ್ಮನು ಮೊದಲುಗೊಂಡು ದೇವತೆಗಳೆಲ್ಲರೂ ಸರಸ್ವತಿಯಲ್ಲಿ ಮೊರೆಯಿಟ್ಟು ಬೇಡಿಕೊಂಡರು. “ತಾಯೇ, ಭಯಂಕರವಾದ ಈ ವಡಬಾನಲವು ಲೋಕಗಳನ್ನೇ ಸುಡುತ್ತಿದೆ. ನಿನ್ನ ಅನುಗ್ರಹದಿಂದ ಲೋಕಗಳು ಉಳಿಯಬೇಕಾಗಿದೆ. ನಿನ್ನ ಹೊರತು ಇದನ್ನು ಸಮುದ್ರಕ್ಕೆ ಕೊಂಡೊಯ್ಯಲು ಬೇರೊಬ್ಬರಿಲ್ಲ. ಕರುಣಾಮಯಿಯಾದ ನೀನು ಲೋಕಕಲ್ಯಾಣಕ್ಕಾಗಿ ಈ ಕೆಲಸವನ್ನು ಮಾಡಲೇಬೇಕು.”

ದೇವತೆಗಳ ಪ್ರಾರ್ಥನೆಗೆ ಸರಸ್ವತಿ ಒಲಿದಳು. ಆದರೂ ಆಕೆಯು ಬ್ರಹ್ಮನೊಡನೆ “ವಡಬಾನಲದ ತಾಪ ಸಹಿಸಲು ಅಸಾಧ್ಯವಾದುದು. ಮೇಲಾಗಿ ನಾನು ಭೂಮಿಯಲ್ಲಿ ಕಾಣಿಸಿಕೊಂಡಾಗ ದುಷ್ಟರೂ, ಪಾಪಿಗಳೂ ನನ್ನನ್ನು ಮುತ್ತಿ ನನ್ನ ಕುಮಾರಿಕಾ ವ್ರತಕ್ಕೆ ಭಂಗ ತರುವರು. ಇದಕ್ಕೇನು ಮಾಡಲಿ?” ಎಂದಳು.

“ಇದಕ್ಕಾಗಿ ಯೋಚಿಸಬೇಕಾಗಿಲ್ಲ. ನೀನು ನದಿಯಾಗಿ ಪ್ರವಹಿಸು. ಇದರಿಂದ ವಡಬಾನಲದ ತಾಪ ಕಡಿಮೆಯಾಗುತ್ತದೆ. ಪಾಪಿಗಳು ಎದುರಾದಾಗ ನೀನು ಗುಪ್ತವಾಗಿ ಅಡುಗುವಂತೆ ವರವನ್ನು ಕೊಡುವೆನು” ಎಂದನು ಬ್ರಹ್ಮ.ದೇವತೆಗಳೆಲ್ಲರೂ ಆನಂದದಿಂದ ಜಯಘೋಷ ಮಾಡಿದರು. ಒಂದು ಬಂಗಾರದ ಕಲಶದಲ್ಲಿ ವಡಬಾನಲವು ಅಡಗಿತು . ಮಹಾಮಾತೆಯಾದ ಸರಸ್ವತಿಯು ಅದನ್ನು ಎರಡು ಕೈಗಳಿಂದ ಎತ್ತಿ ಹಿಡಿದಳು. ತನ್ನ ಒಂದಂಶದಿಂದ ಸರಸ್ವತಿಯು ನದಿಯಾಗಿ ಹರಿದಳು.

ಸರಸ್ವತೀನದಿಯು ಭೂಲೋಕದಲ್ಲಿ ಹರಿಯಿತು. ತುಂಬಿದ ನೀರಿನಿಂದ, ತುಳುಕುವ ಅಲೆಗಳಿಂದ ಜುಳುಜುಳನೆ ಶಬ್ದ ಮಾಡುತ್ತ ಹರಿದಳು ಸರಸ್ವತಿ. ಆಕೆಯಿಂದ ಭಾರತ ಭೂಮಿ ಪವಿತ್ರವಾಯಿತು. ನದಿಯ ತೀರಪ್ರದೇಶಗಳಲ್ಲಿ ಕೇದಾರ , ಕುರುಕ್ಷೇತ್ರ ಮೊದಲಾದ ತೀರ್ಥಸ್ಥಳಗಳಾದುವು. ಪ್ರಯಾಗದ ಬಳಿ ಸರಸ್ವತೀದೇವಿಯು ಗಂಗೆ ಯಮುನೆಯರೊಡನೆ ಕಂಡಿತು. ಆದ್ದರಿಂದಲೇ ಈ ಕ್ಷೇತ್ರಕ್ಕೆ ತ್ರಿವೇಣೀ ಸಂಗಮವೆಂದು ಹೆಸರು. ಅಲ್ಲೇ ಆಕೆ ಸಮುದ್ರದಲ್ಲಿ ವಡಬಾನಲವನ್ನು ಸೇರಿದಳು.

ಸರಸ್ವತೀ ನದಿಯನ್ನು ಋಷಿಗಳು ವೇದಗಳಲ್ಲಿ ಹಾಡಿ ಹೊಗಳಿದರು. ವೇದಗಳಲ್ಲಿ ವರ್ಣಿಸಿರುವ ನದಿಗಳೆಲ್ಲೆಲ್ಲ ಸರಸ್ವತಿಯೇ ಶ್ರೇಷ್ಠವೆನಿಸಿತು. ಮಾರ್ಕಂಡೇಯ, ಮಂಕಣ, ಅಗಸ್ತ್ಯ, ವಸಿಷ್ಠ, ವಿಶ್ವಾಮಿತ್ರ ಮೊದಲಾದ ಮುನಿಗಳು ಈ ನದಿತೀರಗಳಲ್ಲೇ ನೆಲೆಸಿ ತಪಸ್ಸು ಮಾಡಿದರು. ಬ್ರಹ್ಮ, ಶಂಕರ ಮೊದಲಾದವರು ಸರಸ್ವತೀ ತೀರದಲ್ಲಿ ಅನೇಕ ಯಜ್ಞಗಳನ್ನು ಮಾಡಿದರು. ಈ ನದೀತೀರದಲ್ಲೇ ಋಷಿಮುನಿಗಳ ವೇದಘೋಷಗಳು ಮೊಳಗಿದುವು.

ಹೀಗೆ ಸರಸ್ವತಿಯು ಅನೇಕ ಭಕ್ತರಿಗೆ ಅನುಗ್ರಹ ಮಾಡಿದ ಕಥೆಗಳಿವೆ. ಒಮ್ಮೆ ಲೋಕಕ್ಕೆಲ್ಲ ಬರಗಾಲ ಬಂದಿತು. ಎಲ್ಲೆಲ್ಲೂ ನೀರು ಬತ್ತಿತು. ತಿನ್ನಲು ಆಹಾರವಿಲ್ಲ. ಕುಡಿಯಲು ನೀರಿಲ್ಲ. ಅನೇಕ ಪ್ರಾಣಿಗಳು ಪಕ್ಷಿಗಳು ಸತ್ತವು. ವೇದಗಳನ್ನು ಪಠಿಸುತ್ತಿದ್ದ ಋಷಿಗಳು ಹಸಿವು ಬಾಯಾರಿಕೆಗಳಿಂದ ತತ್ತರಿಸಿದರು. ಆಹಾರವನ್ನು ಹುಡುಕುತ್ತ ಅಲೆದರು. ಅವರಿಗೆ ವೇದಗಳು ಮರೆತು ಹೋದವು. ಸರಸ್ವತೀ ನದಿಯ ತೀರದಲ್ಲೆ ಸಾರಸ್ವತನೆಂಬ ಬಾಲಮುನಿ ಇದ್ದನು. ಅವನಿಗೂ ಯೋಚನೆಯಾಯಿತು. ಅವನೂ ತನ್ನ ಆಶ್ರಮವನ್ನು ಬಿಟ್ಟು ಹೊರಡಲು ನಿಶ್ಚಯಿಸಿ, ಸರಸ್ವತೀ ನದಿಗೆ ನಮಸ್ಕರಿಸಿ, “ತಾಯೇ ಹೋಗಿ ಬರುತ್ತೇನೆ” ಎಂದ. ಆಗ ಸರಸ್ವತಿಯು ಪ್ರತ್ಯಕ್ಷಳಾಗಿ, ‘ನೀನು ಹೋಗಬೇಡ. ನಾನು ನಿನಗೆ ಆಹಾರ ಕೊಟ್ಟು ಪೋಷಿಸುತ್ತೇನೆ. ನಿನ್ನಿಂದ ವೇದಗಳು ಉಳಿಯುತ್ತವೆ’ ಎಂದಳು. ಸಾರಸ್ವತ ಕೃತಜ್ಞತೆಯಿಂದ ಕಣ್ಣೀರಿಡುತ್ತ ಅವಳ ಪಾದಗಳಿಗೆ ನಮಸ್ಕರಿಸಿದ. ಹನ್ನೆರಡು ವರ್ಷಗಳ ಕಾಲ ಅವನನ್ನು ಸರಸ್ವತಿ ಕಾಪಾಡಿದಳು. ಅವನು ವೇದಗಳನ್ನು  ಪಠಿಸುತ್ತ ಅಭ್ಯಾಸ ಮಾಡುತ್ತಿದ್ದ. ಬರಗಾಲ ಮುಗಿಯಿತು. ಋಷಿಗಳು ಹಿಂದಿರುಗಿದರು. ಸಾರಸ್ವತನಿಂದ ಮತ್ತೆ ವೇದಗಳನ್ನು ಕಲಿತರು.

ಶ್ರೀ ಶಾರದಾಂಬಾಯೈ ನಮಃ

ಸರಸ್ವತಿಯು ವಿದ್ಯಾದೇವತೆ. ಲಕ್ಷ್ಮೀಯು ಐಶ್ವರ್ಯದ ದೇವತೆ. ಆದರೆ ವಿದ್ಯೆಯಿಲ್ಲದವನ ಬಳಿ ಐಶ್ವರ್ಯವಿದ್ದರೂ ವ್ಯರ್ಥವಲ್ಲವೆ? ಆದ್ದರಿಂದಲೇ ಸರಸ್ವತಿಯಿದ್ದ ಕಡೆಗೆ ಲಕ್ಷ್ಮಿಯೂ ಒಲಿದು ಬರುತ್ತಾಳೆ. ಅಂದರೆ ವಿದ್ಯೆಯಿಂದ ಜ್ಞಾನ ಸದ್ಗುಣಗಳ ಜತೆಗೆ ಸಂಪತ್ತು ಲಭಿಸುತ್ತದೆ. ಅಂತಹ ವಿದ್ಯೆಯ ದೇವತೆಯಾದ ಸರಸ್ವತಿಗೆ ಭಕ್ತಿಯಿಂದ ನಮಸ್ಕರಿಸಿ ಭಾರತೀಯ ಕೀರ್ತಯನ್ನು ಬೆಳಗೋಣ-ಪುರಂದರ ದಾಸರು ಹೇಳಿಕೊಟ್ಟಂತೆ ನಾವೂ ಹಾಡೋಣ.

ಅಖಿಲ ವಿದ್ಯಾಭಿಮಾನಿ – ಅಜನ ಪಟ್ಟದ ರಾಣಿ |
ಸುಖವಿತ್ತು ಪಾಲಿಸೆ – ಸುಜನ ಶಿರೋಮಣಿ |
ಕೊಡು ಬೇಗ ದಿವ್ಯಮತಿ – ಸರಸ್ವತಿ – ಕೊಡು ಬೇಗ ದಿವ್ಯಮತಿ ||
“ಶ್ರೀ ಶಾರದಾಂಭಾಯೈ ನಮಃ”