ಕಳೆದ ವರ್ಷ ಭಾರತದ ೫೦ ವರ್ಷಗಳ ಸ್ವಾತಂತ್ರೋತ್ಸವ ಆಚರಣೆಯಾಯಿತು. ಹಾಗೆಯೇ ಸರೋಜಾ ನಟರಾಜನ್ ಅವರ ಸಂಗೀತ ಸೇವೆಗೂ ಸುವರ್ಣ ಹಬ್ಬ ಕಾರಣ ಸರೋಜಾರ ಪ್ರಥಮ ಕಚೇರಿ ನಡೆದದ್ದು ೧೯೪೭ರಲ್ಲಿ.

ಸಂಗೀತ ಮತ್ತು ಶಾಸ್ತ್ರ ವಿದ್ವಾಂಸರ ಮನೆತನದಿಂದ ಬಂದ ಸರೋಜ ವಿಶ್ವವಿಖ್ಯಾತ ಗುರುವರ್ಯರಾದ ಮತ್ತೂರು ಶಂಕರಮೂರ್ತಿ, ಅರೈಕುಡಿ ರಾಮಾನುಜ ಅಯ್ಯಂಗಾರ್ ಮತ್ತು ಮುನಿಗಂಟಿ ವೆಂಕಟರಾವ್ ಕಾಕಿನಾಡ ಅವರಲ್ಲಿ ಕರ್ನಾಟಕ ಸಂಗೀತವನ್ನೂ ಹೈದರಾಬಾದಿನ ಅಂಬೆ ಡಾಸ್ ಅಪ್ಪೆ ಅವರಲ್ಲಿ ಹಿಂದುಸ್ಥಾನಿ ಸಂಗೀತವನ್ನೂ ಅಭ್ಯಾಸ ಮಾಡಿದರು. ೧೯೫೩ರಲ್ಲಿ ಆಕಾಶವಾಣಿಯ ಅಧಿಕೃತ ಗಾಯಕಿಯಾಗಿ ಆಯ್ಕೆಯಾದ ಸರೋಜಾ ಮದರಾಸು, ತಿರುಚ್ಛಿ ಕ್ಯಾಲಿಕಟ್, ವಿಜಯವಾಡ, ಹೈದರಾಬಾದ್, ದೆಹಲಿ, ಬೆಂಗಳೂರು ಕೇಂದ್ರಗಳಿಂದ ನಿರಂತರ ಕಾರ್ಯಕ್ರಮ ನೀಡಿದ್ದಾರೆ.

ಮರಾಠಿ ಅಭಂಗ್, ಪಂಚಾಜಿ ಶಬ್ದಗಳು, ಕನ್ನಡ,ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮುಂತಾದ ಪ್ರಾದೇಶಿಕ ಭಾಷೆಗಳ ಸಂಗೀತ ಕಾರ್ಯಕ್ರಮ ನೀಡುವ ಪಾಂಡಿತ್ಯ ಹೊಂದಿರುವ ಈ ಕಲಾವಿದೆ ಹಿಂದೂಸ್ಥಾನಿ ಸಂಗೀತ ಶೈಲಿಯಲ್ಲೂ ಕಚೇರಿ ನಡೆಸಿದ್ದಾರೆ. ಹಲವಾರು ಸಂಗೀತ ಪ್ರಾತ್ಯಕ್ಷಿಕೆ ಮತ್ತು ಕಾರ್ಯಗಾರಗಳು ದೇಶ ವಿದೇಶಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಸರೋಜಾರಿಗೆ ಪ್ರಖ್ಯಾತಿಯನ್ನು ತಂದು ಕೊಟ್ಟಿವೆ. ನೃತ್ಯ ಕಾರ್ಯಕ್ರಮಗಳಿಗೆ ಹಿನ್ನೆಲೆ ಸಂಗೀತ ನೀಡುವುದರ ಜೊತೆಗೆ ೧೦೦ಕ್ಕೂ ಹೆಚ್ಚು ನೃತ್ಯ ರೂಪಕಗಳಿಗೆ ಸರೋಜಾ ಸಂಗೀತ ಸಂಯೋಜಿಸಿದ್ದಾರೆ.

ಬಿ.ಬಿ.ಸಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಪ್ರಥಮ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ಕಲಾವಿದೆ ಇಂಗ್ಲೆಂಡ್‌, ಫ್ರಾನ್ಸ್‌ ಸ್ವಿರ್ಜರ್‌ಲ್ಯಾಂಡ್  ಹಾಲೆಂಡ್, ಜರ್ಮನಿ, ಅಮೆರಿಕಾ, ನೆದರ್‌ಲ್ಯಾಂಡ್ ಮುಂತಾದ ದೇಶಗಳಲ್ಲಿ ಸಂಗೀತ ಪ್ರವಾಸ ಮಾಡಿರುವ ಇವರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ೧೯೯೯-೨೦೦೦ನೇ ಸಾಲಿನ ಪ್ರಶಸ್ತಿ ಸಂದಿದೆ.