ಸುಮಾರು ನಲವತ್ತ ಮೂರು ವರ್ಷಗಳ ಹಿಂದೆ.

ಭಾರತ ಬ್ರಿಟನಿನ ಮುಷ್ಟಿಯಿಂದ ಬಿಡಿಸಿಕೊಳ್ಳಲು ಹೋರಾಡುತ್ತಿದ್ದ ಕಾಲ. ಒಬ್ಬ ಭಾರತೀಯ ಮಹಿಳೆಯನ್ನು ಸರ್ಕಾರ ಸೆರೆಮನೆಯಲ್ಲಿ ಕೂಡಿಹಾಕಿತ್ತು.

ಆಕೆಯ ಸೆರೆಮನೆವಾಸದ ಅವಧಿ ಮುಗಿಯಿತು. ಆಕೆ ಬಿಡುಗಡೆಯಾಗಬೇಕಾದ ದಿನ ಬಂದಿತು.

ಇನ್ನೊಂದು ವಾರ ತನ್ನನ್ನು ಸೆರೆಮನೆಯಲ್ಲಿಟ್ಟಿರಬೇಕು ಎಂದು ಆಕೆ ಪ್ರಾರ್ಥಿಸಿದಳು.

ಅಧಿಕಾರಿಗಳಿಗೆ ಆಶ್ಚರ್ಯವಾಯಿತು. ಕಾರಣವನ್ನು ಕೇಳಿದರು. ಆಕೆ ತಮ್ಮ ಕೊಠಡಿಯ ಮುಂದಿದ್ದ ಖಾಲಿ ಸ್ಥಳದಲ್ಲಿ ಹೂಗಿಡಗಳ ಬೀಜಗಳನ್ನು ಬಿತ್ತಿದ್ದರು. ಸಸಿಗಳು ಮೇಲೆ ಬಂದಿದ್ದವು, ಇನ್ನೇನು ಹೂವುಗಳನ್ನು ಬಿಡುವುದರಲ್ಲಿದ್ದವು. ಹೂವುಗಳನ್ನು ನೋಡದೆ ಸೆರೆಮನೆಯಿಂದ ಹೋಗಲು ಆಕೆಗೆ ಇಷ್ಟವಿರಲಿಲ್ಲ. “ಒಂದು ವಾರ ಇದ್ದು ಹೂವುಗಳನ್ನು ನೋಡಿಕೊಂಡು ಹೋಗುತ್ತೇನೆ” ಎಂದರು.

ಆ ಪುಷ್ಟಪ್ರೇಮಿ-ಶ್ರೀಮತಿ ಸರೋಜಿನಿ ನಾಯುಡು.

ದೇಶಕ್ಕಾಗಿ ಸೆರೆಮನೆಗೆ ಹೋಗುವುದು, ಸೆರೆಮನೆಯಲ್ಲಿ ಹೂಗಿಡಗಳನ್ನು ಬೆಳೆಸುವುದು, ಹೂವುಗಳನ್ನು ನೋಡಬೇಕೆಂದು ಹಂಬಲಿಸುವುದು ಆಕೆಯ ಸ್ವಭಾವಕ್ಕೆ ಸಹಜ – ಗುಲಾಬಿಗೆ ಬಣ್ಣ, ಸುವಾಸನೆಗಳು ಎಷ್ಟು ಸಹಜವೋ ಅಷ್ಟೇ ಸಹಜ.

ಐಶ್ವರ್ಯ, ಸುಖ, ಸಂಸಾರ – ಎಲ್ಲವನ್ನೂ ದೇಶಕ್ಕಾಗಿ ತ್ಯಾಗಮಾಡಿ ಸೆರೆಮನೆಗೆ ಹೋದರು ಸರೋಜಿನಿ ನಾಯುಡು. ಮುಪ್ಪಿನವರೆಗೆ, ದೇಶಕ್ಕೆ ಸ್ವಾತಂತ್ರ‍್ಯ ಬರುವವರೆಗೆ ದೇಶಕ್ಕಾಗಿ ಹೋರಾಡಿದರು. ಎಲ್ಲಿದ್ದರೂ ಸೌಂದರ್ಯವನ್ನು ಸೃಷ್ಟಿಸಿಕೊಂಡರು, ಸಂತೋಷವನ್ನು ಕಂಡುಕೊಂಡರು, ಇತರರಿಗೂ ಸಂತೋಷವನ್ನು ತಂದುಕೊಟ್ಟರು.

ಪ್ರತಿಭಾವಂತ ತಂದೆ

ಸರೋಜಿನಿ ಮೊಟ್ಟ ಮೊದಲು ಜನಕ್ಕೆ ಪರಿಚಯ ಆದದ್ದು ಅವರ ಕವನಗಳಿಂದ. ಕೇವಲ ಹದಿಮೂರನೇ ವಯಸ್ಸಿನಲ್ಲಿ ಸರೋಜಿನಿಯ ಪೂರ್ವಿಕರು ಸಂಸ್ಕೃತದಲ್ಲಿ ಉದ್ದಾಮ ಪಂಡಿತರು. ಈಕೆಯ ತಂದೆ ಅಘೋರನಾಥ ಚಟ್ಟೋಪಾಧ್ಯಾಯ ಸಹ ಸಂಸ್ಕೃತ ವಿದ್ವಾಂಸರು, ಅಲ್ಲದೆ ಪ್ರತಿಭಾವಂತ ವಿಜ್ಞಾನಿ. ಬಡತನದಲ್ಲಿ ಬೆಳೆದರು. ಇತರ ವಿದ್ಯಾರ್ಥಿಗಳಿಂದ ಪುಸ್ತಕ ಎರವಲು ತಂದು, ಬೀದಿಯ ದೀಪಗಳ ಕೆಳಗೆ ನಿಂತು ಓದಿ ಪರೀಕ್ಷೆಗಳಲ್ಲಿ ಮೇಲ್ತರಗತಿಯಲ್ಲಿ ಉತ್ತೀರ್ಣರಾಗುತ್ತಿದ್ದರು. ಲಂಡನ್, ಎಡಿನ್‌ಬರೊ ವಿಶ್ವವಿದ್ಯಾಲಯಗಳಲ್ಲಿ ಡಿ.ಎಸ್‌.ಸಿ. ಪದವಿ ಪಡೆದವರು. ( ಈ ಪದವಿ ಪಡೆದ ಮೊದಲನೆಯ ಭಾರತೀಯ ಈತ ಎಂದು ಹೇಳುತ್ತಾರೆ.) ಭಾರತಕ್ಕೆ ಅವರು ಬರುತ್ತಲೇ ಹೈದರಾಬಾದಿನಿಂದ ಆಹ್ವಾನ ಬಂದಿತು. ಅಲ್ಲಿ ಇಂಗ್ಲಿಷ್‌ಮಾಧ್ಯಮದ ಒಂದು ಶಾಲೆಯನ್ನು ಸ್ಥಾಪಿಸಿದರು. ಅನಂತರ ಹೈದರಾಬಾದ್‌ಕಾಲೇಜನ್ನು ಸ್ಥಾಪಿಸಿದರು. ಅದರ ಪ್ರಿನ್ಸಿಪಾಲರಾದರು. ಈ ಕಾಲೇಜ್‌ಇಂದು ಹೈದರಾಬಾದಿನಲ್ಲಿ ನಿಜಾಮ್‌ಕಾಲೇಜ್‌ಎಂದು ಪ್ರಸಿದ್ಧವಾಗಿದೆ. “ಅಘೋರನಾಥರು ವಿಜ್ಞಾನದ ಅಧ್ಯಯನವನ್ನು ಮುಂದುವರಿಸಿದ್ದರೆ ಭಾರತದ ಅತಿಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಎನ್ನಿಸುತ್ತಿದ್ದರು. ಅಂತಹ ಪ್ರತಿಭಾವಂತರು”. ಈ ಮಾತನ್ನು ಪ್ರಸಿದ್ಧ ವಿಜ್ಞಾನಿ ಆಚಾರ್ಯ ಪ್ರಫುಲ್ಲ ಚಂದ್ರರಾಯ್‌ಅವರೇ ಹೇಳಿದ್ದರು. ಅಘೋರನಾಥರ ಪತ್ನಿ ವರದಾಸುಂದರಿ ಬಂಗಾಳಿ ಭಾಷೆಯಲ್ಲಿ ಕವಿತೆ, ಹಾಡುಗಳನ್ನು ರಚಿಸುತ್ತಿದ್ದರು.

ಈ ಪ್ರತಿಭಾವಂತ ದಂಪತಿಗಳಿಗೆ ಹಿರಿಯ ಮಗಳಾಗಿ ಸರೋಜಿನಿ ೧೮೭೯ರ ಫೆಬ್ರವರಿ ಹದಿಮೂರರಂದು ಜನಿಸಿದರು. ಅಘೋರನಾಥರ ಮನೆಯಲ್ಲಿ ಹರ್ಷ ತುಂಬಿ ಹರಿಯುತ್ತಿತ್ತು. ಅವರು ಬಹು ಜನಪ್ರಿಯ ವ್ಯಕ್ತಿ. ತಮ್ಮ ಸಾಮಾನೆಲ್ಲ ಹರಾಜಾಗುವ ಮಟ್ಟಿಗೆ ಸಾಲಮಾಡಿ ಇತರರಿಗೆ ಸಹಾಯ ಮಾಡಿದವರು. ಸದಾ ಸಂತೋಷ ಚಿತ್ತರು. ಅವರ ಮನೆಗೆ ಬಂದು ಹೋಗುತ್ತಿದ್ದವರು ಬೇಕಾದಷ್ಟು ಮಂದಿ. ಜೀವನದಲ್ಲಿ ಉಲ್ಲಾಸವನ್ನು ಕಂಡುಕೊಳ್ಳುವ ಗುಣ ಸರೋಜಿನಿಯವರಿಗೆ ತಂದೆಯಿಂದ ಬಂದಿತ್ತು.

ಪುಟ್ಟ ಸರೋಜಿನಿ ಬಹು ಚಿಕ್ಕ ವಯಸ್ಸಿನಲ್ಲೆ ಶಾಲೆ ಸೇರಿದಳು. ತಂದೆ ತನ್ನ ಇಷ್ಟದಂತೆ ಮಗಳಿಗೆ ಇಂಗ್ಲಿಷ್‌ಭಾಷೆಯಲ್ಲಿ ಶಿಕ್ಷಣ ಕೊಡಿಸಿದರು. ಸರೋಜಿನಿ ಮಾತೃಭಾಷೆಗಿಂತ ಇಂಗ್ಲಿಷ್‌ನಲ್ಲಿ ಪಾಂಡಿತ್ಯಗಳಿಸಿದಳು. ಆಕೆ ಮದ್ರಾಸ್‌ಮೆಟ್ರಿಕ್‌ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದಳು. ಆಗ ವಯಸ್ಸು – ಹನ್ನೆರಡು !

ಕವಯಿತ್ರಿ

“ಬೆಳೆಯುವ ಪೈರಿನ ಗುಣ ಮೊಳಕೆಯಲ್ಲಿ ಕಂಡಿತು” ಎಂಬ ನಾಣ್ಣುಡಿಯಂತೆ ಈಕೆಯಲ್ಲಿ ಅಡಗಿದ್ದ ಕಾವ್ಯಧಾರೆ ಪುಟಿದೆದ್ದಿತು. ಒಮ್ಮೆ ಲೆಕ್ಕವನ್ನು ಮಾಡುತ್ತಾ ಅದು ಬಗೆಹರಿಯದೆ ಕವನ ರಚಿಸಿದಳು. ಅದೇ ಅವಳ ಮೊದಲ ಕವನ. ಅದಕ್ಕೆ “ಸರೋವರದ ರಾಣಿ” ಎಂದು ಹೆಸರಿಟ್ಟಳು. “ವಿಜ್ಞಾನದ ರಹಸ್ಯ ಅರಿಯುವ ನಮ್ಮ ತಂದೆಯವರ ಪ್ರಬಲ ಆಕಾಂಕ್ಷೆ ನನ್ನ ಹೃದಯದಲ್ಲಿ ಸೌಂದರ್ಯದ ಉಪಾಸನೆ ಆಗಿ ಪರಿವರ್ತನೆಗೊಂಡಿತು” ಎಂದು ಆಕೆ ಹೇಳಿದ್ದಾಳೆ.

ತಂದೆ ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಕಳುಹಿಸಿದರು. ವಿಜ್ಞಾನದಲ್ಲಿ ಪಾಂಡಿತ್ಯ ಪಡೆಯಲಿ ಎಂದು ಅವರ ಬಯಕೆ. ಆಗ ಹುಡುಗಿಗೆ ಹದಿನಾರು ವರ್ಷ. ಸರೋಜಿನಿ ಅಲ್ಲಿ ತನ್ನ ಅಭ್ಯಾಸವನ್ನು ಮುಂದುವರಿಸಿದಳು. ಅಲ್ಲಿಯ ಪ್ರಸಿದ್ಧ ಕವಿಗಳ, ಲೇಖಕರ ಪರಿಚಯ ಪಡೆದುಕೊಂಡಳು. ಎಡ್ಮಂಡ್‌ಗಾಸ್‌ಎಂಬಾತ ಒಬ್ಬ ಪ್ರಸಿದ್ಧ ವಿಮರ್ಶಕ. ಸರೋಜಿನಿ ತನ್ನ ಕೆಲವು ಪದ್ಯಗಳನ್ನು ಆತನ ಕೈಗೆ ಕೊಟ್ಟಳು. ಅವರು ಪದ್ಯಗಳನ್ನು ಓದಿ, ಆಕೆಗೆ ಸಲಹೆ ಕೊಟ್ಟರು: “ಇಂಗ್ಲಿಷ್‌ಪಕ್ಷಿಗಳು, ಇಂಗ್ಲೆಂಡಿನ ಹಳ್ಳಿ ಜನರನ್ನು ಚರ್ಚಿನ ಗಂಟೆಗಳು ಕರೆಯುವುದು – ಇವುಗಳ ವಿಷಯ ಬರೆಯಬೇಡಿ. ನಿಮ್ಮ ನಾಡಿನ ಬೆಟ್ಟಗಳು, ಕಾಡುಗಳು, ಗುಡಿಗಳು, ಜನರ ವಿಷಯ ಬರೆಯಿರಿ. ನಿಮ್ಮ ಕಾವ್ಯ ಪ್ರಸಿದ್ಧ ಇಂಗ್ಲಿಷ್‌ಕವನಗಳ ಅನುಕರಣವಾಗುವುದು ಬೇಡ”. ಇದಾದನಂತರ ಸರೋಜಿನಿ ಭಾರತೀಯರ ಜೀವನವನ್ನು ವಸ್ತುವನ್ನಾಗಿ ಮಾಡಿಕೊಂಡು ಬರೆಯಲು ಪ್ರಾರಂಭಿಸಿದಳು. ಅವಳ ಕವನ ಸಂಗ್ರಹಕ್ಕೆ ಎಡ್ಮಂಡ್‌ಗಾಸ್‌ಮುನ್ನುಡಿ ಬರೆದ. ಮೂರು ವರ್ಷಗಳ ನಂತರ ಸರೋಜಿನಿಯ ದೇಹಾರೋಗ್ಯ ಕೆಟ್ಟಿತು. ಆರೋಗ್ಯದ ಸಲುವಾಗಿ ಸ್ವಿಟ್ಜರ‍್ಲೆಂಡ್‌ಗೆ ಪ್ರಯಾಣ ಬೆಳೆಸಿದಳು. ಅಲ್ಲಿಯ ಕವಿಗಳ, ಕಲಾವಿದರ ಪರಿಚಯ ಪಡೆದು ೧೮೯೮ರಲ್ಲಿ ಭಾರತಕ್ಕೆ ಮರಳಿ ಬಂದಳು.

ಭಾಗ್ಯವಂತ ಗೃಹಿಣಿ

ಒಂದು ಶತಮಾನದ ಹಿಂದೆ, ಕೇವಲ ಹದಿನಾರು ವರ್ಷದ ಹುಡುಗಿ, ವಿದೇಶ ಪ್ರವಾಸ ಮಾಡಿ ಬರುವುದು ಆಶ್ಚರ್ಯಕರವಾದ ಸಂಗತಿ. ಈಕೆಯಲ್ಲಿ ಆ ಸಾಮರ್ಥ್ಯ ಇತ್ತು. ಅಲ್ಲಿಯ ರೀತಿ-ನೀತಿ, ಭೌತಿಕ ವೈಭವ ಕಂಡು ಬಂದ ಹುಡುಗಿಯ ಹೃದಯ ಭಾರತದ ಬಡತನ, ಪರಾಧೀನತೆ ಕಂಡು ಮರುಗಿತು.

ಸುಸಂಸ್ಕೃತ ಶ್ರೀಮಂತ ಮನೆತನದ, ಡಾಕ್ಟರ್ ವೃತ್ತಿ ಕೈಗೊಂಡಿದ್ದ ಗೋವಿಂದರಾಜುಲು ನಾಯುಡು ಎಂಬ ಯುವಕನನ್ನು ಮದುವೆಯಾಗಲು ಸರೋಜಿನಿ ಅಪೇಕ್ಷಿಸಿದಳು. ಇದು ಬೇರೆ ಬೇರೆ ಜಾತಿಗಳವರ ಮದುವೆ. ತಂದೆ ಸುಧಾರಕ ಮನೋಭಾವದವರು; ಒಪ್ಪಿದರು. ಸರೋಜಿನಿಯ ವಿವಾಹ ೧೮೯೮ರಲ್ಲಿ ನೆರವೇರಿತು.

ಸರೋಜಿನಿ ಗಂಡನ ಮನೆಯಲ್ಲಿ ಬಹು ಸಂತೋಷದಿಂದಿದ್ದರು. ಡಾಕ್ಟರ್ ನಾಯುಡು ಶ್ರೀಮಂತರು. ಮುಂಬಯಿಯಲ್ಲಿದ್ದ ಅವರ ಮನೆಗೆ “ಚಿನ್ನದ ಹೊಸ್ತಿಲು” ಎಂಬ ಹೆಸರು. ಪ್ರಕೃತಿಯ ಪೂಜಾರಿಣಿ ಮನೆಯ ಸುತ್ತಲಿನ ತೋಟದಲ್ಲಿ ಬಗೆಬಗೆಯ ಹೂಗಿಡಗಳನ್ನು ನೆಟ್ಟರು. ಪುಟ್ಟ ಲತಾಗೃಹ, ಕಾರಂಜಿ ನಿರ್ಮಿಸಿದರು. ದೇಶವಿದೇಶದ ಹಣ್ಣಿನ ಗಿಡಗಳು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತಿದ್ದವು. ಮನೆಯ ಒಳಗೆ ಬೈಠಕ್‌ಖಾನೆಯ ನೆಲ್ಕೆ ಬಹು ಬೆಲೆಬಾಳುವ ಪರ್ಷಿಯನ್‌ಜಮಾಖಾನ ಹಾಸಲಾಗಿತ್ತು. ದೇಶವಿದೇಶಿ ಪೀಠೋಪಕರಣಗಳು. ಒಂದು ಕಡೆ ಭಗವಾನ್‌ಬುದ್ಧನ ಸೌಮ್ಯ ಶಾಂತ ಮೂರ್ತಿ. ಅಡಿಗೆ ಕೆಲಸದಲ್ಲಿ ಸರೋಜಿನಿ ಬಹು ನಿಪುಣೆ. ಅತಿ ಸಾಮಾನ್ಯವಾದ ಸೀರೆ ಉಟ್ಟುಕೊಂಡು ಒಲೆಯ ಮುಂದೆ ಅಡಿಗೆ ಕೆಲಸದಲ್ಲಿ ನಿರತರಾಗುತ್ತಿದ್ದರು. ತಮ್ಮ ಮನೆಯಲ್ಲಿ ಪ್ರೀತಿಯಿಂದ ಎಲ್ಲರಿಗೂ ಉಣಬಡಿಸುವರು. ಕೆಲಸದ ಆಳುಗಳಿಗೆ ಕಡಿಮೆ ಇರಲಿಲ್ಲ. ಆದರೆ ಮಕ್ಕಳ ಲಾಲನೆ-ಪಾಲನೆ, ಮನೆಯನ್ನು ಶುಚಿಯಾಗಿ, ಓರಣವಾಗಿ ಇಡುವುದೆಂದರೆ ಸರೋಜಿನಿದೇವಿಗೆ ಬಹಳ ಅಕ್ಕರೆ.

ಮಧ್ಯೆ ಮಧ್ಯೆ ರಜಾದಿನಗಳಲ್ಲಿ ಡಾಕ್ಟರ್ ನಾಯುಡುರವರು ತಮ್ಮ ಮಡದಿ ಮಕ್ಕಳೊಂದಿಗೆ ವನಭೋಜನ, ನೌಕಾ ವಿಹಾರಕ್ಕೆ ಹೋಗುತ್ತಿದ್ದರು.

ಈ ದಂಪತಿಗಳಿಗೆ ರಣಧೀರ, ಜಯಸೂರ್ಯ ಎಂಬ ಇಬ್ಬರು ಗಂಡುಮಕ್ಕಳು ಮತ್ತು ಪದ್ಮಜ, ಲೈಲಾಮಣಿ ಎಂಬ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು.

ಸ್ವಲ್ಪ ಕಾಲದಲ್ಲಿಯೇ ಸರೋಜಿನಿ ಸಾರ್ವಜನಿಕ ಜೀವನದಲ್ಲಿ ಪ್ರವೇಶಿಸಿದರು.

ಮಹಿಳೆಯರಿಗಾಗಿ

ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಹೆಣ್ಣು ಮಕ್ಕಳ ದುಃಸ್ಥಿತಿ ಹೇಳತೀರದು. ಅವರ ಉನ್ನತಿಗೆ ಈಕೆ ಟೊಂಕಕಟ್ಟಿ ನಿಂತರು.

ಅನೇಕ ಕಡೆ, ಈಕೆಯನ್ನು ಭಾಷಣ ಮಾಡಲು ಕರೆಯುತ್ತಿದ್ದರು. ತಮ್ಮ ಭಾಷಣಗಳಲ್ಲಿ ದೇಶದ ಹೆಣ್ಣು ಮಕ್ಕಳ ಅಜ್ಞಾನ, ಅವಿದ್ಯೆ, ಬಾಲ್ಯ ವಿವಾಹ, ಪರದಾ ಪದ್ಧತಿ, ವರದಕ್ಷಿಣೆ, ಕನ್ಯಾಶುಲ್ಕ – ಒಂದೇ ಎರಡೇ, ಅನೇಕ ಸಮಸ್ಯೆಗಳನ್ನು ಎತ್ತಿ ತೋರಿಸಿ ಅವಕ್ಕೆ ಪರಿಹಾರ ತಿಳಿಸುತ್ತಿದ್ದರು. ಭಾರತೀಯರು ತಾಯ್ತನಕ್ಕೆ ಬಹು ಗೌರವ ಸಲ್ಲಿಸುತ್ತಾರೆ. ಮೊಟ್ಟ ಮೊದಲು ಹೆಂಗಸು ತನ್ನ ಮನೆಯ ಲಕ್ಷ್ಮಿ ಆಗಬೇಕು, ಮಕ್ಕಳನ್ನು ನೋಡಿಕೊಳ್ಳಬೇಕು. ಜೊತೆಗೆ, ಕುರುಡು ಆಚಾರಗಳನ್ನು ಬಿಟ್ಟು ಪ್ರಗತಿಯ ದಾರಿಯಲ್ಲಿ ಹೆಜ್ಜೆ ಹಾಕಬೇಕು. ಇದು ಅವರು ಭಾಷಣಗಳಲ್ಲಿ ಹೇಳುತ್ತಿದ್ದ ವಿಷಯ.

ಒಮ್ಮೆ ಬಂಗಾಳದ ಗವರ್ನರ್ ಭಾರತದ ಮಹಿಳೆಯರ ಬಗ್ಗೆ ಅಪಮಾನಕರವಾದ ನುಡಿಗಳನ್ನು ಆಡಿದ. ಇದನ್ನು ತಿಳಿದು ಸರೋಜಿನಿ ಕೆರಳಿದರು. ಪತ್ರಿಕೆಗಳಲ್ಲಿ ಅದನ್ನು ಕಟುವಾಗಿ ಟೀಕಿಸಿ ಕಂಡಿಸಿದರು. ತನ್ನ ತಪ್ಪಿಗಾಗಿ ಆತ ಕ್ಷಮೆ ಬೇಡುವವರೆಗೆ ಬಿಡಲಿಲ್ಲ.

ಬಾಪೂ ದರ್ಶನ

ಗೋಪಾಲಕೃಷ್ಣ ಗೋಖಲೆಯವರು ಆಗ ಭಾರತದ ಹಿರಿಯ ನಾಯಕರಲ್ಲಿ ಒಬ್ಬರು. ಗಾಂಧೀಜಿಗೂ ಅವರಲ್ಲಿ ಬಹು ಗೌರವ. ಸರೋಜಿನಿಯವರಿಗೆ ಬಹು ಚಿಕ್ಕ ವಯಸ್ಸಿನಲ್ಲೆ ಅವರ ಪರಿಚಯವಾಯಿತು. ಆಕೆಗೆ ಇಪ್ಪತ್ತಮೂರು ವರ್ಷವಾಗಿದ್ದಾಲೆ ಗೋಖಲೆ, “ನೀನು ದೇಶಕ್ಕಾಗಿ ಬದುಕಬೇಕು” ಎಂದು ಹೇಳಿದರು. ಗೋಖಲೆ ಸರೋಜಿನಿಯವರಿಗೆ ಗುರುವಾದರು.

೧೯೧೪ರಲ್ಲಿ ಸರೋಜಿನಿಯವರಿಗೆ ಗಾಂಧೀಜಿಯ ಭೇಟಿಯಾಯಿತು. ಆಕೆ ಇಂಗ್ಲೆಂಡಿನ ರಾಯಲ್‌ಸೊಸೈಟಿ ಆಫ್‌ಲಿಟರೇಚರ್ (ಸಾಹಿತ್ಯ ಸಂಸ್ಥೆ)ನ ಸದಸ್ಯೆಯಾಗಿ ಆಯ್ಕೆಯಾದರು. ಆಕೆ ಲಂಡನ್ನಿನಲ್ಲಿದ್ದಾಗಲೆ ಗಾಂಧೀಜಿ ಅಲ್ಲಿಗೆ ಬಂದರು. ದಕ್ಷಿಣ ಆಫ್ರಿಕದಲ್ಲಿ ಭಾರತೀಯರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಪ್ರಚಂಡ ಹೋರಾಟ ನಡೆಸಿ ಪ್ರಪಂಚದಲ್ಲೆ ಖ್ಯಾತಿ ಪಡೆದಿದ್ದರು. ಗಾಂಧೀಜಿ. ಅವರನ್ನು ನೋಡಬೇಕು ಎಂದು ಸರೋಜಿನಿಯವರಿಗೆ ಬಹಳ ತವಕವಿತ್ತು.

ಸರೋಜಿನಿ ಬಹು ಬೆಲೆಬಾಳುವ ಒಡವೆ ವಸ್ತುಗಳನ್ನು ಧರಿಸಿ ಹೊರಟರು. ಬಹಳ ಹುಡುಕಿದ ನಂತರ ಅವರು ಇಳಿದಿದ್ದ ಸ್ಥಳ ಸಿಕ್ಕಿತು. ಇಕ್ಕಟ್ಟಾದ ಮೆಟ್ಟಲನ್ನು ಹತ್ತಿ ಹಜಾರವನ್ನು ಪ್ರವೇಶಿಸಿದರು. ಒಂದು ಕಂಬಳಿ ಮೇಲೆ ಕುಳಿತು ರಾತ್ರಿಯ ಉಪಾಹಾರವನ್ನು ಗಾಂಧೀಜಿ ಸೇವಿಸುತ್ತಿದ್ದರು. ಬಕ್ಕತಲೆಯ ಈ ಪುಟ್ಟ ಮನುಷ್ಯನನ್ನು ಕಂಡ ಕೂಡಲೆ ಸರೋಜಿನಿ ಗಟ್ಟಿಯಾಗಿ ನಕ್ಕುಬಿಟ್ಟರು. ಗಾಂಧೀಜಿ ಇನ್ನೂ ಗಟ್ಟಿಯಾಗಿ ನಕ್ಕು, “ಬನ್ನಿ ಬನ್ನಿ, ನೀವೇ ಅಲ್ಲವೆ ಸರೋಜಿನಿದೇವಿ? ಹೀಗೆ ಭಯಭಕ್ತಿ ಇಲ್ಲದಿರುವ ಧೈರ್ಯ ಇನ್ನು ಯಾರಿಗೆ ಸಾಧ್ಯ?” ಎಂದು ಕೇಳಿ, “ಉಪಹಾರ ಮಾಡಿ” ಎಂದರು.

ಸರೋಜಿನಿ ಗಾಂಧೀಜಿಯನ್ನು ಕಂಡರು.

ಗಾಂಧೀಜಿ ಮಾತುಕತೆ ಆರಂಭಿಸಿದ ಕೂಡಲೇ ಸರೋಜಿನಿಗೆ ಅವರ ಹಿರಿಮೆ ಸ್ಪಷ್ಟವಾಯಿತು. ಚಾಣಾಕ್ಷರಾದ ಗಾಂಧೀಜಿ ಆಕೆಯ ಅಸಾಧಾರಣ ಸಾಮರ್ಥ್ಯವನ್ನು ಗುರುತಿಸಿದರು. ಆಕೆಯಿಂದ ದೇಶಕ್ಕೆ ಸಲ್ಲಬಹುದಾದ ಲಾಭವನ್ನರಿತರು. ಹೀಗೆ ನಗುವಿನಿಂದ ಪ್ರಾರಂಭವಾದ ಬಾಂಧವ್ಯ ಮೂವತ್ತಮೂರು ವರ್ಷ ಸಂತೋಷದಿಂದ ಮುಂದುವರಿಯಿತು. ಗಾಂಧೀಜಿಗೂ ಅವರ ಪತ್ನಿ ಕಸ್ತೂರಿ ಬಾ ಅವರಿಗೂ ಸರೋಜಿನಿ ಅಚ್ಚುಮೆಚ್ಚಾದರು. ಅವರಿಗೆ ಅನಾರೋಗ್ಯವಾದಾಗ ಆರೈಕೆ ಮಾಡುವ ದಾದಿಯಾದರು.

ಹೈದರಾಬಾದ್‌ನಲ್ಲಿ ಜನಿಸಿದ ಈಕೆಗೆ ಅನೇಕ ಮುಸಲ್ಮಾನ್‌ಕುಟುಂಬಗಳ ಪರಿಚಯವಿತ್ತು. ಅವರ ಜೀವನದುದ್ದಕ್ಕೂ ಎಲ್ಲ ಮತಗಳವರೂ ಅವರ ಸ್ನೇಹಿತರಾಗಿದ್ದರು.

ವೀರ ಮಹಿಳೆ

೧೯೧೬ ರಲ್ಲಿ, “ಭಾರತೀಯರು ಯಾವ ವಿಧವಾದ ಅಸ್ತ್ರ-ಶಸ್ತ್ರಗಳನ್ನೂ ಪಡೆದಿರಬಾರದು” ಎಂಬ ಕಾನೂನನ್ನು ಬ್ರಿಟಿಷ್‌ಸರ್ಕಾರ ಹೇರಿತು. ಅದೇ ವರ್ಷ ಲಕ್ನೋ ಕಾಂಗ್ರೆಸ್‌ಅಧಿವೇಶನ. ವಿದೇಶಿಯರು ಪ್ರೇಕ್ಷಕರಾಗಿ ಬರುತ್ತಿದ್ದರು. ಉತ್ತರ ಪ್ರದೇಶದ ಗವರ್ನರ್ ಮತ್ತು ಅವರ ಪತ್ನಿ ಬಂದಿದ್ದರು. ಶಸ್ತ್ರಗಳನ್ನು ಕುರಿತ ಕಾನೂನನ್ನು ವಿರೋಧಿಸಲು ಸರೋಜಿನಿ ಸಮರ್ಥರೆಂದು ಅಧ್ಯಕ್ಷರಿಂದ ಸೂಚನೆ ಬಂದಿತು. ಸರೋಜಿನಿ ಆ ತುಂಬಿದ ಸಭೆಯನ್ನು ಉದ್ದೇಶಿಸಿ, “ಕಾನೂನು ವಿರೋಧಿಸುವ ಕೆಲಸ ಒಬ್ಬ ಭಾರತದ ಮಹಿಳೆಯ ಪಾಲಿಗೆ ಬಂದಿದೆ, ಇದನ್ನು ನಾನು ಆನಂದದಿಂದ ಕೈಗೊಂಡಿದ್ದೇನೆ” ಎಂದು ಹೇಳುತ್ತಾ ಅರ್ಧಗಂಟೆಯ ಕಾಲ ಬ್ರಿಟಿಷರ ಅನೀತಿಯನ್ನು ಖಂಡಿಸಿದರು. ಅದನ್ನು ಕೇಳಿದ ಗವರ್ನರ್, ಅವರ ಪತ್ನಿ ಬೆರಗಾದರು. ಅವರು ಇಷ್ಟು ಧೈರ್ಯಶಾಲಿ ಭಾರತೀಯ ಮಹಿಳೆಯನ್ನು ಕಂಡಿರಲಿಲ್ಲ. ಹೊರಡುವಾಗ ಸರೋಜಿನಿಯವರನ್ನು ತಮ್ಮ ಮನೆಗೆ ಭೋಜನಕ್ಕೆ ಕರೆಕೊಟ್ಟು ಹೋದರು.

೧೯೧೯ರಲ್ಲಿ ಜಲಿಯನ್‌ವಾಲಾ ಬಾಗ್ ದುರಂತ ನಡೆಯಿತು. ಪಂಜಾಬಿನ ಅಮೃತಸರದ ಜಲಿಯನ್ ವಾಲಾ ಬಾಗ್‌ನಲ್ಲಿ ಸೇರಿದ್ದ ಸಭೆಯ ಮೇಲೆ ಸೈನಿಕರು ಗುಂಡು ಹಾರಿಸಿ ನಿಸ್ಸಹಾಯಕರಾಗಿ ಸಭಿಕರ ರಕ್ತವನ್ನು ಹರಿಸಿದರು. ಈ ದುರಂತ ಇಡೀ ರಾಷ್ಟ್ರಕ್ಕೆ ಬಹಳ ನೋವನ್ನು ಉಂಟು ಮಾಡಿತು. ಸ್ವಾತಂತ್ರ್ಯಕ್ಕಾಗಿ ಹೋರಾಡುವ ದೇಶಭಕ್ತರ ನಿರ್ಧಾರನ್ನು ಇನ್ನೂ ಬಲಗೊಳಿಸಿತು.

ಸರೋಜಿನಿಯವರು ಒಂದು ಕಾಂಗ್ರೆಸ್‌ಅಧಿವೇಶನದಲ್ಲಿ, “ನಾನು ಕೇವಲ ಹೆಂಗಸು. ಆದರೂ ಬಹಳ ಕಷ್ಟಕಾಲ ದೇಶಕ್ಕೆ ಬಂದಾಗ, ನಿಷ್ಠೆಯಿಂದ ದೇಶದ ಬಾವುಟ ಎತ್ತಿಹಿಡಿದಿರಬೇಕಾದಾಗ ಭಾರತದ ಸ್ತ್ರೀ; ನಿಮಗೆ ಚೈತನ್ಯ ಉಂಟುಮಾಡಲು ನಿಮಗೆ ಬೆಂಬಲ ನೀಡುವಳು” ಎಂದು ಸಾರಿದರು.

೧೯೧೯ರಲ್ಲಿ ಸರೋಜಿನಿ ಮತ್ತೆ ಇಂಗ್ಲೆಂಡಿಗೆ ಹೋದರು. ಈಗ ಆಕೆ “ಭಾರತದ ಕೋಗಿಲೆ” ಆಗಿರದೆ ಸಿಂಹಿಣಿ ಆಗಿದ್ದಳು. ಗುಲಾಮಗಿರಿಯಲ್ಲಿ ನರಳುತ್ತಿದ್ದ ಭಾರತಕ್ಕೆ ಆಗುತ್ತಿದ್ದ ಅನ್ಯಾಯಗಳು, ಅದರಲ್ಲಿಯೂ ಜಲಿಯನ್‌ವಾಲಾ ಬಾಗಿನ ಕೊಲೆಗಳು ಆಕೆಯನ್ನು ರೊಚ್ಚೆಬ್ಬಿಸಿದ್ದವು. ಲಂಡನ್‌ನ ಆಲ್ಬರ್ಟ್‌ಹಾಲ್‌ನಲ್ಲಿ ಕಕ್ಕಿರಿದು ಜನ ತುಂಬಿದ್ದರು. ಸರೋಜಿನಿ ಬ್ರಿಟಿಷ್‌ಸರ್ಕಾರವನ್ನು ಉಗ್ರವಾಗಿ ಟೀಕಿಸಿದರು. ನಿಸ್ಸಹಾಯಕರಾಗಿದ್ದ ಸಭಿಕರನ್ನು ನೇರವಾಗಿ ಗುಂಡಿಟ್ಟು ಕೊಂದ ಸರ್ಕಾರವನ್ನು, ಬೆತ್ತಗಳಿಂದ ಹೆಂಗಸರನ್ನು ಥಳಿಸಿದ ಬ್ರಿಟಿಷರ್ ಅನೀತಿಯನ್ನು ಖಂಡಿಸಿದರು. ಕವಿಯಲ್ಲ, ಕಲಿಯ ದರ್ಶನವಾಯಿತು ಬ್ರಿಟಿಷ್‌ಜನಾಂಗಕ್ಕೆ. ಇಷ್ಟೆಲ್ಲ ರಾಜಕೀಯ ಚಟುವಟಿಕೆಗಳ ನಡುವೆ ಸರೋಜಿನಿ ಹೆಂಗಸರ ಹಕ್ಕುಗಳಿಗಾಗಿ ಹೋರಾಟದ ನಾಯಕತ್ವ ವಹಿಸಿದರು. ಹೆಂಗಸರಿಗೆ ಮತದಾನ (ವೋಟು ಕೊಡುವ) ಹಕ್ಕು ಇರಬೇಕು ಎಂದು ಚಳುವಳಿ ನಡೆಸಿದರು. ಸರ್ಕಾರ ನೇಮಿಸಿದ ಸೌತ್‌ಬರೊ ಮತದಾನ ಸಮಿತಿ ಹೆಂಗಸರಿಗೆ ಮತಕೊಡುವ ಹಕ್ಕು ಇರಬೇಕು ಎಂಬ ಬೇಡಿಕೆಯನ್ನು ಒಪ್ಪಲಿಲ್ಲ. ೧೯೨೬ರ ವರೆಗೆ ಭಾರತದಲ್ಲಿ ಹೆಂಗಸರಿಗೆ ಶಾಸನಸಭೆಗಳ ಸದಸ್ಯರಾಗುವ ಹಕ್ಕು ದೊರೆಯಲಿಲ್ಲ. ಗಂಡಸರೊಡನೆ ಸಮಾನತೆ ಸಾಧಿಸಲು ಬ್ರಿಟಿಷರ ಆಡಳಿತದ ಕಾಲದಲ್ಲಿ ಹೆಂಗಸರು ಬಹುಕಾಲ ಹೋರಾಡಬೇಕಾಯಿತು. ಈ ಹೋರಾಟದ ನಾಯಕತ್ವ ವಹಿಸಿದ ಸರೋಜಿನಿ ನಾಯುಡು ಅವರನ್ನು ಸ್ವತಂತ್ರ ಭಾರತ ಮೊಟ್ಟ ಮೊದಲನೆಯ ಸ್ತ್ರೀ ಗವರ್ನರರನ್ನಾಗಿ ಆರಿಸಿ ಗೌರವಿಸಿತು.

ಸರ್ಕಾರ ಸರೋಜಿನಿದೇವಿಗೆ ಜಾಲ ಬೀಸಿ ದೊಡ್ಡ ಹುದ್ದೆ, ಬಿರುದುಗಳನ್ನು ಕೊಡಬಯಿಸಿತು. ಅಂತರ ರಾಷ್ಟ್ರೀಯ ಪ್ರಸಿದ್ಧಿ ಪಡೆದ, ಕೋಟ್ಯಂತರ ಭಾರತೀಯರ ಹೃದಯಗಳ ಅಭಿಮಾನ, ಗೌರವಕ್ಕೆ ಪಾತ್ರಳಾದ ಸರೋಜಿನಿದೇವಿಯನ್ನು ಒಲಿಸಿಕೊಳ್ಳಲು ಮಾಡಿದ ತಂತ್ರ ವ್ಯರ್ಥವಾಯಿತು.

೧೯೨೧ರಲ್ಲಿ ಇಂಗ್ಲೆಂಡಿನ ರಾಜಕುಮಾರ ಭಾರತಕ್ಕೆ ಬರುವನೆಂದು ಭಾರತ ಸರ್ಕಾರಕ್ಕೆ ಸಡಗರ. ರಾಜ ಮಹಾರಾಜರ, ಜಮೀನ್‌ದಾರರ ಬೊಕ್ಕಸ ಬರಿದುಮಾಡಿ, ಭವ್ಯ ಸ್ವಾಗತಕ್ಕೆ ಸರ್ಕಾರ ಏರ್ಪಾಟು ಮಾಡಿತು. ಸರೋಜಿನಿ ತಮ್ಮ ಅನುಯಾಯಿಗಳೊಂದಿಗೆ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದರು. ಕಪ್ಪು ಬಾವುಟಗಳನ್ನು ಮುಂಬಯಿಯ ರಸ್ತೆಗಳಲ್ಲಿ ಮೆರೆಯಿಸಿ, “ಯುವರಾಜನೆ ಹಿಂದಿರುಗು” ಎಂದು ಕೂಗೆಬ್ಬಿಸಿದರು. ಸ್ವಯಂಸೇವಕರ ರಕ್ತದ ಕಾಲುವೆ ಹರಿಸಿ ಸರ್ಕಾರ ತನ್ನ ಸೇಡನ್ನು ತೀರಿಸಿಕೊಂಡಿತು. ಮೂರು ದಿನಗಳಲ್ಲಿ ಐವತ್ತಮೂರು ಮಂದಿ ಸತ್ತರು. ನೂರಾರು ಮಂದಿಗೆ ಗಾಯಗಳಾದವು. ಮುಂಬಯಿಯಲ್ಲಿ ಗಲಭೆಯಾಗುತ್ತಿದ್ದ ಸ್ಥಳದಲ್ಲಿ ಸರೋಜಿನಿ ಇರುತ್ತಿದ್ದರು. ಶಾಂತಗೊಳಿಸುವುದು, ವೈದ್ಯರನ್ನು ಕರೆಸಿ ಗಾಯಗೊಂಡವರಿಗೆ ಚಿಕಿತ್ಸೆ ಮಾಡಿಸುವುದು ಅವರ ಹೊಣೆಯಾಯಿತು. ಮುಂಬಯಿ ಪಟ್ಟಣ ಅಂದು ಹಾಳು ಸುರಿಯುತ್ತಿದ್ದಿತು. “ಇಷ್ಟು ವಿರೋಧ ಇದೆ ಎಂದು ತಿಳಿದಿದ್ದರೆ ನಾನು ಬರುತ್ತಲೇ ಇರಲಿಲ್ಲ” ಎಂದನಂತೆ ಆ ರಾಜಕುಮಾರ!

ಗಾಂಧೀಜಿ ಬರೆದ “ಹಿಂದ್‌ಸ್ವರಾಜ್‌” ಎಂಬ ಪುಸ್ತಕವನ್ನು ಜನರು ಕೊಳ್ಳುವುದನ್ನು ಸರ್ಕಾರ ನಿಷೇಧಿಸಿತು. ಸರೋಜಿನಿ ಪ್ರಭಾವಶಾಲಿಯಾದ ಭಾಷಣ ಮಾಡಿ, ಮೇಜಿನ ಮೇಲೆ ಇದ್ದ ಪುಸ್ತಕಗಳ ಕಡೆ ಕೈತೋರಿಸಿ “ಇವನ್ನು ಕೊಂಡುಕೊಂಡರೆ ಸರ್ಕಾರ ಸೆರೆಮನೆಗೊಯ್ಯುವುದು” ಎಂದರು. ಐದೇ ನಿಮಿಷಗಳಲ್ಲಿ ಮೇಜಿನ ಮೇಲಿದ್ದ ಪುಸ್ತಕಗಳೆಲ್ಲಾ ಮಾರಾಟವಾಗಿ ಹೋದವು. ಅನಂತರ ನಿರ್ಭಯವಾಗಿ ಬೀದಿಬೀದಿಗಳಲ್ಲಿ ಈ ಪುಸ್ತಕದ ಪ್ರತಿಗಳನ್ನು ಆಕೆ ಮಾರಾಟ ಮಾಡಿದರು.

ಇದೇ ಸಂದರ್ಭದಲ್ಲಿ ಹಿಂದು, ಮುಸಲ್ಮಾನರು ಒಗ್ಗಟ್ಟಿನಿಂದ ಮೆರವಣಿಗೆ ಹೋದರು. ಠಾಕುರ್ ದ್ವಾರ್‌ದಲ್ಲಿ ಹಿಂದುಗಳು ಸ್ವದೇಶಿ ಪ್ರತಿಜ್ಞೆ ಕೈಗೊಂಡರು. ಮಸೀದಿಯಲ್ಲಿ ಮುಸ್ಲಿಮರು ಪ್ರತಿಜ್ಞೆ ಮಾಡಿದರು. ಅಂದು ಮಸೀದಿಯಲ್ಲಿ ಭಾಷಣ ಮಾಡಲು ಸರೋಜಿನಿಯವರನ್ನು ಕರೆದಿದ್ದರು. ಈ ಹಿಂದು-ಮುಸ್ಲಿಂ ಐಕ್ಯ ಕಂಡು ಸರ್ಕಾರದ ಹೃದಯ ತಲ್ಲಣಿಸಿತು. ಸರ್ಕಾರ ಕುದುರೆ ಸವಾರರನ್ನು ನುಗ್ಗಿಸಿ ಮೆರವಣಿಗೆಯನ್ನು ಚದುರಿಸಿತು. ಅಂದಿನಿಂದ ಬಹು ಎಚ್ಚರಿಕೆ ವಹಿಸಿ, ಹಿಂದುಗಳೂ ಮುಸ್ಲಿಮರೂ ಒಗ್ಗಟ್ಟಿನಿಂದ ಇರದಂತೆ ಬ್ರಿಟಿಷ್‌ಸರ್ಕಾರ ಕುಟಿಲೋಪಾಯವನ್ನು ಹೂಡುತ್ತಾ ಬಂದಿತು.

ಸತ್ಯಾಗ್ರಹಿಗಳ ವೀರ ನಾಯಕಿ.

೧೯೨೨ರಲ್ಲಿ ಗಾಂಧೀಜಿಗೆ ಆರು ವರ್ಷಗಳ ದೀರ್ಘ ಕಾಲ ಸಜ ವಿಧಿಸಿ ಸರ್ಕಾರ ಅವರನ್ನು ಯರವಾಡ ಜೈಲಿಗೆ ದೂಡಿತು. ಸೆರೆಮನೆಗೆ ಹೋಗುವ ಮೊದಲು ಮಹಾತ್ಮರು ಸರೋಜಿನಿಯವರೊಡನೆ, “ಭಾರತದ ಏಕತೆಯ ಹೊಣೆಗಾರಿಕೆ ನಿನಗೊಪ್ಪಿಸಿ ಹೋಗುತ್ತಿದ್ದೇನೆ” ಎಂದು ಹೇಳಿ ಹೋದರು. ಸರೋಜಿನಿಯವರನ್ನು ಸರ್ಕಾರ ದಸ್ತಗಿರಿ ಮಾಡಿತು. ಒಂದು ವರ್ಷದ ನಂತರ ಬಿಡುಗಡೆ ಮಾಡಿತು.

ಗಾಂಧೀಜಿಯ ಸಂದೇಶವನ್ನು ಭಾರತದ ಜನರಿಗೆ ಮುಟ್ಟಿಸಲು ಸರೋಜಿನಿ ಎಡೆಬಿಡದೆ ಶ್ರಮಿಸಿದರು. ಇಡೀ ಭಾರತವನ್ನು ಸುತ್ತಾಡಿ ಬಂದರು. ೧೯೨೨ರಲ್ಲಿ ಮಾಪಿಳ್ಳೆ ಜನರನ್ನು ರೈಲ್ವೆ ಗೂಡ್ಸುಗಾಡಿಗಳಲ್ಲಿ ತುಂಬಿ, ನಿರ್ಲಕ್ಷ್ಯದಿಂದ ಅನೇಕ ದಿನಗಳು ನೋಡದೆ ಇದ್ದ ಕಾರಣ ಹಲವರು ಸತ್ತಿದ್ದರು. ಸರೋಜಿನಿ ಆ ವಿಚಾರವನ್ನು ಭಾಷಣದಲ್ಲಿ ಕಟುವಾಗಿ ಎತ್ತಾಡಿದರು. ಬಿಳಿಯ ಅಧಿಕಾರಿಗಳು ರಾಜದ್ರೋಹಕರವಾದ ಭಾಷಣವೆಂದು ಆಕ್ಷೇಪಿಸಿ ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದರು. ಸರೋಜಿನಿ ಇದಕ್ಕೆಲ್ಲಾ ಅಂಜಲಿಲ್ಲ !

ಆಫ್ರಿಕದಲ್ಲಿ

೧೯೨೪ರಲ್ಲಿ ಸರೋಜಿನಿಯವರು ಆಫ್ರಿಕಕ್ಕೆ ಭೇಟಿ ಕೊಟ್ಟರು. ದಕ್ಷಿಣ ಆಫ್ರಿಕದಲ್ಲಿ ಭಾರತೀಯರಿಗೆ ಅಪಮಾನ, ಅನ್ಯಾಯಗಳಾಗುತ್ತಿದ್ದವು. ಅಲ್ಲಿ ಅವರು ಬಿಳಿಯರೊಡನೆ ರೈಲು, ಬಸ್‌ಗಳಲ್ಲಿ ಪ್ರಯಾಣ ಮಾಡುವಂತಿರಲಿಲ್ಲ, ಅಂಚೆ ಕಚೇರಿಯಲ್ಲಿ ನಿಲ್ಲುವಂತಿರಲಿಲ್ಲ. ಹಲವು ಪೀಳಿಗೆಗಳಿಂದ ದಕ್ಷಿಣ ಆಫ್ರಿಕ ಮತ್ತು ಕೀನ್ಯಾಗಳಲ್ಲಿ ನೆಲೆಸಿ, ಕೂಲಿ ಅಥವಾ ವ್ಯಾಪಾರ ಮಾಡಿಕೊಂಡಿದ್ದ ಭಾರತೀಯರನ್ನು ಓಡಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಸರೋಜಿನಿ ಮೊಂಬಾಸಾದಲ್ಲಿ ಪೂರ್ವ ಆಫ್ರಿಕದ ಭಾರತೀಯ ಕಾಂಗ್ರೆಸಿನ ಅಧ್ಯಕ್ಷತೆ ವಹಿಸಿದ್ದರು. ಆಫ್ರಿಕದ ಹಲವು ಭಾಗಗಳಲ್ಲಿ ಸಂಚರಿಸಿ, ಅಲ್ಲಿನ ಭಾರತೀಯರಿಗೆ ಧೈರ್ಯವನ್ನೂ ಸ್ಪೂರ್ತಿಯನ್ನೂ ಕೊಟ್ಟರು.

ಕಾಂಗ್ರೆಸ್‌ಅಧ್ಯಕ್ಷಿಣಿ

ಸರೋಜಿನಿ ದೇವಿ ೧೯೨೫ರಲ್ಲಿ ಕಾನ್ಪುರದ ಕಾಂಗ್ರೆಸ್‌ಅಧಿವೇಶನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆದರು. ಆಗ ಒಂದೊಂದು ಕಾಂಗ್ರೆಸ್‌ಅಧಿವೇಶನವೂ ಸ್ವಾಂತಂತ್ರ‍್ಯ ಹೋರಾಟದ ಒಂದೊಂದು ಘಟ್ಟವಾಗುತ್ತಿತ್ತು. ಕಾಂಗ್ರೆಸಿನ ಅಧ್ಯಕ್ಷರೆಂದರೆ ಜನತೆ ಆರಿಸಿದ ನೆಚ್ಚಿನ ರಾಷ್ಟ್ರದ ಮಹಾನ್‌ನಾಯಕರಾಗುತ್ತಿದ್ದರು. ಸರೋಜಿನಿ ಈ ಪದವಿಯನ್ನು ನಮ್ರತೆಯಿಂದ ಒಪ್ಪಿದರು. ಭವ್ಯವಾದ ಚಪ್ಪರ. ಖಾದಿ ಮಂಟಪದಲ್ಲಿ ವೇದಿಕೆ. ಪ್ರತಿನಿಧಿಗಳಾದಿಯಾಗಿ, ಎಲ್ಲರೂ ನೆಲದ ಮೇಲೆ ಕೂಡುವ ಏರ್ಪಾಟು. ಸರಳವಾದ ಸುಮದರ ಖಾದಿ ಉಡುಪಿನಲ್ಲಿ ಸರೋಜಿನಿ ಸಭೆಗೆ ಬಂದರು. ಗಾಂಧೀಜಿ ಆಕೆಯ ಕೈ ಹಿಡಿದು ವೇದಿಕೆಯ ಮೇಲೆ ಕರೆದೊಯ್ದು ಕೂಡಿಸಿದರು. ಹಿಂದೆ ಮೋತೀಲಾಲ್, ಜವಾಹರ್‌ಲಾಲ್ ನೆಹರೂ ಮತ್ತೆ ಕೆಲವು ಮುಂಖಡರಿದ್ದರು.

ಮಹಾತ್ಮರು ಸಭೆಗೆ ಈಕೆಯನ್ನು ಪರಿಚಯ ಮಾಡಿಸಿಕೊಡುತ್ತಾ ಹೀಗೆಂದರು: “ಈಕೆ ಭಾರತದ ವೀರ ರಮಣಿ, ಬಹಳ ಮೇಧಾವಿ, ಹಾಗೂ ದೇಶಭಕ್ತಳು. ಈ ಮಹಾ ಗೌರವವನ್ನು ಪಡೆಯಲು ಅರ್ಹಳಾಗಿದ್ದಾರೆ. ಭಾರತದ ಮಹಿಳೆ ತೊಟ್ಟಿಲನ್ನೂ ತೂಗಬಲ್ಲಳು. ದೇಶವನ್ನೂ ಆಳಬಲ್ಲಳು. ಜನತೆಗೆ ಈಗೆ ಮಾರ್ಗದರ್ಶನ ನೀಡಬಲ್ಲಳು”.

ಸರೋಜಿನಿಯವರ ಅಧ್ಯಕ್ಷ ಭಾಷಣ ಬಹು ಚಿಕ್ಕದಾಗಿತ್ತು. ಆದರೆ ಕೇಳಿದವರಿಗೆ ರೋಮಾಂಚನವಾಯಿತು. ಆಕೆ ಹೇಳಿದರು: “ನಾನೊಬ್ಬ ಗೃಹಿಣಿ, ನನ್ನ ಕೆಲಸವೂ ಸರಳ, ಭಾರತಮಾತೆ ನಮ್ಮ ತಾಯಿ. ನಮ್ಮ ಮನೆಗೆ ಎಂದೆಂದಿಗೂ ಈಕೆ ಯಜಮಾನಿ ಆಗಿರಲಿ ಎಂಬುದೇ ನನ್ನ ಬಯಕೆ. ಎಲ್ಲ ಸಾಧನ ಸಂಪತ್ತಿಗೆ ಈಕೆ ಒಡತಿ ಆಗಲಿ ಎಂದು ಬಯಸುವೆ”.

ಅಧ್ಯಕ್ಷ ಪೀಠದಿಂದ ಆಕೆ ಆಡಿದ ಒಂದು ವಾಕ್ಯ ಎಲ್ಲರ ಹೃದಯದಲ್ಲಿ ಮೊಳಗುತ್ತಿತ್ತು:

“ಸ್ವಾತಂತ್ರ್ಯದ ಹೋರಾಟದಲ್ಲಿ ಕ್ಷಮಿಸಲಾಗದ ದ್ರೋಹ ಎಂದರೆ ಹೆದರಿಕೆ, ಕ್ಷಮಿಸಲಾಗದ ಪಾಪ ಎಂದರೆ ನಿರಾಸೆ!”

ಅಮೆರಿಕದಲ್ಲಿ

೧೯೨೮ರಲ್ಲಿ ಗಾಂಧೀಜಿ ಸರೋಜಿನಿಯವರನ್ನು ಅಮೆರಿಕ ಮತ್ತು ಕೆನಡಾಗಳಿಗೆ ತಮ್ಮ ಪ್ರತಿನಿಧಿಯನ್ನಾಗಿ ಕಳುಹಿಸಿಕೊಟ್ಟರು. ಆ ಹೊತ್ತಿಗೆ ಮಿಸ್‌ಮೇಯೊ ಎಂಬಾಕೆ ಭಾರತವನ್ನು ಕುರಿತು “ಮದರ್ ಇಂಡಿಯಾ” ಎಂಬ ಒಂದು ಪುಸ್ತಕವನ್ನು ಬರೆದಿದ್ದಳು. ಆ ಪುಸ್ತಕಕ್ಕೆ ಅಮೆರಿಕದಲ್ಲಿ ತಕ್ಕಷ್ಟು ಪ್ರಚಾರ ಸಿಕ್ಕಿತ್ತು. ಆ ಬುದ್ಧಿವಂತಳಿಗೆ ಭಾರತದಲ್ಲಿ ಕಂಡದ್ದೆಲ್ಲ ಬರೀ ಕೊಳಕೇ, ತಪ್ಪೇ, ಅನಾಗರಿಕತೆಯೇ; ಒಳ್ಳೆಯದೇನೂ ಕಾಣಲಿಲ್ಲ. ಗಾಂಧೀಜಿ ಆಗಲೆ ಆಕೆಯ ಪುಸ್ತಕವನ್ನು “ಚರಂಡಿ ಪರೀಕ್ಷಕನ ವರದಿ” ಎಂದು ಕರೆದಿದ್ದರು. ಮೇಯೊ ಮಾಡಿದ ಅಪಪ್ರಚಾರಕ್ಕೆ ತಡೆ ಹಾಕುವುದೂ ಸರೋಜಿನಿಯವರ ಪ್ರವಾಸದ ಒಂದು ಉದ್ದೇಶ.

ಭಾರತ ಅನಾಗರಿಕ ದೇಶ ಎಂದು ಸಾರಿದ್ದಳು ಮೇಯೊ. ಸರೋಜಿನಿಯವರ ಅಚ್ಚುಕಟ್ಟಾದ ಸುಂದರ ಉಡುಪು, ಮುಖದ ಕಳೆ ಮತ್ತು ಆತ್ಮವಿಶ್ವಾಸ, ಶುದ್ಧವಾದ ಸೊಗಸಾದ ಇಂಗ್ಲಿಷ್‌ಭಾಷೆ, ಗಾಂಭಿರ್ಯ ಮತ್ತು ತಿಳಿ ಹಾಸ್ಯ-ಇವೇ ಮೇಯೊಗೆ ತಕ್ಕಷ್ಟು ಉತ್ತರವಾಗಿದ್ದವು. ಜೊತೆಗೆ ಸರೋಜಿನಿ ಮೇಯೊಳನ್ನು ಲಕ್ಷ್ಯಕ್ಕೆ ತಂದುಕೊಳ್ಳದೆಯೇ ಆಕೆಯ ನಿಜವಾದ ಸ್ಥಾನವನ್ನು ತೋರಿಸಿಕೊಟ್ಟರು. ನ್ಯೂಯಾರ್ಕ್‌ನಗರವನ್ನು ಅವರು ತಲುಪುತ್ತಲೇ ಪತ್ರಿಕಾ ಪ್ರತಿನಿಧಿಗಳು ಅವರನ್ನು ಸುತ್ತವರೆದರು.

“ಕ್ಯಾಥರೀನ್‌ಮೇಯೊ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು?” ಎಂದು ಒಬ್ಬಾತ ಕೇಳಿದ.

“ಕ್ಯಾಥರೀನ್‌ಮೇಯೊ? ಯಾರು ಆಕೆ?” ಪ್ರಶ್ನಿಸಿದರು ಸರೋಜಿನಿ.

ತಮ್ಮ ಪ್ರವಾಸದಲ್ಲಿ ಸರೋಜಿನಿ ಭಾರತ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿದ್ದ ಹೋರಾಟ, ಬ್ರಿಟಿಷ್‌ಸರ್ಕಾರದ ದಬ್ಬಾಳಿಕೆ ಇವನ್ನು ಹೊರದೇಶಗಳವರಿಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದರು. ಭಾರತೀಯ ಸ್ತ್ರೀಯರ ಆದರ್ಶ ಮತ್ತು ಸಾಧನೆಗಳನ್ನು ವಿವರಿಸಿದರು; ಆಧುನಿಕ ಭಾರತದ ಹೊಸ ಚೈತನ್ಯವನ್ನು ನಿರೂಪಿಸಿದರು. ಎಪ್ಪತ್ತು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದ “ಶಾಂತಿಗಾಗಿ ಬಾಂಧವ್ಯ”ದ ಸಭೆಗೆ ಅವರನ್ನು ಆಹ್ವಾನಿಸಿದ್ದರು. ಗೋಡೆಯ ಮೇಲೆ ಸ್ವತಂತ್ರ ರಾಷ್ಟಗಳ ಧ್ವಜಗಳು ಮೆರೆಯುತ್ತಿದ್ದವು. “ಪೂರ್ವ ದೇಶಗಳ ಅಭಿನಂದನೆಯನ್ನು ತಿಳಿಸಲು” ಮಾತನಾಡಬೇಕೆಂದು ಸರೋಜಿನಿಯವರನ್ನು ಪ್ರತಿನಿಧಿಗಳು ಕೇಳಿದರು.

ಭಾಷಣಕ್ಕೆ ಎದ್ದ ಸರೋಜಿನಿಯವರ ಒಂದು ಪ್ರಶ್ನೆ ಎಪ್ಪತ್ತು ದೇಶಗಳ ಪ್ರತಿನಿಧಿಗಳಿಗೆ ಸವಾಲಾಯಿತು.

“ಇಲ್ಲಿ ಗೋಡೆಗಳ ಮೇಲೆ ಸ್ವತಂತ್ರ ರಾಷ್ಟ್ರಗಳ ಧ್ವಜಗಳಿವೆ”.

” ಆದರೆ ಭಾರತದ ಧ್ವಜ ಎಲ್ಲಿ?”

“ಪ್ರಪಂಚದ ಜನಸಂಖ್ಯೆಯಲ್ಲಿ ಐದರಲ್ಲಿ ಒಂದರಷ್ಟು ಜನ ಗುಲಾಮಗಿರಿಯಲ್ಲಿದ್ದಾಗ ವಿಶ್ವಶಾಂತಿಯ ಮಾತಿಗೆ ಅರ್ಥ ಉಂಟೇ?”

ಕೆನಡಾದಲ್ಲಿ ಅವರ ಭಾಷಣ ಕೇಳಿದ ಒಬ್ಬಾತ ಎಂದನಂತೆ; “ಯಾವ ಹೆಂಗಸಿನಲ್ಲಿಯೂ ನಾನು ಇಂತಹ ಶಕ್ತಿಯನ್ನು ಕಾಣಲಿಲ್ಲ. ಅಷ್ಟೇಕೆ, ಈ ಶಕ್ತಿ ಇರುವ ಗಂಡಸರು ಇದ್ದಾರೇನು?” ಶಾಲೆಯೊಂದರಲ್ಲಿ ಸರೋಜಿನಿ ಮಾತನಾಡಿದರು. ಶಾಲೆಯ ಉಪಮುಖ್ಯೋಪಾಧ್ಯಾಯಿನಿ ಅನಂತರ ಹೇಳಿದರು; “ಶ್ರೀಮತಿ ನಾಯುಡು ಅವರ ಭಾಷಣದ ನಂತರ ಪ್ರತಿ ಹುಡುಗಿಯು, “ಈಗ ಗಾಂಧೀಜಿಯನ್ನೂ ಅವರು ಮಾಡುತ್ತಿರುವ ಕೆಲಸವನ್ನೂ ನಾನು ಅರ್ಥ ಮಾಡಿಕೊಳ್ಳಬಲ್ಲೆ” ಎನ್ನುತ್ತಾಳೆ”.

ಸತ್ಯಾಗ್ರಹಿಗಳ ನಾಯಕಿ

೧೯೩೦ರಲ್ಲಿ ಗಾಂಧೀಜಿ ಸ್ವಾತಂತ್ರ್ಯದ ಹೋರಾಟದಲ್ಲಿ ಮತ್ತೊಂದು ಮುಖ್ಯವಾದ ನಿರ್ಧಾರವನ್ನು ಮಾಡಿದರು. ಭಾರತೀಯರಿಗೆ ಉಪ್ಪನ್ನು ತಯಾರಿಸುವ ಸ್ವಾತಂತ್ರ್ಯ ಇರಲಿಲ್ಲ. ಇದನ್ನು ವಿರೋಧಿಸಲು ಗಾಂಧೀಜಿ ತೀರ್ಮಾನಿಸಿದರು. ತಾವು ಉಪ್ಪನ್ನು ತಯಾರಿಸುವುದಾಗಿ ಸರ್ಕಾರಕ್ಕೆ ತಿಳಿಸಿದರು. ತಮ್ಮ ಸಾಬರಮತಿ ಆಶ್ರಮದಿಂದ ೨೪೧ ಮೈಲಿ ದೂರದಲ್ಲಿದ್ದ ಸಮುದ್ರತೀರದ ದಾಂಡಿಗೆ ನಡೆದುಕೊಂಡು ಹೊರಟರು. ಈ ಯಾತ್ರೆ ಏಪ್ರಿಲ್‌೫ರಂದು ಕೊನೆಗೊಂಡಿತು. ಸರೋಜಿನಿ ಗಾಂಧೀಜಿಯವರನ್ನೂ ಅವರ ಶಿಷ್ಯರನ್ನೂ ಸ್ವಾಗತಿಸಲು ದಾಂಡಿಯಲ್ಲಿದ್ದರು. ರಾತ್ರಿ ಪ್ರಾರ್ಥನಾ ಸಭೆಯಾಯಿತು.

ಏಪ್ರಿಲ್‌೬, ಉಷಃ ಕಾಲದಲ್ಲಿ ಬಾಪೂಜಿಯೂ ಇತರರೂ ಸಮುದ್ರ ತೀರಕ್ಕೆ ಹೋದರು. ಸಮುದ್ರ ತೀರವನ್ನು ಸೇರುವಾಗ ಎಪ್ಪತ್ತೈದು ಸಾವಿರ ಮಂದಿ ಸೇರಿದ್ದರು. ಗಾಂಧೀಜಿ ಸಮುದ್ರ ತೀರದಿಂದ ಉಪ್ಪನ್ನು ಎತ್ತಿ ಕೈಲ್ಲಿ ಹಿಡಿದರು. ನೂರಾರು ಮಂದಿ ಪಾತ್ರೆಗಳನ್ನು ಹಿಡಿದು ಸಮುದ್ರದ ನೀರನ್ನು ತುಂಬಿಕೊಂಡರು. ನೀರನ್ನು ಕಾಸಿ ಉಪ್ಪನ್ನು ತಯಾರು ಮಾಡಿದರು. ಗಾಂಧೀಜಿ, ಸರೋಜಿನಿ ಮತ್ತು ಇತರ ಮುಖಂಡರು ಸಿದ್ಧಪಡಿಸಿದ ಹಿಡಿ ಉಪ್ಪನ್ನು ಲಿಲಾವಿನಲ್ಲಿ ಜನರು ಸಾವಿರಾರು ರೂಪಾಯಿಗಳಿಗೆ ಕೊಂಡರು. ಅದುವರೆಗೆ ತಡೆದಿದ್ದ ಅಥವಾ ಸಂಗಡ ಬರುತ್ತಿದ್ದ ಪೊಲೀಸರು ಲಾಠಿಗಳಿಂದ ಥಳಿಸಿದರು. ಸೆರೆಮನೆಗೆ ಸ್ವಯಂಸೇವಕರನ್ನು ಎಳೆದೊಯ್ದರು. ದೇಶಭಕ್ತರ ರಕ್ತದಿಂದ ಸಮುದ್ರದ ನೀರು ಕೆಂಪಾಯಿತು. ಮರಳಿನಲ್ಲಿ ಜನ ಉರುಳಿದರು.

ದಾಂಡಿಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿ ಸರ್ಕಾರದ ಉಪ್ಪಿನ ಕೋಠಿ ಧರಸನ ಸರೋಜಿನಿಯವರು ಸುಮಾರು ಇಪ್ಪತ್ತೈದು ಸಾವಿರ ಮಂದಿ ಸತ್ಯಾಗ್ರಹಿಗಳೊಂದಿಗೆ ಧರಸನಕ್ಕೆ ನಡೆದರು. ಸರೋಜಿನಿ ಸ್ವಯಂ ಸೇವಕರಿಗೆ ಸ್ಪಷ್ಟವಾಗಿ ಹೇಳಿದರು; “ನೀವು ಕೈಗೊಳ್ಳುತ್ತಿರುವುದು ಅಪಾಯದ ಯಾತ್ರೆ. ಪೊಲೀಸರು ನಿಮ್ಮನ್ನು ನಿರ್ದಯವಾಗಿ ಹೊಡೆಯುತ್ತಾರೆ, ಬಡಿಯುತ್ತಾರೆ; ಜೈಲಿಗೆ ಎಳೆದೊಯ್ಯುತ್ತಾರೆ. ಏನೇ ಆಗಲಿ ಶಾಂತಿಯಿಂದ, ಅಹಿಂಸೆಯಿಂದ ಎಲ್ಲವನ್ನೂ ಸಹಿಸಬೇಕು”.

ಸರೋಜಿನಿಯವರಿಗೆ ಆಗ ಅನಾರೋಗ್ಯ. ಆದರೂ ಕರ್ತವ್ಯ ಆಕೆಗೆ ಮುಖ್ಯ. ಈ ಅಹಿಂಸೆಯ ಸೈನ್ಯದ ನಾಯಕರಾಗಿ ನಡೆದರು.

ಕೋಠಿಗೆ ಸ್ವಲ್ಪ ದೂರದಲ್ಲಿ ಸರೋಜಿನಿ ಸತ್ಯಾಗ್ರಹಿಗಳೊಂದಿಗೆ ಬಿಸಿಲಿನಲ್ಲಿ ಕುಳಿತರು. ನಡೆದು ಬಂದ ಆಯಾಸ. ಊಟವಂತೂ ಇಲ್ಲವೇ ಇಲ್ಲ, ಕುಡಿಯಲು ನೀರೂ ಇಲ್ಲ. ಸರೋಜಿನಿ ಎಲ್ಲರನ್ನೂ ಮಮತೆಯಿಂದ ಮಾತನಾಡಿಸುತ್ತಾ ನಗು ಮುಖದಿಂದಿದ್ದರು. ಪೊಲೀಸರು ಸ್ವಯಂಸೇವಕರನ್ನು ಮನಬಂದಂತೆ ಹೊಡೆದರು. ನೀರಿಗಾಗಿ ಹಾತೊರೆಯುತ್ತಿದ್ದ ಈ ಜನರ ಮಧ್ಯೆ ಬೇಕೆಂದು ನೀರಿನ ಪೀಪಾಯಿಗಳನ್ನು ಗಾಡಿಯಲ್ಲಿ ತಳ್ಳಿಕೊಂಡು ಹೋದರು; ಸತ್ಯಾಗ್ರಹಿಗಳಿಗೆ ಒಂದು ತೊಟ್ಟು ನೀರು ಕೊಡಲಿಲ್ಲ. ಸತ್ಯಾಗ್ರಹಿಗಳೂ ಒಂದು ತೊಟ್ಟು ನೀರನ್ನೂ ಕೇಳಬಾರದೆಂದು ನಿಶ್ಚಯಿಸಿದ್ದರು.

ಮೂರನೇ ದಿನ ಸತ್ಯಾಗ್ರಹಿಗಳನ್ನು ಕುರಿತು ಸರೋಜಿನಿ ಮತ್ತೆ ಹೇಳಿದರು: ” ಈ ದಿನ ಉಪ್ಪಿನ ಕೋಠಿಯ ಮೇಲೆ ದಾಳಿ ಮಾಡುವ. ಗಾಂಧೀಜಿ ದೇಹ ಸೆರೆಮನೆಯಲ್ಲಿದೆ, ಅವರ ಚೇತನ ನಮ್ಮ ಜೊತೆಗಿದೆ. ಪೊಲೀಸರು ನಮ್ಮನ್ನು ಹೊಡೆದು ಬಡಿದಾರು, ಗಾಯಗೊಳಿಸಿಯಾರು. ಆದರೆ ನಾವು ಪ್ರತಿಯಾಗಿ ಹೊಡೆಯಬಾರದು. ಇದನ್ನು ನಡೆಸುವಿರಾ?” ಸತ್ಯಾಗ್ರಹಿಗಳು, “ಆಗಲಿ” ಎಂದು ಒಪ್ಪಿದರು. “ಬೆಂಕಿಯಲ್ಲಿ ಧುಮಿಕಿ” ಎಂದರೂ ಅವರು ಸಿದ್ಧರಾಗಿದ್ದರು.

ಮೊದಲು ಪ್ರಾರ್ಥನೆ ನಡೆಯಿತು. ಅನಂತರ ಸರೋಜಿನಿಯವರೂ ಸ್ವಯಂ ಸೇವಕರೂ ಉಪ್ಪಿನ ಕೋಠಿ ಕಡೆ ನಡೆದರು. ಲಾಠಿ ಹಿಡಿದು ಪೊಲೀಸರು ಸಿದ್ಧರಾಗಿಯೇ ಇದ್ದರು. ಪ್ರತಿಯೊಂದು ಏಟಿಗೂ ಸ್ವಯಂ ಸೇವಕ-ಸೇವಕಿಯರು “ಭಾರತಮಾತಾ ಕೀ ಜೈ” ಎಂದು ಘೋಷಣೆ ಮಾಡುತ್ತಾ ನೆಲವನ್ನಪ್ಪಿಕೊಳ್ಳುತ್ತಿದ್ದರು. ಯಾರೊಬ್ಬರೂ ಹಿಂಜರಿಯಲಿಲ್ಲ. ರಕ್ತದಿಂದ ನೆಲ ತೊಯ್ದು ಹೋಯಿತು. ಸರೋಜಿನಿಯವರಿಗೂ ಏಟು ತಪ್ಪಲಿಲ್ಲ. ದಸ್ತಗಿರಿ ಮಾಡಲು ತನ್ನನ್ನು ಮುಟ್ಟಿದ ಪೊಲೀಸ್ ಅಧಿಕಾರಿಯನ್ನು ಗದರಿಸಿ, “ನಾನೇ ಬರುವೆ ನಡೆ” ಎಂದು ಅವನನ್ನು ಹಿಂಬಾಲಿಸಿದರು. ೧೯೩೦ರ ಮೇ ೧೬ರಂದು ಸರೋಜಿನಿಯವರನ್ನು ಮತ್ತು ಆಕೆಯ ಹಿಂಬಾಲಕರನ್ನು ಸೆರೆಮನೆಗೆ ಒಯ್ದರು. ಅನೇಕ ಗೃಹಿಣಿಯರು ತಮ್ಮ ಮನೆಗಳನ್ನೂ ಮಕ್ಕಳನ್ನೂ ತೊರೆದು ಬಂದಿದ್ದರು. ಪ್ರಾರಂಭದಲ್ಲಿ, ಈ ಹೋರಾಟದಲ್ಲಿ ಸ್ತ್ರೀಯರು ಸೇರುವುದು ಗಾಂಧೀಜಿಗೆ ಅಷ್ಟು ಒಪ್ಪಿಗೆ ಇರಲಿಲ್ಲ. ಆದರೆ ಈ ಎಲ್ಲ ಘಟನೆಗಳು ನಡೆದ ನಂತರ ಅವರೇ ಹೇಳಿದರು; “ಭಾರತದ ಸ್ತ್ರೀಯರು ಸ್ವಾತಂತ್ರ್ಯದ ಹೋರಾಟದಲ್ಲಿ ವಹಿಸಿದ ಭಾಗವನ್ನು ಕುರಿತು ಬಂಗಾರದ ಅಕ್ಷರಗಳಲ್ಲಿ ಬರೆದಿಡಬೇಕು”.

ಗಾಂಧೀಜಿಯ ಪ್ರಿಯ ಶಿಷ್ಯೆ

೧೯೩೧ರಲ್ಲಿ ಸರ್ಕಾರ ಎಲ್ಲರನ್ನೂ ಬಿಡುಗಡೆ ಮಾಡಿತು. ಇಂಗ್ಲೆಂಡಿನ ದುಂಡುಮೇಜಿನ ಸಮ್ಮೇಳನಕ್ಕೆ ಗಾಂಧೀಜಿ ಮತ್ತು ಅವರ ಪರಿವಾರಕ್ಕೆ ಕರೆ ಬಂದಿತು. ಆಗ ಸರೋಜಿನಿ ಒಬ್ಬರೇ ಭಾರತದ ಮಹಿಳಾ ಪ್ರತಿನಿಧಿ. ಮಿತ ಪರಿವಾರದೊಡನೆ ಗಾಂಧೀಜಿ ಇಂಗ್ಲೆಂಡಿಗೆ ತೆರಳಿದರು. ಲಂಡನಿನಲ್ಲಿದ್ದಾಗ ಬ್ರಿಟಿಷ್ ಚಕ್ರವರ್ತಿ ಐದನೆಯ ಜಾರ್ಜ್‌‌ರ ಅರಮನೆಯಲ್ಲಿ ಒಂದು ಸತಕ್‌ಆರ ಕೂಟ ನಡೆಯಿತು. “ಚಕ್ರವರ್ತಿ ದರ್ಬಾರಿನ ಯಾವ ನಿಯಮಗಳನ್ನೂ ನಾನು ಪಾಲಿಸೆ” ಎಂದು ಗಾಂಧೀಜಿ ಮೊದಲೇ ತಿಳಿಸಿದ್ದರು. ಅರಮನೆಯ ಭೋಜನ ಕೂಟಕ್ಕೆ ತಮ್ಮ ಸರಳವಾದ ಉಡುಪಿನಲ್ಲೇ ಎಲ್ಲರೂ ತೆರಳಿದರು. ಸರೋಜಿನಿ ಭಾರತೀಯ ಮಹಿಳೆಗೆ ತಕ್ಕ ಉಡುಪಿನಲ್ಲಿದ್ದರು. ಚಕ್ರವರ್ತಿಯ ಮಗ್ಗುಲಲ್ಲಿ ಈಕೆಗೆ ಪೀಠ ಏರ್ಪಡಿಸಲಾಗಿತ್ತು. ಭಾರತದ ಏಕೈಕ ಮಹಿಳಾ ಪ್ರತಿನಿಧಿ ಸರೋಜಿನಿ ದೇವಿಗೆ ಸಲ್ಲಬೇಕಾದ ಎಲ್ಲ ಮರ್ಯಾದೆಗಳೂ ಸಂದವು.

ಈ ದುಂಡುಮೇಜಿನ ಸಮ್ಮೇಳನದಿಂದ ಯಾವ ಪ್ರಯೋಜನವೂ ಭಾರತಕ್ಕೆ ಆಗಲಿಲ್ಲ. ಎಲ್ಲರೂ ಭಾರತಕ್ಕೆ ಹಿಂದಿರುಗುತ್ತಲೇ ಬ್ರಿಟಿಷ್‌ಸರ್ಕಾರ ಅವರನ್ನು ಜೈಲಿಗೆ ದೂಡಿತು.

ಹಿಂದು ಜನಾಂಗದಿಂದ ಹರಿಜನರನ್ನು ಪ್ರತ್ಯೇಕಿಸುವ ಕುತಂತ್ರವನ್ನು ಹೂಡಿದ ಸರ್ಕಾರವನ್ನು ಎದುರಿಸಲು ಗಾಂಧೀಜಿ ಉಪವಾಸ ವ್ರತ ಕೈಗೊಂಡರು. ಆ ಕಾರಾಗೃಹದಲ್ಲಿ ಸರ್ದಾರ್ ಪಟೇಲ್ ಮತ್ತು ಸರೋಜಿನಿಯವರು ಆ ಸಮಯದಲ್ಲಿ ಗಾಂಧೀಜಿ ಬಳಿ ಇದ್ದರು. ತಾಯಿ ಮಗುವಿನ ಬಗ್ಗೆ ಎಚ್ಚರಿಕೆ ವಹಿಸುಂತೆ ಸರೋಜಿನಿ ಎಚ್ಚರಿಕೆಯಿಂದ ಗಾಂಧೀಜಿಯವರ ಸೇವೆಯನ್ನು ಉಪವಾಸದ ದಿನಗಳಲ್ಲಿ ಮಾಡಿದರು. ಉಪವಾಸ ಮುಗಿದ ಮೇಲೂ ಭೇಟಿಗಾಗಿ ಬರುವ ಜನ ತೊಂದರೆ ಕೊಡದಂತೆ ಆಕೆ ನೋಡಿಕೊಂಡರು.

ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಹಂತ ತಲುಪಿದ್ದು ೧೯೪೨ರಲ್ಲಿ. “ಬ್ರಿಟಿಷರೆ, ಭಾರತ ಬಿಟ್ಟು ತೊಲಗಿ” ಎಂದು ಮಹಾತ್ಮರು ಘೋಷಿದರು, ಹೋರಾಟವನ್ನು ಪ್ರಾರಂಭಿಸಿದರು. ಗಾಂಧೀಜಿ, ಕಸ್ತೂರಿ ಬಾ ಮತ್ತು ಅವರ ಪರಿವಾರವನ್ನು ಸರ್ಕಾರ ದಸ್ತಗಿರಿ ಮಾಡಿತು. ಅವರ ಜೊತೆಗೆ ಸರೋಜಿನಿಯವರು. ಸರ್ಕಾರ ಇವರೆಲ್ಲರನ್ನು ಪುಣೆ ನಗರದ ಬಳಿ ಆಗಾಖಾನ್‌ಮಹಲಿನಲ್ಲಿ ಸೆರೆಯಾಗಿಟ್ಟಿತು. ೬೦-೭೦ ಕೋಣೆಗಳಿದ್ದು, ಪಾಳುಬಿದ್ದ ಆ ಭವನ ಇವರಿಗೆ ಸೆರೆಮನೆ. ಸುತ್ತಲೂ ಮುಳ್ಳುಬೇಲಿ. ಎಪ್ಪತ್ತೆರಡು ಮಂದಿ ಸಿಪಾಯಿಗಳು ಬಂದೂಕುಗಳನ್ನು ಹಿಡಿದುನಿಂತು ಪಹರೆ ತಿರುಗುತ್ತಿದ್ದರು. ಭೇಟಿಗೆ ಯಾರೂ ಬರಲು ಅವಕಾಶವಿಲ್ಲ. ಹೊರಗಡೆ ದೇಶದಲ್ಲಿ ಸತ್ಯಾಗ್ರಹಿಗಳ ಮೇಲೆ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯ ವಿಷಯ ಮಹಾತ್ಮ ಗಾಂಧಿಯವರಿಗೆ ತಿಳಿಯಿತು. ಅವರ ಮನಸ್ಸು ಬಹಳನೊಂದಿತು. ಇಪ್ಪತ್ತೊಂದು ದಿನಗಳ ಉಪವಾಸ ಮಾಡಿದರು. ಉಪವಾಸ ಮುಗಿಸುವ ಸಮಯದಲ್ಲಿ ಸರೋಜಿನಿ ಅವರ ಬಳಿ ಕುಳಿತು ಭಕ್ತಿಗೀತೆಗಳನ್ನು ಹಾಡಿದರು. ಕಸ್ತೂರಿ ಬಾ ಅವರು ಮಹಾತ್ಮರಿಗೆ ಹಣ್ಣಿನ ರಸ ಕುಡಿಯಲು ಕೊಟ್ಟರು.

ಅರವತ್ತಮೂರು ವರ್ಷದ ಸರೋಜಿನಿಯವರ ದೇಹಾರೋಗ್ಯವೂ ಕುಂದಿತು. ಅವರ ದಸ್ತಗಿರಿಯಾದಾಗ ಮನೆಯಲ್ಲಿ ಮಗಳಿಗೆ ಅನಾರೋಗ್ಯವಾಗಿತ್ತು. ಗಾಂಧೀಜಿ ಉಪವಾಸ ಸಮಯದಲ್ಲಿ ಜೈಲಿನ ಬಾಗಿಲು ಸಾರ್ವಜನಿಕರಿಗಾಗಿ ಕೆಲವು ದಿನ ಮಾತ್ರ ತೆರೆದಿತ್ತು. ಆಗ ಅವರ ಗಂಡ ಗೋವಿಂದರಾಜುಲು ನಾಯುಡುರವರೂ ಎಲ್ಲರಂತೆ ಬಂದು ಹೋದರು.

ಸೆರೆಮನೆಯ ವೈದ್ಯರು ಸರೋಜಿನಿಯವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯ ಎಂದರು. ಅವರನ್ನು ಬಿಡುಗಡೆ ಮಾಡಲು ಸರ್ಕಾರ ಒಪ್ಪಿತು. ಕಸ್ತೂರಿ ಬಾ ಮತ್ತು ಗಾಂಧೀಜಿಗೆ ನಮಸ್ಕರಿಸಿ ಹೊರಡುವಾಗ ಆ ಧೀರ, ವೀರ ಮಹಿಳೆಯ ಕಣ್ಣಂಚಿನಲ್ಲಿ ನೀರು ತುಳುಕಿತು. ಕಸ್ತೂರಿ ಬಾ ಆಕೆಯ ಎರಡು ಕೈಗಳನ್ನು ಹಿಡಿದು ಹೇಳಿದರು, “ನೀವು ಇನ್ನು ನೋಡಲಾರಿರಿ. ಇದೇ ಕೊನೆಯ ಬಾರಿ”. ” ೧೯೪೩ರ ಮಾರ್ಚ್‌೨೧ರಂದು ೧೦೨ ಡಿಗ್ರಿ ಜ್ವರದಿಂದ ಬಳಲುತ್ತಿದ್ದ ಸರೋಜಿನಿಯವರನ್ನು ಕರೆದೊಯ್ಯಲು ಅಂಬುಲೆನ್ಸ್‌ಕಾರ್ ಬಂದಿತು. ಒಂದೂವರೆ ವರ್ಷ ಆ ಕಾರಾಗೃಹದಲ್ಲಿ ಇದ್ದು ಬಿಡುಗಡೆ ಆದರು.

ಸರೋಜಿನಿಯವರಿಗೆ ಚಿಕಿತ್ಸೆಯಾಯಿತು. ಆರೋಗ್ಯ ಮೊದಲಿನಂತಾಯಿತು. ೧೯೪೪ರ ಫೆಬ್ರವರಿ ೨೨ರಂದು ಕಸ್ತೂರಿ ಬಾ ನಿಧನರಾದರು. ಅನಂತರ ಗಾಂಧೀಜಿ ಬಿಡುಗಡೆ ಮಾಡಲ್ಪಟ್ಟರು.

ಕಸ್ತೂರಿ ಬಾ ತೀರಿಕೊಂಡಾಗ ತಾವು ಅವರ ಬಳಿ ಇರಲಿಲ್ಲ ಎಂದು ಸರೋಜಿನಿಯವರಿಗೆ ತುಂಬ ದುಃಖವಾಯಿತು. ಕಸ್ತೂರಿ ಬಾ ಅವರ ನೆನಪಿಗಾಗಿ ನಿಧಿ ಕೂಡಿಸುವ ಕೆಲಸನ್ನು ಕೈಗೊಂಡರು. ೧೯೪೫ರ ಅಕ್ಟೋಬರಿನಲ್ಲಿ ಭಾರತದ ಜನತೆಯ ಪರವಾಗಿ ಕಸ್ತೂರಿ ಬಾ ನಿಧಿ ಎಂದು ಗಾಂಧೀಜಿಗೆ ಒಂದು ಲಕ್ಷ ರೂಪಾಯಿಗಳನ್ನು ಸಮರ್ಪಿಸಿದರು.

೧೯೪೭ರ ಮಾರ್ಚ್‌ತಿಂಗಳಲ್ಲಿ – ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾಗಿದ್ದಾಗ – ದೆಹಲಿಯಲ್ಲಿ ಏಷ್ಯದ ಬಾಂಧವ್ಯಗಳ ಸಮ್ಮೇಳನ ನಡೆಯಿತು. ಏಷ್ಯಾ ಖಂಡದ ಹಲವು ರಾಷ್ಟ್ರಗಳು ಸ್ವಾತಂತ್ರ್ಯದ ಹೊಸ್ತಿಲ ಮೇಲಿದ್ದವು; ಹಲವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವು. ಇಂತಹ ಮುಖ್ಯ ಘಟದಲ್ಲಿ ನಡೆದ ಈ ಸಮ್ಮೇಳನಕ್ಕೆ ಸರೋಜಿನಿ ಅಧ್ಯಕ್ಷಿಣಿಯಾಗಿದ್ದರು.

ಸ್ವಾತಂತ್ರ್ಯ ಬಂದಿತು

ಅಖಂಡ ಭಾರತದ ಸ್ವಾತಂತ್ರ್ಯದ ಕನಸನ್ನು ಕಂಡಿದ್ದ ಸರೋಜಿನಿಗೆ ತಮ್ಮ ಮಾತೃಭೂಮಿ ತುಂಡಾಗಿ ಹಂಚಿಕೆ ಆಗುವುದು ಅಪಾರ ವೇದನೆಗೆ ಕಾರಣವಾಯಿತು. ೧೯೪೭ರ ಆಗಸ್ಟ್‌೧೫ರಂದು ಹನಿಗಣ್ಣಿನಿಂದ ಭಾರತದ ಸ್ವಾತಂತ್ರ್ಯವನ್ನು ಕಂಡರು.

ಸರೋಜಿನಿ ಉತ್ತರ ಪ್ರದೇಶದ ಗವರ್ನರ್ ಆಗಿ ನೇಮಕವಾದರು. ಈ ವಯಸ್ಸಿನಲ್ಲಿ ಆಕೆಗೆ ಯಾವ ಪದವಿ ಬೇಡವಾಗಿದ್ದರೂ ನೆಹರೂರವರು ಒತ್ತಾಯ ಮಾಡಿದರು. ಮಹಾತ್ಮರು ಆಶೀರ್ವದಿಸಿ ಒಪ್ಪಿಗೆ ಕೊಟ್ಟರು. ಸರೋಜಿನಿ ಅಧಿಕಾರ ಸ್ವೀಕರಿಸಿದರು.

೧೯೪೮ರ ಜನವರಿ ೩೦, ಸರೋಜಿನಿಯವರ ನೆಚ್ಚಿನ ಗುರು, ನಾಯಕ ಗಾಂಧೀಜಿ ಗುಂಡಿಗೆ ಬಲಿಯಾದರು. ಸರೋಜಿನಿಯವರಿಗೆ ಇದೊಂದು ಪ್ರಬಲವಾದ ಆಘಾತ. ಅವರು ಗಾಂಧೀಜಿಯನ್ನು ಕುರಿತು ಮಾಡಿದ ಭಾಷಣ ಎಲ್ಲರ ಮನಸ್ಸನ್ನು ಕಲಕುವಂತಹದು. ತೀರಿಕೊಂಡ ಮಹಾನಾಯಕನಿಗೆ ಅವರು ಈ ಪ್ರಾರ್ಥನೆಯನ್ನು ಸಲ್ಲಿಸಿದರು: “ನೆಚ್ಚಿನ ಬಾಪೂ! ನಿನಗೆ ವಿರಾಮ ಬೇಡ. ನಮ್ಮ ದಾರಿಯನ್ನು ನೆನಪು ಮಾಡಿಕೊಡುತ್ತಿರು. ನನ್ನ ಉತ್ತರಾಧಿಕಾರಿಗಳಾದ ನಾವು ನಮ್ಮ ಕರ್ತವ್ಯವನ್ನು ಮರೆಯದಂತೆ ಕರುಣಿಸು”.

೧೯೪೯ರ ಫೆಬ್ರವರಿಯಿಂದ ಸರೋಜಿನಿಯವರ ದೇಹಾರೋಗ್ಯ ಇಳಿಮುಖವಾಯಿತು. ಆಕೆಯ ಪತಿ ನಾಯುಡುರವರೂ ಹೈದರಾಬಾದ್‌ನಲ್ಲಿ ಅಸ್ವಸ್ಥತೆಯಿಂದ ಬಳಲುತ್ತಿದ್ದರು.

ಮಾರ್ಚ್‌ಒಂದನೆಯ ದಿನಾಂಕ ರಾತ್ರಿ. ಅವರ ಬಳಿ ಕುಳಿತಿದ್ದ ದಾದಿಗೆ ಸರೋಜಿನಿ, “ಒಂದು ಹಾಡು ಹೇಳು” ಎಂದರು. “ತೊಂದರೆ ಕೊಡುತ್ತಿದ್ದೇನೆ ಅಲ್ಲವೆ?” ಎಂದರು ಹಾಗೆಯೇ ನಿದ್ರೆ ಮಾಡಿದರು. ಮರುದಿನ ಬೆಳಗಿನ ಜಾವ ಎಚ್ಚರಿಕೆಯಾಯಿತು. ಬೆಳಗ್ಗೆ ೩-೩೦ಕ್ಕೆ ತೀರಿಕೊಂಡರು. ಆಗ ಅವರಿಗೆ ೭೦ ವರ್ಷ.

ಪ್ರತಿಭೆ, ಹಿರಿಯ ವ್ಯಕ್ತಿತ್ವ

ಸರೋಜಿನಿ ನಾಯುಡು ಶ್ರೀಮಂತ ಮನೆಯಲ್ಲಿ ಹುಟ್ಟಿದರು. ಶ್ರೀಮಂತ ಗಂಡನ ಕೈ ಹಿಡಿದರು. ಬಹು ಸುಖದಿಂದ, ವೈಭವದಿಂದ ಬಾಳುವುದು ಅವರಿಗೆ ಸಾಧ್ಯವಿತ್ತು. ಶ್ರೀಮಂತಿಕೆಯ ಜೊತೆಗೆ ಅಸಾಧಾರಣ ಬುದ್ಧಿ ಶಕ್ತಿ, ಉಲ್ಲಾಸದ ಸ್ವಭಾವ, ಜನರೊಂದಿಗೆ ಸುಲಭವಾಗಿ ಬೆರೆಯುವ ಸಾಮರ್ಥ್ಯ ಅವರಿಗಿತ್ತು. ತಾಯ್ನುಡಿಯಲ್ಲಿ ಕವನ ಬರೆಯುವುದೇ ಕಷ್ಟ, ಇನ್ನೊಂದು ಭಾಷೆಯಲ್ಲಿ ಬರೆಯುವುದು ಇನ್ನೂ ಕಷ್ಟ. ಸರೋಜಿನಿ ಇಂಗ್ಲಿಷ್‌ಭಾಷೆಯಲ್ಲಿ ಕವನಗಳನ್ನು ಬರೆದು ಇಂಗ್ಲಿಷ್‌ಓದುಗರನ್ನು ಮೆಚ್ಚಿಸಿದರು. ಐಶ್ವರ್ಯ, ಸುಖ, ವೈಭವ, ಕೀರ್ತಿ ಎಲ್ಲ ಅವರ ಪಾಲಿಗಿತ್ತು. ಆದರೆ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಪ್ರೀತಿಯ ಗಂಡ ಮತ್ತು ಮಕ್ಕಳಿಂದ ದೂರವಾಗಬೇಕಾಯಿತು, ಊರುರು ಅಲೆಯಬೇಕಾಯಿತು, ಸೆರೆಮನೆ ಸೇರಬೇಕಾಯಿತು. ಸತ್ಯಾಗ್ರಹಿಗಳ ನಾಯಕತ್ವ ವಹಿಸಿದರು. ಅನಾರೋಗ್ಯ ಸ್ಥಿತಿಯಲ್ಲಿ ಮೈಲಿಗಟ್ಟಲೆ ನಡೆದರು. ಲಾಠಿ ಏಟನ್ನು ಎದುರಿಸಿದರು, ಹಿಂದು-ಮುಸ್ಲಿಂ ಮೈತ್ರಿಆಗಿ ಶ್ರಮಿಸಿದರು. ಕಸ್ತೂರಿ ಬಾ, ಕಮಲಾ ನೆಹರೂ ಮೊದಲಾದ ನಾಡಿನ ಅತಿ ಹಿರಿಯ ನಾಯಕಿಯರ ಪಂಕ್ತಿಯಲ್ಲಿ ಬೆಳಗಿದರು ಸರೋಜಿನಿ ನಾಯುಡು.

ಎಲ್ಲ ಕಷ್ಟ, ಹೋರಾಟಗಳ ನಡುವೆ ಜೀವನದಲ್ಲಿ ಆಸಕ್ತಿ, ಸಂತೋಷ ಎಳ್ಳಷ್ಟೂ ಆಕೆಗೆ ಕುಂದಲಿಲ್ಲ. ಉಡುಗೆ-ತೊಡುಗೆಗಳಲ್ಲಿ ಬಹು ನಯ, ನಾಜೂಕು. ಯಾವ ಸಭೆಗೆ ಹೋಗಬೇಕಾದರೂ ಯಾವ ಸೀರೆ ಉಡಬೇಕು ಎಂದು ಯೋಚಿಸುವರು. ಬಹುಕಾಲ ಅವರು ಒಡವೆಗಳನ್ನು ಹಾಕಿಕೊಳ್ಳುತ್ತಿದ್ದರು. ಅದರಲ್ಲಿಯೂ ಒಳ್ಳೆಯ ಅಭಿರುಚಿ. ಆಡಂಬರವಿಲ್ಲದಂತೆ ಒಡವೆಗಳನ್ನು ಧರಿಸುವರು. ಸದಾ ನಗು ಮುಖ, ಉಲ್ಲಾಸದ ಪ್ರವೃತ್ತಿ. ಕಡೆಯ ವರ್ಷಗಳಲ್ಲಿ ಸ್ವಲ್ಪ ದಪ್ಪ ದೇಹವಾದರೂ ಚಟುವಟಿಕೆ ಕುಂದಿರಲಿಲ್ಲ. ಚುರುಕು ಬುದ್ಧ. ಕ್ಷಣದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲರು. ದಿಟ್ಟತನ, ಗಾಂಭೀರ್ಯಗಳೊಂದಿಗೆ ಹಾಸ್ಯ ಬೆರೆತ ಪ್ರವೃತ್ತಿ. ಆದರೆ ಹಾಸ್ಯದಲ್ಲಿ ಕಹಿ ಇಲ್ಲ. ಅಹಂಭಾವವಿಲ್ಲ. “ಸರೋಜಿನಿ ದೇವಿ ಬಂದರು ಎಂದರೆ ನೂರು ದೀಪಗಳು ಒಮ್ಮೆಗೆ ಹತ್ತಿದಷ್ಟು ಬೆಳಕು” ಎನ್ನುತ್ತಿದ್ದರು ಸರ್ದಾರ್ ಪಟೇಲರು.

ಹಾಸ್ಯಪ್ರಿಯೆಯಾದ ಸರೋಜಿನಿ ಎಲ್ಲರನ್ನೂ ಕೀಟಲೆ ಮಾಡಿ ನಗುಸುತ್ತಿದ್ದರು. ಉಕ್ಕಿನ ಮನುಷ್ಯರೆಂದು ಹೆಸರಾಗಿದ್ದ ಸರ್ದಾರ್ ಪಟೇಲರನ್ನು, “ಬಾರ್ಡೋಲಿ ಬಸವ”ನೆಂದು, ಸಣಕಲು ಮೈಯ ಕೃಪಲಾನಿಯವರನ್ನು “ಬೆದರು ಗೊಂಬೆ” ಎಂದು ಕರೆಯುತ್ತಿದ್ದರು. ಇವರ ಹಾಸ್ಯಕ್ಕೆ ಹೆಚ್ಚು ಗುರಿಯಾಗುತ್ತಿದ್ದವರೆಂದರೆ ಎಲ್ಲರಿಗಿಂತಲೂ ಚಿಕ್ಕವರಾದ ನೆಹರೂರವರು. “ಮುದ್ದು ಮೋಹನ ರಾಜಕುಮಾರ, ಭಾರತರತ್ನವೆ” ಎಂದು ಜವಾಹರರನ್ನು ಹಾಸ್ಯ ಮಾಡುವರು. ನೆಹರೂರವರೇನು ಕಡಿಮೆಯೆ? “ಭಾರತದ ಕೋಗಿಲೆ, ಸ್ವಲ್ಪ ಸುಮ್ಮನಾಗು” ಎನ್ನುವರು.

ಸೇವಾಗ್ರಾಮದಲ್ಲಿ ಕಸ್ತೂರಿ ಬಾ ಸ್ಮಾರಕ ನಿಧಿ ಗಾಂಧೀಜಿಗೆ ಅರ್ಪಿಸುವ ಸಂದರ್ಭ. ವೇದಿಕೆ ಮೇಲೆ ಕುಳಿತಿದ್ದ ಗಾಂಧೀಜಿಗೆ ಸರೋಜಿನಿ, ಹಿಂದು ಸಂಪ್ರದಾಯದಂತೆ ಕುಂಕುಮದ ತಿಲಕವಿಟ್ಟರು. ದೃಷ್ಟಿ ತೆಗೆದು ನಿವಾಳಿಸಿದರು. ಆಗ ಸಭೆ ಗೊಳ್ಳೆಂದು ನಕ್ಕಿತು. ನಿಧಿ ಹಣವನ್ನು ಕೈಯಲ್ಲಿ ಎತ್ತಿಹಿಡಿದು, “ಬಾಪೂಜಿ! ಈ ನಿಧಿ ನಿಮಗೆ ಕೊಡದೆ ನಾನೆ ಎತ್ತಿಕೊಂಡು ಓಡಿದರೆ ಏನು ಮಾಡುವಿರಿ?” ಎಂದು ಕೇಳಿದರು. “ನಾನು ಬಲ್ಲೆ, ನಿನ್ನಲ್ಲಿ ಅಂತಹ ಸಾಮರ್ಥ್ಯವಿದೆ. ಒಂದು ಮಾತ್ರ ನಿಜ; ಎಲ್ಲಿ ಹೋದರೂ ನೀನು ಇದನ್ನು ಸದ್ವಿನಿಯೋಗ ಮಾಡುವಿ” ಎಂದು ಗಾಂಧೀಜಿ ಉತ್ತರ ಕೊಟ್ಟರು. ಅಲ್ಲಿದ್ದವರೆಲ್ಲಾ ಮತ್ತೆ ನಕ್ಕರು.

"ನನಗನ್ನಿಸಿತ್ತು ನೀವು ಬರುತ್ತೀರಿ ಎಂದು."

೧೯೪೨ರಲ್ಲಿ ಗಾಂಧೀಜಿ, “ಬ್ರಿಟಿಷರೆ, ಭಾರತ ಬಿಟ್ಟು ಹೊರಡಿ” ಎಂಬ ಘೋಷಣೆಯ ಸತ್ಯಾಗ್ರಹ ಪ್ರಾರಂಭಿಸಿದರಷ್ಟೆ. ಬೆಳಗಿನ ಜಾವವೇ ಎದ್ದು ಸರೋಜಿನಿ ಸ್ನಾನ ಮಾಡಿ ತಮ್ಮ ಸಾಮಾನುಗಳನ್ನೆಲ್ಲ ಕಟ್ಟಿಟ್ಟು ಕೊಂಡರು – ದಸ್ತಗಿರಿಯಾಗಲು ಸಿದ್ಧವಾಗಿ. ಬೆಳಗ್ಗೆ ನಾಲ್ಕು ಗಂಟೆಗೆ ಪೊಲೀಸರು ಬಂದು ಬಾಗಿಲು ತಟ್ಟಿದರು. ಸರೋಜಿನಿ ಹೊರಡಲು ಸಿದ್ಧರಾಗಿದ್ದರು. ಪೊಲೀಸ್‌ಅಧಿಕಾರಿಗಳಿಗೆ ಅಚ್ಚರಿಯಾಯಿತು. “ನಿಮ್ಮ ದಸ್ತಗಿರಿಯಾಗುತ್ತದೆ ಅಂತ ನಿಮಗೆ ಹೇಗೆ ತಿಳಿಯಿತು? ನಮಗೆ ತಿಳಿದದ್ದೆ ಒಂದು ಗಂಟೆಯ ಹಿಂದೆ” ಎಂದರು. “ನನ್ನಗನ್ನಿಸಿತ್ತು ನೀವು ಬರುತ್ತೀರಿ ಎಂದು” ಎಂದರು ಸರೋಜಿನಿ.

ದೇಶಕ್ಕಾಗಿ ಯಾವ ಕಷ್ಟ ಪಡುವುದಕ್ಕೂ ಸಿದ್ಧ ಈ ನಗು ಮುಖದ, ನಗು ಮಾತಿನ, ವೀರ ಮಹಿಳೆ.