ಸಂಗೀತ ಮನೆತನದಲ್ಲಿ ಜನಿಸಿ, ಹಿಂದೂಸ್ಥಾನಿ ಸಂಗೀತದಲ್ಲಿ ಉನ್ನತ ಶಿಕ್ಷಣ ಪಡೆದು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಶ್ರದ್ಧೆಯಿಂದ ಸಾಧನೆಗೈಯುತ್ತ ಕಲಾ ಸೇವೆ ಮಾಡುತ್ತಿರುವ ಶ್ರೀಮತಿ ಸರೋಜ ಎನ್‌. ಅನಗರ್ ಕರ್ ಅವರು ಹೈದ್ರಾಬಾದ್‌ ಕರ್ನಾಟಕದ ಮಹಿಳಾ ಗಾಯಕಿರಲ್ಲೊಬ್ಬರು. ೧೯೪೫ರಲ್ಲಿ ಸಂಗೀತ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಸರೋಜ ಎನ್‌. ಅನಗರ್ಕರ್ ಅವರಿಗೆ ಸಂಗೀತದಲ್ಲಿ ಪ್ರಾರಂಭಿಕ ಶಿಕ್ಷಣ ದೊರೆತಿದ್ದು. ದೃಪದ್‌-ದಮಾರ್ ಗಾಯನ ಶೈಲಿಯಲ್ಲಿ ಪ್ರಾವೀಣ್ಯತೆ ಹೊಂದಿದ್ದ ಅವರ ಅಜ್ಜ ಶ್ರೀಪತ್‌ರಾವ್‌ ಅನಗರ್ ಕರ್ಅವರಲ್ಲಿ. ನಂತರ ಶ್ರೀ ಪಾಂಡುರಂಗರಾವ್‌ ಪತಕೆ ಅವರಲ್ಲಿ ಉನ್ನತ ಅಭ್ಯಾಸ ಮಾಡಿ, ಮುಂಬೈಯ ಗಂಧರ್ವ ಮಹಾ ವಿದ್ಯಾಲಯದ ಸಂಗೀತ ಅಲಂಕಾರ ಪದವಿ ಗಳಿಸಿದ್ದಾರೆ. ಅಲ್ಲದೆ ಕರ್ನಾಟಕ ಸರ್ಕಾರದ ವಿದ್ವತ್‌ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸುಮಾರು ೧೦ ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದು, ಇವರ ಮಾರ್ಗದರ್ಶನದಲ್ಲಿ ಕಲಿತ ಅನೇಕ ಯುವ ಸಂಗೀತ ಕಲಾವಿದರು ಸಂಗೀತ ಎಂ.ಎ. ಪದವಿ ಗಳಿಸಿರುತ್ತಾರೆ. ಜೊತೆಗೆ ಪ್ರಸಿದ್ಧ ಗಾಯಕರಾಗಿ ಹೆಸರು ಮಾಡಿದ್ದಾರೆ.

ಸುಗಮ ಸಂಗೀತದಲ್ಲೂ ಪ್ರಾವೀಣ್ಯತೆ ಇರುವ ಶ್ರೀಮತಿ ಸರೋಜ, ಸಾರ್ವಜನಿಕ ಶಿಕ್ಷಣ ಇಲಾಖೆಯ ಗುಲ್ಬರ್ಗಾ ವಿಭಾಗದಲ್ಲಿ ಸಂಗೀತ, ನಾಟಕ ಮತ್ತು ವಿಭಾಗದ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಲ್ಬರ್ಗಾದ ನೂತನ ವಿದ್ಯಾಲಯ ಸಂಸ್ಥೆಯ ಕಲಾ ಮಹಾ ವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದಲ್ಲಿ ಗೌರವ ಸಂಗೀತ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೦-೦೧ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.