‘ಮನುಷ್ಯ ಈ ನೆಲದ ಮೇಲೆ ಕಂಡಿರಬಹುದಾದ ಅತ್ಯಂತ ಸುಂದರ ಸ್ಥಾನಗಳಲ್ಲಿ ಒಂದು’ ಎಂದು, ಕವಿ ವರ್ಡ್ಸ್‌ವರ್ತ್ ವರ್ಣಿಸಿದ ‘ಲೇಕ್ ಡಿಸ್ಟ್ರಿಕ್ಟ್’ ಇಂಗ್ಲೆಂಡಿನ ವಾಯುವ್ಯ ಭಾಗದಲ್ಲಿರುವ ನಿಸರ್ಗ ರಮಣೀಯವಾದ ಒಂದು ಪರಿಸರವಾಗಿದೆ. ಎತ್ತರವಾದ ಕೋಡುಗಲ್ಲಿನ ಶಿಖರಗಳು, ಆಳವೂ ಅಗಲವೂ ಆದ ಹಸಿರು ಕಣಿವೆಗಳು, ಅಲೆಯಲೆಯಾದ ಬೆಟ್ಟಗಳು, ದಟ್ಟವಾದ ಕಾಡುಗಳು, ದಾರಿಯುದ್ದಕ್ಕೂ ಅಲ್ಲಲ್ಲಿ ಥಟ್ಟನೆ ತೆರೆದುಕೊಳ್ಳುವ ಸರೋವರಗಳು, ಪ್ರಶಾಂತವಾದ ಗ್ರಾಮಾಂತರ ಪರಿಸರದ ಹಳ್ಳಿಗಳು, ಹರಿದೋಡುವ ನದಿಗಳು, ಕೋಡುಗಲ್ಲುಗಳಿಂದ ಧುಮುಕಿ ಬೆಳ್ಳಂಗೆಡೆದು ತುತ್ತೂರಿಯೂದುವ ಜಲಪಾತಗಳು – ಇತ್ಯಾದಿಗಳಿಂದ, ಈ ಪರಿಸರ ಇಡೀ ಇಂಗ್ಲೆಂಡಿನಲ್ಲಿಯೇ ಅತ್ಯಂತ ಸುಂದರವೂ, ಚೇತೋಹಾರಿಯೂ ಆದ ಪ್ರದೇಶವಾಗಿದೆ. ಲೇಕ್ ಡಿಸ್ಟ್ರಿಕ್ಟ್ ಮತ್ತು ಅದರ ದಕ್ಷಿಣಕ್ಕಿರುವ ಯಾರ್ಕ್‌ಷೈರ್ ಡೇಲ್ – ಎಂಬ ಈ ಒಟ್ಟು ಆರುನೂರಾ ಇಪ್ಪತ್ತು ಚದುರ ಮೈಲಿಗಳ ಹರಹನ್ನು ಬಿಟ್ಟರೆ, ಬಹುತೇಕ ಇಂಗ್ಲೆಂಡಿನ ನೆಲ ಒಂದು ಬಗೆಯ ಸಮತಲದ ಏರಿಳಿತಗಳಿಂದ ಕೂಡಿದೆಯೆ ಹೊರತು, ಇಲ್ಲಿನ ಹಾಗೆ, ಪರ್ವತಾರಣ್ಯಗಳ ಸಮೃದ್ಧಿಯಿಂದ ಬೆರಗುಗೊಳಿಸುವುದಿಲ್ಲ. ಲೇಕ್ ಡಿಸ್ಟ್ರಿಕ್ಟ್ ಎಂದೂ, ‘ವರ್ಡ್ಸ್‌ವರ್ತ್‌ಕಂಟ್ರಿ’, ಎಂದೂ ಕರೆಯಲಾಗುವ ಈ ಪರಿಸರದ ಮಧ್ಯೆ ಇರುವ ವಿಂಡರ್ ಮಿಯರ್, ಅಂಬಲ್ ಸೈಡ್, ಗ್ರಾಸ್ ಮಿಯರ್, ರೈಡಲ್ ಮೌಂಟ್, ಕೆಸ್ವಿಕ್ – ಈ ಊರುಗಳು, ಕವಿ ವರ್ಡ್ಸ್‌ವರ್ತ್‌ನ ಸಂಚಾರ ಭೂಮಿಕೆಗಳು ಮಾತ್ರವಲ್ಲ, ಇಂದಿಗೂ ಕಾವ್ಯಪ್ರಿಯರ ‘ದರ್ಶನ’ ಸ್ಥಾನಗಳೂ, ಪ್ರವಾಸಿಗಳ ಹಾಗೂ ಸಾಹಸಿಗಳ ವಿಹಾರ ಸ್ಥಾನಗಳೂ ಆಗಿವೆ. ಈ ಪರಿಸರದಲ್ಲಿ ಕಾಡು ಬೆಟ್ಟ – ಕಣಿವೆಗಳ ಜತೆಗೆ, ಬಹುಸಂಖ್ಯೆಯ ಸರೋವರಗಳಿರುವುದರಿಂದ ಇದನ್ನು ಲೇಕ್‌ಡಿಸ್ಟ್ರಿಕ್ – ಸರೋವರ ಮಂಡಲ – ಎಂದು ಅನ್ವರ್ಥಕವಾಗಿಯೇ ಕರೆಯಲಾಗಿದೆ. ಇಲ್ಲಿ ಹತ್ತರಷ್ಟು ಸಂಖ್ಯೆಯ ಸರೋವರಗಳಿದ್ದು, ವಿಂಡರ್‌ಮಿಯರ್ ಸರೋವರವೇ ಹತ್ತೂವರೆ ಮೈಲಿಯಷ್ಟು ಸುದೀರ್ಘವಾಗಿದೆ. ನಾವು – ನಾನು, ಪ್ರಸಾದ್, ಪೂರ್ಣಿಮಾ, ಮತ್ತು ಪುಟ್ಟ ಮೊಮ್ಮಗಳು ಅನನ್ಯ – ಉಳಿದುಕೊಂಡದ್ದು, ಈ ಸರೋವರದ ಹತ್ತಿರ ಇರುವ ವಿಂಡರ್ ಮಿಯರ್ ಎಂಬ ಪುಟ್ಟ ಊರಿನ ‘ರಾಕ್‌ಲೀ’ – ಎಂಬ ಹೆಸರಿನ ಬೆಡ್ ಅಂಡ್ ಬ್ರೇಕ್‌ಫಾಸ್ಟ್ ಹೋಂನಲ್ಲಿ.

ನಾವು ಇಲ್ಲಿಗೆ ಬಂದದ್ದು ಅಕ್ಟೋಬರ್ ಮೊದಲ ವಾರದಲ್ಲಿ. ಇಂಗ್ಲೆಂಡಿನಲ್ಲಿ ಅಕ್ಟೋಬರ್ ಎಂದರೆ ಅದಾಗಲೇ ಛಳಿಗಾಲದ ಹೊಸ್ತಿಲು. ಬರ್ಟನ್‌ದಿಂದ ಮೂರು ಗಂಟೆಗಳ ಪಯಣದ ದಾರಿಯುದ್ದಕ್ಕೂ ಮಬ್ಬು ಕವಿದುಕೊಂಡು, ತಣ್ಣನೆಯ ಗಾಳಿಯೊಂದು ಮರಗಿಡಗಳ ಮೈಯನ್ನು ಹಿಡಿದು ಅಲ್ಲಾಡಿಸುತ್ತಿತ್ತು. ಇದಕ್ಕೆ ಹಿಂದಿನ ತಿಂಗಳುಗಳಲ್ಲಾಗಿದ್ದರೆ, ಹವಾಮಾನ ಒಂದಷ್ಟು ಹಿತವಾಗಿರುತ್ತಿತ್ತೆಂಬುದು ನಿಜವಾದರೂ, ಲೇಕ್ ಡಿಸ್ಟ್ರಿಕ್ಟ್‌ನ ಪರಿಸರ ಬಹುಸಂಖ್ಯೆಯ ಪ್ರವಾಸಿಗಳಿಂದ ಕಿಕ್ಕಿರಿದಿರುತ್ತಿತ್ತಲ್ಲದೆ, ಉಳಿದುಕೊಳ್ಳಲು ಎಷ್ಟೋ ವೇಳೆ ವಸತಿ ಸೌಕರ್ಯವೂ ದೊರೆಯದೆ ಹೋಗುವ ಪರಿಸ್ಥಿತಿಯೂ ಪ್ರಾಪ್ತವಾಗುವುದೆಂದು ಹೇಳಲಾಗಿದೆ. ಅಕ್ಟೋಬರ್ ತಿಂಗಳು ಅಂಥ ನೂಕುನುಗ್ಗಲ ಕಾಲವಲ್ಲ; ಜತೆಗೆ ನಾವು ಹೊರಡುವ ಒಂದು ದಿನವಿರುವಾಗಲೇ ವಿಂಡರ್ ಮಿಯರ್‌ನ ವಸತಿಗೃಹಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ‘ರಾಕ್ ಲೀ’ ಎಂಬ ಹೆಸರಿನ ಈ ‘ಬಿ ಅಂಡ್ ಬಿ’ ಯನ್ನು ಗೊತ್ತು ಮಾಡಿಕೊಂಡಿದ್ದೆವು. ಮಧ್ಯಾಹ್ನ ಹನ್ನೆರಡೂವರೆಯ ವೇಳೆಗೆ ವಿಂಡರ್ ಮಿಯರ್ ಎಂಬ ಪ್ರಶಾಂತವಾದ ಊರನ್ನು ತಲುಪಿ, ‘ರಾಕ್‌ಲೀ’ ವಸತಿಗೃಹದ ಮಹಡಿಯ ಮೇಲಿನ ಎರಡು ಸುಸಜ್ಜಿತ ಕೋಣೆಗಳಲ್ಲಿ ಕಾಲಿಟ್ಟು, ಬದಿಯಲ್ಲೇ ಹರಿಯುತ್ತಿದ್ದ ಅತ್ಯಂತ ಶುಭ್ರವಾದ ಜಲವಾಹಿನಿಯ ಮರ‍್ಮರವನ್ನಾಲಿಸುತ್ತ – ಸಂಜೆ ನಾಲ್ಕರವರೆಗೆ ವಿಶ್ರಮಿಸಿ, ಬೆಚ್ಚನೆಯ ಬಟ್ಟೆ ತೊಟ್ಟು, ಛತ್ರಿಗಳನ್ನು ಜತೆ ಮಾಡಿಕೊಂಡು ನಮ್ಮ ಕಾರಿನಲ್ಲಿ ವಿಂಡರ್ ಮಿಯರ್‌ನ ಪೇಟೆ ಬೀದಿಗಳನ್ನು ದಾಟಿ, ಸರೋವರದ ಬದಿಗೆ ಹೋದೆವು. ಸರೋವರದ ಅಂಚಿನ ಈ ಭಾಗವನ್ನು ‘ಬವ್ನೆಸ್‌ಬೇ’ ಎಂದು ಕರೆಯಲಾಗಿದೆ. ಬವ್ನೆಸ್ ಎನ್ನುವುದು ಈ ಸರೋವರದ ತೀರದ ಒಂದು ಹಳ್ಳಿ; ಈಗ ಅದು ವಿಂಡರ್ ಮಿಯರ್‌ನ ಒಂದು ಭಾಗವೇ ಆಗಿದೆ. ‘ಬವ್ನೆಸ್ ಬೇ ಬೋಟಿಂಗ್ ಕಂಪನಿ’ಯ ನೂರಾರು ದೋಣಿಗಳು ದಡಕ್ಕೆ ಕಟ್ಟಲ್ಪಟ್ಟಿದ್ದವು. ಇಲ್ಲಿಂದ ಪ್ರವಾಸಿಗಳನ್ನು ಕರೆದುಕೊಂಡು ಈ ಸರೋವರದ ನೀರಿನ ಮೇಲೆ ಸಂಚರಿಸುವ ಲಾಂಚ್‌ಗಳೂ, ಸ್ಟೀಮರುಗಳೂ, ಸಂಜೆಯ ಕಡೆಯ ಕಂತಿನ ಪಯಣಕ್ಕೆ ಹೋಗಿದ್ದವು. ಈ ತಿಂಗಳಲ್ಲಿ ನಾಲ್ಕು ಗಂಟೆಯ ವೇಳೆಗೆ ಸೂರ್ಯ ಪಡುವಣದ ಅಂಚಿನ ಕಡೆಗೆ ಧಾವಿಸುವುದರಿಂದ, ಐದು ಗಂಟೆಗೆ ಪ್ರವಾಸಿಗಳ ಸಂಚಾರ ಬಂದ್ ಆಗಿ, ಮತ್ತೆ ಅದು ಬೆಳಿಗ್ಗೆ ಒಂಬತ್ತು ಗಂಟೆಗೆ ಪ್ರಾರಂಭವಾಗುವುದೆಂಬ ಸಂಗತಿಯನ್ನು ತಿಳಿದ ನಾವು, ಆ ಸರೋವರದ ಅಂಚಿನಲ್ಲೆ ನಡೆದು, ಬದಿಗಿದ್ದ ಎತ್ತರದ ಹಸಿರು ದಿಬ್ಬಗಳನ್ನೇರಿ, ಅಲ್ಲಿ ನಿರ್ಮಿಸಿದ ವೃತ್ತಾಕಾರದ, ಮಂಟಪಗಳಲ್ಲಿ ಕುಳಿತೆವು. ಸರೋವರ ಮೈಲಿ ಮೈಲಿಗಳಗಲಕ್ಕೆ ಚಾಚಿಕೊಂಡಿತ್ತು. ಅದರ ಒಂದು ಅಂಚಿನ ಉದ್ದಕ್ಕೂ ದಟ್ಟ ಹಸುರಿನ ಟಗರುಮೈ ಗುಡ್ಡಗಳು; ದೂರ ದೂರದಲ್ಲಿ ಏರಿಳಿವ ಅಸ್ಪಷ್ಟ ಗಿರಿಶ್ರೇಣಿಗಳು;  ಆ ಶ್ರೇಣಿಗಳ ನಡುವೆ ಎಲ್ಲೋ ಮುಳುಗುವ ಸೂರ್ಯನ ಕ್ಷೀಣಕಾಂತಿಯ ಬೆಳಕುಗಳು; ನಾವು ಕೂತ ದಿಬ್ಬದ ಬಲಕ್ಕೆ ವಿಂಡರ್‌ಮಿಯರ್ ಎಂಬ ಊರಿನ ಮನೆ ಮನೆಯೊಳಗೆ ಮಿಣುಕುವ ದೀಪಗಳು.

ಮರುದಿನ ಬೆಳಿಗ್ಗೆ ಬೇಗ ಎದ್ದು, ದಿಢೀರ್ (ಇನ್‌ಸ್ಟೆಂಟ್) ಕಾಫಿ ಮಾಡಿಕೊಳ್ಳಲು, ವಸತಿಗೃಹದವರೇ ನನ್ನ ಕೋಣೆಯಲ್ಲಿ ಇರಿಸಿದ ವಸ್ತುಗಳಿಂದ (ಹಾಲಿನ ಪ್ಯಾಕೆಟ್, ಕಾಫಿ ಪುಡಿಯ ಪ್ಯಾಕೆಟ್, ಕೆಟಲ್ ಇತ್ಯಾದಿ) ಸೊಗಸಾದ ಕಾಫಿ ತಯಾರಿಸಿ, ಅಲ್ಲೇ ಇದ್ದ ಸಕ್ಕರೆಯ ಪುಟ್ಟ ಪ್ಯಾಕೆಟ್ಟಿನ ಅಂಚನ್ನು ಹರಿದು ಕಾಫಿ ಬಟ್ಟಲಿಗೆ ಸುರಿದುಕೊಂಡೆ. ನೋಡುತ್ತೇನೆ, ಆ ಪುಟ್ಟ ಸಕ್ಕರೆಯ ಪ್ಯಾಕೆಟ್‌ನ ಮೇಲೆ ಹಸಿರು ಬಣ್ಣದ ಅಕ್ಷರಗಳ ಪಂಕ್ತಿಗಳು. ಅದೇನೆಂದು ಗಮನಿಸಿದಾಗ ವರ್ಡ್ಸ್‌ವರ್ತ್ ಕವಿಯ ತುಂಬ ಜನಪ್ರಿಯವಾದ ಡ್ಯಾಫಡೈಲ್ಸ್ ಎಂಬ ಕವಿತೆಯ ಮೊದಲ ಆರು ಪಂಕ್ತಿಗಳು ! ‘I wandered lonely as a Cloud’ ಎಂಬ ಮೊದಲ ಸಾಲಿನಿಂದ ‘Fluttering and dancing in the breeze’ ಎಂಬಲ್ಲಿನ ವರೆಗೆ. ಅದರ ಕೆಳಗೆ William Words worth 1770-1850 ಎಂದಿದೆ. ಕೂಡಲೇ ನನ್ನ ಮನಸ್ಸು ಅರುವತ್ತು ವರ್ಷಗಳ ಹಿಂದಿನ ನನ್ನ ಮಾಧ್ಯಮಿಕ ಶಾಲೆಯ ದಿನಗಳಿಗೆ ಮಿಂಚಿನ ವೇಗದಲ್ಲಿ ಸಂಚಾರಮಾಡಿತು. ವರ್ಡ್ಸ್‌ವರ್ತ್ ಕವಿ ಅಂದಿನ ನನ್ನ ಬಾಲ್ಯದ ಸ್ಮೃತಿಯೊಳಕ್ಕೆ ಪ್ರವೇಶ ಮಾಡಿದ್ದೇ ಈ ಒಂದು ಪದ್ಯದ ಮೂಲಕ. ಆ ಅಂದಿನ ಕನ್ನಡ ನಾಡಿನ ಆ ಹಳ್ಳಿಯ ಶಾಲೆಗೂ, ಈ ಇಂದಿನ ಇಂಗ್ಲೆಂಡಿನ ವಿಂಡರ್ ಮಿಯರ್‌ನ ರಾಕ್ ಲೀ ವಸತಿಗೃಹಕ್ಕೂ ಈ ಕವಿತೆ ಕ್ಷಣಾರ್ಧದಲ್ಲಿ ಕಲ್ಪಿಸಿದ ಮಧುರಬಾಂಧವ್ಯಕ್ಕೆ ಬೆರಗಾದೆ. ‘ಎತ್ತಣ ಮಾಮರ ಎತ್ತಣ ಕೋಗಿಲೆ. ಎತ್ತಣಿಂದೆತ್ತ ಸಂಬಂಧವಯ್ಯಾ’?

ನಮ್ಮ ವಸತಿಗೃಹದ ದಂಪತಿಗಳು ಬೆಳಿಗ್ಗೆ ಎಂಟೂವರೆಗೆ ಕೊಟ್ಟ ಬ್ರೆಕ್‌ಫಾಸ್ಟ್‌ನ್ನು ಮುಗಿಸಿ, ‘ಬವ್ನೆಸ್‌ಬೇ’ಯನ್ನು ತಲುಪಿ, ಹೊರಡಲಿರುವ ಲಾಂಚ್‌ಗೆ ಕಾದೆವು. ಆಶ್ಚರ್ಯವೆಂದರೆ ಹಿಂದಿನ ದಿನ ಕವಿದುಕೊಂಡ ಮಬ್ಬು ಕರಗಿ ಬೆಚ್ಚನೆಯ ಬಿಸಿಲು – ನೆಲ ಮುಗಿಲನ್ನು ತಬ್ಬಿಕೊಂಡಿತ್ತು. ಲಾಂಚುಗಳೂ, ಸ್ಟೀಮರುಗಳೂ, ನಾವಾಗಿಯೇ ಬಾಡಿಗೆ ಪಡೆದು ವಿಹಾರ ಮಾಡಬಹುದಾದ ಬಹುಸಂಖ್ಯೆಯ ದೋಣಿಗಳೂ- ನೀರ ಮೇಲೆ ಹರಹಿಕೊಂಡಿದ್ದವು. ಸಾಕಷ್ಟು ಸಂಖ್ಯೆಯ ಪ್ರವಾಸಿಗಳು ಕ್ಯೂ ನಿಂತಿದ್ದರು. ಈ ಸ್ಥಳ ಕಳೆದ ಎರಡು ಶತಮಾನಗಳಿಂದಲೂ ಪ್ರವಾಸ ಪ್ರಿಯರಿಗೆ ಆಕರ್ಷಣೆಯ ಕೇಂದ್ರವಾಗಿದೆಯಂತೆ. ಹನ್ನೊಂದನೆಯ ಶತಮಾನದ ದಾಖಲೆಗಳಲ್ಲಿ ಉಲ್ಲೇಖಿತವಾಗಿರುವ ಬವ್ನೆಸ್ ಎಂಬ ಈ ಹಳ್ಳಿ ಬಹು ಹಿಂದಿನಿಂದಲೂ ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಈ ಸರೋವರ ಹಾಗೂ ಇದರ ಆಸುಪಾಸಿನ ಅರಣ್ಯಧಾಮಗಳಿಗೆ ಹಿಂದಿನ ಕಾಲಗಳಲ್ಲಿ ಅಶ್ವಸಜ್ಜಿತ ಸಾರೋಟುಗಳಲ್ಲಿ ಕೇವಲ ಶ್ರೀಮಂತರು ಮಾತ್ರ ಬರುತ್ತಿದ್ದರಂತೆ. ಆದರೆ ಈಗ ಸಾರಿಗೆಯ ಹಾಗೂ ವಸತಿ ಸೌಲಭ್ಯಗಳ ಅನುಕೂಲಗಳಿವೆ. ರೈಲು ಹಾಗೂ ಹವಾನಿಯಂತ್ರಿತ ಬಸ್ಸುಗಳು ಲಂಡನ್ನಿನಿಂದ ಕೇವಲ ಮೂರೂವರೆ ಗಂಟೆಗಳ ಒಳಗಾಗಿ ಪ್ರವಾಸಿಗಳನ್ನು ಇಲ್ಲಿಗೆ ತಂದುಬಿಡುತ್ತವೆ. ಪ್ರವಾಸೋದ್ಯಮ ಹಾಗೂ ಖಾಸಗಿ ಸಂಚಾರೀ ಬಸ್ಸುಗಳು ಇಲ್ಲಿಂದ, ಕೆಂಡಾಲ್‌ದಿಂದ, ಪೆನ್ರಿತ್‌ನಿಂದ ಪ್ರವಾಸಿಗಳನ್ನು ಕೂರಿಸಿಕೊಂಡು, ಗೈಡ್ ಸಮೇತ ಈ ಲೇಕ್ ಡಿಸ್ಟ್ರಿಕ್ಟ್‌ನ ಉದ್ದಗಲಗಳಲ್ಲಿ ಸಂಚಾರ ಮಾಡುತ್ತವೆ.

ನಾವು ಟಿಕೆಟ್ ಕೊಂಡು ಲಾಂಚ್‌ವೊಂದನ್ನೇರಿ ಕುಳಿತೆವು. ಬವ್ನೆಸ್‌ದಿಂದ ಅಂಬಲ್ ಸೈಡ್‌ವರೆಗಿನ ಪ್ರಯಾಣ ಕೇವಲ ನಲವತ್ತು ನಿಮಿಷ. ನಮ್ಮ ಪಾಪು ಬೆರಗುಗಣ್ಣಿನಿಂದ ಹಾಗೂ ಅರ್ಧಭಯದಿಂದ ಸರೋವರದ ಮೇಲೆ ಎದೆಯುಬ್ಬಿಸಿ ತೇಲುವ ಡಕ್ (ಬಾತುಕೋಳಿ)ಗಳನ್ನೂ, ಬೆಳ್ಳನೆಯ ರೆಕ್ಕೆ ಬಿಚ್ಚಿ ಹಾರಿ ಲಾಂಚ್‌ನ ಕಂಬಿಗಳ ಮೇಲೆ ಕೂತ ನೀರ ಹಕ್ಕಿಗಳನ್ನೂ, ಅಲೆಯಲೆಗಳನ್ನು ಮಥಿಸುತ್ತಾ ನುಗ್ಗುವ ಲಾಂಚ್‌ನ ಚಲನೆಯನ್ನೂ ನೋಡುತ್ತಿತ್ತು. ಸುದೀರ್ಘವಾದ, ಆಳವಾದ ಹಾಗೂ ಅಗಲವಾದ ಜಲವಿಸ್ತಾರ ಕಡಲಿನ ನೆನಪನ್ನು ತರುತ್ತಿತ್ತು. ಈ ಸರೋವರದ ಬದಿಗೆ ಸಾಲಾಗಿ ಕೂತ ಎತ್ತರವಾದ ಹಾಗೂ ದಟ್ಟವಾದ ಹಸುರಿನ ಗುಡ್ಡಗಳು ಮತ್ತು ದಟ್ಟ ಹಸುರಿನ ನಡುವೆ ಆಗಾಗ ಕಣ್ಣಿಗೆ ಬೀಳುತ್ತಿದ್ದ ಕೆಲವು ಕಾಟೇಜ್‌ಗಳೂ, ಸರೋವರದ ನಡುವೆಯೇ ಹಸಿರು ಹೆಪ್ಪುಗಟ್ಟಿದಂತಿರುವ ಸಣ್ಣ ಸಣ್ಣ ದ್ವೀಪಗಳೂ – ಆಕರ್ಷಕವಾಗಿದ್ದವು. ಈ ಬಗೆಯ ದ್ವೀಪಗಳಲ್ಲಿ ಬೆಲ್ಲೆ ಐಲ್ (Bell Isle) ಎಂಬುದು ಕೊಂಚ ದೊಡ್ಡದು. ಮೂರೂ ಕಾಲು ಮೈಲಿಗಳ ಉದ್ದವಾಗಿ, ಸುಮಾರು ಮೂವತ್ತು ಎಕರೆಗಳಷ್ಟು ವಿಸ್ತೀರ್ಣವನ್ನುಳ್ಳ ಈ ದ್ವೀಪದ ದಟ್ಟ ಹಸುರಿನ ನಡುವೆ ವೃತ್ತಾಕಾರವಾದ ಹಾಗೂ ಗೋಪುರಾಕಾರದ ಛಾವಣಿಯ ಒಂದು ದೊಡ್ಡ ಕಟ್ಟಡವಿದೆ. ಹದಿನೆಂಟನೆಯ ಶತಮಾನದ ಈ ಕಟ್ಟಡಕ್ಕೂ ಮೊದಲು, ಇದು ಚಾರಿತ್ರಿಕವಾಗಿ ರೋಮನ್ನರ ನೆಲೆಯಾಗಿತ್ತೆಂದೂ ಹೇಳಲಾಗಿದೆ. ಈ ಬಗೆಯ ಹಲವು ದ್ವೀಪಗಳನ್ನು ಹಾದು ಮುಂದೆ ಹೋದಂತೆ ಅನತಿ ದೂರದಲ್ಲಿ ಹಲವು ಗಿರಿಪಂಕ್ತಿಗಳು ಗೋಚರವಾಗುತ್ತವೆ. ಎರಡು ಸಾವಿರದಿಂದ ಮೂರು ಸಾವಿರ ಅಡಿ ಎತ್ತರದವರೆಗಿನ ಹಲವು ಶಿಖರಗಳನ್ನೂ ಸ್ವಚ್ಛವಾದ ಹವಾಮಾನದ ದಿನಗಳಲ್ಲಿ ಕಾಣಬಹುದು. ಈ ಸರೋವರದ ಇನ್ನೊಂದು ವಿಶೇಷವೆಂದರೆ, ಈ ಜಲವಿಸ್ತಾರ ವಿವಿಧ ಋತುಮಾನಗಳಲ್ಲಿ, ಅಂದಂದಿನ ಕಾಲಮಾನಕ್ಕೆ ಅನುಗುಣವಾಗಿ ವಿವಿಧ ವರ್ಣಗಳನ್ನು ತಾಳುವ ಕ್ರಮ. ತೀರದುದ್ದಕ್ಕೂ ಎದ್ದು ಕೂತ ದಟ್ಟ ಹಸಿರಿನ ಛಾಯೆ, ಆಕಾಶವು ಕಾಲಕಾಲಕ್ಕೆ ತಾಳುವ ಆಕೃತಿ  ಹಾಗೂ ವರ್ಣವೈವಿಧ್ಯ, ಸಂಜೆ – ಮುಂಜಾನೆಯ ನೆಳಲು – ಬೆಳಕುಗಳು, ಇವೆಲ್ಲವೂ ಈ ಸರೋವರದ ಮೈಯಲ್ಲಿ ಪ್ರತಿಫಲಿಸಿ, ಈ ಜಲವಿಸ್ತೀರ್ಣ ಪಡೆದುಕೊಳ್ಳುವ ಸೊಗಸು ಅವರ್ಣನೀಯ ಎಂದು ಹೇಳಲಾಗಿದೆ. ಈಗ ನಾವು ನೋಡುತ್ತಿರುವ ಈ ಗುಡ್ಡ-ಬೆಟ್ಟಗಳೂ, ಛಳಿಗಾಲದಲ್ಲಿ ಮಂಜು ಮುಸುಗಿ, ಶ್ವೇತ- ಶುಭ್ರವಾಗಿ  ಕೂತಾಗ, ನಾವು ಕಾಣಬಹುದಾದ ನೋಟವೇ ಬೇರೆ. ನಾವು ಈ ಪಯಣವನ್ನು ಕೈಕೊಂಡ ದಿನವಂತೂ – ಅನಿರೀಕ್ಷಿತವಾದ ಬೆಚ್ಚನೆಯ ಬಿಸಿಲಲ್ಲಿ ವಿಸ್ತಾರವಾದ ಕಪ್ಪು-ನೀಲಿಯ ಜಲರಾಶಿ, ಪಕ್ಕದಲ್ಲಿ ಮತ್ತೆ ಮುಂದೆ ಅನತಿ ದೂರದಲ್ಲಿದ್ದ ಗುಡ್ಡ-ಬೆಟ್ಟಗಳ ಹಸುರಿನ ಏರಿಳಿತಗಳು, ಒಂದು ‘ಮಧುಮಯ’ ಜಗತ್ತನ್ನೇ ಚಿತ್ರಿಸಿದ್ದವು.

ನಲವತ್ತು ನಿಮಿಷಗಳ ಪಯಣದ ನಂತರ ಅಂಬಲ್‌ಸೈಡ್ ಎಂಬ ಊರಿನ ತೀರದಲ್ಲಿ ಲಾಂಚಿನಿಂದ ಇಳಿದು – ಹಸಿರು ಗುಡ್ಡದೋರೆಯಲ್ಲಿ ಹಬ್ಬಿಕೊಂಡ ದಾರಿಯಲ್ಲಿ ನಡೆದೆವು. ಎದುರಿಗೇ ಎತ್ತರವಾದ ಮಲೆನಾಡಿನ ಪರ್ವತಾರಣ್ಯಗಳ ನಡುವೆ ದಾರಿ ಹಾದುಹೋಗಿತ್ತು. ಈ ಹಾದಿಯಾಚೆಯ ಪರಿಸರದಲ್ಲೇ ವರ್ಡ್ಸ್‌ವರ್ತ್‌ನ ನೆನಪಿನಿಂದ ಅಂಕಿತವಾದ, ರೈಡಲ್ ಮೌಂಟ್, ಗ್ರಾಸ್‌ಮಿಯರ್ ಇತ್ಯಾದಿ ಊರುಗಳಿರುವುದು. ನಾವು ಇಡೀ ಮಧ್ಯಾಹ್ನದವರೆಗೆ ಅಂಬಲ್ ಸೈಡಿನ ಹಸಿರು ಉದ್ಯಾನಗಳಲ್ಲಿ, ಸರೋವರದ ತೀರದಲ್ಲಿ ಅಲೆದೆವು. ಮತ್ತೆ ಹಿಂದಿರುಗುವಾಗ, ದಾರಿಯ ಬದಿಗೆ ‘ಹೋಟೆಲ್ ಗಾಲವ’ ಎಂಬ ಬೋರ್ಡೊಂದನ್ನು ನೋಡಿ ಚಕಿತಗೊಂಡು, ಇದೇನು ಹೆಸರು ‘ಗಾಲವ’ ಎಂಬುದು, ವೇದಕಾಲೀನವಾದ ಯಾವುದೋ ಋಷಿಯ ಹೆಸರಿನಂತಿದೆಯಲ್ಲ ಅಂದುಕೊಂಡೆವು. ಆದರೆ ಈ ಅಂಬಲ್‌ಸೈಡ್ ಕಡೆಯಿಂದ ದೂರದಿಂದ ಹರಿದು ಬಂದು ಸರೋವರವನ್ನು ಸೇರುವ ಬ್ರ್ಯಾಥೆ ಎನ್ನುವ ನದಿಯ ಪಕ್ಕದಲ್ಲಿ, ಗಾಲವ ಎಂಬ ಹೆಸರಿನ ರೋಮನ್ನರ ಕಾಲದ ಕೋಟೆಯ ಅವಶೇಷಗಳನ್ನು ಕಂಡ ಮೇಲೆ, ಇದು ರೋಮನ್ ಹೆಸರು ಎಂಬುದು ಖಚಿತವಾಯಿತು. ಈ ಕೋಟೆ ಕ್ರಿ.ಶ. ೭೯ರಲ್ಲಿ ಅಗ್ರಿಕೋಲನಿಂದ ನಿರ್ಮಿತವಾಯಿತಂತೆ.

ಮತ್ತೆ ಅಂಬಲ್‌ಸೈಡ್‌ನಿಂದ ಇನ್ನೊಂದು ಸ್ಟೀಮರ್ ಅನ್ನು ಹತ್ತಿ ಮಧ್ಯಾಹ್ನ ಒಂದೂವರೆಯ ವೇಳೆಗೆ ವಿಂಡರ್ ಮಿಯರ್ ತಲುಪಿ, ಒಂದು ರೆಸ್ಟೋರಾಂಟಿನಲ್ಲಿ, ಊಟ ಮುಗಿಸಿ, ವಿಂಡರ್ ಮಿಯರಿನ ಅಂಗಡಿಗಳಲ್ಲಿ ಒಂದಷ್ಟು ಅಲೆದು, ನಮ್ಮ ವಸತಿಗೆ ಹಿಂದಿರುಗಿ, ನಾಲ್ಕು ಗಂಟೆಯವರೆಗೆ ವಿಶ್ರಾಂತಿ ಪಡೆದು, ಈ ಸರೋವರದ ಇನ್ನೊಂದು ತುದಿಯ ಕಡೆಗೆ ಕಾರಿನಲ್ಲಿ ಹೊರಟೆವು. ಸರೋವರದ ಅಂಚಿನಲ್ಲಿ ಎದ್ದ ಗುಡ್ಡಗಳ ದಟ್ಟವಾದ ಕಾಡಿನ ನಡುವೆ, ಏರಿಳಿವ ರಸ್ತೆಯ ಪಯಣ ತುಂಬ ಚೇತೋಹಾರಿಯಾಗಿತ್ತು. ಅಲ್ಲಲ್ಲಿ ಕಾರು ನಿಲ್ಲಿಸಿ, ಸಂಜೆ ಬೆಳಕಿನಲ್ಲಿ ಥಳ ಥಳ ಹೊಳೆಯುವ ನೀರಿನ ವಿವಿಧ ವಿನ್ಯಾಸಗಳನ್ನು ವೀಕ್ಷಿಸುತ್ತ, ಕೊನೆಗೆ ‘ಲೇಕ್ ಸೈಡ್’ ಎಂಬ ಕಡೆ ಬಂದೆವು. ಅಲ್ಲಿ ‘ಹಾರ್ತ್ ವೇಟ್’ ಎಂಬ ಒಂದು ರೈಲು ನಿಲ್ದಾಣವಿದೆ. ಈ ನಿಲ್ದಾಣದಿಂದ ಪ್ರತಿ ಗಂಟೆಗೆ ಒಂದು ಬಾರಿಯಂತೆ ಪ್ರವಾಸಿಗಳನ್ನು ಕೂರಿಸಿಕೊಂಡು, ಈ ಸರೋವರದ ಪಕ್ಕದ ಕಣಿವೆದಾರಿಯಲ್ಲಿ ಹೋಗಿ ಬರುವ ಪುಟಾಣಿ ರೈಲೊಂದಿದೆ. ಆದರೆ ಈ ರೈಲಿನ ಪಯಣದ ಅವಕಾಶ ಕೂಡಾ ನಾವು ತಡವಾಗಿ ಬಂದ ಕಾರಣ ನಮಗೆ ದೊರೆಯದಾಯಿತು.

ಮಾರನೆ ದಿನದ ಬೆಳಗು ಮತ್ತೆ, ಸೂರ‍್ಯ ನಾಪತ್ತೆಯಾಗಿ ಒಂದು ಬಗೆಯ ಶೀತಲ ಮೌನ. ಈ ಹವಾಮಾನದ ವೈಪರೀತ್ಯಗಳನ್ನು ಇಲ್ಲಿ ಯಾರ ಅಂಥ ದೊಡ್ಡ ಆತಂಕಗಳೆಂದು ಎಣಿಸುವುದಿಲ್ಲ. ಜತೆಗೆ, ಈ ಹವಾಮಾನ ಒಂದು ಕ್ಷಣ ಇದ್ದ ಹಾಗೆ ಮತ್ತೊಂದು ಕ್ಷಣ ಇರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ನಮ್ಮ ಬೆಳಗಿನ ಉಪಾಹಾರದ ನಂತರ, ವಸತಿಗೃಹದ ದಂಪತಿಗಳೊಂದಿಗೆ ಚರ್ಚಿಸಿ ಇಡೀ ದಿನ ನಾವು ಸಂಚರಿಸಬಹುದಾದ ದಾರಿಯ ವಿವರಗಳನ್ನು ಗುರುತು ಹಾಕಿಕೊಂಡು ಕಾರಿನಲ್ಲಿ ಅಂಬಲ್‌ಸೈಡ್‌ನ ದಾರಿಯಲ್ಲಿ ಧಾವಿಸಿದೆವು. ಅಂಬಲ್ ಸೈಡ್ ಎಂಬ ಊರಿನ ನಡುವೆ ತೂರಿ, ಎದುರಿಗೆ ಕಾಣುವ ಕಾಡು – ಕಣಿವೆಗಳ ಏರಿಳಿತಗಳನ್ನು ದಾಟಿ, ಸ್ವಲ್ಪ ಹೊತ್ತಿನಲ್ಲಿಯೇ ರೈಡಲ್‌ಮೌಂಟ್‌ಗೆ ದಾರಿ ಎಂಬ ನಿರ್ದೇಶಕ ಫಲಕದ ಬದಿಗೆ ಹಾದು ಮುಂದುವರಿದಂತೆ, ಎರಡೂ ಕಡೆ ಬಲೆ ನೆಯ್ದ, ದಟ್ಟವಾದ ತಂಪಾದ ಕಾಡು. ಸಣ್ಣ ಕಾಂಡಗಳ ನೇರವಾದ ವೃಕ್ಷಗಳಂತೆಯೇ ದಪ್ಪ ಕಾಂಡದ ಭೀಮಕಾಯದ ಮರಗಳೂ ಸಾಕಷ್ಟಿವೆ. ಅಲ್ಲಲ್ಲಿ ಕಾಡು ಕಣಿವೆಗಳ ದಾರಿಯ ನಡುವೆ, ಸುತ್ತಲೂ ಮಂಡಲಾಕಾರವಾಗಿ ಹಬ್ಬಿಕೊಂಡ ಬೆಟ್ಟಗಳ ಬೋಗುಣಿಯ ನಡುವೆ ಕಾಣಿಸಿತು ಗ್ರಾಸ್‌ಮಿಯರ್. ಇದು ವರ್ಡ್ಸ್‌ವರ್ತ್‌ನ ಕಾವ್ಯ ಜೀವನದ ಬಹು ಮುಖ್ಯವಾದ ಸ್ಥಳ. ಇಲ್ಲಿನ ‘ಡೋವ್ ಕಾಟೇಜ್’ ಎಂಬ ಮನೆಯಲ್ಲಿ ಒಂಬತ್ತು ವರ್ಷಗಳ ಕಾಲ ಈ ಕವಿ ವಾಸವಾಗಿದ್ದು, ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯಂತ ಸ್ಮರಣೀಯವೂ ಶ್ರೇಷ್ಠವೂ ಎಂದು ಹೇಳಲಾದ ಅನೇಕ ಕವಿತೆಗಳನ್ನು ಬರೆದದ್ದು ಇಲ್ಲಿಯೇ. ಈ ಮೊದಲು ವರ್ಡ್ಸ್‌ವರ್ತ್ ಮತ್ತು ಅವನ ತಂಗಿ ಡರಥಿ, ಕೆಸ್ಟಿಕ್ ಎಂಬಲ್ಲಿನ ವಿಂಡರ್ ಬ್ರೋವ್ ಎಂಬ ಊರಿನ ತೋಟದ ಮನೆಯಲ್ಲಿದ್ದು ಅನಂತರ ಗ್ರಾಸ್‌ಮಿಯರ್‌ನ ಡೋವ್ ಕಾಟೇಜಿಗೆ ಕ್ರಿ.ಶ. ೧೭೯೯ ರಂದು ಬಂದರು. ಮುಂದೆ ವರ್ಡ್ಸ್‌ವರ್ತ್ ಇಲ್ಲಿಂದ ಎರಡೂವರೆ ಮೈಲಿ ದೂರದ ‘ರೈಡಲ್ ಮೌಂಟ್’ ಎಂಬ ಮನೆಗೆ ಸ್ಥಳಾಂತರಗೊಳ್ಳುವವರೆಗೂ ಆತ ಇದ್ದದ್ದು ಈ ಊರಿನಲ್ಲಿಯೇ. ಈಗ ಈ ‘ಡೋವ್ ಕಾಟೇಜ್’ ಒಂದು ಸಂರಕ್ಷಿತ ಸ್ಮಾರಕವಾಗಿದೆ. ಮನೆ ಸಾಕಷ್ಟು ದೊಡ್ಡದು. ಎರಡೂವರೆ ಶತಮಾನಗಳ ಹಿಂದೆ ಅದು ಹೇಗಿತ್ತೋ ಇಂದೂ ಹಾಗೆಯೇ ಅದನ್ನು ಉಳಿಸಿಕೊಳ್ಳಲಾಗಿದೆ. ಮನೆಯೊಳಗೆ ಪ್ರವೇಶ ಮಾಡಿದ ಕೂಡಲೇ ನಮ್ಮನ್ನು ಸ್ವಾಗತಿಸುವ ಮಾರ್ಗದರ್ಶಕ ಯುವತಿ ವರ್ಡ್ಸ್‌ವರ್ತ್‌ನ ಕಾವ್ಯ ಹಾಗೂ ಜೀವನದ ಹಿನ್ನೆಲೆಯಲ್ಲಿ ಈ ಮನೆಯ ವಿವರಗಳನ್ನು ಪರಿಚಯ ಮಾಡಿಕೊಡುತ್ತಾಳೆ. ಮನೆಯೊಳಗೆ ಪ್ರವೇಶ ಮಾಡಿದೊಡನೆಯೆ – ಅಂದಿನಂತೆಯೆ ಇಂದೂ ಬೆಂಕಿಗೂಡಿನಲ್ಲಿ (Hearth) ಬೆಂಕಿ ಉರಿಯುತ್ತಾ ಕೊಠಡಿಯನ್ನು ಬೆಚ್ಚಗೆ ಇರಿಸುತ್ತದೆ. ನೆಲಕ್ಕೆ ಕಲ್ಲು ಚಪ್ಪಡಿಗಳನ್ನು ಅಳವಡಿಸಲಾಗಿದೆ. ಕೊಠಡಿಗಳಲ್ಲಿ ಅಂದಂದು ಬಳಸಲಾದ ಮೇಜು-ಕುರ್ಚಿ-ಮಂಚ ಇತ್ಯಾದಿಗಳು, ಅಂದಂದು ಅವು ಇದ್ದ ಸ್ಥಳಗಳಲ್ಲೆ ಇವೆ. ಅಡುಗೆ ಮನೆ, ಊಟದ ಮನೆ, ಮಲಗುವ ಮನೆ, ಅಧ್ಯಯನದ ಕೊಠಡಿ – ಎಲ್ಲ ಅವತ್ತಿನಂತೆಯೆ. ಗೋಡೆಗಳ ಮೇಲೆ ತೈಲ ಚಿತ್ರಗಳಿವೆ. ಕೋಲ್‌ರಿಜ್, ಸ್ಕಾಟ್ಸ್, ಡರಥಿ, ವರ್ಡ್ಸ್‌ವರ್ತ್‌ನ ಮೂವರು ಹೆಣ್ಣುಮಕ್ಕಳ ಚಿತ್ರಗಳೂ ಇವೆ. ಮನೆಯ ಹಿಂದೆ ದೊಡ್ಡದೊಂದು ತೋಟ. ಮನೆಯ ಬದಿಗೆ ವರ್ಡ್ಸ್‌ವರ್ತ್ ಮ್ಯೂಸಿಯಂ. ಈ ಮ್ಯೂಸಿಯಂ ಅನೇಕ ಸ್ವಾರಸ್ಯವಾದ ಹಾಗೂ ಉಪಯುಕ್ತವಾದ ಮಾಹಿತಿಗಳನ್ನು ಒದಗಿಸುತ್ತದೆ.

ಈ ಮ್ಯೂಸಿಯಂನಲ್ಲಿ ವರ್ಡ್ಸ್‌ವರ್ತ್‌ನ ಮತ್ತು ಅವನ ಸಮಕಾಲೀನ ಕವಿಗಳ ಹಾಗೂ ಕಲಾವಿದರ ನೆನಪುಗಳನ್ನು ದಾಖಲಿಸಲಾಗಿದೆ. ವರ್ಡ್ಸ್‌ವರ್ತ್‌ನ ಕವಿತೆಗಳ ಹಸ್ತಪ್ರತಿಗಳು, ಅವನ ಕೃತಿಗಳ ಮೊದಲ ಮುದ್ರಣದ ಪ್ರತಿಗಳು, ಅವನ ಸಾಹಿತ್ಯ ಜೀವನದ ಮಜಲುಗಳು, ಅವನ ಮುಖ್ಯ ಕವಿತೆಗಳ ಉಲ್ಲೇಖಗಳನ್ನೊಳಗೊಂಡ ಪಟಗಳು – ಡ್ಯಾಫಡೈಲ್ಸ್, ಸಾಲಿಟರಿ ರೀಪರ್, ಟಿಂಟ್ರನ್ ಅಬೆ, ಪ್ರೆಲ್ಯೂಡ್, ಇತ್ಯಾದಿ. ಈ ಪಟಗಳ ಬದಿಗೆ ಇರಿಸಲಾಗಿರುವ ಶ್ರವಣ ಸಾಧನವೊಂದನ್ನು ಕಿವಿಗೆ ತಗುಲಿಸಿಕೊಂಡರೆ, ಈ ಕವಿತೆಗಳ ಸೊಗಸಾದ ವಾಚನಗಳನ್ನು ಕೇಳಬಹುದು. ವರ್ಡ್ಸ್‌ವರ್ತ್‌ನ ಸಮಕಾಲೀನ ಕವಿಗಳ, ಕಲಾವಿದರ ಹಾಗೂ ಅವನ ಸಂಸಾರದವರ ವರ್ಣಚಿತ್ರಗಳನ್ನು ನೋಡುತ್ತ ಬಂದ ಹಾಗೆ ಅಲ್ಲೊಂದೆಡೆ ವರ್ಡ್ಸ್‌ವರ್ತ್‌ನ ಫ್ರೆಂಚ್ ಪ್ರೇಯಸಿಯ ಮಗಳಾದ ಕ್ಯಾರೊಲಿನ್ ವಿಲಾನ್‌ಳ ಆಕರ್ಷಕವಾದ ಭಾವಚಿತ್ರವೊಂದು ತಡೆದು ನಿಲ್ಲಿಸಿತು.

ವರ್ಡ್ಸ್‌ವರ್ತ್‌ನ ಬದುಕಿನಲ್ಲಿ ಸಂಭವಿಸಿದ, ಒಂದು ಸ್ವಾರಸ್ಯವೂ, ರಹಸ್ಯವೂ ಅದಕ್ಕೂ ಮಿಗಿಲಾಗಿ ದಾರುಣವೂ ಆದ ಒಂದು ಕತೆ – ಅವನ ಹಾಗೂ ಆನೆಟ್ ವಿಲಾನ್ ಎಂಬ ಫ್ರೆಂಚ್ ಹುಡುಗಿಯ ಪ್ರಣಯ ಪ್ರಸಂಗ. ಈ ಪ್ರಸಂಗವು ಬಯಲಿಗೆ ಬಂದದ್ದೆ ವರ್ಡ್ಸ್‌ವರ್ತ್‌ನ ಮರಣಾನಂತರದ ಹಲವು ದಶಕಗಳ ಮೇಲೆ. ವರ್ಡ್ಸ್‌ವರ್ತ್ ೧೭೮೭ರಲ್ಲಿ ಹಾಕ್‌ಷೆಡ್‌ನ ಗ್ರಾಮರ್ ಸ್ಕೂಲಿನಿಂದ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಬಂದು ವಿದ್ಯಾಭ್ಯಾಸವನ್ನು ಮುಗಿಸಿ ಪದವೀಧರನಾದ ಹೊತ್ತಿನಲ್ಲಿ ಫ್ರೆಂಚ್ ಮಹಾಕ್ರಾಂತಿಗೆ ಹಿನ್ನೆಲೆಯಾದ ರಾಜಕೀಯ ಚಿಂತನೆಗಳಿಂದ ಆಕರ್ಷಿತನಾಗಿ, ೧೭೯೧ರ ಕೊನೆಯ ವೇಳೆಗೆ ಫ್ರಾನ್ಸಿಗೆ ಹೋಗುತ್ತಾನೆ. ಆರ‍್ಲಿಯನ್ಸ್ ಎಂಬಲ್ಲಿ ಆತ ಆನೆಟ್‌ವಿಲಾನ್ ಎಂಬ ಹುಡುಗಿಯನ್ನು ಭೆಟ್ಟಿಯಾಗುತ್ತಾನೆ ಅವರಿಬ್ಬರ ಈ ಪರಿಚಯ ಗಾಢವಾದ ಪ್ರೇಮವಾಗಿ ಮಾರ್ಪಟ್ಟು, ೧೭೯೨ ನೇ ಡಿಸೆಂಬರ್ ತಿಂಗಳಲ್ಲಿ ಆನೆಟ್ಟಳಿಗೆ ಒಂದು ಹೆಣ್ಣು ಮಗು ಹುಟ್ಟುತ್ತದೆ. ವರ್ಡ್ಸ್‌ವರ್ತ್‌ನಿಗೆ ಆಕೆಯನ್ನು ಮದುವೆಯಾಗುವ ಉದ್ದೇಶವಿದ್ದರೂ, ಆನೆಟ್ ಕುಟುಂಬದವರಿಗೆ ವರ್ಡ್ಸ್‌ವರ್ತ್‌ನ ಬಗ್ಗೆ ಉಂಟಾದ ವೈಮನಸ್ಯದಿಂದಲೋ, ಫ್ರಾನ್ಸ್ ದೇಶ ಯುದ್ಧವನ್ನು ಘೋಷಿಸಿದ್ದರಿಂದಲೋ, ವರ್ಡ್ಸ್‌ವರ್ತ್ ತನ್ನ ಪ್ರೇಯಸಿಯಿಂದ ಅಗಲಿ, ತನ್ನ ಮಗಳು ಹುಟ್ಟುವ ಮುನ್ನವೇ ಏಕಾಂಗಿಯಾಗಿ ಇಂಗ್ಲೆಂಡಿಗೆ ಹಿಂದಿರುಗಬೇಕಾಯಿತು. ಈ ಹೆಣ್ಣುಮಗಳೇ ಕ್ಯಾರೊಲಿನ್ ವಿಲಾನ್. ಮತ್ತೆ ವರ್ಡ್ಸ್‌ವರ್ತ್ ೧೮೦೨ರಲ್ಲಿ ಅಂದರೆ ಈ ಪ್ರಸಂಗದ ಹತ್ತು ವರ್ಷಗಳ ನಂತರ – ತನ್ನ ತಂಗಿ ಡರಥಿಯ ಜತೆಗೆ, ಆನೆಟ್‌ಳನ್ನು ಮತ್ತು ತನ್ನ ಮಗಳನ್ನು ಭೆಟ್ಟಿಯಾಗುವ ಆಸೆಯಿಂದ ಫ್ರಾನ್ಸಿಗೆ ಹೋಗಿ ಬರುತ್ತಾನೆ. ಆದರೆ ಆಗ ಅಲ್ಲಿ ಏನಾಯಿತೆಂಬ ವಿವರಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ. ಆತ ಅಲ್ಲಿಂದ ಬಂದ ನಂತರ ತನ್ನ ಬಾಲ್ಯದ ಸಂಗಾತಿಯಾಗಿದ್ದ ಮೇರಿ ಹಚಿನ್‌ಸನ್‌ಳನ್ನು ಮದುವೆಯಾದದ್ದಂತೂ ಸ್ಪಷ್ಟ.

ಈ ಮ್ಯೂಸಿಯಂನಲ್ಲಿ ವರ್ಡ್ಸ್‌ವರ್ತ್‌ನಿಗೆ ಸಂಬಂಧಿಸಿದ ಪುಸ್ತಕಗಳ ಜತೆಗೆ, ಅವನ ತಂಗಿಯಾದ ಡರಥಿ ಬರೆದ ಜರ್ನಲ್ಸ್ ಸಂಪುಟಗಳು ಸಂಶೋಧಕರಿಗೆ ಒಳ್ಳೆಯ ದಾಖಲೆಗಳಾಗಿವೆ. ವರ್ಡ್ಸ್‌ವರ್ತ್‌ನ ಜೀವನದ ಸಂಗತಿಗಳನ್ನು ಅಂದಂದಿನ ದೈನಿಕ ವಿವರಗಳೊಂದಿಗೆ ಡರಥಿ ದಾಖಲಿಸಿರುವ ಕ್ರಮವು ವಿಶೇಷ ರೀತಿಯದಾಗಿದೆ.

ಈ ಎಲ್ಲವನ್ನೂ ನೋಡಿಕೊಂಡು ನಾವು ಗ್ರಾಸ್‌ಮಿಯರ್‌ನ ‘ಡ್ಯಾಫಡೈಲ್ಸ್’ ಎಂಬ ಹೆಸರಿನ ರೆಸ್ಟೋರಾಂಟ್‌ನಲ್ಲಿ ಚಹಾಕ್ಕೆ ಕೂತೆವು. ಚಹಾ ಬಂತು. ಅದಕ್ಕೆ ಸಕ್ಕರೆ ಬೆರೆಸಿಕೊಳ್ಳಲು ಅಲ್ಲೆ ಟ್ರೇಯಲ್ಲಿದ್ದ ಚಿಕ್ಕದೊಂದು ಸಕ್ಕರೆಯ ಪೊಟ್ಟಣವನ್ನು ಕೈಗೆತ್ತಿಕೊಂಡೆ. ಅದರ ಮೇಲೆ. – The Solitary Reaper ಎಂಬ ಕವಿತೆಯ               – Will no one tell me what she sings ಎಂಬ ಸಾಲು, ಹಾಗೂ ಅನಂತರ Whatever the Theme the Maiden Sang ದಿಂದ Long after it was heard no more ಎನ್ನುವವರೆಗಿನ ಎಂಟು ಪಂಕ್ತಿಗಳೂ ಸಣ್ಣಕ್ಷರಗಳಲ್ಲಿ ಮುದ್ರಿತವಾಗಿದೆ. ಇದೂ ವಡ್ಸ್‌ವರ್ತ್‌ನ ಜನಪ್ರಿಯವಾದ ಪದ್ಯಗಳಲ್ಲಿ ಒಂದು. ಸರಳ ಸಾಧಾರಣವಾದ ಹಳ್ಳಿಯ ಹೆಣ್ಣುಮಗಳು ಏಕಾಂಗಿಯಾಗಿ ಹೊಲದಲ್ಲಿ ಕೆಲಸ ಮಾಡುತ್ತ, ತನಗೆ ತಾನೇ ಹಾಡಿಕೊಳ್ಳುತ್ತ ಸುಖಿಸುವ ಸಾಮಾನ್ಯವಾದ ಸಂಗತಿಯನ್ನು ಕುರಿತದ್ದು. ವಾಸ್ತವವಾಗಿ ಈ ಪದ್ಯದಲ್ಲಿ ಬರುವ ಏಕಾಂಗಿಯಾದ ಹೊಲದ ಹುಡುಗಿ, ‘ಹೈಲ್ಯಾಂಡ್ ಲ್ಯಾಸ್’, ಸ್ಕಾಟ್‌ಲೆಂಡಿನ ಹೈಲ್ಯಾಂಡ್‌ಗೆ ಸೇರಿದವಳು., (ಸ್ಕಾಟಿಷ್ ಇಂಗ್ಲಿಷ್‌ನಲ್ಲಿ ‘ಲ್ಯಾಸ್’ ಎಂದರೆ ಹುಡುಗಿ). ಲೇಕ್ ಡಿಸ್ಟ್ರಿಕ್ಟ್‌ದಿಂದ ಮುಂದೆ ಉತ್ತರಕ್ಕೆ ಹೋದರೆ ಇರುವುದು ಸ್ಕಾಟ್‌ಲೆಂಡ್. ಅದು ಲೇಕ್ ಡಿಸ್ಟ್ರಿಕ್ಟ್‌ಗಿಂತ ಹೆಚ್ಚು ನಿಬಿಡವಾದ ಪರ್ವತಾರಣ್ಯಗಳ ಪ್ರದೇಶ. ವರ್ಡ್ಸ್‌ವರ್ತ್ ೧೮೦೩ ರಿಂದ ಕೆಲವು ಕಾಲ ಸ್ಕಾಟ್‌ಲೆಂಡಿನ ಈ ಪರ್ವತಾರಣ್ಯಗಳಲ್ಲಿ ಸಂಚಾರ ಮಾಡಿದ್ದ. ಆ ಕುರಿತು ಅವನು ಬರೆದ ಅನೇಕ ಕವಿತೆಗಳಲ್ಲಿ ಇದೂ ಒಂದು.

ಚಹಾಪಾನದ ನಂತರ, ಸ್ವಲ್ಪ ದೂರದಲ್ಲಿರುವ ಚರ್ಚಿನ ಹತ್ತಿರದ ರುದ್ರಭೂಮಿಯಲ್ಲಿನ ವರ್ಡ್ಸ್‌ವರ್ತ್‌ನ ‘ಸಮಾಧಿ’ಯನ್ನು ಸಂದರ್ಶಿಸಿದೆವು. ಚರ್ಚಿನ ಅಂಗಳದಲ್ಲಿರುವ ವರ್ಡ್ಸ್‌ವರ್ತ್‌ನ ಸಮಾಧಿಯ ಬದಿಗೆ, ಕೆಳಗಡೆ ನಿರಂತರ ಮರ‍್ಮರದೊಂದಿಗೆ ಶುಭ್ರವಾದ ನೀರಿನ ನದಿಯೊಂದು ಹರಿಯುತ್ತಿದೆ.

ಗ್ರಾಸ್‌ಮಿಯರಿಂದ ಕೆಸ್ವಿಕ್‌ಗೆ ನಮ್ಮ ಮುಂದಿನ ಪಯಣ. ಕೆಸ್ವಿಕ್‌ಗೆ ಇಲ್ಲಿಂದ ಹದಿಮೂರು ಮೈಲಿಗಳು. ದಾರಿ ಉದ್ದಕ್ಕೂ ಸಸ್ಯವಿಹೀನವಾದ ಗಿರಿಗಳು. ಗಿರಿಗಳ ನಡುವೆ ಅದೆಲ್ಲಿಂದಲೋ ಆ ಬೆಟ್ಟಗಳ ಇಕ್ಕಟ್ಟುಗಳಲ್ಲಿ ಗೆರೆ ಬರೆದು ಇಳಿಯುವ ಝರಿಗಳು. ನಡು ನಡುವೆ ದಾರಿಯ ಎರಡೂ ಬದಿಗೆ ತಂಪಾದ ಕಾಡುಗಳು. ಸುಮಾರು ಇಪತ್ತೈದು ನಿಮಿಷಗಳಲ್ಲಿ ಕೆಸ್ವಿಕ್ ಎಂಬ, ತಕ್ಕಷ್ಟು ದೊಡ್ಡ ಊರನ್ನು ಹಾದು ‘ಲೇಕ್ ಸೈಡ್’ ಅನ್ನು ತಲುಪಿದೆವು. ಈ ಸರೋವರಕ್ಕೆ ‘ಡರ್‌ವೆಂಟ್ ವಾಟರ್’ ಎಂದು ಹೆಸರು. ಮೈಲಿ ಮೈಲಿಗಳಗಲಕ್ಕೆ ಚಾಚಿಕೊಂಡ ಈ ಸರೋವರದ ಆಚೆಯ ದೂರದ ತೀರದಲ್ಲಿ ಮುಗಿಲಿಗೆ ಮುಡಿಯೆತ್ತಿ ಕೂತ ಗಿರಿಶಿಖರಗಳು. ಸರೋವರದ ನಡುವೆ ಹಲವಾರು ದಟ್ಟ ಹಸುರಿನ ದ್ವೀಪಗಳು. ಈ ಸರೋವರದ ತೀರದ ದಟ್ಟವಾದ ಕಾಡಿನಲ್ಲಿ ವಿಹಾರ ಯೋಗ್ಯವಾದ ಸಂಚಾರ ಪಥಗಳು. ಇಡೀ ಸರೋವರ ಹಾಗೂ ಅದರ ಸುತ್ತಣ ಪರಿಸರ, ವರ್ಣಚಿತ್ರ ಕಲಾವಿದರ ಪಾಲಿಗೆ ಸೌಂದರ್ಯದ ಗಣಿಯಾಗಿದೆ. ಇಲ್ಲಿಯೂ ಪ್ರವಾಸಿಗಳನ್ನು ಕರೆದೊಯ್ಯುವ ದೋಣಿಗಳ, ಲಾಂಚ್‌ಗಳ ಆಕರ್ಷಣೆಯಿದ್ದರೂ, ಅದನ್ನು ಬದಿಗಿರಿಸಿ, ಅಲ್ಲಿಯೇ ಇದ್ದ ರೆಸ್ಟೋರಾಂಟಿನಲ್ಲಿ ‘ವೆಜಿಟಬಲ್ ಸೂಪ್’ನ್ನು ಚಪ್ಪರಿಸುತ್ತ – ಅದ್ಭುತವಾದ ಆ ನಿಸರ್ಗ ವೈಭವವನ್ನು ನೋಡುತ್ತ ಕೂತೆವು.

ಕೆಸ್ವಿಕ್‌ದಿಂದ ಉತ್ತರದಲ್ಲಿದೆ ವರ್ಡ್ಸ್‌ವರ್ತ್ ಹುಟ್ಟಿದೂರು, ಕಾಕರ್ ಮೌತ್. ಕೆಸ್ವಿಕ್, ಕವಿ ಕೋಲ್‌ರಿಜ್‌ನ ಊರು. ಈ ಊರಿನ ಹೊರವಲಯದ ವಿಂಡರ್ ಬ್ರೋವ್ ಎಂಬಲ್ಲಿನ ತೋಟದ ಮನೆಯಲ್ಲಿ ವರ್ಡ್ಸ್‌ವರ್ತ್ ಮತ್ತು ಅವನ ತಂಗಿ ಡರಥಿ ಇಬ್ಬರೂ ಕೆಲವು ಕಾಲ ವಾಸಿಸುತ್ತಿದ್ದ ಕಾರಣದಿಂದ, ಅವರಿಗೂ ಕೋಲ್‌ರಿಜ್‌ನಿಗೂ ಗಾಢವಾದ ಸ್ನೇಹ ಬೆಳೆಯಿತು. ಈ ಸ್ನೇಹ ಅನೇಕ ವರ್ಷಗಳ ಕಾಲ ವರ್ಡ್ಸ್‌ವರ್ತ್‌ನ ಬದುಕನ್ನು ಸೃಜನಾತ್ಮಕವನ್ನಾಗಿ, ಉಲ್ಲಾಸಮಯವನ್ನಾಗಿ ಮಾಡಿತು. ಕೋಲ್‌ರಿಜ್‌ನ ಜತೆಗೂಡಿ ವರ್ಡ್ಸ್‌ವರ್ತ್ ಇಡೀ ಲೇಕ್ ಡಿಸ್ಟ್ರಿಕ್ಟ್‌ನ ಪರ್ವತಾರಣ್ಯ ಸರೋವರಗಳ ನಡುವೆ ಅಲೆದಾಡಿದ. ಡರಥಿ, ಕೋಲ್‌ರಿಜ್ ಮತ್ತು ವರ್ಡ್ಸ್‌ವರ್ತ್ ಮೂವರೂ ಗ್ರಾಸ್‌ಮಿಯರ್‌ನಿಂದ ಕೆಸ್ವಿಕ್‌ವರೆಗಿನ ಹದಿಮೂರು ಮೈಲಿಗಳ ದಾರಿಯನ್ನು ಹಲವಾರು ಬಾರಿ ತುಳಿದು, ಸಾಹಿತ್ಯಕ ಸಂವಾದದಲ್ಲಿ  ತೊಡಗುತ್ತಿದ್ದರು. ಕೋಲ್‌ರಿಜ್ ಮತ್ತು ವರ್ಡ್ಸ್‌ವರ್ತ್ ಇವರಿಬ್ಬರ ಕವನಗಳು ಒಟ್ಟಿಗೆ ಸೇರಿದ ‘ಲಿರಿಕಲ್ ಬ್ಯಾಲೆಡ್ಸ್’ (೧೮೦೧) ಸಂಕಲನ ಪ್ರಕಟವಾಗಿ, ಇಂಗ್ಲಿಷ್ ಸಾಹಿತ್ಯದಲ್ಲಿ ಹೊಸ ಮಾರ್ಗವನ್ನು ತೆರೆದ ‘ರೊಮ್ಯಾಂಟಿಕ್ ಚಳುವಳಿ’ಗೆ ನಾಂದಿಯಾಯಿತು. ಮತ್ತೆ ೧೮೦೭ರಲ್ಲಿ ವರ್ಡ್ಸ್‌ವರ್ತ್ ತನ್ನ ಕವಿತೆಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದಾಗ – ಅಂದಿನ ಸಾರಸ್ವತ ವಲಯದಿಂದ ದೊರೆತ ಪ್ರತಿಕ್ರಿಯೆ ತೀರಾ ಮಿಶ್ರಸ್ವರೂಪದ್ದಾಗಿತ್ತು. ಈ ಹೊತ್ತು ನಾವು ಯಾವ ಕವಿತೆಗಳನ್ನು ತುಂಬ ಒಳ್ಳೆಯ ಪದ್ಯಗಳೆಂದು ಮೆಚ್ಚಿಕೊಳ್ಳುತ್ತೇವೋ ಅಂಥ – ಡ್ಯಾಫಡೈಲ್ಸ್, ಸಾಲಿಟರಿ ರೀಪರ್, ಶೈಶವವನ್ನು ಕುರಿತ Ode on the intimations of early childhood, ಅಪಾನ್ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್, ಇಂಥ ಕವಿತೆಗಳನ್ನು ಕುರಿತು ಅಂದಿನ ಬುದ್ಧಿವಂತ ವಿಮರ್ಶಕರು ಗೇಲಿ ಮಾಡಿದರಂತೆ. ವರ್ಡ್ಸ್‌ವರ್ತ್‌ನ ಸಮಕಾಲೀನನಾದ ಬೈರನ್‌ನಂತಹ ಕವಿಯೆ ವರ್ಡ್ಸ್‌ವರ್ತ್‌ನ ಕವಿತೆಗಳನ್ನು ‘ಬೂಸಾ’ (trash) ಎಂದು ಕರೆದನು. ಇಂಗ್ಲೆಂಡಿನ ರಾಷ್ಟ್ರಕವಿ ಪಟ್ಟವನ್ನು ಪಡೆದ, ರಾಬರ್ಟ್ ಸದೆ (ಈತ ಕೋಲ್‌ರಿಜ್ ಕವಿಯ ಭಾವಮೈದ) ವರ್ಡ್ಸ್‌ವರ್ತ್‌ನ ಕೆಲವು ಸಾನೆಟ್‌ಗಳನ್ನು ಮೆಚ್ಚಿಕೊಂಡರೂ, ಅವನ ಇತ್ತಿತರ ರಚನೆಗಳನ್ನು ತೀರಾ ಸರಳ ಎಂದು ಮೂಗು ಮುರಿದ. ಆದರೆ ಸರಳ ಸಾಧಾರಣ ಸಂಗತಿಗಳೊಳಗಿನ ಮಹತ್ತನ್ನು ಎತ್ತಿಹಿಡಿದ ವರ್ಡ್ಸ್‌ವರ್ತ್‌ನ ಕಾವ್ಯ ಸ್ವಾರಸ್ಯ ಮತ್ತು ಮೌಲಿಕತೆಗಳು ಜನಕ್ಕೆ ಅರ್ಥವಾಗಬೇಕಾದರೆ ಸಾಕಷ್ಟು ಕಾಲ ಆತ ಕಾಯಬೇಕಾಯಿತು. ಈ ಪರಿಸ್ಥಿತಿಯಿಂದ ಆತನೇನೂ ಧೃತಿಗೆಡಲಿಲ್ಲ. ಸಮಕಾಲೀನತೆಯ ಶೀತಲ ಮೌನದಾಚೆಗೂ ತನ್ನ ಕವಿತೆ ನಿಂತು ಅರಳಿಕೊಳ್ಳುವುದೆಂಬ ವಿಶ್ವಾಸ ಅವನಿಗಿತ್ತು. ವಸ್ತುಗಳ ಅಂತರಾಳದ ಸತ್ಯಗಳನ್ನು ಒಳಹೊಕ್ಕು ನೋಡುವ ಕವಿ – ಕಲಾವಿದರು ಹುಟ್ಟಿಕೊಂಡ ಹೊಸ ಕಾಲ ಅದಾಗಿತ್ತು. ಬ್ಲೇಕ್‌ನಂಥ ಕವಿ To see a world in a grain of sand, and Heaven in a wild flower ಎಂಬ ಕಾಣ್ಕೆಯ ಬಗ್ಗೆ ದನಿಯೆತ್ತಿದ್ದನು. Thanks to the human heart by which we live, Thanks to its tenderness, its joys, and fears’ ಎಂದು ಬದುಕನ್ನು ಧನ್ಯತೆಯಿಂದ ಒಲಿಯಬಲ್ಲವನಾದ ವರ್ಡ್ಸ್‌ವರ್ತ್-

To me the meanest flower that blows can give
Thoughts that do often lie too deep for tears

ಎಂಬ ಶ್ರದ್ಧೆಯನ್ನು ಬೆಳೆಯಿಸಿಕೊಂಡಿದ್ದ. ಇಂಥ ಕವಿಯ ಸ್ಫೂರ್ತಿಯ ಗಣಿಯಾದ ನಿಸರ್ಗದ ಒಂದು ಭಾಗವಾದ ಡರ್ವೆಂಟ್‌ವಾಟರ್ ಎಂಬ ಸರೋವರವನ್ನು ನಾವು ಬಿಟ್ಟು, ವಿಂಡರ್ ಮಿಯರ್‌ಗೆ ಬೇರೊಂದು ದಾರಿಯನ್ನು ಹಿಡಿದು, ಕಣಿವೆ ದಾರಿಯ ದಟ್ಟ ಹಸಿರಿನ ಕಾಡನ್ನು ತೂರಿಕೊಂಡು ವುಲ್ಸ್‌ವಾಟರ್ ಎಂಬ ಮತ್ತೊಂದು ಸರೋವರವನ್ನು ಕಂಡು, ಅದರ ಬದಿಯಲ್ಲಿ ಕಾರು ನಿಲ್ಲಿಸಿ, ಸ್ವಲ್ಪ ಹೊತ್ತು ಕಣಿವೆಯ ತೊಟ್ಟಿಲಲ್ಲಿ ಮಲಗಿಕೊಂಡ ಜಲವಿಸ್ತಾರದ ಮರ‍್ಮರವನ್ನು ಆಲಿಸಿದೆವು. ಹೀಗೆ ದಾರಿ ಉದ್ದಕ್ಕೂ ತಡೆದು ನಿಲ್ಲಿಸುವ ಎಷ್ಟೋ ಸರೋವರಗಳು. ಅವುಗಳ ಹೆಸರುಗಳು ವಾಟರ್ ಎಂದು ಕೊನೆಯಾಗುವಂಥವು – ಡರ್‌ವೆಂಟ್ ವಾಟರ್, ರೈಡಲ್ ವಾಟರ್, ವುಲ್ಸ್ ವಾಟರ್, ಎಲ್ಸರ್ ವಾಟರ್, ಹೀಗೆ. ಈ ಸಣ್ಣ-ದೊಡ್ಡ ನೀರ್ ನೆಲೆಗಳ ಬದಿಗೆ ಹಾದು ಒಂದೆಡೆ ನಮ್ಮ ವಾಹನ ಕಿರ‍್ಕ್ ಸ್ಟೋನ್ ಪಾಸ್ ಎಂಬ ಕಣಿವೆ ದಾರಿಯನ್ನೇರತೊಡಗಿತ್ತು. ಎರಡೂ ಕಡೆ ಹಸುರಿನ ಹೆಸರೇ ಇಲ್ಲದ, ನಿರ್ಭಾವ, ನೀರವ ಪರ್ವತದ ಸಹಸ್ರಾರು ಅಡಿ ಎತ್ತರದ ಬೋಳು ಮೈಯ್ಯ ನಿಲುವುಗಳು. ಈ ಬೆಟ್ಟಗಳ ನಡುವೆ ದೂರದೂರದವರೆಗೆ ಏರಿಳಿಯುವ ಕಪ್ಪನೆಯ ಟಾರು ರಸ್ತೆ ಸಂಜೆ ಮಬ್ಬಿನಲ್ಲಿ ಬಿದ್ದುಕೊಂಡ ಯಾವುದೋ ಪ್ರಾಚೀನ ಕಾಲದ ಸರೀಸೃಪದಂತೆ ಭಾಸವಾಗುತ್ತಿತ್ತು.  ಅದೆಲ್ಲಿಂದಲೋ ಹರಿದು ಬಂದು, ಕಣಿವೆಯನ್ನು ತನ್ನ ಮರ‍್ಮರದಿಂದ ಅನುರಣನಗೊಳಿಸಿದ ತೊರೆಯೊಂದು ಇಲ್ಲಿ ಮಿಂಚಿ ಅಲ್ಲಿ ಮಾಯವಾಗುತ್ತಿತ್ತು. ದೂರದಲ್ಲಿ ನೆಲವೂ ಮುಗಿಲೂ ಕೂಡಿದಂತೆ ತೋರುವ ದಿಗಂತದಂಚಿನಲ್ಲಿ, ಸಣ್ಣಪುಟ್ಟ ನೀರ್‌ನೆಲೆಗಳು ಒಡೆದ ಕನ್ನಡಿಯ ತುಣುಕುಗಳಂತೆ ಚದುರಿಕೊಂಡಿದ್ದವು. ಕಿರ‍್ಕ್‌ಸ್ಟೋನ್ ಕಣಿವೆ ದಾರಿಯ ಅಕ್ಕಪಕ್ಕದ ವಿಸ್ತಾರವಾದ ಹಸಿರು ಹೊಲಗಳ ನಡುವೆ, ಪ್ರಶಾಂತವಾಗಿ ಪವಡಿಸಿದ ಗ್ರಾಮಗಳೂ, ಅವುಗಳ ನಡುವೆ ಎತ್ತರವಾದ ಚರ್ಚುಗಳೂ, ಚಿತ್ರಪಟದೊಳಗೆ ಹೇಗೋ ಹಾಗೆ ಕಾಣುತ್ತಿದ್ದವು.

ಈ ಪರಿಸರದಲ್ಲಿ ನೋಡಲು ಇನ್ನೆಷ್ಟೋ ಸ್ಥಳಗಳಿದ್ದರೂ, ಸಮಯಾ ಭಾವದಿಂದ ಮರುದಿನದ ಮುಂಜಾನೆ, ರೈಡಲ್ ಮೌಂಟ್ ಒಂದನ್ನು ಮಾತ್ರ ನೋಡಿಕೊಂಡು ಹಿಂದಿರುಗಲು – ನಿರ್ಧರಿಸಿದೆವು. ವಾಸ್ತವವಾಗಿ ವಾರಗಟ್ಟಲೆ ಇಲ್ಲಿನ ಯಾವುದೋ ಒಂದು ರಮ್ಯಕೇಂದ್ರವನ್ನು ಆಯ್ದುಕೊಂಡು ನಿಂತು, ಯಾವ ಅವಸರವೂ ಉಪಾಧಿಯೂ ಇಲ್ಲದೆ, ಬಸ್ಸಲ್ಲಿ ಪಯಣಿಸಿ, ಕಾಡುದಾರಿಗಳಲ್ಲಿ ನಡೆದು, ಸರೋವರಗಳ ದೋಣಿ ದಾರಿಗಳಲ್ಲಿ ತೇಲಿ, ವಿವಿಧ ಋತುಮಾನಗಳಲ್ಲಿ ಈ ಪರಿಸರವು ತಾಳುವ ಬದಲಾವಣೆಗಳ ಸೊಗಸನ್ನು ಅನುಭವಿಸಿ ಈ ಚೆಲುವನ್ನು ಬದುಕಬೇಕು.

ವಿಂಡರ್ ಮಿಯರ್‌ನ ‘ರಾಕ್‌ಲೀ’ ವಸತಿಗೃಹಕ್ಕೆ ವಿದಾಯ ಹೇಳಿ ಹೊರಟಾಗ ಮತ್ತೆ ಹಿಂದಿನಂತೆಯೇ ಮುಚ್ಚಿಕೊಂಡ ಮಬ್ಬು. ಕೇವಲ ಮೂವತ್ತೈದು ನಿಮಿಷಗಳಲ್ಲಿ  ಅಂಬಲ್‌ಸೈಡ್ ಅನ್ನು ದಾಟಿ. ನಾಲ್ಕೈದು ಮೈಲಿಗಳ ದಟ್ಟಕಾಡಿನ ದಾರಿಯನ್ನು ತೂರಿಕೊಂಡು, ವರ್ಡ್ಸ್‌ವರ್ತ್ ತನ್ನ ಬದುಕಿನ ಬಹುಕಾಲ ವಾಸವಾಗಿದ್ದ ‘ರೈಡಲ್ ಮೌಂಟ್’ಗೆ ತಲುಪಿದೆವು. ವರ್ಡ್ಸ್‌ವರ್ತ್ ಹಾಗೂ ಅವನ ಕುಟುಂಬ ವರ್ಗದವರು ಗ್ರಾಸ್‌ಮಿಯರ್‌ನ ‘ಡೋವ್ ಕಾಟೇಜ್’ ದಿಂದ, ಕೇವಲ ಎರಡೂವರೆ ಮೈಲಿಗಳ ಅಂತರದಲ್ಲಿರುವ, ಗುಡ್ಡಗಳ ಮೇಲೆ ನಿರ್ಮಿತವಾಗಿರುವ ರೈಡಲ್‌ಮೌಂಟ್ ಎಂಬ ವಿಸ್ತಾರವಾದ ಈ ಮನೆಗೆ ೧೮೧೩ರಲ್ಲಿ ಬಂದರು. ಮುಂದೆ ಮೂವತ್ತೇಳು ವರ್ಷಗಳಷ್ಟು ಸುದೀರ್ಘ ಕಾಲ ವರ್ಡ್ಸ್‌ವರ್ತ್ ಈ ಮನೆಯಲ್ಲಿ ವಾಸ ಮಾಡಿದ. ಹದಿನಾರನೆಯ ಶತಮಾನದಷ್ಟು ಕಾಲ ಹಳೆಯದಾದ, ಎರಡಂತಸ್ತಿನ ದೊಡ್ಡಮನೆಯ ಸುತ್ತ ನಾಲ್ಕೂವರೆ ಎಕರೆಯಷ್ಟು ಅಗಲದ ತೋಟವಿದೆ. ಈ ಮನೆ, ಅದರ ಸುಸಜ್ಜಿತವಾದ ಪೀಠೋಪಕರಣಗಳಿಂದ ಮತ್ತು ಒಳಗಿನ ಹಲವಾರು ಕೋಣೆಗಳಿಂದ ತಕ್ಕಮಟ್ಟಿಗೆ ಶ್ರೀಮಂತಿಕೆಯ ಲಕ್ಷಣಗಳನ್ನು ಪ್ರಕಟಿಸುತ್ತದೆ. ಗ್ರಾಸ್‌ಮಿಯರ್‌ನ ಡೋವ್ ಕಾಟೇಜಿನಲ್ಲಿದ್ದಾಗ ವರ್ಡ್ಸ್‌ವರ್ತ್ ಬರೆದಷ್ಟು ಶ್ರೇಷ್ಠವಾದ ಕವಿತೆಗಳನ್ನು, ಆವನು ಈ ರೈಡಲ್‌ಮೌಂಟ್ ಮನೆಯ ಮೂವತ್ತೇಳು ವರ್ಷಗಳ ಕಾಲಮಾನದಲ್ಲಿ ಬರೆಯಲಿಲ್ಲವೆಂಬ ಸಂಗತಿಯನ್ನು ವಿಮರ್ಶಕರು ಗುರುತಿಸಿದ್ದಾರೆ. ಆದರೆ ಈ ಮನೆಗೆ ಬಂದ ನಂತರ ವರ್ಡ್ಸ್‌ವರ್ತ್‌ನ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಕೀರ್ತಿ-ಗೌರವ-ಪ್ರಶಂಸೆಗಳು ಲಭಿಸಿ, ಆತ ತಕ್ಕಷ್ಟು ನೆಮ್ಮದಿಯಾಗಿ ಬದುಕಿದ್ದಂತೂ ನಿಜ.  ಅವನ ಸಮಕಾಲೀನರಾದ ಅನೇಕ ಲೇಖಕರು ಹಾಗೂ ಸಾಹಿತ್ಯಾಭಿಮಾನಿಗಳು ಆಗಾಗ ಭೆಟ್ಟಿಯಾಗುತ್ತಿದ್ದದ್ದು ಇಲ್ಲಿ; ಇಂಗ್ಲೆಂಡಿನ ಡವೇಜರ್ ಮಹಾರಾಣಿಯಾದ ಅಡಿಲೇಡ್‌ಳಂಥ ಪ್ರತಿಷ್ಠಿತ ವ್ಯಕ್ತಿಗಳು ಇಲ್ಲಿಗೆ ಬಂದು ಹೋಗಿದ್ದಾರೆ. ವೆಸ್ಟ್‌ಮೂರ್‌ಲ್ಯಾಂಡಿನ ಅಂಚೆಚೀಟಿ ವಿತರಕನಾಗಿ ವರ್ಡ್ಸ್‌ವರ್ತ್ ನೇಮಕಗೊಂಡದ್ದೂ ಈ ಮನೆಯಲ್ಲಿದ್ದಾಗಲೇ. ಆರ್ಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅವನಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದ್ದು (೧೮೩೯) ಮತ್ತು ಬ್ರಿಟಿಷ್ ಸರ್ಕಾರ ರಾಷ್ಟ್ರಕವಿ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದ್ದು (೧೮೪೩) ಈ ಸಂದರ್ಭದಲ್ಲಿಯೇ.

ಈ ಮನೆಯ ಕೋಣೆಗಳ ಒಳಗೆ ವರ್ಡ್ಸ್‌ವರ್ತ್‌ನಿಗೆ ಸಂಬಂಧಪಟ್ಟ ಸ್ಮಾರಕಗಳು ಸಾಕಷ್ಟಿವೆ. ವರ್ಡ್ಸ್‌ವರ್ತ್‌ನನ್ನು ಎದುರಿಗೆ ಕೂರಿಸಿಕೊಂಡು, ಅಂದಿನ ಶ್ರೇಷ್ಠ ಚಿತ್ರಕಾರರು ಬರೆದ ಎರಡು ಭಾವಚಿತ್ರಗಳಿವೆ. ಒಂದು ಆತನ ನಲವತ್ತೆಂಟನೆಯ ವರ್ಷದ್ದು, ಮತ್ತೊಂದು ಅವನ ಎಪ್ಪತ್ತನೆಯ ವರ್ಷದ್ದು. ವರ್ಡ್ಸ್‌ವರ್ತ್‌ನ ತಂಗಿ ಡರಥಿಯ ಹಾಗೂ ಅವನ ಹೆಂಡತಿ ಮೇರಿಯ ಮತ್ತು ಅವನ ಮಗಳು ಡೋರಾಳ ಭಾವಚಿತ್ರಗಳಿವೆ. ವರ್ಡ್ಸ್‌ವರ್ತ್‌ನ ಸಾಹಿತ್ಯ ಜೀವನದಲ್ಲಿ ಈ ಇಬ್ಬರು ಮಹಿಳೆಯರ ಪಾತ್ರವೂ ಅತ್ಯಂತ ಗಣನೀಯವಾದದ್ದು. ಡರಥಿಯಂತೂ ತನ್ನ ಅಣ್ಣನ ಕವಿತೆಗಳನ್ನು ಅಂದಂದೇ ಪ್ರತಿಮಾಡಿದ್ದು ಮಾತ್ರವಲ್ಲ, ಆಕೆ ಅತ್ಯಂತ ಸೊಗಸಾದ ಗದ್ಯದಲ್ಲಿ  ವರ್ಡ್ಸ್‌ವರ್ತ್‌ನ ದೈನಂದಿನ ಹಾಗೂ ಸಾಹಿತ್ಯಕ ಜೀವನದ ವಿವರಗಳನ್ನು ಬರೆದಿರಿಸಿದ್ದಾಳೆ. ವರ್ಡ್ಸ್‌ವರ್ತ್‌ನ ‘ಸ್ಟಡೀ ರೂಂ’ದಿಂದ ಹೊರಗೆ ಕಾಣುವ ಕಾಡು – ಕಣಿವೆ ಸರೋವರಗಳ ದೃಶ್ಯ ತುಂಬ ಮೋಹಕವಾಗಿದೆ. ಮನೆಯ ಬೇರೆ ಬೇರೆ ಕೊಠಡಿಗಳಲ್ಲಿ ಹಾಗೂ ಮೊಗಸಾಲೆಗಳಲ್ಲಿ ಅವನ ಸಮಕಾಲೀನರಾದ ಸಾಹಿತಿಗಳ ಹಾಗೂ ಇನ್ನಿತರ ಪ್ರತಿಷ್ಠಿತ ವ್ಯಕ್ತಿಗಳ ವರ್ಣಚಿತ್ರಗಳೂ, ದಾಖಲೆಗಳೂ ಇವೆ. ಒಂದು ಕೊಠಡಿಯಲ್ಲಿ ಅವನ ಕಾಲದ ಪತ್ರಿಕೆಗಳ ವರದಿಯನ್ನು ಗಾಜಿನ ರಕ್ಷೆಯೊಂದರಲ್ಲಿ ತೂಗುಹಾಕಲಾಗಿದೆ. ಇವುಗಳಲ್ಲಿ ತೀರಾ ವಿಶೇಷವಾದದ್ದೆಂದರೆ, ಈ ಕವಿ ತನ್ನ ಅರುವತ್ತಾರನೆ ವಯಸ್ಸಿನಲ್ಲಿ ಮಾಡಿದ ಒಂದೇ ಒಂದು ಸಾರ್ವಜನಿಕ ಉಪನ್ಯಾಸದ ವರದಿ. ಆತ ವಿಂಡರ್‌ಮಿಯರ್ ಹತ್ತಿರ ಇರುವ ಬವ್ನೆಸ್ ಎಂಬ ಹಳ್ಳಿಯ ಶಾಲೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭವನ್ನು ಕುರಿತದ್ದು ಅದು. ತನ್ನ ಇಡೀ ಜೀವಮಾನದಲ್ಲಿ ಅವನು ಮಾಡಿದ ಸಾರ್ವಜನಿಕ ಉಪನ್ಯಾಸ ಇದೊಂದೇ!

ತನ್ನ ಬದುಕಿನ ಉದ್ದಕ್ಕೂ ವರ್ಡ್ಸ್‌ವರ್ತ್ ಸಂಚರಿಸಿದ್ದು ಬೆಟ್ಟ – ಗುಡ್ಡ-ಕಾಡು-ಕಣಿವೆ – ನದಿ – ಸರೋವರಗಳ ಸುಂದರ ನಿಸರ್ಗದ ನಡುವೆ. ಬದುಕಿನ ಸರಳ ಸಾಧಾರಣ ಸಂಗತಿಗಳಲ್ಲಿ ಗಾಢವಾದ ಅರ್ಥವಂತಿಕೆಯನ್ನು ಕಾಣುತ್ತ, ಪ್ರಸನ್ನವೂ ಪ್ರಶಾಂತವೂ ಆದ ಒಂದು ಚಿತ್ತಸ್ಥಿತಿಯಲ್ಲಿ, ಪ್ರಕೃತಿಯ ವೈವಿಧ್ಯಮಯವಾದ ಚೆಲುವನ್ನು ಏಕಾಂಗಿಯಾಗಿ ಆಸ್ವಾದಿಸುತ್ತ, ಅರಗಿಸಿಕೊಳ್ಳುತ್ತ, ತಾನೇ ಆದೆಂಬಂತೆ, ಅದೇ ತಾನೆಂಬಂತೆ ತಾದಾತ್ಮ್ಯಾನುಭೂತಿಯಲ್ಲಿ ಬದುಕುತ್ತ, ಆ ಸಾಮರಸ್ಯದ ಅನುಭವಗಳನ್ನು  ಬಹುಸಂಖ್ಯೆಯ ಕವಿತೆಗಳಲ್ಲಿ ಅಭಿವ್ಯಕ್ತಪಡಿಸುತ್ತ, ತಮ್ಮ ಅಸ್ತಿತ್ವದ ಒಂದು ಭಾಗವೇ ಆದ ನಿಸರ್ಗದೊಂದಿಗೆ ಸ್ಪಂದಿಸಲಾರದೆ ಜಡವಾಗಿ ನಿಲ್ಲುವ ಮನಃಸ್ಥಿತಿಗಳ ಬಗ್ಗೆ ವಿಷಾದಿಸುತ್ತ, ಅತ್ಯಂತ ಸೃಜನಾತ್ಮಕವಾಗಿ ಬದುಕಿದ ವರ್ಡ್ಸ್‌ವರ್ತ್‌ನ ವ್ಯಕ್ತಿತ್ವವನ್ನು ಕುರಿತು, ಕನ್ನಡದ ಮಲೆನಾಡಿನ ಕವಿ ಕುವೆಂಪು ಅವರು ‘ಆಂಗ್ಲಕವಿಗಳಲಿ ನೀನೆನ್ನೆದೆಯ ಸೆಳೆದಂತೆ ಉಳಿದವರು ಸೆಳೆದಿಲ್ಲ, ನರನಾಟಕವ ನೋಡಿ ರಂಗದಲಿ ಚಿತ್ರಿಸಿದ ಷೇಕ್ಸ್‌ಪಿಯರನುಂ ಕೂಡಿ’ ಎಂದು, ಷೇಕ್ಸ್‌ಪಿಯರನಿಗಿಂತಲೂ ವರ್ಡ್ಸ್‌ವರ್ತ್ ತಮಗೆ ಹೆಚ್ಚು ಪ್ರಿಯವಾದವನೆಂದು ಪ್ರಶಂಸಿಸುತ್ತಾರೆ – ತಮ್ಮ ಸಾನೆಟ್ ಒಂದರಲ್ಲಿ. ಕುವೆಂಪು ಅವರ ಪಾಲಿಗೆ ಷೇಕ್ಸ್‌ಪಿಯರ್ ‘ಸಂತೆ’ಯಾದರೆ, ವರ್ಡ್ಸ್‌ವರ್ತ್ ‘ಪರ್ಣಕುಟಿ’ಯಂತೆ; ಅಷ್ಟೇ ಅಲ್ಲ, ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುವುದು ಹೇಗೆ ಅನ್ನುವುದನ್ನು ವರ್ಡ್ಸ್‌ವರ್ತ್ ಮತ್ತಿತರ ಇಂಗ್ಲಿಷ್ ಕವಿಗಳಿಂದ ತಾವು ಕಲಿತದ್ದಾಗಿ ಅವರು ತಮ್ಮ ‘ನೆನಪಿನ ದೋಣಿಯಲ್ಲಿ’ ಎಂಬ ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ. ಕುವೆಂಪು ಅವರ ಎಷ್ಟೋ ಕವಿತೆಗಳಲ್ಲಿ ವರ್ಡ್ಸ್‌ವರ್ತ್‌ನ ಪ್ರಭಾವವಿದೆ ಎಂಬುದು ನಿಜ. ಆದರೂ ಕುವೆಂಪು ವರ್ಡ್ಸ್‌ವರ್ತ್‌ಗಿಂತ ಬೇರೆಯೆ ಆದ ಆಯಾಮಗಳನ್ನುಳ್ಳ ಮಹಾನ್ ಲೇಖಕರು ಎಂಬುದನ್ನು ಮರೆಯಬಾರದು. ಆದರೆ ಇಬ್ಬರಿಗೂ ಸಮಾನವಾದ ಒಂದು ಸಂಗತಿಯೆಂದರೆ, ಅವರಿಬ್ಬರೂ ದಟ್ಟವಾದ ಪರ್ವತಾರಣ್ಯಪ್ರಪಂಚಗಳಲ್ಲಿ ಹುಟ್ಟಿ ಬೆಳೆದವರು; ಮಹಾಮಾನವತಾವಾದಿಗಳು ಮತ್ತು ನಿಸರ್ಗವನ್ನು  ಗಾಢವಾಗಿ ಪ್ರೀತಿಸುತ್ತ ಆ ನಿಸರ್ಗದ ಚೆಲುವಿನ ವೈವಿಧ್ಯಗಳನ್ನೂ ಮತ್ತು ಅದಕ್ಕೆ ತಾವು ಸ್ಪಂದಿಸಿದ ಪರಿಯನ್ನೂ ಅನನ್ಯವಾಗಿ ತಮ್ಮ ಕವಿತೆಗಳಲ್ಲಿ ಅಭಿವ್ಯಕ್ತಪಡಿಸಿದವರು. ವರ್ಡ್ಸ್‌ವರ್ತ್ ಬಾಳಿ – ಬದುಕಿದ ಕಾಲದಲ್ಲಿ ಲೇಕ್ ಡಿಸ್ಟ್ರಿಕ್ಟ್‌ನ ನಿಸರ್ಗ ಪರಿಸರ ಹೇಗಿತ್ತೋ, ಇಂದೂ ಬಹುಮಟ್ಟಿಗೆ ಹಾಗೆಯೇ ಉಳಿದುಕೊಂಡು ಬಂದಿದೆ ಎಂದು ಹೇಳಲಾಗಿದೆ. ಅಷ್ಟರಮಟ್ಟಿಗೆ ಇಂಗ್ಲೆಂಡಿನ ಜನ ಹಾಗೂ ಸರ್ಕಾರ ಎಚ್ಚರವಹಿಸಿ, ಅದನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ ಕುವೆಂಪು ಹುಟ್ಟಿ ಬೆಳೆದು, ಕೃತಿರಚನೆ  ಮಾಡಿದ ಸಂದರ್ಭದ ಸಹ್ಯಾದ್ರಿ ಪರಿಸರದ ಅರಣ್ಯ, ಅವರೇ ವರ್ಣಿಸಿರುವಂತೆ ‘ಭೀರುಗೆ ಭಯಂಕರಂ ರಸಿಕಧೀರಗೆ ಕಲಾಶಂಕರಂ’. ಅದು ತನ್ನ ದೈತ್ಯಪರ್ವತಗಳ, ‘ರವಿಯ ರಶ್ಮಿಯ ಪ್ರಜ್ಞೆಯಿಲ್ಲದ’ ಜಟಿಲ ಕಾನನಗಳ, ಹುಲಿ ಹಂದಿ-ಕಾಟಿ-ಆನೆ-ಸೊಳ್ಳೆ-ಜಿಗಣೆಗಳ ಬೀಡು. ಆದರೆ ವರ್ಡ್ಸ್‌ವರ್ತ್‌ನ ಈ ‘ಮಲೆನಾಡು’, ಕುವೆಂಪುವಿನ ರಾಮಾಯಣದ ದಂಡಕಾರಣ್ಯವಲ್ಲ; ಹುಲಿಕಲ್ಲ ನೆತ್ತಿಯ ಸುತ್ತಣಡವಿಯ ಹಾಗೆ ದುರ್ಗಮವಲ್ಲ; ಕಾನೂರು ಕಾಡಿನ ಹಾಗೆ ಬೇಟೆಗಾರರ ಸಾಹಸದ ಸಂಚಾರ ಭೂಮಿಕೆಯೂ ಅಲ್ಲ. ಇದು ತನ್ನ ತಂಪಾದ ಹಾಗೂ ನಿಬಿಡವಾದ ಸಸ್ಯ ಸಮೃದ್ಧಿಯಿಂದ, ಅಲೆಯಲೆಯಾಗಿ ಹಬ್ಬಿದ ಗಿರಿಗಳಿಂದ, ಬೇರೆಲ್ಲೂ ಕಾಣದ ಬಹುಸಂಖ್ಯೆಯ ಸರೋವರ ಮಂಡಲಗಳಿಂದ, ರಸಿಕರ ವಿಹಾರಕ್ಕೆ, ಸಾಹಸಿಗಳ ಸತ್ವಪರೀಕ್ಷೆಗೆ, ನಿರಾತಂಕದ ನೆಲೆಯಾಗಿದೆ. ಇಂಗ್ಲೆಂಡಿನ ಅತ್ಯಂತ ಎತ್ತರವಾದ ಪರ್ವತವೆಂದು ಹೇಳಲಾದ ಸ್ಕೀಫೆಲ್‌ಪೈಕ್ ಎಂಬ ಶಿಖರ ಲೇಕ್ ಡಿಸ್ಟ್ರಿಕ್ಟ್‌ನಲ್ಲಿರುವು ದಾದರೂ, ಅದರ ಎತ್ತರ ಕೇವಲ ಮೂರು ಸಾವಿರದ ಇನ್ನೂರ ಹತ್ತು ಅಡಿಗಳು ಮಾತ್ರ. ಸಹ್ಯಾದ್ರಿಯ ಶ್ರೇಣಿಯಲ್ಲಾದರೋ, ಈ ಎತ್ತರದ ಹಾಗೂ ಇದನ್ನೂ ಮೀರಿದ ಎಷ್ಟೋ ಪರ್ವತಗಳಿವೆ. ಈ ದೃಷ್ಟಿಯಿಂದ  ಕುವೆಂಪುವಿನ ಕೃತಿಗಳಿಗೆ ಪ್ರೇರಕವಾದ ಮಲೆನಾಡಿಗೂ, ವರ್ಡ್ಸವರ್ತ್‌ನ ಕೃತಿಗಳಿಗೆ ಪ್ರೇರಕವಾದ ಈ ‘ಸರೋವರ ಮಂಡಲ’ಗಳ ನಿಸರ್ಗ ರಮ್ಯತೆಗೂ ಇರುವ ವ್ಯತ್ಯಾಸ ಗಮನಾರ್ಹವಾದದ್ದು. ಆದರೆ ಒಂದು ಮಾತಂತೂ ನಿಜ: ಕುವೆಂಪುವಿನ ಕಾಲದ ಮಲೆನಾಡು ಅವರ ಕೃತಿಗಳಲ್ಲಿ ಮಾತ್ರವೆ ಉಳಿದುಕೊಂಡಿದೆ ಎಂಬಂತೆ ತೋರಿದರೆ, ವರ್ಡ್ಸ್‌ವರ್ತ್  ಲೇಕ್ ಡಿಸ್ಟ್ರಿಕ್ಟ್‌ನ ನಿಸರ್ಗ ಶ್ರೀಮಂತಿಕೆ ಅಂದಿನಂತೆಯೆ ಇಂದೂ ಉಳಿದುಕೊಂಡು ಮತ್ತೊಬ್ಬ ವರ್ಡ್ಸ್‌ವರ್ತ್‌ನಿಗಾಗಿ ತುದಿಗಾಲಲ್ಲಿ ನಿಂತು ಕಾಯುವಂತೆ ತೋರುತ್ತದೆ.