ಅನುಭಾವವೆಂಬುದು ಅಂತರಂಗದ ರತ್ನ ಕಾಣಿರೋ’ ಎನ್ನುತ್ತಾರೆ ತಮ್ಮದೊಂದು ವಚನದಲ್ಲಿ ಅಲ್ಲಮ ಪ್ರಭುಗಳು.  ಆದರೆ ಈ ‘ಅಂತರಂಗದ ರತ್ನ’ ಯಾರ ಬದುಕಿನಲ್ಲಿ ತಾನೇ ತಾನಾಗಿ ಪ್ರಸ್ಫುಟಗೊಳ್ಳುವುದೋ ಅವರು, ಸಾಧುಗಳೆಂದೋ, ಸಂತರೆಂದೋ, ಗುರುಗಳೆಂದೋ – ಗುರುತಿಸಲ್ಪಡುತ್ತಾರೆ, ಗೌರವಿಸಲ್ಪಡುತ್ತಾರೆ.  ಇಂಥದೊಂದು ಘಟನೆ, ಬೆಂಗಳೂರಿನ ಚಿಕ್ಕದೊಂದು ಅಂಗಡಿಯೊಳಗೆ ಸಂಭವಿಸಿತ್ತು, ಹದಿನೆಂಟನೆ ಶತಮಾನದ ಮೊದಲ ಭಾಗದಲ್ಲಿ.

ಆಗ ಬೆಂಗಳೂರು ಇನ್ನೂ ದೊಡ್ಡ ಊರಾಗಿ ಬೆಳೆದಿರಲಿಲ್ಲ.  ಬ್ರಿಟಿಷರು ಟಿಪ್ಪುಸುಲ್ತಾನನನ್ನು ಸೋಲಿಸಿ ಮೈಸೂರು ಸಂಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡ ಕಾಲ ಅದು.  ಅದುವರೆಗೂ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ಹಾಳಾಗಿ, ಮೈಸೂರಿನ ಮಹಾರಾಜರಾಗಿ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರು, ಮೈಸೂರು ನಗರದಲ್ಲಿ ಪಟ್ಟಾಭಿಷಿಕ್ತರಾದರು.   ಆ ಕಾಲದಲ್ಲಿ ಮೊದಲ ರಾಜಧಾನಿಯಾದ ಶ್ರೀರಂಗ ಪಟ್ಟಣದಲ್ಲಿದ್ದ ಬ್ರಿಟಿಷ್ ಸೈನ್ಯವು ಬೆಂಗಳೂರಿನ ಕಂಟೋನ್ಮೆಂಟ್‌ಗೆ ಸ್ಥಳಾಂತರ ಹೊಂದಿತು.  ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರೂ ಬೆಂಗಳೂರಿನ ಕೋಟೆಯೊಳಗಿನ ಅರಮನೆಗೆ ಬಂದು ಒಡ್ಡೋಲಗ ನಡೆಯಿಸಿ, ಬೆಂಗಳೂರನ್ನು ಒಂದು ದೊಡ್ಡ ನಗರವನ್ನಾಗಿ ಅಭಿವೃದ್ಧಿಪಡಿಸುವ ಆಶಯವನ್ನು ಪ್ರಕಟಿಸಿದರು.  ಅದು ಅಕ್ಟೋಬರ್ ೧೮೧೧ರ ಸಮಯ.

ಒಂದು ಊರು ನಗರವಾಗಿ ಅಭಿವೃದ್ಧಿ ಹೊಂದಬೇಕಾದರೆ ಅದರ ವಾಣಿಜ್ಯ – ವ್ಯವಹಾರಗಳು ನೆಲೆಗೊಳ್ಳಬೇಕು.  ಈ ವೇಳೆಗಾಗಲೇ ವ್ಯಾಪಾರದಲ್ಲಿ ನುರಿತ ಕೆಲವು ವೀರಶೈವ ವರ್ತಕರು, ಉತ್ತರ ಕರ್ನಾಟಕದಿಂದ ಹಾಗೂ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಂದ ಬೆಂಗಳೂರಿಗೆ ಬಂದು ನೆಲಸಿ – ನಗರದ ವಾಣಿಜ್ಯ – ವ್ಯವಹಾರಗಳ ಸಂವರ್ಧನೆಯಲ್ಲಿ ತೊಡಗಿದ್ದರು.  ಅಲ್ಲದೆ ತಮ್ಮ ಧಾರ್ಮಿಕ ಆವಶ್ಯಕತೆಗಾಗಿಯೂ ಅವರು ಸಾಕಷ್ಟು ಸಂಖ್ಯೆಯ ಮಠಗಳನ್ನು ಕಟ್ಟಿಸಿದ್ದರು.  ಅವುಗಳಲ್ಲಿ ಬೆಂಗಳೂರಿನ ಸುಪ್ರಸಿದ್ಧ ವ್ಯಾಪಾರಿಗಳಾದ ಶ್ರೀ ತಿಪ್ಪಶೆಟ್ಟರು ಕಟ್ಟಿಸಿದ ಮಠವೂ ಒಂದು.  ಇಂದಿಗೂ ಇದು ಬೆಂಗಳೂರಿನಲ್ಲಿ ತಿಪ್ಪಶೆಟ್ಟಿಮಠ ಎಂದು ಹೆಸರಾಗಿದೆ. ಈ ಮಠಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಗವೀಮಠದಲ್ಲಿ ಮಹಾ ತಪಸ್ವಿಗಳಾಗಿದ್ದ ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ತಿಪ್ಪಶೆಟ್ಟರ ಕೋರಿಕೆಯ ಮೇರೆಗೆ ತಮ್ಮ ಶಿಷ್ಯರಾದ ಶ್ರೀಗುರುಸಿದ್ಧ ಸ್ವಾಮಿಗಳನ್ನು ಕಳುಹಿಸಿಕೊಟ್ಟರು.  ಶ್ರೀಗುರುಸಿದ್ಧ ಸ್ವಾಮಿಗಳು ಬೆಂಗಳೂರಿನ ತಿಪ್ಪಶೆಟ್ಟಿಮಠದ ಆಧಿಪತ್ಯವನ್ನು ವಹಿಸಿಕೊಂಡು, ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಬೆಂಗಳೂರಿಗೆ ಸಮೀಪದ ಚಿಕ್ಕಬಾಣಾವರ ಎಂಬ ಗ್ರಾಮದಲ್ಲಿ ವ್ಯಾಪಾರಸ್ಥರಾಗಿದ್ದ ಶ್ರೀಮಲ್ಲಿಕಾರ್ಜುನಪ್ಪನವರು ತಮ್ಮ ಪತ್ನಿ ಚೆನ್ನಮ್ಮ ಹಾಗೂ ಇನ್ನಿತರ ತಮ್ಮ ಮಕ್ಕಳೊಡನೆ ಬೆಂಗಳೂರಿಗೆ ಬಂದು ಒಂದು ಚಿಕ್ಕ ಅಡಿಕೆಯ ಅಂಗಡಿ- ಯನ್ನಿರಿಸಿಕೊಂಡು ವ್ಯಾಪಾರದಲ್ಲಿ ತೊಡಗಿದ್ದರು.  ಈ ದಂಪತಿಗಳ ಕಿರಿಯಮಗನಾಗಿ ೧೭೯೫ರಲ್ಲಿ ಸಪ್ಪಣ್ಣನವರು ಹುಟ್ಟಿದರು.  ಸಪ್ಪಣ್ಣನವರ ತಂದೆಯವರಾದ ಮಲ್ಲಿಕಾರ್ಜುನಪ್ಪನವರು, ದಿನವೂ ತಿಪ್ಪಶೆಟ್ಟಿಮಠಕ್ಕೆ ಹೋಗಿ ಶ್ರೀಗುರುಸಿದ್ಧ ಮಹಾಸ್ವಾಮಿಗಳ ಪ್ರವಚನವನ್ನು ಕೇಳಿಬರುತ್ತಿದ್ದರು.  ಹೀಗಿರುವಾಗ ಅವರನ್ನು ಒಂದು ದಿನ ತಮ್ಮ ಮನೆಗೆ ದಯಮಾಡಿಸಬೇಕೆಂದು ಮಲ್ಲಿಕಾರ್ಜುನಪ್ಪನವರು ಆಹ್ವಾನಿಸಿದರು.  ಮಲ್ಲಿಕಾರ್ಜುನಪ್ಪನವರ ಧರ್ಮಶ್ರದ್ಧೆಯನ್ನು ಮೆಚ್ಚಿದ ಗುರುಸಿದ್ಧ ಮಹಾಸ್ವಾಮಿಗಳು ಒಂದುದಿನ, ಅವರ ಮನೆಗೆ ದಯಮಾಡಿಸಿದರು.  ಹಾಗೆ ಬಂದ ಸ್ವಾಮಿಗಳು, ಮಲ್ಲಿಕಾರ್ಜುನಪ್ಪನ ಕಿರಿಯ ಮಗ, ಸುಮಾರು ಆರೇಳು ವರ್ಷದ ಸಪ್ಪಣ್ಣನನ್ನು ಅಡಕೆಯ ಅಂಗಡಿಯಲ್ಲಿ ಕಂಡರು.  ಕಂಡಕೂಡಲೆ ಅವರಿಗೆ ಅರಿವಾಯಿತು, ಈ ಅಡಕೆಯ ಅಂಗಡಿಯೊಳಗೊಂದು ‘ಅಂತರಂಗದ ರತ್ನ’ ಅಡಗಿಕೊಂಡಿದೆ ಎಂದು.  ಕೂಡಲೆ ಮಹಾಶಿಲ್ಪಿಯೊಬ್ಬ, ತಾನು ಕಡೆಯಲಿರುವ ವಿಗ್ರಹಕ್ಕೆ ಅಪೂರ್ವವಾದ ಶಿಲೆಯೊಂದನ್ನು ಗುರುತಿಸಿದ ಅನುಭವವಾಯಿತು ಸ್ವಾಮಿಗಳಿಗೆ.  ಸ್ವಾಮಿಗಳು, ಈ ಬಾಲಕನನ್ನು ವಿದ್ಯಾಭ್ಯಾಸಕ್ಕಾಗಿ ತಮ್ಮ ಮಠಕ್ಕೆ ಕಳುಹಿಸಿಕೊಡಬೇಕೆಂದು, ಮಲ್ಲಿಕಾರ್ಜುನಪ್ಪನವರಿಗೆ ಅಪ್ಪಣೆ ಮಾಡಿದರು.

ಮರುದಿನದಿಂದ ಮಠಕ್ಕೆ ಬಂದ ಸಪ್ಪಣ್ಣ ಅಥವಾ ಸರ್ಪಭೂಷಣನಿಗೆ ಗುರುವಿನ ಅನುಗ್ರಹ ಹಾಗೂ ಮಾರ್ಗದರ್ಶನಗಳು ಅಯಾಚಿತವಾಗಿ ದೊರಕೊಂಡವು.  ಕನ್ನಡ ಹಾಗೂ ಸಂಸ್ಕೃತದ ಆಧ್ಯಾತ್ಮಿಕ ಪರಂಪರೆಯನ್ನು ತಮ್ಮ ತೀಕ್ಷ ಮತಿಯಿಂದ  ಸಪ್ಪಣ್ಣನವರು, ಗುರುವಿನ ಆಧ್ಯಾತ್ಮಿಕ ಅನುಗ್ರಹದ ಜತೆಗೆ ಕರಗತಮಾಡಿಕೊಂಡರು.  ಕೊನೆಗೆ ಒಂದುದಿನ ಶ್ರೀಗುರುಸಿದ್ಧ ಮಹಾಸ್ವಾಮಿಗಳು, ಸಪ್ಪಣ್ಣನನ್ನು, ಆತನ ತಂದೆ-ತಾಯಂದಿರ ಸಮ್ಮತಿಯಿಂದ, ತಮ್ಮ ಆಧ್ಯಾತ್ಮಿಕ ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ವಿರಕ್ತಾಶ್ರಮದ ದೀಕ್ಷೆಯನ್ನು ದಯಪಾಲಿಸಿದರು.  ಅಡಕೆ ಅಂಗಡಿಯಲ್ಲಿ ತಕ್ಕಡಿ ಹಿಡಿದು ಕೂಡಬೇಕಾದ ವ್ಯಕ್ತಿಯೊಬ್ಬ, ಶ್ರೀಗುರುಕೃಪೆಯಿಂದ ಮಹಾ ವೈರಾಗ್ಯಮೂರ್ತಿಯಾಗಿ, ಸರ್ಪಭೂಷಣ ಶಿವಯೋಗಿಯಾಗಿ, ಕನ್ನಡದ ಅಪೂರ್ವ ವಾಗ್ಗೇಯಕಾರರೊಬ್ಬರಾಗಿ ಮಾರ್ಪಟ್ಟದ್ದು ಈ ನೆಲದ ಪುಣ್ಯ ವಿಶೇಷವೆಂದೇ ಹೇಳಬೇಕು.  ಸರ್ಪಭೂಷಣ ಸ್ವಾಮಿಗಳು, ತಾವು ಬರೆದ ‘ಕೈವಲ್ಯಕಲ್ಪವಲ್ಲರಿ’ ಎಂಬ ಕೃತಿಯ ತತ್ವಪದಗಳಲ್ಲಿ ಶ್ರೀಗುರುಸಿದ್ಧಸ್ವಾಮಿಗಳನ್ನು ತಮ್ಮ ಹಾಡುಗಳ ಅಂಕಿತದೊಳಗೆ ಸಮಾವೇಶಗೊಳಿಸಿ ತಮ್ಮ ಭಕ್ತಿ – ಗೌರವಗಳನ್ನು ಪ್ರಕಟಿಸಿದ್ದಾರೆ.

ಹಿಂದೂ ಸಂಪ್ರದಾಯದ ಸನ್ಯಾಸದಲ್ಲಿ ದೇಶ ಹಾಗೂ ತೀರ್ಥಕ್ಷೇತ್ರಾದಿಗಳ ಸಂಚಾರಕ್ಕೆ ಬಹುಮುಖ್ಯವಾದ ಸ್ಥಾನವಿದೆ.  ಈ ಬಗೆಯ ಸಂಚಾರದಲ್ಲಿ ತೊಡಗುವ ಸಾಧುಗಳನ್ನು ಬಹೂದಕ ಎಂದು ನಿರ್ದೇಶಿಸಲಾಗಿದೆ.  ಅಂದರೆ ಅನೇಕ ‘ಉದಕ’ಗಳನ್ನು ಅಂದರೆ ‘ತೀರ್ಥ’ಗಳನ್ನು ಸಂದರ್ಶಿಸುವವನು ಎಂದರ್ಥ.  ಈ ‘ತೀರ್ಥ’ ಕೇವಲ ನೀರು ಅಥವಾ ಪವಿತ್ರವಾದ ನದಿಗಳು ಎಂದು ಮಾತ್ರವಲ್ಲ; ಯಾರ ದಿವ್ಯ ವ್ಯಕ್ತಿತ್ವ ನೀರನ್ನೂ ತೀರ್ಥವನ್ನಾಗಿ ಪರಿವರ್ತಿಸುತ್ತದೆಯೋ ಅಂತಹ ಮಹಾಸಾಧು – ಸಂತರ ಸಹವಾಸವೂ ಈ ‘ಬಹೂದಕ’ನಾದ ಸಾಧುಕನಿಗೆ ಲಭಿಸುತ್ತದೆ ಎಂದು ಅರ್ಥ.  ಈ ಸಂಚಾರದ ನಂತರ ಮತ್ತೆ ಯಾವಾತ ಒಂದೆಡೆ ನೆಲೆ ನಿಂತು ಭಗವದ್ ವಿಷಯಕವಾದ ಚಿಂತನೆ ಹಾಗೂ ಮಾರ್ಗದರ್ಶನದಲ್ಲಿ ನಿಲ್ಲುತ್ತಾನೆಯೋ ಅಂಥವನನ್ನು ‘ಕುಟೀಚಕ’ ಎಂದು ಕರೆಯಲಾಗಿದೆ.  ವೀರಶೈವ ಸಂಪ್ರದಾಯದ ಮಠಾಧಿಪತಿಗಳನ್ನು ಈ ಅರ್ಥದಲ್ಲಿ ‘ಕುಟೀಚಕ’ರೆಂದೇ ಕರೆಯಬಹುದೆಂದು ತೋರುತ್ತದೆ.  ಶ್ರೀ ಗುರುಸಿದ್ಧ ಸ್ವಾಮಿಗಳ ಅನುಗ್ರಹ ಹಾಗೂ ಮಾರ್ಗದರ್ಶನದಿಂದ ವಿರಕ್ತಾಶ್ರಮವನ್ನು ಕೈಕೊಂಡ ಸರ್ಪಭೂಷಣರು ತಮ್ಮ ಇಪ್ಪತ್ತೆರಡನೆಯ ವರ್ಷದಲ್ಲಿ, ಮಠವನ್ನು ಬಿಟ್ಟುಹೊರಟು ಏಕಾಕಿಯಾಗಿ ಹನ್ನೆರಡು ವರ್ಷಗಳ ಕಾಲ ಇಡೀ ದೇಶವನ್ನೆಲ್ಲ ಸಂಚಾರಮಾಡಿದರೆಂದು ಹೇಳಲಾಗಿದೆ.  ಅನೇಕ ಶೈವ ಕ್ಷೇತ್ರಗಳನ್ನೂ, ಮಠಗಳನ್ನೂ, ಹಿಂದಣ ಶರಣರ ಮಿಂಚಿನ ಹೆಜ್ಜೆಯ ಗುರುತಿನ ದೀಪ್ತ ಸ್ತಾನಗಳನ್ನೂ ಸಂಚರಿಸಿ, ಕಾಶೀಕ್ಷೇತ್ರದವರೆಗೂ ಸುತ್ತಾಡಿ ದಾರಿಯುದ್ದಕ್ಕೂ ತಮ್ಮ ವ್ಯಕ್ತಿತ್ವದ ವರ್ಚಸ್ಸನ್ನು ಬೀರಿ, ಧರ್ಮಶಾಸ್ತ್ರ ಪ್ರಸಂಗಗಳಲ್ಲಿ ತಮ್ಮ ವಿದ್ವತ್ತನ್ನು ಪ್ರಕಟಿಸಿ, ಭಕ್ತಾದಿಗಳ ನೆನಪಿನಲ್ಲಿ ಕೆಲವು ಪವಾಡಸದೃಶವಾದ ನೆನಪುಗಳನ್ನೂ ಉಳಿಸಿ, ಶ್ರೀಶೈಲ, ಹಂಪೆ ಬಳ್ಳಾರಿಗಳನ್ನು ಹಾಯ್ದು, ಸುಮಾರು ೧೮೨೦ರ ವೇಳೆಗೆ ಬೆಂಗಳೂರಿಗೆ ಹಿಂದಿರುಗಿ ಬಂದು ತಮ್ಮ ಶ್ರೀಗುರು ಗುರುಸಿದ್ಧ ಮಹಾಸ್ವಾಮಿಗಳನ್ನು ಕಂಡರು.  ತಮ್ಮ ಗುರುಗಳು, ತಾವಿದ್ದ ಮಠಕ್ಕೆ ಈ ಶಿಷ್ಯನೇ ಉತ್ತರಾಧಿಕಾರಿಯಾಗಬೇಕೆಂದು ಆಪೇಕ್ಷಿಸಿದರೂ, ಸರ್ಪಭೂಷಣರು ತಾವು ಅದಕ್ಕೆ ಒಪ್ಪದೆ, ತಮ್ಮ ಸಾಧನೆ ಹಾಗೂ ಅಧ್ಯಯನಗಳಲ್ಲಿ ತೊಡಗಿದರು.  ಕಡೆಗೆ ಬೆಂಗಳೂರಿನ ಭಕ್ತಾದಿಗಳ ಒತ್ತಾಯಕ್ಕೆ ಮಣಿದು, ಅವರೆಲ್ಲರೂ ಸೇರಿ ಕಟ್ಟಿದ ಬೇರೊಂದು ಮಠಕ್ಕೆ ಅಧ್ಯಕ್ಷರಾಗಿ ನಿಂತು ಜ್ಞಾನ ದಾಸೋಹದಲ್ಲಿ ತೊಡಗಿದರು.  ಈ ಮಠವೇ ಈಗ ಬೆಂಗಳೂರಿನಲ್ಲಿರುವ ಸರ್ಪಭೂಷಣಮಠ.  ಈ ಮಠವು ಮುಕ್ತಾಯದ ಹಂತದಲ್ಲಿರುವ ಸಮಯದಲ್ಲಿಯೆ, ಕೇವಲ ನಲವತ್ತೈದನೆಯ ವಯಸ್ಸಿನಲ್ಲಿ ಸರ್ಪಭೂಷಣ ಸ್ವಾಮಿಗಳ ಶಿವೈಕ್ಯರಾದರು.  ಇವರ ನಂತರ ಶ್ರೀಫಾಲಲೋಚನ ಸ್ವಾಮಿಗಳು, ಶ್ರೀ ಚೆನ್ನಬಸವಸ್ವಾಮಿಗಳು, ಅಭಿನವ ಅಲ್ಲಮರೆಂದು ಹೆಸರಾದ ಶ್ರೀಮಹಾದೇವ ಸ್ವಾಮಿಗಳು, ವೇದಾಂತಾಚಾರ್ಯರೆಂದು ಪ್ರಶಂಸಿತರಾದ ಶ್ರೀ ಶಿವಕುಮಾರ ಸ್ವಾಮಿಗಳು ಮತ್ತು ಈಗಿನ ಮಠಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಈ ಮಠದ ಪರಂಪರೆಯನ್ನು ಅತ್ಯಂತ ಸಮರ್ಥವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಸರ್ಪಭೂಷಣ ಸ್ವಾಮಿಗಳು ಕನ್ನಡ ಶರಣ ಸಾಹಿತ್ಯದಲ್ಲಿ ಅಚ್ಚಳಿಯದ ನೆನಪನ್ನು ಉಳಿಸಿರುವುದು ಅವರು ಬರೆದ ‘ಕೈವಲ್ಯ ಕಲ್ಪವಲ್ಲರಿ’ ಎಂಬ ಕೃತಿಯಿಂದ.  ಇದಲ್ಲದೆ ಅವರು ‘ಜ್ಞಾನ ಶತಕ’ ಎಂಬ ಸಂಸ್ಕೃತ ಕೃತಿಯನ್ನೂ ರಚಿಸಿದ್ದಾರೆ.  ಸಂಗೀತ – ಸಾಹಿತ್ಯ ಹಾಗೂ ತತ್ವ ದರ್ಶನಗಳಿಂದ ಸಮನ್ವಿತವಾದ ಅವರ ‘ಕೈವಲ್ಯ ಕಲ್ಪವಲ್ಲರಿ’ಯು, ಮೂಲತಃ ಈ ಹೊತ್ತು ಯಾವ ಪ್ರಕಾರವನ್ನು ತತ್ವಪದಗಳು ಎಂದು ಕರೆಯಲಾಗುತ್ತಿದೆಯೋ, ಆ ಒಂದು ಪ್ರಭೇದಕ್ಕೆ ಸೇರಿದವುಗಳಾಗಿವೆ.  ಈ ಕೃತಿಯ ಹೆಸರೇ ಸೂಚಿಸುವಂತೆ, ಇದು ತಮಗೆ ಸುಮಾರು ಮೂರು ಶತಮಾನದ ಹಿಂದೆ ರಚಿತವಾದ ನಿಜಗುಣಶಿವಯೋಗಿಗಳ ‘ಕೈವಲ್ಯ ಪದ್ಧತಿ’ ಎಂಬ ಕೃತಿಯನ್ನು ನೆನಪಿಗೆ ತರುತ್ತದೆ.  ‘ನೆನಪಿಗೆ ತರುತ್ತದೆ’ ಮಾತ್ರವಲ್ಲ, ಅದನ್ನೆ ತನ್ನ ಮೂಲ ಮಾದರಿಯನ್ನಾಗಿಯೂ, ಆದರ್ಶವನ್ನಾಗಿಯೂ ಇರಿಸಿಕೊಂಡಿದೆ.  ಹಾಗೆಂದ ಮಾತ್ರಕ್ಕೆ ಇದು ಅದರ ಅನುಸರಣವಾಗಲೀ ಅನುಕರಣವಾಗಲಿ ಆಗಿದೆ ಎಂದು ಅರ್ಥವಲ್ಲ.  ಆದರೆ ನಿಜಗುಣರಿಂದ ಪ್ರಾರಂಭವಾದ ತತ್ವಪದ ‘ಪರಂಪರೆಯನ್ನು ಅತ್ಯಂತ ವ್ಯಕ್ತಿ ವಿಶಿಷ್ಟವಾದ ರೀತಿಯಲ್ಲಿ ಸರ್ಪಭೂಷಣರ ಕೃತಿ ಮುಂದುವರಿಸುತ್ತದೆ.  ಸರ್ಪಭೂಷಣರ ಹಿಂದೆ ಹಾಗೂ ಮುಂದೆ, ಮುಪ್ಪಿನ ಷಡಕ್ಷರಿ, ಚಿದಾನಂದ ಅವಧೂತರು, ಬಾಲಲೀಲಾ ಮಹಾಂತ ಸ್ವಾಮಿಗಳು, ಕಡಕೋಳ ಮಡಿವಾಳಪ್ಪನವರು, ಕೊಡಲೂರೇಶ, ನಿಂಬರಗಿ ಮಹಾರಾಜ್, ಶಂಕರಾನಂದ, ಶಿಶುನಾಳ ಷರೀಫ್ – ಇಂಥ ತತ್ವಪದಕಾರರೇ ಇದ್ದಾರೆ.  ಈ ತತ್ವಪದ ಪರಂಪರೆಯಲ್ಲಿ ನಿಜಗುಣರು ತಮ್ಮ ಕೃತಿಯನ್ನು ‘ಕೈವಲ್ಯ ಪದ್ಧತಿ’ ಎಂದೂ, ಸರ್ಪಭೂಷಣರು ತಮ್ಮ ಕೃತಿಯನ್ನು ‘ಕೈವಲ್ಯ ಕಲ್ಪವಲ್ಲರಿ’ ಎಂದೂ, ಬಾಲಲೀಲಾ ಮಹಾಂತ ಸ್ವಾಮಿಗಳು ತಮ್ಮ ಕೃತಿಯನ್ನು ‘ಕೈವಲ್ಯ ದರ್ಪಣ’ ಎಂದೂ ಹೆಸರಿಸಿರುವುದರಿಂದ, ಒಟ್ಟಾರೆಯಾಗಿ ಈ ತತ್ವ ಪದಗಳನ್ನು ‘ಕೈವಲ್ಯ ಸಾಹಿತ್ಯ’ ಎಂದು ಕರೆಯಬಹುದೆಂದು ಡಾ. ಎಚ್. ತಿಪ್ಪೇರುದ್ರ ಸ್ವಾಮಿಯವರು ಸೂಚಿಸುತ್ತಾರೆ.  ಕೈವಲ್ಯ ಎಂದರೆ ಅನುಭಾವಿಯು ತಲುಪುವ ಆತ್ಯಂತಿಕ ನೆಲೆ; ಮೋಕ್ಷ ಎಂದು ಅರ್ಥ.  ಈ ಪದ ಆಗಲೇ ಜೈನ ಧಾರ್ಮಿಕ ಪರಿಭಾಷೆಯಲ್ಲಿ ಜೀವನು ದೇವನಾಗುವ ಹಂತದಲ್ಲಿ ಪ್ರಾಪ್ತವಾಗುವ ಒಂದು ಅಸಾಧಾರಣವಾದ ಅರಿವು ಅಥವಾ ಜ್ಞಾನವನ್ನು ಸೂಚಿಸಲು ಬಳಕೆಯಾಗಿದೆ.  ಇದನ್ನು ‘ಕೇವಲ ಜ್ಞಾನ’ ಎಂದು ಅಲ್ಲಿ ಕರೆಯಲಾಗಿದೆ.  ಆದಕಾರಣ ಈ ಒಂದು ಸ್ಥಿತಿಯನ್ನು ತಲುಪುವ ಅನುಭಾವಿಯ ಅನುಭವಗಳನ್ನು ಅಭಿವ್ಯಕ್ತಪಡಿಸುವ ಈ ತತ್ವಪದಗಳನ್ನು ‘ಕೈವಲ್ಯ ಪದ’ಗಳೆಂದೂ ಕರೆಯಬಹುದೆಂದು, ಡಾ. ಸ್ವಾಮಿಯವರು ಅಭಿಪ್ರಾಯ ಪಡುತ್ತಾರೆ.  ಆದರೆ ಈಗಾಗಲೇ ಗುರುತಿಸಬಹುದಾದ ‘ಭಕ್ತಿ ಸಾಹಿತ್ಯ’, ‘ಅನುಭಾವ ಸಾಹಿತ್ಯ’, ಮತ್ತು ‘ಧಾರ್ಮಿಕ ಸಾಹಿತ್ಯ’ಗಳೆಂದು ಪ್ರತ್ಯೇಕಿಸಿ ಹೆಸರಿಸಬಹುದಾದ ತೀರಾ ವಿಶೇಷವಾದ ಲಕ್ಷಣಗಳು ‘ಕೈವಲ್ಯ ಸಾಹಿತ್ಯ’ಕ್ಕೆ ಇವೆಯೇ ಎಂಬುದು ಚರ್ಚಾಸ್ಪದವಾದ ಸಂಗತಿಯಾದರೂ, ಸರ್ಪಭೂಷಣ ತಾವೇ ಹೇಳಿಕೊಂಡಿರುವಂತೆ, ನಿಜಗುಣ ತತ್ವಪದ ಸಂಕಲನವಾದ ಕೈವಲ್ಯ ಪದ್ಧತಿಯ ಮೇಲೆ, ಹಬ್ಬಿಸಿದ ಬಳ್ಳಿ ಇದು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.  ಒಂದು ಸಲ ಸರ್ಪಭೂಷಣ ಶಿವಯೋಗಿಗಳೂ ಮತ್ತು ಪ್ರಭುಸ್ವಾಮಿಗಳೂ ಸಂಭಾಷಣೆಯಲ್ಲಿ ತೊಡಗಿದ್ದಾಗ, ತಾವೊಂದು ತತ್ವಗ್ರಂಥವನ್ನು ಕನ್ನಡದಲ್ಲಿ, ಜನಸಾಮಾನ್ಯರಿಗೆ ತಿಳಿಯುವಂಥ ರೀತಿಯಲ್ಲಿ ಬರೆಯುತ್ತಿರುವುದಾಗಿ ಸರ್ಪಭೂಷಣರು ತಿಳಿಸಿದಾಗ, ಪ್ರಭುಸ್ವಾಮಿಗಳು “ನಿಜಗುಣಪ್ಪನು ಬರೆದ ಪ್ರಸಿದ್ಧವಾದ ಕೈವಲ್ಯ ಪದ್ಧತಿಯು ಕಲ್ಪವೃಕ್ಷ ಇದ್ದ ಹಾಗೆ ಹೀಗಿರುವಾಗ, ಬೇರೆ ನೀವೇಕೆ ಬರೆಯುತ್ತೀರಿ ಬುದ್ದೀ?” ಎಂದು ಪ್ರಶ್ನಿಸಿದರಂತೆ.  ಅದಕ್ಕೆ ಸರ್ಪಭೂಷಣರು ಅಥವಾ ಸಪ್ಪಣ್ಣ ಸ್ವಾಮಿಗಳು, “ನಾನು ಬರೆಯುವುದು ಬೇರೆ ಅಲ್ಲರೀ ಬುದ್ದೀ! ಆ ಕಲ್ಪವೃಕ್ಷಕ್ಕೆ ನಾನೊಂದು ಬಳ್ಳಿ ಹಬ್ಬಿಸುತ್ತೇನೆ” ಅಂದರಂತೆ.  ಈ ಸಂಗತಿಯನ್ನು ಶ್ರೀ ಮಲ್ಲಾಬಾದಿ ವೀರಭದ್ರಪ್ಪನವರು, ಇದೇ ಕೃತಿಗಾಗಿ ಬರೆದ ‘ಶ್ರೀ ಸರ್ಪಭೂಷಣ ಶಿವಯೋಗಿಗಳ ಜೀವನ ಚರಿತ್ರೆ’ಯಲ್ಲಿ ಉಲ್ಲೇಖಿಸಿದ್ದಾರೆ.