ಸರ್ಪಭೂಷಣ ಶಿವಯೋಗಿಗಳ ‘ಕೈವಲ್ಲ ಕಲ್ಲವಲ್ಲರಿ’ ಅವರೇ ಹೇಳಿಕೊಂಡಿರುವಂತೆ, ತಮಗೆ ಪೂರ್ವದ ನಿಜಗುಣ ಶಿವಯೋಗಿಗಳ ‘ಕೈವಲ್ಯ ಪದ್ಧತಿ’ ಎಂಬ ಪಾರಮಾರ್ಥಿಕ ಕೃತಿಯ ಪ್ರೇರಣೆ ಹಾಗೂ ಮಾದರಿಯ ಮೇಲೆ ರಚಿತವಾದ ಒಂದು ನೂರು ಎಪ್ಪತ್ತೇಳು ತತ್ವಪದಗಳ ಸಂಗ್ರಹವಾಗಿದೆ.  ವಿವಿಧ ರಾಗಗಳನ್ನು ಸೂಚಿಸಲಾಗಿರುವ ಈ ಹಾಡುಗಳು, ನಿಜಗುಣರ ಕೈವಲ್ಯಪದ್ಧತಿಯಂತೆಯೇ, ಶಿವಕಾರುಣ್ಯಸ್ಥಲ, ಜೀವಸಂಬೋಧನಸ್ಥಲ, ನೀತಿಕ್ರಿಯಾಚರ್ಯ ಪ್ರತಿಪಾದನಸ್ಥಲ, ಯೋಗಪ್ರತಿಪಾದನಸ್ಥಲ ಮತ್ತು ಜ್ಞಾನಪ್ರತಿಪಾದನಸ್ಥಲ ಎಂಬ ಐದು ಸ್ಥಲಗಳಲ್ಲಿ ವಿಂಗಡಣೆಯಾಗಿವೆ.  ಈ ಕೃತಿಯಲ್ಲದೆ ಸರ್ಪಭೂಷಣರು ‘ಜ್ಞಾನಶತಕ’ ಎಂಬ ಸಂಸ್ಕೃತ ಕೃತಿಯನ್ನೂ ಬರೆದಿದ್ದಾರೆ.  ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಉಪನಿಷತ್ತುಗಳ ಮೇಲಿನ ಭಾಷ್ಯಗಳ ಸಾರಸಂಗ್ರಹವನ್ನು, ಒಂದು ನೂರಾ ಇಪ್ಪತ್ತೊಂದು ವಿವಿಧ ಜಾತಿಯ ಸಂಸ್ಕೃತ ವೃತ್ತಗಳಲ್ಲಿ ಈ ಕೃತಿ ಒಳಗೊಳ್ಳುತ್ತದೆ.  ಮುಖ್ಯವಾಗಿ ಇದು ಸರ್ಪಭೂಷಣರಿಗಿದ್ದ ವೇದ-ವೇದಾಂತಾದಿ ವಿದ್ವತ್ತನ್ನು ಸೂಚಿಸುತ್ತದೆ.  ತಮಗೆ ಮಾದರಿಯಾದ ನಿಜಗುಣರು ಮಹಾವಿದ್ವಾಂಸರು; ‘ವಿವೇಕಚಿಂತಾಮಣಿ’ಯಂಥ ವಿಶ್ವಕೋಶವನ್ನು ಬರೆದವರು ; ಜತೆಗೆ ಮಹಾ ತಪಸ್ವಿಗಳು ; ಕವಿಗಳು ; ಸಂಗೀತದ ಪರಿಜ್ಞಾನ ಉಳ್ಳ ವಾಗ್ಗೇಯಕಾರರು.  ಇಂಥ ಅಪೂರ್ವ ವ್ಯಕ್ತಿಗಳಾದ ನಿಜಗುಣರು ಬರೆದ ಕೈವಲ್ಯ ಪದ್ಧತಿ ಎಂಬ ಹಾಡುಗಬ್ಬಗಳ ಕೃತಿಗೆ, ಸರ್ಪಭೂಷಣರು ತಾವೊಂದು ಬಳ್ಳಿಯನ್ನು ಹಬ್ಬಿಸುತ್ತಿದ್ದೇವಷ್ಟೆ ಎಂಬ ವಿನಯವನ್ನು ಪ್ರಕಟಿಸುತ್ತ ತಮ್ಮ ಕೃತಿಯನ್ನು ‘ಕೈವಲ್ಯ ಕಲ್ಪವಲ್ಲರಿ’ ಎಂದು ಕರೆದುಕೊಂಡಿದ್ದಾರೆ.  ಅವರು ತಮ್ಮ ಕೃತಿಯನ್ನು ಹೀಗೆ ಕರೆದುಕೊಂಡ ಮಾತ್ರಕ್ಕೆ ಸರ್ಪಭೂಷಣರದು ನಿಜಗುಣರ ಕೃತಿಯ ಕೇವಲ ಅನುಸರಣವೋ, ಅನುಕರಣವೋ ಆಗಿದೆ ಎಂದು ತಿಳಿಯಬೇಕಾಗಿಲ್ಲ.  ಸರ್ಪಭೂಷಣರ ಕೈವಲ್ಯ ಕಲ್ಪವಲ್ಲರಿ ಅನೇಕ ವಿಷಯಗಳಲ್ಲಿ ನಿಜಗುಣರ ಕೃತಿಯಿಂದ ಬೇರೆಯೆ ಆದ ಸ್ವಾನುಭವ ಸಾಕ್ಷ್ಯ ಹಾಗೂ ವ್ಯಕ್ತಿ ವಿಶಿಷ್ಟತೆಯನ್ನು ಪಡೆದುಕೊಂಡ ಕೃತಿಯಾಗಿದೆ.  ಯಾಕೆಂದರೆ ನಿಜಗುಣರ ಕಾಲದ ನಂತರ ಸುಮಾರು ಶತಮಾನ  ಈಚೆಗೆ ಬದುಕಿದ ಸರ್ಪಭೂಷಣರ ಕಾಲದ ಗುಣವೇ ಬೇರೆಯಾಗಿದೆ.

ಸರ್ಪಭೂಷಣರು ಬದುಕಿದ ಕಾಲಮಾನವನ್ನು ನಾವು ಇಂದು ವಸಾಹತು ಶಾಹೀ ಸಂದರ್ಭ ಎಂದು ಕರೆಯುತ್ತೇವೆ.  ಇಂಡಿಯಾ ದೇಶವು ಪರಕೀಯ ಪ್ರಭುತ್ವಕ್ಕೆ ಒಳಗಾದದ್ದು ಮಾತ್ರವಲ್ಲ, ಇಂಗ್ಲಿಷ್ ಕಲಿಕೆಯ ಮೂಲಕ ಈ ದೇಶದೊಳಕ್ಕೆ ನುಗ್ಗಿ ಬಂದ ಪಾಶ್ಚಾತ್ಯ ಸಂಸ್ಕೃತಿಯ ದಾಳಿಯಿಂದ, ಭಾರತೀಯ ಮನಸ್ಸು ಒಂದು ಬಗೆಯ ಸಂಘರ್ಷಕ್ಕೆ ಹಾಗೂ ಮರುಚಿಂತನೆಗಳಿಗೆ ಒಳಗಾದ ಕಾಲ ಅದು.  ಈ ಹಂತದಲ್ಲಿ ಪರಕೀಯ ಪ್ರಭುತ್ವಕ್ಕೆ ಒಳಗಾದ ಒಂದು ಬಗೆಯ ಅನ್ಯಾಕ್ರಾಂತದ ತಳಮಳಗಳೂ; ರಾಷ್ಟ್ರೀಯತೆಯ ಪರವಾದ ಕಾಳಜಿಗಳೂ; ಶ್ರದ್ಧೆ -ಸಂದೇಹ ; ಸಂಪ್ರದಾಯ-ವೈಚಾರಿಕತೆ; ಪ್ರಾಚೀನ-ನವೀನ ಇತ್ಯಾದಿಗಳ ಮುಖಾಮುಖಿಯಿಂದ ಹುಟ್ಟಿಕೊಂಡ ಅಸ್ಥಿರತೆ ಹಾಗೂ ತುಮುಲಗಳೂ, ಭಾರತೀಯ ಮನಸ್ಸನ್ನು ವಿಘಟನೆಗೆ ಒಳಗುಪಡಿಸಿದ್ದವು.  ಇಂಥ ಸಂಧಿಕಾಲದಲ್ಲಿ ಕರ್ನಾಟಕದಲ್ಲಿ ಅನೇಕ ಅನುಭಾವಿ ತತ್ವಪದಕಾರರು ಹುಟ್ಟಿಕೊಂಡು ತಮ್ಮ ಪಾರಮಾರ್ಥಿಕ ವಿಚಾರಗಳಿಂದ ಜನದ ಮನಸ್ಸನ್ನು ಒಂದು ಹದಕ್ಕೆ ನಿಲ್ಲಿಸಲು ಪ್ರಯತ್ನಪಟ್ಟರೆಂಬುದು ಸಾಂಸ್ಕೃತಿಕವಾಗಿ ಮಹತ್ವದ ಸಂಗತಿಯಾಗಿದೆ.  ಬಾಲಲೀಲಾ ಮಹಾಂತ ಸ್ವಾಮಿಗಳು, ಕಡಕೋಳು ಮಡಿವಾಳೇಶ್ವರರು ; ಹುಬ್ಬಳ್ಳಿಯ ಸಿದ್ಧಾರೂಢರು ; ಸರ್ಪಭೂಷಣ ಶಿವಯೋಗಿಗಳು ; ಶಿಶುನಾಳ ಷರೀಫರು ಮತ್ತು ಇನ್ನೂ ಇಂಥವರು ಕನ್ನಡ ಸಾಹಿತ್ಯದ ನವೋದಯ ಪೂರ್ವದ ಒಂದು ಆನುಭಾವಿಕ ಪರಂಪರೆಯನ್ನೆ ಕಟ್ಟಿದರು.

ಈ ಕಾಲದ ಅನುಭಾವಿಗಳು ತಮ್ಮ ಸಮಕಾಲೀನ ವಾಸ್ತವದ ಬರ್ಬರತೆಗಳನ್ನು ಎದುರಿಸಲು ತಕ್ಕ ಒಂದು ಆಧ್ಯಾತ್ಮಿಕ ಚಿತ್ತ ಭಿತ್ತಿಯನ್ನು ಸೃಷ್ಟಿಮಾಡಿದರು.  ಅದಕ್ಕಾಗಿ ಅವರು ಭಕ್ತಿ ಮತ್ತು ವಿರಕ್ತಿಗಳನ್ನು ಪ್ರತಿಪಾದಿಸಿದರು.  ಮುಖ್ಯವಾಗಿ ಧ್ಯಾನಕೇಂದ್ರಿತ ಮನಸ್ಸಿನ ಮೂಲಕ ಈ ಲೋಕದ ಕ್ಷುದ್ರತೆಗಳನ್ನು ಎದುರಿಸುತ್ತಾ, ಮಹತ್ತಾದುದೊಂದರ ಸಾಧನೆಯ ಕಡೆ ಮುಖ ಮಾಡುವುದರಿಂದ ಮನುಷ್ಯನ ವ್ಯಕ್ತಿತ್ವಕ್ಕೆ ಒಂದು ಘನತೆ ಬರುವುದೆಂಬ ನಿಲುವನ್ನು ತಮ್ಮ ತತ್ವಪದಗಳ ಮೂಲಕ ಇವರು ಎತ್ತಿಹಿಡಿದರು.  ಹಾಗೂ ತಮ್ಮ ಹಾಡುಗಳ ವಸ್ತು, ಸಂಕೇತ, ಪ್ರತೀಕಗಳನ್ನು ತಮ್ಮ ಸುತ್ತಣ ದೈನಂದಿನ ಜಗತ್ತಿನ ಚಿರಪರಿಚಿತವಾದ ಅನುಭವಗಳಿಂದಲೆ ಎತ್ತಿಕೊಂಡರು.

ಈ ಹಾಡುಗಳ ಹಿಂದೆ ಕನ್ನಡ ವಚನಕಾರರ ಚಳುವಳಿ, ಹರಿದಾಸರ ಕೀರ್ತನ ಪರಂಪರೆ, ನಿಜಗುಣ ಶಿವಯೋಗಿ ಹಾಗೂ ಮುಪ್ಪಿನ ಷಡಕ್ಷರಿಯ ರಚನೆಗಳೂ ಇವೆ ಎನ್ನುವುದನ್ನು ಮರೆಯುವಂತಿಲ್ಲ.  ಸರ್ಪಭೂಷಣ ಶಿವಯೋಗಿಗಳು ಬರೆದ ಕೈವಲ್ಯ ಕಲ್ಪವಲ್ಲರಿಯ ಮೂಲ ಮಾದರಿಗಳು ನಿಜಗುಣರಿಂದಲೇ ಬಂದವುಗಳಾದರೂ, ಸರ್ಪಭೂಷಣರ ನಿರ್ಮಿತಿಗಳು, ನಿಜಗುಣರಿಂದಲೂ ಭಿನ್ನವಾಗುವುದು, ಅವರು ತಮ್ಮನ್ನು ವಚನ ಪರಂಪರೆಯೊಂದಿಗೆ ಸಂಬಂಧಿಸಿಕೊಳ್ಳುವ ಹಾಗೂ ಭಾಷೆಯಲ್ಲಿ ಒಂದು ಬಗೆಯ ಜಾನಪದೀಯ ಸೊಗಡನ್ನು ಉಳಿಸಿಕೊಳ್ಳುತ್ತಾರೆನ್ನುವ ಕಾರಣದಿಂದ.  ನಿಜಗುಣರು ನೇರವಾಗಿ ವೇದೋಪನಿಷತ್ ಹಾಗೂ ಶಾಸ್ತ್ರಾದಿಗಳಿಗೆ  ಹೆಚ್ಚು ಒಲಿದವರೆಂಬುದು, ಅವರ ಕೃತಿಗಳಿಂದ ಎದ್ದುಕಾಣುವ ಹಾಗೆ, ಅವರು ಶಿವಶರಣರ ವಚನ ಪರಂಪರೆಯೊಂದಿಗೆ ಆ ಬಗೆಯ ಗಾಢಸಂಬಂಧಗಳನ್ನು ಹೊಂದಿದ್ದಾರೆ ಎಂದು ಅನ್ನಿಸುವುದಿಲ್ಲ.  ಸರ್ಪಭೂಷಣರು ತಮ್ಮ ಶಿವಕಾರುಣ್ಯ ಪ್ರಾರ್ಥನಾಸ್ಥಲದಲ್ಲಿಯೆ –

ಬಸವಾದಿ ಪ್ರಮಥ ಚರಣಸಾರಸಗಳಿ
ಗೊಸೆದೆನ್ನ ಮನವನಾರಡಿಗೈವೆನು (೪
ಪು ೩)

ಎನ್ನುತ್ತಾರೆ.  ಅಂದರೆ ಬಸವಾದಿ ಪ್ರಮಥರ ಚರಣ ಕಮಲಗಳಿಗೆ ಪ್ರೀತಿಯಿಂದ ನನ್ನ ಮನಸ್ಸನ್ನು ‘ಆರಡಿ’, ಎಂದರೆ ದುಂಬಿಯನ್ನಾಗಿ ಮಾಡುತ್ತೇನೆ ಎನ್ನುತ್ತಾರೆ.  ಈ ಪ್ರತೀಕ ‘ಕೂಡಲಸಂಗಮ ದೇವಾ ನಿಮ್ಮ ಚರಣಕಮಲದೊಳಗಾನು ತುಂಬಿ’ ಎನ್ನುವ ಬಸವಣ್ಣನವರ ಉಕ್ತಿಯನ್ನು ನೆನಪಿಗೆ ತರುತ್ತದೆ.  ಹಾಗೆಯೇ

ಮಂದಿರವ ಬಿಡಬೇಡ ಪರ್ವತಾಗ್ರದೊಳಿರ್ಪ
ಕುಂದರದೆ ನಿಲಬೇಡ ಬರಿದೆ
| ಮಾನವಾ
ಕಂದ ಮೂಲ ಸವಿಯಬೇಡ
| ನಿನ್ನಯ ತನುವ
ಕಂದಿ ಕುಂದಿಸಬೇಡ ಮಾನವಾ           (೫
ಪು ೫)

ಎಂಬ ಉಕ್ತಿ ‘ಮಠವೇಕೋ ಪರ್ವತವೇಕೋ, ಜನವೇಕೋ, ನಿರ್ಜನವೇಕೋ ಚಿತ್ತ ಸಮಾಧಾನ ಉಳ್ಳ ಶರಣಂಗೆ’ ಎಂಬ ಅಲ್ಲಮನ ವಚನವನ್ನೂ, ‘ಹುತ್ತವ ಬಡಿದೊಡೆ ಹಾವು ಸಾಯಬಲ್ಲದೇ’ ಎಂಬ ಬಸವಣ್ಣನವರ ವಚನವನ್ನೂ ಏಕಕಾಲಕ್ಕೆ ನೆನಪಿಗೆ ತರುತ್ತದೆ.  ವಚನಗಳಲ್ಲಿ ಕಂಡುಬರುವ ಭಕ್ತಸ್ಥಲದ ಮನಸ್ಸಿನ ಮೊರೆ ಸರ್ಪಭೂಷಣರ ಕೈವಲ್ಯ ಕಲ್ಪವಲ್ಲರಿಯ ಶಿವಕಾರುಣ್ಯ ಪ್ರಾರ್ಥನಾಸ್ಥಲದ ಪದ್ಯಗಳಲ್ಲಿ ಅತ್ಯಂತ ಆರ್ತತೆಯಿಂದ ಅಭಿವ್ಯಕ್ತವಾಗಿದೆ –

ಎಳೆಯ ಶಿಶುವಿನ ತಲೆಯ ಮೇಲೆ ಮಂದರಗಿರಿಯ
ನಿಳುಹಿಂದಂತಣುರೂಪುವಾದೆನ್ನ ಮೇಲೆ
ನಳಿನಜಾಂಡದ ತೋರದೀ ಭವದ ಹೊರೆಯನಿಡೆ
ಉಳಿವೆನೆಂತಕಟಕಟ ಗುರುಸಿದ್ಧ ರೂಪಾ         (೧೯
ಪು ೨೨)

ಎಂಬ ಉಕ್ತಿ, ಎಳೆಯ ಮಗುವಿನ ತಲೆಯ ಮೇಲೆ ಮಂದರಪರ್ವತವನ್ನು ಹೇರಿದರೆ ಹೇಗೋ ಹಾಗೆ ನನ್ನ ಮೇಲೆ ಇಡೀ ಬ್ರಹ್ಮಾಂಡದ ಭಾರವನ್ನು ಹೇರಬಹುದೇ ಎಂದು ಭಕ್ತನ ಮನಸ್ಸು ಚಡಪಡಿಸುವ ಚಿತ್ರ ನವೀನವಾಗಿದೆ.  ಜೀವ ಸಂಬೋಧನೆಯ ಸ್ಥಲ, ವಚನಕಾರರ ಸಂಸಾರಹೇಯಸ್ಥಲದ ನಿಲುವುಗಳನ್ನು ಪ್ರಕಟಿಸುತ್ತದೆ.  ಈ ಬದುಕಿನ ನಶ್ವರತೆಯನ್ನು ಕುರಿತು, ಭೋಗಗಳ ನಿರರ್ಥಕತೆಯನ್ನು ಕುರಿತು ಇಲ್ಲಿ ವ್ಯಕ್ತವಾಗಿರುವ ಶಬ್ದಚಿತ್ರಗಳೆಲ್ಲ ಈಗಾಗಲೇ ಪರಿಚಿತವಾಗಿರತಕ್ಕವೆ; ‘ನಳಿನೀದಳ ಜಲಬಿಂದು ಜೀವಿತಂ’ ‘ಸಿರಿಕನಸು’ ‘ಸುಳಿಗಾಳಿಭೋಗಂ’ ‘ನೀರಗುಳ್ಳೆ’ ‘ಕಾರಮಿಂಚು’ ‘ನೆರೆದ ಸಂತೆ’ ‘ಮಣ್ಣ ಬೊಂಬೆ’ – ಇತ್ಯಾದಿ ರೂಪಕಗಳು ಸಾಕಷ್ಟು ಬಳಸಿ ಬಳಸಿ ಸವೆದ ನಾಣ್ಯಗಳಂತಾಗಿಬಿಟ್ಟಿವೆ.  ಈ ನಡುವೆ –

ಒಂದು ಮರದೊಳಗಖಿಳ ಪಕ್ಷಿಗಳು ಸಂಜೆಯೊಳ
ಗೊಂದಿ
, ಬೆಳಗಿನೊಳಗಲಿ ಹೋಗುವಂತೆ
ತಂದೆ ತಾಯ್ ಅಣ್ಣ ತಮ್ಮರು ಸತಿಸುತರು ಕಾಲ
ಬಂದ ನಿಮಿಷಕೆ ನಿನಗೆ ಹೇಳದೈದುವರು            (೭
೨ : ೩೯)

ಎಂಬ ಸೊಗಸಾದ ಪ್ರತಿಮೆಯಾಗಲೀ,

ಎಣ್ಣೆಯಿರುವತನಕ ದೀವಿಗೆಯುರಿವವೊಲು, ಪೂರ್ವ
ಪುಣ್ಯವಿಹ ಪರಿಯಂತ ಸಿರಿಯಿರ್ಪುದು         (೭
೨  : ಪು ೩೯)

ಎಂಬ ಉಕ್ತಿಯ ತರ್ಕವನ್ನು ಒಪ್ಪುವುದು ಅಸಾಧ್ಯವಾದರೂ, ಅದನ್ನು ಅಭಿವ್ಯಕ್ತಿಸುವ ದೀಪದ ಪ್ರತೀಕವಾಗಲೀ ಮತ್ತು

ವ್ರಣಕೆ ಮುಸುಕುವ ನೊಣಗಳಂತೆ ನಿನ್ನನು ಜನರು
ಹಣವಿರುವ ಪರಿಯಂತ ಓಲೈಪರು           (೭
೩  : ಪು ೩೯)

ಎಂಬ ಅತ್ಯಂತ ಉಚಿತವಾದ ಹೋಲಿಕೆಯಾಗಲೀ, ಸೊಗಸಾದ ಕಾವ್ಯ ಗುಣದಿಂದ, ಅತ್ಯಂತ ಪರಿಣಾಮಕಾರಿಯಾಗಿದೆ.

ವಚನಕಾರರಂತೆ, ಸಂಸಾರದ  ಅನಿತ್ಯತೆ, ಭಗವತ್ ಪರವಾದ ವ್ಯಾಕುಲತೆಗಳೂ, ತೀರ್ಥಕ್ಷೇತ್ರಾದಿಗಳಿಗೆ ಸುತ್ತುವುದರ ನಿಷ್ಫಲತೆಗಳೂ ಇಲ್ಲಿಯೂ ಸಮಾನವಾಗಿ ಕಂಡುಬಂದರೂ, ದೇವರ ಕಲ್ಪನೆಯ ವಿಚಾರದಲ್ಲಿ ಸರ್ಪಭೂಷಣರ ನಿಲುವು ಮುಖ್ಯವಾಗಿ ಶಿವನ ಸಾಕಾರವನ್ನು, ಅದರಲ್ಲೂ ಪುರಾಣೋಕ್ತವಾದ ಸಾಂಪ್ರದಾಯಿಕ ನಿಲುವನ್ನೆ ಅಂಗೀಕರಿಸುತ್ತದೆ.  ವಚನಕಾರರು ಭಗವಂತನ ಆಕಾರ  ಹಾಗೂ ನಿರಾಕಾರಗಳೆರಡೂ ಸತ್ಯವೆಂದು  ಒಪ್ಪುತ್ತಾರಾದರೂ, ಅವರು ಎತ್ತಿ ಹಿಡಿಯುವುದು ನಿರಾಕಾರಕ್ಕೆ ಸಮೀಪದ ಸಂಕೇತವಾದ ಲಿಂಗ  ಅಥವಾ ಬಯಲನ್ನು.  ವೇದ ಶಾಸ್ತ್ರ ಪುರಾಣ ಆಗಮಗಳನೆಲ್ಲ ನಿರಾಕರಿಸುವ ಶಿವಶರಣರು, ಹಿಂದೂ ಪರಂಪರೆಯ ಶಿವನ ಸಾಂಪ್ರದಾಯಿಕ ರೂಪ ಕಲ್ಪನೆಯನ್ನು ಒಪ್ಪಿಕೊಂಡವರಲ್ಲ.  ಅವರ ಶಿವನಿಗೆ ‘ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ’.  ವಚನಕಾರರೆಲ್ಲ – ಮಧುರಭಾವದ ಸತಿ ಪತಿ ಅಥವಾ ಶರಣಸತಿ ಲಿಂಗಪತಿ ನಿಲುವಿನ ಅಕ್ಕಮಹಾದೇವಿಯೊಬ್ಬಳ ಹೊರತು – ಬಹುಮಟ್ಟಿಗೆ ನಿರಾಕಾರಕ್ಕೆ ಅತ್ಯಂತ ಸಮೀಪದ ಸಂಕೇತವಾದ ‘ಲಿಂಗ’ವನ್ನೆ ತಮ್ಮ ದೈವವನ್ನಾಗಿ ಭಾವಿಸಿದವರು.  ಆದರೆ, ವಚನಕಾರರ ಅನಂತರ ಕೇವಲ ಅರ್ಧಶತಮಾನದ ನಂತರ ಬಂದ ವೀರಶೈವ ಕಾವ್ಯ ಹಾಗೂ ಪುರಾಣಗಳು, ಮತ್ತೆ ಸ್ಥಾವರಲಿಂಗಾರ್ಚನೆಯನ್ನು ವೈಭವಿಸುವ ಹಾಗೂ ಶಿವನ ಪುರಾಣೋಕ್ತವಾದ ರೂಪಕಲ್ಪನೆಗಳನ್ನೂ ಹಾಗೂ ಆತನ ಲೀಲೆಗಳನ್ನೂ ಪರಿಚಯಿಸತೊಡಗಿದವು.  ಹದಿನೈದನೆಯ ಶತಮಾನದ ನಿಜಗುಣ ಶಿವಯೋಗಿಗಳ ‘ಕೈವಲ್ಯ ಪದ್ಧತಿ’ಯೂ ಮುಖ್ಯವಾಗಿ ಶಿವಪುರಾಣೋಕ್ತವಾದ ಶಿವನ ಹಾಗೂ ಪಾರ್ವತಿಯರ ಚಿತ್ರಗಳನ್ನು ಒಳಗೊಳ್ಳುತ್ತದೆ.  ಅಷ್ಟೇ ಅಲ್ಲದೆ ಹರಿದಾಸರ ಕೀರ್ತನ ಚಳುವಳಿಯಂತೂ ಮುಖ್ಯವಾಗಿ ಶ್ರೀ ಕೃಷ್ಣನ ಸಾಕಾರ ಸುಂದರವಾದ ರೂಪಸ್ಮರಣೆಯನ್ನು, ವಿಷ್ಣುವಿನ ಅವತಾರಾದಿ ಲೀಲಾವಿನೋದಗಳ ಸಹಿತ ಸಂಕೀರ್ತಿಸತೊಡಗಿತು.  ಹೀಗಾಗಿ ಹರಿದಾಸರ ಕೀರ್ತನೆಗಳ ಭಕ್ತರ ಮೊರೆ ಹಾಗೂ ಧ್ಯಾನಗಳಲ್ಲಿ  ‘ಗೋಪೀ ಜನಪ್ರಿಯ ಗೋಪಾಲನ’, ಹಾಗೂ ಆತ ಯಾವ ಯಾವ ರೂಪಗಳಲ್ಲಿ ಮೈದೋರಿದನೆಂಬ ಪುರಾಣ ಸ್ಮರಣೆಯ ಪುಟ ಪುಟಗಳೇ ತೆರೆದುಕೊಳ್ಳುತ್ತವೆ.  ಒಟ್ಟಾರೆಯಾಗಿ, ವಚನಕಾರರ ವೈಚಾರಿಕತೆಯಲ್ಲಿ ನಿರಾಕಾರಕ್ಕೆ ಸಮೀಪವಾದ ಸಂಕೇತವಾಗಿದ್ದ ದೇವರ ಕಲ್ಪನೆ, ಈ ಹೊತ್ತಿಗಾಗಲೇ ಮತ್ತೆ ತನ್ನ ಮುನ್ನಿನ ಪುರಾಣೋಕ್ತ ಸಾಕಾರ ಭಗವಂತನ ರೂಪವೈಭವಗಳ ಕಡೆಗೆ ಹಿಂದಿರುಗಿತ್ತು.  ಹೀಗಾಗಿ ನಿಜಗುಣರ ಹಾಗೂ ಸರ್ಪಭೂಷಣರಂಥವರ ಶಿವತತ್ವ ಪದಗಳು, ಜನಪ್ರಿಯವಾಗಬಲ್ಲ ಶಿವಪುರಾಣದ ಪ್ರಸಂಗಗಳ ಹಿನ್ನೆಲೆಯಲ್ಲಿ, ತಮ್ಮ ಭಕ್ತಿಯ ತರ್ಕವನ್ನು ವ್ಯಕ್ತಪಡಿಸತೊಡಗಿದವು.  ಈ ವಿಚಾರದಲ್ಲಿ ಬಹುಶಃ ಹರಿದಾಸರ ಕೀರ್ತನೆಗಳು ಪಡೆದುಕೊಂಡ ಜನಪ್ರಿಯತೆಯೂ, ಈ ತತ್ವಪದಕಾರರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿರಬಹುದು.  ಸರ್ಪಭೂಷಣ ಶಿವಯೋಗಿಗಳು ಬರೆದ ಅನೇಕ ಹಾಡುಗಳು ಈ ಪರಂಪರೆಗೆ ಸೇರಿದವುಗಳಾಗಿವೆ.  ‘ನೀತಿಕ್ರಿಯಾಚರ್ಯ ಪ್ರತಿಪಾದನ ಸ್ಥಲದಲ್ಲಿರುವ ಕ್ರಮಸಂಖ್ಯೆ ೮, ೧೧, ೧೨, ೧೩, ಮತ್ತು ೧೪ – ಈ ಹಾಡುಗಳು, ಹರಿದಾಸರ ಕೀರ್ತನಗಳಲ್ಲಿಯಂತೆ ನಿರ್ದಿಷ್ಟ ವಿಷಯವೊಂದರ ಸಮರ್ಥನೆಗಾಗಿ ಬೇರೆ ಬೇರೆಯ ಪುರಾಣಗಳ ಉಲ್ಲೇಖಗಳನ್ನು ಪ್ರಸ್ತಾಪಿಸುತ್ತವೆ[1].  ಶಿವಕಾರುಣ್ಯಸ್ಥಲದೊಳಗಿನ ಎರಡು ಹಾಡುಗಳು ಶಿವಪುರಾಣದ ನೆನಕೆಯ ಮೂಲಕ, ಶಿವನ ಮಹಿಮೆಯನ್ನು ವರ್ಣಿಸುವ ಕ್ರಮವು ವಿಶೇಷ ರೀತಿಯದಾಗಿದೆ.  ಕ್ರಮ ಸಂಖ್ಯೆ ೩ (ಪು ೯) – ಯೊಳಗಿನ,

ಹರುಷದಿಂದಜನ ಶಿರ ನಗುತಿಹುದು ಶಂ
ಕರನ ಕಂಠದ ರುಂಡಮಾಲೆಯೊಳು
ಪುರಹರನನೇ ಹೊಂದಿ ಮುಂದಿನೆನ್ನಯ ಕಷ್ಟ

ದುರವಣೆಯ ನೀಗಿ ಸುಖಿಯಾದೆ ನಾನೆಂದು (೯ : ಪು ೧೧)

ಎಂಬ ಈ ಹಾಡು, ಶಿವನ ಕೊರಳೊಳಗಿನ ರುಂಡಮಾಲೆಯೊಳಗಿದ್ದ ಬ್ರಹ್ಮನ ಶಿರಸ್ಸು ಯಾವ ಯಾವ ಪರಿಭವಗಳಿಂದ ತಾನು ಪಾರಾದೆನೆಂಬುದನ್ನು ನೆನೆದು ನಗುತ್ತಿದೆ ಎಂಬ ಕಲ್ಪನೆಯು ಒಂದು ಬಗೆಯ ಚಮತ್ಕಾರದಲ್ಲಿ ನಮ್ಮನ್ನು ನಿಲ್ಲಿಸುತ್ತದೆ.  ಇದಕ್ಕಿಂತ ಹೆಚ್ಚು  ಅರ್ಥದೀಪ್ತಿ ಹಾಗೂ ಕಾವ್ಯಾತ್ಮಕತೆಯನ್ನುಳ್ಳ ಮತ್ತೊಂದು ಹಾಡು  –

ನಿನ್ನ ನಾನೇನ ಬೇಡಲಿ ದೇವ, ಕೊಡಲೆನಗೆ
ನಿನ್ನೊಳೇನುಂಟು ಅದೆಲ್ಲವ ನಾನೆ ತಿಳಿದು

ಎಂದು ಆರಂಭವಾಗುತ್ತದೆ.  ‘ಅಯ್ಯಾ ದೇವರೆ, ನಿನ್ನಲ್ಲಿ ಏನುಂಟು ಅದೆಲ್ಲವೂ ನನಗೀಗಲೇ ಗೊತ್ತಿರುವಾಗ, ನಿನ್ನನ್ನು ನಾನು ಏನು ಬೇಡಲಿ’ ಎನ್ನುತ್ತಾನೆ ಭಕ್ತ.  ಅವನು ಈ ಕೇಳಿಕೆಯನ್ನು ಮಂಡಿಸುತ್ತಿರುವುದು ಪುರಾಣೋಕ್ತವಾದ ಶಿವನ ಮುಂದೆ –

‘ಅಶನವನು ಬೇಡುವೆನೆ’, ನಾನು ತಿನ್ನಲು ಅನ್ನವನ್ನು ಕೊಡು ಎಂದು ಕೇಳಲೆ? ನೀನು ಕುಡಿಯುವುದು ಕಾಲಕೂಟ ಎಂಬ ವಿಷವನ್ನು!; ‘ವಸನವನು ಬೇಡುವೆನೆ’, ನೀನು ಉಟ್ಟಿರುವುದು ಸೆಟೆದುಕೊಂಡಿರುವ ಆನೆಯ ತೊಗಲು ; ಆಭರಣಗಳನ್ನು ಕೊಡು ಎಂದು ಕೇಳಲೆ, ಅವು ನೀನು ಧರಿಸಿರುವ ವಿಷಸರ್ಪಗಳು; ಮೈಗೆ ಹಚ್ಚಿಕೊಳ್ಳುವ ಗಂಧವನ್ನು ಕೊಡು ಎನ್ನಲೆ, ನೀನೇ ಶ್ಮಶಾನದ ಹೆಣದ ಬೂದಿಯನ್ನು ಮೈಗೆ ಬಳಿದುಕೊಳ್ಳುತ್ತೀಯ – ಇದೇ ಧಾಟಿಯಲ್ಲಿ ಮುಂದುವರಿಯುತ್ತದೆ ಪದ್ಯ  –

ತುರಗವನು ಬೇಡುವೆನೆ ? ಬಹುದಿನದ ಮುದಿಯೆತ್ತು
ಕರದ ಪಾತ್ರೆಯನು ಬೇಡುವೆನೆ ತಲೆಯೋಡು
ಅರಮನೆಯ ಬೇಡಿಕೊಂಬುವೆನೆ ಪಿತೃವನಭೂಮಿ
ಪರಿಚಾರಕರನು ಬೇಡುವೆನೆ ಭೂತಗಳು.

ಆದ ಕಾರಣ ಕೊನೆಯಲ್ಲಿ ಭಕ್ತನು ನಿವೇದಿಸಿಕೊಳ್ಳುತ್ತಾನೆ.

ಇನ್ನಿನಿದೊಂದನೆ ಬೇಡೆನಗೆ, ನಿನ್ನಯ ಭಕ್ತಿ
ಯನ್ನೆ ಕರುಣಿಸಿ ಸಲಹು ಗುರುಸಿದ್ಧರೂಪಾ (೯ : ಪು ೧೧)

ಇದ್ಯಾವುದೂ ಬೇಡ, ಕೇವಲ ಭಕ್ತಿಯನ್ನು ಮಾತ್ರ ಕೊಡು ಎಂದು ಮುಕ್ತಾಯವಾಗುವ ಈ ಪದ್ಯ, ಶಿವನ ಪುರಾಣೋಕ್ತ ರೂಪ ಕಲ್ಪನೆಯನ್ನು ಅವಲಂಬಿಸಿ ವಿನೋದದ ಹೊನಲನ್ನು ಹರಿಸುವ ಅಪೂರ್ವ ಪ್ರತಿಭೆಯ ಅಭಿವ್ಯಕ್ತಿಯಾಗಿದೆ.

ನಿಜಗುಣರಿಂದ ಹಿಡಿದು, ಸರ್ಪಭೂಷಣರ ಹಾಗೂ ಅವರ ಸಮಕಾಲೀನರಾದ ಅನುಭಾವಿಗಳ ತತ್ವಪದಗಳಲ್ಲಿ, ಶಿವನ ಪುರಾಣೋಕ್ತವಾದ ಸಾಕಾರದ ಕಲ್ಪನೆಯೆ ಬಹುಮಟ್ಟಿಗೆ ಕಾಣಿಸಿಕೊಳ್ಳುವುದಾದರೂ, ಈ ರೂಪ ಹಾಗೂ ಧರ್ಮದ ಗಡಿಗಳನ್ನು ದಾಟಿದ ದೈವತ್ವದ ಕಲ್ಪನೆಯನ್ನು ಎತ್ತಿ ಹಿಡಿಯುವ ಉದಾರ ಧಾರ್ಮಿಕ ನಿಲುವೊಂದು ಅಂದಿನ ಯುಗಧರ್ಮದಲ್ಲಿಯೆ ಆವಿಷ್ಕಾರಗೊಳ್ಳುತ್ತಿದ್ದಂತೆ ಕಾಣುತ್ತದೆ.  ಈ ಒಂದು ನಿಲುವಿನ ಮೊದಲ ಅಭಿವ್ಯಕ್ತಿಯಾಗಿ ಮುಪ್ಪಿನ ಷಡಕ್ಷರಿಯ –

ಅವರವರ ದರುಶನಕೆ
ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ
ಅವರವರ ಪೂಜೆಗಂ
ಅವರವರಿಗೆಲ್ಲ ದೇವ ನೀನೊಬ್ಬನೆ (೧
೧)

ಎಂಬ ಈ ಪದ್ಯದೊಳಗಿನ ಭಾವವು, ಜಾತಿ-ಮತದ ಗಡಿಗಳನ್ನು ಮೀರಿದ ಒಂದು ಉದಾತ್ತ ಧಾರ್ಮಿಕ – ದೈವ ಕಲ್ಪನೆಯನ್ನು ಮಂಡಿಸುತ್ತದೆ.  ಇದರ ಅನುರಣನವೋ ಎಂಬಂತೆ, ಸರ್ಪಭೂಷಣರಲ್ಲಿ ಕಾಣುವ

ಆ ದೇವನ ಪದ ಪದ್ಮವನ್ ಆವಗಂ ಅಭಿವಂದಿಸುವೆನು
ಮೂದೇವರ ನಾಮ ಕ್ರಿಯೆ ರೂಪುಗಳಳಿದುಳಿದ (೨
, ಪು ೨)

ಎಂದು ಮೊದಲಾಗುವ ತತ್ವಪದ ಅಥವಾ ಸ್ವರವಚನದೊಳಗಣ ಭಾವವೂ ಮತಾತೀತವಾದ ದೇವರ ಭವ್ಯ ಕಲ್ಪನೆಗೆ ಸಲ್ಲಿಸುವ ವಂದನೆಯನ್ನು ಕುರಿತದ್ದಾಗಿದೆ.  ಯಾವ ದೇವರನ್ನು ನಾವು ಹರಿ-ಹರ-ಬ್ರಹ್ಮಾದಿಗಳೆಂದು (ಮೂದೇವರ), ನಾಮ, ರೂಪ, ಕ್ರಿಯೆಗಳ ಮೂಲಕ ಪರಿಭಾವಿಸಿಕೊಂಡು ಆರಾಧಿಸುತ್ತೇವೋ, ಆ ‘ಮೂದೇವರ’, ನಾಮ-ರೂಪ- ಕ್ರಿಯೆಗಳು ‘ಅಳಿದು’ (ಇಲ್ಲವಾಗಿ, ಲಯವಾಗಿ ಅಥವಾ ಅವನ್ನೂ ಮೀರಿ) ಉಳಿದು ನಿಲ್ಲುವಂಥ ದೈವಕ್ಕೆ ನಾನು ಅಭಿವಂದಿಸುತ್ತೇನೆ – ಎನ್ನುವ ಅರ್ಥವನ್ನು ವಿಸ್ತರಿಸುವ ಈ ಹಾಡು, ಮುಂದೆ ನವೋದಯ ಸಾಹಿತ್ಯ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡ ಧರ್ಮ ನಿರಪೇಕ್ಷವಾದ ಅಥವಾ ಜಾತ್ಯತೀತ (Secular) ವಾದ ದೈವತ್ವದ ನಿಲುವಿನ ನಾಂದಿಯಂತಿದೆ.[2]

ಭಕ್ತಿ ಮತ್ತು ಅನುಭಾವ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುವ ಮತ್ತೊಂದು ನಿಲುವು ಎಂದರೆ ಲೌಕಿಕ ಅಧೀನತೆಗಳನ್ನು ಮೀರುವ ಒಂದು ನಿರ್ಭಯತೆ.  ಯಾವ ವ್ಯಕ್ತಿತ್ವ ಈ ಲೋಕದ ಎಲ್ಲವನ್ನೂ ನಿಯಂತ್ರಿಸುವ ಆ ಪರಾತ್ಪರದಲ್ಲಿ ಗಾಢವಾದ ನಿಷ್ಠೆಯನ್ನಿರಿಸಿಕೊಂಡು ಬದುಕುತ್ತದೆಯೋ ಅದು, ಲೌಕಿಕವಾಗಿ ತನ್ನನ್ನು ನಿಯಂತ್ರಿಸುವ ಎಲ್ಲ ಬಗೆಯ ವ್ಯವಸ್ಥೆಗಳನ್ನೂ ಮೀರಿ ವ್ಯವಹರಿಸುತ್ತದೆ. ಈ ವ್ಯವಸ್ಥೆ, ಸಾಂಪ್ರದಾಯಿಕವಾದ ಕಟ್ಟುಕಟ್ಟಲೆಗಳಾಗಿರಬಹುದು ಅಥವಾ ಪ್ರಭುಶಕ್ತಿಯಾಗಿರಬಹುದು.  ವಚನಕಾರರಲ್ಲಿ, ಅದರಲ್ಲಿಯೂ ದೊರೆ ಬಿಜ್ಜಳನ ಅರಮನೆಯ ರಾಜಕಾರಣದೊಳಗಿದ್ದೂ, ‘ವ್ಯಾಧನೊಂದು ಮೊಲನ ತಂದರೆ ಸಲುವ ಹಾಗಕ್ಕೆ ಬಿಲಿವರಯ್ಯಾ ! ನೆಲನಾಳ್ದನ ಹೆಣನೆಂದರೆ ಒಂದಡೆಕೆಗೆ ಕೊಂಬರಿಲ್ಲ ನೋಡಾ’ ಎಂದ ಬಸವಣ್ಣನವರ ಈ ಉಕ್ತಿ, ಪ್ರಭುತ್ವದ ಬಗೆಗಿರುವ ತಿರಸ್ಕಾರವನ್ನು ಸೂಚಿಸುತ್ತದೆ.  ಸರ್ಪಭೂಷಣರು ರಾಜತ್ವ ಹಾಗೂ ಐಶ್ವರ್ಯ ಮತ್ತು ಅದು ಪ್ರದರ್ಶಿತಗೊಳ್ಳುವ ಆಡಂಬರಗಳ ಬಗ್ಗೆ ತಮ್ಮ ತಿರಸ್ಕಾರವನ್ನು ತಮ್ಮ ತತ್ವಪದಗಳಲ್ಲಿ ಹೀಗೆ ದಾಖಲು ಮಾಡುತ್ತಾರೆ –

ಧರೆಯನೆಲ್ಲವನೊಂದೆ ಕೊಡೆಯಿಂದಲಾಳುವುದು
ಕರಿಯ ಮೇಲಂಬಾರಿಯಲ್ಲಿ ಮೆರೆಯುವುದು (೧೪ : ಪು ೪೮)

ಎನ್ನುವ ಈ ಚಾಪಲ್ಯಗಳು ‘ಮನವೆಂಬ ಮರ್ಕಟನ… ಚಪಲ ಚೇಷ್ಟೆ’ಗಳೆಂದು ಗೇಲಿ ಮಾಡುತ್ತಾರೆ.  ಅಂದರೆ ಏಕಚ್ಛತ್ರಾಧಿಪತಿಯಾಗಿ, ಆನೆಯಂಬಾರಿಗಳಲ್ಲಿ ವಿಜೃಂಭಿಸುವುದು, ಹರನ ಭಕ್ತನಾಗಿರುವಿಕೆಯ ಪರಮಪದದ ಎದುರು ನಿಕೃಷ್ಟವಾದವುಗಳು.  ಆದಕಾರಣ-

ಬಿಡುಬಾಹ್ಯದೊಳು ಡಂಭವಾ | ಮಾನಸದೊಳು
ಎಡಬಿಡದಿರು ಶಂಭುವಾ
ಒಡಲೊಳು ವಂಚಿಸಿ ಹೊರಗೆ ನೀ ಕೀರ್ತಿಯ
ಪಡೆದರೆ ಶಿವ ನಿನಗೊಲಿವನೆ ಮರುಳೆ (೭ : ಪು ೨೨)

ಎನ್ನುವುದು ಸರ್ಪಭೂಷಣರು ಪದವಿ ವೈಭವಗಳ ಈ ಚಪಲಚೇಷ್ಟೆಗಳಿಗೆ ಸೂಚಿಸುವ ಮದ್ದು.  ಸರ್ಪಭೂಷಣರ ಸಮಕಾಲೀನರಾದ ಬಾಲಲೀಲಾ ಮಹಾಂತ ಶಿವಯೋಗಿಗಳು, ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ ಭಕ್ತಿ – ಗೌರವ ಪೂರ್ವಕವಾದ ಕಾಣಿಕೆಗಳನ್ನು ಸ್ವೀಕರಿಸಲೊಪ್ಪದೆ –

ನೀನೆಲ್ಲಿ ನಿನ್ನ ದೇಶವೆಲ್ಲಿ ಕೇಳಲೆ ರಾಜ
ನಾನೆಲ್ಲಿ ನಾನಿರುವ ಸುಡುಗಾಡೆಲ್ಲಿ ಠಾವೆಲ್ಲಿ
ಏನಾಶಪಾಶದಲಿ ಬಿಗಿದೆನ್ನ ಕಟ್ಟಿದೆಯೊ
ಕಳ್ಳರನು ಕಟ್ಟುವ ರೂಢಿ

……..
ನಾವಿರುವ ಸ್ಥಳ ನೋಡಿ
ದೊರೆ ಕೊಟ್ಟ ರಥ
, ಮೇಣೆ, ಛತ್ರ ಚಾಮರಗಳ
ನಾನೆಲ್ಲಿ ಮಡಗಿಕೊಳಲಿ
?              (ಕೈವಲ್ಯ ದರ್ಪಣ ಪು ೧೩)

ಹೀಗೆಂದು ತೋರಿದ ಪ್ರತಿಕ್ರಿಯೆ ಅತ್ಯಂತ ಗಮನಾರ್ಹವಾದುದಾಗಿದೆ.

ಲೌಕಿಕ ಭೋಗ ವೈಭವಗಳನ್ನು ನಿರಾಕರಿಸುವ ಈ ಮನಸ್ಸು  ಹೆಣ್ಣನ್ನೂ ಒಂದು ಭೋಗವಸ್ತುವೆಂದೋ, ಆಕರ್ಷಣೆಯೆಂದೋ, ಮಾಯೆ – ಎಂದೋ ನೋಡಿರುವ ಕ್ರಮವು, ಸರ್ಪಭೂಷಣರು ಯಾವ ಒಂದು ಶಿವಶರಣರ ಪರಂಪರೆಗೆ ಸೇರುತ್ತಾರೆಂದು ನಾವು ಭಾವಿಸುತ್ತೇವೆಯೋ, ಅದರ ನಿಲುವಿಗೆ ತೀರಾ ವಿರುದ್ಧವಾದಂತೆ ತೋರುವುದು ಆಶ್ಚರ್ಯದ ಸಂಗತಿಯಾಗಿದೆ. ಹೆಣ್ಣನ್ನು ಕುರಿತು –

ಹೆಣ್ಣಿಗಿಚ್ಚೆ ಸುವರೆ ಮೂಢಾ ! ಇದನು
ಕಣ್ಣು ಕಿವಿಮೈಮನಗಳಿಂ ಸೋಂಕಬೇಡಾ    (೯ : ಪು. ೪೧)

ಯಾಕೆಂದರೆ ಹೆಣ್ಣು ಬಹುವಿಧದಿಂದ ಕಾಡುವ ಮಾಯೆ, ಕಾಮದಲ್ಲಿ ಕೆಡಹುವ ಜಾಯೆ, ಆದಕಾರಣ –

ಧರೆಯೊಳೀ ಹೆಣ್ಣು ರಾಕ್ಷಸಿಯಲ್ಲದುಂಟೆ
ನರರು ಬೇರಿಹುದೆಂದು ಪೇಳುವುದು ಪುಸಿಯು
(೧೦ : ಪು ೪೨)

ಎಂಬ ಉಕ್ತಿಯಲ್ಲಿ ಹೆಣ್ಣನ್ನು ಅವಹೇಳನಕ್ಕೆ ಗುರಿ ಮಾಡಲಾಗಿದೆ.  ಭಾರತೀಯ ಪರಿಸರದಲ್ಲಿ ಮಾತ್ರವಲ್ಲ, ಬಹುಶಃ ಜಗತ್ತಿನಲ್ಲಿಯೆ ಇತರ ಅನೇಕ ಪ್ರಮುಖ ಧರ್ಮಗಳಿಂದ ಮಹಿಳೆಗೆ ವಂಚಿತವಾಗಿದ್ದ ಆಧ್ಯಾತ್ಮಿಕ ಸ್ವಾತಂತ್ರ  ಹಾಗೂ ಅವಕಾಶಗಳನ್ನೂ, ಸಮಾನತೆಯ ಒಂದು ನೆಲೆಯನ್ನೂ ಮೊಟ್ಟಮೊದಲು ತಂದುಕೊಟ್ಟದ್ದು ಕರ್ನಾಟಕದಲ್ಲಿ, ಹನ್ನೆರಡನೆಯ ಶತಮಾನದಂದು ಸಂಭವಿಸಿದ ಶರಣ ಧರ್ಮ – ಎನ್ನುವುದು ಚಾರಿತ್ರಿಕ ಸತ್ಯವಾಗಿದೆ.  “ಹೆಣ್ಣು ಮಾಯೆ ಅಲ್ಲ, ಮಣ್ಣು ಮಾಯೆ ಅಲ್ಲ, ಹೊನ್ನು ಮಾಯೆ ಅಲ್ಲ ; ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ” ಎಂದ ಅಲ್ಲಮ ಪ್ರಭುಗಳ ಉಕ್ತಿಯಾಗಲೀ, ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ ; ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ’ ಎಂದ ಸಿದ್ಧರಾಮನ ಘೋಷಣೆಯಾಗಲಿ, ‘ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡಮೀಸೆ ಬಂದರೆ ಗಂಡೆಂಬರು ನಡುವೆ ಸುಳಿವಾತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ – ರಾಮನಾಥಾ’ ಎಂದ ಜೇಡರ ದಾಸಿಮಯ್ಯನ ವಚನವಾಗಲೀ, ವೀರಶೈವ ಧರ್ಮವು ಹೆಣ್ಣನ್ನು ನೋಡುವ ನಿಲುವನ್ನು ಸ್ಪಷ್ಟಪಡಿಸುತ್ತದೆ.  ಈ ಕಾರಣದಿಂದಲೇ ಹನ್ನೆರಡನೆಯ ಶತಮಾನದ ವೀರಶೈವ ಧರ್ಮದ ಸಂದರ್ಭದಲ್ಲಿ ಮೂವತ್ತಕ್ಕೂ ಹೆಚ್ಚು ಸಂಖ್ಯೆಯ ವಚನಕಾರ್ತಿಯರು – ಸಮಾಜದ ವಿವಿಧ ಸ್ತರಗಳಿಂದ ಹುಟ್ಟಿಕೊಂಡದ್ದಲ್ಲದೆ, ಕನ್ನಡದ ಮೊದಲ ಹಾಗೂ ಮೊದಲ ದರ್ಜೆಯ ಕವಯಿತ್ರಿಯಾದ ಶಿವಶರಣೆ ಅಕ್ಕಮಹಾದೇವಿಯಂಥ ವ್ಯಕ್ತಿತ್ವದ ಉದಯಕ್ಕೂ ಕಾರಣವಾಯಿತು.

ಆದರೆ ಕಾಲಕಳೆದಂತೆ, ಶರಣರ ವಿಚಾರಕ್ರಾಂತಿ ಯಾವ ಒಂದು ವೈಚಾರಿಕತೆಯನ್ನು ಜನಮನದಲ್ಲಿ ಬಿತ್ತಿ ಮಹತ್ತರವಾದ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತೋ, ಅದು ಕ್ರಮ ಕ್ರಮೇಣ ತನ್ನ ಮೊದಲಿನ ಸತ್ವ ಹಾಗೂ ಅರ್ಥವನ್ನು ಕಳೆದುಕೊಳ್ಳುತ್ತಾ, ಮತ್ತೆ ಸಾಂಪ್ರದಾಯಿಕ ವಿಚಾರಗಳ ಪಾಚಿ ವೀರಶೈವ ಧರ್ಮವನ್ನೂ ಆವರಿಸಿಕೊಂಡಂತೆ ತೋರುತ್ತದೆ.  ಇದು ಎಲ್ಲ ಸಾಂಸ್ಥಿಕ ಧರ್ಮಗಳಿಗೂ ಒದಗುವ ಪಾಡು.  ಮಹಿಳೆಯರಿಗೆ, ಆಧ್ಯಾತ್ಮಿಕ ಸ್ವಾತಂತ್ರ  ಹಾಗೂ ವೈಚಾರಿಕತೆಯನ್ನು ತಂದುಕೊಟ್ಟ ಧರ್ಮದ ಪರಂಪರೆಯ ಪ್ರತಿನಿಧಿಗಳೆನ್ನಿಸಿಕೊಂಡ ಆಚಾರ್ಯರುಗಳೇ, ಹೆಣ್ಣನ್ನು ಕುರಿತ ಹಿಂದೂ ಧರ್ಮದ ಸಾಂಪ್ರದಾಯಿಕ ನಿಲುವುಗಳನ್ನೆ ಎತ್ತಿಹಿಡಿಯುವ ಧೋರಣೆಗೆ ವಶವಾದದ್ದು ಸ್ಪಷ್ಟವಾಗಿ ಚರಿತ್ರೆಯ ಹಿನ್ನಡೆಯನ್ನು ಸೂಚಿಸುತ್ತದೆ.  ಸರ್ಪಭೂಷಣ ಶಿವಯೋಗಿಗಳಿಗೆ, ಪ್ರೇರಕವೂ ಮಾರ್ಗದರ್ಶಕವೂ ಆದ ನಿಜಗುಣ ಶಿವಯೋಗಿಗಳ ‘ಕೈವಲ್ಯ ಪದ್ಧತಿ’ಯೊಳಗೇ ಸ್ತ್ರೀಯನ್ನು ಅವಹೇಳನಕ್ಕೆ ಒಳಗುಪಡಿಸುವ ದನಿಗಳು ಕೇಳಿಬರುತ್ತವೆ.  ಆ ಕೃತಿಯ ‘ಜೀವಸಂಬೋಧನಸ್ಥಲ’ದ ಕೆಲವು ಉಕ್ತಿಗಳಲ್ಲಿ ಇದು ಸ್ಪಷ್ಟವಾಗಿದೆ. ‘ಮನುಜ ನೀನೆಡವಿಡದೆ ಅನುದಿನ ಎಳಸುವ ವನಿತೆಯೊಳು ಒಂದಿನಿತು ಲೇಸಿಹುದೆ?’ ಎಂಬ ಪ್ರಶ್ನೆ ತೀರಾ ನಕಾರಾತ್ಮಕವಾದ ನಿಲುವನ್ನು ಎತ್ತಿಹಿಡಿಯುತ್ತದೆ. “ವನಿತೆಯರ ಒಲವು ಆವ ನೆಲೆಯೆಂದು ಮೋಹವನು ಮಾಡುವರು ಮುಕ್ತಿ ಪಡೆಯದ ನರರು?” ಎಂಬ ಪ್ರಶ್ನೆಯೂ ಸ್ತ್ರೀಯರ ಚಂಚಲತೆ, ಅವರ ಚೆಲುವಿನ ಮಾರಕ ಗುಣಗಳನ್ನು ಪ್ರಸ್ತಾಪಿಸುತ್ತದೆ.  ಒಂದು ಕಡೆ ಪರಮೇಶ್ವರನ ಅರ್ಧಾಂಗಿಯಾದ, ‘ಪರಮೇಶ್ವರಿಯ ಪುಣ್ಯ ನಾಮಂಗಳನ್ನು’ ಎಡಬಿಡದೆ ಜಪಿಸೆಂದು ಹೇಳುವ ಶಿವಯೋಗಿಗಳೇ, ಅದೇ ಶಕ್ತಿಯ ರೂಪವಾದ ಹೆಣ್ಣನ್ನು ಅವಹೇಳನದ ದೃಷ್ಟಿಯಿಂದ ನೋಡಿದ್ದಾರೆಂಬುದು ಸೋಜಿಗದ ಸಂಗತಿಯಾಗಿದೆ.  ನಿಜಗುಣರ ಕೃತಿ ಕಲ್ಪವೃಕ್ಷಕ್ಕೆ, ತಮ್ಮದೇ ಆದ ಬಳ್ಳಿಯನ್ನು ಹಬ್ಬಿಸಿದ ಸರ್ಪಭೂಷಣ ಶಿವಯೋಗಿಗಳೂ, ತಮ್ಮ ಕೃತಿಯಲ್ಲಿ ಹೆಣ್ಣಿನ ಬಗ್ಗೆ ಇದೇ ನಿಲುವನ್ನು ಪ್ರತಿಪಾದಿಸುತ್ತಾರೆ.  ಈ ನಿಲುವು ವೀರಶೈವ ಧರ್ಮದ ನಿಲುವಿಗೆ ತೀರಾ ಅಸಂಗತವಾದದ್ದು ಎಂಬುದನ್ನು ಮಹಾವಿದ್ವಾಂಸರಾದ ಪ್ರೊ. ಶಿ.ಶಿ. ಬಸವನಾಳರು ಗುರುತಿಸುತ್ತಾ, ಈ ನಿಲುವನ್ನು ಸಮರ್ಥಿಸುವ ಬೇರೊಂದು ದೃಷ್ಟಿಕೋನವನ್ನು ಇದೇ ಕೃತಿಯ ಪ್ರಸ್ತಾವನೆಯಲ್ಲಿ ಮಂಡಿಸುತ್ತಾರೆ.  “ಸರ್ಪಭೂಷಣ ಶಿವಯೋಗಿಗಳು, ನಿಜಗುಣ ಶಿವಯೋಗಿಗಳ ಬಳಿವಿಡಿದು ಈ ರೀತಿ ಸ್ತ್ರೀ ಗರ್ಹಣವನ್ನು ಮಾಡಿರುವುದಕ್ಕೆ ಒಂದು ಮುಖ್ಯ ಕಾರಣವನ್ನು ಹೇಳಬಹುದು : (ಅದೇನೆಂದರೆ) ಸಂಸಾರವನ್ನು ಬಯಸುವವರು ಹಲವರಾದರೆ ಸಂಸಾರ ವಿಮುಖರಾದವರು ಕೆಲವರಾದರೂ ಒಂದು ಸಮಾಜದಲ್ಲಿರುವುದು ಸಾಧ್ಯವಿದೆ.  ಅಂಥವರಿಗೂ ವೀರಶೈವ ಸಮಾಜದಲ್ಲಿ ಸ್ಥಾನವಿದೆ.  ಅಂತಹವರಿಗೆಂದೇ ವಿರಕ್ತಾಶ್ರಮವೊಂದು ಪ್ರತ್ಯೇಕವಾಗಿಯೆ ಏರ್ಪಾಡಾಗಿದೆ.  ಅದು ಬಸವಣ್ಣನವರ ಕಾಲದಿಂದಲೇ ಪ್ರಭುದೇವರು ಮೊದಲ್ಗೊಂಡು ಅವಿಚ್ಛಿನವಾಗಿ ಸಾಗಿಬಂದಿದೆ.  ವಿರಕ್ತಾಶ್ರಮವನ್ನು ಸ್ವೀಕರಿಸಿದವರು ಸಾಮಾನ್ಯವಾಗಿ ಸಮಾಜದಿಂದ ಅಲಿಪ್ತರಾಗಿಯೆ ಇರುವುದುಂಟು.  ಇವರು ನಿರಾಭಾರಿಗಳಾಗಿರುವುದರಿಂದ  ಆತ್ಮಾನುಸಂಧಾನವನ್ನು ಕೇವಲ ಭಕ್ತಿಮಾರ್ಗದಿಂದ ಸಾಧಿಸದೆ, ಯೋಗ ಹಾಗೂ ಜ್ಞಾನಮಾರ್ಗಗಳಿಂದಲೂ ಸಾಧಿಸುವುದು ಅಂತಹವರಿಗೆ ಹೆಚ್ಚು ಕಠಿಣವಲ್ಲ.  ಆ ಪರಂಪರೆಯಲ್ಲಿ ಅನೇಕ ಸುಪ್ರಸಿದ್ಧ ಶಿವಯೋಗಿಗಳು ಆಗಿಹೋಗಿದ್ದಾರೆ.  ನಿಜಗುಣ ಶಿವಯೋಗಿಗಳು, ಸರ್ಪಭೂಷಣ ಶಿವಯೋಗಿಗಳು-ಮುಪ್ಪಿನ ಷಡಕ್ಷರಿಗಳಂತೆ, ಬಾಲಲೀಲಾ ಮಹಂತ ಶಿವಯೋಗಿಗಳಂತೆ, ಅಥಣಿಯ ಶಿವಯೋಗಿಗಳಂತೆ – ಆ ಮಹಾಪರಂಪರೆಗೆ ಸೇರಿದವರು.  ಆದುದರಿಂದ ವಿರಕ್ತಾಶ್ರಮಕ್ಕೆ ತಕ್ಕಂತೆ ಹೊನ್ನು-ಹೆಣ್ಣು-ಮಣ್ಣುಗಳನ್ನು ಅವರು ತಮ್ಮ ಹಾಡುಗಳಲ್ಲಿ ಹೀಗಳೆಯುವುದು ಕಂಡುಬರುತ್ತದೆ.  ಅವರ ದೃಷ್ಟಿಯಿಂದ ಇದು ಸೂಕ್ತವೂ ಇದೆ.  ಒಟ್ಟಿನಲ್ಲಿ ಇದು ವಿರಕ್ತಿಯನ್ನು ಉಪದೇಶಿಸುವ ಸ್ಥಲವೆಂದೇ ಹೇಳಬಹುದು”.  (ಪ್ರಸ್ತಾವನೆ ಪು ೪-೫) ಪ್ರೊ. ಬಸವನಾಳರ ಈ ಸಮರ್ಥನೆ ಈ ನಿಲುವಿನ ಬೇರೊಂದು ಮುಖವನ್ನು ಹೇಳಿದಂತಾಯಿತೆ ಹೊರತು, ಇದರೊಳಗಿನ ತರ್ಕವು ಇಂದಿನ ವೈಚಾರಿಕತೆಗೆ ಸಮ್ಮತವಾಗಲಾರದೆಂದೇ ಹೇಳಬೇಕಾಗಿದೆ.

ಲೋಕದಲ್ಲಿ ನಾವು ಪಡುವ ಸುಖ ಅಥವಾ ಭಾಗ್ಯಾದಿಗಳಿಗೆ ಪೂರ್ವಜನ್ಮದ ಪುಣ್ಯವೆ ಕಾರಣವೆಂದೂ, ನಾವು ಅನುಭವಿಸುವ ದುಃಖ, ದಾರಿದ್ರ್ಯಾದಿಗಳಿಗೆ ಪೂರ್ವಜನ್ಮದ ಪಾಪ ಕಾರಣವೆಂದೂ ‘ಕರ್ಮಸಿದ್ಧಾಂತ’ವು ಬಹು ಹಿಂದಿನಿಂದ ಪ್ರತಿಪಾದಿಸುತ್ತ  ಸಾಮಾಜಿಕವಾದ ಹಾಗೂ ಆರ್ಥಿಕವಾದ ತಾರತಮ್ಯಗಳಿಗೆ, ಆಧ್ಯಾತ್ಮಿಕ ಕಾರಣಗಳನ್ನು ಮುಂದೆ ಒಡ್ಡುತ್ತಾ ಯಥಾಸ್ಥಿತಿಯನ್ನು ಕಾಪಾಡುವುದರಲ್ಲಿ ಮೊದಲಿಂದಲೂ ಕ್ರಿಯಾಶೀಲವಾಗಿದೆ.  ವಚನಕಾರರು ಈ ನಿಲುವನ್ನು ಪ್ರಧಾನವಾಗಿ ಅಲ್ಲದಿದ್ದರೂ ಪ್ರಾಸಂಗಿಕವಾಗಿಯಾದರೂ ನಿರಾಕರಿಸಿದ್ದರೆನ್ನುವುದು –

ಸುಖ ಬಂದಡೆ ಪುಣ್ಯದ ಫಲ ಎನ್ನೆನು
ದುಃಖ ಬಂದಡೆ ಪಾಪದ ಫಲ ಎನ್ನೆನು
ನೀಮಾಡಿದೊಡಾಯಿತ್ತೆಂದೆನ್ನೆನು

ಎಂಬ ಬಸವಣ್ಣನವರ ವಚನದಿಂದ ಸೂಚಿತವಾಗಿದೆ.  ಆದರೆ ಸರ್ಪಭೂಷಣರ ಒಂದು ತತ್ವಪದದಲ್ಲಿ (ನೀತಿಕ್ರಿಯಾಚರ್ಯಪ್ರತಿಪಾದನಾಸ್ಥಲ, ತತ್ವಪದಸಂಖ್ಯೆ-೨೦)-

ಬರಿದೆ ಸಿರಿಯನು ಬಯಸಿ ಬಳಲಿ ಬಾಯಾರದಿರು
ಮರುಳೆ ಪೂರ್ವದೊಳು ಶಿವನಲಿ ಬೇಡಿ ತರದೆ
||
ನೀನೊಲ್ಲದಿರ್ದರು ಬಡತನವು ನಿನಗೆಂತು
ತಾನೆ ಬಂದಿಹುದು
; ಅಂತೆ ಪೂರ್ವದಲಿ
ನೀನು ಮಾಡಿದ ಸುಕೃತವಿರ್ದೊಡೆ
, ಅದರಿಂ ಸಿರಿಯು
ತಾನೆ ಬಂದಿಹುದೀಗಲೆ
, (ಆದಕಾರಣ
ಆ ಸಂಪತ್ತನ್ನು) ಎಳಸಲು ಐದುವುದೇ
?          (೨೦ : ಪು ೭೫)

ಎಂಬ ಈ ತತ್ವ ಈಗಿನ ವೈಚಾರಿಕತೆಯ ಹಿನ್ನೆಲೆಯಲ್ಲಿ ತೀರಾ ಅಸಂಗತವಾಗುತ್ತದೆ.  ‘ನೀನಾಗಿ ಬಯಸದಿದ್ದರೂ ನಿನಗೆ ಬಡತನ ಬಂದಿದೆ ; (ಅದಕ್ಕೆ ಪೂರ್ವಜನ್ಮದ ಪಾಪವೆ ಕಾರಣ) ; ಹಾಗೆಯೆ ಪೂರ್ವಜನ್ಮದಲ್ಲಿ ನೀನು ಮಾಡಿದ ಪುಣ್ಯ ಅಥವಾ ಸುಕೃತದಿಂದ ಐಶ್ವರ್ಯವು (ಕೆಲವರಿಗೆ) ಬಂದಿದೆ.  ಹೀಗಿರುವಾಗ ಬಡತನವಾಗಲಿ, ಸಿರಿತನವಾಗಲೀ ಬಯಸಿದರೆ ಮಾತ್ರ ಬಂದೀತೆ? ಆದಕಾರಣ (ಪಲ್ಲವಿಯಲ್ಲಿ ಹೇಳಿರುವಂತೆ) ವ್ಯರ್ಥವಾಗಿ ಸಂಪತ್ತಿಗೆ ಆಶಿಸಿ ಬಳಲಿ ಬಾಯಾರಬೇಡ – ಎನ್ನುವುದು ಈ ಹಾಡಿನ ಸಾರಾಂಶ.  ಅಂದರೆ, ಸಾಮಾಜಿಕ ವಾಸ್ತವಗಳಾದ ಬಡತನ-ಸಿರಿತನಗಳಿಗೆ, ಕಾರಣವನ್ನು ಸಾಮಾಜಿಕ ವಾಸ್ತವ ಜಗತ್ತಿನ ಮನುಷ್ಯಕೃತ ಅರ್ಥವ್ಯವಸ್ಥೆಯಲ್ಲಿ ಹುಡುಕದೆ, ಪೂರ್ವಜನ್ಮದ ಪುಣ್ಯ-ಪಾಪಗಳಲ್ಲಿ ಹುಡುಕುತ್ತದೆ.  ಸರ್ಪಭೂಷಣರು ಇಂಥ ಪರಂಪರಾಗತ ನಂಬಿಕೆಗಳನ್ನು ಪ್ರಶ್ನಿಸದೆ, ತತ್ವಪದದ ಸಂದರ್ಭದಲ್ಲಿ ಹಾಗೆಯೇ ಉಳಿಸಿಕೊಂಡಿರುವುದರಿಂದ, ಯೋಚನೆ ಮಾಡಲಾಗದ ಈ ದೇಶದ ಅಸಂಖ್ಯಾತ ಶ್ರೀಸಾಮಾನ್ಯರನ್ನು, ಈ ಪ್ರತಿಗಾಮಿ ನಿಲುವು ದಾರಿತಪ್ಪಿಸುವುದೆನ್ನುವುದರಲ್ಲಿ ಸಂದೇಹವಿಲ್ಲ.  ವಿರಕ್ತರಾದವರು, ಅಧ್ಯಾತ್ಮವನ್ನು ಉಪದೇಶ ಮಾಡುವವರು, ಈ ಲೋಕದ ಭೋಗ ಐಶ್ವರ್ಯಗಳನ್ನು ನಿರಾಕರಿಸುವ ಮಾತನ್ನು ಹೇಳಿದರೆ ಅದೇನೂ ಅಸಂಗತವಾಗುವುದಿಲ್ಲ ; ಆದರೆ ಒಬ್ಬ ಶ್ರೀಮಂತನಾಗಿರುವುದು, ಮತ್ತೊಬ್ಬ ಬಡವನಾಗಿರುವುದು ಪೂರ್ವಜನ್ಮದ ಪುಣ್ಯ ಹಾಗೂ ಪಾಪಗಳ ಕಾರಣದಿಂದ ಎಂದು ಹೇಳುವುದು ಅತ್ಯಂತ ಅಸಂಗತವಾಗುತ್ತದೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

ಮೂಲತಃ ವಿರಕ್ತಿಯ ನೆಲೆಯಲ್ಲಿ ನಿಂತ ಮನಸ್ಸೊಂದು, ಈ ಲೌಕಿಕ ವಿಷಯ ಭೋಗಗಳ ಬಗೆಗೆ ತಿರಸ್ಕಾರವನ್ನೂ, ಹೊನ್ನು-ಹೆಣ್ಣು-ಮಣ್ಣುಗಳ ಬಗೆಗೆ ವಿಮುಖತೆಯನ್ನೂ, ಭಗವತ್ಪರವಾದ ಅದಮ್ಯ ವ್ಯಾಕುಲಗಳನ್ನೂ, ಈ ತತ್ವಪದಗಳ ಮೂಲಕ ಅಭಿವ್ಯಕ್ತಿಪಡಿಸಿದರೂ, ಅದು ಮೂಲತಃ ಜೀವನವಿಮುಖವಾದದ್ದಲ್ಲ ಅನ್ನುವುದು ಬಹು ಮುಖ್ಯವಾದ ಸಂಗತಿಯಾಗಿದೆ.  ವಾಸ್ತವ ಜೀವನವನ್ನು ಅದೊಂದು ಸವಾಲೆಂಬಂತೆ ಒಪ್ಪಿಕೊಂಡು, ಅದನ್ನು ತನ್ನ ಸಾಧನೆಗೆ ಮೊದಲ ನೆಲೆಯನ್ನಾಗಿ ಮಾಡಿಕೊಳ್ಳುತ್ತದೆ.  ಮತ್ತು ಈ ವಾಸ್ತವ ಜೀವನ ನಮ್ಮ ಅನುಭವಕ್ಕೆ ಬರುವುದು ಪಂಚೇಂದ್ರಿಯ ಸಮನ್ವಿತವಾದ ಈ ಶರೀರದ ಮೂಲಕ.  ಈ ದೇಹ, ಅದರೊಳಗಿನ ಮನಸ್ಸು, ಅದು ಒಳಗಾಗುವ ಸೆಳೆತಗಳು, ಅದರಿಂದ ಉಂಟಾಗುವ ಸಂಘರ್ಷಗಳು ಇವೇ ಸಾಧಕ ಜೀವವು ಮೊದಲು ಎದುರಿಸಬೇಕಾದ ಸವಾಲುಗಳು.  ಈ ಶರೀರ –

ವ್ಯಸನದೋವರಿ, ದುಃಖದಿಕ್ಕೆ, ಮೋಸದ ಬೀಡು,
ಪುಸಿಯ ನೆಲೆ
, ಧೂರ್ತತೆಯ ಹುತ್ತ, ಆಸೆಯ ಗೊತ್ತು,
ಪಿಸುಣಿನಿಟ್ಟಣೆ
, ಲಜ್ಜೆಯ ಅಡಪು, ನಿಂದೆಯ ತವರು,
ವಿಕೃತಿಯ ಅಣಿ
, ಮೋಹದ ಮನೆ                (೨ : ಪು ೨೧)

ಇಂಥ ಶರೀರ ಹಾಗೂ ಅದನ್ನು ನಿಯಂತ್ರಿಸುವ ಬದುಕು ನಮ್ಮದು.  ಒಂದರ್ಥದಲ್ಲಿ ಅದೊಂದು ಕಾಂತಾರ; ಮಹಾ ಅರಣ್ಯ.  ಅದರೊಳಗೆ ಏನೇನೋ ಪ್ರಾಣಿಗಳಿವೆ.  ಕೋಪವೆಂಬ ಹಿರಿಯ ಹುಲಿಯಿದೆ; ಪಾಪವೆಂಬ ಸೂಕರಗಳಿವೆ,  ಅಷ್ಟಮದಗಳೆಂಬ ಕೋಣಗಳಿವೆ, ಮತ್ಸರ ಬುದ್ಧಿಗಳೆಂಬ ಸಿಂಹಗಳಿವೆ.  ಆದಕಾರಣ

ಕಾಯಕಾಂತಾರವ ಹೊಕ್ಕು ಬೇಟೆಯನಾಡಿ
ಮಾಯಾಮೋಹದ ಮೃಗಗಳ ಕೊಲ್ಲಿರೋ      (೧೮ : ಪು. ೭೩)

ಎನ್ನುತ್ತಾರೆ ಸರ್ಪಭೂಷಣ ಶಿವಯೋಗಿಗಳು.  ಈ ಶರೀರವನ್ನು ಮೊದಲು, ಕಂಟಕ ರಹಿತವನ್ನಾಗಿ ಮಾಡಿಕೊಳ್ಳಬೇಕು.  ಆಗ ಮನಸ್ಸು ನಿರಾಳವಾಗುತ್ತದೆ.  ಅವರೇ ಹೇಳಿರುವಂತೆ ಈ ಶರೀರ ಕೇವಲ ಅರಣ್ಯವಲ್ಲ, ಹೊಲವೂ ಕೂಡಾ.  ‘ಶರೀರವೆಂತೆಂಬುವ ಹೊಲನ ಹಸನುಮಾಡು ಪರತತ್ವ ಬೆಳೆಯ’ನ್ನು ನಾವು ಇಲ್ಲಿಯೇ ಬೆಳೆದುಣ್ಣಬೇಕು.  ಈ ಪ್ರಯತ್ನಗಳೆಲ್ಲ, ಬೇಟೆಯಂತೆ, ಕೃಷಿಯಂತೆ ಮಾತ್ರವಲ್ಲ ಗರುಡಿಯಂತೆ ಕೂಡಾ ಎನ್ನುತ್ತಾರೆ.  ಸರ್ಪಭೂಷಣರು, ಈ ಶರೀರವನ್ನು ಗರುಡಿಮನೆಗೆ ಹೋಲಿಸಿದ ಉಕ್ತಿಯೊಂದು ಅತ್ಯಂತ ಗಮನಾರ್ಹವಾಗಿದೆ  –

ತನುವೆಂಬ ಗರುಡಿಯೊಳನುಭವ ಧೀರರು
ಘನ ಯೋಗ ಸಾಧನೆಯನು ಮಾಡಿರೋ
ಸ್ಥಿರಬುದ್ಧಿ ಎಂಬ ಸಮನಾದ ನೆಲದೊಳು
ಗುರುಬೋಧೆ ಎಂಬ ದಂಡೆಗಳನೊತ್ತಿ
ಪರತತ್ವ ವಿವರದ ಬಸಿಗೆಗಳನೆ ಹಾಕು
ತರಿವೆಂಬ ಕೂಣತವನೊತ್ತಿ ಕಟ್ಟಿ.                (೧೫ : ಪು. ೯೪)

ಹೀಗೆಯೆ ಗರುಡಿಮನೆಯ ಉಪಕರಣಗಳ ಪರಿಭಾಷೆಯಲ್ಲಿ, ಈ ಶರೀರ ಮೂಲಕವಾಗಿಯೇ ಆ ಪರಾತ್ಪರವನ್ನು ಅರಿವಿಗೆ ತಂದುಕೊಳ್ಳುವ ಸಾಧನೆಯನ್ನು ಶಿವಯೋಗಿಗಳು ಮನದಟ್ಟಾಗುವಂತೆ ಮಂಡಿಸುತ್ತಾರೆ.  ಆಗ ಇಡೀ ಶರೀರವೇ ಪರಮ ಪವಿತ್ರ ತೀರ್ಥಕ್ಷೇತ್ರವಾಗಿ ಪರಿಣಮಿಸುತ್ತದೆ –

ತನುವೇ ಪಂಪಾಕ್ಷೇತ್ರ
ಮನವೇ ದೇವಸ್ಥಾನ
ಮಿಸುಪ ಜೀವನೆ ವಿರುಪಾಕ್ಷ.                    (೫ : ಪು. ೮೫)

ಇದು ಜೀವನದಲ್ಲಿಯೇ ದೇವಭಾವ ಮೂರ್ತಗೊಳ್ಳುವ ಪವಾಡ ; ಆಗ

ಕರದಿಷ್ಟಲಿಂಗವದೇ,
ಪರವಸ್ತು ತಾನಾಗಿದೆ.                       (೨೯ : ಪು. ೧೦೨)

ಎಂಬ ಅನುಭವ ಉಂಟಾಗುತ್ತದೆ.  ಇದು ಸರ್ಪಭೂಷಣರು ವರ್ಣಿಸುವ ಅನುಭಾವದ ನೆಲೆ.  ನಿಜವಾದ ಶಿವಯೋಗದ ಶಿಖರ.

ಸರ್ಪಭೂಷಣರ ಈ ತತ್ವಪದಗಳು ಮೂಲತಃ ಹಾಡುಗಳು ; ಅಂದರೆ ಹಾಡಿಕೊಳ್ಳಲೆಂದೇ ವಿವಿಧ ರಾಗಗಳಲ್ಲಿ ಬರೆದವುಗಳು.  ಸರ್ಪಭೂಷಣರು ಸಂಗೀತದಲ್ಲಿ ಪರಿಣತರಾಗಿದ್ದರೆಂಬುದಕ್ಕೆ ಅವರು ಈ ಕೃತಿಯಲ್ಲಿ ಬಳಸಿರುವ ನಲ್ವತ್ತಕ್ಕೂ ಮೀರಿದ ಭಿನ್ನರಾಗಗಳು, ಅವುಗಳ ವಿವಿಧ ಪ್ರಕಾರಗಳೂ ಸಾಕ್ಷಿಯಾಗಿವೆ.  ಇಲ್ಲಿ ಭೋಗ, ಪರಿವರ್ಧಿನಿ, ವಾರ್ಧಕ ಷಟ್ಪದಿಗಳನ್ನು ವಿವಿಧ ರಾಗಗಳಿಗೆ ಅಳವಡಿಸಿರುವುದನ್ನು ನೋಡಬಹುದು.  ಇಲ್ಲಿ ಮೂರು, ನಾಲ್ಕು, ಐದು ಮಾತ್ರಾಗಣಗಳಿಂದ ರಚಿತವಾದ ಪದ್ಯಬಂಧಗಳೇ ಮಿಗಿಲಾಗಿವೆ.  ಈ ಹಾಡುಗಳ ಮುಖ್ಯವಸ್ತು ಈಗಾಗಲೆ ಚರ್ಚಿಸಿರುವಂತೆ, ಜನರ ಶ್ರೇಯಸ್ಸಿಗಾಗಿ ನಿರೂಪಿತವಾಗುವ ಪಾರಮಾರ್ಥಿಕ ಸಂಗತಿಗಳು.  ಇವುಗಳನ್ನು ಹೇಳುವಲ್ಲಿ ಅಪಾರವಾದ ಪ್ರೀತಿ ಹಾಗೂ ಲೋಕಾನುಕಂಪೆಗಳು, ಮನಸ್ಸನ್ನು ತುಂಬಿಕೊಂಡಿವೆ –

ಎಲೆ ಮಗನೆ ಬಾ ನಿತ್ಯ ಮುಕ್ತಿ ಸಂಪದವ
ಗಳಿಸುವೊಡೆ ಮುಖ್ಯ ಸಾಧನಗಳೆಂದೆನಿಪ ಗುಣ
ಗಳನು ನಿನಗೊಂದೊಂದನೀಗಳಾನೊರೆವೆನು
, ಅವನ್
ಎಡೆವಿಡದಿರು ಅನುದಿನದೊಳು.              (೨೯ : ಪು. ೧೦೨)

ಇದು ಅಧ್ಯಾತ್ಮವನ್ನು ಹೇಳುವ ಆತ್ಮೀಯವಾದ ಧಾಟಿ.  ಆದರೆ ಈ ತತ್ವ, ಈ ವೇದಾಂತ, ಈ ಉಪದೇಶ – ಎಲ್ಲವನ್ನೂ ಹೇಳಿರುವ ಕ್ರಮ ಕೇವಲ ‘ಗದ್ಯಾತ್ಮಕ’ವಾಗಿಲ್ಲ, ಬದಲು, ವಿಶಿಷ್ಟವಾದ ಕಾವ್ಯಾತ್ಮಕತೆಯನ್ನೂ ಪಡೆದುಕೊಂಡಿದೆ.  ಮತ್ತು ಈ ಹಾಡುಗಳ ರಚನಾವಿಧಾನ ಹಾಗೂ ಅವುಗಳೊಳಗಿನ ಪ್ರತಿಮಾವಿಧಾನ ಸಾಂಪ್ರದಾಯಿಕ ಕಾವ್ಯದಿಂದ ತೀರಾ ಭಿನ್ನವಾಗಿದೆ.  ‘ಶರೀರವೆಂತೆಂಬುವ ಹೊಲ’ ‘ತನುವೆಂಬ ಗರುಡಿ’ ‘ಅನುಭವದ ಅಡುಗೆ’ ‘ಕಾಯವೆಂಬ ಕಾಂತಾರ’ – ಎಂಬ ಉಕ್ತಿಗಳು, ‘ಮುಕುರವ ಹಿಡಿದು ನಿಟ್ಟಿಸಿದಾ ಕ್ಷಣಕೆ ತನ್ನ ! ಮುಖವದರೊಳು ಹೊಕ್ಕು ಪ್ರತಿಬಿಂಬಿಪಂತೆ’ ‘ಎಳೆಯ ಶಿಶುವಿನ ತಲೆಯ ಮೇಲೆ ಮಂದರಗಿರಿಯನಿಳುಹಿದಂತೆ’ ‘ತಿರುಕರಂಗಡಿ ಬೀದಿಯೊಳು ಕೂಡುತೆ ರಾಜರರಮನೆಯೊಳಸುದ್ದಿಗಳನಾಡುವಂತೆ’, ‘ಮನೆಯ ಸೊಡರು ಮನೆಯ ಬಾಗಿಲೊಳಿರ್ದು ಮನೆಯಂಗಳದ ಮಬ್ಬ ನೂಕುವಂತೆ’ – ಇಂಥ ಉಪಮಾ ಮಾಲೆಗಳೂ ಸರ್ಪಭೂಷಣರ ಕಾವ್ಯಸಾಮರ್ಥ್ಯದ ದ್ಯೋತಕಗಳಾಗಿವೆ.  ಮತ್ತು ಹಾಡುಗಳೊಳಗಿನ ಉಪಮಾಸಾಮಗ್ರಿ ಜನಕ್ಕೆ ಪರಿಚಿತವಾದ ದೈನಂದಿನ ಜಗತ್ತಿನಿಂದ, ನೇರವಾಗಿ ಕಾವ್ಯಾತ್ಮಕತೆಯನ್ನು ಪಡೆದುಕೊಳ್ಳುವುದರಿಂದ, ಅಧ್ಯಾತ್ಮದಂಥ ವಿಚಾರಗಳೂ ಜನರ ಮನಸ್ಸನ್ನು ಸುಲಭವಾಗಿ ಆಕರ್ಷಿಸುತ್ತವೆ.  ಆದುದರಿಂದಲೇ ಸರ್ಪಭೂಷಣರ ಎಷ್ಟೋ ಹಾಡುಗಳು ಇಂದಿಗೂ ಅತ್ಯಂತ ಜನಪ್ರಿಯವಾಗಿವೆ.  ಮತ್ತು ಅವರು ಕರ್ನಾಟಕದ ವಾಗ್ಗೇಯಕಾರರಲ್ಲಿಯೂ ಬಹುಮುಖ್ಯರಾಗಿದ್ದಾರೆ.  ಒಂದರ್ಥದಲ್ಲಿ ಸರ್ಪಭೂಷಣರ ಈ ತತ್ವಪದಗಳು, ನವೋದಯಪೂರ್ವದಲ್ಲಿ ಕನ್ನಡ ಕಾವ್ಯವು ತಾಳಲಾಶಿಸುತ್ತಿದ್ದ ಹೊಸ ಕಾವ್ಯಪ್ರಜ್ಞೆಯ ಹೊಳಹುಗಳಂತೆಯೂ ಇವೆ ಎಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ.  ಕನ್ನಡ ನವೋದಯ ಕಾವ್ಯದ ಮುಖ್ಯ ಪ್ರೇರಣೆಗಳಲ್ಲಿ ಕರ್ನಾಟಕದ ಶರಣರ – ದಾಸರ ಹಾಗೂ ಸಂತರ ಅನುಭಾವವೂ ಒಂದು ಎಂಬುದನ್ನು ಈಗಾಗಲೇ ವಿಮರ್ಶಕರು ಗುರುತಿಸಿದ್ದಾರೆ.  ಈ ಸಂತ ಸಾಹಿತ್ಯ ಧಾರೆಯೊಳಗೆ ಬೆರೆತುಕೊಂಡಿರುವ ಸರ್ಪಭೂಷಣರ ಸತ್ವವೂ ಕಡಿಮೆಯಾದುದೇನಲ್ಲ.

೧೯೯೫


[1] ಬೆಟ್ಟದ ತುದಿಯೊಳಿರ್ಪ ಪ್ರಾಣಿಗಳಿಗೆ | ಅನ್ನ
ವಿಟ್ಟು ಸಾಕುವೀಶನೆ ದಿಕ್ಕನ್ನು ತೊಳಗೆ
ನಿಷ್ಠೆಯಿಂ ನಂಬಿರೆ ತಪ್ಪದರಗಳಿಗೆ | ತಾನೆ

ಕಟ್ಟಿತಂದು ಕೊಡುವ ತನ್ನಯ ಬಳಿಗೆ (೧೪ : ಪು ೭೧) ಇದು ‘ತಲ್ಲಣಿಸದಿರುಕಂಡ್ಯ ತಾಳುಮನವೇ’ ಎಂಬ ಕನಕದಾಸರ ಕೀರ್ತನೆಯ ಆಶಯವನ್ನೆ ಒಳಗೊಂಡಿದೆ.

[2] ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸೋಮೇಶ ಪರ ಬೊಮ್ಮನೆಂದು ಜನಂ
ಅವುದನು ಕಾಣದೊಡಂಮಳ್ತಿಯಿಂ ನಂಬಿಹುದೊ
ಆ ವಿಚಿತ್ರಕೆ ನಮಿಸೊ ಮಂಕುತಿಮ್ಮ
(ಡಿ.ವಿ.ಜಿ. : ಮಂಕುತಿಮ್ಮನ ಕಗ್ಗ ೧ – ೧)