ನಾನು ಆಗ ತುಮಕೂರಿನ ಹೈಸ್ಕೂಲಿನಲ್ಲಿ ಓದುತ್ತಿದ್ದೆ.  ನನ್ನ ವಾಸ್ತವ್ಯ ತುಮಕೂರಿಗೆ ಮೂರು ಮೈಲಿ ದೂರದ ಸಿದ್ಧಗಂಗಾಕ್ಷೇತ್ರದ ಮಠದಲ್ಲಿ.  ನನಗೆ ನೆನಪಿರುವಂತೆ ಆಗ, ನಲವತ್ತರ ದಶಕದ ಕಾಲದಲ್ಲಿ, ಸುಮಾರು ನಾಲ್ಕುನೂರು ಜನ ಶಾಲೆ-ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿದ್ದರು.  ದಿನವೂ ಸಂಜೆ, ಪೂಜ್ಯ ಶಿವಕುಮಾರ ಸ್ವಾಮಿಗಳ ಸಾನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ, ಮಠದ ಒಳಗಣ ಉದ್ದನೆಯ ಊಟದ ಸಾಲೆಗಳಲ್ಲಿ, ಸಾಲಾಗಿ ತಟ್ಟೆಗಳನ್ನು ಎದುರಿಗಿರಿಸಿಕೊಂಡು, ನಮ್ಮೆಲ್ಲರ ತಟ್ಟೆಗಳಿಗೂ ಅನ್ನಾವತಾರವಾಗುವ ಮೊದಲು ಒಬ್ಬರಾದ ಮೇಲೊಬ್ಬರು ಬಸವಾದಿ ಶಿವಶರಣರ ವಚನಗಳನ್ನು ಹೇಳುತ್ತಿದ್ದೆವು.  ಒಬ್ಬಿಬ್ಬರು ವಚನಗಳನ್ನು ಹಾಡುತ್ತಿದ್ದದ್ದೂ ಉಂಟು.  ಒಂದೊಂದು ಸಲ ಬೇರೆಯ ಹಾಡುಗಳನ್ನೂ ಒಟ್ಟಾಗಿ ಹಾಡುತ್ತಿದ್ದೆವು.  ಯಾರೋ ಒಬ್ಬರು ಮೊದಲು ಕೆಲವು ಚರಣಗಳನ್ನು ಹಾಡುವುದು ; ಅನಂತರ ಉಳಿದವರು ಸಾಮೂಹಿಕವಾಗಿ ಅದನ್ನು ಹಾಡುವುದು.  ಅಂಥ ಕೆಲವು ಹಾಡುಗಳಲ್ಲಿ

ಶರೀರವೆಂತೆಂಬುವ ಹೊಲನ ಹಸನ ಮಾಡಿ
ಪರತತ್ವ ಬೆಳೆಯ ನೀವ್ ಬೆಳೆದುಣ್ಣಿರೋ

ಎನ್ನುವದೂ ಒಂದು.  ಈ ಹಾಡು, ಚರಣ ಚರಣಗಳ ಮೂಲಕ  ವ್ಯವಸಾಯದ ಕ್ರಿಯೆಯೊಂದನ್ನು ವರ್ಣಿಸುತ್ತ, ನಮ್ಮೂರಿನ ಹೊಲಗದ್ದೆಗಳನ್ನೂ, ಅಲ್ಲಿ ನಡೆಯುವ ಬೇಸಾಯದ ಚಟುವಟಿಕೆಗಳನ್ನೂ ನೆನಪಿಗೆ ತರುತ್ತ ಒಂದು ಬಗೆಯ ಸಂತೋಷವನ್ನುಂಟು ಮಾಡುತ್ತಿತ್ತು.  ಅದರ ಕಾವ್ಯ ಸೌಂದರ್ಯವನ್ನಾಗಲೀ, ಅದರೊಳಗಿನ ಆಧ್ಯಾತ್ಮಿಕ ಅರ್ಥವನ್ನಾಗಲೀ ಪ್ರತ್ಯೇಕವಾಗಿ ಪರಿಭಾವಿಸದ ಆ ವಯಸ್ಸಿನಲ್ಲಿ, ಅದನ್ನು ಸಾಮೂಹಿಕವಾಗಿ ಹಾಡುವುದರೊಳಗಿದ್ದ ರೋಮಾಂಚಕತೆಯಷ್ಟರಲ್ಲಿಯೆ ನನ್ನನ್ನದು ನಿಲ್ಲಿಸಿತ್ತು.  ಅದು ಯಾರ ರಚನೆ ಅನ್ನುವುದು ಕೂಡಾ ನನಗೆ ತಿಳಿದಿರಲಿಲ್ಲ.  ಆದರೆ ಮುಂದೆ ನಾನು ಕನ್ನಡ ಸಾಹಿತ್ಯವನ್ನು ವಿಶೇಷ ಅಧ್ಯಯನದ ವಿಷಯವನ್ನಾಗಿ ಮಾಡಿಕೊಂಡಾಗ; ನನಗೆ ತಿಳಿಯಿತು, ಅದು ಸರ್ಪಭೂಷಣ ಶಿವಯೋಗಿಗಳ ಒಂದು ತತ್ವ ಪದ ಎಂದು; ಮತ್ತು ಆ ಸರ್ಪಭೂಷಣ ಶಿವಯೋಗಿಗಳು ಯಾವುದೋ ಪ್ರಾಚೀನ ಕಾಲದವರಲ್ಲ, ಇತ್ತೀಚಿನವರು ಎಂದು; ಅಷ್ಟೇ ಅಲ್ಲ ಅವರು ವಾಸ ಮಾಡಿದ್ದು ಬೆಂಗಳೂರಿನಂಥ ಗೊಂದಲಪುರದ ನಡುವೆ ಈಗ ಇರುವ ಸರ್ಪಭೂಷಣ ಮಠದಲ್ಲಿ ಎಂದು.

ನಾನು ಹಲವು ಸಲ ಈ ಒಂದು ತತ್ವಪದವನ್ನು ಓದಿ ಅದರ ಸ್ವಾರಸ್ಯಕ್ಕೆ ಬೆರಗಾಗಿದ್ದೇನೆ.  ‘ಶರೀರವೆಂತೆಂಬುವ ಹೊಲನ ಹಸನು ಮಾಡಿ ಪರತತ್ವ ಬೆಳೆಯ ನೀವ್ ಬೆಳೆದುಣ್ಣಿರೋ’ ಎಂದು ಪ್ರಾರಂಭವಾಗುವ ಈ ಹಾಡು, ಕೃಷಿ ಪ್ರಧಾನವಾದ ಈ ದೇಶದ ಅನುಭಾವದೃಷ್ಟಿಗೆ ಅತ್ಯಂತ ಉಚಿತವಾಗಿದೆ.  ಈ ಹಾಡಿನ ಮುಂದಿನ ಚರಣಗಳು ಕಟ್ಟಿಕೊಡುವ ಚಿತ್ರಗಳೆಲ್ಲವೂ ಈ ಹೊಲವನ್ನು ಉಳುವ ಕ್ರಿಯೆಯನ್ನು ವಿಸ್ತರಿಸುತ್ತವೆ.  ಹೊರಗೆ ಕಾಣುವ ಹೊಲವನ್ನು ಉಳುವ ಎತ್ತುಗಳು, ನೇಗಿಲು, ಬೀಜ, ಮೊಳೆಯುವ ಪೈರು, ಅದರ ಬುಡದಲ್ಲಿ ಬೆಳೆಯುವ ಕಳೆ, ಆ ಬೆಳೆ ತೆನೆದುಂಬುವ ರೀತಿ ಇತ್ಯಾದಿಗಳೆಲ್ಲವೂ, ಶರೀರವನ್ನು ಹೊಲವನ್ನಾಗಿ ಮಾಡುವ, ಹಾಗೂ ಉಳುವ ಕ್ರಿಯೆಗೆ ಸಂಕೇತವಾಗಿ ವರ್ಣಿತವಾಗಿವೆ –

ಶಮೆದಮೆಯಂದೆಂಬುವೆರಡೆತ್ತುಗಳ ಹೂಡಿ
ವಿಮಲ ಮಾನಸವ ನೇಗಿಲನೆ ಮಾಡಿ
ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು
ಸಮತೆಯೆಂದೆಂಬ ಗೊಬ್ಬರವ ಚೆಲ್ಲಿ

ಗುರುವರನುಪದೇಶವೆಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರ ವೃಷ್ಟಿಯ ಬಲದಿ
ಅರಿವೆಂಬ ಪೈರನೆ ಬೆಳಸುತೆ ಮುಸುಗಿರ್ದ
ದುರಿತ ದುರ್ಗುಣವೆಂಬ ಕಳೆಯ ಕಿತ್ತು

ಸ್ಥಿರ ಮುಕ್ತಿಯೆಂಬ ಧಾನ್ಯದ ಬೆಳೆದುಂಡು
ಪರಮಾನಂದದೊಳು ದಣ್ಣನೆ ದಣಿದು
ಗುರುಸಿದ್ಧನಡಿಗಳಿಗೆರಗುತ್ತೆ ಭವವೆಂಬ
ಬರವನು ತಮ್ಮ ಸೀಮೆಗೆ ಕಳುಹಿ

(
೨೨ಪು ೭೭, ೭೮)

ಎಂದು ಮುಕ್ತಾಯವಾಗುವ ಈ ಪದ್ಯ ಅತ್ಯಂತ ತರ್ಕಬದ್ಧವಾಗಿ ಆಧ್ಯಾತ್ಮಿಕ ಅನುಭವವನ್ನು ಅಥವಾ ಪರತತ್ವವೆಂಬ ಬೆಳೆಯನ್ನು ಇಲ್ಲಿಯೇ, ಇಹದಲ್ಲಿಯೇ, ನಮಗೆ ದತ್ತವಾದ ಶರೀರ ಹಾಗೂ ಕರಣಾದಿಗಳ ಮೂಲಮಾನದಲ್ಲಿಯೇ ಬೆಳೆದುಕೊಳ್ಳುವ ಕೃಷಿ ವಿಧಾನವನ್ನು ವರ್ಣಿಸುತ್ತದೆ.  ಯಾವುದನ್ನು ನಾವು ಪರತತ್ವ ಅಥವಾ ದೈವೀ ಅನುಭವ ಅನ್ನುತ್ತೇವೋ ಅದು, ಯಾವುದೋ ಲೋಕಾತೀತದ ನೆಲೆಯಲ್ಲಿ ಸಂಭವಿಸತಕ್ಕದ್ದೇನೂ ಅಲ್ಲ; ಅದು ಸಾಧಕನ ವಾಸ್ತವದ ಬದುಕಿನಲ್ಲಿಯೇ ಸಾಧ್ಯವಾಗುವಂಥದ್ದು ಎಂಬ ಆಶ್ವಾಸನೆಯನ್ನು ಸರ್ಪಭೂಷಣರ ಈ ಉಕ್ತಿ ನೀಡುತ್ತದೆ.  ಶರೀರವನ್ನೆ ಹೊಲವನ್ನಾಗಿ ಮಾಡಿಕೊಂಡು ಬೆಳೆಯಬಹುದಾದ ಬೆಳೆ ಅದು – ಎನ್ನುವ ಈ ಮಾತು, ವಚನಕಾರರು ವರ್ಣಿಸುವ ಶಿವಾನುಭವ ಸ್ಥಿತಿಯನ್ನೆ ಕೃಷಿರೂಪಕದ ಮೂಲಕ ವರ್ಣಿಸುತ್ತದೆ.  ವಾಸ್ತವವಾಗಿ ಶರೀರ ಎನ್ನುವುದು ಒಂದು ಹೊಲ ಎನ್ನುವ ಅರ್ಥದ ಮಾತು ಭಗವದ್ಗೀತೆಯಲ್ಲಿಯೆ ಕಾಣಿಸಿಕೊಂಡಿದೆ.  ಭಗವದ್ಗೀತೆಯ ಹದಿಮೂರನೆ ಅಧ್ಯಾಯದ ಹೆಸರೇ ‘ಕ್ಷೇತ್ರ ಕ್ಷೇತ್ರಜ್ಞಯೋಗ’ ಎಂದಿದೆ.  ಅದರ ಮೊದಲ ಶ್ಲೋಕ –

ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿದೀಯತೇ
ಏತದ್ಯೋವೇತ್ತಿ ತಂಪ್ರಾಹು ಕ್ಷೇತ್ರಜ್ಞ ಇತಿ ತದ್ವಿದಃ

ಎಂದರೆ – ‘ಎಲೈ ಅರ್ಜುನನೆ ಈ ಶರೀರವು ಕ್ಷೇತ್ರವೆಂದು ಹೇಳಲ್ಪಡುತ್ತದೆ.  ಇದನ್ನು ಯಾವನು ತಿಳಿಯುತ್ತಾನೋ ಅವನನ್ನು ಕ್ಷೇತ್ರಜ್ಞನೆಂದು ತಿಳಿದವರು ಹೇಳುತ್ತಾರೆ’ ಎಂದು ಅರ್ಥ.  ಇಲ್ಲಿ ‘ಕ್ಷೇತ್ರ’ವೆಂದರೆ ಹೊಲ ಅಥವಾ ಗದ್ದೆ.  ಹೊಲಗಳಲ್ಲಿ ಧಾನ್ಯಾದಿಗಳು ಬೆಳೆಯುವಂತೆ ಶರೀರದಲ್ಲಿಯೂ ಕರ್ಮಫಲ ಉಂಟಾಗುವುದರಿಂದ ಅದಕ್ಕೂ ಕ್ಷೇತ್ರವೆಂದು ಹೆಸರು – ಎಂದು, ‘ಕ್ಷೇತ್ರ’ವೆನ್ನುವ ಮಾತನ್ನು ವ್ಯಾಖ್ಯಾನಿಸಲಾಗಿದೆ.  ಆದರೆ ಇಲ್ಲಿ, ಕೇವಲ ಕರ್ಮಫಲಗಳ ಪ್ರಸ್ತಾಪವಿದೆಯೆ ಹೊರತು, ಈಗ ಪ್ರಸ್ತಾಪಿಸಿದ ಸರ್ಪಭೂಷಣ ಶಿವಯೋಗಿಗಳ ಪದ್ಯದೊಳಗೆ ಕಂಡು ಬರುವ ಕೃಷಿಗೆ ಸಂಬಂಧಿಸಿದ ಅರ್ಥದ ಚಿತ್ರಗಳು ಇಲ್ಲಿ ಹೊರಡುವುದಿಲ್ಲ.  ಭಗವದ್ಗೀತೆಗೆ ಭಾಷ್ಯವನ್ನು ಬರೆದ ಆಚಾರ್ಯರುಗಳಿಗೆ, ಈ ಕೃಷಿ ಪ್ರತೀಕ ಸಹಜವಾಗಿಯೇ ಅಪರಿಚಿತವಾದುದರಿಂದ, ಆ ಕೃಷಿಪರವಾದ ವ್ಯಾಖ್ಯೆಯು ಬಹುಶಃ ಸಾಮಾನ್ಯ ಜನ ಸಮೂಹದ ನಾಯಕರಾದ ಭಕ್ತಿ ಪಂಥದವರಿಂದಲೇ ಮಂಡಿತವಾದಂತೆ ತೋರುತ್ತದೆ.  ವಚನಕಾರರ ಗುರುವೂ ಮಾರ್ಗದರ್ಶಿಯೂ ಆದ ಅಲ್ಲಮ ಪ್ರಭು, ಗೊಗ್ಗಯ್ಯನೆಂಬ ಶರಣನೊಬ್ಬನನ್ನು ಭೆಟ್ಟಿಯಾಗುತ್ತಾನೆ.  ಗೊಗ್ಗಯ್ಯ ಒಬ್ಬ ಕೃಷಿಕ.  ಅವನು ತೋಟವೊಂದನ್ನು ಮಾಡಿಕೊಂಡು ಅಲ್ಲಿ ತನ್ನ ಸಾಧನೆಯನ್ನು ಮುಂದುವರಿಸುತ್ತಿರುತ್ತಾನೆ.  ಅವನಿಗೆ ಅಲ್ಲಮನು, ನಿಜವಾದ ಅರ್ಥದಲ್ಲಿ ತೋಟದ ಕೆಲಸಮಾಡುವುದು ಹೇಗೆಂಬುದನ್ನು ಅದ್ಭುತವಾದ ದೂಪಕವೊಂದರ ಮೂಲಕ ಹೇಳುತ್ತಾನೆ-

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ
, ಭ್ರಾಂತಿಯ ಬೇರ
ಒಡೆದು ಸಂಸಾರದ ಹೆಂಟೆಯ
, ಬಗಿದುಬಿತ್ತಿದೆನಯ್ಯಾ
ಬ್ರಹ್ಮಬೀಜವ
ಅಖಂಡ ಮಂಡಳವೆಂಬ ಬಾವಿ
, ಪವನವೆ ರಾಟಾಳ
ಸುಷುಮ್ನ ನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ
ಆವಾಗಲೋ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆ ಕಾಣಾ ಗುಹೇಶ್ವರಾ.

ಇದೂ ಕೂಡಾ, ಸರ್ಪಭೂಷಣ ಶಿವಯೋಗಿಗಳ ಉಕ್ತಿಯೊಳಗಿರುವಂತೆ ‘ಹೊಲನ ಹಸನ ಮಾಡು’ವ ಕ್ರಿಯೆಯೆ.  ಆದರೆ ಇದು ತೋಟಕ್ಕೆ ಸಂಬಂಧಪಟ್ಟ ಚಿತ್ರ.  ಒಟ್ಟಾರೆಯಾಗಿ ಇಲ್ಲಿರುವುದು ಅಲ್ಲಿನಂತೆ, ಕೃಷಿಯ ಹಾಗೂ ಕೃಷಿಕನ ಪ್ರತೀಕವೇ.  ಇದು ‘ಶರೀರವೆಂತೆಂಬುವ ಹೊಲನ ಹಸನುಮಾಡಿ’ ಎಂಬ ಸ್ವರಪದದಷ್ಟು ಸರಳವಾಗಿಲ್ಲ ಗ್ರಹಿಕೆಗೆ; ಇಲ್ಲಿ ಅಲ್ಲಿಗಿಂತ ಮಿಗಿಲಾಗಿ ಯೌಗಿಕ ಪರಿಭಾಷೆಗಳು ತುಂಬಿಕೊಂಡಿವೆ.  ಶರೀರವನ್ನೆ ತೋಟವನ್ನಾಗಿ ಮಾಡುವ ಒಂದು ಯೋಗವಿಧಾನ ಈ ವಚನದೊಳಗಣ ಕೃಷಿಯ ಚಿತ್ರದಲ್ಲಿ ಸ್ಪಷ್ಟವಾಗಿ ರೂಪುಗೊಂಡಿದೆ.  ಅನುಭಾವವೆಂದರೆ ಇದೇ.  ಇರುವ ಬದುಕನ್ನು ಮತ್ತೊಂದು ನೆಲೆಯ ಬದುಕನ್ನಾಗಿ ಪರಿವರ್ತಿಸುವ ಒಂದು ಕ್ರಿಯೆ.  ಇರುವುದನ್ನು ನಿರಾಕರಿಸದೆ, ಅದನ್ನು  ಒಪ್ಪಿಕೊಂಡು, ಅದನ್ನು ಬೇರೊಂದನ್ನಾಗಿ ಮಾಡುವ ಸಾಧನಾ ವಿಶೇಷವೇ ಯೋಗ.  ಅಲ್ಲಿ ಆಗ ಒಳಗಿನದು ಮತ್ತು ಹೊರಗಿನದು ಎನ್ನುವ ಭಾವ ಉಳಿಯುವುದಿಲ್ಲ.  ಮಾಡುವ ಮಾಟದ ಮೂಲಕವೆ ಮತ್ತೊಂದನ್ನು ಅರಿತುಕೊಳ್ಳುವ ಕ್ರಿಯೆ.  ವಚನಕಾರರಿಗೂ, ಸರ್ಪಭೂಷಣರಿಗೂ ನಡುವಣ ಕಾಲಮಾನದಲ್ಲಿ ಕಾಣಿಸಿಕೊಳ್ಳುವ ಶಿವಕವಿ ಹರಿಹರನೂ, ಇದೇ ಬಗೆಯ ಕೃಷಿಪ್ರತೀಕದ ಮೂಲಕ ಇಳೆಯಾಂಡಗುಡಿಮಾರನೆಂಬ ಶಿವಭಕ್ತನ ಗೆಯ್ಮೆಯನ್ನು ಚಿತ್ರಿಸಿರುವ ಕ್ರಮ ವಿಶೇಷ ರೀತಿಯದಾಗಿದೆ.  ಕನ್ನಡ ಸಾಹಿತ್ಯದಲ್ಲಿ ಮೊಟ್ಟ ಮೊದಲಬಾರಿಗೆ ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದ ವ್ಯಕ್ತಿಗಳನ್ನು ಕಥಾನಾಯಕರನ್ನಾಗಿ ಮಾಡಿಕೊಂಡು ಕಾವ್ಯವನ್ನು ಬರೆದವನು ಮಹಾಕವಿ ಹರಿಹರ.  ಈ ಶ್ರೀಸಾಮಾನ್ಯರು ತಮ್ಮ ಭಕ್ತಿಯ ಕಾರಣದಿಂದ ಅಸಾಮಾನ್ಯರಾಗಿ ಕಾಣುತ್ತಾರೆ.  ಅವರಲ್ಲಿ ಬಹುಮಂದಿ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡವರು.  ಒಬ್ಬ ಕುಂಬಾರ, ಒಬ್ಬ ಬೆಸ್ತ, ಒಬ್ಬ ಬೇಡ, ಒಬ್ಬ ಕೂಲಿಯವ, ಒಬ್ಬ ಒಕ್ಕಲಿಗ – ಹೀಗೆ.  ಅವರಲ್ಲಿ ಇಳೆಯಾಂಡ ಗುಡಿಮಾರ ಒಬ್ಬ ಒಕ್ಕಲಿಗ.  ಈತ ವ್ಯವಸಾಯ ಮಾಡುತ್ತಾ ಮಾಡುತ್ತಾ, ಅದು ಕೇವಲ ಬಹಿರಂಗದ ಹೊಲವನ್ನು ಉಳುವ ಕ್ರಿಯೆ ಮಾತ್ರವಾಗದೆ, ಏಕ ಕಾಲಕ್ಕೆ ಅಂತರಂಗವನ್ನು ಹಸನುಗೊಳಿಸುವ ಕ್ರಿಯೆಯೂ ಆಗಿತ್ತೆಂಬುದನ್ನು ಕವಿ ಹರಿಹರ ಅತ್ಯಂತ ಸಂಭ್ರಮದಿಂದ ಹೀಗೆ ವರ್ಣಿಸುತ್ತಾನೆ –

ಸಮಚಿತ್ತವೆಂಬ ಭೂಮಿಯನ್ನು ಹಸನಾಗಿರಿಸಿ
ಅಮರ್ದ ಶಂಕರನ ನೆನಹೆಂಬ ನೇಗಿಲನಿರಿಸಿ
ಅರಿಷಟ್ಕಮಂ ತಂದು ಹೂಡುವೆತ್ತಂ ಮಾಡಿ
ಹರಿವ ಮನಮಂ ಕಟ್ಟಿ ಹಿಡಿವ ಹಗ್ಗಂ ಮಾಡಿ
ಗರ್ವಿಪ್ಪಹಂಕಾರಮುಮನುನಚ್ಚುವಂ ಮಾಡಿ
ಸರ್ವೇಶ ನಿಷ್ಠೆಯಂ ತಳಿವ ಬೀಜಂ ಮಾಡಿ
ಸುರುಚಿರ ಶಿವಜ್ಞಾನ ಶಶಿಕರಂ ಸೋಂಕುತಿರೆ
ಹರನ ಪರಮಾನಂದ ಶಶಿಕರಂ ಸೋಂಕುತಿರೆ
ಹರನ ಪರಮಾನಂದ ರಸದ ಮಳೆ ಕೊಳುತಮಿರೆ
ಬಿತ್ತಿ ಬೆಳೆವಂ ಶಿವನ ಸದ್ಭಕ್ತಿ ಸಸಿಗಳಂ
ಕಿತ್ತು ಕಳೆವಂ ಕ್ಷುತ್ಪಿಪಾಸಾದಿ ಕಳೆಗಳಂ

ಹೀಗೆ ಅವನ ವ್ಯವಸಾಯದ ವರ್ಣನೆಯನ್ನು ಮಾಡಿದ ಹರಿಹರ ಈ ವ್ಯವಸಾಯದ ಸ್ವರೂಪವನ್ನು –

ಇಂತು ತನ್ನೊಳಗೆ ಭಕ್ತ್ಯಾರಂಭವಂ ಮಾಳ್ಪ
ಅಂತೆಲ್ಲರರಿಯೆ ಪೊರಗಾರಂಭಂವಂ ಮಾಳ್ಪ

ಎಂದು ವರ್ಣಿಸುತ್ತಾನೆ.  ಅಂದರೆ  ಇಳೆಯಾಂಡ ಗುಡಿಮಾರ ಹೊರಗೆ ಎಲ್ಲರಿಗೂ ಕಾಣುವಂತೆ, ‘ಆರಂಭ’ ಅಥವಾ ನೆಲ ಉಳುವ ಕೆಲಸವನ್ನು ಮಾಡುತ್ತಿದ್ದರೂ, ವಾಸ್ತವವಾಗಿ ಅದು ಅವನ ಅಂತರಂಗದ ಸಾಧಕ ಜೀವನದ, ಒಂದು ಬಹಿರಂಗ ರೂಪ ಮಾತ್ರವಾಗಿತ್ತು.  ಯಾವ ಬದುಕಿನಲ್ಲಿ ವೃತ್ತಿ ಹಾಗೂ ಪ್ರವೃತ್ತಿಗಳೆರಡೂ ಭಗವತ್ಪರವಾದ ಒಂದೇ ಉದ್ದೇಶಕ್ಕಾಗಿ ಅವಿನಾಭಾವದಲ್ಲಿ ತೊಡಗಿ ಕೊಳ್ಳುತ್ತವೆಯೋ, ಅದೇ ನಿಜವಾದ ಶರಣ ಜೀವನ ಎಂಬುದನ್ನು ಹರಿಹರನು ಈ ವರ್ಣನೆಯ ಮೂಲಕ ಸೂಚಿಸುತ್ತಾನೆ.  ಸರ್ಪಭೂಷಣ ಶಿವಯೋಗಿಗಳ ‘ಶರೀರವೆಂತೆಂಬುವ ಹೊಲನ ಹಸನ ಮಾಡಿ ಪರತತ್ವ ಬೆಳೆಯ ನೀವ್ ಬೆಳೆದುಣ್ಣಿರೋ’ ಎಂಬ ತತ್ವಪದವೊಂದು, ಯಾವ ಒಂದು ಭಕ್ತಿ ಹಾಗೂ ಆನುಭಾವಿಕ ಪರಂಪರೆಯೊಳಗಿನಿಂದ ಹುಟ್ಟಿಕೊಂಡಿದ್ದೆಂಬುದನ್ನು, ಈ ಎಲ್ಲ ಹಿನ್ನೆಲೆಯೂ ಸ್ಪಷ್ಟಪಡಿಸುತ್ತದೆ.  ಹಾಗೆ ನೋಡಿದರೆ ‘ಏಕಂಸತ್ ವಿಪ್ರಾಃ ಬಹುಧಾ ವದಂತಿ’, ಸತ್ಯ ಒಂದೇ, ತಿಳಿದವರು ಅದನ್ನು ಬೇರೆಬೇರೆಯಾಗಿ ವ್ಯಾಖ್ಯಾನಿಸುತ್ತಾರೆ.  ಯಾವ ಒಂದು ಆಧ್ಯಾತ್ಮಿಕ ಪರಂಪರೆ ಈ ದೇಶದಲ್ಲಿ ವೇದೋಪನಿಷತ್ತುಗಳ ಕಾಲದಿಂದ, ಈ ಹೊತ್ತಿನವರೆಗೂ ನಿರಂತರವಾಗಿ ಹರಿದುಕೊಂಡು ಬಂದಿದೆಯೋ, ಅದನ್ನೆ ಕಾಲದಿಂದ ಕಾಲಕ್ಕೆ ಸಾಕ್ಷಾತ್ಕರಿಸಿಕೊಂಡ, ಭಕ್ತರೂ ಹಾಗೂ ಅನುಭಾವಿಗಳೂ, ತಮ್ಮ ತಮ್ಮ ಅಭಿವ್ಯಕ್ತಿಗಳಲ್ಲಿ ಅದನ್ನು ಪ್ರಕಟಪಡಿಸಲು ಪ್ರಯತ್ನಿಸಿರುವುದರಿಂದಲೇ, ಕೆಲವು ಪ್ರತೀಕಗಳು ಮತ್ತೆ ಮತ್ತೆ ಪುನರಾವರ್ತನಗೊಳ್ಳುತ್ತಲೇ ಬಂದಿವೆ.  ಅವುಗಳಲ್ಲಿ ಶರೀರವನ್ನು ಹೊಲಕ್ಕೆ ಅಥವಾ ತೋಟಕ್ಕೆ ಹೋಲಿಸುವ ದೃಷ್ಟಾಂತವೂ ಒಂದು.  ಮುಖ್ಯವಾಗಿ ಇದು ಭಕ್ತಿ ಪಂಥದವರಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದೆ.  ಈ ಯುಗದ ಸಂತ ಶ್ರೇಷ್ಠರಾದ ಶ್ರೀರಾಮಕೃಷ್ಣಪರಮಹಂಸರು ತಮ್ಮ ಭಕ್ತರೊಡನೆ ಮಾತುಕತೆಯಾಡುವ ಹೊತ್ತಿನಲ್ಲಿ ಇದೇ ಸುಪರಿಚಿತವಾದ ವ್ಯವಸಾಯಗಾರರ ದೃಷ್ಟಾಂತಗಳನ್ನು, ಸಾಧಕನಾದವನ ಮನೋಧರ್ಮವನ್ನು ಸೂಚಿಸಲು ಪ್ರಸ್ತಾಪಮಾಡುತ್ತಾರೆ.  ಅವರು ತಮ್ಮ ಉಪದೇಶದ ನಡುವೆ ಹಾಡುತ್ತಿದ್ದ ರಾಮಪ್ರಸಾದನೆಂಬ ಬಂಗಾಳಿ ಭಕ್ತ ಕವಿಯೊಬ್ಬನ ರಚನೆ ಹೀಗಿದೆ-

ನಿನ್ನ ಬಾಳಿನ ಹೊಲವು ಪಾಳು ಬಿದ್ದಿಹುದಲ್ಲೊ
ಕೃಷಿಗೈಯಲೂ ಕೂಡ ತಿಳಿಯದಿರುವೆ
ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ
ಕೆಲವು ದಿನ ಮೈ ಮುರಿದು ದುಡಿದಿದ್ದರೆ.

ಈಗಲಾದರು ತಾಯ ಶ್ರೀನಾಮವೆಂತೆಂಬ
ಬೇಲಿಯನು ಕಟ್ಟಿ ನೀ ಕಾಯ್ದುಕೊಳ್ಳೋ
ಅದಕಿಂತ ಬಲವಾದ ಕಾವಲಿನ್ನಾವುದಿದೆ
ಮೃತ್ಯುವೂ ನಿನ್ನ ಬಳಿ ಬರಲಾರನೊ

ಗುರುವಿತ್ತ ಮಂತ್ರವನು ಬೀಜವಾಗಿಸಿ ಬಿತ್ತಿ
ಪ್ರೇಮವಾರಿಯ ಹೊಯ್ದು ಹಸನುಗೊಳಿಸೋ
ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು
ರಾಮ ಪ್ರಸಾದನಿದೊ ನೆರವಿಗಿಹನೊ.

ಆಶ್ಚರ್ಯದ ಸಂಗತಿ ಎಂದರೆ, ಶರೀರವನ್ನು ಅಥವಾ ತಮಗೆ ದತ್ತವಾದ ಇಹಲೋಕದ ಬದುಕನ್ನು ಒಂದು ಹೊಲವೆಂದು ಭಾವಿಸುತ್ತ, ಆ ಮೂಲಕ ‘ಪರತತ್ವ’ವೆಂಬ ಬೆಳೆಯನ್ನು ತೆಗೆಯಬೇಕೆಂಬ ಈ ಆಶಯ, ಕೃಷಿ ಪ್ರಧಾನವಾದ ನಮ್ಮ ಪರಿಸರದಿಂದಲೇ ಸಹಜವಾಗಿ ಮೂಡಿರುವಂಥದ್ದು.  ಭಾರತದ ಉದ್ದಗಲಕ್ಕೂ ವಿವಿಧ ಸಂತರ ವಾಣಿಗಳಲ್ಲಿ ಮತ್ತೆ ಮತ್ತೆ ಇದು ಪುನರುಕ್ತವಾಗಿದೆ.  ಚಿಕ್ಕಬಾಣಾವರದಂಥ ಗ್ರಾಮೀಣ ಪರಿಸರದಿಂದ ಬಂದ ಸರ್ಪಭೂಷಣ ಶಿವಯೋಗಿಗಳ ತತ್ವಪದದಲ್ಲಿ ಇದೇ ಆಶಯ ಅತ್ಯಂತ ಸರಳವೂ ಸುಂದರವೂ ಆದ ರೀತಿಯಲ್ಲಿ ಅಭಿವ್ಯಕ್ತವಾಗಿರುವುದು ಆಶ್ಚರ್ಯದ ಸಂಗತಿಯೇನಲ್ಲ.