ಯಾವುದನ್ನು ವೀರಶೈವ ಸಾಹಿತ್ಯ ಎಂದು ಈ ಹೊತ್ತು ನಾವು ಕರೆಯುತ್ತೇವೆಯೋ, ಅದರ ವಸ್ತುವೈವಿಧ್ಯ, ಛಂದೋ ವೈವಿಧ್ಯ ಹಾಗೂ ರೂಪ ವೈವಿಧ್ಯಗಳು ಬೆರಗುಗೊಳಿಸುವಂತಿವೆ.  ಇಲ್ಲಿ ಶರಣರು ತಾವೇ ಬರೆದ ಸಾಹಿತ್ಯವಿದೆ; ಶರಣರನ್ನು ಕುರಿತು ಇತರ ಕವಿಗಳು ಬರೆದ ಸಾಹಿತ್ಯವಿದೆ.  ವಚನಗಳಿವೆ ; ಕಾವ್ಯಗಳಿವೆ;  ಪುರಾಣಗಳಿವೆ ; ಸಂಕಲನ ಗ್ರಂಥಗಳಿವೆ ; ವ್ಯಾಖ್ಯಾನಗಳಿವೆ.  ವ್ಯಕ್ತಿವಿಶಿಷ್ಟಾಭಿವ್ಯಕ್ತಿಯ ಭಾವಗೀತಾತ್ಮಕ ಧಾಟಿಯಿಂದ ಹಿಡಿದು ಪ್ರೌಢವಾದ ಮಾರ್ಗೀಯ ಕಾವ್ಯ ನಿರ್ಮಿತಿಗಳೂ ಇವೆ.  ತ್ರಿಪದಿ, ಷಟ್ಪದಿ, ಸಾಂಗತ್ಯ, ಅಷ್ಟಕ, ಶತಕ, ತಾರಾವಳಿ, ಕಾಲಜ್ಞಾನ, ರಗಳೆ, ಸ್ತೋತ್ರಗದ್ಯ, ಸ್ವರವಚನ ಅಥವಾ ತತ್ವಪದ – ಇತ್ಯಾದಿ ಪ್ರಕಾರಗಳಿವೆ.  ಇವುಗಳಲ್ಲಿ  ಸ್ವರವಚನ ಅಥವಾ ತತ್ವಪದಗಳು ಮೂಲತಃ ಹಾಡುಗಬ್ಬದ ಪರಂಪರೆಗೆ ಸೇರಿದವುಗಳು.  ನಾವು ಯಾವುದನ್ನು ತತ್ವಪದಗಳೆಂದು ಕರೆಯುತ್ತೇವೆಯೋ ಆ ಲಕ್ಷಣಗಳನ್ನೊಳಗೊಂಡ ಹಾಡುಗಬ್ಬಗಳನ್ನು ಮೊದಲು ಪ್ರಾರಂಭಿಸಿದವರು ಹದಿನೈದನೆಯ ಶತಮಾನದ ನಿಜಗುಣ ಶಿವಯೋಗಿಗಳು – ಎಂದು ಹೇಳಲಾಗಿದೆ.  ಸ್ವಾರಸ್ಯದ ಸಂಗತಿ ಎಂದರೆ, ಹಾಡುಗಬ್ಬಗಳ ಪರಂಪರೆಯನ್ನೆ ವಿಸ್ತರಿಸಿದ ಹರಿದಾಸರ ಕೀರ್ತನೆಗಳೂ ಹೆಚ್ಚು ಕಡಿಮೆ ಸಮಾನಾಂತರವಾಗಿ ಇದೇ ಕಾಲಮಾನದಲ್ಲಿಯೇ ಸಂಭವಿಸಿದಂತೆ ತೋರುತ್ತದೆ.  ಯಾಕೆಂದರೆ ಕೀರ್ತನ ಸಾಹಿತ್ಯವೆಂಬ ಪಂಥ, ಹದಿನೈದನೆಯ ಶತಮಾನದ ಶ್ರೀಪಾದರಾಯರಿಂದ ಮೊದಲಾಯಿತೆಂದು ಹೇಳಲಾಗಿದೆ.  ಹೀಗಾಗಿ ಒಂದೆಡೆ ವೀರಶೈವ ತತ್ವಪದಕಾರರ ರಚನೆಗಳೂ ಮತ್ತೊಂದೆಡೆ ಹರಿದಾಸರ ವೈಷ್ಣವಭಕ್ತಿ ಪರವಾದ ಕೀರ್ತನೆಗಳೂ ಅಂದಿನ ಕರ್ನಾಟಕದ ವಿಭಿನ್ನಪರಿಸರಗಳಲ್ಲಿ ಕಾಣಿಸಿಕೊಂಡಂತೆ ಭಾಸವಾಗುತ್ತದೆ.  ಈ ಎರಡೂ ಪ್ರಕಾರಗಳ ಸಮಾನ ಧೋರಣೆಯೆಂದರೆ, ಭಕ್ತಿಯ ಮೂಲಮಾನದಲ್ಲಿ, ಮುಖ್ಯವಾಗಿ ವೇದಾಂತವನ್ನು ಜನಸಮ್ಮುಖವನ್ನಾಗಿ ಮಾಡಿದ್ದು.  ವೇದೋಪನಿಷತ್ತುಗಳಿಗೆ ಸಮ್ಮತವೆಂದು ತೋರಿದ ಅದ್ವೈತವನ್ನೂ, ಷಟ್‌ಸ್ಥಲ ಸಿದ್ಧಾಂತವನ್ನೂ ಒಂದು ರೀತಿಯಲ್ಲಿ ಸಮನ್ವಯಗೊಳಿಸಿದ ವೀರಶೈವ ಸಂತ ಮತ್ತು ಕವಿ, ನಿಜಗುಣ ಶಿವಯೋಗಿಗಳು.  ನಿಜಗುಣರ ನಂತರ ಮುಂದಿನ ತತ್ವಪದಕಾರರ ನಿಲುವು ಹೆಚ್ಚು ದೇಶೀಯವಾಯಿತೆಂಬುದು, ಗುರುತಿಸಿಕೊಳ್ಳಬೇಕಾದ ಸಂಗತಿಯಾಗಿದೆ.

ನಿಜಗುಣರ ನಂತರದ ಕಾಲದಿಂದ ಸಂತ ಶಿಶುನಾಳ ಷರೀಫರ ಕಾಲದವರೆಗೂ, ಮುಪ್ಪಿನಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಬಾಲಲೀಲಾಮಹಾಂತಸ್ವಾಮಿ, ಕಡಕೋಳ ಮಡಿವಾಳೇಶ್ವರ ಇತ್ಯಾದಿಯವರ ಹಾಡುಗಳನ್ನು ತತ್ವಪದಗಳೆಂದು ಕರೆದದ್ದರ ಜತೆಗೆ, ಸ್ವರವಚನಗಳೆಂದೂ ಕರೆದಿರುವುದು ಕುತೂಹಲದ ಸಂಗತಿಯಾಗಿದೆ.  ‘ಸ್ವರವಚನ’ ಎಂಬ ನುಡಿಗಟ್ಟಿನಲ್ಲಿರುವ ‘ವಚನ’  ಎಂಬ ಪದ ಸಹಜವಾಗಿಯೇ, ಶಿವಶರಣರ ವಚನಗಳಿಗೂ ಇವುಗಳಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ.  ಹಾಗೆ ನೋಡಿದರೆ, ಯಾವುದನ್ನು ‘ತತ್ವಪದ’ ಎಂದು ನಾವು ನಿರ್ದೇಶಿಸುತ್ತೇವೆಯೋ ಅವುಗಳ ಮೂಲವನ್ನು ನಾವು ಹನ್ನೆರಡನೆಯ ಶತಮಾನದ ವಚನಕಾರರು ಬರೆದ ಹಾಡುಗಳಲ್ಲಿಯೆ ಗುರುತಿಸಬೇಕಾಗುತ್ತದೆ ಎನ್ನುತ್ತಾರೆ ವಿದ್ವಾಂಸರು.  ಮುಖ್ಯವಾಗಿ ಡಾ. ಎಲ್. ಬಸವರಾಜು ಅವರು ಸಂಪಾದಿಸಿ ಪ್ರಕಟಿಸಿರುವ ‘ಶಿವದಾಸ ಗೀತಾಂಜಲಿ’ ಎಂಬ ಹಾಡುಗಬ್ಬಗಳ ಸಂಗ್ರಹದ ಪೀಠಿಕೆಯಲ್ಲಿ ಈ ಕುರಿತ ವಿಶೇಷವಾದ ಚರ್ಚೆಯನ್ನು ಅಗತ್ಯವಾಗಿ ಗಮನಿಸಬೇಕಾಗಿದೆ.  ಈ ಪ್ರಸ್ತುತ ಸಂಕಲನದಲ್ಲಿ ಇಪ್ಪತ್ತೇಳು ಜನ ‘ಶಿವದಾಸ’ರ, ಒಂದು ನೂರಾ ಎಂಬತ್ತೆಂಟು ಹಾಡುಗಳಿವೆ.  ಇವುಗಳನ್ನು ಬಸವಣ್ಣನವರೂ ಮತ್ತು ಅವರ ಸಂಗಡಿಗರಾದ, ಅಲ್ಲಮ, ಚನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ, ಹಾವಿನಹಾಳ ಕಲ್ಲಯ್ಯ ಮೊದಲಾದವರು ಬರೆದರೆಂದೂ ಸಂಪಾದಕರು ಉಲ್ಲೇಖಿಸುತ್ತಾರೆ.  ಅಂದರೆ, ನಿಜಗುಣರಿಗಿಂತ ಮೊದಲು ಹಾಗೂ ಹರಿದಾಸರುಗಳಿಗಿಂತ ಹಿಂದೆ ಬಸವಾದಿ ಶಿವಶರಣರೂ, ವಚನ ನಿರ್ಮಿತಿಯ ಜತೆಜತೆಗೆ ಹಾಡುಗಳನ್ನೂ ಬರೆದಿದ್ದರು ಎಂದಂತಾಯಿತು.

ಹಾಗೆ ನೋಡಿದರೆ ಶಿವಶರಣರ ವಚನಗಳು ಗದ್ಯವೋ-ಪದ್ಯವೋ ಎನ್ನಿಸುವಂಥ ರೂಪದಲ್ಲಿ ಅಭಿವ್ಯಕ್ತವಾಗಿರುವುದರಿಂದ, ಅವುಗಳನ್ನು ಮಾತಾಡಿದಂತೆ ಓದಿಕೊಳ್ಳುವ ಹಾಗೂ ರಾಗ ಸಹಿತವಾಗಿ ಹಾಡಿಕೊಳ್ಳುವಂಥ ದ್ವಿವಿಧ  ಸಾಧ್ಯತೆಗೆ ಒಳಪಡುವ ಸೌಲಭ್ಯ ಅವುಗಳಿಗಿವೆ.  ಮತ್ತು ವಚನಗಳನ್ನು ಅಂದು ಹಾಡುತ್ತಿದ್ದರೆಂಬ ಉಲ್ಲೇಖಗಳೂ ಇವೆ.  ಹರಿಹರಕವಿ ತನ್ನ ಬಸವರಾಜದೇವರ ರಗಳೆಯಲ್ಲಿ, ಬಸವಣ್ಣನವರು ‘ಆಗಳಾಗಳಿನ ಸಂಗತಿ ಹೊಸ ಹೊಸ ಗೀತಮಂ ಕೇಳಿಸುತಿರ್ದ’ (೮-೬೨, ೬೩)ರೆಂದು ಹೇಳುತ್ತಾನೆ.  ಅಂದರೆ ಅವರ ವಚನಗಳು ‘ಆಗಳಾಗಳಿನ ಸಂಗತಿ’ಗಳನ್ನು ಅಭಿವ್ಯಕ್ತಿಸುತ್ತಿದ್ದ ವಿಧಾನಗಳಾಗಿದ್ದವು. ಎಂದರ್ಥ.  ಹರಿಹರ ತನ್ನ ಈ ಕೃತಿಯಲ್ಲಿ ‘ವಚನ’ ಎಂಬ ಮಾತನ್ನು ಬಳಸದೆ, ಬಸವಣ್ಣನವರ ಪ್ರತಿಕ್ರಿಯಾರೂಪದ ಅಭಿವ್ಯಕ್ತಿಗಳನ್ನು ‘ಗೀತ’ಗಳೆಂದೇ ಕರೆಯುತ್ತಾನೆ.  ಬಸವಣ್ಣನವರು ‘ಆನು ಒಲಿದಂತೆ ಹಾಡುವೆ’ ಎನ್ನುವ ಮಾತು ಸೂಚಿಸುವ ಅರ್ಥವೇ ಹರಿಹರನಿಗೆ ಪ್ರಧಾನವಾಗಿದೆ.  ಗೀತಗಳು ಬಸವಣ್ಣನವರ ಕಾಲದಲ್ಲಿಯೆ ‘ವಿಶಾಲವಸುಧಾಪೂತಂ’ – ಅಂದರೆ ಎಲ್ಲೆಲ್ಲೂ ಪ್ರಸಿದ್ಧಿಯನ್ನು ಪಡೆದಿದ್ದುವೆಂದು ವರ್ಣಿಸುತ್ತಾನೆ.  ವಚನಗಳೊಂದಿಗೆ, ಅವುಗಳನ್ನು ಹಾಡುತ್ತಿದ್ದರೆಂಬುದಕ್ಕೆ ಸಾಕಷ್ಟು ದಾಖಲೆಗಳಿವೆ.  ಹೀಗಾಗಿ ‘ಗೀತ’ – ಅಂದರೆ ಹಾಡಬಹುದಾದ ಲಕ್ಷಣವುಳ್ಳ, ವಚನಗಳೂ ಸಾಕಷ್ಟಿದ್ದಿರಬಹುದು.  ನಮ್ಮ ಸಮಕಾಲೀನತೆಯಲ್ಲಿಯೆ ಸುಪ್ರಸಿದ್ಧರಾದ ಸಂಗೀತಗಾರರು ತುಂಬ ಸೊಗಸಾಗಿ ವಿವಿಧ ಶೈಲಿಗಳಲ್ಲಿ ವಚನಗಳನ್ನು ಹಾಡುತ್ತಿದ್ದರು ಮತ್ತು ಹಾಡುತ್ತಾರೆ ಎನ್ನುವುದು ಚಿರಪರಿಚಿತವಾದ ಸಂಗತಿಯಾಗಿದೆ.  ಈ ವಚನಗಳನ್ನು ಹಾಡಲಿ, ಅಥವಾ ಹಾಡದೆ ಇರಲಿ, ಈ ವಚನ ವಾಙ್ಮಯದ ಜತೆಗೇ ಕೇವಲ ರಾಗ-ಲಯ- ತಾಳಾನುಸಾರಿಯಾಗಿ ಹಾಡಬಹುದಾದ ಹಾಡುಗಳನ್ನೂ ಬಸವಣ್ಣನವರೂ ಮತ್ತು ಅವರ ಸಮಕಾಲೀನರೂ ರಚಿಸಿದ್ದರೆಂದು ಡಾ. ಬಸವರಾಜು ಅವರು ಪ್ರತಿಪಾದಿಸುತ್ತ, ಗಣನೀಯ ಸಂಖ್ಯೆಯ ಹಾಡುಗಳನ್ನು ‘ಶಿವದಾಸ ಗೀತಾಂಜಲಿ’ಯ ಮೂಲಕ ಪರಿಚಯ ಮಾಡಿಕೊಟ್ಟಿರುವುದು ತುಂಬ ಅಭಿನಂದನೀಯವಾದ ಸಂಗತಿಯಾಗಿದೆ.  ಅವರ ಪ್ರಕಾರ, ಶರಣರು ಆಗಿಹೋದ ಎರಡೂವರೆ ಶತಮಾನಗಳ ಅನಂತರ, ಉತ್ತರ ಕರ್ನಾಟಕದ ಹುಲಿಗೆರೆಯ (ಲಕ್ಷ್ಮೇಶ್ವರ) ಮಹಲಿಂಗನೂ,  ದಕ್ಷಿಣ ಕರ್ನಾಟಕದಲ್ಲಿ ಗುಬ್ಬಿ ಮಲ್ಲಣಾರ್ಯನೂ ಏಕೋತ್ತರ ಸ್ಥಲಾನುಗುಣವಾಗಿ ಶರಣರ ವಚನಗಳನ್ನೂ, ಅವುಗಳ ಜತೆಯಲ್ಲಿ ನೂರೊಂದು ಹಾಡುಗಳನ್ನೂ ಸಂಗ್ರಹಿಸಿ ಅವೆರಡನ್ನೂ ವಿಂಗಡಿಸುವ ಕಾರ್ಯವನ್ನು ಕೈಕೊಂಡರು.  ಇದರಿಂದ ಹರಿದಾಸರಿಗಿಂತ ಹಿಂದೆ, ಶರಣರು ಹಾಡುಗಳನ್ನು ಬರೆದಿದ್ದರೆಂಬ ಚಾರಿತ್ರಿಕ ಸಂಗತಿ ಸ್ಪಷ್ಟವಾದಂತಾಯಿತು.  ಈ ಹಾಡುಗಳನ್ನು ಜಕ್ಕಣನ ‘ಏಕೋತ್ತರ ಶತಸ್ಥಲ’ದಲ್ಲಿ, ‘ಸ್ವರಪದ’ ‘ಸ್ವರವಚನ’ ಎಂದೂ ನಿರ್ದೇಶಿಸಲಾಗಿದೆ.  ‘ಸ್ವರವಚನ’ ‘ಸ್ವರಪದ’ ಎಂದರೆ ಸ್ವರ ಹಿಡಿದು ನಿರ್ದಿಷ್ಟವಾದೊಂದು ಧಾಟಿಯಲ್ಲಿ ಹಾಡುವ ಹಾಡುಗಳು.  ‘ವಚನ’ ಎಂದರೆ ಈಗ ನಾವು ಅರ್ಥಮಾಡಿಕೊಳ್ಳುವಂಥ ವಚನ ಸಾಹಿತ್ಯವೆಂಬ ಒಂದು ಪ್ರಕಾರವೆಂದು ಅರ್ಥವಾಗುವ ಸಂದರ್ಭ, ಅಂದೂ ಇದ್ದುದರಿಂದ, ವಚನಕಾರರು ಬರೆದ ಹಾಡುಗಳನ್ನು ಅವುಗಳಿಂದ ಬೇರ್ಪಡಿಸಿ ನೋಡಲು ‘ಸ್ವರವಚನ’  ‘ಸ್ವರಪದ’ ಎಂದು ಕರೆದಂತೆ ತೋರುತ್ತದೆ.  ಅನಂತರ ವೀರಶೈವರಂತೆ ವೀರಶೈವೇತರರೂ ಈ ಹಾಡುಗಳ ಪರಂಪರೆಯನ್ನು ಮುಂದುವರಿಸಿದಾಗ ಅವುಗಳ ಅಂತರ್ಲಕ್ಷಣಗಳನ್ನು ಅನುಲಕ್ಷಿಸಿ ಅವುಗಳನ್ನು ‘ತತ್ವಪದ’ಗಳೆಂಬ ಹಾಡುಗಳನ್ನು ಬಸವಣ್ಣನವರ ಕಾಲಕ್ಕಿಂತ ಹಿಂದಕ್ಕೆ ಒಯ್ಯಲು ಸಾಧ್ಯವಾಗಿಲ್ಲ.  ಯಾಕೆಂದರೆ ಈಗ ದೊರಕಿರುವ ಹಾಡುಗಳಲ್ಲಿ ಅತ್ಯಂತ ಪ್ರಾಚೀನವಾದುದೆಂದರೆ ಸಕಲೇಶ ಮಾದರಸನದು.

ಡಾ. ಬಸವರಾಜು ಅವರು ಸಂಪಾದಿಸಿ ಪ್ರಕಟಿಸಿರುವ ಹಾಡುಗಳು, ಪಲ್ಲವಿಯಿಂದ ಕೂಡಿ, ಬೇರೆ ಬೇರೆಯ ರಾಗಗಳಲ್ಲಿ ಹಾಡಲು ಅನುಕೂಲವಾದ ಗೇಯಗೀತಗಳು.  ಅವುಗಳನ್ನು ಬರೆದವರು ಬಸವಣ್ಣನವರೂ ಮತ್ತು ಅವರ ಸಂಗಡಿಗರು ಎಂದು ಕಾಣಿಸಲಾಗಿದೆ.  ಜತೆಗೆ ಇವುಗಳನ್ನು ‘ಶಿವದಾಸ ಗೀತಾಂಜಲಿ’ ಎಂದು ಹೆಸರಿಸಲಾಗಿದೆ.  ಅಷ್ಟೇ ಅಲ್ಲ ‘ಬಸವಾದಿ ಶಿವದಾಸರ ಈ ಗೀತ ಪ್ರಕಾರವು ಮುಂದಿನ ೧೫ನೆ ೧೬ನೇ ಶತಮಾನದ ಹರಿದಾಸರು ಯಾವ ಕೀರ್ತನ ಸಾಹಿತ್ಯವನ್ನು ನಿರ್ಮಿಸಿದರೋ ಅವುಗಳ ಮೂಲವೂ ಮಾದರಿಗಳೂ ಆಗಿದ್ದುವು’ ಎನ್ನುತ್ತಾರೆ ಸಂಪಾದಕರು.

ಇವು, ನಿಜಗುಣರ ಹಾಗೂ ಹರಿದಾಸರ ರಚನೆಗಳಿಗೆ ಮೂಲವೂ ಮಾದರಿಯೂ ಆಗಿರಬಹುದು.  ಆದರೆ ಈ ಹಾಡುಗಳನ್ನು ‘ಶಿವದಾಸ ಗೀತಾಂಜಲಿ’ ಎಂದು ಕರೆದದ್ದಾಗಲಿ, ಬಸವಾದಿಗಳನ್ನು ‘ಶಿವದಾಸ’ರು – ಎಂದು  ಹೆಸರಿಸಿದ್ದಾಗಲಿ ಎಷ್ಟು ಉಚಿತ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.  ವಚನಕಾರರನ್ನು ‘ಶಿವಶರಣ’ರೆಂದು ಕರೆಯುವುದು ಸಮರ್ಪಕವೂ ಸಹಜವೂ ಆಗಿದೆ; ಆದರೆ ಅವರನ್ನು ‘ಶಿವದಾಸ’ರೆಂದು ಕರೆದ ಉಲ್ಲೇಖ ನನ್ನ ಗಮನಕ್ಕಂತೂ ಬಂದಿಲ್ಲ.  ಇದನ್ನು ‘ಶಿವಶರಣ ಗೀತಾಂಜಲಿ’ ಎಂದು ಕರೆದಿದ್ದರೆ ಅದು ನ್ಯಾಯೋಚಿತ ಮಾತ್ರವಲ್ಲ, ಅರ್ಥಪೂರ್ಣವೂ ಆಗಬಹುದಾಗಿತ್ತು.  ಆದರೆ ಶಿವಶರಣರನ್ನು ‘ಶಿವದಾಸ’ರೆಂದು ಕರೆದು, ಅವರ ಹಾಡುಗಳಿಗೆ ‘ಶಿವದಾಸ ಗೀತಾಂಜಲಿ’ ಎಂದು ಶೀರ್ಷಿಕೆಯನ್ನು ಕೊಟ್ಟದ್ದು, ‘ಹರಿದಾಸ’ ಪರಂಪರೆಗೆ ಮಾನ್ಯ ಸಂಪಾದಕರು ತೋರಿದ ಪ್ರತಿಕ್ರಿಯೆ ಅಥವಾ ಅದರ ಅನುಕರಣ ಇರಬಹುದೆಂದು ತೋರುತ್ತದೆ.  ಯಾಕೆಂದರೆ ‘ಹರಿದಾಸ ಪರಂಪರೆ’ ಎಂಬ ಪರಿಕಲ್ಪನೆ ಈಗಾಗಲೆ ಪರಿಚಿತವಾಗಿರುವಂತೆ, ‘ಶಿವದಾಸ ಪರಂಪರೆ’ಯಾಗಲೀ, ‘ಹರದಾಸ ಪರಂಪರೆ’ಯಾಗಲೀ ಅಷ್ಟು ಬಳಕೆಯಲ್ಲಿರುವ ನುಡಿಗಟ್ಟುಗಳಲ್ಲ.

ಇನ್ನು ಎರಡನೆಯ ಮಾತೆಂದರೆ, ಇಲ್ಲಿರುವ ಹಾಡುಗಳನ್ನು ಬಸವಾದಿ ಶಿವಶರಣರು ಬರೆದರೆಂದರೆ ನಂಬುವುದೇ ಕಷ್ಟವೆನ್ನಿಸುವಷ್ಟು, ಬಂಧದ ಶೈಥಿಲ್ಯವೂ, ಭಾವತೀವ್ರತೆಯ ಅಭಾವವೂ ಈ ಹಾಡುಗಳಲ್ಲಿ ಎದ್ದುಕಾಣುವ ಲಕ್ಷಣಗಳಾಗಿವೆ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ.  ಸಾಮಾನ್ಯವಾಗಿ ಪದ್ಯರೂಪವು, ಅಭಿವ್ಯಕ್ತಿಯ ದೃಷ್ಟಿಯಿಂದ ಹೆಚ್ಚು ಭಾವತೀವ್ರತೆಯನ್ನೂ, ಭಾಷೆಯ ಹರಳುಗೊಳ್ಳುವ ಸ್ಥಿತಿಯನ್ನೂ ಒಳಗೊಳ್ಳುವಂಥದಾಗಿದೆ.  ಆದರೆ ಯಾವ ಬಸವ ಅಲ್ಲಮ ಅಕ್ಕ ಮಹಾದೇವಿಯಂಥ ಶರಣರು ತಮ್ಮ ವಚನಾಭಿವ್ಯಕ್ತಿಗಳಲ್ಲಿ ಸಾಧಿಸುವ ಕಾವ್ಮಾತ್ಮಕ ತೀವ್ರತೆ ಹಾಗೂ ವಿಶಿಷ್ಟ ಬಂಧಗಳನ್ನು, ಅವರೇ ಬರೆದರೆಂದು ಹೇಳಲಾದ ಹಾಡುಗಳಲ್ಲಿ ಯಾಕೆ ತರಲು ಸಾಧ್ಯವಾಗಲಿಲ್ಲ ಅನ್ನುವ ಪ್ರಶ್ನೆಗೆ, ಈ ಹಾಡುಗಳ ಸಂದರ್ಭದಲ್ಲಿ ಯಾವ ಉತ್ತರವೂ ದೊರೆಯುವುದಿಲ್ಲ.  ಅಥವಾ ಬಸವಾದಿ ಶರಣರು ಬರೆದ ಹಾಡುಗಳ ಗುಣಮಟ್ಟವೇ ಈ ರೀತಿಯದಾಗಿತ್ತೆಂದು ಭಾವಿಸಬೇಕಾಗುತ್ತದೇನೊ.  ಈ ಹಿನ್ನೆಲೆಯಿಂದ ಇಲ್ಲಿನ ಬಹುತೇಕ ಹಾಡುಗಳನ್ನು ನೋಡಿದರೆ, ಬೇರೆ ಯಾರೋ, ಅಲ್ಲಮ, ಬಸವ, ಅಕ್ಕಮಹಾದೇವಿ ಇಂಥ ಶರಣರ ವಚನಗಳನ್ನು ಹಾಡುಗಳ ರೂಪಕ್ಕೆ ತಿರುಗಿಸಿರಬಹುದೇ ಎಂದು ಶಂಕಿಸಲು ಅವಕಾಶವಿದೆ.  ಹಾಗೆ ತಿರುಗಿಸುವವರಿಗೆ, ವಚನಕಾರರ ಅನಂತರ ಪ್ರಚಲಿತವಾದ ವಿವಿಧ ದೇಶೀಯ ಛಂದೋರೂಪಗಳೂ ಅನುಕೂಲಕರವಾಗಿ ಒದಗಿ ಬಂದಿರಬಹುದೆಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.  ಆದರೆ ಈ ಹಾಡುಗಳು ಖಂಡಿತವಾಗಿಯೂ ನಿಜಗುಣರಿಗಿಂತ ಹಾಗೂ ಹರಿದಾಸರಿಗಿಂತ ಪ್ರಾಚೀನವೆನ್ನುವ ಸಂಗತಿಯನ್ನು ಒಪ್ಪಬಹುದು.  ಯಾಕೆಂದರೆ ಹದಿನಾಲ್ಕನೆಯ ಶತಮಾನದ ಮಹಲಿಂಗನು ಮೊಟ್ಟಮೊದಲಿಗೆ ಏಕೋತ್ತರ ಸ್ಥಲದಲ್ಲಿ ಶರಣರ ವಚನಗಳ ಜತೆಯಲ್ಲಿ ಅವರ ನೂರೊಂದು ಹಾಡುಗಳನ್ನೂ ಸಂಗ್ರಹಿಸಿ ಕೊಟ್ಟನೆಂಬುದು, ಈ ಹಾಡುಗಳ ಪ್ರಾಚೀನತೆಗೆ ಸಾಕ್ಷಿಯಾಗಿದೆ.  ಈ ಸಂಗತಿ ಚಾರಿತ್ರಿಕವಾಗಿ ಮೌಲಿಕವಾದ ಸಂಶೋಧನೆ ಕೂಡಾ ಹೌದು.  ಜತೆಗೆ ಈ ಹಾಡುಗಳ ರಚನಾವಿಧಾನ, ಅವುಗಳನ್ನು ಹಾಡಲು ಸೂಚಿತವಾಗಿರುವ ವಿವಿಧ ರಾಗಗಳ ನಿರ್ದೇಶನ ಮತ್ತು ಆ ಹಾಡುಗಳ ಒಳಗಿನ ಅಧ್ಯಾತ್ಮಪರವಾದ ಅರ್ಥ ಇತ್ಯಾದಿಗಳು, ಮುಂದಿನ ತತ್ವಪದ ಅಥವಾ ಸ್ವರವಚನಗಳಿಗೆ ಮೂಲಮಾದರಿಯನ್ನು ಒದಗಿಸಿವೆ ಎನ್ನುವುದು ಮುಖ್ಯವಾದ ಸಂಗತಿಯಾಗಿದೆ.  ಆದರೆ ಈ ಹಾಡುಗಳು – ಅವುಗಳಲ್ಲಿ ನಿಜವಾಗಿಯೂ ಚೆನ್ನಾಗಿರುವ ಕೆಲವನ್ನು ಹೊರತುಪಡಿಸಿದರೆ – ಬಹುಮಟ್ಟಿಗೆ, ಈಗಾಗಲೇ ನಾವು ಗಮನಿಸಿರುವಂತೆ, ಅಂಥ ಕಾವ್ಯಾತ್ಮಕತೆಯನ್ನಾಗಲೀ, ಭಾವತೀವ್ರತೆಯನ್ನಾಗಲೀ, ತತ್ವಾರ್ಥ ಸಂಪನ್ನತೆಯನ್ನಾಗಲೀ ಒಳಗೊಳ್ಳದಿರುವ ಕಾರಣದಿಂದ, ಅವು ಅಷ್ಟೊಂದು ಜನಪ್ರಿಯವಾದಂತೆ ತೋರುವುದಿಲ್ಲ.  ಅದರ ಬದಲು ಮುಂದೆ ನಿಜಗುಣ ಶಿವಯೋಗಿಗಳಿಂದ ಪ್ರಾರಂಭವಾದ ತತ್ವಪದಗಳ ಪ್ರೇರಣೆ ಒಂದು ಹೊಸ ದಾರಿಯನ್ನು ತೆರೆದು ಕನ್ನಡದಲ್ಲಿ ತತ್ವ ಪದಗಳ ಸಮೃದ್ಧಿಗೆ ಕಾರಣವಾಯಿತು.  ಆ ಪರಂಪರೆಯಲ್ಲಿ ಸರ್ಪಭೂಷಣ ಶಿವಯೋಗಿಗಳ ‘ಕೈವಲ್ಯ ಕಲ್ಪವಲ್ಲರಿ’ ಒಂದು ವಿಶಿಷ್ಟವಾದ ಕೃತಿಯಾಗಿದೆ.