ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆವೆ ಮೇಲು
ಮೇಟಿಯಿಂ ರಾಟಿ ನಡೆದುದಲ್ಲವೆ ದೇಶ
ದಾಡವೇ ಕೆಡಗು ಸರ್ವಜ್ಞ |

ಎಂದು ರಾಗವಾಗಿ ಸಂಗಣ್ಣಜ್ಜ ಹಾಡಿಕೊಳ್ಳುತ್ತಿದ್ದನು. ಎದುರು ಕುಳಿತ ಆತನ ಮೊಮ್ಮಕ್ಕಳಿಗೆ ಕುತೂಹಲ. ಅಜ್ಜ ಧ್ವನಿ ತೆಗೆದು ಕೈಮಾಡಿ ಹಾಡುತ್ತಿರುವುದನ್ನು ಎಲ್ಲರೂ ಕೇಳುತ್ತಲಿದ್ದರು. ಆಗ ಹೊಲದ್ದಲ್ಲಿ ಜೋಳದ ರಾಶಿ ನಡೆದಿತ್ತು. ಸಂಗಣ್ಣ ಕಣದ ಬದಿಗೆ ಹಾಸಿದ ಕಂಬಳಿಯ ಮೇಲೆ ಕುಳಿತು ಹಾಡು ಹೇಳುತ್ತಲಿದ್ದನು. ಸಂಗಣ್ಣನ ಆ ಮೊಮ್ಮಕ್ಕಳು ಎರಡನೇ ವರ್ಗದಿಂದ ಏಳನೇ ವರ್ಗದಲ್ಲಿ ಕಲಿಯುತ್ತಲಿದ್ದರು. ಸಂಗಣ್ಣಜ್ಜನೂ ಈ ಹಿಂದೆ ಶಿಕ್ಷಕನಾಗಿದ್ದವನು. ಈಗ ಸೇವೆಯಿಂದ ನಿವೃತ್ತನಾಗಿ ವಿರಾಮ ಪಡೆಯುತ್ತಿದ್ದಾನೆ. ಸರ್ವಜ್ಞನ ಬಗೆಗೆ ಆಳವಾಗಿ ಅಭ್ಯಾಸ ಮಾಡಿದವನು. ಸರ್ವಜ್ಞನ ಬಗೆಗೆ ಆಳವಾಗಿ ಅಭ್ಯಾಸ ಮಾಡಿದವನು. ಸರ್ವಜ್ಞ ಕವಿಯ ಎಲ್ಲ ವಚನಗಳೂ ಆತನಿಗೆ ಮಖಪಾಠ.

ಆ ದಿನ ರವಿವಾರ. ಶಾಲೆಗೆ ಬಿಡುವು. ತನ್ನ ಎಲ್ಲ ಮೊಮ್ಮಕ್ಕಳನ್ನು ಸಂಗಣ್ಣ ಹೊಲಕ್ಕೆ ಕರೆತಂದಿದ್ದನು. ಕಣದಲ್ಲಿಯ ಕೆಲಸ ಕಂಡು ಸರ್ವಜ್ಞ ವಚನ ನೆನಪಾಗಿ ಹೇಳಿದ್ದನು.

“ಅಜ್ಜಾ, ಇದು ಸರ್ವಜ್ಞ ಕವಿಯ ವಚನ ಅಲ್ಲವೇ?” ಎಂದು ಏಳನೇ ವರ್ಗದ ಶೇಖರ ಕೇಳಿದನು. “ಹೌದು, ಇದು ಸರ್ವಜ್ಞ ಕವಿ ಬೇಸಾಯದ ಹೆಚ್ಚಳದ ಬಗ್ಗೆ ಹೇಳಿದ್ದು”.

“ಅಜ್ಜಾ, ಇದು ನಮ್ಮ ಪುಸ್ತಕದಲ್ಲಿದೆ. ಇದರ ಅರ್ಥವೇನು?” ಐದನೇ ವರ್ಗದ ಶಾಂತೇಶ ಕೇಳಿದನು.

“ಓ, ನಾನು ಅದನ್ನೇ ಕೇಳಬೇಕೆಂದಿದ್ದೆ. ಎಲ್ಲಾ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಎಂದರೆ, ಈ ಒಕ್ಕಲುತನ ಹೆಚ್ಚಿನದು. ಈಗ ಕಣದ ನಡುವೆ ಒಂದು ಟಿಸಿಲಾದ ಕಟ್ಟಿಗೆ ನಿಲ್ಲಿಸಿದ್ದಾರೆ ನೋಡಿರಿ. ತೆನೆ ತುಳಿಸಲು ಅದಕ್ಕೆ ಎತ್ತು ಕಟ್ಟಿ ಸುತ್ತು ಹಾಕಿಸುವರು. ಅದೇ ಮೇಟಿ ಕಟ್ಟಿಗೆ. ಬೇಸಾಯದಿಂದ ಎಲ್ಲ ಕಾರ್ಯ ಸಾಗುವುವು. ಬದುಕಲು ಮನುಷ್ಯನಿಗೆ ಮೊದಲು ಅನ್ನಬೇಕು. ಬೇಸಾಯ ಸರಿಯಾಗಿ ಸಾಗದಿದ್ದರೆ ಜನಕ್ಕೆ ಹೊಟ್ಟೆಗಿಲ್ಲ, ಗತಿ ಏನು? ಬೆಳೆ ಚೆನ್ನಾಗಿ ಆದರೆ ದೇಶ ಮುಂದೆ ಬರುತ್ತದೆ.”

“ಅಜ್ಜಾ, ನಮ್ಮ ಪಠ್ಯ ಪುಸ್ತಕದಲ್ಲಿಯೂ ಸರ್ವಜ್ಞನ ವಚನಗಳಿವೆ. ಸರ್ವಜ್ಞ ಅಂದರೆ ಯಾರು?”. ಸರ್ವಜ್ಞನ ಬಗ್ಗೆ ಇನ್ನೂ ತಿಳಿಯಲು ಕುತೂಹಲಗೊಂಡ ಶೇಖರ ಅಜ್ಜನನ್ನು ಕೇಳಿದನು.

“ಸರ್ವಜ್ಞನ ವಿಷಯ ಕನ್ನಡದ ಹುಡುಗರು ತಿಳಿದುಕೊಳ್ಳಬೇಕಪ್ಪ. ಎಲ್ಲ ಬಲ್ಲಿ, ಇಲ್ಲಿ ಕುಳಿತುಕೊಳ್ಳಿ, ಹೇಳುತ್ತೇನೆ.”

ಅಜ್ಜ ಪ್ರಾರಂಭಿಸಿದ.

ಸರ್ವಜ್ಞ ಕವಿಯ ಕಥೆ

“ಒಂದು ಕಡೆಗೆ ಸರ್ವಜ್ಞನೇ ಹೇಳುತ್ತಾನೆ:

ಸರ್ವಜ್ಞನೆಂಬುವನು ಗರ್ವದಿಂದಾದವನೆ
ಸರ್ವರೊಳೊಂದೊಂದು
ನುಡಿಗಲಿತು ವಿದ್ಯವ
ಪರ್ವತವೇ
ಆದ ಸರ್ವಜ್ಞ!

“ಅಂದರೆ, ಸರ್ವಜ್ಞ ಕವಿ ಲೋಕವ್ಯವಹಾರವನ್ನೆಲ್ಲ ಅರಿತು, ಆತ ಕನ್ನಡದ ಒಬ್ಬ ಬಹು ಶ್ರೇಷ್ಠ ಕವಿಯಾಗಬೇಕಾದರೆ ಕೇವಲ ಅಭಿಮಾನಪಟ್ಟು ಆಗಿಲ್ಲ. “ಕೆಲವಂ ಬಲ್ಲವರಿಂದ ಕಲ್ತು….. ಕೆಲವಂ ಮಾಳ್ಪವರಿಂದ ನೋಡುತಂ….” ಎಂದು ಸೋಮೇಶ್ವರ ಕವಿ ಹೇಳಿದಂತೆ, ಎಲ್ಲರೊಳಗೆ ಒಂದೊಂದು ಮಾತು, ಕೃತಿ ಕಲಿತು ಆತ ನಿಜವಾಗಿಯೂ ಮಹಾ ಪರ್ವತದಷ್ಟು ವಿದ್ಯೆ ಸಂಪಾದಿಸಿ ಜ್ಞಾನಿಯಾಗಿದ್ದಾನೆ.”

“ಸರ್ವಜ್ಞ ಎಂಬುದು ಆತನ ಹೆಸರೇ?”

“ಆತನ ನಿಜವಾದ ಹೆಸರು ತಿಳಿದುಬಂದಿಲ್ಲ. “ವರರುಚಿ” ಇಲ್ಲವೆ “ಪುಷ್ಪದತ್ತ” ಇದ್ದರಬೇಕೆಂದು ಕೆಲವರು ಊಹಿಸುತ್ತಾರೆ. ಈ ಕವಿಯು ಬಹಳ ಬುದ್ಧಿವಂತನಾದ್ದರಿಂದ ಜನರೇ ಅವನನ್ನು “ಸರ್ವಜ್ಞ” ಅಂತ ಕರೆದರು ಎಂದು ಹಲವರು ಹೇಳುತ್ತಾರೆ. ಅವನೇ ಸರ್ವಜ್ಞ ಅಂತ ಕಾವ್ಯನಾಮ ಇಟ್ಟುಕೊಂಡಿರಬಹುದು. ಸರ್ವಜ್ಞ ಎಂದರೆ ಎಲ್ಲವನ್ನೂ ಬಲ್ಲವ ಎಂದರ್ಥ. ಹೀಗಾಗಿ ಈ ಕವಿ ತನ್ನ ಕಾಲದಲ್ಲಿನ ಸಮಾಜದ ಎಲ್ಲ ಒಳಿತು ಕೆಡುಕುಗಳನ್ನು ಸಂಪೂರ್ಣವಾಗಿ ತಿಳಿದು, ಒಳಿತಾಗಿದ್ದರೆ ಅದನ್ನು ಹೊಗಳಿ, ಕೆಡುಕಿದ್ದರೆ ಅದನ್ನು ತೆಗಳಿ ಹೇಳಿದ್ದಾನೆ.”

“ಈತ ಯಾವ ಕಾಲದಲ್ಲಿ ಇದ್ದ, ಅಜ್ಜ?”

“ಅದೇ ಇನ್ನೂ ಖಚಿತವಾಗಿ ತಿಳಿದಿಲ್ಲ. ಸರ್ವಜ್ಞನ ಕಾಲ ೧೬೦೦ ಕ್ಕಿಂತ ಹಿಂದೆ ಇದ್ದಿರಬೇಕು ಅಂತ ಕೆಲವರು ವಿದ್ವಾಂಸರು ಹೇಳುತ್ತಾರೆ. ಹಲವರು ಈತ ತೆಲುಗು ಕವಿ ವೇಮನನ ಕಾಲದವನು ಅಂತ ಹೇಳ್ತಾರೆ. ವೇಮನ ಇದ್ದುದ್ದು ಸುಮಾರು ೧೪೫೦ರಲ್ಲಿ. ಸರ್ವಜ್ಞ ಮತ್ತು ವೇಮನ ಕವಿಯ ವಚನಗಳಲ್ಲಿ ಕೆಲ ಸಾಮ್ಯಗಳಿವೆ. ಇದೇ ಆಧಾರದಿಂದ ಹೀಗೆ ಹೇಳುತ್ತಿರಬಹುದು. ಸರ್ವಜ್ಞ ೧೩೦೦ ರಿಂದ ೧೫೦೦ ರ ಮಧ್ಯದಲ್ಲಿ ಇದ್ದ ಅಂತ ಅನ್ನಬಹುದು. ಆದರೆ ಸರ್ವಜ್ಞನ ಕೆಲ ವಚನಗಳಲ್ಲಿ ಶ್ರೀರಂಗಪಟ್ಟದ ಪತನ, ಉಗಿಬಂಡಿ, ತಾರುತಂತಿ ಇಂಥ ಮಾತುಗಳು ಸೇರಿಕೊಂಡಿವೆ. ಇತ್ತೀಚೆಗೆ ಬರೆದು ಕೆಲವರು ಸರ್ವಜ್ಞನ ಅಂಕಿತ ಹಾಕಿದ್ದಾರೆ. ಇಂಥ ಎಷ್ಟೋ ಬೇರೆ ವಚನಗಳು ಹೊಸದಾಗಿ ಸೇರಿಕೊಂಡಿವೆ.”

“ಸರ್ವಜ್ಞನ ಊರು ಯಾವುದು ತಾತ? ಆತನ ತಂದೆ ತಾಯಿ ಯಾರು?”

ಅಜ್ಜನ ಉತ್ತರ ದೊಡ್ಡದಾಗಬೇಕಾಯಿತು.

“ಅಂಬಲರೊಳಗೆಸೆವ ಕುಂಬಾರಸಾಲೆಯಲ್ಲಿ ಹುಟ್ಟಿದೆ ಅಂತ ಸರ್ವಜ್ಞ ಒಂದು ವಚನದಲ್ಲಿ ಹೇಳುತ್ತಾನೆ. ಈ ಅಂಬಲೂರನ್ನು ಅಬ್ಬಲೂರು, ಅಂಬಲಾಪುರ ಅಂತಲೂ ಕರೀತಾರೆ. ಅದು ಧಾರವಾಡ ಜಲ್ಲೆಯ ಹಿರೇಕೆರೂರಿಗೆ ಹತ್ತಿರವಿದ್ದ ಒಂದು ಗ್ರಾಮ. ಕೆಲವರು ಸರ್ವಜ್ಞ ಹುಟ್ಟಿದ್ದು ಮಾಸೂರು ಎಂದು ಹೇಳುತ್ತಾರೆ. ಆದರೆ ಮಾಸೂರು ಸರ್ವಜ್ಞನ ತಂದೆಯ ಊರು. ಮಾಸೂರಿಗೂ ಅಂಬಲೂರಿಗೂ ಸುಮಾರು ೬ ಮೈಲಿ ಅಂತರವಿದೆ.

ಸರ್ವಜ್ಞನ ತಂದೆ ಬಸವರಸ. ತಾಯಿ ಕುಂಬಾರ ಮಾಳಿ. “ಹೆತ್ತವಳಿ ಮಾಳಿ…” ಅಂತ ಒಂದು ವಚನದಲ್ಲಿ ಈತನೇ ಹೇಳಿಕೊಂಡಿದ್ದಾನೆ. ಈತನ ಹುಟ್ಟಿನ ಬಗ್ಗೆ ವಚನಗಳಲ್ಲಿ ಒಂದಿಷ್ಟು ವಿಷಯ ತಿಳಿಯುತ್ತದೆ. ಜನ ಆಡೋ ಸಂಗತಿಗಳು ಕೆಲವು.

ಮಾಸೂರು ಗ್ರಾಮದಲ್ಲಿ ಬಸವರಸ ಅಂತ ಒಬ್ಬಾತ ಇದ್ದ. ಅವನ ಇನ್ನೊಂದು ಹೆಸರು ಮಲ್ಲರಸ. ಆತನಿಗೆ ಮಲ್ಲಮ್ಮ ಅಂತ ಹೆಂಡತಿ. ಅವನಿಗೆ ಸರಿಯಾದ ಸದ್ಗುಣಿ ಹೆಂಡತಿ. ಇಬ್ಬರೂ ಸುಖವಾಗಿದ್ದುಕೊಂಡು ಭಕ್ತಿಯಿಂದ ಇಷ್ಟ ದೇವತೆಗಳನ್ನು ಆರಾಧಿಸುತ್ತಿದ್ದರು. ಆದರೆ ಅವರಿಗೆ ಮಕ್ಕಳಿರಲಿಲ್ಲ. ಇದೇ ಮಲ್ಲಮ್ಮನಿಗೆ ಚಿಂತೆ. ದಿನಿತ್ಯ ಮಕ್ಕಳ ಹಂಬಲದಿಂದ ದುಃಖಿಸುತ್ತಿದ್ದಳು. ಮಕ್ಕಳನ್ನು ಬಯಸಿ ದೇವರನ್ನು ಎಷ್ಟು ಬೆಯಿಂದ ಪೂಜಿಸಿದರೂ ಯಾವ ಪ್ರಯೋಜವೂ ಆಗಲಿಲ್ಲ. ಕಾಶಿ ವಿಶ್ವೇಶ್ವರನನ್ನು ಪೂಜಿಸಿದರೆ ಮಕ್ಕಳಾಗಬಹುದು ಅಂತ ಯಾರೋ ಹೇಳಿದರು. ಮಲ್ಲಮ್ಮ “ನೀವು ಕಾಶಿಗೆ ಹೋಗಿ ಕಾಶಿ ವಿಶ್ವನಾಥನನ್ನು ಪ್ರಾರ್ಥನೆ ಮಾಡಿ ಬನ್ನಿ” ಅಂತ ಗಂಡನಿಗೆ ಹೇಳಿದಳು.

ಆಗಿನ ಕಾಲದಲ್ಲಿ ಈಗಿನಂತೆ ಅನುಕೂಲವಾದ ರಸ್ತೆಗಳಿರಲಿಲ್ಲ. ಬಸ್, ರೈಲು ಯಾವುದೂ ಇಲ್ಲ. ಯಾತ್ರೆ ಮಾಡುವವರಂತೂ ನಡೆದುಕೊಂಡು ಹೋಗುವುದೇ ಪದ್ಧತಿ. ನೂರಾರು ಮೈಲಿ ದೂರದ ಕಾಶಿಗೆ ಬಸವರಸ ನಡೆದುಕೊಂಡೇ ಹೊರಟ. ಎಷ್ಟು ದಿನಗಳ ಯಾತ್ರೆ! ಆದರೆ ಮಕ್ಕಳು ಬೇಕು ಎಂಬ ಹಂಬಲ. ಬಸವರಸ ನಡೆದ, ನಡೆದ ಕಾಶಿ ತಲುಪಿದ.

ಬಸವರಸ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿದ. ಭಯಭಕ್ತಿಯಿಂದ ಅನಾಥರಕ್ಷಕ ವಿಶ್ವನಾಥನನ್ನು ಪೂಜೆ ಮಾಡಿದ, ಬೇಡಿಕೊಂಡ. ಬಸವರಸನ ನಿಜವಾದ ಭಕ್ತಿಗೆ ಮೆಚ್ಚಿ ವಿಶ್ವನಾಥನು ದರ್ಶನ ಕೊಟ್ಟ ಎಂದು ಹೇಳುತ್ತಾರೆ. ಬಸವರಸನಿಗೆ ಒಂದು ಅನ್ನದ ಉಂಡೆಯನ್ನು ಇತ್ತು ವಿಶ್ವೇಶ್ವರ ಹೀಗೆ ಹೇಳಿದನಂತೆ: “ನಿನಗೆ ಒಬ್ಬ ಒಳ್ಳೆಯ ಮಗನಾಗುತ್ತಾನೆ.”

ಬಸವರಸನಿಗೆ ಬಹಳ ಸಂತೋಷ, ಸಂಭ್ರಮ! ತನ್ನ ಊರಿಗೆ ಹಿಂದಿರುಗಿದ. ಮತ್ತೆ ಅದೆಷ್ಟೋ ದಿನಗಳ ಪ್ರವಾಸ.

ಊರು ಇನ್ನೂ ಸ್ವಲ್ಪ ದೂರದಲ್ಲಿದ್ದಂತೆ ಕತ್ತಲಾಯಿತು. ಆತನು ಮಾಸೂರನ್ನು ತಲುಪದೆ ದಾರಿಯಲ್ಲಿ ಅಂಬಲೂರಿನಲ್ಲಿ ನಿಲ್ಲಲು ತೀರ್ಮಾನಿಸಿದ. ಅದಾಗಲೇ ತುಂಬಾ ಕತ್ತಲಾಗಿತ್ತು.

“ಯಾರ ಮನೆಯಲ್ಲಿ ನಿಲ್ಲಬೇಕು?” ಎಂದು ಬಸವರಸ ಚಿಂತಿಸುತ್ತಿರುವಾಗಲೇ ಊರ ಹೊರಗೆ ಒಂದು ಮನೆ ಕಾಣಿಸಿತು. ವಸತಿಗಾಗಿ ವಿಚಾರಿಸಲು ಅಲ್ಲಿಗೆ ಹೋದ. ಅದು ಮಾಳಿ ಎಂಬ ಕುಂಬಾರ ತರುಣಿಯ ಮನೆ. ಆಕೆ ಮನೆಗೆ ಬಂದ ಅತಿಥಿ ಎಂದು ಬಸವರಸನಿಗೆ ಸ್ಥಳ ಕೊಟ್ಟಳು. ಆಗ ಬಸವರಸನಿಗೆ ತುಂಬ ಹಸಿವು. ಮಾಳಿಯಿಂದ ಆತ ಹೊಡ ಮಡಿಕೆ ಕೊಂಡು ಅಡಿಗೆಗೆ ಆರಂಭಿಸಿದ. ಅಷ್ಟರಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿಯಲು ಪ್ರಾರಂಭವಾಯಿತು. ಮಳೆ ನಿಲ್ಲುವ ಲಕ್ಷಣಗಳೇ ಇಲ್ಲ. ಮಳೆಯ ರಭಸಕ್ಕೆ ಒಲೆ ಉರಿಯಲಿಲ್ಲ. ಬಸವರಸ ಒಲೆಯ ಮೇಲಿಟ್ಟ ಅನ್ನ ಸರಿಯಾಗಿ ಬೇಯದು. ಆ ಮಳೆಯಲ್ಲಿ ಬಸವರಸನು ಹೊರಗೆ ಹೋಗುವಂತೆಯೂ ಇಲ್ಲ. ಅಲ್ಲಿಯೇ ಇರಲು ಅವಕಾಶ ಕೊಡು ಎಂದು ಮಾಳಿಯನ್ನು ಕೇಳಿಕೊಂಡ. ಅವಳ ನಡೆ, ನುಡಿ, ಗುಣ, ರೂಪ ಬಸವರಸನನ್ನು ಸೆರೆ ಹಿಡಿದಿದ್ದವು. ಅವಳಿಗೂ ಅವನಲ್ಲಿ ಪ್ರೀತಿಯುಂಟಾಯಿತು. ಕುಂಬಾರ ಮಾಳಿ ಬಸವರಸನ ಎರಡನೆಯ ಹೆಂಡತಿ ಆದಳು. ಬಸವರಸನು ಅವಳೊಡನೆ ಕೆಲವು ದಿನಗಳ ಕಾಲ ಸಂಸಾರ ಮಾಡಿ ಮಾಸೂರಿಗೆ ಹೊರಟುಹೋದ.

ಬಸವರಸ ಮಾಳಿಯರ ಮಗ ಸರ್ವಜ್ಞ. ಕುಂಬಾರ ಸಾಲೆಯಲ್ಲಿ ಹುಟ್ಟಿದ್ದರಿಂದ ಅವನನ್ನು “ಸಾಲೆಯ ಸರ್ವಜ್ಞ” ಅಂತ ಕರೆಯುತ್ತಾ ಇದ್ದರು ಅಂತ ಹಲವರು ಹೇಳುತ್ತಾರೆ. ಒಂದು ವಚನದಲ್ಲಿ ಸರ್ವಜ್ಞ ಹೀಗೆ ಹೇಳುತ್ತಾನೆ.

ತಂದೆ ಕುಂಬಾರ ಮಲ್ಲ, ತಾಯಿ ಮಾಳಲಾದೇವಿ
ಇಂದು ಶೇಖರ ವರಪುತ್ರ ಧರಣಿಗೆ
ಬಂದು ಜನಿಸಿದ ಸರ್ವಜ್ಞ!

ಸರ್ವಜ್ಞ ಯಾವ ಜಾತಿಯಲ್ಲಿಯೇ ಹುಟ್ಟಿರಲಿ, ಆತ ಎಲ್ಲೆಲ್ಲಿ ಅನಾಚಾರ, ಅನೀತಿಗಳನ್ನು ಕಂಡರೂ ತೀವ್ರವಾಗಿ ಖಂಡಿಸಿದ್ದಾನೆ.

ದೇಶ ಸಂಚಾರಿ

ಕೆಲವ ಕಾಲದ ನಂತರ ತಂದೆ ತಾಯಿಗಳಿಗೂ ಸರ್ವಜ್ಞನಿಗೂ ವಿರವಾಯಿತು ಎಂದು ಕಾಣುತ್ತದೆ. ಚಿಕ್ಕ ವಯಸ್ಸಿನಲ್ಲಿ ಆತ ಮನೆ ಬಿಟ್ಟು ಕೊರಟ. “ನೂಕಿದರು ಅವರಾಗ ಕೂಕತನ (ಕುಹಕತನ) ದೂಳು” ಎಂದು ಹೇಳಿ ಮನೆಯಿಂದ  ಹೊರಬಿದ್ದ. ಆಗ ಕಾಳಿ ಎಂಬುವಳು ಆತನನ್ನು ಕೆಲವು ದಿನ ನೋಡಿಕೊಂಡಿರಬೇಕು. “ಹೆತ್ತವಳು ಮಾಳಿಯನ್ನೊತ್ತಿ ತೆಗೆದವಳು, ಬೆನ್ನೊತ್ತಿ ಹಿಡಿದವಳು ಕಾಳಿ” ಎಂದು ಸರ್ವಜ್ಞ ಹೇಳುತ್ತಾನೆ.

ಸರ್ವಜ್ಞ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೊರಟ

ಸರ್ವಜ್ಞ ಈಗ ಎಲ್ಲೂ ಒಂದು ಕಡೆ ನಿಲ್ಲದವನಾದ. ಸದಾ ಸಂಚಾರ. ಸರ್ವಜ್ಞ ಕರ್ನಾಟಕದ ಉದ್ದಗಲವನ್ನು, ಮೂಲೆಮೂಲೆಗಳನ್ನು ಸಂಚರಿಸುತ್ತ ದಿನಗಳನ್ನು ಕಳೆದ. ಈ ಸಂಚಾರದಿಂದ ಅವನಿಗೆ ಅಪಾರ ಲಾಭ ಉಂಟಾಯಿತು. ಸುತ್ತಲಿನ ಜೀವನವನ್ನು ತೆರೆದ ಕಣ್ಣಿನಿಂದ, ಸೂಕ್ಷ್ಮ ಬುದ್ದಿಯಿಂದ ಕಂಡ; ಜನರ ಜೀವನದ ರೀತಿ ಬಹು ಚೆನ್ನಾಗಿ ತಿಳಿಯಿತು. ಅವರ ನಿತ್ಯ ಜೀವನ, ಕಷ್ಟಸುಖಗು, ಹಂಬಲ, ನಿರಾಸೆಗಳು, ಪದ್ಧತಿಗಳು, ಮಳೆಗಾಲ, ಚಳಿಗಾಲ, ವಸಂತ ಕಾಲ, ಬಿಸಿಲು ಕಾಲಗಳಲ್ಲಿ ನಿಸರ್ಗದ ರೀತಿ, ಜನ-ನಿಸರ್ಗದ ಸಂಬಂಧ, ಸಂಸಾರದಲ್ಲಿ ಸಂತೋಷ ದುಃಖಗಳು ಎಲ್ಲ ಅವನಿಗೆ ನಿಕಟವಾಗಿ ಪರಿಚಯವಾದವು. ಜೀವನವೇ ಅವನ ಶಾಲೆಯಾಯಿತು.

ಸರ್ವಜ್ಞ ಕವಿತೆ ಕಟ್ಟುತ್ತ, ಹಾಡು ಹೇಳುತ್ತ ತಿರುಗಾಡಿದ. ತಾನು ಕಟ್ಟಿದ ವಚನಗಳನ್ನು ಆತ ಬರೆದು ಇಟ್ಟಂತೆ ಕಾಣುವುದಿಲ್ಲ. ಸರ್ವಜ್ಞ ಹಾಡುತ್ತ ಹೋದಂತೆ ಆತನ ಸಮಕಾಲೀನ ಜನರು ಆ ವಚನಗಳನ್ನು ಕಲಿತು ಸ್ಮರಣೆಯಲ್ಲಿಟ್ಟುಕೊಂಡು ಹೇಳುತ್ತಿದ್ದು, ಅನಂತರ ಅವರ ಮಕ್ಕಳು, ಮೊಮ್ಮಕ್ಕಳು ಹೀಗೆ ಬಾಯಿಂದ ಬಾಯಿಗೆ ಬರೆದಿಟ್ಟರು. ಹೀಗೆ ಬರೆದಿಡುವಾಗ ಇತರರ ಹಲವು ವಚನಗಳು ಸೇರಿದುದೂ ಉಂಟು.

ಜನಸಾಮಾನ್ಯರ ಕವಿ

ಸರ್ವಜ್ಞನು ತನ್ನ ವಚನಗಳನ್ನು ತ್ರಿಪದಿಗಳಲ್ಲಿ ಹೇಳಿದ್ದಾನೆ ಎಂದರೆ ಒಂದು ವಚನಕ್ಕೆ ಮೂರು ಪಂಕ್ತಿ. ಬಹು ಸರಳವಾದ ಕನ್ನಡ ಜಾನಪದ ಛಂದಸ್ಸು. ಈ ತ್ರಿಪದಿಯನ್ನು ಅದೆಷ್ಟೋ ಕನ್ನಡ ಜಾನಪದ ಕವಿಗಳು ಬಹಳ ಸುಂದರವಾಗಿ ಬಳಸಿದ್ದಾರೆ. ಇದು ಕನ್ನಡದ ಒಂದು ವಿಶಿಷ್ಟ ಛಂದಸ್ಸು. ಸರ್ವಜ್ಞನು ಹಾಡಿದ್ದು, ಬರೆದದ್ದು ಸಾಮಾನ್ಯ ಜನರ ತಿಳಿ ಭಾಷೆಯಲ್ಲಿ, ಸರಳ ಸುಲಭ ಕನ್ನಡದಲ್ಲಿ. ಅಂದಿನ ಜನಜೀವನದ ಉನ್ನತಿಗಾಗಿ ಆತ ಆಡುನುಡಿಯನ್ನೇ ಬಳಸಿದ್ದಾನೆ. ಸಾಹಿತ್ಯ ಜನಸಾಮಾನ್ಯರಿಗೆ ಇಲ್ಲದಾಗ, ತನ್ನ ಸಾಹಿತ್ಯದ ರಸದೂಟವನ್ನು ಎಲ್ಲ ವರ್ಗದ ಜನರಿಗೆ ಹಂಚಿದ ಜಾನಪದ ಮಹಾಕವಿ ಸರ್ವಜ್ಞ.

ಆಗ ಬಹು ಮಂದಿ ಕವಿಗಳು ಬರೆಯುತ್ತಿದ್ದುದು ಪಂಡಿತರನ್ನು, ವಿದ್ವಾಂಸರನ್ನು ತಣಿಸುವುದಕ್ಕೆ. ಇದರಿಂದ ಅವರ ಭಾಷೆ ಪ್ರೌಢವಾಗಿರುತ್ತಿತ್ತು. ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳಲ್ಲಿ (ಸರ್ವಜ್ಞನಿಗಿಂತ ಮುನ್ನೂರು ನಾನ್ನೂರು ವರ್ಷಗಳ ಮೊದಲು) ಶರಣರು ಸುಲಭವಾಗಿ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿದರು. ಅನಂತರ ಸರ್ವಜ್ಞನು ಅತಿ ಸುಲಭವಾದ, ಮನಸ್ಸನ್ನು ಸೆಳೆಯುವಂತಹ ಕನ್ನಡದಲ್ಲಿ ತನ್ನ ವಚನಗಳನ್ನು ರಚಿಸಿದನು. ಆತನ ಎಲ್ಲ ಮಾರುಗಳು ಮುತ್ತು ಮಾಣಿಕ್ಯಗಳಂತಿವೆ. ಕನ್ನಡ ದೇಶಕ್ಕೆ, ಭಾಷೆಗೆ ಸರ್ವಜ್ಞ ಮಾಡಿದ ಉಪಕಾರ ಸಾಮಾನ್ಯವಲ್ಲ. ಅದೊಂದು ಮಹೋಪಕಾರ. ಇಂದಿಗೂ ಅಕ್ಷರ ಬಾರದವರ ಬಾಯಲ್ಲಿ ಉಳಿದ ಕವಿ ಎಂದರೆ ಸರ್ವಜ್ಞ. ಇವನು ನಿಧಾನವಾಗಿ ಯೋಚಿಸಿ ಬರೆದು ತಿದ್ದಿ ಪೇಚಾಡಿದವನಲ್ಲ. ಯಾವುದಾದರೊಂದು ವಿಷಯ ಹೊಳೆದೊಡನೆ, ಕಂಡೊಡನೆ ತಕ್ಷಣ ಅದರ ಮೇಲೆ ಕವಿತೆ ಕಟ್ಟಿ ಹೇಳತಕ್ಕವನು.

ಹಿಂಡನಗಲಿದ ಗಜದಂತೆ

“ಅಜ್ಜಾ, ಸರ್ವಜ್ಞ ಕವಿಯ ವೇಷ ಹೇಗಿದ್ದಿರಬಹುದು?”

“ಸರ್ವಜ್ಞ ಕವಿ ಸನ್ಯಾಸಿ. ಆತ ರಸಿಕ ಜನರಂತೆ ಸೊಗಸುಗಾರನಲ್ಲ. ಆತನ ವೇಷ ಕೂಡ ಸಾಮಾನ್ಯ ಸಾಧು ಸನ್ಯಾಸಿಗಳಂತೆ ಇದ್ದಿತು. ಬಲಗೈಯಲ್ಲಿ ಭಿಕ್ಷಾ ಪಾತ್ರ, ಎಡಗೈಯಲ್ಲೊಂದು ಊರುಗೋಲು. (ನಾಯಿಯಂಥ ಉಪದ್ರವಿ ಪ್ರಾಣಿಗಳನ್ನು ಹೊಡೆದೋಡಿಸಲು ಕೋಲು ಬೇಕಲ್ಲ?) ಕೊರಳಲ್ಲಿ ರುದ್ರಾಕ್ಷಿ ಸರ ಮತ್ತು ಲಿಂಗ, ಹಣೆಯ ತುಂಬ ವಿಭೂತಿ, ಅಂಗದಲ್ಲಿ ಲಂಗೋಟಿ, ಮೈಮೇಲೆ ಕಂಬಳಿ. “ತುಂಡಗಂಬಳಿ ಹೊದೆದು, ಮಂಡೆ ಬೇಳಿಸಿಕೊಂಡು ಹಿಂಡನಗಲಿದ ಗಜದಂತೆ” ಊರೂರು ತಿರುಗುತ್ತ “ಕರದಿಗಪ್ಪರ ಹಿಡಿದು, ತಿರಿವರಿಂ ಸಿರಿವಂತರಾರು?” ಎಂದು ಹೇಳಿಕೊಂಡು ನಾಡನ್ನು ಸಂಚರಿಸಿದನು.”

ಆಮೇಲೆ ಸರ್ವಜ್ಞ ಎಲ್ಲಿದ್ದ ತಾತಾ? ಜೀವನ ಹೇಗೆ ನಡೀತಿತ್ತು?

“ಹಿಂಡನಗಲಿದ ಗಜದಂತೆ ಹೊರಬಿದ್ದು ಸರ್ವಜ್ಞ ಸಂಚಾರಿಯಾಗಿಯೇ ಇದ್ದ. ಆತ ಯಾರಲ್ಲಿ ಅಭ್ಯಾಸ ಮಾಡಿದ, ಆತನ ಗುರುಗಳು ಯಾರು ಎಂಬುದೂ ತಿಳಿಯದು. ಸರ್ವಜ್ಞ ಎಷ್ಟು ಕಾಲ ಬಾಳಿ ಹೋದ, ಅವನ ಜೀವನ ಎಲ್ಲಿ ಮುಗಿಯಿತು, ಸಮಾಧಿ ಎಲ್ಲಿ, ಯಾವುದೂ ತಿಳಿಯದು. ಆದರೂ ಸರ್ವಜ್ಞ ಐವತ್ತು ವರ್ಷಕ್ಕಿಂತ ಹೆಚ್ಚು ಕಾಲ ಬದುಕಿತ್ತ ಅಂತ ಕಾಣುತ್ತೆ”.

“ಸರ್ವಜ್ಞ  ಸಂಚಾರಿ ಎಂದು ಹೇಳಿದಿರಿ. ಆತ ಎಲ್ಲೆಲ್ಲಿ ತಿರುಗಾಡಿರಬಹುದು, ಏನೇನು ಕಂಡಿರಬಹುದು?”

“ಆಗಲೇ ಹೇಳಿದೆನಲ್ಲ, ಆತ ಕನ್ನಡನಾಡಿನ ಉದ್ದಗಲವನ್ನು, ಮೂಲೆ ಮೂಲೆಗಳನ್ನು ಬಿಡದೆ ತಿರುಗಾಡಿದನೆಂದು. ಆತ ಓಡಾಡಿ ಅಲೆದಾಡಿ ನಾಡಿನ ವಿವಿಧ ಪ್ರದೇಶಗಳ ಜನಜೀವನ ತಿಳಿದುಕೊಂಡು ಹಾಡು ಕಟ್ಟಿದ್ದಾನೆ. ಆಗಿನ ಕಾಲದ ಜನ ಹೇಗೆ ಬಾಳ್ತಾ ಇದ್ದರು ಅನ್ನೋದನ್ನ ಅವನ ವಚನಗಳಿಂದ ತಿಳಿದುಕೊಳ್ಳಬಹುದು.”

ಜನಜೀವನ

ಅಜ್ಜ ಮುಂದುವರಿಸಿದ:

ಆತ ಪೂರ್ವದಿಕ್ಕಿಗೆ ಪ್ರವಾಸಕ್ಕೆ ಹೊರಟಿದ್ದಾನೆ. ನಡು ದಾರಿಯಲ್ಲಿ ಅನೇಕ ತರಹದ ನೋಟಗಳು, ಮೂಡಲ ನಾಡಿನ ಹಲವು ಜನರನ್ನು ಮಾತನಾಡಿಸುತ್ತಾನೆ. ಮೂಡಲ ದಾರಿಯಲ್ಲಿ ಮುಳ್ಳುಗಳೇ ಕಂಡಂತೆ, ಅಲ್ಲಿನ ಜನರು ಕೂಡ ಮಂಕುಗಳಾಗಿ ತೋರುತ್ತಾರೆ. ಅದಕ್ಕೆ “ಮೂಡಲ ಬಟ್ಟೆ (ದಾರಿ) ಬೇಡ” ಎಂದು ಹೇಳುತ್ತಾನೆ. ಮುಂದೆ ಸಾಗುವುದರಲ್ಲಿ ಅಲ್ಲಿನ ಸಮೃದ್ಧವಾದ ಬೆಳೆ, ಗಟ್ಟಿಯಾದ ಮಜ್ಜಿಗೆ, ಸವಿಗಾಯಿ ಮತ್ತು ಬುದ್ಧಿವಂತರನ್ನು ಕಂಡು “ಮೂಡ ನಾಡೆಗ್ಗೆನ್ನ (ಎಗ್ಗ=ಮೂರ್ಖ) ಬಹುದೇ?” ಎಂದು ಕೇಳುತ್ತಾನೆ.

ಉತ್ತರಕ್ಕೆ ಹೋದರೆ ಅಲ್ಲಿಯೂ ದಾರಿಯಲ್ಲಿ ಮುಖ್ಖುಗಳು “ಉಳ್ಳವರು ಎಲ್ಲ ಕಿಸವಾಯಿ (ಮೂರ್ಖ) ಜನರು”. ಮುಂದೆ ಮುಂದೆ ಸಾಗಿದರೆ “ಊರು ಸನಿಹದಲ್ಲಿಲ್ಲ. ನೀರೊಂದು ಗಾವುದವು. ಸೇರಿ ನಿಲ್ಲುವರೆ ನೆಳಲಲ್ಲಿ, ಬಡಗಲ ದಾರಿ ಬೇಡೆಂದು” ಬೇಸರಿಸಿ ಹೇಳಿದ್ದಾನೆ.

ಅನಂತರ ಸರ್ವಜ್ಞನ ದಾರಿ ದಕ್ಷಿಣಕ್ಕೆ. ಇಲ್ಲಿನ ಜನ ಒಂದಿಷ್ಟು ಬಿಗಿಯುಳ್ಳವರು. ಆದರೂ ದೈವಭಕ್ತರು. ಮನೆಮನೆಯಲ್ಲೂ ಶಿವಪೂಜೆ ನಡೆಯುತ್ತಿತ್ತಂತೆ.

ಈ ಕವಿ ಪಶ್ಚಿಮದ ಮಲೆನಾಡಿಗೆ ಭೇಟಿ ಕೊಡುತ್ತಾನೆ. ಅಲ್ಲಿನ ಉನ್ನತ ಗಿರಿಪರ್ವತಗಳನ್ನೇರಿ ಮುಂದುವರಿಯುತ್ತಾನೆ. ವನದ ಸೊಬಗನ್ನು ಕಂಡು ಸಂತೋಷ ಪಡುತ್ತಾನೆ. ಅಲ್ಲಿ ನಾಲ್ಕಾರು ಜನರನ್ನು ವಿಚಾರಿಸಿದರೆ, ಅವರು ಸತ್ಯವಂತರಾಗಿ ಕಾಣಲಿಲ್ಲ. ಅದಕ್ಕೆ “ಆಡಿದ ಮಾತು ನಿಜವಿಲ್ಲ, ಮಲೆನಾಡ ಕಾಡು ಸಾಕೆಂದು” ಹೇಳಿದ್ದಾನೆ. ಮುಂದೆ ಹೋದಂತೆ ಅಲ್ಲಿನ ಗಂಡ ಹೆಂಡಿರ ಒಲವು ಕಂಡು ಗೌರವಿಸುತ್ತಾನೆ. ಬೆಲ್ಲ, ಗೆಣಸು, ಅನ್ನ, ಕೆರೆ ಕಾಲುವೆ, ತಂಪಾದ ನೆಳಲು ಕಂಡು ಅಭಿಮಾನಪಡುತ್ತಾನೆ.

ಸರ್ವಜ್ಞನಿಗೆ ಮೂಡಲ (ಪೂರ್ವ) ಜನರು ಒಂದಿಷ್ಷು ಸಿಟ್ಟಿನವರಾಗಿ ಕಾಣುತ್ತಾರೆ. ಬಡಗ (ಉತ್ತರ) ಜನರು ಸಾಧನೆ, ಯೋಗದಲ್ಲಿ  ನಿಷ್ಠೆ ಉಳ್ಳವರು. ನಿಂತ ನೀರಿನಿಂದ ರೋಗ ಹರಡಿ ಪಡುವಣ (ಪಶ್ಚಿಮ)ದ ಮಲೆನಾಡಿನವರ ಆರೋಗ್ಯ ಅಷ್ಟು ಸರಿ ಇರಲಿಕ್ಕಿಲ್ಲ. ತೆಂಕಣ (ದಕ್ಷಿಣ)ದ ಜನ ಸುಖಭೋಗಿಗಳು.

ಸರ್ವಜ್ಞ ಸುತ್ತಲಿನ ಜೀವನವನ್ನು ತೆರೆದ ಕಣ್ಣಿನಿಂದ, ಸೂಕ್ಷ್ಮ ಬುದ್ಧಿಯಿಂದ ಕಂಡ

ಬೆಳುವಲದ ಸೀಮೆಗೆ ಹತ್ತಿರದವನಾದ ಸರ್ವಜ್ಞ ಅಲ್ಲಿನ ಊಟವನ್ನು ದಿನನಿತ್ಯ ಸವಿದು ಸಂತೋಷಪಟ್ಟಿದ್ದಾನೆ. ಜೋಳದ ಬೋನ, ಬೇಳೆಯ ಸಾರು, ಸಾಕಷ್ಟು ಕರೆಯುವ ಎಮ್ಮೆಯ ಹೈನು ಸವಿದು ಹೆಮ್ಮೆಯಿಂದ ಹೊಗಳಿದ್ದಾನೆ. ನವಣೆಯ ಅನ್ನದಲ್ಲಿ ರುಚಿಯಾದ ಬೇಳೆಯ ಸಾರು, ಕವಣೆಯ ಕಲ್ಲಿನಷ್ಟು ಕಲ್ಲಿನಷ್ಟು ಬೆಣ್ಣೆ ಮುದ್ದೆ ಸೇರಿಸಿ “ಊಟದ ಅಣಕ (ಸೌಕರ್ಯ) ನೋಡೆಂದು” ಹೇಳುತ್ತಾನೆ. ಕರಿಗಡಬು, ಹೊಸ ಎಮ್ಮೆಯ ಹೆಡಗು ಹೈನು (ತುಪ್ಪ) ಇದ್ದು ಕುಣಿಕುಣಿದು ಕಡೆವ ಸತಿಯಿದ್ದರೆ ಬೆಳುವಲದ ಸುಖವನ್ನು ಬಣ್ಣಿಸಲಿಕ್ಕೆ ಬಾರದು.

ಬೇರೆ ಬೇರೆ ಪ್ರದೇಶಗಳಲ್ಲಿಯ ಜನರು ಊಟ ಮಾಡುವ ರೀತಿಯೂ ಬೇರೆಯಾಗಿತ್ತು. ಬಡಗಣದವರು ಸುಟ್ಟು ಉಣ್ಣುತ್ತಿದ್ದರು. ಮೂಡಣದವರು ಅಟ್ಟು ಉಣ್ಣುತ್ತಿದ್ದರು. ಪಡುವಣದವರು ತಟ್ಟೆಯಲ್ಲಿ ಉಣ್ಣುವ ರೀತಿ ಇಟ್ಟುಕೊಂಡಿದ್ದರೆ, ತೆಂಕಣದವರು ಮುಷ್ಟಿಯಲ್ಲಿ ಉಣ್ಣುತ್ತಿದ್ದರಂತೆ.

ಸಂಸಾರದ ಸುಖ ದುಃಖ

ಸರ್ವಜ್ಞ ಸುಖ ಸಂಸಾರದ ಬಗೆಗೆ ಹೇಳುತ್ತಾನೆ. ಬೆಚ್ಚನೆ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆಯನ್ನು ಅರಿಯುವ ಸತಿ ಇದ್ದರೆ, ಸ್ವರ್ಗ ಕೂಡ ಬೇಡ; ಸ್ವರ್ಗಕ್ಕಿಂತ ಹೆಚ್ಚಿನ ಸುಖ ಈ ಲೋಕದಲ್ಲಿಯೇ ಇದೆ. “ವೇಳೆಯನು ಅರಿತು ನಡೆಯುವವಳು ನಿಜವಾದ ಸತಿಯು”. ಉರಿಯುವ, ಮೆರೆಯುವ ಮತ್ತು ವೇಳೆಯನು ಅರಿಯದ ಸತಿಯರಿಂದ ಬದುಕು ದುಃಖಕರವಾಗುವುದು. ಒಲವಿನ ಹೆಂಡತಿ, ಪ್ರೀತಿಯ ಮಕ್ಕಳಿದ್ದರೆ ಮಾತ್ರ ಸಂಸಾರ ಹಾಲು ಜೇನು. ಮನೆ ತುಂಬಬೇಕಾದ ಸೊಸೆ ಗುಣವಂಳೂ ಆಗಿರಬೇಕು. ಇದಕ್ಕೆ ವಿಪರೀತವಾಗಿ “ಬಂಡು ಹೆಂಡತಿಯಾಗಿ, ತುಂಡು ಸೊಸೆಯಾಗಿ ಕಂಡಲ್ಲಿ ಹರಿವ ಮಗನಾದರೆ” ಸಂಸಾರದಲ್ಲಿ ಸುಖ ಎಂಬುದು ಕನಸಾಗಿ ಉಳಿಯುವುದು.

ಧಾರ್ಮಿಕ ಬಾಹ್ಯಾಡಂಬರದ ಖಂಡನೆ

ಅಂದಿನ ಧಾರ್ಮಿಕ ಆಚಾರ ವಿಚಾರಗಳನ್ನು ಸರ್ವಜ್ಞ ಸೂಕ್ಷ್ಮವಾಗಿ ನೋಡಿದ್ದಾನೆ. ಆಡಂಬರದ ಆಚಾರವನ್ನು ಮೋಸದ ಭಕ್ತಿಯನ್ನು ಕಟುವಾಗಿ ಟೀಕಿಸಿದ್ದಾನೆ. ತೋರಿಕೆಯ ಆಚರಣೆಗೆ ಆತನಿಗೆ ಸರಿಬಂದಿಲ್ಲ. ಬಸವಣ್ಣ, ಪುರಂದರದಾಸ, ಕನಕದಾಸರಂತೆ ಸರ್ವಜ್ಞ ಕೂಡ ಬಾಹ್ಯಾಡಂಬರದ ವಿಡಂಬನೆ ಮಾಡುತ್ತಾನೆ. ಆತನ ಉದ್ದೇಶ ಸಮಾಜವನ್ನು ಸುಧಾರಿಸುವುದೇ ಆಗಿದೆ. ಇದರಂತೆ ಸತ್ಯದಲ್ಲಿ ನಡೆವ ಉತ್ತಮರನ್ನು ಕಂಡು ಮೆಚ್ಚಿದ್ದಾನೆ. ಎಲ್ಲರನ್ನು ತನ್ನಂತೆ ಬಗೆಯುವವರನ್ನು ಶ್ರೇಷ್ಠರೆಂದು ಹೇಳಿದ್ದಾನೆ. ಕೊಲಲಾಗದೆಂಬ ಜಿನಮತವನ್ನು ತನ್ನ ತಲೆಯ ಮೇಲೆ ಇರಿಸಿಕೊಂಡನು. “ನಿಷ್ಠೆ ಇಲ್ಲದವನ ಪೂಜೆ ಹಾಳೂರ ಕೊಟ್ಟಿಗೆ ಉರಿದಂತೆ” ಎಂದು ಮೋಸದ ಭಕ್ತರನ್ನು ಕೆಣಕಿ ಆಡಿದನು. “ಸಾಧುಸಿದ್ಧರು ಎಂದು ತೋದ ಕಾವಿಯ ಹೊದೆದು ಮೇದಿನಿಯ ಮೇಲೆ ವಿಷಯಕ್ಕೆ ತಿರುಗವವರನ್ನು ಕಠೋರವಾಗಿ ಟೀಕಿಸಿದ್ದಾನೆ.

ಕುಲಗೋತ್ರ ಎತ್ತಣದು?

“ಅಜ್ಜಾ ಈ ಕವಿ ಜಾತಿಯ ಬಗ್ಗೆ ಎಲ್ಲ ಸಮಾರು ಎಂದು ಹೇಳಿದ್ದಾನಲ್ಲ, ಪುಸ್ತಕದಲ್ಲಿದೆ. ಆತ ಹೇಳಿದ್ದೇನು?”

ಅಜ್ಜ ವಿವರಿಸಿದ:

ಸರ್ವಜ್ಞ ಜಾತಿ ಪದ್ಧತಿಯನ್ನು ಇನ್ನೂ ಕಟುವಾಗಿ ಟೀಕಿಸಿದ್ದಾನೆ. ನಮ್ಮಲ್ಲಿ ಮೇಲು ಕೀಳು ಎಂಬ ಜಾತಿ ಪದ್ಧತಿಗಳು ಮೊದಲಿನಿಂದಲೂ ನಡೆದುಬಂದಿವೆ. ಅದೆಷ್ಟೋ ಜನ ಮಹಾನುಭಾವರು ಈ ಅಸಮಾನತೆಯನ್ನು ಅಳಿಸಲು ಪ್ರಯತ್ನಿಸಿದ್ದರೆ. ಅದರಂತೆ ಸರ್ವಜ್ಞ ಸರ್ವಜ್ಞ ಕೂಡ ಜಾತಿ ಭೇದವನ್ನು ಅಳಿಸಲು ಹೆಣಗಿದವನು. “ಜಾತಿ ಹೀನರ ಮನೆಯ ಜ್ಯೋತಿ ತಾ ಹೀನವೇ?” ಎಂದು ಸರ್ವಜ್ಞ ಕೇಳುತ್ತಾನೆ. ಜಾತಿ ವಿಜಾತಿ ಎನ್ನದೆ, ಯಾವನು ಸದಾಚಾರಗಳಿಂದ ದೇವರನ್ನು ಒಲಿಸಿಕೊಳ್ಳುತ್ತಾನೆಯೋ ಅವನೇ ನಿಜವಾದ ಜಾತಿವಂತ. ಹಸಿವು, ನೀರಡಿಕೆ, ನಿದ್ರೆ, ಆಸೆ, ಪ್ರೀತಿ, ಇವುಗಳೆಲ್ಲ “ನರನಿಗೆ ಸವನಿರಲು ಕುಲವೆಂಬ ಘಸಣೆ (ತಿಕ್ಕಾಟ) ಎತ್ತಣದು?” ಎಂದೀತ ಕೇಳಿದ್ದಾನೆ.

ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ
ಇರುತಿರಲು ಕುಲಗೋತ್ರ
ನಡುವೆ
ಎತ್ತಣದು ಸರ್ವಜ್ಞ!

ಎಂದಿದ್ದಾನೆ.  ಈ ಮೂಲಮಂತ್ರವನ್ನು ಎಲ್ಲರೂ ಅರಿತು ನಡೆಯಬೇಕಾಗಿದೆ. ಅದರಂತೆ ಸಮಾಜದಲ್ಲಿನ ಮೇಲುಕೀಳು ಎಂಬ ಭೇದಭಾವನೆ ಅಳಿದು ಹೋಗುತ್ತದೆ.

ಎಲ್ಲರಿಗೂ ಒಂದೇ ವಿವೇಕದ ದಾರಿ
ಅನ್ನವನ್ನು
ನೀಡುವುದು ನನ್ನಿಯನು ನುಡಿಯುವುದು
ತನ್ನಂತೆ
ಪರರ ಬಗೆದಡೆ ಕೈಲಾಸ
ಬಿನ್ನಾಣವಕ್ಕು
ಸರ್ವಜ್ಞ!

ಮಾತು: ಮಾಣಿಕ ಮತ್ತು ಮಾರಕ

ಭಾಷೆಯನ್ನು ನಾವೆಲ್ಲ ಬಳಸುತ್ತೇವೆ. ಪ್ರಾಣಿಗಳಿಗೆ ಇಲ್ಲದ ಒಂದು ಶಕ್ತಿ ಮನುಷ್ಯನದು. ಮಾತಿನ ಶಕ್ತಿ. ಮಾತನ್ನು ವಿವೇಚನೆಯಿಂದ ಬಳಸಬೇಕು. ಸರ್ವಜ್ಞಮೂರ್ತಿ ಮಾತಿನ ಬಗ್ಗೆಯೂ ಬಹಳ ಸೊಗಸಾಗಿ ಹೇಳಿದ್ದಾನೆ. “ಮಾತು ಬಲ್ಲವ ಮಾಣಿಕ ತಂದ, ಮಾತರಿಯದವ ಜಗಳ ತಂದ” ಎಂದು ಕನ್ನಡದಲ್ಲಿ ಒಂದು ಗಾದೆ ಮಾತುಂಟು. ಸರ್ವಜ್ಞ ಕೂಡ ಇದನ್ನೇ ಬೆಂಬಲಿಸುತ್ತಾನೆ. ಮಾತಿನಿಂದ ನಗೆನುಡಿಯು, ಮಾತಿನಿಂದ ಹಗೆಕೊಲೆಯು, ಮಾತಿನಿಂದ ಎಲ್ಲ ಸಂಪತ್ತು, ಮಾತೇ ಮಾಣಿಕವು. ಮಾತು ಅರಿಯದವನಿಗೆ ಅದು ತೂತು ಬಿದ್ದ ಮಾಣಿಕದಂತೆ. ರಸಿಕನು ಆಡಿದ ಮಾತೆಂದರೆ ಚಂದ್ರ ಉದಯಿಸಿ ಹಾಲು ಬಣ್ಣದ ಬೆಳದಿಂಗಳು ಭೂಮಿಯ ಮೇಲೆ ಚೆಲ್ಲಿದಂತೆ. ರಚಿಕನಲ್ಲದ ಅವಿವೇಕಿ ಮಾತನಾಡಿದರೆ ಚೂಪಾದ ಆಯುಧ ಮೈಗೆ ಚುಚ್ಚಿದಂತೆ ಅನುಭವ. ಮಾತನಾಡಿದಂತೆ ನಡೆಯಬೇಕು. ಅಂದರೆ ಮಾತಿಗೆ ಬೆಲೆ. “ಮಾತನಾಡಿದಂತೆ ನಡೆವಾತ ಜನವನ್ನು ಕೂತಲ್ಲಿ ಆಳ್ವ” ಎಂದು ವಚನಪರಿಪಾಲನೆಯ ಬಗೆಗೆ ಕವಿ ಹೇಳುತ್ತಾನೆ.

ಮಾತನ್ನು ಹೇಗೆ ಬಳಸಬೇಕೆಂಬುದನ್ನು ಎಷ್ಟು ಚೆನ್ನಾಗಿ ಸಮರ್ಥನಾಗಿ ಪರಿಣಾಮವಾಗುವಂತೆ ಬಳಸಬಹುದು ಎಂಬುದನ್ನು, ಸರ್ವಜ್ಞನೇ ತೋರಿಸಿದ್ದಾನೆ. ಮಾತು ಕಲಿಯಬೇಕೆನ್ನುವವರು ಸರ್ವಜ್ಞನ ವಚನಗಳ ಗರಡಿಯ ಮನೆಯಲ್ಲಿ ಸಾಧನೆ ಮಾಡಬೇಕು. ಚುರುಕ, ಹರಿತ, ಇರಿತ-ತಿವಿತ, ನಗೆ-ನಯ, ಈ ಪಟ್ಟುಗಳನ್ನು ಕಲಿಯಬೇಕಾದರೆ ಈ ವಚನಗಳೊಡನೆ ಸಲಿಗೆಯಾಗಬೇಕು.

ವಿದ್ಯೆ: ಗುರು

ಇದರಂತೆ ವಿದ್ಯೆ ಬಗೆಗೆ ಹೇಳಿದ ಸರ್ವಜ್ಞನ ಮಾತು ಕೂಡ ಬಂಗಾರದಂಥವು. ವಿದ್ಯೆ ಕಲಿಸಲಾರದ ತಂದೆ, ಬುದ್ಧಿ ಮಾತು ಹೇಳಲಾರದ ಗುರು, ಅಸ್ವಸ್ಥತೆಯಿಂದ ಮಲಗಿದಾಗಿ ಮಕ್ಕಳನ್ನು ನೋಡದ ತಾಯಿ ಇವರೆಲ್ಲ ನಿಜವಾದ ವೈರಿಗಳು. ವಿದ್ಯೆ ಗಳಿಸಿದವನ ಮುಖ ಕಲಿತ ಪಾಂಡಿತ್ಯದಿಂದಾಗಿ ಮುದ್ದು ಬರುವಂತೆ ಇರುತ್ತದೆ. ವಿದ್ಯೆ ಕಲಿಯದವನ ಮುಖ ಹಾಳೂರ ಹದ್ದಿನಂತೆ ಇರುವುದು. ಅಂಥವನ ಹತ್ತಿರ ಯಾರೂ ಸೇರಲಾರರು. ಆದರೆ ವಿದ್ಯೆಯಾಗಲಿ, ಸಾಹಿತ್ಯವಾಗಲಿ, ಎಲ್ಲರಿಗೂ ಸುಲಭವಾಗಿ ವಶವಾಗುವುದಿಲ್ಲ. ಅಭಿರುಚಿಯಿಂದ ಸಾಧಿಸಿದರೆ ಮಾತ್ರ ಕೈಗತವಾಗಬಹುದು. “ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ, ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯವೆಲ್ಲರಿಗಿಲ್ಲ”. ಗುರುಶಿಷ್ಯರು ಹೀಗಿರಬೇಕು: “ಹೇಳಬಲ್ಲಡೆ ಗುರುವು, ಕೇಳಬಲ್ಲಡೆ ಶಿಷ್ಯ” ಮತ್ತು ಬದುಕಿನ ಸತ್ಯದ ಮಾರ್ಗವನ್ನು ತೋರಿಸುವವನೇ ನಿಜವಾದ ಗುರು. “ಗುರುವಿಗಿಂತ ಹೆಚ್ಚಿನ ಬಂಧುಗಳುಂಟೇ?” ಇಲ್ಲವೇ ಇಲ್ಲ.

“ಮಾತು, ವಿದ್ಯೆ, ಗುರುಶಿಷ್ಯರ ಬಗೆಗೆ ಆಯಿತು. ಸರ್ವಜ್ಞ ಮತ್ತೆ ಯಾವ ವಿಷಯಗಳ ಬಗೆಗೆ ಹೇಳಿದ್ದಾನೆ?” ಶಾಂತೇಶ ಕೇಳಿದ.

ನೂರಾರು ವಿಷಯಗಳನ್ನು ಕುರಿತು ಸರ್ವಜ್ಞ ಹೇಳಿದ್ದಾನೆ. ಇವುಗಳಲ್ಲಿ ಒಂದೆರಡು ಪ್ರಕಾರ ಹೇಳುತ್ತೇನೆ.

ಸರ್ವಜ್ಞ ಕವಿಯ ಅನುಭವಕ್ಕೆ ಬಂದಿರಬಹುದಾದ ಕೆಲವು ಪ್ರಸಂಗ ಹೀಗಿರಬಹುದು ಎಂದು ಅವನ ವಚನಗಳಿಂದ ಊಹಿಸಬಹುದು.

ಮೂರ್ಖರು

ಒಂದೂರಲ್ಲಿ ಒಬ್ಬ ಜಿಪುಣ. ಆತ ಹೊಟ್ಟೆ ಬಟ್ಟೆಗೂ ವೆಚ್ಚ ಮಾಡದೆ ಉಪವಾಸ, ವನವಾಸ ಬಿದ್ದು ತನ್ನ ಗಳಿಕೆಯನ್ನೆಲ್ಲ ನೆಲದಲ್ಲಿ ಬಚ್ಚಿಡುತ್ತಿದ್ದನು. ನೆಲದಲ್ಲಿ ಹುಗಿದಿಟ್ಟ ಮಣ್ಣಿನ ಕುಡಿಕೆಯನ್ನು ಪ್ರತಿ ದಿನ ತೆಗೆದು ಹಣ ಹಾಕಿ ಮತ್ತೆ ಅದನ್ನು ನೆಲದಲ್ಲಿ ಇರಿಸಿ ಯಾರಿಗೂ ಗೊತ್ತಾಗದಂತೆ ಮೇಲೆ ಸಾರಿಸಿ ಬರುತ್ತಿದ್ದನು. ಹೀಗೆ ಎಷ್ಟೋ ದಿನ ಮಾಡಿದ್ದ. ಅಲ್ಲಿ ಬಹಳಷ್ಟು ಹಣ ಸೇರಿತ್ತು. ಅದನ್ನೆಲ್ಲ ಕಂಡ ನೆರೆಮನೆಯವ ಒಂದು ದಿನ ಆ ಜಿಪುಣ ಬೇರೆ ಊರಿಗೆ ಹೋದಾಗ, ಆತನ ಮನೆ ಹೊಕ್ಕು ನೆಲ ಅಗೆದು ಹಣದ ಕುಡಿಕೆಯನ್ನು ತೆಗೆದುಕೊಂಡು ಹೋದನು. ಮರುದಿನ ಜಿಪುಣ ಮನೆಗೆ ಬಂದು ನೋಡುತ್ತಾನೆ ಅಲ್ಲೇನಿದೆ? ಅದಕ್ಕೆ ಸರ್ವಜ್ಞ ಹೇಳಿದ್ದು, “ಉಣ್ಣದೊಡವೆಯ ಗಳಿಸಿ, ಮಣ್ಣಿನೊಳು ತಾನಿರಿಸಿ ಸಣ್ಣಿಸಿ ನೆಲವ ಸಾರಿದವ ಬಾಯೊಳಗೆ ಮಣ್ಣು ಕಾಣಯ್ಯ” ಎಂದು.

ಒಂದು ರಾಜಬೀದಿಯಲ್ಲಿ ಒಂದು ಆನೆ ನಡೆದಿತ್ತು. ತುಂಬ ಸಿಂಗರಿಸಿದ ಆ ಊರಿನ ಅರಸನ ಆನೆ ಗಂಭೀರವಾಗಿ ದೇವಾಲಯಕ್ಕೆ ನಡೆದಿರಬೇಕು. ಇನ್ನೊಂದು ಪಕ್ಕದ ಬೀದಿಯಿಂದ ಒಂದು ನಾಯಿ ಬಂದಿತು. ಆ ಆನೆಯ ವೈಭವ, ಗಾಂಭೀರ್ಯ ಸಹಿಸದ ಕೀಳು ನಾಯಿ ಮಾತ್ಸರ್ಯ ಪಟ್ಟು ಆ ಆನೆಯತ್ತ ಮುಖಮಾಡಿ ಬೊಳತೊಡಗಿತು. ಆನೆ ನಾಯಿಯತ್ತ ಗಮನವೀಯದೆ ಗಂಭೀರವಾಗಿ ಮುನ್ನಡೆಯಿತು. ಅದನ್ನೆಲ್ಲ ದೂರದಲ್ಲಿ ನಿಂತು ನೋಡುತ್ತಲಿದ್ದ ಸರ್ವಜ್ಞ ಕವಿಗೆ ಥಟ್ಟನೆ ಒಂದು ಚುಟುಕ ಹೊಳೆಯಿತು. ಆತ ಹೀಗೆ ಹೇಳಿಕೊಂಡನು. “ಆನೆ ಬೀದಿಗೆ ಬರಲು ಶ್ವಾನ ತಾ ಬೊಗಳುವುದು, ಶ್ವಾನದಂತಾನೆ ಬೊಗಳಿದರೆ ಆನೆಯ ಮಾನವೇ ಹಾನಿ”. ಅಂದರೆ ಎಷ್ಟು ದೊಡ್ಡವರನ್ನೂ ಬಯ್ಯುವ ಜನ ಇದ್ದೇ ಇರುತ್ತಾನೆ. ಅವರಿಗೆ ಹೊಟ್ಟೆ ಕಿಚ್ಚು. ಕೀಳು ಜನರ ಟೀಕೆಗೆ ದೊಡ್ಡವರು ಕಿವಿಗೊಡಬಾರದು.

ದುಶ್ಚಟಗಳ ದಾಸರು

ಒಮ್ಮೆ ಸರ್ವಜ್ಞ ಎತ್ತಲೋ ಹೊರಟಿದ್ದಾನೆ. ಊರ ಹೊರಗೆ ಒಂದು ಹೆಂಡದಂಗಡಿ. ಒಬ್ಬ ಕುಡುಕ ಕುಡಿದು ತೂರಾಡುತ್ತ ಹೊರಬಂದನು. ಪಕ್ಕದಲ್ಲಿಯೇ ಕೊಳಚೆ ನೀರಿನ ಗುಂಡಿ. ತೂಕತಪ್ಪಿ ಆತ ಕೊಳಚೆಯಲ್ಲಿ ಬಿದ್ದ. ಆ ಪರಿಸ್ಥಿತಿ ಕಂಡು ಕವಿಗೆ ಬಹಳ ಕನಿಕರ. ಸರ್ವಜ್ಞ ಮುಂದೆ ಬಂದು ಆತನನ್ನು ಎತ್ತಿ ರಸ್ತೆಗೆ ತಂದು ಬಿಟ್ಟನು. ಆಗ ಕವಿಯು ಬಹು ಮರುಕದಿಂದ, ಕೋಪದಿಂದ “ಸಿಂದಿಯ ಸೇವಿಪನು ಹಂದಿಯಂತಿರುತಿಹನು… ಕುಡುಕನು ಹಂದಿಗೂ ಕನಿಷ್ಠ” ಎಂದು ಹೇಳಿದ್ದಾನೆ. ಇಂಥ ಮಾದಕ ಪೇಯಗಳನ್ನು ಸೇವಿಸುವವರನ್ನು ಕಂಡು ಸರ್ವಜ್ಞ ತುಂಬಾ ಕೋಪ. ಸರ್ವಜ್ಞ ಸಾತ್ರಿಕನು, ಸದಾಚಾರಿಯೂ; ಎಲ್ಲರೂ ಕೂಡ ಒಳ್ಳೆಯ ನಡೆನುಡಿಯುಳ್ಳವರೇ ಆಗಬೇಕೆಂದು ಆತನ ಆಶಯ.

ಅಫೀಮು ತಿನ್ನುವವನನ್ನು ಕಂಡು “ಮದ್ದು ಮೆಲ್ಲುವನು ಪ್ರಬುದ್ಧನೆಂದೆನಬೇಡ” ಎಂದು ಹೇಳುತ್ತಾನೆ. ದುಶ್ಚಟಕ್ಕೆ ಬಲಿಯಾದವರು ಮನೆಯಲ್ಲಿನ ಎಲ್ಲ ಉಪಯೋಗಿ ವಸ್ತುಗಳನ್ನು ಮಾರಬಹುದು. ಅದರಂತೆ ಭಂಗಿ ಸೇದುವವನು ತಾನು ಧರಿಸಿದ “ಅಂಗಿ ಅರಿವೆಯ ಮಾರಿ ಭಂಗಿಯನು ಸೇದಿ ಮಂಗನಂದದಿ ಕುಣಿದಾಡಬಹುದು”. “ಹೊಗೆಯ ತಿಂಬುವದೊಂದು ಸುಗುಣವೆಂದೆನಬೇಡ” ಎಂದು ಹೊಗೆಸೊಪ್ಪಿನ ಚಟದ ಬಗೆ ಟೀಕಿಸುತ್ತಾನೆ. ಅದರಂತೆ ಲೆತ್ತದಾಟವೂ (ಜೂಜು) ಒಳ್ಳೆಯದಲ್ಲ. ಇಂಥ ಜೂಜನ್ನು ಆಡಿ ನಳ ಕೆಟ್ಟ, ಮತ್ತಾಡಿ ಧರ್ಮರಾಜ ಕೆಟ್ಟ, ನೋಡಿದ ನಾಲ್ವರು ತಿರಿದುಣಲು ಅಂರೆ ನಳಮಹಾರಾಜನು ಜೂಜಾಡಿ ತನ್ನ ರಾಜ್ಯವನ್ನು ಕಳೆದುಕೊಂಡನು. ಧರ್ಮರಾಯನು ಜೂಜಾಡಿ ಸೋತು ಕೌರವರಿಗೆ ರಾಜ್ಯ ಒಪ್ಪಿಸಿದನು. ಈ ಜೂಜಾಟ ನೋಡಿದವರು ಕೂಡ ಮನೆಮಾರು ಕಳೆದುಕೊಂಡು ಭಿಕ್ಷೆ ಬೇಡಬಹುದು.

"ಸಾಲಿಗನು ಬಂದು ಸೆಳೆದಾಗ"

ಆರೋಗ್ಯ: ಆರೋಗಣೆ

“ಅಜ್ಜಾ, ಮನೆಯೊಳಗೆ ಆರೋಗ್ಯದ ಸಲುವಾಗಿ ಸರ್ವಜ್ಞನ ವಚನ ಹೇಳುತ್ತಿಯಲ್ಲ, ಅದಾವುದು?

ಅಜ್ಜ ಹೇಳಿದ:

ಆ ವಚನದ ಅರ್ಥ ಹೀಗಿದೆ: “ಹಸಿವಿಲ್ಲದೆ ಉಣ್ಣ ಕೂಡದು, ಹಸಿವಾದಾಗ ಬರಿಹೊಟ್ಟೆಯಿಂದಿರ ಕೂಡದು. ತಂಗಳು ಬಿಸಿ ಸೇರಿಸಿ ಉಣ್ಣಬಾರದು”. ಈ ರೀತಿ ನಾವು ಆರೋಗ್ಯ ಕಾಯ್ದುಕೊಂಡರೆ ವೈದ್ಯರ ಗೊಡವೆ ಬೇಡ. ಇದಲ್ಲದೆ “ಉಂಡು ಶತಪಥ ನಡೆದು, ಉಂಡು ಎಡಮಗ್ಗುಲಲ್ಲಿ ಮಲಗುವುದು” ಒಳ್ಳೆಯದು. ಮತ್ತೆ “ಒಮ್ಮೆ ಉಂಡವ ತ್ಯಾಗಿ, ಇಮ್ಮೆ (ಎರಡು ಸಲ) ಉಂಡವ ಭೀಗಿ, ಬಿಮ್ಮನೆ (ಅತಿಯಾಗಿ) ಉಂಡವ ನೆರೆ ರೋಗಿ” ಅದೇ “ನಾಲಿಗೆಯ ಕಟ್ಟಿಹನು ಕಾಲನಿಗೆ ದೂರ” ನಂತೆ.

ಇನ್ನು ಎಲ್ಲ ಕಾಳುಕಡ್ಡಿಗಳ ಗುಣವಿಶೇಷ ಹೇಳುತ್ತೇನೆ.

“ಅಕ್ಕಿಯನು ಉಂಬುವನು ಹಕ್ಕಿಯಂತಾಗುವನು.”  “ರಾಗಿಯನು ಉಂಬುವನು ನಿರೋಗಿಯೆಂದೆನಿಸುವನು.” ಅಲ್ಲದೆ “ರಾಗಿ ಭೋಗಿಗಳಿಗಲ್ಲ ಬಡವರಿಗಾಗಿ ಬೆಳೆದಿಹುದು”.

ವ್ಯವಹಾರ ಜ್ಞಾನ

ಸರ್ವಜ್ಞ ಸಂಸಾರಿಯಾಗಿರಲಿಲ್ಲ. ಒಂದು ಕಡೆ ನಿಲ್ಲಲಿಲ್ಲ. ಆದರೂ ಸಂಸಾರಗಳಿಗೆ ಒಳ್ಳೆಯ ಬುದ್ಧಿವಾದ ಹೇಳಿದ್ದಾನೆ.

ಸಮಾಜದಲ್ಲಿ ಹಣಕ್ಕೆ ಪ್ರಾಧಾನ್ಯ. ಹಣವಿದ್ದವನಿಗೆ ಮರ್ಯಾದೆ. ಹಣವಿಲ್ಲದವನ್ನು ಕಂಡರೆ ಎಲ್ಲರಿಗೂ ತಾತ್ಸಾರ. ಸರ್ವಜ್ಞ ಹೇಳುತ್ತಾನೆ: “ಸಿರಿಯಣ್ಣನುಳ್ಳನಕ ಹಿರಿಯಣ್ಣನೆನಿಸಿಪ್ಪ, ಸಿರಿಯಣ್ಣ ಹೋದ ಮರುದಿನ ಹಿರಿಯಣ್ಣ ನರಿಯಣ್ಣ” ಆಗುತ್ತಾನೆ.

ಆದುದರಿಂದ ಮನುಷ್ಯ ಹಣವನ್ನು ಖರ್ಚುಮಾಡುವಾಗ ಎಚ್ಚರದಿಂದಬೇಕು. ಸಾಲವನ್ನೇನೋ ಮಾಡಬಹುದು. ಆದರೆ “ಸಾಲಗಾರನ ಬಾಳು ಗೋಳಿನ ಬಾಳು, ಅಪಮಾನದ ಬಾಳು. “ಸಾಲವನು ತರುವಾಗ ಹಾಲು ಬೋನುಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ” ಎನ್ನುತ್ತಾನೆ ಸರ್ವಜ್ಞ. ಸಾಲ ತರುವಾಗ ಹಾಲನ್ನವನ್ನುಂಡಂತೆ ಹಿತವಾಗಿರುತ್ತದೆ. ಸಾಲ ಕೊಟ್ಟವನು ಬಂದು ಹಣ ಹಿಂದಕ್ಕೆ ಕೊಡು ಎಂದು ಕೋಪದಿಂದ ಕೇಳಿದಾಗ, ಅಪಮಾನದ ಮಾತುಗಳನ್ನು ಆಡಿದಾಗ ಸಾಲಗಾರನ ಸಂಕಟ ಹೇಳುವಂತಿಲ್ಲ.

ಮುಖ್ಯವಾಗಿ ಇನ್ನೊಬ್ಬರ ಹಂಗಿನಲ್ಲಿರಬಾರದು.

ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು
ಭಂಗ
ಬಟ್ಟುಂಬ ಬಿಸಿಯನ್ನಕ್ಕಿಂತಲೂ
ತಂಗಳವೆ
ಲೇಸು ಸರ್ವಜ್ಞ!

ನಕ್ಕು ನಗಿಡುವ ನುಡಿ

ಸರ್ವಜ್ಞ ಸರಸ ರಸಿಕ ಕವಿ. ಆತ ಸತ್ಯನಿಷ್ಠುರನಾಗಿ ಒಂದಿಷ್ಟು ಕಠೋರನೆಂಬಂತೆ ಕಂಡುಬಂದರೂ ಆತನ ಮಾತಿನಲ್ಲಿಯ ವಿಡಂಬನೆ ಮತ್ತು ಕಂಡುಬಂದರೂ ಆತನ ಮಾತಿನಲ್ಲಿನ ವಿಡಂಬನೆ ಮತ್ತು ನಗೆಯನ್ನು ತಿಳಿದರೆ ಆತ ಹಾಸ್ಯಸ್ವಭಾವದವನೆಂದು ಅರಿವಾಗುವುದು. ಹಿರಿಯರು, ಕಿರಿಯರು ಎಲ್ಲರೂ ನಕ್ಕು ನಲಿಯುವಂತೆ ನಗೆಮಾತನ್ನು ಆಡಿದ್ದಾನೆ. “ನಕ್ಕು ನಗಿಸುವ ನುಡಿ ಲೇಸು” ಎಂದು ಆತ ಹೇಳಿದ್ದು, ಆತನ ಉದ್ದೇಶ ನಗೆಯಿಂದಲೂ ಸಮಾಜವನ್ನು ಸರಿಪಡಿಸುವುದಾಗಿದೆ. ಮನುಷ್ಯನ ಒಳ್ಳೆಯ ಆರೋಗ್ಯಕ್ಕೆ ನಗೆ ತುಂಬಸ ಹಿತಕಾರಿ ಎಂಬುದು ಆತನಿಗೂ ಗೊತ್ತಿದ್ದ ಸಂಗತಿ.

ಮೂರ್ಖರ ಜೊತೆ ಮಾತನಾಡುವ ಸಮಯ ಬಂದಾಗ, ಅವರ ಜೊತೆ ವಾದ ವಿವಾದಕ್ಕೆ ಹೋಗಬಾರದು. ಅವರಿಗೆ ತಿಳಿ ಹೇಳುವುದು ಅಸಾಧ್ಯ. ಅರ್ಥವಿಲ್ಲದ ಅವರ ಮಾತನ್ನು ಒಪ್ಪಿ ಮೌನಿಯಾದರೆ ಕ್ಷೇಮಕರ. ಮೂರ್ಖ “ಮೂರುಗಾವುದ ಹಾರಬಹುದೆಂದರೆ, ಹಾರಬಹುದೆಂದು” ಹೇಳಿ ಅವನ ಮಾತಿಗೆ ಸೈಗುಟ್ಟಬೇಕು. ಅದರಂತೆ “ನೆಲವನ್ನು ಮುಗಿಲನ್ನು ಹೋಲಿಯುವರುಂಟೇ?” ಎಂದಾಗ ಅದಕ್ಕೂ ಸಮ್ಮತಿಸಬೇಕು.

“ಹರಕು ಹೋಳಿಗೆ ಲೇಸು, ಮುರುಕು ಹಪ್ಪಳ ಲೇಸು, ಕುಕುರು ಕಡಲೆ ಬಲು ಲೇಸು, ಪಾಯಸದ ಸುರುಕು ಲೇಸು” ಎಂದು ಸರ್ವಜ್ಞ ಊಟದ ಬಗೆಗೆ ನಗೆಯಿಂದ ಹೇಳುತ್ತಾನೆ.

ಹೆಂಡತಿಗೆ ಭಯಪಡುವ ಗಂಡಸರಿಗೂ ಕೊರತೆಯಿಲ್ಲ. ಹೆಂಡತಿಗೆ ಹೆದರುವ ಹೇಡಿ ಗಂಡನನ್ನು ಕಂಡು, “ಹಿಂಡು ಕೋಳಿಗಳನ್ನು ಮುರಿದು ತಿನ್ನವ ನರಿ, ನಾಯಿಯನ್ನು ಕಂಡು ಓಡಿಹೋದಂತೆ” ಎಂದು ಅಣಕಿಸುತ್ತಾನೆ. ಆದರೂ ಅಡಿಗೆ ಮಾಡಿಹಾಕುವ ಹೆಂಡತಿಯಲ್ಲಿ ವೈರ ಬೇಡ. “ಅಟ್ಟುವಾಕೆಯೊಳು ಬೆಟ್ಟಿತ್ತು ಹಗೆ ಬೇಡ. ಸುಟ್ಟಗದಿ ಗೋಣು ಮುರಿವಳು” ಎಂದು ಎಚ್ಚರಿಸಿದ್ದಾನೆ.

ಎಲ್ಲ ವೃತ್ತಿಯ ಜನರಂತೆ ಗಾಣಿಗನು ಕೂಡ ವ್ಯವಹಾರ ಚತುರ. ಆತ ಶಿವನ ವಾಹನ ನಂದಿಯನ್ನು ಗಾಣಕ್ಕೆ ಕಟ್ಟಿ ಸದಾ ದುಡಿಸಿಕೊಳ್ಳುತ್ತಲೇ ಇರುತ್ತಾನೆ. ತನ್ನ ನಂದಿಯ ಕಷ್ಟ ವಿಚಾರಣೆಗಾಗಿ ಸ್ವತಃ ಶಂಕರನು ಭೂಮಿಗೆ ಇಳಿದು ಬಂದರೆ ಆ ಗಾಣಿಗ, ಶಿವನನ್ನು ಕೂಡ ಬಿಡದೆ ಆತನಿಂದ ಗಾಣ ಆಡಿಸಿಕೊಳ್ಳಬಹುದು ಎಂದು ವಿನೋದವಾಗಿ ಹೇಳುತ್ತಾನೆ ಸರ್ವಜ್ಞ.

ಮಕ್ಕಳ ಮೇಲೆ ಸರ್ವಜ್ಞ ತುಂಬ ಮಮತೆಯುಳ್ಳವ. ಎಲ್ಲರ ಮನೆಯಲ್ಲಿ ಮಕ್ಕಳಿದ್ದರೆ, ಅದು ಸುಂದರ ಸಂಸಾರ. ಅದಕ್ಕಾಗಿ ಆತ “ಮಕ್ಕಳಿಲ್ಲದ ಮನೆಯು, ಹಕ್ಕಿ ಇಲ್ಲದ ವನವು, ದಿಕ್ಕಿಲ್ಲದವನ ಸಂಸಾರ ಕಳ್ಳನು ಮನೆ ಹೊಕ್ಕಂತೆ” ಎನ್ನುತ್ತಾನೆ. ಅದೂ ಅಲ್ಲದೆ “ರೊಕ್ಕವಿಲ್ಲದ ಬಾಳ್ವೆ, ಮಕ್ಕಳಿಲ್ಲದ ಮನೆ, ಅಕ್ಕರಿಲ್ಲದ ತವರು, ಇವು ಮೂರು ದುಃಖಕ್ಕೆ ಕಾರಣ”

ಒಗಟುಗಳು

ಮಕ್ಕಳ ಬುದ್ಧಿ ಬೆಳೆಯಲು, ವಿವೇಚನಾ ಶಕ್ತಿ ವೃದ್ಧಿಯಾಗಲು, ಕೆಲವು ಬೌದ್ಧಿಕ ಆಟಗಳನ್ನು ಆಡುತ್ತಾರೆ. ಅವುಗಳಲ್ಲಿ ಒಗಟು ಹಾಕುವುದು ಒಂದು. ಸರ್ವಜ್ಞ ಕೂಡ ಅದೆಷ್ಟೋ ಒಗಟಿನ ವಚನಗಳನ್ನು ಹೇಳಿದ್ದಾನೆ. ನಾನು ಕೆಲವು ಆರಿಸಿ ಹೇಳುತ್ತೇನೆ, ನೀವು ಉತ್ತರಿಸಿರಿ.

೧. ಕಲ್ಲರಳಿ ಹೂವಾಗಿ ಎಲ್ಲರಿಗೆ ಬೇಕಾಗಿ, ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ, ಬಲ್ಲವರು ಹೇಳಿ.

೨. ಹತ್ತು ಸಾವಿರ ಕಣ್ಣು, ನೆತ್ತಿಲಾದರು ಬಾಲ, ಹುತ್ತಿನ ಹುಳವ ಹಿಡಿಯುವುದು, ಕವಿಜನರ ಮೊತ್ತವಿದ ಪೇಳಿ.

೩. ಹಲವು ಮಕ್ಕಳ ತಂದೆ, ತಲೆಯಲ್ಲಿ ಜುಟ್ಟವಗೆ ಸಲಗಳಿಗೆ ಜಾವವರಿವನ ಹೆಂಡತಿಗೆ ಮೊಲೆಯಿಲ್ಲ.

೪. ನೆತ್ತಿಯಲಿ ಉಂಬುವದು, ಸುತ್ತಲೂ ಸುರಿಸುವುದು ಎತ್ತಿದರೆ ಎರಡು ಹೋಳಹುದು, ಕವಿಗಳಿದಕುತ್ತರವ ಪೇಳಿ.

೫. ಕೋಡಗವು ಕುದುರೆಯಲಿ ನೋಡೋಡುತ ಹುಟ್ಟಿ, ಕಾಡಾನೆಗೆರಡು ಗರಿಮೂಡಿ ಗಗನದಿಂದಾಡುವದ ಕಂಡೆ.

೬. ಕಾಲಿಲ್ಲ ಕೊಂಬುಂಟು ಬಾಲದ ಪಕ್ಷಿಯದು, ಮೇಲೆ ಹಾರುವುದು ಹದ್ದಲ್ಲ, ಕವಿಗಳಲಿ ಬಾಲರಿದ ಪೇಳಿ.

೭. ಹಲ್ಲುಂಟು ಮೃಗವಲ್ಲ, ಸೊಲ್ಲು ಸೋಜಿಗವಲ್ಲ, ಕೊಲ್ಲುವುದು ತನ್ನ ನಂಬಿದರ, ಅದರಿಂದ ಬಲ್ಲವರು ಪೇಳಿ.

೮. ನೀರಿನಲ್ಲಿ ತಾ ಹುಟ್ಟಿ ನೀರನೆರೆ ನಂಬದದು, ನಾರಿಯರ ನಂಬಿ ಕೆಟ್ಟಿಹುದು, ಈ ಮಾತು ಆರಿಗರಿದಿಲ್ಲ?

ಸಂಗಣ್ಣ ಕೇಳಿದ ಒಗಟುಗಳಿಗೆ ಹುಡುಗರಿಗೆ ಖುಷಿಯಾಯಿತು. ಅವರು ಬುದ್ಧಿಗೆ ಸವಾಲಲ್ಲವೆ ಅವು? ಯೋಚಿಸಿದರು, ಲೆಕ್ಕ ಹಾಕಿದರು, ತಮಗೆ ತೋರಿದ  ಉತ್ತರಗಳನ್ನು ಹೇಳಿದರು. ಸರಿಯಾದ ಉತ್ತರ ಹೇಳಿದವರಿಗೆ ತಾತ “ಭೇಷ್” ಎಂದು ಬೆನ್ನು ತಟ್ಟಿದ. ತಪ್ಪಿದವರಿಗೆ “ಆ, ನಿನಗೆ ಚೆನ್ನಾಗಿ ಯೋಚಿಸುವುದಕ್ಕೆ ಬರುತ್ತದೆ. ಇನ್ನು ಸ್ವಲ್ಪ ಬುದ್ಧಿ ಉಪಯೋಗಿಸು” ಎಂದು ಹುರಿದುಂಬಿಸಿದ.

ಅಂತೂ ಎಲ್ಲ ಒಗಟುಗಳಿಗೂ ಸರಿಯಾದ ಉತ್ತರಗಳು ಬಂದವು. ಇವೇ ಉತ್ತರಗಳು:

೧. ಸುಣ್ಣದ ಹರಳು

೨. ನವಿಲು

೩. ಹುಂಜ

೪. ಬೀಸುವ ಕಲ್ಲು

೫. ಮೋಡ

೬. ಗಾಳಿಪಟ

೭. ಗಂಧದ ಕೊರಡು

೮. ಗರಗಸ

೯. ಉಪ್ಪು

“ಕನ್ನಡದ ಈ ಶ್ರೇಷ್ಠ ಜಾನಪದ ಕವಿಯನ್ನು ಮರೆಯಬೇಡಿ. ಈತನ ಮುತ್ತಿನ ಮಾತುಗಳು ನಮ್ಮ ಬದುಕಿಗೆ ದಾರಿದೀಪ ಆಗಿವೆ” ಎಂದು ಸಂಗಣ್ಣ ಎದ್ದಾಗ ಮಕ್ಕಳೂ ಸಂತೋಷದಿಂದ ಮಾವಿನ ಮರದಡಿ ಸಿದ್ಧವಾದ ಊಟದ ಎಲೆಯತ್ತ ಸಾಗಿದರು.

ಆಳಾಗಿ ಬಲ್ಲವನು ಆಳುವನು ಅರಸಾಗಿ
ಆಳಾಗಿ
ಬಾಳಲರಿಯದವ ಕಡೆಯಲ್ಲಿ
ಹಾಳಾಗಿ
ಹೋದ ಸರ್ವಜ್ಞ |

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ
ದುರ್ಜನರ
ಸಂಗದೊಡನಾಟ ಬಚ್ಚಲಿನ
ರೊಚ್ಚಿನಂತಿಹುದು
ಸರ್ವಜ್ಞ |

ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ
ಧಾರುಣಿಯು
ಎಲ್ಲ ಕುಲದೈವವಾಗಿನ್ನು
ಯಾರನ್ನು
ಬಿಡಲೊ ಸರ್ವಜ್ಞ |

ದೇವ ದೇವ ಮಾದೇವನೆನಬೇಡ
ದೇವರ ದೇವ ಭುವನದಾ ಪ್ರಾಣಿಗಳಿ
ಗಾದವನೆ
ದೇವ ಸರ್ವಜ್ಞ |

ಎಂದು ಹೇಳಿಕೊಳ್ಳುತ್ತಾ ಸಂಗಣ್ಣನೂ ಹೆಜ್ಜೆ ಹಾಕಿದ.