೧೯ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರವರೆ, ಎರಡು ದಿನ ನಡೆಯಲಿರುವ ಜಾನಪದ ವಿವಿಧ ಗೋಷ್ಠಿಗಳ ಅಧ್ಯಕ್ಷರೆ, ಪ್ರಬಂಧ ಮಂಡಿಸಲಿರುವ ಜಾನಪದ ವಿದ್ವಾಂಸರೆ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಿತ್ರರೆ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಅಧ್ಯಕ್ಷರೆ ಕುಲಸಚಿವರೆ ಸದಸ್ಯರೆ ಇಲ್ಲಿ ನೆರೆದಿರುವ ವಿಶೇಷ ಆಮಂತ್ರಿತರೆ, ಕಲಾಕಾರರೆ.

ಸಂಪ್ರದಾಯಗಳನ್ನು ಆಚರಣೆಯಲ್ಲಿ ಉಳಿಸಿಕೊಂಡು ಬಂದಿರುವ ಜನಸಮೂಹ ‘ಜನಪದ’ (Folk) ಈ ಜನಪದರಿಗಿರುವ ಬಾಯಿಮಾತಿನ ತಿಳುವಳಿಕೆಯೆಲ್ಲವೂ ‘ಜನಪದ’ (Folklore)ವೆನಿಸಿದೆ. ಶಿಷ್ಟಸಾಹಿತ್ಯ-ಶಾಸ್ತ್ರಸಾಹಿತ್ಯ-ಕಲೆಗಳಿಗೆಲ್ಲ ಜಾನಪದವೇ ಮೂಲ. ‘ಜನವಾಣಿ ಬೇರು, ಕವಿವಾಣಿ ಹೂ ಎಂದಂತೆ. ಹುಟ್ಟು ಸಾವುಗಳ ಮಧ್ಯಂತರದ, ಭೌತಿಕ ಪ್ರಪಂಚದ ಆಗುಹೋಗುಗಳೆಲ್ಲ ಈ ಜಾಜಪದದ ಅಧೀನ. ಶ್ರೀ ಸಾಮಾನ್ಯರ ಸಂಸ್ಕೃತಿಯೆನಿಸಿ ಜಾನಪದ ಸೊಮ್ಮಾಗಿವೆ.

‘ಜಾನಪದ’ ಇಂದು ಲೋಕವ್ಯಾಪಿ ಅಧ್ಯಯನದ ಹೊಸ ವಿಷಯ. ಸಮಾಜ ಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಭಾಷಾ ಶಾಸ್ತ್ರಜ್ಞರು, ವಿಜ್ಞಾನಿಗಳು, ಸಾಹಿತಿ ಕಲಾವಿದರು ಜಾನಪದದ ಸಂಗ್ರಹ-ಸಂಪಾದನೆ-ಸಂಶೋಧನೆಯ ಕಡೆಗೆ ವಿಶೇಷ ಒಲವು ತಾಳಿದ್ದಾರೆ. ಇದು ಯರದೇ ಒಬ್ಬರ ಸ್ವತ್ತಲ್ಲ, ಸಮಷ್ಟಿ ಪ್ರಜ್ಞೆಯ ಸರ್ವರ ಸಂಪತ್ತು. ಜರ್ಮನ್, ಇಂಗ್ಲೆಂಡ್, ಪಿನ್ಲೆಂಡ್, ಫ್ರಾನ್ಸ್, ರಶಿಯಾ, ಅಮೇರಿಕಾ, ಸ್ಪೇನ್, ಆಮರ್ಲಂಡ್, ನಾರ್ವೆ ಮೊದಲಾದ ದೇಶಗಳಲ್ಲಿಯಂತೆ ಭಾರತದಲ್ಲಿಯೂ ಹಲವಾರು ವಿದ್ವಾಂಸರು ಜಾನಪದದ ವಿವಿಧ ಮಜಲುಗಳಲ್ಲಿ ಕಾರ್ಯ ಮಾಡಿದ್ದಾರೆ.

ಕರ್ನಾಟಕದಲ್ಲಿಯೂ ಜಾನಪದದ ಅಧ್ಯಯನ ಅಧ್ಯಾಪನ, ಸಂಶೋಧನೆಗೆ ಇತ್ತೀಚಿನ ದಶಕಗಳಲ್ಲಿ ವಿದ್ವಾಂಸರಲ್ಲಿ ವಿಶೇಷ ಒಲವು ಮೂಡಿದೆ. ಕಾವ್ಯ ಸೌಂದರ್ಯದ ದೃಷ್ಟಿಯಿಂದ ಸಂಗ್ರಹ- ಸಂಪಾದನೆ ನಡೆಯುತ್ತಿದ್ದ ಈ ಅಧ್ಯಯನ ಚಾರಿತ್ರಿಕ ಅಂಗಗಳನ್ನೊಳಗೊಂಡು ಸಂಸ್ಕೃತಿಯ ಪ್ರತೀಕವಾಗಿ ಅಧ್ಯಯನಕೊಳ್ಳಪಟ್ಟಿತು. ಬರಬರುತ್ತ ಡಾಕ್ಟರೇಟ್ ಪದವಿಗೆ ಸಂಶೋಧನೆಯ ವಿಷಯವಾಗಿಯೂ ಆಯ್ಕೆಯಾಗತೊಡಗಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾ. ಬಿ.ಎಸ್. ಗದ್ದಾಗಿಮಠ ಅವರು ಬರೆದು ಸಾದರಪಡಿಸಿದ “ಕನ್ನಡ ಜಾನಪದ ಗೀತೆಗಳು” ಮಹಾ ಪ್ರಬಂಧಕ್ಕೆ ಪ್ರಥಮ ಪಿ.ಎಚ್.ಡಿ. ಪದವಿ ದೊರೆತದ್ದನ್ನು (೧೯೯೫) ಸ್ಮರಿಸಿಕೊಳ್ಳಬೇಕು. ಅಂದಿನಿಂದ ಇಲ್ಲಿಯವರೆಗೆ ವಿವಿಧ ವಿಶ್ವವಿದ್ಯಾಲಯದಿಂದ ಐವತ್ತಕ್ಕೂ ಹೆಚ್ಚು ಜನ ಸಂಶೋಧಕರು ಡಾಕ್ಟರೇಟ್ ಪದವಿ ಪಡೆದದ್ದು ಮತ್ತು ನೂರಾರು ಜನರು ಸಂಶೋಧನೆಯಲ್ಲಿ  ನಿರತರಾಗಿರುವುದು ಹೆಮ್ಮೆಯ ಅಭಿಮಾನ ಸಂಗತಿಯಾಗಿದೆ.

‘ಜಾನಪದ ಅಧ್ಯಯನ ಬರಿಯ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ಅದು ಇಂದು ವಿಜ್ಞಾನದ ವಿಷಯವಾಗಿ ಪರಿಗಣಿತವಾಗಿದೆ. ಇದರಿಂದಾಗಿ ಜಾನಪದ ಅಧ್ಯಯನ ವ್ಯಾಪ್ತಿ ಜಗದಗಲ, ಮುಗಿಲಗಲವಾಗಿದೆ. ಜಾನಪದದ ಅಧ್ಯಯನದಿಂದ  ಜ್ಞಾನದ ಪರಧಿ ಹೆಚ್ಚು ಹೆಚ್ಚು ವಿಸ್ತಾರಗೊಳ್ಳುತ್ತಿದೆ. ಅಂತೆಯೇ ಜಾನಪದ ಬರಿಯ ಸಾಹಿತಿಗಳ ಅಧ್ಯಯನದ ವಿಷಯವಾಗಿರದೆ ಇಂಜನೀಯರರ, ವೈದ್ಯಕೀಯ, ವಿಜ್ಞಾನ, ಕಲೆ, ಸಾಹಿತ್ಯ ಹೀಗೆ ಎಲ್ಲವುಗಳ ಅಧ್ಯಯನಕ್ಕೂ ತಾಯಿ ಬೇಕಾಗಿರುತ್ತದೆ. ಸ್ವಾರ್ಥಸಾಧಕರು, ಅಸೂಯೆ ಪಟ್ಟುಕೊಂಡು ಅದರ ಬೆಳವಣಿಗೆಯನ್ನು ಕಂಡು ಸಹಿಸಿಕೊಳ್ಳಲಾರದೆ, ಅಂಧರಂತೆ ಮೂಗು ಮುರಿಯುವ, ಮನೆಮುರುಕುತನದ ದುಷ್ಟಪ್ರವೃತ್ತಿಯನ್ನು ಬಿಟ್ಟಷ್ಟು ವಾಸಿ. ಇದರರ್ಥ ಜಾನಪದದ ಹೆಸರಿನಲ್ಲಿ ಹೊರಬರುತ್ತಿರುವುದೆಲ್ಲವು ಶ್ರೇಷ್ಠ ಎಂದು ನಾನು ಭಾವಿಸಿಲ್ಲ. ಲೋಪ-ದೋಷಗಳನ್ನು ತಿದ್ದುವ, ಅದರ ಉತ್ತಮಿಕೆಗಾಗಿ ಸಲಹೆಸೂಚನೆಗಳಿಗೆ ಯಾವಾಗಲೂ ಸ್ವಾಗತವಿದ್ದೇ ಇದೆ. ‘ಎಡೆವಾಯ್ದು ಬಂದ ತಪ್ಪಂ ಹಿಡಿದು ಸಾಧಿಸದೆ ಕಡೆತನಕ- ಬಂದ ಲೇಸಿಂಗೆ ತಲೆದೂಗೆ ತಲೆಯೊಡೆವುದೆ?’

ಕರ್ನಾಟಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಇಂದು ಜಾನಪದದ ಅಧ್ಯಯನ, ಅಧ್ಯಾಪನ, ಸಂಶೋಧನೆಗೆ ಮನ್ನಣೆ ದೊರೆತಿದೆ. ಸ್ನಾತಕೋತ್ತರ ಹಾಗೂ ಡಾಕ್ಟರೇಟ ಪದವಿಗಳನ್ನು ನೀಡುತ್ತ ಬಂದಿವೆ. ಹೀಗಿದ್ದು ನಮ್ಮ ಸರ್ಕಾರು (K.P.S.E) ಜಾನಪದದ ಪದವೀಧರರನ್ನು ಕಡೆಗಣಿಸುತ್ತಿರುವುದು ದುರದೃಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಜಾನಪದ ವಿದ್ವಾಂಸರು ರಾಜ್ಯ ಜಾನಪದ ಅಕಾಡೆಮಿ ಸೂಕ್ತ ಕ್ರಮ ಕೈಕೊಳ್ಳುವಂತಾಗಬೇಕು. ಅದಕ್ಕೂ ಮಣಿಯದಿದ್ದಲ್ಲಿ ಎಲ್ಲ ರಂಗದಲ್ಲಿ ನಡೆಸುತ್ತಿರುವ ಅಧ್ಯಯನ, ಸಂಶೋಧನೆಗಳನ್ನು ವಿಶ್ವವಿದ್ಯಾಲಯಗಳು ನಿಲ್ಲಿಸಿ ಬಿಡಬೇಕು. ಎಲ್ಲ ವಿಷಯಗಳ ಅಧ್ಯಯನ ಮೂಲಬೇರು ಜಾನಪದವಲ್ಲವೇ?

ಕನ್ನಡ ಜಾನಪದದ ಅಸ್ತಿತ್ವಕ್ಕಾಗಿ ಪರಿಶ್ರಮ ಪಟ್ಟಿರುವ ಡಾ. ದೇ. ಜವರೇಗೌಡ, ಡಾ. ಆರ್. ಸಿ. ಹಿರೇಮಠ, ಡಾ. ಹಾ.ಮಾ. ನಾಯಕ, ಡಾ. ಎಂ.ಎಸ್. ಸುಂಕಾಪುರ ಡಾ. ಶಿವರಾಮ ಕಾರಂತ ಪ್ರೊ. ಕು.ಶಿ. ಹರಿದಾಸಭಟ್, ಡಾ. ಬಿ.ಬಿ. ಹೆಂಡಿ ಡಾ. ಜೀ. ಶಂ. ಪರಮಶಿವಯ್ಯ ಶ್ರೀ ಪಿ. ಆರ್. ತಿಪ್ಪೆಸ್ವಾಮಿ, ಶ್ರೀ ಎಚ್. ಎಲ್. ನಾಗೇಗೌಡ, ಡಾ. ಚಂದ್ರಶೇಖರ ಕಂಬಾರ ಮೊದಲಾದ ವಿದ್ವಾಂಸರು ಕಟ್ಟಿ ಬೆಳೆಸಿರುವ ಸಂಸ್ಥೆಗಳನ್ನು ಹಾಳು ಮಾಡುವ ಇಲ್ಲವೆ ಛಿದ್ರ ಛಿದ್ರಗೊಳಿಸುವ ಕ್ರೂರಿಕೃತ್ಯಕ್ಕೆ ತೆರೆಬೀಳುವಂತಾಗಬೇಕು. ಎಲ್ಲರೂ ಒಂದಾಗಿ ತಂದಾಗಿ, ಕನ್ನಡನಾಡು ನುಡಿಯ, ಸಂಸ್ಕೃತಿಯ ಅಭಿವೃದ್ಧಿಗೆ ಹೋರಾಡುವಂತಾಗಬೇಕು.

ಇಂದು ಕರ್ನಾಟಕ ರಾಜ್ಯದಲ್ಲಿ ಜಾನಪಪದ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಉಡುಪಿಯ ದಕ್ಷಿಣ ಭಾರತದ ರಂಗಕಲೆಗಳ ಅಧ್ಯಯನ ಕೇಂದ್ರ ಎಚ್. ಎಲ್. ನಾಗೇಗೌಡ ಟ್ರಸ್ಟ್‌. ಮೊದಲಾದ ಸಂಸ್ಥೆಗಳಲ್ಲದೆ ವಿಶ್ವವಿದ್ಯಾಲಯಗಳು ಜಾನಪದ ಕ್ಷೇತ್ರದಲ್ಲಿ ಪವಾಡ ಎನ್ನುವಂತೆ ಅದ್ಭುತ ಕಾರ್ಯ ಮಾಡಿವೆ ಮಾಡುತ್ತಲಿವೆ. ಅಧ್ಯಯನ ಅಧ್ಯಾಪನ, ಸಂಗ್ರಹ, ಸಂಪಾದನೆ, ಪ್ರಕಟನೆ, ಕಮ್ಮಟ ವಿಚಾರಗೋಷ್ಠಿ, ಪ್ರದರ್ಶನ, ರೆಕಾರ್ಡಿಂಗ್, ವಿಡೀಯೋ ಚಿತ್ರೀಕರಣ ಮೊದಲಾದ ರೀತಿಯಲ್ಲಿ ವೈಜ್ಞಾನಿಕ ಮನೋಬಲದ ಹಿನ್ನೆಲೆಯಲ್ಲಿ, ನಡೆಸುತ್ತ ಬಂದಿರುವ ಚಟುವಟಿಕೆಗಳಿಂದ ಎಂಥವರೂ ಹೆಮ್ಮೆ ಪಟ್ಟುಕೊಳ್ಳಬಹುದಾಗಿದೆ. ಹೀಗೆ ಹೇಳುವುದು ವೈಭವವೀಕರಣದ ಮಾತಲ್ಲ, ಇಷ್ಟ್ಕಕೆ ಸಾಲದು, ಇನ್ನೂ ಹೆಚ್ಚು ಕ್ರಮ ಬದ್ಧವಾದ, ಸಮಗ್ರ ಅಧ್ಯಯನ ನಡೆಯಬೇಕಾಗಿದೆ. ವಿಮರ್ಶೆ, ತೌಲನಿಕ ಅಧ್ಯಯನ, ಭಾಷಾಂತರ ಕಾರ್ಯ ನಡೆಯಬೇಕಾಗಿದೆ. ಇದು ಅರೆಮನಸ್ಸಿನ ಅರೆಕಾಲಿನ ಸಂಶೋಧಕರಿಂದ, ನಡೆಯದೆ-ನಿಷ್ಠಾವಂತ, ಪೂರ್ಣಾವಧಿ ಸಂಶೋಧಕರಿಂದ ಟೀಮ್ (TEAM) ಸಿಫಾರಸ್‌ದಿಂದ ಈ ಕಾರ್ಯ ನಡೆದಷ್ಟು ಕ್ಷೇಮಕರ. ಅಂದಾಗ ಇದೇ ಪ್ರಪಂಚವೇ ಬೆರಗಾಗುವ ಜಾನಪದ ಸಂಪತ್ತು ಕರ್ನಾಟಕದೆಂದು ಸ್ವಾಭಿಮಾನ ಪಟ್ಟುಕೊಳ್ಳುವಂತಾದೀತು.

ಇಂದು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ೧೯ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಮಂತ್ರಿಸಿ, ಜಾನಪದ ಕ್ಷೇತ್ರದಲ್ಲೂ ಅಲ್ಪಮಟ್ಟಿನ ಸೇವೆ ಸಲ್ಲಿಸಿದ ನನಗೆ ಗೌರವ ನೀಡಿದ್ದಕ್ಕಾಗಿ ಕನ್ನಡ ಅಧ್ಯಯನ ಪೀಠದ ಚೇರ್‌ಮನ್ ಡಾ. ಎಸ್.ಜಿ. ಇಮ್ರಾಪೂರ ಅವರಿಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಅಧ್ಯಕ್ಷರಿಗೂ ಈ ಸಮ್ಮೇಳನದ ಸಂಚಾಲಕರಿಗೂ ನನ್ನ ಕೃತಜ್ಞತೆಗಳು.

ದಿ. ೧೬, ೧೭, /೫/೧೯೯೨ ಈ ಎರಡು ದಿನಗಳ ವರೆಗೆ ನಡೆಯಲಿರುವ ‘ವಸತಿ ಜಾನಪದ’ ಕುರಿತಾದ ಗೋಷ್ಠಿಗಳಲ್ಲಿ ಹತ್ತಿಪ್ಪತ್ತು ಜಾನಪದ ವಿದ್ವಾಂಸರು ತಮ್ಮ ತಮ್ಮ ಪ್ರಬಂಧಗಳನ್ನು ಮಂಡಿಸುತ್ತಲಿರುವುದು ಸಂತೋಷದ ಸಂಗತಿಯಾಗಿದೆ. ಜನಪದ ಜೀವನದಲ್ಲಿ ಕಣ್ಣಿಗೆ ಕಾಣುವಂತಹ ವಸ್ತು ಒಳವಿನ್ಯಾಸಗಳು ಭೌತಿಕ ಸಂಸ್ಕೃತಿಯೆನಿಸಿವೆ (Material Culture) ಮನೆ, ಮನೆ ಒಳಗಿನ ಸಾಮಾಗ್ರಿಗಳು ದೃಶ್ಯ ಗುಣಗಳನ್ನು ಹೊಂದಿರುತ್ತವೆ. ವಾಸ್ತು (ಕಟ್ಟಡ)  ಮನೆ ಬರಿಯ ಮನೆಯಲ್ಲ, ಕಲೆಯಿಂದ ಕೂಡಿದ ಮನೆ. ಅದನ್ನು ನಮ್ಮವರು ಧರೆ, ಹರ್ಮ್ಯ, ಪರ್ಯಕ ಎಂದು ವಿಭಜಿಸಿದ್ದಾರೆ. ಹರ್ಮ್ಯದಲ್ಲಿ ಪ್ರಸಾದ, ಮಂಟಪ, ಸಭಾ, ಶಾಲಾ, ರಂಗ, ನೃತ್ಯ ಮೊದಲಾದ ಪ್ರಕಾರಗಳಿದ್ದು ಪ್ರಾಸಾದಲ್ಲೂ ಗೃಹಸ್ಥರ ಮನೆ, ಅರಮನೆ, ದೇಗುಲಗಳನ್ನು ಕಾಣುತ್ತೇವೆ. ಉಳಿದವುಗಳು ಹೆಚ್ಚಾಗಿ ಸಮುದಾಯಿಕವಾಗಿರುತ್ತದೆ. ಕೃಷಿ ಪ್ರಧಾನ ಮನೆ ವಸತಿ ಸಂರ್ಕೀರ್ಣವಾಗಿರುತ್ತದೆ. ಇಂಥ ಜನಪದರ ಭೌತಿಕ ಸಂಸ್ಕೃತಿಯ ಒಳಪದರುಗಳನ್ನು ಆಳವಾಗಿ ಅಧ್ಯಯನ ಮಾಡಲು ಈ ಸಮ್ಮೇಳನದ ಸಂಚಾಲಕರಿಗೆ ಮತ್ತೊಮ್ಮೆ ಕೃತಜ್ಞತೆಗಳನ್ನು ಹೇಳಿ- ಗೋಷ್ಠಿಗಳು ಯಶಸ್ವಿಯಾಗಲೆಂದು ಹಾರೈಸುವೆ. ಈ ಸಮ್ಮೇಳನದಲ್ಲಿ ಮಂಡಿಸಲಿರುವ ಮತ್ತು ಈ ಹಿಂದಿನ ಸಮ್ಮೇಳನಗಳಲ್ಲಿ ಮಂಡಿಸಿ ಪ್ರಕಟವಾಗದೆ ಇದ್ದ ಪ್ರಬಂಧಗಳನ್ನು ಕುಲಪತಿಗಳು ಮುದ್ರಿಸಲು ಕೈಮ ಕೈಕೊಳ್ಳಬೇಕೆಂದು ಕಳಕಳಿಯಿಂದ ಪ್ರಾರ್ಥಿಸಿಕೊಳ್ಳುವೆ.

೧೯೭೩ ರಿಂದ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿಕೊಂಡು ಬರುತ್ತಲಿರುವ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಪ್ರತಿ ವರ್ಷವೂ ತಪ್ಪದೆ ನಡೆಯುವಂತಾಗಲಿ ಎಂದು ಹಾರೈಸಿ ಈ ಸಮ್ಮೇಳನದ ಉದ್ಘಾಟನೆ ಮಾಡಿದ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರ ಅವರಿಗೂ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿ. ಶಂ. ಪರಮಶಿವಯ್ಯ ಅವರಿಗೂ, ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಲಿರುವ ಹಾಗೂ ಪ್ರಬಂಧ ಮಂಡಿಸಲಿರುವ ಜಾನಪದ ವಿದ್ವಾಂಸರಿಗೂನ ರೆದ ಸಭಿಕರಿಗೂ ಜಾನಪದ ಕಲಾಕಾರರಿಗೂ ಕನ್ನಡ ಅಧ್ಯಯನ ಪೀಠದ ಶಿಕ್ಷಕ-ಶಿಕ್ಷಕೇತರ ಮಿತ್ರರಿಗೂ ವಂದಿಸುವೆ.

ಮಲ್ಲಿಕಾರ್ಜುನ ಶಿ. ಲಠ್ಠೆ
೧೬೦೫೧೯೯೫