ಬೆಂಗಳೂರು ನಗರಕ್ಕೆ ಜಾಗತೀಕರಣದ ಫಲವಾಗಿ ಆಧುನಿಕತೆ ದಾಳಿ ಇಟ್ಟ ಪರಿಣಾಮ ಅತ್ಯಾಧುನಿಕ ನಿರ್ಮಾಣಗಳು ಬಹುಮಹಡಿ ಕಟ್ಟಗಳು ತಲೆ ಎತ್ತಿವೆ. ಆಧುನಿಕತೆ ಮೇಳವಿಸುತ್ತ ಹೊಸ ಹೊಸ ಗಗನಚುಂಬಿ ನಿರ್ಮಾಣಗಳು ರೂಪುಗೊಂಡಾಗ್ಯೂ ಬೆಂಗಳೂರಿನ ಕೆಲವು ಪ್ರಮುಖ ಕಟ್ಟಡಗಳು ಇಂದಿಗೂ ತಮ್ಮ ಸಾಂಪ್ರದಾಯಿಕ ವಿಶಿಷ್ಟ ಶೈಲಿಯನ್ನು ಉಳಿಸಿ ಪರಂಪರೆಯ ಹೆಜ್ಜೆ ಗುರುತುಗಳನ್ನು ಕಾಣಿಸುತ್ತವೆ.

ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿದ್ದ ಸರ್.ಕೆ.ಪಿ.ಪುಟ್ಟಣ್ಣ ಚೆಟ್ಟಿ ಅವರ ಹೆಸರಿನಲ್ಲಿ ನಿರ್ಮಿಸಲಾಗಿದ್ದು, ಈ ಕಟ್ಟಡ ನಿರ್ಮಾಣ ಅವರ ಸಂಕಲ್ಪ ಕೂಡ. 1913ರಿಂದ 1920ರ ವರೆಗೆ ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿದ್ದ ಸರ್ ಕೆ.ಪಿ.ಪುಟ್ಟಣ್ಣಚೆಟ್ಟಿ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಗಿದೆ.
ಇಂತಹ ನಿರ್ಮಾಣಗಳಲ್ಲಿ ಒಂದು 1935ರಲ್ಲಿ ಸಾಂಪ್ರದಾಯಿಕ ಯೂರೋಪಿಯನ್ ಗ್ರೀಕೋ-ರೋಮನ್ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿರುವ ಬೆಂಗಳೂರು ಹೃದಯ ಭಾಗದ ಟೌನ್ ಹಾಲ್ ಕಟ್ಟಡ. ಕಟ್ಟಡದ ದ್ವಾರಮಂಟಪದ ಎರಡೂ ಬದಿಯಲ್ಲಿ ಕಟ್ಟಡದ ಪ್ರವೇಶಕ್ಕೆ ವಿಸ್ತಾರವಾದ ಮೆಟ್ಟಿಲುಗಳಿವೆ. ಇಡಿಯ ಕಟ್ಟಡವನ್ನು ಆಯತಾಕಾರದ ಚೌಕಟ್ಟಿನಲ್ಲಿ ಕಟ್ಟಲಾಗಿದ್ದು, ಈ ಕಟ್ಟಡದಲ್ಲಿನ ರಂಗಮಂದಿರದಲ್ಲಿ ಎರಡು ಅಂತಸ್ತುಗಳ ನಿರ್ಮಾಣ ಮಾಡಲಾಗಿದೆ. ನೆಲಮಹಡಿಯಲ್ಲಿ 626 ಆಸನಗಳು ಮತ್ತು ಮೊದಲ ಅಂತಸ್ತಿನಲ್ಲಿ 310 ಆಸನಗಳು, ಎರಡನೆಯ ಅಂತಸ್ತಿನಲ್ಲಿ 102 ಆಸನಗಳೂ ಸೇರಿ ಒಟ್ಟು 1038 ಆಸನಗಳ ರಂಗಮಂದಿರ ನಿರ್ಮಾಣ ಮಾಡಲಾಯಿತು. ಪ್ರತಿಷ್ಠಿತ ಪ್ರವೇಶಕ್ಕಾಗಿ ಪ್ರತ್ಯೇಕ ದ್ವಾರವನ್ನು ನಿರ್ಮಿಸಲಾಗಿತ್ತು. ಇಡಿಯ ಕಟ್ಟಡದಲ್ಲಿ ತೇಗವನ್ನು ಬಾಗಿಲು ಕಿಟಕಿಗಳ ನಿರ್ಮಾಣಕ್ಕೆ ಬಳಸಲಾಗಿದೆ.

town_hall_bangalore

1933ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾರ್ಚ್ 06, 1933ರಂದು ಶಂಕುಸ್ಥಾಪನೆ ಮಾಡಿದರು. ಸೆಪ್ಟೆಂಬರ್ 11, 1935ರಲ್ಲಿ ಪೂರ್ಣಗೊಂಡ ಟೌನ್ ಹಾಲ್ ಯುವರಾಜ ಕಂಠೀರವ ನರಸರಾಜ ಒಡೆಯರ್ ಅವರಿಂದ ಲೋಕಾರ್ಪಣೆಗೊಂಡಿತು.
ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ಸಂಪೂರ್ಣ ನಿರ್ಮಾಣದ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದರು. ಸುಮಾರು ರೂ.1.75 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಟೌನ್ ಹಾಲ್ ಕಟ್ಟಡದ ವಿನ್ಯಾಸವನ್ನು ಸರ್ಕಾರದ ವಾಸ್ತು ಶಿಲ್ಪಿ ಶ್ರೀ ಲಕ್ಷ್ಮಿನರಸಪ್ಪ ಅವರು ಚೀಫ್ ಇಂಜಿನಿಯರುಗಳಾದ ಶ್ರೀ ಎಂ.ಜಿ.ರಂಗಯ್ಯ, ಶ್ರೀ ಎನ್.ಎನ್.ಅಯ್ಯಂಗಾರ್, ಶ್ರೀ ಎ.ತಂದೋಣಿರಾವ್, ಮತ್ತು ಕಟ್ಟಡ ನಿರ್ಮಾಣ ಗುತ್ತಿಗೆದಾರ ಶ್ರೀ ಚಿಕ್ಕನಂಜುಂಡಪ್ಪ ಅವರು ಕಾಮಗಾರಿ ನಿರ್ವಹಿಸಿದರು.

townhallp

1976ರಲ್ಲಿ ಟೌನ್ ಹಾಲ್ ಕಾರ್ಯಕ್ರಮದಲ್ಲಿ ರಷಿಯನ್ ಬ್ಯಾಲೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಅಂದಿನ ಮಾನ್ಯ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಅಲ್ಲಿನ ವೇದಿಕೆ ಎತ್ತರವಾಗಿದ್ದು, ಮುಂದಿನ ಸಾಲುಗಳ ಆಸನಗಳ ವೀಕ್ಷಕರಿಗೆ ಕಾರ್ಯಕ್ರಮ ವೀಕ್ಷಣೆ ಶ್ರಮದಾಯಕವಾಗಿರುವುದನ್ನು ಮನಗಂಡು ಟೌನ್ ಹಾಲ್ ನವೀಕರಣಕ್ಕೆ ಆದೇಶಿಸಿದರು.

1976ರಲ್ಲಿ ರೂ ಹತ್ತು ಲಕ್ಷಗಳ ಅಂದಾಜು ವೆಚ್ಚದಲ್ಲಿ ಆರಂಭಗೊಂಡ ನವೀಕರಣ ಕಾಮಗಾರಿಯು ಕುಂಟುತ್ತ ಸಾಗಿ ನಂತರ 1990ರಲ್ಲಿ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಸುಮಾರು 65.00ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವೇದಿಕೆ ವಿಸ್ತಾರಗೊಂಡು, ವೇದಿಕೆ ಮತ್ತು ಕ್ಯಾಟ್ ವಾಕುಗಳನ್ನು ತೇಗದಲ್ಲಿ ಪುನರ್ ನಿರ್ಮಿಸಿ, ನವೀಕೃತ ಟೌನ್ ಹಾಲ್ ಕಟ್ಟಡದಲ್ಲಿ ಆಸನಗಳ ಸಂಖ್ಯೆ 810ಕ್ಕೆ ಇಳಿಸಲಾಯಿತು.
ಟೌನ್ ಹಾಲ್ ನಿರ್ಮಾಣದ ಮೂರು ದಶಕಗಳ ನಂತರ ನಿರ್ಮಾಣಗೊಂಡ ರವೀಂದ್ರ ಕಲಾಕ್ಷೇತ್ರವೂ ಸೇರಿದಂತೆ ಈ ಇಡಿಯ ವಲಯವು ಕಳೆದ ಅರ್ಧ ಶತಮಾನ ಕಾಲದಿಂದ ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿದೆ.

town-hall

ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಪ್ರಭುತ್ವಕ್ಕೆ ತಮ್ಮ ದನಿಯನ್ನು ತಿಳಿಸಲು ಟೌನ್ ಹಾಲ್ ಮೆಟ್ಟಿಲುಗಳು ವೇದಿಕೆಯಾಗಿ ದೊರೆಯ ತನಕ ದೂರು ಮುಟ್ಟಿಸಿವೆ. ಇಂದಿಗೂ ಹೋರಾಟಗಾರರ ನೆಚ್ಚಿನ ಪ್ರತಿಭಟನಾ ಸ್ಥಳವಾಗಿದೆ. ಬೆಂಗಳೂರಿನ ಸ್ಥಳೀಯಾಡಳಿತ 2014ರಲ್ಲಿ ಸಂಪನ್ಮೂಲ ಕೊರತೆಯನ್ನು ನೀಗಿಕೊಳ್ಳಲು ಟೌನ್ ಹಾಲ್ ಅನ್ನು ಸಾಲಕ್ಕೆ ಖಾತ್ರಿಯಾಗಿ ಅಡಮಾನ ಇಡುವ ಪ್ರಸ್ತಾವನೆಯನ್ನು ಮುಂದಿಟ್ಟಾಗ ವ್ಯಾಪಕ ಪ್ರತಿಭಟನೆಯ ನಂತರ ಸಾರ್ವಜನಿಕ ಅಭಿಪ್ರಾಯಕ್ಕೆ ಮಣಿದು ಸ್ಥಳೀಯಾಡಳಿತ ಹಿಂದೆಗೆಯಬೇಕಾಯಿತು. ಇದು ಸಾರ್ವಜನಿಕರ ಮನದಲ್ಲಿ ಟೌನ್ ಹಾಲ್ ಪಡೆದಿರುವ ಸ್ಥಾನವನ್ನು ತೋರುತ್ತದೆ.
ಆನಂತರ ಟೌನ್ ಹಾಲ್ ಆಧುನೀಕರಣ ಪ್ರಸ್ಥಾಪ ಅದರ ನಿರ್ಮಾಣದ 80ನೆಯ ವರ್ಷಾಚರಣೆಯ ಸಂದರ್ಭದಲ್ಲಿ, ಅಂದರೆ 2014ರಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಚರ್ಚಿತವಾಗಿ ಸುಮಾರು ಐದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. 2015ರಲ್ಲಿ ಸುಮಾರು ಎಂಟು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಣಗೊಂಡ ಟೌನ್ ಹಾಲ್ ಸಾರ್ವಜನಿಕ ಬಳಕೆಗೆ ದೊರೆತಿದೆ. ಬೆಂಗಳೂರಿನ ನಗರೀಕರಣದ ಓಘದಲ್ಲಿಯೂ ಟೌನ್ ಹಾಲಿನಂತಹ ಕಟ್ಟಡಗಳು ನಗರದ ಹಿರಿಮೆನ್ನು ಸಾರುವ ಹೇಳುವ ಸಂಕೇತಗಳಾಗಿಯೇ ಉಳಿದಿವೆ.