ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಸ್ತುತ ಹಮ್ಮಿಕೊಂಡಿರುವ ಸಂಸ್ಕೃತಿ ಮಹಿಳಾ ಮಾಲಿಕೆ ಸಂಪುಟಗಳ ಪ್ರಕಟಣಾ ಯೋಜನೆಯು ಹಲವು ದೃಷ್ಟಿಗಳಿಂದ ಮಹತ್ವದ್ದಾಗಿದೆ. ಪ್ರೊ. ಬರಗೂರು ರಾಮಚಂದ್ರಪ್ಪನವರು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಉಪ ಸಂಸ್ಕೃತಿ ಅಧ್ಯಯನ ಮತ್ತು ಪ್ರಕಟಣಾ ಯೋಜನೆಯನ್ನು ಕೈಗೊಂಡಿಂದ್ದರು. ಕರ್ನಾಟಕದ ಹಲವಾರು ಜನಾಂಗಗಳ ಸಾಂಸ್ಕೃತಿಕ ಅನನ್ಯತೆಯನ್ನು ಶೋಧಿಸುವ ಕೆಲಸವನ್ನು ಆ ಮಾಲಿಕೆಯ ಲೇಖಕರು ಮಾಡಿದ್ದರು. ಈ ಯೋಜನೆಯನ್ನು ಬರಗೂರು ಉಪಸಂಸ್ಕೃತಿ ಮಾಲಿಕೆ ಎಂದು ಕರೆದಿದ್ದರೂ. ವಾಸ್ತವವಾಗಿ ಸಮಾಜದ ಅಂಚಿನಲ್ಲಿದ್ದ ಸಮುದಾಯಗಳನ್ನು ಅವುಗಳ ಆರ್ಥಿಕ ಉತ್ಪಾದನಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ವಿವರಗಳನ್ನು ಸಂಗ್ರಹಿಸಿಕೊಟ್ಟಿರುವ ಲೇಖಕರು ಆ ವಿವರಗಳ ಮೂಲಕ ಪ್ರಕಟವಾಗುವ ಜನಪದರ ಲೋಕದೃಷ್ಟಿಯ ಸ್ವರೂಪವನ್ನು ಚರ್ಚಿಸಿದ್ದರು. ಜಾತಿಯ ಹೆಸರು, ಸಮುದಾಯ ಸಂಬಂಧವಾದ ಐತಿಹ್ಯಗಳು, ವೃತ್ತಿ ಪರಂಪರೆಗಳು ಜೀವನಾವರ್ತನ ಹಾಗೂ ವಾರ್ಷಿಕಾವರ್ತನ ಆಚರಣೆಗಳು, ಮೌಖಿಕ ಸಾಹಿತ್ಯ ಪ್ರಕಾರಗಳು, ಆರಾಧನೆ ಮತ್ತು ಇತರ ರಂಗ ಪ್ರದರ್ಶನ ಕಲೆಗಳು ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಅಪೂರ್ವ ಮಾಹಿತಿಗಳಿರುವ ಉಪ ಸಂಸ್ಕೃತಿ ಮಾಲಿಕೆಯ ಕೃತಿಗಳಿಗೆ ಸಾಂಸ್ಕೃತಿಕ ಅಧ್ಯಯನದ ಇತಿಹಾಸದಲ್ಲಿ ವಿಶೇಷವಾದ ಮಹತ್ವವಿದೆ. ಸಂಸ್ಕೃತಿ ಮಹಿಳಾ ಮಾಲಿಕೆಯು ಹೆಸರೇ ಸೂಚಿಸುವಂತೆ ಉಪಸಂಸ್ಕೃತಿ ಮಾಲಿಕೆಗಿಂತ ಭಿನ್ನವಾಗಿದೆ. ಉಪಸಂಸ್ಕೃತಿ ಮಾಲಿಕೆಯಲ್ಲಿ ಒಂದು ನಿರ್ದಿಷ್ಟ ಜಾತಿಯ ಜನರ ಬದುಕು ಮತ್ತು ಗ್ರಹಿಕೆಗಳ ಸಾಮಾನ್ಯ ವಿವೇಚನೆ ನಡೆದಿದೆ. ಗಂಡಸರು ಮತ್ತು ಹೆಂಗಸರು ಎನ್ನುವ ಭೇದವಿಲ್ಲದೆ ಮತ್ತು ಹಾಗೆ ಭೇದ ಮಾಡದೇ ಎಲ್ಲರೂ ಸೇರಿ ನಿರ್ವಹಿಸಿಕೊಳ್ಳುವ ಬದುಕಿನ ವಿನ್ಯಾಸಗಳನ್ನು ಉಪಸಂಸ್ಕೃತಿ ಮಾಲಿಕೆಯ ಲೇಖಕರು ಚರ್ಚಿಸಿದ್ದಾರೆ. ಸಂಸ್ಕೃತಿ ಮಹಿಳಾ ಮಾಲಿಕೆಯನ್ನು ರೂಪಿಸುವಾಗ ಇದ್ದ ಮುಖ್ಯ  ಉದ್ದೇಶವೆಂದರೆ ಜಾತಿನಿಷ್ಠ ಸಮುದಾಯಗಳ ಸಾಂಸ್ಕೃತಿಕ ಜಗತ್ತನ್ನು ಮಹಿಳೆಯರ ದೃಷ್ಠಿಕೋನದಿಂದ ನೋಡುವುದಾಗಿದೆ. ಪುರುಷಪ್ರಧಾನ ಆಲೋಚನೆಗಳನ್ನು  ಬಹುಮಟ್ಟಿಗೆ ವಿಜೃಂಭಿಸಿ ಕಟ್ಟಿಕೊಡುವ ಉಪಸಂಸ್ಕೃತಿ ಮಾಲಿಕೆಗಿಂತ ಸಂಸ್ಕೃತಿ ಮಹಿಳಾ ಮಾಲಿಕೆಯು ಹಲವು ಸ್ತರಗಳಲ್ಲಿ ಭಿನ್ನವಾಗಿದೆ. ಈ ಯೋಜನೆಯು ಹಿಂದಿನದರ ಮುಂದುವರಿಕೆ ಎಂದು ಹೇಳುವುದಕ್ಕಿಂತ ಸಂಸ್ಕೃತಿಯಲ್ಲಿ ಮಹಿಳಾ ಸಂವೇದನೆಗಳನ್ನು ಗುರುತಿಸುವ ಸೈದ್ದಾಂತಿಕತೆಯನ್ನು ಹೊಂದಿರುವ ಯೋಜನೆ ಎಂಬುದಾಗಿ ತಿಳಿಯಬಹುದು.

ಕ್ಷೇತ್ರಕಾರ್ಯವನ್ನು ನಡೆಸಿ ದಾಖಲಿಸಿಕೊಂಡಿರುವ ಮಾಹಿತಿಗಳನ್ನು ಬಳಸಿಕೊಂಡು ಈ ಸಂಪುಟದಲ್ಲಿರುವ ಲೇಖನಗಳನ್ನು ಬರೆದಿದ್ದಾರೆ. ಯಾವುದೇ ಒಂದು ಸಮುದಾಯದ ಸಂಸ್ಕೃತಿಯ ರಚನೆಯಲ್ಲಿ ಮನುಷ್ಯ ಘಟಕ, ಪ್ರಾಣಿಘಟಕ ಮತ್ತು ಸಸ್ಯಘಟಕ ಇವು ಪ್ರಧಾನ ಪಾತ್ರ ವಹಿಸುತ್ತವೆ. ಮನುಷ್ಯ ಘಟಕದಲ್ಲಿ ಗಂಡಸರು ಮತ್ತು ಹೆಂಗಸರು ಸೇರುತ್ತಾರೆ. ಮಾಹಿತಿಗಳನ್ನು ಸಂಗ್ರಹಿಸುವಾಗ ಹೆಂಗಸರಿಗೆ ಪ್ರಾಶಸ್ತ್ಯ ನೀಡುವುದರ ಮೂಲಕ ಸಂಗ್ರಹಿಸಲಾಗುವ ಮಾಹಿತಿಗಳು ಅಜ್ಞಾತವಾಗಿರುವ ಸ್ತ್ರೀ ಜಗತ್ತಿನ ಆಯಾಮಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಿದೆ. ಸಂಸ್ಕೃತಿ ಅಧ್ಯಯನವೇ ಆಗಿರುವ ಜಾನಪದದಲ್ಲಿ ಮಹಿಳೆಯರ ಲೋಕದೃಷ್ಟಿಯನ್ನು ಅನಾವರಣ ಮಾಡುವ ಪ್ರಯತ್ನಗಳು ಇತ್ತೀಚೆಗೆ ನಡೆಯುತ್ತಿವೆ. ಒಂದು ನಿರ್ದಿಷ್ಟ ಸಂಸ್ಕೃತಿಯಲ್ಲಿ ಹೆಣ್ಣನ್ನು ಗುರುತಿಸುವ ಕೆಲಸವು ಮುಖ್ಯವಾಗಿ ಎರಡು ನೆಲೆಗಳಲ್ಲಿ ನಡೆಯುತ್ತದೆ. ಜೀವಂತವೂ, ಚಲನಶೀಲವೂ ಆಗಿರುವ ಒಂದು ಸಂಸ್ಕೃತಿಯ ನಿರಂತರ ಮುಂದುವರಿಕೆಯಲ್ಲಿ ಹೆಣ್ಣು ವಹಿಸುವ ಪಾತ್ರಗಳೇನು ಎಂಬ ವಿವೇಚನೆ ಒಂದು ನೆಲೆಯಾದರೆ, ಸಂಸ್ಕೃತಿಯ ರಾಚನಿಕ ಸ್ವರೂಪವು ಹೆಣ್ಣನ್ನು ಹೇಗೆ ಬಿಂಬಿಸುತ್ತದೆ ಮತ್ತು ಪ್ರತಿನಿಧಿಸುತ್ತದೆ ಎಂಬುದು ಇನ್ನೊಂದು ನೆಲೆಯಾಗಿದೆ. ಈ ಎರಡೂ ನೆಲೆಗಳಲ್ಲಿ ಕರಾವಳಿ ಕರ್ನಾಟಕದ ನಲಿಕೆ, ಪರವ, ಬಿಲ್ಲವ, ಮೊಗೇರ, ಮನ್ಸ, ಕೋಟೆ ಮೊದಲಾದ ಜನಾಂಗಗಳ ಮಹಿಳಾ ಸಂಸ್ಕೃತಿಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಾಗಿದೆ.

ಈ ಸಂಪುಟದ ಲೇಖನಗಳ ಮಾಹಿತಿ ಶರೀರದ ಸ್ವರೂಪ ಮತ್ತು ವ್ಯಾಪ್ತಿಯ ಕುರಿತಂತೆ  ಕೆಲವು ಮಾತುಗಳನ್ನು ಹೇಳಬಯಸುತ್ತೇನೆ. ಜಾನಪದ ಆಕರಗಳ ಮಾಹಿತಿಗಳ ಜೊತೆಗೆ ಲಿಖಿತ ಆಕರಗಳ ಮಾಹಿತಿಗಳನ್ನು ಕೂಡಾ ಬಳಸಿಕೊಳ್ಳಲಾಗಿದೆ. ಯಾವುದೇ ಒಂದು ಜನಾಂಗದ ಜಾನಪದದಲ್ಲಿ ಮುಖ್ಯವಾಗಿ ನಾಲ್ಕು ವರ್ಗಗಳಿವೆ. 1. ಜನಪದ ಸಾಹಿತ್ಯ, 2. ಭೌತಿಕ ಸಂಸ್ಕೃತಿ, 3.ಸಾಮಾಜಿಕ ಸಂಪ್ರದಾಯ, 4. ಪ್ರದರ್ಶಾನಾತ್ಮಕ ಕಲೆಗಳು. ಜನಪದ ಸಾಹಿತ್ಯದಲ್ಲಿ ಎರಡು ಬಗೆಗಳಿವೆ. 1. ಗದ್ಯಪ್ರಕಾರ 2. ಪದ್ಯ ಪ್ರಕಾರ. ಗಾದೆ, ಒಗಟು, ಕತೆ, ಪುರಾಣ, ಐಹಿತ್ಯ, ನುಡಿಗಟ್ಟು, ಹೇಳಿಕೆ, ಅರಿಕೆಯ ಮಾತು ಮೊದಲಾದವು ಗದ್ಯ ಪ್ರಕಾರಗಳಾಗಿವೆ. ಗೀತೆಗಳು, ಲಾವಣಿಗಳು, ಪದಗಳು, ಮಹಾಕಾವ್ಯಗಳು, ಪಡ್ದನಗಳು, ಸಂಧಿಗಳು, ಕೆಲಸದ ಹಾಡುಗಳು- ಇವು ಪದ್ಯ ಪ್ರಕಾರದಲ್ಲಿ ಸೇರುತ್ತವೆ. ಎರಡನೆಯದಾದ ಭೌತಿಕ ಸಂಸ್ಕೃತಿಯ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳು, ವೃತ್ತಿ ಸಂಬಂಧೀ ಸಲಕರಣೆಗಳು, ಉಡುಪುಗಳು, ವಾಸ್ತುಶಿಲ್ಪ, ಕಟ್ಟಡಗಳು, ಅಲಂಕಾರ ಸಾಮಗ್ರಿಗಳು, ಚಿತ್ರಕಲೆ, ಆಭರಣಗಳು, ಆಯುಧಗಳು, ಅಳತೆ ತೂಕದ ಮಾಪನಗಳು, ಆಹಾರ ಸಾಮಗ್ರಿಗಳು, ವೈದ್ಯಪದ್ಧತಿ ಮೊದಲಾದುವು ಸೇರುತ್ತವೆ. ಮೂರನೆಯಾದ ಸಾಮಾಜಿಕ ಸಂಪ್ರದಾಯಗಳ ವರ್ಗದಲ್ಲಿ ಜೀವನಾರ್ತನ ಆಚರಣೆಗಳು ಮತ್ತು ವಾರ್ಷಿಕಾವರ್ತನ ಆಚರಣೆಗಳು ಇರುತ್ತವೆ. ಹುಟ್ಟು, ಹೆಸರಿಡುವುದು, ತೊಟ್ಟಿನಲ್ಲಿ ಹಾಕುವುದು, ಅನ್ನ ಕೊಡುವುದು, ಓದಿನ ಆರಂಭ, ಮೊದಲ ಬಾರಿಗೆ  ಕೂದಲು ಕತ್ತರಿಸುವುದು, ಹೆಣ್ಣು ಮೈನೆರೆಯುವುದು, ಹೆಣ್ಣು ನೋಡುವುದು, ನಿಶ್ಚಯ ಮತ್ತು ಮದುವೆ, ಸೀಮಂತ, ಬಾಣಂತನ, ಸಾವು, ಮರಣೋತ್ತರ ಆಚರಣೆಗಳು ಇವುಗಳೆಲ್ಲ ಜೀವನಾವರ್ತನ ಆಚರಣೆಗಳಾಗಿವೆ. ಅಷ್ಟಮಿ, ಚೌತಿ, ಶ್ರಾವಣ ಸಂಕ್ರಮಣ  ವಿಷು ಸಂಕ್ರಮಣ, ಆಷಾಢ ಅಮಾವಾಸ್ಯೆ, ನವರಾತ್ರಿ, ನೂಲಹುಣ್ಣಿಮೆ, ಎಳ್ಳು ಅಮಾವಸ್ಯೆ, ಗೌರಿಹಬ್ಬ, ಮಹಾಲಯ ಅಮಾವಾಸ್ಯೆ, ಕಡಟ್ಟಸದಂತಹ ಭೂಮಿಪೂಜೆ, ದೀಪಾವಳಿ, ಹೊಸ ಅಕ್ಕಿ ಊಟ ಇವುಗಳೆಲ್ಲ ಪ್ರತೀ ವರ್ಷ ಪುನರಾವರ್ತನೆಗೊಳ್ಳುವ ಆಚರಣೆಗಳಾಗಿವೆ. ನಾಲ್ಕನೆಯ ಪ್ರದರ್ಶನಾತ್ಮಕ ಕಲೆಗಳ ವರ್ಗದಲ್ಲಿ ಕುಣಿತಗಳು, ಆರಾಧನೆಗಳು, ಕ್ರೀಡೆಗಳು ಮತ್ತು ಆಟಗಳೆಂಬ ಬಗೆಗಳಿವೆ. ದುಡಿಕುಣಿತ, ಆಟಿಕಳೆಂಜ, ಮಾದಿರ, ಕರಂಗೋಲು, ಕಂಗಿಲು, ಪುರುಷ ಕುಣಿತ, ಬಾಲೆಸಾಂತು, ಸೋಣದ ಜೋಗಿ ಇವು ಕುಣಿತಗಳಾದರೆ; ಭುತಾರಾಧನೆ, ಸಿರಿ ಆರಾಧನೆ; ನಾಗಾರಾಧನೆ, ಜಾತ್ರೆಗಳು, ಮಾರಿಹಬ್ಬ ಇವು ಮುಖ್ಯ ಆರಾಧನೆಗಳಾಗಿವೆ. ಕಂಬಳ, ಕಾರಿ ಕಟ್ಟುವುದು ಮತ್ತು ಕೋಳಿ ಅಂಕ ಕ್ರೀಡೆಗಳಾಗಿ, ಹುಲಿ ದನ, ಚೆನ್ನೆಮಣೆ, ಚೆಂಡು, ಜಿಬಿಲಿ, ಮುಟ್ಟಾಟ, ಡೊಂಕಾಟ, ಚಿನ್ನಿದಾಂಡು, ಮರಕೋತಿ ಮೊದಲಾದ ಐವತ್ತಕ್ಕಿಂತ ಹೆಚ್ಚಿನ ಆಟಗಳು ಪ್ರದರ್ಶನಗೊಳ್ಳುತ್ತಿವೆ. ಈ ಬಗೆಯ ಸಾಹಿತ್ಯ, ಸಂಸ್ಕೃತಿ, ಆಚರಣೆ ಮತ್ತು ಕಲೆಗಳು ಒಟ್ಟು ಸೇರಿ ಜಾನಪದದ ಸ್ವರೂಪವನ್ನು ನಿರ್ಧರಿಸುತ್ತವೆ. ಇಂತಹ ಜಾನಪದವು ಪ್ರಾದೇಶಿಕ ಮತ್ತು ಜನಾಂಗಿಕ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ತುಳುನಾಡು ಅಥವಾ ಕರಾವಳಿ ಭಾಗದ ಜಾನಪದವನ್ನು ಗಮನದಲ್ಲಿರಿಸಿಕೊಂಡು ಮೇಲಿನ ಪಟ್ಟಿಯನ್ನು ನೀಡಲಾಗಿದೆ. ತುಳು ಜಾನಪದವು ಒಳಗೊಳ್ಳುವ ನಾಲ್ಕು ವರ್ಗಗಳ ವಿವಿಧ ಪ್ರಕಾರಗಳು ಮತ್ತು ಬಗೆಗಳ ಮಾಹಿತಿಗಳನ್ನು ಬಳಸಿಕೊಂಡು ಇಲ್ಲಿನ ಲೇಖನಗಳನ್ನು ಬರೆಯುವಂತೆ ಲೇಖಕರಿಗೆ ಸೂಚಿಸಲಾಗಿದ್ದು, ಇದನ್ನು ಬಹುಮಟ್ಟಿಗೆ ಪಾಲಿಸಿರುವುದು ಈ ಲೇಖನಗಳ ಮಾಹಿತಿ ಶರೀರವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.

ಈ ಸಂಪುಟದಲ್ಲಿರುವ ಲೇಖನಗಳಲ್ಲಿ ಅಧಿಕೃತವಾದ ಮಾಹಿತಿಗಳಿವೆ. ಬೇರೆ ಬೇರೆ ಜಾತಿ ಸಮುದಾಯಗಳಿಗೆ ಸಂಬಂಧಪಟ್ಟ ಭಾಷೆ, ಜನಸಂಖ್ಯೆ, ವಲಸೆ, ವೃತ್ತಿ ಪರಂಪರೆ, ಶಿಕ್ಷಣ, ಉದ್ಯೋಗ, ಆರ್ಥಿಕ ಸಂಪನ್ಮೂಲಗಳು, ಕುಟುಂಬ ಪದ್ಧತಿ, ಭೂಹಿಡುವಳಿ ಇತ್ಯಾದಿ ಪ್ರಾಥಮಿಕ ಮಾಹಿತಿಗಳನ್ನು ಹಾಗೆಯೇ ಬಳಸಿಕೊಂಡು ಈ ಜನರ ವಾಸ್ತವ ಬದುಕಿನ ಚಿತ್ರಣವನ್ನು ಮಾಡಲಾಗಿದೆ. ಹೀಗೆ ಮಾಡುವಾಗ ಮಾಹಿತಿಗಳನ್ನು ವಿವರಣೆಗಾಗಿ ಉಪಯೋಗಿಸಿಕೊಳ್ಳಲಾಗಿದೆ. ಜನಾಂಗಗಳಿಗೆ ಸಂಬಂಧಪಟ್ಟ ಜಾನಪದ ಮಾಹಿತಿಗಳನ್ನು ಬಳಸಿಕೊಳ್ಳುವಾಗ ಬೇರೆಯದೇ  ಆದ ಗ್ರಹಿಕೆಯನ್ನು ಇಟ್ಟುಕೊಳ್ಳಲಾಗಿದೆ. ಸಾಹಿತ್ಯ ಒಳಗೊಳ್ಳುವ ಹಾಡುಗಳು, ಕಥೆಗಳು, ಪುರಾಣಗಳು ಮತ್ತು ಹಲವು ಬಗೆಯ ಆಚರಣೆಗಳು ಹಾಗೂ ಪ್ರದರ್ಶನಾತ್ಮಕ ಆರಾಧನೆ, ಕುಣಿತ ಮತ್ತು ಕ್ರಿಡೇಗಳನ್ನು ಕಲಾತ್ಮಕ ಅಭಿವ್ಯಕ್ತಿಗಳು ಎಂಬುದಾಗಿ ಪರಿಭಾವಿಸಿಕೊಳ್ಳಲಾಗಿದೆ. ಇಂತಹ ಕಲಾತ್ಮಕ ಅಭಿವ್ಯಕ್ತಿಗಳ ಮೂಲಕ ಜನರ ಆಲೋಚನೆಗಳು- ಪರಿಕಲ್ಪನಾತ್ಮಕವಾಗಿ ಹೇಳುವುದಾದರೆ “ಲೋಕದೃಷ್ಟಿ”ಯು ಅನಾವರಣಗೊಳ್ಳುತ್ತದೆ. ಜಾನಪದ ಸಾಮಗ್ರಿಗಳನ್ನು ಸಂಸ್ಕೃತಿ ಅಧ್ಯಯನಕ್ಕೆ ಆಕರವನ್ನಾಗಿ ಬಳಸಿಕೊಳ್ಳುವಾಗ ಆ ತಾತ್ತ್ವಿಕತೆಯು ಬಹಳ ಮುಖ್ಯವಾಗುತ್ತದೆ. ಕಥೆಗಳು ಕೇವಲ ಕಥೆಗಳಾಗದೆ, ಹಾಡುಗಳು ಕೇವಲ ಹಾಡುಗಳಾಗದೆ ಇವು ವಿಚಾರ ಮತ್ತು ಸಂದೇಶಗಳ ಸಾಂಕೇತಿಕ ಅಭಿವ್ಯಕ್ತಿಗಳಾಗುತ್ತವೆ. ಕುಣಿತಗಳಲ್ಲಿರುವ ಹಲವು ಬಗೆಯ ದೃಶ್ಯ ಮತ್ತು ಶ್ರವ್ಯ ಪರಿಕರಗಳು ಇತಿಹಾಸ ಮತ್ತು ವರ್ತಮಾನದ ಸತ್ಯಗಳನ್ನು ಮುಂದಿರುತ್ತವೆ. ಬಹುಬಗೆಯ ಭಾವಗಳು, ಆಸೆ-ನಿರಾಶೆಗಳು, ಕನಸು-ಹತಾಶೆಗಳು ಸೂಚ್ಯವೂ ಧ್ವನಿಪೂಣವೂ ಆದ ರೀತಿಯಲ್ಲಿ ಜಾನಪದದ ಮೂಲಕ ಪ್ರಕಟವಾಗುತ್ತವೆ ಎಂಬ ನಿಲುವು ಸಂಸ್ಕೃತಿ ಅಧ್ಯಯನದಲ್ಲಿ ಮೌಖಿಕ ಆಕರಗಳನ್ನು ಬಳಸಿಕೊಳ್ಳುವಾಗ ಬಹಳ ಮುಖ್ಯವಾಗುತ್ತದೆ. ಇಲ್ಲಿ ಇನ್ನೊಂದು ಮಾತನ್ನು ಹೇಳಬೇಕು. ಮಹಿಳೆಯರ ಸಂಸ್ಕೃತಿ ಮತ್ತು ಸಂಸ್ಕೃತಿಯಲ್ಲಿ ಮಹಿಳೆ ಎಂಬ ಎರಡು ಪ್ರಧಾನ ಆಯಾಮಗಳನ್ನು ಚರ್ಚಿಸಲು ಇಲ್ಲಿನ ಲೇಖನಗಳು ಉದ್ದೇಶಿಸಿವೆ. ಹಾಗಾಗಿ ಕಲಾತ್ಮಕ ಅಭಿವ್ಯಕ್ತಿಯಾದ ಜಾನಪದವನ್ನು ಬಳಸಿಕೊಳ್ಳುವಾಗ ಮಹಿಳೆಯರ ಚಿಂತನೆಗಳು ಮತ್ತು ಮಹಿಳೆಯರ ಪ್ರಾತಿನಿಧ್ಯವು ಪ್ರಕಟವಾದ ಬಗೆಯ ಕಡೆಗೆ ಲಕ್ಷ್ಯ ಹರಿಸಲಾಗಿದೆ. ಇಂತಹ ಸೈದ್ದಾಂತಿಕವೂ ತಾತ್ತ್ವಿಕವೂ ಆದ ತಿಳುವಳಿಕೆಯನ್ನು ಲೇಖಕರಿಗೆ ನೀಡುವ ಸಲುವಾಗಿ ಸಮಾಲೋಚನಾ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಲಭ್ಯವಿರುವ ಪ್ರಕಟಿತ ಮಾಹಿತಿಗಳ ಜೊತೆಗೆ ಹೊಸತಾಗಿ ಸಂಗ್ರಹಿಸಿದ ಮಾಹಿತಿಗಳನ್ನು ಇಟ್ಟುಕೊಂಡು ಈ ವರೆಗೆ ನಡೆದಿರುವ ಸಂಸ್ಕೃತಿ ವಿವೇಚನೆಗಿಂತ ಭಿನ್ನವಾಗಿ ಮಹಿಳೆಯರ ಕಣ್ಣುಗಳಿಂದ ಸಂಸ್ಕೃತಿಯನ್ನು ಪರಿಶೀಲಿಸುವ ಅಗತ್ಯವನ್ನು ಲೇಖಕರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ತುಳುವ ಸಾಂಸ್ಕೃತಿಕ ವಲಯದಲ್ಲಿ ಬಹು ಸಂಸ್ಕೃತಿಗಳ ರಚನೆ ಮತ್ತು ಮುಂದುವರಿಕೆಯಲ್ಲಿ ಮಹಿಳೆಯರು ವಹಿಸಿದ ಪಾತ್ರ ಮತ್ತು ಅವರು ನೀಡಿದ ಕೊಡುಗೆಗಳನ್ನು ಗುರುತಿಸುವಲ್ಲಿ ಈ ಸಂಪುಟದ ಲೇಖಕರು ಯಶಸ್ವಿಯಾಗಿದ್ದಾರೆ.

ಈ ಸಂಪುಟದ ಲೇಖನಗಳು ಮಹಿಳಾ ಸಂಸ್ಕೃತಿಯನ್ನು ಬಹುಮುಖವಾಗಿ ನಿರೂಪಿಸುತ್ತವೆ. ಮಹಿಳೆಯರು ಗಂಡಸರಂತೆ ಹೊಲಗದ್ದೆಗಳಲ್ಲಿ ದುಡಿಯುತ್ತಾರೆ. ಬೇಸಾಯದ ಎಲ್ಲ ಹಂತಗಳಲ್ಲಿ ಅವರೊಂದಿಗೆ ಸಹಕರಿಸುತ್ತಾರೆ. ಸಹಭಾಗಿತ್ವದ ನೆಲೆಯಲ್ಲಿ ಆರಾಧನೆಗಳಲ್ಲಿ ಭಾಗವಹಿಸುತ್ತಾರೆ. ಕುಟುಂಬಕೇಂದ್ರಿಕ ಆಚರಣೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಕುಟುಂಬ ಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಕೌಟುಂಬಿಕ ಸಂದರ್ಭಗಳನ್ನು ಬೆಸೆದು ಪೋಷಿಸುವಲ್ಲಿ ಎಚ್ಚರ ವಹಿಸುತ್ತಾರೆ. ಮಕ್ಕಳ ಮತ್ತು ವಯಸ್ಸಾದವರ ಪಾಲನೆ, ಪೋಷಣೆ ಮಾಡುತ್ತಾರೆ. ದೇಶೀಯ ವೈದ್ಯ ಪದ್ಧತಿಯ ತಿಳುವಳಿಕೆಯನ್ನು ಪಡೆದಿರುವ ಇವರು ಮನೆಮದ್ದು ಅಥವಾ ನಾಟಿ ವೈದ್ಯಕ್ಕತ ಪ್ರಸಿದ್ಧರಾಗಿದ್ದಾರೆ. ಸ್ಥಳೀಯ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸುವ ವಸ್ತುಗಳಲ್ಲಿ ಅಪರಿಮಿತವಾದ ಕರಕೌಶಲ್ಯಗಳನ್ನು ಮೆರೆಯುತ್ತಾರೆ. ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುತ್ತಾರೆ. ನೂರಾರು ಕತೆಗಳನ್ನು ಹೇಳಬಲ್ಲ ಕತೆಗಾರ್ತಿಯರಿದ್ದಾರೆ. ಕಬಿತ, ಸಂಧಿ, ಪಾಡ್ದನಗಳನ್ನು ಹಾಡಬಲ್ಲ ಪ್ರತಿಭಾವಂತ ಹಾಡುಗಾರ್ತಿಯರಿದ್ದಾರೆ. ಜೀವನಾವರ್ತನ ಆಚರಣೆಗಳ ಅಪೂರ್ವ ಮತ್ತು ಅಧಿಕೃತ ಮಾಹಿತಿಗಳ ತಿಳುವಳಿಕೆಯನ್ನು ಹೊಂದಿದ್ದಾರೆ. ಹಬ್ಬ ಹರಿದಿನಗಳ ಸಿದ್ಧತೆಗಳ ಮುಂಚೂಣಿಯಲ್ಲಿರುತ್ತಾರೆ. ಗುರಿಕಾರ್ತಿಯಾಗಿ ಜಾತಿಕಟ್ಟಿನ ಪದ್ಧತಿಗಳನ್ನು ಮುಂದುವರಿಸುತ್ತಾರೆ. ಹೆಣ್ಣು ಮತ್ತು ಮಣ್ಣಿನಲ್ಲಿ ಫಲವಂತಿಕೆಯನ್ನು ತುಂಬುವ ಆಶಯಗಳನ್ನು ಆಚರಣೆಗಳ ಮೂಲಕ ಮಾಡುತ್ತಾರೆ. ಹಾಡು, ವಸ್ತುಗಳ ಬಳಕೆ ಮತ್ತು ಹಲವಾರು ವಿಧಿವಿಧಾನಗಳ ಮೂಲಕ ತಾಯ್ತನದ ಹಂಬಲವನ್ನು ಪ್ರಕಟಿಸುತ್ತಾರೆ. ಪ್ರಜಾಸತ್ತಾತ್ಮಕವಾದ, ನೆಲದ ಕಡೆಗೆ ನೋಡುವ ಮತ್ತು ಇಹದ ಮಹತ್ವವನ್ನು ಸಾರುವ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ವಿಶಿಷ್ಟ ಪರಿಭಾಷಿಕ ಪದಗಳ ಮೂಲಕ ಭಾಷಾಸಂಪತ್ತು ಹೆಚ್ಚುವಂತೆ ಮಾಡುದ್ದಾರೆ. ಈ ಎಲ್ಲ ರೀತಿಗಳಲ್ಲಿ ಮಹಿಳಾ ಜಗತ್ತನ್ನು ಪರಿಚಯಿಸುವ ಮತ್ತು ಅನನ್ಯತೆಗಳನ್ನು ಶೋಧಿಸುವ ಈ ಸಂಪುಟದಲ್ಲಿ ಮಹಿಳೆಯರ ಸಾಂಸ್ಕೃತಿಕ ಇತಿಹಾಸದ ಕಥನವಿದು.

ಮಹಿಳೆಯರು ಮಾಡುವ ಕೆಲಸಗಳು ಮನೆಯೊಳಗೆ ಮಾತ್ರ ಸೀಮಿತವಾಗಿಲ್ಲ, ಅಂಗಳದಾಚೆಗಿನ ಕೃಷಿಸಂಸ್ಕೃತಿ ಅವರು ಪ್ರಧಾನ ಪಾತ್ರ ವಹಿಸುತ್ತಾರೆ. ಸಾಮುದಾಯಿಕ ಆರ್ಥಿಕ ಉತ್ಪಾದನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. “ಮನೆಯೊಳಗಿನ ಜಗತ್ತಷ್ಟೇ ಅವಳಿಗೆ ತಿಳಿದಿರುವುದು ಮತ್ತು ಕೌಟುಂಬಿಕ ಸಂಗತಿಗಳೇ ಅವರ ಸಾಹಿತ್ಯದ ವಸ್ತು” ಎಂಬ ಪ್ರಚಲಿತ ಅಭಿಪ್ರಾಯವನ್ನು ಇಲ್ಲಿನ ಲೇಖನಗಳು ಸಂದೇಹದಿಂದ ನೋಡುವಂತೆ ನಮ್ಮನ್ನು ಒತ್ತಾಯಿಸುತ್ತವೆ. ಸಾರ್ವಜನಿಕ ಹಿತಾಸಕ್ತಿಯ ಚಿಂತನೆಗಳುಳ್ಳ ಮಹಾಕಾವ್ಯಗಳನ್ನು ಮಹಿಳೆಯರು ಮತ್ತೆ ಮತ್ತೆ ಕಟ್ಟಬಲ್ಲವರಾಗಿದ್ದಾರೆ. ಪುರುಷ ಪ್ರಾಬಲ್ಯದ ವಿರುದ್ಧ ಪ್ರತಿಭಟನೆ ಮತ್ತು ಹೋರಾಟವನ್ನು ಯಶಸ್ವಿಯಾಗಿ ನಡೆಸಿ, ಮಹಿಳಾ ವಿಮೋಚನೆಯ ಸಾಧ್ಯತೆಗಳನ್ನು ತಿಳಿಸುವ ಸಿರಿ ಮಹಾಕಾವ್ಯವನ್ನು ಮಹಿಳೆಯರು ಹಾಡುತ್ತಾ ಬಂದಿದ್ದಾರೆ. ಮನೆ, ಮದುವೆ, ಕೃಷಿ, ಆರಾಧನೆ -ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಮಹಿಳೆಯರು ನಿರ್ವಹಿಸುತ್ತಾ ಬಂದ ಜವಾಬ್ದಾರಿಯುತ ಕೆಲಸಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಕೆಲಸಗಳ ವೈವಿಧ್ಯ ಮತ್ತು ಪ್ರಮಾಣವನ್ನು ನೋಡಿದರೆ ಮಹಿಳೆಯರ ಪಾಲು ಗಂಡಸರಿಗಿಂತ ಹೆಚ್ಚಾಗಿದೆ ಎಂಬುದು ಈ ಲೇಖನಗಳಿಂದ ಸ್ಪಷ್ಟವಾಗಿ ಅರಿವಾಗುತ್ತದೆ. ಎಲ್ಲ ರಂಗಗಳಲ್ಲಿ ಕಾಣಿಸಿಕೊಳ್ಳುವ ಮತ್ತು ಹೆಚ್ಚುಕೆಲಸಗಳನ್ನು ಮಾಡುವ ಮಹಿಳೆಯರ ಪ್ರಾತಿನಿಧ್ಯ ಕಡಿಮೆಯಾಗಿರುವ ಕೊರತೆಯನ್ನು ಈ ಸಂಪುಟದ ಲೇಖನಗಳು ಖಂಡಿತವಾಗಿಯೂ ತುಂಬುತ್ತವೆ. ಚಾರಿತ್ರಿಕ ಕಾರಣಗಳಿಗಾಗಿ ಮಹಿಳೆಯರ ದನಿಯು ಕ್ಷೀಣಗೊಳ್ಳುತ್ತಾ ಬಂದಿದೆ. ಪುರುಷಪ್ರಧಾನ ವ್ಯವಸ್ಥೆಯನ್ನು ಬಲಪಡಿಸುವ ಮೌಲ್ಯಗಳನ್ನು ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರ ಮೇಲೆ ಹೇರುತ್ತಾ ಬರಲಾಗಿದೆ. ಶಿಕ್ಷಿತ ಮತ್ತು ಮೇಲ್ವರ್ಗದ ಸಮುದಾಯಗಳಲ್ಲಿ ಇದು ಹೆಚ್ಚಾಗಿ ನಡೆದಿದೆಯಾದರೂ ಅಶಿಕ್ಷಿತ ಜನಪದ ಸಂಸ್ಕೃತಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಅಧಿಕವಾಗಿ ಕಾಣಬಹುದಾಗಿದೆ. ಸಾಂಸ್ಕೃತಿಕ ವಿವರಗಳು ಮತ್ತು ಮಹಿಳೆಯರು ಪಾಲ್ಗೊಳ್ಳುವ ವಿಧಾನಗಳನ್ನು ಪರಿಶೀಲಿಸಿದರೆ ಜನಪದ ಸಮುದಾಯಗಳಲ್ಲಿ ಮಹಿಳೆಗೆ ಇರುವ ಅವಕಾಶಗಳು ಹೆಚ್ಚಾಗಿವೆ.

ಸಂಸ್ಕೃತಿಯಲ್ಲಿ ಮಹಿಳೆಯರನ್ನು ಕಾಣುವ ಪ್ರಯತ್ನವೆಂದರೆ ಸಂಸ್ಕೃತಿಯ ಒಳಗಡೆ ಮಹಿಳೆಯರ ಅಸ್ತಿತ್ವವನ್ನು ಗುರುತಿಸುವುದು ಎಂದರ್ಥ. ಹೀಗೆ ಗುರುತಿಸುವಾಗ ಮಹಿಳೆಯರು ತಮ್ಮ ಪರವಾಗಿ ಮತ್ತು ಒಟ್ಟು ಸಮಸ್ತರ ಪರವಾಗಿ ಏನೆಲ್ಲಾ ಮಾತುಗಳನ್ನು ಹೇಳಿದ್ದಾರೆ, ಯಾವೆಲ್ಲ ಆಲೋಚನೆಗಳನ್ನು ಮಾಡಿದ್ದಾರೆ, ಎಂತೆಂತಹ ಹೋರಾಟಗಳನ್ನು ನಡೆಸಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಮಹಿಳೆಯರ ಕೆಲಸಗಳೇ ಅವರ ಆಸಕ್ತಿ ಮತ್ತು ಬದ್ಧತೆಯನ್ನು ತೋರಿಸುತ್ತವೆ. ಕೆಲಸಗಳ ಜೊತೆಗೆ ಭಾಷಿಕ ಮತ್ತು ಸಾಹಿತ್ಯಿಕ ಅಭಿವ್ಯಕ್ತಿಗಳನ್ನು ಸೇರಿಸಿ ಅವರು ತಮ್ಮ ಸೌಂದರ್ಯಪ್ರಜ್ಞೆಯನ್ನು ಮೆರೆದಿದ್ದಾರೆ. ದಣಿವರಿಯದ ದುಡಿಮೆಯನ್ನು ಇತರರ ಸುಖಕ್ಕಾಗಿ ಧಾರೆಯೆರೆಯುತ್ತಾ ಬಂದಿದ್ದಾರೆ. ಸಂಸ್ಕೃತಿಗೆ ಪೊರೆಯುವ ಮತ್ತು ಪೋಷಿಸುವ ಗುಣವಿದ್ದರೆ ಅದು ಮಹಿಳೆರಿಂದ ಪ್ರಾಪ್ತವಾದುದು ಎಂಬ ತಾತ್ತ್ವಿಕತೆಯನ್ನು ಈ ಸಂಪುಟದ ಲೇಖನಗಳು ಸಮರ್ಥಿಸುತ್ತವೆ. ಕ್ರಿಯಾಶೀಲವೂ, ಸೃಜನಶೀಲವೂ ಆದ ಸಾಂಸ್ಕೃತಿಕ ಜಗತ್ತೊಂದನ್ನು ನಿರ್ಮಿಸಿ ಸಂಪುಟವು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೈಗೊಂಡಿರುವ ಮಹಿಳಾ ಚಿಂತನೆಗೆ ಸೊಗಸಾದ ನಿದರ್ಶನವಾಗಿದೆ.

ಕರಾವಳಿ ಭಾಗದ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗ ಮತ್ತು ಬುಡಕಟ್ಟು ಸಮುದಾಗಳ ಮಹಿಳಾ ಸಂಸ್ಕೃತಿಯ ಕುರಿತು ಇಂತಹ ಒಂದು ಸಂಪುಟ ರೂಪುಗೊಳ್ಳುವಲ್ಲಿ ಡಾ. ಸಬಿಹಾ ಅವರ ಮಹಿಳಾಪರ ಚಿಂತನೆ ಮತ್ತು ಬದ್ಧತೆಗಳು ಕಾರಣ. ಲೇಖಕರ ಜೊತೆ ಸಮಾಲೋಚನೆ, ಲೇಖನಗಳು ಹೊಂದಿರಬೇಕಾದ ಸ್ವರೂಪ ಮತ್ತು ಅವುಗಳ ಉದ್ದೇಶ, ಲೇಖನಗಳ ಪರಿಶೀಲನೆ ಮೊದಲಾದ ವಿಷಯಗಳ ಚರ್ಚೆಗಳಲ್ಲಿ ವಾಸ್ತವವಾಗಿ ನಾನು ತೊಡಗಿಸಿಕೊಳ್ಳಲು ಅವರ ಒತ್ತಾಸೆಯೇ ಕಾರಣವಾಗಿದೆ. ಮಹಿಳಾ ಸಂಬಂಧಿಯಾದ ಎಲ್ಲಾ ಬಗೆಯ ಸಾಹಿತ್ಯಿಕ, ಸಾಹಿತ್ಯಪೂರಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಅವರು ಹೊಂದಿರುವ ಗಾಢವಾದ ಆಸಕ್ತಿ ಮತ್ತು ತಿಳುವಳಿಕೆಗಳು ಇಲ್ಲಿನ ಎಲ್ಲಾ ಲೇಖನಗಳನ್ನು ಪ್ರಭಾವಿಸಿವೆ.

ಪ್ರೊ. ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಬೆಳಕು ಕಂಡ ಉಪಸಂಸ್ಕೃತಿ ಅಧ್ಯಯನಮಾಲೆ ಮತ್ತು ಶ್ರೀಮತಿ ಗೀತಾ ನಾಗ ಭೂಷಣ ಅವರ ಮಾರ್ಗದರ್ಶನದಲ್ಲಿ ಪ್ರಕಟವಾಗುತ್ತಿರುವ ಸಂಸ್ಕೃತಿ ಮಹಿಳಾ ಮಾಲಿಕೆ – ಇವು ಕರ್ನಾಟಕದ ಸಂಸ್ಕೃತಿ ಚಿಂತನೆಯ ನೋಟಕ್ಕೆ ಸಮಗ್ರತೆಯನ್ನು ತರುವ ಪ್ರಯತ್ನಗಳಾಗಿವೆ ಎಂದು ನಾನು ಭಾವಿಸಿದ್ದಾನೆ.

ಪ್ರೊ. ಕೆ. ಚಿನ್ನಪ್ಪಗೌಡ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ
೧೮-೦೨-೨೦೦೮