ಮಹಿಳಾ ಸಮುದಾಯದ ವೈಶಿಷ್ಟ್ಯಗಳು

ಹೆಣ್ಣು – ನಮ್ಮಲ್ಲಿ ’ಗಂಧವತಿ ಪೃಥ್ವಿ’ಯೆಂದು ಕರೆಯಲ್ಪಟ್ಟ ಭೂಮಿಯ ಹಾಗೆ ನಿತ್ಯನಿರಂತರವಾಗಿ ಅರಳುವ, ವಿವಿಧ ಋತುಮಾನಗಳಲ್ಲಿ ಗಮಗಮಿಸುವ, ಹೊಸತನ್ನು ಕಟ್ಟುವ, ಆರೋಗ್ಯಕರವಾದುದ್ದರ ಕಡೆಗೆ ತುಡಿಯುವ ಅಗಾಧ ಚೈತನ್ಯದ ಪ್ರತಿರೂಪವಾಗಿದ್ದಾಳೆ. ದಟ್ಟವಾದ ಅರಣ್ಯ ಪ್ರದೇಶಗಳನ್ನು ನಾಶಗೊಳಿಸುತ್ತಿರುವಂತೆ, ನಮ್ಮ ನಿರ್ಮಲವಾದ ನದಿಗಳನ್ನು ಸುತ್ತಲ ಗಾಳಿಯನ್ನು ಪ್ರತಿಕ್ಷಣವೂ ಮಲಿನಗೊಳಿಸುತ್ತಿರುವ ನಾವು-ಮಹಿಳೆಯರನ್ನು ಅಭದ್ರತೆಯ ಅಂಚಿನಲ್ಲಿಟ್ಟು ಅಪಮಾನಗೊಳಿಸುವ, ಪದೇ ಪದೇ ನಾನಾ ಬಗೆಯ ದೌರ್ಜನ್ಯಗಳಿಗೆ ಗುರಿಪಡಿಸುವ ನಿಸ್ಸೀಮ ಹೃದಯಹೀನತೆಯನ್ನು ಪ್ರಕಟಿಸುತ್ತಿದ್ದೇವೆ. ವರದಕ್ಷಿಣಿಯ ಸಂಬಂಧದ ಬಾಕಿ ಸಂಪೂರ್ಣವಾಗಿ ಸಂದಾಯವಾಗಿಲ್ಲವೆಂಬ ಕಾರಣಕ್ಕಾಗಿಯೇ ಪ್ರತಿದಿನವೂ ಎಳೆಯ ವಿವಾಹಿತ ಹೆಣ್ಣುಗಳನ್ನು ಸುಡುವ, ಕೊಲ್ಲುವ, ಚುಚ್ಚುವ ಕಾರ್ಯಗಳು ಹಳ್ಳಿಯಿಂದ ದಿಲ್ಲಿಯ ತನಕ ಪ್ರತಿದಿನವೂ ಸತತವಾಗಿ ದಾಖಲಾಗುತ್ತಲೇ ಇವೆ. ಹಿಂದೆಯೂ ಸಹ ಕರ್ನಾಟಕವೂ ಸೇರಿದಂತೆ ಇಂಡಿಯಾದ ಉದ್ದಗಲ ಪೂರ್ತಿಯಾಗಿ ಎಲ್ಲ ವಯಸ್ಸಿನ ಸ್ತ್ರೀಯರನ್ನು ಅವರವರ ಗಂಡಂದಿರ ಹೆಣಗಳ ಜೊತೆಯಲ್ಲಿ ಜೀವಂತವಾಗಿಯೇ ಸುಡುತ್ತಿದ್ದ ಅಸಂಖ್ಯ ದೃಶ್ಯಗಳನ್ನು ವಿದೇಶಗಳಿಂದ ಬಂದ ಎಲ್ಲ ಪ್ರವಾಸಿಗಳೂ ಅತ್ಯಾಶ್ಚರ‍್ಯ ಮತ್ತು ತೀವ್ರವಾದ ವೇದನೆಯ ಜೊತೆಯಲ್ಲಿ ಬರೆದಿಟ್ಟಿದ್ದಾರೆ. ತಾಯಿಯು ದೇವರೆನ್ನುವ ಸಂಗತಿಯು ಕೇವಲ ಬಾಯಿ ಮಾತಿನ ವಿಚಾರವಾಗಿಯೇ ಕಂಗೊಳಿಸಿ, ಹೆಣ್ಣು ಯಾವಾಗಲೂ ಹೊನ್ನು-ಮಣ್ಣುಗಳ ಜತೆಯ ಭೋಗಸಾಮಗ್ರಿಯಾಗಿ, ಗಂಡಿನ ಕಣ್ಣಿನ ಮಾಯೆಯಾಗಿ, ಶೂದ್ರಾತಿ ಶೂದ್ರವರ್ಗಗಳ ಹಕ್ಕುಗಳಿಗೆ ಮಾತ್ರ ಸಮ ಅಥವಾ ಅದಕ್ಕೂ ಕೀಳಾಗಿ ಪರಿಗಣಿತವಾದ ಸ್ಥಿತಿಯನ್ನು ಮನುಧರ್ಮಶಾಸ್ತ್ರವೇ ಮುಂತಾದ ಹಳೆಯ ಕಟ್ಟುಕಡತಗಳೆಲ್ಲ ಒಕ್ಕೊರಲಿನಿಂದ ವರ್ಣಿಸಿವೆ.

ನಮ್ಮ ಪುರಾಣಕತೆಗಳಲ್ಲಿ ಮರ್ಯಾದಾಪುರುಷೊತ್ತಮನೆಂದು ಕರೆಯಲ್ಪಡುವ ಅಯೋಧ್ಯಾರಾಮನು ಸೀತೆಯನ್ನು ಅಗ್ನಿಗೆ ನೂಕುತ್ತಾನೆ; ತುಂಬುಗರ್ಭಿಣೆಯ ಸ್ಥಿತಿಯಲ್ಲಿ ಆಕೆಯನ್ನು ಕಾಡಿಗೆ ನಿಷ್ಕಾರಣವಾಗಿ ಅಟ್ಟುತ್ತಾನೆ. ಇನ್ನೊಬ್ಬಬ ಅವತಾರ ಪುರುಷನೆನಿಸಿಕೊಂಡ ಪರಶುರಾಮನು, ಈಡಿಪಸ್ ಎಂಬ ಜಗದ್ವಿಖ್ಯಾತ ಪಾಪಿಯೂ ನಾಚುವಂತೆ ತನ್ನ ಹೆತ್ತತಾಯಿಯ ಕೊರಳನ್ನು ನಿರ್ದಯವಾಗಿ ಕತ್ತರಿಸುತ್ತಾನೆ. ನಿತ್ಯನಿರಂತರವಾಗಿ ಗಂಡನೂ ಸುಡುವ, ಮಗನೂ ಕೊಲ್ಲುವ ಭಾರತದ ವಾಸ್ತವಸ್ಥಿತಿಗೆ ಈ ಕತೆಗಳು ಹಿಂದಿನಿಂದಲೂ ಕನ್ನಡಿಯನ್ನು ಹಿಡಿಯುತ್ತವೆ. ಇನ್ನು ಸುಡಲ್ಪಟ್ಟ ಸೀತೆ ಮತ್ತು ಕೊಲ್ಲಲ್ಪಟ್ಟ ರೇಣುಕೆಯರು ಬದುಕಿ ಉಳಿಯುವ ಸಂಗತಿಗಳು ಕೇವಲ ಆಶಯಗಳಾಗಿ ಮಾತ್ರ ನಿಲ್ಲುತ್ತವೆ. ಏಕೆಂದರೆ, ನೂರಕ್ಕೆ ಇನ್ನೂರು ಪಾಲು ಪತಿವ್ರತೆಯರಾದವರು ಕೂಡ ಒಮ್ಮೆ ಇಂಥ ಕಗ್ಗೊಲೆಗೆ ಒಳಗಾದವರೆಂದು ಬದುಕುಳಿಯಲು ಸಾಧ್ಯವಾಗುವ ಪ್ರಶ್ನೆಯೇ ಏಳುವಂತಿಲ್ಲವಲ್ಲ?

ಹೆಣ್ಣನ್ನು ಕೀಳಾಗಿ ಕಾಣುವಲ್ಲಿ ಎಲ್ಲ ಧರ್ಮಗಳೂ ಪೈಪೋಟಿಯನ್ನು ನಡೆಸಿವೆ. ಸ್ತ್ರೀ ಸೌಂದರ್ಯವನ್ನೇ ನಾಶಗೊಳಿಸಿ ವಿಕಾರಗೊಳಿಸಲ್ಪಡುವ ಕೇಶಮುಂಡನ ಮತ್ತು ಬುರ್ಖ ಪದ್ಧತಿಗಳು ಇದಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿವೆ. ಇತಿಹಾಸದ ಉದ್ದಕ್ಕೂ ಜನಸಂಖ್ಯೆಯ ಅರ್ಧದಷ್ಟು ಭಾಗ ಮಹಿಳೆಯರು ಇದ್ದರೂ ಸಹ ಕಲೆ, ಸಾಹಿತ್ಯ, ತತ್ವಜ್ಞಾನ, ಸಾಮಾಜಿಕ ಹಾಗೂ ಸಾರ್ವಕಾಲಿಕ ಮೌಲ್ಯಗಳು – ಮುಂತಾದ ಕ್ಷೇತ್ರಗಳಲ್ಲಿ ಗಂಡಸಿನ ಪ್ರಧಾನತೆಯೇ ಹೆಚ್ಚಾಗಿದೆ. ಹೆಣ್ಣು ಈ ಬಗ್ಗೆ ಏನನ್ನು ಹೇಳುತ್ತದೆಮದು ತಿಳಿಯುವ ತನಕ ಈ ಭಾಗಗಳೆಲ್ಲ ಏಕಮುಖ ಹಾಗೂ ಅಪೂರ್ಣವಾಗಿಯೇ ಉಳಿಯುತ್ತವೆ. ಇಂತಹ ಸ್ಥಿತಿಯಲ್ಲಿ, ಉದ್ದಕ್ಕೂ ಗಂಡಸಿನ ಸುಲಿಗೆಯ ಸಾಧನವಾಗಿ ಬಂದ ಹೆಣ್ಣು, ಗಂಡು ಹೇಳುವ ಮೌಲ್ಯಗಳನ್ನೇ ವಿವೇಚನೆಯಿಲ್ಲದೆ ಗಿಳಿಪಾಠವನ್ನಾಗಿ ಒಪ್ಪಿಸಿದರೆ ಆಶ್ಚರ್ಯಪಡಬೇಕಾಗಿಲ್ಲ. ’ಹದಿಬದೆಯ ಧರ್ಮ’ವನ್ನು ಬರೆದ ಹೊನ್ನಮ್ಮ ಈ ಬಗೆಯ ಹೆಣ್ಣು ಮತ್ತು ಆ ತರಹ ಆಲೋಚನೆ ಮಾಡುವ ಅಸಂಖ್ಯರ ಪ್ರತಿನಿಧಿಯಾಗಿದ್ದಾಳೆ. ಆದರೆ, ಅಕ್ಕಮಹಾದೇವಿಯಂತಹ ಒಬ್ಬಳೇ ಕವಯಿತ್ರಿ ಮಾತ್ರ ಇಂತಹ ವಿವೇಕಶೂನ್ಯ ಸಂಗತಿಗಳಿಗೆ ಹೊರತಾದವಳು. ಆಕೆಗೆ ಆತ್ಮಗೌರವವಿತ್ತು. ಹೆಣ್ಣಾದ ಕಾರಣಕ್ಕೆ ತಾನೇನು ಕೀಳಲ್ಲ. ಗಂಡಿಗೆ ವಿಶೇಷವಾದ ಕೋಡುಗಳು ಕೂಡ ಇಲ್ಲ ಎನ್ನುವ ದಿಟ್ಟ ಮನೋಭಾವ ಆಕೆಯದಾಗಿತ್ತು. ಹೀಗೆ ಪದೇ ಪದೇ ಮೂಲೆಪಾಲಾದ ಹೆಂಗಸರು ಮತ್ತೆ ಜಗತ್ತಿನಾದ್ಯಂತ ಜನಪದ ಗೀತೆಗಳಲ್ಲಿ ತಮ್ಮೆಲ್ಲ ಬವಣೆಗಳನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲುಗೊಳಿಸಿರುವುದನ್ನು ಕಾಣಬಹುದಾಗಿದೆ.

ಸಾಕಷ್ಟು ದೀರ್ಘಕಾಲದ ಇತಿಹಾಸವನ್ನುಳ್ಳ ನಮ್ಮ ಲಿಂಗಭೇದನೀತಿಯು ಎಂಥ ನಿಷ್ಪಕ್ಷಪಾತ ಹಾಗೂ ಔದಾರ್ಯದ ಗಂಡಿನ ಮನದ ಆಳದಲ್ಲಿ ಕೂಡ ವಿಷಸರ್ಪದಂತೆ ಎಲ್ಲಿಯೋ ಅಡಗಿಕೊಂಡಿದ್ದು, ಅತ ಎಚ್ಚರತಪ್ಪಿದ ಕ್ಷಣಗಳಲ್ಲಿ ಹೆಡೆಯಾಡಿಸುತ್ತದೆಂದು ಕಾಣುತ್ತದೆ. ಆದರೆ, ಪ್ರೇಯಸಿ ಗಂಗೆಯನ್ನು ತಲೆಯಲ್ಲಿ ಹೊತ್ತ, ತನ್ನ ಜೊತೆಯಲ್ಲಿಯೇ ಪತ್ನಿ ಪಾರ್ವತಿಗೂ ಪೂಜೆ ಸಲ್ಲಿಸಲು ಭಕ್ತನೊಬ್ಬ ಒಪ್ಪದಿದ್ದಾಗ, ಕೂಡಲೇ ಆತನಿಗೆ ಸವಾಲಾಗಿ ದೇಹಾರ್ಧ ತಾನು ಹಾಗೂ ಇನ್ನರ್ಧ ಪಾರ್ವತಿಯೇ ಆಗಿ ಅರ್ಧನಾರೀಶ್ವರ ರೂಪದಲ್ಲಿ ನಿಂತ ನಮ್ಮ ಪುರಾಣ ಕಥೆಗಳ ತುಂಬು ಹೃದಯ ಹಾಗೂ ಗಾತ್ರಾತೀತ ವ್ಯಕ್ತಿತ್ವದ ಶಿವನ ಚಿತ್ರವೊಂದು ಮಾತ್ರ ಇವತ್ತಿಗೂ ಗಂಡುಕುಲ ಪ್ರಕಟಿಸಬಹುದಾದ ಅಸಾಧಾರಣ ಜೀವನ ಪ್ರೀತಿಯ ಪ್ರತೀಕವಾಗಿ; ಹೊಸ, ಆರೋಗ್ಯಕರ ಸಂಸ್ಕೃತಿಯ ನಿರ್ಮಾಣದ ಮುನ್ಸೂಚನೆಯಾಗಿ, ಆದರ್ಶವಾಗಿ ನಿರಂತರವೂ ಕಂಗೊಳಿಸುತ್ತಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಗಮನಿಸಿದಾಗ ಹೊಸ ಸಾಂಸ್ಕೃತಿಕ ಸಮಾಜದ ಚಿಂತನೆಯಲ್ಲಿ ತೊಡಗಿರುವ ಕ್ರಿಯಾಶೀಲ ವ್ಯಕ್ತಿತ್ವಗಳು ಈ ಸಂಬಂಧದಲ್ಲಿನ ತಮ್ಮ ಸದ್ಯದ ಹೊಣೆಗಾರಿಕೆಯ ಮಹತ್ವವನ್ನು ಮನದಟ್ಟುಮಾಡಿಕೊಳ್ಳುವುದು ತೀರಾ ಅವಶ್ಯವಾಗಿದೆ. ಜೊತೆಗೆ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆಯಾದ ಅರ್ಥಪೂರ್ಣವಾದ ರೀತಿಗಳಲ್ಲಿ ಅರಳಿ, ತುಂಬು ಸೃಜನಶೀಲವಾಗಿ ನಮ್ಮ ಹೆಮ್ಮೆಯ ಮಹಿಳಾ ಸಮುದಾಯವು ಹಾದುಬಂದ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಕರ್ತವ್ಯಕೂಡ ಸಂವೇದನಾಶೀಲರಾದ ಎಲ್ಲರದಾಗಿದೆ. ಇಂತಹ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುವ ಒಮದು ಉತ್ತಮ ಪ್ರಯತ್ನವಾಗಿ “ಸಂಸ್ಕೃತಿ ಮಹಿಳಾ ಮಾಲಿಕೆ”ಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ಪಿಂಜಾರರು, ಕಪ್ಪೆಹೊಲೆಯರು, ಮಾಲೇರು, ದೊಂಬಿದಾಸರು ಮತ್ತು ದುರ್‌ವೇಶ್ ಜನಾಂಗಗಳ ಸಾಂಸ್ಕೃತಿಕ ಬದುಕಿನ ಹಲವಾರು ಕುತೂಹಲಕಾರಿ ವಿವರಗಳನ್ನು ಈ ಬರಹಗಳಲ್ಲಿ ತಮ್ಮ ತರುಣ ವಿದ್ವಾಂಸರು ಕಲೆಹಾಕಿದ್ದಾರೆ; ಹಾಗೆಯೇ ಆಯಾಯ ಚೌಕಟ್ಟಿನಲ್ಲಿ ಕಂಡುಬರುವ ಮಹಿಳೆಯರ ಸಂಬಂಧದ ವಿವಿಧ ಆಚರಣೆಗಳು, ನಂಬಿಕೆಗಳು ಮತ್ತು ಪದ್ಧತಿಗಳು ಇಲ್ಲಿ ದಾಖಲಾಗಿವೆ. ಈ ಎಲ್ಲಾ ಸಾಮಗ್ರಿಯ ಮೂಲಕ ಮುಂದೆ ಈ ಬಗ್ಗೆ ಆಳವಾದ ಅಧ್ಯಯನವನ್ನು ಕೈಗೊಳ್ಳುವವರಿಗೆ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. ಈ ಸ್ನೇಹಿತರಲ್ಲಿ ಒಬ್ಬಿಬ್ಬರು ಇನ್ನೂ ಹೆಚ್ಚಿನ ಶ್ರಮವಹಿಸಿ ಅಯಾಯ ಜನವರ್ಗಗಳಿರುವ ಪ್ರದೇಶಗಳಲ್ಲಿ ಬಿಡುವಾಗಿ ಸುತ್ತಾಡಿ, ಅಲ್ಲಿನ ಹಿರಿತಲೆಗಳ ಸಂಪರ್ಕದಲ್ಲಿ ಹೆಚ್ಚು ಮಾಹಿತಿಯನ್ನು ಕಲೆಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿತ್ತೆಂಬ ಕೊರತೆ ಎದ್ದುಕಾಣುತ್ತಿದೆ. ಈ ಯೋಜನೆಯ ವ್ಯಾಪ್ತಿಯ ಪ್ರತಿಯೊಂದು ಜನಾಂಗದಲ್ಲಿನ, ಬೇರೆ ಬೇರೆ ಪ್ರದೇಶಗಳ ಕೊನೆಯಪಕ್ಷ ಇಬ್ಬಿಬ್ಬರು ತಾಜಾತನವುಳ್ಳ ತೀರಾ ಹಿರಿಯರು ಮತ್ತು ಪ್ರಬುದ್ಧರಾದ ಮಹಿಳೆಯರ ಬಿಚ್ಚುಮನಸ್ಸಿನ ಸಂದರ್ಶನಗಳನ್ನು ಈ ಸಂಪುಟಗಳಿಗೆ ಅಳವಡಿಸಿದ್ದಲ್ಲಿ ತುಂಬಾ ಉಪಯುಕ್ತವಾಗುತ್ತಿತ್ತೆಂದು ನಾನು ಭಾವಿಸಿದ್ದೇನೆ. ಇಷ್ಟಾಗಿಯೂ ಈ ಮಹತ್ವಪೂರ್ಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೈಲಾದಮಟ್ಟಿನ ಶ್ರದ್ಧೆಯಿಂದ ದುಡಿದಿರುವ ಗೆಳೆಯರಾದ ದಾದಾಪೀರ‍್, ನರೇಂದ್ರಕುಮಾರ‍್, ಕುಶಾಲ, ಮಾದಯ್ಯ, ಅಪ್ಪಗೆರೆ ಸೋಮಶೇಖರ‍್ ಮತ್ತು ಷಹಸೀನಾ ಬೇಗಂ ಅವರಿಗೆ ನನ್ನ ಪ್ರೀತಿಪೂರ್ವಕವಾದ ಶುಭಾಶಯಗಳು ಸಲ್ಲುತ್ತವೆ.

– ಪ್ರೊ. ಕಾಳೇಗೌಡ ನಾಗವಾರ
೪. ಫೆಬ್ರವಿರ ೨೦೦೮
೧೨೩೦, ಮೂರನೆಯ ಕ್ರಾಸ್
ಕುವೆಂಪುನಗರ, ಮೈಸೂರು -೫೭೦ ೦೨೩
ದೂರವಾಣಿ : ೯೮೪೫೪೬೭೩೭೫

*