(ಕ್ರಿ.ಶ. ೧೮೯೬) (ಪಕ್ಷಿ ಶಾಸ್ತ್ರೀಯ ಸಂಶೋಧನೆಗಳು)

‘ಫಿನ್ ಬಯಾ’ ಎಂಬ ಪಕ್ಷಿಯ ಹೆಸರನ್ನು ಹೆಚ್ಚು ಮಂದಿ ಕೇಳಿರಲಿಕ್ಕಿಲ್ಲ. ಏಕೆಂದರೆ ಇದು ಅತ್ಯಂತ ಅಪರೂಪದ ಪಕ್ಷಿ. ಸುಮಾರು ೧೦೦ ವರ್ಷಗಳಿಂದ ಪ್ರಾಣಿ ಶಾಸ್ತ್ರಜ್ಞರುಗಳು ಈ ಪಕ್ಷಿ ನಿರ್ವಂಶವಾಗಿ ಹೋಗಿದೆಯೆಂದೇ ಭಾವಿಸಿದ್ದರು. ಆದರೆ ಕುಮಾವೋ ಬೆಟ್ಟಗಳಲ್ಲಿ ಆ ಪಕ್ಷಿ ಅಸ್ತಿತ್ವದಲ್ಲಿದ್ದುದನ್ನು ಕಂಡು ಹಿಡಿದ ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿ ಪಕ್ಷಿಪ್ರಿಯರನ್ನು ವಿಸ್ಮಯಗೊಳಿಸಿದರು.

ಸಲೀಂ ಅಲಿ ನವೆಂಬರ್ ೧೨, ೧೮೯೬ರಂದು ಜನಿಸಿದರು. ಅವರ ಪೂರ್ತಿ ಹೆಸರು ಸಲೀಂ ಮೋಯಿಜುದಿನ್ ಅಬ್ದುಲ್ ಅಲಿ. ಬಾಲಕನಾಗಿದ್ದಾಗಲೇ ಈತನಿಗೆ ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ. ಹತ್ತು ವರ್ಷದವನಾಗಿದ್ದಾಗ ಈತ ಗುಬ್ಬಚ್ಚಿಯೊಂದನ್ನು ಹಿಡಿದಿದ್ದ. ಅದರ ಕೊರಳಲ್ಲಿ ಹಳದಿ ಬಣ್ಣದ ಗುರುತು ಇತ್ತು. ‘ಬೇರೆ ಗುಬ್ಬಚ್ಚಿಗಳಿಗೆ ಇಲ್ಲದ್ದು ಇದಕ್ಕೇಕೆ?’ ಆತನಿಗೆ ತೋಚಲಿಲ್ಲ. ಬೇಟೆಯ ನಿಪುಣನಾಗಿದ್ದ ತನ್ನ ಮಾಮನಿಗೆ ಕೇಳಿದ. ಆತನಿಗೂ ಅದರ ಗುರುತು ಸಿಕ್ಕಲಿಲ್ಲ. ಆತ ಸಲೀಮನನ್ನು ಮುಂಬೈಯಲ್ಲಿದ್ದ ‘ನ್ಯಾಚುರಲ್ ಹಿಸ್ಟರಿ ಸೊಸೈಟಿ’ಯ ಗೌರವ ಕಾರ್ಯದರ್ಶಿ ಡಬ್ಲ್ಯೂ.ಎಸ್. ಮಿಲ್ಲಾರ್ಡ್ ಅವರ ಕಚೇರಿಗೆ ಕರೆದುಕೊಂಡು ಹೋದ. ಪಕ್ಷಿಗಳ ವಿಷಯ ತಿಳಿಯುವಲ್ಲಿ ಹುಡುಗನ ಉತ್ಸುಕತೆಯನ್ನು ಕಂಡು ಅವರು ತಮ್ಮ ಬಳಿ ಇದ್ದ ಅಂಥ ಗುಬ್ಬಚ್ಚಿಯ ಮಾದರಿಯೊಂದನ್ನು ಆತನಿಗೆ ತೋರಿಸಿದರು. ಅಲ್ಲದೆ ಆತನಿಗೆ ಪ್ರೋತ್ಸಾಹವನ್ನೂ ನೀಡಿದರು.

ಪಕ್ಷಿಗಳ ಒಳಗಿನ ಮಾಂಸಾದಿಗಳನ್ನು ತೆಗೆದು ಹಾಕಿ, ಬೇರೆ ವಸ್ತು ತುಂಬಿ ಭರ್ತಿ ಮಾಡಿ ಹೊಲಿದು ಮೂಲ ಆಕಾರಕ್ಕೆ ತರುವ ಬಗ್ಗೆ ಸಲೀಂ ಅಲಿ ಜರ್ಮನಿಯಲ್ಲಿ ವಿಶೇಷ ತರಬೇತಿ ಪಡೆದು ಬಂದಿದ್ದಾರೆ.

ಪಕ್ಷಿಗಳ ವಿಷಯವಾಗಿ ಅಧ್ಯಯನ ಮಾಡಲು ದೇಶಾದ್ಯಂತ ತಿರುಗಾಡಿದ ಸಲೀಂ ಅಲಿ ‘ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಎಂಬ ಉತ್ಕೃಷ್ಟವಾದ ಸಚಿತ್ರ ಪುಸ್ತಕವನ್ನು ಬರೆದಿದ್ದಾರೆ. ಪಕ್ಷಿಗಳ ಜೀವನದ ಬಗೆಗಿನ ಅನೇಕ ರೋಚಕ ಅಂಶಗಳನ್ನು ಬೆಳಕಿಗೆ ತಂದಿದ್ದಾರೆ.