ದೊಡ್ಡ ಹುಣಸೆಮರ, ಸವಣೂರು

ಜಿಲ್ಲಾ ಕೇಂದ್ರದಿಂದ ದೂರ :೨೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ:೦ ಕಿ.ಮೀ.

ಆಫ್ರಿಕಾ ಖಂಡದವುಗಳೆನ್ನಲಾದ ಸುಮಾರು ೧೫ ಮೀ. ಸುತ್ತಳತೆಯ  ದೊಡ್ಡ ಹುಣಸೆ ವೃಕ್ಷಗಳು ಸವಣೂರಿನ ಮುಖ್ಯ ಆಕರ್ಷಣೆ.

ಈ ಹುಣಸೆಮರಗಳು ಸುಮಾರು ೩೦೦೦ ವರ್ಷ ಹಳೆಯವು.ಇವುಗಳನ್ನು ಶ್ರೀ ಕೃಷ್ಣನು ತಂದು ಇಲ್ಲಿ ಹಚ್ಚಿದನೆನ್ನಲಾಗಿದೆ. ಇವು ಹೆಮ್ಮರವಾಗಿ ಬೆಳೆದುನಿಂತು ಪ್ರಕೃತಿಯ ಸೊಬಗಿನಲ್ಲಿ ರಾರಾಜಿಸುತ್ತವೆ. ಈ ಮರಗಳ ಮೇಲಿನ ಹಕ್ಕಿಗಳ ಕೂಗು ಸದಾ ಕೇಳಿ ಬರುತ್ತಿರುತ್ತದೆ. ಸುಂದರ ವನದಂತಿರುವ ಹಾಗೂ ಪ್ರಶಾಂತವಾಗಿರುವ ಈ ಸ್ಥಳವು ನೋಡಲು ಆಕರ್ಷಣೀಯವಾಗಿದೆ ಈ ಮರಗಳ ಹತ್ತಿರದಲ್ಲಿ ಕಲ್ಮೇಶ ಮಠವಿದೆ.

 

ನವಾಬರ ಪ್ರಸಿದ್ಧ ಅರಮನೆ, ಸವಣೂರು

ಜಿಲ್ಲಾ ಕೇಂದ್ರದಿಂದ ದೂರ : ೨೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೦ ಕಿ.ಮೀ.

ನವಾಬನ ಕಾಲದ ಅರಮನೆ, ಈಗಿನತಾಲೂಕ ಪಂಚಾಯತ್ ಕಛೇರಿ

ಸವಣೂರು ಹಳೆಯ ಕಾಲದಿಂದಲೂ ನವಾಬರ ಅಧಿಪತ್ಯಕ್ಕೆ ಒಳಪಟ್ಟ ಸ್ಥಳವಾಗಿತ್ತು. ಸಂಸ್ಥಾನಗಳ ವಿಲೀನಿಕರಣದಿಂದ ಸವಣೂರು ಸ್ವತಂತ್ರವಾಯಿತು. ಇಲ್ಲಿ ಸವಣೂರು ನವಾಬರ ಪ್ರಸಿದ್ಧವಾದ ದರ್ಬಾರ್ ಹಾಲು ಮತ್ತು ಸುಪ್ರಸಿದ್ಧ ಹಳೆಯ ಅರಮನೆಯಿದೆ. ಈ ಅರಮನೆ ವಿಶಾಲವಾಗಿದ್ದು, ಪಕ್ಕದಲ್ಲಿ ಈಜುಕೊಳ ಹಾಗೂ ಮಖಾನ್ ಇದೆ. ಸುತ್ತಲೂ ಮರಗಳು ಬೆಳೆದು ನಿಂತಿವೆ.

ವಜೀದಖಾನ್ ನವಾಬರು ಒಮ್ಮೆ ಕರಾಚಿಯಲ್ಲಿ ಸಿಹಿ ಮತ್ತು ಖಾರವನ್ನು ಸವಿಯುವ ಸಮಯ ಬಂದಿತು. ಗುಜರಾತಿನ ರಾಜಕೋಟದ ಶಿವಲಾಲ ಕೋಟಕ್ ಎಂಬುವವರ ಅಂಗಡಿಯಲ್ಲಿ ಹಲ್ವಾ ಮತ್ತು ಖಾರವನ್ನು ನವಾಬರ ತರಿಸಿ ರುಚಿ ಕಂಡ ಮರುದಿನವೇ ಅವರನ್ನು ಕರೆಯಿಸಿ ತಮ್ಮ ಜನತೆಗೆ ಸಿಹಿ ತಿಂಡಿ ಮತ್ತು ರುಚಿಕಟ್ಟಾದ ಖಾರದ ರುಚಿ ತೋರಿಸಬೇಕು ಎಂದು ಆಹ್ವಾನಿಸಿದರು. ಅವರ ಆಹ್ವಾನದ ಮೇರೆಗೆ ಶಿವಲಾಲರು ಸುಮಾರು ೧೯೩೨ ರಲ್ಲಿ ಸವಣೂರಿಗೆ ಬಂದು ನೆಲೆಸಿ ತಮ್ಮ ಶ್ರದ್ಧೆ, ನಿಷ್ಠೆ ಶ್ರಮಗಳ ಜೊತೆಗೆ ಪಾಕ ಕೈಚಳಕವನ್ನು ಈ ನಾಡಿನ ಜನತೆಗೆ ತೋರಿಸಿದ್ದಾರೆ. ಈಗಲೂ ಸವಣೂರಿನ ಶಿವಲಾಲ್‌ಖಾರ ಎಂದರೆ ಎಲ್ಲರ ಬಾಯಿಯಲ್ಲಿ ನೀರೂರುತ್ತದೆ.