ಸಮನ್ವಯತೆ ಮತ್ತು ಮಾರ್ಪಾಡುಗಳು:

ಈ ವಾಸ್ತು ಶಿಲ್ಪಾವಶೇಷಗಳಲ್ಲದೆ ೧೦-೧೨ನೇ ಶತಮಾನದ ಮೂರ್ತಿ ಶಿಲ್ಪಾವಶೇಷಗಳು ಅಲ್ಲೊಂದು ಇಲ್ಲೊಂದು ಇವೆ. ಮುಖ್ಯವಾಗಿ ನಗರದ ಕೋಟೆಯೊಳಗಿದ್ದ ಸೂಕ್ಷ್ಮ ಕುಸುರಿನ ಕೆತ್ತನೆಯುಳ್ಳ, ಕುಳಿತ ತೀರ್ಥಂಕರನಿಗೆ ನೆರಳು ನೀಡುವ ವೃಕ್ಷದ ಭಾಗ; ನಾಥ ಸಂಪ್ರದಾಯದ ಮಠದಲ್ಲಿರುವ ತೀರ್ಥಂಕರರ ತಲೆಯ ಮೇಲಿರುವ ಮುಕ್ಕೋಡೆಯ ಭಾಗ, ಜಮದಗ್ನಿ ಗುಡಿಯ ಹತ್ತಿರ ಗಣೇಶ, ಶ್ರೀ ಎಲ್ಲಮ್ಮ ದೇವಾಲಯದ ಆವರಣದಲ್ಲಿರುವ ಗರ್ಭಗುಡಿಯ ಮೇಲಿನ ತಳಗಳಲ್ಲಿ ಒಂದು ಭಾಗದ ಕಾಲಭೈರವನ ಶಿಲ್ಪ ಮೊದಲಾದವು ಗಮನಾರ್ಹ. ಗಣೇಶ ಶಿಲ್ಪ ಸುಮಾರು ೯ನೇ ಶತಮಾನದ ಅಂತ್ಯ ಇಲ್ಲವೇ ೧೦ನೇ ಶತಮಾನದ ಆದಿ ಭಾಗದ್ದೆಂದು ತೋರುತ್ತದೆ. ಉಳಿದೆಲ್ಲವೂ ೧೧-೧೨ನೇ ಶತಮಾನದವು. ಕಾಲಭೈರವನ ಶಿಲ್ಪವು ಮಲ್ಲಿಕಾರ್ಜುನ ದೇವಾಲಯದ ಮೂಲ ಶಿಖರದ ತಳಗಳ ಒಂದು ಭಾಗವಾಗಿದ್ದರಿಬೇಕು.

ಇದುವರೆಗೆ ದೊರೆತ ಶಾಸನಗಳ ಪ್ರಕಾರ ಎರಡು ‘ಜಿನೇಂದ್ರ ಭವನ’ಗಳು,ಮತ್ತು ಮಲ್ಲಿನಾಥ ಬಸದಿಗಳು ಹಾಗೂ ಒಂದು ದೇವಾಲಯವು (ಅಂಕೇಶ್ವರ) ಇದ್ದವೆಂದು ತಿಳಿಯುತ್ತದೆ. ಅಳಿದುಳಿದಿರುವ ಶಿಲ್ಪಾವಶೇಷಗಳ ಪ್ರಕಾರ ಮಲ್ಲಿಕಾರ್ಜುನ, ಪುರದೇಶ್ವರ, ಅಂಕುಶೇಶ್ವರ ದೇವಾಲಯಗಳು ಮತ್ತು ಅನಂತರ ಕಾಲದಿಂದ ಶ್ರೀ ಎಲ್ಲಮ್ಮ ದೇವಾಲಯವೆಂದು ಕರೆಯಿಸಿಕೊಳ್ಳುತ್ತಿರುವ, ಆದರೆ ಮೂಲತವಾಗಿ ಜೈನ ಬಸದಿಯು ಇವೆ. ಮೊದಲನೆಯ ಎರಡು ದೇವಾಲಯಗಳಿಗೆ ಶಾಸನಗಳ ಉಲ್ಲೇಖಗಳು ದೊರೆತಿಲ್ಲ. ಮೇಲೆ ಹೇಳಿದ ಪೃಥ್ವಿಸೇನನು ಕಟ್ಟಿಸಿದ ೯ನೇ ಶತಮಾನದ “ಜಿನೇಂದ್ರ ಭವನ”ದ ಅವಶೇಷಗಳೇನು ಬೆಳಕಿಗೆ ಬಂದಿಲ್ಲ. ಆದರೆ “ಜಿನೇಂದ್ರ ಭವನ” ಗಳ ಉಲ್ಲೇಖವಿರುವ ಎರಡು ಶಾಸನಗಳು

[1] ಈಗಿನ ಬಸದಿ ಗುಡಿಯಲ್ಲಿರುವುದರಿಂದ ಪ್ರಾಯಶಃ ಅಲ್ಲಿಯೇ ಹಿಂದೆ ಜಿನೇಂದ್ರ ಭವನವಿದ್ದರಿಬಹುದು. ಶ್ರೀ ಎಲ್ಲಮ್ಮ ದೇವಾಲಯವು ಮೂಲತಃ ಜೈನ ಬಸದಿಯೆಂದು ಇದೀಗ ಮೇಲೆ ಸೂಚಿಸಿದೆಯಷ್ಟೆ. ಅಂತರಾಳದ ಎಡ ಪಾರ್ಶ್ವ ಗೋಡೆಯ ಹೊರಮೈಯಲ್ಲಿ ಅಲಂಕರಣದ ಸ್ತಂಭ ಪಂಜರದ ತುದಿಯ ಚೈತ್ಯಾಕಾರದ ಸಣ್ಣ ಗೂಡಿನಲ್ಲಿ ಯೋಗಾಸನದಲ್ಲಿ ಕುಳಿತ ತೀರ್ಥಂಕರನ ಸೂಕ್ಷ್ಮ ಉಬ್ಬು ಶಿಲ್ಪವಿದೆ.. ಗರ್ಭಗುಡಿಯ ಮೇಲಿನ ಶಿಖರದ ಮೊದಲನೆ ತಳವು ಒಂದು ಸಣ್ಣ ಗರ್ಭಗೃಹ. ಇದರ ಬಾಗಿಲು ಚೌಕಟ್ಟಿನ ಅಡ್ಡ ಪಟ್ಟಿಕೆಯಲ್ಲಿಯ ಲಲಾಟಬಿಂಬದಲ್ಲಿ ಅದೇ ತರಹದ ಜಿನ ಬಿಂಬವಿದೆ. ಶಿಖರದ ಮೊದಲನೆ ತಳವನ್ನು ಗರ್ಭಗುಡಿಯನ್ನಾಗಿ ಮಾಡಿ ಅದರಲ್ಲಿ ಜಿನ ಮೂರ್ತಿಯನ್ನು ಸ್ಥಾಪಿಸುವುದು ಅಪರೂಪವಾದರೂ ಜೈನ ಬಸದಿಯ ವಾಸ್ತು ಶಿಲ್ಪ ಲಕ್ಷಣದ ವೈಶಿಷ್ಟ್ಯ. ಉದಾಹರಣೆಗೆ, ಪಟ್ಟದಕಲ್ಲಿನ ಈಗ “ಜೈನ ನಾರಾಯಣ” ಎಂದು ಕರೆಯಲ್ಪಡುತ್ತಿರುವ ೮ನೇ ಶತಮಾನದ ಅಂತ್ಯಭಾಗದ ಜೈನ ಬಸದಿ, ಶ್ರವಣಬೆಳಗೊಳದ ಚಾವುಂಡರಾಯನ ಬಸದಿ. ಶ್ರೀ ಎಲ್ಲಮ್ಮ ದೇವಾಲಯದ ಪ್ರಧಾನ ಗರ್ಭಗುಡಿಯಲ್ಲಿ ಪೀಠಸ್ಥ ದೇವಿ (ಶ್ರೀ ಎಲ್ಲಮ್ಮ)  ಮೂರ್ತಿಯನ್ನು ಹಿಂದಿನ ಗೋಡೆಗೆ ಆನಿಸಿಟ್ಟಿದೆ. ಸಾಮಾನ್ಯವಾಗಿ ಆರಾಧನೆಯ ವಿಗ್ರಹವು ಗರ್ಭಗುಡಿಯ ಕೇಂದ್ರದಲ್ಲಿರುತ್ತದೆ. ಅರ್ಚಕರು ಇದಕ್ಕೆ ಪ್ರದಕ್ಷಿಣೆ ಹಾಕಲು, ಅಭಿಷೇಕ ಮಾಡಲು, ಸುತ್ತಲೂ ಅಲಂಕರಿಸಲು ಅನುಕೂಲವಾಗಿರುತ್ತದೆ. ಆದರೆ ಜೈನ ಬಸದಿಯಲ್ಲಿ ಮಾತ್ರ ಅಪರೂಪವಾಗಿ ಹಿಂದಿನ ಗೋಡೆಗೆ ಆನಿಸಿಟ್ಟಂತೆ ಮೂರ್ತಿ ಸಹಿತ ಪೀಠವಿರುತ್ತದೆ. ಇನ್ನು ಪೀಠ ಹಾಗೂ ಮೂರ್ತಿಯ ಲಕ್ಷಣಗಳನ್ನು ಅನುಲಕ್ಷಿಸಿದರೆ, ಮೂರ್ತಿಯ ಪ್ರಭಾವಳಿ ಮತ್ತು ಪೀಠವು ನಸುಗೆಂಪು ಮರಳು ಕಲ್ಲಿನದು. ದೇವೀ ಮೂರ್ತಿ ಮಾತ್ರ ಆಕರ್ಷಕ ಹಸಿರೊತ್ತಿದ ಒಳ್ಳೆ ಜಾತಿಯ ಕರಿಕಲ್ಲಿನದು. ಸಾಮಾನ್ಯವಾಗಿ ಮೂರ್ತಿ ಹಾಗೂ ಅದರ ಪ್ರಭಾವಳಿ ಒಂದೇ ಕಲ್ಲಿನದಾಗಿರುತ್ತದೆ. ಆದರೆ ಇಲ್ಲಿ ಹಾಗಿರದೆ ಬೇರೆಬೇರೆ ಕಲ್ಲಿನದಾಗಿವೆ. ಹೀಗಿರಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಪ್ರಭಾವಳಿಯೊಳಗಿನ ಮೂಲ ಮೂರ್ತಿಯನ್ನು ತೆಗೆದು ಅದರಲ್ಲಿ ಈಗಿರುವ ದೇವೀ ಮೂರ್ತಿಯನ್ನು ಜಾಣ್ಮೆಯಿಂದ ಜೋಡಿಸಿರುವುದು ಸ್ಪಷ್ಟ. ಮೊದಲು ಖಡ್ಗಾಸನದಲ್ಲಿ ತೀರ್ಥಂಕರನ ಮೂರ್ತಿಯಿದ್ದರಿಬೇಕು. ಈಗ ಕುಳಿತ ಭಂಗಿಯಲ್ಲಿರುವ ದೇವಿಯು ಖಡ್ಗ ಮತ್ತು ಪಾನಪಾತ್ರೆಯನ್ನು ಹಸ್ತಗಳಲ್ಲಿ ಧರಿಸಿದ್ದಾಳೆ. ಇವೆಲ್ಲ ಮೂಲಲಕ್ಷಣಗಳ ಆಧಾರದ ಮೇಲೆ ಈ ದೇವಾಲಯವು ಮೂಲತಃ ಜೈನ ಬಸದಿಯೆಂಬುದು ನಿಸ್ಸಂಶಯ. ಇದರ ವಾಸ್ತುಶಿಲ್ಪ ಲಕ್ಷಣಗಳ ಆಧಾರದ ಮೇಲೆ ಈ ಬಸದಿಯು ಬಹುಶಃ ೧೦ನೇ ಶತಮಾನದ ಅಂತ್ಯ ಇಲ್ಲವೇ ೧೧ನೇ ಶತಮಾನದ ಆದಿ ಭಾಗದ್ದೆಂದು ಹೇಳಬಹುದು. ಆದ್ದರಿಂದ ಶಾಂತಿವರ್ಮರಸನು ಕಟ್ಟಿಸಿದ ಜೈನ ಬಸದಿಯು ಇದೇ ಇರಬಹುದೆಂದು ನನ್ನ ಅನುಮಾನ. ಆದರೆ ಶಾಂತಿವರ್ಮನ ಶಾಸನ ನಗರದಲ್ಲಿಯ ಬಸ್ತಿ ಗುಡಿಯಲ್ಲಿದೆ. ಇದು ಬಸದಿಯಿಂದ ಅಷ್ಟು ದೂರವಿರುವುದರಿಂದ ಇವೆರಡಕ್ಕೂ ಪರಸ್ಪರ ಸಂಬಂಧವಿರಲಾರದೆಂದು ಹೇಳಲೂ ಸಾಧ್ಯ. ಪ್ರಾಯಶಃ ಬಸದಿಯು ಶ್ರೀ ಎಲ್ಲಮ್ಮ ದೇವಾಲಯವೆಂದು ಬದಲಾವಣೆಯಾದ ಕಾಲದಲ್ಲಿ ಅರಕ್ಷಿತ ಶಾಸನವನ್ನು ಈಚಿನ ಕಾಲದಲ್ಲಿ ಬಸ್ತಿ ಗುಡಿಗೆ ಸ್ಥಳಾಂತರಿಸಲ್ಪಟ್ಟಿತೆ? ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ತಿಮ್ಮಪ್ಪ ನಾಯಕನು ಈ ದೇವಾಲಯದ ಪಶ್ಚಿಮ ಪ್ರಾಕಾರದಲ್ಲಿಯ ಹೆಬ್ಬಾಗಿಲನ ಮೇಲಿನ ಉಪ್ಪರಿಗೆಯನ್ನು ಸುಮಾರು ೧೫೧೪-೧೫ರಲ್ಲಿ ಕಟ್ಟಿಸಿದನು. ಹೆಬ್ಬಾಗಿಲಿನ ಒಂದು ಕಂಬದ ಮೇಲಿನ ಒಂದು ಶಾಸನದಲ್ಲಿ ಈ ವಿಷಯವಿದೆ. ರಂಗಮಂಟಪದ ಕಂಬದ ಮೇಲಿನ ಶಾಸನವು ಸದಾಶಿವರಾಯನ ಕಾಲದಲ್ಲಿ ವೆಂಕಟಾದ್ರಿರಾಜಯ್ಯನ ಕಾರ್ಯಕರ್ತ ವಿಠಪನು ಮಹಾಮಂಡಳೇಶ್ವರ ರಾಮರಾಜಯ್ಯನು ಕೊಟ್ಟ ಭೂಮಿಯಿಂದ ದಾನ ಮಾಡಿದ ವಿಷಯವನ್ನು ತಿಳಿಸುತ್ತದೆ.

ಕೋಟೆಯೊಳಗಿದ್ದ ತೀರ್ಥಂಕರ ಶಿಲ್ಪದ ವೃಕ್ಷದ ಭಾಗದ ಕುಸುರಿನ ಕೆತ್ತನೆ ಹೊಯ್ಸಳ ಶಿಲ್ಪದ ಅತಿಸೂಕ್ಷ್ಮ ಕೆತ್ತನೆ ನೆನಪಿಗೆ ಬರುತ್ತದೆ. ಆದ್ದರಿಂದ ಇದು ಕೇಶಿರಾಜನು ಕಟ್ಟಿಸಿದ ಮಲ್ಲಿನಾಥ ಬಸದಿಯದಾಗಿದ್ದಿರಬಹುದೇ?

ಒಟ್ಟಿನಲ್ಲಿ ದೇವಾಲಯಗಳು ತಕ್ಕಮಟ್ಟಿಗೆ ಉಳಿದಿದ್ದರೂ ಬಹುಶಃ ಹೆಚ್ಚಿನ ಸಂಖ್ಯೆಯಲ್ಲಿದ್ದ ಜೈನ ಬಸದಿಗಳೇನೂ ಉಳಿದಿಲ್ಲ. ಗುಡ್ಡದ ಮೇಲಿನ ಜೈನ ಬಸದಿಯು ಶ್ರೀ ಎಲ್ಲಮ್ಮ ದೇವಾಲಯವಾಗಿ ಮಾರ್ಪಾಡಾದ್ದರಿಂದ ಅದು ಉಳಿಯಿತೇನೋ? ಇದರಂತೆಯೇ ಸಮೀಪದ ಹಳ್ಳಿಯಲ್ಲಿ ಒಂದು ಉದಾಹರಣೆಗೆ ಇದೆ. ಹೂಲಿಯಲ್ಲಿಯ ಪಂಚಲಿಂಗೇಶ್ವರ ದೇವಾಲಯವು ಮೂಲತಃ ಜೈನ ಬಸದಿ[2] ಅದು ಬಹುಶಃ ೧೪-೧೫ನೇ ಶತಮಾನದಲ್ಲಿ ಪಂಚಲಿಂಗೇಶ್ವರ ದೇವಾಲಯವಾಯಿತೆಂದು ಹೇಳಬಹುದು. ಬಸದಿಯು ವಾಸ್ತುಶಿಲ್ಪ ಲಕ್ಷಣಗಳಿಂದ ಸುಮಾರು ೧೧ನೇ ಶತಮಾನದ್ದಾಗಿದ್ದರೆ, ಐದು ಗರ್ಭಗುಡಿಗಳಲ್ಲಿರುವ ಶಿವಲಿಂಗಗಳು ಮಾತ್ರ ನಿಸ್ಸಂಶಯವಾಗಿ ೧೪-೧೫ನೇ ಶತಮಾನದವು. ವಾಸ್ತು ವಿನ್ಯಾಸ ದೃಷ್ಟಿಯಿಂದ ಈ ದೇವಾಲಯ (ಬಸದಿಯು)ವು ವಿಶಿಷ್ಟವಾಗಿದೆ. ಈ ಕಾಲದ ವೇಸರ ಶೈಲಿಯ ದೇವಾಲಯ: ಬಸದಿಗಳಲ್ಲಿ ಗರ್ಭಗುಡಿ ಮತ್ತು ಸಭಾಮಂಟಪ ಇವೆರಡರ ಮಧ್ಯೆ ಅಂತರಾಳವು ಇದ್ದೇ ಇರುತ್ತದೆ. ಇದರ ಮೂಡಿನ ಮೇಲೆ ಶಿಖರದ ಮುಂಬದಿಯ ಶುಕನಾಸ ಚಾಚಿಕೊಂಡಿರುತ್ತದೆ. ಆದರೆ ಈ ದೇವಾಲಯದಲ್ಲಿ ಅಂತರಾಳವಿಲ್ಲ. ತತ್ಪರಿಣಾಮವಾಗಿ ಶಿಖರದ ಶುಕನಾಸವಿಲ್ಲ. ದಕ್ಷಿಣ ಭಾರತದ ದ್ರಾವಡಿದ ವಿಮಾನ ಶೈಲಿಯ ದೇವಾಲಯಗಳಲ್ಲಿ ಶುಕನಾಸವಿರುವುದಿಲ್ಲ. ಆದ್ದರಿಂದ ಈ ದೇವಾಲಯವು ತನ್ನದೇ ಆದ ವಿಶಿಷ್ಟ ಲಕ್ಷಣಗಳಿಂದ ಕೂಡಿದೆ. ಹೂಲಿಯಲ್ಲಿ ಇದಲ್ಲದೆ ಇನ್ನೂ ೮-೧೦ ಪ್ರಾಚೀನ ದೇವಾಲಯಗಳಿವೆ. ಇವುಗಳಲ್ಲಿಯೂ ಕೆಲವು ವಿಶಿಷ್ಟ ಲಕ್ಷಣಗಳಿವೆ. ಆದ್ದರಿಂದ ಇವು ಸ್ಥಳಿಕ ಶೈಲಿಯನ್ನು ಪ್ರತಿಬಿಂಬಿಸುತ್ತದೆಯೇ? ಇದನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತಿದ್ದೇನೆ.

ರಟ್ಟರು ಮತ್ತು ಜಮದಗ್ನಿರೇಣುಕಾಪರಶುರಾಮ ಕಥಾಸಂಬಂಧ:

ಹೆಚ್ಚಾಗಿ ಜೈನ ಮತಾವಲಂಬಿಗಳಾಗಿದ್ದ ರಟ್ಟರಲ್ಲಿ ಕೆಲವರು ಕಾರ್ತವೀರ್ಯನನ್ನು ಆದರ್ಶ ಪುರುಷನನ್ನಾಗಿ ಇಟ್ಟುಕೊಂಡ ಹಾಗೆ ಕಾಣುತ್ತದೆ. ಕಾರ್ತವೀರ್ಯನ ಕಥೆಯು ಜೈನ ಪುರಾಣಗಳಲ್ಲಿಯೂ ಉಂಟು. ಜೈನ ಗ್ರಂಥ ತ್ರಿಷಷ್ಠಿ ಶಲಾಕೆ ಪುರುಷ ಪುರಾಣದಲ್ಲಿ ವರ್ಣಿಸಿದ ೬೩ ಶಲಾಕೆ ಪುರುಷರಲ್ಲಿ ಸುಭೌಮನು ಒಬ್ಬನು. ಇವನು ಕಾರ್ತವೀರ್ಯನೆಂಬ ಮಹಾಶೂರನಾದ ರಾಜನನ್ನು ಸೋಲಿಸಿದನು. ಈ ರಾಜನ ಹೆಸರನ್ನು ಸಹಸ್ರಬಾಹು ಕಾರ್ತವೀರ್ಯಾರ್ಜುನನೆಂದು ಹೇಳದೆ ಕಾರ್ತವೀರ್ಯನೆಂದಷ್ಟೆ ಇರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಕೆಲವು ರಟ್ಟ ರಾಜರುಗಳು ಈ ಚಕ್ರವರ್ತಿ ಸುಭೌಮನೊಡನೆ ಕಾದಾಡಿದ ಮಹಾ ಪರಾಕ್ರಮಿ. ಕಾರ್ತವೀರ್ಯನ ಹೆಸರನ್ನು ಧರಿಸಿದ್ದು ಕುತೂಹಲಕಾರಿಯಾಗಿದೆ. ಈ ಸಂಧರ್ಭದಲ್ಲಿ ಇನ್ನೊಂದು ಗಮನಾರ್ಹ ಸಂಗತಿಯನ್ನು ವಿವೇಚಿಸುವುದು ಸೂಕ್ತವೆಂದು ಹೇಳಬಹುದು. ಈ ರಟ್ಟ ರಾಜರುಗಳಲ್ಲಿ ನಾಲ್ಕು ದೊರೆಗಳು ಕಾರ್ತವೀರ್ಯನೆಂದು ನಾಮಾಂಕಿತರಾಗಿದ್ದಾರೆ. ನಿಜವಾಗಿಯೂ ಮೊದಲನೆ ಕಾರ್ತವೀರ್ಯನು (೯೭೦-೧೦೦೦) ಇಮ್ಮಡಿ ತೈಲಪನ ಮಹಾಮಂಡಳೇಶ್ವರ ಕೂಂಡಿ ವಿಷಯದಲ್ಲಿಯ ಸೋವಿ ಅಥವ ಸೋವಲ (-ಸೊಗಲ)ವನ್ನು ರಾಜಧಾನಿಯನ್ನಾಗಿ ಮಾಡಿ ಅರಸೊತ್ತಿಗೆಯನ್ನು ಸ್ಥಾಪಿಸಿದನು. ಇಮ್ಮಡಿ ಕಾರ್ತವೀರ್ಯನು (೧೦೯೦-೯೬) ಮಹಾ ಪರಾಕ್ರಮಿಯೆಂದು ವರ್ಣಿಸಲಾಗಿದೆ. ಮುಮ್ಮಡಿ ಕಾರ್ತವೀರ್ಯನು (೧೧೩೦-೧೧೮೮) ಸ್ವತಂತ್ರನಾಗಲು ತನ್ನ ಆಳರಸ ಕಲಚುರಿ ಬಿಜ್ಜಳನೊಡನೆ ಕಾದಾಡಿ ಸ್ವಲ್ಪ ಕಾಲದ ವರೆಗೆ ಯಶಸ್ವಿಯಾದನು. ನೇಸರಗಿಯನ್ನು ಮತೊಂದು ರಾಜಧಾನಿಯನ್ನಾಗಿ ಮಾಡಿಕೊಂಡನು. ಆದರೆ ಅನಂತರ ಕಲ್ಯಾಣ ಚಾಳುಕ್ಯ ನಾಲ್ಮಡಿ ಸೋಮೇಶ್ವರನ ದಂಡನಾಯಕ ಭಾಯಿ ದೇವನು ಇವನನ್ನು ತನ್ನ ಚಕ್ರವರ್ತಿಯ ಸಾಮಂತನನ್ನಾಗಿ ಮಾಡಿ ಪರೋಕ್ಷವಾಗಿ ಕೊಂಡು ವಿಷಯವನ್ನು ಆಳುತ್ತಿದ್ದನು. ನಾಲ್ಮಡಿ ಕಾರ್ತವೀರ್ಯನು ಈ ವಂಶದಲ್ಲೇ ಶ್ರೇಷ್ಠ ದೊರೆಯೆಂದು ಹೇಳಲಾಗಿದೆ. ಅನ್ವರ್ಥನಾಮವಾಗಿ ಸಾಮಾನ್ಯವಾಗಿ ಬಳಸದ ಈ ಹೆಸರನ್ನು ಈ ರಾಜರುಗಳು ಧರಿಸಲು ಏನಾದರೂ ಒಂದು ಕಾರಣವಿದ್ದಿರಬಹುದು. ಇದನ್ನು ಸ್ವಲ್ಪ ಇಲ್ಲಿ ವಿವೇಚಿಸಿದ.

ಸೌಂದತ್ತಿ ಗದಗ ಪ್ರದೇಶದಲ್ಲಿಯ ಒಂದು ಜನವರ್ಗದವರು ತಮ್ಮ ಮೂಲ ಆದರ್ಶ ಪುರುಷ ಸಹಸ್ರಬಾಹು ಕಾರ್ತವೀರ್ಯಾರ್ಜುನನೆಂದು ಅವರ ಪರಂಪರೆಯ ನಂಬಿಕೆ. ಸೌಂದತ್ತಿ ಶ್ರೀ ಎಲ್ಲಮ್ಮನ ಆರಾಧಕರೂ ಹೌದು: ಈ ವಿಷಯವನ್ನು ಮತ್ತೆ ಮುಂದೆ ಪ್ರಸ್ತಾಪಿಸಲಾಗುವುದು. ಈ ವರ್ಗದ ಜನರು ಆಂಧ್ರ, ಕರ್ನಾಟಕ, ಮಹಾರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲಿಯೂ ಇದ್ದಾರೆ. ಮೇಲೆ ಸೂಚಿಸಿದ ಸೌಂದತ್ತಿ ಪ್ರದೇಶದ ಹಿಂದಿನ ಐತಿಹಾಸಿಕ ಈಗಿನ ಸಾಮಾಜಿಕ ವಿಷಯಗಳನ್ನು ಗಮನಿಸಿದಾಗ ರಟ್ಟರು ಬಾಹುಸಾರ ಕ್ಷತ್ರಿಯ ವರ್ಗದವರಾಗಿದ್ದು ಜೈನ ಮತಾವಲಂಬಿಗಳಾಗಿದ್ದರೇನೊ ಎಂಬ ಅನುಮಾನ ಬರುತ್ತದೆ. ಹೀಗಿದ್ದಲ್ಲಿ ಜೈನ ಪುರಾಣಗಳಲ್ಲಿಯೂ ಶೌರ್ಯ ಪ್ರತಾಪಗಳಿಗೆ ಪ್ರಸಿದ್ಧನಾದ ಕಾರ್ತವೀರನ ಹೆಸರನ್ನು ರಟ್ಟ ರಾಜರುಗಳಲ್ಲಿ ಕೆಲವರು ಧರಿಸಿದ್ದು ಸಮಂಜಸವಾಗಿ ಕಾಣುತ್ತದೆ. ಕರ್ನಾಟಕದ ಬೇರೆ ಯಾವ ಅರಸುವಂಶದವರು ಈ ಹೆಸರನ್ನು ತಮ್ಮ ಅನ್ವರ್ಥನಾಮವಾಗಿ ಇಟ್ಟುಕೊಂಡದ್ದು ಇದುವರೆಗೆ ಬೆಳಕಿಗೆ ಬಂದಿಲ್ಲ.

ಬಹುಶಃ ಬರುಬರುತ್ತಾ ಈ ರಾಜರುಗಳು ತಮ್ಮ ಸಮಾಜ, ತಮ್ಮ ಮತಕ್ಕೆ ಹೆಚ್ಚು ಒಲವನ್ನು ಸಾರ್ವಜನಿಕ ಕ್ಷೇತ್ರದಲ್ಲಿ ತೋರಿಸಿರಬಹುದು. ಇದು ಜನರಲ್ಲಿ ಅಸಂತೋಷವನ್ನುಂಟು ಮಾಡಿರಬಹುದು. ಕೊನೆಗೆ ಇದು ಘರ್ಷಣೆಯಲ್ಲಿ ಮುಕ್ತಾಯಗೊಂಡಿರಬಹುದು.

ಇವೆಲ್ಲ ವಿಷಯಗಳನ್ನು ಅನುಸಂಧಾನ ಮಾಡಿದಾಗ ಸುಮಾರು ೧೩-೧೪ನೇ ಶತಮಾನದಲ್ಲಿ ಇಲ್ಲಿ ಜೈನ-ಶೈವ ಮತಗಳಲ್ಲಿ ಗಂಭೀರವಾದ ಘರ್ಷಣೆಯುಂಟಾಗಿ ಆ ಸಂದದಲ್ಲಿ ಕೆಲವು ಬಸದಿಗಳು ಹಾಳಾಗಿರಬಹುದು. ಕ್ರಮೇಣ ಮತ್ತೆ ಕೆಲವನ್ನು ದೇವಾಲಯಗಳನ್ನಾಗಿ ಮಾರ್ಪಾಡು ಮಾಡಲಾಯಿತೇನೋ ಎಂಬ ವಿಚಾರಕ್ಕೆ ಎಡೆ ಮಾಡಿಕೊಡುತ್ತದೆ. ಇಂಥ ಒಂದು ಐತಿಹಾಸಿಕ ಸಂಧರ್ಭವು ತನ್ನ ತಂದೆ ಜಮದಗ್ನಿಯನ್ನು ಕೊಂದ ಮಹಾ ಬಲಶಾಲಿಯಾದ ಕ್ಷತ್ರಿಯ ಅರಸು ಕಾರ್ತವೀರ್ಯಾರ್ಜುನನನ್ನು ಅವನ ಸೇನೆಯನ್ನು ಸಂಪೂರ್ಣವಾಗಿ ನಾಶ ಮಾಡಿದ ಭಯಂಕರ ಪರಶುರಾಮನ ಪುರಾಣ ಪ್ರಸಿದ್ಧ ಕಥೆಯಲ್ಲಿ ಸಾಮ್ಯ ಸ್ಪೂರ್ತಿ ಪಡೆಯಿತೇ ಎಂಬ ಸಂಶಯ ಬರುತ್ತದೆ.

ಈ ಅನುಮಾನವನ್ನು ತಾಲ್ಲೂಕು ಕಛೇರಿಯ ಬಳಿಯಿರುವ ನಾಲ್ಮಡಿ ಲಕ್ಷ್ಮೀ ದೇವರಸನ ಕ್ರಿ.ಶ. ೧೨೨೪ರ ಶಾಸನದಲ್ಲಿ ಉಲ್ಲೇಖಿಸಿರುವ ಒಂದು ಉಪಮಾನ ಪುಷ್ಠೀಕರಿಸುತ್ತದೆ. ಲಕ್ಷ್ಮೀದೇವರಸ ವೇಣುಗ್ರಾಮ ಆಳುತ್ತಿದ್ದಾಘ, ಕೋಲಾರದ ಪ್ರಭು ಕೇಶಿರಾಜನು ಕಟ್ಟಿಸಿದ ಮಲ್ಲಿನಾಥ ಬಸದಿಗೆ ಹಲವಾರು ಭೂಮಿದಾನ ಮಾಡಿದ ವಿಷಯ ಈ ಶಾಸನದಲ್ಲಿದೆ. ಆಗ ಈ ಅರಸನ ಮಂಡಳೇಶ್ವರನಾದ ಕೇಶಿರಾಜನು ಬನಹಟ್ಟಿ-೧೮ಯನ್ನು ಆಳುತ್ತಿದ್ದನು. ಈ ಶಾಸನದಲ್ಲಿ ತನ್ನ ವಂಶಾವಳಿಯ ಪರಾಕ್ರಮವನ್ನು ತಿಳಿಸುವಾಗ ಇವನ ಅಜ್ಜನಾದ ಮಹಾದೇವನು ತನ್ನ ಪ್ರಭುವಿನ ಶತ್ರುಗಳನ್ನು ಯುದ್ಧದಲ್ಲಿ ಶೌರ್ಯದಿಂದ ಯಮಪುರಿಗೆ ಅಟ್ಟಿದನೆಂದು ವರ್ಣಿಸುವಾಗ:

೧೮ನೇ ಸಾಲು… “ಸುಪುತ್ರಂ ಶ್ರೀಧರ್ಮಂ ವಿಕ್ರಮೋನ್ಮದನಪ್ಪಂ ಮಹದೇವನೆಂಬ ಸುತ ನಾಗಲ್‌ಲೀಲೆವೆತ್ತಿಪ್ಪಿನಂ: ಗಗನ ಸರೋವರ ಪುರದ ವರಿಗವಾ ಸಿರಿ ಪತಿಗವಾಗೆ ವೈರಂ ಹೊಲವೇಗೆ ಸಿರಿಪತಿ ತತ್ಪುರವಾಸಿಗಳಿಂ ಯಮಪುರಂ

೧೯ನೇ ಸಾಲು… ನೆಯ್ದಿದಂ ರಣಮುಖದೋಳ್‌: ಜನಕಂ ಶತ್ರು ಶರಾಳಿಗಳ್ಗೆ ಗುರಿಯಾಗಲ್‌ತಾನದಂ ಕೇಳ್ದು ಭೋಂಕನೆ ದೇಶಾಂತರಮೇರ್ದ್ದು ಪೋಗಿ ರವಿ ಸಂಖ್ಯಾಬ್ದಂಬರಂ ದ್ವೀಪದೋಳ್‌ಧನಮಂ ಸಾಧಿಸಿ ತಮ್ಮ ಭೂಪತಿಗೆ ಕೊಟ್ಟು ಶತ್ರುವಂ ಕೋಪ ದುರ್ವ್ವಿನ.

೨೦ನೇ ಸಾಲು… ದಿಂ ಗಂಧಗಜಂಗಳಿಂ ತುಳಿದು ಕೊಂದಂ ಮಾಯಿದೇವೋತ್ತಮಂ: ಮುಂ ಜಮದಗ್ನಿ ರಾಮನಖಿಳ ಕ್ಷಿತಿನಾಥರನಿಪ್ಪತ್ತೊಂದು ಸೂಳ್ಮ ಮಂಜಿನ ಗಾಳಿಯನ್ತೆ ತವೆಕೊಂದವೋಲೀ ಮಹದೇವ ನಾಯಕಂ ಕುಂಜರದಿಂದ ವೈರಿ ಕುಲಂ ತವೇ ಕೊಂದು ಪಿತಂಗೆ ಮಾಡಿದಂ

೨೧ನೇ ಸಾಲು… ತಾಂ ಜಳದಾನ ವಿಕ್ರಿಯಂಗಳಂ ಬನಿಹಟ್ಟಿ ಸಮುದ್ಭವೇಶ್ವರಂ:”

ಆದುದರಿಂದ ಈ ಘರ್ಷಣೆ ಸಂದರ್ಭದಲ್ಲಿ ಈ ಪುರಾಣ ಪ್ರಸಿದ್ಧ ಜಮದಗ್ನಿ, ಪರಶುರಾಮನ ಕಥೆಯು ಈ ಭಾಗದಲ್ಲಿ ಹೆಚ್ಚು ಪ್ರಚಾರಕ್ಕೆ ಬರಲು ಅವಕಾಶವಾಯಿತೆಂದು ಊಹಿಸಬಹುದು.

ಈ ಭಾಗದಲ್ಲಿ ಬಾಹುಸಾರ ಕ್ಷತ್ರಿಯ ಎಂಬ ಜನ ವರ್ಗದವರು ಇದ್ದಾರೆಂದು ಮೇಲೆ ಪ್ರಸ್ತಾಪಿಸಿದೆಯಷ್ಟೆ. ಇವರು ಪ್ರತಿವರ್ಷವೂ ಈ ಪುರಾಣ ಪುರುಷ ಸಹಸ್ರಬಾಹುಕಾರ್ತವೀರ್ಯಾರ್ಜುನನ ಹೆಸರಿನಲ್ಲಿ ಹಬ್ಬವನ್ನು ಆಚರಿಸಿ ಸಂಜೆ ಸಮಯದಲ್ಲಿ ಕಾರ್ತವೀರ್ಯಾರ್ಜುನನ ಭಾವಚಿತ್ರದ[3] ಮೆರವಣಿಗೆ ಮತ್ತು ಉತ್ಸಾಹದಿಂದ ಹಬ್ಬವನ್ನು ಆಚರಿಸುತ್ತಾರೆ. ಅದರಲ್ಲಿ ಬಹಳಷ್ಟು  ಜನ ರೇಣುಕ ಎಲ್ಲಮ್ಮನನ್ನು ತಮ್ಮ ಆರಾಧ್ಯ ದೇವತೆಯನ್ನಾಗಿ ಪೂಜಿಸುತ್ತಾರೆ. ಇದು ತೋರುಗಾಣಿಕೆಗೆ ವಿರೋಧಾಭಾಸವಾಗಿ ಕಾಣುತ್ತದೆ. ಏಕೆಂದರೆ ಕಾರ್ತವೀರ್ಯಾರ್ಜುನನನ್ನು ಸಂಪೂರ್ಣವಾಗಿ ನಿಗ್ರಹಿಸಿ ಅವರ ವಂಶವನ್ನು ಬಹುಮಟ್ಟಿಗೆ ನಿರ್ಮೂಲ ಮಾಡಿದ ಪರಶುರಾಮನ ತಾಯಿ ರೇಣುಕೆ, ಪುರಾಣ ಕಥೆಯ ಪ್ರಕಾರ. ಆದುದರಿಂದ ಕಾರ್ತವೀರ್ಯಾರ್ಜುನನ ಅನುಯಾಯಿಗಳು ಅಥವಾ ಬೇರೆ ಯಾರೇ ಆಗಲಿ ಆರಾಧಿಸಿದ ವಿಷಯದ ಪ್ರಸ್ತಾಪವೇ ಇಲ್ಲ.

ಸೌಂದತ್ತಿ ಪ್ರದೇಶದಲ್ಲಿ ಪ್ರಚಲಿತ ಕಥೆಯನ್ನು ಪರಿಶೀಲಿಸುವಾಗ ಈ ಘರ್ಷಣೆ ಕಾಲದಲ್ಲಿ ರಟ್ಟ ರಾಜರ ಬೆಂಬಲಿಗರಾಗಿ ಈಗಿನ ಬೆಟ್ಟಸೂರು ಗ್ರಾಮ ಪ್ರದೇಶದ ಸ್ಥಳಿಕರು ಹೊಡೆದಾಡಿರಬೇಕು. ಇದು ಕಥೆಯಲ್ಲಿ ಅವರ ನಾಯಕನಾದ ಬೇಟಾಸೂರನೆಂಬ ಹೆಸರಿನಲ್ಲಿ ಸೂಚಿತವಾಗಿದೆ. ಆದುದರಿಂದ ಆ ಗ್ರಾಮಕ್ಕೆ ಬೆಟಸೂರ ಎಂದು ನಾಮಕರಣವಾಯಿತೆಂದು ಹೇಳಲಾಗಿದೆ.

ಸ್ಥಳಿಕ ಕಥೆಯ ಪ್ರಕಾರ ಯುದ್ಧದಲ್ಲಿ ಸೋತು ಅಳಿದುಳಿದ ಕಾರ್ತವೀರ್ಯಾರ್ಜುನನ ಮತ್ತು ಬೇಟಾಸುರನ ಅನುಯಾಯಿಗಳು, ತನ್ನ ತಾಯಿಯ ಪೂಜ್ಯ ಗುರುಗಳಾದ “ಏಕನಾಥ ಜೋಗಿನಾಥ”ರ ಹೆಸರುಗಳನ್ನು ಸ್ಮರಿಸುತ್ತಾ, ಚೌಡಕಿಯನ್ನು ಬಾರಿಸುತ್ತಾ ತನ್ನ ತಾಯಿಯ ಸೇವೆಯನ್ನು ಮಾಡಬೇಕೆಂದು ಪರಶುರಾಮನು ಅವರಿಗೆ ವಿಧಿಸಿದನು. ಬೇಟಾಸುರನ ತಲೆ, ನರಗಳಿಂದ ಚೌಡಕಿಯನ್ನು, ಹಲ್ಲುಗಳಿಂದ ಸರಗಳನ್ನು ಮಾಡಲಾಯಿತೆಂದು ಹೇಳಲಾಗಿದೆ. ಹೀಗೆ ವ್ರತ ನಿಷ್ಠರಾದ ಶ್ರೀ ಎಲ್ಲಮ್ಮನ ಭಕ್ತರು  ಪರಂಪರಾನುಗತವಾಗಿ ಸಾಂಕೇತಿಕವಾಗಿ ಕವಡೆ ಸರವನ್ನು ಧರಿಸಿ, ಬುಟ್ಟಿಯಲ್ಲಿ ದೇವಿಯನ್ನು ಹೊತ್ತುಕೊಂಡು ಚೌಡಕಿಯನ್ನು ಬಾರಿಸುತ್ತಾ “ಏಕಯ್ಯ ಜೋಗಯ್ಯ ಉಘೆ ಉಘೆ” ಎಂದು ಸ್ಮರಿಸುತ್ತಾ ಭಿಕ್ಷೆ ಬೇಡಿ ಬಂದ ಪರಿಕರಗಳಲ್ಲಿ ಅರ್ಧವನ್ನು ದೇವಿಗೆ ಅರ್ಪಿಸಿ ಪೂಜಿಸುವ ಬೃಹತ್‌ ಭಕ್ತವೃಂದವೂ ಈಗಲೂ ಕ್ರಿಯಾಶೀಲವಾಗಿದೆ. ಆ ಪರಂಪರೆಯುಳ್ಳ ಜನವರ್ಗದವರೇ ಇಂದು ಸೌಂದತ್ತಿ ಎಲ್ಲಮ್ಮನ ಭಕ್ತರು. ಇವರುಗಳು ದೀಕ್ಷೆ ಪಡೆದು ಕವಡೆ ಹಾರಗಳನ್ನು ಧರಿಸಿ ಎಲ್ಲಮ್ಮನ ಕಳಶವುಳ್ಳ ಬುಟ್ಟಿಯನ್ನು ತಲೆ ಮೇಲೆ ಹೊತ್ತು ದೇವಿಯ ಆರಾಧನೆಯ ಸಂಕೇತವಾಗಿ ಸ್ತ್ರೀ ವೇಷಧಾರಿಗಳಾಗಿ ಮನೆ ಮನೆಗೆ ಹೋಗಿ ಬೇಡಿ ಅದನ್ನು ದೇವಿಗೆ ಅರ್ಪಿಸಿ, ಜೀವಿಸುವರು. ಈಗ ಈ ಪ್ರದೇಶದ ಬಾಹುಸಾರ ಕ್ಷತ್ರಿಯ ವರ್ಗದಲ್ಲಿ ಶ್ರೀ ರೇಣುಕಾದೇವಿ ಎಲ್ಲಮ್ಮ ಆರಾಧನೆ ಪರಂಪರೆ ಇರುವುದನ್ನು ನೋಡಿದರ, ಮೇಲೆ ಊಹಿಸಿದಂತೆ ರಟ್ಟರು ಈ ವರ್ಗದವರಾಗಿದ್ದರೆಂಬುದಕ್ಕೆ ಪುಷ್ಠಿ ದೊರೆಯುತ್ತದೆ.

ಶ್ರೀ ಎಲ್ಲಮ್ಮ ಆರಾಧನೆ:

ಈ ಭಾಗದಲ್ಲಿ ಗ್ರಾಮೀಣ ದೇವತೆ ಶ್ರೀ ಎಲ್ಲಮ್ಮನ ಆರಾಧನೆ ಮೊದಲಿನಿಂದಲೂ ಇದ್ದಿರಬೇಕು. ದೇವಾಲಯಗಳಲ್ಲಿ ನೃತ್ಯ ಸೇವೆ ಸಲ್ಲಿಸುವ ಒಂದು ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ. ಆದರೆ ಜನಸಾಮಾನ್ಯರಲ್ಲಿ ಇದು ಒಂದು ವಂಶ ಪಾರಂಪರ್ಯವಾಗಿ ಕ್ರಮೇಣವಾಗಿ ಬೆಳೆದು ದೇವದಾಸಿ ಪದ್ಧತಿಗೆ ಎಡೆಮಾಡಿ ಕೊಟ್ಟಿತು. ಎಲ್ಲಮ್ಮನ ಸಂಪ್ರದಾಯದಲ್ಲಿ ಈ ದೇವದಾಸಿ ಪದ್ಧತಿ ಇದ್ದಿರಬೇಕು. ಮೂಲತಃ ಈ ದೇವಿಯು ರೇಣುಕಾದೇವಿ ಆಗಿರದೆ ಎಲ್ಲಮ್ಮದೇವಿಯೆಂದು ಪೂಜೆಗೊಳ್ಳುತ್ತಿದ್ದಿರಬೇಕು. ಈ ವಿಧದ ಎಲ್ಲಮ್ಮನ ಆರಾಧನೆ ಬಹು ವ್ಯಾಪಕವಾಗಿತ್ತೆಂದು ಕಾಣುತ್ತದೆ. ಆಂಧ್ರ ಪ್ರದೇಶದಲ್ಲಿಯೂ ಕೂಡ ಎಲ್ಲಮ್ಮನ ಆರಾಧನೆ ಇದೆ. ಆ ಪ್ರದೇಶದಲ್ಲಿ ಎಲ್ಲಮ್ಮ ಒಬ್ಬ ಗಡಿ ದೇವತೆ. ಎಲ್ಲೆ ಎಂದರೆ ಗಡಿ. ಆದುದರಿಂದ ಎಲ್ಲೆಯಲ್ಲಿರುವ ಅಮ್ಮ ಎಲ್ಲಮ್ಮ ಎಂದು ರೂಢಿಯಲ್ಲಿ ಆಗಿರಬಹುದು.

ನಾಥ ಸಂಪ್ರದಾಯ:

ಸುಮಾರು ೧೩-೧೪ನೇ ಶತಮಾನದಲ್ಲಿ ಈ ಪ್ರದೇಶ ಹಾಗೂ ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಕಡಲ ಪ್ರದೇಶದಲ್ಲಿ ನಾಥ ಸಂಪ್ರದಾಯವು ಪ್ರಸಾರವಾಗಿ ತಕ್ಕ ಮಟ್ಟಿಗೆ ಪ್ರಭಾವಿಶಾಲಿಯಾಯಿತು. ಸವದತ್ತಿ ಎಲ್ಲಮ್ಮ ದೇವಾಲಯದ ಬದಿಯಲ್ಲಿಯೇ ಈಗಲೂ ಕೂಡ ನಾಥ ಸಂಪ್ರದಾಯದ ಒಂದು ಮಠ ಇದೆ. ಸೌಂದತ್ತಿ ಪಶ್ಚಿಮಕ್ಕೆ ಖಾನಾಪುರ ತಾಲ್ಲೂಕಿನಲ್ಲಿ ಹಂಡಿ ಬಡಗನಾಥ ಎಂಬ ಗ್ರಾಮದಲ್ಲಿ ನಾಥ ಸಂಪ್ರದಾಯದ ಮಠ ಉಂಟು. ಅಂಕೋಲ (ಉತ್ತರ ಕನ್ನಡ ಜಿಲ್ಲೆ) ಸಮೀಪದ ಮಾರುಗದ್ದೆಯಲ್ಲಿ[4] ಸುಮಾರು ೧೪-೧೫ನೇ ಶತಮಾನದ ಹಾಳು ಬಿದ್ದ ಒಂದು ಪ್ರಾಚೀನ ದೇವಾಲಯವು ನನ್ನ ಪ್ರಾದೇಶಿಕ ಅನ್ವೇಷಣೆಯಲ್ಲಿ ಬೆಳಕಿಗೆ ಬಂತು. ದುರಾದೃಷ್ಟವಶಾತ್‌ ಈ ದೇವಾಲಯವು ಬಹಳಷ್ಟು ಹಾಳಾಗಿದೆ. ಆದರೂ ಕೂಡ ಇದರ ಗೋಡೆಗಳ ಹೊರ ಮೈಯಲ್ಲಿ ದೊಡ್ಡ ದೊಡ್ಡ ಶಿಲ್ಪಗಳಿವೆ. ಈ ದೇವಾಲಯದ ವಾಸ್ತು ಮತ್ತು ಮೂರ್ತಿ ಶಿಲ್ಪಗಳನ್ನು ಹಾಗೂ ಮಹತ್ವವನ್ನು ಬೇರೆಡೆಯಲ್ಲಿ ವಿವೇಚಿಸಿದ್ದೇನೆ. ಇದು ಕೂಡ ಒಂದು ನಾಥ ಸಂಪ್ರದಾಯದ ದೇವಾಲಯವೆಂದು ನನಗನಿಸುತ್ತದೆ. ಮಂಗಳೂರಿನ ಬಳಿ ಕದರೆ ೧೨ನೇ ಶತಮಾನದಿಂದಲೂ ನಾಥ ಸಂಪ್ರದಾಯ ಪ್ರಭುಗಳ ಕೇಂದ್ರವಾಗಿತ್ತು. ಈಗಲೂ ಇಲ್ಲಿ ನಾಥ ಸಂಪ್ರದಾಯದ ನಾಥ ಮಠ ಇದೆ. ಕುಮಟ ಬಳಿ ಚಂದಾವರ[5] ಗ್ರಾಮದ ಶಾಸನದಲ್ಲಿ ಆದಿನಾಥನು ನಾಥ ಮುನಿ ಶ್ರೇಷ್ಠನು ಇಲ್ಲಿ ತಪಸ್ಸು ಮಾಡಿದನೆಂಬ ಉಲ್ಲೇಖ ಇದೆ.

ಈ ಲೇಖನದ ಆರಂಭ ಭಾಗದಲ್ಲಿ ಉಲ್ಲೇಖಿಸಿದ ಸ್ಥಳೀಯ ಕಥೆ ಪ್ರಕಾರ ರೇಣುಕಾದೇವಿ ತನ್ನ ಪತಿಯ ಶಾಪದಿಂದ ಕುಷ್ಠರೋಗಿಯಾಗಿ ಸಂಕಟ ಪಡುತ್ತಿದ್ದಾಗ ಏಕನಾಥ ಮತ್ತು ಜೋಗನಾಥ ಎಂಬ ಇಬ್ಬರು ಮುನಿಗಳ ದರ್ಶನ ಮತ್ತು ಕೃಪೆಯಿಂದ ರೋಗ ವಿಮುಕ್ತಳಾದಳು. ಮತ್ತು ಅವರ ಹೆಸರುಗಳನ್ನು ತನ್ನ ಧ್ಯಾನ ಮಂತ್ರವನ್ನಾಗಿ ಮಾಡಿಕೊಂಡಳು.

ಮೇಲಿನ ವಿಷಯಗಳನ್ನು  ಪರಿಶೀಲಿಸಿದಾಗ ಶೈವ ಮತಗಳಲ್ಲಿ ಒಂದಾದ ನಾಥ ಮತದವರು ಈ ಭಾಗದಲ್ಲಿ ಹೆಚ್ಚು ಪ್ರಭಾವಶಾಲಿಗಳಾಗಿದ್ದರು. ಜೊತೆಗೆ ಎಲ್ಲಮ್ಮನ ಆರಾಧಕರೂ ಕೂಡ ಪ್ರಬಲರಾಗಿದ್ದರೆಂದು ತೋರುವುದು.

ಶ್ರೀ ರೇಣುಕಾದೇವಿ ಎಲ್ಲಮ್ಮ ಸಂಪ್ರದಾಯ:

ಮೇಲೆ ಶಾಸನದಲ್ಲಿ ಸೂಚಿಸಿದ ಐತಿಹಾಸಿಕ ಸಂದರ್ಭದ ಉಪಮಾನವನ್ನು ಗಮನಕ್ಕೆ ತೆಗೆದುಕೊಂಡಾಗ. ಒಂದು ಕಡೆ ಮುನವಳ್ಳಿ-ಹೂಲಿ-ಶಿರಸಂಗಿಯಲ್ಲಿಯ ಶಿವ-ಕಾಳಿಕಾ ಆರಾಧಕರಾದ. ಪುರಾಣ ಶಾಸ್ತ್ರಗಳಲ್ಲಿ ಪರಿಣಿತರಾದ ಕಾಳಾಮುಖ ಶೈವರು ಶ್ರೀ ಎಲ್ಲಮ್ಮದೇವಿ ಆರಾಧಕರು, ಹಾಗೂ ನಾಥ ಸಂಪ್ರದಾಯದವರಿಗೂ ಮತ್ತೊಂದು ಕಡೆ ಜೈನ ಮತಾವಲಂಬಿಗಳಾದ ಬಾಹುಸಾರ ಕ್ಷತ್ರಿಯ ವರ್ಗದವರಿಗೂ ಮತ್ತು ಅವರ ಅನುಯಾಯಿಗಳಿಗೂ ಧಾರ್ಮಿಕ ವಿಷಯದಲ್ಲಿ ಘರ್ಷಣೆಯುಂಟಾಗಿರಬೇಕು. ಸೋತ ಬಾಹುಸಾರ ಕ್ಷತ್ರಿಯರು ಅವರ ಅನುಯಾಯಿಗಳು ಕ್ರಮೇಣ ಶ್ರೀ ಎಲ್ಲಮ್ಮ ದೇವಿಯ ಭಕ್ತರಾಗಬೇಕಾಯಿತೆಂದು ಕಾಣುತ್ತದೆ. ಶ್ರೀ ರೇಣುಕಾ ದೇವಿಯ ಮಗ ಪರಶುರಾಮನು ಸಹಸ್ರಬಾಹು ಕಾರ್ತವೀರ್ಯಾರ್ಜುನನನ್ನು ನಿಗ್ರಹಿಸಿದ ಕಥೆಯಲ್ಲಿ ಸಾಮ್ಯ ಕಂಡದ್ದರಿಂದ ಸಾಮಾನ್ಯ ಜನ ಆರಾಧನೆಯ ದೇವಿ ಶ್ರೀ ಎಲ್ಲಮ್ಮನು ಶ್ರೀ ರೇಣುಕಾದೇವಿಯೆಂದು ಭಾವಿಸಿದ್ದಲ್ಲಿ ಅದು ಔಚಿತ್ಯಪೂರ್ಣವಾಗಿದೆ. ಆದ್ದರಿಂದಲೇ ಏನೊ ಜಮದಗ್ನಿ – ರೇಣುಕಾ – ಪರಶುರಾಮನ ಕಥೆ ಈ ಭಾಗದಲ್ಲಿ ಜನಪ್ರಿಯವಾಗಿ ಪುರಾಣ ಕಥೆಯಲ್ಲಿ ಹಲವಾರು ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದ ಸ್ಥಳಿಕ ಅಂಶಗಳು ಸೇರಿಹೋಯಿತು. ಮೇಲಿನ ವಿಶ್ಲೇಷಣೆಯಂತೆ ಶಿರಸಂಗಿ – ಹೂಲಿ – ಮುನವಳ್ಳಿ ಪ್ರದೇಶದ ಎಲ್ಲಮ್ಮ, ನಾಥ, ಶೈವ, (ಕಾಳಮುಖ ಶೈವ) ಪದ್ಧತಿಗಳು ಸಮ್ಮಿಳಿತವಾದಾಗ ಕಾಳಮುಖರಿಂದ ಬಂದಂತಹ ಸಮಯೋಜಿತ ಕಥೆ ರೇಣುಕಾ ಜಮದಗ್ನಿ ಪುರಣ ಕಥೆಯು ನಾಥ ಸಂಪ್ರದಾಯದಿಂದ ಪ್ರಭಾವಿತರಾಗಿ. ಎಲ್ಲಮ್ಮ ಆರಾಧನೆಯ ಕೆಲವು ಅಂಶಗಳು ಅದರಲ್ಲಿ ಸೇರಿ ಹಿಂದಿನ ರೇಣುಕಾದೇವಿ ಎಲ್ಲಮ್ಮ ಸಂಪ್ರದಾಯವಾಗಿ ರೂಪುಗೊಂಡಿತು. ಈ ಬೆಳವಣಿಗೆಯು ಸುಮಾರು ೧೩-೧೪ನೇ ಶತಮಾನದಲ್ಲಿ ಆಗಿರಬಹುದು. ಈ ಕಾಲದಲ್ಲಿ ಕಥೆಯಲ್ಲಿ ಹಲವಾರು ಸ್ಥಳಿಕ ಅಂಶಗಳು ಸೇರಿಹೋದವು.

ಇತರ ಕೆಲವು ಸ್ಥಳಿಕ ಅಂಶಗಳು:

ಇತರ ಸ್ಥಳಿಕ ಅಂಶಗಳಲ್ಲಿ ರೇಣುಕಾದೇವಿಯ ಪಾತಿವ್ರತ್ಯ ಮಹಿಮೆಯನ್ನು ಸೂಚಿಸುವ ಕ್ರಮ ಒಂದು. ಮಧ್ಯಯುಗೀನ ಕಾಲದಲ್ಲಿ ಸ್ತ್ರೀಯ ಪಾತಿವ್ರತ್ಯವನ್ನು ಒರೆಹಚ್ಚುವ ಸಂದರ್ಭ ಒಂದಾಗ ಅವಳು ಕಠಿಣ ಪರೀಕ್ಷೆಯನ್ನು ಎದುರಿಸಬೇಕಾಗುತ್ತಿತ್ತು. ಅಂಥ ಒಂದು ಸತ್ವ ಪರೀಕ್ಷೆಯೆಂದರೆ, ಒಂದು ಕೊಡದಲ್ಲಿ ಒಂದು ಚಿನ್ನದ ಉಂಗುರವನ್ನು ಹಾಕಿ ಅದರೊಳಗೆ ಸಿಟ್ಟಿಗಬ್ಬಿಸಿದ ಘಟ ಸರ್ಪಗಳನ್ನು ಬಿಡುವುದು. ಶಂಕಾಸ್ಪದಳಾದ ಪತಿವ್ರತಾ ಸ್ತ್ರೀಯು ಕೊಡದೊಳಗೆ ಕೈಹಾಕಿ ಚಿನ್ನದುಂಗುರವನ್ನು ಹೊರತೆಗೆಯುವುದು. ಅವಳು ನಿರ್ದೋಷಿಯಾಗಿದ್ದರೆ ಅವಳು ತನ್ನ ಪತಿವ್ರತಾ ಧರ್ಮದ ಧೈರ್ಯದಿಂದ ಉಂಗುರವನ್ನು ತೆಗೆಯುವಳು. ಹಾವುಗಳು ಅಂಥ ಸ್ತ್ರೀಯನ್ನು ಕಚ್ಚುವುದಿಲ್ಲ. ಮೊದಲನೆ ಲಕ್ಷ್ಮೀದೇವರಸನ ಪತ್ನಿ ಚಂದಲಾದೇವಿಯು ಇಂಥ ಪರೀಕ್ಷೆಗೊಳಗಾಗಿ ತನ್ನ ಪಾತಿವ್ರತ್ಯದ ಸತ್ಯವನ್ನು ತೋರಿಸಿದಳೆಂದು ೧೨ನೇ ಶತಮಾನದ ಒಂದು ಶಾಸನದಲ್ಲಿ[6] ಹೇಳಿದೆ. ಜನಪ್ರಿಯವಾದ ಇಂಥ ಸತ್ವ ಪರೀಕ್ಷೆಯ ವಿಧಾನವನ್ನು ರೇಣುಕಾದೇವಿಯ ಪತಿವ್ರತಾ ಮಹಿಮೆಯನ್ನು ತಿಳಿಸುವುದಕ್ಕೆ ಸಮಯೋಚಿತವಾಗಿ ಸೇರಿಸಿಕೊಳ್ಳಲಾಯಿತು. ಈ ದೇವಿಯು ಪ್ರತಿನಿತ್ಯವು ಸಜೀವ ಸರ್ಪವನ್ನೇ ಸಿಂಬೆಯನ್ನಾಗಿ. ಮರಳಿನಿಂದ ಮಾಡಿದ ನೀರಿನ ಕೊಡವನ್ನು ಸಿಂಬೆಯ ಮೇಲೆ ಹೊತ್ತು ತನ್ನ ಗಂಡನ ಪೂಜೆಗೆ ಹೊತ್ತಿಗೆ ಸರಿಯಾಗಿ ನೀರನ್ನು ತರುತ್ತಿದ್ದಳು. ಒಂದು ದಿನ ಎಂದಿನಂತೆ ನೀರಿಗೆ ಹೋದಾಗ ನದೀ ತೀರದಲ್ಲಿ ಗಂಧರ್ವ ಸ್ತ್ರೀ-ಪುರುಷ ಪ್ರೇಮ ಸಲ್ಲಾಪ ಕ್ರೀಡೆಗಳನ್ನು ನೋಡುತ್ತಾ ಅತ್ಯಂತ ಕಠಿಣ ಶಿಸ್ತು ವ್ರತಗಳನ್ನು ಪರಿಪಾಲಿಸುತ್ತಾ ಬಂದ ಇವಳು ಸಹಜವಾಗಿ ಮೈಮರೆತು ಕರ್ತವ್ಯಭ್ರಷ್ಟಳಾದಳು. ಆದ್ದರಿಂದ ಆದಿನ ಮರಳಿನಲ್ಲಿ ಕೊಡ ಮಾಡಲು ಆಗಲಿಲ್ಲ. ಸರ್ಪವೂ ಸಿಂಬೆಯಾಗಲಿಲ್ಲ. ಈ ಅಂಶವನ್ನು ಆ ಪ್ರದೇಶದ ಆ ಕಾಲದ ಸಾಮಾಜಿಕ ಕಟ್ಟಳೆಗನುಗುಣವಾಗಿ ರೂಪುಗೊಳ್ಳುತ್ತಿರುವ ಈ ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಸ್ಥಳ ಪುರಾಣದಂತೆ ಕಾರ್ತವೀರ್ಯಾರ್ಜುನನ ಕಡೆಯವರು ರೇಣುಕಾದೇವಿಯನ್ನು ೨೧ ಸಲ ಆಯುಧಗಳಿಂದ ಘಾತಗೊಳಿಸಿದ್ದರಿಂದ ತಾಯಿಯು ೨೧ ಸಲ ಕ್ಷತ್ರಿಯ ವಂಶವನ್ನು ನಾಶ ಮಾಡಲು ಪರಶುರಾಮನಿಗೆ ಆಜ್ಞೆ ಮಾಡುತ್ತಾಳೆ. ತನ್ನ ತಾಯಿಯೊಡನೆ ತಂದೆಯ ಶರೀರ ಕಾವಡಿಯಲ್ಲಿ ಹೊತ್ತುಕೊಂಡು ಈ ರಾಮಶೃಂಗ ಪರ್ವಕ್ಕೆ ಬಂದಾಗ ಅಲ್ಲಿಯೇ ಶ್ರೀ ದತ್ತಾತ್ರೇಯ ಗುರುಗಳಿಂದ ಅಗ್ನಿ ಸಂಸ್ಕಾರವಾಗಬೇಕೆಂದು ಅಶರೀರವಾಣಿಯಾಯಿತಂತೆ. ಅಗ್ನಿ ಸಂಸ್ಕಾರದಲ್ಲಿ ರೇಣುಕಾದೇವಿಯು ಸಹಗಮನ ಹೋದಳು. ಅನಂತರ ಉರಗಗೊಳ್ಳದೆ ಶ್ರೀ ದತ್ತಾತ್ರೇಯ ಆಶ್ರಮದಲ್ಲಿ ಪರಶುರಾಮನನ್ನು ಬಿಟ್ಟು ಉಳಿದ ಮೂರು ಮಕ್ಕಳು ಲಿಂಗ ೠಷಿ, ಗೂಢ ೠಷಿ, ಮತ್ತು ತೃಪ್ತ ೠಷಿ ನೆಲಸಿದರಂತೆ. ಇವರ ವಂಶಜರೆ ಶ್ರೀ ರೇಣುಕೆಯ ಆರಾಧಕರು.

ಗುಡಿಗಳ ನಿರ್ಮಾಣ:

ಕ್ರಮೇಣ ಶ್ರೀ ರೇಣುಕಾದೇವಿ ಎಲ್ಲಮ್ಮ ದೇವಾಲಯದ ಹತ್ತಿರದಲ್ಲಿ ಜಮದಗ್ನಿ ಗುಡಿ. ಪರಶುರಾಮನ ಗುಡಿಗಳನ್ನು ಕಟ್ಟಲಾಯಿತು. ಪರಶುರಾಮನ ಮೂರ್ತಿ ಲಕ್ಷಣ ಹಾಗೂ ಜಮದಗ್ನಿ ಗುಡಿಯ ವಾಸ್ತುಶಿಲ್ಪವನ್ನು ನೋಡಿದರೆ ಇವೆಲ್ಲವೂ ೧೪ನೇ ಶತಮಾನದ ಅನಂತರದೆಂದು ಹೇಳಬಹುದು. ಹಾಗೆ ಕ್ರಮೇಣವಾಗಿ ಇಲ್ಲಿಯ ಸಂಪ್ರದಾಯವು ಬಲವಾಗಿ ಬೆಳೆದು ಎಲ್ಲಮ್ಮನ ಆರಾಧನೆಗೆ ಒಂದು ಮುಖ್ಯ ಧಾರ್ಮಿಕ ಕೇಂದ್ರವಾಯಿತು.

ಸ್ಥಳ ಪುರಾಣ:

೪೦ ಅಧ್ಯಾಯಗಳಿಂದ ಕೂಡಿದ ರೇಣುಕಾ ದೇವತೆ ಪುರಾಣ ಎಂಬ ಒಂದು ಗ್ರಂಥವನ್ನು ಉಗರಗೊಳ್ಳದ ಶ್ರೀ ಗೋವಿಂದಗೌಡರು ೧೯೨೦ರಲ್ಲಿ ಶೋಧಿಸಿದರು. ಗ್ರಂಥ ೠಷಿ (ಅಂದರೆ ಬಹುಶಃ ಸಂಪಾದಕರು ಅಥವಾ ಕರ್ತೃ) ರೇಣುಕಿ ಗೌಡ್ರು ಉಗರಗೊಳ್ಳದ ಶ್ರೀ ಗೋವಿಂದ ಗೌಡರ ತಮ್ಮಂದಿರು ಈ ಗ್ರಂಥವನ್ನು ಪ್ರಕಟಿಸಿದರು. ಈಗ ಪ್ರಚಲಿತ ಕಥೆಯೇ ಈ ಗ್ರಂಥದ ಮುಖ್ಯವಸ್ತು. ಇದೇ ಸ್ಥಳ ಪುರಾಣಕ್ಕೆ ಆಧಾರವಾಗಿದೆ. ಆದರೆ ಗ್ರಂಥವು ಶ್ರೀ ವೇದವ್ಯಾಸಕೃತ ಸ್ಕಾಂದ ಪುರಾಣಾಂತರ್ಗತ ಸಹ್ಯಾದ್ರಿ ಖಂಡದಲ್ಲಿಯ ಜಮದಗ್ನಿ-ರೇಣುಕಾ-ಪರಶುರಾಮರ ಕಥೆಯ ಮೇಲೆ ಆಧಾರಿತವಾಗಿದೆಯೆಂದು ತಿಳಿಯಲಾಗಿದೆ.

ಕೊನೆಯ ಮಾತು:

ಈ ರೀತಿ ಸುಮಾರು ೧೩-೧೬ನೇ ಶತಮಾನದಲ್ಲಿ ಶ್ರೀ ರೇಣುಕಾದೇವಿ ಎಲ್ಲಮ್ಮ ಸಂಪ್ರದಾಯವು ಬೆಳೆಯಿತೆಂದು ಸಧ್ಯದ ಕೆಲವೊಂದು ಐತಿಹಾಸಿಕ ಪ್ರಮಾಣಗಳಿಂದ ತರ್ಕಿಸಬಹುದು. ಒಂದು ರೀತಿಯಲ್ಲಿ ಇದು ಒಂದು ವಿಶಿಷ್ಟ ಧಾರ್ಮಿಕ ಸಮ್ಮಿಲನ. ಇಂದು ಅವನತಿ ಹೊಂದಿದ ದೇವದಾಸಿ ಅಂಶವನ್ನು ಬಿಟ್ಟರೆ ಈ ಸಂಪ್ರದಾಯ ಧಾರ್ಮಿಕ ಭಾವೈಕ್ಯತೆಯ ಒಂದು ಉತ್ತಮ ನಿದರ್ಶನ. ಸಂಶೋಧನೆಯನ್ನು ಮುಂದುವರೆಸಿದಲ್ಲಿ ಇನ್ನೂ ಹೆಚ್ಚಿನ ಸತ್ಯಾಂಶಗಳು ಬೆಳಕಿಗೆ ಬರಬಹುದು.

* * *[1]     ಸೌತ್‌ ಇಂಡಿಯನ್‌ ಇನ್‌ ಸ್ಕ್ರಿಪ್‌ಷನ್ಸ್ ಸಂಖ್ಯೆ ೨೦:
ಶಾಸನ ಸಂಖ್ಯೆ ೧೮ ಮತ್ತು ೬೨. ಮೊದಲನೆಯದರಲ್ಲಿ ಶಾಂತಿವರ್ಮರಸನು ಕಟ್ಟಿಸಿದ ಬಸದಿಗೆ ಭೂಮಿದಾನ ಮಾಡಿದ ವಿಷಯವಿದೆ. ಎರಡನೆಯದರಲ್ಲಿ ತ್ರಿಭುವನಮಲ್ಲ (ಆರನೆ ವಿಕ್ರಮಾದಿತ್ಯ)ನ ಮತ್ತು ಮಹಾಮಂಡಳೇಶ್ವರ ಕಾರ್ತವೀರ್ಯನ ಕಾಲದಲ್ಲಿ ರಟ್ಟ ಕಾಳಸೇನನು ಕಟ್ಟಿಸಿದ “ಜಿನೇಂದ್ರ ಭವನಕ್ಕೆ” ಕಾರೆಯಬಾಗು ಹಳ್ಳಿಯ ಭೂಮಿದಾನ ಹಾಗೂ ರಟ್ಟ ಇಮ್ಮಡಿ ಸೇನನು ಭೂಮಿದಾನ ಮಾಡಿದ ವಿಷಯವಿದೆ.

[2]      ಜೇಮ್ಸ್ ಬರ್ಜೆಸ್‌: ಆಯಂಟಕ್ವಿಟಸ್‌ ಇನ್‌ ಬೆಳಗಾಂವ ಆಂಡ್‌ ಕಲಾದಗಿ ಡಿಸ್ಟ್ರಿಕ್ಟ್ಸ್ ೧೯೮೩-೮೪ರಲ್ಲಿ ಈ ಬಸದಿಯನ್ನು ಪರಿಶೀಲಿಸಿದ್ದೇನೆ. ಬಾಗಿಲು ಚೌಕಟ್ಟಿನ ಲಲಾಟ ಬಿಂಬದಲ್ಲಿ ಜಿನಬಿಂಬವಿರುವುದರಿಂದ ಇದು ಮೂಲತಃ ಜೈನ ಬಸದಿ ಎನ್ನುವುದರಲ್ಲಿ ಸಂಶಯವಿಲ್ಲ. ಇದರಲ್ಲಿರುವ ಒಂದು ಒಡೆದ ಶಾಸನದಲ್ಲಿ ಕಾರ್ತವೀರ್ಯರಸನ ಉಲ್ಲೇಖವಿದೆ.

[3]     ನಾನು ಕೆಲವು ವರ್ಷಗಳ ಹಿಂದೆ ಗದಗದಲ್ಲಿ ಇಂಥ ಒಂದು ಮೆರವಣಿಗೆಯನ್ನು ನೋಡಿದ್ದೇನೆ.

[4]     ಸುಂದರ, ಅ; ೧೯೭೮: “ಯುನೀಕ್‌ ಮೆಡಿಯವಲ್‌ (ನಾಥ?) ಟೆಂಪಲ್‌ ಇನ್‌ ಮಾರುಗದ್ದೆ ಡಿಸ್ಟ್ರಿಕ್ಟ್‌ ನಾರ್ಥ್ ಕೆನರಾ” ಜರನಲ್‌ ಆಫ್‌ ಕರ್ನಾಟಕ ಯುನಿವರ್ಸಿಟ [ಸೋಸಿಯಲ್‌ ಸೈನ್ಸ್ಸ್], ಸಂ. ೧೪ ಧಾರವಾಡ, ಪುಟ. ೨೩-೨೯.

[5]      ಎಪಿಗ್ರಾಫಿಯಾ ಕರ್ನಾಟಿಕ ಸಂಖ್ಯೆ ಸಂ. ೯.

[6]     ದಿನಕರ ದೇಸಾಯಿ: ೧೯೫೧: ದಿ ಮಹಾಮಂಡಳೇಶ್ವರಾಸ್‌ ಅಂಡರ್ ದಿ ಚಾಲುಕ್ಯಾಸ್‌ ಆಫ್‌ ಕಲ್ಯಾಣಿ, ಬಾಂಬೆ, ಪುಟ. ೧೮೪ ಮತ್ತು ಎಪಿಗ್ರಾಫಿಯ ಇಂಡಿಕಾ, ಸಂಖ್ಯೆ: ೧೩, ಪುಟ ೩೨.