೧೬೯೬ನೇ ಇಸವಿಯಲ್ಲಿ ನಡೆದ ಒಂದು ಘಟನೆ. ಮೊಗಲ್ ಸಾಮ್ರಾಟ ಔರಂಗಜೇಬ್‌ ದಕ್ಷಿಣದಲ್ಲಿದ್ದಾಗ ಅವನ ಇಚ್ಛೆಯ ಮೇರೆಗೆ ರಾಜಸ್ಥಾನದ ಒಬ್ಬ ರಾಜಕುಮಾರ ಸಭೆಯಲ್ಲಿ ಹಾಜರಾದ. ಉತ್ಸಾಹ ಚಿಮ್ಮುತ್ತಿದ್ದ, ತೇಜಸ್ಸಿನಿಂದ ಕೂಡಿದ್ದ ಆ ಬಾಲಕನ ಮುಖವನ್ನು ನೋಡಿ ಬಾದಶಹ ತುಂಬಾ ಸಂತೋಷಪಟ್ಟ. ಅವನನ್ನು ತನ್ನ ಬಳಿಗೆ ಕರೆದು ಅವನ ಎರಡೂ ಕೈಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡ. “ಈಗ ನಿನೇನು ಮಾಡಬಲ್ಲೆ”? ಬಾದಶಹ ಕೇಳಿದ.

“ನಾನು ಈಗ ಎಷ್ಟೋ ಕೆಲಸ ಮಾಡಿ ತೋರಿಸಬಲ್ಲೆ”. ಹುಡುಗ ಬಾದಶಹನ ಕೈಗಳನ್ನು ಅಷ್ಟೇ ಭದ್ರವಾಗಿ ಹಿಡುದ ದಿಟ್ಟತನದಿಂದ ಉತ್ತರಿಸಿದ. “ತಮ್ಮಂಥ ದೊಡ್ಡ ವ್ಯಕ್ತಿಯಾದ ಬಾದಶಹ ಕೈ ಹಿಡಿದಿದ್ದೇನೆ. ಆದ್ದರಿಂದ ಎಲ್ಲರಿಗಿಂತ ಮಿಗಿಲಾದ ಕೆಲಸ ಮಾಡಬಲ್ಲೆ”.

ಔರಂಗಜೇಬನಿಗೆ ಹುಡುಗನ ಮಾತು ಕೇಳಿ ತುಂಬಾ ಆನಂದವಾಯಿತು. ಈ ಹುಡುಗ ಮುಂದೆ  ದೊಡ್ಡ ವ್ಯಕ್ತಿಯಾಗುತ್ತಾನೆಂದು ಮನಗಂಡ. ಅವನ ಎಣಿಕೆ ಸುಳ್ಳಾಗಲಿಲ್ಲ. ಆ ಹುಡುಗ ಮುಂದೆ ಹೆಸರಾಂತ ಆಡಳಿತಗಾರ, ವಿದ್ವಾಂಸ ಮತ್ತು ಖಗೋಳ ಶಾಸ್ತ್ರಜ್ಞ ನೆನಿಸಿಕೊಂಡ ಸವಾಯಿ ಜಯಸಿಂಹ.

ಔರಂಗಜೇಬನೊಡನೆ ಈ ಪ್ರಥಮ ಭೇಟಿ ನಡೆದಾಗ ಜಯಸಿಂಹನಿಗೆ ಇನ್ನೂ ಕೇವಲ ಎಂಟು ವರ್ಷ ವಯಸ್ಸು!

ಬಾಲ್ಯ ಮತ್ತು ವಿದ್ಯಾಭ್ಯಾಸ

ರಾಜಸ್ಥಾನದ ಆಂಬೇರ್ ರಾಜ್ಯದಲ್ಲಿ ೧೬೮೮ ರ ನವೆಂಬರ್ ಮೂರರಂದು ಸವಾಯಿ ಜಯಸಿಂಹ ಹುಟ್ಟಿದ. ಆತನ ತಂದೆ ಕಛರಾಹಾ ವಂಶದ ಬಿಶನಸಿಂಹ. ತಾಯಿ ಇಂದ್ರಕುವರ್ ಎಂಬಾಕೆ.

ಜಯಸಿಂಹನ ಪೂರ್ವಿಕರ ಕಾಲದಿಂದಲೂ ಆಂಬೇರ್ ಮೊಗಲ್ ಸಾಮ್ರಾಜ್ಯದ ಅಧೀನದಲ್ಲಿತ್ತು. ಅದು ತುಂಬಾ ಪ್ರಸಿದ್ಧವಾದ ಮತ್ತು ಸಮೃದ್ಧವಾದ ರಾಜ್ಯವೆನಿಸಿತ್ತು. ಜಯಸಿಂಹನ ತಂದೆ ಬಿಶನಸಿಂಹನ ರಾಜ್ಯಾಭಿಷೇಕ ನಡೆದಾಗ ಆತನಿಗೆ ಕೇವಲ ಹದಿನೆಂಟು ವರ್ಷ ವಯಸ್ಸು. ಬಿಶನಸಿಂಹ ತುಂಬಾ ಕೆಚ್ಚೆದೆಯವನು ಮತ್ತು ಸಾಹಸಿ. ಜಯಸಿಂಹ ಸಹ ತಂದೆಯ ಎಲ್ಲ ಸದ್ಗುಣಗಳನ್ನೂ ಹುಟ್ಟಿನಿಂದಲೇ ಪಡೆದುಕೊಂಡಿದ್ದನು.

ಚಿಮನಾಜಿ ಅಥವಾ ಮಹಾರಾಜಕುಮಾರ ಬಡಾ ಸಾಹಬ್‌ಜೀ ಎಂಬುದು ಜಯಸಿಂಹನ ಬಾಲ್ಯದ ಹೆಸರು. ವಿಜಯಸಿಂಹ ಜಯಸಿಂಹನ ತಮ್ಮ. ಆಂಬೇರದ ರಾಜಕುಮಾರರಿಗೆ ಚಿಕ್ಕಂದಿನಿಂದಲೇ ವಿವಿಧ ವಿದ್ಯೆಗಳನ್ನು ಕಲಿಸಲಾಗುತ್ತಿತ್ತು. ಅವರು ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಭಾಷೆಗಳನ್ನು ಕಲಿಯಬೇಕಾಗಿತ್ತು. ಇವುಗಳ ಪೈಕಿ ಸಂಸ್ಕೃತ, ಪಾರಸಿ ಮತ್ತು ಡಿಂಗಲ್‌ ಎಂಬ ರಾಜಸ್ಥಾನದ ಸ್ಥಳೀಯ ಭಾಷೆ ಮುಖ್ಯವಾಗಿದ್ದವು. ಕೆಲವು ವೇಳೆ ಅರಬ್ಬಿ ಮತ್ತು ತುರ್ಕಿ ಭಾಷೆಯನ್ನೂ ಕಲಿಸಿಕೊಡುತ್ತಿದ್ದರು.

ಜಯಸಿಂಹ ಔರಂಗಜೇಬನನ್ನು ಭೇಟಿಮಾಡಲು ಹೋದಾಗ ಅವನಿಗೆ ಕೇವಲ ಎಂಟು ವರ್ಷ ವಯಸ್ಸು. ಅವನ ವಿದ್ಯಾಭ್ಯಾಸ ಆ ವೇಳೆಗೆ ಪ್ರಾರಂಭವಾಗಿತ್ತಷ್ಟೆ. ಅದರಲ್ಲೂ ರಾಜಕುಮಾರರು ಯುದ್ಧವಿದ್ಯೆಯನ್ನು ಚೆನ್ನಾಗಿ ಕಲಿಯುವಂತೆ ತರಬೇತಿ ನೀಡಲಾಗುತ್ತಿತ್ತು. ಜಯಸಿಂಹ ಓದು ಬರಹದಲ್ಲಿ ತುಂಬಾ ಬುದ್ಧಿವಂತನಾಗಿದ್ದ. ಕುದುರೆ ಸವಾರಿ, ಬಿಲ್ಲುಗಾರಿಕೆ, ಕತ್ತಿವರಸೆ, ಮೊದಲಾದ ವಿದ್ಯೆಗಳಲ್ಲೂ ಒಳ್ಳೆಯ ತರಬೇತಿ ಪಡೆದುಕೊಂಡ. ೧೧-೧೨ ವರ್ಷ ವಯಸ್ಸಾಗುತ್ತಲೇ ಅವನು ರಾಜ್ಯಾಡಳಿತಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕಲಿತುಕೊಂಡ. ಮೊದಲಿನಿಂದಲೂ ಅವನು ಚುರುಕಾದ ವಿದ್ಯಾರ್ಥಿ. ಸುಮಾರು ೧೩-೧೪ ವರ್ಷ ವಯಸ್ಸಾಗುವ ವೇಳೆಗೆ ಈ ಎಲ್ಲ ವಿದ್ಯೆಗಳ ಜೊತೆಯಲ್ಲಿ ಆಡಳಿತವನ್ನು ನಡೆಸುವ ಮರ್ಮಗಳನ್ನು ತಿಳಿದುಕೊಂಡ.

ಅರಮನೆಯಲ್ಲಿ ಹೆಂಗಸರು ಹೇಳುತ್ತಿದ್ದ ನೀತಿ ಕಥೆಗಳು, ಧಾರ್ಮಿಕ ವಿಚಾರಗಳು, ವೀರರ ಕಥೆಗಳು ಮುಂತಾದವು ಜಯಸಿಂಹನ ಕಿವಿಯ ಮೇಲೆ ಬೀಳುತ್ತಿದ್ದವು. ಅವರು ಹಾಡುತ್ತಿದ್ದ ಭಜನೆಗಳಿಂದಾಗಿ ಅವನ ಮನಸ್ಸಿನ ಮೇಲೆ ಸಾತ್ವಿಕ ಪ್ರಭಾವ ಅಚ್ಚಳಿಯದೆ ಮೂಡಿತು. ಬದುಕಿನಲ್ಲಿ ಎದುರಾಗುವ ಕಷ್ಟನಷ್ಟಗಳೊಡನೆ ಸೆಣಸಾಡುವ ಎದೆಗಾರಿಕೆ ಅವನಲ್ಲಿ ಮನೆಮಾಡಿತು.

ರಾಜ್ಯಾಭಿಷೇಕ

ಜಯಸಿಂಹನ ತಂದೆ ಭಿಶನಸಿಂಹನು ಕೋಹಾತ್ ಎಂಬ ದೂರಪ್ರಾಂತವೊಂದರಲ್ಲಿ ಮೊಗಲ್ ಸಾಮ್ರಾಜ್ಯದ ಸೇವೆಯಲ್ಲಿ ನಿರತವಾಗಿದ್ದ. ೧೬೯೯ ರಲ್ಲಿ ಅವನು ಬಹು ಚಿಕ್ಕ ವಯಸ್ಸಿನಲ್ಲಿಯೇ ಅಕಾಲ ಮೃತ್ಯುವಿಗೀಡಾದ.

೧೭೦೦ ನೇ ಇಸವಿ ಜನವರಿ ೨೫ ರಂದು ಜಯಸಿಂಹನ ರಾಜ್ಯಾಭಿಷೇಕ ಸಮಾರಂಭ ನಡೆಯಿತು. ಆಗ ಅವನಿಗೆ ಕೇವಲ ಹನ್ನಡರಡು ವರ್ಷ ವಯಸ್ಸು. ಬಹಳ ಕಿರಿಯ ವಯಸ್ಸಿನಲ್ಲೇ ಹಿರಿಯ ಹೊಣೆಗಾರಿಕೆ ಹೆಗಲೇರಿತು. ಬದುಕಿನಲ್ಲಿ ಅನೇಕ ಏಳುಬೀಳುಗಳನ್ನು ಕಾಣಬೇಕಾಯಿತು. ಆದರೂ ಯಾವುದಕ್ಕೂ ಜಗ್ಗದೆ ಎಲ್ಲ ಜವಾಬ್ದಾರಿಗಳನ್ನೂ ನಿಭಾಯಿಸುತ್ತಾ ಹೊರಟ ಜಯಸಿಂಹ ತನ್ನ ತಂದೆಯಂತೆ ಮೊಗಲ್ ಸಾಮ್ರಾಜ್ಯದ ಆಶ್ರಯದಲ್ಲಿ ಕೆಲಸ ಮಾಡತೊಡಗಿದ.

ದಕ್ಷಿಣ ಭಾರತಕ್ಕೆ ಪ್ರಯಾಣ

ಆ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಆಡಳಿತ ನಡೆಸಲು ಯಾವ ಅಧಿಕಾರಿಯೂ ಸಾಮಾನ್ಯವಾಗಿ ಒಪ್ಪುತ್ತಿರಲಿಲ್ಲ. ದಾರಿಗೆ ಅಡ್ಡಾಗುವ ಎತ್ತರ ಬೆಟ್ಟಗಳು, ಆಳವಾದ ಕಣಿವೆಗಳು, ಎಡಬಿಡದೆ ಸುರಿಯುವ ಮಳೆ ಉತ್ಸಾಹ ಗುಂದಿಸುತ್ತಿದ್ದವು. ಯಾವ ಸೂಚನೆಯೂ ಇಲ್ಲದೆ ದಿಢೀರ್ ಎಂದು ನಡೆಯುತ್ತಿದ್ದ ಮರಾಠರ ಆಕ್ರಮಣಗಳು ಎಂಧ ಅಧಿಕಾರಿಯನ್ನೇ ಆಗಲಿ ಹೆದರಿಸುತ್ತಿದ್ದವು.

ರಾಜ್ಯಾಭಿಷೇಕವಾದ ಮೂರು ತಿಂಗಳಲ್ಲಿಯೇ ದಕ್ಷಿಣಕ್ಕೆ ತೆರಳಿ ಮರಾಠರೊಡನೆ ಹೋರಾಡುವಂತೆ ಜಯಸಿಂಹನಿಗೆ ಬಾದಶಹ ಆಜ್ಞೆ ಮಾಡಿದ. ದಕ್ಷಿಣಕ್ಕೆ ಹೋಗಲು ಜಯಸಿಂಹನಿಗೆ ನಿಜವಾಗಿಯೂ ಇಷ್ಟವಿರಲಿಲ್ಲ. ದೊಡ್ಡ ದೊಡ್ಡ ಅಧಿಕಾರಿಗಳೇ ಹಿಂಜರಿಯುತ್ತಿದ್ದರು. ಜಯಸಿಂಹ ಇನ್ನೂ ಎಳೆ ಹರೆಯದವನು. ಆದರೆ ಬಾದಶಹನ ಅಪ್ಪಣೆಯನ್ನು ಮೀರುವಂತಿರಲಿಲ್ಲ.

ಇದೇ ವರ್ಷದಲ್ಲಿ ಜಯಸಿಂಹ ಅನೇಕ ಕಷ್ಟ ಕೋಟಲೆಗಳಿಗೆ ಸಿಲುಕಿದ್ದ. ಅವನಿಗೆ ಹಣಕಾಸು ಮುಗ್ಗಟ್ಟು ಬಂದೊದಗಿತ್ತು. ಜಾಟರೊಡನೆ ಹೋರಾಡಿದ್ದಕ್ಕಾಗಿ ಅವನ ತಂದೆಗೆ ನೀಡಲಾಗಿದ್ದ ಜಾಗೀರುಗಳನ್ನು ಮೊಗಲ್‌ ಸರ್ಕಾರ ಹಿಂದಕ್ಕೆ ತೆಗೆದುಕೊಂಡಿತ್ತು. ಹಾಗಾಗಿ ಅವನಿಗೆ ಯಾವುದಾದರೂ ಒಳ್ಳೆಯ ಹುದ್ದೆ ಅಗತ್ಯವಾಗಿ ಬೇಕಾಗಿತ್ತು.

ಹನ್ನೆರಡನೆಯ ವರ್ಷಕ್ಕೆ ಜಯಸಿಂಹನಿಗೆ ಪಟ್ಟಾಭಿಷೇಕವಾಯಿತು

ಬಾದಶಹನ ಬಂಧುವಾದ ಬೀದಾರ್ ಬಖ್ತ್‌ ಎಂಬ ಸೇನಾಧಿಪತಿಯ ಬಳಿ ಜಯಸಿಂಹ ಸಹಾಯಕನಾಗಿ ನೇಮಕಗೊಂಡ. ಮೊಗಲರು ಕೊಂಕಣ ದುರ್ಗಕ್ಕೆ ಮುತ್ತಿಗೆ ಹಾಕಿದಾಗ ಅವನು ತುಂಬಾ ಶೌರ್ಯ ಸಾಹಸಗಳೊಡನೆ ಹೋರಾಡಿ ಗೆಲುವಿಗೆ ಕಾರಣನಾದ. ಬಾದಶಹ ಮತ್ತು ಬೀದಾರ್ ಬಖ್ತ್‌ ಇಬ್ಬರೂ ತುಂಬಾ ಮೆಚ್ಚುಗೆ ಸೂಚಿಸಿ ಅವನಿಗೆ ಬಡ್ತಿ ನೀಡಿದರು. ಬಡ್ತಿ ದೊರೆಯುವ ವೇಳೆಗೆ ಅವನಿಗೆ ಕೇವಲ ಹದಿನಾಲ್ಕು ವರ್ಷ ವಯಸ್ಸು.

ರಾಜಕೀಯ ಮುನ್ನೆಡೆ

ಜಯಸಿಂಹನನ್ನು ಬೀದಾರ್ ಬಖ್ತ್ ೧೭೦೫ ರಲ್ಲಿ ಮಾಳವ ಪ್ರಾಂತದ ಉಪಪ್ರಾಂತಾಧಿಕಾರಿಯಾಗಿ ನೇಮಕ ಮಾಡಿದ. ಏನಾದರೂ ಮಾಡಿ ತಾನು ಮಾಳವದ ಪ್ರಾಂತಾಧಿಕಾರಿಯಾಗಬೇಕೆಂದು ಜಯಸಿಂಹನ ಆಕಾಂಕ್ಷೆ. ತನ್ನ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಮೊದಲಾದ ಒಳ್ಳೆಯ ಗುಣಗಳಿಂದ ಮೇಲಧಿಕಾರಿಗಳಿಗೆ ಅವನು ತುಂಬಾ ಅಚ್ಚುಮೆಚ್ಚಿನವನಾದ.

೧೭೦೭ರಲ್ಲಿ ಸಾಮ್ರಾಟ ಔರಂಗಜೇಬ್ ಮರಣ ಹೊಂದಿದ ಮೇಲೆ ಭಾರತದ ಚರಿತ್ರೆಯಲ್ಲಿ ಒಂದು ಅಧ್ಯಾಯ ಮುಗಿದಂತಾಗಿತ್ತು. ವಾಸ್ತವವಾಗಿ ಅವನ ಕೆಟ್ಟ ಆಡಳಿತದಿಂದ ಜನರಿಗೆ ತುಂಬಾ ಅಸಮಧಾನವಾಗಿತ್ತು. ಸೇನೆ ಮತ್ತು ಸರ್ಕಾರದ ಅಧಿಕಾರಿಗಳು ಸಹ ಬೇಸತ್ತಿದ್ದರು. ಅವನು ಯಾರು ಯಾರನ್ನು ಮಟ್ಟ ಹಾಕಬೇಕೆಂದು ಯೋಚಿಸಿದ್ದನೋ ಅವರೆಲ್ಲ ಅವನ ಸತ್ತಮೇಲೆ ಇನ್ನೂ ಪ್ರಬಲರಾಗತೊಡಗಿದ್ದರು. ಮೊಗಲ್‌; ಚಕ್ರಾಧಿಪತ್ಯದ ಸಿಂಹಾಸನಕ್ಕಾಗಿ ಅಣ್ಣ-ತಮ್ಮಂದಿರಲ್ಲಿ ಹೋರಾಟ ನಡೆದಿತ್ತು. ಯಾರ ಪಕ್ಷವನ್ನು ವಹಿಸುವುದು ಎಂಬುದೇ ಜಯಸಿಂಹನ ಸಮಸ್ಯೆಯಾಗಿತ್ತು. ತುಂಬಾ ಯೋಚನೆಮಾಡಿ ಕಡೆಗೆ ಔರಂಗಜೇಬನ ಮಗ ಆಜಮನ ಪಕ್ಷವನ್ನು ವಹಿಸಲು ತೀರ್ಮಾನಿಸಿದ.

ಕಷ್ಟದ ದಿನಗಳು

ಇದರಿಂದ ಒಟ್ಟಿನಲ್ಲಿ ಜಯಸಿಂಹನ ಅನುಕೂಲವಾಗಲಿಲ್ಲ. ಆಜಮನ ಅಣ್ಣ ಮುಆಜಮ್ ಎಂಬಾತ ಬಹಾದ್ದೂರ ಶಾಹ ಎಂದು ಕರೆದುಕೊಂಡು ಚಕ್ರವರ್ತಿ ಎಂದು ಘೋಷಿಸಿಕೊಂಡ. ಒಮ್ಮೆ ಜಯಸಿಂಹ ವೇಷ ಮರೆಸಿಕೊಂಡು ತಪ್ಪಿಸಿಕೊಂಡು ಹೋಗಬೇಕಾಯಿತು.

ಜಯಸಿಂಹ ಶತ್ರು ಸೇನೆಯಿಂದ ತಲೆಮರೆಸಿಕೊಂಡು ಓಡಿಬಂದಿದ್ದು ತುಂಬಾ ಅಪಮಾನದ ವಿಷಯವಾಗಿತ್ತು. ಯುದ್ಧ ಮುಗಿದ ಮೇಲೆ ಅವನ ಪರಿಸ್ಥಿತಿ ಅನಿಶ್ಚಯವಾಗಿತ್ತು. ಆಗ ಅವನು ತುಂಬಾ ಪ್ರಭಾವಶಾಲಿಯಾದ ವ್ಯಕ್ತಿಯೇನೂ ಆಗಿರಲಿಲ್ಲ. ಕೇವಲ ಹತ್ತೊಂಬತ್ತು ವರ್ಷವಾಗಿದ್ದು ಸಣ್ಣ ಹುದ್ದೆಯೊಂದರಲ್ಲಿದ್ದ. ಅವನಿಗೆ ಇದ್ದುದ್ದು ಬೀದಾರ್ ಬಖ್ತನೊಬ್ಬನ ಬೆಂಬಲ. ಅವನೂ ಈಗ ತೀರಿಕೊಂಡಿದ್ದ.

ಜಯಸಿಂಹ ಆ ರೀತಿಯಾಗಿ ಓಡಿಬಂದುದಕ್ಕೆ ಕಾರಣವೇನೆ ಇರಲಿ, ಅವನು ಬಹಳ ನಗೆಪಾಟಲಿಗೆ ತುತ್ತಾದ. ಆಗ ಅವನಿಗಿನ್ನೂ ಹತ್ತೊಂಬತ್ತು ವರ್ಷವಾಗಿತ್ತು. ನಿಜವಾಗಿ ಹೇಳುವುದಾದರೆ, ಅವನು ಹೇಡಿಯೇನೂ ಆಗಿರಲಿಲ್ಲ. ಆದರೆ ಇನ್ನೊಬ್ಬರ ಅಡಿಯಾಳಾಗಿ ಯುದ್ಧದಲ್ಲಿ ಸೋತು ಸೆರೆಸಿಕ್ಕುವುದಕ್ಕಿಂತ ಇಲ್ಲವೆ ಸಾಯುವುದಕ್ಕಿಂತ ತನ್ನ ಜನರಾದ ರಜಪೂತರಿಗೆ ಸೇವೆ ಸಲ್ಲಿಸುವುದು ಉತ್ತಮ ಎಂದು ಅವನಿಗೆ ಅನಿಸಿರಬೇಕು. ಅವನು ಅಂದು ಹಾಗೆ ಮಾಡಿದ್ದೇ ಸರಿಯಾಯಿತು. ಮುಂದೆ ಇನ್ನು ಮುವತ್ತಾರು ವರ್ಷಗಳ ಕಾಲ ಬದುಕಿದ್ದು ರಾಜಸ್ಥಾನದ ಏಳಿಗೆಗಾಗಿ ದುಡಿಯಲು ಸಾಧ್ಯವಾಯಿತು. ಆಂಬೇರ್ ರಾಜ್ಯವನ್ನು ಯಶಸ್ವಿಯಾಗಿ ಆಳಿ ಜ್ಞಾನ, ವಿಜ್ಞಾನ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಒಳ್ಳೆಯ ಹೆಸರು ಪಡೆಯಲು ಅವಕಾಶ ದೊರೆಯಿತು.

ಮೊಗಲರ ವಿರುದ್ಧ

ಬಹಾದೂರ್ ಶಾಹ ಜಯಸಿಂಹನ ರಾಜ್ಯವನ್ನು ವಶ ಪಡಿಸಿಕೊಂಡ. ಅಲ್ಲಿ ಮುಸಲ್ಮಾನ ಅಧಿಕಾರಿಗಳನ್ನು ನೇಮಿಸಿದ. ಜಯಸಿಂಹ ಮತ್ತು ಅವನ ತಮ್ಮ ವಿಜಯಸಿಂಹ ರಾಜ್ಯಕ್ಕಾಗಿ ಕಾದಾಡುತ್ತಾರೆ ಎಂಬ ಕುಂಟು ನೆಪವನ್ನು ಒಡ್ಡಿದ. ಇದರಿಂದ ಜಯಸಿಂಹನಿಗೆ ತುಂಬಾ ದುಃಖವಾಯಿತು. ಬಹುಮಂದಿ ರಜಪೂತರಿಗೆ ಅಸಮಾಧಾನವೂ ಆಯಿತು.

ಈ ಘಟನೆ ಎಲ್ಲರಲ್ಲೂ ಒಳಗೇ ಅತೃಪ್ತಿಯನ್ನು ಉಂಟುಮಾಡಿತ್ತು. ಒಮ್ಮೆ ಸಮಯಕಾದು ಜಯಸಿಂಹ ಅಜಿತಸಿಂಹ ಮುಂತಾದ ರಜಪೂತರು ಇದ್ದಕ್ಕಿದ್ದ ಹಾಗೆಯೇ ಮೊಗಲ ಸೇನೆಯಿಂದ ಬೇರೆಯಾದರು. ಅನಂತರ ಉದಯಪುರಕ್ಕೆ ಆಗಮಿಸಿ ಮಹಾರಾಣನ ಜೊತೆಗೂಡಿದರು. ಮಹಾರಣನ ಬಲಗಡೆಯಲ್ಲಿ ಮಹಾರಾಜಾ ಅಜಿತಸಿಂಹ, ಎಡಗಡೆಯಲ್ಲಿ ಜಯಸಿಂಹ , ಹಿಂದೆ ದುರ್ಗಾದಾಸ ಎಂಬ ಮಹಾವೀರ, ರಜಪೂತರ ಒಟ್ಟಾದ ಸೈನ್ಯದೊಡನೆ ನಗರವನ್ನು ಪ್ರವೇಶಿಸಿದರು. ರಾಜಸ್ಥಾನದ ಚರಿತ್ರೆಯಲ್ಲಿ ಇದು ಒಂದು ಮರೆಯಲಾಗದ ಕ್ಷಣ.

ಕೆಲವು ದಿನಗಳ ಅನಂತರ ಮಹಾರಾಣಾ ತನ್ನ ಮಗಳನ್ನು ಜಯಸಿಂಹನಿಗೆ ಮದುವೆ ಮಾಡಿಕೊಡಲು ನಿಶ್ಚಯಿಸಿದ. ೧೭೦೮ ರಲ್ಲಿ ಉದಯಪುರದಲ್ಲಿ ರಾಜಕುಮಾರಿ ಚಂದ್ರಕುವರ ಬಾಯಿಯೊಡನೆ ಅವನ ವಿವಾಹವು ವಿಜೃಂಭಣೆಯಿಂದ ನೆರವೇರಿತು.

ಒಟ್ಟುಗೂಡಿದ ರಜಪೂತರು

ಮೊಗಲರು ಜಯಸಿಂಹನನ್ನು ತಮ್ಮ ಕಡೆಗೆ ಸೇರಿಸಿಕೊಳ್ಳಲು ತುಂಬಾ ಪ್ರಯತ್ನಪಟ್ಟರು. ಆಂಬೇರ್ ರಾಜ್ಯವನ್ನು ಜಯಸಿಂಹನಿಗೇ ಹಿಂದಿರುಗಿಸುವುದಾಗಿ ಪುಸಲಾಯಿಸಿದರು. ಆದರೆ ಜಯಸಿಂಹ ಯಾವುದಕ್ಕೂ ಜಗ್ಗಲಿಲ್ಲ.

ರಜಪೂತರೆಲ್ಲಾ ಒಟ್ಟುಗೂಡಿ ಮೊಗಲರ ವಶದಲ್ಲಿದ್ದ ಜೋಧಪುರದ ಮೇಲೆ ದಂಡೆತ್ತಿ ಹೋದರು. ಅದನ್ನು ವಶಪಡಿಸಿಕೊಂಡು ಮಹಾರಾಜಾ ಅಜಿತಸಿಂಹನನ್ನು ಸಿಂಹಾಸನದ ಮೇಲೆ ಕೂಡಿಸಿದರು. ಎರಡು ಬಾರಿ ದಂಡಯಾತ್ರೆ ಮಾಡಿದ ಅನಂತರ ಅಂಬೇರ್ ಜಯಸಿಂಹನ ವಶವಾಯಿತು. ಈ ನಡುವೆ ಅಜಿತಸಿಂಹ ತನ್ನ ಮಗಳನ್ನು ಜಯಸಿಂಹನಿಗೆ ಮದುವೆ ಮಾಡಿಕೊಡಲು ಪ್ರಸ್ತಾಪ ಮಾಡಿದ. ೧೭೧೯ ರಲ್ಲಿ ಜಯಸಿಂಹ ಅಜಿತಸಿಂಹನ ಮಗಳಾದ ಸೂರ್ಯಕುಮಾರಿಯನ್ನು ವಿವಾಹವಾದ.

ಆಂಬೇರನ್ನು ವಶಪಡಿಸಿಕೊಂಡ ಮೇಲೆ ಜಯಸಿಂಹ ಮರಾಠರೊಡನೆ ಪತ್ರವ್ಯವಹಾರ ನಡೆಸಿದ. ಮೊಗಲರ ವಿರುದ್ಧ ಹೋರಾಟಲು ರಜಪೂತರೊಡನೆ ಒಟ್ಟುಗೂಡುವಂತೆ ಹುರಿದುಂಬಿಸಿದ. ಮೊಗಲರು ರಜಪೂತರಲ್ಲಿ ಒಡಕನ್ನುಂಟು ಮಾಡಲು ಬಹಳವಾಗಿ ಪ್ರಯತ್ನಿಸಿದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಈ ಸಮಯದಲ್ಲಿಯೇ ರಜಪೂತರ ದುರಾದೃಷ್ಟವೇನೋ ಎಂಬಂತೆ ೧೭೧೦ ರಲ್ಲಿ ಮಹಾರಾಣಾ ಕೇವಲ ತನ್ನ ಮೂವತ್ತೆಂಟನೆಯ ವಯಸ್ಸಿನಲ್ಲಿ ಅಕಾಲ ಮೃತ್ಯುವಿಗೀಡಾದ. ಇದರಿಂದ ರಜಪೂತರು ಬಹಳ ಮಟ್ಟಿಗೆ ಬಲಗುಂದಿದಂತಾದರು.

ಬಾದಶಹ ಈ ಸಮಯಕ್ಕೆ ಸರಿಯಾಗಿ ಪುನಃ ರಾಜಸ್ತಾನದತ್ತ ಬರುವ ಯೋಚನೆ ಮಾಡಿದ. ಆಗ ಜಯಸಿಂಹ ರಜಪೂತರೆನ್ನಲ್ಲಾ ಒಟ್ಟುಗೂಡಿಸಿ ಮರಾಠರ ಸಹಾಯವನ್ನು ಪಡೆದು ಅವನ ಪ್ರಯತ್ನಗಳಿಗೆ ತಡೆಯೊಡ್ಡಲು ತುಂಬಾ ಶ್ರಮಪಟ್ಟ.

ಸವಾಯಿ ಪದವಿ

ಬಹಾದೂರ್ ಶಾಹ ಸತ್ತ ಅನಂತರ ಸಿಂಹಾಸನಕ್ಕಾಗಿ ನಡೆದ ಹೋರಾಟದಲ್ಲಿ ಜಹಾಂದಾರ್‌ಶಾಹ ಗೆದ್ದು ರಾಜ್ಯಾಭಿಷೇಕ ಮಾಡಿಕೊಂಡ. ಜಯಸಿಂಹ ಮೊದಲಾದ ರಜಪೂತರು ಬೇಕೆಂದೇ ಈ ಹೋರಾಟದಲ್ಲಿ ಭಾಗವಹಿಸಲಿಲ್ಲ. ಪಕ್ಷಪಾತದಿಂದ ಉಂಟಾಗುವ ತೊಂದರೆಯ ಬಗ್ಗೆ ಅವರಿಗೆ ಅರಿವಿತ್ತು.

ಜಹಾಂದಾರ್‌ಶಾಹನನ್ನು ಬೇಗ ಸಿಂಹಾಸನದಿಂದ ಇಳಿಸಿ ಮಹಮ್ಮದ್‌ಷಾ ಎಂಬಾತ ಪಟ್ಟಕ್ಕೆ ಬಂದ. ತಾನು ಸಿಂಹಾಸನವನ್ನು ಏರಿದ ಮೂರು ತಿಂಗಳಲ್ಲೇ ಇವನು ಜಯಸಿಂಹನ ಶಕ್ತಿ ಸಾಮರ್ಥ್ಯ, ಬುದ್ಧಿವಂತಿಕೆಗಳ ಬಗ್ಗೆ ಅರಿತುಕೊಂಡು ಅವನಿಗೆ ಸವಾಯಿ ಪದವಿಯನ್ನು ವಿದ್ಯುಕ್ತವಾಗಿ ನೀಡಿದ. ಸವಾಯಿ ಎಂದರೆ ಒದೂ ಕಾಲು ಎಂದರ್ಥ. ರಾಜರುಗಳಲ್ಲೆಲ್ಲ ಜಯಸಿಂಹ ಒಂದು ಪಾಲು ಹೆಚ್ಚು ಶ್ರೇಷ್ಠನಾಗಿದ್ದನೆಂದು ಈ ಬಿರುದಿನ ಅರ್ಥ. ಬಿರುದಿಗೆ ತಕ್ಕ ಲಾಂಛನಗಳನ್ನೂ ಸವಲತ್ತುಗಳನ್ನೂ ಅವಿಗೆ ನೀಡಲಾಯಿತು. ಜಯಸಿಂಹನ ವಂಶದವರೆಲ್ಲ ಅನಂತರ ಈ ಬಿರುದನ್ನು ಇಟ್ಟುಕೊಳ್ಳತೊಡಗಿದರು.

ಮುಂದಿನ ಕೆಲವು ವರ್ಷಗಳಲ್ಲಿ ದೆಹಲಿಯ ಸಿಂಹಾಸನಕ್ಕಾಗಿ ಜಗಳಗಳು ನಡೆಯುತ್ತಲೇ ಇದ್ದವು. ಒಟ್ಟಿನಲ್ಲಿ ಈ ಕಾಲದಲ್ಲಿ ಜಯಸಿಂಹನ ಪ್ರಭಾವ, ಪ್ರತಿಷ್ಠೆಗಳು ಬೆಳೆದವು. ಬಾದಶಹನ ಆಸ್ಥಾನದಲ್ಲಿ ಅವನ ಪ್ರತಿಷ್ಠೆ ಎಷ್ಟು ಬೆಳೆಯಿತೆಂದರೆ ಒಮ್ಮೆ ಅವನು ಆಸ್ಥಾನಕ್ಕೆ ಹೋದಾಗ ಅವನನ್ನು ಆನೆಯ ಮೇಲೆ ಅರಮನೆಗೆ ಕರೆದುಕೊಂಡು ಹೋದರು. ಬಾದಶಹನು ಅವನಿಗೆ ಮುತ್ತಿನ ಹಾರವನ್ನೂ ರತ್ನಾಭರಣಗಳನ್ನೂ ಕೊಟ್ಟು ಸ್ವಾಗತಿಸಿದ. ಜಯಸಿಂಹನ ಕೋರಿಕೆಯಂತೆ ಬಾದಶಹನು ಹಿಂದೂಗಳ ಮೇಲೆ ಹೇರಿದ್ದ ಜೆಸಿಯಾ ಎಂಬ ಕಂದಾಯವನ್ನು ತೆಗೆದು ಹಾಕಿದ.

ನಗರ ನಿರ್ಮಾಣ

ರಾಜಕೀಯ ರಂಗದಲ್ಲಿ ಜಯಸಿಂಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಈ ಎಲ್ಲ ಸಮಸ್ಯೆಗಳ ನಡುವೆಯೂ ಅವನಿಗೆ ತನ್ನ ಕಾಲದಲ್ಲಿ ಒಂದು ಸುಂದರವಾದ ಸುವ್ಯವಸ್ಥಿತವಾದ ನಗರವನ್ನು ಕಟ್ಟಿಸಬೇಕೆಂಬ ಹಿರಿದಾದ ಬಯಕೆಯಿತ್ತು. ಅವನ ರಾಜ್ಯ ಬೇಗ ವಿಸ್ತರಿಸುತ್ತಿತ್ತು. ಅದರ ಅವಶ್ಯಕತೆಗಳನ್ನು ಪೂರೈಸಲು ಆಂಬೇರ್ ಸಾಕಾಗುತ್ತಿರಲಿಲ್ಲ. ಆಂಬೇರಿನಲ್ಲಿ ಸುಂದರವಾದ ಅರಮನೆಗಳಿದ್ದವು. ಆದರೆ ದೊಡ್ಡ ವ್ಯಾಪಾರ ಕೇಂದ್ರಗಳಾಗಲಿ ಉತ್ತಮವಾದ ರಸ್ತೆ ಉದ್ಯಾನವನಗಳಾಗಲಿ ಇರಲಿಲ್ಲ. ಸುತ್ತಲೂ ಬೆಟ್ಟಗುಡ್ಡಗಳಿದ್ದುದರಿಂದ ಆಂಬೇರನ್ನು ವಿಸ್ತರಿಸುವುದು ಕಷ್ಟವಾಗಿತ್ತು.

ಜಯಸಿಂಹನ ಬಳಿ ಸಾಧನ ಸಾಮಗ್ರಿಗಳಿಗೆ ಯಾವ ಕೊರತೆಯೂ ಇರಲಿಲ್ಲ. ಆದ್ದರಿಂದ ಅವನು ಒಂದು ಹೊಸ ನಗರವನ್ನೇ ನಿರ್ಮಿಸಲು ತೀರ್ಮಾನಿಸಿದ. ೧೭೨೮ ರಲ್ಲಿ ಜಯನಗರ ಅಥವಾ ಜಯಪುರ ನಗರಕ್ಕೆ ಅಡಿಪಾಯ ಹಾಕಲಾಯಿತು. ೧೭೩೩ ರ ವೇಳೆಗೆ ನಗರ ಚೊಕ್ಕವಾಗಿ ಸುಂದರವಾಗಿ ಸಿದ್ಧವಾಗಿ ನಿಂತಿತು.

ಜಯಪುರ

ಹೊಸದಾಗಿ ಕಟ್ಟಿಸಿದ ನಗರ ಬಹಳ ಅಚ್ಚುಕಟ್ಟಾಗಿತ್ತು. ಜಯಸಿಂಹನಿಗೆ ವಾಸ್ತುಶಿಲ್ಪ, ಕಲೆ ಮತ್ತು ಸೌಂದರ್ಯ ಶಾಸ್ತ್ರಗಳಲ್ಲಿಯೂ ತುಂಬಾ ಆಸಕ್ತಿಯಿತ್ತು. ಮೊದಲೇ ನಕ್ಷೆಯನ್ನು ಸಿದ್ಧಪಡಿಸಿಟ್ಟುಕೊಂಡು ನಗರವನ್ನು ನಿರ್ಮಿಸಿದ. ಒಂಬತ್ತು ಆಯತಾಕಾರ ಭಾಗಗಳಲ್ಲಿ ನಗರವನ್ನು ವಿಂಗಡಿಸಿ ಉತ್ತರದಿಕ್ಕಿನ ಎರಡು ಭಾಗಗಳನ್ನು ಅರಮನೆಗಳು, ಕಚೇರಿಗಳು ಮತ್ತು ವೀಕ್ಷಕಾಲಯಗಳಿಗೆಂದು ಕಾದಿರಿಸಿದ. ಅಲ್ಲಿ ಮನೆಗಳನ್ನು ನೀಟಾಗಿ ಸಾಲುಸಾಲಾಗಿ ಕಟ್ಟಿ ಅಲಂಕಾರಗಳನ್ನು ಮಾಡುತ್ತಿದ್ದರು. ಜಯಪುರದ ಕೆಲವು ರಾಜಮಾರ್ಗಗಳು ಎಷ್ಟು ವಿಶಾಲವಾಗಿತ್ತೆಂದರೆ ಅವುಗಳಲ್ಲಿ ಆರು ಏಳು ಗಾಡಿಗಳು ಒಟ್ಟಿಗೆ ಒಂದರ ಪಕ್ಕದಲ್ಲೊಂದು ಹೋಗಬಹುದಿತ್ತು.

ನಗರದ ಸುತ್ತಲೂ ೨೦-೨೫ ಅಡಿ ಎತ್ತರದ ಹಾಗೂ ಒಂಬತ್ತು ಅಡಿ ಅಗಲದ ಗೋಡೆಯನ್ನು ಕಟ್ಟಿಸಿದ. ಏಳು ಪ್ರವೇಶ ದ್ವರಗಳನ್ನಿಡಲಾಯಿತು. ಅರಮನೆಯ ಭಾಗದಲ್ಲಿ ವಾಸ್ತುಶಿಲ್ಪದ ದೃಷ್ಟಿಯಿಂದ ಸುಂದರವಾದ ಅನೇಕ ಕಟ್ಟಡಗಳು ನಿರ್ಮಾಣಗೊಂಡವು. ಹಿಂದೂ ಕಟ್ಟಡ ಶೈಲಿಗೆ ಇವು ಉತ್ತಮ ಉದಾಹರಣೆಗಳೆನಿಸಿವೆ.

ಜಯಪುರದ ಚಂದ್ರಮಹಲ್ ಅರಮನೆ ಏಳು ಅಂತಸ್ತುಗಳಿಂದ ಕೂಡಿ ತುಂಬಾ ಸೊಗಸಾಗಿದೆ. ಇದರಲ್ಲಿ ಪ್ರೀತಮ್ ನಿವಾಸ್, ಶೋಭಾ ನಿವಾಸ್, ಸುಖ ನಿವಾಸ್, ಛಬಿ ನಿವಾಸ್ ಮತ್ತು ಶೀಶ್ ಮಹಲ್‌ ಎಂಬ ವಿಶಿಷ್ಟವಾದ ಅಂತಸ್ತುಗಳಿವೆ. ಸುತ್ತಲೂ ತಿಳಿನೀರಿನ ಕೊಳಗಳು ಮತ್ತು ಉದ್ಯಾನಗಳು ಇವೆ. ಜಯಸಿಂಹ ಸೌಂದರ್ಯಕ್ಕೆ ಎಷ್ಟು ಬೆಲೆ ಕೊಡುತ್ತಿದ್ದ ಎಂಬುದನ್ನು ಇವು ತೋರಿಸುತ್ತವೆ. ಈ ಅರಮನೆಗೆ ಅಮೃತಶಿಲೆಯ ಗೋಪುರವಿದೆ. ಅಲ್ಲದೆ ಜಯಸಿಂಹ ಮಾನಸಸಾಗರದಲ್ಲಿ ಜಲಮಹಲ್ ಎಂಬ ಅರಮನೆಯನ್ನೂ, ಅನೇಕ ದೇವಸ್ಥಾನಗಳನ್ನೂ ಧರ್ಮಛತ್ರಗಳನ್ನೂ ಕಟ್ಟಿಸಿದ. ಇಂದು ಜಯಪುರ ರಾಜಸ್ತಾನದ ರಾಜಧಾನಿ.

 

ಜಯಪುರದ ವೀಕ್ಷಣಾಲಯ, ಅದನ್ನು ಜಯಸಿಂಹ ನೋಡುತ್ತಿರುವುದು

೧೭೨೦-೩೦ರ ದಶಕ

ಈ ದಶಕ ಜಯಸಿಂಹನ ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಬಹಳ ಮಹತ್ವಪೂರ್ಣವಾಗಿತ್ತು. ಅನೇಕ ರಾಜಕೀಯ ಬದಲಾವಣೆಗಳು ಈ ಕಾಲದಲ್ಲಿ ನಡೆದವು. ಅನೇಕ ನಾಯಕರು ರಾಜಕೀಯ ಕ್ಷೇತ್ರದಿಂದ ಮರೆಯಾಗಿದ್ದರು. ಜಾಟರು ಶಾಂತಿಪ್ರಿಯರಾಗಿ ವ್ಯವಸ್ಥಿತವಾದ ಶಕ್ತಿಯಾಗಿ ಏಳಿಗೆ ಹೊಂದುತ್ತಿದ್ದರು. ದಕ್ಷಿಣ ಭಾರತದಲ್ಲೂ ಬಾದಶಹನ ವಿರೋಧಿಗಳು ಬೆಳೆಯುತ್ತಿದ್ದರು. ಮರಾಠರು ಸಹ ಈ ಕಾಲದಲ್ಲೇ ರಾಜಸ್ತಾನದ ಮೇಲೆ ಆಕ್ರಮಣ ನಡೆಸಲು ಶುರು ಮಾಡಿದ್ದರು. ಮಾಳವ ಮತ್ತು ಗುಜರಾತುಗಳ ಮೇಲೂ ಅವರ ಪ್ರಭಾವವಿತ್ತು.

ಜಯಸಿಂಹನ ಪ್ರಭಾವ ದೆಹಲಿ ಮತ್ತು ರಾಜಸ್ತಾನಗಳಲ್ಲಿ ಅಡೆತಡೆಯಿಲ್ಲದೆ ಹೆಚ್ಚುತ್ತಿತ್ತು. ಈ ಎಲ್ಲ ರಾಜಕೀಯ ಚಟುವಟಿಕೆಗಳ ನಡುವೆಯೂ ಅವನು ತನ್ನ ವೈಜ್ಞಾನಿಕ ಸಂಶೋಧನೆಗಳತ್ತ ಗಮನ ಹರಿಸಿದ. ಮೊದಲಿನಿಂದಲೂ ಅವನಿಗೆ ವಿಜ್ಞಾನದಲ್ಲಿ, ಅದರಲ್ಲೂ ವಿಶೇಷವಾಗಿ ಖಗೋಳ ವಿಜ್ಞಾನದಲ್ಲಿ ಅಪಾರ ಆಸಕ್ತಿ. ಅನೇಕ ವೀಕ್ಞಣಾಲಯಗಳನ್ನು ಕಟ್ಟಿಸಿ ಸಫಲವಾಗಿ ತನ್ನ ಪ್ರಯೋಗಗಳನ್ನು ನಡೆಸತೊಡಗಿದ.

ಮರಾಠರ ಬಗ್ಗೆ ಜಯಸಿಂಹನ ನೀತಿ ವಿಶಿಷ್ಟವಾಗಿತ್ತು. ಬಾದಶಹನ ಪರವಾಗಿ ಅವನು ಮೊಗಲರ ಮತ್ತು ಮರಾಠರ ನಡುವೆ ಸಂಧಿಗಾಗಿ ತುಂಬಾ ಪ್ರಯತ್ನಪಟ್ಟ. ಮರಾಠರ ಬೇಡಿಕೆಗಳು ಈಡೇರಬೇಕು. ಇದೇ ಅವನ  ನಿಲುವಾಗಿತ್ತು. ಮಾಳವದಲ್ಲಿ ತಾನು ಆಳಬೇಕಾದರೆ ಮರಾಠರ ಸಹಾಯ ಮತ್ತು ಸಹಕಾರ ಅಗತ್ಯ ಎಂಬುದು ಅವನಿಗೆ ಚೆನ್ನಾಗಿಗೊತ್ತಿತ್ತು.

ಮತ್ತೆ ಮಾಳವಕ್ಕೆ

ಜಯಸಿಂಹನನ್ನು ೧೭೩೨ ರಲ್ಲಿ ಎರಡನೆ ಬಾರಿಗೆ ಮಾಳವದ ಪ್ರಾಂತಾಧಿಕಾರಿಯಾಗಿ ನೇಮಿಸಲಾಯಿತು. ಆ ಹೊತ್ತಿಗಾಗಲೆ ಮರಾಠರು ಮಾಂಡೂ ಪ್ರದೇಶವನ್ನು ವಶಪಡಿಸಿಕೊಂಡಿದ್ದರು. ಸ್ವಲ್ಪ ಕಾಲದ ಮೇಲೆ ಕಾರಣಾಂತರಗಳಿಂದ ಬಾದಶಹ ಜಯಸಿಂಹನ ಬದಲಾಗಿ ಮಹಮದ್ ಖಾನ್ ಬಂಗಶ್ ಎಂಬುವವನನ್ನು ಮಾಳವದ ಪ್ರಾಂತಾಧಿಕಾರಿಯಾಗಿ ನೇಮಕ ಮಾಡಿದ. ಆದರೆ ಮಾಳವದ ಸಮಸ್ಯೆಗಳನ್ನು ಪರಿಹರಿಸಲು ಅವನಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಜಯಸಿಂಹನನ್ನು ಮೂರನೇ ಬಾರಿಗೆ ಮಾಳವದ ಪ್ರಾಂತಾಧಿಕಾರಿಯಾಗಿ ನೇಮಕ ಮಾಡಲಾಯಿತು. ತನ್ನ ಪ್ರಾಂತವನ್ನು ರಕ್ಷಿಸಲು ಅವನು ಮಹಾರಾಣನೊಡನೆ ಒಪ್ಪಂದ ಮಾಡಿಕೊಂಡು ಅಲ್ಲಿಂದಲೂ ಸೈನ್ಯ ತರಿಸಿಕೊಂಡ.

ಪೇಶ್ವೆ ಬಾಜೀರಾಯನೊಡನೆ ಸ್ನೇಹ

ಮರಾಠರನ್ನು ಸೋಲಿಸುವುದು ಕಷ್ಟ ಎಂದು ಜಯಸಿಂಹನಿಗೆ ಸ್ವಲ್ಪ ಕಾಲದಲ್ಲೇ ಗೊತ್ತಾಯಿತು. ಆದ್ದರಿಂದ ಮುಂದೆ ಅವನು ಅವರೊಡನೆ ಸ್ನೇಹದಿಂದ ಕೂಡಿದ ವ್ಯವಹಾರವನ್ನು ಇಟ್ಟುಕೊಂಡ. ಪೇಶ್ವೆ ಬಾಜೀರಾಯನ ತಾಯಿ ರಾಧಾಬಾಯಿ ಎಂಬಾಕೆ ೧೭೩೫ ರ ಜೂನ್ ತಿಂಗಳಲ್ಲಿ ಉತ್ತರದ ಯಾತ್ರೆಗಾಗಿ ಹೊರಟಳು. ಆಕೆ ಯಾತ್ರೆ ಮಾಡುತ್ತಾ ಜಯಪುರಕ್ಕೆ ಬಂದಳು. ಜಯಸಿಂಹ ತುಂಬಾ ಆದರದಿಂದ ಆಕೆಯನ್ನು ಬರಮಾಡಿಕೊಂಡು ಸತ್ಕರಿಸಿದ. ಏಳು ವಾರಗಳ ತನಕ ಆಕೆಯನ್ನು ಅರಮನೆಯಲ್ಲಿ ಉಳಿಸಿಕೊಂಡು ಅನಂತರ ಬೀಳ್ಕೊಟ್ಟು. ರಾಧಾಬಾಯಿ ಯಾತ್ರೆಯನ್ನು ಮುಂದುವರೆಸಿದಾಗ ಮಹಾರಾಣಾ ಸಂಗ್ರಾಮಸಿಂಹ ಮತ್ತು ಜಾಟರ ನಾಯಕ ಬದನಸಿಂಹ ತಮ್ಮ ತಮ್ಮ ಪ್ರಾಂತಗಳಲ್ಲಿ ಆಕೆಯೊಡನೆ ಅಷ್ಟೇ ಆದರದಿಂದ ನಡೆದುಕೊಂಡರು. ಮೊಗಲ್ ಸಾಮ್ರಾಜ್ಯದ ಅಧಿಕಾರಿಗಳು ಸಹ ಯಾತ್ರೆಯುದ್ಧಕ್ಕೂ ಆಕೆಯನ್ನು ಗೌರವದಿಂದ ಕಂಡರು. ಇದರಿಂದ ಬಾಜೀರಾಯನಿಗೆ ತುಂಬಾ ಸಂತೋಷವಾಯಿತು.

೧೭೩೬ರಲ್ಲಿ ಪೇಶ್ವೆ ಬಾಜೀರಾಯ ಜಯಸಿಂಹನ ನಾಡಿನತ್ತ ಬಂದ. ಜಯಸಿಂಹ ಪ್ರೀತಿಯಿಂದ ಅವನನ್ನು ಎದುರುಗೊಂಡು ರಾಜಮರ್ಯಾದೆಗಳೊಡನೆ ನೋಡಿಕೊಂಡ. ಇವರಿಬ್ಬರ ನಡುವೆ ಸ್ನೇಹ ಮತ್ತು ಪರಸ್ಪರ ಗೌರವಭಾವನೆಗಳು ದಿನೇ ದಿನೇ ಹೆಚ್ಚುತ್ತಿದ್ದವು. ಮೊಗಲಿಗೂ ಮರಾಠರಿಗೂ ಅನೇಕ ಸಂದರ್ಭಗಳಲ್ಲಿ ಸೆಣಸಾಟ ನಡೆಯುತ್ತಿದ್ದರೂ ಜಯಸಿಂಹ ಮತ್ತು ಬಾಜೀರಾಯ ಇವರಿಬ್ಬರ ಸಂಬಂಧದಲ್ಲಿ ಬಿರುಕುಂಟಾಗಲಿಲ್ಲ. ಇವರಿಬ್ಬರ ಉದ್ದೇಶಗಳು ಸಮಾನವಾಗಿದ್ದವು. ಒಬ್ಬರಿಗೆ ಇನ್ನೊಬ್ಬರ ಆಸೆ ಆಕಾಂಕ್ಷೆಗಳಲ್ಲಿ ಸಾಧನೆ ಸಿದ್ಧಿಗಳಲ್ಲಿ ಸಹಾನುಭೂತಿಯಿತ್ತು.

ಪೇಶ್ವೆ ಬಾಜೀರಾಯ ಸಮರ್ಥನಾದ ಆಡಳಿತಗಾರನಾಗಿದ್ದ. ಆತ ೧೭೩೯ ರಲ್ಲಿ ತೀವ್ರ ಜ್ವರದಿಂದಾಗಿ ಅಕಾಲ ಮೃತ್ಯುವಿಗೀಡಾದ. ಇದರಿಂದ ಜಯಸಿಂಹನಿಗೆ ತುಂಬಾ ದುಃಖವಾಯಿತು.

ಆಗ್ರಾ ಮತ್ತು ಮಾಳವಗಳ ಪ್ರಾಂತಾಧಿಕಾರಿಯಾಗಿ ಕೆಲಸ ಮಾಡಿದ ಮೇಲೆ ಜಯಸಿಂಹ ತಾನು ಹೊಸದಾಗಿ ಕಟ್ಟಿಸಿದ ರಾಜಧಾನಿ ಜಯಪುರಕ್ಕೆ ಹಿಂದಿರುಗಿದ. ತನ್ನ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಎಚ್ಚರಿಕೆ ವಹಿಸಲಾರಂಭಿಸಿದ. ೧೭೩೭ರ ಅನಂತರ ಹೆಚ್ಚು ಕಡಿಮೆ ಅವನು ಜಯಪುರದಲ್ಲೆ ಉಳಿದ. ತನ್ನ ಪ್ರಜೆಗಳ ಕಷ್ಟ ಸುಖಗಳಿಗೆ ಗಮನ ನೀಡಲಾರಂಭಿಸಿದ.

ಅಶ್ವಮೇಧಯಾಗ

ಅಶ್ವಮೇಧ ಎಂಬುದು ಪ್ರಾಚೀನ ಹಿಂದೂ ಪರಂಪರೆಯಲ್ಲಿ ಕಂಡು ಬರುವ ಒಂದು ಯಾಗ. ಕುದುರೆಯನ್ನು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಅದರ ಬೆಂಗಾವಲಿನಲ್ಲಿ ವೀರರನ್ನು ಕಳುಹಿಸುತ್ತಾರೆ. ಕುದುರೆ ಎಲ್ಲಾ ಪ್ರಾಂತಗಳಿಗೂ ಹೋಗುತ್ತದೆ. ಯಾರು ಕುದುರೆಯನ್ನು ಕಟ್ಟಿ ಹಾಕುತ್ತಾರೋ ಅವರು ಕುದುರೆಯ ಯಜಮಾನನ ಸೈನ್ಯದೊಡನೆ ಹೋರಾಟಬೇಕು. ಇಲ್ಲವೆ ಅವನಿಗೆ ಅಧೀನನಾಗಿ ಕಪ್ಪಕಾಣಿಕೆಗಳನ್ನು ಒಪ್ಪಿಸಬೇಕು. ಈ ರೀತಿಯಾಗಿ ಎಲ್ಲರನ್ನು ಗೆದ್ದ ಅನಂತರ ಕುದುರೆ ಹಿಂದಿರುತ್ತದೆ. ಅನಂತರ ಯಾಗ ನಡೆಯುತ್ತದೆ. ಜಯಸಿಂಹ ಸಹ ಅಶ್ವಮೇಧಯಾಗ ಮಾಡಲು ವ್ಯವಸ್ಥೆ ಮಾಡಿದ. ಬಹಳ ಕಾಲ ಈ ಯಾಗವನ್ನು ಮಾಡುವ ಗೋಜಿಗೆ ಯಾವ ರಾಜನೂ ಹೋಗಿರಲಿಲ್ಲ.

ಜಯಸಿಂಹ ದೀಕ್ಷೆ ಹಿಡಿದು ಮಾಡಿದ ಈ ಯಾಗ ೧೭೩೪ ರಲ್ಲಿ ಮುಗಿಯಿತೆಂದು ತಿಳಿದುಬರುತ್ತದೆ.

ರಾಜ್ಯ ವಿಸ್ತಾರ

ಜಯಸಿಂಹನ ಕೊನೆಗಾಲದವೇಳೆಗೆ ಆಂಬೇರ್ ರಾಜ್ಯ ಭಾರತದ ಅತ್ಯಂತ ದೊಡ್ಡ ಅರ್ಧ ಸ್ವತಂತ್ರ ರಾಜ್ಯಗಳಲ್ಲಿ ಒಂದಾಗಿತ್ತು. ಆದರೆ ಆರ್ಥಿಕ ಸ್ಥಿತಿಗತಿಗಳು ರಾಜಸ್ತಾನದ ಉಳಿದ ಎಲ್ಲ ರಾಜ್ಯಗಳಿಗಿಂತಲೂ ಉತ್ತಮವಾಗಿದ್ದವು. ಜಯಸಿಂಹ ತನ್ನ ರಾಜ್ಯವನ್ನು ವಿಸ್ತರಿಸಿದ ಬಗೆ ವಿಶಿಷ್ಟವಾಗಿತ್ತು. ಇದಕ್ಕಾಗಿ ಯಾವುದೇ ಯುದ್ಧ ರಕ್ತಪಾತವನ್ನು ಅವನು ನಡೆಸಲಿಲ್ಲ.

ಆ ಸಮಯದಲ್ಲಿ ಮೊಗಲ್ ಸಾಮ್ರಾಜ್ಯದ ಆಡಳಿತ ಸಡಿಲಗೊಳ್ಳುತ್ತಿತ್ತು. ಹಾಗಾಗಿ ಪ್ರಾಂತಗಳಲ್ಲಿ ನೇಮಕಗೊಂಡಿದ್ದ ಮುಸಲ್ಮಾನ ಅಧಿಕಾರಿಗಳಿಗೆ ಕಂದಾಯ ಮತ್ತು ಪೊಗದಿಗಳನ್ನು ವಸೂಲು ಮಾಡಲು ಕಷ್ಟವಾಗಿತ್ತು. ಆ ಜವಾಬ್ದಾರಿಯನ್ನು ತಾನು ಹೊತ್ತು ಅವರಿಂದ ಜಾಗೀರುಗಳನ್ನು ಪಡೆದುಕೊಂಡು ಜಯಸಿಂಹ ತನ್ನ ರಾಜ್ಯವನ್ನು ವಿಸ್ತರಿಸಿದ.

ಜಯಪುರದಲ್ಲಿ ಆಡಳಿತ ವ್ಯವಸ್ಥೆ ಚೆನ್ನಾಗಿತ್ತು. ಮೊಗಲ್ ಅಧಿಕಾರಿಗಳ ಕೈಕೆಳಗೆ ಇರುವುದಕ್ಕಿಂತಲೂ ಜಯಸಿಂಹನ ಆಶ್ರಯವೆ ಜನರಿಗೆ ಮೆಚ್ಚುಗೆಯಾಗಿತ್ತು. ರಾಷ್ಟ್ರದಲ್ಲಿ ಎಲ್ಲೆಡೆಯಲ್ಲೂ ಆಡಳಿತ ವ್ಯವಸ್ಥೆ ಕುಸಿಯುತ್ತಿತ್ತು. ಇಂಥ ಸನ್ನಿವೇಶದಲ್ಲಿ ಜಯಸಿಂಹ ಅತ್ಯಂತ ಕೌಶಲದಿಂದ ಆಡಳಿತವನ್ನು ಸಮರ್ಥವಾಗಿ ನಡೆಸಿದ.

ಸಾಂಸ್ಕೃತಿಕ ಅಭಿರುಚಿ

ರಾಜಕೀಯ ಕ್ಷೇತ್ರದಲ್ಲಿ ಸವಾಯಿ ಜಯಸಿಂಹನ ಬದುಕು ಎಡೆಬಿಡದ ದುಡಿಮೆಯಿಂದ ಕೂಡಿತ್ತು. ಈ ಕೆಲಸಗಳ ನಡುವೆ ಸಹ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವನ ಸಾಧನೆಗಳು ಮೆಚ್ಚುವಂತಿವೆ. ಆ ಕಾಲದಲ್ಲಿ ನಾಡಿನಲ್ಲಿ ಎಲ್ಲೆಲ್ಲೂ ಆರಾಜಕತೆಯಿತ್ತು. ಪ್ರತಿಯೊಬ್ಬ ರಾಜನೂ ತನ್ನ ಸ್ಥಾನವನ್ನು ಹೇಗಾದರೂ ಮಾಡಿ ಭದ್ರಪಡಿಸಿಕೊಳ್ಳುವುದರಲ್ಲಿ ನಿರತನಾಗಿದ್ದ. ಸಾಹಿತ್ಯ, ಸಂಸ್ಕೃತಿ, ಶಿಲ್ಕ, ಲಲಿತಕಲೆಗಳು ಇವುಗಳ ಕಡೆ ಗಮನ ಕೊಟ್ಟವರು ಬಹಳ ಕಡಿಮೆ. ಆದರೆ ಜಯಸಿಂಹ ಈ ಕ್ಷೇತ್ರಗಳಲ್ಲಿ ಆಸಕ್ತಿ ವಹಿಸಿದುದೆ ಅಲ್ಲದೆ ವಿಜ್ಞಾನ ಕ್ಷೇತ್ರದಲ್ಲೂ ಪ್ರಚಂಡವಾಗಿ ಕೆಲಸ ಆಡಳಿತಗಾರರಿಗಿಂತ ಬೇರೆಯದೆ ಆದ ಮಟ್ಟಕ್ಕೆ ಏರಿಸುತ್ತವೆ.

ಜಯಸಿಂಹನ ರಾಜಧಾನಿ ಜಯಪುರವು ವಿದ್ಯಾರ್ಜನೆಯ ಪ್ರಮುಖ ಕೇಂದ್ರವಾಗಿತ್ತು. ನಾಡಿನ ನಾನಾ ಕಡೆಯಿಂದ ಬೇರೆ ವಿಷಯಗಳಲ್ಲಿ ನುರಿತ ವಿದ್ವಾಂಸರು ಅಲ್ಲಿಗೆ ಬಂದು ನೆಲೆಸಿದ್ದರು.

ಅವನು ರಾಜ್ಯವಾಳುವುದರ ಜೊತೆಗೆ ಶಾಂತಿ ಸ್ಥಾಪನೆ ಮಾಡಿ ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಂಡ. ಜ್ಞಾನವಿಜ್ಞಾನ ಸಂಸ್ಕೃತಿಗಳತ್ತ ಆಸಕ್ತಿ ಬೆಳೆಸಿದ.

ಖಗೋಳ ವಿಜ್ಞಾನ ಪರಿಣತ

ಸವಾಯಿ ಜಯಸಿಂಹನಿಗೆ ಅನೇಕ ವಿದ್ಯೆಗಳಲ್ಲಿ ಆಸಕ್ತಿಯಿತ್ತು. ಮಧ್ಯಯುಗದ ಭಾರತೀಯ ವಿಜ್ಞಾನ ಸಾರ್ವಭೌಮನೆಂದು ಅವನು ಹೆಸರುವಾಸಿಯಾಗಿದ್ದಾನೆ. ಖಗೋಳ ವಿಜ್ಞಾನವೆಂದರೆ ಅವನಿಗೆ ಅಚ್ಚುಮೆಚ್ಚಿನದಾಗಿತ್ತು. ಗ್ರಹನಕ್ಷತ್ರಗಳನ್ನು ನೋಡುವುದು, ಅವುಗಳ ಚಲನೆಯನ್ನು ಲೆಕ್ಕ ಹಾಕುವುದು ಅಂದರೆ ಅವನಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಅವುಗಳ ವೀಕ್ಷಣೆಗಾಗಿ ಯಂತ್ರೋಪಕರಣಗಳನ್ನು ತಾನೇ ತಯಾರಿಸುತ್ತಿದ್ದ. ಅವನಿಗೆ ವೇದವನ್ನು ಕಲಿಸಿಕೊಟ್ಟಿದ್ದ ಗುರು ಜಗನ್ನಾಥನೇ ಗ್ರಹನಕ್ಷತ್ರಗಳ ಬಗ್ಗೆ ಅವನಲ್ಲಿ ಆಸಕ್ತಿ ಕೆರಳಿಸಿದ್ದ. ಪ್ರಸಿದ್ಧ ವಿಜ್ಞಾನಿಯಾಗಿದ್ದ ಟಾಲೆಮಿ ಮತ್ತು ಯೂಕ್ಲಿಡ್ ಅವರ ಗ್ರಂಥಗಳ ಆಧಾರದ ಮೇಲೆ ಜಗನ್ನಾಥ ಸಂಸ್ಕೃತದಲ್ಲಿಯೂ ಅದೇ ರೀತಿಯ ಗ್ರಂಥಗಳನ್ನು ರಚಿಸಿದ್ದ.

 

ಪೇಶ್ವೆ ಬಾಜೀರಾಯನನ್ನು ಮರ್ಯಾದೆಯಿಂದ ಎದುರುಗೊಂಡ

ಖಗೋಳವಿಜ್ಞಾನ ಕ್ಷೇತ್ರದಲ್ಲಿ ಜಯಸಿಂಹ ನಡೆಸಿದ ಕೆಲಸಕಾರ್ಯಗಳು ತುಂಬಾ ಗಮನಾರ್ಹ. ಗಣಿತಶಾಸ್ತ್ರ ಮತ್ತು ಜ್ಯೋತಿಷ್ಯ ಸಿದ್ಧಾಂತಗಳೆಂದರೆ ಅವನಿಗೆ ಬಹಳ ಅಚ್ಚುಮೆಚ್ಚ. ಈ ವಿಷಯಗಳಿಗೆ ಸಂಬಂಧಪಟ್ಟಂತೆ ಅವನು ಅನೇಕ ಲೆಕ್ಕಾಚಾರಗಳನ್ನು ಮಾಡಿದ. ನಕ್ಷತ್ರ ಪಂಚಾಗಗಳಲ್ಲಿ ನಿಗದಿಪಡಿಸಿರುವ ಅಂಕಿ-ಅಂಶಗಳಿಗೂ ಅವುಗಳ ನಿಜವಾದ ಅಂಕಿ-ಅಂಶಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಅವನು ಕಂಡುಹಿಡಿದ.

ಪ್ರಾರಂಭದಲ್ಲಿ ಜಯಸಿಂಹನ ಬಳಿ ಹಿತ್ತಾಳೆ ಯಂತ್ರೋಪಕರಣಗಳಿದ್ದವು. ಅವುಗಳನ್ನು ಬಳಸಿ ಪಡೆದ ಅಂಕಿ-ಅಂಶಗಳು ಸರಿಯಾಗಿರುವುದಿಲ್ಲ ಎಂದು ಅವನ ಗಮನಕ್ಕೆ ಬಂತು. ಅವುಗಳ ಅಕ್ಷಯಗಳು ಸ್ಥಿರವಾಗಿರುವುದಿಲ್ಲ ಹಾಗೂ ಘರ್ಷಣೆಯಿಂದ ಅವುಗಳ ಸ್ಥಾನ ಬದಲಾಯಿಸಬಹುದು ಎಂದು ಅವನು ಈ ಕೊರತೆಯನ್ನು ನಿವಾರಿಸಲು ದೆಹಲಿಯಲ್ಲಿ ದೊಡ್ಡ ದೊಡ್ಡ ಕಲ್ಲಿನ ಖಗೋಳಯಂತ್ರಗಳನ್ನು ನಿರ್ಮಿಸಿದ. ಅವುಗಳಿಗೆ ಜಯಪ್ರಕಾಶ, ರಾಮಯಂತ್ರ, ಸಾಮ್ರಾಟಯಂತ್ರ ಎಂದು ಹೆಸರಿಟ್ಟ. ಅಲ್ಲದೆ ಈ ಯಂತ್ರೋಪಕರಣಗಳಿಂದ ಪಡೆದ ಅಂಕಿ-ಅಂಶಗಳು ಸರಿಯಾಗಿರುತ್ತವೆಯೊ ಇಲ್ಲವೊ ಎಂಬುದನ್ನು ಪರೀಕ್ಷಿಸಲು ಸವಾಯಿ ಜಯಪುರ, ಮಥುರಾ, ಕಾಶಿ ಮತ್ತು ಉಜ್ಜಯಿನಿಯಲ್ಲಿ ವೀಕ್ಷಣಾಲಯಗಳನ್ನು ಕಟ್ಟಿಸಿದ. ದೆಯಲಿಯ ವೀಕ್ಷಣಾಲಯ ಜಂತರ್‌ಮಂತರ್‌ ಎಂಬ ಹೆಸರಿನಿಂದ ಇಂದಿಗೂ ತುಂಬಾ ಪ್ರಸಿದ್ಧವಾಗಿದೆ. ದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿ ಕರ್ನಾಟ್‌ ಸರ್ಕಸ್ಸಿಗೆ ಇದು ದಕ್ಷಿಣದಲ್ಲಿದೆ. ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿದ್ದ ಎಲ್ಲ ವಿದ್ವಾಂಸರೂ ಯಾವುದೇ ಸಮಯದಲ್ಲಿ ಹೋಗಿ ಈ ಯಂತ್ರಗಳನ್ನು ಬಳಸಿ ಗ್ರಹಕ್ಷೇತ್ರಗಳ ಚಲನೆಯನ್ನು ಕುರಿತು ಅಧ್ಯಯನ ಮಾಡಬಹುದಿತ್ತು.

ಇತರ ದೇಶಗಳ ವಿದ್ವಾಂಸರು

ಜಯಸಿಂಹನ ಜೊತೆಯಲ್ಲಿ ಅನೇಕ ಮಂದಿ ಹಿಂದೂ, ಮುಸಲ್ಮಾನ ಮತ್ತು ಐರೋಪ್ಯ ವಿದ್ವಾಂಸರು ಕೆಲಸ ಮಾಡುತ್ತಿದ್ದರು. ಜನಸಾಮಾನ್ಯರ ಅನುಕೂಲಕ್ಕಾಗಿ ಶುದ್ಧಗ್ರಹ ಗಣಿತಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳು ಅಗತ್ಯವೆಂದು ಅವನು ಭಾವಿಸಿದ. ಇದಕ್ಕಾಗಿ ತನ್ನ ಎಲ್ಲ ವೀಕ್ಷಣಾಲಯಗಳಲ್ಲೂ ಏಳು ವರ್ಷಗಳ ಕಾಲ ಸತತವಾಗಿ ಕೆಲಸ ಮಾಡಿದ. ನಕ್ಷತ್ರಗಳ ಸ್ಥಿತಿಗತಿಗಳು ಹಾಗೂ ಗ್ರಹಗಳು ಹುಟ್ಟುವ ಅಸ್ತವಾಗುವ ಕಾಲಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ಕಲೆಹಾಕಿದ. ಕೋಷ್ಟಕಗಳನ್ನು ತಯಾರಿಸಿದ.

ಖಗೋಳ ವಿಜ್ಞಾನದಲ್ಲಿ ಆ ವೇಳೆಗೆ ಪೋರ್ಚುಗಲ್ ತುಂಬಾ ಪ್ರಗತಿ ಸಾಧಿಸಿತ್ತು. ಜಯಸಿಂಹನಿಗೆ ಇದು ಗೊತ್ತಾದಾಗ, ೧೭೨೬ ರಲ್ಲಿ ಅವನು ತನ್ನ ದಿವಾನನಾಗಿದ್ದ ರಾಜಾ ಅಯಾಮಲ್ ಎಂಬಾತನ ಜೊತೆಯಲ್ಲಿ ಪೋರ್ಚುಗಲ್ಲಿನ ಸಾಮ್ರಾಟನಿಗೆ ಅನೇಕ ಉಡುಗೊರೆಗಳನ್ನು ಕಳುಹಿಸಿದ. ಹಾಗೆಯೇ ಯೂರೋಪಿನಿಂದ ಖಗೋಳ ವಿದ್ವಾಂಸರನ್ನು ಕಳಿಸಿಕೊಡಬೇಕೆಂದು ಗೋವಾದಲ್ಲಿದ್ದ ಪೋರ್ಚುಗಲ್ ಗವರ್ನರನ್ನು ಕೋರಿದ. ಇದರ ಫಲವಾಗಿ ಮ್ಯಾನ್ಯುಯಲ್ ಫಿಗೊಯಿರಿಡೊ ಎಂಬ ಪಾದ್ರಿ ಗೋವಾದಿಂದ ಜಯಸಿಂಹನ ಬಳಿಗೆ ಬಂದ.

ಯೂರೋಪಿನಲ್ಲಿ ಖಗೋಳ ವಿಜ್ಞಾನದ ಮುನ್ನಡೆ ಹೇಗಿದೆಯೆಂದು ತಿಳಿದುಬರಲು ಜಯಸಿಂಹ ಮ್ಯಾನ್ಯುಯಲ್ ಫಿಗೊಯಿರಿಡೊನನ್ನು ಕಳಿಸಿಕೊಟ್ಟ. ಮತ್ತೊಂದು ಬಾರಿ ಅವನನ್ನು ಯೂರೋಪಿಗೆ ಕಳುಹಿಸಿ ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ತರಿಸಿಕೊಂಡ. ಆಂಡ್ರೆ ಸ್ಟ್ರೋಬೆಲ್ ಎಂಬ ಖಗೋಳ ವಿದ್ವಾಂಸನನ್ನು ಕರೆಸಿ ತನ್ನಲ್ಲೆ ಇರಿಸಿಕೊಂಡಿದ್ದ. ದೇಶ ವಿದೇಶಗಳಿಂದ ಖಗೋಳ ವಿದ್ವಾಂಸನನ್ನು ಆಹ್ವಾನಿಸಿ ಜಯಪುರದಲ್ಲಿ ವಿಚಾರಗೋಷ್ಠಿಗಳನ್ನು ನಡೆಸುತ್ತಿದ್ದ.

ಐರೋಪ್ಯರ ಲೆಕ್ಕಾಚಾರಗಳಲ್ಲೂ ಅನೇಕ ಹೆಚ್ಚು ಕಡಿಮೆಗಳಿರುವುದು ಅವನ ಗಮನಕ್ಕೆ ಬಂತು. ಆದ್ದರಿಂದ ತಾನೇ ತಯಾರಿಸಿದ ಯಂತ್ರಗಳಿಂದ ಕೋಷ್ಟಕಗಳನ್ನು ತಯಾರಿಸಿದ. ಅವನು ರಚಿಸಿದ ಲೋಹಯಂತ್ರಗಳನ್ನು ನಾವು ಇಂದಿಗೂ ಜಯಪುರದ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.

ವಿದ್ವತ್ತಿಗೆ ಪ್ರೋತ್ಸಾಹ

ಜಯಸಿಂಹ ತಾನು ಹಿರಿಯ ವಿಜ್ಞಾನಿ ಮತ್ತು ವಿದ್ವಾಂಸ ಮಾತ್ರ ಆಗಿರಲಿಲ್ಲ. ಉಳಿದವರಿಗೂ ತುಂಬಾ ಪ್ರೋತ್ಸಾಹ ಕೊಡುತ್ತಿದ್ದ. ಅವನ ಬಳಿ ಕೆಲಸ ಮಾಡುತ್ತಿದ್ದ ಗುಜರಾತಿನ ಕೇವಲರಾಮನು ಖಗೋಳ ವಿಜ್ಞಾನದ ಮೇಲೆ ಎಂಟು ಗ್ರಂಥಗಳನ್ನು ರಚಿಸಿದ. ಪ್ರತಿಭೆ ಇದ್ದವಿರಗೆಲ್ಲ ಜಯಸಿಂಹನ ಉತ್ತೇಜನ ದೊರೆಯುತ್ತಿತ್ತು. ಅವನ ದೃಷ್ಟಿಕೋನ ವಿಶಾಲವಾಗಿತ್ತು. ತನ್ನ ಅಧ್ಯಯನವನ್ನು ಭಾರತೀಯ ಖಗೋಳವಿಜ್ಞಾನಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಮಧ್ಯ ಏಷ್ಯ ಮತ್ತು ಯೂರೋಪುಗಳಲ್ಲಿ ಬಳೆಯಲ್ಲಿದ್ದ ಗ್ರಂಥಗಳನ್ನು ಯಂತ್ರೋಪಕರಣಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದ. ಅನೇಕ ಪಾಶ್ಚಾತ್ಯ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದುದೆ ಅಲ್ಲದೆ ಜಯಸಿಂಹ ಯಂತ್ರ ರಾಜ ಮತ್ತು ಯಂತ್ರ ರಾಜ ರಚನಾ ಪ್ರಕಾರ ಎಂಬುದಾಗಿ ಖಗೋಳ ವಿಜ್ಞಾನದಲ್ಲಿ ಬಳಸುವ ಯಂತ್ರಗಳ ಮೇಲೆ ಎರಡು ಗ್ರಂಥಗಳನ್ನು ರಚಿಸಿದ್ದಾನೆ. ಕಳೆದ ಅನೇಕ ಶತಮಾನಗಳಲ್ಲಿ ಭಾರತದ ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನೇನೂ ಸಾಧಿಸಿರಲಿಲ್ಲ. ಜಯಸಿಂಹ ಈ ಕೊರತೆಯನ್ನು ತುಂಬಿ ಈ ಅಧ್ಯಯನವನ್ನು ಸಮಕಾಲೀನ ಅಂತರರಾಷ್ಟ್ರೀಯ ಮಟ್ಟಕ್ಕೆ ತಂದ.

ಖಗೋಳ ವೀಕ್ಷಣಾಲಯಗಳು

ಜಯಸಿಂಹ ಕಟ್ಟಿಸಿದ ಖಗೋಳ ವಿಕ್ಷಣಾಲಯಗಳ ಬಗ್ಗೆ ಸ್ವಲ್ಪ ಪರಿಚಯ ಮಾಡಿಕೊಳ್ಳೋಣ. ದೆಹಲಿಯಲ್ಲಿ ಅವನು ಕಟ್ಟಿಸಿದ ವೀಕ್ಷಣಾಲಯ ಜಂತರ್ ಮಂತರ್ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಸಮುದ್ರಮಟ್ಟದಿಂದ ಇದು ೨೧೨ ಮೀಟರು ಎತ್ತರಲ್ಲಿದೆ. ಚಂದ್ರ, ಸೂರ್ಯ, ನಕ್ಷತ್ರ, ಗ್ರಹಗಳ ಬಗ್ಗೆ ಜಯಸಿಂಹನಿಗೆ ಅಪಾರ ಜ್ಞಾನವಿತ್ತು. ಅವುಗಳ ಸ್ಥಿತಿಗತಿಗಳನ್ನು ಪರೀಕ್ಷಿಸಲು ಜಂತರ್ ಮಂತರಿನಲ್ಲಿ ಅವನು ಸಾಮ್ರಾಟಯಂತ್ರ, ಜಯಪ್ರಕಾಶ ಯಂತ್ರ, ರಾಮಯಂತ್ರ ಮತ್ತು ಮಿಶ್ರಯಂತ್ರಗಳನ್ನು ಸ್ಥಾಪಿಸಿದನು. ಇವೆಲ್ಲ ಭಾರಿಭಾರಿಯಾಗಿದ್ದು ನಾಲ್ಕು ಬೇರೆ ಬೇರೆ ಕಟ್ಟಡಗಳಲ್ಲಿವೆ. ವಿಶ್ರಯಂತ್ರಕ್ಕೆ ನೈಋತ್ಯ ದಿಕ್ಕಿನಲ್ಲಿ ಎರಡು ಕಂಬಗಳಿವೆ. ಅಲ್ಲದೆ ಅಳತೆಗಳನ್ನು ಮಾಡುವ ಉದ್ದೇಶದಿಂದ ಮಿಶ್ರಯಂತ್ರದ ದಕ್ಷಿಣಕ್ಕೆ ಒಂದು ದೊಡ್ಡ ಜಗಲಿಯನ್ನು ಕಟ್ಟಲಾಗಿದೆ. ಈಗ ಈ ಯಂತ್ರಗಳ ಬಹಳ ಭಾಗಗಳು ಶಿಥಿಲವಾಗಿಹೋಗಿವೆ.

ಸಾಮ್ರಾಟಯಂತ್ರವನ್ನು ಜಂತರ್ ಮಂತರ್‌ನ ಪ್ರಧಾನವಾದ ಮತ್ತು ದೊಡ್ಡ ಆಕಾರದ ಕಟ್ಟುಕಟ್ಟಡದಲ್ಲಿ ಅಳವಡಿಸಲಾಗಿದೆ. ಈ ಕಟ್ಟಡದ ಬಹುಭಾಗ ಭೂಮಿಯಿಂದ ಕೆಳಗಿದೆ. ಚತುರ್ಭುಜದ ಆಕೃತಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡ ಉತ್ತರ ದಕ್ಷಿಣವಾಗಿ ೧೨೦ ಅಡಿ ಮತ್ತು ಪೂರ್ವ ಪಶ್ಚಿಮವಾಗಿ ೭೨೫ ಅಡಿ ಇದ್ದು ೧೫ ಅಡಿ ಆಳವಾಗಿದೆ. ಎತ್ತರ ೬೮ ಅಡಿ. ಯಂತ್ರ ನೆಲಮಟ್ಟದಿಂದ ೬೦.೩ ಅಡಿ ಎತ್ತರದಲ್ಲಿದೆ. ಯಂತ್ರದ ಎರಡು ತುದಿಗಳಲ್ಲೂ ದೊಡ್ಡ ಆಕಾರದ ಬಾಗಿರುವ ಶಂಕುಗಳಿವೆ. ಅದರ ಎರಡು ಭುಜಗಳಿಗೂ ಸೇರಿಕೊಂಡಂತೆ ವೃತ್ತಪಾದದ ಆಕಾರದಲ್ಲಿರುವ ಕಟ್ಟಡವಿದೆ. ಶಂಕುವಿನ ತುದಿಗಳು ಭೂಮಿಯ ಅಕ್ಷರೇಖೆಗೆ ಸಮಾಂತರವಾಗಿವೆ. ಮತ್ತು ಅದರ ತುದಿಗಳು ಉತ್ತರ ಧ್ರುವಕ್ಕೆ ಅಭಿಮುಖವಾಗಿವೆ. ಗಂಟೆ, ಡಿಗ್ರಿ ಮತ್ತು ಮಿನಿಟುಗಳನ್ನು ವೃತ್ತದ ಅಂಚುಗಳಲ್ಲಿ ಗುರುತು ಮಾಡಿದೆ. ಉತ್ತರದ ಅಂಚುಗಳಲ್ಲಿ ಇಂಗ್ಲಿಷ್ ಚಿಹ್ನೆಗಳೂ ದಕ್ಷಿಣದ ಅಂಚುಗಳಲ್ಲಿ ಹಿಂದೂ ಚಿಹ್ನೆಗಳೂ ಕಂಡುಬರುತ್ತವೆ. ಶಂಕುವಿನ ತುದಿಯ ನೆರಳು ವೃತ್ತಪಾದಾಕಾರದ ಮೇಲೆ ಬಿದ್ದಾಗ ಅದರಿಂದ ಸ್ಥಳೀಯ ಕಾಲ ಎಷ್ಟೆಂದು ಗೊತ್ತಾಗುತ್ತದೆ. ಈ ಕಟ್ಟಡದ ಪೂರ್ವಭಾಗದಲ್ಲಿರುವ ವೃತ್ತ ಪಾದಾಕಾರದ ಕೆಳಗಡೆಯ ಕೋಣೆಯಲ್ಲಿ ಷಷ್ಠಾಂಶ ಎಂಬ ಯಂತ್ರವೊಂದುಂಟು. ಸೂರ್ಯ ನೆತ್ತಿಯ ಮೇಲೆ ಹಾದು ಹೋಗುವಾಗ ಬೆಳಕು ಒಂದು ಕಿಂಡಿಯ ಮೂಲಕ ಇದರ ಮೇಲೆ ಬಿದ್ದು ಮಧ್ಯಾಹ್ನ ರೇಖೆಯ ಎತ್ತರ ಎಷ್ಟೆಂದು ತಿಳಿದುಬರುತ್ತದೆ. ಸ್ಥಳೀಯ ಕಾಲ, ಮಧ್ಯಾಹ್ನ ರೇಖೆ, ದಿಗಂಶ, ರಾಶಿಚಕ್ರ, ಔನ್ನತ್ಯ, ಕ್ಷಿತಿಜಾಂಶ ಇವೆಲ್ಲ ಖಗೋಳವಿಜ್ಞಾನದಲ್ಲಿ ಆಗಾಗ್ಗೆ ಬಳಸುವ ಪ್ರಮುಖವಾದ ಭಾವನೆಗಳ ಪೈಕಿ ಕೆಲವು. ೧೯೧೦ ರಲ್ಲಿ ಕಟ್ಟಡದ ಜೀರ್ಣೋದ್ಧಾರ ಮಾಡಿದಾಗ ಷಷ್ಠಾಂಶವಿರುವ ಈ ಕೋಣೆ ಮುಚ್ಚಿಹೋಯಿತು. ಸಾಮ್ರಾಟಯಂತ್ರದ ಶಂಕುವಿನ ತುದಿಯಲ್ಲಿರುವ ದುಂಡನೆಯ ಕಂಬವನ್ನು ದಿಗಂಶ ಎಷ್ಟೆಂದು ತಿಳಿಯಲು ಬಳಸುತ್ತಿದ್ದರು. ಈಗ ಈ ಕಂಬದ ಮೇಲೆ ವಿದೇಶಿ ಮಾದರಿಯ ಒಂದು ಛಾಯಾಯಂತ್ರವಿದೆ. ಇದರಲ್ಲಿರುವ ಫಲಕರ ಮೇಲೆ ಬೀಳುವ ನೆರಳಿನ ಸ್ಥಾನದಿಂದ ಕಾಲ ಎಷ್ಟೆಂದು ನಿರ್ಣಯ ಮಾಡಬಹುದು. ಈಗ ಅನೇಕ ವೇಳೆ ಈ ಕಟ್ಟಡದ ಕೆಲವು ಭಾಗಗಳು ನೀರಿನಿಂದ ತುಂಬಿರುತ್ತವೆ.

ಜಯಪ್ರಕಾಶ್‌ ಯಂತ್ರದಿಂದ ಸ್ಥಳೀಯ ಕಾಲ ತಿಳಿದು ಬರುವುದಲ್ಲದೆ ಸಂಕ್ರಾಂತಿ ವೃತ್ತ ಮತ್ತು ಮಧ್ಯಾಹ್ನ ರೇಖೆಯ ಮೇಲೆ ಯಾವ ರಾಶಿ ಇದೆ ಎಂದು ಗೊತ್ತಾಗುತ್ತದೆ. ಈ ಯಂತ್ರದಲ್ಲಿ ಒಂದಕ್ಕೊಂದು ಪೂರಕವಾಗಿರುವಂತೆ ಒಳಬಾಗಿರುವ ಎರಡು ಅರ್ಧಗೋಳಗಳಿವೆ. ಇದರಿಂದ ಸೂರ್ಯನ ಸ್ಥಾನವನ್ನು ಕಂಡುಹಿಡಿಯಬಹುದಲ್ಲದೆ, ಸೂರ್ಯನ ಬೆಳಕಿನ ಸಹಾಯದಿಂದ ಮಧ್ನಾಹ್ನರೇಖೆಯ ಮೇಲೆ ಯಾವ ರಾಶಿ ಇದೆಯೆಂದು ಗೊತ್ತಾಗುತ್ತದೆ. ಮೇಷ, ವೃಷಭ ಮೊದಲಾದ ರಾಶಿಗಳಿಂದ ಕೂಡಿದ ರಾಶಿಚಕ್ರವನ್ನು ಇದರ ಮೇಲೆಯೇ ಗುರುತುಮಾಡಿದೆ. ಈ ಯಂತ್ರಕ್ಕೆ ಹಿಂದೆ ಕಟ್ಟಿದ್ದ ತಂತಿಗಳು ಇಂದು ಕಂಡುಬರುವುದಿಲ್ಲ.

ಜಯಪ್ರಕಾಶ್ ಯಂತ್ರಕ್ಕೆ ದಕ್ಷಿಣದಲ್ಲಿರುವುದೆ ರಾಮಯಂತ್ರ. ಇದು ದೊಡ್ಡ ವೃತ್ತಾಕಾರದ ಒಂದಕ್ಕೊಂಡು ಪೂರಕವಾದ ಎರಡು ಕಟ್ಟಡಗಳಿಂದ ಕೂಡಿದೆ. ಇವುಗಳ ನಡುವೆ ಒಂದು ಕಂಬವಿದೆ. ಔನ್ನತ್ಯ ಮತ್ತು ಕ್ಷಿತಿಜಾಂಶಗಳನ್ನು ಕಂಡುಹಿಡಿಯಲು ಗೋಡೆ ಮತ್ತು ನೆಲದ ಮೇಲೆ ಅಳತೆಗೆರೆಗಳನ್ನು ಹಾಕಿದೆ. ಕಟ್ಟಡದ ನೆಲವನ್ನು ಮೂವತ್ತು ಸಮಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ಭಾಗದ ನಡುವೆ ಇರುವ ಕೋನ ೬ ಡಿಗ್ರಿ ಇರುವಂತೆ ಮಾಡಲಾಗಿದೆ. ಅಳತೆಗೆರೆಗಳಿರುವ ಗೋಡೆಯಲ್ಲಿ ಸಹ ನೆಲದಲ್ಲಿರುವಂತೆಯೆ ಕಿಂಡಿಗಳಿವೆ. ಖಗೋಳ ದೃಶ್ಯಗಳನ್ನು ವೀಕ್ಷಿಸಲು ಪ್ರತಿಯೊಂದು ಕಿಂಡಿಯ ಪಕ್ಕದಲ್ಲೂ ವಿಶೇಷ ಸಲಾಕೆಗಳನ್ನು ಅಳವಡಿಸಲಾಗಿತ್ತು. ಆದರೆ ಅವು ಇಂದು ಕಂಡುಬರುವುದಿಲ್ಲ.

ಸಾಮ್ರಾಟ ಯಂತ್ರಕ್ಕೆ ವಾಯುವ್ಯದಲ್ಲಿ ಸುಮಾರು ೪೫ ಮೀಟರು ದೂರದಲ್ಲಿ ಇರುವುದೇ ಮಿಶ್ರಯಂತ್ರ. ಇದರಲ್ಲಿ ನಿಯತ ಚಕ್ರ, ಚಿಕ್ಕ ಸಾಮ್ರಾಟಯಂತ್ರ, ದಕ್ಷಿಣ ವೃತ್ತ ಯಂತ್ರ ಹಾಗೂ ಕರ್ಕಾಟಕ ರಾಶಿವಲಯವೆಂಬ ನಾಲ್ಕು ಬೇರೆ ಬೇರೆ ಯಂತ್ರಗಳಿರುವುದರಿಂದ ಇದಕ್ಕೆ ಈ ಹೆಸರು. ಮಿಶ್ರಯಂತ್ರದ ಮುಂದಿರುವ ದೊಡ್ಡ ಜಗಲಿಯ ಉದ್ದ ಸುಮಾರು ೧೪.೫ ಮೀಟರು ಮತ್ತು ಅಗಲ ಸುಮಾರು ೫ ಮೀಟರು ಅಂತರವಿರುವ ಎರಡು ಕಂಬಗಳಿವೆ.

ಜಯಪುರದ ವೀಕ್ಷಣಾಲಯದಲ್ಲಿ ಸಾಮ್ರಾಟಯಂತ್ರ, ಜಯಪ್ರಕಾಶಯಂತ್ರ, ರಾಮಯಂತ್ರ, ದಿಗಂಶಯಂತ್ರ, ನಾರೀವಲಯಯಂತ್ರ ಮತ್ತು ದಕ್ಷಿಣಾವೃತ್ತಿ ಯಂತ್ರಗಳಿವೆ. ಇವುಗಳಿಂದ ಅನೇಕ ಖಗೋಳೀಯ ಅಂಶಗಳನ್ನು ಲೆಕ್ಕಾಚಾರ ಹಾಕಬಹುದು. ಉಜ್ಜಯಿನಿ ಮೊದಲಿನಿಂದಲೂ ಹೆಸರುವಾಸಿಯಾದ ಖಗೋಳಶಾಸ್ತ್ರ ಕೇಂದ್ರವಾಗಿತ್ತು. ಅಲ್ಲಿದ್ದ ವೀಕ್ಷಣಾಲಯ ಈಗ ಬಹಳ ಶಿಥಿಲವಾಗಿ ಹೋಗಿದೆ. ಅಲ್ಲಿಯೂ ಸಾಮ್ರಾಟಯಂತ್ರ, ನಾರೀವಲಯಯಂತ್ರ, ದಿಗಂಶಯಂತ್ರ ಮತ್ತು ದಕ್ಷಿಣಾವೃತ್ತಿಯಂತ್ರಗಳಿವೆ. ಕಾಶಿಯಲ್ಲಿ ರಾಜಾ ಮಾನಸಿಂಗ್ ನಿರ್ಮಿಸಿದ್ದ ಮಾನಮಂದಿರದ ಮಹಡಿಯ ಮೇಲೆ ಜಯಸಿಂಹ ವೀಕ್ಷಣಾಲಯವನ್ನು ನಿರ್ಮಿಸಿದ. ಅಲ್ಲಿಯೂ ಸಾಮ್ರಾಟಯಂತ್ರ, ನಾರೀವಲಯಯಂತ್ರ, ಚಕ್ರಯಂತ್ರ ಮತ್ತು ದಿಗಂಶಯಂತ್ರಗಳಿವೆ. ಮಥುರೆಯ ಕೋಟೆಯ ಮೇಲೆ ಅವನು ಕಟ್ಟಿಸಿದ್ದ ವೀಕ್ಷಣಾಲಯ ಸಂಪೂರ್ಣವಾಗಿ ನಾಶವಾಗಿರುವುದರಿಂದ ಅಲ್ಲಿ ಯಾವ ಯಾವ ಯಂತ್ರಳಿದ್ದವೋ ಪತ್ತೆಯಾಗಿಲ್ಲ.

ವಸ್ತು ಸಂಗ್ರಹಾಲಯದಲ್ಲಿ ಇಂದು ಕಂಡುಬರುವ ಜಯಸಿಂಹ ನಿರ್ಮಿಸಿದ ಅನೇಕ ಖಗೋಳಯಂತ್ರಗಳ ಬಗ್ಗೆ ದೇಶ ವಿದೇಶಗಳ ತಜ್ಞರು ಮೆಚ್ಚುಗೆ ಸೂಚಿಸಿದ್ದಾರೆ.

ಕಡೆಯ ದಿನಗಳು

ತನ್ನ ಬದುಕಿನಲ್ಲಿ ಏನೇನನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಜಯಸಿಂಹ ಹೊಂದಿದ್ದನೋ ಅವನ್ನೆಲ್ಲ ಈಡೇರಿಸಿಕೊಂಡ. ವಿಶಾಲವಾದ ರಾಜಧಾನಿಯನ್ನು ಕಟ್ಟಿಸಿದ್ದೇ ಅಲ್ಲದೆ, ಅನೇಕ ದೇವಾಲಯಗಳನ್ನೂ, ಧರ್ಮಛತ್ರಗಳನ್ನೂ, ವೀಕ್ಷಣಾಲಯಗಳನ್ನೂ ಕಟ್ಟಿಸಿ ಜಯಪುರವನ್ನು ಜನಪ್ರಿಯಾವ ದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಮಾಡಿದ.

ಅನಾರೋಗ್ಯ ಹೆಚ್ಚುತ್ತಿದ್ದಂತೆ ಜಯಸಿಂಹ ಸ್ವಲ್ಪ ಸ್ವಲ್ಪವಾಗಿ ಆಡಳಿತ ಹೊಣೆಯನ್ನು ತನ್ನ ಮಗ ಈಶ್ವರೀಸಿಂಹನಿಗೆ ಒಪ್ಪಿಸುತ್ತಾ ಬಂದ. ಜಯಸಿಂಹ ೧೭೪೩ ರಲ್ಲಿ ಸ್ವರ್ಗಸ್ಥನಾದ. ಆಗ ಅವನಿಗೆ ಇನ್ನೂ ಐವತ್ತೈದು ವರ್ಷಗಳೂ ತುಂಬಿರಲಿಲ್ಲ. ಇಷ್ಟರಲ್ಲೇ ಅವನು ಐದು ಮಂದಿ ಬಾದಶಹರ, ಮೂರು ಮಂದಿ ಮಹಾರಾಜರ ಮತ್ತು ಮೂರು ಮಂದಿ ಪೇಶ್ವೆಗಳ ಸಂಪರ್ಕ ಪಡೆದು ವ್ಯವಹರಿಸಿದ್ದ. ತನ್ನ ಕಾಲದ ಅತ್ಯಂತ ಪ್ರತಿಭಾಶಾಲಿಗಳಾದ ರಾಜಕಾರಣಿಗಳಲ್ಲಿ ಒಬ್ಬನೆನಿಸಿದ್ದ. ಅವನ ಮಟ್ಟಕ್ಕೆ ನಿಲ್ಲಬಲ್ಲಂಥ ಖಗೋಳ ವಿಜ್ಞಾನಿಗಳು, ಗಣಿತ ಶಾಸ್ತ್ರಜ್ಞರು, ಧರ್ಮಶಾಸ್ತ್ರ ಪರಿಣತರು, ನೀತಿಜ್ಞರು ಅಪರೂಪವಾಗಿದ್ದರು. ಅವನು ಉನ್ನತ ಮಟ್ಟದ ವಿದ್ವಾಂಸ ಆಡಳಿತಗಾರ, ಸಮಾಜ ಸುಧಾರಕ, ವಿಚಾರಮತಿ ಮತ್ತು ಯೋಧನೆನಿಸಿದ್ದ.

ಜಯಸಿಂಹ ತನ್ನ ಕಾಲದ ಚಾಣಕ್ಯನೆಂದೆನಿಸಿಕೊಂಡಿದ್ದ. ಉತ್ತಮ ಸಮಾಜಸುಧಾರಕನೂ ಆಗಿದ್ದ. ಬ್ರಾಹ್ಮಣ ಜಾತಿಯಲ್ಲಿದ್ದ ಅನೇಕ ಉಪಜಾತಿಗಳ ನಡುವೆ ಭೋಜನ ವ್ಯವಹಾರದಲ್ಲಿದ್ದ ವ್ಯತ್ಯಾಸಗಳನ್ನು ಕಡಿಮೆ ಮಾಡಲು ತುಂಬಾ ಪ್ರಯತ್ನಿಸಿದ. ಅಂದಿನ ಸಾಮಾಜಿಕ ಚೌಕಟ್ಟಿನಲ್ಲಿ ಇದು ಸುಲಭದ ಮಾತಾಗಿರಲಿಲ್ಲ. ರಜಪೂತರಲ್ಲಿ ಮದುವೆಗಳು ನಡೆಯಬೇಕಾದರೆ ತುಂಬಾ ಖರ್ಚುವೆಚ್ಚಗಳು ಆಗುತ್ತಿದ್ದುದರಿಂದ ಅನೇಕ ಕೆಟ್ಟ ಪದ್ಧತಿಗಳು ಜಾರಿಗೆ ಬಂದಿದ್ದವು. ಕನ್ಯಾ ಹತ್ಯೆ ಇದರಲ್ಲಿ ಒಂದು. ಜಯಸಿಂಹ ಇದನ್ನು ತೀವ್ರವಾಗಿ ವಿರೋಧಿಸಿದ. ಮಹಂತರು ಮತ್ತು ಸನ್ಯಾಸಿಗಳು ಆಯುಧಗಳನ್ನು ಮುಟ್ಟಬಾರದೆಂದು ಅವರಿಂದ ವಾಗ್ದಾನ ಪಡೆದ. ಐಶ್ವರ್ಯವನ್ನು ಕೂಡಿಹಾಕುವುದಿಲ್ಲ, ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ ಎಂದು ಅವರಿಂದ ವಚನ ಪಡೆದುಕೊಂಡ. ಬಾದಶಹನ ಮನವೊಲಿಸಿ ಮಹಂತರ, ಸನ್ಯಾಸಿಗಳ, ಫಕೀರರ ಸಾವಿನ ಅನಂತರ ಅವರ ಗಳಿಕೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಾರದೆಂದು ಆಜ್ಞೆ ಹೊರಡಿಸಿದ.

ಜಯಸಿಂಹ ತನ್ನ ಕಾಲದ ಪ್ರಮುಖ ಬುದ್ಧಿ ಜೀವಿಗಳಲ್ಲಿ ಒಬ್ಬನಾಗಿದ್ದ. ಅವನು ಇನ್ನೂ ಸ್ವಲ್ಪಕಾಲ ಬದುಕಿದ್ದರೆ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಕಥೆ ಬೇರೆಯಾಗಿರುತ್ತಿತ್ತೋ ಏನೋ. ಸುಮಾರು ಮೂವತ್ತು ವರ್ಷಗಳ ಕಾಲ ರಾಷ್ಟ್ರದಲ್ಲಿ ಅವನ ಪ್ರಭಾವಕ್ಕೆ ಒಳಗಾಗದ ಇಲ್ಲವೆ ಅವನ ದೃಷ್ಟಿಗೆ ಬೀಳದ ಯಾವುದೇ ಪ್ರಮುಖ ಘಟನೆ ನಡೆಯಲಿಲ್ಲ ಎನ್ನಬಹುದು. ಬಹುಶಃ ಆಡಳಿತದ ಹೊಣೆಗಾರಿಕೆ ಹೆಗಲಿನ ಮೇಲೆ ಇಲ್ಲದಿದ್ದಲ್ಲಿ ಅವನು ವಿಜ್ಞಾನ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬಹುದಿತ್ತು. ಒಟ್ಟಿನಲ್ಲಿ ಇಷ್ಟೆಲ್ಲ ರಾಜಕೀಯ ಒತ್ತಡಗಳ ನಡುವೆಯೂ ಅವನು ಈ ಕ್ಷೇತ್ರಗಳಲ್ಲಿ ಗಳಿಸಿದ ಹಿರಿಮೆ ಅಪೂರ್ವವಾದುದು ಮತ್ತು ವಿಶಿಷ್ಟವಾದುದು.