ಸವಾಯ್ ಗಂಧರ್ವಪ್ರಸಿದ್ಧ ಸಂಗೀತಗಾರರು. ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರು. ಸಂಗೀತಕ್ಕೆ ಮುಡಿಪಾದುದಲ್ಲದೆ, ಅನೇಕ ಮಂದಿ ಪ್ರತಿಭಾವಂತ ಸಂಗೀತಗಾರರಿಗೆ ಮಾರ್ಗ ದರ್ಶನ ಮಾಡಿದರು.

ಸವಾಯ್ ಗಂಧರ್ವ

ಹುಬ್ಬಳ್ಳಿಯ ದಕ್ಷಿಣಕ್ಕೆ ಹನ್ನೆರಡು ಮೈಲಿ ದೂರವಿರುವ ಊರು ಕುಂದಗೋಳ. ಇದು ತಾಲೂಕಿನ ಮುಖ್ಯಸ್ಥಳ. ವರ್ಷವಿಡಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಾರಾದರೂ ವಿಪುಲವಾಗಿ ಮೆಣಸಿನಕಾಯಿ ಬೆಳೆದು ಲಕ್ಷಗಟ್ಟಲೆ ಗಳಿಸುವ ಕೃಷಿಕರೂ ಇಲ್ಲಿ ಬೇಕಾದಷ್ಟು ಜನ ಇದ್ದಾರೆ. ಆದರೆ ಕುಂದಗೋಳಕ್ಕೆ ಭಾರತದ ನಕ್ಷೆಯಲ್ಲಿ ಒಂದು ಶಾಶ್ವತ ಹೆಸರು ದೊರೆತದ್ದು ಒಬ್ಬ ವ್ಯಕ್ತಿಯಿಂದ. ಆ ವ್ಯಕ್ತಿಯೇ ‘ಸವಾಯ್ ಗಂಧರ್ವ’ ಎಂಬ ಹೆಸರಿನಿಂದ ಹಿಂದುಸ್ತಾನಿ ಸಂಗೀತ ಪ್ರಪಂಚದಲ್ಲಿ ಪ್ರಸಿದ್ಧರಾದ ರಾಮಭಾವು ಕುಂದಗೋಳಕರ ಅವರು. ಕಳೆದ ಕಾಲು ಶತಮಾನದಿಂದಲೂ ಪ್ರತಿವಷ೪ ಇಲ್ಲಿ ನಡೆಯುವ ಅವರ ಪುಣ್ಯತಿಥಿಯ ಕಾಲಕ್ಕೆ ಕುಂದಗೋಳ ಗಂಧರ್ವಲೋಕವಾಗಿ ಪರಿಣಮಿಸುತ್ತದೆ. ದೇಶದ ನಾನಾ ಭಾಗಗಳಿಂದ ಹಿರಿಕಿರಿಯ ಸಂಗೀತಗಾರರು ಆಗ ಇಲ್ಲಿಗೆ ಬಂದು ಉಚಿತ ಸಂಗೀತ ಸೇವೆ ಸಲ್ಲಿಸುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಉತ್ತರ ಕರ್ನಾಟಕದ ಅನೇಕ ಭಾಗಗಳು ಮರಾಠಿ ಸಂಸ್ಥಾನಿಕರ ಒಡೆತನಕ್ಕೆ ಸೇರಿದ್ದುವು. ಆಗ ಕುಂದಗೋಳ ಕೂಡ ಜಮಖಂಡಿ ಸಂಸ್ಥಾನದಲ್ಲಿ ಒಂದು ತಾಲೂಕು. ಆಡಳಿತ ಭಾಷೆ ಮರಾಠಿಯಾಗಿದ್ದುದರಿಂದ ಸಮೀಪದ ಹುಬ್ಬಳ್ಳಿ, ಧಾರವಾಡಗಳ ಕನ್ನಡ ವಾತಾವರಣ ಇಲ್ಲಿರಲಿಲ್ಲ. ಎಲ್ಲವೂ ಮರಾಠಿಯಾಗಿದ್ದುದರಿಂದ ಸಮೀಪದ ಹುಬ್ಬಳ್ಳಿ, ಧಾರವಾಡಗಳ ಕನ್ನಡ ವಾತಾವರಮ ಇಲ್ಲಿರಲಿಲ್ಲ. ಎಲ್ಲವೂ ಮರಾಠಿಮಯ-ಆಡಳಿತದ ಭಾಷೆಯೂ ಮರಾಠಿ, ಶಿಕ್ಷಣದ ಭಾಷೆಯೂ ಮರಾಠಿ. ಇಂತಹ ವಾತಾವರಣದಲ್ಲಿ ಬೆಳೆದ ಕನ್ನಡದ ರಾಮಣ್ಣ, ಮರಾಠಿ ರಾಮಭಾವೂ ಆದರು (ಮರಾಠಿಯಲ್ಲಿ ಭಾವೂ ಎಂದರೆ ಅಣ್ಣ).

ಬಾಲ್ಯ

ಸವಾಯ್ ಗಂಧರ್ವರ ಪೂರ್ಣ ಹೆಸರು ರಾಮಚಂದ್ರ ಗಣೇಶ ಕುಂದಗೋಳಕರ ಎಂದು. ಕುಂದಗೋಳದ ಸಮೀಪವೇ ಇರುವ ಸಂಶಿ ಎಂಬ ಹಳ್ಳಿ ಇವರ ತಂದೆ ಗಣೇಶರಾಯರ ಊರು. ತಾಯಿ ಧಾರವಾಡದ ಹತ್ತಿರವಿರುವ ಅಮ್ಮಿನಭಾವಿಯವರು. ರಾಮಚಂದ್ರರು ಹುಟ್ಟಿದ್ದು ೧೮೮೬ರ ಜನವರಿ ೧೯ರಂದು ಅಮ್ಮಿನಭಾವಿಯಲ್ಲಿ ತಂದೆಯವರು ಶ್ರೀಮಂತರೇನೂ ಅಲ್ಲ. ಗಣೇಶರಾಯರು ತಿಂಗಳಿಗೆ ನಾಲ್ಕು ರೂಪಾಯಿ ಸಂಬಳ ತರುವ ಗೌಡಕಿ ಮಾಡುತ್ತಿದ್ದರು. ಅದೂ ಬೆನಕನಹಳ್ಳಿ ಎಂಬ ತೀರ ಚಿಕ್ಕ ಹಳ್ಳಿಯಲ್ಲಿ. ಮುಂದೆ ಕುಂದಗೋಳದ ಪ್ರಸಿದ್ಧ ಶ್ರೀಮಂತರಾದ ನಾಡಗೇರ ರಂಗನಗೌಡರು ಗಣೇಶರಾಯರನ್ನು ತಮ್ಮ ಕಾರಕೂನನಾಗಿ ನೇಮಿಸಿಕೊಂಡನಂತರ ಮನೆತನದ ಸ್ಥಿತಿ ಸ್ವಲ್ಪ ಸುಧಾರಿಸಿತು. ಕುಂದಗೋಳದಲ್ಲಿಯೇ ನೆಲೆನಿಂತನಂತರ ಈ ಮನೆತನಕ್ಕೆ ‘ಕುಂದಗೋಳ್‌ಕರ್’ (ಕುಂದಗೋಳದವರು) ಎಂಬುದೇ ಅಡ್ಡಹೆಸರಾಯಿತು.

ಬಾಲಕ ರಾಮಚಂದ್ರನದು ಕಂಚಿನ ಕಂಠ. ಮೇಲಾಗಿ ಅವನ ತಂದೆಯವರಿಗೂ ಸಂಗೀತದಲ್ಲಿ ಆಸಕ್ತಿ. ಅವರು ನಿತ್ಯವೂ ತಾಳ ಹಾಕುತ್ತಲೋ, ತಬಲ ಬಾರಿಸುತ್ತಲೋ ದೇವರ ನಾಮಸ್ಮರಣೆ ಮಾಡುವ ರೂಢಿ ಇಟ್ಟುಕೊಂಡವರು. ದಿನವೂ ತಪ್ಪದೇ ಕಿವಿಗೆ ಬೀಳುತ್ತಿದ್ದ ಈ ಸಂಗೀತನಾದದಿಂದ ರಾಮಚಂದ್ರ ಆಕರ್ಷಿತವಾಗಿ ತಾನೂ ಆಗೀಗ ಹಾಡುಗಳನ್ನು ತಂದೆಯಂತೆಯೇ ಹಾಡಿಕೊಳ್ಳಲು ಯತ್ನಿಸುತ್ತಿದ್ದ. ದೇವರ ಗುಡಿಗಳಲ್ಲಿ ಪಲ್ಲಕ್ಕಿ ಸೇವೆ ನಡೆದಾಗಲೆಲ್ಲ ಅಲ್ಲಿ ಹೋಗಿ ಭಜನೆ ಕೀರ್ತನೆಗಳನ್ನು ಕೇಳುತ್ತ ನಿಲ್ಲುತ್ತಿದ್ದ. ಶಾಲೆಯಲ್ಲಿ ಕವಿತೆಗಳನನು ಸುಶ್ರಾವ್ಯವಾಗಿ ಹಾಡುವುದರಲ್ಲಿ ಅವನು ಇನ್ನೆಲ್ಲರಿಗಿಂತಲೂ ಮುಂದು. ಶಾಲೆಯಲ್ಲಿ ಇರುವಷ್ಟು ದಿನವೂ ಅಲ್ಲಿಯ ಸಭೆ ಸಮಾರಂಭಗಳಲ್ಲಿ ಅವನೇ ಸ್ವಾಗತಗೀತೆ ಹಾಡುತ್ತಿದ್ದ.

ಹುಡುಗನ ಶಿಕ್ಷಣ-ತಂದೆಯ ಚಿಂತೆ

ಕುಂದಗೋಳದಲ್ಲಿ ಹೈಸ್ಕೂಲ್ ಇರದಿದ್ದ ಕಾಲವದು. ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ತನ್ನ ಒಬ್ಬಿಬ್ಬರು ಗೆಳೆಯರಂತೆ ತಾನೂ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲಿಗೆ ಹೋಗಿ ಕಲಿಯಬೇಕೆಂಬುದು ರಾಮಚಂದ್ರನ ಆಸೆ. ಅದಕ್ಕಾಗಿ ನಿತ್ಯ ರೈಲಿನಲ್ಲಿ ಓಡಾಡಬೇಕು. ಹೇಗೋ ತಂದೆಯನ್ನು ಒಪ್ಪಿಸಿ ರಾಮಚಂದ್ರನೂ ಪ್ರತಿದಿನವೂ ಹುಬ್ಬಳ್ಳಿಗೆ ಓಡಾಡತೊಡಗಿದ. ಆದರೆ ಹುಬ್ಬಳ್ಳಿಗೆ ನಿತ್ಯ ಹೋಗಿಬರುವುದು ಅವನಿಗೆ ಹೆಚ್ಚಿನ ವಿದ್ಯೆಯನ್ನೇನೂ ತಂದುಕೊಡಲಿಲ್ಲ. ಶಾಲಾಭ್ಯಾಸದಲ್ಲಿ ಪ್ರಗತಿ ಅಷ್ಟಕ್ಕಷ್ಟೇ. ಆದರೂ ದಿನವೂ ಎರಡು ಸಲ ರೈಲು ಬಂಡಿಯ ಹಳಿಗಳ ಮೇಲೆ ಓಡುವಾಗ ಗಾಲಿಗಳ ಆವರ್ತಕ್ಕೆ ತಾಳ ಹಾಕಿದಂತಾಗಿ ಅವನಿಗೆ ಖುಷಿಯೆನಿಸುತ್ತಿತ್ತು. ಆ ತಾಳಕ್ಕೆ ಸರಿಯಾಗಿ ಯಾವುದಾದರೊಂದು ಗೀತದ ಚರಣವನ್ನು ಆತ ಅಂದುಕೊಳ್ಳುತ್ತ ಆನಂದಿಸುತ್ತಿದ್ದ.

ವಿದ್ಯಾಭ್ಯಾಸದಲ್ಲಿ ಮಗನ ಪ್ರಗತಿ ಸಮಾಧಾನಕರ ವಿಲ್ಲವೆಂದು ಕಂಡುಕೊಂಡ ಗಣೇಶರಾಯರು ಹುಬ್ಬಳ್ಳಿ ಓಡಾಟಸಾಕು ಎಂದು ಹೇಳಿದರು. ರಾಮಚಂದ್ರನ ಶಿಕ್ಷಣ ಅರ್ಧದಲ್ಲೇ ನಿಂತುಬಿಟ್ಟಿತು. ಮಾಡಲೇನು ಕೆಲಸವಿಲ್ಲದೆ ರಾಮಚಂದ್ರ ನಾಡಗೇರ ವಾಡೆಯಲ್ಲೇ ಸಮಯ ಕಳೆಯ ತೊಡಗಿದ. ಆಗೀಗ ಹೊರಗಿನಿಂದ ಪ್ರಖ್ಯಾತ ಸಂಗೀತಗಾರರು ಅಲ್ಲಿಗೆ ಬಂದು ಸಂಗೀತ ಕಚೇರಿ ನಡೆಸುವ ಒಂದು ಪರಿಪಾಠವೇ ವಾಡೆಯಲ್ಲಿತ್ತು. ರಾಮಚಂದ್ರನಿಗೆ ಆಗೆಲ್ಲ ದೊಡ್ಡಹಬ್ಬ. ಅವನು ಒಳ್ಳೆ ತನ್ಮತೆಯಿಂದ ಸಂಗೀತವನ್ನು ಕೇಳಿ ತಾನೂ ಅನಂತರ ಅದನ್ನೇ ಹಾಡಿಕೊಳ್ಳಲು ಯತ್ನಿಸುತ್ತಿದ್ದ.

ವಿದ್ಯಾಭ್ಯಾಸದಲ್ಲಿ ಮುಂದಾಗದಿದ್ದ ತಮ್ಮ ಹಿರಿಯ ಮಗ ರಾಮಚಂದ್ರನ ಭವಿತವ್ಯದ ಚಿಂತೆ ತಂದೆ ಗಣೇಶರಾಯರನ್ನು ಕಾಡುತ್ತಿತ್ತು. ಅದರಲ್ಲೂ ಅವರ ಹೆಂಡತಿ ಬೇಗ ತೀರಿಕೊಂಡದ್ದರಿಂದ ಚಿಕ್ಕಮ್ಮನ ಆಸರೆಯಲ್ಲಿ ಬೆಳೆಯುತ್ತಿದ್ದ ಮಕ್ಕಳ ಚಿಂತೆ ಅವರಿಗೆ ತಲೆಭಾರವೇ ಆಗಿತ್ತು. ಹಿರಿಯ ಮಗ ವಯಸ್ಸಿಗೆ ಬಂದೊಡನೆಯೇ ಅವನಿಗೆ ಮದುವೆ ಮಾಡಿಸೊಸೆಯನ್ನು ಮನೆತುಂಬಿಸಿಕೊಳ್ಳಬೇಕು, ಅವನು ತಮ್ಮಂತೆಯೇ ನೌಕರಿ ಮಾಡಿಕೊಂಡು ತಮ್ಮ ಭಾರವನ್ನು ತುಸುವಾದರೂ ಕಡಮೆ ಮಾಡಬೇಕು ಎಂದೆಲ್ಲ ಅವರು ಲೆಕ್ಕ ಹಾಕುತ್ತಿದ್ದರು. ಆದರೆ ದಿನಕ್ಕೆರಡು ಹೊತ್ತು ಊಟ ಮಾಡಿಕೊಂಡು ಸಂಗೀತದ ನಾದವನ್ನು ಅರಸುತ್ತ ನಾಡಗೇರ ವಾಡಿಯಲ್ಲೆ ಸಮಯ ಹರಣ ಮಾಡುತ್ತಿದ್ದ ರಾಮಚಂದ್ರ ತಮ್ಮ ಮುಪ್ಪಿನ ಕಾಲದಲ್ಲಿ ತಮಗೆ ಊರುಗೋಲಾಗಬಹುದೇ ಎಂಬ ಶಂಕೆ ಮಾತ್ರ ಅವರನ್ನು ಕಾಡುತ್ತಲೆ ಇತ್ತು.

ಗುರು ದೊರೆತರು

ಆದರೆ ತಾನೊಂದು ಬಗೆದರೆ ದೈವವಿನ್ನೊಂದು ಬಗೆದಿತ್ತು ಎಂಬಂತೆ ಗಣೇಶರಾಯರ ಲೆಕ್ಕಾಚಾರ ಹೆಚ್ಚು ಕಡಮೆಯಾಗುವ ಸಮಯವೂ ಬಂತು. ಒಮ್ಮೆ ಹಿಂದುಸ್ತಾನಿ ಸಂಗೀತ ಸಂಪ್ರದಾಯದಲ್ಲಿ ಕಿರಾನಾ ಘರಾಣೆಯ ಸುಪ್ರಸಿದ್ಧ ಗಾಯಕ ಅಬ್ದುಲ್ ಕರೀಮ್ ಖಾನರು ನಾಡಗೇರ ವಾಡೆಯಲ್ಲಿ ಕೆಲ ದಿನ ಇದ್ದು ತಮ್ಮ ಗಾಯನದಿಂದ ಈ ಹಳ್ಳಿಯ ಸಂಗೀತ ಪ್ರೇಮಿಗಳ ಹೃದಯದಲ್ಲಿ ಆನಂದ ತರಂಗಗಳನ್ನು ಎಬ್ಬಿಸುತ್ತಿದ್ದರು. ಬಾಲಕ ರಾಮಚಂದ್ರ ಖಾನ್‌ಸಾಹೇಬರ ಹತ್ತಿರವೇ ಸುಳಿದಾಡುತ್ತ ಅವರ ಗಾಯನವನ್ನೆ ಹೀರಿಕೊಳ್ಳುವವನಂತೆ ಮನದಲ್ಲೇ ಗುಣಗುಣಿಸುತ್ತಿದ್ದನು. ಖಾನ್‌ಸಾಹೇಬರು ಭೈರವಿ ರಾಗದಲ್ಲಿ ಹಾಡುತ್ತಿದ್ದ ‘ಜಮುನಾ ಕೆ ತೀರ್’ ಎಂಬ ಚೀಜಂತೂ ಅವನ  ಮನಸ್ಸನ್ನೇ ಸೂರೆಗೊಂಡಿತ್ತು. ಯಾವಾಗ ನೋಡಿದರೂ ಅವನು ಅದನ್ನೇ ಮೆಲುಕುಹಾಕುತ್ತಿದ್ದನು. ಸಹಜವಾಗಿಯೇ ಖಾನ್‌ಸಾಹೇಬರ ಗಮನ ಒಂದು ಸಲ ಈ ಬಾಲಕನತ್ತ ಹರಿದಾಗ ಅವರು, ಈತ ಯಾರೆಂದು ರಂಗನಗೌಡರನ್ನು ಕೇಳಿದರು. ಗೌಡರು ರಾಮಚಂದ್ರನನ್ನು ತಮ್ಮ ಬಳಿ ಕರೆದು, ‘‘ಈತ ನಮ್ಮ ಕಾರಕೂನ ಗಣಪತಿರಾಯರ ಮಗ. ಸಂಗೀತದಲ್ಲಿವಿಗೂ ತುಂಬ ಆಸಕ್ತಿ’’ ಎಂದು ಪರಿಚಯ ಮಾಡಿಕೊಟ್ಟರು. ಖುಷಿಯಲ್ಲಿದ್ದ ಖಾನ್‌ಸಾಹೇಬರು ಬಾಲಕನ ಬೆನ್ನುತಟ್ಟಿ ಒಂದೆರಡು ಹಾಡು ಹೇಳುವಂತೆ ಕೇಳಿದರು. ಅವನಿಗೆ ಅಷ್ಟೇ ಸಾಕಾಯಿತು. ತನಗೆ ಬರುತ್ತಿದ್ದ ಕೆಲವು ಭಜನೆಗಳನ್ನು ಹಾಡಿದ. ಭೈರವಿ ರಾಗದ ಒಂದು ಭಜನೆಯಲ್ಲಿ ತಮ್ಮ ‘ಜಮುನಾ ಕೆ ತೀರ’ ದ ಛಾಯೆಯನ್ನು ಕಂಡ ಖಾನ್‌ಸಾಹೇಬರೇ ಮುಗುಳುನಕ್ಕರು. ‘‘ಕಂಠ ಚೆನ್ನಾಗಿದೆ; ಸರಿಯಾಗಿ ಅಭ್ಯಾಸ ಮಾಡು’’ ಎಂದು ಉತ್ತೇಜನ ಮಾತಾಡಿದರು. ‘‘ತಮ್ಮಂಥ ಗುರುಗಳು ಸಿಕ್ಕರೆ ಹುಡುಗ ಮುಂದೆ ಬಂದಾನು’’ ಎಂದರು ರಂಗನಗೌಡರು. ‘‘ಅಡ್ಡಿಯಿಲ್ಲ’’ ಎಂದು ಸಮ್ಮತಿ ಸೂಚಿಸಿದ ಖಾನ್‌ಸಾಹೇಬರು ತಮ್ಮೊಂದಿಗೆ ಈತನನ್ನು ಮೀರಜಿಗೆ ಕಳಿಸಿಕೊಡಬಹುದೆಂದೂ ಹೇಳಿದರು.

ತನ್ನ ಭವಿಷ್ಯದ ಬಾಗಿಲು ತೆರೆಯಿತೆಂದು ರಾಮಚಂದ್ರ ಕನಸು ಕಾಣತೊಡಗಿದ. ಆದರೆ ತಂದೆ ಗಣೇಶರಾಯರಿಗೆ ಮಾತ್ರ ಆಘಾತವೇ ಆದಂತಾಗಿತ್ತು. ಮಗ ಮದುವೆಯಾಗಿ ಏನಾದರೂ ನೌಕರಿ ಮಾಡಿಕೊಂಡು ತಮ್ಮ ಮೇಲಿನ ಭಾರವನ್ನು ಕಡಮೆ ಮಾಡಬಹುದೆಂದು ಎಣಿಸಿದ್ದ ಅವರಿಗೆ ಅವನು  ಸಂಗೀತದ ಹುಚ್ಚಿನಿಂದ ಎಲ್ಲೆಲ್ಲೋ ಅಲೆಯುವುದು ರುಚಿಸಲಿಲ್ಲ. ದgಲ್ಲೂ ಅಬ್ದುಲ್ ಕರೀಮ್‌ಖಾನರ ಬಳಿ ಅವನನ್ನು ಕಳಿಸುವುದು ಅವರಿಗೆ ಇಷ್ಟವಾಗಲಿಲ್ಲ. ಹುಡುಗ ಅವರಿಂದ ಸಂಗೀತ ಕಲಿಯುವುದಾದರೆ, ಮೀರಜಿಗೆ ಹೋದರೆ ಅವನ ಊಟ, ವಾಸ ಎಲ್ಲಕ್ಕೂ ವ್ಯವಸ್ಥೆ ಹೇಗೆ? ಅವರು ಮುಚ್ಚುಮರೆಯಿಲ್ಲದೆ ರಂಗನಗೌಡರೆದುರು ತಮ್ಮ ಶಂಕೆಗಳನ್ನು ವ್ಯಕ್ತಮಾಡಿದರು. ಆದರೂ ಕೊನೆಗೆ ಮಗನ ಉತ್ಸುಕತೆ ಹಾಗೂ ರಂಗನಗೌಡರ ಆಗ್ರಹಕ್ಕೆ ಅವರು ಮಣಿಯಬೇಕಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಗಣೇಶರಾಯರು ಮಗನನ್ನು ಖಾನ್‌ಸಾಹೇಬರೊಂದಿಗೆ ಮೀರಜಿಗೆ ಕಳಿಸಿಕೊಟ್ಟರು.

ಹಿಂದುಸ್ತಾನಿ ಸಂಗೀತದ ಒಂದು ವೈಶಿಷ್ಟ ವೆಂದರೆ ಅಲ್ಲಿ ಕಂಡುಬರುವ ಹಲವಾರು ಘರಾಣೆ ಅಥವಾ ಸಂಗೀತ ಪರಂಪರೆಗಳು, ಆಗ್ರಾ, ಕಿರಾನಾ, ಜಯಪುರ, ಗ್ವಾಲಿಯರ್, ಪಾಟಿಯಾಲ ಮತ್ತು ಇಂದೂರ್ ಎಂಬ ಆರು ಪ್ರಮುಖ ಘರಾಣೆಗಳನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಸ್ವರವೇ ಮುಖ್ಯವೆಂದು ಭಾವಿಸುವ ಕಿರಾನಾ ಮತ್ತು ಲಯವೇ ಪ್ರಮುಖವೆಂದು ತಿಳಿಯುವ ಆಗ್ರಾ ಘರಾಣೆಗಳು ಈ ಜಗತ್ತಿನ ಎರಡು ಧ್ರುವಗಳಂತಿವೆ. ಇನ್ನುಳಿದ ನಾಲ್ಕು ಘರಾಣೆಗಳು ಎರಡೂ ಅಂಶಗಳಲ್ಲಿ ಹೆಚ್ಚುಕಡಮೆ ಸಾಮರಸ್ಯವನ್ನು ಹೇಳುತ್ತ ಮಧ್ಯದಲ್ಲಿವೆ. ಅಬ್ದುಲ್ ಕರೀಮ್‌ಖಾನರು ಕಿರಾನಾ ಘರಾಣೆಗೆ ಸೇರಿದ ಒಬ್ಬ ಮಹಾನ್ ಸಂಗೀತಗಾರರು. ಕಿರಾನಾ ಎಂಬುದು ದಿಲ್ಲಿಯ ಬಳಿ ಇರುವ ಒಂದು ಗ್ರಾಮ. ಕರೀಮ್‌ಖಾನರು ಅಲ್ಲಿ ಹುಟ್ಟಿಬೆಳೆದು ಪ್ರೌಢ ವಯಸ್ಸಿನಲ್ಲಿ  ಬಂದು ನೆಲೆಸಿದ್ದು ಮೀರಜಿಯಲ್ಲಿ. ಮೀರಜ್ ಕರ್ನಾಟಕದ ಉತ್ತರ ಗಡಿಗೆ ಹೊಂದಿಕೊಂಡಿರುವ ಒಂದು ಸಾಧಾರಣ ಊರು. ಸ್ವಾತಂತ್ರ್ಯಕ್ಕೆ ಮುನ್ನ ಅದೇ ಹೆಸರಿನ ಒಂದು ಚಿಕ್ಕ ಸಂಸ್ಥಾನದ ರಾಜಧಾನಿ. ತನ್ನ ಹದಿವಯದಲ್ಲಿ ರಾಮಚಂದ್ರರು ಗುರುವಿನೊಂದಿಗೆ ಮೀರಜಿಯಲ್ಲಿರಲು ಬರುವ ಹೊತ್ತಿಗೆ ಅಬ್ದುಲ್ ಕರೀಮ್‌ಖಾನರು ಸಂಗೀತ ಜಗತ್ತಿನಲ್ಲಿ ಉತ್ತುಂಗ ಶಿಖರವನ್ನು ತಲಪಿದ್ದರು. ಇಲ್ಲಿಗೆ ಬಂದ ನಂತರ ರಾಮಚಂದ್ರನು ರಾಮಭಾವೂ (ರಾಮಣ್ಣ) ಆದ. ಮುಂದೆಲ್ಲ ತನ್ನ ಆತ್ಮೀಯರಿಗೆ ಅವನು ರಾಮಭಾವೂ ಕುಂದಗೋಳಕರ.

ಗುರುಗಳು

ಖಾನ್‌ಸಾಹೇಬ್ ಅಬ್ದಲ್‌ಕರೀಮ್ ಖಾನರು ಸಂಗೀತ ವಿದ್ಯಾಪ್ರಸಾರಕ್ಕೆಂದು ಮೀರಜ್, ಮುಂಬಯಿ, ಪುಣೆ, ಬೆಳಗಾವಿ ಮುಂತಾದ ಸ್ಥಳಗಳಲ್ಲಿ ‘ಆರ್ಯ ಸಂಗೀತ ವಿದ್ಯಾಲಯ’ ಎಂಬ ಹೆಸರಿನ ಸಂಗೀತ ಶಾಲೆಗಳನ್ನು ನಡೆಸು ತ್ತಿದ್ದರು. ಮೀರಜಿಯಲ್ಲಿನದು ಅವರ ಮುಖ್ಯ ವಿದ್ಯಾಲಯವಾಗಿತ್ತು. ಅದನ್ನು ಸ್ವತಃ ಖಾನ್‌ಸಾಹೇಬರೂ ಅವರ ಶಿಷ್ಯೆ ಮತ್ತು ಪತ್ನಿಯಾಗಿದ್ದ ತಾರಾಬಾಯಿ ನೋಡಿ ಕೊಳ್ಳುತ್ತಿದ್ದರು. ಉಳಿದ ಶಾಖೆಗಳನ್ನು ಅವರ ಪ್ರಮುಖ ಶಿಷ್ಯರು ನಡೆಸುತ್ತಿದ್ದರು. ಈ ವಿದ್ಯಾಲಯಗಳೆಲ್ಲ ಪ್ರಾಚೀನ ಗುರುಕುಲದ ಮಾದರಿಯಲ್ಲೇ ರೂಪುಗೊಂಡಿದ್ದವು. ಶಿಕ್ಷಣ ನೀಡುವ ಅವರ ರೀತಿಯೂ ಇದಕ್ಕೆ ಅನುಗುಣವಾಗಿಯೇ ಇತ್ತು. ಸಂಗೀತ ಶಾಸ್ತ್ರದ ಸೈದ್ಧಾಂತಿಕ ಭಾಗವನ್ನು ಸಹ ಬರೆದುಕೊಳ್ಳುವಂತೆ ಅವರು ಶಿಷ್ಯರಿಗೆ ಹೇಳುತ್ತಿರಲಿಲ್ಲ. ಎಲ್ಲವೂ ಗುರುಮುಖದಿಂದಲೇ ಬರಬೇಕು; ಅದನ್ನು ಕೇಳಿಯೇ ಶಿಷ್ಯರು ಮನನಮಾಡಿಕೊಳ್ಳಬೇಕು. ಶುದ್ಧ ಶಾಸ್ತ್ರೀಯ ಸಂಗೀತ ಕಲಿಯಬಯಸಿದ ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ಖಾನ್‌ಸಾಹೇಬರ ಬಳಿ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ತಮ್ಮ ವಿದ್ಯೆಯನ್ನು ಮಾರಿಕೊಂಡು ಹಣಕ್ಕೆ ಆಸೆಪಡುವ ಗುರುಗಳು ಅವರಾಗಿರಲಿಲ್ಲ. ತಮ್ಮ ಬಳಿಬಂದವರಲ್ಲಿ ಕೆಲವರಾದರೂ ಶಿಷ್ಯರು ಕಿರಾನಾ ಘರಾಣೆಯ ಹೆಸರನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರಬೇಕು ಎಂಬುದೇ ಅವರ ಮನೀಷೆ. ತಮ್ಮ ಗುರುಕುಲದಲ್ಲಿರುತ್ತಿದ್ದ ಶಿಷ್ಯರ ಊಟ ವಸತಿಗಳನ್ನೆಲ್ಲ ಮಿತವಾದ ವೆಚ್ಚದಲ್ಲೇ ಅವರು ನೋಡಿಕೊಳ್ಳುತ್ತಿದ್ದರು. ಮುಂದೆ ಅವರ ಗಳಿಕೆ ಕಡಿಮೆಯಾದಾಗಲೂ ಖಾನ್‌ಸಾಹೇಬರು ತಮ್ಮ ಶಿಷ್ಯರನ್ನು ಮನೆಯ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದರು. ಆದರೆ ಈ ವಿಷಯದಲ್ಲಿ ಖಾನ್‌ಸಾಹೇಬರ ದೃಷ್ಟಿ ಹಾಗೂ ಅವರ ಪತ್ನಿ ತಾರಾಳ ದೃಷ್ಟಿ ಒಂದೇ ತೆರನಾಗಿರಲಿಲ್ಲ. ಸಾಕಷ್ಟು ಹಣ ತೆರಲಾಗದ ಶಿಷ್ಯರು ಮೈ ಮುರಿದು ದುಡಿದಾದರೂ ಸೇವೆಸಲ್ಲಿಸಲಿ ಎಂಬುದು ಆಕೆಯ ವಾದ, ಆರ್ಥಿಕ ಪರಿಸ್ಥಿತಿ ಕೆಡುತ್ತ ನಡೆದಾಗ ಕೆಲವು ಶಿಷ್ಯರನ್ನಾದರೂ ಮನೆಗೆ ಕಳಿಸಿಬಿಡಬೇಕೆಂದು ಆಕೆ ಯತ್ನಿಸಿದರು. ಆದರೆ ಖಾನ್‌ಸಾಹೇಬರು ಅದನ್ನೊಪ್ಪಲಿಲ್ಲ. ಅರ್ಧಮರ್ಧ ಕಲಿತುಹೋದ ಶಿಷ್ಯರಿಂದ ಸಂಗೀತಕ್ಕೂ ತಮ್ಮ ಘರಾಣೆಗೂ ಅಪಚಾರವಾಗಬಹುದೆಂದು ಬಗೆದ ಖಾನ್ ಸಾಹೇಬರು ಪ್ರತಿಯೊಬ್ಬ ಶಿಷ್ಯನಿಂದಲೂ ಎಂಟು ವರ್ಷ ಗುರುಕುಲದಲ್ಲಿರುವುದಾಗಿ ಕರಾರು ಪತ್ರ ಬರೆಸಿಕೊಂಡಿರುತ್ತಿದ್ದರು.

ಸಂಗೀತ ಶಿಕ್ಷಣ

ರಾಮಭಾವು ಮನಃಪೂರ‍್ವಕವಾಗಿ ಶಿಷ್ಯತ್ವವನ್ನು ಒಪ್ಪಿಕೊಂಡು ಗುರುಗಳ ಬಳಿ ಸಂಗೀತಸಾಧನೆಗೆ ತೊಡಗಿದರು. ಕೆಲ ದಿನಗಳಲ್ಲೇ ಗುರುಗಳ ಜೊತೆರಾಮಭಾವು ಸಂಚರಿಸುತ್ತ ಅವರೊಂದಿಗೆ ಗಾಯನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಒಂದು ಪರಿಪಾಠವೇ ಆಗಿಬಿಟ್ಟಿತು. ಸಂಗೀತ ಕಚೇರಿಗಳಲ್ಲಿ ಗುರುಗಳ ಹಿಂದೆ ಕುಳಿತು ಅವರಿಗೆ ತಂಬೂರಿ ಮೀಟುವುದು ಹೆಚ್ಚುಹೆಚ್ಚಾಗಿ ಇವರ ಪಾಲಿಗೇ ಬರತೊಡಗಿತು. ಗುರುಗಳ ಸಂಗೀತವನ್ನು ಹೀಗೆ ತಾಸುಗಟ್ಟಲೆ ಕೇಳುವುದೇ ಇವರ ಶಿಕ್ಷಣದ ಮುಖ್ಯ ಅಂಗವಾಗಿಬಿಟ್ಟಿತು. ಮೊದ ಮೊದಲು ಬರಿ ತಂಬೂರಿ ಮೀಟುತ್ತ ಕುಳಿತಿರುತ್ತಿದ್ದ ರಾಮಭಾವು ಅನಂತರ ಗುರುವಿನೊಂದಿಗೆ ಸ್ವರ ಬೆರೆಸಲೂ ತೊಡಗಿದರು. ಇದು ಅವರ ಸಂಗೀತ ಸಾಧನದಲ್ಲಿ ಬಹು ಮಹತ್ವದ ಅಂಶವಾಯಿತು.

ತಮ್ಮ ಪಾಠಕ್ರಮದಲ್ಲಿ ಗುರುಗಳು ಪ್ರತಿಯೊಬ್ಬ ಶಿಷ್ಯನ ಬಗೆಗೂ ಗಮನ ಹರಿಸುತ್ತಿದ್ದರು. ಅವರಲ್ಲಿ ಕಂಡ ಲೋಪ ದೋಷಗಳನ್ನು ತಟ್ಟನೆ ತಿದ್ದುತ್ತಿದ್ದರು. ಇದರಿಂದಾಗಿ ಒಮ್ಮೆ ಮಾಡಿದ ತಪ್ಪನ್ನು ತಾವು ಮತ್ತೆ ಮಾಡದಂತೆ ಎಚ್ಚರವಹಿಸಲು ಶಿಷ್ಯರಿಗೆ ಅನುಕೂಲವಾಗುತ್ತಿತ್ತು. ತಮ್ಮ ಪ್ರಮುಖ ಸಂಗೀತ ಕಚೇರಿಗಳಲ್ಲೂ ತಮ್ಮ ಶಿಷ್ಯರ ಸಾಧನೆಯ ಪ್ರದರ್ಶನಕ್ಕೂ ಗುರುಗಳು ಸಾಕಷ್ಟು ಅನುವು ಮಾಡಿಕೊಡುತ್ತಿದ್ದರು.

ರಾಮಭಾವು ಗುರುಕುಲದಲ್ಲಿದ್ದಷ್ಟು ಕಾಲವೂ ಗುರುಗಳ ಪೂರ್ಣ ಕೃಪಾದೃಷ್ಟಿಗೆ ಪಾತ್ರರಾಗಿದ್ದರು. ಖಾನ್ ಸಾಹೇಬರು ತಮ್ಮ ಇತರ ಪ್ರಮುಖ ಶಿಷ್ಯರಿಗೆ ಬೇರೆ ಬೇರೆ ಕಡೆಗಳಲ್ಲಿದ್ದ ತಮ್ಮ ಆರ್ಯ ಸಂಗೀತ ವಿದ್ಯಾಲಯದ ಶಾಖೆಗಳನ್ನು ನಡೆಸುವ ಹೊಣೆಯನ್ನು ವಹಿಸಿಕೊಟ್ಟರೆ ರಾಮಭಾವು ಅವರನ್ನು ಮಾತ್ರ ತಮ್ಮ ಬಳಿಯೇ ಉಳಿಸಿಕೊಂಡು ಸಂಚಾರದಲ್ಲೆಲ್ಲ ತಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತಿದ್ದರು.

ಖಾನ್‌ಸಾಹೇಬರ ಸಂಗೀತ ಶಿಕ್ಷಣ ಪದ್ಧತಿ ವಿಶಿಷ್ಟ ವಾಗಿತ್ತು. ಕೈಬೆರಳಮೇಲೆಣಿಸುವಷ್ಟು ರಾಗಗಳನ್ನು ಪೂರ್ತಿ ಹೇಳಿಕೊಟ್ಟು ಅಭ್ಯಾಸ ಮಾಡಿಸಿದರೆ ಸಾಕು ಶಿಷ್ಯನು ಆ ಅಡಿಪಾಯದ ಮೇಲೆ ತನ್ನದೇ ಸ್ವರ ಸಾಮ್ರಾಜ್ಯವನ್ನು ಕಟ್ಟಿಕೊಳ್ಳಬಲ್ಲನೆಂಬುದು ಅವರ ದೃಷ್ಟಿ. ಅಂತೆಯೆ, ರಾಮಭಾವು ಅವರಿಗೆ ಗುರುಗಳು ಪೂರ್ತಿ ಕಲಿಸಿದ್ದು ಪ್ರಾತಃಕಾಲ, ಅಪರಾಹ್ನ ಹಾಗೂ ಸಾಯಂಕಾಲಗಳಲ್ಲಿ ಹೇಳುವ ಮೂರು ಮುಖ್ಯರಾಗಗಳಾದ ತೋಡಿ, ಮುಲ್ತಾನಿ, ಪೂರಿಯಾ ರಾಗಗಳನ್ನು ಮಾತ್ರ. ಪೂರಿಯಾ ರಾಗದ ಪಾಠವನ್ನೇ ಗುರುಗಲು ರಾಮಭಾವು ಅವರಿಗೆ ಒಂದು ವರ್ಷ ಪೂರ್ತಿ ಹೇಳಿದರಂತೆ. ಗುರುಗಳು ಶಿಷ್ಯರಿಂದ ನಿರೀಕ್ಷಿಸುತ್ತಿದ್ದುದು ನಿಷ್ಠೆ, ಶ್ರದ್ಧೆ ಮತ್ತು ನಿತ್ಯ ಪರಿಶ್ರಮದ ಕಾಣಿಕೆಯನ್ನು ಮಾತ್ರ; ಹಣದ ರೂಪದಲ್ಲಿ ಸಲ್ಲಿಸಬಹುದಾದ ಗುರುದಕ್ಷಿಣೆಯ ಸ್ಥಾನ ಅವರಿಗೆ ತೀರ ಮುಖ್ಯವಾಗಿರಲಿಲ್ಲ.

ಗುರು ಮೆಚ್ಚಿದ ಶಿಷ್ಯ

ನಿತ್ಯ ನಸುಕಿನಲ್ಲೆದ್ದು ರಾಮಭಾವು ಗುರುಗಳ ಹತ್ತಿರ ತಂಬೂರಿ ಹಿಡಿದು ಕುಳಿತರೆಂದರೆ ಸತತವಾಗಿ ಏಳೆಂಟು ತಾಸು ಅಭ್ಯಾಸ ಸಾಗುತ್ತಿತ್ತು. ನೇರವಾಗಿ ಗುರುಗಳಿಂದ ಅವಗತ ಮಾಡಿಕೊಂಡ ಮೂರು ರಾಗಗಳ ಬುನಾದಿಯ ಮೇಲೆಯೇ ರಾಮಭಾವು ತಮ್ಮ ಕಲ್ಪನಾ ಶಕ್ತಿ, ಗ್ರಹಣಶಕ್ತಿಗಳಿಂದ ನೂರಾರು ರಾಗರಾಗಿಣಿಗಳನ್ನು ತಮ್ಮದಾಗಿ ಮಾಡಿಕೊಂಡರು. ಅವರ ಸಾಧನೆಯಲ್ಲಿನ ಪ್ರಗತಿಯನ್ನು ಕಂಡು ಗುರುಗಳು ಮೆಚ್ಚಿದರಲ್ಲದೆ ಈ ಶಿಷ್ಯ ತಮ್ಮ ಘರಾಣೆಯ ಪರಂಪರೆಯನ್ನು ಎತ್ತಿ ಹಿಡಿಯಬಲ್ಲನೆಂಬ ವಿಶ್ವಾಸವನ್ನು ತಳೆದರು. ಇದೇ ವಿಶ್ವಾಸದಿಂದಲೇ ಮುಂದೆ ತಮ್ಮ ಹಲವಾರು ಕಚೇರಿಗಳಲ್ಲಿ ರಾಮಭಾವು ಒಬ್ಬರನ್ನೇ ಮುಂದೆ ಬಿಟ್ಟು ಅವರ ಸಾಧನೆಯನ್ನು ಕಂಡು ಹರ್ಷಿಸುತ್ತಿದ್ದರು.

ಗುರುಗಳ ಸಂಗಡ ದೇಶದ ನಾನಾ ಭಾಗಗಳನ್ನು ರಾಮಭಾವು ಸುತ್ತಾಡಿದರು. ಅದರಲ್ಲಿ ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ಮೈಸೂರು ಸಂಸ್ಥಾನಗಳಲ್ಲೇ ಈ ಸಂಚಾರ ವಿಶೇಷವಾಗಿರುತ್ತಿತ್ತು. ೧೯೦೦ ರಿಂದ ೧೯೦೭ರ ವರೆಗೆ ಅವ್ಯಾಹತವಾಗಿ ಗುರುಗಳ ಅಡಿಯಲ್ಲಿ ಅವರ ಸಂಗೀತ ತಪಶ್ಚರ್ಯ ನಡೆಯಿತು.

ಗುರುಮುಖದಿಂದ ಕಲಿಯುವುದರೊಂದಿಗೆಯೇ ಬೇರೆ ಬೇರೆ ಮೂಲಗಳಿಂದಲೂ ಒಳ್ಳೆಯ ಅಂಶಗಳನ್ನು ಗ್ರಹಿಸಿ ಅಳವಡಿಸಿಕೊಳ್ಳುವ ಗುಣ ರಾಮಭಾವು ಅವರಲ್ಲಿತ್ತು. ರಾಮಕೃಷ್ಣಬುವಾ ವರೆs, ಭಾಸ್ಕರ ಬುವಾ ಬಖಲೆ, ರಹಿಮತಖಾನ್ ಸಾಹೇಬ, ಮಾಜೀ ಖಾನ್‌ಸಾಹೇಬ ಮುಂತಾದ ಆ ಕಾಲದ ಹಿರಿಯ ಸಂಗೀತಗಾರರ ಉತ್ತಮೋತ್ತಮ ಗುಣಾಂಶಗಳನ್ನು ರಾಮಭಾವು ಸ್ವೀಕರಿಸಿದ್ದರು. ಈ  ಸಂಗೀತಗಾರರೆಲ್ಲ ಬೇರೆ ಬೇರೆ ಘರಾಣೆಗಳಿಗೆ ಸೇರಿದವರಾಗಿದ್ದರೆಂಬುದನ್ನು ನೆನೆಯಬೇಕು.

ರಾಮಭಾವು ಉತ್ತಮ ಸಂಗೀತಗಾರರೆಂಬ ಹೆಸರು ಹಬ್ಬುತ್ತಿರುವಂತೆಯೇ ಅವರ ಗಾಯನವನ್ನು ಧ್ವನಿ ಮುದ್ರಿಸಲು ಗ್ರಾಮಾಫೋನ್ ಕಂಪನಿಯವರು ಮುಂದಾದರು. ಒಂದು ಆಶ್ಚರ್ಯವೆಂದರೆ ಅವರ ಗುರು ಅಬ್ದುಲ್ ಕರೀಮ್‌ಖಾನರಿಗಿಂತ ಮುಂಚಿತವಾಗಿಯೇ ರಾಮಭಾವು ಅವರ ಧ್ವನಿಮುದ್ರಿಕೆಗಳು ಹೊರಬಂದುದು.

ಮರಳಿ ತಂದೆಯ ಮನೆಗೆ

ಗುರುಗಳ ನಿರೀಕ್ಷೆಯ ಪ್ರಕಾರ ರಾಮಭಾವು ಅವರ ಬಳಿ ಎಂಟುವರ್ಷ ಪೂರ್ತಿ ಇರಬೇಕಿತ್ತು. ಆದರೆ ವಯಸ್ಸಾಗುತ್ತ ಬಂದ ತಂದೆ ಬಯಸಿದ್ದು ಬೇರೆ. ಹಿರಿಯ ಮಗ ಬೇಗ ಮನೆಗೆ ಮರಳಿ ಮನೆತನದ ಹೊಣೆ ಹೊರಬೇಕು ಎಂದವರ ಇಚ್ಛೆ. ಈ ಒತ್ತಾಯಕ್ಕೆ ಅವರು ಮಣಿಯಲೇ ಬೇಕಾಯಿತು. ಗುರುಗಳ ಪೂರ್ಣ ಆಶೀರ‍್ವಾದ, ಅನುಗ್ರಹ ಪಡೆದುಕೊಂಡೇ ಅವರು ಮೀರಜಿಯಿಂದ ಕುಂದಗೋಳಕ್ಕೆ ಮರಳಿದರು.

ಹಿರಿಯ ಮಗ ಮನೆಗೆ ಮರಳಿದೊಡನೆಯೇ ಅವನು ಊರಲ್ಲಿ ನೆಲೆನಿಲ್ಲಬೇಕಾದರೆ ಅವನ ಮದುವೆ ಮಾಡುವುದೊಂದೇ ಮಾರ್ಗವೆಂದು ಗಣೇಶರಾಯರು ಭಾವಿಸಿದರು. ಕೂಡಲೆ ಗದುಗಿನ ವೈದ್ಯಮನೆತನಕ್ಕೆ ಸೇರಿದ ಸೀತಾಬಾಯಿಯೆಂಬ ಕನ್ಯೆಯೊಂದಿಗೆ ರಾಮಭಾವುನ ವಿವಾಹ ಮಾಡಿ ಬಿಟ್ಟರು.

ರಾಮಭಾವು ಅವರಿಗೆ ಮದುವೆಯಾದದ್ದೇನೋ ನಿಜ. ಆದರೆ ಜೀವನಕ್ಕಾಗಿ ಅವರೇನುಮಾಡಬೇಕೆಂಬುದೇ ದೊಡ್ಡ ಸಮಸ್ಯೆಯಾಯಿತು. ಗ್ರಾಮಾಫೋನ್ ಕಂಪನಿಯಿಂದ ಆಗೀಗ ಅಷ್ಟಿಷ್ಟು ಹಣ ದೊರೆಯುತ್ತಿತ್ತು; ಆದರೆ ಈ ಆದಾಯ ಯಾವುದಕ್ಕೂ ಸಾಲುತ್ತಿರಲಿಲ್ಲ. ಶಾಸ್ತ್ರೀಯ ಸಂಗೀತಗಾರನಾಗಿ ಗಳಿಸುವುದಕ್ಕೆ ಹೆಸರು ಸಾಲದು. ಮೂರನೆಯ ಮಾರ್ಗವೆಂದರೆ ನಾಟಕ ಕಂಪನಿ ಸೇರುವುದು. ರಾಮಭಾವು ಮೂರನೆಯದನ್ನೇ ಆಯ್ದುಕೊಂಡರು. ಏನಾದರಾಗಲಿ, ತಿಂಗಳಿಗಷ್ಟು ಸಂಬಳ ತಂದುಹಾಕಬಹುದಲ್ಲ ಎಂದು ತಂದೆಯೂ ಅನಿವಾರ್ಯವಾಗಿ ಒಪ್ಪಿಗೆ ನೀಡಿದರು.

ನಾಟಕಗಳಲ್ಲಿ ಪಾತ್ರಧಾರಿ

ಕನ್ನಡ ಮಾತೃಭಾಷೆಯಾಗಿದ್ದರೂ ಮರಾಠಿ ವಾತಾವರಣದಲ್ಲೇ ಬೆಳೆದದ್ದರಿಂದ ರಾಮಭಾವು ಮರಾಠಿ ರಂಗಭೂಮಿಯನ್ನೇ ಆಯ್ದುಕೊಂಡರು. ‘ನೂತನ ಸಂಗೀತ ನಾಟಕ ಮಂಡಳಿ’ ಯಲ್ಲಿ ಸ್ತ್ರೀ ಪಾತ್ರಧಾರಿಯ ಕೆಲಸ ಅವರಿಗೆ ದೊರೆಯಿತು. ಅದು ಮರಾಠಿ ರಂಗಭೂಮಿಯ ಭಾರಿ ಉತ್ಕರ್ಷದ ಕಾಲ. ರಾಮಭಾವು ನಾಟಕರಂಗವನ್ನು ಸೇರುವುದಕ್ಕೆ ಮುಂಚೆ ಆಗಲೆ ಇನ್ನೊಬ್ಬ ನಟ ತನ್ನ ಅಭಿನಯ ಕೌಶಲದಿಂದ, ಮೋಹಕ ಸಂಗೀತದಿಂದ ಮರಾಠಿ ರಸಿಕರನ್ನು ಸೆರೆ ಹಿಡಿದಿದ್ದರು. ಆ ಕಲಾವಿದರೇ ‘ಬಾಲಗಂಧರ್ವ’ ಎಂದು ಹೆಸರಾಂತ ನಾರಾಯಣರಾವ್ ರಾಜಹಂಸ ಅವರು. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕಗಳಲ್ಲಿಯ ರಸಿಕರು ಆಗಲೇ ಅವರ ಮೋಡಿಗೆ ಒಳಗಾಗಿಬಿಟ್ಟಿದ್ದರು. ಈ ಕಾರಣದಿಂದಾಗಿ ರಾಮಭಾವು ಅವರ ಕಾರ್ಯ ಸುಲಭವಾದುದೇನಾಗಿರಲಿಲ್ಲ. ಈ ಹೊತ್ತಿಗಾಗಲೇ ಅಬ್ದುಲ್ ಕರೀಮ್‌ಖಾನರ ಪ್ರತಿಭಾವಂತ ಶಿಷ್ಯನೆಂಬ ಕೀರ್ತಿ ಮಾತ್ರ ಅವರಿಗೆ ಅನುಕೂಲ ಅಂಶವಾಗಿತ್ತು.

೧೯೦೮ ರಲ್ಲಿ ಅಮರಾವತಿಯಲ್ಲಿ ನೂತನ ಸಂಗೀತ ನಾಟಕಮಂಡಳಿ ಬೀಡುಬಿಟ್ಟಾಗಲೇ ಬಾಲಗಂಧರ್ವ ನಾಟಕಮಂಡಳಿ ಕೂಡ ಅಲ್ಲಿಯೇ ಮೊಕ್ಕಾಂ ಮಾಡಿತ್ತು. ಬಾಲಗಂಧರ್ವರು ‘ದ್ರೌಪದಿ’ ನಾಟಕ ಪ್ರಯೋಗ ಮಾಡುತ್ತಿದ್ದರಾದರೆ ‘ಆತ್ಮತೇಜ’  ಎಂಬ ಹೆಸರಿನಲ್ಲಿ ಇದೇ ಕಥಾವಸ್ತುವುಳ್ಳ ನಾಟಕವನ್ನು ನೂತನ ಸಂಗೀತ ನಾಟಕ ಮಂಡಳಿ ಪ್ರಯೋಗಿಸುತ್ತಿತ್ತು. ‘ದ್ರೌಪದಿ’ ಯಲ್ಲಿ ಬಾಲಗಂಧರ್ವರದೇ ದ್ರೌಪದಿ ಪಾತ್ರ. ‘ಆತ್ಮತೇಜ’ ದಲ್ಲಿ ಆ ಪಾತ್ರವನ್ನು ರಾಮಭಾವು ನಿರ್ವಹಿಸುತ್ತಿದ್ದರು.

ಸವಾಯ್ ಗಂಧರ್ವ

ರಾಮಭಾವು ಅವರ ಸ್ತ್ರೀಪಾತ್ರಾಭಿನಯ ಪ್ರಾರಂಭದಲ್ಲಿ ಬಾಲಗಂಧರ್ವರ ಮಟ್ಟಕ್ಕೆ ಬಹುಶಃ ಏರುತ್ತಿರಲಿಲ್ಲ. ಆದರೆ ಕಿರಾನಾ ಘರಾಣೆಯ ಶಾಸ್ತ್ರೀಯ ಸಂಗೀತ ತರಬೇತಿಯ ಭದ್ರ ತಳಹದಿ ಅವರ ಅಭಿನಯಕ್ಕೆ ಬೇರೊಂದು ಕಳೆಯನ್ನೇ ಕಟ್ಟಿತು. ಅವರ ಹಾಡುಗಾರಿಕೆ ಲೋರಚುಂಬಕದಂತೆ ರಸಿಕ ಪ್ರೇಕ್ಷಕರನ್ನು ಮಾತ್ರವಲ್ಲ, ಸ್ವತಃ ಬಾಲಗಂಧರ್ವರನ್ನೂ ಸೆಳೆಯಿತು. ಬಾಲ ಗಂಧರ್ವರು ತಮ್ಮ ನಾಟಕ ಮುಗಿದೊಡನೆಯೇ ಬಣ್ಣ, ಅಳಿಸಿಕೊಂಡು ರಾಮಭಾವು ಅವರ ಸಂಗೀತವನ್ನಾಲಿಸಲು ಈ ನಾಟಕಕ್ಕೆ ಧಾವಿಸಿ ಬರುತ್ತಿದ್ದರಂತೆ. ಅವರಿಬ್ಬರಲ್ಲೂ ಅಲ್ಲಿಯೇ ಮೈತ್ರಿಯುಂಟಾಗಿ ಅವರು ಪರಸ್ಪರರನ್ನು ಅತ್ಯಂತ ಗೌರವಭಾವದಿಂದ ಕಾಣತೊಡಗಿದರು. ರಾಮಭಾವು ಅವರ ಸಂಗೀತ ಮಾತ್ರದಿಂದಲೇ ನೂತನ ಸಂಗೀತ ನಾಟಕ ಮಂಡಳಿ ಕೀರ್ತಿ,ಧನಲಾಭ ಎರಡು ದೃಷ್ಟಿಯಲ್ಲೂ ಅಪಾರ ಯಶಸ್ಸು ಗಳಿಸಿತು.

ರಾಮಭಾವು ರಂಗಮಂಚದ ಮೇಲೆ ಬಂದು ಹಾಡುವುದಕ್ಕೆ ಮೊದಲು ಮಹಾರಾಷ್ಟ್ರೀಯರು ಅವರನ್ನು ಅತ್ಯಂತ ತುಚ್ಛ ರೀತಿಯಲ್ಲಿ ಕಂಡದ್ದೂ ಇದೆ. ‘‘ಈ ಕಾನಡಿ ಅಪ್ಪನೇನು ಹಾಡುತ್ತಾನೆ!’’  ಎಂದು ಎಷ್ಟೋ ಜನ ಅವರಿಗೆ ಕೇಳಿಸುವಂತೆಯೇ ಹೀಗಳೆದು ಮಾತಾಡಿದ್ದರಂತೆ. ಆದರೆ ಒಮ್ಮೆ ಅವರ ಧ್ವನಿಯ ಮಾಧುರ್ಯ ಇದೇ ಜನರನ್ನು ಸೆರೆಹಿಡಿದ ನಂತರ ಅವರೇ ‘‘ಇವರು ನಿಜವಾಗಿ ಸವಾಯ್ ಗಂಧರ್ವರು’’ ಎಂದು ಮೆಚ್ಚಿಕೊಂಡರು. ‘ಸವಾಯ್’ ಎಂದರೆ ಮರಾಠಿಯಲ್ಲಿ ‘ಹೆಚ್ಚಿನ’  ಎಂದು ಅರ್ಥವಿದೆ. ಜನತೆಯ ಈ ಮೆಚ್ಚುಗೆ ಎಷ್ಟೊಂದು ಆಗಾಧವಾಗಿತ್ತೆಂದರೆ ಮುಂದೆ ನಾಗಪುರದಲ್ಲಿ ರಾಮಭಾವು ಅವರನ್ನು ಸಾರ‍್ವಜನಿಕವಾಗಿ ಸತ್ಕರಿಸಿ ‘ಸವಾಯ್ ಗಂಧರ್ವ’ ಎಂಬ ಬಿರುದನ್ನು ಅರ್ಪಿಸಲಾಯಿತು.

ಕಷ್ಟಗಳು

ಆದರೆ ಸವಾಯ್ ಗಂಧರ್ವರ ಜೀವನವೆಂದೂ ಹೂವಿನ ಹಾಸಿಗೆಯಾಗಿರಲಿಲ್ಲ. ಒಮ್ಮೆ ಯಶಸ್ಸಿನ ಶಿಖರವನ್ನೇ ಏರಿದ್ದ ನೂತನ ಸಂಗೀತ ನಾಟಕ ಮಂಡಳಿಯ ಪರಿಸ್ಥಿತಿ ಹತ್ತಾರು ಕಾರಣಗಳಿಂದಾಗಿ ಹದಗೆಟ್ಟಿತು. ಮುಂದೆ ಅದರ ಮಾಲಿಕತ್ವವು ಕೂಡ ಹಿರಿಯ ನಟರಾಗಿದ್ದ ಸವಾಯ್ ಗಂಧರ್ವರ ಕೊರಳಿಗೇ ಬಿತ್ತು. ಆದರೆ ರಂಗಭೂಮಿಯ ಮೇಲೆ ಜನಮನವನ್ನು ಸೂರೆಗೊಳ್ಳಬಲ್ಲವರಾಗಿದ್ದ ಸವಾಯ್ ಗಂಧರ್ವರು ವ್ಯವಹಾರ ಚತುರರಾಗಿರಲಿಲ್ಲ. ಸಾಲಸೋಲಗಳು ಹೆಚ್ಚಾಗಿ ಮಂಡಳಿಯ ಆಸ್ತಿಪಾಸ್ತಿಗಳು ಒಂದೊಂದಾಗಿ ಕೈಬಿಡತೊಡಗಿದವು. ಸಾಹುಕಾರರ ಕಿರುಕುಳ ಹೆಚ್ಚಾಯಿತು. ಅವರು ಕೇಳಿದಂತೆ ಪತ್ರಗಳನ್ನು ಬರೆದುಕೊಡಬೇಕಾಯಿತು. ಕೊನೆಗೆ ದಾರಿ ಕಾಣದಾದ ಅವರು ನಾಟಕ ಮಂಡಳಿಯನ್ನು ಮುಚ್ಚಿಬಿಟ್ಟು ಮನೆಗೆ ಮರಳಿದರು.

ಮನೆಗೆ ಮರಳಿದರೂ ಸಾಹುಕಾರರ ಭೂತವು ಸವಾಯ್ ಗಂಧರ್ವರ ಬೆಂಬಿಡಲಿಲ್ಲ. ಆಗೀಗ ಜಪ್ತಿವಾರಂಟು, ಅವರನ್ನು ಬಂಧಿಸಲು ಆಜ್ಞೆ ಇಂತಹವು ಬಂದು ಅವರನ್ನು ಇನ್ನಷ್ಟು ಕಂಗೆಡಿಸಿದುವು. ಮಗನ ದುರ್ದೈವವನ್ನು ನೋಡಿ ತಂದೆ ಗಣೇಶರಾಯರು ಇನ್ನಷ್ಟು ಇಳಿದು ಹೋದರು. ಈ ವಾರಂಟುಗಳ ಕುತ್ತಿನಿಂದ ಇವರನ್ನು ಮುಕ್ತಗೊಳಿಸಲು ಕುಂದಗೋಳದಲ್ಲಿದ್ದ ಇವರ ಹಿತಚಿಂತಕರು ಕೂಡಿ ಒಂದು ಯೋಜನೆ ಹೂಡಿದರು. ಸವಾಯ್ ಗಂಧರ್ವರ ಒಂದು ಸಂಗೀತ ಕಾರ್ಯಕ್ರಮವನ್ನೇರ್ಪಡಿಸಿ ಹಣ ಶೇಖರಿಸಿ ಅವರನ್ನು ಋಣ ಮುಕ್ತನಾಗಿ ಮಾಡಿದರು.

ಮತ್ತೆ ನಾಟಕದ ಪ್ರಪಂಚಕ್ಕೆ

ಸವಾಯ್ ಗಂಧರ್ವರು ಮೂವತ್ತನೆಯ ವಯಸ್ಸನ್ನು ತಲಪುವ ಹೊತ್ತಿಗೆ ಅವರ ತಂದೆ ಗಣೇಶರಾಯರು ಇಹಲೋಕಯಾತ್ರೆ ಮುಗಿಸಿದರು. ತಂದೆ ಬಿಟ್ಟುಹೋದ ಒಂದು ಮನೆ, ತುಂಡು ಹೊಲವನ್ನು ನೆಚ್ಚಿ ಅವರು ಸಂಸಾರ ಸಾಗಿಸುವಂತಿರಲಿಲ್ಲ. ಜೀವನೋಪಾಯಕ್ಕಾಗಿ ಅವರು ಮತ್ತೆ ಸಂಗೀತಕ್ಕೆ ಶರಣು ಹೋಗಬೇಕಾಯಿತು. ಈ ಸಲ ಅವರ ನೆರವಿಗೆ ಬಂದವರು ಅವರ ಗುರುಬಂಧು ಶಂಕರರಾವ್ ಸರನಾಯಕ್ ಅವರು. ಅಬ್ದುಲ್ ಕರೀಮ್ ಖಾನರ ಶಿಷ್ಯರೇ ಆಗಿದ್ದ ಶಂಕರರಾವ್ ಅವರು ಕೂಡ ಸ್ತ್ರೀಪಾತ್ರಾಭಿನಯದಿಂದಲೇ ಹೆಸರು ಗಳಿಸಿದ್ದರು. ಸವಾಯ್ ಗಂಧರ್ವರು ಸೇರಿಕೊಂಡ ನಂತರ ಸರನಾಯಕರ ಯಶವಂತ ಸಂಗೀತ ನಾಟಕ ಮಂಡಳಿಗೆ ಇನ್ನಷ್ಟು ಕಳೆ ಕಟ್ಟಿತು. ಕೆಲವು ನಾಟಕಗಳಲ್ಲಿ ಸವಾಯ್ ಗಂಧರ್ವರು ಪುರುಷ ಪಾತ್ರ ವಹಿಸುತ್ತಿದ್ದರು. ಇವರಿಬ್ಬರ ಸಂಗೀತದ ಸೌರಭದಿಂದ ಮಹಾರಾಷ್ಟ್ರದ ರಸಿಕರ ಸಂತೋಷ ಹೇಳತೀರದು. ಈ ನಾಟಕಗಳಲ್ಲಿ ಸವಾಯ್ ಗಂಧರ್ವರು ಹಾಡುತ್ತಿದ್ದ ‘ಚಂದ್ರಿಕಾ ಹೀ ಜಣು ಠೇವಿಯಾ’ ಮುಂತಾದ ಪದಗಳು ಅವರನ್ನು ಜನಪ್ರಿಯತೆಯ ಶಿಖರಕ್ಕೆ ಒಯ್ದು ಮುಟ್ಟಿಸಿದುವು. ಸರನಾಯಕರೊಂದಿಗೆ ‘ಸಂತ ತುಳಸೀದಾಸ’ ಎಂಬ ಹೊಸನಾಟಕವನ್ನು ಪ್ರದರ್ಶಿಸಲು ಸಿದ್ದಮಾಡಿಕೊಂಡಿದ್ದು ಸವಾಯ್ ಗಂಧರ್ವರು ಆ ನಾಟಕ ಪ್ರದರ್ಶನಕ್ಕೆ ಬರುವ ಮೊದಲೇ ಯಶವಂತ ನಾಟಕ ಮಂಡಳಿಯಿಂದ ಹೊರಬೀಳ ಬೇಕಾದ ಪ್ರಸಂಗ ಬಂತು.

ಅನಂತರ ಸವಾಯ್ ಗಂಧರ್ವರು ಹೀರಾಬಾಯಿ ಬಡೊದೇಕರ್ ಅವರ ಜೊತೆ ಸೇರಿ ‘ನೂತನ ಸಂಗೀತ ವಿದ್ಯಾಲಯ’ ದ ನಾಟ್ಯ ಶಾಖೆಯಲ್ಲಿ ಕೆಲಸಕ್ಕೆ ನಿಂತರು. ಮುಂದೆ (೧೯೩೨ ರಲ್ಲಿ) ರಂಗಭೂಮಿಯಿಂದ ನಿವೃತ್ತರಾಗುವವರೆಗೂ ಇಲ್ಲಿಯೇ ಉಳಿದರು. ಆಗೆಲ್ಲ ರಂಗ ಭೂಮಿಯ ಮೇಲೆ ಈ ಇಬ್ಬರು ಕಲಾವಿದರಲ್ಲೂ ತಮ್ಮ ಸಂಗೀತಕ್ಕಾಗಿ ಪ್ರೇಕ್ಷಕರ ಮೆಚ್ಚುಗೆಯನ್ನು ನಿರೀಕ್ಷಿಸಿ ಒಂದು ಬಗೆಯ ಹಿತಕರ ಪೈಪೋಟಿಯೇ ನಡೆಯುತ್ತಿತ್ತಂತೆ.

ಧ್ವನಿಗೆ ಬಂದ ತೊಂದರೆ

ಸವಾಯ್ ಗಂಧರ್ವರಿಗೆ ಸಂಗೀತ ಸರಸ್ವತಿ ಪೂರ್ತಿ ಒಲಿದಿದ್ದಾಳೆಂದು ಜನ ಅಭಿಮಾನಪಡುವುದಕ್ಕೆ ಅರ್ಥವಿತ್ತೆಂದು ಯಾರೂ ಹೇಳಬಹುದು. ಆದರೆ ಜೀವನವಿಡೀ ಕಷ್ಟಗಳನ್ನು ಎದುರಿಸುತ್ತಲೇ ಬಾಳುವುದು ಅವರ  ಹಣೆಬರಹವೇ ಆಗಿರಬೇಕು. ತಾರುಣ್ಯದಲ್ಲಿ ಅವರ ಕಂಠ ಅವರು ಬಯಸಿದಂತೆ ಮಣಿಯುತ್ತಿತ್ತು ಕುಣಿಯುತ್ತಿತ್ತು. ಆದರೆ ಅವರು ಇನ್ನೂ ನಾಟಕರಂಗದಲ್ಲಿರುವಾಗಲೇ ಒಮ್ಮೊಮ್ಮೆ ಸ್ವರವೇ ಹತ್ತದೆ ತೊಂದರೆಗಿಟ್ಟುಕೊಳ್ಳತೊಡಗಿತು. ಅದಕ್ಕಾಗಿ ಸಂಗೀತ ಕಚೇರಿಗಳಿದ್ದಾಗಲಂತೂ ಅವರು ಗಂಟೆಗಟ್ಟಲೆ ಮೊದಲೇ ತಮ್ಮ ಧ್ವನಿಯನ್ನು ಹದಕ್ಕೆ ತರಲೋಸುಗ ಸಾಕಷ್ಟು ಶ್ರಮಪಡುತ್ತಿದದರು. ಒಮ್ಮೊಮ್ಮೆಯಂತೂ ಸಭೆಯಲ್ಲೇ ಬಹಳ ಹೊತ್ತು ಅದಕ್ಕಾಗಿ ಪರಿಶ್ರಮಿಸಬೇಕಾಗುತ್ತಿತ್ತು. ಅವರ ಈ ಕಷ್ಟವನ್ನು ಕಂಡು ಅನೇಕರು ಅನೇಕ ಬಗೆಯಲ್ಲಿ ಆಡಿಕೊಂಡರು. ತಾವು ಇಷ್ಟೊಂದು ಆಸೆಯಿಟ್ಟುಕೊಂಡು ತರಬೇತು ಮಾಡಿದ ತಮ್ಮ ಈ ಪಟ್ಟಶಿಷ್ಯ ನಾಟಕಗಳಲ್ಲಿ ಹೆಣ್ಣುಪಾತ್ರ ಮಾಡುವುದನ್ನು ಕಂಡು ಗುರು ಅಬ್ದುಲ್ ಕರೀಮ್‌ಖಾನರು ತುಂಬ ವ್ಯಥೆಪಟ್ಟರು ಎಂದು ಹೇಳುತ್ತಾರೆ. ಒಮ್ಮೆ ಒಂದೂರಲ್ಲಿ ಕರೀಮ್‌ಖಾನರು ಸವಾಯ್ ಗಂಧರ್ವರ ನಾಟಕ ನೋಡಲು ಹೋಗಿ ಮುಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರಂತೆ. ಅವರು ಬಂದಿರುವ ಕಲ್ಪನೆ ಅವರ ಶಿಷ್ಯನಿಗೆಷ್ಟೂ ಇಲ್ಲ. ಸುಭದ್ರೆಯ ಪಾತ್ರದಲ್ಲಿ ಸವಾಯ್ ಗಂಧರ್ವರು ‘ಕಿತಿ ಕಿತಿ ಸಾಂಗೂ ತುವಾ’ ಎಂದು ಹಾಡುತ್ತಲೇ ರಂಗಪ್ರವೇಶ ಮಾಡಿದರು. ಆದರೆ ಎದುರಲ್ಲೇ ಗುರುಗಳು! ಧ್ವನಿ ಇದ್ದಲ್ಲೇ ಸ್ತಬ್ಧವಾಯಿತು. ಅದೊಂದು ಮಾನಸಿಕ ಅಘಾತ. ಅದರಿಂದಾಗಿಯೇ ಮುಂದೆ ಅವರಿಗೆ ಈ ತೆರ ಸ್ವರದ ಸಮಸ್ಯೆಯುಂಟಾಯಿತೆಂದು ಹೇಳುತ್ತಾರೆ. ಆದರೆ ಇನ್ನೊಂದು ಘಟನೆಯನ್ನೂ ನೆನಪಿಡಬೇಕು. ಸವಾಯ್ ಗಂಧರ್ವರ ಕಂಪನಿಯೊಮ್ಮೆ ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಾಗ ಖಾನ್‌ಸಾಹೇಬರೂ ಅಲ್ಲಿಯೇ ಇದ್ದರಂತೆ. ಅವರು ನಾಟಕ ನೋಡಲು ಹೋಗಿ ಸವಾಯ್ ಗಂಧರ್ವರ ಹಾಡುಗಾರಿಕೆಯನ್ನು ಕೇಳಿ ಸಂತೋಷದಿಂದ, ‘‘ಹಾಂ! ಇದಕ್ಕೆನ್ನಬೇಕು ಸಂಗೀತ! ಹುಡುಗ ವೇಷಕಟ್ಟಿದರೂ ಗವಾಯಿಯೇ ಆಗಿದ್ದಾನೆ!’’ ಎಂದು ಮನದುಂಬಿ ಶಿಷ್ಯನನ್ನು ಹರಸಿದರಂತೆ.

ಸ್ವರ ಹತ್ತುವ ತೊಂದರೆ ಸವಾಯ್ ಗಂಧರ್ವರಿಗೆ ಅವರ ಜೀವನದ ಉತ್ತರಭಾಗದಲ್ಲಿ ಆಗುತ್ತಿತ್ತೆಂಬುದು ನಿಜ. ಆದರೆ ಅದರಿಂದ ಅವರ ಜನಪ್ರಿಯತೆಗಾಗಲಿ ಘನತೆಗಾಗಲಿ ಎಷ್ಟೂ ಕುಂದು ಬರಲಿಲ್ಲ. ಎಷ್ಟೋ ಸಲ ಜನ ಬೇಸರಿಸದೇ ಅವರಿಗೆ ಸ್ವರ ಹತ್ತುವವರೆಗೆ ಕಾದದ್ದೂ ಇದೆ. ಮೊದಲು ಎದ್ದುಹೋದವರು ಅವರ ಧ್ವನಿ ಸರಾಗವಾಗಿ ಹರಿಯ ತೊಡಗಿದಾಗ ಮರಳಿ ಬಂದು ಕುಳಿತು ಹಲವಾರು ಗಂಟೆಗಳ ಕಾಲ ಅವರ ಸಂಗೀತ ಕೇಳಿ ಆನಂದಸಾಗರದಲ್ಲಿ ಮಿಂದು ಹೋದದ್ದೂ ಇದೆ.

ಸಂಗೀತಕ್ಕೆ ಸೇವೆ

ಸವಾಯ್ ಗಂಧರ್ವರ ಜೀವನದಲ್ಲಿ ೧೯೧೬ ರಿಂದ ೧೯೪೧ ರ ವರೆಗಿನ ಕಾಲು ಶತಮಾನವನ್ನು ಸಂಗೀತ ವೃತ್ತಿಯ ಪರಾಕಾಷ್ಠೆಯ ಕಾಲವೆಂದು ಹೇಳಬೇಕು. ನಾಟ್ಯ ಸಂಗೀತದೊಂದಿಗೆ ಅಲ್ಲಲ್ಲಿ ಸಂಗೀತ ಕಚೇರಿಗಳನ್ನೂ ನಡೆಸುತ್ತಾ ಅವರು ತಾವು ಖಾನ್‌ಸಾಹೇಬರ ಪಟ್ಟಶಿಷ್ಯನೆಂಬ ಮಾತುಹುಸಿಯಲ್ಲ ಎಂದು ತೋರಿಸಿಕೊಟ್ಟರು. ೧೯೩೧ರಲ್ಲಿ ರಂಗಭೂಮಿಯಿಂದ ನಿವೃತ್ತರಾದಮೇಲಂತೂ ಅವರು ತಮ್ಮ ಘರಾಣೆಯ ಬಾವುಟವನ್ನು ಎತ್ತಿಹಿಡಿಯುವುದಕ್ಕಾಗಿಯೇ ತಮ್ಮ ಶೇಷಾಯುಷ್ಯವನ್ನು ಮುಡಿಪಾಗಿಟ್ಟಂತಾಗಿತ್ತು. ಸವಾಯ್ ಗಂಧರ್ವರು ಉತ್ತಮ ಶಿಷ್ಯಪರಂಪರೆಯನ್ನೆ ಸೃಷ್ಟಿಸಿದರು. ಅವರಲ್ಲಿ ಅನೇಕರು ಇಂದು ಅಖಿಲ ಭಾರತ ಖ್ಯಾತಿಯನ್ನು ಪಡೆದಿದ್ದಾರೆ. ವಿ.ಏ. ಕಾಗಲ್‌ಕರ್, ನೀಲ ಕಂಠಬುವಾ ಗಾಡಗೋಳಿ, ವೆಂಕಟರಾವ್ ರಾಮದುರ್ಗ, ಕೃಷ್ಣಬಾಯಿ ರಾಮದುರ್ಗ, ಗಂಗೂಬಾಯಿ ಹಾನಗಲ್ ಫಿರೋಜ್ ದಸ್ತೂರ್, ಭೀಮಸೇನ ಜೋಶಿ, ಬಸವರಾಜ ರಾಜಗುರು ಮುಂತಾದವರು ಅವರ ಶಿಷ್ಯರಲ್ಲಿ ಕೆಲವರು. ಇಲ್ಲಿನ ಒಂದು ವೈಶಿಷ್ಟ್ಯವೆಂದರೆ ಇವರಲ್ಲಿ ಹೆಚ್ಚಿನವರು ಕನ್ನಡಿಗರೇ ಎಂಬುದು. ಖಾನ್‌ಸಾಹೇಬರಂತೆಯೇ ಸವಾಯ್ ಗಂಧರ್ವರು ಕೂಡ ತಮ್ಮ ಶಿಷ್ಯರಲ್ಲಿ ಅರಸುತ್ತಿದ್ದುದು ಗುಣವನ್ನು, ಯೋಗ್ಯತೆಯನ್ನು; ಹಣದ ವ್ಯವಹಾರ ಅವರಿಗೆ ಅಷ್ಟಾಗಿ ಅರ್ಥವಾಗುತ್ತಲೇ ಇರಲಿಲ್ಲವಂತೆ.

ಸವಾಯ್ ಗಂಧರ್ವರ ವೃತ್ತಿ ಜೀವನದಲ್ಲಿ ಅವರಿಗೆ ಹತ್ತಾರು ಬಿರುದು ಬಾವಲಿಗಳೂ ಗೌರವದ ಸ್ಥಾನಮಾನಗಳೂ ತಾವಾಗಿಯೇ ದೊರೆತವು.

ಸನ್ಮಾನಗಳು

ರಾಮಭಾವು ಅವರನ್ನು ಅವರ ರಂಗಜೀವನದ ಪ್ರಾರಂಭದಲ್ಲೇ ‘ಸವಾಯ್ ಗಂಧರ್ವ’ ಎಂದು ಬಿರುದು ನೀಡಿ ಗೌರವಿಸಿದ ನಾಗಪುರವೇ ರಂಗಭೂಮಿಯಿಂದ ವರು ನಿವೃತ್ತರಾದಾಗ ಅವರನ್ನು ೧೯೩೩ರಲ್ಲಿ ಮತ್ತೆ ಸತ್ಕರಿಸಿತು. ಸಾರ್ವಜನಿಕ ಮನ್ನಣೆಯ ದೃಷ್ಟಿಯಿಂದ ಅವರ ಜೀವನದಲ್ಲಿ ೧೯೩೫ ಬಲು ಮಹತ್ವದ ವರ್ಷ. ಮುಂಬಯಿಯ ಕಾಂಗ್ರೆಸ್ ಭವನದಲ್ಲಿ ಗಾಂಧೀ ಜಯಂತಿಯ ನಿಮಿತ್ತ ನಡೆದ ಅವರ ಸಂಗೀತ ಸಭೆಯ ಅಧ್ಯಕ್ಷತೆಯನ್ನು ವೀರನಾರಿಮನ್ ವಹಿಸಿದ್ದರು. ಹೈದರಾಬಾದ್ ಕರ್ನಾಟಕ ಮಂಡಳಿ ಅವರಿಗೆ ಮಾನಪತ್ರ ನೀಡಿತು. ಮುಂಬಯಿಯಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಅವರ ಅಮೋಘ ಗಾಯನವಾಯಿತಲ್ಲದೆ ಅವರನ್ನು ಸತ್ಕರಿಸಲಾಯಿತು ಕೂಡ. ಧರಮ್‌ಪುರದ ಮಹಾರಾಜರು ಇವರಿಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಇದೇ ಸುಮಾರಿಗೆ ಅವರ ಧ್ವನಿ ಮುದ್ರಿಕೆಗಳಲ್ಲೇ ಅತ್ಯಂತ ಜನಪ್ರಿಯವಾದ ಪೂರಿಯಾ ರಾಗದ ‘ಪೀಯಾ ಗುನವಂತ’, ಪೂರಿಯಾ ಧನಾಶ್ರೀರಾಗದ ‘ಪಾರಕರ ಆರಜ ಸುನೊ’,  ಬೈರವಿ ರಾಗದ ‘ಬಿನ ದೇಖೆ ಪರೆ ನಾಹೀ ಚೈನ್’ ಎಂಬ ಮೂರು ಧ್ವನಿಮುದ್ರಿಕೆಗಳು ಹೊರಬಂದುವು. ೧೯೩೮ ರಲ್ಲಿ ಅವರು ಹುಬ್ಬಳ್ಳಿ ‘ಮ್ಯೂಜಿಕ್ ಸರ್ಕಲ್ಲಿ’ನ ವಾರ್ಷಿಕ ಉತ್ಸವದ ಅಧ್ಯಕ್ಷರಾದರು. ಮರುವರ್ಷ ಕಲ್ಕತ್ತದಲ್ಲಿ ನಡೆದ ‘ಬೆಂಗಾಲ್ ಮೂಸಿಕ್ ಕಾನ್ಫರೆನ್ಸ್‌ನಲ್ಲಿ ಇವರನ್ನು ವಿಶೇಷವಾಗಿ ಗೌರವಿಸಿ ಸುವರ್ಣಪದಕವನ್ನು ನೀಡಲಾಯಿತು. ಅವರ ಸಂಗೀತವು ಆಕಾಶವಾಣಿಯ ಅನೇಕ ಕೇಂದ್ರಗಳಿಂದ ಬಿತ್ತರಗೊಂಡಿತು.

ಬಣ್ಣ ಬಳಿದುಕೊಂಡು ರಂಗಭೂಮಿಯನ್ನೇರಿದರೂ ತಮ್ಮ ಶಿಷ್ಯ ಗಾಯಕನಾಗಿಯೇ ಉಳಿದನೆಂದು ಖಾನ್ ಸಾಹೇಬರು ಉದ್ಗರಿಸಿದ್ದು ಹುಸಿ ನುಡಿಯೇನಾಗಿರಲಿಲ್ಲ. ಸಂಗೀತ ಕ್ಷೇತ್ರದ ಅತಿರಥ ಮಹಾರಥರ ಸಮ್ಮುಖದಲ್ಲೇ ಸವಾಯ್ ಗಂಧರ್ವರು ಹಾಡಿ ಮೆಚ್ಚಿಗೆ ಗಳಿಸಿದ್ದಾರೆ. ೧೯೨೦ರಲ್ಲಿ ಪುಣೆಯ ಮಹಾನ್ ಸಂಗೀತಪ್ರೇಮಿ ಅಬಾಸಾಹೇಬ ಮುಜುಮದಾರರ ಮನೆಯಲ್ಲಿ ಒಂದು ದಿನ ಇವರ ಸಂಗೀತ ಕಾರ್ಯಕ್ರಮದ ಏರ್ಪಾಟಾಗಿತ್ತು. ಅದಕ್ಕೆಂದು ಕರೆಯಲು ಹೋದಾಗ ಸವಾಯ್ ಗಂಧರ್ವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರಂತೆ. ಇವರು ತಮ್ಮ ಅಸಹಾಯಕತೆಯನ್ನು ಸೂಚಿಸಿದಾಗಲೂ ಮುಜುಮದಾರರು ಒತ್ತಾಯಿಸಿದ್ದರಿಂದ ತಮ್ಮ ಅವಸ್ಥೆಯನ್ನು ತಾವೇ ವಿವರಿಸಿ ಶ್ರೋತೃಗಳ ಕ್ಷಮೆ ಕೇಳಬೇಕೆಂದು ಸವಾಯ್ ಗಂಧರ್ವರು ಗಾಡಿಯಲ್ಲಿ ಅಲ್ಲಿಗೆ ಬಂದರು. ಆದರೆ ಅಂದು ನಡೆದ ಆಶ್ಚರ್ಯವೆಂದರೆ ಅವರಿಗೆ ತಟ್ಟನೆ ಸ್ವರ ಹತ್ತಿತಲ್ಲದೆ ಹೊಟ್ಟೆ ನೋವಿನ ನೆನಪು ಸಹ ಆಗದಂತೆ ಹಲವಾರು ತಾಸುಗಳ ಕಾಲ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.

ಇಂಥ ಹಲವಾರು ಸಂಗೀತ ಸಭೆಗಳಲ್ಲಿ ರಸಿಕ ಕೇಳುಗರನ್ನು ಮಾತ್ರವಲ್ಲ, ಬೇರೆ ಬೇರೆ ಘರಾಣೆಗಲಿಗೆ ಸೇರಿದ ಮಹಾನ್ ಸಂಗೀತಗಾರರನ್ನು ಸವಾಯ್ ಗಂಧರ್ವರು ಮುಗ್ಧರನ್ನಾಗಿಸಿದ್ದಾರೆ. ಫಯಾಜ್‌ಖಾನರಂಥವರು ಇವರು ನಾಟಕ ಕಂಪನಿಯ ಬಿಡಾರಕ್ಕೇ ಬಂದು ಇವರ ಗಾಯನ ಕೇಳಿ ಸಂತೋಷಿಸಿದ್ದಾರೆ. ಮಂಜೀಖಾನರು ಇವರ ಸ್ವರದ ಮೋಡಿಗೆ ತಲೆದೂಗಿದ್ದಾರೆ. ಓಂಕಾರನಾಥ ಠಾಕೂರರಂತೂ ಕಲ್ಕತ್ತ ಪರಿಷತ್ತಿನಲ್ಲಿ ಅವರನ್ನು ಬಿಗಿದಪ್ಪಿ ಆನಂದಾಶ್ರುಗಳನ್ನು ಸುರಿಸಿದ್ದಾರೆ.

ಕುಟುಂಬದಲ್ಲಿ ಕಷ್ಟಗಳು

ಸಂಗೀತ ಜಗತ್ತಿನಲ್ಲಿ ಇಷ್ಟೆಲ್ಲ ಯಶಸ್ಸನ್ನೂ ಕೀರ್ತಿಯನ್ನೂ ಸವಾಯ್ ಗಂಧರ್ವರು ಗಳಿಸಿದ್ದರೂ ಮನೆಯಲ್ಲಿಯ ಅವರ ಬಾಳುವೆ ಮಾತ್ರ ಸುಖಕರವಾಗಲೇ ಇಲ್ಲ. ತಂದೆ ಗಣೇಶ ರಾಯರಂತೂ ಮಗನಿಗಾಗಿ ಕೊರಗುತ್ತಲೇ ಇಹಲೋಕ ಯಾತ್ರೆ ಪೂರೈಸಿದರು. ಇದ್ದ ಇಬ್ಬರು ಮಕ್ಕಳಲ್ಲಿ ಮಗ ಮಾತ್ರ ಮಾನಸಿಕವಾಗಿ ಅಪ್ರಬುದ್ಧಾವಸ್ಥೆಯಲ್ಲೇ ಉಳಿದುದರ ಕೊರಗು ಅವರನ್ನು ಸದಾ ಕಾಡುತ್ತಲೇ ಇತ್ತು. ಮಗಳು ಪ್ರಮೀಳಾ ಮಾತ್ರ ತಂದೆಗೆ ತಕ್ಕ ಮಗಳಾಗಿ ಬೆಳೆದು ಇವರ ಬಳಿಯೇ ಸಂಗೀತಾಭ್ಯಾಸವನ್ನು ಮಾಡಿದಳು. ಅಳಿಯ ಡಾಕ್ಟರ್ ದೇಶಪಾಂಡೆ ಕೂಡ ಸಂಗೀತದಲ್ಲಿ ಉತ್ತಮ ಪರಿಶ್ರಮ ಉಳ್ಳವರು. ಸವಾಯ್ ಗಂಧರ್ವರು ತಮ್ಮ ಜೀವನದ ಕೊನೆಕೊನೆಯ ವರ್ಷಗಳನ್ನು ಪುಣೆಯಲ್ಲಿ ಇವರ ಬಳಿಯೇ ಕಳೆದರು.

೧೯೩೨ರಿಂದ ಒಂಬತ್ತು ವರ್ಷಕಾಲ ಕುಂದ ಗೋಳದಲ್ಲೇ ಇದ್ದ ಸವಾಯ್ ಗಂಧರ್ವರ ಮನಸ್ಸೂ ಹೆಚ್ಚು ಹೆಚ್ಚಾಗಿ ಪಾರಮಾರ್ತಿಕದ ಕಡೆಗೆ ಹೊರಳತೊಡಗಿತು. ಅಲ್ಲಿಯ ದತ್ತಾತ್ರೇಯ ಮಂದಿರಕ್ಕೆ ಹೊಸ ಕಟ್ಟಡ ಕಟ್ಟಿಸುವುದಕ್ಕಾಗಿ ಮೂರು ನಾಲ್ಕು ಕಾರ್ಯಕ್ರಮ ಮಾಡಿ ಹಣ ಕೂಡಿಸಿಕೊಟ್ಟರು. ಪ್ರತಿ ಗುರುವಾರವೂ ಅಲ್ಲಿ ಅವರು ಭಜನೆ ಮಾಡುತ್ತ ‘ದತ್ತ ಗುರುದತ್ತ’ ಎಂದು ಹಾಡತೊಡಗಿದರೆಂದರೆ ಭಕ್ತರೆಲ್ಲ ರೋಮಾಂಚಿತರಾಗು ತ್ತಿದ್ದರು.

ಗುರುವಾಗಿ ಸವಾಯ್ ಯವರು

ಖಾನ್ ಸಾಹೇಬರಂತೆ ಸವಾಯ್ ಗಂಧರ್ವರು ಕೂಡ ಶಿಷ್ಯರನ್ನು ತುಂಬ ಆತ್ಮೀಯತೆಯಿಂದಲೇ ನೋಡಿಕೊಳ್ಳು ತ್ತಿದ್ದರು. ಕೆಲವರು ಶಿಷ್ಯರು ಅವರ ಮನೆಯಲ್ಲೇ ಕೆಲವು ವರ್ಷಗಳ ಕಾಲ ಇದ್ದು ಪಾಠ ಕಲಿತರು.

ಕೆಲವೇ ಆಯ್ದ ರಾಗಗಳನ್ನು ಶಿಷ್ಯರಿಗೆ ಕಲಿಸಿದರೆ ಸಾಕು, ಮುಂದಿನದನ್ನೆಲ್ಲ ಶಿಷ್ಯ ತನ್ನ ಸ್ವಂತ ಪ್ರತಿಭೆಯಿಂದಲೇ ಕಲಿಯುತ್ತಾನೆ ಎಂಬ ವಿಶ್ವಾಸ ಸವಾಯ್ ಗಂಧರ್ವರಲ್ಲೂ ಖಾನ್‌ಸಾಹೇಬರಷ್ಟೇ ಬಲವಾಗಿತ್ತು. ಆದರೆ ಶಿಷ್ಯರ ಸಂಗೀತವನ್ನು ತಾವು ಮೆಚ್ಚಿದರೆ ಖಾನ್ ಸಾಹೇಬರು ಪ್ರಕಟವಾಗಿಯೇ ಅದನ್ನು ವ್ಯಕ್ತಪಡಿಸುತ್ತಿದ್ದರು. ಸವಾಯ್ ಗಂಧರ್ವರ ರೀತಿ ಇಲ್ಲಿ ಭಿನ್ನವಾಗಿತ್ತು. ಶಿಷ್ಯರನ್ನೆಂದೂ ಅವರೆದುರೇ ಸವಾಯ್ ಗಂಧರ್ವರು ಹೊಗಳುತ್ತಿರಲಿಲ್ಲ. ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಅವರು ಅನುಸರಿಸುತ್ತಿದ್ದ ಮಾರ್ಗವೇ ಬೇರೆಯಾಗಿತ್ತು.

ಒಮ್ಮೆ ಮುಂಬಯಿಯಲ್ಲಿ ಗಂಗೂಬಾಯಿಯವರ ಸಂಗೀತ ಕಾರ್ಯಕ್ರಮವೊಂದಕ್ಕೆ ಗುರು ಸವಾಯ್ ಗಂಧರ್ವರೂ ಹೋಗಿದ್ದರು. ಕಾರ್ಯಕ್ರಮ ಮುಗಿ ದೊಡನೆಯೇ ಶಿಷ್ಯೆಯನ್ನು ಕರೆದು ‘‘ಗಂಗೂ, ಹಾಲು ಕುಡಿದು ಬರೋಣ ಬಾ’’ ಎಂದರು. ಆಗ ಶಿಷ್ಯೆಗೆ ಆದ ಆನಂದ ಅಷ್ಟಿಷ್ಟಲ್ಲ. ತಾವಾಗಿಯೇ ಹಾಲು ಕುಡಿಯಲು ಕರೆದರೆಂದಾಗ ಗುರುಗಳಿಗೆ ತನ್ನ ಸಂಗೀತ ತೃಪ್ತಿ ತಂದಿದೆಯೆಂದು ಶಿಷ್ಯೆಗೆ ಸಂತೋ. ಈ ಬಗೆಯ ಅನುಭವಗಳು ಅವರ ಎಲ್ಲ ಶಿಷ್ಯರಿಗೂ ಬಂದಿರಲೇಬೇಕು.

ಕುಂದಗೋಳದಲ್ಲಿರುವಾಗಲೇ ಸವಾಯ್ ಗಂಧರ್ವರು ನಾಡಗೇರ ವಾಡೆಯ ಋಣವನ್ನು ತಕ್ಕಮಟ್ಟಿಗೆ ತೀರಿಸಲು ಪ್ರಯತ್ನಿಸಿದರು. ನಾಟಕರಂಗದಿಂದ ಮರಳಿಬಂದು ಇವರು ಕುಂದಗೋಳದಲ್ಲಿರತೊಡಗಿದಾಗ ರಂಗನಗೌಡರ ಉತ್ತರಾಧಿಕಾರಿಯಾಗಿ ನಾನಾಸಾಹೇಬರು ಮನೆತನದ ಮುಖ್ಯಸ್ಥರಾಗಿದ್ದರು. ರಂಗನಗೌಡರಿಗೆ ಗಂಡುಮಕ್ಕಳಿಲ್ಲದ್ದರಿಂದ ನಾನಾಸಾಹೇಬರನ್ನು ದತ್ತುಪುತ್ರನಾಗಿ ಸ್ವೀಕರಿಸಿದ್ದರು. ನಾನಾಸಾಹೇಬರಿಗೂ ರಂಗನಗೌಡರಂತೆ ಉತ್ತಮ ಸಂಗೀತವನ್ನು ಕೇಳಿ ಸವಿಯುವ ಅಭಿರುಚಿಯ ಜೊತೆಗೆ ಅದನ್ನು ಸ್ವತಃ ಕಲಿಯಬೇಕೆಂಬ ಆಸಕ್ತಿಯೂ ಇತ್ತು. ಸಂಗೀತಕ್ಕೆ ಅನುಗುಣವಾದ ಕಂಠವೂ ಅವರಿಗಿತ್ತು. ತಮ್ಮನ್ನು ಶಿಷ್ಯನೆಂದು ಸ್ವೀಕರಿಸಬೇಕೆಂದು ಅವರು ಸವಾಯ್ ಗಂಧರ್ವರನ್ನು ಪ್ರಾರ್ಥಿಸಿಕೊಂಡಾಗ ಅವರು ಒಪ್ಪಿದರು. ಶಿಷ್ಯನೆಂದು ಸ್ವೀಕಾರ ಮಾಡಿದ ದಿನವೇ ತಿಲಕ ಕಾಮೋದ ರಾಗದ ಪಾಠ ಪ್ರಾರಂಭವಾಯಿತು. ನಾನಾಸಾಹೇಬರು ತಮ್ಮ ಸಂಗೀತ ಗುರುವನ್ನು ಕೊನೆಯವರೆಗೂ ಸ್ಮರಿಸಿದರು. ಕುಂದಗೋಳದಲ್ಲಿ ಇಂದಿಗೂ ಸವಾಯ್ ಗಂಧರ್ವರ ಪುಣ್ಯತಿಥಿ ಪ್ರತಿವರ್ಷವೂ ನಡೆಯುತ್ತಿದ್ದರೆ ಅದಕ್ಕೆಲ್ಲ ನಾನಾಸಾಹೇಬರೇ ಮುಂದಾಗಿ ತಮ್ಮ ಜೇಬಿನಿಂದಲೇ ಹಣ ವೆಚ್ಚಮಾಡಿ ತಮ್ಮ ವಾಡೆಯನ್ನೇ ಈ ಉತ್ಸವಕ್ಕಾಗಿ ಉಪಯೋಗಿಸಲು ಕೊಟ್ಟು ೨೦-೨೫ ವರ್ಷಗಳ ಕಾಲ ಮಾಡಿದ ಪರಿಶ್ರಮವೇ ಕಾರಣ. ಇತ್ತೀಚಿನ ಒಂದೆರಡು ವರ್ಷಗಳಿಂದ ರಾಜ್ಯ ಸಂಗೀತ ನಾಟಕ ಅಕಾಡಮಿಯ ಪ್ರತಿವರ್ಷ ಈ ಉತ್ಸವಕ್ಕಾಗಿಯೇ ಸಹಾಯಧನ ನೀಡುತ್ತಿದೆ.

ಜೀವನ ಸಂಧ್ಯೆ

ಇಳಿ ವಯಸ್ಸಿನಲ್ಲಿ ಸವಾಯ್ ಗಂಧರ್ವರಿಗೆ ರಕ್ತದ ಒತ್ತಡ ಮೇಲಿಂದ ಮೇಲೆ ತೊಂದರೆ ಕೊಡತೊಡಗಿತು. ಕಣ್ಣೆದುರಿಗಿರುತ್ತಿದ್ದ ಹುಚ್ಚ ಮಗನ ಶೂನ್ಯ ಭವಿಷ್ಯವನ್ನು ನೆನೆದು ಅವರ ಹೃದಯ ಮರುಗುತ್ತಿತ್ತು. ಅವರ ಪ್ರೀತಿಯ ಮಗಳು, ಪತಿ ನಾನಾಸಾಹೇಬ ದೇಶಪಾಂಡೆಯವರೊಂದಿಗೆ ಪುಣೆಯಲ್ಲಿರುತ್ತಿದ್ದಳು. ಮಗಳ ಮತ್ತು ಅಳಿಯರ ಒತ್ತಾಯದಿಂದಾಗಿ ಜೀವನದ ಸಂಧ್ಯಾ ಕಾಲವನ್ನು ಪುಣೆಯಲ್ಲೇ ಕಳೆದರಾಯಿತೆಂದು ನಿರ್ಧರಿಸಿದರು. ೧೯೪೦ರಲ್ಲಿ ಕುಂದಗೋಳದಲ್ಲಿಯ ಹೊಲ ಮನೆಗಳನ್ನು ಮಾರಿದರು. ತಡೆಯಲಾರದ ದುಃಖದಿಂದ ಕುಂದಗೋಳವನ್ನು ಬಿಟ್ಟರು.

೧೯೪೨ರಲ್ಲಿ ಪಾರ್ಶ್ವವಾಯುವಿನ ಹೊಡೆತದ ಆಘಾತ ಈ ಮಹಾನ್ ಕಲಾವಿದನನ್ನು ಪೂರ್ತಿ ಹಣ್ಣು ಮಾಡಿತು. ತಂಬೂರಿಯನ್ನು ಮುಟ್ಟಲೇ ಕೂಡದೆಂದು ಡಾಕ್ಟರರ ಕಟ್ಟಪ್ಪಣೆ. ಹಾಸಿಗೆಯಲ್ಲಿ ಬಿದ್ದುಕೊಂಡೇ ಕಳೆದುಹೋದ ವೈಭವದ ದಿನಗಳನ್ನು ನೆನೆಯಬೇಕು.

ಕೆಲಕಾಲ ಶುಶ್ರೂಷೆಯನಂತರ ಸವಾಯ್ ಗಂಧರ್ವರಿಗೆ ಕಾಲುಗಳಲ್ಲಿ ಶಕ್ತಿ ಬಂದಂತೆನಿಸಿತು. ಅವರು ಪುಣೆಯಲ್ಲಿ ಹೆಚ್ಚು ದಿನ ನಿಲ್ಲದೇ ಹೆಂಡತಿಯೊಂದಿಗೆ ಹುಬ್ಬಳ್ಳಿಗೆ ಬಂದರು. ಅಲ್ಲಿ ಎರಡು ವರ್ಷಕಾಲ ಅವರು ಗಂಗೂಬಾಯಿಯವರ ಮನೆಯಲ್ಲೇ ನೆಲಸಿದರು. ಇಲ್ಲಿದ್ದಾಗಲೇ ಅವರಿಗೆ ಮತ್ತೆ ತಾವು ಸ್ವಲ್ಪ ಹಾಡಬಹುದು ಎಂದೆನಿಸಿದ್ದರಿಂದ ಗಂಗೂಬಾಯಿಯವರಿಗೆ ಆಗಾಗ ಪಾಠ ಹೇಳುವುದಕ್ಕೂ ಪ್ರಾರಂಭ ಮಾಡಿದರು. ಡಾಕ್ಟರರಿಂದ ಶುಶ್ರೂಷೆಯಂತೂ ನಡೆದೇ ಇತ್ತು.

೧೯೪೬ ರಲ್ಲಿ ಸವಾಯ್ ಗಂಧರ್ವರಿಗೆ ಅರವತ್ತು ತುಂಬಿತು. ಹುಬ್ಬಳ್ಳಿಯಲ್ಲೇ ಇದ್ದ ಅವರನ್ನು ಶಿಷ್ಯರು, ಅಭಿಮಾನಿಗಳು ಆದರದಿಂದ ಗೌರವಿಸಿದರು.

ಆದರೆ ಮುಂದೆ ಆರೋಗ್ಯ ಮತ್ತೆ ಕೆಡಲು ತೊಡಗಿದಾಗ ಪುಣೆಗೆ ಮರಳಬೇಕಾಯಿತು. ೧೯೫೨ರ ಸೆಪ್ಟಂಬರ್ ೧೨ ರಂದು ಸವಾಯ್ ಗಂಧರ್ವರು ಸ್ವರ್ಗಸ್ಥರಾದರು.

ಇಂದು ಹುಬ್ಬಳ್ಳಿಯಲ್ಲಿ ಸವಾಯ್ ಗಂಧರ್ವರ ಹೆಸರಿನಲ್ಲಿ ಭವ್ಯ ನಾಟ್ಯ ಶಾಲೆಯೊಂದು ಎದ್ದುನಿಂತಿದೆ. ಕುಂದಗೋಳ ದಲ್ಲೂ ಪುಣೆಯಲ್ಲೂ ಅವರ ಶಿಷ್ಯರೂ, ಅಭಿಮಾನಿಗಳೂ ಪ್ರತಿವರ್ಷ ಅವರ ಪುಣ್ಯತಿಥಿಯನ್ನು ಅವರಿಗೆ ಪ್ರಿಯವಾದ ಸಂಗೀತ ಸೇವೆಯಿಂದಲೇ ಆಚರಿಸುತ್ತಾರೆ.