. ಅಲಾವಿ ಕುಣಿಗೆ ಅಗ್ನಿ ಇಟ್ಟವರ‍್ಯಾರು ?

ಅಲಾವಿ ಕುಣಿಗೆ ಅಗ್ನಿ ಇಟ್ಟವರ‍್ಯಾರು ಹೇಳಣ್ಣಾ
ಕಾಳಗ ಕೆಸರು ಮುಚ್ಚಿದವರ‍್ಯಾರು ಹೇಳಣ್ಣಾ
ಅದಕ ಒಂದು ಕುಡಿಕಿ ಎಳೆದು ಹಣವ ಹಾಕಿದವರ‍್ಯಾರು ಹೇಳಣ್ಣಾ
ನೆದರಿಟ್ಟು ದಾಳಿಂಬರ ಗೊನಿಗಳ ಹೂಳಿದ ಪಾಮರರಾರು ಹೇಳಣ್ಣಾ
ಶಿಶಿನಾಳದೀಶನು ಹೇಳಿದ ಹೊಸ ಕವಿತಣ್ಣಾ
ದಸದಿನದೊಳು ಇದರ ಉತಾರ ತಂದು ಹೇಳಣ್ಣಾ ||

. ಸತ್ಯ ಶರಣರು ಹುಟ್ಯಾಕ ಬರತಾರ ?

ಚಂದ ಮೊಹರಂಕ ಸುಂದ್ರರೆಲ್ಲರೂ ಆನಂದದಿಂದ ಕೂಡ್ಯಾರ ಕಡಕ
ಆನಂದದಿಂದ ಕೂಡ್ಯಾರ ಕಡಕ ದೇವರ ದರುಶನ ಹೋಗುದಕ
ಸಂದಲ ರಾತ್ರಿ ದಿನ ಗಂದ ಊದುಬತ್ತಿ ಎಡಿಯ ಒಯ್ಯೋಣ ಅವರ ತಾಣಕ್ಕ
ಎಡಿಯ ಒಯ್ಯೋಣ ಅವರ ತಾಣಕ್ಕ ಹೂವಿನ ಮಾಲಿ ಕೊರಳಿಗೆ ಹಾಕ
ಬೇಡಿಕೊಂಡವರು ಬೇಡಿದ್ದ ಕೊಡತಾರ ಬೆಳ್ಳಿ ರೊಕ್ಕ ಬಂಗಾರ ರೊಕ್ಕ
ಬೆಳ್ಳಿ ರೊಕ್ಕ ಬಂಗಾರ ರೊಕ್ಕ ಹೂವಿನ ಮಾಲಿ ಕೊರಳಿಗೆ ಹಾಕ
ಗಟ್ಟಿ ಮನಸಿನಿಂದ ಬೆಟ್ಟ ಒಡಿಯಿರಿ ಸುತ್ತುಕಡೆ ತೋರೂದು ಬೆಳಕ
ಸುತ್ತು ಕಡೆ ತೋರೂದು ಬೆಳಕ ಕೂಡಿದ ಜನ ಹತ್ತವಲ್ದೊ ಲೆಕ್ಕ
ಸತ್ಯ ಶರಣರು ಹುಟ್ಯಾಕ ಬರತಾರ ಗಟ್ಟಿಯಾಗಿ ನಮಗ ಹೇಳಬೇಕ
ಗಟ್ಟಿಯಾಗಿ ನಮಗ ಹೇಳಬೇಕ ಹೇಳದಿದ್ದರ ಆಗೂದು ಫರಕ
ಬಂದರ ಹೇಳರಿ ಬಾರದಿದ್ದರ ಮುಂದ ಹುಕುಮವಿಲ್ಲ ಹಾಡುದಕ

. ಮಕ್ಕಾ ಹುಟ್ಟಿದ ವಿಸ್ತಾರ ಹೇಳಬೇಕರಿ

ಮೊದಲಿಗೆ ನೆನೆಯುವೆ ಶಕ್ತಿಯನಾ | ಯುಕ್ತಿವಂತ ಮಾದೇವರನಾ
ಕೂಡಿದಂತ ಗುರು ಹಿರಿಯರನಾ | ನೀಡರಿ ಕರುಣಾ
ಸಣ್ಣ ಹುಡುಗನಾ ಮತಿಹೀನಾ |
ಮಕ್ಕಾ ಹುಟ್ಟಿದ ವಿಸ್ತಾರನಾ | ಹೇಳಬೇಕರಿ ಮೊದಲಿನ ಜನಾ
ಯಾವ ಕಟ್ಟಶಾನ ಮಕ್ಕಾಮದೀನಾ | ಹೇಳರಿ ಇದನಾ
ಹೇಳದಿದ್ದರ ಆಗೂದು ವಜನಾ ||
ಹೆಸರು ಹೇಳಬೇಕೋ ಸಂಪೂರಣಾ | ಉಸರ ಹಾಕಬ್ಯಾಡಪ್ಪಾ ನೀನಾ
ಎಷ್ಟು ಮಂದಿ ಕಟ್ಯಾರದನಾ | ಗುರುತ ಇದ್ದರ ತಿಳಿಸರಿ ಪೂರ್ಣಾ
ಯಾವ ಶರಣಗ ಆಗೇತಿ ಮರಣಾ | ಹೇಳರಿ ಇದನಾ
ಹೇಳದಿದ್ದರ ಆಗೂದು ವಜನಾ |
ಜಿಗದಾಡತಿದಿ ಒಂದೇ ಸವನಾ | ಜಗ್ಗಿ ಕಟ್ಟುವೆ ಹಗ್ಗವನಾ
ಬಿಚ್ಚಿಕೊಂಡು ಹೋಗಲೋ ಜಾಣ | ಹಿಡಿಕೋಣಾ
ದಿಕ್ಕು ತಪ್ಪಿ ಕುಂತೆಲ್ಲೊ ನೀನಾ
ಜಾಲಗಾರ ಬಲಿ ಹಾಕಿದನಾ | ಬಂದ ಬಿದ್ದೈತಿ ಒಂದ ಮೀನಾ
ಚೂರಿ ಹಾಕಿದವನ ಹೆಸರೇನಾ | ಹೇಳರಿ ಇದನಾ
ಹೇಳದಿದ್ದರ ಆಗೂದು ವಜನಾ ||
ಬಾಳದಿವಸ ಬೆಳದಿಯೋ ನೀನಾ | ಬೆಳಕ ಕೇಳಿ ಬಂದೇನಿ ನಾನಾ
ತೋಡಿ ಕೊಟ್ಟ ಹಾಡ ಪದಗಳನಾ | ತಿರಿವ್ಯಾಡಿ ಗೋಣಾ
ಮಂದಿ ನಿನಗ ಅಂತಾರ ಕೋಣಾ ||
ಸೊಡ್ಡ ಹೊಡದ ಹಿಡಿ ಕುಸ್ತಿಯನಾ | ಪೇಚಿನೊಳಗೆ ಹಾಕುವೆ ಗಾಣಾ
ಕಣ್ಣುಕಟ್ಟಿ ಬಿಟ್ಟೇನಿ ನಿನ್ನ | ಹಿಡಿಕೋಣಾ
ಬೆಲ್ಲದ ಆಸೇಕ ಬಂದವನಾ ||
ಮೂಗ ಮುರದ ಮುರಕಾ ಮಾಡುವನಾ | ಶಿಖಂಡಿ ಅಂತಾರೋ ಎಲ್ಲಾ ಜನಾ
ತಿಗ ತಿರುವಿ ಮಾಡುವೆ ಹಗಣಾ | ತಿರಿವ್ಯಾಡಿ ಗೋಣಾ
ಸೊನ್ನಿಮಾಡಿ ಕರೆದೆಲ್ಲೋ ನೀನಾ ||
ಶರಣ ಮಾಡಿ ಹಿಡಿ ಗುರುಚರಣಾ | ಸಾರಿ ಹೇಳಿದನೋ ಕವಿ ಸಿದ್ದಣ್ಣಾ
ಚಿಕ್ಕಗ್ರಾಮ ಚಿಕ್ಕುಂಬಿ ಸ್ತಾನಾ | ಗುರು ನೆನದಾನ ನಾಗಲಿಂಗನಾ
ಅವರ ದಯಾ ನಮಗಿರುವುದನಾ ||
ಮೊದಲಿಗೆ ನೆನೆಯುವೆ ಶಕ್ತಿಯನಾ ಯುಕ್ತಿವಂತ ಮಾದೇವರನಾ
ಕೂಡಿದಂತ ಗುರುಹಿರಿಯರನಾ ನೀಡರಿ ಕರುಣಾ
ಸಣ್ಣ ಹುಡುಗನಾ ಮತಿಹೀನಾ ||

. ಸಲ್ಲು ಸಲ್ಲಿಗೊಮ್ಮೆ ಅಲ್ಲಾನ್ನ ನೆನಸತೈತಿ

ಕಲ್ಲು ಪಡಿವೊಳಗ ಒಂದು ಹಕ್ಕಿ ಐತರಿ
ಸಲ್ಲು ಸಲ್ಲಿಗೊಮ್ಮೆ ಅಲ್ಲಾನ್ನ ನೆನಸತೈತರಿ | ಬಲ್ಲವರು ಹೇಳರಿ
ಮಾರಿ ಮ್ಯಾಲಕ ಮಾಡಿದರ ದೂರದಿಂದ ನಿಮಗ ಕಾಣತೈತರಿ
ತೋರಿ ತೋರದ್ಹಾಂಗ ಗುಪ್ತರೂಪದಿಂದೈತರಿ
ಹೊರಗ ಒಳಗ ಸರಿಯಾಗಿ ಕಾಣತೈತರಿ
ಐದು ಮಾರ್ಗದಿಂದ ಇದು ಕೂಡಿ ಬರತೈತರಿ
ಐದು ಕೂಡಿ ಏಕಕಾರವಾಗಿ ತೋರತೈತರಿ
ಅರಿವಿನೊಳಗ ಮರವಿನೊಳಗ ಹೊರಗ ಒಳಗ ಅದು ಕಾಣತೈತರಿ
ದೂರ ಮಾತ್ರ ಇಲ್ಲರಿ ನಿರಾಕಾರದಲ್ಲಿ ನಿಜವಸ್ತು ಆಗಿ ತೋರತೈತರಿ
ದೇಶದೊಳಗೆ ಶಿಶುನಾಳದೀಶನ ದಯದಿಂದ
ಪದವ ಮಾಡ್ಯಾರೋ ಶಿಶುನಾಳ ಶರೀಫಸಾಹೇಬರಾ

. ಬಣ್ಣ ಹೇಳಬೇಕಣ್ಣಾ

ಖಂಡ ಕುದಿಯತೈತಿ ಬ್ಯಾಟಿ ಮೇಯತೈತಿ
ಚರ್ಮ ಬಿದ್ದೈತರಿ ಬಿಸಲಿಗೆ | ಇದರ ಬಣ್ಣ ಹೇಳಬೇಕಣ್ಣಾ
ಮೂಗನ್ಯಾಗ ಪೋಣಸೇವಿ ಮೂಗುದಾಣಾ
ಇದರ ಉತ್ತರ ಬಾರದಿದ್ದರ | ಕೇಳಿ ಬಾರೋ ನಿಮ್ಮ ಗುರುವಿನಾ
ಕೇಳಿಬಾರೋ ನಿಮ್ಮ ಗುರುವಿನಾ | ಗುರುವಿಗೆ ಜಡದೇವೋ ಅಗಳಿನಾ ||

. ಮಂತ್ರದ ಲೆಕ್ಕ ಕೇಳೇನಿ ನಾನ

ಸರ್ವರಿಗೆ ವಿನಯದಿ ಮಾಡುವೆ ಶರಣಾ ತುರಾಯಿದ ಸ್ಥಲನಾ
ಅಜಮೀರ ಪೀರನಾ ಗುರುವಿಗೆ ಮಾಡುವೆ ಸಲಾಂ ಮೊದಲಾ
ಯುನೂಸ ಪೈಗಂಬರನ ನುಂಗಿದ ಮೀನಾ | ಕೇಳರಿ ಸಂದ ತಿಳಿಸುವೆ ನಾನಾ
ಮೀನದ ಹೊಟ್ಟಿಯಲ್ಲಿ ಶರಣರ ಸ್ಥಾನಾ | ನೀರಿನಲ್ಲಿ ಸಂಚಾರ ನಾಲ್ವತ್ತು ದಿನಾ
ಮಂತ್ರವ ಜಪಿಸುತ ಶರಣರ ಸ್ಥಾನಾ | ಜಲಸಾಗರದಲ್ಲಿನ ಸಂಚಾರ ಮೀನಾ
ಮಂತ್ರದ ಸರಳ ಲೆಕ್ಕ ಕೇಳೇನಿ ನಾನಾ | ಮಂತ್ರದ ಉದ್ದಗಲ ಕೇಳೇನಿ ಪಿಂಡನಾ
ತಿಳಿದಿದ್ರ ಕೇಳು ಹೇಳುವೆ ನಾನಾ | ಶಾಹೀರ ನನ್ನ ಶಾಣೇತನ ತಿಳಿದುಕೋ ಇನ್ನಾ
ಅಲ್ಲಾನ ಹುಕುಮಾತೋ ಶರಣರಿಗೆ ತೀವ್ರನಾ | ಅಲ್ಲಾನಾ ಕರುಣಾ ಇರಬೇಕೋ ಪೂರ್ಣಾ
ನುಂಗಿದ ಸ್ಥಾನದಲ್ಲಿ ಬಂದೀತೋ  ಮೀನಾ | ಶಿವನಾಟ ಯಾರಿಗೆ ತಿಳಿಲಿಲ್ಲೋ ಪೂರ್ಣಾ
ಮೀನಕೆ ಕೆಮ್ಮು ಬಂತು ಕೇಳ್ರಿ ಸಂದನಾ | ಮೀನದ ಬಾಯಿಂದ ಬಂದಾರೋ ಶರಣಾ
ಬೆಳಗು ಜಾವದಲ್ಲಿ ಪಡದಾರೋ ಮುಕ್ತಿನಾ | ಅಂದಿನ ನಮಾಜ ಇಂದಿಗೆ ನೇಮನಾ
ಮುಗಸೇನಿ  ಸ್ವಲ್ಪಕ ಶರಣರ ಸಂದನಾ | ಉಳದೀತೋ ಕಸರ ತಿಳಿಸುವೆ ಮುಂದನಾ
ಕೆರೂರ ಶಾರ ಮೋಜಿನ ಊರನಾ | ಶಾಹೀರ ಇಮಾಮ ಅಜಮೀರ ಗೈಬೂನಾ ||
. ಲಾ ಇಲಾಹ ಇಲ್ಲಲ್ಲಾ

ಲಾ ಇಲಾಹ ಇಲ್ಲಲ್ಲಾ ಅಂತಾನ ಮುಲ್ಲಾ
ಓಣಿ ಹಿರಿಯರು ಮುಲ್ಲಾನ ಕರಸ್ಯಾರಲ್ಲಾ
ಮೂರು ಕಾಲೀನ ಬ್ಯಾಟೀಯ ತರಸ್ಯಾರಲ್ಲಾ
ಒಂದು ಕಣ್ಣು ಒಂದು ಕಿವಿ ಇದ್ದೀತಲ್ಲಾ
ಬಾಲ ಮೊದಲಿಗೆ ಇದ್ದೇ ಇಲ್ಲಾ
ಕೋಡು ಮುರಿದು ಹೋಗಿತ್ತಲ್ಲಾ
ಕಣ್ಣು ಇಲ್ಲದ ಮುದುಕಿ ಬ್ಯಾಟಿ ನೋಡ್ಯಾಳಲ್ಲಾ
ಕೈಯ ಇಲ್ಲದಾಂವ ಚೂರಿ ಹಾಕ್ಯಾನಲ್ಲಾ
ಬೆಂಕಿ ಇಲ್ಲದ ಅಡಗಿ ಕತಕತ ಕುದ್ದೀತಲ್ಲಾ
ಹೆಜ್ಜಿ ಹುಡುಗರ ಬಾಯಾಗ ನೀರು ಬಂದಾವಲ್ಲಾ
ಕೈಯ ಇಲ್ಲದವರು ಬಂದು ಉಂಡಾರಲ್ಲಾ
ಹಿಂದು ಮುಂದು ಹಾಡಾವರಿಗೆ ಸೇರವಾನ ಸಿಗಲಿಲ್ಲಾ
ಗುರು ಗುಂಡಪ್ಪಣ್ಣ ಕವಿ ಮಾಡ ಹೇಳ್ಯಾನಲ್ಲಾ
ಅಗಸಿ ಹುಡುಗರು ಇದರ ಜವಾಬು ಕೇಳ್ಯಾರಲ್ಲಾ

. ಇದು ಏನು ಸೋಜಿಗ ಹೇಳೊ

ಒಂದು ಸವಾಲು ಹಾಕೇನಿ ಶಾಹೀರ ನಿನಗ
ಒಂದು ಜವಾಬು ಕೊಡೋ ನಿಂತು ಸಭಾದೊಳಗ ||
ಏಳು ಜಲ್ಮದ ಪುರಸೊತ್ತು ಕೊಟ್ಟೇನಿ ನಿನಗ
ಸತ್ ಹುಟ್ಟಿ ಬಂದು ಹೇಳರಿ ನಮಗ
ನಬಿಸಾಹೇಬರು ಸ್ವರ್ಗಕ್ಕೆ ಹೋಗು ಹಾದಿವೊಳಗ
ಐವತ್ತು ಲಕ್ಷ ಬಂಟಿಗಳ ಕಂಡರಾಗ
ನಿಂತು ನೋಡ್ಯಾರೋ ಜುಬ್ರಹೀಲರಾಗ
ಇದು ಏನು ಸೋಜಿಗ ಹೇಳೋ ನಮಗ
ಒಂದು ಒಂಟಿ ತರಬಿ ನೋಡಿದರಾಗ
ಸಂದಕ ಹೇರ‍್ಯಾವ ಒಂಟಿಯ ಮ್ಯಾಗ
ಒಂದು ಸಂದಕ ಬಿಚ್ಚಿ ನೋಡಿದರಾಗ
ಲೆಕ್ಕಿಲ್ಲದ ತತ್ತಿಗಳು ಅದರಾಗ
ಒಂದು ತತ್ತಿ ತಗೊಂಡರು ಕೈಯಾಗ
ಕೀಲಿ ಹಾಕಿತ್ತೋ ತತ್ತಿಯ ಬಾಯಾಗ
ಆಕೀಲಿ ತೆರಿತೋ ಇನ್ಹ್ಯಾಂಗ
ಕೈಯ್ಯಾಂವ ಕೊಟ್ಟಾನೋ ಹೇಳೋ ನಮಗ
ಒಂದು ತತ್ತಿ ಬಿಚ್ಚಿ ನೋಡಿದರಾಗ
ಮೂರು ಲೋಕದ ಜನ ಇತ್ತೋ ಅದರಾಗ
ಏಳು ಬುರ್ಜದ ಭೂಮಿಯ ತೆಳಗ
ಒಂದಾಕಳಿತ್ತೋ ಕಲ್ಲಿನ ಮ್ಯಾಗ
ಆ ಕಲ್ಲಿನ ಹೆಸರು ಹೇಳೋ ನಮಗ
ಹೇಳದಿದ್ದರ ಕೋದೇವು ನಿಮ್ಮ ಮೂಗ
ಈ ಮಾತು ಮದಾರನ ಬಲದಾಗ
ಗುರು ಹುಸೇನಸಾಹೇಬರು ಒಲಿದಾರೋ ನಮಗ
ಸುತ್ತ ನಾಡಿನ ಮ್ಯಾಗ ಹತ್ತು ದಿನದಾಗ
ಧೀನೆಂಬ ಶಬ್ದ ಅಲಿ ಹಬ್ಬದಾಗ ||

. ಮುಲ್ಲಾನ ಮಸೂತಿ ಎಲ್ಲಿತ್ತೋ ?

ಬೋಕಿಯೊಳಗ ಮೂರು ಲೋಕ ಹುಟ್ಟಿತ್ತೋ | ಆಕುಲ ಈ ಕುಲ ಎಲ್ಲಿತ್ತೋ ?
ಜ್ವಾಕೀಲಿ ಹೇಳತೇವಿ ಹದಿನೆಂಟು ಜಾತಿಗೆ ಏಕಮುಂಡಿಗಿ ಮಾತಿದು ಗೊತ್ತೋ
ಗುಲ್ಲ ಮಾಡಿ ಗುದ್ದಾಟದಲಾವಿಗೆ ಬೆಲ್ಲ ಓದಿಸುವುದೆಲ್ಲಿತ್ತೋ
ಬಲ್ಲವರಾದರೆ ತಿಳಿದು ಹೇಳರಿ ಮುಲ್ಲಾನ ಮಸೂತಿ ಎಲ್ಲಿತ್ತೋ
ಫಕೀರನಾಗಿ ಪಾಪ ರಿವಾಯಿತೋ ವಿಕಾರಿ ಕಲಿ ಕರ್ಮದ ಗೊತ್ತೋ
ಠಿಕಾಣಿಗೆ ಶಿಶುನಾಳದೀಶನಿಗೆ ಸವಾಲಿಗುತ್ತರ ಹೆಚ್ಚಿತ್ತೋ ||

೧೦. ಚುಟುಕು ಪದಗಳು

ಶರಣರು ಹೊರಟಾರು ಕುದುರಿಯನೇರಿ
ಕುದುರಿಯನೇರಿ ರಣಕೆ ಕಾಲುಕೆದರಿ
ಮಧ್ಯಮಂಡಲದೊಳಗೆ ಇದ್ದಾನೋ ವೈರಿ
* * *
ಐಸೂರು ಮೊದಲೊ ಮೊಹರಂ ಮೊದಲೋ
ಬಲ್ಲವರು ಹೇಳರಿ ಇದರ ಅರ್ಥ
* * *