೯೯. ಬೀಜ ಮೊದಲೋ ಗಿಡಾ ಮೊದಲೋ ?

ಸರ್ವ ಜನರೆಲ್ಲಾ ಭಕ್ತಿಲಿಂದ ಕೂಡೈತಿ ಹೆಜ್ಜಿ ಮಜಲಾ
ಒಂದ ಗಿಡಾ ಬಂದೀತಲ್ಲಾ ಆಕಾಸದಿಂದ ಧರಣಿಮೇಲಾ
ಎಂಬತ್ನಾಲ್ಕು ಲಕ್ಷ ಜೀವರಾಶಿಗಳೆಲ್ಲಾ ಜನಕಿದು ಸುಳ್ಳೇನಲ್ಲಾ
ಗಿಡಾ ಮೊದಲು ಹುಟ್ಟೇ ಇಲ್ಲಾ ಬೀಜಿಲ್ಲದ ಗಿಡಾ ಹ್ಯಾಂಗ ಬಂತರಿ ಮೊದಲಾ
ಕೋಳಿ ಮೊದಲೋ ತತ್ತಿ ಮೊದಲೋ ಬೀಜ ಮೊದಲೋ ಗಿಡಾ ಮೊದಲೋ
ಇದು ನಿನಗ ಗೊತ್ತ ಇಲ್ಲಾ ಜನಕಿದು ಸುಳ್ಳೇನಲ್ಲಾ
ಮಿಂಚು ಗುಡುಗು ಮೋಡ ಎಲ್ಲಾ ಮಿಂಚು ಮೊದಲು ಸದ್ದ ಆಗೈತಿ ನೀರ ಎಲ್ಲಾ
ಮೇಘರಾಜ ಹೆಣ್ಣುಗಂಡು ಹೇಳ ಮೊದಲಾ ಹೆಣ್ಣಿಗಿಂತ ಗಂಡು ಮೇಲೆ
ಗಂಡು ಅಂತ ಕರಿತಾರಲ್ಲಾ ಆಕಾಶ ಅಂತಾರಿ ಮೊದಲಾ
ಮೋಡಿಲ್ಲದ ಆಕಾಶ ನಿಂತೇ ಇಲ್ಲಾ ಸೂರ್ಯಚಂದ್ರ ಜೋಡಿ ಮೊದಲಾ
ತಿರಗತಾರ್ರಿ ರಾತ್ರಿ ಹಗಲಾ ಜನಕಿದು ಸುಳ್ಳೇನಲ್ಲಾ
ಇದು ನಿನಗ ಗೊತ್ತ ಇಲ್ಲಾ ಉತ್ತರ ಹೇಳದೆ ಬಿಡೂದಿಲ್ಲಾ
ತಾಯಿ ತಂದಿ ಹೆಸರ ಇಲ್ಲಾ ಹಣ್ಣು ಕಾಯಿ ಹೂಕಾ ಆಗೈತಿ  ಮೊದಲಾ
ಚಿತ್ತಗೊಟ್ಟು ಕೇಳೋ ಮೊದಲಾ ಹೇಳಿದಂತೆ ಮಾಡು ಮೊದಲಾ
ಮುದ್ದತ್ತು ಕೊಡತೇನಿ ಮೂರು ವರ್ಷ ಮೂರು ದಿವಸದ ಮೇಲಾ ||

೧೦೦. ಸವಾಲು ಬಂತೊ ನಿನ್ನ ಮ್ಯಾಲಾ
ಬಾ ಬಾರೋ ನನ್ನ ಗೆಳೆಯಾ ಸವಾಲು ಬಂತೋ ನಿನ್ನ ಮ್ಯಾಲಾ
ಹಲ್ಲಿಯ ಶಕುನ ಕೇಳಿ ಬಾರೋ ಧೈರ್ಯ ಇದ್ದರ ನಿನ್ನಲ್ಲಿ
ಬಡ್ಡಿ ನೋಡು ತೇಗಿಂದಾ ಎಲಿಯ ನೋಡ ಮಾವಿಂದಾ
ಹೂವು ಮಲ್ಲಿಗಿ ಕಾಯಿ ಪ್ಯಾರಲ ಒಡದ ಹೇಳ ಒಂದ ಒಂದಾ
ಬಗ್ಗಿ ಬಗ್ಗಿ ನೋಡತಾಳೋ ಲಮಾಣಿ ಕೊರಳಾಗ ಕಟ್ಯಾಳೋ ಕರಿಮಣಿ
ಉಡಿಯಾಗ ಇಟ್ಟಾಳೋ ಉತ್ತರಾಣಿ ಬಗಲಿಗೆ ಹಾಕ್ಯಾಳೋ ತತ್ತರಾಣಿ
ಕಾಗಿ ಮುಟ್ಟSದ ಕಂಡಿSದು ನಾಯಿ ಮುಟ್ಟದ ಎಲುಬಿSದು
ಕೆಲಸಕ್ಕೆ ಬಾರದ ಚರಮಿದು ಒಡದ ಹೇಳೋ ಒಂದ ಒಂದಾ
ಊರ ಮುಂದಿನ ತೋಟಿದು ನೋಡಾಕ ಬಲು ಚಂದಾ
ಸಾವಿರಾರು ಪಕ್ಷಿಗಳು ಮನಿಮಾಡ್ಯಾವ ಬಂದ ಬಂದಾ ||

೧೦೧. ದೃಷ್ಟದುಮ್ಮಗ ಟಗರಿನ ತಲಿಯಾಕ

ಯಾಕೋ ತಮ್ಮಾ ಯಾವೂರಾಂವ ಬಾರೋ ಮುಂದಕ
ಬಾರೋ ಮುಂದಕ ನನಗ ನಿನಗ ಬಿದ್ದೈತಿ ಬೆಳತನಕ
ದೃಷ್ಟದುಮ್ಮಗ ಟಗರಿನ ತಲಿಯಾಕ ಹೇಳಿ ಹೋಗಬೇಕ
ಹೇಳಿ ಹೋಗಬೇಕ ಇಲ್ಲದಿದ್ದರೆ ಬಿಡಾಕ ಇಲ್ಲ ನಾವು ಕೆಡಕ

೧೦೨. ಶಾಸ್ತ್ರ ಸುಳ್ಳೇನಲ್ಲಾ

ಪಹೆಲೆ ಪ್ರಥಮ ಕದನ ಇದ್ದಿದ್ದಿಲ್ಲಾ
ನಿನ್ನೆ ಮೊನ್ನಿನ ಸುದ್ದಿ ನನಮುಂದ ಹೇಳಬ್ಯಾಡ ನಿಂತು ಹಗಲೆಲ್ಲಾ
ಸಮುದ್ರದ ದಂಡೀಲೆ ಬಂತೋ ಒಂದು ಕಲ್ಲಾ
ಕಲ್ಲು ಒಡೆದು ಆವಾಗ ನೋಡ್ಯಾರಲ್ಲಾ ಹುಲಿಯು ಸೇರೇತಲ್ಲಾ
ಕಲ್ಲಿನ ಮ್ಯಾಲೆ ಬೇವಿನ ಮರ ಹುಟ್ಟೀತಲ್ಲಾ
ಎಲಿಮ್ಯಾಲೆ ಕಿಲೇವೊಂದು ಕಟ್ಟೇತಲ್ಲಾ ಶಾಸ್ತ್ರ ಸುಳ್ಳೇನಲ್ಲಾ
ಕೀಲಿ ಹಾಕಿ ಬಿಗದೇವಿ ತಮ್ಮಾ ತಗ್ಯಾಂಗಿಲ್ಲಾ
ತಗಿಯದಿದ್ದರ ಗೆಳೆಯ ನಿನ್ನ ಬಿಡೂದಿಲ್ಲಾ ಉತ್ತರ ಕೊಡಬೇಕಲ್ಲಾ
ಶಾಣ್ಯಾನಂತಾರ ತಮ್ಮಾ ನಿನಗ ಓಣ್ಯಾಗೆಲ್ಲಾ
ಮಂದಿಮುಂದ ಮಾಡತೀದಿ ಒಣಡೌಲಾ ನಿನ್ನ ಕೇಳಾವರಿಲ್ಲಾ
ಬಂಡಿವಾಡ ಊರ ನೋಡ ರಂಗಿಲಾಲಾ
ಗುಡಿ ಓಣಿ ಹುಡುಗರು ಹಾಡ್ಯಾರಲ್ಲಾ ಕೇಳರಿ ಜನರೆಲ್ಲಾ ||

೧೦೩. ಒಡದ ಹೇಳರಿ

ಸತ್ಯದೊಂದ ಮಾತ ನಿನಗ ಹೇಳತೇನಿ ಕುಂತ ಸಭಾದೊಳಗ
ಚಂಡವಿಲ್ಲದ ಮುಂಡ ತಿರಗತೈತಿ ಹುಬ್ಬಳ್ಳಿ ಪ್ಯಾಟ್ಯಾಗ
ಜೀವ ಅದಕ ಇಲ್ಲ ಬಾಲ ಅದಕ ಇಲ್ಲ ಕೊಂಬೆರಡು ಕೊರಳಾಗ
ಕಣ್ಣುಗುಡ್ಡಿ ಕಾಣಸತಾವ ಮೂರು ಎದಿಯಮ್ಯಾಗ
ಆಸತ್ತ ಬ್ಯಾಸತ್ತ ಜಳಕ ಮಾಡತೈತಿ ದೊಡ್ಡ ಮಡವಿನೊಳಗ
ಜಳಕ ಮಾಡಿ ಅದು ಹೋಗಿ ಮುಲಗತೈತಿ ರಣರಂಗ ಬೈಲಾಗ
ಇದನ ಒಡದು ನೀವು ಹೇಳದಿದ್ದರ ಹಲಗಿ ಇಡರಿ ಕೆಳಗ
ಬಳಿಯ  ಇಡಿಸಿ ಸೀರಿ ಉಡಿಸಿ ಕಳಸತೇವಿ ನಿಮಗ ||

೧೦೪. ಒಂಟಿ ಕೊಳ್ಳಾಗ ಗಂಟಿ ಕಟ್ಟಿದವನಾರು ?

ಸವಾಲ ಹಾಕತೀದಿ ಹಾಳರಟಿ ನಿಮಗೇನ ತಿಳುವತೈತಿ ಮುಳಬುಟ್ಟಿ
ಮಾತನಾಡತಿದಿ ಉಪರಾಟಿ ನಮ್ಮ ಜಪಟ್ಯಾಗ ಸಿಕ್ಕು ನೀ ಬಾಯಿ ಬಿಟ್ಟೆ
ಶಿವಾತಂದ ಬೆಟ್ಟಿ ನಿಮ್ಮ ಬೆಟ್ಟಿ ಮುಂದಿನ ಎಚ್ಚರ ನೀ ಬಿಟ್ಟಿ
ನಮ್ಮ ಬಲಿಯೊಳಗ ಹೋಗಲೇ ದಾಟಿ ನಿಮ್ಮ ಮನಿಯ ಮುಂದ ಗಿಡಹುಟ್ಟಿ
ಗಿಡದ ಮೇಲೆ ನಿಂತಿತೋ ಒಂಟಿ ಒಂಟಿಯ ತಲಿಮೇಲೆ ಗಿಡಹುಟ್ಟಿ
ಆ ಗಿಡದ ಮೇಲೆ ಹುಲಿ ಮನಿಕಟ್ಟಿ ಹನ್ನೆರಡು ಗಾವಿಲ ಕಿಲೆಕಟ್ಟಿ
ಆ ಕಿಲ್ಲೇದವೊಳಗ ಹೊಂಟಿತೋ ಬ್ಯಾಟಿ ಬ್ಯಾಟಿಯ ಹೊಟ್ಟೀಲೆ ಮರಿಹುಟ್ಟಿ
ಅರವತ್ತು ಲಕ್ಷ ಆಗ್ಯಾವ ಒಂಟಿ ಆ ಒಂಟಿಯ ಕೊರಳಾಗ ಒಂದೊಂದು ಗಂಟಿ
ಯಾವ ಕಟ್ಟಿ ಬಿಟ್ಟಾನೋ ನೀ ಹೇಳೋ ಘಟ್ಟಿ ಬಂದಾರೋ ಮೂರು ಲೋಕವ ದಾಟಿ
ಆಕಾಶಕ ಕೇಳೀತು ಸಪ್ಪಳ ಹುಟ್ಟಿ ಹಾರಿಹೋತೋ ನಿನ್ನ ಗುಳಬುಟ್ಟಿ
ನಮ್ಮ ಜಪಾಟ್ಯಾಗ ಸಿಕ್ಕು ಬಾಯ್ಬಿಟ್ಟಿ ಸವದತ್ತಿ ಊರ ಕಿಲೇ ಕಟ್ಟಿ
ಗುರು ಹುಸೇನಿ ನಮ್ಮ ಭೆಟ್ಟಿ ಹಾರಿಹೋತೋ ನಿನ್ನ ಗುಳಬುಟ್ಟಿ ||

೧೦೫. ಏಳೋ ಗೆಳಿಯಾ ಎಷ್ಟೊತ್ತ ಮಲಗಿದಿ

ಏಳೋ ಗೆಳಿಯಾ ಎಷ್ಟೊತ್ತ ಮಲಗಿದಿ ಬಳ್ಳಿಗಿಡಾ ಬಂದು ಹೊತ್ತಾತ
ಬಳ್ಳಿ ಗಿಡಾ ಬಂದು ಹೊತ್ತಾತ ಹುಡುಗರು ಬಂದು ಬಾಳ ಹೊತ್ತಾತ
ಮನಿಗಿ ಹೋಗಿ ತಾಯಿ ಕೇಳತಾನ ಗೆಜ್ಜಿಸರಾ ನಂದೆಲ್ಲೈತೆ
ಗೆಜ್ಜಿಸರಾ ನಂದೆಲ್ಲೈತೆ ದೇವರ ಕೂಲಿ ಮೂಲ್ಯಾಗೈತೆ
ದೇವರ ಕೋಲಿ ಮೂಲ್ಯಾಗ ಹುಡುಕುದರಾಗ ಗೆಜ್ಜಿಸರದ ಮ್ಯಾಲ ಸರಪಿತ್ತ
ಗೆಜ್ಜಿಸರದ ಮ್ಯಾಲ ಸರಪಿತ್ತ ಹುಡುಗನ ಕಿರಬಳ್ಳ ಕಚ್ಚಿತ್ತS
ಕತ್ತಲರಾತ್ರಿ ಮರುದಿನ ಮುಂಜಾನೆ ಮಣ್ಣಿಗೆ ತಯ್ಯಾರ ಆಗಿತ್ತS
ಮಣ್ಣಿಗೆ ತಯ್ಯಾರ ಆಗಿತ್ತ ಮಂದಿ ಬಳಗ ಬಹಳ ಕೂಡಿತ್ತS ||

೧೦೬. ಉತ್ತರ ಹೇಳಬಾರೋ

ಮೂರು ಕಾಲಿನ ಕುದುರಿಗೊಂದು ಜೀನವ ಬಿಗಿದೈತೋ
ತೊಡಿಮ್ಯಾಲ ಕಸೂತಿ ಆಲದ ಮರವೊಂದು ಬೆಳದೈತೋ
ಆಲದ ಮರದಾಗ ಪಕ್ಷಿ ಗೂಡವ ಕಟ್ಟೈತೋ
ಗೂಡಿನೊಳಗ ಪಕ್ಷಿಯು ಮರಿಯ ಮಾಡೈತಿ
ಪಕ್ಷಿಗೊಂದು ಸರ್ಪವ ಕಚ್ಚೈತೋ
ಪಕ್ಷಿಯ ಕಣ್ಣೀರಾ ಸಾತ ಸಮುದ್ರಾಗಿ ಹರದೈತೋ
ಸಮುದ್ರದೊಳಗ ಹೆಣ್ಣುಗಂಡು ಮೀನೈತೋ
ಮೀನದ ಡುಬ್ಬದ ಮ್ಯಾಗ ನೀರಿನ ಹಂಸವ ಗಟ್ಟೈತೋ
ಹಂಸಿನೊಳಗ ಹುಲ್ಲುಕಡ್ಡಿ ಬೆಳದೈತೋ
ಹುಲ್ಲುಕಡ್ಯಾಗ ದಂಡು ಬಂದು ಇಳದೈತೋ
ದಂಡಿನೊಳಗ ಒಂದು ಆನಿ ನಿಂತೈತೋ
ಆನಿಯ ಹೊಟ್ಯಾಗ ಬುವಿಕಲ್ಲು ಬೆಳದೈತೋ
ಇದರ ಉತ್ತರ ಹೇಳಬಾರೋ ಶಾಹೀರಾ
ಹೇಳದಿದ್ದರ ಗೆಜ್ಜಿಯ ಬಿಚ್ಚೂದು ಕರಾರಾ ||

೧೦೭. ಟೊಂಗಿಗೆಷ್ಟು ಕಾಯಿ ಆಗತೈತಿ

ಪಹೆಲಿ ಪ್ರಥಮ ಬಳ್ಳಿ ಹೆಸರು ಹೇಳಬೇಕಲ್ಲಾ
ಹೇಳಬೇಕೋ ತಮ್ಮಾ ನಿನಗ ನಿರ್ವಾಯಿಲ್ಲಾ
ಐದು ಹೂವು ಅದು ಆಗತಿತ್ತಲ್ಲಾ
ಕಾಯಿ ಅದು ಎರಡು ಕೊಡತಿತ್ತಲ್ಲಾ ಬಳ್ಳಿ ಇದ್ದಿದಿಲ್ಲಾ
ಭೂಮಿ ಮ್ಯಾಲೆ ಗಿಡ ಒಂದು ಹುಟ್ಟೇತಲ್ಲಾ
ಹನ್ನೆರಡು ಟೊಂಗಿ ಅದು ಬಿಟ್ಟೀತಲ್ಲಾ ಶಾಸ್ತ್ರ ಸುಳ್ಳೇನಲ್ಲಾ
ಟೊಂಗಿಗೆಷ್ಟು ಕಾಯಿ ಆಗತೈತಿ ಹೇಳಬೇಕಲ್ಲಾ
ಎಲಿ ಎಷ್ಟು ಆಗತಾವ ಹೇಳಬೇಕಲ್ಲಾ ನಿಮ್ಮನ್ನು ಬಿಟ್ಟಾವರಲ್ಲಾ
ಮೂಗಿನ್ಯಾಗ ಬುಲಾಕ ಇಡತೇವಲ್ಲಾ ಇಟಗೊಂಡು ಹೋಗಬೇಕಲ್ಲಾ ||

೧೦೮. ಜವಾಬು ಪದಾ

ದಿನಾ ಲೆಕ್ಕಾ ಹಾಕಿ ಲೆಕ್ಕಿಲ್ಲದ ಬ್ಯಾನಿ ತಿಂದು
ಮುಪ್ಪಾನ ಮುದಿಕೊಂದ ಹಡದಿತ್ತ
ಗರಗುಡಿಸಿ ನೆಲಕುರುಳಿ ಬಿದ್ದಿತ್ತ
ಇದನೆಲ್ಲ ನೋಡಿ ನೆರೆಮನಿ ಮುದುಕ
ಓಡಿ ಬಂದು ನಾಡಾ ಹಿಡಿದಿತ್ತ
ಹೆಣ್ಣಲ್ಲ ಗಂಡಲ್ಲ ಅಂತಿತ್ತ
ಹುಟ್ಟಿದ ಕೂಡಲೆ ಕಿವಿಯಲಿ ಊದುವಾಗ
ಜೋಗುಳ ನಾದ ತುಂಬಿತ್ತ ಶಿವಾ ಶಿವಾ ಅಂತ ನುಡಿದಿತ್ತ ||

೧೦೯. ಸವಾಲು ಹಿಡಿಯೋ ಗಿಳಿ

ಗೋರಖನಾಥನ ಬಲಿ ಕಟ್ಟಾನ ಹುಚ್ಚ ಪ್ಯಾಲಿ
ತಿಳಿದಿಲ್ಲ ಇದರ ನೆಲಿ ನಡುವಿನ ಮನಿ ಖಾಲಿ
ತಿಪ್ಪಿ ಕೆದರು ಕೋಳಿ ಸವಾಲು ಹಿಡಿಯೋ ಗಿಳಿ
ಪ್ಯಾಟ್ಯಾಗ ಸಿಕ್ಕಲೇ ಮಳ್ಳಿ ಬಿದ್ದಾವ ಹಗಲಿ ಹುಳ್ಳಿ
ಉಂಡ ಪತ್ರೋಳಿ ಎಲಿ ಕೊಳ್ಳಾಗ ಕಟ್ಟೇವಿ ತಾಳಿ
ಬಿಡವಲ್ಲಿ ನಿನ್ನ ಚಾಳಿ ಅಗಸ್ಯಾಗ ಹಿಡಿಸೇವಿ ಕಾಳಿ ||

೧೧೦. ನಾ ಅಂಬುವ ಅಕ್ಷರ ನಿನ್ನಲ್ಲಿ ನರಕ

ಸಲಾಮ ಬಂದಿತ್ರಿ ಸರ್ವ ದೈವಕ | ಗುಲ್ಲ ಮಾಡಬ್ಯಾಡ್ರಿ ಗುಲಗಂಜಿ ತೂಕ
ನಾ ಅಂಬುವ ಅಕ್ಷರ ನಿನ್ನಲ್ಲಿ ನರಕ | ಕೇಳೋ ಶಾಹೀರಾ ಮಾಡಬ್ಯಾಡೋ ತರಕ
ಜವಾಬು ತಗೋ ಹೀಂಗ ಕಡಿತನಕ ಶರಣರನ ನೆನಿಸಬೇಕೋ ಬೆಳತನಕ

೧೧೧. ಹುಡುಗನ ಹೆಸರು ಹೇಳೋ

ತಂಗಿ ನಾವು ತರೂನು ನಡಿ ಭಾವಿ ನೀರಾ ನೀರು ಬಾಳ ದೂರಾ
ಭುವಿಯ ಮ್ಯಾಲೆ ಕುಂತಾರೋ ಶರಣರಾ
ಅವರ ಮ್ಯಾಲೆ ಹೋತೋ ಬಾಲ್ಯಾರ ನೆದರಾ
ಬಾಲ್ಯಾರ ನೆದರಾ ಮನಸು ಒಡೆದು ಆದೀತೋ ಅವರು ಬಸರಾ
ಆ ಹುಡುಗನ ಹೆಸರು ಒಡದ ಹೇಳೋ ಚತುರಾ

೧೧೨, ಆರು ಗುಣಗಳೆಲ್ಲ ಗುರಿ ಹೂಡ

ಹೋಳಗಿ ಮಾಡ ತಂಗಿ ಹೋಳಗಿ ಮಾಡ ನಿನ್ನ ಬಾಳೇವ ಸುಡ
ಆರು ಗುಣಗಳೆಲ್ಲ ಗುರಿ ಹೂಡ ನಿಜದೊಳಗ ಆಡ
ಹೋಳಿಗಿ ಮಣಿ ಲತ್ತಿಗುಣಿ ಎತ್ತಿಹಾಕ ವಾಲಿ ಮಂದಕ ನೂಕ
ಚಪ್ಪರ ಪಲ್ಲಂಗ ಮೇಲೆ ಹಂಚಿಕಿ ಹಾಕ ಮಲ್ಲಿಗಿ ಹೂವಿನ ತೂಕ