ಜೀವ ಜಗತ್ತಿನಲ್ಲಿ ಇದಕ್ಕಿರುವ ಆದ್ಯತೆ ಇನ್ನಾವುದಕ್ಕೂ ಇಲ್ಲ. ಏಕೆಂದರೆ ಜೀವಿ ಪ್ರಪಂಚದಲ್ಲಿ ಸ್ಪರ್ಧೆ ತಪ್ಪಿದ್ದಲ್ಲ. ಸಸ್ಯಗಳು, ಪ್ರಾಣಿ, ಮಾನವ (ಮಾನವನೂ ಪ್ರಾಣಿಯೇ), ಯಾವ ಜೀವಿಯೂ ಹೊರತಲ್ಲ. ಪ್ರಾಣಿ/ಮಾನವ ಜೀವಿಗಳು ಹೋರಾಡುವುದು, ಹೋರಾಡುವ ಸಾಧನಗಳು ಅನೇಕವು ನಮಗೆ ತಿಳಿದಿವೆ. ಸಸ್ಯ ಪ್ರಪಂಚದಲ್ಲಿ ಇದು ನೇರವಾಗಿ ಕಾಣದೆ ಇರಬಹುದು; ಗೌಣವಾಗಿರಬಹುದು.

ಸಸ್ಯಗಳನ್ನು ತಿನ್ನುವ ಪ್ರಾಣಿಗಳೆಷ್ಟೊ ಮತ್ತು ತರಿಯುವ ಮಾನವರೆಷ್ಟೊ. ಚಿಗುರು, ಕುಡಿಗಳ ನಷ್ಟ, ಹಿಮ, ಬೆಂಕಿ, ರೋಗ, ಬಿರುಗಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವು ಏನೆಲ್ಲ ರಕ್ಷಣಾತ್ಮಕ ವಿಧಾನಗಳಿಗೆ ಮೊರೆ ಹೋಗಬೇಕು. ಹೀಗೆ ವಿಕಾಸದ ಹಾದಿಯಲ್ಲಿ ಅನೇಕ ಆಂತರಿಕ ವಿಧಾನಗಳು ಬೆಳೆದು ಬಂದಿವೆ. ಮುಳ್ಳು, ನಾರು, ಅಂಟು ದ್ರವ, ಕೆಟ್ಟವಾಸನೆ –ಇವೆಲ್ಲ ಕೆಲವು ವಿಕರ್ಷಕಗಳು. ವೈರಿಗಳನ್ನು ಹಿಮ್ಮೆಟ್ಟಿಸಬಲ್ಲ ತಂತ್ರಗಳು.

ಕೆಲವು ಸಸ್ಯಗಳಲ್ಲಿ ವೈರಿಜೀವಿಗೆ ನಂಜುಂಟು ಮಾಡುವ ವಿಷಾಂಶವೇ ಇರುತ್ತವೆ. ಕಾರತುಂಡಿ ಬಳಗದ (ಮಿಲ್ಕ್‌ವೀಡ್) ಒಂದು ಸಸ್ಯ ಆಸ್ಕ್ಲಿಪಿಯಸ್ ಕರಾಸಾವಿಕ (Asclipias curassavica). ಇದರಲ್ಲಿನ ವಿಷ ಕೀಟಗಳಿಗೆ ಮಾರಕವಾಗಿದೆ. ಎಲೆ ಅಥವಾ ಕಾಂಡವನ್ನೂ ತುಂಡರಿಸಿದಾಗ ಹರಿಯುವ ಕಳ್ಳಿಯಂತಹ ಹಾಲಿನಲ್ಲಿ ಈ ಅಂಶವಿರುತ್ತದೆ. ಕಹಿರುಚಿ ಹಾಗೂ ಸುವಾಸನೆಯಿರುವ, ಗುಂಡಿಯಾಕಾರದ ಹಳದಿ ಹೂವಿನ ಗಿಡ ಟಾನ್ಸಿ (Tanacetum vulgare), ಇದರ ವಾಸನೆಯೂ ವಿಕರ್ಷಕ ಪದಾರ್ಥ. ಚೆಂಡುಹೂವು, ಸೂರ್ಯಕಾಂತಿ ಬಳಗದ ಅನೇಕ ಗಿಡಗಳಲ್ಲಿ ತೀವ್ರ ವಾಸನೆ ಸೂಸುವ ಗುಣವಿದೆ.

ಆದರೆ ಸಸ್ಯ ನಂಜಿನಂಶಕ್ಕೆ ರೋಧ ಶಕ್ತಿ ಬೆಳಸಿಕೊಳ್ಳುವ ವೈರಿ ಜೀವಿಗಳೂ ಇವೆ. ಒಂದು ಬಗೆಯ ಚಿಟ್ಟೆ (ಮಾನಾರ್ಕ್ ಚಿಟ್ಟೆ)ಒಂದು ಬಗೆಯ ಕಳ್ಳಿ ಗಿಡದ ನಂಜು ಪದಾರ್ಥಕ್ಕೆ ರೋಧ ಶಕ್ತಿ ಬೆಳೆಸಿಕೊಂಡು ಅದರ ಮೇಲೆಯೇ ತನ್ನ ತತ್ತಿಗಳನ್ನು ಇಡುತ್ತದೆ. ಅಷ್ಟೇ ಅಲ್ಲ, ಆ ನಂಜಿನಂಶವನ್ನು ತನ್ನಲ್ಲಿ ಸಂಚಯಿಸಿಕೊಂಡು ತನ್ನನ್ನು ಬೇಟೆಯಾಡುವ ಜೀವಿಗೆ ಅದು ಮಾರಕವಾಗಲೂಬಹುದು.

ಇನ್ನೊಂದು ವಿಚಿತ್ರ ಆತ್ಮರಕ್ಷಣೆಯ ಬಗೆಯೆಂದರೆ, ತನ್ನ ಎಲೆಗಳಲ್ಲಿ ಪೌಷ್ಟಿಕಾಂಶ ಕಡಿಮೆಯಿರುವಂತೆ ಮಾಡಿಕೊಳ್ಳುವುದು. ಎಲೆಗಳು ಟ್ಯಾನಿನ್ ಅಂಶ ಕಡಿಮೆಯಿರುವಂತೆ ಬೆಳೆದರೆ ಅವುಗಳನ್ನು ತಿಂದ ಜೀವಿಗೆ ಅದು ಜೀರ್ಣವಾಗುವುದು ಕಷ್ಟ.

ಬ್ರೇಕನ್ ಎಂಬುದು ಒಂದು ಬಗೆಯ ಜರೀಗಿಡ. ಇದರಲ್ಲಿ ಸಯನೈಡ್, ಥಯಮಿನೇಸ್, ಟಾನಿನ್, ಸಿಲಿಕೇಟ್‌ಗಳಂತಹ ರಾಸಾಯನಿಕ ಶಸ್ತ್ರಾಗಾರವೇ ಇದೆ. ಆದರೆ, ಬೇಸಿಗೆ ಮುಂದುವರಿದಂತೆ ಇದರ ಈ ರಾಸಾಯನಿಕಾಸ್ತ್ರಗಳು ತಗ್ಗುತ್ತವೆ. ಆಗ ಇದನ್ನು ತಿನ್ನುವ ಜೀವಿಗಳಿಗೂ ಅನುಕೂಲ. ಡೀಫೆನ್ ಬ್ಯಾಕಿಯ ಸೆಗ್ವಿನ್(ಡಂಬ್ ಕೇನ್)ಎಂಬ ಸಸ್ಯದ ಕಾಂಡ ಪುಷ್ಟವಾಗಿ, ತಿನ್ನಲು ಆಕರ್ಷಕವಾಗಿರುತ್ತದೆ. ಆದರೆ ಇದು ಆಕ್ಸಾಲಿಕ್ ಆಮ್ಲವನ್ನು ಸೂಸುತ್ತದೆ. ಈ ಆಮ್ಲವು ತಾಗಿದರೆ ಲೋಳೆಪೊರೆಯ ಊತವುಂಟು ಮಾಡಿ ಬಹಳ ನೋವಾಗುತ್ತದೆ. ಹಿಂದೆ ಭಾರತದಲ್ಲಿ ಈ ಕಾಂಡವನ್ನು ಗುಲಾಮರಿಗೆ ಹಿಂಸೆಕೊಡಲು ಬಳಸುತ್ತಿದ್ದರಂತೆ. ಅಲ್ಲದೆ ಇದನ್ನು ಬಲವಂತವಾಗಿ ನುಂಗಿಸಿ, ಅವರ ಆಹಾರನಾಳ ಒಳಗೆ ಉಬ್ಬಿಕೊಂಡು ಅವರಿಗೆ ಮಾತೂ ಹೊರಡದಂತೆ ಆಗುತ್ತಿದ್ದಿತಂತೆ. ಭಾರತದಲ್ಲಿನ ನಕ್ಸ್ ವಾಮಿಕ ಗಿಡವು (ಸ್ಟ್ರಿಕ್‌ನೀನ್ ನಕ್ಸ್‌ವಾಮಿಕ)ಸ್ಟ್ರಿಕ್‌ನೀನ್ ಎಂಬ ವಿಷ ಪದಾರ್ಥವನ್ನು ಸೂಸುತ್ತದೆ. ಇದೊಂದು ಕ್ಷಾರೀಯ ರಾಸಾಯನಿಕ. ಇದು ಮಾರಕವೂ ಆಗಬಹುದು. ಇಲಿಗಳನ್ನು ಕೊಲ್ಲಲು ಸ್ಟ್ರಿಕ್‌ನೀನ್ ಬಳಸುತ್ತಾರೆ.

ಇಂತಹ ಸಸ್ಯ ಆತ್ಮರಕ್ಷಣೆಯ ಸಂಗತಿಗಳು ಅನೇಕ. ಅಗೆರಾಟಮ್ ಹಾಸ್ಟೋನಿಯಾನಮ್ಎಂಬ ಸಸ್ಯವನ್ನು ತಿನ್ನುವ ಕೀಟಗಳಲ್ಲಿ ಸಸ್ಯದ ಒಂದು ರಾಸಾಯನಿಕವು ಒಳಸೇರಿ ಕೀಟದ ಲಾರ್ವ ಮರಿಗಳು ಬಂಜೆಯಾಗುವಂತೆ (ಸ್ಟರೈಲ್)ಮಾಡುತ್ತದೆ. ಭಾರತದಲ್ಲಿ ಬೆಳೆಯುವ ಮಹಾಗನಿ ಮರದಲ್ಲಿ (ಅಜಾಡಿರಕ್ಟ ಇಂಡಿಕ),ಬಿಡುವ ಫಲಗಳಲ್ಲಿ ಅಜಾಡಿರಾಕ್ಟೇನ್ ಎಂಬ, ಆನುವಂಶಿಕತೆಗೆ ಅಪಾಯತರುವ ರಾಸಾಯನಿಕವಿದೆ. ಇದನ್ನು ತಿನ್ನುವ ಲಾರ್ವಾಗಳಿಗೆ ಅಪಾಯ ತಪ್ಪಿದ್ದಲ್ಲ.

ಸಾಗರದಲ್ಲಿ ಆಲ್ಗ ಗಿಡಗಳು ವಿಪುಲವಾಗಿ ಬೆಳೆಯುತ್ತವೆ.  ಅವುಗಳ ಬಣ್ಣದಿಂದ ಸಾಗರದ ನೀರೂ ಅದೇ ಬಣ್ಣ ಎನ್ನುವ ಭ್ರಾಂತಿ ಉಂಟಾಗುತ್ತದೆ.  ಕೆಲ್ಪ್ ಎಂಬ ಆಲ್ಗ ಉತ್ತರ ಅಮೆರಿಕ ಪ್ರದೇಶದ ಪೆಸಿಫಿಕ್ ಸಾಗರ ಕರಾವಳಿಯ ಗುಂಟ ಬೆಳೆಯುತ್ತದೆ.  ಇದು ಅತ್ಯಂತ ಅಹಿತವಾದ ಫೀನಾಲ್ ಅಥವಾ ಕಾರ್ಬಾಲಿಕ್ ಆಮ್ಲ ಆಧರಿತ ಅಂಶಗಳನ್ನು ಸೂಸುತ್ತದೆ.  ಇದು ಆ ಸಸ್ಯದ ಸಂತಾನೋತ್ಪತ್ತಿ ಭಾಗದಲ್ಲಿ ಹೆಚ್ಚು ಕಂಡುಬರುತ್ತದೆ.  ಎಂದರೆ ಅದರ ಮುಂದಿನ ತಲೆಮಾರನ್ನೂ ಅದು ಈ ರೀತಿ ರಕ್ಷಿಸಿಕೊಳ್ಳುತ್ತದೆ, ಅಲ್ಲವೇೊ?

ಪ್ಯಾಷನ್ ಹಣ್ಣಿನ ಕೆಲವು ಪ್ರಭೇದಗಳಲ್ಲಿ ಮಧುರಸದ ಗ್ರಂಥಿ ಇರುತ್ತದೆ. ಇದು ಈ ಸಸ್ಯದ ಕೊಳ್ಳೆ ಜೀವಿಗಳನ್ನು ಹೊಡೆದೋಡಿಸುವ, ಚುಚ್ಚು ಅಸ್ತ್ರವಿರುವ ಇರುವೆಗಳನ್ನು ಆಕರ್ಷಿಸುತ್ತದೆ. ಇನ್ನು ಕೆಲವು ಈ ಜೀವಿಜಾತಿಯ ಗಿಡಗಳ ಮೇಲೆ ಮೊಟ್ಟೆಗಳಂತೆ ಕಾಣುವ ಗುಪ್ಪೆಗಳ ಮೇಲೆ ಬೆಳೆದು, ಇದರ ಮೇಲೆ ತತ್ತಿಯಿಡಲು ಬರುವ ಹೆಣ್ಣು ಚಿಟ್ಟೆಗಳನ್ನು ವಿಕರ್ಷಿಸುತ್ತವೆ. ಇಲ್ಲಿ ಬೇರೆ ಮೊಟ್ಟೆಗಳಿವೆ ಎಂಬ ಭ್ರಾಂತಿಯಿಂದ ಆ ಹೆಣ್ಣು ಚಿಟ್ಟೆ ಹೊರಟು ಹೋಗುತ್ತದೆ.

ಚಂದ್ರಗುಪ್ತ ಮೌರ್ಯನ ಕಥೆಯಲ್ಲಿ ಚಾಣಕ್ಯ ಅಮಾತ್ಯನು, ವೈರಿ ರಾಜನನ್ನು ಸಂಹರಿಸಲು ವಿಷ ಕನ್ಯೆಯನ್ನು ಅವನ ಸಂಗಾತಿಯಾಗಿ ಬಿಟ್ಟನೆಂದು ಹೇಳಿಕೆಯಿದೆ. ಇದು ಸತ್ಯವಿರಲಿ, ಮಿಥ್ಯವಿರಲಿ -ಇದೊಂದು ವಿಚಿತ್ರ ಆತ್ಮ ರಕ್ಷಣೆಯ ಸಂಗತಿ ಎಂದು ಹೇಳಬಹುದೇ?