ಪ್ರಾಣಿ ಮತ್ತು ಸಸ್ಯಗಳ ನಡುವಣ ವ್ಯತ್ಯಾಸ ಸುಸ್ಪಷ್ಟ. ಬಣ್ಣ್ಲ, ಚಲನವಲನ, ಸಂತಾನೋತ್ಪತ್ತಿಯ ವಿಧಾನಗಳು ಎಲ್ಲದರಲ್ಲಿಯೂ ಪ್ರಾಣಿ ಮತ್ತು ಸಸ್ಯಗಳಲ್ಲಿ ಸಾಕಷ್ಟು ಭಿನ್ನತೆ ಇದೆ. ಈ ವಿವಿಧತೆಯಲ್ಲಿಯೂ ಏಕತೆ ಇದೆ ಎನ್ನುವುದೇ ಜೀವಲೋಕದ ವಿಸ್ಮಯ. ದಕ್ಷಿಣ ಅಮೆರಿಕದ ಗಿಡವೊಂದರ ಪುಟ್ಟ ಬೀಜದಲ್ಲಿ ಪ್ರಾಣಿ ಮತ್ತು ಸಸ್ಯಲೋಕದಲ್ಲಿನ ಅವಿನಾಭಾವ ಸಂಬಂಧಕ್ಕೆ ಮತ್ತೊಂದು ಉದಾಹರಣೆ ದೊರಕಿದೆ. ಈ ಭಾಗದಲ್ಲಿ ಬೆಳೆಯುವ ಶುಂಠಿ ಸಸ್ಯಗಳ ಕುಟುಂಬ (ಜಿಂಜಿಬರೇಲಿಸ್)ಕ್ಕೆ ಸೇರಿದ ಸಸ್ಯವೊಂದರ ಬೀಜದಲ್ಲಿ ಪ್ರಾಣಿಗಳ ಪಿತ್ತರಸದಲ್ಲಿ ಕಾಣುವ ವರ್ಣಕವೊಂದು ಕಾಣಸಿಕ್ಕಿದೆ. ಬೈಲಿರೂಬಿನ್ ಎನ್ನುವ ಈ  ವರ್ಣಕ ಸಸ್ಯಗಳಲ್ಲಿ ಇರುವುದು ಅಸಾಧ್ಯ ಎಂದು ನಂಬಿದ್ದ ವಿಜ್ಞಾನಿಗಳ ನಂಬಿಕೆಯನ್ನು ನಿಸರ್ಗ ಹೀಗೆ ತಲೆಕೆಳಗು ಮಾಡಿದೆ.

ಛಳಿಗಾಲ ಮುಗಿದು ಬಲಿತ ಎಲೆಗಳನ್ನು ಉದುರಿಸಿದ ಅರಳಿ ಮರ ದಿನಕ್ಕೊಂದು ಬಣ್ಣ ತೊಡುವುದನ್ನು ಕಾಣಬಹುದು. ಅಚ್ಚಹಸಿರಿನ ಎಲೆಗಳ ಜಾಗದಲ್ಲಿ ತಿಳಿ ಕಂದು, ತಾಮ್ರ, ಎಳೆ ಕೆಂಪು, ಎಳೆ ಹಸಿರು, ಹಸಿರು… ಹೀಗೆ ಉದಯಿಸುತ್ತಿರುವ ತಳಿರು ಎಲೆಗಳು ಒಂದಾದಮೇಲೊಂದು ಬಣ್ಣ ತಳೆಯುವುದನ್ನು ನೋಡುವುದೇ ಚೆಂದ. ಸಸ್ಯಲೋಕದಲ್ಲಿ ವರ್ಣಕಗಳಿಗೆ ಬರವಿಲ್ಲ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೆ. ಕರಿ ಬಣ್ಣದ ಹೊರತಾಗಿ ಕಾಮನಬಿಲ್ಲಿನ ಎಲ್ಲ ಬಣ್ಣಗಳನ್ನೂ ಪ್ರದರ್ಶಿಸುವ ವರ್ಣಕಗಳನ್ನು ಸಸ್ಯಲೋಕದಲ್ಲಿ ಕಾಣಬಹುದು. ರಾಸಾಯನಿಕವಾಗಿ ಸಸ್ಯಗಳಲ್ಲಿರುವ ಬಣ್ಣಗಳಿಗೆ ಕ್ಸಾಂತೊಫಿಲ್ (ಹಳದಿ), ಆಂಥೊಸಯಾನಿನ್ (ಕೆಂಪು), ಕೊಸಯಾನಿನ್ (ನೀಲಿ), ಕ್ಲೋರೋಫಿಲ್ (ಹಸಿರು) ಮುಂತಾದ ವರ್ಣಕಗಳು ಕಾರಣ. ಎಲೆಗಳಲ್ಲಿ ಕ್ಲೋರೋಪಿಲ್ನ ಪ್ರಮಾಣ ಹೆಚ್ಚು. ಆದ್ದರಿಂದಲೇ ಎಲೆಗಳು ಹಸಿರಾಗಿ ಕಾಣುತ್ತವೆ.  ಯಾವ ವರ್ಣಕದ ಪ್ರಮಾಣ ಹೆಚ್ಚಿರುತ್ತದೆ ಎನ್ನುವುದನ್ನು ಅವಲಂಬಿಸಿ ಹೂವಿನ ಪಕಳೆಗಳ ಬಣ್ಣವೂ ಬದಲಾಗುತ್ತದೆ. ಅರಳಿಯ ಎಲೆಗಳ ಬಣ್ಣ ಬದಲಾಗುವುದೂ ಹೀಗೆಯೇ.

ಪ್ರಾಣಿಪ್ರಪಂಚವೇನೂ ವರ್ಣರಹಿತವಲ್ಲ. ನವಿಲು, ಪಾತರಿಗಿತ್ತಿಗಳನ್ನ ನೋಡಿಲ್ಲವೇ? ಆದರೆ ಇವುಗಳಲ್ಲಿ ಹಸಿರು, ಕೆಂಪು, ಹಳದಿಗೆಂದು ವಿವಿಧ ವರ್ಣಕಗಳಿಲ್ಲ. ಚಿಟ್ಟೆಗಳ ರೆಕ್ಕೆಗಳ ಮೇಲಿರುವ ಹುರುಪೆಗಳಲ್ಲಿ ಬಣ್ಣವೇ ಇಲ್ಲ. ಕನ್ನಡಿಯಂತಿರುವ ಅವುಗಳೊಳಗೆ ಬೆಳಕು ಹಾದು ಬರುವಾಗ ವಿವಿಧ ಬಣ್ಣಗಳು ಗೋಚರಿಸುತ್ತವೆ! ಇನ್ನು ನಮ್ಮ ಚರ್ಮ, ಕೂದಲಿಗೆ ಮೆಲಾನಿನ್ ಎನ್ನುವ ವಸ್ತು ಬಣ್ಣ ನೀಡುತ್ತದೆ. ಹಕ್ಕಿಗಳ ಪುಕ್ಕಗಳಿಗೂ ಇದೇ ವಸ್ತುವಿನ ವಿವಿಧ ರೂಪಗಳು ಬಣ್ಣ ಹಚ್ಚುತ್ತವೆ. ಪ್ರಾಣಿಗಳಿಗೆ ಬಣ್ಣ ಹಚ್ಚುವ ವರ್ಣಕಗಳ ರಾಸಾಯನಿಕ ರಚನೆ, ಸಸ್ಯಗಳಲ್ಲಿರುವ ವರ್ಣಕಗಳಿಗಿಂತ ಭಿನ್ನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಸ್ಯಗಳಲ್ಲಿರುವ ವರ್ಣಕಗಳಿಗೊಂದು ಮಹತ್ವದ ಕೆಲಸವಿದೆ. ಇವು ಬೆಳಕಿನಲ್ಲಿರುವ ಶಕ್ತಿಯನ್ನು ಹೀರಿಕೊಂಡು ಸಸ್ಯಕೋಶಗಳಲ್ಲಿ ಶೇಖರಿಸುತ್ತವೆ. ಪ್ರಾಣಿಗಳ ಬಣ್ಣಗಳಿಗೆ ಇಂತಹ ಜೀವಾಧಾರವಾದ ಮಹತ್ವವಿಲ್ಲ ಎನ್ನಬಹುದು. ಉದಾಹರಣೆಗೆ, ಕ್ಲೋರೋಫಿಲ್ (ಇದನ್ನು ಹರಿತ್ತು ಎನ್ನುತ್ತೇವೆ) ಬೆಳಕಿನ ಶಕ್ತಿಯನ್ನು ಹೀರಿಕೊಂಡು ಚುರುಕಾಗುತ್ತದೆ. ಸಸ್ಯಕೋಶದಲ್ಲಿರುವ ನೀರು ಹಾಗೂ ಕಾರ್ಬನ್ ಡಯಾಕ್ಸೈಡ್ಗಳ ನಡುವೆ ಸಂಯೋಗವುಂಟು ಮಾಡಿ ಸಕ್ಕರೆಯನ್ನು ಉತ್ಪಾದಿಸುತ್ತದೆ. ಕ್ಲೋರೋಫಿಲ್ನಷ್ಟು ಅಲ್ಲದಿದ್ದರೂ ಉಳಿದ ವರ್ಣಕಗಳೂ ಬೆಳಕಿನಿಂದ ಶಕ್ತಿಯನ್ನು ಹೀರಬಲ್ಲವು.  ಇಡೀ ಜೀವಜಗತ್ತಿಗೆ ಶಕ್ತಿ ಒದಗಿಸುವ ವರ್ಣಕಗಳು ಇವು.

ಶಕ್ತಿಯ ವಿತರಣೆಯಲ್ಲಿ ಪಾಲ್ಗೊಳ್ಳುವ ಕೆಲವು ವರ್ಣಕಗಳು ಪ್ರಾಣಿಗಳಲ್ಲಿಯೂ ಇವೆ. ಉದಾಹರಣೆಗೆ, ರಕ್ತದಲ್ಲಿರುವ ಹೀಮೋಗ್ಲೋಬಿನ್ ಹಾಗೂ ಕಣ್ಣಿನ ಪರದೆಯೊಳಗಿರುವ ರೋಡಾಪ್ಸಿನ್.  ರಕ್ತದ ಕೆಂಪು ಬಣ್ಣಕ್ಕೆ ಹೀಮೋಗ್ಲೋಬಿನ್ ಕಾರಣ.  ವಿಶೇಷವೆಂದರೆ, ಹೀಮೊಗ್ಲೋಬಿನ್ ರಾಸಾಯನಿಕದ ಅಂಗವಾದ ಹೀಮ್ ಎನ್ನುವ ಅಂಶದ ರಾಸಾಯನಿಕ ರಚನೆಗೂ, ಕ್ಲೋರೋಫಿಲ್ನ ರಚನೆಯಲ್ಲಿಯೂ ಸಾಮ್ಯವಿದೆ. ಇವೆರಡೂ ವರ್ಣಕಗಳ ತಯಾರಿಕೆಯಲ್ಲಿಯೂ ಸೈಕ್ಲಿಕ್ ಟೆಟ್ರಾಪಿರೋಲ್ ಎನ್ನುವ ರಾಸಾಯನಿಕಗಳು ಪಾಲ್ಗೊಳ್ಳುತ್ತವೆ. ಆದರೆ ಪ್ರಾಣಿಗಳಲ್ಲಿ ಕ್ಲೋರೋಫಿಲ್ ಇಲ್ಲ. ಸಸ್ಯಗಳಲ್ಲಿ ರಕ್ತವಿಲ್ಲ!  ಹಾಗೆಯೇ ಕ್ಯಾರೆಟ್ನಲ್ಲಿರುವ ಬೀಟ-ಕೆರೊಟಿನ್ (ಎ-ಜೀವಸತ್ವ) ಹಾಗೂ ನಮ್ಮ ಕಣ್ಣಿನ ರೋಡಾಪ್ಸಿನ್ಗಳ ರಚನೆಯಲ್ಲಿಯೂ ಸಾಮ್ಯವಿದೆ. ವಾಸ್ತವವಾಗಿ ನಮ್ಮ ಆಹಾರದಲ್ಲಿ ಈ ಜೀವಸತ್ವದ ಪ್ರಮಾಣ ಕಡಿಮೆ ಆದರೆ ಕಣ್ಣಿನ ದೃಷ್ಟಿಯೂ ಮಸುಕಾಗುತ್ತದೆ. ಆದರೆ ಸಸ್ಯಗಳಿಗೆ ಕಣ್ಣಿಲ್ಲ.

ಸಸ್ಯಗಳಲ್ಲಿ ಕಾಣಬರುವ ರಾಸಾಯನಿಕಗಳೇ ಪ್ರಾಣಿಗಳಲ್ಲಿ ಬೇರೊಂದು ಪಾತ್ರ ವಹಿಸುವುದಕ್ಕೆ ಇವು ಉದಾಹರಣೆಗಳು ಎನ್ನಬಹುದು. ರಕ್ತದಲ್ಲಿರುವ ಹೀಮ್ನಂತಹುದೆ ರಾಸಾಯನಿಕಗಳು ಸಸ್ಯಗಳಲ್ಲಿಯೂ ಕಂಡು ಬರುತ್ತವೆ. ಹೀಮ್ನ ರಚನೆ ಇರುವ ಮತ್ತೊಂದು ಪ್ರಾಣಿ ರಾಸಾಯನಿಕ ಬೈಲಿರೂಬಿನ್. ಇದು ಪ್ರಾಣಿಗಳ ಪಿತ್ತಜನಕಾಂಗದಲ್ಲಿ ಉತ್ಪತ್ತಿಯಾಗುವ ವರ್ಣಕ. ಗುಲ್ಮದಲ್ಲಿ ಶೇಖರಣೆಯಾಗುವ ಪಿತ್ತರಸದಲ್ಲಿ ಇದು ಹೆಚ್ಚಾಗಿರುತ್ತದೆ. ನಾವು ಸೇವಿಸಿದ ಆಹಾರವನ್ನು ಜೀರ್ಣಿಸುವುದರಲ್ಲಿ ಬೈಲಿರೂಬಿನ್ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳ ಹೇಲಿನಲ್ಲೂ ಬೈಲಿರೂಬಿನ್ ಇರುವುದರಿಂದಲೇ ಅವು ಹಳದಿಯಾಗಿರುತ್ತವೆ.

ಸಸ್ಯಗಳಲ್ಲಿ ಹೀಮ್ ರಾಸಾಯನಿಕವಿದ್ದರೂ ಬೈಲಿರೂಬಿನ್ ಇದ್ದುದಕ್ಕೆ ಪುರಾವೆಗಳಿರಲಿಲ್ಲ. ಹೀಗಾಗಿ ರಕ್ತದ ಹೀಮೊಗ್ಲೋಬಿನ್, ಸ್ನಾಯುಗಳಲ್ಲಿರುವ ಕೊಲಾಜೆನ್ಗಳ ಜೊತೆಗೆ ಈ ಬೈಲಿರೂಬಿನ್ ಅನ್ನೂ ಪ್ರಾಣಿಗಳಲ್ಲಿಯಷ್ಟೆ ಕಂಡು ಬರುವ ವಿಶಿಷ್ಟ ರಾಸಾಯನಿಕವೆಂದು ನಂಬಲಾಗಿತ್ತು. ಇದು ತಪ್ಪೆಂದು ನಿರೂಪಿಸುವ ಸುದ್ದಿಯನ್ನು ಅಮೆರಿಕೆಯ ಫ್ಲಾರಿಡಾ ವಿಶ್ವವಿದ್ಯಾನಿಲಯದ ಜೀವವಿಜ್ಞಾನಿ ಡೇವಿಡ್ ಲೀ ಮತ್ತು ಸಂಗಡಿಗರು ಜರ್ನಲ್ ಆಫ್ ಅಮೆರಿಕನ್ ಕೆಮಿಕಲ್ ಸೊಸೈಟಿ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.  ಸಸ್ಯಗಳಲ್ಲಿರುವ ಸೈಕ್ಲಿಕ್ ಟೆಟ್ರಾಪಿರೋಲ್ಗಳು ಬೈಲಿವರ್ಡಿನ್ ಗಳಾಗಿ ಬದಲಾಗುವುದು ಈ ಹಿಂದೆಯೇ ತಿಳಿದಿತ್ತು. ಪ್ರಾಣಿಗಳಲ್ಲಿ ಈ ಬೈಲಿವರ್ಡಿನ್ ರಾಸಾಯನಿಕವೇ ಬೈಲಿರೂಬಿನ್ ಆಗಿ ಪರಿವರ್ತನೆಯಾಗುತ್ತದೆ. ಬೈಲಿರೂಬಿನ್ನ ಜನಕವೆನ್ನುವ ಈ ರಾಸಾಯನಿಕಗಳು ಇದ್ದರೂ ಸಸ್ಯಗಳಲ್ಲಿ ಬೈಲಿರೂಬಿನ್ ರೂಪುಗೊಳ್ಳದಿರುವುದು ಅಚ್ಚರಿಯ ವಿಷಯವೇ ಆಗಿತ್ತು.

ಆ ಅಚ್ಚರಿ ಈಗ ಮರೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಬೆಳೆಯುವ ಜಿಂಜಿಬರೇಲಿಸ್ ಕುಟುಂಬದ ಸಸ್ಯ ಸ್ಟ್ರೆಲಿಟ್ಜಿಯಾ ನಿಕೋಲಿ (ಆಂಗ್ಲದಲ್ಲಿ ಇದನ್ನು ಬಿಳಿಯ ಬರ್ಡ್ ಆಫ್ ಪ್ಯಾರಡೈಸ್ ಮರ ಎನ್ನುತ್ತಾರೆ) ಸಸ್ಯದ ಬೀಜಗಳ ಕೇಸರಿ ಬಣ್ಣದಲ್ಲಿ ಬೈಲಿರೂಬಿನ್ ಇದೆ ಎಂದು ಡೇವಿಡ್ ಲೀ ತಂಡ ವರದಿ ಮಾಡಿದೆ. ಈ ಬಣ್ಣವನ್ನು ತೆಗೆದು ವಿಶಿಷ್ಟ ರಾಸಾಯನಿಕ ತಂತ್ರಗಳಿಂದ ವಿಶ್ಲೇಷಿಸಿದಾಗ ಅವುಗಳಲ್ಲಿರುವ ರಾಸಾಯನಿಕ ಬೈಲಿರೂಬಿನ್ನೇ ಎಂದು ಸ್ಪಷ್ಟವಾಯಿತು. ತಾವು ಎಲ್ಲಿಯಾದರೂ ತಪ್ಪಿದ್ದೇವೋ ಎಂದು ಅನುಮಾನಿಸಿದ ಲೀ ತಂಡ, ಬೀಜದಿಂದ ಹೆಕ್ಕಿದ ವರ್ಣಕವನ್ನು, ಪಿತ್ತಜನಕಾಂಗದಿಂದ ತೆಗೆದ ಬೈಲಿರೂಬಿನ್ ಜೊತೆಗೂಡಿಸಿ ಎಚ್ಪಿಎಲ್ಸಿ (ಉತ್ಕೃಷ್ಟ ಸಾಮಥ್ರ್ಯದ ದ್ರವ ಕ್ರೊಮಾಟೊಗ್ರಫಿ) ತಂತ್ರದಿಂದ ವಿಶ್ಲೇಷಿಸಿದರು.

ಈ ತಂತ್ರದಲ್ಲಿ ಹರಿಯುವ ದ್ರವದಲ್ಲಿ ಕರಗಿದ ವಸ್ತುಗಳ ಮೇಲೆ ವಿವಿಧ ತರಂಗಾಂತರಗಳ ಬೆಳಕನ್ನು ಹಾಯಿಸಲಾಗುತ್ತದೆ. ಅಣು ರಚನೆಗೆ ತಕ್ಕಂತೆ ಆ ವಸ್ತುಗಳು ಬೆಳಕನ್ನು ಹೀರುತ್ತವಷ್ಟೆ. ವಸ್ತು ಹೀರಿ ಉಳಿದ ಬೆಳಕಿನಲ್ಲಿ ಕೆಲವು ತರಂಗಾಂತರಗಳಷ್ಟೆ ಕಾಣೆಯಾಗಿರುತ್ತವೆ. ವಸ್ತು ಅಪ್ಪಟವಾಗಿದ್ದಷ್ಟೂ, ಕಾಣೆಯಾದ ತರಂಗಾಂತರಗಳೂ ಕಡಿಮೆ. ಬೈಲಿರೂಬಿನ್ ಜೊತೆಗೆ ಸಸ್ಯದ ವರ್ಣಕವನ್ನೂ ಕೂಡಿಸಿ ಎಚ್ಪಿಎಲ್ಸಿ ವಿಶ್ಲೇಷಣೆ ನಡೆಸಿದಾಗ ಡೇವಿಡ್ ಲೀ ತಂಡಕ್ಕೆ ಕಂಡದ್ದು ಒಂದೇ ಒಂದು ಮರೆಯಾದ ತರಂಗ. ಅಂದರೆ ಎರಡೂ ವಸ್ತುಗಳೂ ಒಂದೇ ಎಂದಾಯಿತಷ್ಟೆ. ಹೀಗೆ ಪ್ರಾಣಿಗಳ ವರ್ಣಕವೊಂದು ಸಸ್ಯದಲ್ಲಿಯೂ ಪತ್ತೆಯಾಗಿದೆ.  ಸಸ್ಯ ಮತ್ತು ಪ್ರಾಣಿಗಳ ನಡುವಣ ಅವಿನಾಭಾವ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ.