ತೌಳವದಲ್ಲಿ ವಿಭಿನ್ನ ಕುಟುಂಬ ಪದ್ಧತಿಗಳಿವೆ. ತಂದೆ ಬಳಿಯನ್ನು ಅನುಸರಿಸುವ ಬ್ರಾಹ್ಮಣ ಹಾಗೂ ತಾಯಿ ಬಳಿಯನ್ನು ಅನುಸರಿಸುವ ಬ್ರಾಹ್ಮಣೇತರ ಜಾತಿಗಳಿವೆ. ಪಾರಂಪರಿಕವಾದ ಆಸ್ತಿ ಒಡೆತನದ ಹಕ್ಕುಗಳು ಪಲ್ಲಟಗೊಂಡು ಇಂದು ಅವು ಹೆಣ್ಣಿನ ಜೊತೆಗೆ ಗಂಡಿಗೂ ಸಮಾನವಾಗಿ ದೊರೆಯುತ್ತವೆ. ಪಾರಂಪರಿಕವಾಗಿ ತಾಯಿ ಬಳಿಯ ಕುಟುಂಬ ಪದ್ಧತಿಯಲ್ಲಿ ಹೆಣ್ಣಿಗೆ ಮಾತ್ರ ಅಸ್ತಿ ಒಡೆತನದ ಹಕ್ಕು ಮುಂದುವರಿಯುತ್ತಿತ್ತು. ತಾಯಿಬಳಿ ಕುಟುಂಬ ಪದ್ಧತಿಯಲ್ಲಿ ಮದುವೆ ಸಂಬಂಧಗಳು ಏರ್ಪಡುವಾಗ ಉಳಿದ ಅಂಶಗಳ ಜೊತೆಗೆ ಪದ್ಧತಿಯಲ್ಲಿ ಮದುವೆ ಸಂಬಂಧಗಳು ಏರ್ಪಡುವಾಗ ಉಳಿದ ಅಂಶಗಳ ಜೊತೆಗೆ ಬಳಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇಲ್ಲಿ ಮದುವೆಯಾಗುವ ಗಂಡು ಹಾಗೂ ಹೆಣ್ಣಿನ ಬಳಿಗಳು ಒಂದೇ ಆಗಿರಬಾರದು. ಹಾಗಿದ್ದರೆ ಮದುವೆ ನಡೆಯುವುದಿಲ್ಲ. ಒಂದೇ ಬಳಿಗಳು ಒಂದೇ ‘ರಕ್ತ’ವನ್ನು, ‘ಸಹೋದರತೆ’ ಯನ್ನು, ‘ಕುಟುಂಬ’ವನ್ನು ಸೂಚಿಸುತ್ತದೆ. ಈ ಪದ್ಧತಿಯಲ್ಲಿ ಮದುವೆಯಾದ ಹೆಣ್ಣು ತಾಯಿ ಮನೆಯಿಂದ ಗಂಡನ ಮನೆಗೆ ತೆರಳುವುದಿಲ್ಲ. ತಾಯಿ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ಹೆಣ್ಣಿನ ಮೂಲಕ ಮುಂದುವರಿಯುವ, ಬೆಳೆಯುವ ಕುಟುಂಬ ಹೆಣ್ಣಿನ ಆಸ್ತಿಯ ಹಕ್ಕಿನ ಮೂಲಕ ಇನ್ನೊಂದು ಕುಟುಂಬಕ್ಕೆ, ಇನ್ನೊಂದು ಮನೆತನಕ್ಕೆ ಆಸ್ತಿಯ ವರ್ಗಾವಣೆ ಯಾಗದಂತೆ ಈ ಕುಟುಂಬ ಪದ್ಧತಿ ನೋಡಿಕೊಳ್ಳುತ್ತದೆ. ಒಕ್ಕಲುತನವುಳ್ಳ ಜಾತಿಗಳು ಒಕ್ಕಲುತನಕ್ಕೆ ಅಗತ್ಯವಾಗಿ ಬೇಕಾಗುವ ಹಾಗೂ ಪೂರಕವಾಗುವ ಈ ವ್ಯವಸ್ಥೆಯನ್ನೇ ಅನುಸರಿಸುತ್ತದೆ. ಜನಪದ ಕತೆಯಲ್ಲಿ ರೂಪಕವಾಗುವ ಲೈಂಗಿಕ ನಿಷೇಧ ಈ ವಿಚಾರವನ್ನೇ ಪ್ರತಿಪಾದಿಸುತ್ತದೆ. ಮಾತ್ರವಲ್ಲ, ಪ್ರತೀಕಗಳಾಗಿ ಕಾಣಿಸಿಕೊಳ್ಳುವ ನಿಸರ್ಗದ ಸಸ್ಯ, ಪ್ರಾಣಿಗಳ ಬಳಕೆಯು ಕೂಡಾ ಈ ಕುಟುಂಬ ಪದ್ಧತಿಯ ಬದುಕನ್ನು ನೈಸರ್ಗಿಕಗೊಳಿಸುತ್ತದೆ, ಸಹಜಗೊಳಿಸುತ್ತದೆ. ಜನಪದ ಕತೆಯಲ್ಲಿ ವರ್ಗಾವಣೆಗೊಳ್ಳುವ ನಿಸರ್ಗದ ಅಂಶಗಳು ಮಾನವ ಬದುಕಿನ ಅಗತ್ಯಗಳನ್ನು ಪೂರೈಸುವ ಸತ್ಯಗಳಾಗುತ್ತವೆ.

ಮೂಲಭೂತವಾಗಿ ಮಾನವ ತನ್ನಂತೇ ಇರುವ ಎಲ್ಲ ಜೀವಿಗಳ ಜೊತೆಗೆ ತನ್ನನ್ನು ತಾನು ಅನನ್ಯನೆಂದು ಭಾವಿಸಿಕೊಳ್ಳುತ್ತಾನೆ. ಜೊತೆಗೆ ಸಸ್ಯ ಮತ್ತು ಪ್ರಾಣಿಗಳಿಗಿಂತ ತನ್ನನ್ನು ತಾನು ಭಿನ್ನವಾಗಿ ಕಾಣಲು ಪ್ರಯತ್ನಿಸುತ್ತಾನೆ. ಹೀಗಾಗಿ ಮಾನವ ಉಳಿದ ಜೀವಿಗಳಿಗಿಂತ ಸಾಮಾಜಿಕವಾಗಿ ತನ್ನನ್ನು ಭಿನ್ನಗೊಳಿಸುವ ಪರಿಕಲ್ಪನಾತ್ಮಕ ತರ್ಕಗಳಿಗಾಗಿ ಅದನ್ನು ಮೂರ್ತ ಗೊಳಿಸುವಾಗ ವೈವಿಧ್ಯಮಯವಾದ ಜೀವಿಗಳನ್ನು (ಸಸ್ಯ ಮತ್ತು ಪ್ರಾಣಿ) ಬಳಸಿಕೊಳ್ಳುತ್ತಾನೆ. ಆ ಮೂಲಕ ತನ್ನ ಸಾಮಾಜಿಕ ಸಂಬಂಧಗಳನ್ನು ಅಂತಹ ಜೀವಿಗಳಿಗಿಂತ ಭಿನ್ನವೆಂದು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.

ವೈದ್ಯ : ಸಾದೃಶ್ಯ ಹಾಗೂ ವಿರೋಧ ತತ್ತ್ವ

ಜನಪದ ವೈದ್ಯದಲ್ಲಿ ಗಿಡಮೂಲಿಕೆಗಳನ್ನೇ ಪ್ರಧಾನವಾಗಿ ಬಳಸಿಕೊಳ್ಳಲಾಗುತ್ತದೆ. ಈ ಕಾರಣದಿಂದಲೇ ‘ಸಸ್ಯ ಜಾನಪದ’ದ ಅಧ್ಯಯನದಲ್ಲಿ ಅದರ ಪೂರ್ವಕಲ್ಪನೆಯಂತೆ ವೈದ್ಯದಲ್ಲಿ ಬಳಕೆಯಾಗುವ ಸಸ್ಯಗಳು ಅವುಗಳ ಕುರಿತಿರುವ ನಂಬಿಕೆಗಳು, ಪುರಾಣಗಳು ಇವನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ನನ್ನ ಈ ಅಧ್ಯಯನದಲ್ಲಿ ಗಿಡಮೂಲಿಕೆಗಳನ್ನು ಅಥವಾ ಅವುಗಳ ಕುರಿತಿರುವ ನಂಬಿಕೆ ಪುರಾಣಗಳನ್ನು ಬಿಡಿಯಾಗಿ ಕಾಣದೆ ಜನಪದ ವೈದ್ಯ ವಿಧಾನದ ಸ್ವರೂಪದಲ್ಲಿ ಸಸ್ಯ ಸಂಬಂಧವನ್ನು ವಿಶ್ಲೇಷಿಸಿದ್ದೇನೆ.

ಪ್ರಾಚೀನ ಮಾನವನು ಬಹಳ ಆಕಸ್ಮಿಕ ಎನ್ನುವಂತೆ ಗಿಡಮೂಲಿಕೆಗಳಿಂದ ಮನುಷ್ಯ ಹಾಗೂ ಸಾಕು ಪ್ರಾಣಿಗಳ ರೋಗಭಾದೆಯನ್ನು ಉಪಶಮನಗೊಳಿಸಿದ. ಈ ಉಪಶಮನ ಆಕಸ್ಮಿಕ ಎಂಬುದಕ್ಕೆ ದಕ್ಷಿಣ ಕನ್ನಡದಲ್ಲಿ ಪ್ರಚಲಿತವಿರುವ ವೈದ್ಯಕ್ಕೆ ಸಂಬಂಧಪಟ್ಟ ಘಟನೆಯ ಸುದ್ದಿಯನ್ನು ಇಲ್ಲಿ ಪ್ರಸ್ತಾಪ ಮಾಡುತ್ತೇನೆ. ಗಿಡಮೂಲಿಕೆಗಳ ವೈದ್ಯವನ್ನು ಕೊಡುವ ಇಲ್ಲಿಯ ಮೂಳೆ ವೈದ್ಯರ ಬಗೆ ಇರುವ ಪ್ರತೀತಿ ಇದು. ಈ ವೈದ್ಯರು ಕಾಡಿಗೆ ಹೋಗಿ ಯಾವುದೋ ಒಂದು ಪ್ರಾಣಿಯ ಮಾಂಸವನ್ನು ದೊಡ್ಡ ಎಲೆಯೊಂದರಲ್ಲಿ ಕಟ್ಟಿಕೊಂಡು ಬಂದಾಗ ಆ ಮಾಂಸದ ತುಂಡುಗಳು ಒಂದುಗೂಡಿದ್ದವಂತೆ. ಈ ಘಟನೆಯ ಬಳಿಕ ಆ ಎಲೆಯನ್ನು ಗುರುತಿಸಿ ಅದರ ರಸದಿಂದ ಮುರಿದ ಮೂಳೆಗಳನ್ನು ಜೋಡಿಸುವ ವೈದ್ಯ ವಿಧಾನವನ್ನು ರೂಪಿಸಿಕೊಂಡರಂತೆ.

ಆಕಸ್ಮಿಕ ಉಪಶಮನ, ಪ್ರಾಚೀನ ಮಾನವನಿಗೆ ವೈದ್ಯದ ತಿಳುವಳಿಕೆಯನ್ನು ಒದಗಿಸಿತು. ತನಗಾದ ಈ ಅನುಭವದ ಹಿನ್ನೆಲೆಯಲ್ಲಿ ಅದರ ಮರುಪ್ರಯೋಗ ಮತ್ತು ಉಪಶಮನದ ಮೂಲಕ ಆ ಕುರಿತ ತಿಳುವಳಿಕೆಯನ್ನು ಖಾತ್ರಿಪಡಿಸಿಕೊಂಡ. ಈ ಅನುಭವವನ್ನು ಪರಿಕಲ್ಪನೆಗಳ ಮೂಲಕ ದಾಖಲಿಸಕೊಂಡ. ಭಾಷೆಯ ಮೂಲಕ ಪರಿಕಲ್ಪತಗೊಂಡ ವೈದ್ಯ ಜ್ಞಾನ ಭಾಷೆಯ ಮೂಲಕ ನೆನಪಿನ ದಾಕಲೆಯೊಂದಿಗೆ ಮುಂದುವರಿಯುತ್ತಿದೆ. ಜನಪದ ವೈದ್ಯದಲ್ಲಿ ರೋಗ ಚಿನ್ಹೆ, ರೋಗ ಕಾರಣ ಹಾಗೂ ಉಪಶಮನದ ಪರಿಕಲ್ಪನೆಗಳು ಬಹಳ ಕುತೂಯಲಕಾರಿಯಾಗಿವೆ. ಈ ಮೂರೂ ಅಂಶಗಳಲ್ಲಿ ಜನಪದದ ಸಾದೃಶ್ಯ ಹಾಗೂ ವಿರೋಧ ತತ್ತ್ವ ಕಂಡು ಬರುತ್ತದೆ.

ಈ ವೈದ್ಯದಲ್ಲಿ ರೋಗಚಿನ್ಹೆಯನ್ನು ವೈದ್ಯ ಗ್ರಹಿಸುವುದು ಅದರ ವ್ಯಕ್ತರೂಪದಲ್ಲಿ ಇಂದ್ರಯಗಮ್ಯ ಅನುಭವದ ಮೂಲಕ ರೋಗಚಿನ್ಹೆಯನ್ನು ಗ್ರಹಿಸಿಕೊಳ್ಳಲಾಗುತ್ತದೆ. ಬಣ್ಣ, ಆಕಾರ ಈ ಮುಂತಾದ ಬಾಹ್ಯಗೋಚರ ಗುಣಲಕ್ಷಣಗಳು ರೋಗಚಿನ್ಹೆಗಳಾಗುತ್ತವೆ. ರೋಗದ ಗುರುತು ಸಾದೃಶ್ಯದ ನೆಲೆಯಲ್ಲಿ ನಡೆಯುತ್ತದೆ. ಉದಾಹರಣೆಗೆ ಕಪ್ಪೆಕೆಮ್ಮು, ಕೆಂಪು, ಸರ್ಪಸುತ್ತು ಇತ್ಯಾದಿ. ನಿರಂತರವಾಗಿ ಬರುವ ಕೆಮ್ಮು ಸಾಮಾನ್ಯ ಕೆಮ್ಮು ಆಗದೆ, ಇದರ ಶಬ್ದ ಕಪ್ಪೆ ವಟಗುಟ್ಟುವ ಹಾಗೆ ಕೇಳಿಸಿಕೊಂಡರೆ ಅದನ್ನು ‘ಕಪ್ಪೆಕೆಮ್ಮು’ ಎನ್ನುತ್ತಾರೆ. ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಬಿದ್ದು ಆ ಭಾಗ ಕೆಂಪಾಗಿ ಕಾಣಿಸಿಕೊಂಡರೆ ಅದನ್ನು ‘ಕೆಂಪು’ ಎನ್ನುತ್ತಾರೆ. ಇದೇ ಬಗೆಯ ಗುಳ್ಳೆಗಳು ಸ್ವಲ್ಪ ದೊಡ್ಡದಾಗಿ ನೋವಿನಿಂದ ಕೂಡಿದ್ದು, ಹರಡುತ್ತಾ ದೇಹದ ಯಾವುದಾದರೂ ಭಾಗವನ್ನು ವರ್ತುಲಾಕಾರದಲ್ಲಿ ಸುತ್ತುಬಂದು ಅದು ಕೂಡಿಕೊಂಡಾಗ ಸರ್ಪದ ಹೆಡೆಯಂತೆ ಕಾಣಿಸುವುದು ಮಾತ್ರವಲ್ಲ, ಅದರಿಂದ ಸಾವು ಸಂಭವಿಸುವ ಕಾರಣದಿಂದ ಇದನ್ನು ‘ಸರ್ಪಸುತ್ತು’ ಎಂದು ಗುರುತಿಸುತ್ತಾರೆ. ಹೀಗೆ ಜನಪದವು ತನ್ನ ಇಂದ್ರಿಯಾನುಭವಕ್ಕೆ ಬರುವ ಬಾಹ್ಯಗೋಚರ ಗುಣಲಕ್ಷಣಗಳ ಮೂಲಕ ರೋಗಗಳನ್ನು ಗುರುತಿಸಿಕೊಳ್ಳುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸುವ ಅಂಶವೆಂದರೆ, ಕಪ್ಪೆಕುಮ್ಮು, ಕೆಂಪು, ಸರ್ಪಸುತ್ತು ಈ ಎಲ್ಲ ರೋಗ ಗುರುತುಗಳನ್ನು ಜನಪದ ಗ್ರಹಿಸುವುದು ಸಾದೃಶ್ಯದ ನೆಲೆಯಲ್ಲಿ. ಹೀಗಾಗಿ ಇದರ ಉಪಶಮನದ ವಿಧಾನದಲ್ಲಿ ಸಾದೃಶ್ಯ ಅಥವಾ ವಿರೋಧ ತತ್ತ್ವದ ತಿಳುವಳಿಕೆ ಪ್ರಧಾನವಾಗುತ್ತದೆ.

ಸ್ಥೂಲವಾಗಿ ಮೇಲೆ ನಿರೂಪಿಸಿರುವ ಕೆಂಪು ಹಾಗೂ ಸರ್ಪಸುತ್ತು ಇವುಗಳನ್ನು ರೋಗ ಅಥಾವ ಖಾಯಿಲೆಯೆಂದು ಜನಪದ ಅಂದುಕೊಳ್ಳುವುದಿಲ್ಲ. ಅಲ್ಲದೆ ‘ರೋಗಿ’ ಅನ್ನುವ ಕಲ್ಪನೆಯೂ ಜಾನಪದದಲ್ಲಿಲ್ಲ. ‘ಕೆಂಪು ಬಿದ್ದಿದೆ’, ‘ಸರ್ಪಸುತ್ತು ಆಗಿದೆ’ ಎಂದಷ್ಟೆ ಹೇಳುತ್ತಾರೆ. ಚರ್ಮವ್ಯಾಧಿಗಳಾದ ಇವನ್ನು ದೈಹಿಕ ಲಕ್ಷಣಗಳ ಮೂಲಕ ಗುರುತಿಸಿ ಕೊಂಡರೂ ಅವುಗಳನ್ನು ವೈದ್ಯದಲ್ಲಿ ಗ್ರಹಿಸುವುದು ಧಾರ್ಮಿಕ ನೆಲೆಯಲ್ಲಿ. ಹೀಗಾಗಿ ಅದರ ಕಾರಣದ ಗ್ರಹಿಕೆ ಹಾಗೂ ಉಪಶಮನದ ವಿಧಾನಗಳು ಧಾರ್ಮಿಕ ನೆಲೆಯಲ್ಲೇ ರೂಪುಗೊಳ್ಳುತ್ತವೆ. ಬಹಳಷ್ಟು ಚರ್ಮವ್ಯಾಧಿಗಳಿಗೆ ‘ನಾಗದೋಷವೇ’ ಕಾರಣ ಎಂದು ತಿಳಿಯುತ್ತಾರೆ. ಹೀಗಾಗಿ ಆ ಬಗೆಯ ವ್ಯಾಧಿಗಳ ಉಪಶಮನದ ವಿಧನದಲ್ಲಿ ನಾಗನಿಯಂತ್ರಣ ಅಥವಾ ನಾಗ ಓಲೈಸುವಿಕೆಯ ವಿಧಿವಿಧಾನಗಳೇ ಕಾಣಿಸಿಕೊಳ್ಳುತ್ತವೆ. ಈ ರೀತಿಯಲ್ಲಿ ‘ನಾಗದೋಷ’ ಪರಿಹಾರವಾಗುತ್ತದೆ. ಸರ್ಪಸುತ್ತು ದೇಹದ ಸುತ್ತ ಹರಡುತ್ತ ಉಲ್ಬಣಗೊಂಡು ಸಾವನ್ನು ತರುತ್ತದೆ. ಹೀಗಾಗಿ ಜೀವಾಪಾಯವನ್ನು ಉಂಟು ಮಾಡುವ ಕಾರಣದಿಂದ ಅದನ್ನು ‘ವಿಷ’ ವಾಗಿ ಕಾಣಲಾಗುತ್ತದೆ. ಅಲ್ಲದೆ ಅದು ದೇಹದ ಸುತ್ತ ಅನಿಯಂತ್ರಿತವಾಗಿ ಹರಡುವುದರಿಂದ ಆತಂಕಕ್ಕೂ ಕಾರಣವಾಗುತ್ತದೆ. ಹೀಗಾಗಿ ಸರ್ಪಸುತ್ತನ್ನು ನಿಯಂತ್ರಿಸುವುದು ಜೊತೆಗೆ ಸಾವನ್ನು ಗೆಲ್ಲುವುದು ವೈದ್ಯದ ಬಲುದೊಡ್ಡ ಸವಾಲಾಗುತ್ತದೆ. ಈ ಸಾವು ‘ನಾಗದೋಷ’ದಿಂದ ಉಂಟಾಗುವ ಕಾರಣದಿಂದಲೇ ನಾಗದೋಷದ ಪರಿಹಾರವು ಧಾರ್ಮಿಕವಾಗಿ ಅಗತ್ಯವೆನಿಸುತ್ತದೆ. ತನ್ನ ನಿಯಂತ್ರಣಕ್ಕೆ ಸಿಗದ ಮತ್ತು ಸಾವನ್ನು ತಡೆಯಲಾಗದ ಕಾರಣದಿಂದ ತನಗಿಂತ ಅತೀತವಾದ ನಿಸರ್ಗದ ಶಕ್ತಿಯನ್ನೇ ರೋಗಕ್ಕೆ ಕಾರಣವೆಂದು ಪರಿಕಲ್ಪಸಲಾಗಿದೆ. ಇಲ್ಲಿ ತನ್ನ ನಿಯಂತ್ರಣಕ್ಕೆ ಸಿಗದ ಹಾಗೆಯೇ ತನ್ನ ಗ್ರಹಿಕೆಗೆ ಒದಗದ ಕಾರಣದಿಂದಲೇ ವ್ಯಾಧಿಯ ಕಾರಣವನ್ನು ಪ್ರಕೃತಿಯ ಶಕ್ತಿಯ ಜೊತೆಗೆ ಸಾದೃಶ್ಯ ರೂಪದಲ್ಲಿ ಕಲ್ಪಿಸಿಕೊಳ್ಳಾಗಿದೆ. ಆ ಮೂಲಕ ತನ್ನ ಗ್ರಹಿಕೆಗೆ ಸಿಗದ ರೋಗದ ಕಾರಣವನ್ನು ಕಂಡು ಕೊಳ್ಳಲಾಗಿದೆ. ಈ ಸಾದೃಶ್ಯದ ನೆಲೆಯಲ್ಲಿ ಕಂಡುಕೊಂಡ ರೋಗದ ಕಾರಣಕ್ಕೆ ವಿರುದ್ಧವಾಗಿ ಉಪಶಮನದ ವಿಧಾನವನ್ನು ವೈದ್ಯವಿಧಾನ ರೂಪಿಸಿಕೊಳ್ಳುತ್ತದೆ. ತನಗೆ ನಿಯಂತ್ರಿಸಲು ಸಾಧ್ಯವಾಗದ ಸರ್ಪಸುತ್ತನ್ನು ನಿಯಂತ್ರಿಸುವ ಉಪಾಯವನ್ನು ಈ ವೈದ್ಯವಿಧಾನದಲ್ಲಿ ರೂಪಿಸಿಕೊಳ್ಳಲಾಗಿದೆ. ಧಾರ್ಮಿಕ ನೆಲೆಯಲ್ಲಿ ಉದ್ಭವವಾದ ಈ ವ್ಯಾಧಿಯ ಉಪಶಮನದ ವಿಧಾನದಲ್ಲಿ ಪೌರಾಣಿಕ ಮಾಂತ್ರಿಕತೆಯನ್ನು ಕಾಣಬಹುದು. ಸರ್ಪಸುತ್ತನ್ನು ಉಪಶಮನಗೊಳಿಸುವ ಔಷಧೀಯ ಸಸ್ಯ, ಸಸ್ಯೋತ್ಪನ್ನಗಳಲ್ಲಿ ಕೂಟವಾಗಿ ಕೂಡುವ ಸಸ್ಯೋತ್ಪನ್ನಗಳು ಮುಖ್ಯವಾಗಿ ಗರುಡ ಪಾತಾಳ, ಈಶ್ವರ ಬೇರು, ಅಮೃತ ಬಳ್ಳಿ, ನಿರ್ವಿಷದ ಬೇರು ಇತ್ಯಾದಿ. ಭಾಷೆಯ ಮೂಲಕ ಪರಿಕಲ್ಪನಾತ್ಮಕಗೊಳ್ಳುವ ವೈದ್ಯವಿಧಾನದಲ್ಲಿ ರೋಗಚಿನ್ಹೆ ಮತ್ತು ಉಪಶಮನ ವಿಧಾನದಲ್ಲಿ ವಿರೋಧತತ್ತ್ವದ ನಿರ್ವಹಣೆಯನ್ನು ಕಾಣಬಹುದು. ಸರ್ಪ ಸುತ್ತನ್ನು ವಿಷವಾಗಿ ಕಾಣುವ ಕಾರಣದಿಂದಲೇ ಅದನ್ನು ಗುಣಪಡಿಸುವ ಸಸ್ಯೋತ್ಪನ್ನಗಳಲ್ಲಿ ಗರುಡ ಪಾತಾಳ, ಈಶ್ವರ ಬೇರು, ಅಮೃತ ಬಳ್ಳಿ, ನಿರ್ವಿಷದ ಬೇರು ಪ್ರಮುಖವಾಗುತ್ತವೆ. ಹೀಗೆ ಸರ್ಪಸುತ್ತನ್ನು ನಿಯಂತ್ರಿಸುವ ಗರುಡ ಪಾತಾಳ ಹಾಗೂ ಈಶ್ವರಬೇರು ಹಾಗೆಯೇ ವಿಷವನ್ನು ನಿರ್ವಿಷಗೊಳಿಸುವ ನಿರ್ದಿಷದ ಬೇರು ಹಾಗೆಯೇ ವಿಷದಿಂದ ಸಂಭವಿಸುವ ಸಾವನ್ನು ಗೆಲ್ಲುವ ಅಮೃತ ಬಳ್ಳಿ ಮುಖ್ಯವಾಗುತ್ತವೆ.

ಸಾದೃಶ್ಯ ತರ್ಕ ಮತ್ತು ವಿರೋಧ ತತ್ವದ ಈ ವೈದ್ಯ ವಿಧಾನದಲ್ಲಿ ಅವುಗಳ ನಡುವೆ ಪರಸ್ಪರ ಸಮಾನಾಂತರ ನೆಲೆಗಳನ್ನು ಮಾನವ ಸ್ಥಾಪಿಸಿಕೊಳ್ಳುತ್ತಾನೆ. ರೋಗಚಿನ್ಹೆಯ ಸಾದೃಶ್ಯ ತರ್ಕ ಮತ್ತು ಉಪಶಮನದ ವಿರೋಧ ತತ್ವವು ಉದ್ದೇಶಪೂರ್ವಕವಾಗಿದ್ದು ವ್ಯಾಧಿಯನ್ನು ನಿಯಂತ್ರಿಸುವ ಸಲುವಾಗಿರುತ್ತದೆ. ಈ ವೈದ್ಯವಿಧಾನದ ಪೌರಾಣಿಕ ನಿರ್ಮಿತಿ ರೋಗದ ಉಪಶಮನಕ್ಕೆ ಬೇಕಾದ ಮಾಂತ್ರಿಕತೆಯನ್ನು ಒದಗಿಸಿಕೊಡುತ್ತದೆ. ಹೀಗೆ ಪ್ರಾಚೀನ ಮಾನವ ತನ್ನ ಗ್ರಹಿಕೆಗೆ ಸಿಗದ ಹಾಗೂ ತನ್ನ ನಿಯಂತ್ರಣಕ್ಕೆ ಬಾರದ ಸಂಗತಿಗಳನ್ನು ಪೌರಾಣಿಕ ಕಲ್ಪನೆಯಲ್ಲಿ ತನ್ನ ಗ್ರಹಿಕೆಗೆ ತಂದುಕೊಳ್ಳುತ್ತಾನೆ. ಆ ಮೂಲಕ ಅವುಗಳ ಮೇಲೆ ನಿಯಂತ್ರಣವನ್ನು ಸಾಧಿಸಿಕೊಳ್ಳುತ್ತಾನೆ.

ದೇಹಪ್ರಕೃತಿ ಕಲ್ಪನೆ

ಕರಾವಲಿಯ ತೌಳವ ಸಂಸ್ಕೃತಿಯಲ್ಲಿ ಪ್ರಚಲಿತದಲ್ಲಿರುವ ಹಾಲೆಮರದ ‘ಮದ್ದು ಕುಡಿಯುವ’ ಕಾಲಬದ್ಧ ಆಚರಣೆಯನ್ನು ವಿಶ್ಲೇಷಿಸುವ ಮೂಲಕ ಜನಪದದ ‘ದೇಹ ಪ್ರಕೃತಿ’ಯ ಕಲ್ಪನೆಯನ್ನು ಗುರುತಿಸಿಕೊಳ್ಳಲಾಗುವುದು. ತುಳುವಿನಲ್ಲಿ ‘ಪಾಲೆ’ ಎಂದು ಕರೆಯುವ ‘ಹಾಲೆ’ ಮರವನ್ನು “Alstonia Scholaris” ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಿಕೊಳ್ಳುತ್ತಾರೆ. ಒಂದು ನಿರ್ದಿಷ್ಟ ಸಾಂಸ್ಕೃತಿಕ ಸನ್ನಿವೇಶದಲ್ಲಿ ಈ ಮರದ ತೊಗಟೆಯ ರಸವು ಆಚರಣೆಯ ರೂಪದಲ್ಲಿ ರೋಗ ನಿರೋಧಕ ಔಷಧಿಯ ರೂಪದಲ್ಲಿ ಸೇವನೆಯಾಗುತ್ತದೆ. ಈ ಆಚರಣೆಯಲ್ಲಿ ಕಾಲ ಮತ್ತು ಪರಿಸರಗಳು ವಿಧಿನಿಷೇಧಗಳ ರೂಪದಲ್ಲಿ ರಿಚುವಲೈಸ್‌ಆಗುತ್ತದೆ. ಈ ವಿಧಿನಿಷೇಧಗಳು ಜನಪದ ವೈದ್ಯದ ಸ್ವರೂಪ ಅಥವಾ ದೇಹ ಪ್ರಕೃತಿಯ ಕಲ್ಪನೆಯನ್ನು ಸಾಕಾರಗೊಳಿಸುತ್ತವೆ.

ಜನಪದ ವೈದ್ಯದಲ್ಲಿ ಮನುಷ್ಯನೂ ಸೇರಿದ ಸುತ್ತಲಿನ ಪರಿಸರವನ್ನು ಪ್ರಕೃತಿಯೆಂದು ಪರಿಕಲ್ಪಿಸಲಾಗಿದೆ. ಮನುಷ್ಯನನ್ನು ಪ್ರಕೃತಿಯ ಭಾಗವಾಗಿಯೇ ಪರಿಗಣಿಸಲಾಗಿದೆ. ಹೀಗಾಗಿ ಪ್ರಕೃತಿಯಲ್ಲಾಗುವ ಬದಲಾವಣೆಗಳು ಮನುಷ್ಯನ ದೇಹಪ್ರಕೃತಿಯ ಮೇಲೂ ಪರಿಣಾಮ ಬೀರುವುದೆನ್ನುವ ತತ್ತ್ವ ಈ ವೈದ್ಯವಿಧಾನದಲ್ಲಿ ಪ್ರಧಾನವಾಗಿದೆ.

ಹೀಗಾಗಿ ಪ್ರಕೃತಿಯ ಕಾರಣದಿಂದ ಅಸಮತೋಲನಗೊಳ್ಳುವ ದೇಹಪ್ರಕೃತಿಯನ್ನು ಪ್ರಕೃತಿಯ ಮೂಲಕವೇ ಸಮತೋಲನಗೊಳಿಸಲಾಗುತ್ತದೆ. ಹೀಗಾಗಿ ನಿಸರ್ಗದ ಕಾಲ ಪರಿಸರಗಳು (ಗಿಡಮೂಲಿಕೆಗಳು) ಜನಪದ ವೈದ್ಯದಲ್ಲಿ ಪರಿಣಾಮವನ್ನು ಉಂಟು ಮಾಡುವ ಮಹತ್ತ್ವದ ಅಂಶಗಳಾಗುತ್ತವೆ.

ಸೌರಮಾನ ಪದ್ಧತಿಯಲ್ಲಿ ಕಾಲಮಾಪನ ಮಾಡುವ ತುಳುವರ ವಾರ್ಷಿಕ ಆವರ್ತನದಲ್ಲಿ ‘ಆಟಿ’ ತಿಂಗಳು (ಆಷಾಢ /ಜುಲೈ-ಅಗಸ್ಟ್‌) ಮಹತ್ವ್ತದ ತಿಂಗಳಾಗಿದೆ. ತೌಲವ ಸಾಂಸ್ಕೃತಿಕ ಬದುಕಿನಲ್ಲಿ ಈ ತಿಂಗಳು ಹಲವು ಕಾರಣಗಳಿಂದ ಅಮಂಗಳದ ತಿಂಗಳು. ರೋಗರುಜಿನಗಳ ಅನಿಷ್ಟದ ಕಾಲ. ಇಂತಹ ತಿಂಗಳಿನ ಅಮಾವಾಸ್ಯೆಯಂದು ಬೆಳೆ ಹಾಗೂ ಮನುಷ್ಯನ ಆರೋಗ್ಯ ಸಂರಕ್ಷಣೆಗಾಗಿ ಹಲವು ಬಗೆಯ ಕ್ರಿಯಾಚರಣೆಗಳು ನಡೆಯುತ್ತವೆ. ಈ ಎಲ್ಲ ಕ್ರಿಯಾಚರಣೆಗಳು ಮುಖ್ಯವಾಗಿ ಉತ್ಪಾದನೆಗೆ ಸಂಬಂಧಪಟ್ಟವುಗಳು. ಅಮಾವಾಸ್ಯೆಯ ದಿನದಂತು ಬೆಳಗಿನ ಜಾವದಲ್ಲಿ ‘ಎಣೆಳ್‌’ ಬೆಳೆ (ಮೊದಲ ಬೆಳೆ)ಗೆ ನೇಜಿ (ಬತ್ತದ ಸಸಿ)ನೆಟ್ಟ ಗದ್ದೆಯಲ್ಲಿ ಬೆಳೆಯ ರಕ್ಷಣೆಗಾಗಿ ‘ಕಾಯೆರ್‌’ (ಕಾಸರಕ) ಗಿಡದ ಗೆಲ್ಲನ್ನು ನೆಡುವ ಕ್ರಮವಿದೆ. ಇದನ್ನು ‘ಕಾಪು’ (ರಕ್ಷಣೆ) ಆಗಿ ನೆಡುತ್ತಾರೆ. ಕಾಯರ್‌ಗೆಲ್ಲನ್ನು ಗದ್ದೆಯಲ್ಲಿ ಆ ದಿನ ನೆಡುವುದರಿಂದ ಬೆಳೆಗೆ ಬರುವ ಮಾರಿ (ಹುಳುಬಾಧೆ)ಯನ್ನು ‘ಕಾಯೆರ್‌’ ತಡೆಯುತ್ತದೆ ಎಂದು ಜನಪದರು ಹೇಳುತ್ತಾರೆ. ಈ ಕ್ರಿಯಾಚರಣೆಯ ಮೂಲಕ ಅಮಾವಾಸ್ಯೆಯ ವಿಶಿಷ್ಟ ಕಾಲ ಬೆಳೆಗೆ ಬರುವ ಮಾರಿಯನ್ನು ತಡೆಯುವ ಮಾಂತ್ರಿಕ ಶಕ್ತಿಯನ್ನು ಕಾಯರ್‌ಗೆಲ್ಲಿಗೆ ವರ್ಗಾಯಿಸುತ್ತದೆ ಎಂದು ಜನಪದ ನಂಬುತ್ತದೆ. ಮನುಷ್ಯರಿಗೆ ಮತ್ತು ಊರಿಗೆ ಬರುವ ಮಾರಿಯನ್ನು ಓಡಿಸುವ ಮಾಂತ್ರಿಕ ಶಕ್ತಿಯಾದ ಆಟಿಕಳೆಂಜ/ಕಡೆಂಜ ಕುಣಿತವೂ ಇದೇ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಟಿ ಅಮವಾಸ್ಯೆಯೆಂದು ಹಾಲೆಮರದ ‘ಮದ್ದು ಕುಡಿಯುವ’ ಸಾಮೂಹಿಕ ಆಚರಣೆಯೂ ಇದೇ ಕಾಲದಲ್ಲಿ ನಡೆಯುತ್ತದೆ.

ಮದ್ದಿನ ‘ಸಂಗ್ರಹ’ ಮತ್ತು ‘ಸೇವನೆ’ಯ ಕ್ರಿಯೆಗಳಲ್ಲಿ ಸಂಸ್ಕೃತಿ ವಿಧಿಸಿರುವ ವಿಧಿ ನಿಷೇಧಗಳ ಪಾಲನೆಯಾದಾಗ ಮಾತ್ರ ಹಾಲೆಮರದ ರಸ ಮದ್ದಾಗಿ ಮಾಂತ್ರಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈ ಆಚರಣೆಯ ಆರಂಭ ವಿಧಿವತ್ತಾಗಿ ಹಿಂದಿನ ದಿನವೇ ನಡೆಯುತ್ತದೆ. ಆ ದಿನ ಸಂಜೆ ಮನೆ ಮಂದಿ ಹಾಲೆ ಮರದ ಬಳಿಗೆ ಬಂದು “ನಾಳೆ ನಾವು ನಿನ್ನಲ್ಲಿಗೆ ಬರುವಾಗ ನೀನು ನಮಗೆ ಮದ್ದನ್ನು ಕೊಡಬೇಕು” ಎಂದು ಜನಪದರು ಪ್ರಾರ್ಥಿಸುತ್ತಾರೆ. ಮದ್ದು ‘ಸಂಗ್ರಹ’ದ ವಿಧಿಯ ಪ್ರಕಾರ ಮರುದಿನ ಬೆಳಗ್ಗೆ ಅಂದರೆ ಅಮಾವಾಸ್ಯೆಯ ಕತ್ತಲು ಕಳೆದು ಬೆಳಕು ಮೂಡುವ ಮುನ್ನ ಮನೆಯಿಂದ ಬೆತ್ತಲೆಯಾಗಿ ಹೊರಟು ಹಾಲೆ ಮರದ ಬಳಿಗೆ ಬರಬೇಕು. ಹೀಗೆ ಬಂದು ಮರಕ್ಕೆ ಮುರು ಸುತ್ತು ತಿರುಗಿ ಕಲ್ಲಿನಿಂದ ಕೆತ್ತಿ ಅಥವಾ ಹಲ್ಲಿನಿಂದ ಕಚ್ಚಿ ಮರದ ತೊಗಟೆಯನ್ನು ಸಂಗ್ರಹಿಸಿಕೊಳ್ಳಬೇಕು. ಆ ಬಳಿಕ ಬಟ್ಟೆ ತೊಟ್ಟು ಮನೆಗೆ ಹಿಂದಿರುಗಿರಬೇಕು.

ಮನೆ ಹೆಂಗಸರು ತೊಗಟೆಯನ್ನು ಅರೆಯುವ ಕಲ್ಲಿನಲ್ಲಿ ಕಡಿದು ಅದರ ರಸವನ್ನು ತೆಗೆಯುತ್ತಾರೆ. ಬೆಳ್ಳುಳ್ಳಿ ಮತ್ತು ಮೆಣಸನ್ನು ಗುದ್ದಿ ರಸದ ಜೊತೆಗೆ ಬೆರಸುತ್ತಾರೆ. ಬಳಿಕ ಒಂದು ಬೆಣಚು ಕಲ್ಲನ್ನು ಬಿಸಿ ಮಾಡಿ ರಸಕ್ಕೆ ಒಗ್ಗರಣೆ ಕೊಡುತ್ತಾರೆ. ಆ ರಸವನ್ನು ಮನೆಮಂದಿ ಬರಿ ಹೊಟ್ಟೆಗೆ ಸೇವಿಸುತ್ತಾರೆ. ಈ ರಸ ಬಹಳ ಕಹಿ ಇರುವ ಕಾರಣ ರಸವನ್ನು ಕುಡಿದ ಬಳಿಕ ಬೆಲ್ಲ ಅಥವಾ ಸಕ್ಕರೆಯ ಸಿಹಿಯನ್ನು ಚಪ್ಪರಿಸುತ್ತಾರೆ. ಈ ರಸ ಬಹಳ ಉಷ್ಣ ಎಂದು ಜನಪದರು ತಿಳಿದಿರುವುದರಿಂದ ಆ ಉಷ್ಣತೆಯ ಸಮತೋಲನಕ್ಕಾಗಿ ತಂಪಾದ ಮೆಂತೆಯ ಗಂಜಿಯನ್ನು ಉಣ್ಣುತ್ತಾರೆ.

ರೋಗ ನಿರೋಧಕವಾಗಿ ಹಾಲೆ ಮರದ ರಸವನ್ನು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಮದ್ದಾಗಿ ಕುಡಿಯುವ ಈ ಆಚರಣೆಯನ್ನು ಕುರಿತು ಜನಪದ ತನ್ನದೆ ಆದ ವಿವರಣೆಯನ್ನು ಕೊಡುತ್ತದೆ.

ಅತಿ ಅಮಾವಾಸ್ಯೆಯಂದು ಬರಿ ಹೊಟ್ಟೆಗೆ ಹಾಲೆಮರದ ರಸವನ್ನು ಕುಡಿದರೆ ವರ್ಷದ ಯಾವುದೇ ಕಾಲದಲ್ಲಿ ರೋಗಗಳು ಬರುವುದಿಲ್ಲ.

ಮಕ್ಕಳಿಗೆ ಹುಳಬಾಧೆ ತಪ್ಪುತ್ತದೆ.

ಅಮವಾಸ್ಯೆಯ ಹಿಂದಿನ ದಿನ ತೊಗಟೆಯನ್ನು ಮಜ್ಜಿಗೆಯಲ್ಲಿ ನೆನಸಿ ಬೆಳಗಿನ ವೇಳೆಯಲ್ಲಿ ಅರೆದು ಅದರ ರಸವನ್ನು ಮಕ್ಕಳಿಗೆ ಕುಡಿಸಿದರೆ ವರ್ಷಪೂರ್ತಿ ಮದ್ದು ಕೊಡುವ ಅಗತ್ಯವಿಲ್ಲ.

ಅಮವಾಸ್ಯೆಯ ರಾತ್ರಿ ಬೇರೆ ಬೇರೆ ಕಡೆಗಳಿಂದ ನಾನಾ ಜಾತಿಯ ಹಾವು ಪಕ್ಷಿಗಳು ಬಂದು ಮರದಲ್ಲಿ ನೆಲೆಸುತ್ತವೆ. ಇದರಿಂದ ಹಲವು ಕಡೆಯ ಹಲವು ರೀತಿಯ ಔಷಧದ ಅಂಶಗಳು ಹಾಲೆ ಮರದಲ್ಲಿ ಕೂಡಿಕೊಳ್ಳುತ್ತವೆ.

ಬತ್ತಲೆಯಾಗಿ ಹೋಗಿ ತೊಗಟೆಯನ್ನು ತೆಗೆದರೆ ಮಾತ್ರ ತೊಗಟೆಯಲ್ಲಿ ಮದ್ದಿನ ಅಂಶಗಳಿರುತ್ತವೆ.

ಕಲ್ಲಿನಿಂದ ಕೆತ್ತಿ ಅಥವಾ ಹಲ್ಲಿನಿಂದ ಕಚ್ಚಿ ತೊಗಟೆಯನ್ನು ತೆಗೆಯಬೇಕು.

ಕತ್ತಿ ಅಥವಾ ಕಬ್ಬಿಣದ ಸಾಧನವನ್ನು ಈ ಕೆಲಸಕ್ಕೆ ಉಪಯೋಗಿಸಬಾರದು. ಒಂದು ವೇಳೆ ಉಪಯೋಗಿಸಿದರೆ ಮದ್ದು ವಿಷವಾಗುವುದು.

ಯಾರೂ ನೋಡದಂತೆ ಜನ ಏಳುವ ಮೊದಲೇ ಮದ್ದನ್ನು ಸಂಗ್ರಹಿಸಬೇಕು.

ಇತ್ಯಾದಿ.

ಮದ್ದು ಕುಡಿಯುವ ಬಗ್ಗೆ ಜನಪದದ ಇನ್ನೊಂದು ವಿವರಣೆ ಇಂತಿದೆ:- ತುಳುವರ ಕಾಲಗಣನೆ ಪ್ರಕಾರ ಮೊದಲ ಎರಡು ತಿಂಗಳು ಬೇಷ, ಕಾರ್ತೆಲ್‌(ಮೇ-ಜೂನ್‌: ಜೂನ್‌ಜುಲೈ) ಮಳೆಗಾಲದ ಆರಂಭದ ತಿಂಗಳುಗಳಾಗಿದ್ದು ಈ ಕಾಲದಲ್ಲಿ ಗದ್ದೆಗಳಲ್ಲಿ ಬೇಸಾಯದ ಕೆಲಸ ಆರಂಭಗೊಂಡಿರುತ್ತದೆ. ಬೀಜ ಬಿತ್ತು ಮತ್ತು ನೆಡುವ ಕೆಲಸ ನಡೆಯುತ್ತಿರುತ್ತವೆ. ಬತ್ತದ ಸಸಿಗಳನ್ನು ನೆಡುವ ಸಮಯದಲ್ಲಿ ಗದ್ದೆಯ ನೀರಲ್ಲಿ ನಿಂತು ಹುಣಸೆಬೀಜಗಳನ್ನು ತಿನ್ನುತ್ತಿರುತ್ತಾರೆ. ಈ ಕಾರಣದಿಂದ ಹೊಟ್ಟೆಯಲ್ಲಿ ಹುಳಬಾಧೆ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯುವುದಕ್ಕಾಗಿ ಅಮಾವಾಸ್ಯೆಯ ದಿನದಂದು ಹಾಲೆ ಮರದ ರಸವನ್ನು ಕುಡಿಯಬೇಕು.

ಜನಪದ ವೈದ್ಯ ವಿಧಾನದಲ್ಲಿ ಹಾಲೆ ಮರದ ತೊಗಟೆ ರಸವನ್ನು ಹುಳುಬಾಧೆಗೆ ಮದ್ದಾಗಿ ಕೊಡುವ ಉದಾಹರಣೆಗಳಿಲ್ಲ. ಆದರೆ ಈ ರಸದಲ್ಲಿ ಔಷಧೀಯ ಅಂಶಗಳು ಅದರಲ್ಲೂ ಮುಖ್ಯವಾಗಿ ಹುಳಬಾಧೆಯನ್ನು ತಡೆಯುವ ಔಷಧೀಯ ಅಂಶಗಳಿವೆಯೆಂದು ಗುರುತಿಸಲಾಗಿದೆ.

ಆಟಿ ಅಮಾವಾಸ್ಯೆ ಆಚರಣೆ ಮೂಲಕ ವಿಶಿಷ್ಟವಾಗಿ ‘ಪಾಲೆ’ ಮರದ ರಸವನ್ನು ಮದ್ದಾಗಿ ಕುಡಿಯುವ ಕಾರಣದಿಂದ ‘ಪಾಲೆ’ ಮರವನ್ನು ಸ್ಥಳದ ಮೇರೆ ಎಂಬುದಾಗಿ ಪರಿಗಣಿಸಬಹುದು. ‘ಪಾಲೆ’ ಮರವು ಹಾಲು ಸುರಿಸುವ ಮರವೆಂದು ಜನಪದ ಗ್ರಹಿಸಿರುವುದರಿಂದ ಉತ್ಪಾದನೆಗೆ ಸಂಬಂಧಪಟ್ಟ ಕೆಲವೊಂದು ಕ್ರಿಯಾಚರಣೆಗಳಲ್ಲಿ ಪಾಲೆಮರ ಸಮೃದ್ಧಿಯ ಸಂಕೇತವಾಗಿ ತೌಳವ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಬಂಟ ಹಾಗೂ ‘ಮುಗೇರ’ ಎನ್ನುವ ಕೆಳವರ್ಗದ ಜಾತಿಯಲ್ಲಿ ಮದುವೆ ನಡೆಯುವಾಗ ಗಂಡಿನ ಮನೆಯಲ್ಲಿ ‘ಮುಹೂರ್ತ ಕಂಬ’ ಅಥವಾ ‘ಕನ್ಯಾಕಂಬ’ವನ್ನು ಮನೆಯ ಅಂಗಳದಲ್ಲಿ ನೆಟ್ಟಿರುತ್ತಾರೆ. ಹೆಚ್ಚಾಗಿ ಇದಕ್ಕೆ ‘ಹಾಲೆ’ ಮರವನ್ನೇ ಉಪಯೋಗಿಸುತ್ತಾರೆ. ದಾರೆಯಾಗುವ ಮೊದಲು ‘ಕನ್ಯಾಕಂಬ’ಕ್ಕೆ ಗಂಡು ತಾಳಿಯನ್ನು ಕಟ್ಟುತ್ತಾನೆ. ನಂತರ ಮದುವೆಯ ಎಲ್ಲ ವಿಧಿಕ್ರಿಯೆಗಳು ನಡೆಯುತ್ತವೆ. ಈಗ ನಡೆಯುವ ಬಂಟ ಜನಾಂಗದ ಮದುವೆಗಳಲ್ಲಿ ಈ ಪದ್ಧತಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಕೆಳವರ್ಗದ ಮುಗೇರ ಜನಾಂಗ ಈಗಲೂ ಈ ಪದ್ಧತಿಯನ್ನು ಅನುಸರಿಸುತ್ತದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಬಲಿಪಾಡ್ಯಮಿಯಂದು ಭೂಮಿಪುತ್ರ ಬಲಿಯೇಂದ್ರನನ್ನು ಭೂಮಿಗೆ ಬರಮಾಡಿಕೊಳ್ಳುವ ಕ್ರಿಯಾಚರಣೆಯಿದೆ. ಅಂದು ರಾತ್ರಿ ಗದ್ದೆಯಲ್ಲಿ ದೀಪವನ್ನು ಇಟ್ಟು (ಹಲವಾರು ವಿಧಿಗಳಿವೆ) ಬಲಿಯೇಂದ್ರನನ್ನು ಕುರಿತು ಪಾಡ್ದನ ಹೇಳಿ “ಬಲಿಯೇ ಕೂ. . . . .” ಎಂದು ಕೂಗುತ್ತಾ ಬಲಿಯೇಂದ್ರನನ್ನು ಕರೆಯುತ್ತಾರೆ. ಅಂಗಳದಲ್ಲಿ ಹಾಲೆ ಮರವನ್ನು ನೆಟ್ಟು ಅಲ್ಲಿ ಬಲಿಯೇಂದ್ರನನ್ನು ಪೂಜಿಸುತ್ತಾರೆ. ಈ ಹಾಲೆಮರವನ್ನು ‘ಬಲಿಯೇಂದ್ರ ಪಾಲೆ’ ಯೆಂದು ಕರೆಯುತ್ತಾರೆ. ಸುಗ್ಗಿ ಬೆಳೆಯ ಹೊತ್ತಿಗೆ ನಡೆಯುವ ಈ ಕ್ರಿಯಾಚರಣೆಯಲ್ಲಿ ‘ಹಾಲಿನ ಮರ’ ಎಂದು ಗುರುತಿಸುವ ಹಾಲೆಮರ ಸಮೃದ್ಧಿಯ ಸಂಕೇತವಾಗುತ್ತದೆ. ಹಾಲು ಸುರಿಸುವ ಕಾರಣದಿಂದ ಸಮೃದ್ಧಿಯ ಅರ್ಥದಲ್ಲಿ ಸಂಸ್ಕೃತಿಯ ಗ್ರಹಿಕೆಯಲ್ಲಿ ಈ ಮರ ವಿಶಿಷ್ಟವಾಗುವುದು ಮಾತ್ರವಲ್ಲ, ಆರೋಗ್ಯ ಸಂರಕ್ಷಣೆಯ ಮದ್ದು ಕುಡಿಯುವ ಕ್ರಿಯಾಚರಣೆಯಲ್ಲಿ ಆಟಿ ಅಮಾವಾಸ್ಯೆಯ ಕತ್ತಲೆ ಕಳೆದು ಬೆಳಕು ಮೂಡುವ ಸಂಧಿಕಾಲದಲ್ಲಿ ಈ ಮರ ಅಸಾಮಾನ್ಯವಾಗುತ್ತದೆ. ಮಾಂತ್ರಿಕ ಶಕ್ತಿಯನ್ನು ಒದಗಿಸುತ್ತದೆ. ಈ ಬಗೆಯ ಮಾಂತ್ರಿಕ ಪರಿವರ್ತನೆಗೆ ನಿಸರ್ಗದ ವಿಶಿಷ್ಟಾಂಶಗಳು ಕಾರಣವಾಗುತ್ತವೆ.

ತೌಳವ ಸಂಸ್ಕೃತಿಯಲ್ಲಿ ಆಟಿ ತಿಂಗಳು ವಾರ್ಷಿಕ ಆವರ್ತನದ ಪ್ರಕಾರ ಕಾರ್ತೆಲ್‌(ಜೂನ್‌ಜುಲೈ) ಮತ್ತು ಸೋಣ (ಶ್ರಾವಣ: ಅಗಸ್ಟ್‌- ಅಕ್ಟೋಬರ್‌) ತಿಂಗಳುಗಳ ಕಾಲಾಂತರದಲ್ಲಿ ಬರುತ್ತದೆ. ಈ ಕಾಲದಲ್ಲಿ ಯಾವುದೇ ಶುಭಕಾಯ್ ನಡೆಯುವುದಿಲ್ಲ; ಸಹಜ ಕ್ರಿಯೆ ನಡೆಯುವುದಿಲ್ಲ; ಸೃಷ್ಟಿಕಾರ್ಯ ನಡೆಯುವುದಿಲ್ಲ; ಲೋಕವ್ಯವಹಾರ ನಡೆಯುವುದಿಲ್ಲ. ಹಾಗಾಗಿ ಈ ತಿಂಗಳಲ್ಲಿ ಮದುವೆ ನಡೆಸಬಾರದು; ಮದರಂಗಿ ಇಡಬರದು; ಸೊಸೆಯನ್ನು ಅತ್ತೆ ಮನೆಯಲ್ಲಿ (ಗಂಡನ ಮನೆಯಲ್ಲಿ) ನಿಲ್ಲಿಸಬಾರದು ಮುಂತಾದ ನಿಷೇಧಗಳು ಹುಟ್ಟಿಕೊಂಡಿವೆ. ಉತ್ಪಾದನೆಗೆ ಸಂಬಂಧಪಟ್ಟಂತೆ (ಬೆಳೆ, ಹುಟ್ಟು) ಈ ಕಾಲ ಫಲವತ್ತತೆಯ ಕಾಲವಲ್ಲ. ಸಮಾಜಿಕವಾಗಿಯೂ, ಧಾರ್ಮಿಕವಾಗಿಯೂ ಇದು ಅಪವಿತ್ರವಾದ ಕಾಲ. ಆರ್ಥಿಕವಾಗಿ ದುರ್ಭಿಕ್ಷೆಯ ಕಾಲ. ಹವಾಮಾನದ ದೃಷ್ಟಿಯಿಂದಲೂ ಕೆಟ್ಟ ಕಾಲ. ರೋಗರುಜಿನ (ಮಾರಿ)ಗಳು ಬರುವ ಕಾಲ. ಈ ರೀತಿಯಲ್ಲಿ ಈ ಕಾಲ ಅಸಾಮಾನ್ಯ, ಕಾಲಾತೀತ, ಅಸ್ಪಷ್ಟವಾಗಿ, ಸಂದಿಗ್ಧವಾಗಿದ್ದು ವಿಶಿಷ್ಟ ಕ್ರಿಯಾಚರಣೆಗೆ ‘ಪವಿತ್ರವಾದ’ ಕಾಲ. ‘ಪವಿತ್ರ’ (Sacred) ಅಂದರೆ ಲೌಕಿಕ ವ್ಯವಹಾರಗಳಿಗೆ ಅತೀತವಾದದ್ದು, ನಿಷಿದ್ದವಾದದ್ದು.

ಆಟಿ ತಿಂಗಲ ತರುವಾಯ ಬರುವ ಸೋಣ ತಿಂಗಳು ತೀರಾ ವಿರುದ್ದವಾದ ಲಕ್ಷಣವನ್ನು ಒಳಗೊಂಡಿರುವ ಕಾಲ. ಆಟಿ ಎಲ್ಲ ರೀತಿಯಿಂದ ‘ಅಶುಬ’ದ; ಕೆಟ್ಟ ತಿಂಗಳಾಗಿದ್ದರೆ, ಸೋಣ ಶುಭದ; ಒಳಿತಿನ ತಿಂಗಳಾಗಿರುತ್ತದೆ. ಬೆಳೆಯು ಫಸಲು ಹೊಂದುವ ಕಾಲವಾಗಿರುತ್ತದೆ. ನಿಸರ್ಗದಲ್ಲಿ ಸೃಷ್ಟಿಕ್ರಿಯೆಗಳು ಮರುಕಳಿಸುತ್ತವೆ. ಹೀಗಾಗಿ ಫಲವತ್ತತೆ ಮತ್ತು ಸಮೃದ್ಧಿಯ ಕಾಲವಾಗಿ ಜನಪದವು ಈ ಕಾಲವನ್ನು ಗ್ರಹಿಸುತ್ತದೆ. ಧಾರ್ಮಿಕವಾಗಿ ಸಾಮಾಜಿಕವಾಗಿ ‘ಪವಿತ್ರ’ ಕಾಲವಾಗುತ್ತದೆ. ಈ ಅರ್ಥದಲ್ಲಿ ಸೋಣದ ಹಿಂದಿನ ತಿಂಗಳಾದ ಆಟಿ ತಿಂಗಳು ಸಂಕ್ರಮಣದ ಸ್ಥಿತಿಯನ್ನು ಹೊಂದಿರುತ್ತದೆ.

ವರ್ಷಾವಧಿಯ ಕಾಲರಹಿತ ಅವಧಿಯಾದ ಆಟಿ ತಿಂಗಳ ಕಾಲದ ಬದ್ಧತೆಯನ್ನು ಮಿತಗೊಳಿಸಿ ಹಾಗೂ ನಿರ್ದಿಷ್ಟಗೊಳಿಸಿ ಅಮಾವಾಸ್ಯೆಯ ದಿನದಂದು ಕತ್ತಲು ಕಳೆದು ಬೆಳಕು ಮೂಡುವ ಮೇರೆಯ ಅಥವಾ ತಿರುವಿನ ಕ್ಷಣದಲ್ಲಿ ಮದ್ದು ಕುಡಿಯುವ ಆಚರಣೆ ನಡೆಯುತ್ತದೆ. ಇಲ್ಲಿ ಈ ವಿಶಿಷ್ಟ ಕಾಲ, ತಿಂಗಳ ವ್ಯಾಪ್ತಿಯಿಂದ ದಿನದ ವ್ಯಾಪ್ತಿಗೆ, ದಿನದ ವ್ಯಾಪ್ತಿಯಿಂದ ಕ್ಷಣದ ವ್ಯಾಪ್ತಿಗೆ ಕಾಲರಹಿತ ಅವಧಿಯ ಮೇರೆಯನ್ನು ಮಿತಗೊಳಿಸಲಾಗಿದೆ. ಮತ್ತು ನಿರ್ದಿಷ್ಟಗೊಳಿಸಲಾಗಿದೆ. ಇಲ್ಲಿಯ ಕಾಲ ಸಂಕ್ರಮಣ ಸ್ಥಿತಿಯಲ್ಲಿದೆ. ಕತ್ತಲೆಯಿಂದ ಬೆಳಕಿನ ಕಡೆಗೆ ಚಲಿಸುವ ತಿರುಗುವ ತಿರುವಿನ ಸ್ಥಿತಿಯಲ್ಲಿದೆ.

ಕಾಲದ ಬಗೆಗಿನ ಈ ಎಲ್ಲ ಅಂಶಗಳನ್ನು ಪರಿಗಣಿಸುವಾಗ ಆಟಿ ತಿಂಗಳು, ಅಮವಾಸ್ಯೆಯ ದಿವಸ ಮತ್ತು ಅಮಾವಾಸ್ಯೆಯ ಕತ್ತಲು, ಕಾಲ ಪರಿವರ್ತನೆಗೊಳ್ಳುವ ಸಂಕ್ರಮಣ ಸ್ಥಿತಿಯಲ್ಲಿದೆ. ಅಸಾಮಾನ್ಯವಾದ, ಕಾಲಾತೀತವಾದ, ಅಸ್ಪಷ್ಟತೆಯ ಸಂದಿಗ್ಧವಾದ ಕಾಲದ ಈ ಮೇರೆ ಅಸ್ಪಷ್ಟತೆಯಿಂದ ಸ್ಪಷ್ಟತೆಯ ಕಡೆಗೆ ಅಥವಾ ಕೆಡುಕಿನಿಂದ ಒಳಿತಿನ ಕಡೆಗೆ ತಿರುಗುತ್ತಿರುತ್ತದೆ. ಆಟಿಯಿಂದ ಸೋಣದ ಅಭಿಮುಖವಾಗಿ, ಅಮಾವಾಸ್ಯೆಯಿಂದ ಹುಣ್ಣಿಮೆಯ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಚಲಿಸುವ, ತಿರುಗುವ ಕಾರಣದಿಂದ ಈ ಕಾಲ ವಿಪತ್ರವಾಗುತ್ತದೆ. ಕಾಲದ ಮೇರೆ ಇಲ್ಲಿ ನಿರ್ದಿಷ್ಟಗೊಂಡು ಸಾಮಾಜಿಕ ಕಾಲಾವಧಿಯಾಗಿ ಪರಿವರ್ತನೆಗೊಂಡು ಸಾಂಸ್ಕೃತಿಕ ಕ್ರಿಯಾಚರಣೆಯ ಮೂಲಕ ಈ ಕಾಲ ಸಾಮಾಜಿಕಗೊಳ್ಳುತ್ತದೆ.

ಕಾಲ ಮತ್ತು ಸ್ಥಳದ ಮೇರೆಗಳು ಒಂದಾಗುವುದು ಜನಪದ ವೈದ್ಯದ ಸ್ವರೂಪದಲ್ಲಿ ಬಹಳ ಮುಖ್ಯವಾದುದು. ಈ ಕಾರಣದಿಂದಲೇ ಹಾಲು ಬರುವ ಹಾಲೆ ಮರದ ರಸ ವಿಶಿಷ್ಟ ಕಾಲದಲ್ಲಿ ಜನಪದ ಔಷಧವಾಗಿ ಪರಿವರ್ತನೆಗೊಳ್ಳುತ್ತದೆ. ಇದು ಕಾಲ ಮಾಡುವ ಮಾಂತ್ರಿಕ ಪರಿವರ್ತನೆ. ಜನಪದ ಔಷಧಗಳ ಪರಿಣಾಮಗಳಿಗೆ ಮಾಂತ್ರಿಕ ಶಕ್ತಿಯನ್ನು ಒದಗಿಸುವ ಈ ರೀತಿಯ ಪರಿಸರ ಬಹಳ ಅವಶ್ಯವಾದುದು.

ಕಾಲ ಮತ್ತು ಸ್ಥಳದ (ಹಾಲೆಮರ) ನೆಲೆಯಲ್ಲಿ ನೈಸರ್ಗಿಕವಾಗಿರುವಂತೆ ಈ ಕಾಲದಲ್ಲಿ ಮದ್ದು ಸಂಗ್ರಹಿಸುವ ವಿಧಾನವೂ ನೈಸರ್ಗಿಕವಾಗಿರುತ್ತದೆ. ಇಲ್ಲಿಯ ವಿಧಿನಿಷೇಧಗಳನ್ನು ಗಮನಿಸದರೆ ಇದು ಸ್ಪಷ್ಟವಾಗುತ್ತದೆ. ಬಟ್ಟೆ ತೊಡದೆ ಬೆತ್ತಲೆಯಾಗಬೇಕು, ಕಬ್ಬಿಣವನ್ನು ಉಪಯೋಗಿಸದೆ ಕಲ್ಲಿನಲ್ಲಿ ಕೆತ್ತಿ ಅಥವಾ ಹಲ್ಲಿನಲ್ಲಿ ಕಚ್ಚಿ ತೊಗಟೆಯನ್ನು ತೆಗೆಯಬೇಕು ಅನ್ನುವ ವಿಧಿನಿಷೇಧಗಳು ನಿಸರ್ಗದತ್ತ ಉತ್ಪನ್ನಗಳನ್ನು ನೈಸರ್ಗಿಕವಾಗಿ ಸಂಗ್ರಹಿಸಬೇಕು ಎಂಬುದನ್ನು ಸೂಚಿಸುತ್ತದೆ. ಜನಪದ ವಯದ್ಯದ ತತ್ತ್ವದಲ್ಲಿ ಮಾನವನ ದೇಹವನ್ನು ಪ್ರಕೃತಿ ಎಂಬುದಾಗಿ ಪರಿಭಾವಿಸುವ ಕಾರಣದಿಂದಲೇ ಪ್ರಾಕೃತಿಕ ಪರಿವರ್ತನೆ ದೇಹಪ್ರಕೃತಿ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಾಗಿ ಅಸಮತೋಲನಗೊಳ್ಳುವ ದೇಹಪ್ರಕೃತಿಯನ್ನು ಪ್ರಕೃತಿ ವೈದ್ಯದ ಮೂಲಕ ಸಮತೋಲನಕ್ಕೆ ತರಲಾಗುತ್ತದೆ. ಅಥವಾ ಪ್ರಕೃತಿಯ ಅಸಮತೋಲನದ ದುಷ್ಪರಿಣಾಮವನ್ನು ಎದುರಿಸುವ ನಿರೋಧಕ ಶಕ್ತಿಯನ್ನು ದೇಹ ಪ್ರಕೃತಿಯಲ್ಲಿ ಮೈಗೂಡಿಸಿಕೊಳ್ಳುವಂತೆ ಪ್ರಕೃತಿವೈದ್ಯವನ್ನು ಸೇವಿಸಲಾಗುತ್ತದೆ. ಆಟಿ ಅಮಾವಾಸ್ಯೆಯ ಮದ್ದು ಕುಡಿಯುವ ಆಚರಣೆ ಜನಪದ ವೈದ್ಯದ ಸ್ವರೂಪವನ್ನು ವಿಧಿಬದ್ಧಗೊಳಿಸುತ್ತದೆ.

ನಿರ್ದಿಷ್ಠ ಸಸ್ಯಗಳು ಅಧ್ಯಯನ

. ತೆಂಗು

ಇತ್ತೀಚೆಗೆ ಭಾರತದ ಪ್ರತಿಯೊಂದು ಸಂಸ್ಕೃತಿಯ ಆಚರಣಾ ವಿಧಾನಗಳಲ್ಲಿ ತೆಂಗು ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಕ್ರಿಸ್ತಶಕ ೬ನೇ ಶತಮಾನಕ್ಕಿಂತ ಮೊದಲು ಭಾರತದ ಹಲವಾರು ಪ್ರದೇಶಗಳಿಗೆ ತೆಂಗು ಅಪರಿಚಿತವಾಗಿತ್ತು. ಭಾರತೀಯ ಪದ್ಧತಿಗಳು ಹಾಗೂ ಸಂಪ್ರದಾಯಗಳು ಕಾಲಾತೀತವಾಗಿರುವಂತಹದ್ದು ಮತ್ತು ಬದಲಾಗದ್ದು ಅನ್ನುವ ವಾದಕ್ಕೆ ಈ ಮೇಲಿನ ಸಂಗತಿ ಒಂದು ಉತ್ತಮ ಟೀಕೆಯಾಗುತ್ತದೆ. ಒಟ್ಟಿನಲ್ಲಿ ಯಾವುದೇ ರೀತಿಯ ಸಂಪ್ರದಾಯ, ಪದ್ಧತಿ ಹಾಗೂ ಆಚರಣಾ ವಿಧಾನಗಳು ಚರಿತ್ರಾತೀತವಾದುದಲ್ಲ. ಬದಲಾಗಿ ಅವು ಒಂದು ನಿರ್ದಿಷ್ಟ ಚಾರಿತ್ರಿಕ ಕಾಲಘಟ್ಟದಲ್ಲಿ ಉತ್ಪಾದಿತಗೊಳ್ಳುತ್ತವೆ ಮತ್ತು ಮರು ಉತ್ಪಾದಿತಗೊಳ್ಳುತ್ತವೆ.

ಕರಾವಳಿಯ ಅರ್ಥವ್ಯವಸ್ಥೆಯನ್ನು ರೂಪಿಸುವಲ್ಲಿ ಮೂಲಾಧಾರವಾಗಿರುವ ತೆಂಗು ಪಶ್ಚಿಮ ಕರಾವಳಿಯ ಅಭಿವೃದ್ಧಿಗೆ ಪ್ರಧಾನ ಕಾರಣವಾಗಿದೆ. ತೆಂಗು ಮಲೇಶ್ಯದಿಂದ ಆಮದಾದ ಸಸ್ಯೋತ್ಪನ್ನವೆಂದು ನಂಬಲಾಗಿದೆ. ಸುಮಾರು ಕ್ರಿ. ಪೂ. ಮೊದಲ ಶತಮಾನದಲ್ಲಿ ಮಧ್ಯಭಾಗದಲ್ಲಿ ತೆಂಗು ಪೂರ್ವ ಕರಾವಳಿಗೆ ವ್ಯಾಪಿಸಿತು. ತದನಂತರ ಒಂದು ಶತಮಾನದಲ್ಲಿ ಇದು ಪಶ್ಚಿಮ ಕರಾವಳಿಗೂ ಬಂದಿತು[1] ಪ್ರತಿಯೊಂದು ಹಿಂದೂ ಸಮಾರಂಭಗಳಲ್ಲಿ ಯಾವುದೇ ರೀತಿಯ ಶಾಸ್ತ್ರೀಯ ಸಮ್ಮತಿಯಿಲ್ಲದೆ ತೆಂಗು ಬಳಕೆಯಾಗತೊಡಗಿತು.[2]

ತೆಂಗು ಭೂಲೋಕಕ್ಕೆ ಬಂದ ಬಗ್ಗೆ ಪುರಾಣಗಳಿರುವಂತೆ ತುಳುಪಾಡ್ದನವೊಂದರಲ್ಲಿ ತುಳುನಾಡಿಗೆ ಬಂದ ಪೌರಾಣಿಕ ಹಿನ್ನೆಲೆಯಿದೆ.[3] ಇದರ ಪ್ರಕಾರ ಫಲತ್ತೋಸ್‌, ಅಶೋಕ, ಬಾದಾಮು, ದರ್ಬೆ ಇವೇ ಮುಂತಾದ ವಸ್ತುಗಳನ್ನು ಹೋಮಕ್ಕಾಗಿ ಭುಲೋಕಕ್ಕೆ ದೇವರು ಕಳುಹಿಸುತ್ತಾರೆ. ಅವುಗಳ ಜೊತೆಗೆ ಮಾವು, ಮತ್ತು ಬೀಜ (ಗೇರು ಬೀಜ) ಕೂಡಾ ಭೂಲೋಕಕ್ಕೆ ಬರುತ್ತವೆ. ಈ ಸಂಗತಿ ದೇವರಿಗೆ ತಿಳಿಯಿತು. ಮಾವು, ಗೇರು ಭೂಲೋಕಕ್ಕೆ ಹೋದರೆ ಅಲ್ಲಿಯ ಜನರು ಹೇಗಪ್ಪ ಬದುಕುವುದೆಂಬುದಾಗಿ ದೇವರು ಯೋಚಿಸುತ್ತಿದ್ದಾಗ ದೇವಲೋಕದಿಂದ ಭೂಲೋಕಕ್ಕೆ ಹೋದ ತೆಂಬಿನ ಮರ ಕಂಡಿತಂತೆ “ಅಪಗ ನರಪುರಿ ಬದುಕು” (ಹಾಗಾದರೆ ನರಹುಳ ಬದುಕೀತು) ಎಂದು ದೇವರು ಸಮಾಧಾನ ಪಟ್ಟು ದೇವಲೋಕಕ್ಕೆ ತೆರಳುತ್ತಾರಂತೆ. ಇಲ್ಲಿ ಉಲ್ಲೇಖಿಸಲಾದ ಜನಪದ ಪುರಾನ ಮಾನವ ಬದುಕಿಗೆ ತೆಂಗು ಅನಿವಾರ್ಯ ಅನ್ನುವುದನ್ನು ಹೇಳುತ್ತದೆ. ಜೊತೆಗೆ ಆರ್ಥಿಕ ಉತ್ಪನ್ನಗಳಾದ ಮಾವು, ಗೇರುಗಳಂತೆ ತೆಂಗು ಕೂಡಾ ಭೂಲೋಕಕ್ಕೆ ಬಂದಿರುವ ಮರ ಎಂದು ಉಲ್ಲೇಖಿಸುತ್ತದೆ. ಆ ಮೂಲಕ ತೆಂಗು ಅನ್ಯದೇಶದಿಂದ ಬಂದಿರುವ ವಾಣಿಜ್ಯ ಬೆಳೆ ಎಂಬುದನ್ನು ಸೂಚಿಸುತ್ತದೆ.

ಜನಪದ ವರ್ಗೀಕರಣದ ಪ್ರಕಾರ ತೆಂಗು ಫಲ ಕೊಡುವ ಮರ. ಜನಾಂಗದ ಅರ್ಥವ್ಯವಸ್ಥೆಯನ್ನೂ ರೂಪಿಸುವ ಪ್ರಧಾನ ಬೆಳೆಯಾಗಿರುವುದರಿಂದಲೇ ತೆಂಗಿನ ಕುರಿತಂತೆ ಸಂಸ್ಕೃತಿಯಲ್ಲಿ ಪಾವಿತ್ರ್ಯದ ಕಲ್ಪನೆಯಿದೆ. ಆರ್ಥಿಕ ಉತ್ಪನ್ನವಾದ ಅಕ್ಕಿಯ ಹಾಗೆ ತೆಂಗು ಕೂಡಾ ದೈವೀ ಶಕ್ತಿಗಳಿಗೆ ಪ್ರತೀತ ಅಥವಾ ಬಿಂಬವಾಗುತ್ತದೆ. ಸ್ವಸ್ತಿಕೆ ಇಡುವ ಸಂದರ್ಭದಲ್ಲಿ ನಿರಾಕಾರವಾಗಿರುವ ದೈವೀಶಕ್ತಿಯನ್ನು ಅಕ್ಕಿ, ತೆಂಗು ಮುಂತಾದ ವಸ್ತು ಪ್ರತೀಕದ ಮೂಲಕ ಪ್ರತ್ಯಕ್ಷೀಕರಿಸಿಕೊಳ್ಳಲಾಗುತ್ತದೆ.

ಬಹಳ ಎತ್ತರಕ್ಕೆ ಬೆಳೆಯದೆ ಗಿಡ್ಡಕ್ಕೆ ಇರುವ ತೆಂಗನ್ನು ‘ಜೀಕೆಗಾಯಿ’ ಎನ್ನುತ್ತಾರೆ. ಈ ಜಾತಿಯ ತೆಂಗು ಬಹಳ ಬೇಗನೆ ಫಲ ಕೊಡುತ್ತದೆ. ‘ಜೀಕೆ’ ಅನ್ನುವ ವಿಶೇಷಣವನ್ನು ಸಸ್ಯ, ಪ್ರಾಣಿ ಮತ್ತು ಮನುಷ್ಯ ವರ್ಗಕ್ಕೂ ಅನ್ವಯಿಸಲಾಗುತ್ತದೆ. ಜೀಕೆನಾಯಿ, ಜೀಕೆಕೋಳಿ ಇದೇ ವರ್ಗೀಕರಣದಲ್ಲಿ ಬರುತ್ತವೆ. ತೆಂಗಿನ ಗಂಟುಗಳು ದೂರವಿದ್ದರೆ ಅದು ‘ದೂರಗಂಟ್‌’, ಹತ್ತಿರ ಹತ್ತಿರವಿದ್ದರೆ ಅದು ‘ಹತ್ತಿರಗಂಟ್‌’. ಹೀಗೆ ತೆಂಗಿನ ಮರದ ಭೌತಿಕ ರಚನೆಯನ್ನು ಗುರುತಿಸಿ ಜಾತಿಗಳಾಗಿ ವರ್ಗೀಕರಿಸಲಾಗುತ್ತದೆ. ತೆಂಗಿನ ಕಾಯಿಯ ಬಣ್ಣವನ್ನು ಲಕ್ಷಿಸಿ ಅದು ಸಾಮಾನ್ಯ ಬಣ್ಣವಾಗಿದ್ದರೆ ಅದನ್ನು ವಿಶಿಷ್ಟವಾಗಿ ಗುರುತಿಸುವುದಿಲ್ಲ. ಅದರ ಬಣ್ಣ ಕೆಂಪಗೆ ಇದ್ದರೆ ಅದನ್ನು ‘ಕೆಂದಾಳೆ/ಗೆಂದಾಳೆ’ ಎಂದೂ ಅಕ್ಕಚ್ಚಿನ ಬಣ್ಣದಾಗಿದ್ದರೆ ಅದನ್ನು ‘ಅರ್ಕಂಜಿಗೆಂದೆ’ ಎಂದೂ ಗುರುತಿಸಿಕೊಳ್ಳಲಾಗುತ್ತದೆ.

 

[1] Kosambi, 1976, ಪುಟ, ೧೮೯

[2] Kosambi, 1975, ಪುಟ, ೨೭೩

[3]ಗಣಪತಿ ಭಟ್‌ಪಿ. ‘ತೆಂಗು ಒಂದು ಅಧ್ಯಯನ’, ಕನ್ನಡ ಅಧ್ಯಯನ ವಿಭಾಗ, ಮಂಗಳೂರು, ವಿಶ್ವವಿದ್ಯಾಲಯ, ೧೯೮೫ (ಅಪ್ರಕಟಿತ ಪ್ರಬಂಧ)