ಮಾಂತ್ರಿಕ ಮಾಧ್ಯಮ

ಗೆಂದಾಳೆ ಅಥವಾ ಕೆಂದಾಳೆ ಅನ್ನುವ ನಾಮವಿಶೇಷಣವು ತೆಂಗಿನಕಾಯಿಯ ಬಣ್ಣವನ್ನು ಗುರುತಿಸಿ ಗ್ರಹಿಸಿದ ಕ್ರಮದಲ್ಲಿ ರೂಪಗೊಂಡಿದೆ. ಕೆಂಪಾಗಿ ಇರುವ ತೆಂಗಿನಕಾಯಿಯು ಕೆಂದಾಲೆಯಾಗುತ್ತದೆ. ಕೆಂದಾಲೆಯು ಕೆಂಪು ಅಥವಾ ಸರ್ಪಸುತ್ತು ರೋಗಗಳಿಗೆ ವಿಶೇಷವಾದ ಮದ್ದು ಆಗಿರುತ್ತದೆ. ಕೆಂಪು ರೋಗವು ಚರ್ಮರೋಗವಾಗಿದ್ದು ಅದು ಕೆಂಪು ಬಣ್ಣವನ್ನು ಹೋಲುವುದರಿಂದ ಈ ರೋಗವು ಜನಪದ ಗ್ರಹಿಕೆಯಲ್ಲಿ ಸಾದೃಶ್ಯವಾಗಿ ‘ಕೆಂಪುರೋಗ’ ವಾಗುತ್ತದೆ. ಕೆಂಪು ಮತ್ತು ಸರ್ಪಸುತ್ತಿನಂತಹ ಚರ್ಮವ್ಯಾಧಿಗಳು ಮಾನವ ನಿಯಂತ್ರಣಕ್ಕೆ ಸಿಗದ ಶಕ್ತಿಗಳ ಕಾರಣದಿಂದಾಗಿ ದೇಹದಲ್ಲಿ ಕಾಣಿಸುವ ರೋಗಗಳಾಗಿರುವುದರಿಂದಲೇ ಅವುಗಳನ್ನು ಉಪಶಮನಗೊಳಿಸಲು ಜನಪದ ವೈದ್ಯದಲ್ಲಿ ಮಾಂತ್ರಿಕ ‌ಕ್ರಿಯೆಗಳು ಅನುಷ್ಠಾನಗೊಳ್ಳುತ್ತವೆ. ಈ ಸನ್ನಿವೇಶದಲ್ಲಿ ತೆಂಗು ಪ್ರಧಾನವಾಗಿ ಆಯ್ಕೆಗೊಳ್ಳುತ್ತದೆ. ಅದರಲ್ಲೂ ಪ್ರಧಾನವಾಗಿ ಗೆಂದಾಳೆಯೇ ಆಯ್ಕೆಗೊಳ್ಳುತ್ತದೆ. ಕೆಂಪುರೋಗವನ್ನು ಕೆಂಪಾಗಿ ಗ್ರಹಿಸುವುದರಿಂದ ಬಣ್ಣದ ಸಾದೃಶ್ಯ ಗ್ರಹಿಕೆಯ ಕಾರಣದಿಂದಾಗಿ ಕೆಂಪುರೋಗಕ್ಕೆ ಗೆಂದಾಲೆಯು ಆಯ್ಕೆಯಾಗುತ್ತದೆ, ಪ್ರಧಾನವಾಗುತ್ತದೆ.

ಸಾವು : ಸಂಬಂಧ ಕಳಚುವ ಪ್ರಕ್ರಿಯೆಯಾಗಿ

ತೆಂಗಿನಕಾಯಿಯನ್ನು ಒಡೆದ ಬಳಿಕ ಅದನ್ನು ಜೊತೆಗೂಡಿಸಬಾರದು ಅನ್ನುವ ನಂಬಿಕೆ ಇದೆ. ಅಲ್ಲದೆ ಒಡೆದ ತೆಂಗಿನಕಾಯಿಯನ್ನು ಮೇಲ್ಮುಖವಾಗಿ ಇಡಬಾರದು ಬದಲಾಗಿ ಕವುಚಿಯೇ ಇಡಬೇಕು ಅನ್ನುವ ವಿಧಿ ಇದೆ. ಎರಡು ಭಾಗ ಮಾಡಿದ ತೆಂಗಿನಕಾಯಿಯನ್ನು ಮೇಲ್ಮುಖವಾಗಿ ಇಟ್ಟರೆ ಸಂಸ್ಕೃತಿಯಲ್ಲಿ ಆಶುಭವಾಗುತ್ತದೆ; ಸಾವನ್ನು ಸೂಚಿಸುತ್ತದೆ.

ಮನೆಯಲ್ಲಿ ಸಾವು ಸಂಭವಿಸಿದಾಗ ಮನೆಯ ಹೊಸ್ತಿಲಲ್ಲಿ ತೆಂಗಿನಕಾಯಿಯನ್ನು ಒಡೆದು ಹೆಣದ ತಲೆ ಮತ್ತು ಕಾಲಿನ ಬುಡದಲ್ಲಿಟ್ಟು ಅದಕ್ಕೆ ಎಣ್ಣೆ ಸುರಿದು ದೀಪ ಉರಿಸುತ್ತಾರೆ. ಹೆಣವನ್ನು ಸುಡುವಾಗ ಇವನ್ನು ಕಾಷ್ಠಕ್ಕೆ ಹಾಕುತ್ತಾರೆ. ಸಾವನ್ನು ಸೂಚಿಸುವ ಸಂಗತಿಯಾದುದರಿಂದಲೇ ಒಡೆದ ತೆಂಗಿನಕಾಯಿಗಳನ್ನು ಮೇಲ್ಮುಖವಾಗಿ ಇಡುವುದಾಗಲಿ ಅಥವಾ ಒಡೆದ ತೆಂಗಿನಕಾಯಿಗಳನ್ನು ಒಂದು ಮಾಡುವುದಾಗಲೀ ಸಂಸ್ಕೃತಿಯಲ್ಲಿ ಕೂಡದು. ಅದು ನಿಷೇಧವಾಗುತ್ತದೆ. ಸಾವನ್ನು ಸೂಚಿಸುವ ಈ ರೀತಿಯ ಸಂಗತಿಗಳನ್ನು ಜನಪದವು ದೈನಂದಿನ ಬದುಕಿನಲ್ಲಿ ಆದಷ್ಟು ಇಲ್ಲವಾಗಿಸಲು ಪ್ರಯತ್ನಿಸುತ್ತದೆ.

ಸಾಮಾನ್ಯವಾಗಿ ಮನೆಯ ಹೊಸ್ತಿಲಲ್ಲಿ ಒಳ-ಹೊರಗೆ ಕುಳಿತು ತೆಂಗನ್ನು ಇಬ್ಬಾಗ ಮಾಡಲಾಗುತ್ತದೆ. ಈ ಕ್ರಿಯೆಯನ್ನು ಹೆಚ್ಚಾಗಿ ಮರಣ ಸಂಭವಿಸಿದ ವ್ಯಕ್ತಿಯ ಹಿರಮಗನೇ ಮಾಡುತ್ತಾನೆ. ತೆಂಗಿನ ಕಾಯಿಯಲ್ಲಿ ವೀಳ್ಯ ಮತ್ತು ಅಡಿಕೆಯನ್ನು ಗುದ್ದಿ ಹೆಣದ ಬಾಯಿಯಲ್ಲಿ ಇಡಲಾಗುತ್ತದೆ. ದೈನಂದಿನ ಸಾಮಾನ್ಯ ರೀತಿಯಲ್ಲಿ ವೀಳ್ಯ ಮತ್ತು ಅಡಿಕೆ (ತಾಂಬೂಲ) ಯನ್ನು ಗುದ್ದದೆ ಅದನ್ನು ಅಸಾಮಾನ್ಯ ರೀತಿಯಲ್ಲಿ ಮನುಷ್ಯ ಬೆಳಸಿದ ತೆಂಗಿನಕಾಯಿಯಲ್ಲಿ ಗುದ್ದುತ್ತಾರೆ.

ಸಾವಿನ ಸನ್ನಿವೇಶದಲ್ಲಿ ತೆಂಗನ್ನು ಈ ರೀತಿಯಾಗಿ ಉಪಯೋಗಿಸುವ ಬಗ್ಗೆ ಜನಪದ ವಿವರಣೆ ಏನೆಂದರೆ ಫಲವಸ್ತುವಾಗಿರುವ ತೆಂಗು ಮನುಷ್ಯನ ಆರ್ಥಿಕ ಬದುಕಿಗೆ ಬಹಳ ಅಗತ್ಯವಾದ ಮತ್ತು ಅನಿವಾರ್ಯವಾದ ಉತ್ಪನ್ನವಾಗಿದೆ. ಅಲ್ಲದೆ, ಆತನೇ ಬೆಳಸಿದ ಸಸ್ಯೋತ್ಪನ್ನವಾಗಿದೆ. ಹೀಗಾಗಿ ಆತ ತನ್ನ ಬದುಕಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಎಲ್ಲ ಬಗೆಯ ವಸ್ತುಗಳನ್ನು ಆತ ತೀರಿದಾಗ ಹೆಣದ ಬಳಿಯಲ್ಲಿ ಇಡಲಾಗುತ್ತದೆ. ಹೆಣವನ್ನು ಸುಡುವ ಹೊತ್ತಿಗೆ ಹೆಣದ ಬಳಿಯಲ್ಲಿ ಇರಿಸಿದ ಎಲ್ಲ ವಸ್ತುಗಳನ್ನು ಕಾಷ್ಠಕ್ಕೆ ಹಾಕಲಾಗುತ್ತದೆ.

ಈ ರೀತಿಯ ಕ್ರಿಯಾಚರಣೆಯ ವಿಧಿವಿಧಾನಗಳು ಪ್ರಾಚೀನ ಜನಾಂಗಗಳಲ್ಲಿ ಸತ್ತ ವ್ಯಕ್ತಿಯ ವೈಯಕ್ತಿಕ ಆಸ್ತಿಯನ್ನು ಅವನ ಹೆಣದ ಜೊತೆಯಲ್ಲಿ ವಿಲೇವಾರಿ ಮಾಡುವ ಪದ್ಧತಿಯೊಂದರ ಕಡೆಗೆ ಗಮನ ಕೊಡುವಂತೆ ಮಾಡುತ್ತದೆ. ನರಬಲಿಯ ಹುಟ್ಟು ಮತ್ತು ಅದರ ಬದಲಿ ರೂಪಾಂತರ ಬಗೆಗಿನ ಚಾರಿತ್ರಿಕ ಕಾರಣಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಟಿ. ಎಸ್‌. ಸತ್ಯನಾಥ್‌ಈ ಅಂಶವನ್ನು ಉಲ್ಲೇಖಿಸುತ್ತಾರೆ.

ಸಂಸ್ಕೃತಿಯ ಪ್ರಾರಂಭದ ಹಂತಗಳಲ್ಲಿ ಪಂಗಡ ಮುಖಂಡನೂ (ರಾಜ) ಪೂಜಾರಿಯೂ ಸಾಮಾನ್ಯವಾಗಿ ಅಭಿನ್ನರಾಗುತ್ತಿದ್ದುದರಿಂದ ರಾಜಕೀಯ ಹಾಗೂ ಧಾರ್ಮಿಕ ವ್ಯವಸ್ಥೆಗಳನ್ನು ಒಬ್ಬನೇ ನೋಡಿಕೊಳ್ಳುತ್ತಿದ್ದ. ಆದರೆ ಸಂಸ್ಕೃತಿ ಬೆಳೆದಂತೆ ಒಂದೇ ಆಗಿದ್ದ ಈ ರಾಜಕೀಯ ಧಾರ್ಮಿಕ ವ್ಯವಸ್ಥೆಗಳು ಒಡೆದು ಭಿನ್ನವಾದಂತೆ ಈ ವ್ಯವಸ್ಥೆಗಳ ಸೂತ್ರಧಾರರಾದ ಪೂಜಾರಿ ಮತ್ತು ರಾಜ ಇಬ್ಬರೂ ಸ್ವತಂತ್ರವಾಗಿ ತಮ್ಮ ವ್ಯವಸ್ಥೆಗಳನ್ನು ಆಳಲು ತೊಡಗಿದರು. ರಾಜನ ಕೈಯಿಂದ ಧಾರ್ಮಿಕ ಸೂತ್ರಗಳು ತಪ್ಪಿ ಹೋದರೂ, ಧಾರ್ಮಿಕ ವ್ಯವಸ್ಥೆಯೊಡನೆ ನರಬಲಿ ಪೂಜಾರಿಯ ನೇತೃತ್ವದಲ್ಲಿ ತನ್ನ ಅಸ್ತಿತ್ವವನ್ನು ಮುಂದುವರೆಸಿತು. ಇತ್ತ ಅರಸ ಧಾರ್ಮಿಕ ವ್ಯವಸ್ಥೆಯಿಂದ ಹೊರಬರುವುದರ ಮೂಲಕ ತಾನು ಬಲಿಪಶುವಾಗುವುದನ್ನು ತಪ್ಪಿಸಿಕೊಂಡ. ಅವನು ಜನಾಂಗದ ಅಧಿಪತಿಯೂ ಆಗಿದ್ದುದರಿಂದ ಪ್ರಜೆಗಳಿಗಿಲ್ಲದ ವಿಶೇಷ ಸವಲತ್ತುಗಳು ಅವನಿಗೆ ಲಭಿಸಿದವು.

ಇಂತಹವುಗಳಲ್ಲಿ ಒಂದು ಹುಟ್ಟು-ಸಾವಿನ ಕಲ್ಪನೆಗೆ ಸಂಬಂಧಿಸಿದ್ದಾಗಿದ್ದು ಒಂದು ಬಗೆಯ ನರಬಲಿಗೆ ನಾಂದಿಯಾಯಿತು. ರಾಜನ ಮರಣದ ನಂತರ ಮತ್ತೆ ಆತನ ಪ್ರೇತ ಹಿಂದುರುಗಿ ಬರುವುದೆಂಬ ಕಲ್ಪನೆಯಿಂದಲೋ ಅಥವಾ ಪರಲೋಕದಲ್ಲಿ ಅವನಿಗೆ ಹೆಂಡಂದಿರೂ ಊಳಿಗದವರೂ ಅವಶ್ಯವೆಂಬ ಕಲ್ಪನೆಯಿಂದಲೇ ರಾಜನ ಸಮಾಧಿಯ ಜತೆಗೆ ಅವನ ರಾಣಿಯರನ್ನೂ ಸೇವಕ-ಸೇವಕಿಯರನ್ನೂ ಜೀವಂತ ಸಮಾಧಿ ಮಾಡುತ್ತಿದ್ದುದುಂಟು.

ಸಂಸ್ಕೃತಿಯ ಆಸ್ತಿಕಲ್ಪನೆಯು ಈ ಬಗೆಯ ಸಾಮೂಹಿಕ ಬಲಿಗಳಿಗೆ ಕಾರಣವಾಗಿರಬಹುದು. ವ್ಯಕ್ತಿಯ ವೈಯಕ್ತಿಕ ಆಸ್ತಿಯನ್ನು ಅವನ ಹೆಣದ ಜೊತೆಗೆ ವಿಲೇವಾರಿ ಮಾಡುವ ಪದ್ಧತಿ ಪ್ರಾಚೀನ ಜನಾಂಗದ ಒಂದು ವೈಶಿಷ್ಟ್ಯವಾಗಿತ್ತು. ಹೆಂಡತಿಯರೂ ಸೇವಕರೂ ಅವನ ವೈಯಕ್ತಿಕ ಆಸ್ತಿ ಎಂಬ ಕಲ್ಪನೆ ಈ ರೀತಿ ಅರಸನ ಸಾವಿನೊಂದಿಗೆ ಅವನ ಸಮಸ್ತ ಪರಿವಾರವನ್ನೂ ಅಂತ್ಯಗೊಳಿಸುವ ಪದ್ಧತಿಗೆ ಕಾರಣವಾಗಿರಬಹುದು. ಭಾರತದಲ್ಲಿ ಕಂಡು ಬರುವ ‘ಸಹಗಮನ’, ‘ಸತಿ’ಗಳು ಮೇಲಿನ ಹೆಂಡತಿಯೂ ಗಂಡನ ಆಸ್ತಿ ಎಂಬ ನಂಬುಗೆಯಿಂದ ರೂಢಿಗೆ ಬಂದದ್ದು ಎನಿಸುತ್ತದೆ. ಅಲ್ಲದೆ ಇಂತಹ ಪದ್ಧತಿ ಪಿತೃಪ್ರಧಾನ ಕುಟುಂಬ ಪ್ರಚಲಿತವಿರುವ ದೇಶಗಳಲ್ಲಿ ಮಾತ್ರ ಕಂಡುಬರುವುದನ್ನು ಗಮನಿಸಬಹುದು.[1]

ಶುದ್ಧೀಕರಣದ ವಸ್ತು ಸಾಮಗ್ರಿಯಾಗಿ

ಹೆಣ್ಣು ಮತ್ತು ಗಂಡಿನ ಲೈಂಗಿಕ ಸಂಬಂಧವನ್ನು ಸಾಮಾಜಿಕವಾಗಿ ಅಂಗೀಕಾರಗೊಳಿಸುವ ಮದುವೆಯಂತಹ ಸಾಮಾಜಿಕ ಸಂಸ್ಥೆಯು ಸಂತಾನದ ಮೂಲಕ ಸಾಮಾಜಿಕ ಮುಂದುವರಿಕೆಯನ್ನು ಮಾಡುತ್ತದೆ. ಮದುವೆಯ ಆಚರಣೆಯಲ್ಲಿ ಹೆಣ್ಣು ಮತ್ತು ಗಂಡನ್ನು ಸಾಮಾಜಿಕವಾಗಿ ಸಾಮಾನ್ಯ ಸ್ಥಿತಿಯಿಂದ ಪ್ರತ್ಯೇಕಗೊಳಿಸುವ ಮತ್ತು ವಿಶಿಷ್ಟೀಕರಿಸುವ ವಿದಿಕ್ರಮಗಳು ನಡೆಯುತ್ತವೆ. ಗಂಡು ಮತ್ತು ಹೆಣ್ಣನ್ನು ಸಾಮಾಜಿಕವಾಗಿ ಪ್ರತ್ಯೇಕಿಸುವ ಕ್ರಿಯೆಗಳು ಹಿಂದಿನ ದಿನದಿಂದ ಆರಂಭವಾಗುತ್ತದೆ. ಹಿಂದಿನ ದಿವಸದ ರಾತ್ರಿ ಗಂಡು ಮತ್ತು ಹೆಣ್ಣಿನ ಮೈಗೆ ತೆಂಗಿನಕಾಯಿಯ ಹಾಲನ್ನು ಮತ್ತು ಅರಸಿನವನ್ನು ಹಚ್ಚುವ ಕ್ರಮವಿದೆ. ಈ ಎರಡು ದ್ರವ್ಯಗಳು ಮದುವೆಗೆ ಸಿದ್ಧಗೊಳಿಸುವ ಮದುವಣಗಿತ್ತಿ ಮತ್ತು ಮದುವಣಿಗರನ್ನು ಶುದ್ಧೀಕರಿಸುವ ಕೆಲಸವನ್ನು ಮಾಡುತ್ತದೆ.

ಮದುವೆ ಸನ್ನಿವೇಶದಲ್ಲಿ ಹಿಂದಿನ ದಿನ ಹೆಣ್ಣಿನ ಮೈಗೆ ಅರಸಿನ ಹಚ್ಚುವುದನ್ನು ಫಲವಂತಿಕೆ ಎಂಬುದಾಗಿ ಜಾನಪದ ಅಧ್ಯಯನದಲ್ಲಿ ಅಸಮಸ್ಯಾತ್ಮಕವಾಗಿ ತೀರ್ಮಾನಿಸಲಾಗಿದೆ.[2] ಇಂತಹ ತೀರ್ಮಾನವನ್ನು ಕೊಡುವ ಸಂದರ್ಭದಲ್ಲಿ ಜಾನಪದ ಅಧ್ಯಯನಕಾರರು ಕೇವಲ ಶುಭ ಸಮಾರಂಭಗಳನ್ನು ಮಾತ್ರ ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಾರೆ. ಅರಸಿನವನ್ನು ಮದುವೆಯ ಸನ್ನಿವೇಶದಲ್ಲಿ ಮಾತ್ರ ಮೈಮೇಲೆ ಲೇಪಿಸುವುದಲ್ಲ. ಮರಣದ ಸನ್ನಿವೇಶದಲ್ಲೂ ಅರಸಿನವನ್ನು ಹೆಣದ ಮೈಮೇಲೆ ಹಚ್ಚುವ ಕ್ರಮ ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ. ಹೀಗಾಗಿ ಅರಸಿನ ಹಚ್ಚುವ ಕ್ರಿಯೆಯನ್ನು ಅರಸಿನದ ಹಳದಿ ಬಣ್ಣದ ಮೂಲಕ ಫಲವಂತಿಕೆಯ ಅರ್ಥದಲ್ಲಿ ತೀರ್ಮಾನಿಸಿ ಅರಸಿನಕ್ಕೆ ನಿರ್ದಿಷ್ಟವಾದ ಸಾಂಸ್ಕೃತಿಕ ಅರ್ಥವನ್ನು ಆರೋಪಿಸುವುದು ಸುಲಭವಲ್ಲ. ಹೆಚ್ಚಿನ ಸನ್ನಿವೇಶಗಳಲ್ಲಿ ಅರಸಿನವು ಶುದ್ಧೀಕರಿಸುವ ಅರ್ಥದಲ್ಲಿ ಬಳಕೆಯಾಗುತ್ತದೆ.

ಶುದ್ಧತೆ ಮತ್ತು ಪರಿವರ್ತನೆಯ ಸಂಕೇತವಾಗಿ

ಹೆಣ್ಣು ಮೊದಲ ಮುಟ್ಟದಾಗ ಸಾಮಾಜಿಕವಾಗಿ ಹೊರಗಾದ ಹೆಣ್ಣನ್ನು ಶುದ್ಧೀಕರಿಸಿ ಮರುಸೇರ್ಪಡೆಗೊಳಿಸುವ ಮತ್ತು ಸಾಮಾಜೀಕರಣಗೊಳಿಸುವ ಕ್ರಿಯಾಚರಣೆಯನ್ನು ‘ಮದಿಮ್ಮಾಲ್‌ಮದಿಮೆ’ (ಮದುಮಗಳ ಮದುವೆ) ಎನ್ನುತ್ತಾರೆ. ಈ ಕ್ರಿಯಾಚರಣೆಯಲ್ಲಿ ಸಾಮಾಜಿಕವಾಗಿ ಹೊರಗಾದ ಹೆಣ್ಣನ್ನು ಶುದ್ಧೀಕರಿಸುವ ಸನ್ನಿವೇಶದಲ್ಲಿ ಸಿಪ್ಪೆ ಸುಲಿಯದ ತೆಂಗಿನಕಾಯಿಗಳು ಪ್ರಧಾನವಾಗಿ ಆಯ್ಕೆಗೊಳ್ಳುತ್ತವೆ. ಸಂತಾನ ಪಡೆಯಲು ಕಾರಣವಾಗುವ ಮದುವೆಗಿಂತ ಪೂರ್ವದಲ್ಲಿ ಹೆಣ್ಣು ಸಂತಾನದ ಸಾಮರ್ಥ್ಯವನ್ನು ಪಡೆದಿರುವ ಸಂಗತಿಯನ್ನು ಸಾಮಾಜೀಕರಿಸುವ ‘ಮದಿಮ್ಮಾಲ್‌ಮದಿಮೆ’ ಕ್ರಿಯಾಚರಣೆಯಲ್ಲಿ ಮರು ಉತ್ಪಾದನೆಗೆ ಕಾರಣವಾಗುವ ಬೀಜ ಸ್ವರೂಪದ ತೆಂಗು ಆಯ್ಕೆಗೊಳ್ಳುತ್ತದೆ. ಈ ಕ್ರಿಯಾಚರಣೆಯ ತಾತ್ತ್ವಿಕತೆಯ ಹಿನ್ನೆಲೆಯಲ್ಲಿ ಇದರ ಸಾಮಾಜಿಕ ಆಶಯವನ್ನು ಈಗಾಗಲೇ ಚರ್ಚಿಸಲಾಗಿದೆ.

ಮಾಂತ್ರಿಕತೆ

ಮಾನವ ತನ್ನ ಕಣ್ಣಿಗೆ ಕಾಣದ ಮತ್ತು ಆತನ ನಿಯಂತ್ರಣಕ್ಕೆ ಸಿಗದ ಅನೇಕ ಶಕ್ತಿಗಳನ್ನು ಒಲಿಸುವ ನಿಯಂತ್ರಿಸುವ ಆಶಯವನ್ನು ಪ್ರಕಟಿಸುತ್ತಾನೆ. ಈ ಬಗೆಯ ಆಶಯಗಳು ಆಚರಣಾತ್ಮಕಗೊಳ್ಳುವ ಸನ್ನಿವೇಶದಲ್ಲಿ ಮಾಂತ್ರಿಕತೆಯ ಆಂಶಗಳು ಪ್ರಧಾನವಾಗುತ್ತವೆ.

ಕೆಟ್ಟ ಕಣ್ಣಿನ ದೋಷವನ್ನು ನಿವಾರಣೆ ಮಾಡುವಾಗ ಕೆಟ್ಟ ಕಣ್ಣು ಬಿದ್ದಿರುವ ವ್ಯಕ್ತಿಯ ತಲೆಯ ಮೇಲೆ ತೆಂಗಿನಕಾಯಿಯನ್ನು ನಿವಾಳಿಸಿ ಅದನ್ನು ನೆಲಕ್ಕೆ ಒಡೆಯುತ್ತಾರೆ. ಈ ಸನ್ನಿವೇಶದಲ್ಲಿ ತೆಂಗನ್ನು ವ್ಯಕ್ತಿಯ ತಲೆಯ ಮೇಲೆ ನೀವಾಳಿಸಿ ಒಡೆಉವ ಕ್ರಿಯೆ ಪ್ರಧಾನವಾದುದು. ತೆಂಗಿನಕಾಯಿಯನ್ನು ನಿವಾಳಿಸಿ ತೆಗೆಯುವ ಮಾಂತ್ರಿಕ ಕ್ರಿಯೆಯ ಮೂಲಕ ವ್ಯಕ್ತಿಯ ಮೇಲೆ ಬಿದ್ದಿರುವ ಕೆಟ್ಟ ಕಣ್ಣಿನ ದುಷ್ಪರಿಣಾಮಗಳೆಲ್ಲವೂ ತೆಂಗಿಗೆ ವರ್ಗಾವಣೆಯಾಗುತ್ತದೆ. ನಂತರ ತೆಂಗಿನಕಾಯಿಯನ್ನು ನೆಲಕ್ಕೆ ಒಡೆಯಲಾಗುತ್ತದೆ. ಆ ಮೂಲಕ ತೆಂಗಿನಕಾಯಿಗೆ ವರ್ಗಾವಣೆಗೊಂಡಿರುವ ಕಟ್ಟದೃಷ್ಟಿ ಅಥವಾ ಅದರ ದುಷ್ಟಪರಿಣಾಮಗಳೆಲ್ಲವೂ ಹೊರಗೆ ಬರುತ್ತದೆ. ಮತ್ತು ವ್ಯಕ್ತಿಯ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ. ಈ ಮಾಂತ್ರಿಕ ಕ್ರಿಯಾಚರಣೆಯ ಮೂಲಕ ಮಾನವನಿಂದ ನಿಯಂತ್ರಿಸಲಾಗದ ಮತ್ತು ಆತನ ಕಣ್ಣಿಗೆ ಕಾಣಿಸದ ಶಕ್ತಿಗಳ ಮೇಲೆ ಆತ ನಿಯಂ‌ತ್ರಣವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈ ಕ್ರಿಯಾಚರಣೆಯಲ್ಲಿ ತೆಂಗಿನಕಾಯಿ ಮಾನವನ ತಲೆಬುರುಡೆಗೆ ಸಾದೃಶ್ಯವಾಗುತ್ತದೆ. ಹಾಗಾಗಿಯೇ ವ್ಯಕ್ತಿಯ ತಲೆಯ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸುವ ಮೂಲಕ ವ್ಯಕ್ತಿಯ ಮೇಲಾದ ಕೆಟ್ಟಕಣ್ಣಿನ ದುಷ್ಪರಿಣಾಮವನ್ನು ತೆಂಗಿಗೆ ವರ್ಗಾಯಿಸಲಾಗುತ್ತದೆ. ಈ ರೀತಿಯ ಸಾದೃಶ್ಯದ ರೂಪಗಳು ಕೈಗಾರಿಕಾ ಪೂರ್ವದ ಮತ್ತು ಕೈಗಾರಿಕಾ ಸಾಮಾಜಗಳ ಕಲ್ಪನೆಯಲ್ಲಿ ಕಾಣಬಹುದು. ಈ ರೀತಿಯ ಸಾದೃಶ್ಯದ ಕಲ್ಪನೆಗೆ ತೆಂಗಿನಕಾಯಿಯ ಆಕಾರವೇ ಕಾರಣ. ತೆಂಗಿನ ಹೊರಕವಚವಾಗಿ ಇರುವ ಗಟ್ಟಿಚಿಪ್ಪು, ಅದರೊಳಗಿನ ನೀರು ಮತ್ತು ತಿರುಳು ಈ ರೀತಿಯ ಭೌತಿಕ ರಚನೆಯನ್ನು ಜನಪದವು ಗ್ರಹಿಸುವುದು ಸಾದೃಶ್ಯದ ವಿನ್ಯಾಸದಲ್ಲಿ.

ನೀರನ್ನು ಆಂತರ್ಯದಲ್ಲಿ ಬಚ್ಚಿಟ್ಟುಕೊಂಡು, ಹೊರಕವಚವಾಗಿ ಗಟ್ಟಿಚಿಪ್ಪನ್ನು ಒಳಗೊಂಡು ನಿಗೂಢತೆಯ ವಿಶಿಷ್ಟ ಭೌತಿಕ ರಚನೆಯನ್ನು ಹೊಂದಿರುವ ತೆಂಗಿನ ಆಕಾರ ಜೊತೆಗೆ, ಒಂದು ನಿರ್ದಿಷ್ಟ ಸ್ವರೂಪ ಸಮಾಜದ ಅರ್ಥವ್ಯವಸ್ಥೆಯಲ್ಲಿ ತೆಂಗು ಪ್ರಧಾನವಾದ ಆರ್ಥಿಕ ಉತ್ಪನ್ನವಾಗಿರುವುದೂ ತೆಂಗು ಮಾಂತ್ರಿಕ ಕ್ರಿಯೆಗಳಲ್ಲಿ ಆಯ್ಕೆಗೊಳ್ಳಲು ಪ್ರಧಾನ ಕಾರಣ ಎನ್ನಬಹುದು. ಪ್ರಾಣಿಬಲಿಗೆ ಪರ್ಯಾಯ ವಸ್ತುರೂಪವಾಗಿ ಧಾರ್ಮಿಕ ಕ್ರಿಯಾಚರಣೆಗಳಲ್ಲಿ ತೆಂಗನ್ನು ನೊಡೆಯುವ ಕ್ರಿಯೆಗಳು ಪ್ರಧಾನವಾಗುತ್ತವೆ. ಇಲ್ಲಿ ಬಲಿಯ ಕಲ್ಪನೆ ಜೊತೆಗೆ ಅಹಿಂಸೆಯ ನೆಲೆಯಲ್ಲಿ ತೆಂಗನ್ನು ಒಡೆಯಲಾಗುತ್ತದೆ. ಚಿಪ್ಪು ಒಡೆದು ನೀರು ಚೆಲ್ಲುವ ಮೂಲಕ ಪ್ರಾಣಿ ಬಲಿಯ ಅಥವಾ ರಕ್ತ ತರ್ಪಣದ ಕ್ರಿಯೆಯನ್ನು ಪ್ರತ್ಯಕ್ಷೀಕರಿಸಲಾಗುತ್ತದೆ.

. ಅಡಿಕೆವೀಳ್ಯ

ಅಡಿಕೆ ಮರವನ್ನು ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಬೆಳಸಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಹೀಗಿದ್ದರೂ ಅಡಿಕೆಯ ಮರವನ್ನು ಸ್ಪಷ್ಟವಾಗಿ ಕಾಡುಮರ ಎಂದು ಗುರುತಿಸಲಾಗಿಲ್ಲ. ಮೂಲತಃ ಮಲಯದಲ್ಲಿ ಹುಟ್ಟಿ ಬೆಳೆದ ಅಡಿಕೆಯು ಪ್ರಪಂಚದ ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಯುತ್ತದೆ. ಏಷ್ಯ ಮತ್ತು ಆಫ್ರಿಕಾ ಖಂಡಗಳ ಆಗ್ನೇಯ ಭಾಗಗಳಲ್ಲಿ ಅಡಿಕೆ ಮರಗಳು ವಿಶೇಷವಾಗಿ ಕಂಡು ಬರುತ್ತವೆ. ಸಿಂಹಳದ ಸುಬರ್ಗಮುವ ಪ್ರಾಂತದ ಕಾಡಿನಲ್ಲಿ ಅಡಿಕೆಯು ಸ್ವಾಭಾವಿಕವಾಗಿ ಬೆಳೆಯುತ್ತದೆ. ಫಿಲಿಫೈನ್ಸ್‌ದೇಶದಲ್ಲಿ ಕೆಲವು ಜಾತಿಯ ಅಡಿಕೆ ಮರಗಳು ಮಾತ್ರ ಸ್ವಾಭಾವಿಕವಾಗಿ ಬೆಳೆಯುತ್ತವೆ. ಆದರೆ ಭಾರತದಲ್ಲಿ ಅಡಿಕೆಯು ಕೃಷಿ ಉತ್ಪನ್ನವಾಗಿ ಉನ್ನತ ಸ್ಥಾನವನ್ನು ಪಡೆದಿದೆಯಲ್ಲದೆ ಭಾರತದ ಮುಖ್ಯ ವಾಣಿಜ್ಯ ಬೆಳೆಯೂ ಆಗಿದೆ. ಅಡಿಕೆ ತಿನ್ನು ಜನ ಪಾಶ್ಚಾತ್ಯ ದೇಶಗಳಿಗಿಂತ ಪೌರಾತ್ಯ ದೇಶಗಳಲ್ಲಿ ಹೆಚ್ಚು.

ಅಡಿಕೆ ಮರವು ಸುಮಾರು ೬೦ ರಿಂದ ೧೦೦ ವರ್ಷಗಳವರೆಗೆ ಬದುಕುತ್ತದೆ. ಸುಮಾರು ೧ ಅಡಿಯಷ್ಟು ಅಗಲ ಮತ್ತು ೧೦೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಕಾಂಡದ ಸುತ್ತಲೂ ಕಳಚಿ ಉದುರಿದ ಸೋಗೆಗಳ ಉಂಗುರಾಕಾರದ ಗುರುತುಗಳಿರುತ್ತವೆ. ಕಾಂಡ ಹಸಿರಾಗಿದ್ದು ವಯಸ್ಸಾದಂತೆಲ್ಲ ಬೂದು ಮಿಶ್ರಿತ ಬಿಳುಪು ಬಣ್ಣಕ್ಕೆ ತಿರುಗುತ್ತದೆ. ಮರದ ತುದಿಯಲ್ಲಿ ಬಹುಸಂಖ್ಯೆಯ ಗರಿಗಳನ್ನು ಹೊಂದಿರುವ ೪-೬ ಅಡಿಗಳಷ್ಟು ಉದ್ದದ ಎಲೆಗಳು ಹರಡಿಕೊಂಡಿರುತ್ತವೆ. ಸುಮಾರು ೬ ನೇ ವರ್ಷದಿಂದ ಮರದಲ್ಲಿ ಹೂವು ಬಿಡಲು ಪ್ರಾರಂಭವಾಗುತ್ತದೆ. ಹೂವನ್ನು ಶೃಂಗಾರ, ಸಿಂಗಾರ, ಹಿಂಗಾರ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಸುಮರು ೧-೫ರಿಂದ ೨ ಇಂಚುಗಳಷ್ಟು ಉದ್ದಕ್ಕೆ ಬೆಳೆಯುವ ಇದರ ಕಾಯಿಯು ಹಸಿರಾಗಿದ್ದು, ಬಲಿತಂತೆಲ್ಲ ಹಳದಿ ಕೆಂಪು ಮಿಶ್ರಿತ ಬಣ್ಣಕ್ಕೆ ತಿರುಗುತ್ತದೆ.

ಆಕಾರದಲ್ಲಿ ಇದು ಚೆಂಡಿನಂತೆ ಅಥವಾ ಮೊಟ್ಟೆಯಂತೆ ಕಾಣುತ್ತದೆ. ಇದರ ಹೊರಸಿಪ್ಪೆ ತೆಂಗಿನ ನಾರಿನಂತಿರುತ್ತದೆ. ಇದರ ಒಳತಿರುಳಾದ ಅಡಿಕೆ ಬೀಜವು ತಿನ್ನಲು ಉಪಯೋಗವಾಗಿದ್ದು ಅರುಣವರ್ಣವನ್ನು ಹೊಂದಿರುತ್ತದೆ. ಇದು ಔಷಧಿಯಾಗಿ ಉಪಯೋಗವಾಗುತ್ತದೆ. ಜೊತೆಗೆ ಬಟ್ಟೆ ಉದ್ಯಮದಲ್ಲಿ ಬಣ್ಣ ಹಾಕಲೂ ಉಪಯೋಗವಾಗುವುದರಿಂದ ಇದಕ್ಕೆ ವಿಶೇಷ ಬೇಡಿಕ ಇದೆ.

ಅಡಿಕೆಯಲ್ಲಿರುವ ಒಗರನ್ನು ಜರ್ಮ ಹದಮಾಡಲು ಉಪಯೋಗಿಸುತ್ತಾರೆ. ಅಡಿಕೆಯಿಂದ ಬರೆಯುವ ಮಸಿ ತಯಾರಿಸುತ್ತಾರೆ. ಅಡಿಕೆ ಸಿಪ್ಪೆಯಿಂದ ಕಾಗದ, ರಟ್ಟು ಮೊದಲಾದವವನ್ನು ಮಾಡುವುದಲ್ಲದೆ ಸಾಮಾನುಗಳನ್ನು ಸುತ್ತಲು ಹಗ್ಗಗಳನ್ನು ಉಪಯೋಗಿಸುತ್ತಾರೆ. ಅಡಿಕೆ ಮರದಿಂದ ಮನೆಕಟ್ಟಲು ಬೇಕಾದ ಕಂಬಿ, ತೊಲೆ, ರೀಪು ಪಕ್ಕಾಸು ಮುಂತಾದವನ್ನು ತಯಾರಿಸುತ್ತಾರೆ. ಮರಗಳ ಒಳಗಿರುವ ತಿರುಳನ್ನು ತೆಗೆದು ನೀರು ಹಾಯಿಸಲು ಅದನ್ನು ಕೊಳವೆ ಅಥವಾ ತೂಬುಗಳಾಗಿ ಉಪಯೋಗಿಸುತ್ತಾರೆ.

ಅಡಿಕೆ ಕೆಲವು ಔಷಧಗಳಿಗೆ ಉಪಯೋಗಕ್ಕೆ ಬರುತ್ತದೆ. ಮಲಬದ್ತೆಗೂ, ಹೊಟ್ಟೆ ಹುಳುವಿಗೂ ಇದನ್ನು ಉಪಯೋಗಿಸುತ್ತಾರೆ. ಅಡಿಕೆಯನ್ನು ಬೇಯಿಸಿ ತೆಗೆದ ರಸ ಅಜೀರ್ಣಾಂಗಗಳ ಚಲನೆಯನ್ನು ವೃದ್ಧಿಗೊಳಿಸತುತದೆ. ಆದರೆ ಇದರ ಅರೆಕೋಲಿನ್‌ಪ್ರಮಾಣ ಹೆಚ್ಚಾದರೆ ವಿಷವಾಗಿ ಪರಿಣಮಿಸುತ್ತದೆ. ಆದ್ದರಿಂದ ಅಡಿಕೆಯನ್ನು ಹೆಚ್ಚು ಸೇವಿಸುವುದರಿಂದ ತಲೆಸುತ್ತು, ಕರಳಿನ ಬೇನೆ, ಬೇದಿ, ಮಂದದೃಷ್ಟಿ ರೋಗಗಳಿಗೆ ಒಳಗಾಗುತ್ತಾರೆ. ವೈದ್ಯಜ್ಞಾನ ಪ್ರಕಾರ ಅಡಿಕೆಯು ಜೀರ್ಣಕಾರಿ. ಹೃದಯ ಮತ್ತು ನರಗಳ ಶಕ್ತಿವರ್ಧಕ ಲಾಡಿಹುಳು, ಜಂತುಹುಳು ಹೋಗಲಾಡಿಸುವ ಸಿದ್ದೌಷಧ.[3]

ತೌಳುವ ಸಾಂಸ್ಕೃತಿಕ ಕ್ರಿಯಾಚರಣೆಗಳಲ್ಲಿ ಅಡಿಕೆಯು ವೀಳ್ಯದ ಜೊತೆ ಸೇರಿ ಬಳಕೆಯಾಗುತ್ತದೆ. ಹಲವಾರು ಧಾರ್ಮಿಕ ಸಾಮಾಜಿಕ ಕ್ರಿಯಾಚರಣೆಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಸಂವಹನಗೊಳಿಸುವ ಮಾಧ್ಯಮವಾಗಿ ಅಡಿಕೆಯು ವೀಳ್ಯದ ಜೊತೆಗೆ ಬಳಕೆಯಾಗುತ್ತದೆ. ಇನ್ನು ಹಲವು ಧಾರ್ಮಿಕ ಹಾಗೂ ಸಾಮಾಜಿಕ ಕ್ರಿಯಾಚರಣೆಗಳಲ್ಲಿ ಅಡಿಕೆಯ ಹೂವಾದ ಹಿಂಗಾರ ವಿವಿಧ ಅರ್ಥಗಳ ಸಂವಹನ ಮಾಧ್ಯಮವಾಗಿ ಬಳಕೆಯಾಗುತ್ತದೆ.

ಕೃಷಿ ಉತ್ಪಾದನಾ ವ್ಯವಸ್ಥೆಯಲ್ಲಿ ಅಡಿಕೆಯು ಫಲಕೊಡುವ ಮರ. ಜನಪದ ವರ್ಗೀಕರಣದಲ್ಲಿ ಫಲವಸ್ತು ಅನ್ನುವ ಸಸ್ಯವರ್ಗದಲ್ಲಿ ಇದನ್ನು ಕಾಣಲಾಗಿದೆ. ಕೃಷಿ ಅರ್ಥ ವ್ಯವಸ್ಥೆಯಲ್ಲಿ ಫಲವತ್ತತೆ ಅದರ ಉತ್ಪಾದನಾ ಮೌಲ್ಯ. ಈ ಆಶಯವನ್ನು ಹೊಂದಿರುವ ಉತ್ಪಾದನಾ ಚಟುವಟಿಕೆಗಳಲ್ಲಿ ಉಳಿದ ಸಸ್ಯೋತ್ಪನ್ನಗಳ ಜೊತೆಗೆ ಅಡಿಕೆ ಹಾಗೂ ಅದರ ಹಿಂಗಾರ (ಹೂವು) ಜನಪದದ ಆಶಯವನ್ನು ಸಂವಹನಗೊಳಿಸುತ್ತವೆ.

ಜನಪದದ ಲೋಕದೃಷ್ಟಿಯಲ್ಲಿ ಹಿಂಗಾರ ಭೂಮಿಸೃಷ್ಟಿಯಾದ ಕಾಲದಲ್ಲಿ ಇದ್ದ ಪಾದೆ ಹೂವು, ಕೇಪುಳಗಳ ಹಾಗೆ ಹಿಂಗಾರವು ನಿಸರ್ಗದತ್ತವಾಗಿ ಹುಟ್ಟಿರುವ ಹೂವು ಅನ್ನುವ ಕಲ್ಪನೆ ಜನಪದದಲ್ಲಿದೆ. ನಿಸರ್ಗದತ್ತ ಅನ್ನುವ ಕಾರಣದಿಂದಲೇ ಮಾನವಾತೀತ ಶಕ್ತಿಗಳನ್ನು ಆರಾಧನೆ ಮಾಡುವ ಧಾರ್ಮಿಕ ಸನ್ನಿವೇಶದಲ್ಲಿ ಹಿಂಗಾರ ಬಹಳ ಅಗತ್ಯವಾಗಿ ಬೇಕಾಗುತ್ತದೆ. ನಿಸರ್ಗದಲ್ಲಿ ಮಾನವ ಕಲ್ಪಿಸಿಕೊಳ್ಳುವ ಮಾನವಾತೀತ ಶಕ್ತಿಗಳು ತನ್ನ ನಿಯಂತ್ರಣಕ್ಕೆ ಸಿಗದವುಗಳೆಂದು ಆತ ತಿಳಿದುಕೊಂಡಿದ್ದ. ಅವನ್ನು ಒಲಿಸಿಕೊಳ್ಳಲು ಧಾರ್ಮಿಕ ಕ್ರಿಯಾಚರಣೆಗಳನ್ನೂ, ರೂಪಸಿದ, ಇಂತಹ ಕ್ರಿಯಾಚರಣೆಗಳಲ್ಲಿ ನಡೆಯುವ ವಿಧಿಗಳು ನೈಸರ್ಗಿಕ ಸ್ವರೂಪದಲ್ಲಿ ಇರುವುದರಿಂದ ಅವು ತನಗಿಂತ ಅತೀತವಾಗಿರುವ ಶಕ್ತಿಗಳನ್ನು ಒಲಿಸಿಕೊಳ್ಳುವ ಮಾಧ್ಯಮಗಳೆಂದು ಆತ ಕಲ್ಪಿಸಿಕೊಂಡ. ಹಿಂಗಾರ ಈ ಶಕ್ತಿಗಳ ವಾಹಕವಾಗಿ, ಈ ಶಕ್ತಿಗಳ ನಿಯಂತ್ರಕ ಶಕ್ತಿಯಾಗಿ ತೌಳುವ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಲೇ ಹಿಂಗಾರಕ್ಕೆ ಪಾವಿತ್ರ್ಯದ ಮೌಲ್ಯವು ಆರೋಪಿತವಾಗಿದೆ.

ಸೀಮಂತದ ವಿಧಿಗಳಲ್ಲಿ ಹಿಂಗಾರವನ್ನು ಬಸುರಿಗೆ ಮುಡಿಸುವುದು ಬಹಳ ಮಹತ್ತ್ವದ ವಿಧಿಯಾಗಿರುತ್ತದೆ. ಜಾತಿ ಜನಾಂಗಗಳ ಬಂಧುತ್ವ ಕಲ್ಪನೆ ಹಾಗೂ ಪ್ರಾದೇಶಿಕತೆಯ ಕ್ರಮಗಳಿಗೆ ಅನುಸಾರವಾಗಿ ಬಸುರಿಗೆ ಮುಡಿಸುವ ಹಿಂಗಾರವನ್ನು ತರುವ ಬಗ್ಗೆ ನಿಯಮಗಳಿರುತ್ತವೆ. ಕೆಲವು ಕಡೆ ಗಂಡಿನ ಕಡೆಯವರು ಇನ್ನು ಕೆಲವು ಕಡೆ ಹೆಣ್ಣಿನ ಕಡೆಯವರು ಹಿಂಗಾರವನ್ನು ತರುತ್ತಾರೆ.

ಅಡಿಕೆ ಮರದಲ್ಲಿ ಹಿಂಗಾರ ಒಡೆಯುವ ಪೂರ್ವಸ್ಥಿತಿಯಲ್ಲಿ ಅದು ದೋಣಿಯಾಕಾರದ ಹೊಂಬಾಳೆಯ ಒಳಗೆ ಇರುತ್ತದೆ. ಹೊಂಬಾಳೆಯ ಒಳಗಡೆ ಎಳತಾಗಿರುವ ಮೃದುವಾಗಿರುವ ಅಸಂಖ್ಯ ಅಡಿಕೆಕಾಯಿಗಳಿರುತ್ತವೆ. ಈ ಹೊತ್ತಿಗೆ ಹೊಂಬಾಳೆ ಹಸುರು ಬಣ್ಣವನ್ನು ಹೊಂದಿರುತ್ತದೆ. ಹೊಂಬಾಳೆಯೊಳಗಿನ ಕಾಯಿಗಳು ಬಲಿತಂತೆ ಹೊಂಬಾಳೆಯ ಬಣ್ಣ ಹಳದಿಬಣ್ಣಕ್ಕೆ ತಿರುಗತ್ತದೆ. ಕಾಯಿಗಳು ಸಂಪೂರ್ಣವಾಗಿ ಬಲಿತ ಮೇಲೆ ಹೊಂಬಾಳೆ ಒಡೆಯುತ್ತದೆ. ಮತ್ತು ಕಾಯಿಗಳು ಕಾಣಿಸಿಕೊಳ್ಳುತ್ತವೆ.

ಸೀಮಂತದ ದಿವಸ ತರುವ ಹಿಂಗಾರದ ಹಾಲೆ ಒಡೆದಿರಬಾರದು. ಹಾಳೆ ಒಡೆದಿದ್ದರೆ ಅಪಶಕುನ. ಹೆಣ್ಣಿನ ಗರ್ಭಕ್ಕೆ ತೊಂದರೆಯಾಗುವುದು. ಹೀಗೆ ತರುವ ಹಿಂಗಾರದಲ್ಲಿ ‘ಉರುವೆ’ (ಬೀಜ)ಗಳಿರಬೇಕು. ಇಲ್ಲದಿದ್ದರೆ ಅಶುಭ. ಹಿಂಗಾರದ ಕುರಿತಂತಿರುವ ಈ ನಂಬಿಕೆಗಳು ಬಸುರಿಗೆ ನಡೆಸುವ ಸೀಮಂತದ ಆಚರಣೆಯ ಆಶಯವನ್ನು ಸಾಂಕೇತಿಕವಾಗಿ ಪ್ರಕಟಿಸುತ್ತವೆ. ಇದು ಬಸುರನ್ನು, ಸಂತಾನವನ್ನು ರಕ್ಷಿಸುವ ಆಶಯ. ಸಂತಾನ, ಸಮೃದ್ಧಿ, ಫಲವತ್ತತೆಯ ಪ್ರತೀಕವಾಗಿ ಹಿಂಗಾರ ಅರ್ಥವನ್ನು ಪಡೆಯುತ್ತದೆ.

ತುಳು ಸಂಸ್ಕೃತಿಯಲ್ಲಿ ಬಹಳ ಜನಪ್ರಿಯವಾಗಿರುವ ಸಿರಿಸಿಂಧಿ ಮತ್ತು ಒಂದು ವಿಶಿಷ್ಟ ಧಾರ್ಮಿಕ ಆಚರಣಾ ಸಂಪ್ರದಾಯವಾಗಿರುವ ಸಿರಿದರ್ಶನದಲ್ಲಿ ಹಿಂಗಾರ ಪ್ರಧಾನವಾಗಿದೆ. ಸಿರಿಯ ಹುಟ್ಟನ್ನು ವರ್ಣಿಸುವ ಸಿರಿಸಂಧಿಯಲ್ಲಿ ಆಕೆ ಸತ್ಯದಲ್ಲೇ ಹುಟ್ಟಿದವಳು ಎನ್ನಲಾಗಿದೆ. ಸತ್ಯದ ಹೆಣ್ಣಾದ ಸಿರಿ ಗಂಡು -ಹೆಣ್ಣಿನಾ ಸಂಸರ್ಗದಲ್ಲಿ ಹುಟ್ಟಿದೆ ಆಡಿಕೆಯ ಹಿಂಗಾರದಲ್ಲಿ ಹುಟ್ಟಿತ್ತಾಳೆ. ಸಿರಿಸಂಧಿಯ ಕೊನೆಯಲ್ಲಿ ಕಾಣಿಸಿಕೊಳ್ಳುವ ಆಕೆಯ ಸಂತತಿಯಾದ ಮಾಯಗೆ ಮೈದುಗೆಯರು ಅಸಹಜ ರೀತಿಯ ಸಾವನ್ನು ಹೊಂದಿ ಜೋಡು ಹಿಂಗಾರಗಳ ಹೊಂಬಾಳೆಗಳಾಗಿ ರೂಪಾಂತರಗೊಳ್ಳುತ್ತಾರೆ. ಸಿರಿಸಂಧಿಯ ಆರಂಭ ಮತ್ತು ಅಂತ್ಯ ಹೆಣ್ಣಿನ ಹುಟ್ಟು ಮತ್ತು ಸಾವಿನ ಆದ್ಯಂತದಲ್ಲಿ ನಿರೂಪಿತವಾಗಿದೆ. ಈ ಆದ್ಯಂತದಲ್ಲಿ ಪ್ರತೀಕವಾಗುವುದು ಹಿಂಗಾರವೇ. ಸಂಸ್ಕೃತಿ ಗ್ರಹಿಕೆಯಲ್ಲಿ ಮಾನವಾತೀತ ಶಕ್ತಿಗಳು ಅಸಹಜ ರೀತಿಯಲ್ಲಿ ಹುಟ್ಟುತ್ತವೆ. ಮತ್ತು ಅಸಹಜ ರೀತಿಯಲ್ಲಿ ಸಾಯುತ್ತವೆ. ಈ ಸಂಗತಿಯನ್ನು ಪುರಾಣವಾಗಿಸುವ ಸನ್ನಿವೇಶದಲ್ಲಿ ಸಂಸ್ಕೃತಿ ನಿಸರ್ಗದ ಸಂಕೇತಗಳನ್ನು ಪರಿಶೀಲಿಸಿಕೊಳ್ಳುತ್ತದೆ.

ತುಳುವ ಸಂಸ್ಕೃತಿಯಲ್ಲಿ ಹಿಂಗಾರ ಸಂತಾನ ಸಮೃದ್ಧಿ ಫಲವತ್ತತೆಯ ಸಂಕೇತವಾಗಿ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕ್ರಿಯಾಚರಣೆಗಳಲ್ಲಿ ಬಳಕೆಯಾಗುತ್ತದೆ. ಪ್ರಕೃತಿಯಲ್ಲಿ ಅಸಂಖ್ಯಾತವಾಗಿ ಕಾಣುವ ಎಲ್ಲವೂ ಸಂಸ್ಕೃತಿಯಲ್ಲಿ ಸಮೃದ್ಧಿ ಫಲವತ್ತತೆಗೆ ಪ್ರತೀಕಗಳಾಗುತ್ತವೆ. ಪ್ರಕೃತಿಯ ಈ ಪ್ರಕ್ರಿಯೆ ಸಂಸ್ಕೃತಿಯ ಕ್ರಿಯಾಚರಣೆಗಳಿಗೆ ಮಾಂತ್ರಿಕತೆಯನ್ನು ಒದಗಿಸುತ್ತದೆ.

ಸಸ್ಯ ಅಥವಾ ಅದರ ಉತ್ಪನ್ನಗಳ ಆಕಾರ, ಬಣ್ಣ, ಗುಣ ಈ ಮುಂತಾದ ಭೌತಿಕ ಅಂಶಗಳನ್ನು ಮಾನವ ತನ್ನ ಚಾರಿತ್ರಿಕ ಸನ್ನಿವೇಶದಲ್ಲಿ ಗ್ರಹಿಸಿಕೊಳ್ಳುವ ವಿನ್ಯಾಸದಲ್ಲೇ ಆತನ ಸಾಂಸ್ಕೃತಿಕ ಅಂಶಗಳ ಜೊತೆಗೆ ಅವು ಸಹಸಂಬಂಧವನ್ನು ಪಡೆಯುತ್ತವೆ.

ತುಳುನಾಡಿನಲ್ಲಿ ನಾಗ ಸಂಬಂಧಿ ಹಲವು ಆರಾಧನಾ ಸಂಪ್ರದಾಯಗಳಿವೆ. ಫಲವಂತಿಗೆ ಮತ್ತು ಲೈಂಗಿಕತೆ ನಾಗಾರಾಧನೆಯ ಪ್ರಧಾನ ಆಶಯವೆಂದು ಈಗಾಗಲೇ ಗುರುತಿಸಲಾಗಿದೆ. ನಾಗಾರಾಧನೆಯಲ್ಲಿ ಅಧಿಕ ಹಾಗೂ ಪ್ರಧಾನವಾಗಿ ಬಳಕೆಯಾಗುವ ಹಿಂಗಾರ ಈ ತಾತ್ತವಿಕತೆಗೆ ಪೂರಕವಾಗಿ ಕಾಣಿಸಿಕೊಳ್ಳುತ್ತದೆ. ಅಸಂಖ್ಯ ಬೀಜಗಳ ಮೂಲಕ ಫಲವಂತಿಕೆಯನ್ನು ಹೊಂದುವ ಹಿಂಗಾರ ಹಾಗೂ ಅಧಿಕ ಸಂತತಿಯನ್ನು ಪಡೆಯುವ ನಾಗ ಫಲವಂತಿಕೆ ಮತ್ತು ಸಂತಾನಾಭಿವೃದ್ಧಿಯ ಸಮಾನ ಪಾತಳಿಯಲ್ಲಿ ನಾಗಾರಾಧನೆ ಮೂಲಕ ಸಂಸ್ಕೃತಿಯಲ್ಲಿ ಗ್ರಾಹ್ಯವಾಗುತ್ತದೆ. ನಾಗ ಸಾವನ್ನು ತರುವ ಮೂಲಕ ಸಂತತಿಯ ನಾಶವನ್ನು ಉಂಟುಮಾಡುತ್ತದೆ. ಸಂತತಿಯನ್ನು ಉಳಿಸುವ, ರಕ್ಷಿಸುವ ಆ ಮೂಲಕ ಸಂತತಿಯನ್ನು ಮುಂದುವರಿಸುವ ಜನಾಂಗದ ಅಪೇಕ್ಷೆಯಲ್ಲಿ ನಾಗನನ್ನು ಒಲಿಸುವ ಆ ಮೂಲಕ ಆತನನ್ನು ನಿಯಂತ್ರಿಸುವ ನಾಗಾರಾಧನೆಯ ಆಶಯವನ್ನು ಗುರುತಿಸಿಕೊಳ್ಳಬಹುದು.

ದೈವೀ ಶಕ್ತಿಯ ವರ್ಗಾವಣೆ

ಪ್ರಧಾನವಾಗಿ ಹಿಂಗಾರವು ಬಳಕೆಯಾಗುವ ಧಾರ್ಮಿಕ ಆರಾಧನಾ ಸಂಪ್ರದಾಯಗಳಲ್ಲಿ ಮುಖ್ಯವಾಗಿ ಸಿರಿ ಹಾಗೂ ನಾಗಾರಾಧನೆಗಳಲ್ಲಿ ದೈವೀಶಕ್ತಿಯನ್ನು ವರ್ಗಾವಣೆಗೊಳಿಸುವ ಶಕ್ತಿಮಾಧ್ಯಮವಾಗಿ ಹಿಂಗಾರ ಬಳಕೆಯಾಗುತ್ತದೆ. ಸಿರಿ ಆರಾಧನೆಯಲ್ಲಿ ಸಿರಿಯ ಆವೇಶವು ಕುಮಾರನಿಂದ ಸಿರಿಗೆ ಹಿಂಗಾರದ ಮೂಲಕ ವರ್ಗಾವಣೆಗೊಳ್ಳುತ್ತದೆ. ಹಾಗೆಯೇ ನಾಗಾರಾಧನೆಯಲ್ಲಿ ಅರ್ಧನಾರೀಶ್ವರ ಪಾತ್ರಧಾರಿಯಿಂದ ನಾಗನ ಆವೇಶ ನಾಗಪಾತ್ರಿಗೆ ಹಿಂಗಾರದ ಮೂಲಕ ವರ್ಗಾವಣೆಗೊಳ್ಳುತ್ತದೆ. ಹಿಂಗಾರದಲ್ಲಿ ಸಿರಿ ಹುಟ್ಟಿರುವ ಪೌರಾಣಿಕ ಕಲ್ಪನೆಯಿಂದಾಗಿ ಹಿಂಗಾರದ ಮೂಲಕವೇ ಸಿರಿಯ ಆವೇಶದ ವರ್ಗಾವಣೆಯಾದರೆ ಲೈಂಗಿಕತೆ ಮತ್ತು ಫಲವಂತಿಕೆಗೆ ಸಂಕೇತವಾಗಿರುವ ಹಿಂಗಾರ ಮತ್ತು ನಾಗ ಸಮಾನಾಂತರ ಶಕ್ತಿಗಳಾಗಿ, ಹಿಂಗಾರದ ಮೂಲಕ ನಾಗನ ಆವೇಶ ವರ್ಗಾವಣೆಯಾಗುತ್ತದೆ.

ವೀಳ್ಯ

ಸುಮಾರು ೨೦೦೦ ವರ್ಷಗಳಿಗಿಂತ ಹಿಂದೆ ಭಾರತದಲ್ಲಿ ಆರ್ಯರು ಎಲೆ ಅಡಿಕೆ ಜಗಿಯುವ ಹವ್ಯಾಸವನ್ನು ಇಟ್ಟುಕೊಂಡಿದ್ದರೆಂದು ತಿಳಿಯಲಾಗಿದೆ[4] ಕ್ರಿಸ್ತಶಕ ೧. ಅಥವಾ ೨ನೇ ಶತಮಾನದಲ್ಲಿ ಆಳ್ವಿಕೆಯನ್ನು[5] ನಡೆಸಿದ ಗುಪ್ತರ ಕಾಲದಲ್ಲಿ ತಾಂಬೂಲ ಬಳಕೆಗೆ ಬಂತು ಎಂದು ಹೇಳಲಾಗಿದೆ. ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ತಾಂಬೂಲ ಕ್ರಿಸ್ತಶಕ ಆರಂಭವಾಗುವ ಪೂರ್ವದಲ್ಲಿ ಅಥವಾ ಕ್ರಿಸ್ತಶಕದ ಆರಂಭದ ಕಾಲದಲ್ಲಿ ಕಾಣಿಸಿಕೊಂಡು ಆ ಬಳಿಕ ಉತ್ತರ ಭಾರತಕ್ಕೆ ಪಸರಿಸಿತೆಂದು ತಿಳಿಯಲಾಗಿದೆ.[6]

ಲೈಂಗಿಕತೆ

ಆಹಾರ ಸೇವನೆಯ ನಂತರ ತಾಂಬೂಲ ತಿನ್ನುವ ಕ್ರಮ ಎಲ್ಲೆಡೆಯಲ್ಲಿ ಕಂಡು ಬರುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ತಾಂಬೂಲ ತಿನ್ನುವ ಕ್ರಿಯೆಯನ್ನು ರಸಿಕತೆ,   ಲೈಂಗಿಕತೆಯ ಅರ್ಥದಲ್ಲಿ ಕಾಣಲಾಗಿದೆ. ತುಳುವ ಸಂಸ್ಕೃತಿಯಲ್ಲಿ ಬಳಕೆಯಲ್ಲಿರುವ ನಂಬಿಕೆಗಳು ಈ ಕುರಿತ ಸೂಚನೆಯನ್ನು ನೀಡುತ್ತದೆ.

ಮದುವೆಯಾಗದ ಹೆಣ್ಣುಮಕ್ಕಳು ವೀಳ್ಯದೆಲೆಯನ್ನು ತಿನ್ನಬಾರದು.

ವೀಳ್ಯ ಹಾಕಿದಾಗ ಬಾಯಿ ಒಳ್ಳೆ ಕೆಂಪಾದರೆ ಗಂಡನಿಗೆ ಹೆಂಡತಿಯ ಮೇಲೆ,
ಹೆಂಡತಿಗೆ ಗಂಡನ ಮೇಲೆ ಪ್ರೀತಿಯಿದೆ ಎಂದರ್ಥ.

ಪ್ರೀತಿಯವರು ಮಡಚಿಕೊಟ್ಟ ವೀಳ್ಯವನ್ನು ತಿಂದರೆ ಬಣ್ಣ ಕಡು ಕೆಂಪಾಗುತ್ತದೆ, ಬಾಯಿ ಕೆಂಪಾಗುತ್ತದೆ.

ಮುಟ್ಟಾದ ಹೆಂಗಸರು ವೀಳ್ಯದೆಲೆ ಕೊಯ್ಯಬಾರದು.

ಪ್ರೀತಿ ಇರುವವರು ಮಡಚಿಕೊಟ್ಟ ವೀಳ್ಯವನ್ನು ತಿಂದರೆ ಬಣ್ಣ ಕಡುಕೆಂಪಾಗಿ ಬಾಯಿ ಕೆಂಪಾಗುತ್ತದೆ. ಹಾಗೆಯೇ, ವೀಳ್ಯ ಹಾಕಿ ಬಾಯಿ ಒಳ್ಳೆ ಕೆಂಪಾದರೆ ಗಂಡನಿಗೆ ಹೆಂಡತಿಯ ಮೇಲೆ ಹೆಂಡತಿಗೆ ಗಂಡನ ಮೇಲೆ ಪ್ರೀತಿಯಿದೆ. ಈ ನಂಬಿಕೆಗಳು ಮದುವೆಯ ಮೂಲಕ ಸಾಮಾಜಿಕವಾಗಿ ಅಂಗೀಕೃತಗೊಳ್ಳುವ ಗಂಡ -ಹೆಂಡತಿಯರ ನಡುವಿನ ಪ್ರೀತಿ, ರಸಿಕತೆ ಮತ್ತು ಲೈಂಗಿಕತೆ ಕುರಿತು ಮಾತಾಡುತ್ತದೆ. ಮದುವೆಯಾಗದ ಹೆಣ್ಣುಮಕ್ಕಳು ವೀಳ್ಯದೆಲೆಯನ್ನು ತಿನ್ನಬಾರದೆನ್ನುವ ನಂಬಿಕೆಯಲ್ಲೂ ಈ ವಿಚಾರವಿದೆ. ಜೊತೆಗೆ ತಾಂಬೂಲ ಲೈಂಗಿಕ ಪ್ರಚೋದನೆಯನ್ನು ನೀಡುತ್ತದೆ ಅನ್ನುವ ಅಭಿಪ್ರಾಯವೂ ಇದೆ.[7] ಮುಟ್ಟಾದ ಹೆಂಗಸರು ವೀಳ್ಯದೆಲೆಯನ್ನು ಕೊಯ್ಯಬಾರದೆನ್ನುವ ನಂಬಿಕೆ ವೀಳ್ಯವನ್ನು ಅಪವಿತ್ರಗೊಳಿಸುವ ಯೋಚನೆ ಜೊತೆಗೆ ಲೈಂಗಿಕ ನಿಷೇಧವನ್ನೂ ಸೂಚಿಸುತ್ತದೆ. ಅಡುಗೆ ಮತ್ತು ಆಹಾರದ ಜೊತೆಗೆ ಲೈಂಗಿಕ ನಿಷೇಧಗಳ ಸಹಸಂಬಂಧವನ್ನು ಕಂಡುಕೊಳ್ಳುವ ಹಾಗೆ ತಾಂಬೂಲ ತಿನ್ನುವ ಕ್ರಿಯೆ ಲೈಂಗಿಕತೆಯ ಸೂಚಕವಾಗಿರುವುದನ್ನು ಈ ನೆಲೆಯಲ್ಲಿ ಕಾಣಬಹುದು. ಆರ್ಥಿಕ ಬೆಳೆಯಾದ ಅಡಿಕೆ ಮತ್ತು ವೀಳ್ಯ ಜೊತೆ ಸೇರಿ ತಾಂಬೂಲ ರೂಪದಲ್ಲಿ ಸೇವೆನೆಗೊಳ್ಳುವ ವಸ್ತುಗಳಾಗಿರುವುದರಿಂದ ಸಾಮಾಜಿಕ ಹಾಗೂ ಧಾರ್ಮಿಕ ಸನ್ನಿವೇಶಗಳಲ್ಲಿ ಅಡಿಕೆ ವೀಳ್ಯಕ್ಕೆ ಪಾವಿತ್ರ್ಯದ ಸ್ಥಾನ ಲಬಿಸಿದೆ. ಅಡಿಕೆ ಮತ್ತು ವೀಳ್ಯಕ್ಕೆ ಜೀರ್ಣಕಾರಕ ಗುಣಗಳು ಇರುವುದಲ್ಲದೆ ಇವು ಲೈಂಗಿಕ ಪ್ರಚೋದನೆಯನ್ನೂ ಉಂಟು ಮಾಡುತ್ತವೆಯೆಂದು ತಿಳಿಯಲಾಗಿದೆ. ಹೀಗಾಗಿ ಉತ್ಪತ್ತಿ ಮತ್ತು ಮರು ಉತ್ಪತ್ತಿಗೆ ಪ್ರಚೋದಕವಾಗುವ ಅಡಿಕೆ ವೀಳ್ಯ ಗಂಡಹೆಂಡತಿಯ ಪ್ರೀತಿಗೆ, ಮುಟ್ಟಾದ ಹೆಂಗಸಿನ ಸ್ಪರ್ಶದ ನಿಷೇಧಕ್ಕೆ ವಸ್ತುವಾಗುತ್ತದೆ.

ದೈವೀ ವರ್ಗಾವಣೆ

ವೀಳ್ಯ ತೌಳವ ಸಾಮಾಜಿಕ ಅಥವಾ ಧಾರ್ಮಿಕ ಕ್ರಿಯಾಚರಣೆಗಳಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವುದು ಅಡಿಕೆಯ ಜೊತೆ ಸೇರಿ. ಹೀಗಿದ್ದರೂ, ವೀಳ್ಯವೊಂದೇ ಧಾರ್ಮಿಕ ಕ್ರಿಯಾಚರಣೆಯಲ್ಲಿ ಬಳಕೆಯಾಗುವುದನ್ನೂ ಕಾಣಬಹುದು. ಹಿಂಗಾರ ದೈವೀಶಕ್ತಿಯ ವರ್ಗಾವಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವಂತೆ ವೀಳ್ಯವೂ ದೈವದ ಅಂದರೆ ಭೂತದ ವರ್ಗಾವಣೆಯ ವಸ್ತುಮಾಧ್ಯಮವಾಗಿ ಬಳಕೆಯಾಗುತ್ತದೆ. ಭೂತದ ಬಹಿರ್‌ರೂಪವನ್ನು ವೀಳ್ಯದಲ್ಲಿ ಬರಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೈವವನ್ನು ಸ್ಥಳಾಂತರಿಸಿದರು ಅನ್ನುವ ಸಂಗತಿಯ ಉಲ್ಲೇಖಗಳು ಬಹಳಷ್ಟು ತುಳುಪಾಡ್ದನಗಳಲ್ಲಿ ದೊರೆಯುತ್ತವೆ. ದೈವದ ಬಹಿರ್ ರೂಪವನ್ನು ಪಡೆಯಲು ವೀಳ್ಯದೆಲೆಯನ್ನೇ ಯಾಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನುವ ಬಗ್ಗೆ ಜನಪದ ವಿವರಣೆ ಸಿಗುವುದಿಲ್ಲ. ಉಳಿದ ಎಲೆಗಳಿಗೆ ಹೋಲಿಸಿದರೆ ವೀಳ್ಯ ಹಾಗೂ ಇತರ ಸಸ್ಯಗಳ ನಡುವಿನ ಜನಪದ ಸಂಬಂಧ ತೀರಾ ಭಿನ್ನ. ವೀಳ್ಯ ಉಪ ಆಹಾರದ ಸಸ್ಯೋತ್ಪನ್ನ. ಅದರ ಆಕಾರ ಮಿಕ್ಕ ಎಲೆಗಳಿಗಿಂತ ಅಶ್ವಸ್ಥದ ಎಲೆಯ ಆಕಾರವನ್ನು ಸುಮಾರಿಗೆ ಹೊಂದಿದ್ದು ಅತಿ ಮನೋಹರವಾಗಿದೆ. ದೈವದ ಪ್ರತಿರೂಪವನ್ನು ಪಡೆಯಲು ವೀಳ್ಯದೆಲೆಯ ಆಕಾರ ಅನುಕೂಲಕರ ಮಾತ್ರವಲ್ಲ, ಸುಂದರವಾಗಿರುವುದರಿಂದ ಅದರ ಆಯ್ಕೆಗೆ ಅದರ ಅಪೂರ್ವ ಆಕಾರವೇ ಕಾರಣವೆನ್ನುವ ಪ್ರಮೇಯವನ್ನು ಕಲ್ಪಿಸಿಕೊಳ್ಳಬಹುದು.

ಸಾಂಸ್ಕೃತಿಕ ಮಧ್ಯವರ್ತಿ

ಮದುವೆಯಂತಹ ಸಾಮಾಜಿಕ ವಿಧಿಗಳಲ್ಲಿ ಹೆಣ್ಣು ಮತ್ತು ಗಂಡಿನ ಕೈಯ್ಯಲ್ಲಿ ಅಡಿಕೆ ಮತ್ತು ವೀಳ್ಯದೆಲೆಯನ್ನು ಕೊಡುವ ವಿಧಿಯಿದೆ. ಮದುವೆಯ ಎಲ್ಲ ಕ್ರಿಯೆಗಳು ನಡೆಯುವ ಮೊದಲು ಇದನ್ನು ಕೊಡಲಾಗುತ್ತದೆ. ಹಾಗೆಯೇ ಮದುವೆಯ ಎಲ್ಲ ವಿಧಿಕಕ್ರಿಯೆಗಳು ಮುಗಿದ ಬಳಿಕ ಅಡಿಕೆ ವೀಳ್ಯವನ್ನು ಕೈಯಿಂದ ಬಿಡಲಾಗುತ್ತದೆ. ವೀಳ್ಯ ಹಿಡಿಯುವ ಈ ಕ್ರಿಯೆ ಮದುವೆಯ ಆರಂಭವನ್ನು ಸೂಚಿಸುವುದು ಮಾತ್ರವಲ್ಲದೆ, ಮದುವಣಗಿತ್ತಿ ಮತ್ತು ಮದುಮಗನನ್ನು ಸಾಮಾಜಿಕವಾದ ಸಾಮಾನ್ಯ ಸ್ಥಿತಿಯಿಂದ ಬೇರ್ಪಡಿಸಿ ಸಾಮಾಜಿಕವಾದ ವಿಶಿಷ್ಟ ಸ್ಥಿತಿಗೆ ವರ್ಗಾಯಿಸುತ್ತದೆ. ಈ ಅರ್ಥದಲ್ಲಿ ಅಡಿಕೆ ವೀಳ್ಯ ಸಾಂಸ್ಕೃತಿಕ ಮಧ್ಯವರ್ತಿಯಾಗಿ ಬಳಕೆಯಾಗುತ್ತದೆ.

ಶಕ್ತಿಯ ವರ್ಗಾವಣೆ

ಭೂತಾರಾಧನೆಯಲ್ಲಿ ಭೂತ ಕಟ್ಟುವವನು ಭೂತದ ‘ಅರದಲ’ (ವೇಷ)ವನ್ನು ಹಚ್ಚಿಕೊಳ್ಳುವ ಮೊದಲು ಅಂದರೆ ಆರಾಧನೆಯ ಮೂಲಕ ಭೂತವನ್ನು ಮಾನವೀಕರಿಸುವ ಮೊದಲು ಭೂತದ ಪಾತ್ರಿ ಭೂತ ಕಟ್ಟುವವನಿಗೆ ‘ಎಣ್ಣೆ ಬೂಳ್ಯ’ ಕೊಡುವ ವಿಧಿಯಿದೆ. ಈ ವಿಧಿಕ್ರಿಯೆಯ ಮೂಲಕ ಭೂತದ ಆರಾಧನೆ ಆರಂಭಗೊಳ್ಳುತ್ತದೆ. ‘ಎಣ್ಣೆ ಬೂಳ್ಯ’ ಕೊಡುವ ಈ ಕ್ರಿಯೆ ಭೂತಾರಾಧನೆಯ ಆರಂಭವನ್ನು ಸೂಚಿಸುತ್ತದೆ. ಮಾತ್ರವಲ್ಲ, ಭೂತ ಪಾತ್ರಿ ದೈವವನ್ನು ಪ್ರಾರ್ಥಿಸಿ ಭೂತ ಕಟ್ಟುವವನಿಗೆ ಅಡಕೆ ವೀಳ್ಯವನ್ನು ಕೊಡುವ ಮೂಲಕ ದೈವೀಶಕ್ತಿ ವರ್ಗಾವಣೆಗೊಳ್ಳುತ್ತದೆ.

. ಬಾಳೆ

ಸಂತತಿ ರೂಪಕ : ಹುಟ್ಟುಸಾವಿನ ಪ್ರತೀಕ

ಜೈವಿಕ ನಿಯಮಗಳಿಗೆ ಅನುಗುಣವಾಗಿ ಹುಟ್ಟು -ಸಾವು ಸಂಭವಿಸಿದರೂ ಸಂತತಿ ಎನ್ನುವುದು ನಿರ್ದಷ್ಟ ಸಾಮಾಜಿಕ ಸನ್ನಿವೇಶದಲ್ಲಿ ಪ್ರಮುಖ ಸಾಮಾಜಿಕ ವಿದ್ಯಮಾನವಾಗುತ್ತದೆ. ಅಲ್ಲದೆ ಸಂತತಿಯ ಬೆಳವಣಿಗೆ ನೈಸರ್ಗಿಕ ಅಥವಾ ಜೈವಿಕ ಸ್ಥಿತಿಗತಿಗಳಿಂದ ನಿರ್ಧರವಾಗದೆ ಸಮಾಜವನ್ನು, ಸಾಮಾಜಿಕ ಬದುಕನ್ನು ಮತ್ತುಬೌತಿಕ ಉತ್ಪಾದನೆಯನ್ನು ವ್ಯವಸ್ಥೆಗೊಳಿಸುವ ನಿಯಮಗಳಿಂದ ನಿರ್ಣಯಿಸಲ್ಪಡುತ್ತದೆ. ಹೀಗಾಗಿ ಪ್ರತಿಯೊಂದು ಉತ್ಪಾದನಾ ವಿಧಾನವು ಸಂತತಿಯ ಬೆಳವಣಿಗೆಯ ಕುರಿತಂತೆ ಅದರದೇ ಆದ ಕಲ್ಪನೆ, ನಿಯಮಗಳನ್ನು ಹೊಂದಿರುತ್ತದೆ.

ಜನನ – ಮರಣದ ಪ್ರಕ್ರಿಯೆ ಸಂತತಿಯ ಬೆಳವಣಿಗೆ  ಸಂಬಂಧಿಸಿದುದಾಗಿದೆ. ಇದರ ಕಾರಣ ಮತ್ತು ಪರಿಣಾಮಗಳನ್ನು ಪ್ರಾಕೃತಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಭಾಗವಾಗಿ ಪ್ರಾಚೀನ ಹಾಗೂ ಆಧುನಿಕ ಮಾನವ ಕಂಡುಕೊಂಡಿದ್ದಾನೆ. ಹೀಗಾಗಿ ಆತ ಅವುಗಳ ಮೇಲೆ ಪ್ರಭುತ್ವವನ್ನು ಸಾಧಿಸುವ ಪ್ರಯತ್ನ ಮಾಡುತ್ತಿರುತ್ತಾನೆ. ಸಂತಾನದ ಬಗೆಗಿನ ಮಾನವ ಕಲ್ಪನೆಗಳು ಸಾಮಾಜಿಕವಾಗಿ ವಿಭಿನ್ನಗೊಂಡಿವೆ. ಈ ಕಲ್ಪನೆಗಳು ಆಚರಣೆಗಳಲ್ಲಿ, ಕ್ರಿಯಾ ಚರಣೆಗಳಲ್ಲಿ ವ್ಯಕ್ತಗೊಳ್ಳುತ್ತಾ ಬಂದಿವೆ. ಔದ್ಯೋಗಿಕ ಪೂರ್ವದ ವ್ಯವಸಾಯ ಸಮಾಜದಲ್ಲಿ ಅತಿಸಂತಾನ ಮತ್ತು ಸಮೃದ್ಧಿ ಅದರ ಉತ್ಪಾದನಾ ಮೌಲ್ಯವಾಗಿದ್ದರೆ ಔದ್ಯೋಗಿಕ ಸಮಾಜದಲ್ಲಿ ಮಿತ ಸಂತಾನ ಅದರ ಸಾಮಾಜಿಕ ವ್ಯವಸ್ಥೆಯಾಗಿದೆ.

ಮಿತ ಸಂತಾನ ಪಾರಂಪರಿಕ ಸಮಾಜದಲ್ಲಿ ಕುಟುಂಬ ಬೆಳೆಯದ ಆ ಮೂಲಕ ಸಮಾಜ ಬೇಳೆಯದ ಒಂದು ಅಪಾಯದ ಸೂಚನೆ. ಫಲವಂತಿಕೆ, ಸಮೃದ್ಧಿ ಅಪೇಕ್ಷಿತ ಪಾರಂಪರಿಕ ಸಮಾಜದಲ್ಲಿ ಬಂಜೆತನ ‘ಗೊಡ್ಡು’ ಆಗುತ್ತದೆ. ತಾಯಿಗೆ ಒಂದೇ ಮಗುವಿರುವುದು ಕುಟುಂಬ ನಾಶದ ಅಪಶಕುನ. ಈ ಬಗೆಯ ಸಾಮಾಜಿಕ ವಾಸ್ತವವನ್ನು ಜನಪದ ನಿಜ-ಗೊಳಿಸುವುದು ಪ್ರಾಕೃತಿಕ ವಾಸ್ತವದ ಮೂಲಕ. ‘ಬಾಳೆಗೊಂದೇ ಗೊನೆ ಚೇಳಿಗೊಂದೇ ಬಸಿರು’ ಅನ್ನುವ ಮಾತು ಪ್ರಾಕೃತಿಕ ವಾಸ್ತವವನ್ನು ಜನಪದ ಗ್ರಹಿಸುವುದನ್ನು ವ್ಯಕ್ತ ಪಡಿಸುತ್ತದೆ. ನಿಸರ್ಗದ ಮೂಲಕ ದತ್ತವಾದ ಅರಿವನ್ನು ಸಾಂಸ್ಕೃತಿಕವಾಗಿ ರೂಪಿಸಿಕೊಳ್ಳುತ್ತದೆ. ಸಸ್ಯ ಮತ್ತು ಪ್ರಾಣಿಗಳ ಜೀವನ ಕ್ರಮದ ಪ್ರಾಕೃತಿಕ ನಿಯಮ ಮನುಷ್ಯನ ಸಾಮಾಜಿಕ ವ್ಯವಸ್ಥೆಯ ಮುಂದುವರಿಕೆಗೆ ಅಪಾಯವನ್ನು ತರುವ ಪ್ರಾಕೃತಿಕ ಸೂಚನೆಯಾಗುತ್ತದೆ. ಬಾಳೆ ಮತ್ತು ಚೇಳಿನ ಹುಟ್ಟು-ಸಾವಿನ ಪಾಕೃತಿಕ ಪ್ರಕ್ರಿಯೆ ಸಂಸ್ಕೃತಿಯ ಅತಿಸಂತಾನದ ಅಪೇಕ್ಷೆಗೆ ಬಾಧಕವೆಂದೇ ತಿಳಿಯುತ್ತದೆ. ತಾಯಿಗೆ ಸಾವು ತರುವ ಬಾಳೆ-ಚೇಳಿನ ಒಂದೇ ಬಸಿರು ಜನಪದಕ್ಕೆ ಅಪಶಕುನವಾಗುತ್ತದೆ. ತಾಯಿಗೆ ಒಂದೇ ಮಗು ಇರಬಾರದೆನ್ನುವ ನಂಬಿಕೆ ಕೂಡಾ ಅತಿಸಂತಾನದ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತದೆ. ‘ಕೊಂಬರ ಕೂಲಿದ ಮಗೆ ಪುಟ್ಟನೆ ಅಪ್ಪೆಗ್‌ಮರಣ’ (ಕೋರೆ ಹಲ್ಲಿನ ಮಗ ಹುಟ್ಟಿದ ಕೂಡಲೆ ತಾಯಿಗೆ ಮರಣ ) ಎನ್ನುವ ತುಳು ಒಗಟು (ಈ ಒಗಟಿನ ಉತ್ತರ ಬಾಳೆಗೊನೆ ಹಾಕುವುದು) ಕೋರೆಹಲ್ಲಿನ ಮಗ ಹುಟ್ಟಿದ ಕೂಡಲೇ ತಾಯಿಗೆ ಮರಣವಾಗುವುದೆಂದು ಹೇಳುತ್ತದೆ. ಇಲ್ಲಿ ಮಗನ ಹುಟ್ಟು ತಾಯಿಯ ಸಾವಿಗೆ ಕಾರಣವಾಗುತ್ತದೆ. ಒಗಟಿನ ಸತ್ಯ ಮತ್ತು ವಾಸ್ತವದ ಸತ್ಯ ಸಾದೃಶ್ಯಗೊಳ್ಳುವುದು ಹುಟ್ಟು ಮತ್ತು ಸಾವಿನ ತರ್ಕದಲ್ಲಿ.

ಬಾಳೆಯ ಉತ್ಪನ್ನಗಳನ್ನು ಮದುವೆ, ಸಾವು, ಕೃಷಿ ಸಂಬಂಧಿಯಾದ ಉತ್ಪಾದನಾ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವ ಮೂಲಕ ಬಾಳೆಯ ಉತ್ಪನ್ನಗಳು ಹುಟ್ಟು ಸಾವಿನ ತಾರ್ಕಿಕ ವೈರುಧ್ಯದ ಅರ್ಥವನ್ನು ಸಂವಹನಿಸಿದರೆ, ಭಾಷಿಕ ಜಾನಪದವಾದ ಗಾದೆ, ಒಗಟುಗಳಲ್ಲಿ ಈ ಅರ್ಥದ ಪ್ರಕಟಗೊಳ್ಳುತ್ತವೆ. ಹೀಗಾಗಿ ಬಾಳೆಯ ಬಗೆಗೆ ತುಳುವ ಸಂಸ್ಕೃತಿಯ ಗ್ರಹೀತಮೌಲ್ಯವನ್ನು ‘ನಿರ್ಧಿಷ್ಟತೆ’ ಯಲ್ಲಿ ಕಂಡುಕೊಳ್ಳದೆ ಜನಪದವು ಅದನ್ನು ಬಳಸಿಕೊಳ್ಳುವ ರೀತಿಯಲ್ಲಿ ಅದರ ಗ್ರಹೀತ ಮೌಲ್ಯಗಳನ್ನು ಗುರುತಿಸಿಕೊಳ್ಳಬಹುದಾಗಿದೆ.

ಸಮಾರೋಪ

ಅಧುನಿಕಪೂರ್ವ ಸಮಾಜವನ್ನು ಅದರ ಸಾಮಾಜಿಕ ಸಂಸ್ಥೆಗಳ ನಿರ್ವಹಣೆಯ ಹಿನ್ನೆಲೆಯಲ್ಲಿ ನಿರ್ವಚಿಸಿಕೊಂಡಾಗ ಮನುಷ್ಯ ಮತ್ತು ನಿಸರ್ಗದ ಸಂಬಂಧ ಸ್ವರೂಪವು ಗೋಚರ ಗೊಳ್ಳುವುದು ಮತ, ಜಾತಿ, ಕುಟುಂಬ, ವಿವಾಹ ಇಂತಹ ಸಾಮಾಜಿಕ ಸಂಸ್ಥೆಗಳ ನಿಯೋಗಗಳ ಮೂಲಕ. ಇಂತಹ ಸಾಂಸ್ಕೃತಿಕ ಪರಿಸರಗಳು ‘ಸಸ್ಯ ಜಾನಪದ’ ವನ್ನು ರೂಪಿಸುತ್ತವೆ. ಹಾಗೆಯೇ ಪ್ರಾದೇಶಿಕವಾಗಿ ಲಭ್ಯವಾಗುವ ಸಸ್ಯ ಪ್ರಪಂಚವನ್ನು ಆ ಪ್ರದೇಶದ ವಿಭಿನ್ನ ಸಂಸ್ಕೃತಿಗಳು ಗ್ರಹಿಸಿಕೊಳ್ಳುವ ಮತ್ತು ಹೊಂದಿಸಿಕೊಳ್ಳುವ ಸಂಬಂಧ ಸ್ವರೂಪಗಳು ಸಸ್ಯಜಾನಪದವನ್ನು ರೂಪಿಸುತ್ತವೆ. ಹೀಗಾಗಿ ಪ್ರದೇಶದಿಂದ ಪ್ರದೇಶಕ್ಕೆ, ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಗೆ ‘ಸಸ್ಯ ಜಾನಪದ’ ವೈವಿಧ್ಯವಾಗಿ. ವಿರೋಧವಾಗಿ ವ್ಯಕ್ತಗೊಳ್ಳುತ್ತದೆ. ಜೊತೆಗೆ ಈ ಬಗೆಯ ಪ್ರಾದೇಶಿಕ ಸಂಶ್ಕೃತಿಕ ನಿರ್ದಿಷ್ಟತೆಯ ವ್ಯಾಪ್ತಿಯನ್ನು ದಾಡಿ ‘ಸಸ್ಯ ಜಾನಪದ’ ವ್ಯಾಪಕಗೊಳ್ಳುತ್ತದೆ.

 

[1]ಸತ್ಯನಾಥ್‌ಟಿ. ಎಸ್‌. ೧೯೭೯, ೧೫-೧೭

[2]ಪುರುಷೋತ್ತಮ ಬಿಳಿಮಲೆ, ೧೯೯೦, ಪುಟ. ೪೬

[3]ಕನ್ನಡ ವಿಶ್ವಕೋಶ, ಸಂ. ೧, ೧೯೬೯, ಪುಟ ೨೧೨-೨೧೪

[4] Bavappa, Nair, Prem Kumar, 1983 ಪುಟ. ೩

[5]ಅದೇ ಪುಟ.

[6]ಅದೇ ಪುಟ. ೩

[7]ಮಾಲಗತ್ತಿ