ಬುಡಕಟ್ಟು ಜನರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವೆರಿಯರ್ ಎಲ್ವಿನ್ ಒಮ್ಮೆ ಒಬ್ಬ ಬುಡಕಟ್ಟು ವ್ಯಕ್ತಿಯೊಂದಿಗೆ ಸಂಭಾಷಿಸುತ್ತಿದ್ದಾಗ ತನ್ನ ಬಡತನಕ್ಕೆ ಕಾರಣವನ್ನು ಆತ ಹೀಗೆ ಹೇಳುತ್ತಾನೆ. ‘ನಾವೆಲ್ಲ ತುಂಬ ಸುಖಿಗಳಾಗಿದ್ದೆವು, ಅಷ್ಟರಲ್ಲಿ ನಮ್ಮ ನಾಡಿನ ಮಧ್ಯೆ ರೈಲು ಕಂಬಿ ಹಾಕಿ, ರೈಲೊಂದು ಬಂತು, ಆ ರೈಲು ಬಂದಾಗ ನಮ್ಮ ಎಲ್ಲ ದೇವತೆಗಳೂ ಅದನ್ನು ಹತ್ತಿ ಕಾದು ಬಿಟ್ಟು ನಗರ ಸೇರಿಬಿಟ್ಟರು, ಅಲ್ಲಿನ ಜನ ನಮ್ಮ ದೇವತೆಗಳ ನೆರವಿನಿಂದ ಅಭ್ಯುದಯಗೊಳ್ಳುತ್ತಿದ್ದಾರೆ. ಆದರೆ ನಾವು ಬಡವರಾಗುತ್ತಿದ್ದೇವೆ.

ವೆರಿಯರ್ ಎಲ್ವಿನರೇ ಸಂಗ್ರಹಿಸಿರುವ ಮತ್ತೊಂದು ಕಥೆ ಹೀಗಿದೆ. “ಲಕ್ಷ್ಮಣ ಜಟಿ ಸದಾ ತನ್ನ ಕಿಂಗ್ರಿಯೊಂದಿಗೆ ಪ್ರೇಮಗೀತೆ ಹಾಡುತ್ತಿರುತ್ತಾನೆ. ಅವನ ಅಣ್ಣ ರಾಮ ಸದಾ ಅದನ್ನು ಆಕ್ಷೇಪಿಸುತ್ತಿರುತ್ತಾನೆ. ಹೀಗಿರುವಾಗ ಲಕ್ಷ್ಮಣನ ಹಾಸಿಗೆಯ ಮೇಲೆ ಒಡೆದ ಬಳೆ ಮತ್ತು ಕಿವಿಯೋಲೆ ಸಿಗುತ್ತವೆ. ಅಲ್ಲಿ ಸಿಕ್ಕಿದ ಕಿವಿಯೋಲೆ ಸೀತೆಯ ಕಿವಿಗೆ ಆಗುತ್ತದೆ. ಇದರಿಂದ ಕುಪಿತಗೊಂಡ ರಾಮ ಲಕ್ಷ್ಮಣನನ್ನು ಬೆಂಕಿಗೆ ಹಾಕುತ್ತಾನೆ. ಲಕ್ಷ್ಮಣ ತನ್ನ ಕಿಂಗ್ರಿಯ ಜೊತೆ ಸಾವಕಾಶವಾಗಿ ಹೊರಬರುತ್ತಾನೆ. ಆಗ ಅವನಿಗೆ ಹಾವೊಂದು ಸಿಕ್ಕುತ್ತದೆ. ಅವನು ಹಾವಿನ್ ಅಸೇವೆ ಮಾಡುತ್ತಾನೆ. ಹಾವು ಅವನನ್ನು ಪಾತಾಳ ಲೋಕಕ್ಕೆ ಕರೆದೊಯ್ಯುತ್ತದೆ. ಪಾತಾಳ ಲೋಕದ ರಾಜ ಅವನಿಗೆ ಒಂದು ಪೆಟ್ಟಿಯ ಉಡುಗೊರೆ ನೀಡುತ್ತಾನೆ. ಆದರೆ ದಾರಿಯಲ್ಲಿ ಎಲ್ಲೂ ಆ ಪೆಟ್ಟಿಯನ್ನು ತೆಗೆಯಬಾರದು ಎಂದು ಹೇಳಿರುತ್ತಾನೆ. ಕುತೂಹಲ ತಡೆಯಲಾಗದ ಲಕ್ಷ್ಮಣ ಅದನ್ನು ತೆಗೆಯುತ್ತಾನೆ. ಅದರಿಂದ ಸುಂದರವಾದ ನಾಗದೇವತೆ ಮಿಂಚಿ ಮಾಯವಾಗುತ್ತಾಳೆ. ಅವಳನ್ನು ಹುಡುಕುತ್ತಾ ಹುಡುಕುತ್ತಾ ಲಕ್ಷ್ಮಣ ಬಾಣ ಬಿಡತೊಡಗುತ್ತಾನೆ. ಅದು ಗುಡುಗಾಗುತ್ತದೆ. ಮಿಂಚಿನ ರೂಪದ ನಾಗದೇವತೆ ಮಿಂಚಿ ಮಿಂಚಿ ಮಾಯವಾಗುತ್ತಿರುತ್ತಾಳೆ. ಅವಳನ್ನು ಹುಡುಕುತ್ತಿರುವ ಲಕ್ಷ್ಮಣ ಬಾಣ ಬಿಟ್ಟು ಗುಡುಗುತ್ತಲೇ ಇದ್ದಾನೆ. ಇವರ ನಿರಂತರ ಪ್ರೇಮದಾಟ ನಮಗೆ ಮಳೆ ತರುತ್ತಿದೆ, ಅದರಿಂದಾಗಿ ನಮ್ಮ ಕಾಡು ಬೆಳೆಯುತ್ತಿದೆ.”

ಸಾಂಕೇತಿಕವಾದ ಈ ಎರಡು ಕಥೆಗಳ ಹಿನ್ನೆಲ್ಯಲ್ಲಿ ನಾನು ನನ್ನ ಪ್ರಬಂಧವನ್ನು ಮಂಡಿಸಬಯಸುತ್ತೇನೆ. ಬುಡಕಟ್ಟು ಜನರನ್ನು ‘ಗಿರಿ’ ಜನರು ಎಂದು ಕರೆಯುವುದೇ ಅವರ ವಾಸ್ತವ್ಯದ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಎಂಬುದನ್ನು ಪರಿಭಾವಿಸುವಾಗ ಗಿರಿ ಕಂದರ ವಾಸಿಗಳಾದ ಇವರ ನಿಜವಾದ ಒಡನಾಡಿಗಳಾರು ಎಂಬುದೂ ಮುಖ್ಯವಾಗುತ್ತದೆ. ನಾಗರಿಕ ಸಮಾಜದ ಸೋಂಕಿಲ್ಲದೆ ಒಂದು ಕಾಲಕ್ಕೆ ಬದುದುತ್ತಿದ್ದ ಇವರಿಗೆ ಆಧಾರವಾಗಿದ್ದುದು ಸಸ್ಯ ಪರಿಸರವಾದರೆ, ಒಡನಾಡಿಯಾಗಿದ್ದುದು ಪ್ರಾಣಿ ಪರಿಸರ.

ಇವತ್ತು ಪರಿಸರ ಎಂಬ ಪದ ನಾನಾ ರೀತಿಯಾಗಿ ನಾನಾ ವ್ಯಾಪ್ತಿಯಲ್ಲಿ ಬಳಕೆಯಾಗುತ್ತಿದೆ. ಅನೇಕರು ವಾತಾವರಣವನ್ನು ಗಮನಿಸಿ ವಾತಾವರಣ ಕೆಟ್ಟಾಗ ಪರಿಸರ ಕೆಟ್ಟಿತು ಎಂದು ಹೇಳುತ್ತಾರೆ. ತಮ್ಮ ಅಕ್ಕಪಕ್ಕದ ಜಾಗ ಸರಿ ಇಲ್ಲದಾಗ ಪರಿಸರ ಚೆನ್ನಾಗಿಲ್ಲ ಎನ್ನುತ್ತಾರೆ. ಇವೆಲ್ಲ ಅವರವರ ವ್ಯಾಪ್ತಿಯಲ್ಲಿ ಅವರವರಿಗೆ ಸಂಬಂಧಿಸಿದಂತೆ ಸೀಮಿತವಾಗಿ ಬಳಕೆಯಾಗುವ ರೀತಿ. ಆದ್ರೆ, ಇಂದು ‘ಪರಿಸರ’ ಎಂಬುದು ಒಂದು ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಹಲವು ಆಂದೋಲನಗಳಿಗೆ ಕಾರಣವಾಗಿದೆ. ಇವತ್ತಿನ ಸಾಮಾಜಿಕ ತುರ್ತು ವಿಷಯವಾಗಿ ಪ್ರಪಂಚದಾದ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಪದ ಈ ಪರಿಸರ, ಅಂದಾಗ, ಪರಿಸರ ಪದಕ್ಕೆ ಇರುವ ವೈಶಾಲ್ಯವನ್ನು ನಾವು ಅರ್ಥ ಮಾದಿಕೊಳ್ಳಬೇಕಾಗಿದೆ. ಜಗತ್ತಿನ ಸಚರಾಚರ ಜೀವ ಜಗತ್ತನ್ನು ನಿಶ್ಚಲ ಭೌತಿಕ ಜಗತ್ತನ್ನು ಒಟ್ಟಾರೆಯಾಗಿ ಇಂದು ಪರಿಸರದ ವ್ಯಾಪ್ತಿಗೆ ತರುತ್ತಿದ್ದೇವೆ. ಕೇವಲ ಭೂಮಂಡಲವಷ್ಟೇ ಪರಿಸರವಲ್ಲ. ಇಡೀ ಬ್ರಹ್ಮಾಂಡವೇ ಇಂದು ಪರಿಸರದ ವ್ಯಾಪ್ತಿಗೆ ಬರುತ್ತಿದೆ. ಹೀಗೆ ಸೃಷ್ಟಿಯ ಸಕಲ ಕ್ರಿಯೆಗಳನ್ನು ಒಳಗೊಂಡಂತೆ ವ್ಯಾಖ್ಯಾನಿಸುವ ಈ ಪರಿಸರದ ಉಳಿವು ಅಂದರೆ ಇಡೀ ಬ್ರಹ್ಮಾಂಡದ ಉಳಿವು ಎಂದೇ ಅರ್ಥ.

ಈ ಹಿನ್ನೆಲೆಯಲ್ಲಿ ಪ್ರಾಣಿ ಜಗತ್ತು ಅಥವಾ ಸಸ್ಯ ಜಗತ್ತು ಎಂದು ವಿಂಗಡಿಸುವ ಬದಲು ಬುಡಕಟ್ಟುಗಳು ಮತ್ತು ಜೀವ ಜಗತ್ತು ಎಂದೇ ವ್ಯಾಖ್ಯಾನಿಸಿದರೆ ಒಳ್ಳೆಯದು ಎಂಬುದು ನನ್ನ ಭಾವನೆ. ಈ ಜೀವ ಜಗತ್ತಿನ ಉಳಿವು ಎಂದರೆ ಮನುಷ್ಯ ಪ್ರಪಂಚದ ಉಳಿವು ಎಂಬ ಕಟು ಸತ್ಯವನ್ನು ನಮ್ಮ ಹಿಂದಿನವರು ಅಂದರೆ ಗಿರಿಜನರು ತಿಳಿದಿದ್ದರು. ಅವರು ನಂಬಿದ ಮೌಲ್ಯಗಳಲ್ಲಿ ಸಸ್ಯ ಮತ್ತು ಪ್ರಾಣಿ ಪರಿಸರವನ್ನು ಕಾಪಾಡುವುದು ಮುಖ್ಯವಾಗಿತ್ತು. ವೈಜ್ಞಾನಿಕವಾಗಿ ಕೂಡ ಈ ಪರಿಸರದ ಉಳಿವು ಎಂದರೆ ಮನುಷ್ಯನ ಉಳಿವು ಎಂಬುದನ್ನು ಪರಿಸರ ವಿಜ್ಞಾನಿಗಳು ನಿರೂಪಿಸಿದ್ದಾರೆ” ಅವರ ನಿರೂಪಣೆಗಾಗಿ ಆಹಾರದ ಪಿರಾಮಿಡ್ ಒಂದನ್ನು ಅವರು ರಚಿಸಿದ್ದಾರೆ.

ಆಹಾರದ ಪಿರಮಿಡ್ :

 

 

ಈ ಪಿರಾಮಿಡ್ಡಿನ ತಳವೇ ಸಸ್ಯ ಸಂಕುಲದ ಜೀವರಾಶಿಗೆ ಸಂಬಂಧಿಸಿದ್ದು; ಅದರ ಮೇಲ್ಪದರ ಆ ಸಸ್ಯ ಸಂಕುಲದ ಆಶ್ರಯದಲ್ಲಿ ಜನಿಸುವ ನಾನಾ ಜೈವಿಕ ಕ್ರಿಮಿ ಕೀಟಗಳ ಜಗತ್ತು. ವಾಸ್ತವವಾಗಿ ಈ ಎರಡು ಹಂತಗಳೂ ಉತ್ಪಾದನಾ ಸಾಮರ್ಥ್ಯವುಳ್ಳಂಥವು ಇದೇ ಭೂಮಂಡಲದ ಬುನಾದಿ. ಈ ಬುನಾದಿ ಅಥವಾ ತಳ ಅಗಲವಾದಷ್ಟು ಪಿರಾಮಿಡ್ಡು ಭದ್ರವಾಗುತ್ತದೆ. ಅಂದರೆ ಉಳಿದ ಜೀವರಾಶಿಗೆ ಆಹಾರವನ್ನೊದಗಿಸುವ ಸಸ್ಯಗಳ ಸಂಖ್ಯೆ ಹೆಚ್ಚಿದಷ್ಟು ವ್ಯವಸ್ಥೆ ಹೆಚ್ಚು ಭದ್ರವಾಗುತ್ತದೆ. ಇದರ ಬದಲಿಗೆ ಸಸ್ಯಗಳ ಸಂಖ್ಯೆ ಕ್ಷೀಣಿಸಿ ಸಸ್ಯಾಹಾರಿ ಅಥವಾ ಮಾಂಸಾಹಾರಿ ಜೀವಿಗಳ ಸಂಖ್ಯೆ ಹೆಚ್ಚಿದಲ್ಲಿ ತಳಭಾಗ ಕಿರಿದಾಗುತ್ತದೆ. ಆದರೆ, ಅದರ ಮೇಲಿನ ಹಂತಗಳು ಅಡ್ಡಾದಿಡ್ಡಿ ಬೆಳೆದು ಸಮತೋಲ ತಪ್ಪುತ್ತದೆ. ಇದ್ರ ಪರಿಣಾಮವೆಂದರೆ ಪಿರಮಿಡ್ಡು ಕುಸಿದು ಇಡೀ ಜೀವ ಸಮುದಾಯ ಅಂತ್ಯದೆಡೆಗೆ ಚಲಿಸಬೇಕಾಗುತ್ತದೆ. ಆದ್ದರಿಂದಲೇ ಬುನಾದಿ ಸ್ವರೂಪದ ಸಸ್ಯ ಮತ್ತು ಜೈವಿಕ ಜೀವಿಗಳ ವಿಕಸನ ಕ್ರಿಯೆ ಇರಲೇಬೇಕು.

ಪ್ರಪಂಚದ ಹಾಗೂ ಇಡೀ ಸೃಷ್ಟಿಯ ಹುಟ್ಟಿನ ಬಗ್ಗೆ ತಮ್ಮದೇ ಆದ ಕಲ್ಪನೆ ಮತ್ತು ಆರಾಧನಾ ಭಾವನೆ ಇಟ್ಟುಕೊಂಡಿದ್ದ ಪ್ರಾಚೀನ ಮಾನವ ಸುತ್ತಣ ಪ್ರಪಂಚದಿಂದ ತನ್ನ ಅಸ್ತಿತ್ವವೇ ಹೊರತು ತನ್ನಿಂದ ಪ್ರಪಂಚ ಅಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ. ಇದು ಅವನ ವಿನಯ ಮತ್ತು ವಿವೇಕ ಎರಡು ಆಗಿತ್ತು. ಇಂದಿಗೂ ನಮ್ಮ ಅನೇಕಾನೇಕ ಬುಡಕಟ್ಟು ಜನರ ತಿಳಿವಳಿಕೆ ಇದೇ ಆಗಿದೆ. ಆದರೆ ಆಧುನಿಕ ಮಾನವ ಇದಕ್ಕೆ ವ್ಯತಿರಿಕ್ತವಾಗಿದ್ದಾನೆ ಎಲ್ಲವೂ ತನ್ನಿಂದ ಎಂಬ ಅಹಂ ತುಂಬಿದೆ.

ಅಂದಂದಿನ ಆಹಾರ ಹುಡುಕಿಕೊಳ್ಳುವುದು ಮಾತ್ರ ಗಿರಿಜನರ ದಿನನಿತ್ಯದ ತವಕವಾಗಿತ್ತು. ಹೊಟ್ಟೆ ತುಂಬಿತೆಂದರೆ ನಾಳೆಯ ಚಿಂತೆ ಇರುತ್ತಿರಲಿಲ್ಲ. ಒಂದು ಸಿಂಹ ಒಂದು ಪ್ರಾಣಿಯನ್ನು ಹಿಡಿದು ತಿಂದು ಸಂತೃಪ್ತವಾಯಿತೆಂದರೆ, ಹತ್ತಡಿ ದೂರದಲ್ಲಿ ಇನ್ನೊಂದು ಜಿಂಕೆ ಮಲಗಿದ್ದರೂ ಅದು ಮುಟ್ಟುವದಿಲ್ಲ. ಆಹಾರ ಸರಫಳಿಯಲ್ಲಿ ಒಂದು ಪ್ರಾಣ್ಯನ್ನು ತಿಂದು ಬದುಕುವ ಇತರೆಲ್ಲ ಪ್ರಾಣಿಗಳ ವರ್ತನೆ ಹೀಗೆ. ಪ್ರಾಚೀನ ಮಾನವನ ವರ್ತನೆ ಇದಕ್ಕಿಂತ ಭಿನ್ನವಾಗೇನಿರಲಿಲ್ಲ.

ಬುಡಕಟ್ಟು ಜನರಲ್ಲಿ ತೀರಾ ಇತ್ತೀಚೆಗೆನವರೆಗೆ ಕೂಡ ಚಾಲ್ತಿಯಲ್ಲಿದ್ದ ಕುರ್ಮಿ ಬೇಸಾಯ ಅವರ ಪರಿಸರ ಪ್ರೀತಿಯ ದ್ಯೋತಕವಾಗಿತ್ತು. ಕಗ್ಗಾಡಿನ ನಡುವಿನ ಒಂದಿಷ್ಟು ಜಾಗವನ್ನು ಕಡಿದು ಹಸನು ಮಾಡಿ ಒಂದೆರಡು ವರ್ಷ ಬೇಸಾಯ ಮಾಡಿ ನಂತರ ಆ ಜಾಗವನ್ನು ತೆರವು ಮಾಡಿ ಇನ್ನೊಂದು ಸ್ಥಳಕ್ಕಾಗಿ ಶೋಧಿಸುತ್ತಿದ್ದರು. ಹಾಗೆ ತೆರವು ಮಾಡಿದ ಜಾಗ ಕೆಲವೇ ವರ್ಷಗಳಲ್ಲಿ ಮತ್ತೆ ಕಾಡಾಗಿ ಪರಿವರ್ತಿತವಾಗುತ್ತಿತ್ತು. ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳುತ್ತಿದ ಬುಡಕಟ್ಟುಗಳ ಬೇಸಾಯದ ಈ ಪದ್ಧತಿ ಎಷ್ಟು ವೈಜ್ಞಾನಿಕವಾಗಿರುತ್ತಿತ್ತು ಎಂಬುದನ್ನು ನಾವು ನೋಡಬಹುದು.

ಮರ, ಗಿಡ,  ಸಸ್ಯಗಳ ಹೆಸರಿನಲ್ಲೇ ತಮ್ಮ ಕುಲ ಚಿಹ್ನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಬುಡಕಟ್ಟುಗಳು ಅಸಂಖ್ಯಾತ. ಪ್ರಾಣಿ ಪಕ್ಷಿಗಳ ಸಂಕೇತವನ್ನುಳ್ಳ ಬುಡಕಟ್ಟುಗಳು ಕಡಿಮೆಯೇನಿಲ್ಲ. ಬಹುಶಃ ಜಗತ್ತಿನ ಪ್ರತಿ ಜನಾಂಗವೂ ಒಂದಾನೊಂದು ಕಾಲಕ್ಕೆ ಪ್ರಕೃತಿಯ ನಡುವಿನ ಜೀವಿ ಅಥವಾ ವಸ್ತು ವಿಶೇಷಗಳನ್ನೇ ತಮ್ಮ ಕುಲ ಚಿಹ್ನೆಗಳನ್ನಾಗಿ ಹೊಂದಿದ್ದವೆಂಬುದಕ್ಕೆ ಸಾಕ್ಷಿಯಾಗಿ ಇಂದಿಗೂ ಅಂಥ ಅನೇಕ ಪಳೆಯುಳಿಕೆಗಳಿವೆ.

ಅಂಥ ಸಸ್ಯ ಅಥವಾ ಪ್ರಾಣಿಗಳನ್ನು ಆಯಾ ಕುಲಗಳು ನಾಶಮಾಡುವಂತಿರಲಿಲ್ಲ. ಹೀಗೆ ಪ್ರಕೃತಿಯಲ್ಲಿನ ನೂರಾರು ಬಗೆಯ ಸಸ್ಯಗಳು ಹಾಗೂ ಹತ್ತಾರು ಬಗೆಯ ಪ್ರಾಣಿ ಪಕ್ಷಿಗಳು ಪೂಜನೀಯ ಸ್ಥಾನಕ್ಕೇರಿ ಸುರಕ್ಷಿತವಾಗಿರುತ್ತಿದ್ದವು. ಬನ್ನಿಕುಲ, ಬಾಗೇಕುಲ, ಅರಳಿಕುಲ, ಆಲದ ಕುಲ, ಕಗ್ಗಲಿಕುಲ, ಕೇದಗೆ ಬಳಿ, ಕಡವೆ ಬಳಿ, ಬರ್ಕನ ಬಳಿ, ಶಿರ್ಕನ ಬಳಿ ಇತ್ಯಾದಿ ಸಾವಿರಾರು ಬಗೆಗಳನ್ನು ನಾವು ಪ್ರಪಂಚದಾದ್ಯಂತ ಕಾಣಬಹುದು. ಅನೇಕ ರಜಾ ಮನೆತನಗಳೂ ಇದಕ್ಕೆ ಹೊರತಾಗಿರಲಿಲ್ಲ. ಅರ್ಜುನನ ಕಪಿಧ್ವಜ, ದುರ್ಯೋಧನನ ಸರ್ಪಧ್ವಜ, ವಿಜಯ ನಗರದ ಅರಸರ ಕುಲ ಚಿಹ್ನೆಯಾದ ಹಂದಿ ಇಂಥ ಉದಾಹರಣೆಗಳು ಅನೇಕವಿದೆ.

ತಮ್ಮ ಪಾಡಿಗೆ ತಾವು ಒಂದು ಕಡೆ ನೆಲೆಯಾಗಿಯೋ ಅಥವಾ ಓಡಾಡಿಕೊಂಡೊ ಜೀವಿಸುತ್ತಿದ್ದ ಈ ಬುಡಕಟ್ಟುಗಳ ಸ್ವಚ್ಛಂದ ಪ್ರದೇಶಗಳನ್ನು ನಾಗರಿಕರೆನಿಸಿದ ಜನ ಕ್ರಮೇಣ ಆಕ್ರಮಿಸಿಕೊಂಡು ಅವರ ಅವಾಸಸ್ಥಾನವೆನಿಸಿದ ಕಾದನ್ನು ಇಲ್ಲವಾಗಿಸತೊಡಗಿದಾಗ ತಮ್ಮ ಆರಾಧನೆಯ ಭಾಗವಾದ ಕಾಡನ್ನು ಉಳಿಸಿಕೊಳ್ಳಲು ಕೆಲವು ಸದುದ್ದೇಶದ ತಂತ್ರಗಳನ್ನು ನಮ್ಮ ಗಿರಿಜನರು ಕಂಡುಕೊಂಡರು. ಇಂಥದ್ದರ ಫಲವಾಗಿ ರೂಪುಗೊಂಡ ‘ನಾಗಬನ’, ಜಟ್ಟಿಗನ ಬನ ಇವತ್ತಿಗೂ ನಮ್ಮ ಕಣ್ನ ಮುಂದೆ ಇವೆ. ತಾವು ಆರಾಧಿಸುವ ದೈವಗಳ ಹೆಸರಿನಲ್ಲಿ ಪೋಷಿಸಿ ಬೆಳೆಸಿದ ಈ ಬನಗಳು ನೂರಾರು ಬಗೆಯ ಪವಿತ್ರಮಯವಾದ ವೃಕ್ಷರಾಶಿಗಳಲ್ಲದೆ, ಔಷಧೀಯ ಗಿಡಗಳನ್ನು ಹೊಂದಿವೆ. ಮಲೆನಾಡಿನ ಹಾಗೂ ಕಾರಾವಳಿಯ ನೂರಾರು ಸ್ಥಳಗಳಲ್ಲಿ ಇಂದಿಗೂ ಉಳಿದಿರುವ ಈ ಪವಿತ್ರ ಬನಗಳು ಗಿಡಮರ ಬಳ್ಳಿಪೊದೆಗಳಿಂದ ತುಂಬಿಕೊಂಡು ಪ್ರಾಚೀನ ಕಾಲದ ಕಾಡುಗಳನ್ನು ನೆನಪಿಗೆ ತರುತ್ತಿವೆ. ಇದೇ ರೀತಿಯಾಗಿ ಕೊಡಗು ಹಾಗೂ ಮೈಸೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಪಾಡಿಕೊಂಡಿರುವ ‘ದೇವರ ಕಾಡು’ ಗಳು ಪ್ರಾಚೀನ ಕಾಲದಲ್ಲಿ ಇದ್ದಿರಬಹುದಾದ ನಮ್ಮ ಸಂಪದ್ಭರಿತ ಕಾಡುಗಳನ್ನು ನೆನಪಿಗೆ ತರುತ್ತವೆ.

ನಮ್ಮ ಮೌಖಿಕ ಮಹಾಕಾವ್ಯಗಳಲ್ಲಿ ಬರುವ ಸಸ್ಯ ಮತ್ತು ಪ್ರಾಣಿಗಳನ್ನು ಕುರಿತ ವಿವರಗಳು ಈ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ. ಸೋಲಿಗರ ಐತಿಹಾಸಿಕ ಕಾವ್ಯ ಎಂದೇ ಹೇಳಬಹ್ದುದಾದ ಮಲೆಮಾದೇಶ್ವರ ಕಾವ್ಯ ಈ ದೃಷ್ಟಿಯಿಂದ  ಬಹಳ ಮುಖ್ಯವಾದದ್ದು. ಈ ಕಾವ್ಯದಲ್ಲಿ ಬರುವ ವಿವಿಧ ರೀತಿಯ ಮರಗಿಡ ಬಳ್ಳಿಗಳು, ಅರಣ್ಯ ಪರಿಸರ, ಹಾಗೂ ಆ ಪರಿಸರದಲ್ಲಿ ಗಿರಿಜನರಾದ ಸೋಲಿಗರು ಕೈಗೊಳ್ಳುವ ಬೇಟೆ ಮತ್ತು ಆಹಾರ ಸಂಗ್ರಹಣೆಯ ವಿಧಿ ವಿಧಾನಗಳು ನಮ್ಮ ಪ್ರಾಚೀನ ಜೀವನ ಪದ್ಧತಿಯನ್ನು ಚೆನ್ನಾಗಿ ಬಿಂಬಿಸುತ್ತವೆ. ಇಡೀ ಕಾವ್ಯದಲ್ಲಿ ಬೇಟೆ ಎಂದರೆ, ಎಲ್ಲಿಯೂ ಪ್ರಾಣಿಗಳನ್ನು ಹತ್ಯೆ ಮಾಡುವುದಿಲ್ಲ. ಬದಲಾಗಿ ಜೇನು, ಹೆಜ್ಜೇನು, ಬೇರು, ಹಣ್ಣು, ಹೂ ಹಾಗೂ ಪ್ರಾಣಿಗಳ ಅವಶೇಷಗಳನ್ನು ಸಂಗ್ರಹಿಸುವ ವಿಧಿ ವಿಧಾನವೇ ಬೇಟೆ. ಇವರ ಸಾಂಸ್ಕೃತಿಕ ವೀರನಾದ ಮಲೆ ಮಾದಪ್ಪ ಪ್ರಾಣಿ ಪ್ರಿಯ. ಸದಾ ಹಾವು ಮತ್ತು ಹುಲಿಗಳ ಒಡನಾಟದಲ್ಲಿ, ಅವುಗಳ ಗೆಳೆಯನಾಗಿ ಕಾಲಕಳೆಯುವ ಒಬ್ಬ ಹೃದಯವಂತ. ಅವನ ಒಡನಾಟದಲ್ಲಿದ್ದ ಹುಲಿಗಳನ್ನು ಅವನು ಕೂಗಿ ಕರೆಯುವ ರೀತಿ ನೋಡಿ

ಕೊಲ್ಲೇಗಾಲ್ದ ಕುಳ್ಳು ಬರಗಾ ಬಾ
ಅಂಚಿ ತಾಳ್ದ ಕೆಂಚು ಬರಗಾ ಬಾ
ತಾಳು ಬೆಟ್ಟದ ತಲೆದೂಗಾ ಬಾ
ರಂಗನೊಡ್ಡ ಸಿಂಗಲ್ಲಾ ಬಾ

ಹೀಗೆ ತನ್ನ ಕಾಡಿನಲ್ಲಿರುವ ಹತ್ತಾರು ಹುಲಿಗಳನ್ನು ಕರೆದು ಅವುಗಳ ಮೈಸವರಿ, ಕ್ಷೇಮ ಸಮಾಚಾರ ವಿಚಾರಿಸಿ, ತನಗೆ ಪ್ರಿಯವಾದ ಹನ್ನೆರಡೆಜ್ಜೆ ಕೆಂಬರಗನ ಮೇಲೆ ಕುಂತು ಮಾದಪ್ಪ ಪ್ರಯಾಣ ಬೆಳೆಸುತ್ತಾನೆ.

ಮಂಟೇಸ್ವಾಮಿ ಮಹಾಕಾವ್ಯದಲ್ಲಿ ಬರುವ ಸಿದ್ಧಪ್ಪಾಜಿಯ ಗುಹಾವಾಸದ ಪ್ರಸಂಗ ಪ್ರಾಣಿಗಳ ಒಡನಾಟವನ್ನು ಮೆರೆಯುವ ಇನ್ನೊಂದು ಮುಕ್ಯ ಭಾಗ. ನಾನಾ ರೀತಿಯ ಹಾವುಗಳೊಡನೆ, ಹಾವನ್ನೇ ಹಾಸಿಗೆ ಮಾಡಿಕೊಂಡು ಚೇಳನ್ನೇ ತಲೆದಿಂಬು ಮಾಡಿಕೊಂಡು ಹನ್ನೆರಡು ವರ್ಷ ಗುಹೆಯಲ್ಲಿ ಕಾಲ ಕಳೆಯುವ ಸಿದ್ಧಪ್ಪಾಜಿ, ಹನ್ನೆರದು ವರ್ಷದ ನಂತರ ತನ್ನ ಗುರುವಾದ ಮಂಟೇಸ್ವಾಮಿಯನ್ನು ಕಾಣಲು ಹೋದಾಗ ಗುರುವಿಗಾಗಿ ಅವನು ಕಾಣಿಕೆಯಾಗಿ ನೀಡುವುದು ಹಾವುಗಳ ಹೊರೆಯೊಂದನ್ನು,

ಜುಂಜಪ್ಪನ ಮಹಾ ಕಾವ್ಯವಂತೂ ಕಾಡುಗೊಲ್ಲ ಜನಾಂಗದ ಪ್ರಾಣಿ ಪ್ರೀತಿಯನ್ನು ಮೆರೆಯುವ ಒಂದು ಅಪರೂಪದ ಕಾವ್ಯ. ಅವರು ಪ್ರೀತಿಸುವುದು ಕೇವಲ ಗೋವುಗಳನ್ನು ಮಾತ್ರವಲ್ಲ; ಇಡೀ ಪರಿಸರದ ಪ್ರಾಣಿ ಜಗತ್ತು ಅವರ ಆಸ್ತ್ರಿ. ತನ್ನ ಗೋವುಗಳಿಗೆ ನೀರು ಮತ್ತು ಹುಲ್ಲು ಸಿಗದೆ ಜುಂಜಪ್ಪ ನೀರಿಗಾಗಿ ಅಲೆಯುತ್ತಿರುತ್ತಾನೆ. ಅಂಥ ಸಂದರ್ಭದಲ್ಲಿ ಆ ಕಾಡಿನಲ್ಲಿ ಜಿಂಕೆಯೊಂದು ಹೋಗುತ್ತಿರುತ್ತದೆ. ಅದರ ಬಾಯಲ್ಲಿ ಹಸಿರು ಹುಲ್ಲಿರುತ್ತದೆ. ಆ ಹಸಿರು ಹುಲ್ಲನ್ನು ಕಂಡ ಜುಂಜಪ್ಪ ಇಲ್ಲೆಲ್ಲೋ ನೀರಿನ ಆಶ್ರಯ ಇರಲೇಬೇಕೆಂದು ಭಾವಿಸಿ ಜೆಂಕೆಯನ್ನು ತಡೆದು ನಿಲ್ಲಿಸುತ್ತಾನೆ. ಬೆದರಿದ ಜಿಂಕೆ ಮನುಷ್ಯನಾದ ನೀನು ನನ್ನನ್ನು ನಿಲ್ಲಿಸಬೇಡ ಎಂದು ಕೇಳಿಕೊಳ್ಳುತ್ತದೆ. ಆಗ ಜುಂಜಪ್ಪ ನಾನು ಉಂಬುವರ ಮಗನಲ್ಲ, ನಿನ್ನ ಕೊಂಬವರ ಮಗನಲ್ಲ ಎಂದು ಹೇಳಿ ತನ್ನ ನೀರಿಲ್ಲದ ಗೋವುಗಳಿಗೆ ನೀರಿನ ಜಾಗ ತೋರಿಸು ಎಂದು ಕಣ್ಣೀರಿಡುತ್ತಾನೆ. ಇಂಥ ಮಾನವೀಯ ಪ್ರಸಂಗಗಳು ಜುಂಜಪ್ಪನ ಕಾವ್ಯದಲ್ಲಿ ಬೇಕಾದಷ್ಟು ಬರುತ್ತವೆ.

ಕೃಷ್ಣಗೊಲ್ಲರ ಮಹಾಕಾವ್ಯದಲ್ಲಿ ಬರುವ ಇನ್ನೊಂದು ಅಪರೂಪದ ಪ್ರಸಂಗ ನೋಡಿ. ಈ ಕಾವ್ಯದಲ್ಲಿ ಬರುವ ಶರಬಂಧ ರಾಜನೆಂಬ ಅರಸನಿಗೆ ಅನೇಕ ಕಂಟಕಗಳಿರುತ್ತವೆ. ಆ ಕಂಟಕಗಳಿಂದ ಪಾರಾಗಬೇಕಾದರೆ ಅವನು ಸುಂದರವಾದ ವನವೊಂದನ್ನು ನಿರ್ಮಾಣ ಮಾಡಬೇಕು ಎಂದು ಹೇಳಲಾಗುತ್ತದೆ. ಅದರಲ್ಲೂ ರಾಜ ಮತ್ತು ಅವನ ಪರಿವಾರದ ರಾಣಿಯರೇ ಸ್ವತಃ ಕೆಲಸ ಮಾಡಿ ಆ ವನವನ್ನು ಬೆಳೆಸಬೇಕು. ರಾಜ ಮತ್ತು ರಾಣಿಯರು ಕೆಲವು ವರ್ಷಗಳ ಕಾಲ ಅರಮನೆ ಬಿಟ್ಟು ಬಂದು, ಬಯಲಿನ ಜಾಗದಲ್ಲಿ ವನವೊಂದನ್ನು ಬೆಳೆಯುತ್ತಾರೆ. ಆ ವನದಲ್ಲಿ ವಿವಿಧ ರೀತಿಯ ಹೂ ಹಣ್ಣಿನ ಮರಗಳು ಸಮೃದ್ಧವಾಗಿ ಬೆಳೆದು ಹಕ್ಕಿ ಪಕ್ಷಿಗಳನ್ನು ಆಹ್ವಾನಿಸುತ್ತವೆ. ಹಾಗೆ ಹಾರಿ ಬಂದ ನಾನಾ ವಿಧವಾದ ಹಕ್ಕಿ ಪಕ್ಷಿಗಳು ಹಣ್ಣು ಹಂಪಲುಗಳನ್ನು ತಿಂದು ಸಂತೃಪ್ತವಾಗಿ ಇಂಚರಗೈದು ರಾಜ ರಾಣಿಯರನ್ನು ಹರಸುತ್ತವೆ. ಆಗ ರಾಜನ ಕಂಟಕಗಳು ದೂರವಾಗುತ್ತವೆ. ನಮ್ಮ ಬುಡಕಟ್ಟು ಜನರ ಅನೇಕಾನೇಕ ಕಥೆ ಕಾವ್ಯಗಳು ಹೀಗೆ ತಮ್ಮ ಪ್ರಕೃತಿ ಪ್ರೇಮವನ್ನು ಸಾರಿ ಹೇಳುತ್ತವೆ.

ಆದರೆ ನಮ್ಮ ಆಧುನಿಕ ವ್ಯವಸ್ಥೆ ಗಿರಿಜನರ ನಿಷ್ಕಲ್ಮಶ ಪ್ರೇಮದ ಆ ಮನಸ್ಸುಗಳನ್ನು ಹೇಗೆ ಕಲಕಿಬಿಟ್ಟಿದೆ ಎಂಬುದನ್ನು ನಾವು ಗಮನಿಸಬೇಕು. ಗಿಡ, ಮರ ಮತ್ತು ಪ್ರಾಣಿ, ಪಕ್ಷಿಗಳೊಡನೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಬಳಸಿ ನಿರುಮ್ಮಳವಾಗಿ ಇರುತ್ತಿದ್ದ ಅವರ ಬದುಕಿನ ಜೊತೆ ನಾಗರಿಕ ನೆನಸಿದ ಸ್ವಾಥಿ ಮಾನವ ಚೆಲ್ಲಾಟವಾದತೊಡಗಿದ ಮೇಲೆ ಸಸ್ಯ ಮತ್ತು ಪ್ರಾಣಿ ಪರಿಸರವೆಂಬುದು ಅವರಿಂದ ದೂರವಾಗತೊಡಗಿತು.

ಇದು ಎಲ್ಲಿಂದ ಆರಂಭವಾಯಿತು? ಯಾವಾಗ ಯುರೋಪಿಯನ್ನರು ತಮ್ಮ ಫಿರಂಗಿ ಸಂಸ್ಕೃತಿಯನ್ನು ಹೊತ್ತು ನಮ್ಮ ಕಾಡಿಗೆ ಕಾಲಿಟ್ಟರೋ ಅಲ್ಲಿಂದ ಈ ಚೆಲ್ಲಾಟ ಆರಂಭವಾಯಿತು ಎಂದೇ ನನ್ನ ನಂಬಿಕೆ. ಘಟ್ಟ ಮತ್ತು ಘಟ್ಟದ ಕೆಳಗಿನ ಸಮೃದ್ಧ ಕಣಿವೆಗಳಲ್ಲಿನ ಫಲವತ್ತು ಜಾಗಗಳನ್ನು ಎಸ್ಟೇಟ್ ಗಳನ್ನಾಗಿ ಪರಿವರ್ತಿಸಲಾಯಿತು. ಕಾಫಿ, ಟೀ, ಏಲಕ್ಕಿ, ಕೋಕಾ ಹಾಗೂ ಸಾಂಬಾರ ಪದಾರ್ಥಗಳ ನೂರಾರು ಎಸ್ಟೇಟುಗಳು ಬ್ರಿಟಿಷರೋ ಅಥವಾ ಅವರನ್ನು ಓಲೈಸುವ ಮೇಲ್ವಿಚಾರಕರುಗಳಾದ ಭೂಮಾಲೀಕರಲ್ಲೋ ಉಳದವು. ಗಿರಿಜನರು ತೆತ್ತು ಬೇಸಾಯ ಅಥವಾ ಕುರ್ಮಿ ಬೇಸಾಯ ಮಾಡುತ್ತಿದ್ದ, ಅಹಾಗೂ ಯಾವುದೇ ಖಾತೆ – ಕಿರ್ದಿ ಎಂಬ ಕಟ್ಟು ಪಾಡುಗಳಿಲ್ಲದೇ ಸ್ವಚ್ಚಂಧವಾಗಿರುತ್ತಿದ್ದ ಭೂಮಿ ಅವರ ಕಣ್ಣ ಮುಂದೆಯೇ ಮಂಗ ಮಾಯವಾದಂತಾಗಿ ಧಣಿಗಳ ಪಾಲಾದವು. ಅಕ್ಷರಬಲ್ಲ ಆಡಳಿತಗಾರರು ಮತ್ತು ಅವರಂತೆಯೇ ಅಕ್ಷರ ಕಲಿತವರೆಂಬ ಅಹಂಕಾರದಲ್ಲಿದ್ದ ಮೇಲ್ವರ್ಗದ ಜನರು ತಮ್ಮ ಅನುಕೂಲಾನುಸಾರ ಖಾತೆ ಕಂದಾಯ ಇತ್ಯಾದಿ ಸೃಷ್ಟಿಸಿಕೊಂಡು ಭೂಮಾಲೀಕರಾದರು. ಕೊಡಗಿನವರು, ಕುಡಿಯರು, ಶಿವಮೊಗ್ಗ ಜಿಲ್ಲೆಯ ಹಸಲರು, ಕಾನುದೀವರು, ಕುಣಬಿಯವರು, ದಕ್ಷಿಣ ಕನ್ನಡದ ಮಲೆಕುಡಿಯರು, ಕೊರಗರು ಕುಡುಬಿಯರು, ಉತ್ತರ ಕನ್ನಡದ ಗೊಂಡರು, ಹಾಲಕ್ಕಿ ಒಕ್ಕಲೊಇಗರು, ಮುಕ್ರಿಯರು, ಸಿದ್ಧಿಯರು ಮುಂತಾಗಿ ಇನ್ನೂ ಅನೇಕಾನೇಕ ಜನ ವರ್ಗಗಳು ಅಂದಿನಿಂದ ತಮ್ಮ ನೆಲೆ ಕಳೆದುಕೊಂಡು ಅನಿರ್ವಾವಾಗಿ ತೋಟಗಳ ಮಾಲೀಕರ ತೊತ್ತಾಗಬೇಕಾಯಿತು.

ಬ್ರಿಟಿಷರ ಕೋವಿಗಳು ಇಲ್ಲಿ ಎರದು ಕೆಲಸಗಳನ್ನು ಮಾಡಿದವು. ಪ್ರತಿಭಟಿಸಿದ ಜನ ವರ್ಗಗಳಿಗೆ ಕೋವಿ ತೋರಿಸಿ ಎದುರಿಸಿದ್ದು ಒಂದನೆಯದಾದರೆ, ಕಾಡಿನ ಪ್ರಾಣಿ ಪಕ್ಷಿಗಳನ್ನು ನಿರಂತರವಾಗಿ ಹಾಗೂ ಮನರಂಜನೆಗಾಗಿ ಎಂಬಂತೆ ಕೊಲ್ಲತೊಡಗಿದ್ದು ಎರಡನೆಯದು. ಇವರ ಈ ಮನರಂಜನೆ ಎಲ್ಲಿಯವರೆಗೆ ಹೋಯಿತೆಂದರೆ ಹೆಚ್ಚು ಹುಲಿ ಕೊಂದವನಿಗೆ ಅವರು ಮೆಡಲ್ ಗಳನ್ನು ಕೊಡತೊಡಗಿದರು. ಆನೆಗಳ ದಂತ ತಂದವನನ್ನು ಸನ್ಮಾನಿಸಿದರು. ಅಂಥ ಸಾಧನೆಗಳನ್ನು ಮಾಡಿದ ನಮ್ಮವರು ಈಗ ಬೇಟೆಯ ನೆನಪುಗಳು ಎಂದು ಬರೆಯತೊಡಗಿದ್ದಾರೆ. ಅದಿರಲಿ, ಬ್ರಿಟಿಷರ ಈ ಮನರಂಜನೆ ತೆವಲು ನಮ್ಮ ಹತ್ತಾರು ರಾಜ ಮನೆತನದವರಿಗೂ ಪಾಳ್ಳೇಗಾರಿಗೂ ಹತ್ತಿಕೊಂಡಿತು. ತಮ್ಮ ಸೇವಕರ್ ಕೈಲಿ ಹುಲಿ ಹೊಡೆಸಿ ಅವರ್ ಅಮೂಮ್ದೆ ನಿಂತು ಮೀಸೆ ತಿರುವುತ್ತ ಛಾಯಾ ಚಿತ್ರ ತೆಗೆಸಿಕೊಂಡ ಹತ್ತಾರು ವೀರಾಗ್ರಣಿ ರಾಜರು ಭಾರತದಾದ್ಯಂತ ಇದ್ದರಂತೆ.

ಅನಂತರ ಕೋವಿ ಸಂಸ್ಕೃತಿ ಹೇಗೆ ಬೆಳೆಯಿತೆಂದು ನಿಮಗೆಲ್ಲ ಗೊತ್ತೆ ಇದೆ. ಇಂದು ಮಲೆನಾಡಿನ ಯಾವ ಮನೆಯಲ್ಲಿ ಕೋವಿ ಇಲ್ಲ? ಸಮೃದ್ಧವಾದ  ಜಾಗಗಳಿಂದ ಬುಡಕಟ್ಟುಗಳನ್ನು ಒಕ್ಕಲೆಬ್ಬಿಸಿದಂತೆ, ಅರಣ್ಯದ ತುಂಬ ನಲಿದಾದಿಕೊಂಡಿದ್ದ ಪ್ರಾಣಿಗಳನ್ನು ಹತ್ಯೆ ಮಾದಲಾಯಿತು. ತಮ್ಮ ಶಕ್ಯಾನುಸಾರ ಹೊಸ ಜಾಗ ಅಥವಾ ಉದ್ಯೋಗ ಅರಸಿ ಹೊರಟ ಕೆಲವು ಬುಡಕಟ್ಟುಗಳನ್ನು ಒಕ್ಕಲೆಬ್ಬಿಸಿದಂತೆ, ಆರಣ್ಯದ ತುಂಬ ನಲಿದಾಡಿಕೊಂಡಿದ್ದ ಪ್ರಾಣಿಗಳನ್ನು ಹತ್ಯೆ ಮಾಡಲಾಯಿತು. ತಮ್ಮ ಶಕ್ಯಾನುಸಾರ ಹೊಸ ಜಾಗ ಅಥವಾ ಉದ್ಯೋಗ ಅರಸಿ ಹೊರಟ ಕೆಲವು ಬುಡಕಟ್ಟುಗಳು ಅಲ್ಲಲ್ಲಿ ಜಾಗ ಕಂಡುಕೊಡ್ಂಅವು. ಅದು ಸಾಧ್ಯವಾಗದೇ ಇದ್ದ ಬುಡಕಟ್ಟುಗಳು ತೋಟ ತುಡಿಕೆಗಳಲ್ಲಿ ಮಾಲೀಕರ ಕೈಕೆಳಗೆ ಜೀತದಾಳುಗಳಾದರು. ಆದರೆ ಪ್ರಾಣಿ ಪ್ರಪಂಚಕ್ಕೆ ಇದು ಸಾಧ್ಯವಿರಲಿಲ್ಲ, ಹತ್ಯಗೊಳಗಾದವುದನ್ನು ಬಿಟ್ಟು ಪ್ರಪಂಚದಲ್ಲಿಯೇ ವೈಶಿಷ್ಟ್ಯ ಪೂರ್ಣವೆನಿಸಿದ್ದ ಪಶ್ಚಿಮ ಘಟ್ಟಗಳಲ್ಲಿ ದಿನೇ ದಿನೇ ಕಾಡು ಇಲ್ಲವಾಗುತ್ತಿದೆ. ಪ್ರಾಣಿಗಳನ್ನಂತೂ ನೋಡಬೇಕಾದಲ್ಲಿ ನಮ್ಮ ಕೃತಕ ಅಭಯಾರಣ್ಯಗಳಿಗೇ ಹೋಗಬೇಕು ಅಷ್ಟೇ.

ನಮ್ಮ ಸ್ವಾತಂತ್ರ್ಯಾ ನಂತರದ ವ್ಯವಸ್ಥೆ ಮಾಡಿದ್ದಾದರೂ ಏನು? ಈ ವಿಚಾರವೂ ಅಷ್ಟೆ ಮುಖ್ಯ ಅರಣ್ಯ ಬೆಳೆಸುವ ಘೋಷಣೆ ಹೊತ್ತ ನಮ್ಮ ವ್ಯವಸ್ಥೆ ಕಾಡುಗಳ್ಳರೊಂದಿಗೆ ಶಾಮಿಲಾದದ್ದು ಕೈಗಾರಿಕಾ ಕ್ರಾಂತಿಯ ನೆಪದಲ್ಲಿ ವಿಶಾಲ ಅರಣ್ಯಗಳನ್ನು ನುಂಗಿ ಹಾಕುವ ಬೃಹತ್ ಅಣೆಕಟ್ಟೆಗಳನ್ನು ನಿರ್ಮಾಣ ಮಾಡಿದ್ದು, ನಿಮಗೆ ಕೆಲಸ ಇಲ್ಲದಿದ್ದರೆ ಅರಣ್ಯ ಇಲಾಖೆಗೆ ಬನ್ನಿ ಎಂದು ಆಹ್ವಾನಿಸಿ ಬುಡಕಟ್ಟು ಜನರಿಗೆ ಮರ ಕಡಿಯುವ ಕೆಲಸ ಕೊಟ್ಟಿದ್ದು, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಯಾದರೂ ಬದುಕು ದೂಡುತ್ತಿದ್ದ ಜನರ ಮೇಲೆ ಅವರಿಂದ ಕಮೀಷನ್ ವಸೂಲು ಮಾಡಲು ಕಂಟ್ರಾಕ್ಟರ್ ಗಳನ್ನು ನೇಮಿಸಿದ್ದರು. ಬಂಡವಾಳ ಹೂಡುವ ದೇಶ ವಿದೇಶಿ ಪಟ್ಟಭದ್ರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಇನ್ನು ಬುಡಕಟ್ಟುಗಳನ್ನು ಒಕ್ಕಲೆಬ್ಬಿಸುತ್ತಿರುವುದು, ಬುಡಕಟ್ಟು ಜನರ ಸಂಸ್ಕೃತಿಯ ಅಭಿವೃದ್ಧಿಗಾಗಿ ಇಂಥ ವಿಚಾರ ಸಂಕಿರಣ ಹಾಗೂ ಉತ್ಸವಗಳನ್ನು ಏರ್ಪಡಿಸುತ್ತಿರುವುದು ಇವೆಲ್ಲ ನಮ್ಮ ಸ್ವಾತಂತ್ರ್ಯಾ ನಂತರದ ಸಾಧನೆಗಳು ಎಂದು ಅಂದುಕೊಳ್ಳಬಹುದಾದರೆ ಅಂದುಕೊಳ್ಳಬಹುದಾಗಿದೆ.

* * *