ಮಕ್ಕಳಿಗೆ ಚಳಿ ಕಡಿಮೆ.  ದೊಡ್ಡವರಾದಂತೆಲ್ಲಾ ಚಳಿ ಜಾಸ್ತಿ, ಏಕೆ? ಎನ್ನುವ ಚರ್ಚೆ ನಡೆಯುತ್ತಿತ್ತು.  ಕೊನೆಗೆ ದೊಡ್ಡವರೆಲ್ಲಾ ತೀರ್ಮಾನ ಮಾಡಿದ್ದೇನು ಗೊತ್ತೆ?  ಮಕ್ಕಳಿಗೆ ಚಳಿಯ ಬಗ್ಗೆ ತಿಳುವಳಿಕೆ ಇಲ್ಲ.  ಅದಕ್ಕಾಗಿ ಅವರಿಗೆ ಚಳಿಯಾಗದು…

ರಾಸಾಯನಿಕ ಶಾಸ್ತ್ರಜ್ಞ ಡಾ. ಕೆ.ಸಿ. ರಘು ಹೇಳುತ್ತಾರೆ ಚಳಿಯ ಅನುಭವವನ್ನು ನಮಗೆ ಉಂಟುಮಾಡುವುದು ನಮ್ಮ ದೇಹದ ಮೇಲಿರುವ ಸೂಕ್ಷ್ಮಜೀವಿಗಳು!  ಮಕ್ಕಳ ದೇಹದ ಮೇಲಿರುವ ಸೂಕ್ಷ್ಮಜೀವಿಗಳು ಚಳಿಗೆ ಪ್ರತಿರೋಧವನ್ನುಂಟುಮಾಡುತ್ತವೆ.  ಹೀಗಾಗಿ ಮಕ್ಕಳಿಗೆ ಚಳಿ ಕಡಿಮೆ.

ಆದರೆ ಮಕ್ಕಳ ಹೊಟ್ಟೆಯೊಳಗಿನ ಜಂತುಹುಳುಗಳು ಮಾತ್ರ ಅಪಾಯಕಾರಿ.  ತಮ್ಮ ಜೀವನಚಕ್ರದಲ್ಲಿ ಲಾರ್ವಾ ಸ್ಥಿತಿಯಲ್ಲಿ ಹೊರಗೆ ಬರುತ್ತವೆ.  ಬಾಯಿ, ಚರ್ಮದ ಮೂಲಕ ಹೇಗೋ ಮತ್ತೆ ಒಳಸೇರಿ ಉಪದ್ರ ನೀಡುತ್ತವೆ.  ಕೆಲವೊಮ್ಮೆ ಕೇವಲ ಹೊಟ್ಟೆಯೊಂದನ್ನೇ ಅಲ್ಲ ಮೆದುಳಿನವರೆಗೂ ಹೋಗುತ್ತದೆ.  ಪ್ರಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡ್ ಪೇಸ್‌ನ ಮೆದುಳಿನವರೆಗೂ ಜಂತಹುಳು ನುಗ್ಗಿದ ಪ್ರಕರಣ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.  ನೆನಪಿಡಿ, ಇವು ಪರಾವಲಂಬಿಗಳೇ ಹೊರತು ಸಹಜೀವಿಗಳಲ್ಲ.

ಸಹಜೀವಿಗಳೆಂದರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಜೀವಿಗಳು ನಿರಂತರವಾಗಿ ಪರಸ್ಪರ ಸಹಾಯಕರಾಗಿರುವುದು.

ಮೊಸಳೆಗಳು ನೀರಿನ ಮೇಲೆ ಬಂದು ಬಿಸಿಲು ಕಾಯಿಸುತ್ತವೆ.  ಹಾಗೆ ಬಿಸಿಲು ಕಾಯಿಸುವಾಗ ಬಾಯಿಯನ್ನು ತೆರೆದಿಟ್ಟುಕೊಳ್ಳುತ್ತವೆ.  ಯಾಕೆ ಗೊತ್ತಾ?  ಮೊಸಳೆಗಳ ಬಾಯಲ್ಲಿ ವಿಪರೀತ ಹಲ್ಲುಗಳಿವೆ.  ಗರಗಸದಂತೆ ಇರುವ ಹಲ್ಲುಗಳಲ್ಲಿ ಆಹಾರವನ್ನು ಜಗಿದು, ಜಗಿದು ತಿನ್ನುತ್ತವೆ.  ತಿಂದಾದ ಮೇಲೆ ಹಲ್ಲುಜ್ಜಿಕೊಳ್ಳುವುದಿಲ್ಲ.  ಆಹಾರವೆಲ್ಲಾ ಹಲ್ಲಿನ ಸಂದಿಗಳಲ್ಲಿ ಸಿಕ್ಕಿಕೊಳ್ಳುತ್ತದೆ.  ತೆಗೆಯುವುದು ಹೇಗೆ?  ಅದಕ್ಕೆ ಮೊಸಳೆ ಕಂಡುಕೊಂಡ ಉಪಾಯ ಬಿಸಿಲು ಕಾಯಿಸುತ್ತಾ ಬಾಯಿ ತೆರೆದು ಮಲಗುವುದು.  ಮರದ ಮೇಲೆ ಕುಳಿತ ಪ್ಲೋವರ್ ಹಕ್ಕಿ ಇದನ್ನೇ ಕಾಯುತ್ತಿರುತ್ತದೆ.  ಮೊದಲು ಮೊಸಳೆಯ ಮೂತಿಯ ಮೇಲೆ ಕೂರುತ್ತದೆ.  ಹಲ್ಲಿನ ಸಂದಿಗಳಲ್ಲಿ ಸಿಕ್ಕಿಕೊಂಡ ಆಹಾರದ ತುಂಡುಗಳನ್ನು ಕಿತ್ತು ತಿನ್ನುತ್ತದೆ.   ಪ್ಲೋವರ್ ಹಕ್ಕಿಗೆ ಔತಣ.  ಮೊಸಳೆಗೆ ಹಲ್ಲು ಚೊಕ್ಕಟ. ಅಷ್ಟೇ ಅಲ್ಲ ಮೊಸಳೆಯ ಮೈಮೇಲಿರುವ ಜಿಗಣೆ ಮುಂತಾದ ಜೀವಿಗಳನ್ನು ಕಿತ್ತು ತಿನ್ನುತ್ತದೆ.

ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ಹಸುಗಳ ಹಿಂದೆ ತಿರುಗುವ ಬೆಳ್ಳಕ್ಕಿಗಳನ್ನು ನೋಡಿದ್ದೀರಾ?  ಅವುಗಳ ಹೆಸರೇ ಕ್ಯಾಟಲ್ ಬರ್ಡ್.  ಹುಲ್ಲಿನಲ್ಲಿರುವ ಸಣ್ಣ ಉಣುಗುಗಳು ಹಸುಗಳ ರಕ್ತ ಹೀರಲು ಮೈಗೆ ಅಂಟಿಕೊಳ್ಳುತ್ತವೆ.  ಅವುಗಳನ್ನು ಈ ಬೆಳ್ಳಕ್ಕಿಗಳು ಕಿತ್ತು ತಿನ್ನುತ್ತವೆ.  ಹಸುಗಳಿಗೆ ಉಣುಗುಗಳಿಂದ ಮುಕ್ತಿ, ಬೆಳ್ಳಕ್ಕಿಗಳಿಗೆ ರಸದೂಟ.

ಅದೇ ರೀತಿ ಎರೆಹುಳುಗಳಿಗೆ ಕೊಳೆತ ಸಸ್ಯ ತ್ಯಾಜ್ಯಗಳು ಆಹಾರವಾದರೆ ಎರೆಹುಳುಗಳ ವಿಸರ್ಜನೆಯು ಸಸ್ಯಗಳಿಗೆ ಗೊಬ್ಬರ.

ಹಸುಗಳಿಗೆ ನಾಲ್ಕು ಹೊಟ್ಟೆಗಳಿರುವುದು ಗೊತ್ತಲ್ಲ.  ಹಸುಗಳ ಆಹಾರ ಹುಲ್ಲು.  ಹುಲ್ಲಿನಲ್ಲಿ ಅತ್ಯಧಿಕ ಪ್ರಮಾಣದ ಸೆಲ್ಯುಲೋಸ್ ಇದೆ.  ಈ ಸೆಲ್ಯುಲೋಸನ್ನು ಜೀರ್ಣಿಸುವ ಶಕ್ತಿ ಪ್ರಾಣಿಗಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಇಲ್ಲ.  ಆದರೆ ಹಸುವಿನ ದೇಹದೊಳಗಿನ ಒಂದು ಹೊಟ್ಟೆಯಲ್ಲಿ ಸೂಕ್ಷ್ಮಜೀವಿಗಳಿವೆ.  ಅವು ಹಸು ತಿನ್ನುವ ಹುಲ್ಲು, ಅದರೊಳಗಿನ ಸೆಲ್ಯುಲೋಸನ್ನು ಜೀರ್ಣಿಸಿಕೊಳ್ಳಬಲ್ಲದು.  ಅವುಗಳು ವಿಘಟಿಸಿದ ಸೆಲ್ಯುಲೋಸ್‌ಗಳು ಹಸುವಿಗೆ ಆಹಾರವಾಗುತ್ತದೆ.  ಆದರೆ ಆನೆಯ ಹೊಟ್ಟೆಯೊಳಗೆ ಈ ರೀತಿಯ ಸೂಕ್ಷ್ಮಜೀವಿಗಳಿಲ್ಲ.  ಹೀಗಾಗಿ ಎಷ್ಟು ಹುಲ್ಲು ತಿಂದರೂ ಸೆಲ್ಯುಲೋಸ್ ಲದ್ದಿಯ ಮೂಲಕ ಹೊರಬರುತ್ತದೆ ಹಾಗೂ ವಿಪರೀತ ಪ್ರಮಾಣದ ಆಹಾರವೂ ಬೇಕು.

ಮರಳುಗಾಡಿನ ಓತಿಗಳು ಪೆಟ್ರೆಲ್ ಪಕ್ಷಿಯ ಜೊತೆಯೇ ಸಹಜೀವನ ನಡೆಸುತ್ತವೆ.  ಪೆಟ್ರೆಲ್ ಪಕ್ಷಿಯು ನೆಲದಡಿಯಲ್ಲಿ ಗೂಡು ಕಟ್ಟುತ್ತದೆ.  ಓತಿಯು ಗೂಡಿಗೆ ಇರುವೆಗಳು, ಇತರ ಕೀಟಗಳ ಬಂದರೆ ಅವುಗಳನ್ನು ಗಬಕ್ಕನೆ ತಿಂದುಬಿಡುತ್ತದೆ.  ಹಗಲೆಲ್ಲಾ ಓತಿಯು ಗೂಡಿನಲ್ಲಿ ಮಲಗಿರುತ್ತದೆ.  ಪೆಟ್ರೆಲ್ ಆಹಾರಕ್ಕಾಗಿ ಹೊರಗೆ ಹೋಗುತ್ತದೆ.  ಸಂಜೆ ಪೆಟ್ರೆಲ್ ಗೂಡಿಗೆ ಬಂದಕೂಡಲೇ ಓತಿ ಆಹಾರ ಬೇಟೆಗೆ ಹೊರಡುತ್ತದೆ.  ಪೆಟ್ರೆಲ್ ಮೊಟ್ಟೆಯಿಟ್ಟಾಗ ಹಗಲು ಕಾವು ಕೊಡುವ ಕೆಲಸ ಓತಿಯದು.  ಅದೇ ರೀತಿ ಓತಿ ಮೊಟ್ಟೆಯಿಟ್ಟಾಗ ರಾತ್ರಿ ಕಾವು ಕೊಡುವ ಕೆಲಸ ಪೆಟ್ರೆಲ್‌ದು.

ಜೀಬ್ರಾ ಹಾಗೂ ಆಸ್ಟ್ರಿಚ್‌ಗಳು ಸದಾ ಒಟ್ಟಿಗೆ ಇರುತ್ತವೆ.  ಅವುಗಳ ಆಹಾರ ಬೇರೆ ಬೇರೆಯಾದ ಕಾರಣ ಪೈಪೋಟಿಯಿಲ್ಲ.  ಆಸ್ಟ್ರಿಚ್‌ಗಳು ಎತ್ತರವಾಗಿವೆ.  ಹಗಲಿನಲ್ಲಿ ಬಹಳ ದೂರದವರೆಗೆ ನೋಡಬಲ್ಲವು.  ಬಲು ದೂರದಿಂದಲೇ ಶತ್ರುಗಳನ್ನು ಗುರುತಿಸುವ ಹೊಣೆ ಅವುಗಳದು.  ಆಗ ಜೀಬ್ರಾಗಳು ನಿಶ್ಚಿಂತೆಯಿಂದ ಮೇಯುತ್ತವೆ.  ರಾತ್ರಿ ಪಾಳಿ ಜೀಬ್ರಾಗಳದು.  ಅವುಗಳಿಗೆ ಕಿವಿ ಅತ್ಯಂತ ಚುರುಕು.  ಮೂಗಿಗೆ ಒಂದು ಮೈಲಿ ದೂರದ ವಾಸನೆಯನ್ನೂ ಸಹ ಗ್ರಹಿಸುವ ಶಕ್ತಿ ಇದೆ.  ರಾತ್ರಿ ಆಸ್ಟ್ರಿಚ್‌ಗಳಿಗೆ ಆರಾಮ ನಿದ್ರೆ.

ರೀನೋಸಾರಸ್ ಪ್ರಪಂಚದ ಅತ್ಯಂತ ಬಲಿಷ್ಠ ಪ್ರಾಣಿಗಳಲ್ಲಿ ಒಂದು.  ಹುಲಿ ಹಾಗೂ ಸಿಂಹಗಳನ್ನೇ ತನ್ನ ಕೊಂಬಿನಿಂದ ಸೀಳಿ ಎಸೆಯಬಲ್ಲದು.  ಆದರೆ ಒಂದು ಪುಟಾಣಿ, ನಮ್ಮ ಕೈಮುಷ್ಠಿ ಗಾತ್ರದ ಹಕ್ಕಿ ಮಾತ್ರ ಅದಕ್ಕೆ ಹೆದರುವುದಿಲ್ಲ.  ಅವು ರಿನೋಸಾರಸ್‌ನ ಕೊಂಬು, ಕಿವಿಗಳಲ್ಲಿ ಅಂಟಿಕೊಂಡು ರಕ್ತ ಹೀರುವ ಟಿಕ್ಸ್‌ಗಳನ್ನು ತಿನ್ನಲು ಬರುತ್ತದೆ ಹಾಗೂ ಕುಕ್ಕಿ ಕುಕ್ಕಿ ತಿನ್ನುತ್ತವೆ.  ರಿನೋಸಾರಸ್‌ಗಳು ಅವುಗಳ ಮೇಲೆ ಒಮ್ಮೆಯೂ ಸಿಟ್ಟು ಮಾಡಿಕೊಳ್ಳುವುದಿಲ್ಲ.  ಆ ಹಕ್ಕಿಯ ಹೆಸರೇನು ಗೊತ್ತೇ?!  ಟಿಕ್‌ಬರ್ಡ್! ಕನ್ನಡದಲ್ಲಿ ಉಣ್ಣಿಹಕ್ಕಿ.

ರ್‍ಯಾಟೆಲ್ ಹಾಗೂ ಹನಿಗೈಡ್ ಭಾರೀ ಸ್ನೇಹಿತರು.  ಹನಿಗೈಡ್ ಕೆಲಸ ಜೇನುಗೂಡುಗಳನ್ನು ಹುಡುಕುವುದು.  ಹುಡುಕಿದ ಮೇಲೆ ಎಲ್ಲೋ ನಿದ್ದೆ ಹೊಡೆಯುತ್ತಿರುವ ರಾಟೆಲ್ ಬಳಿ ಹೋಗಿ ಕಿರುಚಾಡತೊಡಗುತ್ತದೆ.  ಮೈತುಂಬಾ ತುಪ್ಪಳ ಹೊಂದಿರುವ ಇಲಿ ಜಾತಿಯ ರಾಟೆಲ್ ಹನಿಗೈಡ್‌ನ ಹಿಂದೆ ಹೊರಡುತ್ತದೆ.  ತನ್ನ ಚೂಪಾದ ಉಗುರುಗಳಿಂದ ಹುತ್ತದಲ್ಲಿರುವ, ಮರದ ಬೊಡ್ಡೆಗಳಲ್ಲಿರುವ ಜೇನುಗೂಡನ್ನು ಬಿಡಿಸಿ ತೆಗೆಯುತ್ತದೆ.  ದಾಳಿ ಮಾಡುವ ಜೇನುನೊಣಗಳಿಂದ ರಕ್ಷಣೆಗೆ ಹೇಗಿದ್ದರೂ ಮೈತುಂಬಾ ತುಪ್ಪಳವಿದೆಯಲ್ಲಾ!! ಜೇನನ್ನು ತಿಂದು ತೇಗಿದ ರಾಟೆಲ್ ಒಂದಿಷ್ಟನ್ನು ಹನಿಗೈಡ್‌ಗೆ ಬಿಡುತ್ತದೆ.

ಮನುಷ್ಯರೊಂದಿಗೆ ಸಹಜೀವಿಗಳಾಗಿರುವ ಹಸು, ಎಮ್ಮೆ, ಕುರಿ, ನಾಯಿ, ಬೆಕ್ಕು, ಮಂಗ ಏನೆಲ್ಲಾ ಪ್ರಾಣಿಗಳಿರುವುದು ಎಲ್ಲರಿಗೂ ಗೊತ್ತು.  ಪಂಚತಂತ್ರದ ಕತೆಗಳಲ್ಲಿ ಸಿಂಹದೊಂದಿಗೆ ನರಿ, ಜಿಂಕೆಯೊಂದಿಗೆ ಮಂಗ ಸಹಜೀವಿಯಾಗಿ ಒಬ್ಬರಿಗೊಬ್ಬರು ಸಹಾಯಕರಾಗಿರುವುದನ್ನು ಓದಿದ್ದೇವೆ.  ಹೀಗೆ ಸಹಜೀವನವೆನ್ನುವುದು ಒಬ್ಬರಿಗೊಬ್ಬರ ಅನುಕೂಲಕ್ಕೆ ಏರ್ಪಟ್ಟ ಮೈತ್ರಿ ಎಂದೆನಿಸಿದರೂ, ಇಬ್ಬರಲ್ಲೂ ಪ್ರಾಮಾಣಿಕತೆಯಿರುವಷ್ಟು ಕಾಲ ಬೆಸುಗೆ ಗಟ್ಟಿಯಾಗಿರುತ್ತದೆ.

ಮತ್ತೊಂದು ರೀತಿಯಲ್ಲಿ ಅರ್ಥೈಸುವುದಾದರೆ ಎಂತಹ ಬಲಿಷ್ಟ ಜೀವಿಗಳೂ ಸಹ ಕನಿಷ್ಠವೆಂದುಕೊಂಡ ಜೀವಿಗಳೊಂದಿಗೆ ಸಹಜೀವನ ನಡೆಸಲೇಬೇಕಾದ ಅನಿವಾರ್ಯತೆ ಪ್ರಕೃತಿಯಲ್ಲಿ ಸಹಜ