ಹೊಸ ಸಹಸ್ರಮಾನದ ಮೊದಲ ವರ್ಷಕ್ಕೆ ಆರು ತಿಂಗಳು ತುಂಬುವುದರೊಳಗೆ ಈ ಶತಮಾನದ ಮೊದಲ ಮಹಾ ಸಂಶೋಧನೆ ಜೀವವಿಜ್ಞಾನ ಕ್ಷೇತ್ರದಲ್ಲಿ ಬೆಳಕಿಗೆ ಬಂದಿದೆ. ಇದು ಕಳೆದ ಶತಮಾನದ ಮಹಾ ಸಂಶೋಧನೆಗಳ ಪಟ್ಟಿಯಲ್ಲಿದ್ದ ಜೀನ್ ಸಂಬಂಧಿ ಸಂಶೋಧನೆಯ ಮುಂದುವರಿದ ಭಾಗ. ಮುಂದುವರಿದ ಭಾಗವಾದರೇನು? ಮೂಲದಷ್ಟೆ ಮಹತ್ವ ಇದಕ್ಕೆ.

ಮನುಷ್ಯ ಬದುಕಿನ ಇಡೀ ರಹಸ್ಯವನ್ನು ಅನುವಂಶಿಕ ಸಂಕೇತ ಭಾಷೆಯಲ್ಲಿ ಹಿಡಿದಿಟ್ಟುಕೊಂಡಿರುವ ಜಿನೋಮ್ ನಕ್ಷೆಯ ಕರಡನ್ನು ವಿಜ್ಞಾನಿಗಳು ಸಿದ್ಧಪಡಿಸಿರುವುದೇ ಈ ಮಹತ್ವದ ಸಂಶೋಧನೆ. ಈ ವರ್ಷದ ಜೂನ್ ೬ ರಂದು ಪ್ರಕಟವಾದ ಈ ಸುದ್ದಿ ಪ್ರಪಂಚದಾದ್ಯಂತ ವಿಜ್ಞಾನಿಗಳ ಸಮೂಹದಲ್ಲಿ ಹೊಸ ಹುಮ್ಮಸ್ಸನ್ನು ಹರಿಸಿದೆ.

ಅನೇಕ ಸಾಧ್ಯತೆಗಳ ಬಂಡಾರವನ್ನು ಮೈತುಂಬಿಕೊಂಡಿರುವ ಜೋನೋಮ್‌ನ ಸಮಗ್ರ ನಕ್ಷೆ ತಯಾರಿಕೆಯಲ್ಲಿ ಮೊದಲಿಗರಾಗಲು ಎರಡು ಸಂಸ್ಥೆಗಳು ತೀವ್ರ ಪೈಪೋಟಿಯಲ್ಲಿದ್ದವು. ಅದರಲ್ಲಿ ಒಂದು, ಸಾರ್ವಜನಿಕ ನಿಧಿಯಿಂದ ಸ್ಥಾಪನೆಗೊಂಡಿರುವ ಹ್ಯೂಮನ್ ಜೀನೋಮ್ ಪ್ರಾಜೆಕ್ಟ್. ಮತ್ತೊಂದು, ಖಾಸಗಿ ಸಂಸ್ಥೆ ಸೆಲೆರಾ ಜೀನೋಮಿಕ್ಸ್ ಕಾರ್ಪೊರೇಷನ್. ಕರಡಿನ ತಯಾರಿಕೆಗೆ ಒಟ್ಟಾರೆ ಎರಡು ಶತಕೋಟಿ ಡಾಲರ್ ಹಣ ಖರ್ಚಾಗಿದೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಚೀನಾ ದೇಶದ ಅನೇಕ ವಿಜ್ಞಾನಿಗಳು ಇದಕ್ಕಾಗಿ ಹತ್ತು ವರ್ಷಗಳ ಕಾಲ ಸತತವಾಗಿ ದುಡಿದಿದ್ದಾರೆ. ಇದೀಗ ಅವರು ಯಶಸ್ಸಿನ ಹೊಸ್ತಿಲನ್ನು ದಾಟಿದ್ದಾರೆ.

* * *

ಮನುಕುಲ ಈವರೆಗೆ ತಯಾರಿಸಿರುವ ನಕ್ಷೆಗಳಲ್ಲೆಲ್ಲ ಅತ್ಯದ್ಭುತವಾದದ್ದು ಎಂದು ಹೇಳಲಾಗುತ್ತಿರುವ ಈ ನಕ್ಷೆ ‘ಮಾನವನಾಗಿರುವುದೇಂದರೇನು?’ ಎಂಬ ರಹಸ್ಯವನ್ನು ಬಚ್ಚಿಟ್ಟುಕೊಂಡಿದೆ. ಈ ರಹಸ್ಯವನ್ನು ಭೇದಿಸುವ ದಿಶೆಯಲ್ಲಿ ಸಾಗಿದ ವಿಜ್ಞಾನಿಗಳ ಮಹಾ ಸಾಹಸ ಯಾತ್ರೆಯ ಮೊದಲ ಅಂಕಕ್ಕೆ ಈಗ ತೆರೆ ಬಿದ್ದಿದೆ: ಮನುಷ್ಯ ಬದುಕಿನ ಹಣೆ ಬರಹದ ಚಿತ್ರಗುಪ್ತ ಭಾಷೆಯ ಮೂರು ಶತಕೋಟಿ ರಾಸಾಯನಿಕ ಸಂಕೇತಾಕ್ಷರಗಳಿಂದ ಕೂಡಿದ ‘ಆನುವಂಶಿಕ ಆಜ್ಞೆ’ಯ ಕರಡು ನಕ್ಷೆಯನ್ನು ಪಡೆದಿದ್ದಾರೆ. ಇದರೊಟ್ಟಿಗೆ ಮತ್ತೊಂದು ಅಂಕಕ್ಕೆ ರಂಗ ಆಗಲೆ ಸಜ್ಜಾಗಿದೆ.

ಹ್ಯೂಮನ್ ಜೀನೋಮ್ ಪ್ರಾಜೆಕ್ಟ್ ತಯಾರಿಸಿರುವ ವಂಶವಾಹಿ ಸಮೂಹದ ಕಾರ್ಯಸಾಧು ಕರಡು ನಕ್ಷೆ ಅನೇಕ ಅನಾಮಧೇಯ ವ್ಯಕ್ತಿಗಳಿಂದ ಪಡೆದ ಡಿಎನ್‌ಎಗಳ ಮೊಸಾಯಿಕ್ ಆಗಿದೆ. ಇದು ಒಂದು ರೀತಿಯ ಆಧಾರ ರೇಖೆ ಅಥವಾ ಪರಾಮರ್ಶನ ಶ್ರೇಣಿಯಾಗಿದೆ. ಇದರೊಂದಿಗೆ ಹೋಲಿಕೆ ಮಾಡಿ ಇತರೆ ವ್ಯಕ್ತಿಗಳ ಡಿಎನ್‌ಎಯನ್ನು ಅರ್ಥಮಾಡಿಕೊಳ್ಳಬಹುದು: ಅವುಗಳಲ್ಲಿ ಇರಬಹುದಾದ ಗುಣದೋಷಗಳನ್ನು ಅಂದಾಜು ಮಾಡಬಹುದು.

ಹ್ಯೂಮನ್ ಜೀನೋಮ್ ಪ್ರಾಜೆಕ್ಟ್ ಕೈವಶಮಾಡಿಕೊಂಡಿರುವ ನಕ್ಷೆ ಅಗಾಧ ಪ್ರಮಾಣದ ಜೈವಿಕ ದತ್ತಾಂಶಗಳನ್ನೊಳಗೊಂಡಿದೆ. ಇದು ಪ್ರತಿಯೊಂದು ಜೀನನ್ನು ಅರ್ಥಮಾಡಿಕೊಳ್ಳಲು ಕೀಲಿಕೈಯಾಗಿದೆ. ಆ ಮೂಲಕ ಮನುಷ್ಯನನ್ನು ಕಾಡುತ್ತಿರುವ ಸಾವಿರಾರು ಕಾಯಿಲೆಗಳಿಗೆ ಮೂಲ ಕಾರಣವನ್ನು ತಿಳಿದುಕೊಳ್ಳುವುದು ಮತ್ತು ಅದು ಬಾರದಂತೆ ತಡೆಗಟ್ಟುವುದು ಸಾಧ್ಯವಾಗುತ್ತದೆ. ಜೀನೋಮ್ ಶ್ರೇಣಿಯು ನಮ್ಮ ಸಂವೇದನೆ, ನಮ್ಮ ಸ್ವಭಾವ, ನಮ್ಮ ಬೆಳವಣಿಗೆ, ನಮ್ಮ ವಯಸ್ಸಾಗುವಿಕೆ, ನಮ್ಮ ಆಕಾರ-ವಿಕಾರ, ನಮ್ಮ ಎತ್ತರ-ದಪ್ಪ, ನಮ್ಮ ಬಣ್ಣ-ಬೆಡಗು, ನಮ್ಮ ರೋಗರುಜಿನಗಳು, ನಮ್ಮ ವ್ಯತ್ಯಾಸಗಳು, ನಮ್ಮ ವಿಲಕ್ಷಣತೆ – ಹೀಗೆ ನಮ್ಮ ಒಟ್ಟು ಜೀವನ ಪ್ರಕ್ರಿಯೆಯ ಎಲ್ಲ ರಹಸ್ಯಗಳನ್ನು ಭೇದಿಸಲು ಸಶಕ್ತ ಸಾಧನವಾಗಿದೆ. ಈ ನಕ್ಷೆ, ಅಂತಿಮ ವಿಶ್ಲೇಷಣೆಯಲ್ಲಿ, ಇಚ್ಛಿತ ಜೀವ ಸೃಷ್ಟಿಯ ಬ್ರಹ್ಮಶಕ್ತಿಯನ್ನು ವಿಜ್ಞಾನಿಗಳ ಬತ್ತಳಿಕೆಗೆ ಸೇರಿಸಲಿದೆ.

ಇದೇ ಕಾರಣಕ್ಕೆ ಅನೇಕ ವಿಜ್ಞಾನಿಗಳು ಈ ನಕ್ಷೆಯನ್ನು ಕುರಿತು ಅತ್ಯುತ್ಸಾಹದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬ್ರಿಟನ್ನಿನಲ್ಲಿ ನಡೆದ ಸಂಶೋಧನೆಗೆ ಹಣ ಒದಗಿಸಿದ ವೆಲ್‌ಕಂ ಟ್ರಸ್ಟ್‌ನ ನಿರ್ದೇಶಕ ಡಾ. ಮೈಕೆಲ್ ಡೆಕ್‌ಸ್ಟರ್ ಅವರ ಅಭಿಪ್ರಾಯದಲ್ಲಿ “ಜೀನೋಮ್‌ನ ನೀಲನಕ್ಷೆ ತಯಾರಿಕೆಯನ್ನು ಚಂದ್ರನ ಮೇಲೆ ಮಾನವ ಹೆಜ್ಜೆಯೂರಿದ ಮಹಾನ್ ಸಾಹಸಕ್ಕೆ ಹೋಲಿಸಲಾಗುತ್ತಿದೆ. ಆದರೆ ಇದು ಅದಕ್ಕಿಂತಲೂ ಹೆಚ್ಚು.”

ಡಿಎನ್‌ಎಯ ಅಣು ರಚನೆಯನ್ನು ಕಂಡುಹಿಡಿದ ಮಹತ್ವದ ಸಂಶೋಧನೆಗಾಗಿ ನೊಬೆಲ್ ಪಾರಿತೋಷಕ ಪಡೆದ ಅಮೆರಿಕದ ವಿಜ್ಞಾನಿ ಡಾ. ಜೇಮ್ಸ್ ವ್ಯಾಟ್ಸ್‌ನ್ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ “ಅದೊಂದು ದೈತ್ಯ ಸಂಪತ್ತು. ನಮಗೀಗ ಮನುಷ್ಯ ಬದುಕಿಗೆ ಸಂಬಂಧಿಸಿದ ಮಾಹಿತಿ ಪುಸ್ತಕ ಲಭ್ಯವಾದಂತಾಯಿತು… ಮುದ್ರಣ ಯಂತ್ರದ ನಂತರ ಮಾಹಿತಿ ಪ್ರಸರಣದಲ್ಲಿ ಸ್ಪೋಟವೇ ಆಯಿತು… ಇನ್ನು ಮುಂದೆ ಎಲ್ಲವೂ ಬಹು ವೇಗವಾಗಿ ಚಲಿಸುತ್ತದೆ. ನಮ್ಮನ್ನು ನಾವು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಮನುಷ್ಯ ಸ್ವಭಾವ ಏನು ಎಂಬುದನ್ನು ಕುರಿತು ಇನ್ನೂ ಉತ್ತಮವಾದ ತಿಳಿವಳಿಕೆಯನ್ನು ಪಡೆದುಕೊಳ್ಳಬಹುದು. ಮುಂದೆ ಇನ್ನಿತರೆ ಜೀವಿಗಳ ಮಾಹಿತಿ ಪುಸ್ತಕಗಳೂ ನಮ್ಮದಾಗುವುದರಲ್ಲಿ ಅನುಮಾನವಿಲ್ಲ,” ಎಂದಿದ್ದಾರೆ.

ಅದೇ ಕಾಲಕ್ಕೆ ಈ ವಿಷಯದಲ್ಲಿ ಅತ್ಯುತ್ಸಾಹ ಸಲ್ಲದು; ಸಂಯಮ ಅಗತ್ಯ ಎಂದು ಎಚ್ಚರಿಸುತ್ತಿರುವ ವಿಜ್ಞಾನಿಗಳೂ ಇದ್ದಾರೆ. ಅವರು ಒತ್ತಿ ಹೇಳುತ್ತಿರುವ ಒಂದು ವಿಷಯವೆಂದರೆ ಜೀನೋಮ್ ನಕ್ಷೆಯ ಕರಡಿನ ಪ್ರಕಟಣೆ ಕೇವಲ ಪ್ರಾರಂಭವಷ್ಟೆ; ಅಂತ್ಯವಲ್ಲ. ವಿಜ್ಞಾನಿಗಳು ಈಗ ದಕ್ಕಿಸಿಕೊಂಡಿರುವ ನಕ್ಷೆ ಜೀನೋಮ್‌ನ ಶೇಕಡ ೯೭ರಷ್ಟು ಮಾತ್ರ. ಇದರಲ್ಲಿ ಶೇಕಡ ೮೫ರಷ್ಟು ನಿಖರವಾಗಿದೆ. ಇದೊಂದು ಕರಡು ಮಾತ್ರ. ಅಂತಿಮವಾದ ಮತ್ತು ಪೂರ್ಣವಾಗಿ ದೃಢಗೊಂಡ ನಕ್ಷೆಯನ್ನು ಹ್ಯೂಮನ್ ಜೀನೋಮ್ ಪ್ರಾಜೆಕ್ಟ್ ೨೦೦೩ ಕ್ಕೆ ಮುಂಚೆ ಪ್ರಕಟಿಸುವ ಸಾಧ್ಯತೆ ಇಲ್ಲ.

ಜೀನೋಮ್ ಯೋಜನೆಯು ತನ್ನಷ್ಟಕ್ಕೆ ಕ್ಯಾನ್ಸರ್ ಅಥವ ಅಲ್ಝಿಮರ್ಸ್ ಕಾಯಿಲೆಗೆ ದಿಢೀರ್ ಪರಿಹಾರವನ್ನಾಗಲಿ, ಜೀನಿಯಸ್ ಅಥವ ಸ್ಕಿಜ಼ೋಫ್ರೇನಿಯಾದ ವಿವರವಾದ ತಿಳಿವಳಿಕೆಯನ್ನಾಗಲಿ ಒದಗಿಸುವ ಯಾವುದೇ ಭರವಸೆಯನ್ನು ನೀಡುವುದಿಲ್ಲ. ಆದರೆ ನಾವು ಯಾವತ್ತಾದರೂ ಇವುಗಳನ್ನು ಸುತ್ತುವರಿದ ರಹಸ್ಯವನ್ನು ಭೇದಿಸಬೇಕಾದರೆ ಜೀನೋಮ್‌ನ ವಿವರವಾದ ನಕ್ಷೆಯನ್ನು ಹೊಂದಲೇ ಬೇಕು. ಈ ದಿಶೆಯಲ್ಲಿ ಈಗ ಇಟ್ಟಿರುವುದು ಒಂದು ನೀರಸ ಹೆಜ್ಜೆಯಷ್ಟೆ . . . ಈ ಹೆಜ್ಜೆಯಾಚೆ ಏನು ಅಡಗಿದೆ ಎಂಬುದು ಉಸಿರುಕಟ್ಟಿಸುವಂತಿದೆ.

ಇಂಪೀರಿಯಲ್ ಕ್ಯಾನ್ಸರ್ ರಿಸರ್ಚ್ ಫಂಡ್‌ನ ವೈದ್ಯಕೀಯ ನಿರ್ದೇಶಕ ಡಾ. ಜಾನ್ ಟಾಯ್ ಅವರ ಮಾತುಗಳಿಂದ ಇದು ಹೆಚ್ಚು ಸ್ಪಷ್ಟವಾಗುತ್ತದೆ: “ನಾವು ಈಗ ಮಾನವ ಬದುಕಿನ ಅಕ್ಷರಮಾಲೆಯನ್ನು ಕಂಡುಹಿಡಿದಿದ್ದೇವೆ. ಇನ್ನೂ ಈ ಅಕ್ಷರಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಬೇಕಾಗಿದೆ. ಅದನ್ನೆಲ್ಲ ಮಾಡಿದ ಮೇಲಷ್ಟೆ ನಮಗೆ ಮಾನವ ಬದುಕಿನ ಪುಸ್ತಕ ಓದಲು ಲಭ್ಯವಾಗುತ್ತದೆ.”

“ಆದರೂ,” ಇಂಗ್ಲೆಂಡಿನ ಸಂಶೋಧನ ವಿಜ್ಞಾನಿಗಳ ತಂಡದ ನೇತೃತ್ವ ವಹಿಸಿದ್ದ ಡಾ. ಸಲ್‌ಸ್ಟನ್ ಪ್ರಕಾರ “ಇದೊಂದು ಪ್ರಮುಖ ಮೈಲಿಗಲ್ಲು”.

* * *

ಹಣೆ ಬರಹ ಪಡಿಯಚ್ಚು : ಜೀನೋಮ್

ಮನುಷ್ಯನ ಹೊಟ್ಟೆಯಲ್ಲಿ ಮನುಷ್ಯನೇ ಹುಟ್ಟುತ್ತಾನೆ; ಬೇರಾವ ಜೀವಜಂತುವೂ ಹುಟ್ಟುವುದಿಲ್ಲ. ಹಾಗೆ ಹುಟ್ಟಿದ ಮನುಷ್ಯ ಕೂಡ ತನ್ನ ತಂದೆತಾಯಿಯರ ಅಥವ ಹಿಂದಿನ ಪೀಳಿಗೆಯವರ ಒಂದಲ್ಲ ಒಂದು ಗುಣಲಕ್ಷಣಗಳನ್ನು ಪಡೆದುಕೊಂಡೇ ಹುಟ್ಟುತ್ತಾನೆ: ತಂದೆಯ ಮೂಗು – ತಾಯಿಯ ಕಿವಿ; ಅಜ್ಜನ ಮುಂಗೋಪ – ಅಜ್ಜಿಯದೊಂದು ಕಾಯಿಲೆ . . . ಒಟ್ಟಾರೆ ವ್ಯಕ್ತಿಯೊಬ್ಬ ತನ್ನ ಹಿರಿಪೀಳಿಗೆಯವರಿಂದ ಪಡೆದ ಅನೇಕ ಗುಣಲಕ್ಷಣಗಳ ಮಿಶ್ರಣವಾಗಿರುತ್ತಾನೆ. ಹೀಗೆ ಅನುವಂಶಿಕ ಗುಣಲಕ್ಷಣಗಳು ಸಂತತಿಯಿಂದ ಸಂತತಿಗೆ ಹೇಗೆ ಸಾಗುತ್ತ್ತವೆ ಎಂಬ ಪ್ರಶ್ನೆ ಹತ್ತೊಂಬತ್ತನೇ ಶತಮಾನದಲ್ಲಿ ವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿತ್ತು.

ತೋಟದಲ್ಲಿ ಸಸ್ಯಗಳ ಬೆಳವಣಿಗೆಯನ್ನು ಗಮನಿಸುತ್ತಿದ್ದ ಆಸ್ಟ್ರಿಯಾದ ಕ್ರೈಸ್ತ ಸನ್ಯಾಸಿ ಗ್ರೆಗೋರ್ ಜೊಹಾನ್ ಮೆಂಡಲ್‌ನ ಮನಸ್ಸಿನಲ್ಲೂ ಈ ಪ್ರಶ್ನೆ ಎದ್ದಿತ್ತು. ಇದಕ್ಕೆ ಉತ್ತರ ಕಂಡುಹಿಡಿಯುವ ಸಲುವಾಗಿ ಆತ ಬಟಾಣಿ ಗಿಡಗಳ ಅನೇಕ ಪೀಳಿಗೆಗಳ ಅಧ್ಯಯನ ಮಾಡಿದ. ಸುಮಾರು ಎಂಟು ವರ್ಷಗಳ ಅಧ್ಯಯನದ ಫಲವಾಗಿ ಮೆಂಡಲ್ ಎತ್ತರ, ಬಣ್ಣ, ಆಕಾರ ಮುಂತಾದ ಏಳು ಬೇರೆ ಬೇರೆ ಅನುವಂಶಿಕ ಗುಣಲಕ್ಷಣಗಳು ಹೇಗೆ ಪೀಳಿಗೆಯಿಂದ ಪೀಳಿಗೆಗೆ ವಾರ್ಗಾವಣೆಯಾಗುತ್ತವೆ ಎಂಬುದನ್ನು ಸ್ಥೂಲವಾಗಿ ವಿವರಿಸಿದ. ಆತನ ಪ್ರಕಾರ ಪ್ರತಿ ತಂದೆತಾಯಿಯರಲ್ಲಿ ವಂಶವೈಶಿಷ್ಟ್ಯವನ್ನು ನಿರ್ಧರಿಸುವ ಒಂದೊಂದು ಜೊತೆ “ಪ್ರತಿನಿಧಿ”ಗಳಿರುತ್ತವೆ. ಪ್ರತಿ ಜೋಡಿಯ ಒಂದೊಂದು ಪ್ರತಿನಿಧಿ ಮಾತ್ರ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಸಾಗುತ್ತವೆ. ಹೀಗೆ ವರ್ಗಾವಣೆಯಾದ ಪ್ರತಿನಿಧಿಗಳಲ್ಲಿ ಪ್ರಬಲವಾದದ್ದು ಕಾಣಿಸಿಕೊಳ್ಳುತ್ತದೆ; ದುರ್ಬಲವಾದದ್ದು ಸುಪ್ತವಾಗಿರುತ್ತದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಈ ಪ್ರತಿನಿಧಿಗಳು ತಮ್ಮ ವೈಶಿಷ್ಟ್ಯವನ್ನು ಕಳೆದುಕೊಳ್ಳದೆ ಪೀಳಿಗೆಯಿಂದ ಪೀಳಿಗೆಗೆ ದಾಟುತ್ತಿರುತ್ತವೆ.

ಮೆಂಡಲ್‌ನ ಈ ವಾದವನ್ನು ಆಗ ಯಾರೂ ಅರ್ಥಮಾಡಿಕೊಳ್ಳುವ ವ್ಯವಧಾನವನ್ನು ತೋರಲಿಲ್ಲ. ಅದೊಂದು ಅರ್ಥಹೀನ ಪ್ರತಿಪಾದನೆ ಎಂದು ಉಪೇಕ್ಷೆ ಮಾಡಿದರು. ಹೀಗಾಗಿ ೧೮೬೬ರಲ್ಲಿ “ಬ್ರೂಯಿನ್ ಪ್ರಕೃತಿ ವಿಜ್ಞಾನದ ಸಂಘದ ನಡಾವಳಿಗಳು” ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಮೆಂಡಲ್‌ನ ವಿಚಾರಗಳು ಅಲ್ಲಿಯೇ ಉಸಿರುಕಟ್ಟಿ ಸತ್ತು ಹೋಗಿದ್ದವು.

* * *

ಇಪ್ಪತ್ತನೇ ಶತಮಾನದ ಅದೃಷ್ಟ. ಮೆಂಡಲ್‌ನ ವಿಚಾರಗಳಿಗೆ ಮತ್ತೆ ಜೀವ ಬಂತು. ೧೯೦೦ರಲ್ಲಿ ಹಾಲೆಂಡಿನ ಡಿವ್ರೈಸ್, ಜರ್ಮನಿಯ ಕಾರೆನ್ಸ್ ಮತ್ತು ಆಸ್ಟ್ರಿಯಾದ ಷರ್ಮಾಕ್‌ರು ತಾವು ಸ್ವತಂತ್ರವಾಗಿ ಕೈಗೊಂಡ ಸಂಶೋಧನೆಗಳ ಆಧಾರದ ಮೇಲೆ ಮೆಂಡಲ್‌ನ ವಾದವನ್ನು ಎತ್ತಿ ಹಿಡಿದರು. ಮುಂದೆ ಅದು ಬಟಾಣಿಯಿಂದ ಮಾನವನನ್ನು ಸೇರಿದಂತೆ ಇತರೆ ಪಶುಪಕ್ಷಿಸಸ್ಯ ಪ್ರಪಂಚಕ್ಕೂ ವಿಸ್ತರಣೆಗೊಂಡಿತು.

* * *

ಮಾನವ ದೇಹ ಸುಮಾರು ೭೫ ಲಕ್ಷಕೋಟಿ ಜೀವಕೋಶಗಳಿಂದಾಗಿದೆ. ಪ್ರತಿ ಜೀವಕೋಶದ ಕೇಂದ್ರದಲ್ಲಿ ಅದರ ಬೀಜವಿರುತ್ತದೆ. ಬೀಜದಲ್ಲಿ ನವಿರು ಕಡ್ಡಿಯಾಕಾರದ ಕ್ರೋಮೊಸೋಮ್ (ವರ್ಣತಂತು)ಗಳಿರುತ್ತವೆ. ಈ ಕ್ರೋಮೊಸೋಮ್‌ಗಳೇ ಮೆಂಡಲ್ ಪ್ರತಿಪಾದಿಸಿದ ಅನುವಂಶಿಕ ಗುಣವಾಹಕ ‘ಪ್ರತಿನಿಧಿ’ಗಳ ಆವಾಸ ಸ್ಥಾನ ಎಂಬುದನ್ನು ಟಿ.ಎಚ್.ಮಾರ್ಗನ್ ಮತ್ತು ಸಂಗಡಿಗರು ೧೯೦೪ರಲ್ಲಿ ತೋರಿಸಿದರು.

ಮನುಷ್ಯರಲ್ಲಿ ಸಾಮಾನ್ಯವಾಗಿ ೨೩ ಜೊತೆ (ಒಟ್ಟು ೪೬) ಕ್ರೋಮೊಸೋಮ್‌ಗಳಿರುತ್ತವೆ. ಹೆಣ್ಣುಗಂಡು ಕೂಡಿದಾಗ ಹುಟ್ಟುವ ಮಗುವಿಗೆ ಇಬ್ಬರಿಂದಲೂ ೨೩-೨೩ ಕ್ರೋಮೊಸೋಮ್‌ಗಳು ವರ್ಗಾವಣೆಯಾಗುತ್ತವೆ. ಹೀಗೆ ತಂದೆತಾಯಿಯರಿಂದ ಬಂದ ಕ್ರೋಮೊಸೋಮ್‌ಗಳು ತಮಗೇ ವಿಶಿಷ್ಟವಾದ ಗುಣಲಕ್ಷಣಗಳನ್ನು ಹೊತ್ತು ತರುವುದರಿಂದ ಆ ಗುಣಲಕ್ಷಣಗಳ ಒಟ್ಟಾರೆ ಪ್ರಭಾವ ಮಗುವಿನಲ್ಲೂ ಕಾಣಿಸಿಕೊಳ್ಳುತ್ತದೆ.

ಕ್ರೋಮೊಸೋಮ್ ನವಿರಾದ ದಾರದೆಳೆಯಂತೆ ಏಕಕಾಯವಾಗಿ ಕಂಡರೂ ವಾಸ್ತವದಲ್ಲಿ ಅದು ತುಂಬಾ ಸೂಕ್ಷ್ಮಮವಾದ ಮಣಿಗಳಂತಿರುವ ಸಾವಿರಾರು ಕಣಗಳ ಪೋಣಿಕೆಯಿಂದಾಗಿದೆ. ಈ ಕಣಗಳೇ ಅನುವಂಶೀಯತೆಯ ರಹಸ್ಯವನ್ನು ಬಚ್ಚಿಟ್ಟುಕೊಂಡಿರುವ, ಹಿಂದೆ ಮೆಂಡಲ್ ಪ್ರಸ್ತಾಪಿಸಿದ್ದ, ಮೂಲ ಪ್ರತಿನಿಧಿಗಳು. ೧೯೦೯ ರಲ್ಲಿ ಡ್ಯಾನಿಷ್ ಜೀವವಿಜ್ಞಾನಿ ವಿಲ್ಹೆಮ್ ಜೊಹಾನ್ಸೆನ್ ಈ ಪ್ರತಿನಿಧಿಗಳನ್ನು ಜೀನ್ (ವಂಶವಾಹಿ)ಗಳೆಂದು ಕರೆದ.

* * *

ಡಿಆಕ್ಸಿ ರೈಬೋನ್ಯೂಕ್ಲಿಯಿಕ್ ಆಮ್ಲ (ಡಿಎನ್‌ಎ) ಮತ್ತು ಪ್ರೋಟೀನುಗಳು ಕ್ರೋಮೊಸೋಮ್‌ನಲ್ಲಿರುವ ಪ್ರಧಾನ ಘಟಕಗಳು. ಮೊದಲಿಗೆ ವಾಂಶಿಕ ಗುಣಲಕ್ಷಣಗಳು ಪ್ರೋಟೀನುಗಳಲ್ಲಿ ಅಡಗಿರುತ್ತವೆ ಎಂದು ಭಾವಿಸಲಾಗಿತ್ತು. ೧೯೪೪ರಲ್ಲಿ ಅವೆರಿ ಮತ್ತು ಆತನ ಸಂಗಡಿಗರು ಅನೇಕ ಪ್ರಯೋಗಗಳ ಮೂಲಕ ವಂಶ ವೈಶಿಷ್ಟ್ಯವನ್ನು ನಿರ್ಧರಿಸುವುದು ನಿಜವಾಗಿ ಡಿಎನ್‌ಎ ಎಂದು ತೋರಿಸಿದರು.

೧೯೫೩ರಲ್ಲಿ ಅತ್ಯಂತ ಪ್ರಮುಖವಾದ ಘಟನೆ ನಡೆಯಿತು. ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಡಿಎನ್‌ಎಯ ಅಣುರಚನೆಯನ್ನು ಕಂಡುಹಿಡಿದರು. ಇದರ ಪ್ರಕಾರ ಡಿಎನ್‌ಎ ತಿರುಚಿದ ಏಣಿಯಂಥ ರಚನೆಯನ್ನು ಹೊಂದಿದೆ. ಏಣಿಯ ಎರಡೂ ನೀಳ್ಗಾಲಿನಲ್ಲಿ ಸಕ್ಕರೆ ಮತ್ತು ಫಾಸ್ಪೇಟ್ ಅಣುಗಳಿರುತ್ತವೆ. ಇವೆರಡೂ ಡಿಎನ್‌ಎಯ ಬೆನ್ನೆಲುಬುಗಳು. ಈ ಎರಡೂ ನೀಳ್ಗಾಲುಗಳನ್ನು ಸಂಪರ್ಕಿಸುವಂತೆ ಪ್ರತ್ಯಾಮ್ಲ ಜೋಡಿಗಳ ‘ಮೆಟ್ಟಿಲು’ಗಳಿರುತ್ತವೆ.

ಪ್ರತ್ಯಾಮ್ಲ ಜೋಡಿಗಳು ನಾಲ್ಕು ಪ್ರತ್ಯಾಮ್ಲಗಳಿಂದಾಗುತ್ತವೆ: ಅಡೆನೀನ್ (A), ಥೈಮೀನ್ (T), ಸೈಟೋಸೀನ್ (C) ಮತ್ತು ಗ್ವಾನೀನ್ (G). ಈ ಜೋಡಿಗಳು ಒಂದು ನಿಯಮಕ್ಕೆ ಬದ್ಧವಾಗಿರುತ್ತವೆ: A ಯವತ್ತೂ T ಜೊತೆ ಮತ್ತು C ಯವತ್ತೂ G ಜೊತೆ ಮಾತ್ರ ಜೋಡಿಯಾಗಿರುತ್ತವೆ.

A – T  ಮತ್ತು C – G ಯಿಂದಾದ ಪ್ರತ್ಯಾಮ್ಲ ಜೋಡಿಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ವ್ಯವಸ್ಥೆಗೊಂಡಿರುತ್ತವೆ. ಈ ಕ್ರಮವೇ ಡಿಎನ್‌ಎ ಶ್ರೇಣಿ. ೬೦ರ ದಶಕದಲ್ಲಿ ಕ್ರಿಕ್ ಮತ್ತು ಆತನ ಸಂಗಡಿಗರು ಡಿಎನ್‌ಎ ಶ್ರೇಣಿಯಲ್ಲಿರುವ ಪ್ರತ್ಯಾಮ್ಲ ಜೋಡಿಗಳು ಒಂದು ಅನುವಂಶಿಕ ಸಂಕೇತ ಭಾಷೆಯನ್ನು – ಜೆನೆಟಿಕ್ ಕೋಡ್ – ರೂಪಿಸುತ್ತದೆ ಎಂಬುದನ್ನು ತೋರಿಸಿದರು. ಈ ಸಂಕೇತ ಭಾಷೆಯಲ್ಲಿ ಜೀವಿಯ ವಂಶವೈಶಿಷ್ಟ್ಯದ ರಹಸ್ಯ ಅಡಗಿರುತ್ತದೆ. ಈ ಕೋಡ್ ನೀಡುವ ‘ಆಜ್ಞೆ’ಯ ಪ್ರಕಾರವೇ ಜೀವಕೋಶದ ಎಲ್ಲ ಚಟುವಟಿಕೆಗಳು ನಡೆಯುತ್ತವೆ.

ಡಿಎನ್‌ಎ ಶ್ರೇಣಿಯ ಒಂದು ವಿಶಿಷ್ಟ ಭಾಗವೇ ಜೀನ್ – ವಂಶವೈಶಿಷ್ಟ್ಯದ ಮೂಲ ಘಟಕ. ಹೀಗಾಗಿ ವ್ಯಕ್ತಿಯೊಬ್ಬನ ಒಟ್ಟಾರೆ ವ್ಯಕ್ತಿತ್ವವು ಎಲ್ಲ ಜೀನ್ ಸಮೂಹದ (ಜೀನೋಮ್) ಫಲಿತ ಪ್ರಭಾವದ ಅಭಿವ್ಯಕ್ತಿಯಾಗಿರುತ್ತದೆ.

ಸ್ವಲ್ಪ ವಿವರಿಸಿ ಹೇಳುವುದಾದರೆ, ವ್ಯಕ್ತಿಯೊಬ್ಬ ಹೇಗಾಗುತ್ತಾನೆ ಮತ್ತು ಹೇಗೆ ಆತನ ದೇಹದಲ್ಲಿನ ಜೀವಕೋಶಗಳು ವರ್ತಿಸುತ್ತವೆ ಎಂಬುದನ್ನು ನಿರ್ಧರಿಸುವ ಜೈವಿಕ ಆಜ್ಞೆಗಳ ಸಂಪೂರ್ಣ ಶ್ರೇಣಿಯೇ ಜೀನೋಮ್. ಮಾನವ ಜೀನೋಮ್‌ನಲ್ಲಿ ಸರಿಸುಮಾರು ೮೦,೦೦೦ – ೧,೦೦,೦೦೦ದಷ್ಟು ಜೀನುಗಳಿರಬಹುದೆಂದು ಅಂದಾಜು ಮಾಡಲಾಗಿದೆ.

ಇದನ್ನೆಲ್ಲಾ ಒಂದೇ ಬೀಸಿನಲ್ಲಿ ಹೀಗೆ ಸಂಗ್ರಹಿಸಬಹುದು: ತನ್ನದೇ ಆದ ಗುಣಲಕ್ಷಣಗಳನ್ನೊಳಗೊಂಡ ಒಂದು ಜೀವಿಯ ಸೃಷ್ಟಿಗೆ ಅಗತ್ಯವಾದ ಖಚಿತ ಅನುವಂಶಿಕ ಆಜ್ಞೆಯ ಸಂಪೂರ್ಣ ಶ್ರೇಣಿಗೆ ಜೀನೋಮ್ ಎನ್ನುತ್ತಾರೆ. ಅದು ಎಲ್ಲ ಜೀವಕೋಶಗಳ ರಚನೆ ಮತ್ತು ಜೀವಕೋಶ ಅಥವ ಜೀವಿಯ ಇಡೀ ಜೀವಿತ ಕಾಲದ ಚಟುವಟಿಕೆಯ ನೀಲನಕ್ಷೆಯನ್ನು ಒಳಗೊಂಡಿರುತ್ತದೆ. ಪ್ರತಿ ಜೀವಕೋಶದ ಬೀಜದಲ್ಲಿರುವ ಈ ಮಾನವ ಜೀನೋಮ್ ಬಿಗಿಯಾಗಿ ಸುರುಳಿಗೊಂಡ ಡಿಎನ್‌ಎ ಎಳೆಗಳನ್ನೊಳಗೊಂಡಿರುತ್ತದೆ. ಮತ್ತು ಇದಕ್ಕೆ ಒಡನಾಡಿಯಾಗಿ ಪ್ರೋಟೀನುಗಳಿರುತ್ತವೆ. ಇವೆಲ್ಲ ವ್ಯವಸ್ಥಿತವಾಗಿ ರಚನೆಗೊಂಡು ಕ್ರೋಮೊಸೋಮ್ ಆಗಿರುತ್ತದೆ.

ಜೆನೆಟಿಕ್ ಕೋಡ್ ಎಂದು ಕರೆಯುವ ಅನುವಂಶಿಕ ಆಜ್ಞೆಗಳು ಜೀನೋಮ್‌ನಲ್ಲಿ ಸಂಕೇತ ಭಾಷೆಯಲ್ಲಿರುತ್ತದೆ. ಪ್ರತ್ಯಾಮ್ಲ ಜೋಡಿಗಳ ಮೆಟ್ಟಿಲುಗಳು ಈ ಭಾಷೆಯ ರಾಸಾಯನಿಕ ಅಕ್ಷರಗಳಾಗಿವೆ. ಇಂಥ ಮೂರು ಶತಕೋಟಿ ಅಕ್ಷರಗಳಿವೆ.

ಈ ಅಕ್ಷರಗಳ ಶ್ರೇಣಿ ನಾವು ಏನಾಗಿದ್ದೇವೆ ಮತ್ತು ಏನಾಗಬಹುದು ಎಂಬುದರ ನೀಲನಕ್ಷೆಯಾಗಿದೆ. ಈ ಶ್ರೇಣಿಯಲ್ಲಿ ಯಾವುದೇ ಕಾರಣಕ್ಕೆ ವ್ಯತ್ಯಾಸವಾದರೆ, ಒಂದು ಪ್ರತ್ಯಾಮ್ಲ ಇರಬೇಕಾದ ಜಾಗದಲ್ಲಿ ಬೇರೆಯದೇ ಇದ್ದರೆ, ಅಥವ, ಜೀನುಗಳೇ ಗೈರುಹಾಜರಾಗಿದ್ದರೆ, ಅದು ಜೆನೆಟಿಕ್ ಡಿಸಾರ‍್ಡರ್ (ವಂಶವಾಹಿ ಕ್ರಮಭಂಗ)ಗೆ ಕಾರಣವಾಗುತ್ತದೆ. ಇದು ಮನುಷ್ಯನಲ್ಲಿ ಅನೇಕ ವ್ಯತ್ಯಾಸಗಳನ್ನು ತರುತ್ತದೆ. ಈ ವ್ಯತ್ಯಾಸ ಆಕಾರ, ಎತ್ತರ, ಬಣ್ಣ ಇತ್ಯಾದಿ ರಚನೆಗೆ ಸಂಬಂಧಿಸಿದ ವಿಕೃತತಿಯಾಗಿರಬಹುದು; ಅಥವ, ಶಾರೀರಿಕ ಹಾಗು ಮಾನಸಿಕ ರೋಗಗಳಿಗೆ ಸಂಬಂಧಿಸಿದ್ದಾಗಿರಬಹುದು. ಉದಾಹರಣೆಗೆ, ಹೀಮೊಗ್ಲೊಬಿನ್ನನ್ನು ತಯಾರಿಸುವ ಜೀನಿನಲ್ಲಿ ಥೈಮೀನ್‌ಗೆ ಬದಲಾಗಿ ಅಡಿನೀನ್ ಇದ್ದರೆ ಹೀಮೊಗ್ಲೊಬಿನ್ನಿನ ಗುಣಲಕ್ಷಣಗಳೇ ಬದಲಾಗಿ ಬಿಡುತ್ತವೆ. ಕೆಂಪುರಕ್ತ ಕಣಗಳು ಗುಂಡಗಿರುವ ಬದಲು ಕುಡುಗೋಲಿನ ಆಕೃತಿ ತಾಳುತ್ತವೆ. ಹೀಗೆ ವಿಕೃತಗೊಂಡ ಹೀಮೊಗ್ಲೊಬಿನ್‌ನಿಂದ ಸಿಕಲ್ ಸೆಲ್ ಅನೀಮಿಯ ಎಂಬ ರೋಗ ಕಾಣಿಸಿಕೊಳ್ಳುತ್ತದೆ.

ಹೀಗೆ ವಂಶವಾಹಿ ಕ್ರಮಭಂಗದಿಂದ ಉಂಟಾಗುವ ಸುಮಾರು ೨೦೦೦ ರೋಗಗಳನ್ನು ಗುರುತಿಸಲಾಗಿದೆ. ಇವು ಅನುವಂಶಿಕವಾಗಿರುವುದರಿಂದ ಇವುಗಳನ್ನು ಜೀನ್ ಚಿಕಿತ್ಸೆಯಿಂದ ಮಾತ್ರ ಗುಣಪಡಿಸುವುದು ಸಾಧ್ಯ. ಜೀನ್ ಚಿಕಿತ್ಸೆ ನೀಡಲಯ ಜೀನಿನ ಶ್ರೇಣಿಯಲ್ಲಿರುವ ದೋಷ ಮೊದಲು ತಿಳಿಯಬೇಕು. ಇದಕ್ಕಾಗಿ ಜೀನೋಮಿನ ಸಮಗ್ರ ನೀಲನಕ್ಷೆಯ ಅಗತ್ಯವಿತ್ತು.

ರಾಸಾಯನಿಕ ದೃಷ್ಟಿಯಿಂದ ನೋಡಿದರೆ ಜೀವಿಯು ಮುಖ್ಯವಾಗಿ ಪ್ರೋಟೀನುಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳ ವ್ಯವಸ್ಥಿತ ಸಮ್ಮಿಶ್ರಣ ಎನ್ನಬಹುದು. ಮನುಷ್ಯನ ಬದುಕು ಸರಾಗವಾಗಿ ಸಾಗಲು ಎಲ್ಲಾ ಪ್ರೋಟೀನುಗಳ ತಯಾರಿಕೆ ಸಮರ್ಪಕವಾಗಿರಬೇಕು. ಇದನ್ನು ನಿಯಂತ್ರಿಸುವುದು ಕೂಡ ನ್ಯೂಕ್ಲಿಯಿಕ್ ಆಮ್ಲಗಳಲ್ಲಿ ಒಂದಾದ ಡಿಎನ್‌ಎಗಳಲ್ಲಿರುವ ಅಕ್ಷರ ಶ್ರೇಣಿಯೇ ಆಗಿದೆ. ಜೀವಕೋಶವು ಎಲ್ಲೆಲ್ಲಿ ಯಾವ ಯಾವ ನಿರ್ದಿಷ್ಟ ಪ್ರೋಟೀನನ್ನು ತಯಾರಿಸಬೇಕು ಎಂಬ ಆಜ್ಞೆ ಡಿಎನ್‌ಎ ಅಕ್ಷರ ಶ್ರೇಣಿಯಲ್ಲಿದೆ. ಅದು ಮತ್ತೊಂದು ನ್ಯೂಕ್ಲಿಯಿಕ್ ಆಮ್ಲವಾದ ರೈಬೊನ್ಯೂಕ್ಲಿಯಿಕ್ ಆಮ್ಲ (ಆರ್ ಎನ್ ಎ) ಮೂಲಕ ತನ್ನಾಜ್ಞೆಯನ್ನು ರವಾನಿಸಿ ವಿವಿಧ ಪ್ರೋಟೀನುಗಳು ತಯಾರಾಗುವಂತೆ ಮಾಡುತ್ತದೆ. ಡಿಎನ್‌ಎ – ಆರ್‌ಎನ್‌ಎ – ಪ್ರೋಟೀನುಗಳ ಸಂಬಂಧವನ್ನು ಹೀಗೆ ಅರ್ಥಮಾಡಿಕೊಳ್ಳಬಹುದು: ಜೀವಕೋಶದ ರಂಗಗೋಲದಲ್ಲಿ ನಡೆಯುವ ಕ್ರ್ರಿಯಾನಾಟಕದ ನಿಜವಾದ ಪಾತ್ರಧಾರಿಗಳು ಪ್ರೋಟೀನುಗಳು. ಡಿಎನ್‌ಎ ಈ ನಾಟಕದ ಸ್ಕ್ರಿಪ್ಟ್ ಇದ್ದಂತೆ. ಸ್ಕ್ರಿಪ್ಟ್‌ನ ಆಶಯವನ್ನು ಪಾತ್ರಧಾರಿಗಳಿಗೆ ಮುಟ್ಟಿಸಿ, ಆಶಯಕ್ಕೆ ಅನುಗುಣವಾಗಿ ಅವು ಕ್ರಿಯಾಶೀಲವಾಗುವಂತೆ ಮಾಡುವ ನಿರ್ದೇಶಕನ ಕೆಲಸವನ್ನು ಆರ್‌ಎನ್‌ಎಗಳು ಮಾಡುತ್ತವೆ. ಸ್ಕ್ರಿಪ್ಟ್‌ನಲ್ಲಿ ಯಾವುದೇ ದೋಷ ನುಸುಳಿದರೆ ಅದರ ಪರಿಣಾಮ ರಂಗದ ಮೇಲೆ ಕಾಣಿಸಿಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಜೀನೋಮ್‌ನ ಸಮಗ್ರ ನೀಲನಕ್ಷೆಯ ಅಗತ್ಯವಿದೆ.

ಒಟ್ಟಾರೆ ಮನುಷ್ಯನ ‘ಹಣೆ ಬರಹ’ದ ಪಡಿಯಚ್ಚನ್ನು ಅನುವಂಶಿಕ ಸಂಕೇತಾಕ್ಷರಗಳ ರೂಪದಲ್ಲಿ ಬಚ್ಚಿಟ್ಟುಕೊಂಡಿರುವ ಈ ಜೀನೋಮ್ ನೀಲನಕ್ಷೆಯ ಬೇಟೆಯಲ್ಲಿ ವಿಜ್ಞಾನಿಗಳು ಬಹುವರ್ಷಗಳಿಂದ ತೊಡಗಿದ್ದರು. ಈಗ ಅದು ಸಾಕಾರಗೊಂಡಿದೆ.

* * *

ಈವರೆಗಿನ ಜೀನ್ ಸಾಧನೆಗಳು . . .

ವಂಶವೈಶಿಷ್ಟ್ಯವನ್ನು ನಿಧರಿಸುವುದು ಕ್ರೊಮೊಸೋಮುಗಳು. ಅವುಗಳುದ್ದಕ್ಕೂ ಪೋಣಿಸಿಕೊಂಡಂತಿರುವ ಅಂಶಗಳೇ ಜೀನುಗಳು. ಈ ಜೀನುಗಳು ನಿಜಕ್ಕೂ ಡಿಎನ್‌ಎ ಎಂಬ ರಾಸಾಯನಿಕ ತುಣುಕುಗಳು ಎಂಬುದು ಖಚಿತವಾದ ಕೂಡಲೆ ಜೀನುಗಳನ್ನು ಕ್ರೊಮೊಸೋಮುಗಳಿಂದ ಬೇರ್ಪಡಿಸುವ ಕಾರ್ಯ ಮೊದಲಾಯಿತು. ಅಲ್ಲದೆ, ಅವುಗಳನ್ನು ಹೊಸದಾಗಿ ಸಂಯೋಜಿಸುವ ಹಾಗು ಬೇರೊಂದು ಜೀವಿಯ ಕ್ರೊಮೊಸೋಮುಗಳಲ್ಲಿ ಅವುಗಳನ್ನು ಸ್ಥಾಪಿಸುವ ಯತ್ನಗಳೂ ನಡೆದವು. ಜೀನುಗಳ ನಿರ್ವಹಣೆಗೆ ಸಂಬಂಧಿಸಿದ ಈ ಎಲ್ಲ ಕ್ರಿಯೆಗಳನ್ನು ಅನುವಂಶಿಕ ಎಂಜಿನಿಯರಿಂಗ್ (ಜೆನೆಟಿಕ್ ಎಂಜಿನಿಯರಿಂಗ್) ಎಂದು ಕರೆಯುತ್ತಾರೆ. ಜೆನೆಟಿಕ್ ಎಂಜಿನಿಯರಿಂಗ್‌ನಿಂದ ವಿಜ್ಞಾನಿಗಳು ಈಗಾಗಲೆ ಅನೇಕ ಅದ್ಭುತಗಳನ್ನು ಸಾಧಿಸಿದ್ದಾರೆ.

ಸಂಯೋಜಿತ ಡಿಎನ್‌ಎ ತಂತ್ರಜ್ಞಾನವನ್ನು ಬಳಸಿ ಮಾನವ ಇನ್ಸುಲಿನ್ನನ್ನು ತಯಾರಿಸಲಾಗಿದೆ. ಮಾನವ ಇನ್ಸುಲಿನ್‌ಗೆ ಕಾರಣವಾದ ಜೀನನ್ನು ಗುರುತಿಸಿ, ಪ್ರತ್ಯೇಕಿಸಿ, ಅದನ್ನು ಎಷಿರಿಕೀಯ ಕೊಲೈ ಎಂಬ ಸೂಕ್ಷ್ಮಜೀವಿಯ ಡಿಎನ್‌ಎನಲ್ಲಿ ಸೇರಿಸಲಾಯಿತು. ಹೀಗೆ ಪುನಃಸಂಯೋಜಿತ ಡಿಎನ್‌ಎ ಉಳ್ಳ ಸೂಕ್ಷ್ಮಜೀವಿಯನ್ನು ಕೃಷಿ ಮಾಡಿ ಮಾನವ ಇನ್ಸುಲಿನ್ನನ್ನು ಯಥೇಚ್ಛವಾಗಿ ಪಡೆಯಲಾಗಿದೆ. ಇದನ್ನು ‘ಹ್ಯೂಮಲಿನ್’ ಎಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಮುನ್ನ ಹಂದಿಗಳ ದೇಹದಲ್ಲಿ ತಯಾರಿಸಿದ ಇನ್ಸುಲಿನ್ ದೊರೆಯುತ್ತಿತ್ತು. ಇದೇ ರೀತಿ ಇನ್ಟರ್‌ಫ಼ೆರಾನ್ ಎಂಬ ಔಷಧಿಯನ್ನು ಜೀನ್ ತಂತ್ರಜ್ಞಾನದ ನೆರವಿನಿಂದ ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವುದು ಮತ್ತು ಕಡಿಮೆ ಬೆಲೆಯಲ್ಲಿ ಅಗತ್ಯವುಳ್ಳವರಿಗೆ ಒದಗಿಸುವುದು ಸಾಧ್ಯವಾಗಿದೆ.

ಹೊಸ ಜೀನುಗಳನ್ನು ಸಂಯೋಜಿಸುವಂತೆಯೇ ಮನುಷ್ಯ, ಪ್ರಾಣಿ ಮತ್ತು ಸಸ್ಯಗಳ ಜೀನುಗಳನ್ನು ಸಮ್ಮಿಲನಗೊಳಿಸಬಹುದು. ಇದರಿಂದ ಉತ್ಪನ್ನವಾಗುವ ‘ಜೀವಿ’ ಸಮ್ಮಿಳಿತಗೊಂಡ ಎಲ್ಲಾ ಜೀನುಗಳ ಅಷ್ಟಿಷ್ಟು ಗುಣಲಕ್ಷಣಗಳನ್ನು ಹೊಂದಿರುತ್ತವೆ. ಹೀಗಾಗಿ ಮಾಂಸದಲ್ಲಿರುವ ಪ್ರೋಟೀನು ಹಸಿರು ಬಟಾಣಿಯಲ್ಲಿ ತಯಾರಾಗುವಂತೆ ಮಾಡಬಹುದು. ಕೋಳಿ ಮತ್ತು ಬಾರ‍್ಲಿ ಸಸ್ಯಗಳನ್ನು ಅಡ್ಡ ಹಾಯಿಸಿ ಮೊಟ್ಟೆಗಳ ಪೋಷಕಾಂಶವಿರುವ ಧಾನ್ಯಗಳನ್ನು ಬೆಳೆಯಬಹುದು.

ಮಾನವ ಮತ್ತು ಸಸ್ಯಗಳ ಮಿಶ್ರ ತಳಿ ಕೂಡ ಸಾಧ್ಯ. ಹಂಗರಿಯ ವಿಜ್ಞಾನಿಗಳು ಕ್ಯಾರೆಟ್ ಜೀವಕೋಶಗಳನ್ನು ಮಾನವಕೋಶಗಳೊಂದಿಗೆ ಸಮ್ಮಿಳನ ಮಾಡಿದ್ದಾರೆ. ಲಂಡನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಯೀಸ್ಟ್ ಕೋಶಗಳೊಂದಿಗೆ ಕೋಳಿಗಳ ಕೆಂಪುರಕ್ತ ಕಣಗಳನ್ನು ಸಮ್ಮಿಳನಗೊಳಿಸಿದ್ದಾರೆ. ಅಮೆರಿಕಾದ ಹೆರಾಲ್ಡ್ ಸ್ಮಿತ್ ಹೊಗೆಸೊಪ್ಪಿನ ಸಸ್ಯವನ್ನು ಮಾನವಕೋಶಗಳೊಂದಿಗೆ ಸಮ್ಮಿಳನ ಮಾಡಿದ್ದಾರೆ.

ವಂಶವಾಹಿ ನಿರ್ವಹಣೆಯಿಂದ ಬೇಕಾದ ಗುಣಲಕ್ಷಣವುಳ್ಳ ಸಸ್ಯ ಮತ್ತು ಪ್ರಾಣಿ ತಳಿಗಳನ್ನು ಅಭಿವೃದ್ಧಿಪಡಿಸಬಹುದು ಎಂಬ ಅಂಶ ತಿಳಿದ ಕೂಡಲೆ ಕಾರ್ಯಪ್ರವೃತ್ತರಾದ ವಿಜ್ಞಾನಿಗಳು ಈಗಾಗಲೆ ಅಂಥ ಅನೇಕ ‘ಸೃಷ್ಟಿ’ಗಳನ್ನು ಮಾಡಿದ್ದಾರೆ. ನೊಣದ ವಂಶವಾಹಿಯನ್ನು ಬದಲಿಸಿ ತಲೆಯಲ್ಲಿ ಕುಡಿಮೀಸೆಗೆ ಬದಲಾಗಿ ಕಾಲು ಬೆಳೆಯುವಂತೆ ಮಾಡಿದ್ದಾರೆ. ಡಾಲಿ ಎಂಬ ಕುರಿಯ ತದ್ರೂಪನ್ನು ಸೃಷ್ಟಿಸಿ ಜಗತ್ತನ್ನು ಬೆರಗುಗೊಳಿಸಿದ್ದಾರೆ.

ಮಹಾಭಾರತದಲ್ಲಿ ಕುಂತಿ ತನಗಿಷ್ಟವಾದ ಗುಣಲಕ್ಷಣವುಳ್ಳ ಆರು ಮಕ್ಕಳನ್ನು ತನ್ನ ಇಚ್ಛಾನುಸಾರ ಪಡೆದಳೆಂದು ಕೇಳಿದ್ದೇವೆ. ಜೆನೆಟಿಕ್ ಎಂಜಿನಿಯರಿಂಗ್‌ನಿಂದ ನಾವು ಧರ್ಮರಾಯ, ಭೀಮ, ಅರ್ಜುನರಂಥ ಮಕ್ಕಳನ್ನು ಸೃಷ್ಟಿಸುವುದು ಸಾಧ್ಯ. ಆ ಕಾಲ ದೂರವಿಲ್ಲ…

* * *

ಭವಿಷ್ಯದ ಸಾಧ್ಯೆಗಳು

ಜೀನೋಮ್ ವಿಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಯ ವೇಗ ಅದ್ಭುತವಾಗಿದೆ. ಅದರ ಅನ್ವಯದ ಬಗ್ಗೆ ಯೋಚಿಸಿರುವ ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ೨೧ನೇ ಶತಮಾನದ ಪ್ರಮುಖ ವಿಜ್ಞಾನವಾಗಲಿದೆ. ಹ್ಯೂಮನ್ ಜೀನೋಮ್ ಮತ್ತು ಇತರೆ ಸಂಬಂಧಿ ಸಂಶೋಧನೆಯ ಫಲಿತಗಳು ಈಗಾಗಲೆ ಜೀವವಿಜ್ಞಾನದ ಸಂಶೋಧನೆಯ ಮೇಲೆ ಅಗಾಧ ಪ್ರಭಾವ ಬೀರಲು ಪ್ರಾರಂಭಿಸಿವೆ. ಜೀನೋಮ್ ಸಂಶೋಧನೆ ವಾಣಿಜ್ಯ ಕಾರಣಗಳಿಗಾಗಿಯೂ ಬಹು ಶಕ್ತವಾಗಲಿದೆ. ಜೈವಿಕ ತಂತ್ರಜ್ಞಾನ ಕೈಗಾರಿಕೆಗಳಲ್ಲಿ ಡಿಎನ್‌ಎ ಆಧಾರಿತ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ವಹಿವಾಟು ೨೦೦೯ರ ಹೊತ್ತಿಗೆ ೪೫ ಶತಕೋಟಿ ಡಾಲರ್ ಮುಟ್ಟಲಿದೆ ಎಂದು ಅಂದಾಜು ಮಾಡಲಾಗಿದೆ.

ಜೀನೋಮ್ ಸಂಶೋಧನೆಯ ಕೆಲವು ಖಚಿತ ಸಾಧ್ಯತೆಗಳು:

. ಅಣು ಔಷಧಿ: ಜೀನೋಮ್‌ನ ಸಮಗ್ರ ಅಧ್ಯಯನದ ಸಹಾಯದಿಂದ ಕೆಲವು ಅನುವಂಶಿಕ ರೋಗಗಳೊಂದಿಗೆ ಸಂಬಂಧ ಹೊಂದಿದ ಜೀನುಗಳ ಪತ್ತೆ ಸಾಧ್ಯವಾಗುತ್ತದೆ. ಇದರಿಂದ ಕಾಯಿಲೆಯ ಮೂಲಕಾರಣ ಅರ್ಥವಾಗಿ ಅದಕ್ಕೆ ಅಗತ್ಯವಾದ ಚಿಕಿತ್ಸೆ ರೂಪಿಸುವುದು ಸಾಧ್ಯವಾಗುತ್ತದೆ. ಜೀನ್ ಅಧ್ಯಯನದಿಂದ ಶೀಘ್ರ ಮತ್ತು ನಿರ್ದಿಷ್ಟ ರೋಗ ನಿದಾನ ವಿಧಾನಗಳು ವೈದ್ಯರ ಕೈವಶವಾಗುತ್ತವೆ. ಇದರಿಂದ ಅಸಂಖ್ಯಾತ ಪೀಡೆಗಳಿಗೆ ತಡಮಾಡದೆ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ.

ಜೀನೋಮ್ ನಕ್ಷೆಯನ್ನಾಧರಿಸಿದ ಸಂಶೋಧನೆಯಿಂದ ಹೊಸ ಚಿಕಿತ್ಸಾ ವಿಧಾನಗಳು, ಔಷಧಗಳು, ರೋಗನಿರೋಧ ತಂತ್ರಗಳು, ರೋಗಕಾರಕ ಪರಿಸರ ಸ್ಥಿತಿಯಿಂದ ರಕ್ಷಣೆ ಮತ್ತು ಜೀನ್ ಚಿಕಿತ್ಸೆಯ ಮೂಲಕ ದೋಷಮುಕ್ತ ಜೀನನ್ನು ಬದಲಿಸುವುದೂ ಸಾಧ್ಯವಾಗುತ್ತದೆ.

. ಸೂಕ್ಷ್ಮಜೀವಿ ಜೀನೋಮಿಕ್ಸ್: ಹ್ಯೂಮನ್ ಜೀನೋಮ್ ಪ್ರಾಜೆಕ್ಟ್‌ನಿಂದ ಪ್ರೇರಣೆಗೊಂಡು ೧೯೯೪ರಲ್ಲಿಯೆ ಬ್ಯಾಕ್ಟೀರಿಯಾಗಳ ಜೀನೋಮ್ ಶ್ರೇಣಿಯ ಪತ್ತೆಕಾರ್ಯ ಪ್ರಾರಂಭವಾಗಿದೆ. ಈ ಬ್ಯಾಕ್ಟೀರಿಯಾಗಳು ಶಕ್ತಿ ಉತ್ಪಾದನೆ, ಪರಿಸರ ಸಂರಕ್ಷಣೆ, ವಿಷಕಾರಿ ತ್ಯಾಜ್ಯಗಳನ್ನು ಕಡಿಮೆ ಮಾಡುವಂತ ಕೆಲಸಗಳಿಗೆ ನೆರವಾಗುತ್ತವೆ.

ಈವರೆಗೆ ಕೇವಲ ೦.೦೧% ನಷ್ಟು ಸೂಕ್ಷ್ಮಜೀವಿಗಳ ಬಗ್ಗೆ ಮಾತ್ರ ನಮಗೆ ತಕ್ಕಷ್ಟು ತಿಳಿದಿದೆ. ಮೈಕ್ರೋಬಿಯಲ್ ಜೀನೋಮ್ ಪ್ರಾಜೆಕ್ಟ್ ಅಂತಿಮವಾಗಿ ಮನುಷ್ಯನ ಆರೋಗ್ಯ ಮತ್ತು ಪರಿಸರಕ್ಕೆ ಸಹಾಯಮಾಡುವಂತ ಜ್ಞಾನಕ್ಕೆ ಬುನಾದಿ ಹಾಕಲಿದೆ.

. ಅಪಾಯದ ಅಂದಾಜು: ಮಾನವ ಜೀನೋಮನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವುದರಿಂದ ವ್ಯಕ್ತಿಯೊಬ್ಬ ವಿಷಕಾರಿ ಏಜೆಂಟುಗಳಿಗೆ ತೆರೆದುಕೊಳ್ಳುವುದರಿಂದ ಆಗುವ ಅಪಾಯದ ಸರಿಯಾದ ಅಂದಾಜು ಮಾಡುವ ಸಾಮರ್ಥ್ಯ ಲಭಿಸುತ್ತದೆ. ವಿಷಕಾರಿ ವಸ್ತುಗಳ ವಿರುದ್ಧ ಕೆಲವು ವ್ಯಕ್ತಿಗಳು ಹೆಚ್ಚು ಮತ್ತು ಕೆಲವು ವ್ಯಕ್ತಿಗಳು ಕಡಿಮೆ ನಿರೋಧಕ ಶಕ್ತಿಯನ್ನು ಪ್ರದರ್ಶಿಸುತ್ತಾರೆ. ಇದಕ್ಕೂ ಅವರಲ್ಲಿರುವ ಜೆನೆಟಿಕ್ ವ್ಯತ್ಯಾಸಗಳೇ ಕಾರಣ ಎಂಬುದು ವಿಜ್ಞಾನಿಗಳಿಗೆ ತಿಳಿದಿದೆ. ಈ ಕಾರಣಗಳೇನು ಎಂಬುದು ತಿಳಿದರೆ ವಿಕಿರಣ ಪರಿಣಾಮ, ವಿಶೇಷವಾಗಿ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ, ಏನೆಂಬುದನ್ನು ಅರ್ಥಮಾಡಿಕೊಳ್ಳಬಹುದು.

. ಕೃಷಿಪಶುಸಂಗೋಪನೆ: ಸಸ್ಯ ಮತ್ತು ಪ್ರಾಣಿಗಳ ಜೀನೋಮನ್ನು ಅರ್ಥಮಾಡಿಕೊಳ್ಳುವುದರಿಂದ ಹೆಚ್ಚು ಬಲಿಷ್ಠವಾದ ಹಾಗು ಹೆಚ್ಚು ರೋಗ ನಿರೋಧಕ ಶಕ್ತಿ ಪಡೆದ ಸಸ್ಯ ಮತ್ತು ಪ್ರಾಣಿಗಳನ್ನು ಸೃಷ್ಟಿಸಬಹುದು. ಇದು ಕೃಷಿ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಜೊತೆಗೆ, ಕಡಿಮೆ ವೆಚ್ಚದಲ್ಲಿ ಪೀಡನಾಶಕಗಳ ಹಾವಳಿ ಇಲ್ಲದ ಹೆಚ್ಚು ಪೌಷ್ಟಿಕವಾದ ಆಹಾರವನ್ನು ಗ್ರಾಹಕರಿಗೆ ನೀಡುವುದು ಇದರಿಂದ ಸಾಧ್ಯವಾಗುತ್ತದೆ.

ಕೆಲವು ತ್ಯಾಜ್ಯಗಳು ಮಣ್ಣಿನಲ್ಲಿ ಕ್ಷಯಿಸಲು ಶತಮಾನಗಳೇ ಬೇಕು. ಇವು ಮಾಲಿನ್ಯಕ್ಕೆ ಮುಖ್ಯ ಕಾರಣ. ಮುಂದೆ ಇವುಗಳನ್ನು ಸ್ವಚ್ಛಗೊಳಿಸುವ ವಿಶೇಷ ತರದ ಸಸ್ಯಗಳು ಬರಬಹುದು.

ಕನ್ನಡ ಪ್ರಭ