ನಿಮ್ಮ ಸಾಹಿತ್ಯದ ಸಮಸ್ತ ಸ್ವರೂಪ ತಿಳಿಯಲು ಹೋಸ ದೃಷ್ಟಿಕೋನಗಳೇ ಬೇಕು ಎಂದು ಅನ್ನಿಸತೊಡಗಿದೆ. ಇಡೀ ಶತಮಾನದಲ್ಲಿ ಕನ್ನಡ ಪ್ರತಿಭೆ ಏಳೆಂಟು ಜನ ಮಹತ್ವದ ಪ್ರತಿಭಾವಂತರನ್ನು ಸೃಷ್ಟಿಸಿದೆ. ಅದರಲ್ಲಿ ಕಂಬಾರರದು ವಿಶಿಷ್ಟ ಧ್ವ ನಿ. ಹೊಸ ರೀತಿಯಲ್ಲಿ ಭಾರತವನ್ನೇ ಕಾಣುವ ಧ್ವನಿ.

ಆಧುನಿಕ ಜಗತ್ತು ಆಧುನೀಕರಣದ ಒತ್ತಡಗಳನ್ನು ಹಾಕಿದ ರೀತಿಯನ್ನು ದಾಟುವ ಕ್ರಮ ನಿಮ್ಮ ಸಾಹಿತ್ಯದಲ್ಲಿ ಬೆರಗು ಹುಟ್ಟಿಸುತ್ತದೆ. ಇಲ್ಲಿ ಭಾರತದ ಬೇರೆ ಬೇರೆ ಭಾಗಗಳಿಂದ ಬಂದ ತುಂಬ ಪ್ರತಿಭಾವಂತ ಸ್ನೇಹಿತರಿದ್ದಾರೆ.  ಅವರಲ್ಲಿ ಕೂಡಾ ಈ ರೀತಿಯ ಅಭಿವ್ಯಕ್ತಿ ಜೀವನ ತುಂಬ ಕಡಿಮೆ ಎಂದರು….

ಸತ್ಯವನ್ನು ಸಾಂಬಶಿವರ ಹಾಗೆ ಕುಣಿಸಬೇಕು, ಮಣಿಸಬೇಕು. ಹುಳಾ ಪಾರ್ಟಿಗಳು ಸತ್ಯದ ಕೈಯಲ್ಲಿ ಸಿಕ್ಕಿಬಿದ್ದರೆ ನಾಶವಾಗಿ ಹೋಗುತ್ತಾರೆ. ಸತ್ಯ ಹರಿಶ್ಚಂದ್ರನ ಹಾಗೆ ಹೀನಾಯ ಸ್ಥಿತಿಗೆ ಒಂದು ಮುಟ್ಟುತ್ತಾರೆ. ಆದರೆ, ಸತ್ಯ ಹರಿಶ್ಚಂದ್ರನಿಗೆ ಸಾಧ್ಯವಾಗದ ಕ್ರಿಯಾಶೀಲತೆ ಸಾಂಬ-ಶಿವರಿಗೆ ಇದೆ. ಸತ್ಯ ಅವರ ಕಾಲಕೆಳಗೆ ಬಂದು ತೆವಳುತ್ತದೆ. ನಮ್ಮ ಬುದ್ಧಿಯನ್ನು ಮಂಪರಿನಿಂದ ಬಿಡುಗಡೆ ಮಾಡುವ ಶಕ್ತಿ ‘ಜೈಸಿದನಾಯಕ’ಕ್ಕೆ ಇಲ್ಲ. ಆದರೆ, ‘ಸಾಂಬ-ಶಿವ….’ಕ್ಕೆ ಇದೆ. ಕ್ರಾಂತಿಗಳನ್ನು ಜೈಸಿದನಾಯಕನ ಹಾಗೆ ಕಂಡರೆ ಬೆದರುತ್ತೇವೆ, ಭೀತರಾಗುತ್ತೇವೆ. ಆಧುನಿಕ ಜಗತ್ತು ರಾಜಕಾರಣವನ್ನು ನೋಡುವ ಕ್ರಮವೇ ಭೀಕರ. ಸಾಮಾಜಿಕ ಪ್ರತಿಮೆಗಳು ಕೂಡಾ ಹಾಗೆಯೇ, ಅವು ಕೊಳೆಯುವುದನ್ನೆ ತೋರಿಸುತ್ತವೆ. ಕಾಫ್ಕನ ಹಾಗೆ, ಆರ್ವೆಲ್ಲನ ಹಾಗೆ ಭಯವನ್ನು ಸೃಷ್ಟಿಸುವ ಮೂಲಕ ಆಧುನಿಕ ರಾಜಕಾರಣ ಮನುಷ್ಯನನ್ನು ಅಧೀನನ್ನಾಗಿಸಿಕೊಳ್ಳುತ್ತದೆ. ‘ಹರಕೆಯ ಕುರಿ’ ಕೂಡಾ ಹಾಗೆಯೇ. Fear is the source of authoritarian power. ಆದರೆ, ಸಾಂಬ-ಶಿವರನ್ನು ಯಾರಾದರೂ ಹೆದರಿಸಲು ಸಾಧ್ಯವೆ? ಹೀರೋಗಳನ್ನು ನೋಡಿದರೆ ಅವರ ಸೋಲೇ ಕಾಡುತ್ತದೆ. ಸಾಂಬಶಿವರಂಥ ಕಿಲಾಡಿಗಳನ್ನು ನೋಡಿದರೆ ಅವರ ಬಡತನವೇ ಅವರ ವಿಜಯವನ್ನು ಉಜ್ವಲೀಕರಿಸುತ್ತದೆ. ನಿರ್ವಾಣಕ್ಕೆ ಕೌಪೀನದ ಹಂಗಿಲಲ್. ನಿಜವಾಗಿಯೂ ಅವರು ನಿರ್ವಾಣದ ಸ್ಥಿತಿಯಲ್ಲಿರುವ ಮಂದಿ. ಅವರನ್ನು ಮೆಟ್ಟುವುದಕ್ಕೆ ಸಾಧ್ಯವೇ ಇಲ್ಲ.

ಸಾಂಬಶಿವರದು ನಿರ್ವಾಣದ ರಾಜಕೀಯ, Politics of liberation!  ಹೀಗಾಗಿ ಈ ನಾಟಕ ನನಗೆ ತುಂಬ ಪ್ರಿಯವಾದದ್ದು.

ಡಿ.ಆರ್. ನಾಗರಾಜ
ಸಿಮ್ಲಾದಿಂದ ಬರೆದ ೨೩.೪.೯೩ರ ಪತ್ರದಿಂದ