(ದೂರದಲ್ಲಿ ಒಂದು ಹಾಡು ಕೆಳಿ ಬರುತ್ತದೆ. ಬೆಳದಿಂಗಳು, ಈಗ ಡಿಂಗ್‌ಡಾಂಗ್ ಪ್ರಸ್ತ. ಒಳಗಡೆ ಕೂಡಿದ್ದಾರೆಂದು ಭಾವಿಸಿ ಹೊರಗಡೆ ರಾಜ, ಕಾರಭಾರಿ ಬರುತ್ತಾರೆ. ಗುರುತಾಗದಿರಲೆಂದು ಹೆಣ್ಣು ಗಂಡು ದೆವ್ವಗಳ ಹಾಗೆ ಉಡುಪು ಬದಲಿಸಿದ್ದಾರೆ. ದೂರದಿಂದ ಹಾಡು ಕೇಳಿ ಬರುತ್ತಿದೆ.)

ಆಗಲಿ ಇರಲಾರನೊ
ಮರೆತು ಇರಲಾರೆನೊ ನಿನ್ನನ್ನಾ ||
ಒಲಿದವನೆ ನಲಿದವನೆ |
ಹೃದಯದವನೆ ಗೆಲಿದವನೆ
ಘಾಸಿಯಾಗುವೆನೊ ನಾನಾ | ಮದನಾ
        ಮರೆತಿರಲಾರೆ ನಿನ್ನಾ ||
ಸ್ಮರಣ ಹೂವಿನ ಬಾಣಾ ಹೊಕ್ಕಾವೋ ಹೃದಯವನಾ
ಅಬಲೆ ನಾ ಮಾಡಲೇನಾ?
ತರುಣಿಯ ಬಿರಹವ ಮರೆಯಬೇಡಲೊ ಚೆಲುವ
ಹೂವಿನ ಹಾಸಿಗೆ ಸುಡು ಸುಡುವ ಬೇಸಿಗೆ
ಘಾಸಿಯಾಗುವೆನೊ ನಾನಾ | ಮದನಾ
ಮರೆತಿರಲಾರೆ ನಿನ್ನಾ ||

ರಾಜ : ನಮ್ಮಿಬ್ಬರ ಗುರುತು ಯಾರಿಗೂ ಸಿಕ್ಕೋದಿಲ್ಲ ಅಲ್ಲವ?

ಕಾರಭಾರಿ : ಸಾಧ್ಯವೇ ಇಲ್ಲ ಪ್ರಭು. ತಾವಂತೂ ಥೇಟ್ ಗಂಡು ದೆವ್ವನ ಥರಾನೇ ಕಾಣ್ತೀರಿ.

ರಾಜ : ನೀನೂ ಅಷ್ಟೆ ಕಣೊ ಥೇಟ್ ಹೆಣ್ಣುಭೂತ. ಅವಳು ನರಳೋದು ಕೇಳಿಸೋದೇ ಇಲ್ಲವಲ್ಲ!

ಕಾರಭಾರಿ : ಬಹುಶಃ ಅವರನ್ನೂ ಮಲಗಿಲ್ಲವೇನೋ. ದೀಪ ಹಾಗೇ ಇದೆ.

ರಾಜ : ಹೊತ್ತಾಯ್ತಲ್ಲ. ಎಲ್ಲಾದರೂ ಹಣಿಕಿ ಹಾಕೋದಕ್ಕೆ ಅವಕಾಸ ಇದೆಯಾ ನೋಡು, ಏನು ಮಾಡ್ತಿದಾರೆ ನೋಡೋಣ.

ಕಾರಭಾರಿ : ನಾವು ನೋಡೋದನ್ನ ಯಾರಾದರೂ ನೋಡಿದರೆ?

ರಾಜ : ನನ್ನ ಅಪ್ಪಣೆ ಅಲ್ಲದೆ ಅದ್ಯಾವನಯ್ಯ ನೋಡೋನು?

ಕಾರಭಾರಿ : ಜಾಸ್ತಿ ಗಲಾಟೆ ಮಾಡಬೇಡಿ ಪ್ರಭು.

ರಾಜ : ಯೋ-ನನಗೆಷ್ಟು ಬೇಕೋ ಅಷ್ಟು ಗಲಾಟೆ ಮಾಡ್ತೀನಯ್ಯ, ನೀನ್ಯಾವನು ಕೇಳೋಕೆ?

ಕಾರಭಾರಿ : ಪ್ರಭು, ಪ್ರಭು ಇವೊತ್ತು ಇಡೀ ಊರಿನ ಕಿವಿ ಈ ಕಡೆಗಿದೆ. ನೋಡೋವಾಗ ನಾವೇನಾದರೂ ಸಿಕ್ಕುಬಿದ್ದರೆ ದಜನ ನಮ್ಮನ್ನು ತಿರಸ್ಕಾರದಿಂದ ನೋಡ್ತಾರೆ.

ರಾಜ : ಹಾಗೆ ಹೇಳು ಮತ್ತೆ. ಜನ ನಮ್ಮನ್ನು ಸತ್ಕಾರದಿಂದ ನೋಡೋಹಾಗೆ ಒಂದು ಉಪಾಯ ಮಾಡು.

ಕಾರಭಾರಿ : ಏನಕ್ಕೆ?

ರಾಜ : ಒಳಗಡೆ ನೋಡೋದಕ್ಕೆ ಬಾಗಿಲಿಗೆ ತೂತು ಇದೆಯಾ ನೋಡು-

ಕಾರಭಾರಿ : ಇಲ್ಲ ಪ್ರಭು.

ರಾಜ : ಕಿಡಕಿಗೆ ಕಿಂಡಿ ಇದೆಯಾ ನೋಡು.

ಕಾರಭಾರಿ : ಇಲ್ಲ ಪ್ರಭು.

ರಾಜ : ಹೋಗಲಿ ಗೋಡೆಗೆ ಕಿವಿ ಹಚ್ಚಿ ಏನಾದರೂ ಮಾತಾಡಿಕೊಳ್ಳುತ್ತಿದ್ದಾರಾ ಕೇಳು.

ಕಾರಭಾರಿ : ಅದೂ ಕೇಳಿಸೋದಿಲ್ಲ ಪ್ರಭು.

ರಾಜ : ಕಿಂಡಿ ಇಲ್ಲ, ತೂತಿಲ್ಲ, ಮಾತು ಕೇಳಿಸೋದಿಲ್ಲ. ಬೋಳೀಮಗನೆ ಇಂಥಲ್ಲಿ ಯಾಕೆ ಪ್ರಸ್ತ ಇಟ್ಟೆ? ಮ್ಯಾಲೆ ಹತ್ತಿ ಒಂದು ಹೆಂಚು ತಗಿ. ಏನು ಮಾಡುತ್ತಿದ್ದಾರೆ ನೋಡಿ ಹೇಳು. (ಕಾರಭಾರಿ ಮೇಲೆ ಹತ್ತುವನು. ಅಲ್ಲಿಂದಲೇ ಸುಳ್ಳು ಸುಳ್ಳೇ ಹೇಳತೊಡಗುವನು)

ಕಾರಭಾರಿ : ಪ್ರಭು ಇಬ್ಬರೂ ಹಾಸಿಗೆ ಮೇಲೆ ಕೂತಿದ್ದಾರೆ!

ರಾಜ : ಹೌದು, ಆಮೇಲೆ!

ಕಾರಭಾರಿ : ಆವಳ ಕಿವೀನಲ್ಲಿ ಡಿಂಗ್‌ಡಾಂಗ್ ಏನೋ ಹೇಳ್ತಿದ್ದಾರೆ!

ರಾಜ : ಬೇಗ ಹೇಳು, ಆಮೇಲೆ?

ಕಾರಭಾರಿ : ಅವಳು ನಗ್ತಿದಾಳೆ!

ರಾಜ : ನಗ್ತಿದಾಳಾ? ಸಂತೋಷದಿಂದ ನಗ್ತಿದಾಳ, ದುಃಖದಿಂದ ನಗ್ತಿದಾಳ?

ಕಾರಭಾರಿ : ಸಂತೋಷದಿಂದ ಪ್ರಭು.

ರಾಜ : (ಕಾರಭಾರಿಯ ಕಾಲು ಹಿಡಿದೆಳೆದು ಬೀಳಿಸಿ) ಬೋಳಿಮಗನೆ ಅವಳನ್ನೇ ಕಣೊ ನಾನು ಮೊದಲು ಹೇಳಿದ್ದು. ನೀನು ಯಾವಳನ್ನೋ ಕರಕೊಂಬಂದು ಗೋಳಾಡಿಸಿ ಬಿಟ್ಟೆ ನನ್ನ. ಸಂತೋಷದಿಂದ ನಗೋಳು ಕಾಪಾಡು ದೇವರೇ ಅಂತ ಪದಾ ಯಾಕೋ ಹಾಡತಾಳೆ? ಪದಾ ಹಾಡದಿದ್ದರೆ ನಾ ಹ್ಯಾಗೋ ಅವಳನ್ನ ಕಾಪಾಡೋದು? ಬಡ್ಡೀಮಗನೇ ಒಂದು ಕೆಲಸ ಮಾಡು. ಹೆಂಚು ತೆಗೆದಿದ್ದೀಯಲ್ಲ, ಅಲ್ಲಿ ಮುಕ ಥೂರಿ ಗೂಗೆ ಥರ ಕೂಗು. ಅವಳು ಹೆದರಿದ ಹೊರಗಡೆ ಬರಬಹುದು.(ಕಾರಭಾರಿ ಹಾಗೇ ಮಾಡುವನು. ಅಷ್ಟರಲ್ಲಿ ಸಾಂಬನ ಸಿಳ್ಳು ಕೇಳಿ ಬರುತ್ತದೆ. ಅದಾಗಿ ಡಿಂಗ್‌ಡಾಂಗ್ ವೀರಾವೇಶದಿಂದ ಹೇಂಕರಿಸುವುದು. ಇಬ್ಬರೂ ಓಡಿ ದೂರದಲ್ಲಿ ಬಂದು)

ರಾಜ : ಡಿಂಗ್‌ಡಾಂಗ್ ಗೆ ನಮ್ಮ ಗುರುತು ಸಿಕ್ಕಿರಭೌದು ಅಂತಿಯಾ?

ಕಾರಭಾರಿ : ಸಾಧ್ಯವಿಲ್ಲ ಪ್ರಭು. (ಅಲ್ಲೇ ಕಂಬಳಿ ಹೊದ್ದುಕೊಂಡು ಒಳಗೊಳಗೆ ಹೆಂಡ ಕುಡಿಯುತ್ತಿದ್ದ ಸಾಂಬ ಈಗ ಮುಸುಕು ತೆಗೆಯುವನು)

ಸಾಂಬ : ಕಳ್ಳ ನನಮಕ್ಕಳ್ರಾ ಬರೋ ಇಲ್ಲಿ.

ಕಾರಭಾರಿ : ಇವನ್ಯಾವನೋ ಕುಡುಕ.

ರಾಜ : ನಾವಿಬ್ಬರೂ ದೆವ್ವ ಭೂತ ಅಂತ ಹೇಳೋಣ. ನಂಬಿ ಓಡ್ತಾನೆ. ಆಮೇಲೆ ನಾನೊಂದು ನಿರಾಶೆ ಬಗ್ಗೆ ಪದ ಹಾಡ್ತೀನಿ. ಇಬ್ಬರೂ ಕೂತಗೊಂಡು ಅಳೋಣ.

ಸಾಂಬ : ಬರೋ ಇಲ್ಲಿ. ಪ್ರೀತಿ ಪ್ರೇಮ  ಮಾಡೋ ಹೊತ್ನಲ್ಲಿ ಕಳ್ಳತನ ಮಾಡ್ತೀರಾ ಹಲ್ಕಾಗಳ್ರ! ದೆವ್ವಿನಂಥ ದೆವ್ವ ಭೂತ ಪ್ರೀತಿ ಮಾಡ್ತಾ ಇವೆ. ಮನುಷ್ಯರಾಗಿ ನೀವು….

ರಾಜ : ನಾವೂ ದೆವ್ವ ಭೂತ ಕಣ್ಲಾ.

ಸಾಂಬ : ನಿಮ್ಮಲ್ಲಿ ದೆವ್ವ ಯಾರು ? ಭೂತ ಯಾರು?

ರಾಜ : ಇದು ಭೂತ.

ಕಾರಭಾರಿ : ಇದು ದೆವ್ವ.

ಸಾಂಬ : ದೆವ್ವ ಭೂತ ಜೋಡಿ ಸರಿಯಾಗಿದೆ. ಪ್ರೀತಿ ಮಾಡೋದು ಬಿಟ್ಟು ಯಾಕೆ ಅಡ್ಡಾಡತಿದ್ದೀರಿ?

ರಾಜ : ಪ್ರೀತಿ ಮಾಡ್ತಾನೇ ಇದ್ವಿ ಕಣಯ್ಯ. ನಿನ್ನ ದನಿ ಕೇಳಿ ಇಲ್ಲಿಗೆ ಬಂದಿವೆ.

ಸಾಂಬ : ಹಂಗನ್ನು ಮತ್ತೆ.ದ ಈ ಲೋಕದಲ್ಲಿ ಎಲ್ಲರೂ ಸುಖವಾಗಿದ್ದಾರೆ. ನನ್ನ ಮಗ ಸೊಸೆ; ಆ ರಾಜ ಅವನ ಕಾರುಭಾರಿ, ಆ ಡಿಂಗ್‌ಡಾಂಗ್, ಆವನ ಕತ್ತೆ,ದ ಈ ಊರಿನ ಗಂಡಂದಿರು ಅವರ ಹೆಂಡಂದಿರು, ನೀನು ನಿನ್ನ ಭೂತ ಎಲ್ಲರೂ ಸುಖವಾಗಿದ್ದಾರೆ. ನಾನೊಬ್ಬನೇ ಕಣೊ ಜೋಡಿ ಇಲ್ಲದೆ ದುಃಖದಲ್ಲಿರೋನು (ಹೋ ಎಂದು ಅಳುವನು)

ರಾಜ : (ತಾನೂ ಅಳುತ್ತ) ನಿನ್ನ ದುಃಖ ಕಂಡು ನನಗೂ ಅಳು ಬರುತ್ತೆ ಕಣೊ.

ಸಾಂಬ : ಅಳಬೇಡ ನಾ ಕೇಳಲಾರೆ. ಬೇರೆಯವರು ಅತ್ತರೆ, ಅವರು ವನುಷ್ಯರಿರಲಿ ದೆವ್ವ ಭೂತ ಇರಲಿ ನನಗೆ ಕೇಳೋದಕ್ಕಾಗೊದಿಲ್ಲ. ಇಕಾ ಹೆಂಡ ಇದೆ ಕುಡಿ. ಆತ್ಮ ತೃಪ್ತಿ ಸಿಗತದೆ. (ಕೊಡುವನು ರಾಜ ಗಟಗಟ ಕುಡಿಯುವನು) ನೋಡಣ್ಣ ಒಂದೇ ಬುಡ್ಡಿಯಿಂದ ಹೆಂಡ ಕುಡಿದಿವಿ. ನಾವಿಬ್ಬರೂ ಅಣ್ಣ ತಮ್ಮ ಇದ್ದಂಗೆ ಏನಂತಿ?

ರಾಜ : ಓಹೋ.

ಸಾಂಬ : ಇಲ್ಲಿಗೆ ಬರೋಕೆ ಮುಂಚೆ ನೀನೇನಣ್ಣ ಮಾಡ್ತಿದ್ದೆ? ಪ್ರೀತಿ ತಾನೆ?ನನಗೋಸ್ಕರ ನೀನ್ಯಾಕಣ್ಣ ಪ್ರೀತಿ ಮಾಡೋದು ಬಿಡಬೇಕು? ಮಾಡು, ಪ್ರೀತಿ ಮಾಡು. ನಾ ಕಣ್ಣಾರೆ ನೋಡಿ ಸಂತೋಷ ಪಡ್ತೀನಿ, ಮಾಡು.

ರಾಜ : ಬೇಡ ತಮ್ಮ, ಇವಳು ನಾಚಿಕೊಳ್ಳತಾಳೆ.

ಸಾಂಬ : ನಾಚಿಕೊಂಡರೆ ಬಿಟ್ಟುಬಿಡೋದಾ? ಹೆಂಡಂದಿರಿಗೆ ಹಂಗೆಲ್ಲಾ ಸಲಿಗೆ ಕೊಡಬಾರದಣ್ಣ. ಏಳತಾ ಎರಡು  ಬೀಳತಾ ಇರಬೇಕು. ಅದ್ಸರಿ ನಿಮ್ಮ ಲೋಕದಲ್ಲಿ ಪದ್ಧತಿ ಹೆಂಗದೆ?

ರಾಜ : ಏನು ಪದ್ಧತಿ?

ಸಾಂಬ : ಹಿಂಗಿಟ್ಟುಕೊ; ನೀನು ದೆವ್ವ, ನನ್ನಣ್ಣ. ನಾ ಮನುಸ-ನಿನ್ನ ತಮ್ಮ. ಏನಣ್ಣಾ, ನಿನ್ನ ಹೆಂಡದೀರನ್ನ ಇಕಾ ಇವಳನ್ನ ನಾ ಮಡಿಕ್ಕೊಂಡೆ ಅನ್ನು. ಆಗ ನೀ ಏನ್ಮಾಡತೀಯ ಇವಳನ್ನ? ಕುಲ ಬಿಟ್ಟು ಹೊರಗಟ್ಟತೀಯಾ?

ಕಾರಭಾರಿ : (ನಗುತ್ತಾ) ನೀನೂ ಸತ್ತು ನಮ್ಮ ಲೋಕಕ್ಕೆ ಬಂದು ಬಿಡು, ನಮ್ಮ ಜೊತೆಗೇ ಇದ್ದೀಯಂತೆ.

ಸಾಂಬ : ಲೇ ದೆವ್ವಣ್ಣ, ಬಲೇ ಕಿಲಾಡಿ ನಿನ್ನೆಂಡತಿ. ತುಂಬ ಮುದ್ದಾಗವಳೆ. (ಕಾರಭಾರಿ ಇನ್ನೂ ನಗುವನು) ನನಗೂ ಬೇಕಾದಷ್ಟು ದೆವ್ವ ಭೂತ ಗೆಣೆಕಾರರು ಇದ್ದಾರಣ್ಣ. ಈಗಲೂ ಹಳ್ಳಿಗೋದರಾಯ್ತು. ರಾತ್ರಿ ಒಬ್ಬಳು ಭೂತ ಬುಡ್ಡಿ ತುಂಬಾ ಹೆಂಡ ಕೊಟ್ಟು ಮಲಗಿ ಹೋಯ್ತಾಳೆ ಗೊತ್ತಾ?

ಕಾರಭಾರಿ : ಸುದೈವಿಯಪ್ಪಾ ನೀನು.

ಸಾಂಬ : ಹೆಂಡ ತರದಿದ್ದರೆ ಅವಳನ್ನು ನಾ ಮುಟ್ಟಾಕಿಲ್ಲ.

ಕಾರಭಾರಿ : ಭಲೆ!

ಸಾಂಬ : ಆ ಭೂತ ಕೊಂಚದವಳು ಅನ್ನಬೇಡವೆ. ರಾಜ ದೆವ್ವ ಇದಾನಲ್ಲ, ಅವನ ಮಗಳು! ರಾಜಕುಮಾರಿ ಭೂತ!

ರಾಜ : ಹೌದಾ!

ಸಾಂಬ : ಮತ್ತೆ ಏನಂದುಕೊಂಡೆ ನನ್ನ? ಸಿಕ್ಕಸಿಕ್ಕಲ್ಲಿ ಕಾಲೆತ್ತೋ ಹಡಬಿಟ್ಟಿ ಭೂತಗಳಿಗೆಲ್ಲ ಬಲಿಯೋನಾ ನಾನು? ಹೆಂಗೆ ಸಂಪದಿಸಿದೆ ಗೊತ್ತಾ ಅವಳನ್ನ?

ರಾಜ : ಹೆಂಗೆ ಹೇಳಣ್ಣ.

ಸಾಂಬ : ಒಂದಿನ ಅಮಾವಾಸ್ಯೆ ಕತ್ತಲೆ. ಹಿಂಗೇ ಕುಡ್ಡಿದ್ದೆ. ನನ್ನ ಮನಸಾ ಹೆಂಡ್ತಿ ಸತ್ತು ಎರಡು ದಿನ ಆಗಿತ್ತು ಅಷ್ಟೆ. ಹೆಂಗೌಳೆ ನೋಡಿಕೊಂಡು ಬರಾಣ ಅಂತ ಸುಡುಗಾಡಿಗೆ ಹೋದೆ ನೋಡು: ದೆವ್ವ ಭೂತ ಸಾವಿರ ಸಾವಿರ ನೆರೆದು ದರ್ಬಾರ ಮಾಡತಾ ಅವೆ! ಸಿಂಹಾಸನದ ಮೇಲೆ ರಾಜ ದೆವ್ವ ಅದೆ. ಅದರ ಪಕ್ಕ ಅವನ ರಾಣಿ ಭೂತ. ಅವಳ ಪಕ್ಕ ಒಂದು ಚೆಂದುಳ್ಳೆ ಎಳೆ ಭೂತ ಫಳಫಳ ಹೊಳೀತಿದೆ. ಅವಳೇ ಆಮೇಲೆ ನನ್ನ ಕೀಪು. ನನ್ನ ಹೆಂಡತೀಗೆ ಅಲ್ಲಿ ಇನ್ನೂ ಜೀವ ಬಂದಿರಲಿಲ್ಲ. ಹಾಜರಿ ಪುಸ್ತಕದಲ್ಲಿ ಅವಳ ಹೆಸರಿನ್ನೂ ದಾಖಲಾಗಿರಲಿಲ್ಲ. ನೋಡತೇನೆ ದರ್ಬಾರು ಭರ್ಜರಿ ಸಾಗಿದೆ. ಯಾವ್ಯಾವುದೊ ದೆವ್ವ ಭೂತ ರಾಜನಿಗೆ ಏನೇನೋ ಕಸರತ್ತು ತೋರಿಸತಾ ಇವೆ.ದ ಎಲ್ಲರೂ ನಗತಾ ಚಪ್ಪಾಳೆ ತಟ್ಟತಾ ಅವ್ರೆ! ನನಗೂ ಪ್ರೋತ್ಸಾಹ ಬಂತು ನೋಡು. ಹೋದೋನೆ ರಾಜನ ಎದುರಿಗೆ ಹಿಂಗಂದು ಒಂದು ಲಾಗ ಹಾಕಿದೆ ನೋಡುದ ನನ್ಮಗಂದು, ಕೂತಿರೋದೆವ್ವ ಭೂತ ಎಲ್ಲ ಹೋ ಅಂತ ಸಿಳ್ಳೆ ಹಾಕಿದ್ವು. ರಾಜ ಎಷ್ಟು ಖುಷಿ ಆದನಪ್ಪಾ ಅಂದರೆ-ತಗೋ ಬಹುಮಾನ ಅಂತ ಆ ಎಳೆ ಭೂತ ರಾಜಕುಮಾರೀನ್ನೇ ಕೊಟ್ಟುಬಿಟ್ಟ! ಆ ರಾಜ ದೆವ್ವ ಇತ್ತಲ್ಲ ಥೇಟ್ ನಿನ್ನಂಗೇ ಇದ್ದ ಕಣಣ್ಣ! ಬೇಕಾದರೆ ಅಲ್ಲಿ ಹಾಕಿದ ಹಾಗೆ ಇಲ್ಲೂ ಒಂದು ಲಾಗಾ ಹಾಕ್ತೇನೆ. ನೀನೂ ಆ ರಾಜ ದೆವ್ವದ ಹಾಗೆ ಉದಾರಿ ಆಗತೀಯಾ?

ರಾಜ : ಆಗೋಣ ಆಗೋಣ. ಮೊದಲು ಆ ರಾಜಕುಮಾರಿ ಭೂತದ ವಿಷಯಾ ಹೇಳಣ್ಣ. ಈಗಲೂ ನಿನ್ನ ಹತ್ರ ಬರತ್ತಾಳಾ ಅವಳು?

ಸಾಂಬ : ಓಹೋ.

ರಾಜ : ಮತ್ತೆ ಅವಳು ಯಾಕಿಲ್ಲ ಇಲ್ಲಿ?

ಸಾಂಬ : ಅದೇ ಮತ್ತೆ. ಅವಳಿರೋದು ನನ್ನ ಹಳ್ಳೀಲಿ. ಬರೋವಾಗ ಹೇಳಿದೆ. ಜೊತೇಲಿ ನೀನೂ ಬಾರೆ ನೋಡಿಕೊಂಡು ಬರೋವಾ ಅಂತ. ಅದಕ್ಕೆ ಅವಳು ಏನಂದಳು ಗೊತ್ತಾ? ಅಯ್ಯೋ ನನ್ನ ರಾಜ ನಾವು ಹಳ್ಳಿ ಭೂಗಳು. ಸಿಟಿ ಭೂತ ನಮ್ಮನ್ನು ನೋಡಿ ನಗಾಡುತ್ವೆ. ನೀನೇ ಹೋಗಿ ಬಾ ರಾಜ ಅಂದಳು.

ಕಾರಭಾರಿ : ಮತ್ತೆ ನೀನಿಲ್ಲಿ ಒಬ್ಬಂಟಿ ಗೋಳಾಡತಾ ಇದ್ದೀಯಲ್ಲ.

ಸಾಂಬ : ಅದೇ ಮತ್ತೆ. ಅವಳಿಗೆ ಹೇಳಿದೆ; ಲೇ ಚಿನ್ನ ನೀನಿಲ್ಲದೆ ಛಳಿ ಆಗುತ್ತೆ. ಏನೇ ಮಾಡಲಿ ಅಂದೆ. ಅದಕ್ಕೆ ಅವಳೇನು ಮಾಡಿದಳು ಗೊತ್ತಾ? ಹಿಂಗಂದು ಒಂದು ಮುತ್ತು ಕೊಟ್ಟಳು. ‘ರಾಜಾ ನಿನಗೆ ತುಂಬಾ ಛಳಿ ಆದಾಗ ಯಾರಾದಾದರೂ ಬಾಯಲ್ಲಿ ಇದನ್ನಿಡು, ಅವರು ಹೆಂಗಸಾಗತಾರೆ’ ಅಂದಳು.

ರಾಜ : (ಉತ್ಸಾಹದಿಂದ ಎದ್ದು ಬಂದು) ಈವಾಗ ಆ ಮುತ್ತು ನಿನ್ನ ಹತ್ತರ ಇದೆಯಾ?

ಸಾಂಬ : ಓಹೋ.

ರಾಜ : ಕೊಡಿಲ್ಲಿ.

ಸಾಂಬ : ನೀ ಬ್ಯಾಡ ಕಣೊ. ನಿನ್ನ ದಾಡಿ ಕಂಡರೆ ನನಗಾಗೋದಿಲ್ಲ. ಇವಳಿಗೆ ಕೊಡೋಣವಾ?

ರಾಜ : ಕೊಡು.

ಕಾರಭಾರಿ : (ಗಾಬರಿಯಾಗಿ) ಪ್ರಭು ನಾ ತಗೋಬೇಕು?

ರಾಜ : ತಗೋ ಬೇಗ.

ಕಾರಭಾರಿ : ಪ್ರಭು ನನಗ್ಯಾಕೋ ಸಂದೇಹ ಬರತಾ ಇದೆ. ಬೇಡ ಪ್ರಭು.

ರಾಜ : ತಗೋ ಅಂದರೆ.

ಸಾಂಬ : ಬಾಯಲ್ಲಿಟ್ಟುಕೊ (ಕೊಡುವನು, ಸಾಂಬನಿಗೆ ಆನಂದವಾಗಿದೆ. ರಾಜನಿಗೆ ಕುತೂಹಲ. ಸಾಂಬ ಕಾರಭಾರಿಯ ಕೈ ಹಿಡಿಯುತ್ತಾ) ನನ್ನ ಛಳಿ ಹೋಗೋ ತನಕ ಇವಳು ಇಲ್ಲಿರಲಿ, ಆಮೇಲೆ ಕಳಿಸಿಕೊಡತೀನಿ.

ಕಾರಭಾರಿ : (ಮುತ್ತು ಬಾಯಲ್ಲಿಟ್ಟುಕೊಂಡು) ಅಯ್ಯಯ್ಯೋ ಪ್ರಭು. ಇಲ್ಲಿ ನೋಡೀಂದ್ರೆ! ನಾನು ನಿಜವಾಗಿ ಹೆಣ್ಣಾಗಿದ್ದೇನೆ! ದಮ್ಮಯ್ಯ ತಿರಗ ನನ್ನನ್ನು ಗಂಡಸು ಮಡಿ.

ರಾಜ : ನಿಜವಾಗ್ಲೂ?

ಕಾರಭಾರಿ : ಅಯ್ಯಯ್ಯೋ ಹ್ಯಾಗೆ ಹೇಳಲಿ ಪ್ರಭು; ನಿಜವಾಗಿ ನಾ ಹೆಣ್ಣಾಗಿದ್ದೀನಿ!

ರಾಜ : ಒಳ್ಳೇದಾಯ್ತು ಬಿಡು. ಆ ಗಜನಿಂಬೆ ಕತ್ತೆ ಜೊತೆ ಮಲಗಲಿ. ನೀನು ನನ್ನ ಜೊತೆ ಬಾ. (ಅವಳ ಹತ್ತಿರ ಹೋಗುವನು. ಸಾಂಬ ಅಡ್ಡಬರುವನು)

ಸಾಂಬ : ಲೇ ನನ್ಮಗನೇ ಅವನನ್ನು ಹೆಂಗಸು ಮಡಿದವನು ನಾನು. ನನಗೇ ಬೇಕಾದವಳು. ಬಂದ ದೊಡ್ಡ ಮನುಷ್ಯ.

ರಾಜ : ಬಡ್ಡೀ ಮಗನೇ, ಏನಂದುಕೊಂಡೆ ನನ್ನ? ನಾನು ಈ ದೇಶದ ರಜ.

ಸಾಂಬ : ಕಳ್ಳ ನನ್ಮಗನೆ. ಯಾವುದೋ ದೆವ್ವ ನೀನು. ದೇಶದ ರಾಜ ಅಂತ ಸುಳ್ಳು ಹೆಳತೀಯೇನೋ? ನಿನ್ನ ಮುಸಡಿ ನೋಡಿಕೊಳ್ಳೋ ಮಗನೆ. ಅವಳನ್ನ ಮುಟ್ಟಿದರೆ ಒದೀತೀನಿ ನೋಡು. ಹೋಗತೀಯೋ? ಇಲ್ಲಾ….
(ಹೋಗಿ ಒಂದೆರಡು ಏಟು ಹಾಕುವನು. ರಾಜ ಅಷ್ಟು ದೂರ ಹೋಗಿ ಬೀಳುವನು. ಮತ್ತೆ ಸಾಂಬ ಹೊಡೆಯ ಹೋದಾಗ ರಾಜ ಓಡುವನು. ಕಾರಭಾರಿ ಪ್ರಭು ಎಂದು ಓಡಬೇಕೆಂದಾಗ ಇವನು ಅವಳನ್ನು ಹಿಡಿದು ಎಳೆಯುವನು.)
ಸುಮ್ಮನೆ ಬಿದ್ದುಕೊಂಡರೆ ಸರಿ. ಗಲಾಟೆ ಮಾಡಿದರೆ ಬೆಳತನಕ ಬಿಡೋದಿಲ್ಲ ಹುಷಾರ‍.