(ಅರಮನೆ, ರಾಜ ಕೂತಿದ್ದಾನೆ. ಹೆಣ್ಣು ವೇಷದ ಕಾರಭಾರಿ ತಲೆ ತುಂಬ ಸೆರಗು ಹೊದ್ದುಕೊಂಡು ಮುಖ ಮುಚ್ಚಿಕೊಂಡು ಬರುವನು)

ಕಾರಭಾರಿ : ಪ್ರಭು.

ರಾಜ : ಯಾರು ನೀನು?

ಕಾರಭಾರಿ : ನಾನು ತಮ್ಮ ಕಾರಭಾರಿ ಪ್ರಭು.

ರಾಜ : ಅರೆ ಹೌದಲ್ಲವಾ! ಬಾರಯ್ಯಾ ಇನ್ನೂ ಸೀರೆ ಕಳಚಿಲ್ಲವಾ?

ಕಾರಭಾರಿ : ಸೀರೆ ಕಳಚಿದರೆ ಏನು ಬಂತು ಪ್ರಭು? ಒಳಗೆ ನಿಜವಾಗಿ ಹೆಂಗ್ಸಾಗಿದ್ದೀನಿ.

ರಾಜ : ನಿಜವಾಗಲೂ?

ಕಾರಭಾರಿ : ನಾನೇಕೆ ಸುಳ್ಳು ಹೇಳಲಿ ಪ್ರಭು. ನಿಜವಾಗಿ ನಾನೀಗ ಹೆಂಗಸು.

ರಾಜ : ಹೌದಾ? ತುಂಬಾ ಚೆನ್ನಾಗಿ ಕಾಣಸ್ತೀಯೆ ನೀನು.

ಕಾರಭಾರಿ : ತಮಗೋ ಚೇಷ್ಟೆ. ಈ ಆಕಾರದಲ್ಲಿ ಜನಕ್ಕೆ ಮುಖ ಹೇಗೆ ತೋರಿಸಲಿ ಪ್ರಭು? ನನ್ನನ್ನು ಹ್ಯಾಗಾದರೂ ಮಾಡಿ ತಿರಗ ಗಂಡಸು ಮಾಡಿಸಿ.

ರಾಜ : ಅವನಿಗ್ಯಾಕೆ ಹೇಳಲಿಲ್ಲ ನೀನು?

ಕಾರಭಾರಿ : ಸೆರಗೊಡ್ಡಿ ಬೇಡಿಕೊಂಡೆ, ಗಂಡಸನ್ನಾಗಿ ಮಾಡಯ್ಯ ಅಂತ. ಹೀಗೇ ಚೆಂದ ಕಾಣತಿ ಸುಮ್ಕಿರು ಅಂತ ಗದರಿಕೊಂಡ ಪ್ರಭು.

ರಾಜ : ಆತ  ಹೇಳಿದ್ದೂ ನಿಜ ಕಣೊ – ಅಲ್ಲ ಕಣೆ.

ಕಾರಭಾರಿ : ಅವನಿಗೆ ಛಳಿ ಆದಾಗ ಬೇಕಾದರೆ ಅನುಕೂಲ ಮಾಡಿಕೊಡೋಣ. ಸದಾ ಕಾಲ ಹೆಂಗಸಾಗಿರೋದು ಹ್ಯಾಗೆ? ನೀವು ಹೇಳಿದರೆ ನಿಮ್ಮ ಮಾತನ್ನು ತೆಗೆದುಹಾಕಲಾರ. ನೀವಾದರೂ ಕರೆಸಿ ಹೇಳಿ ಪ್ರಭು.

ರಾಜ : ಕಷ್ಟ ಕಣಯ್ಯ. ನನ್ಮಗ ಅವನು ಯಾರು, ಎಲ್ಲಿರತ್ತಾನೆ ಅಂತ ಗೊತ್ತಿಲ್ಲ. ಅವನ ಹೆಸರು ಕುಲ ಗೋತ್ರ ಗೊತ್ತಿಲ್ಲ. ಯಾರನ್ನ ಅಂತ ಕರೆಸಿ ಹೇಳಲಿ.

ಕಾರಭಾರಿ : ಗಣೇಶನ ದೇವಸ್ಥಾನದಲ್ಲಿ ಇರತ್ತಾನಂತೆ. ನನಗೆ ಅಲ್ಲಿಗೇ ಬರಹೇಳಿದಾನೆ ಇವೊತ್ತು.

ರಾಜ : (ತುಸು ಹೊತ್ತು ಯೋಚಿಸಿ ಕಣ್ಣರಳಿ ಒಂದು ಅದ್ಭುತ ಉಪಾಯ ಹೊಳೆಯುವುದನ್ನು ಅಭಿನಯಿಸಿ.)
ಅಯ್ಯಾ ಕಾರಭಾರಿ ಡಿಂಗ್‌ಡಾಂಗು ತನ್ನ ಹೆಂಡತಿ ಹತ್ರ ಹೆಂಗೆ ಹೋಗುತ್ತಂತೆ?

ಕಾರಭಾರಿ : ಹೆಂಗಂದ್ರೆ?

ರಾಜ : ಅಯ್ಯಾ ಇದು ರಾತ್ರಿ ಅಂತ ಇಟ್ಕೊಳಯ್ಯ. ರಾತ್ರಿ ಉಂಡು ಮಲಗಬೇಕಲ್ಲವ? ಈಗ ಉಂಡಾಯಿತು. ಇನ್ನು ಮಲಗಬೇಕಲ್ಲವಾ? ನೀನು ಗಜನಿಂಬೆ. ಅಲ್ಲಿ ಹಾಸಿಗೆ ಮೇಲೆ ಮಲಗಿದ್ದೀಯಾ. ಡಿಂಗ್‌ಡಾಂಗ್ ಪಕ್ಕದ ಮನೆ ಕೊಟ್ಟಿಗೇಲಿದೆ. ಗಂಡ ಹೆಂಡತಿ ಅಂದಮೇಲೆ ಕೂಡಿ ಮಲಗಬೇಕೋ ಬೇಡವೊ?

ಕಾರಭಾರಿ : ಹೌದು.

ರಾಜ : ಅದೇ ಹ್ಯಾಗೆ?

ಕಾರಭಾರಿ : ನಾನು ನೋಡಿಲ್ಲ ಪ್ರಭು. ಸಾಂಬ ನೋಡಿದ್ದಾನಂತೆ.

ರಾಜ : ಹೌದು ಹ್ಯಾಗೆ ಹೋಗತ್ತಂತೆ?

ಕಾರಭಾರಿ : ರಾತ್ರಿ ಊಟಕ್ಕೆ ಮುಂಚೆ ಸ್ನಾನ ಮಾಡುತ್ತಂತೆ. ಊಟ ಮಾಡಿ ಎಲೆ ಅಡಿಕೆ ಹಾಕ್ಕೊಂಡು ಮೈಗೆಲ್ಲಾ ಸೆಂಟ್ ಹಚ್ಚಿಕೊಳ್ಳತ್ತೆ. ಮುಂಗಾಲಿಗೊಂದು ಮಲ್ಲಿಗೆ ಡಂಡೆ ಕಟ್ಟಿಕೊಳ್ಳುತ್ತೆ. ಇಷ್ಟಾದ ಮೇಲೆ ಒಂದ್ಸಲ ಅಲ್ಲೇ ಹ್ಯಾಂಕರಿಸಿ ಹೊರಗಡೆ ಬಂದು ಗಜನಿಂಬೆ ರೂಮಿನ ಬಾಗಿಲು ತೆರೆದು ಹಾ ಎನ್ನರಸ, ಕೊಡು ನನಗೆ ಹರುಷ ಅಂತ ಹೇಳತಾಳಂತೆ. ಇದು ಕುಣಿಯುತ್ತಾ ಹೋಗುತ್ತಂತೆ.

ರಾಜ : ಭಲೆ! ಕತ್ತೆ ಆದರೂ ರಸಿಕ ಬಡ್ಡೀಮಗ ಕಣಯ್ಯ ಆ ಡಿಂಗ್‌ಡಾಂಗು; ಮತ್ತೆ ಆ ಶಿವ ಏನ್ಮಾಡ್ತಾನಂತೆ?

ಕಾರಭಾರಿ : ಪ್ರೇಮದ ಪದ ಹಾಡ್ತಾನಂತೆ.

ರಾಜ : ಅಯ್ಯಾ ಕಾರಭಾರಿ ಅವನ್ಯಾವನ್ನೋ ಭಾರಿ ಮಾಂತ್ರಿಕ ಕಣಯ್ಯ. ಗಂಡಸನ್ನ ಹೆಂಗಸನ್ನಾಗಿ ಮಾಡ್ತಾನೆ! ದೆವ್ವ ಭೂತ ಜೊತೆ ಸಲೀಸಾಗಿರತ್ತಾನೆ….

ಕಾರಭಾರಿ : ನಿಜ ಪ್ರಭು. ತಾವು ಹೇಳಿದ ಹಾಗೆ ಆತ ದೊಡ್ಡ ಮಾಂತ್ರಿಕನೆ.

ರಾಜ : ಆಯ್ಯಾ ಕಾರಭಾರಿ ನಿನ್ನನ್ನು ಹೆಂಗಸನ್ನಾಗಿ ಮಾಡಿದವನು ನನ್ನನ್ನು ಕತ್ತೆಯನ್ನಾಗಿ ಮಾಡಭೌದಲ್ಲವಾ?

ಕಾರಭಾರಿ : ಮಾಡಭೌದೋ ಏನೋ. ಆದರೆ ತಾವ್ಯಾಕೆ ಕತ್ತೆ ಆಗಬೇಕೋ ತಿಳೀತಿಲ್ಲ.

ರಾಜ : ಅದಕ್ಕೇ ನಿನಗೆ ದಡ್ಡ ಅನ್ನೋದು. ಮೊದಲು ಹೋಗಿ ಅವನ್ನ ಕರಕೊಂಬಾ.

ಕಾರಭಾರಿ : ಪ್ರಭು?

ರಾಜ : ಆಮೇಲೆ ಹೆಳತೀನಿ. ಮೊದಲು ಕರೆತಾ ಅವನ್ನ.