(ಶಿವ ಮತ್ತು ಗಜನಿಂಬೆ)
ಶಿವ : ನನ್ನ ಮಾತು ಕೇಳು.
ಗಜನಿಂಬೆ : ಕೇಳಲ್ಲ.
ಶಿವ : ಏನಂತ ತಿಳದೀ ನನ್ನ? ನಾನು ನಿನ್ನ ಗಂಡ.
ಗಜನಿಂಬೆ : ಕಾಯ್ದೆಶೀರ ನನ್ನ ಗಂಡ ಕತ್ತೆ, ನೀನಲ್ಲ.
ಶಿವ : ಹಾಗಿದ್ದರೆ ನಾನು ಯಾರು?
ಗಜನಿಂಬೆ : ಶಿವ.
ಶಿವ : ಹಟಹಿಡೀಬೇಡ. ನನ್ನ ದಕಡೆ ಒಂದು ಸಲ ನೋಡು.
ಗಜನಿಂಬೆ : ಎರಡು ಸಲಾನೂ ನೋಡೋದಿಲ್ಲ.
ಶಿವ : ದಯಮಾಡಿ ನನ್ನ ಮಾತು ಕೇಳು.
ಗಜನಿಂಬೆ : ದಯಮಾಡಿ ಕೇಳೋದಿಲ್ಲ.
ಶಿವ : ಸರಿ, ಇಲ್ಲೇ ಬಿದ್ಕೋ.
ಗಜನಿಂಬೆ : ಬಿದ್ದೊಳ್ಳೋದಿಲ್ಲ.
ಶಿವ : ಹಾಗಿದ್ದರೆ ಹೋಗು.
ಗಜನಿಂಬೆ : ಹೋಗನ್ನೋದಕ್ಕೆ ನೀ ಯಾರು? ನನ್ನಿಷ್ಟ ಬಂದಾಗ ಹೋಗ್ತೀನಿ.
ಶಿವ : ಕೊನೇ ಪಕ್ಷ ನನ್ನ ಮಾತು ಕೇಳು.
ಗಜನಿಂಬೆ : ಕೇಳು ಅನ್ನೋಕೆ ನೀ ಯಾರು? ನನ್ನಿಷ್ಟ ಬಂದರೆ ಕೇಳ್ತೀನಿ.
ಶಿವ : ಹಾಗಿದ್ದರೆ ನಾ ಹೇಳೋದಿಲ್ಲ.
ಗಜನಿಂಬೆ : ಯಾಕೆ ಹೇಳೋದಿಲ್ಲ? ದಯಮಾಡಿ ಹೇಳತಾ ಇರು.
ಶಿವ : ಇಷ್ಟ ಬರೋದವರೆದುರಿಗೆ ಯಾಕೆ ಹೇಳಬೇಕು.
ಗಜನಿಂಬೆ : ಇಷ್ಟ ಬಂದೇ ಬರತ್ತೆ, ನೀ ಹೇಳಿದರೆ.
ಶಿವ : ಮೊದಲು ಇಷ್ಟ ಬಂದರೇ ಹೇಳೋದು.
ಗಜನಿಂಬೆ : ಬಂದಿದೆ, ಅದೇನು ಹೇಳಿ ಅಂದ್ರೆ.
ಶಿವ : ಒಳಕ್ಕೆ ಹೋಗಿ ಭದ್ರಾವಾಗಿ ಬಾಗಿಲಿಕ್ಕಿಕೊಂಡು ಕೂತ್ಕೊ.
ಗಜನಿಂಬೆ : ಹೊರಗಡೆ ಇಲ್ಲೇ ಹೀಗೇ ಕೂತರೆ ಏನಾಗತ್ತೆ?
(ಅಷ್ಟರಲ್ಲಿ ದೂರದಿಂದ ಯಾರೋ ಓಡಿ ಬಂದು ಅಡಗುತ್ತಾರೆ. ಶಿವ ಅವನನ್ನು ಸರಿಯಾಗಿ ಮುಚ್ಚಿ ಬರುವನು.)
ಗಜನಿಂಬೆ : ನನಗೆ ನಿಜವಾಗಲೂ ಹೆದರಿಕೆ ಬರತ್ತೇರಿ.
ಶಿವ : ಮತ್ತೆ ಯಾಕೆ ತೌರಿಗೆ ಹೋಗಲಿಲ್ಲ?
ಗಜನಿಂಬೆ : ಹೋದರೆ ಕತ್ತೆ ಹೆಂಡತಿ ಬಂದಳು ಅಂತ ಅಕ್ಕಪಕ್ಕ ಮಕ್ಕಳು ನನ್ನ ಕಂಡು ಕುಣಿದಾಡುತ್ವೇರಿ.
ಶಿವ : ಈಗ ಸದ್ದಿಲ್ಲದೆ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಿರು. ನನ್ನ ಧ್ವನಿ ಕೇಳೋತನಕ ಬಾಗಿಲು ತೆಗೀಬೇಡ.
(ಗಜನಿಂಬೆ ಹೋಗುವಳು. ಪೋಲೀಸು ಬಂದು “ಮಾಜಿ ಮಂತ್ರಿ ಬಂದಿದ್ದನಾ ಈ ಕಡೆಗೆ?” ಎಂದು ಕೆಳುವನು. ಶಿವ ಇಲ್ಲವೆಂದು ಹೇಳುತ್ತಲೂ ಪೋಲೀಸರು ಹೋಗುತ್ತಾರೆ. ಪೋಲೀಸರು ದೂರ ಹೋದರೆಂದು ಖಾತ್ರಿಯಾದಾಗ ಆ ವ್ಯಕ್ತಿ ಎದ್ದು ಹೊರಗೆ ಬರುವನು)
ಮಂತ್ರಿ : ತುಂಬಾ ಉಪಕಾರವಾಯ್ತಪ್ಪ.
ಶಿವ : ನೀವು ಇಲ್ಲಿರೋದು ಅಪಾಯ ಸಾರ್.
ಮಂತ್ರಿ : ನನಗೂ ಗೊತ್ತು.
ಶಿವ : ಮಾಜಿ ಮಂತ್ರಿ ನೀವೇನಾ?
ಮಂತ್ರಿ : ಗೊತ್ತಾದರೆ ರಕ್ಷಣೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತೀಯಾ?
ಶಿವ : ಖಂಡಿತ ಇಲ್ಲ.
ಮಂತ್ರಿ : ಹೌದು ನಾನೇ ಮಾಜಿ ಮಂತ್ರಿ.
ಶಿವ : ನಿಮ್ಮನ್ನು ನೀವೇ ಈ ರೀತಿ ಅಪಾಯಕ್ಕೆ ಒಡ್ಡಿಕೊಳ್ಳೋದು ಒಳ್ಳೆಯದಲ್ಲ, ಇಲ್ಲಿಗ್ಯಾಕೆ ಬಂದಿರಿ ಸಾರ?
ಮಂತ್ರಿ : ನಿನ್ನನ್ನೇ ನೋಡೋಣಾಂತ ಬಂದ್ನಪ್ಪ.
ಶಿವ : ಹೇಳಿ ಸಾರ, ನಾನೇನು ಮಾಡಬಲ್ಲೆ?
ಮಂತ್ರಿ : ನಮ್ಮ ಕ್ರಾಂತಿಯೆಲ್ಲ ಹುಸಿಹೋಯ್ತು. ಈ ರಾಕ್ಷಸನ ಕೈಯಿಂದ ನಮಗಂತೂ ಮುಕ್ತಿ ಇಲ್ಲ. ನಿನ್ನ ಕತ್ತೆಗೆ ಬೈತೀನಿ ಅಂದ್ಕೋಬೇಡ. ನಿನ್ನ ಕತ್ತೆ ಮಂತ್ರಿ ಆಗಬೇಕಾದ್ದೆ. ಯಾಕಂದರೆ ಇಂಥ ರಾಜ ಇರೋವಲ್ಲಿ ಇನ್ನೆಂಥ ಮಂತ್ರಿ ಸಾಧ್ಯ? ಆದರೆ ಪಾಪ ಆ ಮೂಕಪ್ರಾಣಿ ಹೆಸರಲ್ಲಿ ಎಷ್ಟೊಂದು ತೆರಿಗೆ ಹಾಕಿದ್ದಾನೆ ಆ ರಾಕ್ಷಸ? ಜನ ಹ್ಯಾಗೆ ಬದುಕೋದು?
ಶಿವ : ಯಥಾ ಪ್ರಜಾ ತಥಾ ರಾಜ ಅಲ್ವೇ ಸಾರ?
ಮಂತ್ರಿ : ಅದೂ ನಿಜವೇ. ಹೋಗಲಿ ಬಿಡು, ಆಗೋ ಮಾತಲ್ಲ, ಹೋಗೋ ಮಾತಲ್ಲ. ಅದೆಲ್ಲಾ ಯಾಕೆ? ಕ್ರಾಂತಿಕಾರರು ಮೊದಲಿನಷ್ಟಿಲ್ಲ. ಕೆಲವರು ಜೇಲಲ್ಲಿ, ಕೆಲವರು ಸ್ವರ್ಗದಲ್ಲಿ ಇದ್ದಾರೆ. ಒಬ್ಬಿಬ್ಬರು ಉಳಿದಿದ್ದೀವಿ. ಇಂದಲ್ಲ ನಾಳೆ ನಮ್ಮನ್ನೂ ಮುಗಿಸ್ತಾನೆ. ಮುಗಿಸೋದೇ ಮೇಲು. ಜೊತೆಗಾರರೆಲ್ಲ ಹೋದಮೇಲೆ ನಾನೊಬ್ಬನೇ ಜೀವಂತವಾಗಿರೋಕೆ ನಾಚಿಕೆಯಾಗುತ್ತೆ. ನಿನ್ನ ಹತ್ತಿರ ಒಂದು ಸಣ್ಣ ಸಹಾಯ ಕೇಳೋದಕ್ಕೆ ಬಂದಿದ್ದನಪ್ಪ.
ಶಿವ : ಹೇಳಿ ಸಾರ ಏನ್ ಮಾಡಲಿ?
ಮಂತ್ರಿ : ನನ್ನ ಧೋಬಿ ಸ್ನೇಹಿತ ಒಬ್ಬ ಇದಾನೆ. ಮಕ್ಕಳೊಂದಿಗ, ಇಲ್ಲೀತನಕ ಕ್ರಂತಿ ಮಾಡಿ ಮಾಡಿ ಎಲ್ಲಾ ಕಳಕೋಂಡು ಪಾಪರ ಆಗಿದಾನೆ. ಅವನಿಗೇನಾದರೂ ಸಹಾಯ ಮಾಡು, ನಿನ್ನ ಕೈಲಿ ಸಾಧ್ಯವಿದ್ದರೆ.
ಶಿವ : ಏನ್ ಮಾಡಲಿ ಹೇಳಿ ಸಾರ?
ಮಂತ್ರಿ : ಅವನ ಹತ್ತಿರ ಒಂದು ಹೆಣ್ಣು ಕತ್ತೆ ಇದೆ. ರಾಧಾ ಅಂತ ಅದರ ಹೆಸರು. ಚೆನ್ನಾಗಿ ಮೈ ತುಂಬಿಕೊಂಡಿದೆ. ನಿನ್ನ ಡಿಂಗ್ಡಾಂಗ್ ಗೆ ದಿನಾಲು ಹೆಣ್ಣು ಕತ್ತೆ ಬೇಕಂತಲ್ಲ. ಅವನ ಕತ್ತೆ ಉಪಯೋಗಿಸಿ ಒಳ್ಳೆ ರೇಟು ಕೊಡು. ಬಡವಾ ಬದುಕಿಕೊಳ್ತಾನೆ.
ಶಿವ : ಈ ಕಡೆ ಬನ್ನಿ ಸಾರ ಯಾರೋ ಬಂದರು.
(ಮಂತ್ರಿ ಅಡಗುವನು. ಸಾಂಬ ಓಡಿ ಬರುವನು)
ಸಾಂಬ : ಎಷ್ಟು ಹುಡುಕೋದೋ ಮಗನೆ ನಿನ್ನ?
ಶಿವ : ಯಾಕಪ್ಪ?
ಸಾಂಬ : ಗುಟ್ಟಾಗಿ ಮಾತಾಡಬೇಕು. ಇಲ್ಲಿ ಯಾರಿಲ್ಲ ತಾನೆ?
ಶಿವ : ಇಲ್ಲ ಹೇಳು.
ಸಾಂಬ : ರಾಜ ಇವೊತ್ತೇನೊ ಉಪಾಯ ಮಾಡ್ತಿದಾನೆ ಕಣೊ.
ಶಿವ : (ಅಡಿಗಿದ್ದ ಮಂತ್ರಿಯನ್ನು ಕೈಯಿಂದ ಸೂಚಿಸಿ ಕಿವಿಯಲ್ಲಿ ಹೇಳಲಿಕ್ಕೆ ಸೂಚಿಸುವನು)
ಸಾಂಬ : ಏನಪ್ಪ ಅಂದರೆ (ಕಿವಿಯಲ್ಲಿ ಹೆಳುವನು)
ಶಿವ : ಅದ್ಯಾಕಂತೆ?
(ಸಾಂಬ ಕಿವಿಯಲ್ಲಿ ಹೇಳುವನು)
ಶಿವ : ಯಾವಾಗಂತೆಯೋ
(ಸಾಂಬ ಕಿವಿಯಲ್ಲಿ ಹೇಳುವನು)
ಶಿವ : ಎಷ್ಟೊತ್ತಿಗಂತೆ?
ಶಿವ : ಓಹೋ, ಇಲ್ಲಿಗೆ ಬಂತೋ? ಸ್ವಾಮಿ ಹೊರಗೆ ಬನ್ನಿ. ಇವೊತ್ತು ರಾತ್ರಿ ರಾಧೆಯನ್ನು ಕರಕೊಂಬರಲಿಕ್ಕೆ ನಿಮ್ಮ ಸ್ನೇಹಿತರಿಗೆ ಹೇಳಿ. ಸಾಧ್ಯವಾದರೆ, ಅಳಿದುಳಿದ ಕ್ರಾಂತಿಕಾರಿಗಳೂ ಜೊತೆಗಿರಲ್ಲಿ.
ಮಂತ್ರಿ : ಕ್ರಾಂತಿಕಾರಿಗಳು ಯಾರು ಉಳಿದಿಲ್ಲಪ್ಪ. ಉಳಿದ ಒಬ್ಬಿಬ್ಬರು ನನ್ನ ಮಾತು ಅರ್ಥವಾಗೋದಿಲ್ಲಾಂತ ನನ್ನ ಹತ್ತಿರ ಬರೋದೂ ಇಲ್ಲ.
ಸಾಂಬ : ಬೀರಯ್ಯ ಅಂತ ನಿಮ್ಮ ಶಿಷ್ಯ ಇದ್ದಾನಲ್ಲಾ.
ಮಂತ್ರಿ : ಅವನು ಸೋಮಾರಿ.
ಸಾಂಬ : ಅವನಿಗೆ ಹೇಳಿ: ಬೀರಯ್ಯ ಕೆರೆಕಟ್ಟೆ ಒಡೆಯೋದಕ್ಕೆ ಗುದ್ದಲಿ ಪಿಕಾಸಿ ತಗೊಂಬಾ ಅನ್ನಿ. ಬರತಾನೆ.
ಮಂತ್ರಿ : ಕೆರೆ ಕಟ್ಟೆ ಅಂದರೆ….?
ಸಾಂಬ : ನೀವು ಅಷ್ಟು ಹೇಳಿ ಸ್ವಾಮಿ….
ಮಂತ್ರಿ : ಸರಿಯಪ್ಪ.
Leave A Comment