(ರಂಗದ ಇನ್ನೊಂದು ಕಡೆಗೆ ರಾಜ, ಹೆಣ್ಣು ವೇಷದ ಕಾರಭಾರಿ ಹಾಗೂ ಸಾಂಬ ಬರುವರು. ರಾಜನಿಗೆ ಆಗಲೇ ಅರ್ಧ ಮೇಕಪ್ ಆಗಿದೆ. ಅವನನ್ನು ಕತ್ತೆ ಮಾಡೋದಕ್ಕೆ ಮೇಕಪ್ಪಿನಿಂದ ಏನು ಸಾಧ್ಯವೋ ಅದನ್ನೆಲ್ಲಾ ಮಾಡಿದ್ದಾರೆ. ಬಾಲ ಕಟ್ಟಿದ್ದಾರೆ. ಉಳಿದರ್ಧ ಇಲ್ಲೇ ಪೂರ್ತಿ ಮಾಡಲು ಬಂದಿದ್ದಾರೆ. )

ರಾಜ : ಇಲ್ಲಿಯ ಸೈನ್ಯದ ತುಕಡಿ ಬೇರೆ ದಕಡೆ ಕಳಿಸಿದೆಯಾ?

ಕಾರಭಾರಿ : ಓಹೋ.

ರಾಜ : ಡಿಂಗ್‌ಡಾಂಗ್?

ಕಾರಭಾರಿ : ಬಿಚ್ಚಿ ಊರ ಹೊರಗೆ ಓಡಿಸಿದೆ.

ರಾಜ : ಕಾವಲುಗಾರರು?

ಕಾರಭಾರಿ : ಅವರನ್ನು ಬೇರೆ ಕಡೆಗೆ ಕಳಿಸಿದ್ದೇನೆ. ಆಸುಪಾಸು ಯಾರೂ ಇಲ್ಲ ಪ್ರಭು. ಗಾಬರಿಯಾಗಿ ಗಜನಿಂಬೆ ಕೂಗಿದರೂ ಯಾರೂ ಕೇಳೋದಿಲ್ಲ.

ರಾಜ : ಗಾಬರಿಯಾಗಿ? ಯಾಕೆ ನಾನು ಡಿಂಗ್‌ಡಾಂಗ್ ಥರ ಕಾಣಿಸೋದಿಲ್ವಾ?

ಸಾಂಬ : ಓಹೋ. ಪೂರ್ತಿ ಡ್ರೆಸ್ ಹಾಕ್ಕೊಳಿ ಪ್ರಭು. ಡಿಂಗ್‌ಡಾಂಗೇನು, ಅವನಜ್ಜನ ಥರಾ ಕಾಣತೀರಿ.

ರಾಜ : ಅವನಜ್ಜ ಬೇಡ. ಅವನ ಹಾಗೆ ಕಾಣಿಸೋ ಹಾಗೆ ಮಾಡು ಸಾಕು.

ಸಾಂಬ : ಹಾಗಿದ್ದರೆ ಬನ್ನಿ.
(ರಾಜನ ಒಂದೊಂದೇ ಬಟ್ಟೆ ಕಳಚಿ ಬೆತ್ತಲೆ ಮಾಡಿ ಅವನಿಗೆ ಕತ್ತೆ ಉಡುಪನ್ನು ಹಾಕುವನು)

ರಾಜ : ಸ್ವಲ್ಪ ಬಾಲ ಬಾಚ್ರಯ್ಯ (ಬಾಚುವರು.)
ಕತ್ತಿನ ಕೂದಲು ಬಾಚ್ರಯ್ಯ (ಅದನ್ನೂ ಬಾಚುವರು)
ಕನ್ನಡಿ (ಕೊಡುವರು, ನೊಡಿಕೊಂಡು)
ಸೆಂಟ್ (ಹಚ್ಚುವರು)

ಸಾಂಬ : ಎಷ್ಟಂದರೂ ರಾಜಕಳೆ ಮುಚ್ಚೋದಕ್ಕೆ ಆಗೋದಿಲ್ಲ ನನ್ಮಗಂದು. ನೀವು ಪುಟ್ಟದ ಕತ್ತೆ ಪ್ರಭು.

ರಾಜ : ಗಜನಿಂಬೆ ಏನಂದುಕೊಳ್ತಾಳೊ.

ಸಾಂಬ : ಇವೊತ್ತು ಜಾಸ್ತಿ ಪ್ರೀತಿ ಮಾಡತಾಳೆ.

ಕಾರಭಾರಿ : ಪ್ರಭು ಇದೇ ಗಜನಿಂಬೆ ಬೆಡ್ ರೂಂ.

ಸಾಂಬ : ದೀಪ ಇನ್ನೂ ಉರೀತಿದೆ. ಗಜನಿಂಬೆ ಕಾಯ್ತಿದಾಳೆ ಪ್ರಭು.

ರಾಜ : ನನಗಿನ್ನು ಪ್ರಭು ಅನ್ನಬೇಡವೋ, ಡಿಂಗ್‌ಡಾಂಗನ್ನು, ಎಲ್ಲಾ ಸರಿಯಾಗಿದೆಯಾ ಅಂತ ನೋಡ್ರಯ್ಯ.

ಸಾಂಬ : ಪಸಂದಾಗಿದೆ.

ರಾಜ : ನೀನು ಅಲ್ಲಿ ಹೋಗಿ ಹಾಡು ಸುರು ಮಾಡು. ಹ್ಯಾಂಕರಿಸಲಾ? ಈ ಹಾಹಾ…. ಇರು ಇರು ನನ್ನ ಕೈ ಬೆರಳು ಕಾಣಿಸುತ್ತಲ್ಲಯ್ಯ?

ಸಾಂಬ : ನೀವು ಕೈ ಊರಿದರೆ ಹುಲ್ಲಿನಲ್ಲಿ ಕೈ ಬೆರಳು ಮುಚ್ಚುತ್ತೆ ಪ್ರಭು.

ರಾಜ : ಹೌದಲ್ಲವಾ? ನಾ ಈಗ ಹುಲ್ಲು ಮೇಯಬೇಕಾ?

ಸಾಂಬ : ಈಗ ಬೇಡ ಆಮೇಲೆ. ಡಾನ್ಸ್ ಸುರುಮಾಡಿ.

ರಾಜ : ಈ ಹಾಹಾಹಾ…. ಊಹೂ ಹೂ ಹಾ ಹಾ…. ಹ್ಯಾಗಿತ್ತು?

ಕಾರಭಾರಿ : ಅಬ್ಬಾ ನನಗೆ ರೋಮಾಂಚನವಾಯಿತು.

ಸಾಂಬ : ಏನಂದಿ?

ಕಾರಭಾರಿ : ಛಳಿ ಆಗತಾ ಇದೆ.

ರಾಜ : ನಾನು ಹ್ಯಾಂಕರಿಸಿದ್ದು ಹ್ಯಾಗಿತ್ರಯ್ಯಾ ಅಂದ್ರೆ….

ಸಾಂಬ : ಸರಿಹೊಗಲಿಲ್ಲ. ಇನ್ನಷ್ಟು ದನಿ ಏರಿಸಿ.

ರಾಜ : ಈ ಹಾಹಾಹಾ…. ಈ ಹಾಹಾಹಾ

ಸಾಂಬ : ಸೊಂಟ ಸೆಟೆಯಬೇಕು. ಎಲ್ಲಿ ಸ್ವಲ್ಪ ಕುಣೀರಿ ನೋಡೋಣ. (ರಾಜ ಕುಣಿಯುವನು) ಹ್ಯಾಂಕರಿಸಿಕೊಂಡು ಕುಣಿಯಬೇಕು. (ರಾಜ ಹಾಗೇ ಮಾಡುವನು) ಇದು ನೋಡಪ್ಪಾ ಡಿಂಗ್‌ಡಾಂಗ್ ಅಂದರೆ. ಏ ನೀ ಹಾಡು.

ಕಾರಭಾರಿ : ಛಳಿ ಛಳಿ ತಾಳೆನು ಛಳಿಯಾ ಈಹಾ

ಶಿವ : ಓಹೋ ಸುರುವಾಯ್ತು ಆಟ. ಈ ಧೋಬಿ ಬರಲಿಲ್ವೆ.

ರಾಜ : ಈ ಹಾಹಾಹಾ…. ಈ ಹಾಹಾಹ.
(ಎನ್ನುತ್ತಾ ಮುಂದೆ ಬರುತ್ತಾನೆ. ಶಿವ ಡಿಂಗ್‌ಡಾಂಗನ್ನು ಹುಡುಕುತ್ತಿರುವವನಂತೆ)

ಶಿವ : ಯಾರದು,? ನನ್ನ ಮಹಾಸ್ವಾಮಿಗಳಾದ ಡಿಂಗ್‌ಡಾಂಗ್ ಸಾಹೇಬರೇನು? (ರಾಜ ಸುಮ್ಮನಿರುವನು)

ಶಿವ : ಆಗಿರಲಾರದು. ಡಿಂಗ್‌ಡಾಂಗ್ ಸಾಹೇಬರಾಗಿದ್ದರೆ ನನ್ನನ್ನು ಕಂಡ ತಕ್ಷಣವೇ ಪ್ರೀತಿಯಿಂದ ಹ್ಯಾಂಕರಿಸುತ್ತಿದ್ದರು.

ರಾಜ : ಈ ಹಾಹಹ…. ಈ ಹಾಹಹ…. ಈ ಹಾಹಹ….

ಶಿವ : ಡಿಂಗ್‌ಡಾಂಗ್  ಸಾಹೇಬರಾಗಿದ್ದರೆ, ನನ್ನನ್ನು ಕಂಡ ತಕ್ಷಣವೇ ಬಾಲ ನಿಗುರಿಸಿ ಅಲುಗುತ್ತಿದ್ದರು (ರಾಜ ಹಾಗೆ ಮಡುವನು)

ಶಿವ : ಎಲ್ಲಿ ಪರಿಮಳದ ಸುವಾಸನೆ ಇಲ್ಲವಲ್ಲ. (ರಾಜ ಎರಡೂ ಕೈ ಎತ್ತಿ ಬಗಲು ತೋರಿಸುವನು)

ಶಿವ : ಯಾಕಿವೊತ್ತು ಆನಂದದಿಂದ ಕುಣಿದಾಡುತ್ತಿಲ್ಲವಲ್ಲ? (ರಾಜ ಹಾಗೇ ಮಾಡುವನು)

ಶಿವ : ಆಹಾ ಇವರಪ್ಪ ನನ್ನ ಸ್ವಾಮಿ ಡಿಂಗ್‌ಡಾಂಗ್  ಸಾಹೇಬರು. ಇದರಲ್ಲಿ ಸಂಶಯವೇ ಇಲ್ಲ. ನಾನು ತಮ್ಮ ನಮ್ರ ಸೇವಕ ಶಿವಣ್ಣ ಸ್ವಾಮಿ.

ರಾಜ : ಈ ಹಾಹಹ….

ಶಿವ : ಮಹಾಸ್ವಾಮಿ ಸೇವಕನ ಕಣ್ಣು ತಪ್ಪಿಸಿ ಕೊಟ್ಟಿಗೆಯಿಮದ ಕನ್ಮರೆಯಾಗುವುದು ತಮಗೆ ಶೋಭಿಸುವುದಿಲ್ಲವೆಂದು ಹೇಳಲೇಬೇಕಾಗಿದೆ. (ರಾಜ ಸಾರಿ ಎಂಬಂತೆ ತಲೆ ಕೆಳಗೆ ಹಾಕುವನು)

ಶಿವ : ಇಡೀ ಊರಿನ ತುಂಬಾ ತಮ್ಮನ್ನು ಹುಡುಕಿ ಬಂದೆ ಸ್ವಾಮಿ ಇಗೊ ತಗೋಳ್ಳಿ, ನಿಮ್ಮ ಪ್ರೀತಿಯ ಈರುಳ್ಳಿ ಮತ್ತು ಮೆಣಸಿನ ಕಾಯಿ ತಿನ್ನಿ. (ರಾಜ ಗಾಬರಿಯಿಂದ ಶಿವನ ಕಡೆಗೆ ನೋಡುವನು)

ಶಿವ : ಇದೇನು ಪ್ರೀತಿ ಮಾಡೋದಕ್ಕೆ ಹೊರಟಾಗೊಮ್ಮೆ ಶಕ್ತಿ ಬರತ್ತದೆ ಅಂತ ತಾವು ಈರುಳ್ಳಿ ಮೆಣಸಿನಕಾಯಿ ತಿನ್ನುತ್ತಿರಲಿಲ್ಲವೇ ಸ್ವಾಮಿ? ಅದೇಕೆ ಈವೊತ್ತು ತಿನ್ನುತ್ತಿಲ್ಲ? ಅಥವಾ ಇದು ನಮ್ಮ ಡಿಂಗ್‌ಡಾಂಗ್ ಸಾಹೇಬರು ಆಗಿರಲಿಕ್ಕಿಲ್ಲವೆ? (ರಾಜ ಗಾಬರಿಯಿಂದ ತಿಂದು ಬಾಯಿಗೆ ಖಾರ ಹತ್ತಿ ಒದ್ದಾಡುವನು)

ಶಿವ : ಇದಪ್ಪ ನಮ್ಮ ಯಜಮಾನರೂ ಅಂದರೆ. ಈರುಳ್ಳಿ ಮೆಣಸಿನ ಕಯಿ ಹ್ಯಾಗಿತ್ತು ಪ್ರಭು.

ರಾಜ : ಈ ಹಾಹಹ….

ಶಿವ : ಇದೇನು ಮಹಾಸ್ವಾಮಿಗಳು ಇಷ್ಟೊತ್ತಿನಲ್ಲಿ ತಮ್ಮ ಮುದ್ದಿನ ಮಡದಿಯ ಜೊತೆ ಮಲಗಿರಬೇಕಿತ್ತಲ್ಲ.

ರಾಜ : (ಹೌದೆಂಬಂತೆ ಕತ್ತು ಹಾಕಿ) ಈ ಹಾಹಹ….

ಶಿವ : ಮಹಾಸ್ವಾಮಿಗಳಿಗೆ ಯಾಕೆ ನಿದ್ದೆ ಬರುತ್ತಿಲ್ಲ? ಓಹೋ ತಿಳಿಯಿತು. ಈ ಸೇವಕನಿಗೆ ತಮ್ಮ ಗುಟ್ಟುಗಳೆಲ್ಲಾ ಗೊತ್ತು ಸ್ವಾಮಿ. ಗಾಬರಿಯಾಗಬೇಡಿ. ನಿಮ್ಮ ರಾಣಿಯವರಿಗೆ ನಾನು ಹೇಳೋದಿಲ್ಲ. ತಾವು ತಪ್ಪಿಸಿಕೊಂಡು ಊರಲ್ಲಿ ಹೋದದ್ದು ಆ ಧೋಬಿ ಮನೆಯ ರಾಧೆಗಾಗಿ ಅಲ್ಲವೆ ಸ್ವಾಮಿ?

ರಾಜ : (ಹೌದೆಂಬಂತೆ) ಈಹಾ.

ಶಿವ : ಅವಳು ಅಷ್ಟೊಂದು ಚೆಲುವೆಯಾ ಸ್ವಾಮಿ?

ರಾಜ : (ನಾಚಿಕೊಂಡಂತೆ) ಈ ಹೀ ಹೀ ಹೀ….

ಶಿವ : ತಾವು ಆ ಕಡೆ ಹೋದಾಗ ರಾಧೆ ಈ ಕಡೆ ಬಂದಿದ್ದಳು ಸ್ವಾಮಿ.

ರಾಜ : (ನಾಚಿ) ಹಿ ಹಿ ಹಿ….

ಶಿವ : ತಮ್ಮ ಆಸೆ ಈಡೇರಿಸಲಿಕ್ಕೆ ಈ ನಮ್ರ ಸೇವಕ ಇಲ್ಲವೇ ಸ್ವಾಮಿ? ಎಲ್ಲಿ ರಾಧಾ ಅಂತ ಒಂದು ಭಾರಿ ಹೇಂಕರಿಸಿ ನೋಡೋಣ.

ರಾಜ : ಹಿ ಹಾ ಹಾ ಹಾ ಹಾ
(ಇನ್ನೊಂದು ಕಡೆಯಿಂದ ರಾಧೆ ಹೇಂಕರಿಸುವುದು. ರಾಜ ಬೆರಗಾಗಿ ಶಿವನನ್ನು ನೋಡುತ್ತಿರುವಂತೆ, ಕೈಯಲ್ಲಿ ಹಗ್ಗ ಮಚ್ಚು ಹಿಡಿದುಕೊಂದು ರಾಧೆಯನ್ನು ತರುವರು. ಬೀರಯ್ಯ ಈಗ ನೇತೃತ್ವ ವಹಿಸಿದ್ದಾನೆ.)

ಶಿವ : ತಮಗಾಗಿ ರಾಧೆಯನ್ನು ತಂದಿದ್ದಾರೆ ಸ್ವಾಮಿ.
(ರಾಜ ತಪ್ಪಿಸಿಕೊಂಡು ಓಡಲೆತ್ನಿಸುವನು. ಬೀರಯ್ಯ ರಾಜನ ಕತ್ತಿಗೆ ಹಗ್ಗ ಹಾಕಿ ಹಿಡಿದುಕೊಳ್ಳುವನು)

ಶಿವ : ಹಾಗೆಲ್ಲ ಓಡಬೇಡಿ ಸ್ವಾಮಿ. ರಾಧೆ ನಿಮ್ಮ ವಿರಹವೇದನೆಯಿಂದ ತುಂಬಾ ನೊಂದಿದ್ದಾಳೆ. ಎಲ್ಲಿ ಹಗ್ಗ ಮಚ್ಚು ತಂದಿದ್ದೀರಾ?

ಬೀರಯ್ಯ : ತಂದಿದ್ದೀವಿ.

ಶಿವ : ನೋಡಿ ಡಿಂಗ್‌ಡಾಂಗ್ ಸಾಹೇಬರು ಹತ್ತೋವಾಗ ರಾಧೆ ಬಾಲ ಮುಚ್ಕೋ ಬಾರದು ನರಳಬಾರದು, ಒದರಬಾರದು. ಹಾಗೇನಾದರೂ ಮಾಡಿದರೆ ನಿಮಗೆ ಕೊಡೋ ಹಣದಲ್ಲಿ ಮೂರನೇ ಒಂದು ಭಾಗ ಕಟ್. ಆಗಬಹುದೋ?
ಧೋಬಿ : ಆಗಬಹುದು ಸ್ವಾಮಿ.

ಶಿವ : ಹತ್ತಿರ ಮೇಲೆ ನಮ್ಮ ಸಾಹೇಬರು ಚಿತ್ತವನ್ನು ಏಕಾಗ್ರಗೊಳಿಸಿ ತುಸು ಹೊತ್ತು ಗದ್ದ ಊರುತ್ತಾರೆ. ಆ ಸಮಯದಲ್ಲಿ ನಿಮ್ಮ ರಾಧೆ, ಅಕ್ಕಪಕ್ಕ ಹಿಂದೆ ಮುಂದೆ ಸರಿದಾಡಬಾರದು. ಸರಿದರೆ ಇನ್ನೊಂದು ಭಾಗ ಕಟ್.

ಬೀರಯ್ಯ : ಆಗಬಹುದು. ಅದಕ್ಕೇ ಸ್ವಾಮಿ, ಕೋಲು ಹಗ್ಗ, ಹಂಟರ‍, ಕ್ಲಬ್ಬು ಎಲ್ಲಾ ತಂದೀವಿ.

ಶಿವ : ನಮ್ಮ ಸಾಹೇಬರು ಮಧ್ಯೆ ಮಧ್ಯೆ ದಶವಿಧ ಚುಂಬನ ಕೊಡುತ್ತಾರೆ ಅಥವಾ ಕಚ್ಚುತ್ತಾರೆ. ನಖಾಗ್ರದಿಂದ ದಶವಿಧ ತಿವೀತಾರೆ. ಆವಾಗೆಲ್ಲ ನಿಮ್ಮ ರಾಧೆ ಸಹಕರಿಸಬೇಕು. ತಪ್ಪಿದರೆ ಹಣದ ಕೊನೆಭಾಗವೂ ಕಟ್ಟಾಗುತ್ತೆ.

ಬೀರಯ್ಯ : ಅವಳೇನಾರ ಅಂಗೂ ಇಂಗೂ ಮಾಡ್ಲಿ. ಅವಳನ್ನು ಇಲ್ಲೇ ಚಚ್ಚಿಹಾಕಿ ಖೈಮ ಮಾಡ್ತೀನಿ. ನೋಡಿ ಮಚ್ಚೂ ತಂದೀನಿ.

ಶಿವ : ರಾಧೆಗೆ ಗೊನೋರಿಯಾ ವಗೈರೆ ರೋಗ ಇಲ್ಲ ತಾನೆ?
ಧೋಬಿ :  ಇಲ್ಲ ಸ್ವಾಮಿ ಡಾಕ್ಟರ‍ ಸರ್ಟಿಫಿಕೇಟ್ ಇದೆ.

ಶಿವ : (ರಾಜನಿಗೆ) ನಮ್ಮ ಕೆಲಸ ಮುಗೀತು ಸ್ವಾಮಿ, ಇನ್ನು ತಮ್ಮ ಕೆಲಸ. ( ಮಧ್ಯೆ ರಾಜ ಅನೇಕ ಬಾರಿ ತಪ್ಪಿಸಿಕೊಂಡು ಓಡಲು ಪ್ರಯತ್ನಸಿದ್ದಾನೆ. ಇವರು ಬಿಟ್ಟಿಲ್ಲ. ಕತ್ತೆಯನ್ನಾಗಲೇ ಕಟ್ಟಿ ಹಾಕಿದ್ದಾರೆ. ಎಲ್ಲರೂ ಸುತ್ತ ನಿಂತು ಹೋಲಿ ಹೋಲಿ ಹೋಲಿ ಎಂದು ಹುರುಪು ಕೊಡುತ್ತಾರೆ. ರಾಜ ತಪ್ಪಿಸಿಕೊಂಡು ಹೊರಟಾಗೊಮ್ಮೆ ಅಲ್ಲಿದ್ದವರು ತಳ್ಳಿ ಕ್ರೂರವಾಗಿ ಹೊಡೆಯುತ್ತಾರೆ. ಇದು ಬಹಳ ಹೊತ್ತಿನತನಕ ನಡೆದು ರಾಜನ ವೇಷಭೂಷಣ ಹರಿದು ಚಿಂದಿಯಾಗಿದೆ. ಉಳಿದವರು, ವಿಜಯೋನ್ಮಾದ ಮತ್ತು ಸಂತೋಷದಿಂದ ಇನ್ನಷ್ಟು ಹಿಂಸೆ ಕೊಡುತ್ತಿದ್ದಾರೆ.)
ಧೋಬಿ : ಅದೇನು ಹೊಸಾ ತೆರಿಗೆ ಅಂತ ತಿಳಿದೀಯೇನೋ ಮಗನೆ….

ರಾಜ : ಬ್ಯಾಡ್ರೋ ನಾ ನಿಮ್ಮ ರಾಜ ಕಣ್ರೋ ಕಾಪಾಡ್ರೋ.

ಬೀರಯ್ಯ : ಈ ಕತ್ತೆ ಧಿಮಾಕನ್ನ ನೋಡ್ರಯ್ಯ ನಾನೇ ರಾಜ ಅಂತದೆ! ನಮ್ಮ ರಾಜರಿಗೆ ಅವಮಾನ ಮಾಡತೀಯೇನೋ ಕತ್ತೆ. (ಹೊಡೆಯುವರು, ರಾಜ ತಪ್ಪಿಸಿಕೊಂಡು ಓಡುವನು. ಎಲ್ಲರೂ ಬೆನ್ನು ಹತ್ತುವರು. ಅಂತೂ ಭಾಗದಲ್ಲಿ ಗಣೇಶನೊಬ್ಬನನ್ನು ಹೊರತುಪಡಿಸಿ ಎಲ್ಲಾ ಪಾತ್ರಧಾರಿಗಳು ರಾಜನನ್ನು ಹಿಡೀರಿ ಹಿಡೀರಿ ಎಂದು ಓಡಿ ಬರುತ್ತಾರೆ. ರಾಜ ಕೊನೆಗೆ ದೂರದಲ್ಲಿ ಸೀಮೆ ಆಚೆಗೆ ನಿಂತು)

ರಾಜ : ನನ್ನ ಬಿಡ್ರೋ. ನಾ ನಿಮ್ಮ ರಾಜ ಅಲ್ಲವೇನ್ರೋ? ಪ್ರಜೆಗಳು ಹ್ಯಾಗಿರತ್ತಾರೋ ಹಾಗಲ್ಲವೇನ್ರೋ, ಒಬ್ಬ ರಾಜ ಇರೋದು? ನಿಮ್ಮ ಯೋಗ್ಯತೆ ಹಾಗಿತ್ತು ಅದಕ್ಕೇ ನಾ ಹೀಗಿದ್ದೇನೆ ಕಣ್ರೋ. ನಾ ದೇಶ ಬಿಟ್ಟು ಎಲ್ಲಾದ್ರೂ ಓಡಿ ಹೋಗ್ತೇನೆ ಬಿಡ್ರೋ. ಇನ್ನೊಂದು ಸಲ ಈ ದೆಶದ ಕಡೆಗೆ ತಲೆ ಹಾಕೋದಿಲ್ಲ. ಜೀವದಾನ ಮಾಡ್ರೋ.
(ಆದರೂ ಜನ ಕಿರಚಿ ಅವನ ಕಡೆ ಕಲ್ಲು ಎಸೆಯುತ್ತಾರೆ. ರಾಜ ಓಡಿ ಹೋಗುತ್ತಾನೆ)

ಮಂತ್ರಿ : ಸಧ್ಯ ಪೀಡೆ ತೊಲಗಿತು.
ಧೋಬಿ : ಕ್ರಾಂತಿಕಾರಿ ಮಂತ್ರಿಗಳಿಗೆ ಜಯವಾಗಲಿ.

ಮಂತ್ರಿ : ಎಲ್ಲರಿಗೂ ಜಯ ಆಗಿದೆ. ಈ ಜಯದ ರೂವಾರಿ ನಮ್ಮ ಶಿವ ಮತ್ತು ಸಾಂಬ. ಸಾಂಬಶಿವರಿಗೆ ವಂದನೆ ಹೇಳಿ.

ಶಿವ : ಇನ್ನು ಮೇಲೆ ಯಾರು ಸ್ವಾಮಿ ರಾಜರು? ಅವರು ಯಾರಿದ್ರೂ ಅವರಲ್ಲಿ ನನ್ನದೊಂದು ವಿನಂತಿ ಇದೆ.

ಮಂತ್ರಿ : ರಾಜರ ಸಹವಾಸ ಸಾಕು ಸ್ವಾಮಿ. ನಮ್ಮ ನಾವೇ ಚುನಾವಣೆ ಮಡಿಕೊಂಡು ಆಲಿಕೊಳ್ಳೋಣ. ನಾವೆಲ್ಲರೂ ಇಲ್ಲಿ ಸೇರಿದ್ದೇವಾದ್ದರಿಮದ ನಿನ್ನ ಆಶೆ ಹೇಳ ಬಹುದು.

ಶಿವ : ಇನ್ನೇನಿಲ್ಲ ಸ್ವಾಮಿ. ಗಜನಿಂಬೆಯ ಮದುವೆ ಕತ್ತೆ ಜೊತೆಗಾದರೂ ನಾನೇ ಅವಳ ಜೊತೆಗಿದ್ದೆ. ದಯವಿಟ್ಟು ಆ ಕತ್ತೆಯಿಂದ ಅವಳನ್ನು ಬಿಡಿಸಿ ನನಗೆ ಮದುವೆ ಮಾಡಿಕೊಡಬೇಕೂಮತ ಪ್ರಾರ್ಥನೆ.

ಮಂತ್ರಿ : ಓಹೋ ಅಗತ್ಯವಾಗಿ. (ಮಂತ್ರಿ ಇಬ್ಬರ ಕೈ ಕೂಡಿಸುವನು. ಎಲ್ಲರೂ ಚಪ್ಪಾಳೆ ದತಟ್ಟುವರು. ಗಣೇಶ ಬರುವನು.)

ಗಣೇಶ : ಎಷ್ಟು ಹುಡುಕೋದ್ರಯ್ಯ ನಿಮ್ಮನ್ನ?

ಶಿವ : ಯಾಕೆ ದೇವರು ?

ಗಣೇಶ : ಎಲ್ಲಯ್ಯ ನಿನ್ನ ತಂದೆ. (ಸಾಂಬ ಎಲ್ಲಾ ಜನರನ್ನು ಸರಿಸಿ ಹೊರಬಂದು ಗಣೇಶನಿಗೆ ಕೈ ಮುಗಿಯುವನು)

ಸಾಂಬ : ನಿನ್ನ ಪಾದ ದರ್ಶನದಿಂದ ಪುನೀತನಾದೆ ಪ್ರಭು.

ಗಣೇಶ : ಅದಿರಲಯ್ಯ ಮೊದಲು ಆ ಮುತ್ತೆಲ್ಲಿದೆ ತಂದುಕೊಡು.

ಸಾಂಬ : ಯಾವ ಮುತ್ತು ದೇವರು?

ಗಣೇಶ : ಪರವಾಗಿಲ್ಲಯ್ಯ ನೀನು! ಬಾಯಲ್ಲಿಟ್ಟುಕೊಂಡ್ರೆ ಹೆಂಗ್ಸಾಗ್ತಾರಲ್ಲ ಆ ಮುತ್ತು ಕೊಡಯ್ಯಾ ಅಂದ್ರೆ.

ಸಾಂಬ : ಕೊಡಲೇಬೇಕಾ ದೇವರೂ?

ಗಣೇಶ : ಯೋ ಅದು ನಂದಲ್ಲಯ್ಯ ನಮ್ಮಪ್ಪಂದು. ಆ ಮುತ್ತು ಕೊಡದೇ ಇದ್ದದ್ದಕ್ಕೆ ನಮ್ಮಪ್ಪ ನನಗೇನಂದ ಗೊತ್ತಾ?

ಸಾಂಬ : ಏನಂದ್ರು ದೇವರೂ?

ಗಣೇಶ : ಮಗನೇ ಆ ಮುತ್ತನ್ನು ಹ್ಯಾಗ್ ಹ್ಯಾಗೆ ಉಪಯೋಗಿಸ್ತ ಇದ್ದೀಯೋ! ಅದಕ್ಕೇ ನಿನಗೆ ಭಕ್ತರು ಕಮ್ಮಿ  ಆಗತಿರೋದು ಅಂತ ನನ್ನನ್ನೇ ಮಿಸ್ಟೇಕ್ ಮಾಡಿ ಕೊಂಡಿದ್ದಾನೆ.

ಸಾಂಬ : ಹಾಗಾದರೆ ಇಕಾ ಈಗಲೇ ಕೊಟ್ಟೆ.
(ಹೋಗಿ ಕಾರಭಾರಿಯನ್ನು ಎಳೆದು ತರುವನು) ಬಾಯಲ್ಲಿದೆಯಲ್ಲಾ ಆ ಮುತ್ತನ್ನು ಕೊಡು.

ಕಾರಭಾರಿ : ಅದಾ? ಅದಿಲ್ಲವಲ್ಲ.

ಸಾಂಬ : ಮುಚ್ಕೊಂಡು ಸುಮ್ನೆ ಕೊಡು.

ಕಾರಭಾರಿ : ಇಲ್ಲಾ ಮಾರಾಯಾ. ಮೊದಮೊದಲು ನೀ ಹೋದ ಮೇಲೆ ಬಾಯಿಂದ ಹೊರಗೆ ತೆಗೀತಿದ್ದೆ. ಆಮೇಲಾಮೇಲೆ ನಿನ್ನ ಸಹವಾಸ ಜಾಸ್ತಿ ಆಯ್ತು ನೋಡು, ಖಾಯಂ ನುಂಗಿಬಿಟ್ಟೆ.

ಸಾಂಬ : ಅಯ್ಯೋ ದೇವರೆ ಗಣೇಶದೇವರಿಗೆ ನಾ ಏನು ಹೇಳಲಿ?

ಶಿವ : ದೇವರು ತಮ್ಮ ದಯದಿಂದ ಇಡೀ ದೇಶಕ್ಕೆ ಒಳ್ಳೇದಾಗಿದೆ. ನನಗೂ ಒಳ್ಳೇದಾಗಿದೆ.

ಸಾಂಬ : (ಕಾರಭಾರಿಯ ಕೈ ಹಿಡಿದು) ನನಗೂ ಒಳ್ಳೇದಾಗಿದೆ ಸ್ವಾಮಿ.

ಶಿವ : ನಿನಗೆ ಪ್ರಾರ್ಥನೆ ಮಾಡ್ತೀವಿ. ನಮಗೆಲ್ಲಾ ಇನ್ನೂ ಒಳ್ಳೇದಾಗಲಿ ಅಂತ ಆಶೀರ್ವಾದ ಮಾಡಿ.

ಗಣೇಶ : ಸ….ರಿ.

ಸಾಂಬ : ಅಂಧಾಂಗೆ ಡಿಂಗ್‌ಡಾಂಗೆಲ್ಲಿ.

ಗಣೇಶ : ದೇವಸ್ಥಾನದ ಹತ್ತಿರ ಬಂದಿತ್ತು ಮತ್ತೆ ಚಿತ್ರ ಮಾಡಿಬಿಟ್ಟೆ.

ಶಿವ : ಸಧ್ಯ, ಬನ್ನಿ ಎಲ್ಲರೂ ಗಣೇಶ ದೇವರಿಗೆ ಪ್ರಾರ್ಥನೆ ಸಲ್ಲಿಸೋಣ.
(ಎಲ್ಲರೂ ರಂಗದ ಮುಂಭಾಗಕ್ಕೆ ಬಂದು ಸಾಲಾಗಿ ನಿಲ್ಲುವರು. ರಾಜನಾಗಿದ್ದವನೂ, ಕತ್ತೆ ಮೇಕಪ್ ತೆಗೆದು ಬರುವನು.)

ಶಿವ : ನೀನು ದೇಶ ಬಿಟ್ಟು ಹೊಗತೀನಂದೆ. ಮತ್ತೆ ಯಾಕಯ್ಯಾ ಬಂದೆ?

ರಾಜ : ನಾನು ನಟ ಕಣಯ್ಯ.
ಎಲ್ಲರೂ : ಶ್ರೀ ಗಜವದನಾ….