(ಊರ ಹೊರಗಿನ ಗಣೇಶ ದೇವಸ್ಥಾನ ಮತ್ತು ಅದರ ಗರ್ಭಗುಡಿ. ಪೀಠದಲ್ಲಿ ದೇವರಿಲ್ಲ, ಸಾಂಬ ಮತ್ತು ಶಿವತಂದೆ, ಮಗಇದ್ದಾರೆ. ನೋಡಿದರೆ, ಇಬ್ಬರೂ ಆಗಲೇ ಸಾಕಷ್ಟು ಜಗಳಾಡಿದ್ದಾರೆಂದು ತಿಳಿಯುತ್ತದೆ. ಸಾಂಬ ಮೆಲ್ಲಗೆ ಹೆಂಡ ತೆಗೆಯುತ್ತಾನೆ.)

ಶಿವ : ಹೆಣ್ಣು, ಹೆಂಡ ಸಿಕ್ಕರಾಯ್ತು, ಯಾರ ನೆನಪೂ ಇರೋದಿಲ್ಲ ನಿನಗೆ, ಇದು ದೇವಸ್ಥಾನ. ಇಲ್ಲಾದರೂ ಹೆಂಡ ಬಿಡಬಾರದೆ?

ಸಾಂಬ : ದೇವರಂಥ ದೇವರಿಗೂ ಬಾಯಾರಿಕೆ ಇರುತ್ತದಯ್ಯಾ, ಮನುಷ್ಯರಿಗ್ಯಾಕೆ ಬೇಡ ಹೇಳು, ಇದು ದೇವರಿಗೂ ಗೊತ್ತಿದೆ. ದೇವರ ಪರ ವಕೀಲಿ ಮಾಡೋದಕ್ಕೆ ಬಂದ ದೇವರ ಚೇಲಾ! “ಹೆಂಡದ ಭಂಡ” ಅಂತ ನೀನೇ ಬಿರುದು ಕೊಟ್ಟಿದ್ದೀಯಲ್ಲ, ಆ ಬಿರುದಿಗಾದರೂ ಬೆಲೆ ಬೇಡವೇನೋ ಮಗನೇ?

ಶಿವ : ನನಗೆ ಮಗನೇ ಅನ್ನಬೇಡ ಕೋಪ ಬರುತ್ತೆ. ಅಪ್ಪ ಅಂತ ಬೇಕಾದರೆ ನೀ ಅಂದುಕೊ; ನಾ ಅನ್ನೋದಿಲ್ಲ. ಮಗನಿಗಿಂತ ಮುಂಚೆ ತನಗೇ ಮದುವೆ ಬೇಕು ಅಂತ ಯಾವಪ್ಪನೂ ಹೇಳೋದಿಲ್ಲ.

ಸಾಂಬ : ಹಾಗೆ ನಾನೂ ಹೇಳಬಹುದು ಕಣೋ ಮಗನೇ: ‘ನಿನ್ನಮ್ಮ ಸತ್ತೋದ ಮೇಲೆ ಅಯ್ಯೋ ನನ್ನ ತಂದೆ ಒಂಟಿ ಆದ. ಪಾಪ ಚಳಿಚಳಿ ಅಂತ ನಡಗತಾನೆ. ಆತನಿ ಗೊಂದು ಜೊತೆ ಬೇಕು’ – ಅಂತ ಒಂದು ಸಲವಾದರೂ ನಿನ್ನ ಬಾಯಿಂದ ಮಾತು ಬಂತ? ಬಾಯಿ ತೆಗೆದಾಗೊಮ್ಮೆ ನಿನಗೇ ಮದುವೆ ಬೇಕಂತಿ. ಏನೋ ಮಹಾ ವಯಸ್ಸಾಗಿರೋದು ನಿನಗೆ? ಮಗನೇ ನಿನ್ನ ವಯಸ್ಸಲ್ಲಿ ನಾನಿನ್ನೂ ಚಡ್ಡೀ ಹಾಕ್ತಿರಲಿಲ್ಲ ಗೊತ್ತ? (ಕುಡಿಯುವನು)

ಶಿವ : ಮುಖ್ಯ ವಿಷಯ ಹೇಳಿಬಿಡ್ತೀನಿ ಕೇಳಪ್ಪ; ನೀನು ನನ್ನ ಮದುವೆಗೆ ಅಡ್ಡಿ ಮಾಡೋದನ್ನ ನಾನು ಸಹಿಸೋದಿಲ್ಲ.

ಸಾಂಬ : ನಾನೆಲ್ಲೋ ಅಡ್ಡಿ ಮಾಡಿದೆ?

ಶಿವ : ಚಿಕನಳ್ಳಿ ಬೀಗರು ನನಗೆ ಹುಡಿಗೀನ ಕೊಡ್ತೀನಿ ಅಂತ ಮುಂದೆ ಬಂದಾಗ ಆ ಬೀಗತನ ಮುರಿದವರುಯಾರು, ನೀನೇ ಅಲ್ಲವ?

ಸಾಂಬ : ನಾನ್ಯಾಕಯ್ಯಾ ಮುರೀಲಿ? ಮಗನಿಗೆ ಮದುವೆ ಆದರೆ ತಂದೆಗೆ ಸಂತೋಸ ಆಗಲ್ಲವೇನೋ? ನಿನಗೆ ಹೆಂಡತಿ ಆಗೋಳು ನನಗೆ ಸೊಸೆ ಆಗಲ್ಲವೇನೋ?

ಶಿವ : ಹಾಂಗಿದ್ದರೆ ಚಿಕನಳ್ಳಿಯವರು ಇದ್ದಕ್ಕಿದ್ದ ಹಾಗೆ ಯಾಕೆ ಕೊಡೋದಿಲ್ಲ ಅಂದರು?

ಸಾಂಬ : ನಿನ್ನ ಮುಸಡಿ ನೋಡಿ ಬೇಡ ಅನ್ನಿಸಿರಬೇಕು.

ಶಿವ : ನೀನು ಒಳಗೊಳಗೇ ಅವರಿಗೇನು ಹೇಳ್ದೆ ಅಂತ ನನಗ್ಗೊತ್ತು.

ಸಾಂಬ : ಒಳಗೊಳಗೆ? ಅದೇನಯ್ಯಾ ಒಳಗೊಳಗೆ?

ಶಿವ : ಇಷ್ಟು ಬೇಗ ಮದುವೆ ಬೇಡ ಅಂತಾನೆ ಮಗ. ಬೇಕಾದರೆ ನನಗೇ ಹುಡಿಗೀನ್ನ ಕೊಡಿ ಅಂತ ನೀನು ಕೇಳಲಿಲ್ಲವ?

ಸಾಂಬ : ಹಂಗೆ ಕೇಳಿದ್ದೇನೋ ನಿಜ. ಅದರೆ ಅವರು ನಿನಗೆ ಕೊಡೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ ಮೇಲೇ ನಾ ಕೇಳಿದ್ದು ಗೊತ್ತ? ನನಗೂ ನಿಯತ್ತಿದೆಯೋ. ನಾ ಎಂಥ ಪ್ರಾಮಾಣಿಕ ಅನ್ನೋದು ನಿನ್ನ ತಾಯಿಗ್ಗೊತ್ತಿತ್ತು. ಇವತ್ತು ಅವಳಿದ್ದಿದ್ದರೆ ಏನ್ಹೇಳ್ತಿದ್ದಳು ಗೊತ್ತಾ?-“ಮಗಾ ನಿನ್ನ ತಂದೆ ನಿಜ ಏಳತವನೆ ನಂಬು”- ಅಂತಿದ್ದಳು.

ಶಿವ : ಈ ಜಗತ್ತಿನಲ್ಲಿ ನೀನು ಜಾಸ್ತಿ ಸುಳ್ಳು ಹೇಳಿದ್ದೇ ಅಮ್ಮನಿಗೆ. ಅಮ್ಮ ಇದ್ದಾಗಲೇ ನಿನ್ನ ಐದಾರು ಕಾರುಬಾರು ಬೆಳಕಿಗೆ ಬಂದಿದ್ದವು.

ಸಾಂಬ : ಆ ವಯಸ್ಸಿನಲ್ಲಿ ಐದೋ ಆರೋ ಜಾಸ್ತಿಯೇನಯ್ಯಾ?

ಶಿವ : ನಿನ್ನ ಸುಳ್ಳಿನಿಂದಲೇ ಅಮ್ಮ ಸತ್ತದ್ದು.

ಸಾಂಬ : ನಾಳೆ ಮದುವೆ ಆದಮೇಲೆ ನೀನೂ ಅಷ್ಟೆ ಕಣೊ. ಹೆಂಡತಿ ಹತ್ತಿರ ನಿಜ ಹೇಳಲಿಕ್ಕಾಗುತ್ತ? ಹೆಂಗಸರಿಗೆ ಸುಳ್ಳುಸುಳ್ಳೇ ನಿಜ ಹೇಳಬೇಕು. ಆದರೆ ನಿಜವಾದ ಸುಳ್ಳು ಹೇಳಿರಬೇಕು; ನೆನಪ್ಪಿಟ್ಟುಕೊ.

ಶಿವ : ನೀನೂ ನೆನಪ್ಪಿಟ್ಟುಕೊ: ನೀನು ನನ್ನ ಬೆನ್ನು ಹತ್ತಿ ಬರತಿರೋದು ನನಗೋಸ್ಕರ ಅಲ್ಲ ಅಂತ ನನಗ್ಗೊತ್ತು. ನನಗೆ ಅಂತ ಕನ್ಯಾ ನೋಡೋದು, ಮಧ್ಯೆ ನೀ ಬಂದು ಹಾರಿಸಿಕೊಂಡು ಹೋಗೋದು, ತಗಳ್ಳಪ ಇವನು ಅಪ್ಪ!

ಸಾಂಬ : ಸರಿ ಕಣೋ, ನೀನಾದರೂ ದೊಡ್ಡ ಮನಸ್ಸು ಮಾಡಿ ಈ ಬಾರಿ ಅಪ್ಪ ಮದುವೆ ಆಗಲಿ, ಆಮೇಲೆ ನಾ ಮಾಡಿಕೊಂಡರಾಯ್ತಂತ ಯಾಕನ್ನಬಾರದು ?

ಶಿವ : ಕೊನೇ ಪಕ್ಷ ಒಂದು ಮದುವೆ ಆದರೂ ಆಗಿದೆಯೋ ನಿನಗೆ?

ಸಾಂಬ : ಸತ್ಹೋದಳಲ್ಲೋ; ಇದ್ದಿದ್ದರೆ ಕೇಳತಿದ್ದಿನ?

ಶಿವ : ನನಗಿನ್ನೂ ಒಂದೂ ಮದುವೆ ಆಗಿಲ್ಲವೆ!

ಸಾಂಬ : ಆಮೇಲೆ ನಾಲಕ್ಕ ಮಾಡೋಣಯ್ಯ, ನನಗೀಗ ಅರ್ಜೆಂಟಾಗಿ ಒಂದು ಮಾಡು. ನಿನ್ನೆ ಕನಸಿನಲ್ಲಿ ನಿನ್ನಮ್ಮ ಬಂದಿದ್ದಳು, ಗೊತ್ತ?

ಶಿವ : ಹಸೀ ಸುಳ್ಳು.

ಸಾಂಬ : ನಿಜವಾದ ನಿಜ ಕಣೋ! ಕನಸಲ್ಲಿ ಬಂದ ‘ನೋಡಿ ನೀವು ಇನ್ನೊಂದು ಮದುವೆ ಮಾಡಿಕೊಳ್ಳಲೇಬೇಕು. ಮಾಡಿಕೊಳ್ಳದಿದ್ದರೆ ನನ್ನಾಣೆ’, ಅಂತ ನನ್ನ ಮೇಲೆ ಆಣೆ ಇಟ್ಟುಕೊಂಡಳಪ್ಪ!

ಶಿವ : ಭಲೆ! (ನಗುವನು)

ಸಾಂಬ : ನಗೆ ಬರತ್ತಾಇದೆ, ಅಲ್ಲವಾ? ಕಳ್ಳನನಮಗನೇ, ನಿನ್ನಮ್ಮ ಮತ್ತು ನಾನು ಎಷ್ಟು ಪ್ರೀತಿ ಮಾಡತಿದ್ದಿವಿ ಗೊತ್ತ?

ಶಿವ : ಬೆಳಿಗ್ಗೆದ್ದು ಮುಖ ಮುಖ ನೋಡೋದೇ ತಡ ಜಗಳ ಸುರು ಮಾಡತಿದ್ದಿರಿ.

ಸಾಂಬ : ಆಕೆ ಈಗ ಜೀವಂತ ಇದ್ದಿದ್ದರೆ ಈಗಲೂ ಜಗಳಾಡತಿದ್ವಿ ಅಂತಿಟ್ಟಕ. ಆದರೆ ಕನಸಿನಲ್ಲಿ ಸಾವಿಬ್ಬರೂ ಖಂಡಿತ ಜಗಳಾಡಲಿಲ್ಲ ಕಣೊ. ಕೈಮೇಲೆ ಕೈ ಹಾಕಿ ಮದುವೆ ಮಾಡಿಕೊಳ್ತೀನಿ ಅಂತ ಭಾಷೆ ಕೊಟ್ಟಾಗಲೇ ಹೋದಳು. ಇಲ್ಲದಿದ್ದರೆ ಕನಸಿನಾಗಿಂದ ಹೋಗೋದೇ ಇಲ್ಲ ಅಂತ ಹಟ ಹಿಡಿದಿದ್ದಳು, ಗೊತ್ತೇನು?

ಶಿವ : ನಿನ್ನೆ ನನ್ನ ಕನಸಿನಲ್ಲೂ ಅವಳೇ ಬಂದಿದ್ದಳಪ್ಪ, ನಿನ್ನಪ್ಪನಿಗೆ ಮದುವೆ ಮಾಡಬೇಡ, ಅಂತಂದ್ಲು. ಅಷ್ಟೇ ಅಲ್ಲ ಅವನ ಒಂದು ಮಾತನ್ನೂ ನಂಬಬೇಡ ಅಂದ್ಲು.

ಸಾಂಬ : ಸುಳ್ಳನನ ಮಗನೇ, ಒಬ್ಬಳೇ ಇಬ್ಬರ ಕನಸಿನಲ್ಲಿ ಹ್ಯಾಗೋ ಬರತ್ತಾಳೆ?

ಶಿವ : ಹಾಗಿದ್ದರೆ ನಿನ್ನ ಕನಸಿನಲ್ಲಿ ಬಂದಿರಲಿಲ್ಲಾಂತ ಆಯ್ತು.

ಸಾಂಬ : ಬೋಳೀ ಮಗನೇ, ನೀ ನನ್ನ ಮಗ ಅಲ್ಲ.

ಶಿವ : ಮುಂಡೇಗಂಡ, ನೀ ನಮ್ಮಪ್ಪ ಅಲ್ಲ.

ಸಾಂಬ :  ನಾ ಮುಂಡೇಗಂಡ ಆದರೆ ನಿನ್ನಮ್ಮ ಏನೋ ಆದಳು?

ಶಿವ : ನಾ ಬೋಳೀಮಗ ಆದರೆ ನಿನ್ನ ಹೆಂಡತಿ ಏನೋ ಆದಳು?

ಸಾಂಬ : ಛೇ!

ಶಿವ : ಛೇ!
(ತುಸು ಹೊತ್ತು ಇಬ್ಬರೂ ಮಾತಿಲ್ಲದೆ ಕೂರುವರು)

ಶಿವ : ಅಪ್ಪಾ.

ಸಾಂಬ : ಮಾತ್ತಾಡಬೇಡ, ಹೇಳಿರತೀನಿ.

ಶಿವ : ಹೊರಗಡೆ ಚಳಿ ಇದೆ. ಇನ್ನೊಂಚೂರು ಹೆಂಡ ಕುಡಿಯಪ್ಪ.

ಸಾಂಬ : ಇದು ಕಣೋ ಕರುಳು ಅಂದರೆ, ಹಾಗೇ ಒಂದು ಹೆಂಡ್ತೀನೂ ಕಟ್ಟಿಕೊಳ್ಳಪ್ಪ ಅಂದಿದ್ದರೆ….?

ಶಿವ : ಒಂದು ಕೆಲಸ ಮಾಡೋಣ, ಇಬ್ಬರೂ ಒಂದೇ ದಿನ ಮದುವೆ ಮಾಡಿಕೊಂಡರೆ?

ಸಾಂಬ : ಒಂದೇ ಹುಡಿಗೀನ್ನ?

ಶಿವ : ಬೇರೆ ಬೇರೆ.

ಸಾಂಬ : ಹೆಂಗ್ಹೇಳು ಮತ್ತೆ.

ಶಿವ : ಹೆಂಗೂ ನಾನೀಗ ಒಂದು ಹುಡಿಗೀನ್ನ ನೋಡಿದ್ದಾಗಿದೆ. ಈಗ ನೀನು ನನಗೆ ಸಹಾಯ ಮಾಡು. ನೀನು ಯಾವುದಾದರೂ ಹುಡಿಗೀನ್ನ ನೋಡಿದರೆ ಸಾಕು ಸಹಾಯ ಮಾಡತೀನಿ. ಪರಸ್ಪರ ಸಹಕಾರೀ ಸಂಘ, ಏನಂತಿ?

ಸಾಂಬ : ಸರಿ, ನಾ ಈಗ ಏನ ಮಾಡಬೇಕು ಹೇಳು ನೋಡುವಾ.

ಶಿವ : ಸೀರೆ ಉಡಬೇಕು!

ಸಾಂಬ : ಅಂದರೆ?

ಶಿವ : ಆ ಮನೆಯಲ್ಲಿ ಒಂದು ಹೆಣ್ಣಾಳಿನ ಕೆಲಸ ಇದೆ ಅಂತಲ್ಲವ ಹೇಳಿದ್ದು?

ಸಾಂಬ : ಹೌದು

ಶಿವ : ಅಷ್ಟೆ. ನಿನ್ನ ಮಗನಿಗೆ ಸಹಾಯ ಮಾಡಬೇಕು ಅಂದರೆ ಸೀರೆ ಉಟ್ಟುಕೊಂಡು ಅವರ ಮನೇಲಿ ಕೆಲಸಕ್ಕೆ ಸೇರಿಕೋ. ನಿನ್ನ ನೋಡೋದಕ್ಕೇಂತ ನಾ ಒಂದು ಅನುಕೂಲ ಮಾಡಿಕೊಳ್ತೀನಿ. ಮುಂದೆ ನಿನಗೇನಾದರೂ ಒಂದು ಹೆಂಗಸು ಸಿಕ್ಕರೆ ನಿನಗೂ ಸಹಾಯ ಮಾಡತ್ತೀನಿ.

ಸಾಂಬ : ಭಲೇ ಮಗನೇ! ನಾ ಇದಕ್ಕೊಪ್ಪದಿದ್ದರೆ.

ಶಿವ : ನಾ ಸಾಯತೀನಿ.

ಸಾಂಬ : ಲೇ ಶಿವ, ನೀ ಸಾಯೋದೇ ಮೇಲು ಕಣೊ.

ಶಿವ : ಛೇ! ಹೋಗಿಹೋಗಿ ನಿನ್ನ ಮುಂದೆ ಹೇಳಿಕೊಂಡೆ  ನೋಡು ನನ್ನ ದುರ್ದೈವಾನ್ನ. ದಯವಿಟ್ಟು ಮಾತಾಡೋದಾದರೂ ನಿಲ್ಲಸ್ತೀಯಾ?

ಸಾಂಬ : ಆಯ್ತಪ್ಪ, ನಾನು ಇನ್ನುಮೇಲೆ ಮಾತಾಡೋದಿಲ್ಲ. ಮಾತಾಡಿದ್ದರೆ ಒಂದು ವಿಷಯ ಹೇಳೋಣಾಂತಿದ್ದೆ: ದಡ್ಡನನ ಮಗನೇ ನಿನಗಿಂತ ಮುಂಚೆ ಹುಟ್ಟಿದೋನು ನಾನು; ನನಗೇ ಮೊದಲು ಮದುವೆ ಆದರೆ ಚಂದ. ನಾ ಮದುವೆ ಆದರೆ ನಿನಗೊಬ್ಬ ಅಮ್ಮ ಸಿಗತಾಳೆ. ಹೊತ್ತು ಹೊತ್ತಿಗೆ ಊಟ ತಿಂಡಿ ಕಾಫಿ ಸಿಗುತ್ತೆ. ನಿನ್ನ ಹೆಂಡತೀನ ಬೈಲಿಕ್ಕೆ ಒಬ್ಬ ಅತ್ತೆ ಸಿಗತಾಳೆ…. ಇತ್ಯಾದಿ.

ಶಿವ : ಛೇ ಬಾಯ್ಮುಚ್ಚೋದು ಅಷ್ಟೊಂದು ಕಷ್ಟವ? ನನಗೆ…. ನನಗೆ ಕೋಪ ಬರುತ್ತೆ. (ತುಟಿ ಕಚ್ಚುವನು)

ಸಾಂಬ : ಹಂಗೆಲ್ಲಾ ಹಲ್ಲು ತೋರಿಸಬೇಡ; ನಾ ಹಳ್ಳಿನ ಡಾಕ್ಟರಲ್ಲ. ನಾ ಹೇಳೋದೇನಪ್ಪ ಅಂತಂದರೆ ನಾ ಇನ್ನು ಮೇಲೆ ಮಾತಾಡೋದಿಲ್ಲ ಅಷ್ಟೆ. ಮಾತಾಡಿದ್ದರೆ ಹೇಳೋಣಾಂತಿದ್ದೆ:

ಎಂತು ಸೇರುವೆ ಸತಿಯಾಳಾನೆಂತು ಸೇರುವೆ
ಕಂತು ತಾಪವ ಸೈರಿಪೆನೆಂತು
ಚಿಂತೆಯೇರಿತು ಮನಕೆ ದಿಗ್ಭ್ರಾಂತಿಯಾಗಿ ನಾ
ನೆಂತು ಸೇರುವೆ !!

ಲೇ ಶಿವ, ಇಂಥಾ ಹಾಡು ಬಿಳಿ ನಾಲ್ಕರಲ್ಲಿ ಹಾಡಬೇಕು ಕಣೋ, ಅಂದರೇ ಆಟ ರಂಗೇರೋದು.

ಶಿವ : ಸರಿ ಹಾಗಾದರೆ; ನನಗ್ಯಾರೂ ದಿಕ್ಕಿಲ್ಲ ಅಂತಾಯ್ತು, ಎರಡು ದಿನದಿಂದ ಅನ್ನ ನೀರು ಮುಟ್ಟಿಲ್ಲ. ಯಾಕಂತ ಕೇಳೋರಿಲ್ಲ. ಉಸಿರಾಡ್ತ ಇಲ್ಲ, ಬರೀ ನಿಟ್ಟುಸಿರು ಬಿಡ್ತಾ ಇದ್ದೀನಿ, – ಯಾಕಂತ ಕೇಳೋರಿಲ್ಲ. ನಿದ್ದೆ ಇಲ್ಲದೆ ಒದ್ದಾಡತ ಇದ್ದೀನಿ, – ಯಾಕಂತ ಕೇಳೋರಿಲ್ಲ. ಹಾಗಿದ್ದರೆ ಯಾಕಾಗಿ ಜೀವಂತ ಇರಬೇಕು? ಒಳಕ್ಹೋಗಿ ನೇಣು ಹಾಕ್ಕೊಳ್ತೀನಿ, ನೀ ಆರಾಮಾಗಿರು.

ಸಾಂಬ : ಆಯ್ತು.

ಶಿವ : ಆಮೇಲೆ ಕೂಗಿದರೂ ನಾನು ಬಾಗಿಲು ತೆಗೆಯೋದಿಲ್ಲ.

ಸಾಂಬ : ಹೌದು, ನೇಣ್ಹಾಕ್ಕೊಂಡಿರತಿ, ಬಾಗಿಲು ತೆಗೆಯೋದು ಹೆಂಗೆ ಸಾಧ್ಯ?

ಶಿವ : ಆಮೇಲೆ ಪಶ್ಚಾತ್ತಾಪ ಪಡುತ್ತೀ ನೀನು.

ಸಾಂಬ : ಈಗಲೂ ಪಡತಾ ಇದೀನಿ.

ಶಿವ : ಛೇ, ಈ ಹಾಳು ದೇವಸ್ಥಾನದಲ್ಲಿ ಸಂಕಟ ಹೇಳಿಕೊಳ್ಳೋಣ ಅಂದರೆ ಒಂದು ದೇವರೂ ಇಲ್ಲವೆ!
(ಗರ್ಭಗುಡಿ ಹೊಕ್ಕು ಬಾಗಿಲಿಕ್ಕಿಕೊಳ್ಳುವನು)

ಸಾಂಬ : ಬಲ್ ನನ್ನ ಮಗ! ಬಲ್ ನನ್ಮಗ! ಸಾಯತಾನಂತೆ. ಅಧೆಂಗೆ ಸಾಯತಾನೋ ನಾನೂ ನೋಡೇ ಬಿಡಿತೀನಿ. ಅಲ್ಲಾ ಕನ್ಯಾ ಹುಡಿಕ್ಕೊಂಡು ಇಲ್ಲಿಗೆ ಬಂದರೆ, ಇದೋ ರಾಜಧಾನಿ. ಒಬ್ಬರ ಗುರುತಿಲ್ಲ, ಪರಿಚಯ ಇಲ್ಲ. ಆಯ್ತು ವಾಪಸ್ ಹೋಗೋವಾ ಅಂದರೆ ಅಷ್ಟರಲ್ಲೇ ಈ ನನ್ನ ಮಗ ಒಂದು ಹುಡಿಗೀನ್ನೋಡಿ ರೋದೇ! ಯಾವುದೋ ಒಂದು ಗಲ್ಲಿ; ಗಲ್ಲೀಲೊಂದು ಮನೆ. ಮಹಡೀ ಮೇಲೆ ಒಬ್ಬ ಚೆಲುವೆ, ತಲೆ ಬಾಚತಾ ನಿಂತಿದ್ದರೆ ಅವನು ತೆರೆದ ಬಾಯಿ ತೆರೆದ ಹಾಗೇ ನಿಂತುಬಿಡೋದೆ? ಅವಳೂ ಕಿಲಾಡಿ, ನೋಡಿ ನಕ್ಕಳು. ಯಾರನ್ನೋಡಿ ನಕ್ಕಳು ಅಂತ ಯೋಚನೆ ಮಾಡಬ್ಯಾಡವ? ಇವನೂ ನಕ್ಕನೇ! ನಾನೂ ನಕ್ಕೆ, ಅದು ಬೇರೆ ಮಾತು. ತಗಳಪ್ಪ ಆಗಿನಿಂದ ಇವನ ಪ್ರೇಮ ಜ್ವರ ಸುರು. ನಿಟ್ಟುಸಿರು ಬಿಡೋದೇನು, ಕನಸು ಕಾಣೋದೇನು, ತಂತಾನೇ ಮಾತಾಡಿ ಕೊಳ್ಳೋದೇನು, ಪದಾ ಹಾಡೋದೇನು! ಅಬಬ! ಏನೊ ಮಗನ ನೆಪದಲ್ಲಿ ಸಿಕ್ಕರೆ ನಾನೂ ಒಂದು ಹೆಣ್ಣು ಹಾರಿಸ್ಕೊಂಡು ಹೋಗೋವಾ; ಅಂದರೆ ಗಿಟ್ಟತಾನೇ ಇಲ್ಲ ಹಾಳಾದ್ದು. ಹೋಗಲಿ ಇರೋನೊಬ್ಬ ಮಗ. ನನಗೆ ಅವ ದಿಕ್ಕು, ಅವನಿಗೆ ನಾ ದಿಕ್ಕು- ಅಂತ ನನ್ನ ನಾ ಸಮಾಧಾನ ಮಾಡಿಕೊಂಡರೆ, ನನ್ನ ಮಗ ಮೊದಲು ತನಗೇ ಮದುವೆ ಆಗಲಿ ಅಂತಾನೆ! ಹಂಗೂ ಮಾಡಿ ನೋಡೋವಾ; ಮೊದಲಾದರೆ ಕಾಲ ಚೆನ್ನಾಗಿತ್ತು. ಮಗನೇ ಬೀಸ್ಮಾ ಮದುವೆ ಮಾಡಿಕೊಳ್ಳೋ ಅಂದರೆ ನನಗೆ ಬ್ಯಾಡಪ್ಪ ನೀನೇ ಮಾಡಿಕೊ ಅಂದ ಅಪ್ಪನಿಗೆ! ಈಗೆಲ್ಲಿದ್ದಾರೆ ಅಂಥಾ ಮಕ್ಕಳು?
(ಮಲಗುವನು. ಗಣೇಶ ಬರುವನು. ಅವನ ಜೊತೆಗೆ ಒಂದು ಕತ್ತೆ ಬರುತ್ತದೆ)

ಗಣೇಶ : ಭಕ್ತರಿಲ್ಲ, ಪೂಜೆ ಇಲ್ಲ. ಅಮ್ಮ ಅಪ್ಪನ ಹತ್ತಿರ ಹೋಗಿ ಆರಾಮಾಗಿ ಇರೋಣ ಅಂದರೆ ಈ ಹಾಳು ಕತ್ತೆ ಸಹವಾಸ ತಪ್ಪುತ್ತಿಲ್ಲ. ಯಾವಾಗಲೂ ಎಲ್ಲಿ ಹೋದರೂ ಹಿಂದಿನಿಂದಲೇ ಬರುತ್ತೆ. ಒಂದು ಕ್ಷಣ ನಾ ಮರೆಯಾಗಲಿ, ವಾ…. ಅಂತ ಒದರತ್ತೆ. ಯಾರಿಗಾದರೂ ಕೊಡೋಣ ಅಂದರೆ ತಗೊಳ್ಳುವಂಥ ಉದಾರಿಗಳು ಯಾರಿದ್ದಾರೆ? ಆ ನಮ್ಮಪ್ಪ ಶಿವನೇ ಕಾಪಾಡಬೇಕು.
(ಗರ್ಭಗುಡಿಯ ಬಾಗಿಲು ಹಾಕಿರೋದನ್ನ ನೋಡಿ)
ಅರೆ ಅಲ್ಲಿಗೂ ಯಾರೋ ಬಂದ್ಹಾಗಿದೆ! (ಬಾಗಿಲು ತಟ್ಟುತ್ತ)
ರೀ ಯಾರ್ರೀ‍ ಅದು? ಬಾಗಿಲು ತಗೀರಿ.
(ಸಾಂಬ ಎದ್ದು ಗಣೇಶನನ್ನು ನೋಡಿ)

ಸಾಂಬ : ನಮಸ್ಕಾರ.

ಗಣೇಶ : ಯಾರಯ್ಯಾ ಒಳಗಿರೋದು?

ಸಾಂಬ : ಸ್ವಾಮೀ ಮೇಕಪ್ಪು ಪಸಂದಾಗಿದೆ.

ಗಣೇಶ : ಮೇಕಪ್ಪು? ಯೋ ಯಾವೋನಯ್ಯಾ ನೀನು?

ಸಾಂಬ : ನೀನು ತಾನು ಅಂತೀರಲ್ಲರೀ, ಮರ್ಯಾದೆ ಕೊಟ್ಟು ಮಾತಾಡಿ, ನಾನು ಮೊದಲೇ ಅಯೋಗ್ಯ, ಕೊಪ ಬಂದರಂತೂ….

ಗಣೇಶ : (ತನ್ನಲ್ಲಿ) ಇದೊಳ್ಳೇದಾಯ್ತೇ! ನನ್ನ ಕಂಡ ಕೂಡ್ಲೆ ಜನ ಓಡಿ ಬಂದು ಕಾಲು ಹಿಡಿದು ‘ಅದು ಕೊಡು ಇದು ಕೊಡೂಂತ’ ವರ ಕೇಳ್ತಾರೆ. ಇವನ್ನೋಡಿದರೆ ನನ್ನನ್ನೇ ಗದರತಾನೆ? ಇರಲಿ. (ಪ್ರಕಾಶ) ಅಯ್ಯಾ ಸಜ್ಜನ….

ಸಾಂಬ : ಛೇ ಛೇ ಅಷ್ಟು ದೊಡ್ಡ ಮಾತು ಬೇಡ ಸ್ವಾಮಿ –

ಗಣೇಶ : ಅದ್ಯಾಕಪ್ಪ ಸಜ್ಜನ ಅಂದರೆ ನಾಚಿಕೊಳ್ತಿ?

ಸಾಂಬ : ಯಾಕೆಂದರೆ ನನ್ನ ಹೆಸರು ಸಜ್ಜನ ಅಲ್ಲ, ಸಾಂಬ ಅಂತ.

ಗಣೇಶ : ಹಾಗೋ? ಅಯ್ಯಾ ಸಾಂಬ, ಒಳಗಡೆ ಯಾರಿದ್ದಾರೆ?

ಸಾಂಬ : ನನ್ನ ಮಗ ಶಿವ ಇದ್ದಾನೆ. ಆರೋಗ್ಯವಂತನೆ. ನಿಮ್ಮ ನಾಟಕದಲ್ಲಿ ಅದೇನೋ ಪ್ರೇಮ ಪ್ರೀತಿ ಅಂತೀರಲ್ಲ. ಆ ರೋಗ ತಟ್ಟಿದೆ ಅಷ್ಟೆ. ಹುಡುಗಿ ಸಿಕ್ಕಲಿಲ್ಲ, ನೇಣು ಹಾಕ್ಕೊಳ್ಳಬೇಕು ಅಂತ ಒಳಗೆ ಹೋಗಿದ್ದಾನೆ.

ಗಣೇಶ : ಯೋ, ಸಾಯೋದಕ್ಕೆ ನಿಮಗಿದೊಂದೇ ಜಾಗ ಇತ್ತೇನ್ರಯ್ಯಾ? ಕರೀಯಪ್ಪಾ ಅವನ್ನ ಹೊರಕ್ಕೆ.

ಸಾಂಬ : ಕರೀತೀನಿ, ಮೇಕಪ್ ತಗೀರಿ ಸ್ವಾಮಿ ಅಂದರೆ.

ಗಣೇಶ : ನೋಡಪ್ಪ ನಾನು ಮೇಕಪ್ಪನಲ್ಲಿರೋ ಗಣೇಶ ಅಲ್ಲ, ನಿಜವಾದ ಗಣೇಶ. ಇದು ನನ್ನ ದೇವಸ್ಥಾನ. ಪೀಠದಲ್ಲಿ ಕೂತು ಕೂತು ಬೋರಾಯ್ತು. ತುಸು ಅಡ್ಡಾಡಿ ಬರೋಣ ಅಂತ ಹೋಗಿದ್ದೆ. ಈಗ ಬಾಗಿಲು ತೆಗಿಸ್ತೀಯಪ್ಪ?

ಸಾಂಬ : (ತನ್ನಲ್ಲಿ) ಓಹೊ, ಇವನು ಕಂಪನಿ ನಾಟಕದೋನಲ್ಲ, ಹುಚ್ಚಾಸ್ಪತ್ರೆ ಗಿರಾಕಿ! (ಪ್ರಕಾಶ) ಸ್ವಾಮೀ, ತಾವು ಪಾರ್ವತೀ ಪುತ್ರ ಗಣೇಶ ಅಲ್ಲವ? ಪ್ರಾರ್ಥನೆ ಮಾಡತೀನಿ ಒಂದು ವರ ಕೊಡತೀರಾ?

ಗಣೇಶ : ಪ್ರಾರ್ಥನೆ ಗೀರ್ತನೆ ಎಲ್ಲಾಯಾಕೆ?

ಸಾಂಬ : ಛೇ ಛೇ, ಇಷ್ಟಕ್ಕೂ ಸಂಪ್ರದಾಯ ಯಾಕೆ ಬಿಡೋದು? ಹೋದರೆ ಒಂದು ಪದ ತಾನೆ? ತಗೊಳ್ಳಿ.

ಶ್ರೀಗಣರಾಯಾ ಪಾರ್ವತಿ ತನಯಾ
ಶರಣು ಶರಣು ನಿನಗೆ |
ಸದಾಶಿವನ ಮಗ ಕಂಟಕ ಹರಣಗೆ
ಕೈಯ ಮುಗಿವೆ ನಿನಗೆ ||
ದೈವದ ಎದುರಿಗೆ ಯಾರಿಗೆ ಯಾರೋ
ನೀನೆ ದೈವ ನಮಗೆ |
ಎದ್ದು ಬಿದ್ದಲ್ಲಿ ಕೈಗಳ ಚಾಚುತ
ಕಾಯಬೇಕೊ ನಮಗೆ ||
ಬುದ್ಧಿ ಕೊಡೊ ನಮಗೆ ಸುಣ್ಣ ಬೆಣ್ಣೆಯ
ಗುರುತು ತಿಳಿಯುವಷ್ಟು |
ಕತ್ತೆಯ ಬಾಲ ತಲೆಯ ನಡುವಿನ
ಫರಕು ತಿಳಿಯೊವಷ್ಟು ||

ಸಾಂಬ : ಆಯ್ತಲ್ಲ. ಈವಾಗ ವರ ಕೊಡಿ ಸ್ವಾಮಿ

ಗಣೇಶ : ಕೊಡೋದಕ್ಕೆ ನನ್ನ ಹತ್ತಿರ ಏನೂ ಇಲ್ಲವಲ್ಲ, ಪಾಪರಾಗೀನಿ. ಹಾಳು ದೇವಸ್ಥಾನದಲ್ಲಿರೋ ದೇವರು ಏನು ಕೊಟ್ಟಾನು?

ಸಾಂಬ : ಹಾಡೋತನಕ ಸುಮ್ಮನೇ ಇದ್ದು ಆಮೇಲೆ ಇಲ್ಲಾ ಅಂದರೆ? ಹೋಗಲಿ ಒಂದು ಟ್ರಿಕ್ಕಾದರೂ ಮಾಡಿ ತೋರಿಸಿ.

ಗಣೇಶ : ಏನು? ಟ್ರಿಕ್ಕೆ? ಏನು ಮಾಡಲಿ?

ಸಾಂಬ : (ತನ್ನಲ್ಲಿ) ನಾನೀಗ ಹೆಣ್ಣಾಳಾಗಬೇಕು ಅಂತಲ್ಲವ ಮಗ ಹೇಳಿದ್ದು? (ಪ್ರಕಾಶ) ಸ್ವಾಮೀ ನನ್ನನ್ನು ಹೆಂಗಸು ಮಾಡಿ.

ಗಣೇಶ : ಏನು. ಹೆಂಗಸೆ?

ಸಾಂಬ : ಹೂ. ನೀವು ದೇವರಲ್ಲವ? ಮಾಡಿ ನೋಡೋವಾ.

ಗಣೇಶ : ಖಾಯಂ ಹೆಂಗಸಾಗಬೇಕ? ಟೆಂಪರರಿಯ?

ಸಾಂಬ : ಅಧೆಂಗೋ ಮಾಡಿ ಗುರು ನೋಡೋವಾ ಅಂದರೆ….

ಗಣೇಶ : ಸರಿ, ನೋಡಪ, ಈ ಮುತ್ತಿದೆಯಲ್ಲ, ಇದನ್ನ ಬಾಯಲ್ಲಿಟ್ಟುಕೊ (ಕೊಡುವನು. ಸಾಂಬ ಅದನ್ನು ಬಾಯಲ್ಲಿಟ್ಟುಕೋಬೇಕು ಅಂದಾಗ) ಇಲ್ಲಿ ಬೇಡ ಅಲ್ಲಿ ಮರೆಯಿದೆಯಲ್ಲ, ಅಲ್ಲಿಗೆ ಹೋಗಿ ಬಾಯಲ್ಲಿಟ್ಟುಕೊ.

(ಸಾಂಬ ಹೋಗವನು. ತಕ್ಷಣ ಹೆಂಗಸಾಗಿ ಓಡಿ ಬರುವನು.)

ಸಾಂಬ : ಅಯ್ಯೋ ದೇವರೆ ತಪ್ಪಾಯ್ತು. ನೀವು ನಿಜವಾದ ಗಣೇಶ ಅಂತ ತಿಳೀಲಿಲ್ಲ. ಅಡ್ಡಬಿದ್ದೆ ತಂದೇ. ನನ್ನನ್ನ ತಿರುಗಾ ಗಂಡಸು ಮಾಡಿ ಪ್ಲೀಸ್. ಈಗ ನಿಜವಾಗಿ ಪ್ರಾರ್ಥನೆ ಮಾಡತೀನಿ.

ಗಣೇಶ ಕಾಯೊ ತಂದೆ
ರೂಪ ತಾಳಲಾರೆ
ಸಾಧ್ಯವಾದರೀಗಲೆ ನನ್ನ ಗಂಡಾಗಿಸೋ, ತಂದೇ

ಗಣೇಶ : ಹಾಗಿದ್ದರೆ ಬಾಯಲ್ಲಿದೆಯಲ್ಲ, ಆ ಮುತ್ತು ಹೊರಕ್ಕೆ ತೆಗೆ.
(ಹಾಗೇ ಮಾಡುವನು ಈಗ ಸಂತೋಷದಿಂದ ಮುತ್ತು ಹಿಂದಿರುಗಿಸಿ)

ಸಾಂಬ : ಸಧ್ಯ! ಥ್ಯಾಂಕ್ಸ್ ದೇವರೇ!

ಗಣೇಶ : ಈಗ ಬಾಗಿಲು ತೆಗಿಸ್ತೀಯಪ?

ಸಾಂಬ : ಅರೆ ಮರೆತೇ ಬಿಟ್ಟಿದ್ದೆ! (ಓಡಿ ಹೋಗಿ ಬಾಗಿಲು ತಟ್ಟುತ್ತ) ಏ ಶಿವಾ ಬಾಗಿಲು ತಗೀಯೊ, ಸೊಥಾ ಗಣೇಶ ದೇವರು ಬಂದಿದಾರೆ ತಗಿಯೊ!

ಶಿವ : ಯಾರು, ದೇವರ? ನನಗವನ ಪರಿಚಯ ಇಲ್ಲ

ಸಾಂಬ : ನಿಜವಾಗ್ಲೂ ನಿಜವಾದ ದೇವರು ಕಣೊ.

ಶಿವ : ದೇವರಾದರೆ ವರ ಕೊಡಲಿ.

ಸಾಂಬ : ಅದೇ ಮತ್ತೆ, ಬಾಗಿಲು ತೆಗೆದು ವರ ಕೇಳಿಕೊ.

ಶಿವ : ಅದೆಲ್ಲಾ ಆಗಕಿಲ್ಲ, ವರ ಕೊಟ್ಟರೇನೇ ಬಾಗಿಲು ತೆಗಿಯೋದು.

ಗಣೇಶ : ಒಳ್ಳೇ ಗಿರಾಕಿ ಗಂಟು ಬಿದ್ದನೇ! ಯೋ ಯಾವೋನಯ್ಯ ನೀನು? ಹೊರಕ್ಕೆ ಬರತ್ತೀಯೋ, ಪೊಲೀಸರನ್ನ ಕರಕೊಂಬಾ ಅಂತೀಯೊ?

ಸಾಂಬ : ಬಡಭಕ್ತನ ಮ್ಯಾಲ್ಯಾಕೆ ಕೋಪ ದೇವಾ? ಒಂದು ವರ ತೆಗೆದು ಬಿಸಾಕಿ ಬಿಡಬಾರದೆ?

ಗಣೇಶ : ನನ್ನ ಹತ್ತಿರ ನಿಜವಾಗ್ಲೂ ಏನೂ ಇಲ್ಲ ಕಣಪ್ಪ. ಬೇಕಾದರೆ ಆಶೀರ್ವಾದ ಮಾಡಲಾ?

ಸಾಂಬ : ಲೇ ಶಿವಾ, ಆಶೀರ್ವಾದ ಮಾಡತಾರಂತೆ ಬಾಗಿಲು ತೆಗಿಯೊ.

ಶಿವ : ಬರಿಗೈಲಿ ಆಶೀರ್ವಾದ ಬೇಕಾದರೆ ನಾನೂ ಮಾಡತೀನಿ. ವರ ಕೊಟ್ಟರೇನೇ ಬಾಗಿಲು ತೆಗೆಯೋದು.

ಗಣೇಶ : ಇದೊಳ್ಳೇದಾಯ್ತೆ! ನೋಡಪ ನನ್ನ ಹತ್ತಿರ ಇದೊಂದು ಕತ್ತೆ ಇದೆ. ಕೊಡಲ?

ಶಿವ : ಅದನ್ನ ತಗೊಂಡೇನು ಕತ್ತೆ ಕಾಯೋದ?

ಗಣೇಶ : ಹಾ ಅದು ಸಾಮಾನ್ಯ ಕತ್ತೆ ಅಂತ ತಿಳೀಬೇಡ. ಡಿಂಗ್‌ಡಾಂಗಂತ ಅದರ ಹೆಸರು. ಅದು ಹುಟ್ಟಿದ್ದು ಹ್ಯಾಗಂತೀಯಾ? ಒಬ್ಬ ಕಲಾವಿದ ಇದ್ದ. ಇಲ್ಲೇ ಈ ದೇವಸ್ಥಾನದಲ್ಲೇ ಇರುತ್ತಿದ್ದ. ನನಗೂ ಒಬ್ಬನೇ ಪೀಠದ ಮೇಲೆ ಕೂತು ಕೂತು ಬೇಜಾರಾಗಿತ್ತು ನೋಡು; ಇರಲಿ ಅಂದುಕೊಂಡು ದೋಸ್ತಿ ಬೆಳೆಸಿದೆ. ಅವನೆಂಥಾ ಕಲಾವಿದ ಅಂದರೆ ನೀನು ಯಾರದೇ ಕೂದಲು ಕೊಡು. ಆ ಕೂದಲು ನೋಡಿ ಆ ಮನುಷ್ಯನ ಚಿತ್ರ ಬರೀತೇನೆ ಅಂತ ಜಂಬ ಕೊಚ್ಚುತ್ತಿದ್ದ. ಅವನ ಕಲೆಯನ್ನು ಪರೀಕ್ಷೆ ಮಾಡೇ ಬಿಡೋಣ ಅಂತ ಒಂದುಸಲ ಈ ಊರಿನ ರಾಜನ ಕೂದಲು ಹೊರಗೆ ಬಿದ್ದಿತ್ತು. ತಗೊಂಡು ಈ ಕೂದಲಿನವನ ಚಿತ್ರ ಬರಿ ನೋಡೋಣ ಅಂದೆ. ಬರೆದ. ನೋಡಿದರೆ ಕತ್ತೇಚಿತ್ರ! ಇಬ್ಬರಿಗೂ ಭಾರೀ ನಗೆ ಬಂತು. ನಗತ ನಗತ ಆ ಚಿತ್ರಕ್ಕೇ ಜೀವ ತುಂಬಿದೆ. ಅಗಾ ಅಲ್ಲಿದೆಯಲ್ಲ – ಅದೇ ಕತ್ತೆ!

ಸಾಂಬ : ಪರವಾ ಇಲ್ಲವೆ?

ಗಣೇಶ : ಹೇಳಿದ ಆಟ ಆಡತ್ತೆ. ಬೇಕಾದರೆ ಅದನ್ನಿಟ್ಟುಕೊಂಡು ಒಂದು ಸರ್ಕಸ್ ಕಂಪನಿ ಮಾಡಬಹುದು. ಅಷ್ಟೇ ಅಲ್ಲ ಈ ಕತ್ತೆಗೆ ರಾಜಯೋಗ ಇದೆಯಪ್ಪಾ!

ಸಾಂಬ : ಲೇ ಶಿವಾ, ಅದೇನೋ ಕತ್ತೆ ಕೊಡತಾರಂತೆ ಬಾಗಿಲು ತಗಿಯೊ. (ಶಿವ ಬಾಗಿಲು ತೆಗೆದು ಗಣೇಶನನ್ನು ನೋಡಿ ಭಯ ಭಕ್ತಿಯಿಂದ ಕಾಲು ಹಿಡಿದುಕೊಳ್ಳಲು ಓಡಿಬರುವನು. ಗಣೇಶ ಅಷ್ಟೇ ರಭಸದಿಂದ ತಪ್ಪಿಸಿಕೊಂಡು ಓಡಿಹೋಗಿ ಬಾಗಿಲಿಕ್ಕಿ ಕೊಳ್ಳುವನು)

ಗಣೇಶ : (ಬಾಗಿಲು ಕಿಂಡಿಯಿಂದ) ನೋಡಯ್ಯಾ, ನನ್ನ ಹತ್ತಿರ ಇರೋದು ಅದೊಂದು ಕತ್ತೆ. ಅದನ್ನೇ ನಿನಗೆ ವರವಾಗಿ ಕೊಟ್ಟಿದ್ದೇನೆ. ತಗೋ ಹೋಗು. (ಬಾಗಿಲಿಕ್ಕುವನು)

ಶಿವ : ಒಳ್ಳೇ ದೇವರು, ಆಶೀರ್ವಾದ ಮಾಡತೇನಂದಿರಿ?

ಗಣೇಶ : (ಬಾಗಿಲು ಅರ್ಧ ತೆಗೆದು) ಅದನ್ನೂ ಮಾಡಿದ್ದೇನೆ, ತೊಲಗರಯ್ಯಾ.

ಶಿವ : ಸ್ವಾಮೀ ಏನಂತ ಆಶೀರ್ವಾದ ಮಾಡಿದಿರಿ?

ಗಣೇಶ : ಏನಾಗಬೇಕು?

ಶಿವ : ನಾನು ಬಯಸಿದ ಹುಡುಗಿ ನನಗೆ ಅಂದರೆ ನಮ್ಮಪ್ಪನಿಗಲ್ಲ-ನನಗೇ ಸಿಕ್ಕಬೇಕು.

ಗಣೇಶ : ಆ ಕತ್ತೆಯಿಂದಾಗಿ ಆ ಹುಡುಗೀನೂ ಸಿಕ್ತಾಳೆ ಹೋಗಯ್ಯಾ.

ಸಾಂಬ : ಸ್ವಾಮಿ, ಆ ಮುತ್ತು ಕೊಟ್ಟಿರತೀರಾ? ಬ್ರಹ್ಮಾಚಾರಿಗಳು ನಿಮ್ಮತ್ರ ಯಾಕೆ ಅಂತ.

ಗಣೇಶ : ಹೇಳಲಿಲ್ಲವ, ಅದು ನಂದಲ್ಲ ನಮ್ಮಪ್ಪಂದು.

ಸಾಂಬ : ಒಂದೆರಡು ದಿವಸ ಅಷ್ಟೆ. ಆಮೇಲೆ ವಾಪಸ್ ಕೊಡತೀನಿ.

ಗಣೇಶ : ಮಾತಿಗೆ ತಪ್ಪಬಾರದು.

ಸಾಂಬ : ಉಂಟೇ ಸ್ವಾಮಿ, ದೇವರಿಗೇ ಮೋಸ ಮಡಲಿಕ್ಕಾಗತ್ತ?

ಗಣೇಶ : ನೀವು ದೇವರಿಗೇ ಜಾಸ್ತಿ ಮೋಸ ಮಾಡೋದು. ಇರಲಿ ತಗೊ, ನಾ ಕೇಳಿದಾಗ ವಾಪಸ್ ಕೊಡು ಅಷ್ಟೆ.
(ಕೊಟ್ಟು ಬಾಗಿಲಕ್ಕಿಕೊಳ್ಳಬೇಕೆಂದಾಗ)

ಸಾಂಬ : ಇರಿ ಇರಿ. ಇನ್ನು ಮೇಲೆ ಈ ನಮ್ಮ ಕತ್ತೇ ಆಟ ನಿರ್ವಿಘ್ನವಾಗಿ, ಬೇಷಾಗಿ ನಡೀಲಿ ಅಂತ ಇನ್ನೊಂದು ಆಶೀರ್ವಾದ ಮಾಡಿಬಿಡಿ ಸ್ವಾಮಿ.

ಗಣೇಶ : ತಥಾಸ್ತು.