(ರಾಜ ಮತ್ತು ಪೊಲೀಸ್ ಆಫೀಸರ್)

ರಾಜ : ಪೋಲಿಸ್ ಬಂದೋಬಸ್ತು ಸರಿಯಾಗಿದೆಯ?

ಪೊಲೀಸ್ : ಎಲ್ಲ ಸರಿಯಾಗಿದೆ ಪ್ರಭೂ.

ರಾಜ : ಕ್ರಾಂತಿ ಗೀಂತಿ ವಗೈರೆ….?

ಪೊಲೀಸ್ : ಏನೂ ಇಲ್ಲ ಪ್ರಭು. ಎಲ್ಲಾ ಜೇಲಲ್ಲಿ ತುರುಕಿ ಬಿಟ್ಟಿದೀವಿ.

ರಾಜ : ಕಾರಭಾರೀನ್ನ ಕಳಿಸು. ಅಂತರಂಗ ಮಾತಡ್ತೀವಿ. ನೀನು ಹೊರಗೆ ನಿಂತಿರು.

ಪೊಲೀಸ್ : ಆಪ್ಪಣೆ ಪ್ರಭೂ (ಹೋಗುವನು, ಕಾರಭಾರಿ ಬರುವನು)

ರಾಜ : ಏ ಕಾರಭಾರೀ, ಸಿಕ್ಕಳೇನೊ?

ರಾಯಭಾರಿ : ಪ್ರಯತ್ನ ಮಾಡತಾ ಇದೀನಿ ಪ್ರಭೂ.

ರಾಜ : ಎಷ್ಟು ದಿನ ಪ್ರಯತ್ನ ಮಾಡೋದು? ಶಿವಪುರವನ್ನಾಳುವ ಕಾಲ್ಮಡಿ ಮಹಾ ಪ್ರಭುಗಳಿಗೆ ಅವರು ನೋಡಿ ಇಷ್ಟಪಟ್ಟ ಒಂದು ಯಃಕಶ್ಚಿತ್ ಹುಡುಗಿ ಸಿಗ್ತಾ ಇಲ್ಲ ಅಂದರೆ ಜನ ನನ್ನ ನೋಡಿ ಒಳಗೊಳಗೇ ನಗೋದಿಲ್ಲವೇನೊ? ಜನ ನಕ್ಕರೆ ನಾನ್ಯಾಕೋ ಬದುಕಬೇಕು? ಪಟ್ಟಣದ ಪ್ರತಿಯೊಂದು ಮನೆ  ಹುಡಿಕಿದೆಯಾ?

ಕಾರಭಾರಿ : ಹುಡುಕಿದೆ ಪ್ರಭು.

ರಾಜ : ಆದರೂ ಹೆಂಗಸರು ಸಿಗಲಿಲ್ಲವ?

ಕಾರಭಾರಿ : ಹೆಂಗಸರಿದ್ದಾರೆ. ಆದರೆ ಹಸಿರು ಸೀರೆ, ನೀಲಿ ರವಕೆಯವಳು ಸಿಗ್ತಾ ಇಲ್ಲ ಪ್ರಭು. ಖಂಡಿತ ಇಷ್ಟರಲ್ಲೇ ಗುರುತು ಹಿಡೀತೀನಿ. ಇವತ್ತು ಸ್ವಲ್ಪ ವಿಷಯ ಗೊತ್ತಾಗಿದೆ. ಅವಳು ಶೆಟ್ಟರ ಮಗಳಂತೆ ….

ರಾಜ : ಹಸಿರು ಸೀರೆ, ನೀಲಿ ರವಕೆ – ಗುರುತಿಟ್ಟುಕೋ ಮಗನೆ; ಮರೆಯಬೇಡ. ಅಹಾ ಚೆಲುವೆ ಅಂದರೆ ಅವಳಯ್ಯಾ! ಉದ್ಯಾನವನ ಲೇ ಕಾರಭಾರೀ, ಕಲ್ಪನಾ ಮಾಡು, – ಉದ್ಯಾನವನ-

ಪೊಲೀಸ್ : (ಒಳಬಂದು ನಮಸ್ಕರಿಸಿ) ಪ್ರಭು ತಮ್ಮ ದರ್ಶನಕ್ಕಾಗಿ ಗಣ್ಯ ನಾಗರಿಕರ ನಿಯೋಗ ಬಂದಿದೆ.

ರಾಜ : ಅಂತರಂಗ ಮಾತಾಡ್ತಿದೀವಿ ಅಂತ ಹೇಳಲಿಲ್ಲವಾ?

ಪೊಲೀಸ್ : ಹೆಳಿದೆ ಪ್ರಭು. ಆದರೂ ತಮ್ಮ ದರ್ಶನ ಪಡೀಲೇಬೇಕಂತಿದಾರೆ.

ರಾಜ : ಯಾತಕ್ಕಂತೆ?

ಪೊಲೀಸ್ : ಮನವಿ ಇಲ್ಲಿದೆ ಪ್ರಭು.

ರಾಜ : ಒಂದು ವಾಕ್ಯದಲ್ಲಿ ಸಾರಾಂಶ ಓದು.

ಪೊಲೀಸ್ : (ಓದುತ್ತ) ಹಾಯ್ ಹಾಯ್ ! ನಮ್ಮ ಜೀವನಕ್ಕೆ ಧಿಕ್ಕಾರ! ಕೂತರೆ ತೆರಿಗೆ, ನಿಂತರೆ ತೆರಿಗೆ, ಹಲ್ಲುಜ್ಜಿದರೆ ತೆರಿಗೆ, ಬಟ್ಟೆ ಹಾಕಿದರೆ. ತೆರಿಗೆ ಆ ತೆರಿಗೆ ಈ ತೆರಿಗೆ ಊರಿಗೆ…. ಸಾರಾಂಶ ಅಂದರೆ – ಪ್ರಜೆಗಳು ತೆರಿಗೆಯ ಭಾರದಲ್ಲಿ ತೊಳಲುತ್ತಿದ್ದಾರೆ ಪ್ರಭೂ.

ರಾಜ : ಅರ್ಥವಾಯಿತು. ಮತ್ತೆ ಯಾಕೆ ನಿಂತೆ? ಹೋಗು. ಅಂತರಂಗ ಮುಗಿಯೋತನಕ ಇನ್ನೊಂದು ಬಾರಿ ನೀನು ಒಳಗೆ ಬಂದರೆ ಮಗನೇ ನಿನ್ನ ಚರ್ಮ ಸುಲೀತೇನೆ. (ಪೊಲೀಸ್ ಗಾಬರಿಯಲ್ಲಿ ಹೋಗುವನು) ಛೇ, ಏನು ಜನರಯ್ಯಾ ಇವರು, ಮೂಡನ್ನೆಲ್ಲಾ ಹಾಳು ಮಾಡಿಬಿಡ್ತಾರೆ! ಏನ್ನ ಹೇಳತಿದ್ದೆ?

ಕಾರಭಾರಿ : ಉದ್ಯಾನವನ!

ರಾಜ : ಹಾ, ಉದ್ಯಾನವನ! ಕಾರಭಾರೀ, ಉದ್ಯಾನವನ! ಹಕ್ಕಿಪಕ್ಕಿ ಗಿಡಗಂಟಿಗಳು ಒದರುತ್ತಿವೆ! ಇನ್ನೊಂದೆಡೆ ಕೋಗಿಲೆ ಕಾಲು ಕೆದರುತ್ತ ಧೂಳೆಬ್ಬಿಸಿದೆ! ಬೆಳ್ದಿಂಗಳು ಅಕ್ಕೀ ಹಿಟ್ಟಿನಂತೆ ಸುರಿಯುತ್ತಿದೆ! ಆಗ ಆ ಚೆಲುವೆ, ಅದೇ ಹಸಿರು ಸೀರೆ, ನೀಲಿ ರವಕೆಯ ಹುಡುಗಿ – ಹಾಡಿಪಾಡಿ ನಲಿಯುತ್ತ, ಥೈ ಥೈ ಕುಣಿಯುತ್ತ, ಚಳ್ಳಂಗ ಪಳ್ಳಂಗ ಗಜ್ಜೆನಾದ ಮಾಡುತ್ತ, ಪೀಪೀಪೀ ಢಂಢಂಢಂ ಬಾಜಾ ಬಜಂತ್ರಿ ಸಮೇತ ಬರುತ್ತಾಳೆ! ಬಂದಳೇನಯ್ಯಾ?

ಕಾರಭಾರಿ : ಬಂದಳು ಪ್ರಭು. ಉದ್ಯಾನವನದಲ್ಲಿ ನನಗೂ ಪ್ರವೇಶ ಇದೆಯಾ ಪ್ರಭು?

ರಾಜ : ಹೌದಯ್ಯಾ, ನಿನ್ನ ಸಹಕಾರ ಇಲ್ಲದೆ ನಾನೊಬ್ಬನೇ ಎಷ್ಟಂತ ಪ್ರೀತಿ ಮಾಡಲಿ? ಆದರೆ ಹುಲ್ಲು ಮೇಯುತ್ತಿರೋ ಕೋಗಿಲೆ ಮರಿ ಓಡಿ ಹೋಗದ ಹಾಗೆ ಬಾ ಅಷ್ಟೆ.

ಕಾರಭಾರಿ : ಕೋಗಿಲೆಮರಿ ಹುಲ್ಲ ಮೇಯುತ್ತಿದೆಯೆ? ಕೋಗಿಲೆ ಒಂದು ಪಕ್ಷಿ ಅಲ್ಲವೆ ಪ್ರಭು?

ರಾಜ : ಮಗನೇ ಅದೊಂದು ಪ್ರಾಣಿ, ಅದು ಹಕ್ಕಿ ಆದರೆ ನಿನ್ನ ಹಲ್ಲು ಮುರೀತೇನೆ.

ಕಾರಭಾರಿ : ಅರರೇ ಹೌದಲ್ಲ! ಅದೊಂದು ಪ್ರಾಣಿಯೇ ಇರಬೇಕು ನಾಲಕ್ಕು ಕಾಲು….?

ರಾಜ : ಉದ್ದ ಬಾಲ, ಕುದುರೆ ಥರ ಮುಖ- ಆದರೆ ಕವಿ ಚಿಕ್ಕದು. ಆಕಾಶದ ಕಡೆ ಮುಖ ಮಾಡಿ ಬಾಲ ನಿಗರಿಸಿ ಒದರುತ್ತೆ. ನಮ್ಮ ಉದ್ಯಾನವನದಲ್ಲಿ ಬೇಕಾದಷ್ಟಿವೆ. ಅದು ನಮ್ಮ ರಾಷ್ಟ್ರೀಯ ಪ್ರಾಣಿ ಮಗನೇ.

ಕಾರಭಾರಿ : ನಿಜ ನಿಜ. ಮೊದಮೊದಲು ನಿಮ್ಮ ಮಾತು ಕೇಳಿ ನನಗೆ ಕತ್ತೆ ನೆನಪಾಗಿತ್ತು.

ರಾಜ : ಅದರದ್ದೊಂದು ಕಥೆ ಇದೆ. ಕತ್ತೆ ಮನುಷ್ಯರ ಥರ ಇರುತ್ತೆ, ಬೇಜಾರಾದಾಗಲೆಲ್ಲಾ ಒದರುತ್ತೆ. ಆದರೆ ನನಗೆ ಆ ಪ್ರಾಣಿ ಬಗ್ಗೆ ಯಾಕಪ್ಪಾ ನಿರಾಸೆ ಅಂದರೆ ಅದು ಒದೆಯುತ್ತೆ ಕಣೊ. ಒದೆಯೋ ಹಕ್ಕು ರಾಜರಿಕಗೆ ಮಾತ್ರ ಇರಬೇಕು. ಏನಂತಿ?

ಕಾರಭಾರಿ : ಅಲ್ಲವೆ?

ರಾಜ : ಈ ಕ್ರಾಂತಿಕಾರಿ ನನ್ನ ಮಕ್ಕಳು ತಮಗೂ ಒದೆಯೋ ಹಕ್ಕು ಬೇಕಂತಾರೆ!

ಕಾರಭಾರಿ : ತಪ್ಪಲ್ಲವೇ?

ರಾಜ : ಉದ್ಯಾನವನ ಅಲ್ಲೇ ಬಿಟ್ಟೆವಲ್ಲಯ್ಯಾ. ಅವಳು ಬಂದು ಸುಮ್ಮನೆ ನಿಂತಿದಾಳೆ! ಮುಂದೆ ಏನು ಮಾಡಬೇಕು ಹೇಳು.

ಕಾರಭಾರಿ : ಅಂದರೆ ಹೀಗೆ ಪ್ರಭು: ಆ ಹುಡುಗಿ ಅಲ್ಲಿದಾಳೆ ಅಂತ ಇಟ್ಟುಕೊಳ್ಳಿ. ತಾವು ಇಲ್ಲಿದೀರಿ. ನಾನು ಅವಳ ಪಕ್ಕದಲ್ಲಿದೀನಿ.

ರಾಜ : ಅದ್ಯಾಕಂತೆ ನೀ ಅವಳ ಪಕ್ಕ ಇರಬೇಕು? ನಾನೇ ಅವಳ ಪಕ್ಕ ಇರತೀನಿ, ನೀ ಇಲ್ಲಿರು.

ಕಾರಭಾರಿ : ಅಲ್ಲಲ್ಲ ಹಾಗೆ ತಿಳಕೊಳ್ಳಿ ಅಷ್ಟೆ.

ರಾಜ :ಅದೇ ಮತ್ತೆ, ನಾ ಹೇಳಿದ ಹಾಗೇ ತಿಳಕೊಳ್ಳೋಣ.

ಕಾರಭಾರಿ : ಅಲ್ಲ ಪ್ರಭು, ಈಗಷ್ಟೇ ನಾನವಳನ್ನು ಕರಕೊಂಬಂದಿದ್ದೇನೆ. ಅದಕ್ಕೆ ಅವಳು ನನ್ನ ಪಕ್ಕದಲ್ಲಿದ್ದಾಳೆ. ಈಗ ನನ್ನ ಪಕ್ಕದಿಂದ ತಮ್ಮ ಹತ್ತಿರಕ್ಕೆ ಬರುತ್ತಾಳೆ.

ರಾಜ : ಹಾಗೋ? ಸರಿ.

ಕಾರಭಾರಿ : ತಾವು ಇಲ್ಲಿದೀರಿ. ಆಕೆ ಬಂದಳು. ಹ್ಯಾಗೆ ನಿಂತಿರತೀರಿ? ತೋರಿಸಿ ನೋಡೋಣ.

ರಾಜ : ಹೀಗೆ ನಿಂತಿರಲಾ?

ಕಾರಭಾರಿ : ನಿಲ್ಲೋದಕ್ಕೊಂದು ಶೈಲಿ ಇದ್ದರೆ ಒಳ್ಳೇದಲ್ಲವ?

ರಾಜ : ಹೀಗೆ?

ಕಾರಭಾರಿ : ಈಗ ಸರಿ. ನೋಡಿ ನಾನೇ ಅವಳೂಂತಿಟ್ಟುಕೊಳ್ಳಿ. ಇಕಾ ಬಂದೆ. ಏನ್ ಮಾಡ್ತೀರಿ?

ರಾಜ : ಏನ್-ಮಾಡಲಿ?

ಕಾರಭಾರಿ : ಛೇ ಬಗ್ಗಿ ಪುರ್ ಮಾಡಬೇಕಷ್ಟೆ.

ರಾಜ : (ಬಗ್ಗಿ) ಪುರ್ ರ್ ರ್!

ಕಾರಭಾರಿ : ಹಾಗಲ್ಲ ಪ್ರಭು. ಅವಳು ಬರತ್ತಿರೋ ಹಾಗೇನೇ ಒಂದು ಮುಗುಳು ನಕ್ಕು ಪ್ರಿಯೇ ಅಂತ ಒಂದು ಮುದ್ದು ಎಸೀಬೇಕು. ಹ್ಯಾಗೆ ಹೇಳಿ?

ರಾಜ : ಪ್ರೀಯೆ!

ಕಾರಭಾರಿ : ಹಾಗಲ್ಲ ಒಂಚೂರು ಗತ್ತಿನಿಂದ ಮುದ್ದು ಅವಳ ಕಡೆ ಎಸೀತೀರಲ್ಲ, ಹಾಗೇ ಅವಳು ತನ್ನ ಹೃದಯ ನಿಮ್ಮ ಕಡೆ ಎಸೆದಿರಬೇಕು, ಆ ಥರ ಇರಬೇಕು ನಿಮ್ಮ ಗತ್ತು.

ರಾಜ : ನೀನು ತೋರಿಸುವಾಗ ನಿನ್ನ ಮುಖ ಎಂಜಲೆಲೆ ಥರ ಆಗಿತ್ತು. ನಾನೂ ಹಾಗೇ ಮಾಡಬೇಕು?

ಕಾರಭಾರಿ : ತಾವು ಸ್ವಾಭಾವಿಕವಾಗಿ ಮಾಡಿ.

ರಾಜ : ಪ್ರೀಯೆ.

ಕಾರಭಾರಿ : ಈಗ ತಾವು ಮೊಳಕಾಲೂರಿ ಎರಡೂ ಕೈಯಿಂದ ಎದೆ ಮುಟ್ಟಿಕೊಂಡು ಮಾತಾಡಬೇಕು. ಆ ಹುಡುಗೀ ಹಾಗೇ ಇನ್ನೊಮ್ಮೆ ಬರಲಾ? (ಕಾರಭಾರಿ ಹೆಂಗಸಿನ ವಯ್ಯಾರ ಮಾಡುತ್ತ ಬರುವನು)

ರಾಜ : ಅಯ್ಯಯೋ, ನನಗೆ ನಾಚಿಕೆ ಬರತ್ತಾ ಇದೆ! (ಮುಖ ಮುಚ್ಚಿಕೊಳ್ಳುವನು)

ಕಾರಭಾರಿ : ನಾಚಬೇಕಾದವಳು ಅವಳಲ್ಲವೇ ಪ್ರಭು?

ರಾಜ : ಹಾಗಿದ್ದರೆ ನಾ ಏನು ಹೇಳಬೇಕು, ಹ್ಯಾಗೆ ಹೇಳಬೇಕು-ಎಲ್ಲಾ ನೀನೇ ಮಾಡಿ ತೋರಿಸು.

ಕಾರಭಾರಿ : ತಾವು ಅವಳು ಅಂತ ಇಟ್ಟುಕೊಳ್ಳಿ, ನಾನು ತಾವು, ಇಲ್ಲಿ ಹೀಗೆ ಕೂತಿದೀನಿ. (ಮೊಳಕಾಲೂರಿ ಕುಳಿತು ಎರಡೂ ಕೈಗಳಿಂದ ಎದೆ ಹಿಡಿದುಕೊಂಡು) ಪ್ರಿಯೆ, ನಾನು ನಿನಗೆ ಈವಾಗೊಂದು ಮಾತನ್ನು ಹೇಳಲೇಬೇಕು. ಯಾಕೆಂದರೆ ನನ್ನ ಆತ್ಮಕ್ಕೆ ನೋವಾಗಿದೆ. ಆತ್ಮ ದೇಹದಲ್ಲಿದೆ. ದೇಹದಿಂದ ನಾವು ಬದುಕುತ್ತೇವೆ. ನಾವು ಬದುಕೋದು ಜೀವನದಲ್ಲಿ. ಆದರೆ ಜೀವನವು ಜಗತ್ತಿಗಿಂತ ದೊಡ್ಡದೆಂದು ಅಥವಾ ಸಣ್ಣದೆಂದು ಹುತಾತ್ಮರು ಅಲ್ಲ, ಮಹಾತ್ಮರು ಹೇಳಿರುವರು. ಆದ್ದರಿಂದಲೇ ನಾನು ಹೇಳಬೇಕಾಗಿರುವುದೇನೆಂದರೆ ಜೀವನವು ನಮಗಿಂತ ದೊಡ್ಡದು. ಯಾಕೆಂದರೆ ಅದರಲ್ಲಿ ಪ್ರೀತಿ ಪ್ರೇಮ ಇದೆ. ಅಂಥಾ ಪ್ರೇಮವೆಂಬ ಪಾಶದಲ್ಲಿ ಸಿಕ್ಕುಬಿದ್ದು ನಾನು ವಿಲವಿಲ ಒದ್ದಾಡುತ್ತಿರುವೆನು! ಹ್ಯಾಗನಿಸ್ತು ಪ್ರಭು?

ರಾಜ : ಗಳಗಳ ಅಳೋಣ ಅನ್ನಿಸ್ತು. ಅಲ್ಲವೋ ಇದರಲ್ಲೊಂದು ಪ್ರಾಸ, ಒಂದುಲಯ, ಒಂದು ಗತ್ತು- ಏನಿತ್ತೊ ಇದರಲ್ಲಿ? ಛೇ ಛೇ ನೀನಿಂಥಾ ಗದ್ಯಾತ್ಮಕ ಅಂತ ಗೊತ್ತಿರಲಿಲ್ಲ ಬಿಡು. ಗದ್ಯಂ ಪದ್ಯಂ ವದ್ಯಂಹ್ರದ್ಯಂ ಅಂತ ಹಿರೇರು ಹೇಳೋದನ್ನ ಕೇಳಿಲ್ಲವೇನಯ್ಯಾ? ಹ್ಯಾಗಿರಬೇಕು ಗೊತ್ತ ಡೈಲಾಗು? ನಾ ಹೇಳ್ತೀನಿ ಕೇಳು :
ನಾ ಅಂತೀನಿ : ಪ್ರೀಯೆ!
ಅವಳಂತಾಳೆ : ಪ್ರೀಯಕರಾ!
ನಾ ಅಂತೀನಿ : ಅಯ್ಯೋ ಪ್ರೀಯೆ!, ನೀ ಎನ್ನ ಹೃದಯದಲ್ಲಿ ಒಂದು ಕುರ್ಚಿಹಾಕಿ ಕುಳಿತುಕೊಂಡಿರುವೆ. ಜೀವ ಬಿಟ್ಟೇನು. ಆದರೆ ಆ ಕುರ್ಚಿಯಿಂದ ನಿನ್ನನ್ನು ಕೆಳಕ್ಕೆ ಇಳಿಸೋದಿಲ್ಲ.
ಅವಳಂತಾಳೆ : ಹಾ ಪ್ರೀಯಕರಾ! ನಲ್ಮೆಯ ನಲ್ಲನಾದ ನೀನಿಲ್ಲದ್ದರಿಂದ ಖುಲ್ಲಮಾರನು ಎನ್ನ ಪುಲ್ಲತರವ ಮಾಡಿ ಗುಲ್ಲು ಮಾಡುವನು. ಛಲವನ್ನು ತೋರದೆ ನೀನೀಗಲೇ ಬಂದು ಎನ್ನಲಿ ಸೇರಬಾರದೆ?
ನಾ ಅಂತೀನಿ: ಹಾ ಪ್ರೀಯೆ ಪ್ರಶಾಂತ ಹೃದಯೆ! ಈ ಬಾಳು ಸರಸ, ಇನ್ನೇಕೆ ವಿರಸ ಸವಿಯುವಾ ಸಂತಸ. ಕುಸುಮ ಶಯನದಿ ದಶವಿಧ ಚುಂಬಿಸುತ ಹಸನಾಗಿ ಸುಖದೋರಬಾರದೆ? ಗಮನಿಸಾ ದಮದಸಾ ಪಗಪಗಪಗ ಪಗರಿಕಸಾ ಕರಗಸಾ!
ಹ್ಯಾಗಿತ್ತು?

ಕಾರಭಾರಿ : (ಚಪ್ಪಾಳೆ ತಟ್ಟಿ) ಅದ್ಭುತವಾಗಿತ್ತು ಪ್ರಭು! ಕೇವಲ ಅದ್ಭುತ! ಆದರೆ ಇಂಥ ಅದ್ಭುತ ದೃಶ್ಯ ಉದ್ಯಾನವನದಲ್ಲಿ ಚೆನ್ನಾಗಿ ಬರೋದಿಲ್ಲ ಪ್ರಭು.

ರಾಜ : ಯಾಕೆ?

ಕಾರಭಾರಿ : ಉದ್ಯಾನವನದಲ್ಲಿ ರಾತ್ರಿ ವಿಪರೀತ ಸೊಳ್ಳೆ ಕಾಟ. ಚಳಿ ಬೇರೆ. ಈ ಡೈಲಾಗು ಹೇಳುವಾಗ ಬಾಯಲ್ಲಿ ಸೊಳ್ಳೆ ಹೊಕ್ಕರೆ ಕಷ್ಟವಲ್ಲವೆ ಪ್ರಭು? ಇದು ವಿಶ್ರಾಂತಿ ಗೃಹದಲ್ಲಾದರೇ ಶೋಭೆ ಹೆಚ್ಚಲ್ಲವೇ?

ರಾಜ : ಹಾಗಂತೀಯಾ? ಹಾಗಿದ್ದರೆ ಆ ಹುಡುಗಿ – ಅದೇ ಹಸಿರು ಸೀರೆ, ನೀಲಿ ರವಕೆ ಯೋಳು ಸಿಕ್ಕ ತಕ್ಷಣವೇ ದನಮ್ಮ ವಿಶ್ರಾಂತಿ ಗೃಹದಲ್ಲಿ ವ್ಯವಸ್ಥೆ ಮಾಡು.

ಕೇಳಯ್ಯ ಕಾರಭಾರಿ
ಸಿಕ್ಕರೆ ಹುಡುಗಿ!
ಕರತಾರೊ ಕ್ಷಣ
ನಮ್ಮ ವಿಶ್ರಾಂತಿ ಗೃಹಕೇ

ಕಾರಭಾರಿ : ಹಾಗೆ ಅಗಲಿ ಪ್ರಭು.