(ಅದೇ ಗಣೇಶ ದೇವಸ್ಥಾನ. ಸಾಂಬ, ಶಿವ ಇದ್ದಾರೆ)
ಶಿವ : ಇಷ್ಟೊಂದು ಕಥೆ ಕಾದಂಬರಿ ಓದೇನಿ, ದೇವರು ಕತ್ತೇವರ ಕೊಟ್ಟದ್ದನ್ನ ನಾನೆಲ್ಲೂ ಓದಲಿಲ್ಲಪ್ಪ! ನಿವ್ವಳ ಲಾಭ ಏನೂಂದರೆ ಕತ್ತೆ ಕಾಯೋ ಕೆಲಸ ಸಿಕ್ಕಿತು, ಅಷ್ಟೆ.
ಸಾಂಬ : ಧಡ್ಡ ನನಮಗನೆ! ಇಷ್ಟೂ ತಿಳಿಯೋದಿಲ್ಲವೆ? ನಿನಗೂ ಒಂದು ತಲೆ ಇದೆ; ದೇವರು ಕೊಟ್ಟ ಕತ್ತೆ ಇದೆ. ಇನ್ನೇನು ಬೇಕು? ನನ್ನ ಕೇಳಿದರೆ ಈ ಕತ್ತೇನ್ನ ಕನಿಷ್ಟ ಒಂದು ಕೋಟಿ ರೂಪಾಯಿಗೆ ಮಾರಬಹುದು. ತೋರಿಸಲ? ಅಯ್ಯಾ ಡಿಂಗ್ಡಾಂಗ್!
(ಕತ್ತೆ ಹೂಂಕರಿಸುತ್ತದೆ)
ಇಲ್ಲಿಬಾ.
(ಬರುತ್ತದೆ)
ಕೂತುಕೊ.
(ಕೂರುತ್ತದೆ)
ನಿಂತುಕೊ.
(ನಿಲ್ಲುತ್ತದೆ)
ಎಲ್ಲಿ ಸ್ವಲ್ಪ ಕುಣಿ ನೋಡೋಣ.
(ಕುಣಿಯುತ್ತದೆ)
(ಶಿವನಿಗೆ ಆನಂದ ಆಶ್ಚರ್ಯವಾಗಿದೆ. ಈಗ ಇಬ್ಬರೂ ಹಾಡುತ್ತ ಕುಣಿಯುತ್ತಾರೆ, ಕತ್ತೆಯೊಂದಿಗೆ)
ಸಾಂಬ ಶಿವ :
ಸಲಾಮಲೇಕುಂ ಡಿಂಗ್ಡಾಂಗ್ ಸಾಹೇಬರ
ಬಲೆ ಮೋಜುದಾರ!
ಯಾರಿಲ್ಲ ಎದುರಿಗೆ ನಿಲ್ಲವರ
ನಿಮ ಸಮಾನರಾಯರ ಪಲ್ಲ
ಈ ನಾಡನ್ನಾಳೋರಾಜ ಹುಲಿ ಅಲ್ಲ ಚಿರತೆಖೋಜ
ಅವನಿಗಿನ್ನ ನೇವೆ ಉತ್ತಮರಾ! ಓ ಸಾಹೇಬರ ಅ ಪಲ್ಲ
ಮುಂಗಾಲಿಂದ ನಡೆಯುತ್ತೀರಿ
ಹಿಂಗಾಲಿಂದ ಒದೆಯುತ್ತೀರಿ
ಎರಡೆರಡು ನಾಲ್ಕರಿಂದ
ಒದ್ದೂ ನಡೆದೂ ಕುಣಿಯುತ್ತೀರಿ
ಈ ನಾಡನ್ನಾಳೊ ರಾಜ ಬರೆ ಎರಡೆ ಕಾಲಿನ ಮನುಜ
ಅವನಿಗಿನ್ನ ನೀವೇ ಉತ್ತಮರಾ
ವೇದಮಂತ್ರ ವಿದ್ಯಾಬುದ್ಧಿ
ನಿಮಗೆ ಕೊಳೆತು ನಾರುವ ರದ್ದಿ
ಎಲ್ಲಾ ತಿಂದು ತೇಗಿ ತೇಗಿ
ಹಾಕುತ್ತೀರಿ ಭಾರೀ ಲದ್ದಿ
ಈ ನಾಡನ್ನಾಳೊ ರಾಜ ತಲೆ ತುಂಬ ಬದನೆಬೀಜ
ಅವನಿಗಿನ್ನ ನೀನೇ ಉತ್ತಮರಾ! ಓ ಸಾಹೇಬರಾ
ಸಾಂಬ : ಈಗ ಸೀರೆ, ರವಕೆ ಕೊಡು.
(ಕೊಡುವನು)
ಇದೇನಯ್ಯಾ ಹಸಿರು ಸೀರೆ, ನೀಲಿ ರವಕೆ?
ಶಿವ : ಆ ದಿನ ಅವಳು ಇದೇ ಥರ ಸೀರೆ ಉಟ್ಟಿದ್ದಳಪ್ಪ.
ಸಾಂಬ : ನಾನೀಗ ನಿನಗೆ ಅವಳ ಧರ ಕಾಣಿಸಬೇಕು?
ಶಿವ : ನೀ ನಮ್ಮಪ್ಪ ಅಲ್ಲವ?
ಸಾಂಬ : ಸರಿಯಾಗಿ ಕೇಳಿಕೊ. ನಾನು ಒಳಕ್ಕೆ ಹೋಗಿ ಆ ಮನೇಲಿ ಕೆಲಸ ಸಿಕ್ಕೋತನಕ ಸ್ವಲ್ಪ ಹೊತ್ತು ಬೇಕು, ನಮ್ಮಪ್ಪ ಎಷ್ಟು ಹೊತ್ತು ಹೋದ ಅಂತ ಅವಸರ ಮಾಡಬೇಡ.
ಶಿವ : ಆಯ್ತು.
ಸಾಂಬ : ಇನ್ನೂ ತಡ ಆದರೆ ಸಿಳ್ಳೆಗಿಳ್ಳೆ ಹಾಕಬೇಕು.
ಶಿವ : ಇಲ್ಲ.
ಸಾಂಬ : ಹ್ಯಾಗೋ ಆ ಹುಡಿಗೀನ್ನ ನಾ ಹಿತ್ತಲಕಡೆ ಕಳಿಸ್ತೇನೆ. ಅಲ್ಲೀತನಕ ನೀನು ನಾಗರಿಕವಾಗಿ ಇರಬೇಕು, ತಿಳೀತ?
ಶಿವ : ನನಗೆ ತುಂಬಾ ಹೊತ್ತು ಸುಮ್ಮನಿರೊಕಾಗೋದಿಲ್ಲ, ಏನ್ ಮಾಡಲಿ?
ಸಾಂಬ : ಕೈಕಾಲು ಬೆರಳು ಎಣಿಸ್ತಾ ಇರು.
ಶಿವ : ಆಯ್ತು.
ಸಾಂಬ : ಈ ಮಧ್ಯೆ ಅಪ್ಪತಪ್ಪಿ ಅವರಪ್ಪ ಬಂದರೆ….
ಶಿವ : ನನಗವಳಪ್ಪ ಬೇಡ, ಆ ಹುಡುಗೀನೇ ಬೇಕು.
ಸಾಂಬ : ಯೋ, ಮದುವೆ ಆಗೋತನಕ ಆತ ಮಧ್ಯೆ ಇದ್ಏ ಇರತಾನೆ ಕಣೊ,
ಶಿವ : ಹಾಗಾದರೆ ಈಗ ನೋಡಪ್ಪ, ನಿನ್ನ ಸಹಾಯ, ನಿನ್ನ ಅನುಭವ ಬೇಕು; ಏನು ಮಾಡಲಿ?
ಸಾಂಬ : ಹಿಂಗ್ ಬಾ ದಾರಿಗೆ. ನಿನ್ನ ಪರೀಕ್ಷೆ ಇರೋದು ಈಗಲೇ. ಆತ ಏನು ಮಾತಾಡಿದರೂ ಒಂದೊಂದು ಮಾತನ್ನ ವಿಚಾರಮಾಡಿ ಮಾತಡೋರ ಹಾಗೆ ಆಹಾ! ಅಂತ ಹೇಳತಾ ಇರು, ಅಷ್ಟೆ.
ಶಿವ : ಆಹಾ!
ಸಾಂಬ : ಮಾತಿಗೊಮ್ಮೆ ನಗತಾ ಇರಬೇಕು. ಆಹಾ ಅಂತಲೂ ಹೆಳತಿರಬೇಕು.
ಶಿವ : ಆಹಾ!
ಸಾಂಬ : ತಿಳೀತ?
ಶಿವ : ಆಹಾ!
ಸಾಂಬ : ನನ್ನ ಮುಂದಲ್ಲ ಆಹಾ ಅನ್ನೋದು, ನಿನ್ನ ಮಾವನ ಮುಂದೆ.
ಶಿವ : ನಾ ಬರೀ ಇಷ್ಟೆ ಮಾತಾಡಿದರೆ ಮೂಕ ಅಂದುಕೊಳ್ತಾನೋ ಏನೊ!
ಸಾಂಬ : ಅಂದಕೊಳ್ಲಿ. ನಿನ್ನ ಮೂರ್ಖತನವನ್ನಾದರೂ ಮುಚ್ಚಬಹುದೊ?
ಶಿವ : ಆಹಾ!
ಸಾಂಬ : ಕಳ್ಳ ನನ್ನ ಮಗನೇ, ನನಗೇನಾರ ನಿನ್ನ ವಯಸ್ಸಿದ್ದಿದ್ದರೆ ತೋರಸ್ತಿದ್ದೆ.
ಶಿವ : ಸದ್ಯ ಇಲ್ಲವಲ್ಲ!
ಸಾಂಬ : ಏನಂದಿ?
ಶಿವ : ಆಹಾ! ನನ್ನ ವಯಸ್ಸು ತುಳುಕ್ತಾ ಇದೆ.ದ ಅವಸರ ಮಾಡಪ್ಪ?
ಸಾಂಬ : ಅಂದರೆ ನಾ ಈಗ ಹೊರಡಬೇಕು.
ಶಿವ : ಹೊರಡಬೇಕು.
ಸಾಂಬ : ತಡ ಮಾಡಬಾರದು.
ಶಿವ : ಕೂಡದು.
ಸಾಂಬ : ತಡ ಮಾಡಿದರೆ ಅಪಾಯ ಇದೆ.
ಶಿವ : ಅಪಾಯ ಇದೆ.
ಸಾಂಬ : ನನ್ನ ಮಾತು ಬಿಟ್ಟು ಇನ್ನೇನಾರ ಬೊಗಳು ಅಂದರೆ….
ಶಿವ : ಬೊಗಳು ಅಂದರೆ.
ಸಾಂಬ : ಥೂ ಕಳ್ಳ ನನಮಗನೆ (ಎಂದು ಮೆಚ್ಚಿಗೆಯಿಂದ ಶಿವನ ಕೆನ್ನೆಗೆ ತಟ್ಟಿ) ನೆಪ್ಪಿರಲಿ, ಅವರ ಮನೇಲಿ ನನ್ನ ಹೆಸರು ಬಂಗಾರಿ!
ಶಿವ : ಆಹಾ!
Leave A Comment