(ಸಾಹುಕಾರನ ಮನೆ, ಗಜನಿಂಬೆ ಕಿಟಕಿ ಹತ್ತಿರ ನಿಂತಿದ್ದಾಳೆ. ಸಾಂಬ, ಅಂದರೆ ಬಂಗಾರಿ ಗಜನಿಂಬೆಯ ಹತ್ತಿರ ನಿಂತಿದ್ದಾಳೆ)

ಗಜನಿಂಬೆ :
        ನಾ ತಾಳೆ! ವೇದನೆ
        ಅಗಲಿಕೆಯಾ 
        ಸ್ಮರನಾ ಬಾಣಾ ಸಹಿಸೆ ನಾನಾ .
        ಪ್ರಿಯ ಯಾಕೆ ಬರದೆ ನಿಂತಾ ಕಾಂತಾ
        ಸ್ಮರನಿಗೆ ತರುಣಿಯ
        ವಶಗೈಯುತಾ

(ಸ್ವಗತ) ಆಹಾ ಮೊನ್ನೆಯಷ್ಟೇ ಆ ತರುಣನು ನನ್ನ ಮಾನಸವನ್ನು ಕದ್ದು ಮರುಳು ಮಾಡಿ ಹೋದಾಗಿನಿಂದ ನನ್ನ ಹೃದಯವು ವಿರಹದ ಉರಿಯಲ್ಲಿ ಬೇಯುತ್ತಿರುವುದು. ನನ್ನಂಥ ಕೋಮಲ ತರುಣಿಯನ್ನು ಮಾರಶರಘಾತಕ್ಕೆ ಗುರಿ ಮಾಡಿ ಹೋಗುವುದು ತರವಲ್ಲ ಅಂತ ಆತನಿಗೆ ಬುದ್ಧಿ ಹೇಳುವವರು ಯಾರು? ನಲ್ಲನನ್ನು ಕಾಣದೆ ನನ್ನ ಮನವು ನಿಲ್ಲದಾಗಿದೆ. ರಾತ್ರಿ ನಿದ್ದೆ ಇಲ್ಲದೆ ಹೊರಳಿ ಹೊರಳಿ ಸಾಯುತ್ತಿದ್ದೇನೆ ಅಂತ ಅವನಿಗೆ ಹೇಳುವವರು ಯಾರು? ಆಹಾ! ಅಗೋ ಅವನೇ ಬಂದ. ಈ ಹೆಂಗಸು ನಮ್ಮ ಮನೆಯಲ್ಲಿ ಆಳಿನ ಕೆಲಸ ಕೊಡಿರೆಂದು ಅಂಗಲಾಚಿ ಕೇಳುತ್ತಿದ್ದಾಳೆ. ಅಮ್ಮನಿಗೆ ಹೇಳಿ ಕೆಲಸ ಕೊಡಿಸಿ, ಅವಳನ್ನು ಮೊದಲು ಆಪ್ತ ಸಖಿಯನ್ನಾಗಿ ಮಾಡಿಕೊಳ್ಳುತ್ತೇನೆ. ಆಮೇಲೆ ಇವಳ ಸಹಾಯದಿಂದ ಆ ಕಳ್ಳನನ್ನು ಹಿಡಿಯುತ್ತೇನೆ. (ಪ್ರಕಾಶ) ಏನೇ ಕೆಲಸ ಬೇಕೂ ಅಂದ್ರೆ ಅಮ್ಮ ಬರೋತನಕ ಕಾಯಬೇಕು. ನಿನ್ನ ಹೆಸರೇನಂದೆ?

ಸಾಂಬ : ಬಂಗಾರಿ.

ಗಜನಿಂಬೆ : ಇದೇ ಊರಿನವಳಾ?

ಸಾಂಬ : ಹೌದು.

ಗಜನಿಂಬೆ : ಬಂಗಾರಿ, ಆ ಹಿತ್ತಲ ಹತ್ರ ಒಬ್ಬ ಹುಡುಗಾ ನಿಂತಾನ್ನೋಡು. ಯಾರವನು? ಗೊತ್ತಾ ನಿನಗೇನಾದರೂ?

ಸಾಂಬ : (ನೋಡಿ ತನ್ನಲ್ಲೇ) ನನ್ನ ಮಗ ಆಗಲೆ ಹಾಜರಾಗಿ ಬಿಟ್ಟನಾ! (ಪ್ರಕಾಶ) ಗೊತ್ತೂ ತಾಯಿ. ನಮ್ಮ ಗಲ್ಲೀಯವನೆ.

ಗಜನಿಂಬೆ : ನಿಮ್ಮ ಗಲ್ಲಿಯವನಾ? ಏನು ಅವನ ಹೆಸರು?

ಸಾಂಬ : ಶಿವ ಅಂತ. ಯಾಕ್ರಿ ಅವ್ವ?

ಗಜನಿಂಬೆ : ಈಗ ಮೂರು ದಿನದಿಂದ ಅವನು ಅಲ್ಲೇ ನಿಂತಿರತ್ತಾನೆ. ಜೊತೆಗೊಬ್ಬ ಮುದುಕನೂ ಇದ್ದ. ಇವೊತ್ತು ಯಾಕೋ ಬಂದಿಲ್ಲ ಅವನು.

ಸಾಂಬ : ಆ ಮುದುಕ ಹೆಂಗೆ, ನೋಡೋದಕ್ಕೆ ಚೆನ್ನಾಗಿದ್ದನಾ?

ಗಜನಿಂಬೆ : ಥೂ ಮುದಿಕೋತಿ ಥರಾ ಇದ್ದ. ಸ್ವಲ್ಪ ಹೆಚ್ಚು ಕಮ್ಮಿ ನಿನ್ನ ಹಾಗೇ ಅಂದುಕೋ. ಹುಡುಗ ಮಾತ್ರ ತುಂಬ ಚೆಲುವ, ಅಲ್ಲೇನೆ?

ಸಾಂಬ : ಎಂಥ ಚೆಲುವಿಕೆ ಬಿಡಮ್ಮ. ಮಾರಿದರೆ ಎರಡು ಬೀಡಿ ಬರೋದಿಲ್ಲ. ಅವನ ಮುಸಡಿ ನೋಡಿ! ಸರಿಯಾಗಿ ನಗೋದಕ್ಕೂ ಬರೋದಿಲ್ವೆ. ಆ ಇನ್ನೊಬ್ಬ; ಸ್ವಲ್ಪ ವಯಸ್ಸಾದೋನು ಅಂದಿರಲ್ಲ, ಆತ ನೋಡಿ ತುಂಬಾ ರಸಿಕ. ವಯಸ್ಸೂ ಜಾಸ್ತಿ ಆಗಿಲ್ಲ ಅವನಿಗೆ. ಏನ್ ಚೆಂದ ಹಾಡ್ತಾನೆ, ಕುಣೀತಾನೆ, ಜನ ಅವನ್ನ ಏನ್ ಕೇಳ್ತಾರೆ ಗೊತ್ತಾ? ‘ಸ್ವಾಮಿ ನಿಮ್ಮ ಯೌವ್ವನದ ಗುಟ್ಟೇನು?’

ಗಜನಿಂಬೆ : ಥೂ ಆ ಕಪಿ ಮುಂಡೇದನ್ನದ ನೋಡಿದರೆ ಅದರ ಮುಖದ ಮೇಲೆ ವಾಂತಿ ಮಾಡೋಣ ಅನ್ಸುತ್ತೆ. ಅವನ ಮುಂದೆ ನೀನೇ ವಾಸಿ. ಆದರೆ ಆ ಹುಡುಗ ಇದಾನಲ್ಲ, ಒಳ್ಳೆ ಕಾಮ, ಕಾಮಣ್ಣ ಕಣೆ.

ಸಾಂಬ : ಕಳ್ಳ ನನಮಗ ಕಣಮ್ಮ ಅವನು. ಅವನ ಜೊತೆಗಿದ್ದಾನಲ್ಲ ಸ್ವಲ್ಪ ವಯಸ್ಸಾದೋನು, ಆತ ನೋಡಿ ಮಹಾ ಸಜ್ಜನ! ಈ ಮುಂಡೇದಕ್ಕೆ ಅವನ ಹಾಗೆ ಉಗಿಯೋದಕ್ಕೂಬರೋದಿಲ್ವೆ.

ಗಜನಿಂಬೆ : ಆ ಮುದಿಯನ ಬಗ್ಗೆ ನಿನಗೆ ಅಷ್ಟೊಂದು ಪ್ರೀತಿ ಇದ್ರೆ ಅವನ ಬೆನ್ನು ಹತ್ತಿ ಹೋಗು. ಇಲ್ಲಿಗೆ ಯಾಕೆ ಬಂದೆ? ಇನ್ನೊಂದು ಸಲ ಅವನ ವಿಷಯ ಹೇಳಿದ್ರೆ ನಿನ್ನ ಕೆಲಸಾನೂ ಬೇಡ, ನೀನೂ ಬೇಡ. ಸಧ್ಯ ಈ ದಿನ ಅದ್ಯಾಕೋ ಆ ಮುದಿಗೂಬೆ ಬಂದಿಲ್ಲ.

ಸಾಂಬ : (ಸ್ವಗತ) ಸಾಂಬಾ ಇದು ನಿನ್ನ ಕೇಸಲ್ಲ ಕಣೊ. ಅಲ್ಲ, ಇಷ್ಟು ದಿವಸ ನನ್ನ ಮಗನ್ನ ಪೆದ್ದು ಮುಂಡೇದೂ ಅಂತಿದ್ದೆ. ಇಲ್ಲಿ ನೋಡಿದ್ರೆ ಈ ಹುಡಿಗೀ ಎದೆಯೊಳಗೇನೋ ಗಡಿಬಿಡಿ ಮಾಡಿಬಿಟ್ಟಿದ್ದಾನೆ! ಬಲ್ನನ್ಮಗಾ! ಬಲ್ನನ್ಮಗಾ!ಶಿವ ನನಗೆ ವಯಸ್ಸಾಯ್ತು ಅಂತ ಒಪ್ಪಿಕೊಮಡೆ ಕಣೊ.

ಗಜನಿಂಬೆ : ವಯಸ್ಸೆಷ್ಟು?

ಸಾಂಬ : ಯಾರದು, ನನ್ನ ವಯಸ್ಸಾ?

ಗಜನಿಂಬೆ : ಥೂ, ಆ ಹುಡುಗಂದು.

ಸಾಂಬ : ನಲವತ್ತೋ ಐವತ್ತೋ ಇರಬೇಕು.

ಗಜನಿಂಬೆ : ಏನೇ ಆಗಿದೆ ನಿನಗೆ? ಸರಿಯಾಗಿ ಮಾತಾಡ್ತೀಯಾ, ಇಲ್ಲ ಮನೆ ಆಚೆ ಹೋಗ್ತೀಯಾ?

ಸಾಂಬ : ಇಲ್ಲಮ್ಮಾ, ಹುಡುಗನಿಗೆ ತುಂಬಾ ಎಳೇ ವಯಸ್ಸು.

ಗಜನಿಂಬೆ : ಹುಡುಗ ತುಂಬಾ ಒಳ್ಳೆಯವನು ಅಂದಿಯೇನು?

ಸಾಂಬ : ಒಳ್ಳೆಯವನೆ. ನಡತೆ ಸರಿಯಿಲ್ಲ.

ಗಜನಿಂಬೆ : ನಡತೆಗೇನಾಗಿದೆ? ನಿನ್ನೆ ನೋಡಿದೆ, ಚೆನ್ನಾಗೇ ನಡೀತಾನೆ, ನೋಡೋದಕ್ಕೆ ತುಂಬಾ ಚೆನ್ನಾಗಿದ್ದಾನೆ ಅಂದಿಯೇನು?

ಸಾಂಬ : ಚೆನ್ನಾಗೇನೋ ಇದಾನೆ. ನಿಲ್ಲೋ ಶೈಲಿ ಸರಿ ಇಲ್ಲ.

ಗಜನಿಂಬೆ : ಅದ್ಯಾಕೆ, ನೋಡು ಎಷ್ಟು ಚೆನ್ನಾಗಿ ನಿಂತ್ಕೊಂಡಿದಾನೆ.

ಸಾಂಬ : ಬಡವ ನೋಡಿ, ಮುಖ ಕೊಳಕಾಗಿದೆ.

ಗಜನಿಂಬೆ : ಅದ್ಯಾಕೆ? ಮುಖ ಎಷ್ಟು ಮುದ್ದಾಗಿದೆ ನೋಡೆ.

ಸಾಂಬ : (ಸ್ವಗತ) ಸಾಂಬ ಇನ್ನು ನಿನ್ನ ಆಟ ನಡೆಯೊದಿಲ್ಲ ಕಣೊ. ಶಿವ ಅವಳ ಮುನಸ್ಸಿನಲ್ಲಿ ನಟ್ಟುಬಿಟ್ಟಿದ್ದಾನೆ (ಪ್ರಕಾಶ) ಅದೇನೋ ಸರಿ ತಾಯಿ ಅವನ ನಡತೆ, ನಲ್ಲೋ ಶೈಲಿ, ಅವನ ಮುಖ, ಅವನ ಬಡತನ ಎಲ್ಲ ಚೆನ್ನಾಗಿದೆ, ಆದ್ರೆ ಈಗ ಮೂರು ದಿನದಿಂದ ಯಾವುದೋ ರೋಗ ಬಡಕೊಂಡಿದೆ, ಪಾಪ.

ಗಜನಿಂಬೆ : ರೋಗ? ಮೂರು ದಿನದಿಂದ?

ಸಾಂಬ : ಹೂ. ಯಾವಳೋ ಒಬ್ಬ ಚೆಲುವೇನ್ನ ನೋಡಿದನಂತೆ. ಆವಾಗಿನಿಂದ ತಂತಾನೆ ಮತಾಡಿಕೋತಾನೆ. ಆಕಾಶದಕಡೆ ನೋಡತಾನೆ, ರಾತ್ರಿ ಎದ್ದೂ ಎದ್ದೂ ಬೀಳತಾನೆ. ಬಿದ್ದೂ ಬಿದ್ದೂ ಏಳತಾನೆ, ಬೆವರತಾನೆ, ನಡಗತಾನೆ.

ಗಜನಿಂಬೆ : (ನಗುತ್ತಾ) ಯಾವಳಂತೆ ಅವಳು?

ಸಾಂಬ : ಇದೇ ಊರವಳೆ!

ಗಜನಿಂಬೆ : ಹೌದಾ? ಯಾರವಳು?

ಸಾಂಬ : ಇದೇ ಗಲ್ಲಿಯವಳೇ?

ಗಜನಿಂಬೆ : ಹೌದಾ? ಯಾರವಳು?

ಸಾಂಬ : ಈ ಮನೆಯವಳೆ!

ಗಜನಿಂಬೆ : ಏನು, ಈ ಮನೆಯೋಳಾ? ಏನಂತೆ ಅವಳ ಹೆಸರು?

ಸಾಂಬ :
        ಅಜದಂಥ ದೇಹ
        ಗಜದಂಥ ನಡಿಗೆ
        ಮಜ ಮಾಡೋನು ಬಾರೆ ಅಂದ್ರೆ
        ಸಜ ಕೊಡ್ತಾಳೆ ಗಜನಿಂಬೆಅಂತಾನೆ!

ಗಜನಿಂಬೆ : (ನಗುತ್ತಾ) ಎಲ್ಲಾ ಸುಳ್ಳು.

ಸಾಂಬ : ಸುಳ್ಳು ಯಾಕೆ ಹೇಳ್ಳಿ ತಾಯಿ. ಅವನೇ ನಿನ್ನ ಹತ್ರ ನನ್ನನ್ನು ಕಳಿಸಿದ. ನೀನು ಏನಾರ ಅವನ್ನ ಪ್ರೀತಿ ಮಾಡೋದಿಲ್ಲ ಅಂದ್ರೆ ಹುಡುಗ ಸತ್ಹೋಗತಾನೆ. ಸುಮ್ ಸುಮ್ನೆ ಸಾಯ್ತಾನಲ್ಲ ಎಳೆ ಹುಡುಗಾ ಅಂತ ದಯಮಾಡಿ ಬಂದೆ. ನಿನಗೆ ಆ ಹುಡುಗ ಬೇಕಂದ್ರೆ ನಿಮ್ಮದ ಮನೇಲಿ ನನಗೊಂದು ಕೆಲಸ ಕೊಡಿಸು.

ಗಜನಿಂಬೆ : ಅಮ್ಮ ಬರಲಿ ತಾಳೆ. ನೋಡೆ : ಹಾಳಾದ್ದು ಆ ಕತ್ತೆ ಮೇಲೆ ಕೈ ಊರತಾನೆ. ನೋಡು, ಅವರ ಬೆನ್ನಮೇಲೆ ಕೈಯಾಡಿಸ್ತಾನೆ! ಥೂ ಅಲ್ಲಿ ನೋಡೇ ಅದರ ಮೂತಿ ಹತ್ತರ ಮುಖ ಒಯ್ದು ಏನೇನೋ ಹೇಳತಾನೆ. ನಾನೇ ಕತ್ತೆ ಆಗಿ ಹುಟ್ಟಬಾರದಿತ್ತೆ ಅನ್ನಿಸುತ್ತೆ. ಬಂಗಾರೀ, ಈ ಅಯೋಗ್ಯ ಹೀಗೆಲ್ಲ ಒಂದು ಕತ್ತೆ ಮಾಡಬಹುದೇನೆ. ಈತನಿಗೋಸ್ಕರ ಮೂರು ದಿನದಿಂದ ನಿದ್ದೆ ಮಾಡಿಲ್ಲ ನಾನು, ಗೊತ್ತ?

ಸಾಂಬ : ಅಯ್ಯೋ ಪಾಪ.

ಗಜನಿಂಬೆ : ಬಂಗಾರಿ ಅವನನ್ನ ಸಿಕ್ಕಾಪಟ್ಟೆ ಯದ್ವಾತದ್ವಾ ಬಯ್ಯೆ.

ಸಾಂಬ : ಯಾಕ್ರಮ್ಮ?

ಗಜನಿಂಬೆ : ನೀನು ಬಯ್ಯಿ. ಅಂದ್ರೆ ಅವನ ಬಗ್ಗೆ ನನಗೆ ತಿರಸ್ಕಾರ ಭಾವನೆ ಹುಟ್ಟುತ್ತೆ. ಆಗ ನಾನು ಆರಾಮ ನಿದ್ದೆ ಮಾಡತೀನಿ.

ಸಾಂಬ : ಬಯ್ಯಬೇಕಾ?

ಗಜನಿಂಬೆ : ಬಯ್ಯೆ ಅಂದ್ರೆ.

ಸಾಂಬ : ಛೇ ಛೇ, ಮನುಷ್ಯನಾ ಅವನು? ಕೋತಿ! ಕೋತಿ! ಎಷ್ಟೊಂದು ಕೋತಿಗಳಿಲ್ಲ ಈ ಜಗತ್ತಿನಲ್ಲಿ! ಈತನದೇನು ಮಹಾ ವಿಶೇಷ? ನೀವು ಇನ್ನೊಂದು ಕೋತಿ ಆರಿಸಿಕೊಳ್ಳಿ ಅಮ್ಮಾ.

ಗಜನಿಂಬೆ : ಆ ಇನ್ನೊಂದು ಕೋತಿ ಇಷ್ಟು ಚಂದ ಇರಬೇಕಲ್ಲೆ?

ಸಾಂಬ : ಛೇ, ಅವನ ಮುಸಡಿ ನೋಡಮ್ಮ ಎಷ್ಟು ಕೊಳಕಾಗಿದೆ ನನ್ಮಗಂದು.

ಗಜನಿಂಬೆ : ಆದ್ರೆ ಆ ಮುಖ ತುಂಬಾ ಮುದ್ದಾಗಿದೆ ಅಲ್ವಾ?

ಸಾಂಬ : ಬರೀ ಕಿಸಕಿಸ ಹಲ್ಕಿಸೀತಾನೆ.

ಗಜನಿಂಬೆ : ಹೌದು ಥೇಟ್ ತುಂಟ ಕೃಷ್ಣನ ಹಾಗೆ!

ಸಾಂಬ : ಥೂ ಆ ಕಣ್ಣು ನೋಡಮ್ಮ ಕವಳಿ ಹಣ್ಣಾಗಿವೆ ಅಂದ್ರೆ.

ಗಜನಿಂಬೆ : ಆದ್ರೆ ಫಳಫಳ ಹೊಳೆಯುತ್ತಿವೆ.

ಸಾಂಬ : ಅವನ ತುಟಿ ಥೂ ನೋಡಾಕಾಗೋದಿಲ್ಲ!

ಗಜನಿಂಬೆ : ಹೌದು. ತಕ್ಷಣ ಮುದ್ದು ಕೊಡೋನ ಅನ್ನಿಸುತ್ತೆ.

ಸಾಂಬ : ನಾ ಹೇಳಿದ್ದಕ್ಕೆಲ್ಲಾ ನೀನು ರಿವರ್ಸ್‌ಗೇರ ಹಾಕಿದರೆ ನಾ ಬೈದೇನು ಪ್ರಯೋಜನ? (ಗೋದಾವರಿ ಬರುವಳು)

ಗೋದಾವರಿ : ‘ಏ ಗಜನಿಂಬೆ’ ಸಾವಿರ ಬಾರಿ ಹೇಳೀನಿ. ಆ ಕಿಟಕಿ ಹತ್ತರ ನಿಲ್ಲಬೇಡಂತ. ಇನ್ನೊಂದು ಸಾರಿ ಆ ಕಿಟಕೀಲಿ ನಿಂತು ಹಾದಿ ಬೀದಿ ನಾಯಿಗಳನ್ನು ನೀ ನೋಡಿದರೆ ಆ ನಾಯೀಕಾಲು ಮುರೀತೀನಿ, ಹುಷಾರ್.

ಸಾಂಬ : ಅವಳೂ ದೊಡ್ಡೋಳಾಗಿದಾಳೆ – ನೋಡಬೇಕಾದ್ದು ನೋಡಬಾರದ್ದು ಎಲ್ಲಾ ತಿಳೀತದೆ ಬುಡಿ.

ಗೋದಾವರಿ : ಇನ್ನೂ ಬುದ್ದೀ ಹಲ್ಲು ಮೂಡಿಲ್ಲ, ದೊಡ್ಡೋಳಂತೆ. ಅಂದಹಗೆ, ಇವಳ್ಯಾರೆ ಹೊಸಬಳು?

ಗಜನಿಂಬೆ : ಮನೆಗೆಲಸಕ್ಕೆ ಹೆಣ್ಣಾಳು ಬೇಕಂತಿದ್ದೆಯಲ್ಲ, ಬಂದಿದಾಳೆ.

ಗೋದಾವರಿ : ಕೆಲಸದವಳೂ ಬೇಡ, ಗಿಲಸದವಳೂ ಬೇಡ. ತೊಲೆ ತುಂಡಿನಂಥಾ ಇಬ್ಬರು ಹೆಂಗಸರು ಮನೇಲಿದ್ದೀವಿ. ಕೆಲಸದವಳು ಬೇರೆ ದಂಡ!

ಗಜನಿಂಬೆ : ನೀನೇ ಹೇಳಿದ್ದೆಯಲ್ಲವಮ್ಮ ಬೇಕಂತ.

ಗೋದಾವರಿ : ಆಗ ಹೇಳಿದ್ದೆ. ಈಗ ಬೇಡಾ ಅನಸತ್ತೆ.

ಗಜನಿಂಬೆ : ಕೆಲಸ ಚೆನ್ನಾಗಿ ಮಾಡ್ತಾಳೆ ತಗೊಳಮ್ಮಾ ಅಂದ್ರೆ.

ಗೋದಾವರಿ : ಸರಿ, ನಿನ್ನ ಶಿಫಾರಸು ಬೇರೆ! ಎಷ್ಟು ಸಂಬಳ ಕೊಡಬೇಕೆ?

ಸಾಂಬ : ಹತ್ತೇ ರೂಪಾಯಿ.

ಗೋದಾವರಿ : ಹತ್ತು ರೂಪಾಯಿ! ಎಷ್ಟು ವರ್ಷಕ್ಕೆ?

ಸಾಂಬ : ಒಂದು ತಿಂಗಳಿಗೆ.

ಗೋದಾವರಿ : ರಾಜರಿಗೂ ಇಷ್ಟು ಸಂಬಳ ಸಿಗುತ್ತೋ ಇಲ್ಲವೋ? ಏನೇನ್ ಕೆಲಸ ಮಾಡ್ತೀಯೆ?

ಸಾಂಬ : ತೊಳೀತೀನಿ, ಬೆಳಗತೀನಿ, ಗುಡಸ್ತೀನಿ, ಒಗೀತೀನಿ, ಹಾಸತೀನಿ, ಹೊಚ್ಚತ್ತೀನಿ, ತಿಂತೀನಿ, ಕುಡೀತೀನಿ, ಮಲಗತೀನಿ.

ಗೋದಾವರಿ : ಅಯ್ಯಯ್ಯಯ್ಯ…. ಎಷ್ಟು ಮಾತಾಡತೀಯೆ? ನಮ್ಮ ಮನೇಲಿ ಕೆಲಸ ಮಾಡೋದಾದರೆ ಬಾಯ್ಮುಚ್ಚಿಕೊಂಡಿರಬೇಕು ಅಷ್ಟೆ. ಬಾ, ಕೆಲಸ ತೋರಿಸತೀನಿ. (ಹೋರಡುವರು. ಅಷ್ಟರಲ್ಲಿ ಸಾಹುಕಾರ ಬರುವನು.)

ಸಾವ್ಕಾರ : ಅಬ್ಬಾ! ಹೊರಗಡೆ ಒಂದು ಕತ್ತೆ ನಿಂತಿದೆ ನೋಡೆ! ಒಳ್ಳೆ ಕುದರೆ ಥರಾ ಇದೆ.

ಗೋದಾವರಿ : ನಿಮ್ಮನ್ನ ನೋಡಿದ ಮೇಲೆ ಕತ್ತೆ ನೋಡೋದೇನ್ರಿ?

ಸಾವ್ಕಾರ : ನನಗಿಂತ ಚೆನ್ನಗಿದೆ ಕಣೆ! ನೋಡು ಬಾ.(ಎಲ್ಲರೂ ಕಿಟಕಿ ಹತ್ತಿರ ಹೋಗಿ ನೋಡುವರು)

ಗೋದಾವರಿ : ಅರೆ ಹೌದಲ್ರೀ! ಫಳಫಳ ಹೊಳೀತಿದೆ! ಅಮ್ಮಮ್ಮಮ್ಮಮ್ಮಾ…. ಅದರ ಕಿವಿ ಏನು! ಕಾಳೇನು! ಮೈಯೇನು!

ಸಾವ್ಕಾರ : ಎಷ್ಟಗಲ! ಎಷ್ಟುದ್ದ! ಎಷ್ಟೆತ್ತರ! ಎಷ್ಟು ಆಳ!

ಗೋದಾವರಿ : ಇನ್ನೂ ತನಕ ನಾನಿಂಥ ಕತ್ತೆ ನೋಡಿರಲಿಲ್ಲಾರಿ! ಎಲ್ಲಿ ಸಿಕ್ಕಿತು ನಿಮಗೆ?

ಸಾವ್ಕಾರ : ನೀನೊಬ್ಬಳು! ನಮ್ಮನೆ ಹಿತ್ತಲಲ್ಲಿ ನಿಂತಿದೆ; ನೋಡಿದೆ ಅಷ್ಟೆ.

ಗೋದಾವರಿ : ಆ ಹುಡುಗ ಅಲ್ಲಿ ನಿಂತಿದ್ದಾನಲ್ಲಾ. ಯಾರವನು?
(ಕತ್ತೆ ಒದರುತ್ತದೆ. ಸಾಂಬ, ಗಜನಿಂಬೆಗೆ ಸನ್ನೆಯಲ್ಲಿ ಹೊರಗಡೆ ಹೋಗುವಂತೆ ಹೇಳುತ್ತಾನೆ.)

ಗೋದಾವರಿ : ಅಬ್ಬಾ! ಏನ್ ಚೆನ್ನಾಗಿ ಒದರುತ್ತೆ ನೋಡಿ ಅಂದ್ರೆ!

ಸಾವ್ಕಾರ : ನೀನು ಹೇಳೋ ದೆವರ ನಾಮಕ್ಕಿಂಥ ಚೆನ್ನಾಗಿದೆ ಅಲ್ವೆ?

ಗೋದಾವರಿ : ಸರಿ, ಗಜನಿಂಬೆ ನೀನು ಸಂಗೀತದ ಪಾಠ ನೋಡಿಕೋ ಹೋಗು.

ಸಾಂಬ : ಅದ್ಯಾಕೆ, ಹಿತ್ತಲಲ್ಲಿ ನಿಂತುಕೊಂಡು ಕತ್ತೆ ಹಾಡು ಕೇಳಿಸಿಕೊಳ್ಳಲಿ ಬಿಡಿ. ಹೆಂಗೂ ಪುಗುಸಾಟೆ ಹಾಡ್ತಾ ಇದೆ.
(ಸಮಯ ಸಾಧಿಸಿ ಗಜನಿಂಬೆ ಹೋಗುವಳು. ಬಂಗಾರಿಯನ್ನು ಸಾವ್ಕಾರ ಗಮನಿಸಿ)

ಸಾವ್ಕಾರ : ಪರವಾಗಿಲ್ಲವೆ ಇವಳ್ಯಾರು?

ಗೋದಾವರಿ : ಕೆಲಸದವಳು.

ಸಾವ್ಕಾರ : ನೋಡೋದಕ್ಕೆ ಚೆನ್ನಾಗಿದಾಳೆ. ಮೂರು ಮಾತ್ರ ಸ್ವಲ್ಪ….

ಸಾಂಬ : ಮೂಗಿನಿಂದ ಕೆಲಸ ಮಾಡೋದಿಲ್ಲ ನಾನು. ಕೈಯಿಂದ ಮಾಡತೀನಿ.

ಗೋದಾವರಿ : ರೀ ನಿನ್ನೆ ಹನ್ನೆರಡು ಪೈಸ ಕಮ್ಮಿ ಬಂದಿತ್ತಲ್ಲ ಲೆಕ್ಕದಲ್ಲಿ, ಸರಿ ಹೋಯ್ತಾ ಅದು?

ಸಾವ್ಕಾರ : ಇನ್ನೂ ಇಲ್ಲ, ಮಾಡತೀನಿ.

ಗೋದಾವರಿ : ಹೋಗಿ ಮತ್ತೆ. ಬಾಯಿ ತೆರೆಕೊಂಡು ಬಂದ್ರು! ಬಾರೆ. (ಇಬ್ಬರೂ ಹೋಗುವರು. ಹೋದ ಹಾಗೇ ಹಿಂದೆ ಹಿಂದೆ ಸರಿಯುತ್ತಾ ಬರುವರು. ಅವರ ಮುಂದುಗಡೆಯಿಮದ ಕಾರಭಾರಿ ಬರುವನು. ಸಾಂಬನನ್ನು ನೋಡಿ ಅವನಿಗೆ ಆನಂದೋದ್ರೇಕವಾಗಿದೆ. ಸಾಂಬ ಗೋದಾವರಿ ಹೆದರಿದ್ದಾರೆ.)

ಗೋದಾವರಿ : ರೀ ರೀ ಯಾರೋ ಬಂದಿದಾರೆ ನೋಡಿ ಅಂದ್ರೆ.

ಕಾರಭಾರಿ : ಹಸಿರು ಸೀರೆ, ನೀಲಿ ರವಕೆ! ಹಸಿರು ಸೀರೆ, ನೀಲಿ ರವಕೆ! (ತನ್ನ ಭುಜ ತಾನೆ ತಟ್ಟಿಕೊಳ್ಳುತ್ತಾ) ಭಲೇ ಕಾರಭಾರಿ. ಕೊನೆಗೂ ಗೆದ್ದೆ ನನ್ಮಗನೆ.

ಸಾವ್ಕಾರ : (ಓಡಿಬಂದು ಭೀತನಾಗಿ ನಡುಗುತ್ತಾ) ಅರರೆ ಕಾರಭಾರಿಗಳು! ಬನ್ನಿ ಸ್ವಾಮಿ! ಲೇ ಲೇ ತಿಂಡಿ ಕಾಫಿ, ಊಟ, ಉಪ್ಪು ಹುಳಿ ಖಾರ ಎಲ್ಲ ತಂದುಕೊಡೆ. ಬನ್ನಿ ಸ್ವಾಮಿ.

ಕಾರಭಾರಿ : ಹಹಹಹ ಹಸಿರು ಸೀರೆ! ನೀಲಿ ರವಕೆ!

ಸಾವ್ಕಾರ : ಇವಳು ನಮ್ಮನೆ….

ಕಾರಭಾರಿ : ಗೊತ್ತು, ಗೊತ್ತು.

ಸಾವ್ಕಾರ : ಇವತ್ತೆ ಇವಳು ನಮ್ಮನೇಗೆ ಬಂದದ್ದು.

ಕಾರಭಾರಿ : ವಿಷಯ ನನಗ್ಗೊತ್ತು.

ಸಾವ್ಕಾರ : ನನ್ಹೆಂಡ್ತಿ ಪಾದ ಮುಟ್ಟಿ ಹೇಳ್ತೀನಿ ಸ್ವಾಮಿ : ನಾನೆಂದೂ ರಾಜದ್ರೋಹ ಮಾಡಿದೋನಲ್ಲ. ಕನಸು ಮನಸಿನಲ್ಲೂ ಕ್ರಾಂತಿ ವಿಚಾರ ಮಾಡಿದವನಲ್ಲ.

ಗೋದಾವರಿ : ಅಯ್ಯಯ್ಯಯ್ಯಯ್ಯೋ ನಿನ್ನೆ ಕನಸಿನಲ್ಲಿ ನಾನು ನಮ್ಮ ರಾಜರ ಪಾದಕ್ಕೆ ಮುದ್ದು ಕೊಡಲಿಲ್ವಾ?

ಸಾವ್ಕಾರ : ಹೌದು, ಹೌದು ಅವಳ ಜೊತೆ ನಾನೂ ಇದ್ದೆ. ನಾನೇ ಸಾಕ್ಷಿ ಸ್ವಾಮಿ…. ಆಮೇಲೆ ನಾನು ಅವರ ಬೂಟು ನೆಕ್ಕಲಿಲ್ಲವೇನೆ?

ಗೋದಾವರಿ : ಹೌದು, ಹೌದು.

ಸಾವ್ಕಾರ : ನಾನು ಇಲ್ಲೀತನಕ ಯಾವ ಕ್ರಾಂತಿಗೂ ಚಂದಾ ಹಣ ಕೊಟ್ಟಿಲ್ಲ ಸ್ವಾಮಿ. ಹಸಿರು ಹಳದಿ ಬಿಳಿ ಕೆಂಪು ಕರಿದು ಯಾವುದೇ ಕಲರನ ಕ್ರಾಂತಿಕಾರಿಗಳಿಗೂ ಚಂದಾ ಹಣ ಕೊಟ್ಟಿಲ್ಲಾ ಅಂದರೆ….

ಕಾರಭಾರಿ : ಅಚ್ಚಾ!

ಸಾವ್ಕಾರ : ಅಷ್ಟೇ ಅಲ್ಲ. ನನ್ನ ಸ್ನೇಹಿತರಿಂದಲೂ ಕೊಡಿಸಿಲ್ಲ ಸ್ವಾಮಿ. ಆ ಕ್ರಾಂತಿಕಾರಿಗಳು ನೀವು ಹತ್ತು ಪೈಸೆ ಆದರೂ ಕೊಡಿ ಸ್ವಾಮಿ ಅಂತ ಅಂಗಲಾಚಿದರು. ನಾನೇನಂದೆ ಗೊತ್ತಾ ಸ್ವಾಮಿ? ಕಳ್ಳನನ ಮಕ್ಕಳ್ರಾ ನನ್ನ ಪ್ರಾಣ ಹೋದರೂ ನಿಮಗೆ ಐದು ಪೈಸೆ ಕೊಡೋದಿಲ್ಲ – ಅಂದೆ ಸ್ವಾಮಿ.

ಕಾರಭಾರಿ : (ಇಲ್ಲೀತನಕ ತದೇಕ ಚಿತ್ತದಿಂದ ಚಿತ್ತದಿಂದ ಸಾಂಬನನ್ನೇ ನೋಡುತ್ತಿದ್ದ ಕಾರಭಾರಿ ತಕ್ಷಣ ರಮ್ಯ ನಾಯಕನಂತೆ ಹಾಡತೊಡಗುತ್ತಾನೆ)

ಕಂಡೆ ಕಂಡೆ ಕಂಡೇನೊ ಚೆಲುವೆಯ
ಕಣ್ಣೀನ ಮದಿರೆಯ
ಓಹೊ ಅದೇ ಹಸಿರು ಸೀರೆ
ಆಹಾ ಅದೇ ನೀಲಿ ರವಿಕೆ
ಸೀರೆ ಹಸಿರಿನ
ರವಿಕೆ ನೀಲಿಯ
ಕಲರು ಬಿಳಿಯ ಚೆಲುವೆ
ಇವಳೆ ರಾಜ ಕಂಡ ಚೆಲುವೆ

ಸಾವ್ಕಾರ್ರೇ, ನಿಮ್ಮ ಬಗ್ಗೆ ನಾನು ರಾಜರೂ ಎಷ್ಟು ಮಾತಾಡಿಕೊಂಡಿವಿ ಗೊತ್ತಾ?

ಗೋದಾವರಿ : ನಮ್ಮ ಬಗ್ಗೆ?

ಕಾರಭಾರಿ : (ಸಾಂಬನನ್ನು ತೋರಿಸುತ್ತಾ) ಇವಳ ಬಗ್ಗೆ ಅಂದ್ಕೊಳ್ಳಿ.

ಸಾವ್ಕಾರ : ಏನು ಸ್ವಾಮಿ?

ಕಾರಭಾರಿ : ಗಾಬರಿ ಆಗಬೇಡಿ ಸಾವ್ಕಾರೇ, ನಿಮ್ಮನನ್ನ ಬಯ್ತಾ ಇಲ್ಲ. ನಿಮ್ಮ ಮನೆ ಕದ ತಾನಾಗೇ ತಟ್ಟಿ ಎಂಥಾ ಸುದೈವ ಒಳಗಡೆ ಬರತ್ತಾ ಇದೆ ನೋಡಿ. ಏನಮ್ಮಾ ನಿನ್ನ ಹೆಸರು?

ಸಾಂಬ : ಬಂಗಾರಿ,

ಕಾರಭಾರಿ : ತಕ್ಕ ರೂಪ ತಕ್ಕ ಹೆಸರು. ರಾಜರ ಎದೆ ಢವ ಢವ ಹೊಡಕೊಳ್ಳೋದು ಅಂದರೆ ಹುಡುಗಾಟವಾ?

ಸಾವ್ಕಾರ : ಸ್ವಾಮಿ ಅದೇನು ವಿಷಯ ಸ್ಪಷ್ಟವಾಗಿ ಹೆಳಬಾರದೆ?

ಕಾರಭಾರಿ : ಹೆಳೋದಕ್ಕೇನಿದೆ ಸಾವ್ಕಾರೇ? ರಾಜರ ಅನುಗ್ರಹ ನಿಮ್ಮ ಮೇಲೆ ಸಂಪೂರ್ಣ ಆಗಿದೇಂತ ಇಟ್ಕೊಳ್ಳಿ! ಆಮೇಲೆ ನೀವು ನಮ್ಮನ್ನ ಮರೀಬಾರದು ಅಷ್ಟೆ.

ಸಾವ್ಕಾರ : ಸ್ವಾಮಿ ಅದೇನು ವಿಷಯ ಸ್ಪಷ್ಟವಾಗಿ ಹೇಳಬಾರದೆ?

ಕಾರಭಾರಿ : ಹೇಳೋದಕ್ಕೇನಿದೆ ಸಾವ್ಕಾರೇ? ರಾಜರ ಅನುಗ್ರಹ ನಿಮ್ಮ ಮೇಲೆ ಸಂಪೂರ್ಣ ಆಗಿದೇಂತ ಇಟ್ಕೊಳ್ಳಿ! ಆಮೇಲೆ ನೀವು ನಮ್ಮನ್ನ ಮರೀಬಾರದು ಅಷ್ಟೆ.

ಸಾವ್ಕಾರ : ಅಂದರೆ….

ಕಾರಭಾರಿ : ಅದೆಲ್ಲಾ ಮಾಮೂಲಿ ಬಿಡಿ. ನಿಮ್ಮ ಮಗಳ ವಿಚಾರ ರಾಜರ ಹತ್ತಿರ ಮೊದಲು ಹೇಳಿದವನು ನಾನೇ ಸ್ವಾಮಿ. ಬಂಗಾರಿ, ನೋಡ್ತಾ ಒರಿ. ಈ ಮನೆ ಬಂಗಾರದ್ದಾಗುತ್ತೆ!

ಸಾವ್ಕಾರ : ಸ್ವಾಮಿ ನನಗೆ ಹುಚ್ಚು ಹತ್ತೋಕ್ಮುಂಚೆ ಅದೇನು ವಿಷಯ ಹೇಳತೀರಾ?

ಕಾರಭಾರಿ : ಹೇಳೋಲ್ಲಾರೀ ಅದೇನ್ಮಾಡ್ತೀರಾ?

ಸಾವ್ಕಾರ : ಅಯ್ಯೋ ರಾಮರಾಮ.

ಗೋದಾವರಿ : (ಅಣಕಿಸುತ್ತಾ) ಅಯ್ಯೋ ಲಾಮಲಾಮ. ಸ್ಪಷ್ಟವಾಗಿ ಹೇಳಬಾರದೆ? ಕಾರಭಾರಿಗಳೇ ಇವಳು ನಮ್ಮ ಮಗಳಲ್ಲ.

ಕಾರಭಾರಿ : ಮಗಳಲ್ಲಾ?

ಗೋದಾವರಿ : ಅಲ್ಲ, ನಮ್ಮ ಮನೆ ಆಳು.

ಕಾರಭಾರಿ : (ಚಕಿತನಾಗುವನು. ಈಗ ಅವನ ಕಣ್ಣಲ್ಲಿ ಅಸಹ್ಯ ಬೆಳಕಾಡುವುದು) ನೀವಿಬ್ಬರೂ ಆ ಕಿಟಕಿ ಹತ್ತಿರ ಇರಿ. (ಇಬ್ಬರೂ ಹೋಗುವರು) ನೀನು ಮೊನ್ನೆ ಮದನೋತ್ಸವದಂದು ಉದ್ಯಾನವನಕ್ಕೆ ಹೋಗಿದ್ದೆಯೇನು?

ಸಾಂಬ : (ಅವಕಾಶ ಉಪಯೋಗಿಸುವುದಕ್ಕಾಗಿ ಸುಳ್ಳು ಹೊಸೆಯತೊಡಗುತ್ತಾನೆ) ಹೌದು ಸ್ವಾಮಿ.

ಕಾರಭಾರಿ : ಮೈಮೇಲೆ ಇದೇ ಸೀರೆ, ಇದೇ ರವಕೆ ಇತ್ತೆ?

ಸಾಂಬ : ಹೌದು ಸ್ವಾಮಿ.

ಕಾರಭಾರಿ : ಆ ದಿನ ನಿನ್ನನ್ನು ನೋಡಿ ಯಾರಾದರೂ ಪ್ರೇಮಪರವಶರಾದರೆ?

ಸಾಂಬ : ಒಬ್ಬರೇ, ಇಬ್ಬರೇ? ಅನೇಕರು ನನ್ನ ರೂಪರಾಶಿಯನ್ನು ಕಂಡು ಹುಚ್ಚರಾದದ್ದು ನಿಜ ಸ್ವಾಮಿ. ಅವರೇ ಇವರೇ ಎಂದು ಹೇಗೆ ಹೇಳಲಿ?

ಕಾರಭಾರಿ : ಒಬ್ಬರು ವಯಸ್ಸಾದವರು ನಿನ್ನ ಕಡೆಗೆ ತಮ್ಮ ಪ್ರೇಮದ ನೋಟಗಳನ್ನು ಬೀರಿ ಪರವಶರಾದದ್ದು ನೆನಪಿದೆಯೆ?

ಸಾಂಬ : ವಯಸ್ಸಾದವರು…. ಹೌದು…. ಅವರ ಮುಖದ ಮೇಲೆ ರಾಜಕಳೆ ಸುರಿ ಯುತ್ತಿತ್ತು,

ಕಾರಭಾರಿ : (ಆನಂದದಿಂದ) ಹೌದು ಆಮೇಲೆ?

ಸಾಂಬ : ಅವರು ನನ್ನನ್ನು ನೋಡಿ ಬಾಯಿ ತೆರೆದವರು ಮುಚ್ಚಲೇ ಇಲ್ಲ, ಈಗ ಅವರು ಬಾಯಿ ಮುಚ್ಚಿದ್ದಾರೆಯೇ ಸ್ವಾಮಿ?

ಕಾರಭಾರಿ : ಮುಗ್ಧ ಹೆಣ್ಣೆ, ನಿನ್ನ ಯೌವ್ವನದ ಬಲೆಯಲ್ಲಿ ಎಂಥಾ ದೊಡ್ಡ ಬೇಟೆ ಬಿದ್ದಿದೆಯೆಂಬ ಅರಿವು ನಿನಗಿಲ್ಲ! ಆ ದಿನ ನಿನ್ನನ್ನು ನೋಡಿ ಮುಚ್ಚದ ಹಾಗೆ ಬಾಯಿ ತೆರೆದವರೇ ನಮ್ಮ ಮಹಾರಾಜರು!

ಸಾಂಬ : (ಆಘಾತವನ್ನು ಅನುಭವಿಸುತ್ತಾ) ಹಾಯ್! ಹಾಯ್!

ಗೋದಾವರಿ : (ಕಿಟಕಿ ಹೊರಗಡೆ ನೋಡುತ್ತ) ಅಯ್ಯಯ್ಯೋ ಆ ಹುಡುಗ ಗಜನಿಂಬೆಯ ಹತ್ತರತ್ತರಾನೇ ಬಂದು ಮಾತನಾಡತಾನಲ್ರೀ, ನೋಡಿ ನೋಡಿ ಏ ಗಜನಿಂಬೇ ಹುಷಾರಾಗಿರೇ.

ಕಾರಭಾರಿ : ಯಾಕ್ರೀ ಕಿರಚುತೀರಿ? ಸುಮ್ಮನಿದ್ರೆ ಸರಿ. ಇಲ್ಲದಿದ್ದರೆ ಜೇಲಲ್ಲಿ ಕೊಳೀಬೇಕಾಗುತ್ತೆ, ಹೇಳಿರತೀನಿ. (ಸಾಂಬನಿಗೆ ಮಾತ್ರ ಕೇಳಿಸುವಂತೆ) ಬಂಗಾರಿ ನಿನ್ನ ದೈವ ಖುಲಾಯಿಸಬಹುದು ನನ್ನ ಮಾತು ಕೇಳೋದಾದ್ರೆ.

ಸಾಂಬ : ಕೇಳೋದಿಲ್ಲ ಅಂದಿನಾ?

ಕಾರಭಾರಿ : ನನಗೆ ನಿನ್ನ ವಿಷಯ ತಿಳಿಯಬೇಕು.

ಸಾಂಬ : ಕೇಳೀ ಅಂದ್ರೆ. ಮದುವೆ ಆಗಿದೆಯೇ ಅಂತ ಕೇಳಿ….

ಕಾರಭಾರಿ : ಮದುವೆ ಆಗಿದೆಯೇ?

ಸಾಂಬ : ಅಯ್ಯೋ ಸ್ವಾಮೇರಾ, ನನ್ನ ಗಂಡ ಇದ್ದಿದ್ದರೆ ಈ ರೀತಿ ಬೀದಿ ಪಾಲಾಗತಿದ್ದಿನ? ಮಾರಾಯ ಲೋಕ ಬಿಟ್ಟು ಹೊರಟೋದ ನೋಡಿ. ಬೀದಿ ನಾಯಿಗಳೆಲ್ಲಾ ನನ್ನ ಹೆಸರು ಕೇಳಿ ಕಾಲೆತ್ತಿದ್ದೇ ಎತ್ತಿದ್ದು. ನನ್ನ ಗಂಡ ಯಾಕೆ ಸತ್ತ ಅಂತ ಕೇಳಿ.

ಕಾರಭಾರಿ : ನಿನ್ನ ಗಂಡ ಯಾಕೆ ಸತ್ತ?

ಸಾಂಬ : ನೀನೊಳ್ಳೆ ಗಂಟುಬಿದ್ದೆ. ಅವನ್ಯಾಕೆ ಸಾಯತಾನೆ, ನಾನೇ ಕೊಂದೆ.

ಕಾರಭಾರಿ : ಯಾಕೆ?

ಸಾಂಬ : ಬುಡು ಮಾರಾಯಾ ನೀನೊಳ್ಳೆ ಗಿರಾಕಿ. ಪಕ್ಕದ ಮನೆ ಹುಡುಗನೊಂದಿಗೆ ಏನೋ ಗುಟ್ಟಿನ ಯವಹಾರ ಇಟ್ಟುಕೊಂಡಿದ್ದೆ. ಗಂಡನಿಗೆ ಗೊತ್ತಾಯಿತು.ಸುಮ್ಮನೆ ಯಾಕೆ ರಾದ್ಧಾಂತ ಅಂತ ನಾನೇ ನೇಣು ಹಾಕಿ ಕೊಂದುಬಿಟ್ಟೆ. ಏನೇನು ಕೆಲಸ ಮಾಡ್ತಿ ಅಂತ ಕೇಳಲ್ವಾ?

ಕಾರಭಾರಿ : ಏನ ಕೆಲಸ ಮಾಡ್ತಿ?

ಸಾಂಬ : ಅದನ್ನೇ ಹೇಳೋಕೆ ಬಂದೆ. ಒಬ್ಬ ಬೇಕೂಫನ ಮನೇಲಿ ಕೆಲಸಕ್ಕಿದ್ದೆ. ನಿನ್ನಂಗೆ ತೆಳ್ಳಗೆ ಬೆಳ್ಳಗೆ ಸಂದಾಕಿದ್ದ. ನಿನ್ನಂಗೇ ಅವನು ಏನು ಕೆಲಸ ಮಾಡತೀಯೆ ಅಂದ. ‘ನಗನಗತಾ ನೀ ಏನೇಳಿದರೂ ಮಾಡತೇನೆ (ಕಾರಬಾರಿಯ ಕೆನ್ನೆ ಹಿಂಡುತ್ತಾ) ಆದರೆ ನೀ ನಗಬೇಕಷ್ಟೆ ಅಂದೆ’. ಇಂಗಂದು ನನ್ನ ಪಾಡಿಗೆ ನಾನು ಸುಮ್ಮನಿದ್ರೆ, ಬಂದವನೆ ಮುಂಗೈ ಹಿಡಿದು ‘ಬಂಗಾರಿ ನಿನಗೆ ಹಾಸಿಗೆ ಹಾಸಲಿಕ್ಕೆ ಬರತ್ತಾ’? ಅಂದ!

ಕಾರಭಾರಿ : (ಸಾಂಬನ ಮುಂಗೈ ಹಿಡಿದು) ನಾನೂ ಅದನ್ನೇ ಕೇಳತಾ ಇರೋದು: ಬಂಗಾರಿ ರಾಜರಿಗೆ ಹಾಸಿಗೆ ಹಾಸಲಿಕ್ಕೆ ಒಪ್ಪಿಗೆ ಇದೆಯಾ?

ಸಾವ್ಕಾರ : ಸ್ವಾಮಿ, ಕರೆದಿರಾ?

ಗೋದಾವರಿ : ಅಯ್ಯಯ್ಯೋ, ಆ ಹುಡುಗ ನಮ್ಮ ಗಜನಿಂಬೆ ಕಿವೀಲಿ ಏನೋ ಹೇಳ್ತಿದಾನ್ರಿ. ನೋಡಿ ನೋಡಿ ಕಿವಿ ಕಚ್ಚತಿದ್ದಾನೇಂದ್ರೆ.

ಸಾವ್ಕಾರ : ಲೇ ಗಜನಿಂಬೆ, ವಾಲೆ ಹುಷಾರು.

ಕಾರಭಾರಿ : ಬಾಯ್ಮುಚ್ಚರಿ. (ಸಾಂಬನಿಗೆ ಮಾತ್ರ ಕೇಳಿಸುವಂತೆ) ಬಂಗಾರಿ, ನೀನು ರಾಜರ ಹತ್ತಿರ ‘ನಾನು ಸಾವ್ಕಾರನ ಮಗಳು’ ಅಂತ ಸುಳ್ಳು ಹೇಳಬೇಕು.

ಸಾಂಬ : ಓಹೋ.

ಕಾರಭಾರಿ : ರಾಜರು ನಿನಗೆ ಏನೇ ಬಹುಮಾನ ಕೊಟ್ಟರೂ, ಮುಕ್ಕಾಲು ಪಾಲು ನನಗೆ ಸಿಕ್ಕಬೇಕು.

ಸಾಂಬ : ಎಲ್ಲಾ ನೀವೇ ಇಟ್ಕಳ್ಳಿ.

ಕಾರಭಾರಿ : ರಾಜರಿಗೆ ಆಗಾಗ ನಾ ಹೇಳಿಕೊಟ್ಟ ಚಾಡಿಗಳನ್ನು ಹೇಳುತ್ತಿರಬೇಕು.

ಸಾಂಬ : ಓಹೋ.

ಗೋದಾವರಿ : ಅಯ್ಯಯ್ಯೋ ನೋಡಿ ನೋಡಿ, ತಬ್ಬಿಕೊಂಡು ಕೆನ್ನೆ ಕಚ್ಚತಿದ್ದಾನೆ. ಏ ಏ ಗಜನಿಂಬೆ-

ಕಾರಭಾರಿ : ಯೋ (ಎಂದು ಗದರಿಕೊಂಡು ಸಾಂಬನಿಗೆ ಮತ್ರ ಕೇಳಿಸುವಂತೆ) ಮಾತು ಪಕ್ಕಾ?

ಸಾಂಬ : ಪಕ್ಕಾ. ಆದರೆ ನಮ್ಮ ಭೇಟಿ ಇಲ್ಲಲ್ಲ, ಊರ ಹೊರಗೆ ಗಣೇಶನ ದೇವಸ್ಥಾನ ಇದೆಯಲ್ಲ, ಅಲ್ಲಿ.

ಕಾರಭಾರಿ : ಗಣೇಶನ ದೇವಸ್ಥಾನ ನೆಪ್ಪಿರಲಿ (ಕಂಡೆ ಕಂಡೆ ಎಂದು ಹಾಡುತ್ತಾ ಹೊಗುವನು.)