(ಅರಮನೆ. ರಾಜ ಮತ್ತು ಮಂತ್ರಿ)

ರಾಜ : ಎಲಾ ಮಂತ್ರಿ,

ಮಂತ್ರಿ : ಮಹಾಪ್ರಭು ಯಾಕೆ ಕರೆದದ್ದು?

ರಾಜ : ನನ್ನ ದನಿ ಕೇಳಿಸುತ್ತಾ, ಇಲ್ಲವಾ ನೋಡೋಣ ಅಂತ ಕರೆದೆ.

ಮಂತ್ರಿ : ತಮ್ಮ ದನಿ ಕೇಳಿಸುತ್ತೆ. ಪ್ರಜೆಗಳ ದನಿ ಇನ್ನೂ ಜಾಸ್ತಿ ಕೇಳಿಸುತ್ತೆ ಪ್ರಭು.

ರಾಜ : ಅಯ್ಯಾ ಮಂತ್ರಿ ಹಿಂದಿನ ಕಾಲದ ರಾಜರು ತಮ್ಮ ದರ್ಬಾರನ್ನು ಹ್ಯಾಗೆ ಸುರು ಮಾಡುತ್ತಿದ್ದರು?

ಮಂತ್ರಿ : ಮಂತ್ರಿಗಳನ್ನು ಕರೆದು ರಾಜ್ಯದ ಯೋಗಕ್ಷೇಮವನ್ನು ಕೇಳುತ್ತಿದ್ದರು ಪ್ರಭು.

ರಾಜ : ಹೌದು, ಹೌದು, ಮೊನ್ನೆ ನಾಟಕದಲ್ಲಿ ಧರ್ಮರಾಯನ ದರ್ಬಾರು ಸುರು ಆದದ್ದು ಹಾಗೇ ಅಲ್ಲವೇ? ಎಲಾ ಮಂತ್ರಿವರ್ಯನೇ, ನಮ್ಮ ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿದ್ದು ದೇಶ ಸುಭಿಕ್ಷವಾಗಿದ್ದು ಪ್ರಜೆಗಳೆಲ್ಲ ಸ್ವಸಂತೋಷದಿಂದ ನಿತ್ಯ ನಿರಂತರ ಕಣ್ಣು ಮುಚ್ಚಿ ಶವಧ್ಯಾನ ಮಾಡುತ್ತಿರುವರಲ್ಲವೆ?

ಮಂತ್ರಿ : ಹಾಗಿಲ್ಲ ಪ್ರಭು, ಪ್ರಜೆಗಳಲ್ಲಿ ಅಸಮಾಧಾನ ಕುದಿಯುತ್ತಿದೆ.

ರಾಜ : ನಾಟಕದ ಮಂತ್ರಿ ಹೀಗೆಲ್ಲ ಮಾತಾಡಲಿಲ್ಲ.

ಮಂತ್ರಿ : ತಾವು ನಾಟಕದ ರಾಜರೂ ಅಲ್ಲ, ಇದು ನಾಟಕವೂ ಅಲ್ಲ ಪ್ರಭು. ತಾವು ನಿಜವಾದ ರಾಜರು. ನಿಜವಾದ ಪ್ರಜೆಗಳ ನಿಜವಾದ ನೋವಿನ ಕಡೆ ಗಮನ ಕೊಡಲೇಬೇಕು.

ರಾಜ : ಕೊಡತಾ ಇದ್ದೀನಲ್ಲಯ್ಯ. ಅದೇನಿದೆ ಒದರು.

ಮಂತ್ರಿ : ಮಹಾಪ್ರಭು ವಯಸ್ಸಿನಲ್ಲಿ ನಾನು ನಿಮಗಿಂತ ಚಿಕ್ಕವನು-

ರಾಜ : ಬುದ್ಧಿಯಲ್ಲಿ ಕೂಡ.

ಮಂತ್ರಿ : ದೇಶದ ಹಿತದೃಷ್ಟಿಯಿಂದ ಕೆಲವು ಅಪ್ರಿಯ ಸತ್ಯಗಳನ್ನು ನಿಮಗೆ ಹೇಳಲೇ ಬೇಕಾಗಿದೆ. ಕ್ಷಮಿಸಬೇಕು.

ರಾಜ : ಕ್ಷಮಿಸಿದ್ದೇನೆ ಅದೇನಿದೆ ಒದರಪ್ಪಾ ಅಂದರೆ, ಮಾತಿಗಿಂತ ಉಗುಳೇ ಜಾಸ್ತಿ ನಿನ್ನಲ್ಲಿ. ನನ್ನ ರಾಜ್ಯದಲ್ಲಿ ಕಾಲಕಾಲಕ್ಕೆ ಸೂರ‍್ಯೋದಯ ಸೂರ್ಯಾಸ್ತವಾಗುತ್ತದೆ ಅಂತ ಬಿಳಿ ಅನೆ ಹೇಳಿದ, ಸರಿಯೋ?

ಮಂತ್ರಿ : ಪ್ರಭು, ತೆರಿಗೆ ಹೊರೆ ಜಾಸ್ತಿ ಆಗಿದೆ. ಕಳ್ಳಕಾರರ ಕಾಟ ಹೆಚ್ಚಗಿದೆ. ಮನೆ ಬೆಳೆ ಇಲ್ಲದೇ ಭ್ರಷ್ಟಾಚಾರ ಸಮೃದ್ಧವಾಗಿದೆ.

ರಾಜ : ಲೇ ಮಂತ್ರಿ, ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೆ ಅದಕ್ಕೆ ಹೊಣೆ ಯಾರು? ಮಂತ್ರಿಯಾಗಿ ನೀನು ನಿನ್ನ ಕೆಲಸ ಸರಿಯಾಗಿ ಮಾಡಿಲ್ಲ ಅಂತಾಯ್ತು.

ಮಂತ್ರಿ : ಹ್ಯಾಗೆ ಸಾಧ್ಯ ಪ್ರಭು? ನಿಮಗಾಗಲಿ, ನಿಮ್ಮ ಬಿಳಿ ಆನೆಗಾಗಲಿ, ನನ್ನ ಮತ್ತು ಜನರ ಕಷ್ಟ ಸುಖ ತಿಳಿಯೋದಿಲ್ಲ. ಸಕಾಲದಲ್ಲಿ ಎಚ್ಚರವಾಗದಿದ್ದರೆ ಅಪಾಯ ತಪ್ಪಿದ್ದಲ್ಲ ಪ್ರಭು. ಜನ ಒಂದಾಗುತ್ತಿದ್ದಾರೆ. ಕ್ರಾಂತಿ ಅಂತಿದ್ದಾರೆ.

ರಾಜ : ಕ್ರಾಂತಿ? ಸರ್ಕಾರದಿಂದ ನಾವೇ ಮೂರೋ ನಾಲ್ಕೋ ಕ್ರಾಂತಿ ಮಾಡಿಸಿದ್ದೀ ವಲ್ಲಪಾ?

ಮಂತ್ರಿ : ಸರ್ಕಾರದಿಂದ ?

ರಾಜ : ಹೌದು; ಹಸಿರು ಕ್ರಾಂತಿ, ಬಿಳಿ ಕ್ರಾಂತಿ, ಹಳದಿ ಕ್ರಾಂತಿ, ಮಾಡಿಸಿದವರು ಯಾರು?

ಮಂತ್ರಿ : ನಿಮ್ಮ ಚೇಷ್ಟೆಗೆ ನಗೋವಷ್ಟು ಹಾಸ್ಯ ಪ್ರವೃತ್ತಿ ನನ್ನಲಿಲ್ಲ ಪ್ರಭು, ಜನರ ನೋವಿಗೆ ಅಧಿಕಾರಿಗಳ ದರ್ಪಕ್ಕೆ ಕುರುಡನಾಗಿರೋದು ನನ್ನಿಂದಾಗೋದಿಲ್ಲ. ಈಗಲೂ ದಯವಿಟ್ಟು ನನ್ನ ಮಾತುಕೇಳಿ.

ರಾಜ : ಏನಯ್ಯಾ…. ನನಗೆ ಉಪದೇಶ ಕೊಡೋವಷ್ಟು ದೊಡ್ಡೋನಾದೇನು?

ಮಂತ್ರಿ : ಉಪದೇಶ ಅಲ್ಲ. ಖಂಡಿತ ಇದು ತುರ್ತಿನ ಪರಿಸ್ಥಿತಿ ಅನ್ನೋದನ್ನ ತಮಗೆ ಖಾತ್ರಿ ಮಾಡೋದಕ್ಕೆ ಪ್ರಯತ್ನ ಮಾಡ್ತ ಇದ್ದೇನೆ. ಕ್ರಂತಿಯ ಎಲ್ಲ ಲಕ್ಷಣಗಳೂ ಈಗ ಗೋಚರವಾಗ್ತಿವೆ. ನಿಮ್ಮ ಕೊನೆಗಾಲ….

ರಾಜ : ಎಲಾ ಮಂತ್ರ, ನನ್ನ ಕಾಲಲ್ಲಿರೋ ಚಪ್ಲೀನೇ ನನಗೆ ಉಪದೇಶ ಹೇಳಲಿಕ್ಕೆ ಬಂದರೆ ನಾನೇನೋ ಮಾಡ್ತೀನಿ?

ಮಂತ್ರಿ : ಕಳಚಿ ಆಚೆ ಕಡೆ ಎಸೀತೀರಿ ಅಲ್ಲವ? ಇಕೋ ನನ್ನ ರಾಜೀನಾಮೆ (ರಾಜೀನಾಮೆಯನ್ನಿಟ್ಟು ಸರಸರನೆ ಹೋಗುವನು)

ರಾಜ : ಎಲಾ ನನ ಮಗನೆ!

ಚಾರ : (ಬಂದು ನಮಸ್ಕರಿಸಿ) ಮಹಾಪ್ರಭು ಬಿಳಿ ಆನೆ ಬಂದವರೆ.

ರಾಜ : ಒಳಗೆ ಬಿಡು.

ಬಿಳಿ ಆನೆ : (ಬಂದು ನಮಸ್ಕರಿಸಿ) ಮಹಾಪ್ರಭುಗಳಿಗೆ ಜಯವಾಗಲಿ,

ರಾಜ : ಅಧೆಂಗರಿ ಜಯ ಆಗುತ್ತೆ? ಜನರಲ್ಲಿ ಅಸಮಾಧಾನ ಇದೆಯಂತೆ, ಕ್ರಾಂತಿ ಮಾಡತಾರಂತೆ? ನಿಮ್ಮನ್ನು ಕೇಳಿದರೆ ಎಲ್ಲಾ ಚೆನ್ನಾಗಿದೆ ಅಂತೀರಾ….

ಬಿಳಿ ಆನೆ : ಮಹಾಪ್ರಭು, ತಾವು ಬೇಜಾರು ಮಾಡಿಕೊಬಾರದು. ಗುಪ್ತಬಾರರು ಈಗಷ್ಟೆ ಕಂಡು ಕೊಂಡ ವಿಚಾರವನ್ನ ತಮ್ಮ ಕಿವಿಯಲ್ಲಿ ಹೇಳತೇನೆ, ದಯವಿಟ್ಟು ತಮ್ಮ ಕಿವಿ ಕೊಡಬೇಕು.

ರಾಜ : ಕೊಟ್ಟಿದ್ದೇನೆ, ಅದೇನು ಒದರಯ್ಯಾ.

ಬಿಳಿ ಆನೆ : ಪ್ರಭು, ಗುಪ್ತಚಾರರ ವರದಿ ಪ್ರಕಾರ ಮಹಾಮಂತ್ರಿಗಳೇ ಕ್ರಾಂತಿಯ ನಾಯಕರು.

ರಾಜ : ಏನು?

ಬಿಳಿ ಆನೆ : ಹೌದು ಪ್ರಭು. ಈ ಸಿಂಹಾಸನದ ಮೇಲೆ ಅವರ ಕಣ್ಣಿದೆ ಎನ್ನುವ ವಿಚಾರ ತಿಳಿದು ನಮಗೆಲ್ಲಾ ಅವರ ಬಗ್ಗೆ ಕರುಣೆ ತಮ್ಮ ಬಗ್ಗೆ ಹೆಮ್ಮೆಯುಂಟಾದವು.

ರಾಜ : ಅಯ್ಯಾ ಬಿಳಿ ಆನೆ, ಯಾವುದಾದರೂ ನೆಪದಿಂದ ಆ ನನ್ನ ಮಗ ಮಂತ್ರೀನ್ನ ಜೇಲಿಗೆ ಕಳಿಸೋದಾಕ್ಕಾಗೋದಿಲ್ಲವ?

ಬಿಳಿ ಆನೆ : ನೆಪ ಯಾಕೆ ಪ್ರಭು? ಅದಿಲ್ಲದೇ ತಮ್ಮ ಆಸೆ ಈಡೇರಿಸಲಿಕ್ಕೆ ನಾನಿಲ್ಲವೆ? ಆಯ್ತು ಬಿಡಿ. ಇವತ್ತು ಮಂತ್ರಿಗಳು ಚೇಲಲ್ಲಿರುತ್ತಾರೆ. ಮೊನ್ನೆ ಬಂಗಾರಪೇಟೆ ಭಾಷಣದಲ್ಲಿ ಅವರ ಒಬ್ಬ ಶಿಷ್ಯ ಏನಂದನಂತೆ ಗೊತ್ತಾ ಪ್ರಭು; ಏನ್ರಿ…. ಒಬ್ಬೊಬ್ಬ ಬಿಳಿಆನೆಗೆ ಎಷ್ಟೆಷ್ಟು ಬಂಗಲೆಗಳಿವೆ ಗೊತ್ತಾ? -ಅಂದನಂತೆ; ಹೀಗೆಂದಾದರೂ ಅನ್ನಬಹುದೇ ಪ್ರಭು?

ರಾಜ : ಅನ್ನಬಹುದು.

ಬಿಳಿ ಆನೆ : ಪ್ರಭು, ಎಂಥ ಪ್ರಜೆಗಳಿರೋದರಿಂದ ತಮ್ಮಂಥ ರಾಜರಿದ್ದೀರಿ. ತಮ್ಮಂಥ ರಾಜರಿರೊದರಿಂದ ನಮ್ಮಂಥ ಅಧಿಕಾರಿಗಳಿದ್ದೀವಿ. ನಮ್ಮಂಥ ಅಧಿಕಾರಿಗಳಿರೊದರಿಂದ ಈ ದೇಶ ಹೀಗಿದೆ. ನಾವೆ ಇಲ್ಲದಿದ್ದರೆ ಈ ದೇಶ ಹೀಗಿರುತ್ತಿತ್ತೆ, ಪ್ರಭು? ಮಹಾಪ್ರಭುಗಳಾದ ತಮಗೆ ಅರಮನೆ ಇದೆ. ನಿಮ್ಮ ಸೇವಕರಾದ ನಮಗೆ ಒಂದೆರಡು ಚಿಕ್ಕ ಬಂಗಲೆಗಳಾದರೂ ಬೇಡವೇ ಪ್ರಭು?

ರಾಜ : ಆದರೆ ನೀವು ಬಂಗಲೆ ಕಟ್ಟಿಸಿಕೊಂಡಲ್ಲಿ ಗುಡಿಸಲು ಇದ್ದುವಂತಲ್ಲಾ?

ಬಿಳಿ ಆನೆ : ಅದೇ ಮತ್ತೆ ಪ್ರೋಗ್ರೆಸ್ಸನ್ನೋದು – ಗುಡಿಸಲಿದ್ದಲ್ಲಿ ಬಂಗಲೆ ಬಂತೋ ಇಲ್ಲವೋ ಹೆಳಿ. ನಮ್ಮದು ಲಂಡನ್ ರಾಣಿಯ ಗುಲಾಮರ ನೇರ ಸಂತಾನ ಪ್ರಭು ಅದಕ್ಕೆ  ನಮ್ಮನ್ನು ಐ.ಎ.ಎಸ್. ಅನ್ನೋದು.

ರಾಜ : ಅದಾಯ್ತು, ನೀನೀಗ ಬಂದಿರೋ ವಿಚಾರ ಏಣು?

ಬಿಳಿ ಆನೆ : ಮಹಾಪ್ರಭು, ರಾಜ್ಯದಲ್ಲಿ ಕಳ್ಳತನದ ಕೇಸು ಜಾಸ್ತಿ ಆಗಿವೆ. ಇತ್ತೀಚಿನ ಎಂ.ವೈ.ಜಿ. ವರದಿ ಪ್ರಕಾರ ರಾಜ್ಯದ ನಾಲ್ಕು ಕೋಟಿ ಪ್ರಜೆಗಳ ಪೈಕಿ ಮೂರು ಕೋಟಿ ತೊಂಭತೊಂಭತ್ತು ಸಾವಿರದಾ ಒಂಬೈನೂರ ತೊಂಭತ್ತೊಂಭತ್ತು ಜನ ಕಳ್ಳರಿದ್ದಾರೆ ಅಂತ ಸಿದ್ದವಾಗಿದೆ.

ರಾಜ : ಅಂದರೆ ಆ ಉಳಿದ ಒಬ್ಬ ಯಾರು? ನಾನು ತಾನೆ?

ಬಿಳಿ ಆನೆ : ಖಂಡಿತ ಹೌದು ಪ್ರಭು.

ರಾಜ : ಹಾಗಾದರೆ ನೀನೂ ಕಳ್ಳ ಅಂತಾಯ್ತು.

ಬಿಳಿ ಆನೆ : ಅಂಕಿಸಂಖ್ಯೆ ಸ್ವಲ್ಪ ತಿದ್ದಿದ್ದಾರೆ ಪ್ರಭು. ಕೊನೇ ಅಂಕಿ ಒಂಭೈನೂರಾ ತೊಂಭತ್ತೆಂಟು ಅಂತಾ ಇದೆ. ಬೇಕಾದರೆ ತಾವೇ ಪರಿಶೀಲಿಸಿ.

ರಾಜ : ನೀನೂ ಒಬ್ಬ ಕಳ್ಳ ಅಲ್ಲ ಅಂತಾಯ್ತು…. ಮುಂದೆ?

ಬಿಳಿ ಆನೆ : ಕಳ್ಳತನ ಕೆಟ್ಟದ್ದು ನಿಜ. ಹಾಗಂತ ಅದನ್ನ ಯಾರೂ ಬಿಡೋದಿಲ್ಲ. ಬಿಡಲಾರದ ವಿದ್ಯೆಯನ್ನು ಬಿಡಿಸೋದಕ್ಕೆ ಯಾಕೆ ಪ್ರಯತ್ನ ಮಾಬೇಕು.

ರಾಜ : ನೀ ಹೇಳೋದೇನಯ್ಯ?

ಬಿಳಿ ಆನೆ : ಪ್ರಭು ಕಳ್ಳತನಕ್ಕೆ ಲೈಸನ್ಸ್ ಮಾಡಿದರೆ ಹೇಗೆ?

ರಾಜ : ಭಲೆ!

ಬಿಳಿ ಆನೆ : ಲೈಸನ್ಸಿಗೆ ಇಂತಿಷ್ಟು ಸರಕಾರಿ ದರ ಅಂತ ಹೇಳಿಬಿಟ್ಟರೆ ಎಲ್ಲರೂ ಲೈಸನ್ಸ್ ತೆಗೆಸ್ತಾರೆ. ಬೊಕ್ಕಸ ತುಂಬಿ ತುಳುಕುತ್ತೆ….

ರಾಜ : ಹೌದು, ಹೊರಗಡೆ ಗಲಾಟೆ ಆಗ್ತಿದೆಯಲ್ಲ, ಯಾಕೆ?

ಬಿಳಿ ಆನೆ : ದೇಶದ ಪ್ರಜೆಗಳೆಲ್ಲಾ ಲೈಸನ್ಸ್ ತೆಗಿಸೋದಕ್ಕೆ ಕಾಯ್ತಾ ಇದ್ದಾರೆ ಪ್ರಭು; ಬೇಗನೆ ಸಹಿ ಹಾಕಿ.

ಚಾರ : ಮಹಾಪ್ರಭು ಹೊರಗೆ ಚಿಲ್ಲರೆ ಕಾಯ್ತಾ ಇದಾರೆ.

ರಾಜ : ಆಮೇಲೆ ಸಹಿ ಹಾಕೋಣ ಕಾದಿರು. ಚಿಲ್ಲರೆಯನ್ನು ಒಳಕ್ಕೆ ಬಿಡಯ್ಯ. (ಚಾರ ಹೋಗುವನು)

ಬಿಳಿ ಆನೆ : ಚಿಲ್ಲರೆ ಬಗ್ಗೆ ಸ್ವಲ್ಪ ನಿಗಾ ಇರಲಿ ಪ್ರಭು. ಎನಂದರೂ ನಂಬಿಕಸ್ತನಲ್ಲ. ಹ್ಯಾಗೋ ತೇಲಿಸಿ ಮಾತಾಡಿ ಕಳಿಸಿಬಿಡಿ. ಇನ್ನೊಂದು ವಿಚಾರ; ಮಂತ್ರಿಗಳು ರಾಜೀನಾಮೆ ಕೊಟ್ಟರಂತೆ…. ಹೌದೆ ಪ್ರಭು? ಕೊಟ್ಟರೆ ತಗಂಡು ಬಿಡಿ, ನೋಡಿಕೊಳ್ಳೋದಕ್ಕೆ ನಾನಿಲ್ಲವೆ? ಹೊರಗಡೆ ಕಾಯ್ತೇನೆ ಪ್ರಭು.
(ಹೊರಡುವನು. ದಾರಿಯಲ್ಲಿ ಚಿಲ್ಲರೆ ಸಿಗುವನು. ಬಿಳಿಆನೆ ಮೆಲ್ಲನೆ ಅವನ ಕಿವಿಯಲ್ಲಿ)

ಬಿಳಿ ಆನೆ : ನಮಸ್ಕಾರ…. ನಿಮ್ಮ ಬಗ್ಗೆ ರಾಜರ ಮುಂದೆ ಒಳ್ಳೆ ಮಾತಾಡಿದ್ದೀನಿ.

ಚಿಲ್ಲರೆ : ತುಂಬಾ ಉಪಕಾರವಾಯ್ತು.
(ಬಂದು ನಮಸ್ಕರಿಸಿ)
ಮಹಾಪ್ರಭುಗಳಿಗೆ ಜಯವಾಗಲಿ.

ರಾಜ : ನನ್ನ ಕಿವಿ ತಾನೇ ನಿನಗೆ ಬೇಕಾಗಿರೋದು?

ಚಿಲ್ಲರೆ : ಹೌದು ಪ್ರಭು.

ರಾಜ : ಛೆ, ನನ್ನ ಕಿವಿ ಒಂದು ಮೊಳ ಉದ್ದ ಇದ್ದಿದ್ದರೆ ಕೊಡೋದಕ್ಕೆ ಎಷ್ಟು ಅನುಕೂಲವಾಗುತ್ತಿತ್ತು? ಅಥವಾ ನಿಮ್ಮ ಬಾಯಿಗೆ ಒಂದೊಂದು ಕಿವಿ ತುರುಕಿ ನನ್ನ ಪಾಡಿಗೆ ನಾನು ನಿದ್ದೆ ಮಾಡಬಹುದಿತ್ತು.

ಚಿಲ್ಲರೆ : ನಾವು ಕೇಳಿದಾಗಲೆಲ್ಲಾ ಉದಾರವಾಗಿ ಕಿವಿ ಕೊಟ್ಟದ್ದರಿಂದ ತಮ್ಮ ಕಿವಿ ಆಗಲೇ ಗೇಣುದ್ದ ಆಗಿವೆ ಪ್ರಭು.

ರಾಜ : ಹೌದ? ಹಾಗಿದ್ದರೆ ಇನ್ನಷ್ಟು ಉದ್ದ ಆಗಲಿ. ಅದೇನು ಹೇಳ್ತೀಯೋ ಹೇಳು.

ಚಿಲ್ಲರೆ : ಮಂತ್ರಿಗಳು ರಾಜೀನಾಮೆ ಕೊಟ್ಟರಂತೆ ಹೌದೇ ಪ್ರಭು? ಕೊಟ್ಟರೆ ತಗಂಡು ಬಿಡಿ. ನೋಡಿಕೊಳ್ಳೋದಕ್ಕೆ ನಾನಿಲ್ಲವೆ? ಅದೇನಿದ್ದರೂ ಬಿಳಿಆನೆ ಬಗ್ಗೆ ಸ್ವಲ್ಪ ನಿಗಾ ಇರಲಿ ಪ್ರಭು. ಯಾಕೆಂದರೆ ನಂಬಿಕಸ್ತನಲ್ಲ, ಪಿತೂರಿಜನ.

ರಾಜ : ಹೊರಗಡೆ ಗಲಾಟೆ ಕೇಳಿಸುತ್ತಲ್ಲ, ಏನದು?

ಚಿಲ್ಲರೆ : ಕಲಾವಿದರೆಲ್ಲಾ ಸೇರಿ ತಮಗೆ ಜಯಕಾರ ಹೇಳುತ್ತಿದ್ದಾರೆ ಪ್ರಭು.

ರಾಜ : ಯಾಕೆ?

ಚಿಲ್ಲರೆ : ನಾನು ಈಗ ತೋರಿಸಲಿರುವ ಕಾಗದಕ್ಕೆ ತಾವು ಸಹಿ ಹಾಕಲಿದ್ದೀರಿ ಅದಕ್ಕೆ.

ರಾಜ : ಅದೇನಿದೆಯೋ ಹೇಳು ನೋಡೋಣ.

ಚಿಲ್ಲರೆ : ಪ್ರಭು, ಬಡವರ ಬಗೆಗಿನ ತಮ್ಮ ಕಾಳಜಿ ಇಡೀ ರಾಜಧಾನಿಯಲ್ಲಿ ಜಗತ್ ಪ್ರಸಿದ್ದವಾಗಿದೆ. ಬಡವರು ಉದ್ಧಾರವಾಗಬೇಕು. ಅವರು ನಗುನಗುತ್ತ ಇರಬೇಕನ್ನೋದು ತಮ್ಮ ಗುರಿ ಅಲ್ಲವೇ ಪ್ರಭು?

ರಾಜ : ಅಲ್ಲವೇ ಮತ್ತೆ?

ಚಿಲ್ಲರೆ : ಇಕಾ ಬಡವರನ್ನ ನಗಿಸೋ ಯೋಜನೆ ತಯಾರು ಮಾಡಿದ್ದೇನೆ. ಸಹಿ ಹಾಕಿ ಪ್ರಭು.

ರಾಜ : ಹೆಂಗೆ ಹೆಳಯ್ಯಾ ಅಂದರೆ.

ಚಿಲ್ಲರೆ : ಹೀಗೆ ಪ್ರಭು; ಬಡವರನ್ನೆಲ್ಲಾ ಒಂದು ಬಯಲಲ್ಲಿ ಸೇರಿಸೋದು….

ರಾಜ : ಆಮೇಲೆ ಭಾಷಣಾ ಮಾಡೋದು ತಾನೆ?

ಚಿಲ್ಲರೆ : ಅಲ್ಲಲ್ಲ…. ಅಲ್ಲಿಗೆ ರಾಜ್ಯದ ಮಹಾನ್ ಕಲಾವಿದರು ಬುಟ್ಟಿತಗೊಂಡು ಹೋಗುತ್ತಾರೆ. ನೋಡಿದರೆ ಬುಟ್ಟಿತುಂಬಾ ರೊಟ್ಟಿ; ಆಮೇಲೆ ಆ ಕಲಾವಿದರೂ ಬಡವರ ಎದುರಿನಲ್ಲೇ ರೊಟ್ಟಿ ತಿಂತಾರೆ; ಆಹಾ ರುಚಿ ಅಂತಾರೆ, ಬಡವರು ಕೋಪ ತಾಪ ಹಸಿವು ಅಂತಾರೆ- ಇವರು ತಿಂತಾರೆ, ಅವರು ನೋಡುತ್ತಾರೆ. ಅವರು ನೋಡುತ್ತಾರೆ-ಇವರು ತಿಂತಾರೆ. ಕೊನೆಗೆ ನೋಡಿದರೆ ಬುಟ್ಟಿ ತುಂಬಾ ಇರೋದು ರಟ್ಟಿನ ರೊಟ್ಟಿ; ಅರೆ, ರಟ್ಟಿನ ರೊಟ್ಟೀನ ನಿಜವಾದ ರೊಟ್ಟೀ ಹಾಗೆ ತಿಂದರಲ್ಲ! ಅಂತ ಜನ ಹೋ ಅಂತ ಚಪ್ಪಾಳೆ ತಟ್ಟಿ ನಗುತ್ತಾರೆ.

ರಾಜ : ಜನ ನಗುತ್ತಾರೆ ಅಂತೀಯಾ?

ಚಿಲ್ಲರೆ : ಪ್ರಯೋಗ ಮಾಡಿ ನೋಡಿ ಹೇಳತ್ತಿದ್ದೇನೆ ಪ್ರಭು.

ರಾಜ : ಜನ ನಕ್ಕರ?

ಚಿಲ್ಲರೆ : ಬಿದ್ದೂ, ಬಿದ್ದು ನಕ್ಕರು ಪ್ರಭು; ಕೆಲವರಂತೂ ಬಿದ್ದವರು ಏಳಲೇ ಇಲ್ಲ. ಒಂದು ಬಾರಿಯಂತೂ ಎಲ್ಲಾ ಬಡವರು ಈಗಷ್ಟೇ ಹುಚ್ಚಾಸ್ಪತ್ರೆಯಿಂದ ಓಡಿ ಬಂದವರ ಹಾಗೆ ನಗುತ್ತಿದ್ದರು. ಯಾಕಪ್ಪಾ ಹೀಗೆ ಅಂತ ನೋಡಿದರೆ, ಕೆಲವು ಕಲಾವಿದರು ರಟ್ಟಿನ ರೊಟ್ಟಿ ತಿಂದಹಾಗೆ ಮಣ್ಣು ತಿಂದೂ ತಿಂದೂ ಬಡವರನ್ನ ನಗಿಸ್ತಾ ಇದ್ರು ಪ್ರಭು.

ರಾಜ : ಭೇಷ್, ಒಳ್ಳೆ ಯೋಜನೆ, ನಿಮ್ಮಂಥ ಅಧಿಕಾರಿಗಳನ್ನು ಪಡೆದ ಈ ದೇಶವೇ ಧನ್ಯ; ಎಂಥೆಂಥಾ ತಲೆಗಳಪ್ಪಾ ನಿಮ್ಮದು; ಛೇ, ನಿಮ್ಮ ತಲೆ ಹಿಡಿಯೋ ಯೋಗ್ಯತೇನೂ ಇಲ್ಲವೇ ನಮ್ಮ ಜನಕ್ಕೆ;
(ಹೊರಗಡೆ ಗಲಾಟೆ ಜಾಸ್ತಿ ಆಗುತ್ತಲೇ ಇದೆ. ಚಾರ ಓಡಿಬರುವನು)

ಚಾರ : ಪ್ರಭು, ಹೊರಗಡೆ ಜನ ಜಮಾಯಿಸಿ ತಮ್ಮನ್ನು ಅರ್ಜಂಟಾಗಿ ನೋಡಬೇಕಂತಿದ್ದಾರೆ. (ಬಿಳಿ ಆನೆ ಒಳಕ್ಕೆ ಬಂದು)

ಬಿಳಿ ಆನೆ : ಅವರು ಪ್ರಜೆಗಳು ಪ್ರಭು, ಕಳ್ಳತನಕ್ಕೆ ಲೈಸೆನ್ಸ್ ಮಾಡಿದರೆ ತಮ್ಮನ್ನು ಅಭಿನಂದಿಸಬೇಕೆಂದು ಕಾದಿದ್ದಾರೆ. ತಾವು ಬೇಗ ಸಹಿ ಹಾಕಿ ಪ್ರಭು….

ಚಿಲ್ಲರೆ : ಪ್ರಜೆಗಳಲ್ಲ ಪ್ರಭು, ಬಿಲ್ಲಿಗೆ ಸಹಿ ಹಾಕಿದರೆ ತಮ್ಮನ್ನು ಅಭಿನಂದಿಸಲು ಕಲಾವಿದರೆಲ್ಲ ಸೇರಿದ್ದಾರೆ.

ಬಿಳಿ ಆನೆ :  ಸೇರಿದವರು ಪ್ರಜೆಗಳು ಕಣ್ರಿ.

ಚಿಲ್ಲರೆ : ಸೇರಿದವರು ಕಲಾವಿದರು ರೀ.

ಬಿಳಿ ಆನೆ : ಈ ಬಿಲ್ ಪಾಸ್ ಮಾಡೋಕೆ ನೀವೆಷ್ಟು ತಗೊಂಡಿದ್ದೀರಿ ಅಂತ ಗೊತ್ತು ರೀ…. (ಚಾರ ಮತ್ತೆ ಓಡಿ ಬರುವನು)

ಚಿಲ್ಲರೆ : ಪ್ರಭು, ಎಲ್ಲರೂ ಕ್ರಾಂತಿಗೆ ಜಯವಾಗಲಿ ಅಂತ ಕೂಗ್ತಿದಾರೆ.

ಬಿಳಿ ಆನೆ : ಕಲಾವಿದರ ಬಿಲ್ ಪಾಸ್ ಮಾಡಿದರೆ ಜನ ಕ್ರಾಂತಿ ಮಾಡಿದೇ ಬಿಡ್ತಾರೆಯೇ ಪ್ರಭು?

ಚಿಲ್ಲರೆ : ಕಳ್ಳತನಕ್ಕೆ ಲೈಸನ್ಸ್ ಎಲ್ಲಾದರೂ ಉಂಟೆ ಪ್ರಭು!

ಬಿಳಿ ಆನೆ : (ಚಿಲ್ಲರೆಗೆ) ಏನ್ರಿ, ನಮಗ ನಾವೇ ಈ ರೀತಿ ಬಿಟ್ಟುಕೊಡೋದಾ? ನಾವು ಅಧಿಕಾರಿಗಳೆಲ್ಲಾ ಒಂದೇ ಅಲ್ಲವೇನ್ರಿ…. ರಾಜರದೊಂದು ಶಾಹಿ ಇದ್ದರೆ ನಮ್ಮದೂ ಒಂದು ನೌಕರಶಾಹಿ ಇದೇರಿ…. (ಚಿಲ್ಲರೆಗೆ ಕಣ್ಣುಹೊಡೆಯುವನು)

ರಾಜ : ಏನಂದ್ರೀ….

ಬಿಳಿ ಆನೆ : ಜನ ಕ್ರಾಂತಿ ಅನ್ನೋದ್ರಲ್ಲಿ ಅರ್ಥ ಇದೆ ಪ್ರಭು. ಕಳ್ಳತನಕ್ಕೆ ಲೈಸನ್ಸ್ ಕೊಡೋದು, ಕಲೆಯಿಂದ ಉದ್ದಾರ ಮಾಡೋದು- ಇವೆಲ್ಲ ಕ್ರಾಂತಿಕಾರಕ ವಿಚಾರ ನೋಡಿ. ಅದಕ್ಕೇ ಜನ ಕ್ರಾಂತಿ ಕ್ರಾಂತಿ ಅಂತಿದ್ದಾರೆ.

ರಾಜ : ನಮ್ಮ ಮಾಜಿ ಮಂತ್ರಿ ಅಲ್ಲಿ ಇದ್ದಾನಾ?

ಚಾರ : ಜನರನ್ನು ಸಮಾಧಾನ ಮಾಡೋದಕ್ಕೆ ಪ್ರಯತ್ನ ಮಾಡ್ತಿದಾರೆ, ಆದರೆ ಅವರ ಮಾತು ಒಬ್ಬರಿಗೂ ತಿಳಿಯುತ್ತಿಲ್ಲ. (ಗಲಾಟೆ ಇನ್ನೂ ಜಾಸ್ತಿ ಆಗುತ್ತಿದೆ. ಕ್ರಾಂತಿಗೆ ಜಯವಾಗಲಿ ಇತ್ಯಾದಿ ಘೋಷಣೆ ಕೇಳಿಸುತ್ತದೆ.)

ಚಿಲ್ಲರೆ : ಅಯ್ಯಯ್ಯೋ; ಕ್ರಾಂತೀನೇ, ಆ ಮಂತ್ರೀನೇ ಮಾಡಿಸ್ತಿದಾನೆ, ಎಲಾ, ಯಾರಲ್ಲಿ,

ಚಾರ : ಏನಪ್ಪಣೆ?

ಚಿಲ್ಲರೆ : ಪ್ರಭುಗಳು ಖುದ್ದಾಗಿ ಆಜ್ಞೆ ಮಾಡಿದ್ದಾರೆ; ಜನರ ಮೇಲೆ ಪೊಲೀಸರನ್ನು ಛೂ ಬಿಡೋದಕ್ಕೆ ಹೇಳು.

ಚಾರ : ಅಪ್ಪಣೆ (ಹೋಗುವನು, ಗಲಾಟೆ, ಲಾಠಿ ಚಾರ್ಜು, ಅಶ್ರುವಾಯು ಕೇಳಿ ಬರುತ್ತಿವೆ.)

ಬಿಳಿ ಆನೆ : ಎಲಾ ಯಾರಲ್ಲಿ!

ಚಾರ : (ಓಡಿಬಂದು) ಏನಪ್ಪಣೆ?

ಬಿಳಿ ಆನೆ : ಮಹಾಪ್ರಭುಗಳು ಅಪ್ಪಣೆ ಮಾಡಿದ್ದಾರೆ : ಜನರ ಮೇಲೆ ಸೈನ್ಯಬಿಟ್ಟು ಕಂಡಲ್ಲಿ ಗುಂಡು ಹಾರಸೋದಕ್ಕೆ ಹೇಳು.

ಚಾರ : ಅಪ್ಪಣೆ, (ಹೋಗುವನು, ಮುಂಚಿನ ಗಲಾಟೆಯ ಜೊತೆಗೆ ಈಗ ಗುಂಡಿನ ಸಪ್ಪಳ ಸೇರಿಕೊಳ್ಳುತ್ತದೆ)

ಬಿಳಿ ಆನೆ : ಪ್ರಭು, ಈ ಗಲಾಟೆಯನ್ನು ಹತ್ತಿಕ್ಕುವುದು ಸಾಧ್ಯವಿಲ್ಲ, ನಾವು ಇಲ್ಲಿಂದ ಪಾರಾಗುವುದೇ ಮೇಲು. (ಚಾರ ಓಡಿ ಬರುವನು)

ಚಾರ : ದಯವಿಟ್ಟು ಹೋಗಬೇಡಿ, ಎಲ್ಲಾ ಕಡೆ ಜನ ತುಂಬಿ ಬಿಟ್ಟಿದ್ದಾರೆ. ನಿಮ್ಮ ಮುಖ ನೋಡದೇ ಹಿಂದಿರುಗುವುದಿಲ್ಲವೆಂದು ಶಪಥ ಮಾಡಿದ್ದಾರೆ.

ರಾಜ : ನನ್ನ ಮುಖ? ಆದರೆ ಬೆಳಿಗ್ಗೆ ಎದ್ದಾಗಿಂದ ನಾನು ಮುಖಾನೇ ತೊಳೆದಿಲ್ಲವಲ್ಲ! ಹಳಸಲು ಮುಖ ಹ್ಯಗಪ್ಪ ತೋರಿಸೋದು?

ಚಾರ : ಆದರೆ ಖಂಡಿತಾ ನಿಮ್ಮ ಮುಖ ನೋಡದೇ ಅವರು ಹೋಗೋದಿಲ್ಲ ಪ್ರಭು.

ರಾಜ : ಆಯ್ತು…. ಪ್ರಜೆಗಳು ನಮ್ಮ ಮುಖ ನೋಡಲೇಬೇಕಂತ ಹಟ ಹಿಡಿದರೆ ನಾವು ಏನು ಮಾಡಲಿಕ್ಕಾಗುತ್ತೆ? ಹೋಗಲಿ ಬೆಳಿಗ್ಗೆದ್ದು ಸಂಡಾಸಕ್ಕೆ ಹೋಗಿ ಬಂದು ಕಾಲಮೇಲೆ ನೀರು ಹಾಕ್ಕೊಂಡಿದ್ದೇನೆ. ಕಾಲು ತೋರಿಸಿದರೆ ಸಾಕಲ್ಲವೆ?

ಬಿಳಿ ಆನೆ : ಸಾಕು ಪ್ರಭು….

ಚಿಲ್ಲರೆ : ಸಾಕಾಗೋದಿಲ್ಲ ಪ್ರಭು

ಬಿಳಿ ಆನೆ : ಸಾಕುರೀ….

ಚಿಲ್ಲರೆ : ಸಾಕಾಗೋದಿಲ್ಲ ಪ್ರಭು.

ಬಿಳಿ ಆನೆ : ರೀ, ನಿಮಗೆ ಅನುಭವ ಸಾಲದು, ಮೊದಲು ಸೀನಿಯರ ಆಫೀಸರಿಗೆ ಗೌರವ ಕೊಡೋದಕ್ಕೆ ಕಲೀರಿ.

ಚಿಲ್ಲರೆ : ಅನುಭವ, ಕತ್ತೆಗೂ ಇರುತ್ತೇರೀ….

ಬಿಳಿ ಆನೆ :  ಯಾ‌ರೀ ಕತ್ತೆ? ನಿಮ್ಮಪ್ಪ ಕತ್ತೆ,ದ ನಿಮ್ಮಮ್ಮ ಕತ್ತೆ.

ಚಿಲ್ಲರೆ : ನಿಮ್ಮಜ್ಜಿ ಕತ್ತೆ, ನಿಮ್ಮ ತಾತ ಕತ್ತೇರಿ.

ರಾಜ : ಹೋ; ನಾಯಿ ನನ್ಮಕಳ್ರಾ…. (ಇಬ್ಬರೂ ಸ್ತಬ್ಧರಾಗುವರು)

ಬಿಳಿ ಆನೆ :  ತಾವು ಒಂದು ಕಾಲು ತೋರಿಸಿದರೆ ಸಾಕು ಪ್ರಭು.

ಚಿಲ್ಲರೆ : ಸಾಲೋದಿಲ್ಲ ಪ್ರಭು…. ಪ್ರಜೆಗಳು ಭಕ್ತಿಯಿಂದ ಕೇಳುತ್ತಿದ್ದಾರೆ; ತಾವು ಕೊನೇ ಪಕ್ಷ ಎರಡು ಕಾಲುಗಳನ್ನಾದರೂ ತೋರಿಸಬೇಕು.

ರಾಜ : ನನಗೆ ಇನ್ನೆರಡು ಕಾಲು ಮೂಡಿಲ್ಲವಾದ್ದರಿಂದ ಸಧ್ಯ ಈಗಿರೋ ಎರಡು ಕಾಲನ್ನೇ ತೋರಿಸೋಣ. (ಇಬ್ಬರು ಅಧಿಕಾರಿಗಳು ಮೇಲೆ ಕೈ ಊರಿ ತನ್ನ ಎರಡೂ ಕಾಲುಗಳನ್ನು ಕಿಡಿಕಿಯಲ್ಲಿ ತೂರುವನು. ಹೊರಗೆ ಗಲಾಟೆ ಹಾಗೇ ನಡೆದಿದೆ. ಚಾರನನ್ನು ಕುರಿತು.)

ರಾಜ : ನೀನು ಹೋಗಿ “ರಾಜರ ಮುಖ ಕೊಳೆಯಾಗಿದೆ. ಈಗ ರಾಜರ ಕಾಲನ್ನು ಮಾತ್ರ ನೋಡಿ ತೃಪ್ತಿಪಟ್ಟುಕೊಳ್ಳಿ ಅಂತ ಹೇಳು” (ಚಾರು ಹೋಗುವನು)

ರಾಜ : ಕಾಲು ಒದ್ದೆಯಾಯ್ತಲ್ಲ….

ಚಿಲ್ಲರೆ : ಬಹುಶಃ ಪ್ರಜೆಗಳು ತಮ್ಮ ಪಾದತೊಳೆದು ಪೂಜೆ ಮಾಡುತ್ತಿರಬೇಕು ಪ್ರಭು….

ರಾಜ : ನೀರು ಬೆಚ್ಚಗಿದೆ? ಯಾರೋ ಉಚ್ಚಿ ಹೊಯ್ದಿರಬಹುದು ಮಾರಾಯಾ;
(ಗಲಾಟೆ ಹಾಗೇ ಮುಂದುವರಿದಿರುವಾಗ ರಾಜನ ಕಾಲಿಗೆ ಏಟು ಬೀಳುತ್ತದೆ)

ರಾಜ : ಅಯ್ಯಯ್ಯೋ; ಯಾರೋ ಹೊಡೀತಿದಾರೆ…. ಬೇಗನೇ ಕಾಲೆಳೀರಿ…. ಬೇಗ, ಬೇಗ.

ಚಿಲ್ಲರೆ : ಜೀವೊ ಇಲ್ಲದೆ ಕಾಲೆಳೆಯೋದು ತಪ್ಪಲ್ಲವೇ?

ರಾಜ : ನಾನು ಹೇಳ್ತಿದ್ದೇನೆ ಎಳೀರಯ್ಯಾ.

ಚಿಲ್ಲರೆ : ಇವಯ್ಯಾ ಎಲ್ಲಾದಕ್ಕೂ ಕೊಕ್ಕೆ ಹಾಕ್ತಾರೆ. ಮೊದಲು ಇವರನ್ನ ಸರಿಪಡಿಸಿಕೊಳ್ಳಿ ಪ್ರಭು.

ರಾಜ : ಅಯ್ಯೋ ಅವರು ಆ ಕಡೆಯಿಂದ ಎಳೀತಿದಾರೆ. ಅಯ್ಯಯ್ಯೋ ನನ್ನ ಕಾಲು ನನ್ನ ಕಾಲು, ಕಿತ್ತು ಹೋಗುತ್ರೋ….

ಬಿಳಿ ಆನೆ :  (ಎಳೆಯುತ್ತ) ಜೀವೊ ನಾನು ನೋಡಿಕೊಳ್ತೇನೆ. ಎಳೆಯಿರಿ. ನಿಮ್ಮ ಕಾಲು ಕಿತ್ತು ಕೊಂಡು ಹೋದರೂ ನಿಮ್ಮನ್ನು ನಾವು ಬಿಡೋದಿಲ್ಲ ಪ್ರಭೂ….ಎಳೀರಿ ಎಳೀರಿ. ಜೋರಾಗಿ ಎಳೀರಿ. (ಇವರು ರಾಜನನ್ನು ಇತ್ತ ಎಳೆಯುತ್ತಿದ್ದಾರೆ. ಪ್ರಜೆಗಳು ಅತ್ತ ಎಳೆಯುತ್ತಿದ್ದಾರೆ, ನಡುವೆ ರಾಜ ಒದ್ದಾಡುತ್ತಿದ್ದಾನೆ. ಯಾರೊಬ್ಬರೂ ಸೋಲುತ್ತಿಲ್ಲ. ರಾಜ ಅಯ್ಯಯ್ಯೋ ಎಂದು ಸಂಕಟ ಪಡುತ್ತಿದ್ದಾನೆ. ಅಷ್ಟರಲ್ಲಿ ಶಿವ ಪ್ರಭೂಎನ್ನತ್ತ ಓಡಿ ಬರುತ್ತಾನೆ.)

ಶಿವ : ಪ್ರಭು ನೀವು ನನಗೊಂದು ಅವಕಾಶ ಕೊಟ್ಟರೆ ಒಂದೇ ಕ್ಷಣದಲ್ಲಿ ಹೊರಗಡೆ ಜನರನ್ನೆಲ್ಲಾ ಓಡಿಸಿಬಿಡುತ್ತೇನೆ.

ರಾಜ : ಕೊಟ್ಟಿದ್ದೇನೆ, ಅದೇನ್ಮಾಡ್ತೀಯೋ ಬೇಗ ಮಾಡಯ್ಯಾ.

ಶಿವ : ಡಿಂಗ್‌ಡಾಂಗ್; (ಹೊರಗಡೆಯಿಂದ ಕತ್ತೆಯ ಹೇಂಕಾರ ಭಯಂಕರವಾಗಿ ಕೇಳಿ ಬರುತ್ತದೆ) ಡಿಂಗ್‌ಡಾಂಗ್, ರಾಜರ ಜೀವ ಉಳಿಸೋದು ನಮ್ಮ ಕರ್ತವ್ಯ ಅಲ್ಲವಾ? (ಮತ್ತೆ ಕತ್ತೆಯ ಹೇಂಕಾರ)ಹಾಗಿದ್ದರೆ ಹೊರಗಡೆಯ ಜನರನ್ನೆಲ್ಲಾ ಒದ್ದೋಡಿಸು. (ಈಗ ಈತನಕ ಕೇಳಿಸುತ್ತಿದ್ದ ಗಲಾಟೆಯ ಸಪ್ಪಳದಲ್ಲಿ ವ್ಯತ್ಯಾಸವಾಗುತ್ತದೆ. ಕತ್ತೆಯ ಹೇಂಕಾರ ಭಯಂಕರವಾಗಿ, ಅದು ಒದೆಯುವುದು, ಜನ ಕಿರುಚುವುದು, ಒದರುವುದು ಕೇಳಿಸುತ್ತದೆ. ಸ್ವಲ್ಪ ಸಮಯದಲ್ಲೇ ರಾಜನ ಕಾಲು ಸ್ವತಂತ್ರವಾಗುತ್ತವೆ. ರಾಜ ಮತ್ತು ಉಳಿದವರು ಕಿಟಕಿಯಲ್ಲಿ ಹಣಕಿ ಹಾಕಿ ಆನಂದ, ಆಶ್ಚರ್ಯಗಳಿಂದ ಹೊರಗಡೆಯ ಕತ್ತೆಯ ಚಟುವಟಿಕೆಗಳನ್ನು ನೋಡುತ್ತಾರೆ.)

ರಾಜ : ಅಬ್ಬಾ; ಇದು ಕುದುರೆಯೋ! ಕತ್ತೆಯೋ! ರಾಕ್ಷಸನೋ!

ಚಿಲ್ಲರೆ : ಹ್ಯಾಗೆ ಎಲ್ಲರನ್ನೂ ಅಟ್ಟಿಸಿಕೊಂಡು ಹೋಗಿ ಒದೀತಿದೆ ನೋಡಿ; ಇದು ಗಾಡ್ಲಿ ಪ್ರಾಣಿ ಪ್ರಭು;

ಬಿಳಿ ಆನೆ :  ಇಂಗ್ಲಂಡ್ ಅಮ್ಮನವರ ಹತ್ತಿರ ಇಂಥಾದ್ದು ಎರಡೋ ಮೂರೋ ಇದೆ ಪ್ರಭು.

ಚಿಲ್ಲರೆ : ಹ್ಯಾಗೆ ಎಲ್ಲರನ್ನೂ ಅಟ್ಟಿಸಿಕೊಂಡು ಹೋಗಿ ಒದೀತಿದೆ; ಜನ ಎಲ್ಲಾ ಹ್ಯಾಗೆ ಓಡಿ ಹೋದರು ನೋಡಿ;

ಬಿಳಿ ಆನೆ :  ಗ್ರೇಟ್; ಗ್ರೇಟ್; ಹೆಸರು ನೋಡಿ; ಡಿಂಗ್‌ಡಾಂಗ್-ಅಂತ;

ರಾಜ : ಡಿಂಗ್‌ಡಾಂಗ್!

ಬಿಳಿ ಆನೆ :  ಈ ಕತ್ತೇ ಹುಡುಗನಿಗೆ ನಾನೇ ಹೇಳಿಕಳಿಸಿದ್ದೆ ಪ್ರಭು….

ರಾಜ : ಡಿಂಗ್‌ಡಾಂಗ್!
ಭಲೇ; ಭಲೆ, ಏನೋ ಮರಿ ನಿನ್ನ ಹೆಸರು?

ಶಿವ : ಶಿವಾ ಅಂತ…. ಬಡವ ಪ್ರಭು, ದಯಮಾಡಿ ಒಂದು ನೌಕರಿ ಕೊಟ್ಟರೆ ಬದುಕಿಕೊಳ್ತೇನೆ.

ಬಿಳಿ ಆನೆ : ಹೌದು, ಹೌದು, ಇವನನ್ನ ಕಾಡುಪ್ರಾಣಿ ರಕ್ಷಣಾ ಮಂಡಳಿಯ ಅಧ್ಯಕ್ಷನನ್ನಾಗಿ ಮಾಡಬೇಕೂಂತ ನನ್ನ ಶಿಫಾರ್ಸು ಪ್ರಭು.

ಚಿಲ್ಲರೆ : ಛೆ, ಹಿಂದುಳಿದ ವರ್ಗದ ನಿಗಮಕ್ಕೆ ಅಧ್ಯಕ್ಷನನ್ನಾಗಿ ಮಾಡಿ ಪ್ರಭು.

ರಾಜ : ಅಯ್ಯಾ ಶಿವಾ, ಹೋಗು, ನಿನ್ನ ಡಿಂಗ್‌ಡಾಂಗ್ ನನ್ನ ಕರದುಕೊಂಡು ಬಾ. (ಶಿವ ಹೋಗಿ ಡಿಂಗ್‌ಡಾಂಗ್ ಜೊತೆ ಬರುವನು. ಅದನ್ನು ನೋಡುತ್ತಿದ್ದಂತೆ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಗುತ್ತದೆ.)

ರಾಜ : ಪವಾಡ! ಪವಾಡ! ಅದರ ಮೈಕಟ್ಟೇನು; ಕಾಲೇನು; ಕಿವಿಯೇನು! ಇಂಥ ಕಿವಿ ನನಗಿರಬಾರದಿತ್ತೆ ಎನಿಸುತ್ತೆ.

ಬಿಳಿ ಆನೆ :  ಅಯ್ಯೋ ಡಿಂಗ್‌ಡಾಂಗ್ ಥರ ನನಗೂ ನಾಲ್ಕು ಕಾಲಿರಬಾರದೇ ಅಂತ ಅನಿಸುತ್ತೆ ಪ್ರಭು.

ಚಿಲ್ಲರೆ : ಛೆ, ಶನಿವಾರದ ಬದಲು ಭಾನುವಾರ ಹುಟ್ಟಿದ್ದರೆ ನಾನೇ ಡಿಂಗ್‌ಡಾಂಗ್ ಆಗಿ ಹುಟ್ಟುತ್ತಿದ್ದೆನೋ ಏನೊ;

ಬಿಳಿ ಆನೆ : (ಶಿವನ ಕಿವಿಯಲ್ಲಿ) ರಾಜರ ಹತ್ತಿರ ನಿನ್ನ ಬಗ್ಗೆ ತುಂಬಾ ಹೇಳಿದ್ದೀನಿ. ಆಮೇಲೆ ಬಂದು ಭೇಟಿ ಮಾಡು.

ರಾಜ : ನೋಡ್ರಯ್ಯ ಎಲ್ಲರೂ ಕೇಳಿ ಇವೊತ್ತಿನಿಂದ ಈ ರಾಜ್ಯದ ಪ್ರಧಾನ ಮಂತ್ರಿ….

ಬಿಳಿ ಆನೆ :  ಪ್ರಧಾನಮಂತ್ರಿ ಶಿವಣ್ಣನವರಿಗೆ

ಎಲ್ಲರೂ : (ರಾಜನನ್ನು ಬಿಟ್ಟು) ಜಯವಾಗಲಿ….

ರಾಜ : ಸರಿಯಾಗಿ ಕೇಳಿಕೊಳ್ರಯ್ಯಾ, ಇವೊತ್ತಿನಿಂದ ಈ ರಾಜ್ಯದ ಮಂತ್ರಿ ಶಿವಣ್ಣ ಅಲ್ಲ; ಡಿಂಗ್‌ಡಾಂಗ್!

ಬಿಳಿ ಆನೆ : ಪ್ರಭೂ!

ರಾಜ : ಪ್ರಧಾನಮಂತ್ರಿ ಡಿಂಗ್‌ಡಾಂಗ್ಗೆ ಜಯವಾಗಲಿ ಅನ್ರೊ….

ಎಲ್ಲರೂ : ಜಯವಾಗಲಿ.

ರಾಜ : ಡಿಂಗ್‌ಡಾಂಗ್ ಪ್ರಧಾನಮಂತ್ರಿ, ಶಿವಾ ಅದರ ಪೀಯೆ. ನೋಡಯ್ಯಾ ಶಿವ, ನೀನು ಪ್ರಧಾನಮಂತ್ರಿಗಳ ಉಸ್ತುವಾರಿ ನೋಡಿಕೊಂಡು ಅವರ ಆಸೆಗಳನ್ನು ಭಾಷಾಂತರ ಮಾಡಿ ನಮಗೆ ಹೇಳುತ್ತಿರಬೇಕು. ಪಾರ್ಕಿನಲ್ಲಿರೋ ಅರಮನೆ ನಿಮ್ಮದು. ತಿಳೀತೋ? ಅಯ್ಯಾ ಚಾರ, ಇವರನ್ನ ಪಾರ್ಕಿನ ಅರಮನೆಗೊಯ್ದು ಮುಟ್ಟಿಸು. ಎಲ್ಲಾ ವ್ಯವಸ್ಥೆ ಮಾಡು. ಹೊಸ ಆಜ್ಞೆಗಳನ್ನು ಬರೆದುಕೊಳ್ರಯ್ಯಾ (ರಾಜ ಒಳಕ್ಕೆ ಹೋಗುತ್ತಾನೆ. ನೇಪಥ್ಯದಿಂದ ಕಾರಭಾರಿ ಆಜ್ಞೆ ಓದುವ ದನಿ ಕೇಳಿಸುತ್ತದೆ. ಬಿಳಿ ಆನೆ ಚಿಲ್ಲರೆ ಬರೆದುಕೊಳ್ಳುತ್ತಾರೆ)
ಕಾರಭಾರಿಯ ಧ್ವನಿ : ಅ) ಇನ್ನು ಮುಂದೆ ಡಿಂಗ್‌ಡಾಂಗ್ ಸಾಹೇಬರಿಗೆ ಯಾರೂ ಕತ್ತೆ ಅನ್ನಬಾರದು, ಅಥವಾ ಯಾರೂ ಡಿಂಗ್‌ಡಾಂಗ್ ಸಾಹೇಬರನ್ನು ಟೀಕಿಸಬಾರದು. ಹೊರಗಾಗಲೀ ಮನಸ್ಸಿನಲ್ಲಾಗಲಿ ಅವರಿಗೆ ಕತ್ತೆ ಅಂದವರಿಗೆ, ಟೀಕಿಸಿದವರಿಗೆ ಪೋಲಿಕಾನೂನು ಪ್ರಕಾರ ಆರು ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿಗಳ ಜುಲ್ಮಾನೆ ವಿಧಿಸಲಾಗುವುದು. ಇನ್ನು ಮುಂದೆ ನಮಸ್ಕಾರ ಮಾಡುವಾಗ ರಾಂ, ರಾಂ ಅನ್ನೋದರ ಬದಲು ಎಲ್ಲರೂ ಡಿಂಗ್‌ಡಾಂಗ್ ಅನ್ನತಕ್ಕದ್ದು.
ಆ) ಸನ್ಮಾನ್ಯ ಡಿಂಗ್‌ಡಾಂಗ್ ಸಾಹೇಬರು ಕ್ರಾಂತಿಕಾರಿಗಳನ್ನು ಓಡಿಸಿ ರಾಜರ ಪ್ರಣ ರಕ್ಷಣೆ ಮಾಡಿದ್ದನ್ನು ಪ್ರಜೆಗಳು ವಿಶೇಷವಾಗಿ ಜ್ಞಾಪಿಸಿಕೊಳ್ಳತಕ್ಕದ್ದು ಹಾಗೂ ಅದರ ಜ್ಞಾಪಕಾರ್ಥ ಹೊರಡಿಸಲಾಗುವ ಜಾಸ್ತಿ ಬೆಲೆಯ ಅಂಚೆ ಚೀಟಿಯನ್ನು ಪ್ರತಿಯೊಬ್ಬ ಪ್ರಜೆಯೂ ಭಕ್ತಿಯಿಂದ ಕೊಳ್ಳತಕ್ಕದ್ದು.
ಇ) ಸನ್ಮಾನ್ಯ ಡಿಂಗ್‌ಡಾಂಗ್ ಸಾಹೇಬರ ಊಟಕ್ಕಾಗಿ ಆಸ್ಟ್ರೇಲಿಯಾದಿಂದ ಹುಲ್ಲನ್ನೂ, ಆಮೇರಿಕದಿಂದ ಹಿಂಡಿಯನ್ನೂ ಚೈನಾದಿಂದ ಬೂಸಾವನ್ನು ಇಂಗ್ಲಂಡಿನಿಂದ ರದ್ದೀ ಕಾಗದವನ್ನೂ ತರಿಸುವ ವಿಶೇಷ ಖರ್ಚಿಗಾಗಿ ‘ಬೂಸಾಟ್ಯಾಕ್ಸ್’ ಎಂಬ ಹೊಸ ತೆರಿಗೆಯನ್ನು ಹುಜೂರು ಖಜಾನೆಗೆ ಈ ದಿನದಿಂದಲೇ ಪ್ರಜೆಗಳು ಕಟ್ಟತಕ್ಕದ್ದು. ಓವರ್.

ಚಿಲ್ಲರೆ : ಸ್ವಾಮಿ ಶಿವಣ್ಣೋರೆ, ಆರ್ಡರಿನಲ್ಲಿ ಡಿಂಗ್‌ಡಾಂಗ್ ಸಾಹೇಬರ ರಾತ್ರಿ ವ್ಯವಸ್ಥೆ ಹ್ಯಾಗೆ ಅಂತ ಹೇಳಲಿಲ್ಲವಲ್ಲಾ? ಸಾಹೇಬರಿಗೆ ಮದುವೆ ಆಗಿದೆಯೆ?

ಶಿವ : ಇಲ್ಲ.

ಚಿಲ್ಲರೆ : ಸಾಹೇಬರಿಗೆ ಮದುವೆ ಆಗಿಲ್ಲ ಅಂದಮೇಲೆ ರಾತ್ರಿ ಹಡಗು ಮೀನು ಇತ್ಯಾದಿ ವ್ಯವಸ್ಥೆ ಬೇಡವಾ?

ಶಿವ : ಹಡಗು ಮೀನು ಅಂದರೆ?

ಚಿಲ್ಲರೆ : ನಮ್ಮ ಪಾರ್ಟಿ ಹತ್ತಿರ ಎರಡು ಬಿಳಿ ಹೆಚ್ಚುಕತ್ತೆ ಇವೆ. ಎರಡಕ್ಕೂ ಭರ್ತಿಪ್ರಾಯ, ಗನೋರಿಯಾ ಇತ್ಯಾದಿ ಏನೂ ಇಲ್ಲ. ಡಾಕ್ಟರ ಸರ್ಟಿಫಿಕೇಟ್ ಇದೆ. ನಿಮ್ಮದು ಇಷ್ಟು ಪರ್ಸೆಂಟೇಜ್ ಅಂತ ಗೊತ್ತಾದರೆ ಬಿಲ್ ಪಾಸ್ ಮಾಡಿಸ್ತೀನಿ. ಇಲ್ಲಾಂದರೆ ಎಳೆ ಪ್ರಾಯದ ಮರಿಕುದುರೆ ಇದೆ. ಕಂದುಬಣ್ಣದ್ದು. ಅಸಲಿ ವರ್ಜಿನ್, ಬೇಕಾದರೆ ಟೆಸ್ಟ್ ಮಾಡಿ ನೋಡಬಹುದು…. ಫಿಪ್ಟಿ ಫಿಪ್ಟಿ ಒಪ್ಪೋದಾದರೆ ಪಾರ್ಟೀನ್ನ ಕರಕೊಂಬರ್ತೀನಿ. ಸಾಯಂಕಾಲ ಮಂತ್ರಾಲಯ ಬಾರಿಗೆ ಬನ್ನಿ, ಕಾಯ್ತಾ ಇರತ್ತೀನಿ (ಹೋಗುವನು)

ಬಿಳಿ ಆನೆ : ಡಿಂಗ್‌ಡಾಂಗ್ ಶಿವಣ್ಣ.

ಶಿವ : ಡಿಂಗ್‌ಡಾಂಗ್ ಸ್ವಾಮಿ.

ಬಿಳಿ ಆನೆ : ಇನ್ನೇನಿಲ್ಲ ಡಿಂಗ್‌ಡಾಂಗ್ ಸಾಹೇಬರಿಗೆ ಕತ್ತೆ ಕುದುರೆ ಕೊಟ್ಟು ಅವಮಾನ ಪಡಿಸೋದು ಒಳ್ಳೇದಲ್ಲ ಅನ್ಸುತ್ತೆ. ಅವರೇನೋ ಮರ್ಯಾದೆ ಮೀರಬಾರದು ಅಂತ ನೀವು ಕೊಟ್ಟದ್ದನ್ನು ಏರಬಹುದು. ಆದರೆ ಯೋಚನೆ ಮಾಡಿ : ರಾಜ್ಯದ ಪ್ರಧಾನಿಗೆ ಕತ್ತೆ ಕುದುರೆ ಅಂದರೆ ರಾಜರ ಮರ್ಯಾದೆ ಏನು? ನಮ್ಮ ಮರಿಯಾದೆ ಏನು? ನೀವು ಮನಸ್ಸು ಮಾಡೋದಾದರೆ ಹುಡಿಗೇರು ರೆಡಿ ಇದ್ದಾರೆ. ಕರೆಸಲಾ? ಯಾವುದಕ್ಕೂ ಸಂಜೆ ಬಾಲಾಜಿ ಕ್ಲಬ್ ಗೆ ಬನ್ನಿ (ಹೋಗುವನು)