(ಗಣೇಶನ ದೇವಸ್ಥಾನ. ಸಾಂಬ ದಿನಪತ್ರಿಕೆ ತಗೊಂಡು ಹಾಡುತ್ತ ಬರುತ್ತಾನೆ. ಆದರೆ ಆಗಲೇ ಮೂಲೆಯಲ್ಲೊಬ್ಬ ವ್ಯಕ್ತಿ ಕುಡಿಯುತ್ತ ಕೂತಿದ್ದಾನೆ. ಸಾಂಬ ಅವನನ್ನು ಗಮನಿಸುವುದಿಲ್ಲ.)

ಸಾಂಬ :

ಏನಹೋಗಿ ಏನ ಬಂತು ಎಂಥಾ ಕಾಲ ಬಂದೀತಣ್ಣ
ದೇಶದಲ್ಲಿ ವಿಷದಗಾಳಿ ಬೀಸೀತಲ್ಲ.
ಆಹಾ! ಗುಂಡು ತೇಲಿ ಬೆಂಡು ಮುಳುಗಿ ಹೋದೀತಲ್ಲ
ಬುದ್ಧ ಬಸವ ಎಂಕನಾಣಿ ಯಾರಯ್ಯಾರಿಲ್ಲಾ
ಇಲ್ಲಿ! ಜಾರಿದಷ್ಟು ದಾರಿ ದೂರ ಬೆಳೆದೀತಲ್ಲ!
ಉಘೆ, ಉಘೆ ಎಂದಾರೋ ಸ್ವಾಮಿ
ಡಿಂಗಡಾಂಗೆಂದಾರೋ ||

ಹೆಣ್ಣು ಗಂಡೂ ಕೈಕಾಲೂರಿ ಕತ್ತೀಹಾಗೆ ಕುಣೀತಾರೆ
ಬಾಡಿಗೆ ಮುಖ ಧರಿಸ್ಯಾರಲ್ಲ ಬುದ್ಧಿವಂತರ
ಬಾಲ ಮೂಡೇತಿಲ್ಲೋ ಅಂತ ಮುಟ್ಟಿ ನೋಡ್ಯಾರಲ್ಲ
ಕತ್ತೇ ಬಾಲಕ್ಕೆಲ್ಲಾ ದೇವರ ಕಟ್ಯಾರಲ್ಲಾ
ತಾಜಾ ಚಳ್ಳೆ ಹಣ್ಣು ತಿಂದು ತಿಂದು  ತೇಗ್ಯಾರಲ್ಲ
ಉಘೆ, ಉಘೆ ಎಂದಾರೋ ಸ್ವಾಮಿ
ಡಿಂಗ್‌ಡಾಂಗೆಂದಾರೋ ||

ಛೆ, ಏನು ಹುಚ್ಚು ಈ ಮಂದಿಗೆ; ಯಾವ ಪೇಪರ್ ತೆಗೆದರೂ ಡಿಂಗ್‌ಡಾಂಗ್ ಸುದ್ದಿ; ಯಾರನ್ನೂ ಮಾತಾಡಿಸಿದರೂ ಡಿಂಗ್‌ಡಾಂಗ್  ಸುದ್ದಿ; ಇವತ್ತೇನಿದೆ…. (ಪತ್ರಿಕೆಯನ್ನು ತಿರುವಿ ಹಾಕುತ್ತಿ ಓದುವನು) ಡೀಜೀಕೆ ರಸ್ತೆಯಲ್ಲಿ ಡಿಂಗ್‌ಡಾಂಗ್  ಸಾಹೇಬರ ಶಿಲಾಮೂರ್ತಿ ಪ್ರತಿಷ್ಠಾಪನೆ…. ಹೆಣ್ಣು ಕತ್ತೆಗಳ ಕಳ್ಳ ಸಾಗಾಣಿಕೆ…. ಡಿಂಗ್‌ಡಾಂಗ್ ಅಭಿಮಾನಿಗಳ ಸಂಘದಿಂದ ರಕ್ತದಾನ ಸಮಾರಂಭ …. ಭೂಸಾ ತೆರಿಗೆಯನ್ನು ಪುನಃ ಏರಿಸುವುದಾಗಿ ಮಹಾರಾಜರ ಭರವಸೆ…. ಗ್ರಾಹಕರಿಗೆ ಎಚ್ಚರಿಗೆ;
ಡಿಂಗ್‌ಡಾಂಗ್ ಎಂಬ ಹೆಸರಿನಲ್ಲಿ ಇತ್ತೀಚೆಗೆ ಅನೇಕ ಕಂಪನಿಗಳು ಟಾಲ್ಕಂ ಪೌಡರ್ ತಯಾರಿಸುತ್ತಿರುವುದು ಸರಿಯಷ್ಟೆ? ಆದರೆ ನಿಜವಾದ ಡಿಂಗ್‌ಡಾಂಗ್ ಲದ್ದಿಯನ್ನು ಉಪಯೋಗಿಸಿ ಪೌಡರ್ ತಯಾರಿಸುವ ಸರಕಾರೀ ಕಂಪನಿ ಒಂದು ಮಾತ್ರ ಇದ್ದು ಉಳಿದುವು ಬೇರೆ ಪ್ರಾಣಿಗಳ ಸೆಗಣಿಯಿಂದ ಪೌಡರ್ ತಯಾರಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿವೆ. ಈ ಬಗ್ಗೆ ಹುಷಾರಾಗಿರಬೇಕೆಂದು ಸರಕಾರಿ ವಕ್ತಾರರು ಗ್ರಾಹಕರನ್ನು ಎಚ್ಚರಿಸಿದ್ದಾರೆ.

ಬೀರಯ್ಯ : ಇದೇನು ಮಹಾ ಅಂತ ಹೇಳ್ತಿ ಬಿಡು ಗುರು. ಕಾಲೇಜು ಹುಡಿಗೀರು ಡಿಂಗ್‌ಡಾಂಗ್‌ಗೆ ಲವ್ ಲೆಟರ್ ಬರೀತಿದ್ದಾರೆ ಗೊತ್ತ?

ಸಾಂಬ : (ತನ್ನಲ್ಲಿ) ಎಲಾ ಇವನ; ಒಬ್ಬನೇ ಕುಡೀತಿದಾನೆ. ಇವನನ್ನೆಲ್ಲೋ ನೋಡಿದ ಹಾಗಿದೆಯಲ್ಲಾ….

ಬೀರಯ್ಯ : ಒಬ್ಬ ಹುಡುಗಿ ಏನು ಬರದಿದಾಳೆ ಗೊತ್ತ? ಮೊನ್ನೆ ರಾತ್ರಿ ಅವಳಿಗೆ ಡಿಂಗ್‌ಡಾಂಗ್ ಜೊತೆ ಡಿಸ್ಕೋ ಡ್ಯಾನ್ಸ್ ಮಾಡಿದ ಹಾಗೆ ಕನಸಾಯ್ತಂತೆ;

ಸಾಂಬ : ಹೌದು. ಡ್ಯಾನ್ಸ್ ಮಾಡೋವಾಗ ಡಿಂಗ್‌ಡಾಂಗ್ ಗೆ ಎರಡುಕಾಲು ಕಮ್ಮಿ ಆಗಿದ್ದುವ? ಇಲ್ಲಾ ಇವಳಿಗೇ ಇನ್ನೆರಡು ಕಾಲು ಮೂಡಿದ್ದುವ?

ಬೀರಯ್ಯ : ನಾನು ಹಾಗೆಲ್ಲ ಇನ್ನೊಬ್ಬರ ಕನಸಲ್ಲಿ ಕದ್ದು ಹೋಗೋ ಪೈಕಿ ಅಲ್ಲ ಗುರು. ನನ್ನ ನೋಡಿ ಹೇಳು ನಾನು ಅಂಥ ಕಳ್ಳ ಅಂತ ಅನ್ನಿಸುತ್ತ?

ಸಾಂಬ : ನಿನ್ನನ್ನೆಲ್ಲೋ ನೋಡಿದ ಹಾಗಿದೆಯಲ್ಲಾ….

ಬೀರಯ್ಯ : ಅದಿರಲಿ ಗುರೂ, ಮಾರ್ಕೆಟ್ಟಲ್ಲಿ ಬೂಸಾ, ಹಿಂಡಿ ಎಷ್ಟು ತುಟ್ಟಿ ಆಗಿದೆ ಗೊತ್ತ?

ಸಾಂಬ : ಯಾಕೆ, ಮನುಷ್ಯರೂ ಹಿಂಡಿ ತಿನ್ನೋದಕ್ಕೆ ಸುರು ಮಾಡಿದರ?

ಬೀರಯ್ಯ : ಮತ್ತೆ ಹೋಟಲಲ್ಲೀಗ ಒಂದು ಪ್ಲೇಟ್ ಬೂಸಾ ಹಿಂಡಿಗೆ ಮೂರು ರೂಪಾಯಿ;

ಸಾಂಬ : ಭಲೆ; ನಾನೂ ಎಷ್ಟೋ ಜನರನ್ನ ಕಂಡೆ, ಪಲ್ಲೆ ಇಲ್ಲದೇ ರೊಟ್ಟಿ ತಿಂದವರನ್ನ ಕಂಡೆ. ಸಾರಿಲ್ಲದೇ ಅನ್ನ ಉಂಡವರನ್ನ ಕಂಡೆ; ಆದರೆ ಪಲ್ಲೆ ಇದ್ದರೂ ಸಾರಿದ್ದರೂ ಬೂಸಾ ಹಿಂಡಿ ತಿಂದು ಬದುಕೋರನ್ನ ಕಂಡಿರಲಿಲ್ಲಪ್ಪ!

ಬೀರಯ್ಯ : ನಾ ಹೇಳಿದೆ; ಇದು ಊಟ ಅಲ್ರಯ್ಯ ಅಂತ, ಆದರೆ ಅದು ಬದುಕೋ ದಾರಿ ಅಂತಾರೆ!

ಸಾಂಬ : ಇವರಿಗ್ಯಾರೂ ಬುದ್ಧೀ ಹೇಳೋರಿಲ್ಲವಾ?

ಬೀರಯ್ಯ : ಇದ್ದಾನೆ ನಮ್ಮಲ್ಲೊಬ್ಬ ಪಂಡಿತ. ಬರೀ ಪುಸ್ತಕದ ಬಗ್ಗೆ ಮಾತಾಡತಾನೆ. ನಿದ್ದೆ ಮಾಡುವಾಗಲೂ ಬಾಯಿ ತೆರೆದಿರತಾನೆ. ಬಾಯಿ ತೆರೆದಾಗೆಲ್ಲಾ ಪುಸ್ತಕದ ಬಗ್ಗೆ ಮಾತಾಡತಾನೆ. ಒಂದು ಸಲವೂ ಅನ್ನ ಸಾರಿನ ಬಗ್ಗೆ ಮಾತಾಡೇ ಇಲ್ಲ. ಅವ ಪುಸ್ತಕದ ಬಗ್ಗೆ ಮಾತಾಡತಾನೆ. ಅವನ ಪಾಲಿನ ಅನ್ನ ಸಾರು ಇಲಿ ತಿನ್ನುತ್ತವೆ. ತಿಂದೂ ತಿಂದೂ ಇಲಿ ದಪ್ಪಗಾದವು. ಅವ ಸೊರಗಿ ಕಡ್ಡಿ ಆದ. ಯಾಕಣ್ಣ ಹೀಗೆ ಅಂದರೆ ನನ್ನ ಹೆಸರು ಪಂಡಿತ ಅಂತಾನೆ!

ಸಾಂಬ : ಛೇ, ನೀನು ಬಹಳ ನಗಸ್ತೀಯಪ. ನಿನ್ನೆ ಕಣಸಿನಲ್ಲಿ ಒಬ್ಬವ್ನ ನೋಡಿದೆ. ಥೇಟ್ ಎಳೇ ಮೀನಿನ ಥರ ಇದ್ದ!

ಬೀರಯ್ಯ : ಹೌದ? ಯಾರವನು?

ಸಾಂಬ : ಅದೇ ನೆನಪಾಗವೊಲ್ದು, ನೀನೇ ಇದ್ದಿರಬೇಕೇನು ಅಂತ….

ಬೀರಯ್ಯ : ನೀನು ನನಗೆ ಮೀನಂದರೂ ಸೈ, ಮೊಸಳೆ ಅಂದರೂ ಸೈ. ಇಷ್ಟು ದಿವಸದಲ್ಲಿ ನನಗೆ ತಿಳಿಯೋ ಹಾಗೆ ಮತಾಡಿದವನು ನೀನೊಬ್ಬನೇ ಕಣಯ್ಯ.

ಸಾಂಬ : ಛೆ, ಛೆ ಕನಸಿನಲ್ಲಿ ಹಾಗೆ ಕಂಡಿತ್ತು ಅಷ್ಟೆ ಮಾರಾಯಾ, ಮನಸ್ಸಿಗೆ ಹಚ್ಚಿಕೋಬೇಡ ಮತ್ತೆ. ಹೆಂಡಗಿಂಡ ನೀನೇ ಕುಡೀತಿಯಲ್ಲ, ನಿನಗೂ ಬೇಕೇನಂತ ಕೇಳೋವಷ್ಟು ಸಂಸ್ಕೃತೀನೇ ಇಲ್ಲವಲ್ಲಪ ನಿನ್ನಲ್ಲಿ?

ಬೀರಯ್ಯ : ಈಗೇನು ನನ್ನ ಸಂಸ್ಕೃತಿ ಬೇಕ, ಇಲ್ಲ ಹೆಂಡ ಬೇಡ?

ಸಾಂಬ : ಹೆಂಡ.

ಬೀರಯ್ಯ : ಹಾಗಿದ್ದರೆ ಮುಚ್ಚಿಕೊಂಡು ಕೇಳು: ರಾಜಕಾರಣ ಅಂದರೆ ಭಾಷಣ, ಟೇಬಲ್ ಗುದ್ದಿ ಭಾಷಣಾ ಮಾಡೋದು ವ್ಯವಸ್ಥೆ, ಗಾಳಿಗುದ್ದಿ ಭಾಷಣ ಮಾಡೋದು ಕ್ರಾಂತಿ. ನಮ್ಮ ನಾಯಕ ಇದಾನಲ್ಲ-ಅವನೇ ಪುಸ್ತಕದೋನು – ಗಾಳೀಗುದ್ದಿ ಭಾಷಣ ಮಾಡುತ್ತಿದ್ದ. ಯಾವುದುದರ ಬಗ್ಗೆ ಗೊತ್ತ? ಅದೇ ಪುಸ್ತಕದ ಬಗ್ಗೆ ಪುಸ್ತಕದಲ್ಲಿರೋ ಕ್ರಾತಿ ಬಗ್ಗೆ. ನನಗೆ ನನ್ನ ಮೇಲೆ ಸಿಟ್ಟು ಬಂತು ನೋಡು, ಯಾಕಂತೀಯೋ? ತಿಗಾಬಾಯಿ ಮುಚ್ಚಿಕೊಂಡು ಇದನೆಲ್ಲಾ ಕೇಳ್ತಾ ಇದ್ದೀನಲ್ಲಾ ಅಂತ ಸಿಟ್ಟುಬಂತು. ನನ್ನ ನಾನೇ ಮನಸ್ಸಿನಲ್ಲಿ ಒದ್ದುಕೊಂಡುಬಿಟ್ಟೆ.

ಸಾಂಬ : ಭಲೆ, ಒಳ್ಳೆ ಕೆಲಸ ಮಾಡಿದೆ, ಹಾಗೇ ನಿನ್ನ ಮನಸ್ಸಿನಲ್ಲಿ ಅವನನ್ನು ಒಂದು ಸಲ ಒದ್ದಿದ್ದರೆ ಚೆನ್ನಾಗಿರೋದು.

ಬೀರಯ್ಯ : ಎಲ್ಲ ಕಾಲಕ್ಕೂ ಪ್ರಾಮಾಣಿಕವಾಗಿರೋದು ಹ್ಯಾಗೆ ಸಾಧ್ಯ ಗುರು?

ಸಾಂಬ : ನಿಜ, ನಿಜ. ನನಗೆ ನೀನೀಗಲೂ ಮೀನಿನ ಥರ ಕಾಣಸ್ತೀಯಪ, ಹಾಗಂತ ಹೇಳಲಿಕ್ಕಾಗುತ್ತ….? ಇಂದ್ರ ಚಂದ್ರ ಅನ್ನಬೇಕು. ಇಲ್ಲದಿದ್ದರೆ ನೀ ನನಗೆ ಹೆಂಡ ಕೊಡೋದಿಲ್ಲ….

ಬೀರಯ್ಯ : ಅದು ಬದುಕೋ ದಾರಿ. ನಮ್ಮ ನಾಯಕ ದೇವರಲ್ಲ ಅಂತ ನನ್ನ ಅಭಿಪ್ರಾಯ. ನೀ ಏನಂತೀ? ಅಷ್ಟೇ ಅಲ್ಲ. ಅವ ಯಾರು ಅಂದರೆ ಮನುಷ್ಯ ಅಂತ ನನ್ನ ಅಭಿಪ್ರಾಯ ಯಾಕಂತಿಯೋ….

ಸಾಂಬ : (ಸಿಡಿದು) ನನಗೆ ಮಾತುಬೇಡ, ಹೆಂಡ ಬೇಕು, ಕೊಡ್ತಿಯೋ? ಇಲ್ಲವೋ?

ಬೀರಯ್ಯ : ಕೊಡೋದಿಲ್ಲ, ಬೇಕಾದರೆ ಇನ್ನರಡು ಮಾತು ಹೇಳಲ?

ಸಾಂಬ : ಬೇಡ, ಮುಚ್ಚಿಕೊಂಡು ಬಿದ್ದುಕೋ, ಸಾಕು.

ಬೀರಯ್ಯ : ಛೇ ನಿನ್ನ ಕನಸನ್ನೇ ಹೆಳಲಿಲ್ಲವಲ್ಲ ಗುರು.

ಸಾಂಬ : ಯಾವ ಕನಸು?

ಬೀರಯ್ಯ : ನಾ ಬಂದಿದ್ದೆ ಅಂತ ಹೇಳಿದೆಯಲ್ಲ ಅದು.

ಸಾಂಬ : ಹೆಂಡ ಕೊಡು ಹೇಳ್ತೀನಿ.

ಬೀರಯ್ಯ : ಬರೀ ಹೆಂಡ ಯಾಕೆ, ಪ್ರಾಣ ಕೊಡ್ತೀನಿ ಗುರು, ಮೊದಲು ಆ ಕನಸು ಹೇಳು.

ಸಾಂಬ : ಹೇಡ ಕೊಟ್ಟರೇನೇ ಹೇಳೋದು.

ಬೀರಯ್ಯ : ಛೆ, ಕುಡಿದೋರೆಲ್ಲಾ ಪುಸ್ತಕದ ಬಗ್ಗೆ ಭಾಷಣ ಮಾಡ್ತಾರೆ. ನನಗೆ ಭಾಷಣ ಅಂದರೆ ಬೋರು ಕಣಣ್ಣ!

ಸಾಂಬ : ಹೆಂಡ ಇಲ್ಲದೆ ನನ್ನ ನಾಲಗೆ ಏನೋದಿಲ್ಲ ಕಣಣ್ಣಾ.

ಬೀರಯ್ಯ : ಛೇ ನೀನೂ ನನ್ನ ನಾಯಕರ ಹಾಗೇ ಮಾತಾಡ್ತೀಯಲ್ಲಣ್ಣ….(ಅಳುವನು)

ಸಾಂಬ : ಎಲ್ಲೀ ಇವಳ; ಅಳೋವಂಥಾದ್ದೇನಾತೋ ಮಾರಾಯಾ?

ಬೀರಯ್ಯ : ಯಾಕಳಬಾರದು ಹೇಳು, ನನಗ್ಯಾಕಪ್ಪ ದುಃಖ ಅಂದರೆ ಈ ಸಿಟಿ ಬಗ್ಗೆ ನನ್ನ ಅಭಿಪ್ರಯ ಏನು ಅಂತ ಯಾರು ಕೇಳೋದೇ ಇಲ್ಲ. ನೀ ಕೇಳ್ತೀಯೇನೋ ಅಂದರೆ ನನಗೆ ಹೆಂಡಾ ಬೇಕಾಗಿದೆ.

ಸಾಂಬ : ಕೇಳ್ತೀನಿ ಹೆಂಡ ಕೊಡ್ತಿಯೇನಣ್ಣಾ?

ಬೀರಯ್ಯ : ತಗೊ. (ಕೊಡುವನು. ಸಾಂಬ ಮನಸಾರ ಕುಡಿದು ಕುಡಿದ ಮ್ಯಾಲೆ) ಕೇಳು.

ಸಾಂಬ : ತಮ್ಮಾ ಈ ಸಿಟಿ ಬಗ್ಗೆ ನಿನ್ನ ಆಭಿಪ್ರಾಯ ಏನು?

ಬೀರಯ್ಯ : (ಉತ್ಸಾಹದಿಂದ) ಈ ಸಿಟಿ ಅಂದರೆ ಕೇಳು ಗುರು ಒಂದು ಚರಂಡಿ ಕೆರೆ. ನೋಡಣ್ಣಾ ಇದುಮೂಲದಲ್ಲದಿ ನದೀನೇ. ಆದರೆ ಒಡ್ಡುಕಟ್ಟಿ ಕೆರೆ ಮಾಡಿದ್ದಾರೆ. ಇದರ ಸುತ್ತ ಕಾಡು. ಅಂದರೆ ಗಿಡಗಂಟಿ ಮರಗಳು ದಟ್ಟವಾಗಿ ಬೆಳೆದ ಪ್ರದೇಶ ಅಂತ ಅರ್ಥ. ಆದರೆ ನಾನು ಹೇಳೋ ಕಾಡಿನಲ್ಲಿ ಅಂಥ ಮರಗಿಡ ಇಲ್ಲ. ಬರೀ ಮುಳ್ಳಿನ ಗಿಡಗಳು, ಮುಳ್ಳಿನ ಮರಗಳು. ಈ ಗಿಡ ಮರಗಳಿಗೆ ಹಣ್ಣ ಜೋತು ಬಿದ್ದಿವೆ; ಈ ಹಣ್ಣು ತಿನ್ನಬೇಕೂಮತೀಯಾ ಕಳ್ಳ ನೀನು. ಹತ್ತಿರ ಹೋಗಿ ನೋಡಿದರೆ ಹಣ್ಣಲ್ಲ, ಅವು ಮನುಷ್ಯರ ತಲೆಬುರುಡೆಗಳು! ಹ್ಯಾಗಿದೆ?

ಸಾಂಬ : (ಇವನೂ ಉತ್ಸಾಹದಿಂದ) ಏನೋ ತಮ್ಮ ನೀನು ನನ್ನ ಕನಸಿನ ಮೊದಲರ್ಧ ಹೇಳ್ತಾ ಇದ್ದೀಯ; ನೀನು ತಲೆಬುರುಡೆ ಅಂತ ಹೆದರಿ ಓಡಿದೆಯಲ್ಲ, ಆಮೇಲೆ ನಾನು ಹೋದೆ ಅಲ್ಲಿಗೆ. ತಲೆಬರುಡೆ ಇದ್ದುವಲ್ಲ, ನಾ ಹೋದಾಗ ಅವೆಲ್ಲ ಚಪ್ಪಾಳೆ ತಟ್ಟಿ ನಗತಾ ಇವೆ! ಯಾಕಪ್ಪ ಅಂತ ನೋಡಿದರೆ ಒಬ್ಬ ಧಾಂಡಿಗ ಬೆಸ್ತ ಆ ಕೆರೇಲಿರೋ ಚಿಳಿಮಿಳಿ ಮೀನುಗಳನ್ನು ಹಿಡಿದು ಹಿಡಿದು ಹಾಗಾಗೇ ನುಂಗುತಾ ಇದ್ದ; ನನಗೂ ಒಂದು ಮರಿ ಮೀನು ಸಿಕ್ಕಿತು. ಟೇಬಲ್ ಮೇಲಿಟ್ಟು ಕುಯ್ಯೋಣ ಅಂದರೆ ಅದು ಹಾಡೋದಕ್ಕೆ ಸುರು ಮಾಡಿತೆ!

ಬೀರಯ್ಯ : ಏನಂತ?

ಸಾಂಬ :

ಉಳಿಸೆನ್ನ ಜೀವಾ
ಉಪಕಾರ ಮಾಡೋ
ಸೂರ್ಯನ್ನ ಕೊಡತೇನೆ
ಕೆರೆಕಟ್ಟೆ ಒಡೆಯೋ

ಬೀರಯ್ಯ : ಆಮೇಲೆ?

ಸಾಂಬ : ಇಲ್ಲೀತನಕ ನಾನು ಮೀನಿನ ಕಣ್ಣೇ ನೋಡಿರಲಿಲ್ಲ; ನೋಡ್ತ ನೋಡ್ತ ಗಾಬರಿ ಆಗಿ ಎಚ್ಚರಾಯ್ತು, ಅದರ ಕಣ್ಣು ಥೇಟ್ ನಿನ್ನ ಕಣ್ಣ ಹಾಗೇ ಇದ್ದುವು!

ಬೀರಯ್ಯ : ಛೇ, ಅಷ್ಟು ಬೇಗನೇ ನೀ ಎಚ್ಚರಾದದ್ದು ತಪ್ಪು ಕಣಣ್ಣ.

ಸಾಂಬ : ಇವತ್ತೇನಾರ ಆ ಮೀನು ಕನಸಲ್ಲಿ ಮತ್ತೆ ಬಂದು ಕೆರೆಕಟ್ಟೆ ಒಡೆ ಅಂತ ಗುದ್ದಲಿ ಪಿಕಾಸಿ ಕೊಟ್ಟರೆ ಒಡದೇ ಬಿಡತೀನಿ ಅಷ್ಟೆ. ಯಾಕಂತೀಯೋ, ಪಾಪ ಚಿಳಿಮಿಳಿ ಮೀನು ಸಾಯೋದನ್ನ ನೋಡಕ್ಕಾಗೋದಿಲ್ಲ ನನ್ನಿಂದ.

ಬೀರಯ್ಯ : ಅಷ್ಟೇ ಅಲ್ಲಪ್ಪ, ಕೆರೆಕಟ್ಟೆ ಒಡೆಯೋದು ನಿನ್ನೊಬ್ಬನಿಂದಲೇ ಆಗದ ಕೆಲಸ. ಪಕ್ಕದಲ್ಲಿ ಗುದ್ದಲಿ ಪಿಕಾಸಿ ಇಟ್ಟುಕೊಂಡು ನಾನೂ ಮಲಗಿರತೀನಿ. ನನ್ನನ್ನು ಕರೆ.

ಸಾಂಬ : ಏನಂತ ಕರೀಲಿ?

ಬೀರಯ್ಯ : ಬೀರಯ್ಯ ಅಂತ ಕೂಗು, ಸಾಕು. ಇಕಾ ಇಷ್ಟೂ ಹೆಂಡ ನೀನೇ ಕುಡಿ, ಸುಖವಾಗಿ ನಿದ್ದೆ ಬರಲಿ. ಆ ಕನಸು ಮತ್ತೆ ಬೀಳಲಿ. ನಾನೂ ಬೇಗ ಬರತೀನಿ.

ಸಾಂಬ : ಎಲ್ಲಿಗೆ ಹೊರಟೆ ತಮ್ಮಾ?

ಬೀರಯ್ಯ : ಗುದ್ದಲಿ, ಪಿಕಾಸಿ ತರೋದಕ್ಕೆ, ನೆಪ್ಪಿರಲಣ್ಣಾ ಈಗಷ್ಟೆ ನನ್ನ ಮನಸ್ಸಿನಲ್ಲಿ ಬೀಜ ಬಿತ್ತಿದ್ದೀಯಾ. ನಿನಗಾದರೆ ಅದು ಬರೀ ಬೀಜ; ನನಗೆ ಅದರ ಫಲ ಕಾಣತಾ ಇದೆ!
        ಸೂರ್ಯನ್ನ ಕೊಡತೇನೆ
        ಕೆರೆಕಟ್ಟೆ ಒಡೆಯೋ….
(ಹಾಡುತ್ತ ಹೋಗುವನು)