(ರಾಜ ಮತ್ತು ಕಾರುಭಾರಿ, ಅರಮನೆ.)

ರಾಜ : ಯಾಕೊ, ಮಗನೇ ತುಂಬಾ ಸಂತೋಷವಾಗಿದ್ದೀಯಾ?

ಕಾರಭಾರಿ : ಅಳೋದಕ್ಕೇನೂ ಕಾರಣ ಎಲ್ಲಾ ಪ್ರಭು.

ರಾಜ : ಎಷ್ಟು ಕಾರಣ ಬೇಕು ನಿನಗೆ? ನೂರು? ಸಾವಿರ?

ಕಾರಭಾರಿ : ಎರಡು ಹೇಳಿ ಪ್ರಭು, ಸಾಕು.

ರಾಜ : ಬಾಯ್ಮುಚ್ಚು, ನಿನ್ನಂಥ ಅಯೋಗ್ಯನಿಂದಲೇ ಹೀಗೆಲ್ಲ ಆದದ್ದು.

ಕಾರಭಾರಿ : ಆದರೆ ಪ್ರಭು….

ರಾಜ : ಬಾಯ್….
(ಕಾರಬಾರಿ ಕೈಯಿಂದ ಬಾಯಿ ಮುಚ್ಚಿಕೊಳ್ಳವನು)

ರಾಜ : ನನಗೆ ಸಿಟ್ಟು ಬರುತ್ತೋ ಇಲ್ವೋ ಹೇಳು.

ಕಾರಭಾರಿ : ಬಾಯ್ಮುಚ್ಚು ಅಂದಿರಲ್ಲ ಪ್ರಭು.

ರಾಜ : ಪರವಾಗಿಲ್ಲ, ಮುಚ್ಕೊಂಡೇ ಹೇಲು

ಕಾರಭಾರಿ : ಏನು ಹೇಳಲಿ ಪ್ರಭು?

ರಾಜ : ನನಗೆ ಸಿಟ್ಟು ಬರುತ್ತೋ ಇಲ್ವೋ.

ಕಾರಭಾರಿ : ಬಂದಿದೆಯಲ್ಲಾ ಪ್ರಭು.

ರಾಜ : ಬರಬೇಕಾದ್ದೇ ಅನ್ನು.

ಕಾರಭಾರಿ : ಬರಬೇಕಾದ್ದೆ

ರಾಜ : ಎಷ್ಟು ಕಡೆ ಕೋಪ ಬಂದಿದೆ ಗೊತ್ತಾ?

ಕಾರಭಾರಿ : ಗೊತ್ತಿಲ್ಲ ಪ್ರಭು

ರಾಜ : ಎರಡು ಕಡೆ. ಹ್ಯಾಗೆ? ಯಾಕೆ? ಅನ್ನು.

ಕಾರಭಾರಿ : ಹ್ಯಾಗೆ? ಯಾಕೆ?

ರಾಜ : ಆ ಕತ್ತೆ ಡಿಂಗ್‌ಡಾಂಗು ನನ್ನ ಪ್ರಾಣ ಉಳಿಸಿತು ಅಂತ ಮಂತ್ರೀ ಮಾಡಿದರೆ ರಾಜ್ಯದ ತುಂಬಾ ಏನಯ್ಯಾ ಅವನ ಖ್ಯಾತಿ! ಯಾರು ಬಾಯೊಳಗೆಲ್ಲ ಕತ್ತೆ ಹೆಸರೆ; ಅದರದ್ದೆ ಹಾಡು; ಅದರದ್ದೇ ಕೀರ್ತನೆ; ಒಬ್ಬರಿಗಾದರೂ ನಾನು ರಾಜ, ನನ್ನ ಹೆಸರು ಕಾಲ್ಮಡಿ ಮಹಾರಾಜ ಅಂತ ನೆನಪಿದೆಯಾ? ನನ್ನ ತಲೆಗೆ ಕೋಪ ಬರುತ್ತೋ ಇಲ್ವೋ?

ಕಾರಭಾರಿ : ಬರಬೇಕಾದ್ದೆ, ಬರಬೇಕಾದ್ದೆ. ಇನ್ನೆಲ್ಲಿ ಕೋಪ ಬಂತು ಪ್ರಭು?

ರಾಜ : ಇನ್ನೆಲ್ಲಿ ಕೋಪ ಬಂತು ಅಮತೀಯಾ ಮಗನೇ? ಆ ಹುಡಿಗೀನ್ನ ಕರಕೊಂಬರತ್ತೀನಿ ಅಂದೆ. ಕರಕೊಂಬಂದೆಯಾ? ಎಷ್ಟು ದಿನ ಕಾಯೋದು? ನನ್ನ ಸೊಂಟಕ್ಕೆ ಕೋಪ ಬರುತ್ತೋ ಇಲ್ವೊ ಹೇಳು?

ಕಾರಭಾರಿ : ಬರಬೇಕಾದ್ದೇ ಪ್ರಭು. ಉದಾರರಾದ ತಾವು ಈ ದಿನವೂ ನನಗೆ ತಮ್ಮ ಕಿವಿಗಳನ್ನು ದಾನ ಮಾಡಿದರೆ ತಮ್ಮ ಎರಡೂ ಕಡೆಯ ಕೋಪಗಳನ್ನು ಆಯಾಯಾ ಸ್ಥಳದಲ್ಲೇ ಶಾಂತ ಮಾಡಬಲ್ಲೆ.

ರಾಜ : ಅದೇನು ಬೊಗಳು.

ಕಾರಭಾರಿ : ಪ್ರಭು ನಿಮ್ಮ ಮಂತ್ರಿ ಡಿಂಗ್‌ಡಾಂಗ್ ಸಾಹೇಬರು ಈಗ ಮೀನುಗುತಾರೆ! ಬುದ್ಧಿವಂತರ ತಲೆಯಲ್ಲಿ, ಹುಡುಗಿಯರ ಹೃದಯದಲ್ಲಿ, ಮುದಿಯರ ಕಣ್ಣಲ್ಲಿ, ನಮ್ಮ ರಾಜ್ಯದ ಆಕಾಶದಲ್ಲಿ ಮಿನುಗುತಾರೆ.

ರಾಜ : ಹೌದು.

ಕಾರಭಾರಿ : ಪ್ರಭು ಈಗ ಮಿನುಗುತಾರೆಯರೆಲ್ಲ ಯಾವಾಗ ಇದ್ದಿಲಾಗುತ್ತಾರೆ?

ರಾಜ : ಯಾವಾಗ?

ಕಾರಭಾರಿ : ಮಧುವೆ ಆದಾಗ! ಡಿಂಗ್‌ಡಾಂಗ್ ಸಾಹೇಬರಿಗೆ ಒಂದು ಮದುವೆ ಮಾಡಿ.

ರಾಜ : ಭಲೇ! ಕಾರಭಾರೀ, ನೀನೂ ಬುದ್ಧಿಜೀವಿ ಆಗಿಬಿಟ್ಟೆಯಲ್ಲೋ ನನ್ನ ದಯದಿಂದ! ಎಲಾ ಯಾರಲ್ಲಿ?

ಚಾರ : (ಪ್ರವೇಶಿಸಿ) ಏನಪ್ಪಣೆ ಪ್ರಭೂ?

ರಾಜ : ಬೀಳಿ ಆನೇನ್ನ ಕರಿ.

ಚಾರ : ಅಪ್ಪಣೆ (ಹೋಗುವನು)

ರಾಜ : ಕಾರಭಾರೀ, ಆ ಡಿಂಗ್‌ಡಾಂಗ್ ಕತ್ತೆಗೆ ಒಂದು ಒಳ್ಳೇ ಮದುವೇನೇ ಮಾಡೋಣ. ಆದರೆ ಕತ್ತೆ ಜೊತೆ ಬೇಡ. ಮುದ್ದಾಗಿರೋ ಹುಡಿಗೀ ಜೊತೆಗೇ ಮಾಡೋಣ. ಡಿಂಗ್‌ಡಾಂಗ್ ಹೆಂಗೂ ಕತ್ತೆ! ಮದುವೆ ಮಾಡಿದರೆ ಅದರ ಹೆಂಡತಿ ಕೊನೆಗೂ ಒರೋದು ನಮ್ಮ ಹತ್ತಿರಾನೇ; ಹ್ಯಾಗಿದೆ ಐಡಿಯಾ?

ಕಾರಭಾರಿ : ಅದ್ಭುತ ಪ್ರಭೂ!

ಬಿಳಿ ಆನೆ : (ಒಂದು ನಮಸ್ಕರಿಸಿ) ಪ್ರಭೂ ಕರೆಸಿದಿರಂತೆ.

ರಾಜ : ಅಯ್ಯಾ ಬಿಳಿ ಆನೆ, ನಮ್ಮ ಮಂತ್ರಿ ಡಿಂಗ್‌ಡಾಂಗನಿಗೆ ಸ್ವಯಂವರದ ಏರ್ಪಾಡು ಮಾಡು. ಇಷ್ಟವಿದ್ದವರೆಲ್ಲಾ ತಂತಮ್ಮ ಹುಡಿಗೇರನ್ನ ಕರಕೊಂಬಂದು ಸ್ವಯಂವರ ದಲ್ಲಿ ಭಾಗವಹಿಸಬಹುದು. ಆಯ್ಕೆ ಮಾತ್ರ ಡಿಂಗ್‌ಡಾಂಗನದೇ. ತಿಳಿಯಿತೊ?

ಬಿಳಿ ಆನೆ : ತಿಳಿಯಿತು. ಆದರೆ ಇದು ಸ್ವಯಂವರ ಅಲ್ಲ; ಡಿಂಗ್‌ಡಾಂಗ್ ಸಾಹೇಬರು ತಮ್ಮ ವಧುವನ್ನು ತಾವೇ ಆಯ್ದುಕೊಳ್ಳೋದರಿಂದ ಇದು ಸ್ವಯಂವಧು ಸಮಾರಂಭ ಪ್ರಭೂ.

ರಾಜ : ಸರಿ. ಈಗಲೇ ರಾಜ್ಯಾದ್ಯಾಂತ ಡಂಗುರ ಸಾರಿ ಕೂಡಲೇ ಸ್ವಯಂವಧು ಸಮಾರಂಭ ಏರ್ಪಡಿಸು.

ಬಿಳಿ ಆನೆ : ಆಗಲಿ ಪ್ರಭು (ಹೋಗುವನು)

ರಾಜ : ಆಯ್ತಯ್ಯಾ, ಕಾರಭಾರಿ, ಡಿಂಗ್‌ಡಾಂಗ್ ನ ವಿಚಾರ ಇಲ್ಲಿಗೆ ಸಮಾಪ್ತಿ ಆಯ್ತು. ತಲೆಕೋಪ ಉಪಶಮನವಾಯ್ತು. ಈಗ ಸೊಂಟದ ಕೋಪಕ್ಕೆ ಏನು ಹೇಳುತ್ತೀ- ಅದರೆ  ಕೋಪವೇ  ಜಾಸ್ತಿ.

ಕಾರಭಾರಿ : ಆ ಭಾಗದ ಕೋಪದ ಬಗ್ಗೆ ಹೇಳೋದಾದರೆ, ಪ್ರಭು-ಅದೂ ವಿನಾಕರಣ

ರಾಜ : ಅಂದರೆ?

ಕಾರಭಾರಿ : ತಾವು ಹೇಳಿದ ಹುಡುಗಿಯನ್ನು ನಾನಾಗಲೇ ನೋಡಿ ಬಂದಿದ್ದೇನೆ.

ರಾಜ : (ಉತ್ಸಾಹದಿಂದ) ಪ್ರತ್ಯಕ್ಷ ಕಂಡೆಯಾ?

ಕಾರಭಾರಿ : ಪ್ರತ್ಯಕ್ಷ ಕಣ್ಣಾರೆ ಕಂಡೆ ಪ್ರಭು.

ರಾಜ : ನೋಡೋಕೆ ಹ್ಯಾಗಿದಾಳೆ?

ಕಾರಭಾರಿ : ಅಯ್ಯೋ ಅದೇನು ಕೇಳುತ್ತೀರ…. ಗೊಂಬೆ ಗೊಂಬೆ!

ರಾಜ : ಪರಮ ಸುಂದರಿ ಅಲ್ವಾ?

ಕಾರಭಾರಿ : ತ್ರಿಲೋಕ ಸುಂದರಿ ಅಂದ್ರೆ!

ರಾಜ : ಸ್ವಭಾವ ಹ್ಯಾಗೆ?

ಕಾರಭಾರಿ : ತುಂಬಾ ಮೃದು.

ರಾಜ : ನಡವಳಿಕೆ?

ಕಾರಭಾರಿ : ಅದಿನ್ನೂ ಚೆಂಚ. ಅವಳ ಕಣ್ಣು ಮಲ್ಲಿಗೆ ಹೂವಿನ ಥರ, ಕಿವಿ ಸಮಪಿಗೆ ಥರಾ, ತುಟಿ ಸೀಬೆ ಹಣ್ಣಿನ ಥರಾ – ಒಟ್ಟಿನಲ್ಲಿ ಆಕೆ ಮುಖ ಎದರಹಾಗಿದೆ ಅಂದ್ರೆ, ಅದು ಎದರ ಹಾಗೆ ಅಂತ ಹೇಳೋಕೆ ಆಗೋದೇ ಇಲ್ಲ ಪ್ರಭು.

ರಾಜ : ಅಂದ್ರೆ ಅವಳು ಅಷ್ಟು ಚೆಂದ ಇದ್ದಾಳಂತೀಯಾ?

ಕಾರಭಾರಿ : ಅಯ್ಯೋ ಅಯ್ಯೋ!

ರಾಜ : ಮೂರ್ಖ, ಮತ್ತೆ ನಾವು ಹ್ಯಾಗಿದೀವಿ?

ಕಾರಭಾರಿ : ಅವಳು ಚೆಂದ ಇದಾಳೆ. ತಾವು ಅವಳಿಗಿಂತ ಚೆಂದ ಇದ್ದೀರಿ.

ರಾಜ : ಅವಳ ನಡು?

ಕಾರಭಾರಿ : ತೆಳ್ಳಗಿದೆ. ನಿಮ್ಮದು ಅವಳಿಗಿಂತ ತೆಳ್ಳಗಿದೆ.

ರಾಜ : ಅವಳ ಮುಖ?

ಕಾರಭಾರಿ : ದಾಸವಾಳದ ಹೂವಿನ ಹಾಗೆ, ನಿಮ್ಮದು ಕಮಲದ ಹಾಗೆ.

ರಾಜ : ಮತ್ತೇ?

ಕಾರಭಾರಿ : ಏನೇನು ಮಾತಾಡಿಕೊಂಡ್ವಿ ಗೊತ್ತಾ ಪ್ರಭು?

ರಾಜ : ನಮ್ಮ ಬಗ್ಗೆ? ಏನೇನು?

ಕಾರಭಾರಿ : ನಮ್ಮ ರಾಜರು ಎಷ್ಟು ಒಳ್ಳೆಯವರು! ಎಷ್ಟು ಗಂಭೀರ! ಎಷ್ಟು ಧೀರ! ಎಷ್ಟು ಶೂರ!

ರಾಜ : ಅಂದಳಾ?

ಕಾರಭಾರಿ : ಅವಳಲ್ಲ ನಾನಂದೆ.

ರಾಜ : ಅವಳೇನಂದಳು?

ಕಾರಭಾರಿ : ಕೇಳಿದಳಷ್ಟೇ

ರಾಜ : ಮತ್ತೆ, ನೀ ಏನೂ ಹೇಳಲಿಲ್ವ?

ಕಾರಭಾರಿ : ಬಂದೆ ಬಂದೆ. ಅದನ್ನೇ ಹೇಳೋಣಾಂತಿದ್ದೆ.ದ ನೀವಂದ್ರೆ ಅವಳಿಗೆ ಪ್ರಾಣ ಏನ್ಹೇಳಿ?

ರಾಜ : ಪ್ರಾಣ! ವಯಸ್ಸಿನ ಬಗ್ಗೆ ಏನಾದರೂ ಅಂದಳಾ?

ಕಾರಭಾರಿ : ಛೇ ನಿಮ್ಮ ನ್ನೋಡಿದರೆ ಮದುವೆ ಆಗಿದೆಯಾ ಸ್ವಾಮಿ ಅಂತ ಕೇಳೋಣ ಅನ್ಸತ್ತೆ.

ರಾಜ : ಹೌದಾ? ಹಾಗನ್ನಿಸತ್ತಾ?

ಕಾರಭಾರಿ : ಈ ವಯಸ್ಸಿನಲ್ಲೂ ಹೀಗೆ ಕಾಣುತ್ತೀರಲ್ಲ ಪ್ರಭು!

ರಾಜ : ಈ ವಯಸ್ಸಿನಲ್ಲೂ ಅಂದ್ರೆ? ಏನು ಮಹಾ ನನಗಾಗಿರೋದು? ಅಬ್ಬಬ್ಬಾ ಅಂದ್ರೆ ಅರವತ್ತಾಯ್ತಷ್ಟೆ.

ಕಾರಭಾರಿ : ಅರವತ್ತಾ? ಛೇ, ಛೇ. ನಿಮ್ಮನ್ನೋಡಿದರೆ ಇಪ್ಪತ್ತು ತಪ್ಪಿದರೆ ಹದಿನೈದಾಗಿರ ಬಹುದು ಅನ್ನಿಸುತ್ತೆ.

ರಾಜ : ಅವಳ ತಂದೆ ಏನಾದರೂ ಅಂದನಾ?

ಕಾರಭಾರಿ : ಅಂದರೆ?

ರಾಜ : ಇದು ಇಜ್ಜೋಡಾಯ್ತು…. ಅಂತ ಹೀಗೇನಾದರೂ?

ಕಾರಭಾರಿ : ಛೀ ಛೀ! ನಿಜ ಹೇಳತೀನಿ ಪ್ರಭು; ಆ ಇಡೀ ಮನೆತನಕ್ಕೆ ಮುದುಕರ ಖಯಾಲಿ ಇರೋ ಹಾಗಿದೆ. ಅವರ ಮನೇಲಿ ಯಾರಯ್ಯಾ ಫೋಟೋ ಇವೆ ಅಂದಿರಿ? ಅಮಿತಾಬ್ ಬಚ್ಚನ್, ರಾಜಕುಮಾರ ಇಂಥ ಪಡ್ಡೆ ಹುಡುಗರದು ಒಂದೂ ಕೇಳಬೇಡಿ. ಜನಕರಾಜ, ಭೀಷ್ಮ, ಗಾಂಧಿ, ಟಾಲ್ ಸ್ಟಾಯ್, ವ್ಯಾಸ, ದುರ್ವಾಸ ಎಲ್ಲ ಮುದುಕರ ಫೋಟೋಗಳೇ!

ರಾಜ : ಹೌದಾ? ಅದ್ಭುತ; ಒಳ್ಳೆ ಸುಸಂಸ್ಕೃತಿ ಇದೆ ಅಂತ ಆಯ್ತು.

ಕಾರಭಾರಿ : ಮತ್ತೆ, ನಾ ಹೆಂಗಸಾಗಿದ್ರೂ ಅಷ್ಟೆ. ಹುಡುಗರನ್ನ ಕಣ್ಣೆತ್ತಿ ನೋಡುತ್ತಿರಲಿಲ್ಲ. ಬರೀ ನಿಮ್ಮಂಥ ಮುದುಕರನ್ನೇ ಇಷ್ಟಪಡುತ್ತಿದೆ.ದ ಹುಡುಗರಲ್ಲಿ ಏನು ಇರತದೆ ಹೇಳಿ ಪ್ರಭು?

ರಾಜ : ಹೌದು ಹೌದು. ಅದ್ಯಾಕೆ ಆ ಹಾಳಾದ ಹುಡುಗೀರು, ಹುಡುಗರೂ ಅಂದ್ರೆ ಸಾಯ್ತಾರೋ ನಾ ಬೇರೆ ಕಾಣೆ.

ಕಾರಭಾರಿ : ಅದೇ ಪ್ರಭು, ಪಡ್ಡೆ ಹುಡುಗೇರು ಇದಾರಲ್ಲ, ಕೀಳು ಮನೆತನದವರು, ಅವರಷ್ಟೇ ಹಾಗೆ. ದೊಡ್ಡ ಮನೆತನದ ಹುಡುಗೇರನ್ನೋಡಿ – ಯಾವಾಗಲೂ ಮುದುಕರನ್ನೇ ನೋಡೋದು, ಅದೂ ನಿಮ್ಮಂಥವರನ್ನೆ; ಯಾಕಂದ್ರೆ ಸಂಸ್ಕೃತಿ ಇದೆ ನೋಡಿ….

ರಾಜ : ಹಾಗಂತೀಯಾ?

ಕಾರಭಾರಿ : ಮತ್ತೇನು ಆರ್ಡಿನರಿ ಅಂದುಕೊಂಡಿರಾ ಪ್ರಭು? ನಿಮ್ಮ ಆಕಾರ ಏನು! ನಡಿಗೆ ಏನು! ನಿಂತರೆ ನಿಲುವೇನು; ಕೂತರೆ ಕುಲುವೇನು; ಬಿದ್ದರೆ ಬಿಲುವೇನು; ನಿಮ್ಮಲ್ಲೇನು ದೋಷವಿದೆ ಹೇಳಿ?

ರಾಜ : ಹೇಹೆ ಏನಿದೆ? ಆಗಾಗ ಒಂಚೂರು ಉಬ್ಬಸ ಬರುತ್ತೆ ಅಷ್ಟೆ.

ಕಾರಭಾರಿ : ಅಯ್ಯೋ, ಅಯ್ಯೋ, ಅಯ್ಯೋ ಅದೆಂಥಾ ಉಬ್ಬಸ ಬಿಡಿ, ಮಕ್ಕಳಿಗೂ ಇರುತ್ತೆ. ನಾನು ಸ್ವಥಾ ಸೋಡಿದ್ದೇನೆ : ಉಬ್ಬಸ ಪಡುವಾಗ ಎಷ್ಟು ಚೆನ್ನಾಗಿ ಕಾಣುತ್ತೀರಿ ಗೊತ್ತಾ ನೀವು? ನಮ್ಮಕ್ಕಳು ಈ ಹುಡುಗರು ಕೆಮ್ಮಲಿ ನಿಮ್ಮ ಹಾಗೆ ನೋಡೋಣ; ಹುಡುಗಾಟವಾ?

ರಾಜ : ಅವಳ ಹೆಸರೇನು?

ಕಾರಭಾರಿ : ಅವಳ ಹೆಸರು ಬಂಗಾರಿ ಅಂತ.

ರಾಜ : ಹೆಸರು ಚೆನ್ನಾಗಿದೆ. ಯಾವಾಗ ಬರತ್ತಾಳೆ?

ಕಾರಭಾರಿ : ಈಗಂದ್ರೆ ಈಗಲೇ.

ರಾಜ : ಬೇಡ ಬೇಡ ಮೊದಲು ರಾಜ ವೈದ್ಯನನ್ನು ಕರಕೊಂಬಾ.

ಕಾರಭಾರಿ : ತಮ್ಮ ಆರೋಗ್ಯ ಚೆನ್ನಾಗೇ ಇದೆಯಲ್ಲಾ ಪ್ರಭು.

ರಾಜ : ಚೆನ್ನಾಗೇ ಇದೆ. ಕೆಲವು ಭಾಗಕ್ಕೆ ಜಾಸ್ತಿ ಆರೋಗ್ಯ ಬೇಕು. ಕಾರ್ಯಕ್ರಮ ನಾಳೆ ರಾತ್ರಿ ಇರಲಿ. ಪ್ರವಾಸಿ ಮಂದಿರದಲ್ಲಿ ಆದೀತೋ? ರಾತ್ರಿ ಹತ್ತು ಗಂಟೆಗೆ ನಾವು ಬರುತ್ತೇವೆ. ಎಲ್ಲಾ ಸರಿಯಾದ ವ್ಯವಸ್ಥೆ ಆಗಿರಬೇಕು. ಆ ನನ್ಮಕ್ಕಳು ಬಿಳಿಆನೆ, ಚಿಲ್ರೆ ಇದ್ದಾರಲ್ಲಾ-ಅವರಿಗೆ ಹೇಳಿ ವ್ಯವಸ್ಥೆ ಮಾಡು. ವ್ಯವಸ್ಥೆಯಲ್ಲಿ ಏನಾದರೂ ಯಪರಾ ತಪರಾ ಆದರ ಮಗನೆ, ನಾವು ಯಾರನ್ನೂ ಕ್ಷಮಿಸೋದಿಲ್ಲ. (ಹೋಗುವನು)

ಕಾರಭಾರಿ : ಯಾರಲ್ಲಿ? (ಚಾರ ಬರುವನು)

ಚಾರ : ಸ್ವಾಮಿ ಏನಪ್ಪಣೆ?

ಕಾರಭಾರಿ : ಬೀಳಿ ಆನೇನ್ನ ಕರಿ. (ಕರೆದುಕೊಂಡು ಬರುವನು)

ಕಾರಭಾರಿ : ಬೀಡಯ್ಯಾ ಬಿಳಿ ಆನೆ, ನಾಳೆ ರಾತ್ರಿ ಪ್ರವಾಸಿ ಮಂದಿರದಲ್ಲಿ ರಾಜರಿಗೆ ಬೇಕಾದವರು ಯಾರೋ ಬರುತ್ತಾರೆ. ಸರಿಯಾಗಿ ವ್ಯವಸ್ಥೆ ಮಾಡು.
(ಕಾರಭಾರಿ ಹೋಗುವನು. ಬಿಳಿ ಆನೆ ತನ್ನ ಜೇಬಿನಲ್ಲಿಯ ಕಲಿಂಗ್ ಬೆಲ್ ತೆಗೆದು ಒತ್ತುವನು. ಚಿಲ್ರೆ ಬರುವನು)

ಬಿಳಿ ಆನೆ : ಯೋ…. ಬೇಕಾದವರು ಯಾರೋ ಬರತಾರೆ ನಾಳೆ ರಾತ್ರಿ, ಪ್ರವಾಸಿ ಮಮದಿರಕ್ಕೆ. ಸರಿಯಾಗಿ ವ್ಯವಸ್ಥೆ ನೋಡಿಕೊ.
(ಬಿಳಿ ಆನೆ ಹೋಗುವನು. ಚಿಲ್ಲರೆ ತನ್ನ ಜೇಬಿನಲ್ಲಿಯ ಕಾಲಿಂಗ್ ಬೆಲ್ ಒತ್ತುವನು. ಅದು ಧ್ವನಿ ಮಾಡುವುದಿಲ್ಲವಾದ್ದರಿಂದ ತೆಗೆದುಕೊಂಡು ಒಳಗೆ ಹೋಗುವನು.)