(ಪ್ರವಾಸಿ ಮಂದಿರ, ಕೋಣೆಯಲ್ಲಿ ಸಾಂಬ ಸೀರೆ ಉಟ್ಟು ಉಳಿದಂತೆ ಶೃಂಗಾರ ಮಾಡಿಕೊಳ್ಳುತ್ತಿದ್ದಾನೆ. ಶಿವ ಆಶ್ಚರ್ಯದಿಂದ ನೋಡುತ್ತಿದ್ದಾನೆ.)

ಶಿವ : ನನ್ನ ಕೇಳಿದರೆ ನಾವು ಈ ಊರನ್ನ ಎಷ್ಟು ಬೇಗನೆ ಬಿಟ್ಟರೆ ಅಷ್ಟು ಉತ್ತಮ. ಆ ರಾಜ, ಆ ಬಿಳಿ ಆನೆ, ಆ ಕಾರಭಾರಿ-ಇವರ ಜೊತೆಗೆಲ್ಲಾ ನೀ ಆಟ ಆಡೋದನ್ನ ಕಂಡರೆ ನನಗ್ಯಾಕೋ ಹೆದರಿಕೆ ಆಗುತ್ತಪ್ಪ.

ಸಾಂಬ : ಹೆದರಿಕೊಳ್ಳೋವಂಥಾದ್ದೇನಿದೆ? ಆಟ ಆಡೋದಪ್ಪ. ಗೆದ್ದರೆ ಸ್ತೀಲಾಭ. ಸೋತರೆ ಕತ್ತೇಬಾಲ ಹೋಯ್ತು. ಗಣೇಶನ ವರ ಹುಸಿಹೋದರೆ-ಅದು ದೇವರ ಕೇಡು. ನೀ ಇದಕ್ಕೆಲ್ಲಾ ತಲೆ ಕೆಡೆಸಿಕೋಬೇಡ. ಆ ಮುತ್ತುಕೊಡು, ಗಜನಿಂಬೆ ಸಿಕ್ಕಿದ್ದಳ?

ಶಿವ : ಸಿಕ್ಕಿದ್ದಳು.

ಸಾಂಬ : ಏನಂತೆ?

ಶಿವ : ಇನ್ನೇನಂತೆ. ಸ್ವಯಂವರ ಅಲ್ಲ ಸ್ವಯಂವಧು ಸಮಾರಂಭಕ್ಕೆ ಬಂದರೆ ಸರಿ ಇಲ್ಲದಿದ್ದರೆ ಹೊರಿಸಿಕೊಂಡು ಹೋಗತೇನೆ ಹುಷಾರಂತ ಅವಳಮ್ಮ ಹೆದರಿಕೆ ಹಾಕುತ್ತಿದ್ದಳು.

ಸಾಂಬ : ಅಲ್ಲಿಗೆ ಸರಿಹೋಯ್ತಲ್ಲ.

ಶಿವ : ಎಂಥ ಸರಿಹೋಯ್ತು? ಸತ್ತರೂ ಕತ್ತೆ ಜೊತೆ ಮದುವೆ ಆಗೋದಿಲ್ಲ ಅಂತ ಇವಳು ಹಟಹಿಡಿದಿದ್ದಳು.

ಸಾಂಬ : ಮುಂದೆ?

ಶಿವ : ಉಪಾಯ ಹೇಳಿಕೊಡೋಣ ಅಂದರೆ ಆ ಮುದಿ ಹೆಂಗಸು ಇವಳನ್ನ ಬಿಟ್ಟು ಅಲುಗಾಡಲಿಲ್ಲ. ಕೊನೆಗೇನೋ ಉಪಾಯ ಮಾಡಿ ಹೇಳ್ದೆ. ಕತ್ತೆ ಸ್ವಯಂವರಕ್ಕೆ ನೀನು ಬಾ. ಅದು ನಿನ್ನನ್ನೇ ಆರಿಸೋ ಹಾಗೆ ಮಾಡ್ತೀನಿ. ಹೆಸರಿಗೆ ಕತ್ತೆ ಆದರೂ ನಾನಿರತೀನಲ್ಲವ? -ಅಂದೆ.

ಸಾಂಬ : ನಾಳೆ ಸ್ವಯಂವರಕ್ಕೆ ಬರತಾಳೋ ಹ್ಯಾಗೆ?

ಶಿವ : ಬರತೀನಿ; ಮುಂದೇನೇ ಅಪಾಯ ಅದರೂ ನೀನೇ ಜವಾಬ್ದಾರಿ ಅಂದಳು. ಆಗಲಿ ಬಾ ಅಂದೆ. ಬರತಾಳೆ. ಏನಪ್ಪಾ ಒಳ್ಳೆ ಹೆಂಗಸಿನ ಥರ ಮೇಕಪ್ ಮಾಡಿಕೊಳ್ತ ಇದ್ದೀಯ.

ಸಾಂಬ : ಮಗನೇ ಈ ಆಟದ ಮೋಜು ಇದೇ ಕಣೊ. ಎಲ್ಲರೂ ಮೇಕಪ್ ಮಾಡಿ ಕೊಳ್ತಾರೆ ಇಲ್ಲಾ ತೆಗೀತಾರೆ. ಮೇಕಪ್ ಮಾಡಿಕೊಂಡರೆ ಕತ್ತೆ ರಾಜ ಆಗುತ್ತದೆ. ತೆಗೆದರೆ ರಾಜ ಕತ್ತೆ ಆಗತಾನೆ. ಹೆಂಗಸು ಗಂಡಸಾಗುತ್ತೆ. ಗಂಡಸು ಹೆಂಗಸಾಗುತ್ತೆ. ಚಿಲ್ಲರೆ ಬಂದ ಅಂತ ಕಾಣತ್ತೆ ಹೋಗಿ ನೋಡು.

ಶಿವ : ನನಗ್ಯಾಕೋ ಗಾಬರಿ ಆಗುತ್ತೇ. ನಾ ಹೋಗಲೇನಷ್ಟ?

ಸಾಂಬ : ಇರಯ್ಯ, ಒಳ್ಳೆ ಮನರಂಜನೆ ಕೊಡ್ತೀನಿ.
(ರಂಗದ ಇನ್ನೊಂದು ಬದಿಗೆ ಅಂದರೆ ಕೋಣೆಯ ಹೆರಗೆ ಚಿಲ್ಲರೆ ಬರುವನು.)

ಚಿಲ್ಲರೆ : ಯಾರಯ್ಯಾ ಅಲ್ಲಿ?

ಚಾರ : ಡಿಂಗ್‌ಡಾಂಗ್ ಸ್ವಾಮಿ.

ಚಿಲ್ಲರೆ : ಯಾರೋ ಬಂದವರಂತೆ, ಎಲ್ಲಯ್ಯಾ ಅವನು?

ಚಾರ : ಡಿಂಗ್‌ಡಾಂಗ್ ಸಾಹೇಬರ ಪೀಯೆ ಒಳಗವರೆ.

ಚಿಲ್ಲರೆ : ಯಾರು. ಶಿವಾನ?

ಚಾರ : ಹೌದು, ಅವರ ಜೊತೆ ಇನ್ನೊಬ್ಬರವರೆ.

ಚಿಲ್ಲರೆ : ಹೌದು, (ಸಮೀಪಿಸಿ ಕಿವಿಯಲ್ಲಿ) ಗಂಡಸೊ? ಹೆಂಗಸೊ?

ಚಾರ : ಗಂಡಸ್ರು ಸ್ವಾಮಿ,

ಚಿಲ್ಲರೆ : ನಮ್ಮ ಸಾಹೇಬರಿಗೇನು ಸಂಬಂಧ?

ಚಾರ : ಸಾಹೇಬರಿಗೆ? ಛೇ, ಅವರಯ್ಯಾರೋ ಬೇವಾರ್ಸಿಗಳ ಥರ ಇದಾರೆ ಸ್ವಾಮಿ, ಅವರಯ್ಯಾರು ದೊಡ್ಡೋರಲ್ಲ ಬಿಡಿ.

ಚಿಲ್ಲರೆ : ಆರ್ಡಿನರಿ ಅಂತಿಯಾ? ಹಾಗಿದ್ದರೆ ನಮ್ಮ ಸಾಹೇಬರು ಹೇಳೋ ವ್ಯಕ್ತಿ ಇನ್ನೂ ಬಂದಿಲ್ಲವೋ ಏನೊ! ಹೋಗಲಿ ಶಿವನಿಗೆ ಹೇಳು, ಸಣ್ಣ ಸಾಹೇಬರು ಬಂದಿದ್ದಾರೆ ಬರಬೇಕಂತ ಹೇಳು.

ಶಿವ : (ಹೊರಬರುತ್ತ) ಡಿಂಗ್‌ಡಾಂಗ್ ಸ್ವಾಮೀ.

ಚಿಲ್ಲರೆ : ಡಿಂಗ್‌ಡಾಂಗ್! ಸಾಹೇಬರು ಹೇಳಿದರು; ಯಾರೋ ದೊಡ್ಡವರು ಬರತ್ತಾರಂತೆ, ಬಂದಿದಾರಾ?

ಶಿವ : ದೊಡ್ಡೋರಯಾರು ಬಂದಿಲ್ಲ, ಯಾವುದೋ ಒಂದು ಹೆಂಗಸಿದೆ.

ಚಿಲ್ಲರೆ : ಹೆಂಗಸು? ಇವನ್ಯಾವನೋ ಗಂಡಸು ಅಂದನಲ್ಲಯ್ಯಾ, ಹ್ಯಾಗಿದಾಳೆ?

ಶಿವ : ಚೆನ್ನಾಗಿದಾಳೆ, ರೂಮು ಬೇಕು ಅಂದಳು.

ಚಿಲ್ಲರೆ : ಒಬ್ಬಳೇ  ಇದಾಳಾ?

ಶಿವ : ಹೌದು.

ಚಿಲ್ಲರೆ : ಅಯೋಗ್ಯ, ಒಳಗಡೆ ನೀನೋಬ್ಬನೇ ಏನ್ಮಾಡುತ್ತಿದ್ದೆ?

ಶಿವ : ಏನಿಲ್ಲ ದೇವರು, ಸಂಡಾಸ ಎಲ್ಲಿದೆ ಅಂದಳು; ತೋರಿಸ್ತಿದ್ದೆ.

ಚಿಲ್ಲರೆ : (ತನ್ನಲ್ಲಿ) ಓಹೋ ಯಾರೋ ದೊಡ್ಡವರು ಅಂತ ಹೇಳಿ, ಗಾಬರಿ ಹುಟ್ಟಿಸಿ ಒಳಗೊಳಗೇ ಏನೋ ವ್ಯವಹಾರ ಮಾಡ್ತಿದ್ದಾನೆ ನನ್ನ ಮಗ ಬಿಳಿ ಆನೆ! ಇರಲಿ.
(ಪ್ರಕಾಶ) ಯೋ, ನೀನೇನಯ್ಯಾ ಅವಳಿಗೆ ಸಂಡಾಸ ತೋರಿಸೋದು? ಅದನ್ನ ತೋರಿಸೋದಕ್ಕೆ ನಾನಿಲ್ಲವ? ಹೋಗ್ಹೋಗು ಡಿಂಗ್‌ಡಾಂಗ್ ಹಸಿದಿರಬೇಕು. ಮೇವು ಹಾಕ್ಹೋಗು. (ಶಿವ ಹೋಗುವನು. ಚಿಲ್ಲರೆ ಒಳಗೆ ಹೋಗುವನು.)

ಸಾಂಬ : (ಇವನನ್ನು ನೋಡಿ) ಅಯ್ಯಯ್ಯಯ್ಯಯ್ಯೋ! ನಿಮ್ಮನ್ನೋಡಿ ತುಂಬ ಸಂತೋಷವಾಯ್ತು! ಎಷ್ಟು ಸಂತೋಷ ಅಂದರೆ, ಅಯ್ಯಯ್ಯೋ ನನಗೆ ಹೇಳೋಕ್ಕೇ ಆಗ್ತಿಲ್ಲ. ನನಗೆ…. ನನಗೆ ತುಂಬಾ ಸಂತೋಷವಾಯ್ತು ಬಿಡಿ. ನಿಮಗೂ ಆಗಲಿಲ್ಲವ?

ಚಿಲ್ಲರೆ : (ತಬ್ಬಿಬ್ಬಾಗಿ) ಏನಂದ್ರಿ?

ಸಾಂಬ : ನಿಮಗೂ ಸಂತೋಷ ಆಗಲಿಲ್ಲವ?

ಚಿಲ್ಲರೆ : ಇಲ್ಲ.

ಸಾಂಬ : ಅಯ್ಯಯ್ಯೋ ಆಗಿದ್ದರೆ ತುಂಬ ಚೆನ್ನಾಗಿತ್ತು.

ಚಿಲ್ಲರೆ : ಏನಾಗಿದ್ದರೆ?

ಸಾಂಬ : ಅದೇ ಸಂತೋಷ.

ಚಿಲ್ಲರೆ : ಯಾಕೆ?

ಸಾಂಬ : ಯಾಕೆಂದರೆ- ಮನುಷ್ಯನಿಗೆ ಸಂತೋಷ ಆದರೆ ಒಳ್ಳೇದಲ್ಲವ? ಆರೋಗ್ಯಚೆನ್ನಾಗಿರುತ್ತೆ. ಚೆನ್ನಾಗಿ ಹಸಿವಾಗುತ್ತೆ. ಚೆನ್ನಾಗಿ ಭೇದಿಯಾಗುತ್ತೆ.

ಚಿಲ್ಲರೆ : ಹೌದೋ ಏನೋ!

ಸಾಂಬ : ಅದಕ್ಕೇ ಮತ್ತೆ, ಪಾಪ ಆಗಿದ್ದರೆ ಚೆನ್ನಾಗಿತ್ತು.

ಚಿಲ್ಲರೆ : ಏನಾಗಿದ್ದರೆ?

ಸಾಂಬ : ಅದೇ ಸಂತೋಷ.

ಚಿಲ್ಲರೆ : ಓ! ಹೌದು, ನೀವ್ಯಾರು, ಸಾಹೇಬರ ಪೈಕೀನ?

ಸಾಂಬ : ಅಯ್ಯೋ ಒಳಗೆ ಬನ್ನೀಂದ್ರೆ.

ಚಿಲ್ಲರೆ : ನೀನು ಯಾರು? ಇಲ್ಲಿಗ್ಯಾಕೆ ಬಂದೆ?

ಸಾಂಬ : ಚಿಲ್ಲರೆ ಆಫೀಸಲ್ಲಿ ಅಟೆಂಡರ‍ ಕೆಲಸ ಇದೆಯಂತಲ್ಲಾ?

ಚಿಲ್ಲರೆ : ಹೌದು ಖಾಲಿ ಇದೆ.

ಸಾಂಬ : ಕೊಡಿಸಿ ಬಿಳಿ ಆನೆ ಸಾಹೇಬರ ಆ ಕೆಲಸ ಅಂದೆ. ಪ್ರವಾಸಿ ಮಂದಿರಕ್ಕೆ ಬಾ ಕೊಡತೀನಿ ಅಂದರು, ಅದಕ್ಕೇ ಬಂದೆ.

ಚಿಲ್ಲರೆ : ಭಲೆ ನನ ಮಗನೆ! ನನ್ನ ಆಫೀಸಲಲ್‌ಇ ಇವನು ಕೆಲಸ ಕೊಡಿಸೋನಂತೆ! ಏನೇ ನಿನ್ನ ಹೆಸರು?

ಸಾಂಬ : ಸುಂದರಿ.

ಚಿಲ್ಲರೆ : ನೋಡೇ ಸುಂದರೆ, ಅವನಿದ್ದಾನಲ್ಲ ನನ್ನ ಮಗ ಬಿಳಿಯಾನೆ, ಲೋಫರ ನನಮಗ-ಸುಳ್ಳು ಸುಳ್ಳೇ ನಿನಗೆ ಕೆಲಸ ಕೊಡ್ತೀನಿ ಅಂತ ಹೇಳಿದಾನೆ. ಯಾರರ್ಯ್ಯಾದೋ ಹತ್ತಿರ ಹೋಗಿ ನೀನು ಮೋಸ ಹೋಗಬೇಡ.

ಸಾಂಬ : ಅವಯ್ಯಾ ಏನೇನು ಹೇಳ್ದಾ ಅಂತ! ಬಂದದ್ದಕ್ಕೆ ಒಳ್ಳೇದೇ ಆಯ್ತು, ಸಧ್ಯ ದೇವರಂಥ ನೀವು ಸಿಕ್ಕಿರಿ. ನೀವೇ ಆ ಕೆಲಸ ಕೊಡಿಸಿ ಸ್ವಾಮೇರಾ.

ಚಿಲ್ಲರೆ : ಆ ನನ್ನ ಮಗ ಹೀಗೆ ಎಷ್ಟು ಜನ ಹುಡಿಗೇರಿಗೆ ಮೋಸ ಮಾಡಿದನೊ! ಅಂದ ಹಾಗೆ ಹೆಸರೇನಂದಿ?

ಸಾಂಬ : ಸುಂದರಿ.

ಚಿಲ್ಲರೆ : ಹೆಸರು ಚೆನ್ನಾಗಿದೆ. ಹತ್ತಿರ ಬಾ, ಒಂದು ವಿಷಯ ಗೊತ್ತಿಲ್ಲ ನಿನಗೆ. ರಾಜರು ನನ್ನ ಮಾತನ್ನೇ ಕೇಳೋದು. ಮೊನ್ನೆ ಏನಂದರು ಗೊತ್ತ? – ಬಿಳಿ ಆನೆಗೆ ಬುದ್ದಿ ಕಡಿಮೆ, ನನ್ನ ಮಗನಿಗೆ ಕೊಡೋ ಒಂದು ಗೂಸ- ಅಂದರು. ಹ್ಯಾಗೆ ಕೊಡಲಿ ಪ್ರಭು ಅಂದೆ. ಪ್ರಭುಗಳ ಏನು ಮಾಡಿದರು ಗೊತ್ತ? ‘ಹೀಗೆ!’ಅಂದು ನನ್ನ ತಿಗದ ಮೇಲೆ ಒದ್ದೇ ಬಿಟ್ಟರು, ಅಂದರೆ! (ಎಂದು ಹೇಳಿ ಆನಂದದಿಂದ ನಗುವನು)

ಸಾಂಬ : ಅಬ್ಬ! ಅಷ್ಟು ಸಲಿಗೆ ಇದೆಯೆ ರಾಜರ ಹತ್ತಿರ ನಿಮಗೆ? ಹಂಗಾದರೆ ರಾಜರಿಗೆ ಹೇಳಿ ನೀವೇ ಒಂದು ಕೆಲಸ ಕೊಡಿಸಿ ಸ್ವಾಮಿ.

ಚಿಲ್ಲರೆ : ರಾಜರು ಯಾಕೆ, ನಾನಿಲ್ಲವೆ? ನಾನೇನಾದರೂ ಬರೆದು ಕೊಟ್ಟರಾಯ್ತು. ರಾಜರು ಒಂದಕ್ಷರ ಆಚೀಚೆ ಬದಲಿ ಮಾಡಲಿ ನೋಡೋಣ. ರಾಜರ ಆರ್ಡರೆಲ್ಲಾ ನಾನೇ ಬರೆಯೋದು ಗೊತ್ತಾ?

ಸಾಂಬ : ಅಯ್ಯಯ್ಯೋ ಹಂಗಾರೆ ನೀವೇ ಗತಿ. ಕೆಲಸ ಕೊಡಿಸಿ ಸ್ವಾಮೇರಾ.

ಚಿಲ್ಲರೆ : ಕೊಡಿಸೋಣ. ಕೊಡಿಸಿದರೆ ಮಾಮೂಲಿ, ವಗೈರೆ….ಗೊತ್ತಲ್ಲ?

ಸಾಂಬ : ಅಯ್ಯೋ ನೀವ್ಯಾಕೆ ಯೋಚನೆ ಮಾಡ್ತೀರಿ? ನನಗಿನ್ನೇನಿಲ್ಲ ನಾ ಕೊಡೋದರೊಳಗೆ ಆ ದೊಡ್ಡ ಸಾಹೇಬ ಬಂದಗಿಂದಾನು ಅಂತ ಗಾಬರಿ ಅಷ್ಟೆ.

ಚಿಲ್ಲರೆ : ಬಂದರೆ? ನಾ ಹೆದರತ್ತೀನ? ಆ ಮಗನಿಗೆ ನಾ ಡೋಂಟ್ ಕೇರ ಮಾಸ್ಟರಂತ ಗೊತ್ತಿಲ್ಲವ? ಅವನಲ್ಲ, ಅವರಪ್ಪ ಬಂದರೂ ಜಪ್ಪಯ್ಯಾ ಅನ್ನಲ್ಲ ನಾನು. ಏನ್ ಅಂದುಕೊಂಡಿದಾನೆ ಆ ನನ್ನ ಮಗ?

ಸಾಂಬ : ಅರೆರೇ, ಹಾಂಗಿದ್ದರೆ ತಡ ಯಾಕೆ ಬೇಗ ಬಂದು ಸೇವೆ ಒಪ್ಪಿಸ್ಕೊಳ್ಳಿ ಅಂದರೆ….

ಚಿಲ್ಲರೆ : ಸೇವೆ ಅಂದರೆ?

ಸಾಂಬ :

ತರವೇ ಮಾರನೇ ಇದು,
ನಾರಿಯಾದೆನ್ನೊಳು ಕ್ರೂರಸೊಭಾವವು
ಗುರಿಯಿಟ್ಟು ಬಾಣವ
ಟಸಪಸ ಟಸಪಸ ಎಸೆವೂದು ತರವೇನೊ

ಚಿಲ್ಲರೆ : ಭಲೆ ಸುಂದರಿ ನನ್ನ ಹೃದಯವನ್ನು ನಿನ್ನ ಪಾದಾರವಿಂದಕ್ಕೆ ಅರ್ಪಿಸಿರುವೆನು. (ಇಬ್ಬರ ತಬ್ಬಿಕೊಳ್ಳೂವಷ್ಟರಲ್ಲಿ ಬಾಗಿಲು ಬಡಿದ ಶಬ್ದ)

ಸಾಂಬ : ಯಾರದು?
ಹೊರಗಿಂದ : ದೊಡ್ಡ ಸಾಹೇಬರು ಬಂದವರೆ, ಬಾಗಿಲು ತಗೀರಿ.

ಚಿಲ್ಲರೆ : ಅಯ್ಯಯ್ಯೋ ದೊಡ್ಡ ಸಾಹೇಬರು!

ಸಾಂಬ : ಒಳಗಡೆ ಸಣ್ಣ ಸಾಹೇಬರಿದ್ದಾರೆ, ಹೋಗಯ್ಯಾ ಮುದಿಯಾ ಅಂತ ಹೇಳತೇನೆ ಬಿಡಿ.

ಚಿಲ್ಲರೆ : ಅಯ್ಯಯ್ಯೋ ಸುಂದರಿ, ದಯಮಾಡಿ ಹಾಗೆ ಹೇಳಬೇಡ, ಬಾಗಿಲು ಹಾಕಿದೆ. ಒಳಗಡೆ ನಾವಿಬ್ಬರೇ ಇದ್ದೀವಿ. ನೋಡಿದರೆ ಸಾಹೇಬರು ಏನಂದುಕೊಳ್ತಾರೆ? ಅಯ್ಯೋ ನಿನ್ನ ಕಾಲುಬೀಳ್ತೀನಿ. ನನ್ನ ನೌಕರಿ ಹೋಗುತ್ತೆ ದಮ್ಮಯ್ಯಾ!

ಹೊರಗಿಂದ : ಬೇಗ ಬಾಗಿಲು ತಗೀರಿ.

ಚಿಲ್ಲರೆ : ಏನು ಮಾಡಲಿ? ಹ್ಯಾಗೆ ಪಾರಾಗಲಿ?

ಸಾಂಬ : ಮತ್ತೆ ಡೋಂಟ್‌ಕೇರ್ ಮಾಸ್ಟರಂದಿರಿ?

ಚಿಲ್ಲರೆ : ನಿನ್ನ ಕಾಲು ಹಿಡೀತೀನಿ ಸುಂದರೀ. ನಿನಗೆ ನಾಳೇನೇ ಕೆಲಸ ಕೊಡಸ್ತೀನಿ, ಈಗ ಹ್ಯಾಗಾದರೂ ಪಾರು ಮಾಡು.

ಸಾಂಬ : ಹೆಂಗೆ ಮಾಡೋದು? ಸಂಡಾಸಿಗೆ ಬಾಕಲಿಲ್ಲ. ಒಂದು ಕೆಲಸ ಮಾಡು. ಸೀರೆ ಉಟ್ಟುಕೊಂಡು ಬಾಗಿಲ ಹತ್ತಿರ ಕೂತಿರು. ಇವಳ್ಯಾರುಂತ ದೊಡ್ಡ ಸಾಹೇಬ ಕೇಳಿದರೆ ‘ನನ್ನ ಜೊತೆ ಬಂದವಳೆ’ ಅಂತ ಹೇಳ್ತೀವ್ನಿ. ಸಾಹೇಬರು ಹೋದಮ್ಯಾಕೆ ಸರಿ ಹೋಯ್ತದೆ, ಏನಂತೀಯಾ?

ಚಿಲ್ಲರೆ : ಸೀರೆ ಉಡೋದೆ?

ಹೊರಗಿಂದ : ಯಾರೀ ಅದು? ಒಳಗಡೆ ಏನ್ನಡೀತಿದೆ?

ಚಿಲ್ಲರೆ : ಕೊಡು ಕೊಡು ಅದನ್ನೇ ಕೊಡು.
(ಸೀರೆ ಕೊಡುವನು. ತನ್ನ ಬಟ್ಟೆ ಬಿಚ್ಚಿ ಅವಸರದಲ್ಲಿ ಸೀರೆ ಉಡುವನು, ಸಾಂಬ ಅವನ ಒಟ್ಟೆಗಳನ್ನೊಯ್ದು, ಅವನಿಗೆ ಸಿಕ್ಕದ ಸ್ಥಳದಲ್ಲಿ ಬಚ್ಚಿಡುವನು)

ಸಾಂಬ : ಯಾರೀ ಅದು, ಬರೋತನಕ, ತಡೀಬಾರದೇ? ಇರಿ ಬರತೇನೆ. (ಕೈ ಸನ್ನೆಯಿಂದ ಕೂರೋದಕ್ಕೊಂದು ಸ್ಥಾನ ತೊರಿಸಿ ಹೋಗಿ ಬಾಗಿಲು ತೆಗೆಯುವನು)

ಬಿಳಿ ಆನೆ : ಯಾರಯ್ಯಾ ಇವರು?

ಶಿವ : ಗುರುತಿಲ್ಲ ಸಾರ್, ಯಾರೋ ನಿಮ್ಮ ಪೈಕಿ ಅಂದರು.

ಬಿಳಿ ಆನೆ : ನಮ್ಮ ಪೈಕಿ? ಬುದ್ಧಿಯಿಲ್ಲವೇನಯ್ಯಾ ನಿನಗೆ? ಆ ಚಿಲ್ಲರೆ ನನ್ನ ಮಗ ಎಲ್ಲಿ ಕತ್ತೆ ಕಾಯ್ತಿದಾನೆ?

ಶಿವ : ಗೊತ್ತಿಲ್ಲ ಸ್ವಾಮಿ.

ಬಿಳಿ ಆನೆ : ಯಾರೀ ನೀವು?

ಸಾಂಬ : ಚಿಲ್ಲರೆ ಸಾಹೇಬರು ಯಾವುದೋ ಪೀಯೆ ಕೆಲಸ ಬಿಳಿಆನೆ ಆಫೀಸಲ್ಲಿ ಕೊಡಿಸ್ತೇನೆ ಬಾ ಅಂದರು. ಅದಕ್ಕೆ ಕಾಯ್ತಾ ಇದೀನಿ.

ಬಿಳಿ ಆನೆ : ಎಲಾ ನನ ಮಗ! ರಾಜರು ಆಜ್ಞೆ ಮಾಡಿದ್ದೇನು, ಈತ ಮಾಡ್ತಿರೋದೇನು! ಇವನಿಗೆ ಮಾಡ್ತೀನಿರು. ನೋಡಿ, ಈಗ ಇಲ್ಲಿಗೆ ರಾಜರ ಅತಿಥಿಗಳು ಬರೋದರಿದ್ದಾರೆ. ಈ ರೂಮು ಖಾಲಿ ಮಾಡತೀರ?

ಸಾಂಬ : ಆದರೆ ಆ ಕಾರಭಾರಿಗಳು ಹೇಳಿದರು: ಇವತ್ತು ಇಲ್ಲಿಗ್ಯಾರೂ ಬರೋದಿಲ್ಲ. ಬೇಕಾದರೆ ನೀವಿಲ್ಲಿ ಇರಿ ಅಂತ ನನಗೆ ಹೇಳಿದರು.

ಬಿಳಿ ಆನೆ : ಕಾರಭಾರಿಗಳು ಹೇಳಿದರೆ? ಹಾಂಗಿದ್ದರೆ ಯಾರು ಬರೋದಿಲ್ಲಾಂತ ಆಯ್ತು. ನೀನ್ಯಾಕಯ್ಯಾ ಶಿವಾ ಇಲ್ಲಿಗೆ ಬಂದೆ ? ಡಿಂಗ್‌ಡಾಂಗ್ ಸಾಹೇಬರನ್ನ ನೋಡಿ ಕೊಳ್ಳೋದಿಲ್ಲವ?

ಶಿವ : ತಾವು ಬಾಗಿಲಾ ಬಡೀತಿದ್ದಿರಿ. ಸಹಾಯ ಮಾಡೋಣ ಅಂತ ಬಂದೆ.

ಬಿಳಿ ಆನೆ : ನನಗೆ ಯಾರ ಸಹಾಯ ಬೇಕಿಲ್ಲ ಹೋಗಯ್ಯಾ, ಮಹಾ ಬಂದ ಕಾಪಾಡೋ ದೇವರ ಹಾಗೆ! (ಶಿವಹೋಗುವನು) ನೋಡಿ ನೀವು ಸುಶಿಕ್ಷಿತರು. ಹೀಗೆಲ್ಲಾ ಎಂತೆಂಥದೋ ಲೋಫರಸಿಗೆಲ್ಲಾ ಮೋಸ ಹೋಗಬಾರದು. ನಿಮ್ಮನ್ನೇ ಬುಟ್ಟಿಗೆ ಹಾಕ್ಕೊಂಡಿದಾನೆ ಅಂದರೆ ಎಂಥಾ ಖಿಲಾಡಿ ಇರಬೇಕವನು! ಹೀಗಿನ್ನೂ ಎಷ್ಟು ಜನಕ್ಕೆ ಮೋಸ ಮಾಡಿದ್ದಾನೋ, ರಾಜರ ಹತ್ತಿರ ಒಂದು ಬಾರಿ ನಿಮ್ಮನ್ನ ಕರಕೊಂಡು ಹೋಗ್ತೀನಿ. ಈ ವಿಷಯ ರಾಜರಿಗೆ ನೀವೇ ಹೇಳಬೇಕು.

ಸಾಂಬ : ಓಹೋ ರಾಜಾ ಏನು, ಅವರಜ್ಜೀ ಹತ್ತಿರ ಬೇಕಾದರೂ ಹೇಳತೀನಿ.

ಬಿಳಿ ಆನೆ : ಆ ನನ್ನ ಮಗ ತಾ ನೌಕರಿ ಸೇರಬೇಕಾದರೂ ನನ್ನ ತಂಗೀನ್ನ ರಾಜರ ಹತ್ತಿ ಕಳಿಸಿ ಕೆಲಸ ಗಿಟ್ಟಿಸಿಕೊಂಡ. ಅದನ್ನ ಮರೆತು ನಿನಗೆ ಕೆಲಸ ಕೊಡತೀನಿ ಅಂತಾನಲ್ಲ….

ಸಾಂಬ : ಡೋಂಟ್‌ಕೇರ್ ಮಾಸ್ಟರಂತೆ.

ಬಿಳಿ ಆನೆ : ಅವನಜ್ಜೀ ಪಿಂಡ.

ಸಾಂಬ : ಅವನ ಹೆಸರೇನು?

ಬಿಳಿ ಆನೆ : ಲೋಫರ್.

ಸಾಂಬ : ನಿಮ್ಮ ಹೆಸರೇನು

ಬಿಳಿ ಆನೆ : ಕತ್ತೇಬಾಲ.

ಸಾಂಬ : ರಾಜರ ಹತ್ತಿರ ಹೇಳಿ ಒಂದು ಕೆಲಸ ಕೊಡಿಸಿ ಸ್ವಾಮಿ.

ಬಿಳಿ ಆನೆ : ಇದಕ್ಕೆಲ್ಲಾ ರಾಜರ್ಯಾಕೆ? ನಾನಿಲ್ಲವೆ? ನನ್ನ ತುತ್ತೂರಿ ನಾನೇ ಊದಿಕೊಳ್ಳೋ ಪೈಕಿ ಅಲ್ಲ ನಾನು. ಆದರೂ ಒಂದು ಮಾತು ಹೇಳತೇನೆ. ನಾನಿದ್ದೀನಿ ಅಂತ ರಾಜ್ಯ ಇರೋದು, ಒಂದೇ ದಿನ ನಾ ಇಲ್ಲಾ ಅಂದರೆ ಗೊತ್ತ ಈ ರಾಜ್ಯ ಏನಾಗುತ್ತೆ ಅಂತ?

ಸಾಂಬ : ಏನ್ಸಾಮಿ?

ಬಿಳಿ ಆನೆ : ದಿವಾಳಿ! ನಾನಿಲ್ಲದೆ ರಾಜರು ಒಂದು ದರ್ಬಾರು ಮಾಡಲಿ, ನೋಡೋಣ. ಅದೂ ಹೋಗಲಿ, ಒಂದೂ ಸ್ಪೆಲ್ಲಿಂಗ್ ಮಿಸ್ಟೇಕಿಲ್ಲದೆ ಇಡೀ ದರ್ಬಾರಲ್ಲಿ ಒಬ್ಬನಾದರೂ, ರಾಜರ ಹೆಸರನ್ನ ಬರೀಲಿ ನೋಡೋಣ. ಕಚೇರಿ ಅಂದರೆ ಹುಡುಗಾಟವ? ರಾಜ-ಅಂದರೆ ಇಸ್ಪೀಟ್ ರಾಜ ಇದಾನಲ್ಲಾ, ಕಾಲ್ಮಡಿ ರಾಜ-ನನ್ನ ಕಂಡರೆ ಗಡಗಡ ನಡಗತಾನೆ ಗೊತ್ತ? ಇದೆಲ್ಲಾ ಹೇಳಿದ್ದರ ಅರ್ಥ ಇಷ್ಟೇ ಇವರೆ; ಕೆಲಸ ಇದೆ ಕೊಡ್ತೀನಿ. ಆದರೆ ನೀವು ಆ ನಮ್ಮ ಚಿಲ್ಲರೆಗೆ ಏನ್ ಕೊಡ್ತಿದ್ದಿರೋ ಅದನ್ನ ನನಕ್ಕೊಡಿ ಅಷ್ಟೆ.

ಸಾಂಬ : ಏನೋ ನಿಮ್ಮನ್ನಂಬಿ ಬಂದೀನಿ. ನೀರಲ್ಲಾದರೂ ಅದ್ದಿ ಹಾಲಲ್ಲಾದರೂ ಅದ್ದಿ.

ಬಿಳಿ ಆನೆ : ಆಲ್ಕೊಹಾಲಲ್ಲಿ ಅದ್ದತೀನಿ ಇರಿ. (ಹೋಗಿ ಬಾಗಿಲಿಕ್ಕುವನು)
(ಹೊರಗಡೆ ರಾಜ, ಕಾರಭಾರಿ ಬರುವರು)

ಸಾಂಬ :

ಎಂತು ತಾಲೂವೆ ಕಂತು ಕೋಪವ
ನಾಂತು ಕೊಲ್ಲುವ
ಆಹಾ ಕಾಂತೆಯನ್ನು
ಸಂತವಿಸದೆ
ನಿಂತು ಬಿಡುವುದೇ

ರಾಜ : (ಹೊರಗೆ) ವ್ಯವಸ್ಥೆಯೆಲ್ಲಾ ಸರಿಯಾಗಿ ಆಗಿದೆಯೇನಯ್ಯಾ?

ಕಾರಭಾರಿ : ನೀವೇನೂ ಯೋಚನೆ ಮಾಡಬೇಡಿ ಪ್ರಭು. ಬಿಳಿ ಆನೆ ಎಲ್ಲಾ ವ್ಯವಸ್ಥೆ ಮಾಡಿದ್ದಾನೆ. (ಒಳಗಡೆ ಕುಡಿಯುತ್ತಿರುವ ಬಿಳಿ ಆನೆ ರಾಜರ ದನಿ ಕೇಳಿ ಗಾಬರಿಯಾಗುವನು. ರಾಜ ತನ್ನ ಶೃಂಗಾರವನ್ನು ಮತ್ತೆ ಮತ್ತೆ ತಿದ್ದಿಕೊಳ್ಳುವನು)

ಬಿಳಿ ಆನೆ : ಹೊರಗಡೆ ರಾಜರು ಬಂದಹಾಗಿದೆ.

ಸಾಂಬ : ಹೌದು ಅವರ ದನಿ ಇದ್ದಂಗಿತ್ತು.

ರಾಜ : ಅವಳು ಬಂದಿರುವಳೆ?

ಕಾರಭಾರಿ : ಓಹೊ.

ರಾಜ : ನೀನಿನ್ನು ಹೋಗಬಹುದು.

ಕಾರಭಾರಿ : ಅಪ್ಪಣೆ ಪ್ರಭೂ.

ರಾಜ : ಹಾಗೇ ಇಲ್ಲಿರೋ ಚಿಲ್ಲರೆ ಆಳುಗಳನ್ನೆಲ್ಲ ಕರೆದುಕೊಂಡು ಹೋಗು.

ಕಾರಭಾರಿ : ಅಪ್ಪಣೆ ಪ್ರಭು.

ಬಿಳಿ ಆನೆ : ಅಯ್ಯಯ್ಯೋ ಹಾಳಾದೆ. ದೇವರೇ ರಾಘವೇಂದ್ರಾ ನೀನೇ ಕಾಪಾಡೋ ತಂದೆ ಸುಂದರೀ ಹ್ಯಾಗಾದರೂ ಮಾಡಿ ನನ್ನನ್ನು ಬೇಗ ಪಾರುಮಾಡು.

ಸಾಂಬ : ಈ ರೂಮಿಗೆ ಬಾಗಿಲಿರೋದು ಅದೊಂದ, ತಗೀಲ?

ಬಿಳಿ ಆನೆ : ಬೇಡ ಬೇಡ….

ಸಾಂಬ : ಅದ್ಯಾಕೆ, ನಿಮ್ಮನ್ನೋಡಿ ರಾಜ ಗಡಗಡ ನಡುಗೋದಿಲ್ಲವ?

ಬಿಳಿ ಆನೆ : ನಿನಗ್ಗೊತ್ತಿಲ್ಲ ಸುಂದರೀ, ಎಲ್ಲಾ ಆಮೇಲೆ ಹೇಳ್ತೇನೆ. ದಯಮಾಡಿ ಈಗ ಪಾರು ಮಾಡು. ನಿನ್ನುಪಕಾರ ನಾನೆಂದು ಮರೆಯೋದಿಲ್ಲ.

ರಾಜ : ಹೊರಟೇಬಿಟ್ಟೆಯಾ? ಇರು (ಬಲಗೈ ಎತ್ತಿ ನನ್ನ ಬಗಲನ್ನು ಸೂಚಿಸುತ್ತ) ಸುವಾಸನೆ ಬರತ್ತ ನೋಡು.(ಕಾರಭಾರಿ ಹಾಗೇ ಮಾಡುವನು. ಇನ್ನೊಂದು ಕೈಯೆತ್ತಿ ಹಾಗೇ ತೋರಿಸುವನು. ಕಾರಭಾರಿ ಹಾಗೇ ನೋಡುವನು)

ಕಾರಭಾರಿ : ಇನ್ನೇನೂ ಎತ್ತೋದು ಬೇಡ ಪ್ರಭೋ. ಸರ್ವಾಂಗದಲ್ಲೂ ಸುವಾಸನೆ ಚೆನ್ನಾಗಿ ಬರತ್ತಾ ಇದೆ.

ರಾಜ : ಕರೆ ಅವಳನ್ನ-ಸುಂದರೀ ರಾಜರು ಬಂದಿದ್ದಾರೆ ಬಾಗಿಲು ತೆರೆ ಅನ್ನು. ಅಲ್ಲಲ್ಲ ಸುಂದರೀ ಮಹಾಪ್ರಭುಗಳು ಬಂದಿದ್ದಾರೆ ಬಾಗಿಲು ತೆಗಿ ಅನ್ನು- ಹಾಗೆ ಬೇಡ- ಪರಮಸುಂದರೀ ಲೋಕೈಕ ಸುಂದರಾಂಗನಾದ ಕಾಲ್ಮಡಿ ಮಹಾರಾಜರು ಬಂದಿದ್ದಾರೆ; ಬಾಗಿಲು ತೆಗೆದು ಬರಮಾಡಿಕೊ ಅನ್ನು. ಅಥವಾ “ಬಾಗಿಲು ತೆಗೆಯೇ ಭದ್ರೇ”-ಅಂತ ಒಂದು ಪದ ಗೊತ್ತಿದೆ ಹೇಳಲಾ?

ಕಾರಭಾರಿ : ಬೇಡ ಪ್ರಭು, ಹೊರಗಡೆ ಗಲಾಟೆ ಯಾಕೆ? ಬೇಕಾದರೆ ಒಳಗಡೆ ಹಾಡಿಕೊಳ್ಳಿ.

ರಾಜ : ಹೌದು ಅದೇ ಮೇಲು, ಹಾಗಿದ್ದರೆ ರಾಜರು ಬಂದಿದ್ದಾರೆ ಬಾಗಿಲು ತೆಗೆ ಅನ್ನು – ಅಥವಾ ಅದೆಲ್ಲಾ ಯಾಕೆ ಬರೀ ಬಾಗಿಲು ಅನ್ನು, ಅಥವಾ ಅನ್ನೋದ್ಯಾಕೆ ಬಾಗಿಲು ಬಡಿ, ಸಾಕು. (ಕಾರಭಾರಿ ಬಾಗಿಲು ಬಡಿಯುವನು)

ಬಿಳಿ ಆನೆ : ನಿನ್ನ ಕಾಲು ಬೀಳ್ತೀನಿ ಸುಂದರೀ, ಹ್ಯಾಗಾದರೂ ಮಾಡಿ ನನ್ನ ಪಾರು ಮಾಡು.

ಸಾಂಬ : ಹ್ಯಾಗೆ ಮಾಡೋದು? ನೋಡಿ, – ಈ ಸೀರೆ ಉಟ್ಕೊಂಡು ಒಳಗಿರಿ. ಇವಳ್ಯಾರು ಅಂತ ರಾಜರು ಕೇಳಿದರೆ ನನ್ನ ಜೊತೆ ಬಂದಿದ್ದಾಲೆ ಅಂತ ಹೇಳತೀನಿ. ರಾಜರು ಹೋದಮೇಲೆ ಎಲ್ಲ ಸರಿಹೋಗುತ್ತೆ, ಏನಂತೀರಿ?

ಬಿಳಿ ಆನೆ : ಏನು, ಸೀರೆ ಉಡೋದೆ?

ಕಾರಭಾರಿ : ಸುಂದರೀ ರಾಜರು ಬಂದಿದ್ದಾರೆ ಬಾಗಿಲು ತೆಗಿ, ಸುಂದರೀ….

ಬಿಳಿ ಆನೆ : ಕೊಡು ಕೊಡು ಅದನ್ನೇ ಉಡತೀನಿ.

ಕಾರಭಾರಿ : ಸುಂದರೀ ಯಾಕೆ ಬಾಗಿಲು ತೆಗೆಯುತ್ತಿಲ್ಲ?

ಸಾಂಬ : ಕಾರಬಾರಿಗಳೆ, ಏಕಾಂಗಿಯಾಗಿ ರಾಜದ ದಾರಿಯನ್ನು ನೋಡಿ, ನೋಡಿ, ವಿರಹ ವೇದನೆಯಿಂದ ಮಲಗಿರಲಾಗಿ ನಿಮ್ಮ ಮಹಾರಾಜರೇ ಈ ಪರಿ ತಡ ಮಾಡಿ ಬರುವುದು ವಿಹಿತವೇ? (ಬಿಳಿಆನೆಗೆ) ಬೇಗನೆ ಸುತ್ತಿಕೊಳ್ಳೋ ಮಗನೆ. ಹೋಗಿ ಒಳಗಡೆ ಸಂಡಾಸಿನಲ್ಲಿ ಎರಡೂ ಮುಚ್ಚಿಕೊಂಡು ಕೂತಿರು. ಒಳಗಡೆ ಒಂದು ಹೆಂಗಸಿದೆ; ಅವಳಿಗೇನಾರ ಕೈಯಿಟ್ಟೀಯಾ, ಹೇಳಿರತೀನಿ.
(ಬಾಗಿಲು ತೆಗೆಯುವನು. ರಾಜ ಒಳಗೆ ಬರುವನು. ಕಾರಭಾರಿ ಹೋಗುವನು. ಸಾಂಬ ಸೆರಗಿನಿಮದ ಮುಖ ಮುಚ್ಚಿಕೊಂಡಿರುವನು)

ರಾಜ : ಆಹಾ ಪ್ರಿಯೆ ಮದನೋತ್ಸವದಲ್ಲಿ ನಿನ್ನ ದರ್ಶನದಿಂದ ಪುಳಕಿತನಾದಾಗಿನಿಂದ ನನ್ನ ಹೃದಯ ಕುರುಡಾಗಿದೆ. ಬಾಳು ಬರಡಾಗಿದೆ. ದೇಹ ಕೊರಡಾಗಿದೆ. ಮನವು ಮರಡಿಯಾಗಿದೆ. ಉದರ ಕೊಡವಾಗಿದೆ. ಬೇಗನೆ ಬಂದೆನ್ನ ವಿರಹ ವೇದನೆಯನ್ನು ಉಪಶಮನ ಮಾಡಬಾರದೆ?

ಸಾಂಬ : ಪ್ರಭು ಸುಂದರಿಯು ನಾಚಿ ನೀರಾಗಿ ಒಳಗೆ ಅಡಗಿರುವಳು.

ರಾಜ : ನೀನು ಯಾರು?

ಸಾಂಬ : ನಾನು ಅವಳ ದಾಸಿ ಪ್ರಭು, ಅಕ್ಕತಂಗಿಯರಿಬ್ಬರೂ ತಮ್ಮ ಸೇವೆಗೆ ಬಂದಿರುವರು. ಹಿರಿಯವಳು ಮಂಜರಿ, ಕಿರಿಯವಳು ಸುಂದರಿ. ಪ್ರಾರಂಭದಲ್ಲಿ ಇಬ್ಬರೂ ತುಂಬ ಚೆನ್ನಾಗಿ ನೃತ್ಯ ಮಾಡುತ್ತಾರೆ. ತಾವು ದೊಡ್ಡ ಮನಸ್ಸು ಮಾಡಿ ಅವರ ನೃತ್ಯವನ್ನು ನೋಡಲೇಬೇಕೆಂದು ಇಬ್ಬರೂ ಹಟ ಹಿಡಿದಿದ್ದಾರೆ.

ರಾಜ : ಓಹೋ, ನಾವಿಬ್ಬರೇ ಏಕಾಂತದಲ್ಲಿದ್ದೇವೆಂದು ನಮ್ಮ ಭಾವನೆಯಾಗಿತ್ತು. ಆಗಲಿ ಮೊದಲು ಇವರ ಕಲಾಸೇವೆಯನ್ನು ಒಪ್ಪಿಸಿಕೊಳ್ಳೋಣ. ಎಲ್ಲಿ ಬರಲಿ.

ಸಾಂಬ : ಸಖಿಯರೇ, ಮಹಾಪ್ರಭುಗಳು ನಿಮ್ಮ ಗೀತನೃತ್ಯ ಸೇವೆಯನ್ನು ಸ್ವೀಕರಿಸಲು ಒಪ್ಪಿದ್ದಾರೆ. ಬೇಗನೆ ಬಂದು ಕಲಾಸೇವೆ ಮಾಡಿ. (ಇಬ್ಬರೂ ಗಾಬರಿಯಾಗಿ ಪರಸ್ಪರ ನೋಡಿಕೊಳ್ಳುತ್ತಿದ್ದಾರೆ) ಬೇಗನೆ ಬರಬಾರದೆ? ಪ್ರಭುಗಳು ಮೊದಲೇ ರಸಿಕ ಶಿಖಾಮಣಿಗಳು ನೀವು ತಡ ಮಾಡಿದರೆ ಪ್ರಭುಗಳು ಖುದ್ದಾಗಿ ನೀವಿರುವಲ್ಲಿಗೆ ಬಂದು ನಿಮ್ಮ ಅಧರಪಾನ ಮಾಡಬೇಕೆಂದು ನಿಮ್ಮ ಆಸೆಯೇನು? ಬನ್ನಿ ಬನ್ನಿ. ಪ್ರಭು ತಾವೇ ಖುದ್ದಾಗಿ ಕರೆಯಬೇಕೆಂದು ಅವರಾಸೆ. ಅವರ ಈ ಆಸೆಯನ್ನು ಈಡೇರಿಸುವಿರಾ?

ರಾಜ : ಓಹೋ ಅಗತ್ಯವಾಗಿ. ಎಲ್ಲಿ ಸುಂದರಿಯರೇ ಬನ್ನಿ. ನಿಮ್ಮ ಕಲಾ ಪ್ರದರ್ಶನ ಸಾಗಲಿ

ಸಾಂಬ :  ಸಖಿಯರೇ ಗಾಬರಿಯಾಗಬೇಡಿ. ಪ್ರಭುಗಳು ಮಹಾಕಲಾಪ್ರೇಮಿಗಳು. ಬೇಗ ಬನ್ನಿ. ಬರುವರೋ ಅಥವಾ ನೀವಿದ್ದಲ್ಲಿಗೆ ಪ್ರಭುಗಳೇ ಬರಬೇಕೋ? ಪ್ರಭು (ಹೆದರಿಕೊಂಡು ಇಬ್ಬರೂ ಬರವರು) ಅಕೋ ಬಂದರು. ನಾನು ಹಾಡುತ್ತೇನೆ; ಅವರು ಕುಣಿಯುತ್ತಾರೆ. ಪ್ರಭು.

ರಾಜಾ!
ಐತೆ ಮಹಾ!
ಪ್ರಾಯವರಳೈತೆ ಆಹಾ ತಾಜಾ ತಾಜಾ
ಉರಿವ ಮೋಹ
ತೀರದ ದಾಹ
ಕರೆಯುವೆ ಬಾಬಾ ರಾಜಾ ||

ನಾನೊಂದು ರಸಪುರಿಹಣ್ಣು
ಮೈಮರೆತ ರೂಪಸಿ ಹೆಣ್ಣು
ಹಾಗೇಕೆ ಬಿಡುವಿಯೊ ಕಣ್ಣು
ಸವಿಸವಿಯುತ ತಿನ್ನು |

ಅರಳಿವೆ ಮೈಮನ
ಚಿಮ್ಮುವ ಯೌವನ
ಸೂರೆ ಮಾಡಲು ಬಾ ||

ನಿನಗಾಗಿ ಹೊಂಚುತ ಕಾದೆ
ನೀ ಯಾಕೆ ಬಾರದೆ ಹೋದೆ
ನಾ ತಾಳೆ ಮದನನ ಬಾಧೆ
ಬೇಕಿಲ್ಲ ಯಾವ ತಗಾದೆ
ಹಾಡುತ ಓಡುತ ಚಿಮ್ಮುತ ನಲಿಯುತ
ನಗೆಯ ಬೀರುತ ಬಾ. ||

(ಹಾಡಿಗೆ ಇಬ್ಬರೂ ಅಧ್ವಾನವಾಗಿ ಕುಣಿಯುವರು)

ಸಾಂಬ : ಪ್ರಭು ಇನ್ನು ಮೇಲೆ ತಾವುಂಟು. ತಮ್ಮ ಪ್ರೇಯಸಿಯರುಂಟು. ನಾನು ಬರುತ್ತೇನೆ. ಪ್ರಭೂ ನನ್ನ ಸಖಿಯರಿನ್ನೂ ಚಿಕ್ಕವರು. ಸರ್ವೀಸಾಗಿಲ್ಲ. ಸ್ವಲ್ಪ ಗಲಾಟೆ ಆದೀತು. ಅನುಭವಿಕರಾದ ತಾವು ದಯಮಾಡಿ ಸಹಿಸಿಕೋಬೇಕು.

ರಾಜ : ಹೌದು ಹೌದು. ನೀನೂ ಅಷ್ಟೆ. ಬಾಗಿಲು ಹಾಕಿಕೊಂಡು ಹೊರಗಡೆ ಬೋಲ್ಟ್ ಹಾಕಿಕೊಂಡು ಹೋಗು. ಏನೇ ಗಲಾಟೆ ಆದರೂ ಬೆಳತನಕ ನೀವ್ಯಾರೂ ಈ ಕಡೆ ಸುಳಿಯಕೂಡದು.
(ಬಿಳಿಆನೆ, ಚಿಲ್ಲರೆಗಳ ತೆಗೆದಿಟ್ಟ ಬಟ್ಟೆ ಸಮೇತ ಸಾಂಬ ಹೊರಗೋಡಿ ಬಾಗಿಲಿಕ್ಕಿ ಕೊಳ್ಳುವನು.)