(ಗಣೇಶನ ಗುಡಿ, ಸಾಂಬ ನಗುತ್ತಿದ್ದಾನೆ. ಶಿವ ಪೆಚ್ಚಾಗಿದ್ದಾನೆ.)

ಶಿವ : ನಿಲ್ಲಿಸಪ್ಪಾ ನಗೋದನ್ನ ಅಂದರೆ….

ಸಾಂಬ : ಹೋ ಹೋ….

ಶಿವ : ನಿನಗೇನು ಹುಚ್ಚು ಹಿಡೀತೇನಪ್ಪ?

ಸಾಂಬ : ಅದೇ ಗಣೇಶನ ದಯ ಕಣೊ; ನನಗಿನ್ನೂ ಹುಚ್ಚು ಹಿಡಿದಿಲ್ಲ. ನಿನ್ನ ಹುಡುಗಿ ಇದಾಳಲ್ಲ, ಕೊನೇಪಕ್ಷ ಅವಳಿಗಾದರೂ ಹುಚ್ಚು ಹಿಡೀದಿರಲಿ ಅಂತ ದೇವರಲ್ಲಿ ಬೇಡಿಕೊ.

ಶಿವ : ಅಥವಾ ನಮಗೆ ಹುಚ್ಚು ಹಿಡಿದಿದೆಯೋ ಏನೊ.

ಸಾಂಬ : ಹೌದೌದು. ಅವರು ಹಾಗೇ ಅಂದ್ಕೋತಿರಭೌದು. ಲೇ ಶಿವಾ. ಈ ಊರಿನ ನೀರಿನಲ್ಲೇನಾದರೂ ಸ್ಪೆಶಲ್ ಹೆಂಡ ಇರಭೌದ? ಯಾಕಂತೀನಿ: ಇಲ್ಲೀತನಕಾ ನಾನು ಥರಾವರಿ ಹೆಂಡ ಕುಡಿದೀನಿ, ಹಿಂಗೆಂದೂ ಹೀಗೆ ಆಗಿರಲಿಲ್ಲವೇ! ಜಾಸ್ತಿ ಕುಡಿದಾಗ-ಇಡೀ ಜಗತ್ತು ಒಂದೊಂದ್ಸಾರಿ ತಲೆ ಕೆಳಗಾಗಿ ಬುಡ ಮೇಲಾಗಿ ನಡೆಯೋ ಹಾಗೆ ಕಾಣ್ಸತ್ತೆ. ಚಿಕ್ಕದು ದೊಡ್ಡದಾಗಿ ದೊಡ್ಡದು ಚಿಕ್ಕದಾಗಿ ಕಾಣತ್ತೆ. ಒಂದಿದ್ದದ್ದು ಎರಡಾಗಿ ಕಾಣತ್ತೆ, ಒಂದು ಸಾರಿ, ಅದೂ ಒಂದು ಸಾರಿ ಮಾತ್ರ ನಿಮ್ಮಮ್ಮ ಹಸುವಿನ ಥರ ಕಂಡಿದ್ದಳಪ್ಪ. ಆದರೆ ಎಲ್ಲರೂ ಹುಚ್ಚರಾಗಿ ಹುಚ್ಚುಚ್ಚಾರ ಮಾತಾಡ್ತ, ಹುಚ್ಚುಚ್ಚಾರ ನಡೆದುಕೊಳ್ಳೋದನ್ನ ನನಗೆ ಯಾವ ಹೆಂಡಾನೂ ತೋರಿಸಿಲ್ಲ ಬಿಡು. ಈ ಊರ ನೀರಲ್ಲಿ ಯಾವುದೋ ದೇವಲೋಕದ ಹೆಂಡ ಇರಬೇಕಪೊ!

ಶಿವ : ಹೆಂಡ ಬಿಟ್ಟು ಬೇರೇನೂ ಹೊಳೆಯೋದೇ ಇಲ್ಲ ನಿನಗೆ.

ಸಾಂಬ : ಯೋಚನೆ ಮಾಡೋ ಮಗನೇ…. ನೀನು ಯಾವುದಾದರೂ ಕತೆ, ಕನಸಲ್ಲಿ-ಕತ್ತೆ ಸ್ವಯಂವರ, ಅಲ್ಲ ಸ್ವಯಂವಧು ಸಮಾರಂಭ ಅಂತ ಕಂಡಿದೀಯಾ? ನಾವು ಮನುಶರು ಕೇಳಿದರೆ ಹುಡಿಗೇರನ್ನ ಕೊಡೋದಿರಲಿ ತೋರಿಸೋದೂ ಇಲ್ಲ. ನನ್ನ ಮಗಂದು ಆ ಕತ್ತೆಗೆ ಹೆಣ್ಣು ಕೊಡೋದಕ್ಕೆ ನಾ ಮುಂದು ತಾ ಮುಂದು ಅಂತಾರೆ! ಇವತ್ತು ನೀ ನೋಡಲಿಲ್ಲ ಕಣೋ, ಇಬ್ಬರು ಹುಡಿಗೇರು ಅಳತಾ ನಿಂತಿದ್ದರು. ಪಾಪ ಕತ್ತೆ ಜೊತೆ ಬಲವಂತವಾಗಿ ಮದುವೆ ಮಾಡಿಕೊಡೋದಕ್ಕೆ ಎಳಕೊಂಬಂದಾರೇನೋ – ಅದಕ್ಕೇ ಆಳ್ತಾ ಇವೆ.- ಸದ್ಯ ಮನುಶರು ಅಂತ ಅನ್ನೋಕೆ ಒಬ್ಬಿಬ್ಬರಾದರೂ ಸಿಕ್ಕರಲ್ಲಾ- ಅಂತ ನಾ ಅಂದು ಕೊಂಡರೆ-ಲೇ ಶಿವಾ, ಅವರ‍್ಯಾಕೆ ಆಳುತ್ತಿದ್ದರು ಗೊತ್ತೇನೊ? ನಿನ್ನ ಕತ್ತೆ ಅವರನ್ನ ಆರಿಸಲಿಲ್ಲ; ಅದಕ್ಕೆ! ಹೋಹೋಹೋ ಇಲ್ಲೀ ಹೆಂಗಸರಿಗೆ ಕತ್ತೇನೇ ಸೈ ಕಣೊ.

ಶಿವ : ಪಾಪ ಆ ರಾಜರ ಕಡೆ ನೋಡೋದಕ್ಕಾಗ್ತಿರಲಿಲ್ಲ. ಮುಖ ಎಲ್ಲಾ ಪರಚಿ ಹೋಗಿತ್ತು. ಕೈಕಾಲೆಲ್ಲ ಬ್ಯಾಂಡೇಜಿತ್ತು. ಆ ಬಿಳಿಆನೆ ಚಿಲ್ಲರೆ ಸೇರಿ ಏನೇನು ಮಾಡಿದ್ದರೋ ಪಾಪ. ಆಂದಹಾಗೆ ಆವರಯ್ಯಾಕೆ ಈ ಹೋತ್ತು ಕಾಣಲಿಲ್ಲ?

ಸಾಂಬ : ಅವರಿಗೂ ಹಂಗೇ ಆಗಿರಭೌದು ಕಣೋ ಮೈ ತುಂಬ ಗಾಯ….

ಶಿವ : ಸ್ವಯಂವರ ನಡೆದಾಗ, ಆ ಕಾರಭಾರಿ ನನ್ನ ಬಿಡುವೊಲ್ಲ. ಬಂದೂ ಬಂದೂ ಕಿವಿಯಲ್ಲಿ ‘ಸುಂದರಿ ಗೊತ್ತ? ಅವಳ ವಿಷಯ ಏನು?-ಅಂತಿದ್ದ. ಎದ್ದು ಹೋಗೋಣ ಅಂದರೆ ಗಜನಿಂಬೆ ಸರದಿ ಬರವೊಲ್ದು. ಕೊನೇಗೇ ಗಜನಿಂಬೆ ಬಂದಳಲ್ಲಾ ಅಂದರೆ ಡಿಂಗ್‌ಡಾಂಗ್ ಒದರವೊಲ್ದು! ಗಜನಿಂಬೆ ಇನ್ನೇನು ಒದರಿತು. ‘ಡಿಂಗ್‌ಡಾಂಗ್ ಸಾಹೇಬರ ಆಯ್ಕೆ ಇವಳೇ ಪ್ರಭು’ ಅಂತ ಆ ಕಡೆ ನೋಡಿದರೆ – ಬಾಗಿಲು ದಾಟಿ ಹೊರಗಡೆ ಹೋಗುತ್ತಿದ್ದಳು- ಕತ್ತೆ ಬಾಲ ಮುರಿದೆ ನೋಡು – ರಾಜರಾಗಲೇ ಕಾರಭಾರಿ ಮೇಲೆ ಉಗೀತಿದಾರೆ!

ಸಾಂಬ : ಏನಂತ?

ಶಿವ : ‘ಇವಳೇ ಕಣೊ ಬೋಳೀಮಗನೇ ಹಸಿರು ಸೀರೆ ನೀಲಿ ರವಿಕೆ ಉಟ್ಟಿದ್ದವಳು. ನೀನು ಯಾರಯ್ಯಾರೋ ದರಿದ್ರವರನ್ನು ಕರಕೊಂಬಂದು ನನ್ನ ಕೈಕಾಲು ಮುರಿಸಿ ಹಾಕಿದೆ’ – ಅಂತ.

ಸಾಂಬ : ಓಹೊ ರಾಜಾ ಆ ದಿನ ಗಜನಿಂಬೇನ್ನ ನೋಡಿದ್ದನಂತೊ? ಸರಿಬಿಡು…. ಆ ನನ್ನ ಮಗನಿಗೆ ಹಂಗೇ ಆಗಬೇಕಿತ್ತು.

ಶಿವ : ಅವನಿಗೇನಾರ ಆಕ್ಕೊಳ್ಳಲಿ, ನನ್ನ ಗತಿ ಹೇಳಪ್ಪಾ ಅಂದರೆ….

ಸಾಂಬ : ನಿನಗೇನೋ ಆಗಿದೆ? ಎಲ್ಲಾ ನೀ ಬಯಸಿದ ಹಾಗೇ ಆಗ್ತಿದೆ. ಗಜನಿಂಬೆ ಡಿಂಗ್‌ಡಾಂಗ್ ನ ಹೆಂಗಡಿ ಆದಳು. ಇವತ್ತೇ ಪ್ರಸ್ತ ಇದೆ. ಹೋಗು ಕತ್ತೇನ್ನ ಕಟ್ಟಿಹಾಕಿ ಗಜನಿಂಬೆ ಹತ್ತಿರ ಹೋಗಿ ಮಜಮಾಡು. ಕತ್ತೆ ಹ್ಯಾಂಕರಿಸಿದರೆ ಎರಡು ಒದೆ ಕೊಡು – ಅಷ್ಟೆ.

ಶಿವ : ಅಷ್ಟು ಸುಲಭ ಅಲ್ಲ ಕನಪ್ಪ ಅದು. ಕಾರಭಾರಿ ರಾಜರಿಗೇನೋ ಸಂಚು ಹೇಳತಿದ್ದ ಗೊತ್ತ?

ಸಾಂಬ : ಏನಂತೆ?

ಶಿವ : ಹಸಿರು ಸೀರೆ ನೀಲಿ ರವಿಕೆಯವಳು ಇವಳೇ ಹೌದಾದರೆ ಸಿಕ್ಕು  ಬಿದ್ದಳಲ್ಲ ಪ್ರಭು. ಹ್ಯಾಗೂ ಡಿಂಗ್‌ಡಾಂಗ್  ಇವಳನ್ನೇ ಆರಿಸಿಕೊಂಡಿದಾರೆ.ದ ಇವತ್ತೇ ಪ್ರಸ್ತ ಇಡೋಣ. ಕತ್ತೆ ಅವಳ ರೂಮಿಗೆ ಹೋದಕೂಡಲೇ “ಅಯ್ಯೋ ಕತ್ತೆ ಜೊತೆ ಬಾಳುವೆ ಮಾಡಲಾರೆ ಕಾಪಾಡಿ ಕಾಪಾಡಿ”- ಅಂತ ಪದ ಹಾಡ್ತಾಳೆ. ತಾವು ದೇವರ ಹಾಗೆ ಹೋಗಿ ಕಾಪಾಡಿದರಾಯ್ತು-ಅಂತ. ಇವತ್ತು ರಾತ್ರಿ ಅವರು ಬರೋದು ಖಾತ್ರಿ. ನಾನಲ್ಲಿ ಸಿಕ್ಕುಬಿದ್ದರೆ ನನ್ನ ಕಥೆ ಮುಗಿಯೋದೂ ಖಾತ್ರಿ. ಈಗ ಹೆಂಗ ಮಾಡೋಣ, ಹೇಳು.

ಸಾಂಬ : ಹೆಂಗೇನು? ನಾ ಪ್ಲಾಸ್ ಮಾಡಿದ ಪ್ರಕಾರ ನೀನು ಗಜನಿಂಬೆ ಹತ್ತಿರ ಹೋಗು ಬೇಕಷ್ಟೆ.

ಶಿವ : ನೀನು ತಿರುಗಾ ಸೀರೆ ಉಟ್ಟರೆ ಬಗಿಹರಿಯೋದಿಲ್ಲ. ಈ ಸಾರಿ ಉಟ್ಟರಂತೂ ನಿನ್ನನ್ನೂ ಜೀವಂತ ಬಿಡೋದಿಲ್ಲ. ಈಗ ಈ ಸಮಸ್ಯೆಯನ್ನು ಹೆಂಗ ಬಿಡಿಸೋದು ಅಂತ ವಿಚಾರ ಮಾಡು.

ಸಾಂಬ : ಸದ್ಯ ನನ್ನ ಸಮಸ್ಯೆ ಅಂದರೆ ನಿನ್ನ ಖಾಲೀತಲೆ ಒಂದೇ. ಲೋ ಶಿವಾ, ನಿನಗೆ ಗಣೇಶನ ಕೃಪೆ ಆಗಿದೆ. ಮಾತಾಡೋದನ್ನ ಕಡಿಮೆ ಮಾಡಿ ಪಂಚೇಂದ್ರಿಯಗಳನ್ನು ಚುರುಕು ಮಾಡಿಕೊ, ಕೆಲಸ ಮಾಡು. ಕತ್ತೆ ಲದ್ದಿಗೆ, ಅದರ ಉಚ್ಚೆಗೆ ಸಾವಿರ ಬೆಲೆ ಬರಬಹುದಾದರೆ ಮಗನೇ, ಹ್ಯಾಂಕರಿಸೋದಕ್ಕೆ ಎಷ್ಟು ಅಂತ ಲೆಕ್ಕ ಹಾಕು.

ಶಿವ : ಅಂದರೆ?

ಸಾಂಬ : ನೀನು ನಿನ್ನ ಕತ್ತೆ ಜೊತೆ ಗಜನಿಂಬೆ ರೂಮಿನಲ್ಲಿರು. ಕಿಡಿಕಿ, ಬಾಗಿಲು ಭದ್ರಮಾಡಿಕೊಂಡಿರಬೇಕು. ಯಾರೆಷ್ಟು ಒದರಿದರೂ ಬಾಗಿಲಾ ತಗೀಬಾರದು. ಹೊರಗಡೆ ರಾಜ, ಕಾರಭಾರಿ ಬಂದರು ಅಂದರೆ – ಸಮಯ ಸಂದರ್ಭ ನೋಡಿಕೊಂಡು ನಾನು ಸಿಳ್ಳೇ ಹಾಕ್ತೀನಿ. ನೀನು ಅವಾಗ ಡಿಂಗ್‌ಡಾಂಗ್ ಗೆ ಹೇಳಿ ಭಯಂಕರವಾಗಿ ಹ್ಯಾಂಕರಸಿಸೋದಕ್ಕೆ ಹೇಳು. ಇಷ್ಟಾದರೆ ಸಾಕು. ಮುಂದಿನದನ್ನ ನಾ ನೋಡಿಕೊಳ್ತೀನಿ. ಆಯ್ತ? ಹೊರಡು.

ಶಿವ : ಹೋಗು ಅಂತೀಯಾ?

ಸಾಂಬ : ಸುಮ್ಮನೆ ನನ್ನ ಹೊಟ್ಟೆ ಉರಿಸಬೇಡ ಹೊರಟ್ಹೋಗು ಅಂದರೆ….