ನಿರ್ದೇಶಕ  : ನಮಸ್ಕಾರ
ನಿಮ್ಮ ಮುಂದೆ ಇವತ್ತೊಂದು ಭಾರೀ ನಗೆನಾಟಕ
ಅರ್ಥಾಥ್ ಪ್ರಹಸನ ತೋರಿಸೋರಿದ್ದೇವೆ.
ಟೇಲರಿಗೆ ಮೈ ಅಳತೆಕೊಟ್ಟು
ಶರ್ಟು ಹೊಲಿಸಿದ ಹಾಗೆ
ಕವಿಗೆ ನಮ್ಮ ನಿಮ್ಮ ಮನಸ್ಸಿನ ಅಳತೆಕೊಟ್ಟು
ಸ್ಪೆಶಲ್ಲಾಗಿ ಬರೆಸಿದ ನಾಟಕ ಇದು.
ನಿಮ್ಮ ಮನರಂಜನೆಗೆ ಬೇಕಾದ ಎಲ್ಲಾ ಮಸಾಲೆ
ಈ ನಾಟಕದಲ್ಲಿದೆ.
ಪ್ರೇಮ ಇದೆ, ಕಾಮ ಇದೆ, ಕ್ರಾಂತಿ ಇದೆ,
ರಾಜಕೀಯ ಇದೆ.
ಮಾತಿವೆ, ಹಾಡಿವೆ, ಕುಣಿತ ಇದೆ, ಸರ್ಕಸ್ಸಿದೆ,
ಕ್ಯಾಬರೆ ಕೂಡ ಇದೆ.
ಗಂಡಸರಿದ್ದಾರೆ, ಹೆಂಗಸರಿದ್ದಾರೆ, ಎರಡೂ ಅಲ್ಲದ
ಮೂರನೆಯವರೂ ಇದ್ದಾರೆ.
ಮಧ್ಯಮ ವರ್ಗದ ಜನ ಹೌಹಾರಿ ಬೀಳುವ
ಆದರೆ ಒಳಗೊಳಗೇ ಆನಂದಿಸುವ ತುಡುಗು ಸುಖಗಳೂ ಇವೆ.
ಅಶ್ಚರ್ಯದಿಂದ ನಿಮಗೆ ನೆಗಡಿ ಅದರೂ ಪರವಾ ಇಲ್ಲ
ಒಂದು ಗುಟ್ಟು ಈಗಲೇ ಹೇಳಿಬಿಟ್ಟಿರುತ್ತೇನೆ:
ಈ ನಾಟಕದ ನಾಯಕ ಒಂದು ಕತ್ತೆ!
ಕತ್ತೆ ಮಂತ್ರಿ ಆಗುತ್ತದೆ, ರಾಜ ಕತ್ತೆ ಆಗುತ್ತಾನೆ,
ಬೇವಾರ್ಸಿಗಳು ಕ್ರಾಂತಿ ಮಾಡುತ್ತಾರೆ,
ಕ್ರಾಂತಿಕಾರಿಗಳು ತಲೆ ಹಿಡಿಯುತ್ತಾರೆ,
ಗಂಡು ಹೆಣ್ಣಾಗುತ್ತದೆ, ಹೆಣ್ಣು ಕತ್ತೆ ಜೊತೆ
ಮದುವೆಯಾಗುತ್ತದೆ ಇತ್ಯಾದಿ.
ಆದರೆ,-
ಈಗೀನ ನಾವು ನಗೋದನ್ನ ಮರೆತು ಬಿಟ್ಟಿದ್ದೀವಿ.
ನಗೋದು ಅಂದರೆ ಸಾಮಾನ್ಯ ಜನರ
ಭಾರೀ ಔದಾರ್ಯದ ಕೆಲಸ ಆಗಿಬಿಟ್ಟಿದೆ.
ದಯಮಾಡಿ ತಾವು ಹಿಂದೆ ಹ್ಯಾಗೆ ನಗುತ್ತಿದ್ದಿರಿ,
ತಮ್ಮ ಪೂರ್ವಜರು ಹ್ಯಾಗೆ ನಗುತ್ತಿದ್ದರು-ಅನ್ನೋದನ್ನ
ನೆನಪು ಮಾಡಿಕೊಂಡು
ದೊಡ್ಡ ಮನಸ್ಸು ಮಾಡಿ ನಗಬೇಕು.
ಇದು
ಪರಸ್ಪರ ನೋಡಿ
ಅಂದರೆ,
ನಿಮ್ಮನ್ನೋಡಿ ನಾವು
ನಮ್ಮನ್ನೋಡಿ ನೀವು
ನಗಬೇಕಾದ ನಾಟಕ.